Wednesday, 31 December 2014

ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಸ್ತ್ರೀ ಅಭಿವ್ಯಕ್ತಿ ಡಾ.ಲಕ್ಷ್ಮೀ ಜಿ ಪ್ರಸಾದ(ಉದಯವಾಣಿ 2 ಜುಲೈ 2014)ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಸ್ತ್ರೀ ಅಭಿವ್ಯಕ್ತಿ
ಅತ್ಯಾಚಾರಗಳಲ್ಲಿ ಆಕರ್ಷಣೆಯಿಂದ ನಡೆಯುವ ಅತ್ಯಾಚಾರ, ಮಾನಸಿಕ ಅಸ್ವಸ್ಥರಿಂದ ನಡೆಯುವ ಅತ್ಯಾಚಾರ, ಕುಡುಕರಿಂದ ನಡೆಯುವ ಅತ್ಯಾಚಾರ, ಪ್ರತೀಕಾರಕ್ಕಾಗಿ ನಡೆಯುವ ಅತ್ಯಾಚಾರ ಮೊದಲಾದ ವಿದಗಳು ಇವೆ. ಪ್ರಸ್ಥುತ ವರದಿಯಲ್ಲಿ ಇರುವುದು ಮಾನಸಿಕ ದೌರ್ಭಲ್ಯದಿಂದ ಆಗಿರುವುದು. ನಮ್ಮಲ್ಲಿ ಅತಿಹೆಚ್ಚು ಆಕರ್ಷಣೆಯಿಂದ ನಡೆಯುವ ಅತ್ಯಾಚಾರ ನಡೆಯುತ್ತವೆ. ಹೆಣ್ಣುಮಕ್ಕಳ ನಡೆ ಸರಿ ಇದ್ದರೆ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ದೇಶದ ಹೆಣ್ಣುಮಕ್ಕಳು ಎಷ್ಟು ಹಾದಿ ತಪ್ಪಿದರೂ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಅತ್ಯಾಚಾರ ನಡೆಯುತ್ತಿದೆ ಎಂದರೆ ನಮ್ಮ ಗಂಡುಮಕ್ಕಳು ನಿಜಕ್ಕೂ ಅಭಿನಂದಾರ್ಹರು.
ಕೋಲಾರದಲ್ಲಿ ಬೆನ್ನು ಬೆನ್ನಿಗೆ ಶಾಲಾ ವಿದ್ಯಾರ್ಥಿನಿಯರ ಮೇಲಾದ ಅತ್ಯಾಚಾರವನ್ನು ಖಂಡಿಸಿ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಗೆ ಬಂದ ಒಂದು ಪ್ರತಿಕ್ರಿಯೆ ಇದು  !
“ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಯಾವುದು ತಿಳಿದಿದೆಯೇ ?ಇಲ್ಲವಾದಲ್ಲಿ  ಒಂದು ಕನ್ನಡಿ ತೆಗೆದು ಬಗ್ಗಿ ನೋಡಿ “ಎಂಬ ಹಾಸ್ಯವನ್ನು ಸಾಮಾಜಿಕ ಅಂತರ್ಜಾಲ ತಾಣವಾದ  ಫೇಸ್ ಬುಕ್ ನಲ್ಲಿ ಓದಿ ನಗಾಡಿದ್ದೆ ಕೆಲ ದಿನಗಳ ಹಿಂದೆ .
ಮೇಲಿನ ಪ್ರತಿಕ್ರಿಯೆ ಓದಿದಾಗ .”ಅದು ತಮಾಷೆಯಲ್ಲ ವಾಸ್ತವ; ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಮನುಷ್ಯನೇ ಖಂಡಿತಾ “ಎನ್ನಿಸಿತು. ಅತ್ಯಾಚಾರದಂಥಹ ಅಕ್ಷಮ್ಯ. ಹೇಯ ,ಕ್ರೌ ರ್ಯಕ್ಕೂ ಕೂಡ ಹೆಣ್ಣನ್ನೇ ಕಾರಣ ಮಾಡುವ ಹೃದಯ ದಾರಿದ್ರ್ಯತೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.!
ಹೆಂಗಸರ ಬಗ್ಗೆ ಯಾಕೆ ಅವಜ್ಞೆ ಈ ಸಮಾಜಕ್ಕೆ? ..ನನಗೆ ಅರ್ಥವಾಗುತ್ತಿಲ್ಲ .

