Wednesday 24 April 2019

ಬದುಕ ಬಂಡಿಯಲಿ : ಇವರಲ್ಲೊಬ್ಬಳು ಐಎಎಸ್ ಮಾಡಿ ನನ್ನ ‌ಮೇಲಧಿಕಾರಿಯಾಗಿ ಬರಲೆಂದು ಆಶಿಸುವೆ


ಇವರಲ್ಲೊಬ್ಬಳು ಐಎಎಸ್ ಮಾಡಿ ನನ್ನ ಮೇಲಧಿಕಾರಿಯಾಗಿ ಬಂದರೇ..

ಹೌದು ಒಂದೊಮ್ಮೆ ನನ್ನ ಆಶಯ ಈಡೇರಿದರೆ ಆ ಕ್ಷಣದ ನನ್ನ ಸಂತಸವನ್ನು ಅಳೆಯಲು ಯಾವ ಮಾಪಕವೂ ಇರಲಾರದು..
ನಮ್ಮ ಕಾಲೇಜಿನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಾ ಇದೆ.ನಮಗೆ ಮೇ ಎರಡರಿಂದ ಕಾಲೇಜು ಶುರುವಾಗಿದ್ದು ಕಾಲೇಜಿಗೆ ಬಂದಾಗ ಚುರುಕಾದ ಈ ಮಕ್ಕಳನ್ನು ನಮ್ಮ ಕಾಲೇಜು ವಠಾರದಲ್ಲಿ ನೋಡಿದೆ.
ಕಟ್ಟಡದ ಗಾರೆ ಕೆಲಸಕ್ಕೆ ಬಂದ ಕಾರ್ಮಿಕರ ಮಕ್ಖಳು ಇವರು.ದೊಡ್ಡ ಮಕ್ಕಳು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಾ ಇದ್ದರು.ಶಾಲೆ ಶುರುವಾದಾಗ ಇವರು ಶಾಲೆಗೆ ಹೋಗಬಹುದು ಎಂದು ಭಾವಿಸಿದ್ದೆ.ನಾವು ಉಪನ್ಯಾಸಕರು ಮುದ್ದಾದ ಈ ಮಕ್ಕಳಿಗೆ ನಾವು ತಂದಿದ್ದ ತಿಂಡಿ ತಿನಸು ಹಣ್ಣು ಬಿಸ್ಕೆಟ್ ಸ್ವಲ್ಪ ಭಾಗ ಕೊಡುತ್ತಾ ಇದ್ದೆವು.ದೊಡ್ಡ ಹುಡುಗಿಯರು ಸಣ್ಣವರಿಗೆ ತಿನ್ನಿಸಿ ತಾವೂ ತಿಂದು ಖುಷಿ ಪಡುವುದನ್ನು ನೋಡುವುದೇ ನಮಗೆ ಸಂಭ್ರಮ.ದೊಡ್ಡ ಮಕ್ಕಳೆಂದರೆ ಅಲ್ಲಿರುವವರಲ್ಲಿ ದೊಡ್ಡವರು ಅಷ್ಟೇ, ಇನ್ನೂ ಹತ್ತು ಹನ್ನೆರಡು ವರ್ಷದ ಪೋರಿಯರು ಇವರು.
ಮೇ ಇಪ್ಪತ್ತನಾಲ್ಕರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊಂಡವು.
ಈ ಮಕ್ಕಳು ಶಾಲೆಗೆ ಹೋಗದೆ ಅಲ್ಲಿಯೇ ಚಿಕ್ಕವರನ್ನು ನೋಡಿಕೊಂಡು ಆಟವಾಡಿಕೊಂಡು ಇದ್ದರು.ಆಗ ನಾನು ಮಕ್ಕಳಲ್ಲಿ ನೀವು ಶಾಲೆಗೆ ಹೋಗುವುದಿಲ್ಲವೇ ಎಂದು ವಿಚಾರಿಸಿದೆ.ತಂಗಿಯರನ್ನು ( ಚಿಕ್ಕ ಮಕ್ಕಳು) ನೋಡಿಕೊಳ್ಳಲು ಯಾರೂ ಇಲ್ಲ ಹಾಗಾಗಿ ಶಾಲೆಗೆ ಹೋಗುತ್ತಾ ಇಲ್ಲ ಎಂದು ತಿಳಿಸಿದರು.