Friday 19 April 2019

ಬದುಕ ಬಂಡಿಯಲಿ : ಅಮಾವಾಸ್ಯೆಯ ದಿನ ಕೂಡ ಅಮೃತದ ಫಲವನ್ನೇ ಕೊಟ್ಟಿತು


ಅಮವಾಸ್ಯೆಯ ದಿನ ಕೂಡ ಶುಭಗಳಿಗೆಯೇ ಅಯಿತು!
ಅಂದು ಬೆಳಗ್ಗೆ ಗೋವಿಂದ ಪ್ರಸಾದರೊಂದಿಗೆ ಮನೆ ಬಿಟ್ಟು ಹೊರಟಾಗ ಅಮವಾಸ್ಯೆಯಂತೆ.ಹಿಂದಿನ ದಿನ ಬಿಎಸ್ ಸಿ ಯ ಅಂಕ ಪಟ್ಟಿ ತರುವುದಕ್ಕಾಗಿ ಉಜಿರೆಗೆ ಹೋಗಿದ್ದರು.ಅರ್ಧ ದಾರಿ ಬಿಸಿರೋಡು ತನಕ ಗೋವಿಂದ ಪ್ರಸಾದರು ಬಂದು ಬಸ್ಸು ಹತ್ತಿಸಿ ಮಂಗಳೂರು ಕಡೆಗೆ ಹೋಗಿದ್ದರು.
ಉಜಿರೆಯ ಎಸ್ ಡಿ ಎಂ ಕಾಲೇಜಿಗೆ ಹೋಗಿ ಅಂಕ ಪಟ್ಟಿ ಪಡೆದು ಹಿಂದಿರುಗುವಷ್ಟರಲ್ಲಿ ಕತ್ತಲಾಗಿತ್ತು.ಅಕಾಲಿಕವಾಗಿ ಮಳೆ ಬಂದು ಜೋರಾಗಿ ಸುರಿಯುತ್ತಾ ಇತ್ತು.ಸುರಿವ ಮಳೆಯಲ್ಲಿ ಮನೆಯ ಒಳಗೆ ಬರಲು ಬಿಡದೆ "ಯಾರನ್ನು ಕೇಳಿ ಹೋದೆ ? ಎಂದು ದಬಾಯಿಸಿದ ಲಕ್ಷ್ಮೀ ಯವರ ಅತ್ತೆ ಮಾವ ಅಂಗಳದಲ್ಲಿಯೇ ನಿಲ್ಲಿಸಿದ್ದರು!
ಸುಮಾರು ಎರಡು ಗಂಟೆಯ ಕಾಲ ಮಳೆಯಲ್ಲಿ ಒದ್ದೆಯಾಗಿ ಚಳಿಯಲ್ಲಿ ನಡುಗುತ್ತಾ ನಿಂತಾಗ ಮಂಗಳೂರಿಗೆ ಹೋದ ಪತಿ ಗೋವಿಂದ ಪ್ರಸಾದರಯ ಹಿಂತಿರುಗಿದರು.ಅವರನ್ನು ಕೂಡ ಒಳಬರದಂತೆ ತಡೆದಾಗ ತಂದೆ ತಾಯಿ ಮಕ್ಕಳ ನಡುವಿನ ಸಹಜ ಸಲುಗೆಯಿಂದ ಒಳಗೆ ತಳ್ಳಿ ಲಕ್ಷ್ಮೀ ಯವರ ಕೈಹಿಡಿದು ಒಳಗೆ ಕರೆತಂದು ಮೈ ಒರಸಿಕೊಳ್ಳಲು ಬಟ್ಟೆ ನೀಡಿ,ಹಾಕಿಕೊಳ್ಳಲು  ಒಣಗಿದ ಬಟ್ಟೆಗಳನ್ನು ನೀಡಿದರು.ಎರಡು ಗಂಟೆಗಲ ಕಾಲ ಮಳೆಯಲ್ಲಿ ನೆನೆದ ಪ್ರಭಾವವೋ ಏನೋ ಲಕ್ಷ್ಮೀ ಗೆ ತೀವ್ರ ಜ್ವರ! ಮನೆಯೊಳಗೆ ರಾತ್ರಿಯಿಂದ ಬೆಳಗಿನ ತನಕ ಅಪ್ಪ ಮಕ್ಕಳ ನಡುವೆ ಜಗಳ.