 “ಹೆಂಗಸರಿಗೆ ಮಾತನಾಡಲು ಬರುವುದಿಲ್ಲ “ ಎನ್ನುತ್ತಾರೆ ವಿಶ್ವವಿದ್ಯಾಲಯವೊಂದರ ನಿವೃತ್ತ ಕನ್ನಡ ಪ್ರೊಫೆಸ್ಸರ್ ಒಬ್ಬರು
“ಬ್ಯಾಟರಿಗೆ ಒಂದು ಪೊಸಿಟಿವ್ ಮತ್ತು ಒಂದು ನೆಗೆಟಿವ್ ತುದಿಗಳು ಇರುತ್ತವೆ ,ಹೆಂಗಸರಿಗೆ ನೆಗೆಟಿವ್ ತುದಿ ಮಾತ್ರ ಇರುತ್ತದೆ “ಎಂದು ತಮ್ಮ ಸಹೋದ್ಯೋಗಿಗಳು ಮಾತನಾಡಿಕೊಳ್ಳುವ ಬಗ್ಗೆ  ವೈದ್ಯ ಉಪನ್ಯಾಸಕರೊಬ್ಬರು ಹೇಳುತ್ತಾರೆ .
ಇತ್ತೀಚೆಗೆ ಭೇಟಿಯಾದ ಖ್ಯಾತ  ಚಿಂತಕರೊಬ್ಬರು ಸ್ತ್ರೀಯರ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತಾಡುತ್ತಾ ಅದಕ್ಕೆ ಸ್ತ್ರೀಯರ ವೇಷ ಭೂಷಣ ಕೂಡ ಕಾರಣ ಎಂದು ಹೇಳಿದರು !
ಕೋಲಾರದಲ್ಲಿ ಅತ್ಯಾಚಾರಕ್ಕೊಳಗಾದ ಶಾಲಾ ಬಾಲಕಿಯರು ಅಶ್ಲೀಲ ಬಟ್ಟೆ ತೊಟ್ಟಿದ್ದರೆ? ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಆಗಲಿ ,ಸೌಮ್ಯ ಭಟ್ ಆಗಲಿ ಯಾರು ಕೂಡ ಕಾಮಪ್ರಚೋದಕವಾದ ವೇಷ ಭೂಷಣ ಹೊಂದಿರಲಿಲ್ಲ.ಮೂರು ತಿಂಗಳ ಹಸುಳೆ ಯಿಂದ ಹಿಡಿದು ಎಂಬತ್ತು ವರ್ಷದ ಅಜ್ಜಿಯನ್ನು ಬಿಡದೆ ಅತ್ಯಾಚಾರ ಮಾಡಿದ್ದಾರೆ
ಅತ್ಯಾಚಾರಕ್ಕೆ ಒಳಗಾದ ಸ್ತ್ರೀಯರು ಯಾರೂ ತುಂಡು ಬಟ್ಟೆ ಧರಿಸಿರಲಿಲ್ಲ ಎನ್ನುವುದು ವಾಸ್ತವ ..ಇಷ್ಟಿದ್ದೂ ಸುಶಿಕ್ಷಿತರಾದ ಮಂದಿ ಕೂಡ ಅತ್ಯಾಚಾರಕ್ಕೆ ಹೆಣ್ಣನ್ನೇ ಬೊಟ್ಟು ಮಾಡುತ್ತಾರೆ .
ಇತ್ತೀಚೆಗೆ ಫೇಸ್ ಬುಕ್  ಗುಂಪು ಒಂದರಲ್ಲಿ ಯಾರೋ ಒಬ್ಬರು ಅತ್ಯಾಚಾರಕ್ಕೆ ಯಾರು ಕಾರಣ ?ಹೆಣ್ಣು ಅಥವಾ ಗಂಡು ಎಂದು ಪ್ರಶ್ನೆ ಕೇಳಿದ್ದರು .ಅದಕ್ಕೆ ಅನೇಕ ಮಂದಿ ಹೆಣ್ಣೇ ಕಾರಣ ಎಂದಿದ್ದರೆ ,ಕೆಲ ಮಂದಿ ಇಬ್ಬರೂ ಕಾರಣ ಎಂದಿದ್ದರು .ಗಂಡಿನ ವಿಕೃತ ಮನಸು ಕಾರಣ ಎಂದು ಒಬ್ಬರೂ ಹೇಳಿರಲಿಲ್ಲ.ಬಹುಶ ಇದನ್ನೇ ಪುರುಷ ಪ್ರಧಾನ ಸಮಾಜ ಎನ್ನುವುದು ಇರಬೇಕು .ಗಂಡಿನ ಅಕ್ಷಮ್ಯ ಅಪರಾಧಗಳಿಗೆ ಕೂಡಾ ಹೆಣ್ಣನ್ನು ಹೊಣೆ ಮಾಡುವುದು ಇದರ ಲಕ್ಷಣ ಇರಬೇಕು.