ಇವರು ಕಳೆದ ವರ್ಷದ ತನಕ ದೂರದ ಕೊಪ್ಪಳದ ಸರ್ಕಾರಿ ಶಾಲೆಯಲ್ಲಿ ಓದಿದ್ದು ದೊಡ್ಡ ಹುಡುಗಿಯರು ಆರನೇ ತರಗತಿ ಪಾಸ್ ಆಗಿದ್ದರು. ಚಿಕ್ಕವಳು ಒಂದನೇ ತರಗತಿ ಓದಿದ್ದಳು.ಇನ್ನಿಬ್ಬರು ಒಂದೆರಡು ವರ್ಷದ ಕೈಗೂಸುಗಳು.
ಚಿಕ್ಕವರನ್ನು ನೋಡಿಕೊಳ್ಳುವುದಕ್ಕಾಗಿ ಇವರ ಓದು ನಿಂತರೆ ಹೇಗೆ ? ಏನು ಮಾಡುವುದೆಂದು ಯೋಚಿಸಿದೆ‌.ನಮ್ಮ ಕಾಲೇಜಿಗೆ ಸೇರಿದಂತೆ ಹೈಸ್ಕೂಲ್ ಮತ್ತು ಬಿ ಆರ್ ಸಿ ಕಛೇರಿ ಇದೆ. ನಾನು ಮತ್ತು ನಮ್ಮ ಕಾಲೇಜು ಉಪನ್ಯಾಸಕರಾದ ಶ್ರೀಶ ಮೇಡಂ ಮತ್ತು ಅನಿತಾ ಮೇಡಂ   ಅಲ್ಲಿ ಹೋಗಿ ಬಿಆರ್ ಸಿ ಅಧಿಕಾರಿಗಳಾದ ನರಸಿಂಹಯ್ಯ ಅವರಿಗೆ ಈ ಬಗ್ಗೆ ತಿಳಿಸಿ ಈ ಮಕ್ಕಳ ಓದಿಗೆ ಏನಾದರೂ ವ್ಯವಸ್ಥೆ ಮಾಡುವಂತೆ ಕೋರಿದೆವು.ಅವರು ತಕ್ಷಣವೇ ಅಲ್ಲಿನ ಶಿಕ್ಷಕರಾದ ಲೋಕೇಶ್ ಅವರನ್ನು ಕಳುಹಿಸಿಕೊಟ್ಟರು ‌.ಅವರು  ಬಂದು ಮಕ್ಕಳಲ್ಲಿ ಮಾತನಾಡಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಅವರ ಹೆತ್ತವರಿಗೆ ತಿಳುವಳಿಕೆ ನೀಡಿದರು‌.ಈ ಮಕ್ಕಳ ಹೆತ್ತವರು ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲು ಒಪ್ಪಿದ್ದಾರೆ.ಚಿಕ್ಕ ಮಕ್ಕಳನ್ನು ಅಂಗನವಾಡಿಗೆ ಸೇರಿಸುವಂತೆ ಲೋಕೇಶ್ ಅವರು ತಿಳಿಸಿದರು.
ಈ ಮಕ್ಕಳಲ್ಲಿ ಎಲ್ಲರೂ ಅಥವಾ ಕೊನೆ ಪಕ್ಷ ಒಬ್ಬರು ಓದಿ ಮುಂದೆ  ಐಎಎಸ್ ಮಾಡಿ ನಮ್ಮ ಮೇಲಧಿಕಾರಿಯಾಗಿ ಬಂದರೆ ಹೇಗಾಗಬಹುದು ಎಂದು ಊಹಿಸಿ ಸಂಭ್ರಮಿಸಿದೆ‌.ಈ ಮಕ್ಕಳು ನಮ್ಮ ಆಶಯದಂತೆ ಓದಿ ಮುಂದೆ ಐಎಎಸ್ ಐಪಿಎಸ್ ಅಧಿಕಾರಿ ಗಳಾಗಲಿ ಎಂದು ಹಾರೈಸುವೆ
Siri Reddy Anitha G Anu Shobha Lekhana Manjula R Prasad

No comments:

Post a Comment