ಬೆಳಗಾಗುತ್ತಲೇ " ನೋಡು ನಾನು ದುಡಿದು ಎರಡು ಹೊತ್ತು ಊಟ ಹಾಕಿಸಬಲ್ಲೆ,ನನ್ನೊಂದಿಗೆ ಬರುವುದಾದರೆ ಬಾ,ಮುಂದೆ ಓದು.ಅಥವಾ ಇವರ ಶ್ರೀಮಂತಿಕೆಯನ್ನು ಅನುಭವಿಸುತ್ತಾ ಗುಲಾಮಳಂತೆ ಇರು,ಆಯ್ಕೆ ನಿನ್ನದು ಎಂದಾಗ ಪತಿ ಗೋವಿಂದ ಪ್ರಸಾದರೊಂದಿಗೆ ಖಾಲಿ ಕೈಯಲ್ಲಿ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಕಟೀಲಿಗೆ ಬಂದು ಸಂಸ್ಕೃತ ಎಂ.ಎ ಪದವಿಗೆ ಸೇರಿದರು. ಗೋವಿಂದ ಪ್ರಸಾದರು ಮಂಗಳೂರಿನ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿದರು.ಇವರು ಮನೆ ಬಿಟ್ಟು ಹೊರಗೆ ನಡೆದ ದಿನ ಅಮವಾಸ್ಯೆಯ ದಿನವಂತೆ.ಮನೆ ಬಿಟ್ಟು ಹೊರಗೆ ನಡೆದಾಗ ದೀರ್ಘ ಕಾಲ ಮನೆ ಮಂದಿ ಇವರ ಸಂಪರ್ಕವನ್ನು ಬಿಟ್ಟಿದ್ದರು.ನಂತರ ರಾಜಿಯಾದ ಸಂದರ್ಭದಲ್ಲಿ ಅತ್ತೆಯವರು ಲಕ್ಷ್ಮೀ ಗೆ ಈ ವಿಚಾರವನ್ನು ತಿಳಿಸಿದ್ದರು.ಒಳ್ಳೆಯ ಕಾರ್ಯಕ್ಕೆ ಹೊರಟಾಗ ಕೆಟ್ಟ ಗಳಿಗೆ ಕೂಡ ಶುಭವನ್ನೇ ಮಾಡುತ್ತದೆ ಎಂಬುದಕ್ಕೆ ಲಕ್ಷ್ಮೀ ಸಾಕ್ಷಿಯಾದರು.
ಮೋಟು ಗೋಡೆಯ ಒಂದು ಕೊಠಡಿಯಲ್ಲಿ ವಾಸ
ಲಕ್ಷ್ಮೀ ಯವರ ಹೆತ್ತವರು ಕೋಟ್ಯಧಿಪತಿಗಳು ಅಲ್ಲದಿದ್ದರೂ ಹೊಟ್ಟೆಗೆ ಬಟ್ಟೆಗೆ ಕೊರತೆ ಇರಲಿಲ್ಲ.ಬಡತನದ ಬೇಗೆ ಮಕ್ಕಳಿಗೆ ತಾಗದಂತೆ ಹೆತ್ತವರು ಜಾಗ್ರತೆ ವಹಿಸಿದ್ದರು. ಕಟೀಲು ಸಮೀಪದ ಎಕ್ಕಾರಿನಲ್ಲಿ ಒಂದು ಕೋಣೆಯ  ಗೆದ್ದಲು ಹಿಡಿದ ಮೋಟು ಗೋಡೆಯ ಮನೆಯಲ್ಲಿ ಬದುಕುವುದು ಲಕ್ಷ್ಮೀ ಮತ್ತು ಗೋವಿಂದ ಪ್ರಸಾದ ದಂಪತಿಗಳಿಗೆ ಕಷ್ಟವೆನಿಸಲಿಲ್ಲ .ದಂಪತಿಗಳ ನಡುವಿನ ಮಧುರ ಸ್ನೇಹ ಮತ್ತು ಸಾಧನೆಯ ತುಡಿತದ ಎದುರು ಕಷ್ಟಗಳು ದೊಡ್ಡದಾಗಿ ಕಾಣಿಸಲಿಲ್ಲ ‌.ಬದುಕನ್ನು ಸವಾಲಾಗಿ ಎದುರಿಸಿದರು.