ಇದೇ ರೀತಿ ಒಂದೆರಡು ತಿಂಗಳ ಹಿಂದೆ  ಇನ್ನೊಂದು ಫೇಸ್ ಬುಕ್ ಗುಂಪು ಒಂದರಲ್ಲಿ ಹಾಕಿದ್ದ ಒಂದು ಪೋಸ್ಟ್  ಗಮನ ಸೆಳೆಯಿತು .ಅದು ಕಾಸರಗೋಡು ಪರಿಸರದಲ್ಲಿ ಹುಡುಗಿಯರು ಲವ್ / ಮತಾಂತರದ ಜಾಲಕ್ಕೆ ಬೀಳುವ ಬಗ್ಗೆ ಬಂದ ವಾರ್ತಾ ಪತ್ರಿಕೆಯೊಂದರ ಭಾಗ ಆಗಿತ್ತು .ಇತ್ತೀಚಿಗೆ ಲವ್/ಮತಾಂತರದ ಜಾಲಕ್ಕೆ ಸಿಲುಕಿದ ಯುವತಿಯನ್ನು ಹುಡುಕಿ ಹಿಂದೆ ಕರೆದು ಕೊಂಡು ಬಂದಿದ್ದರು .ಆ ಯುವತಿ ಯಾವ ರೀತಿ ಜಾಲ ಬೀಸುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದು ಅದರಲ್ಲಿ ಇತ್ತು .ಆರಂಭದಲ್ಲಿ ಯುವತಿಯರ ಸ್ನೇಹಿತರ ಮೂಲಕ ಪರಿಚಯ ಮಾಡಿಕೊಂಡು ಮಾದಕ ಪದಾರ್ಥಗಳನ್ನು ಸೇರಿಸಿದ ಸಿಹಿ ತಿಂಡಿ ಚಾಕೋಲೆಟ್ ಗಳನ್ನು ನೀಡುತ್ತಾರೆ .ಆ ಚಾಕೋಲೆಟ್ ಗೆ ಮಾದಕ ವಸ್ತು ಸೇರಿಸಿರುವುದರಿಂದ ಇವರು ಅದಕ್ಕೆ ಅಡಿಕ್ಟ್ ಆಗುತ್ತಾರೆ .ಅವರು ಕೊಡುವ  ಮಾದಕ ವಸ್ತುವಿಗಾಗಿ ಸ್ನೇಹ ಮುಂದುವರಿಯುತ್ತದೆ .ಮತ್ತೆ ಐ ಪ್ಯಾಡ್ ಗಳನ್ನು ಕೊಟ್ಟು ಮನ ಪರಿವರ್ತನೆ ಮಾಡುತ್ತಾರೆ ಇತ್ಯಾದಿ ಮಾಹಿತಿ ಅದರಲ್ಲಿತ್ತು .
ಇದಕ್ಕೆ ಕೆಲವರು ನೀಡಿದ ಪ್ರತಿಕ್ರಿಯೆ ದಿಗ್ಭ್ರಮೆ ಗೊಳಿಸಿತ್ತು !ಒಬ್ಬರು ಹೀಗೆ ಆಗುವುದಕ್ಕೆ ಹೆಣ್ಣು ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ನೀಡಿದ್ದು ಕಾರಣ ,ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರ ಬರುವ ಅವಕಾಶ ಇರಲಿಲ್ಲ .ಈಗ ಇವರಿಗೆ ಅಂತ ಸ್ವಾತಂತ್ರ್ಯ ನೀಡಿದ್ದು ತಪ್ಪು ಎಂದು ಹೇಳಿದರೆ ಇನ್ನೊಬ್ಬರು ಮದುವೆ ವಯಸ್ಸನ್ನು 14 ವರ್ಷಕ್ಕೆ ಇಳಿಸ ಬೇಕು ಎಂದು ಅಭಿಪ್ರಾಯಿಸಿದರು .
ಇನ್ನೊಬ್ಬರು ನನ್ನ ಮೂರು ವರ್ಷದ ಮೊಮ್ಮಗ ಕೂಡಾ ಬೇರೆಯವರು ಕೊಟ್ಟ ತಿಂಡಿ ತೀರ್ಥ ತಿನ್ನುವುದಿಲ್ಲ .ಈ ಹುಡುಗಿಯರಿಗೆ ಅಷ್ಟು ಬುದ್ಧಿ ಇಲ್ಲವೇ ಎಂದು ವಾದಿಸಿದರು! ಮತ್ತೊಬ್ಬರು ಹೆಣ್ಣು ಮಕ್ಕಳನ್ನು ಕೆಟ್ಟ ಭಾಷೆಯಲ್ಲಿ ಬೈದು “ಹೆಣ್ಣು ಮಕ್ಕಳ ಸೊಂಟ ಮುರಿದು ಮನೆಯಲ್ಲಿ ಕೂಡಿ ಹಾಕ ಬೇಕು” ಎಂದು ಹೇಳಿದರು !ಅವಳನ್ನು ಹಿಂದೆ ಕರೆದು ಕೊಂಡು  ಬಂದದ್ದೇಕೆ ?ಅಲ್ಲಿಯೇ ಸಾಯಲಿ ಎಂದು ಬಿಡ ಬೇಕು ಎಂದು ಇನ್ನೊಬ್ಬರು ಹೇಳಿದರು .ಅನೇಕರಿಗೆ  ಇದು ಹಾಸ್ಯದ ವ್ಯಂಗ್ಯದ ವಸ್ತು ಆಯಿತು !
ಯಾರೋ ಒಬ್ಬರು ಫೇಸ್ ಬುಕ್ ಗುಂಪಿನಲ್ಲಿ ಕುಕ್ಕರ್ ಸಿಡಿದು ಗಾಯಗೊಂಡ ಓರ್ವ  ಮಹಿಳೆಯ ಚಿತ್ರ ಹಾಕಿದ್ದರು .ಅದಕ್ಕೆ ಪ್ರತಿಕ್ರಿಯಿಸಿದ ಅನೇಕರು ಈಗಿನ ಹುಡುಗಿಯರು ಅಮ್ಮಂದಿರಿಗೆ ಅಡುಗೆಗೆ ಸಹಾಯ ಮಾಡುವುದಿಲ್ಲ ,ಶೋಕಿ ಡ್ರೆಸ್ ಹಾಕಿಕೊಂಡು ತಿರುಗಾಡುತ್ತಾರೆ  ಇತ್ಯಾದಿಯಾಗಿ  ಅಸಂಬದ್ಧ ಕಾಮೆಂಟ್  ಮಾಡಿದ್ದರು !ಯಾರೊಬ್ಬರೂ ಅದನ್ನು ಪ್ರಶ್ನಿಸಲೂ ಇಲ್ಲ,ಹುಡುಗಿಯರನ್ನು ದೂಷಿಸಲು ಕಾರಣಕ್ಕಾಗಿ ಕಾಯುತ್ತಿರುತ್ತಾಯೇ  ನಮ್ಮ ಸಮಾಜ ಮಂದಿ?! ಎಂದು ಇದನ್ನು ಓದುವಾಗ ಅನ್ನಿಸಿತು .

ಇದನ್ನೆಲ್ಲ ಓದಿದ, ಗಮನಿಸಿದ ಸಹೃದಯರೊಬ್ಬರು “ನಾವು ನಮಗೆ ಹೆಣ್ಣು ಮಗಳು ಬೇಕೇ ಬೇಕು ಎಂದು ದೇವರಿಗೆಲ್ಲ ಹರಿಕೆ ಹಾಕಿ ಹಂಬಲಿಸಿ ಮಗಳನ್ನು ಪಡೆದೆವು .ಈಗ ಅನ್ನಿಸುತ್ತದೆ .ಅದು ತಪ್ಪಾಯಿತು ಎಂದು .ಹೆಣ್ಣು ಹೆತ್ತ ತಪ್ಪಿಗೆ ನಾವು ಏನೆಲ್ಲಾ ಅನುಭವಿಸ ಬೇಕು.ಹೆಣ್ಣು ಮಕ್ಕಳನ್ನು ರಕ್ಷಣೆ ಯೇ ಒಂದು ಸವಾಲು .ಹೆಣ್ಣು ಮಕ್ಕಳಿಗೆ ಏನಾದರು ಆದರೆ ಎಲ್ಲ ಕಡೆಯಿಂದಲೂ ಮಾತು ಕೇಳಬೇಕು ”ಎಂದು ಖೇದದಿಂದ ಹೇಳಿದರು .