ಗ್ರಹಗತಿಗೇ ಸವಾಲು ಹಾಕಿದರು!
1996 ರಲ್ಲಿಯೇ ಸಂಸ್ಕೃತ ಎಂ.ಎ ಪದವಿಯನ್ನು ಮೊದಲ ರ‌್ಯಾಂಕಿನೊಂದಿಗೆ ಪಡೆದರೂ ಇವರಿಗೆ ಸುಲಭದಲ್ಲಿ ಸರ್ಕಾರಿ ಉದ್ಯೋಗ ದೊರೆಯಲಿಲ್ಲ.  ಓದು ಮುಗಿದ ತಕ್ಷಣವೇ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿತಾದರೂ ಅದು ಅರೆ ಕಾಲಿಕ ಕೆಲಸವಾಗಿತ್ತು. ಎಲ್ಲಿ ಹುಡುಕಿದರೂ ಸಂಸ್ಕೃತಕ್ಕೆ ಪೂರ್ಣಕಾಲಿಕ ಖಾಯಂ ಕೆಲಸವಿಲ್ಲ.ಆಗ ಸಂತ ಅಲೋಶಿಯಸ್ ಕಾಲೇಜಿನ ಹಿಂದಿ ಉಪನ್ಯಾಸಕಿ ಹಿಂದೆ ಎಂ ಎ ಓದುವಂತೆ ಸಲಹೆ ನೀಡಿದರು. ಅದಕ್ಕೂ ಮೊದಲೇ ಲಕ್ಷ್ಮೀ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುವ ರಾಷ್ಟ್ರ ಭಾಷಾ ಪ್ರವೀಣ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.ಹಾಗಾಗಿ ಹಿಂದೆ ಎಂಎ ಓದುವುದು ಇವರಿಗೆ ಅಷ್ಟೊಂದು ಕಷ್ಟವೆನಿಸಲಿಲ್ಲ.ಕೆಲಸ ಮಾಡುತ್ತಲೇ ಪುಟ್ಟ ಮಗ ಅರವಿಂದನ ಲಾಲನೆ ಪಾಲನೆ ಮಾಡುತ್ತಲೇ ಖಾಸಗಿಯಾಗಿ ಹಿಂದಿ ಎಂಎ ಗೆ ಕಟ್ಟಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು ‌.ಅಂಕಗಳೇನೋ ಬಂತು.ಆದರೆ ಹಿಂದಿ ಭಾಷೆ ಸಾಹಿತ್ಯ ಅವರನ್ನು ಆಕರ್ಷಿಸಲಿಲ್ಲ.ಅಸಕ್ತಿ ಇಲ್ಲದ ಕ್ಷೇತ್ರದಲ್ಲಿ ದುಡಿಯುತ್ತಾ ಬದುಕು ಕಳೆಯುವುದು ಲಕ್ಷ್ಮೀ ಗೆ ಸಮ್ಮತವಾಗಲಿಲ್ಲ.ಸಹೋದರ ಗಣೇಶ ಭಟ್ ಸಲಹೆಯಂತೆ ಮತ್ತೆ ಪುನಃ ಕನ್ನಡ ಎಂ.ಎ ಗೆ ಕಟ್ಟಿದರು.ಇಲ್ಲಿ ಇವರು ತನ್ನ ಆಸಕ್ತಿಯ ಕ್ಷೇತ್ರ ಜಾನಪದವನ್ನು ಆಯ್ಕೆ ಮಾಡಿಕೊಂಡರು.ಇಲ್ಲಿಂದ ಇವರ ಬದುಕಿನ ದಿಕ್ಕು ಬದಲಾಯಿತು. ತುಳು ಸಂಸ್ಕೃತಿ ಜಾನಪದ ಇವರ ಅಧ್ಯಯನದ ವಿಚಾರವಾಯಿತು. ಮೂರು ಎಂಎ ಪದವಿಗಳನ್ನು ಎಂಫಿಲ್ ಮತ್ತು ಡಾಕ್ಟರೇಟ್ ಪದವಿಗಳನ್ನೂ ಪಡೆದರೂ ಇವರಿಗೆ ಜಾತಿ ದುಡ್ಡು ಪ್ರಭಾವಗಳ ವ್ಯವಸ್ಥೆಯ ನಡುವೆ ಸರ್ಕಾರಿ ಉದ್ಯೋಗ ದೊರೆಯಲಿಲ್ಲ. ‌ವಯಸ್ಸು ನಿಲ್ಲುವುದಿಲ್ಲ.