ಒಂದೆಡೆ ಆರು ತಿಂಗಳ ಮಗುವಿನ ಮೇಲೆ ಅತ್ಯಾಚಾರ ,ಇನ್ನೊಂದೆಡೆ ಎಲ್ ಕೆ ಜಿ ಮಗುವಿನ ಮೇಲೆ ಶಾಲಾ ವಾಹನ ಚಾಲಕನಿಂದ ಅತ್ಯಾಚಾರ .ಶಾಲೆಯಲ್ಲಿ ಶಿಕ್ಷಕರೇ  ಲೈಂಗಿಕ ಕಿರು ಕುಳ  ಕೊಟ್ಟ ವಿಚಾರಗಳು ಕೇಳಿ ಬರುತ್ತಿವೆ .
ಮುಂದೆ ಹೇಗೋ ಓದಿ ಕೆಲಸಕ್ಕೆ ಸೇರಿದರೆ ಸಹೋದ್ಯೋಗಿಗಳಿಂದ ಮೇಲಧಿಕಾರಿಗಳಿಂದ  ಕಿರು ಕುಳ ,ಲಿಂಗ ತಾರ ತಮ್ಯ !ಮನೆಯಿಂದ ಕಾಲು ಹೊರಗಿಟ್ಟರೆ ಕಾಮುಕರ ಕಾಟ .ಹೆಣ್ಣು ಮಕ್ಕಳಿಗೆ ಮನೆ ಕೂಡ ಸುರಕ್ಷಿತ ತಾಣ ಅಲ್ಲ .ಮಗಳನ್ನೇ ಅತ್ಯಾಚಾರ ಮಾಡುವ ತಂದೆ, ಚಿಕ್ಕಪ್ಪ, ಮಾವಂದಿರು,ಕೆಲಸದವರು  .ಆರು ತಿಂಗಳ ಮಗು ಎಂದು ನೋಡದೆ ಎಂಬತ್ತೈದು ವರ್ಷದ ಅಜ್ಜಿ ಎಂದು ಬಿಡದೆ ಎಲ್ಲ ವಯೋಮಾನದ ಹೆಂಗಸರನ್ನು ಅತ್ಯಾಚಾರ ಮಾಡಿ ಕೊಂದು ಬಿಸಾಡುವುದು ಅಲ್ಲಲ್ಲಿ ಕಂಡು ಬರುತ್ತಿದೆ !
ಒಂದೆಡೆ ಲೈಂಗಿಕ ದೌರ್ಜನ್ಯ ,ಲಿಂಗ ತಾರತಮ್ಯದ ಪಿಶಾಚಿಗಳು ಕಾಡಿದರೆ ಇನ್ನೊಂದೆಡೆ ಲವ್/ಮತಾಂತರದ ಜಾಲ . ಹಾಡು ಹಗಲೇ ಅಪಹರಿಸಿ ಅತ್ಯಾಚಾರ ಮಾಡಿ ಕೊಂದು ಬಿಸಾಡಿದರೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸದ ದುರ್ಬಲ ಕಾನೂನು ವ್ಯವಸ್ಥೆ .ದೂರು ಕೊಡಲು ಹೋದವರನ್ನೇ ಅಪರಾಧಿಗಳಂತೆ ಕಾಡುವ ವ್ಯವಸ್ಥೆ ಎಂಬ ಅವ್ಯವಸ್ಥೆ !