1995 ರಲ್ಲಿ ಇವರು ಎರಡನೇ ವರ್ಷದ ಎಂಎ ಓದುತ್ತಿರುವಾಗ ಸರ್ಕಾರಿ  ಪದವಿ ಪೂರ್ವ ಕಾಲೆಜುಗಳ ಉಪನ್ಯಾಸಕ ಹುದ್ದೆಗೆ ಅರ್ಜಿ ಅಹ್ವಾನಿಸಿದ್ದರು.ಅದಾಗಿ ಯಾವುದೋ ಸಮಸ್ಯೆಯಿಂದಾಗಿ  ಹತ್ತು ವರ್ಷಗಳ ಕಾಲ ಅರ್ಜಿ ಅಹ್ವಾನಿಸಿರಲಿಲ್ಲ.ಮತ್ತೆ 2006 ರಲ್ಲಿ ಅರ್ಜಿ ಅಹ್ವಾನಿಸಿದಾಗ  ಲಕ್ಷ್ಮೀಯವರಿಗೆ  ಗರಿಷ್ಠ ವಯೋಮಿತಿ 33 ವರ್ಷ ದಾಟಿತ್ತು.ಆರಂಭದಲ್ಲಿ ತುಂಬಾ ಹತಾಶೆಗೆ ಒಳಗಾದ ಇವರು ಮತ್ತೆ ಆತ್ಮವಿಶ್ವಾಸವನ್ನು ಬಿಡದೆ ಆಗ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿಯವರನ್ನು ಭೇಟಿಯಾದರು ‌.ಅದಾಗಲೇ ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಗರಿಷ್ಠ ವಯೋಮಿತಿ 40 ವರ್ಷಕ್ಕೆ ನಿಗಧಿತವಾಗಿತ್ತು.ಪದವಿ ಕಾಲೇಜುಗಳಿಗೆ 35 ವರ್ಷಗಳು ಗರಿಷ್ಠ ವಯೋಮಿತಿಯಾಗಿತ್ತು ಶಿಕ್ಷಣ ಸಚಿವರಿಗೆ ಇದನ್ನು ಮನವರಿಕೆ ಮಾಡಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದರು‌.ಅದರಂತೆ ಶಿಕ್ಷಣ ಸಚಿವರು  ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಇರುವಂತೆ  ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಕೂಡ ಗರಿಷ್ಠ ವಯೋಮಿತಿ  40 ವರ್ಷಗಳನ್ನು ನಿಗಧಿಪಡಿಸಿದರು.
2006 ರಲ್ಲಿ ಅರ್ಜಿ ಅಹ್ವಾನಿಸಿದಾಗ ಒಂದೇ ಒಂದು ಸಂಸ್ಕೃತ ಉಪನ್ಯಾಸಕ ಹುದ್ದೆ ಇರಲಿಲ್ಲ ‌.ಕನ್ನಡ ಉಪನ್ಯಾಸಕ ಹುದ್ದೆಗೆ ಇವರಿಗೆ ಸಂದರ್ಶನಕ್ಕೇ ಬರಲಿಲ್ಲ.
ಈಗ ಇವರ ಹೆತ್ತವರು ಇವರ ಜಾತಕ ತೋರಿಸಿ ಅನೇಕ ಜ್ಯೋತಿಷಿಗಳಲ್ಲಿ ಇವರಿಗೆ ಸರ್ಕಾರಿ ಹುದ್ದೆ ದೊರೆಯುತ್ತದೆಯೇ ಎಂದು ಕೇಳಿದರು.ಇವರ ಜಾತಕ ನೋಡಿದ ಎಲ್ಲರೂ ಇವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇಲ್ಲವೆಂದೇ ಹೇಳಿದರು.ಲಕ್ಷ್ಮೀ ಆಗಲೂ ಕೂಡ ತನ್ನ ಪ್ರಯತ್ನ ಬಿಡಲಿಲ್ಲ. ಮನೋ ಬಲದ ಮುಂದೆ ಯಾವ ಗ್ರಹಗತಿಯೂ ನಿಲ್ಲುವುದಿಲ್ಲ ಎಂದು ಮನಸ್ಸು ಗಟ್ಟಿ ಮಾಡಿಕೊಂಡರು!
ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಪ್ರೌಢಶಾಲಾ ಶಿಕ್ಷಕರಿಗೆ ಇರುವಂತೆ ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ನಡೆಸುವಂತೆ ಮನವಿ ಮಾಡಿದರು. ಈ ಬಗ್ಗೆ ಪತ್ರಾಂದೋಲನ ಮಾಡಿದರು‌.ಸಂದರ್ಶನದ ಮೂಲಕ ಆಯ್ಕೆ ಮಾಡುವಾಗ ಜಾತಿ ದುಡ್ಡು ಪ್ರಭಾವವೇ ಕೆಲಸ ಮಾಡುತ್ತದೆ‌.ಭ್ರಷ್ಟಾಚಾರದ ಕಾರಣದಿಂದ ದುಡ್ಡು ಕೊಡಲು ಅಸಮರ್ಥರಾಗುವ ,ಇನ್ಫ್ಲೂಯೆನ್ಸ್ ಇಲ್ಲದೆ ಇರುವ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆ.ಹಾಗಾಗಿ ಅನೇಕರು ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕೆಂದು ಹೋರಾಟ ಮಾಡಿದರು.ಅದರ ಪರಿಣಾಮವಾಗಿ 2008 ರಲ್ಲಿ ‌ಮತ್ತೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ ಅಹ್ವಾನಿಸಿದಾಗ ಮಾಡಿದಾಗ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡುವುದೆಂದು ತೀರ್ಮಾನವಾಯಿತು. ಅರ್ಜಿ ಆಹ್ವಾನಿಸಿದ ತಕ್ಷಣವೇ ಹಗಲು ರಾತ್ರಿ ಅಧ್ಯಯನ ಮಾಡಿದ ಲಕ್ಷ್ಮೀ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರು. ಯಾವುದೇ ಪ್ರಭಾವ ದುಡ್ಡು ರಾಜಕೀಯವಿಲ್ಲದೆ ಪ್ರಾಮಾಣಿಕವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು.ಲಕ್ಷ್ಮೀ ವಿಷಗಳಿಗೆಯಲ್ಲಿ ಹುಟ್ಟಿದ್ದರಂತೆ.ಇವರ ಪ್ರಾಮಣಿಕ ಪ್ರಯತ್ನಕ್ಕೆ ವಿಷ ಗಳಿಗೆ ಕೂಡ ಅಮೃತದ ಫಲವನ್ನೇ ನೀಡಿತು.
(ಅಪೂರ್ವ ತುಳು ಸಂಶೋಧಕಿ ಡಾ.ಲಕ್ಷ್ಮೀ ಜಿ ಪ್ರಸಾದ, ಮುಂಬಯಿ ಸಾಹಿತ್ಯ ಬಳಗ ಪ್ರಕಟಿಸಿದ ಲಕ್ಷ್ಮೀ ಯವರ ಜೀವನದ ಬಗೆಗಿನ ಒಂದು ಭಾಗ )

No comments:

Post a Comment