 ಇದೆಲ್ಲಕ್ಕೂ  ಹೆಣ್ಣು ಮಕ್ಕಳನ್ನೂ ಅವರ ಹೆತ್ತವರನ್ನೂ ಹೊಣೆ ಮಾಡುವ ಸಮಾಜ ! ದೆಹಲಿಯ ಹುಡುಗಿಯ ವಿಚಾರದಲ್ಲಿ “ಅಣ್ಣಾ ಅಂತ ಬೇಡಿ ಕೊಳ್ಳ ಬೇಕಿತ್ತು ,ಅವಳು ಪ್ರತಿಭಟಿಸ ಬಾರದಿತ್ತು” .”ಅವಳು ಪ್ರತಿಭಟಿಸಿದ ಕಾರಣ ಅವಳನ್ನು ಕೊಂದು ಹಾಕಿದರು” .”ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಗೆ ಹೋಗುವ ಕಾರಣವೇ ಹೀಗೆ ಆಗುವುದು .ನನ್ನ ಮಗಳನ್ನು ನಾನು ಹೊರಗೆ ಅಲೆಯಲು ಬಿಡುವುದಿಲ್ಲ .ಅಲೆಯಲು ಹೋಗಿ ರಾತ್ರಿ ಮಾಡಿ ಬಂದರೆ ಮನೆಗೆ ಸೇರಿಸುತ್ತಿರಲಿಲ್ಲ “ಇತ್ಯಾದಿ ನಾನಾ ಮಾತುಗಳು ಆಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ . ಹೆಣ್ಣುಮಕ್ಕಳು ಮೈ ಕೈ ಕಾಣುವ ವೇಷ ಭೂಷಣ ಧರಿಸುವುದೇ ಇದಕ್ಕೆ ಕಾರಣ .ಗಂಡಸರ ಮನಸ್ಸು ಇಂಥ ವೇಷ ಭೂಷಣಗಳಿಂದ ಉತ್ತೇಜನ ಗೊಳ್ಳುತ್ತದೆ .ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡಬೇಕು .ಇಲ್ಲದಿದ್ದರೆ ಹೀಗೇ ಆಗುವುದು .ಹೆಣ್ಣು ಮಕ್ಕಳನ್ನು ತಂದೆ ತಾಯಂದಿರು ಹದ್ದು ಬಸ್ತಿನಲ್ಲಿ ಇಡದ ಕಾರಣ ಹೀಗೆ ಆಗುವುದು ಇತ್ಯಾದಿ ಮಾತುಗಳು ಜನರಿಂದ .ತಮ್ಮ ಮಗಳಿಗೆ ಅನ್ಯಾಯವಾಗಿದೆ ಎಂದು ಸೌಜನ್ಯಾಳ ತಂದೆ ತಾಯಿ ಹೇಳಿದರೆ ಆ ಬಗ್ಗೆ ಮಾತನಾಡುವುದೇ ಅಶ್ಲೀಲತೆ, ನಾಚಿಗೆ ಕೇಡು ಎಂದು ಮಹಿಳಾ ಸಾಹಿತಿ ಯೊಬ್ಬರು ಹೇಳಿದ ವಿಚಾರ ಎಲ್ಲರಿಗೂ ತಿಳಿದದ್ದೇ ಆಗಿದೆ.
ಫೇಸ್ ಬುಕ್ ನಂತಹ  ಸಾಮಾಜಿಕ ಅಂತರ್ಜಾಲ ತಾಣಗಳನ್ನು ಸಾಮಾನ್ಯವಾಗಿ ಸಾಕಷ್ಟು ಶಿಕ್ಷಣ ಪಡೆದವರೇ ಬಳಸುತ್ತಾರೆ.ಆದರೆ ಫೇಸ್ ಬುಕ್ ನಂತಹ  ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಕೂಡಾ  ಹೆಣ್ಣು ಮಕ್ಕಳ ಅವಹೇಳನ ಸಹಿಸಲು ಆಗುವುದಿಲ್ಲ !
ಯಾವಾಗಲೋ ನಮ್ಮ ದೇಶಕ್ಕೆ  ವಿದೇಶಿ ಮಹಿಳೆಯರು ಬಂದಿದ್ದಾಗ ಸೀರೆ ಉಟ್ಟು ತೆಗೆಸಿದ  ಫೋಟೋ ಹಾಗೂ   ,ಕಾಲೇಜ್ ಕ್ಯಾಂಪಸ್ ನಲ್ಲೋ ಅಥವಾ ಫಲಿತಾಂಶದ ದಿನವೋ ಎಲ್ಲೋ ಒಂದು ಕಡೆ ಒಂದಷ್ಟು ಕುಶಿಯಿಂದ ಸಂಭ್ರಮಿಸುತ್ತಿರುವ ಹುಡುಗಿಯರ ಗುಂಪಿನ ಫೋಟೋ ಅನ್ನು ಎಲ್ಲಿಂದಲೋ ನಕಲು ಮಾಡಿ ಅವರ ಅನುಮತಿ ಪಡೆಯದೇ ಹಾಕಿ ಅವರಿಗೆ(ವಿದೇಶೀಯರಿಗೆ ) ನಮ್ಮ   ಸಂಸ್ಕೃತಿ ಬೇಕು ಇವರಿಗೆ ?(ಆ ಹುಡುಗಿಯರಿಗೆ ) ಎಂದು ಪ್ರಶ್ನಾರ್ಥಕವಾಗಿ ಹಾಕಿ ಶೇರ್ ಮಾಡಿ ಹೆಣ್ಣು ಮಕ್ಕಳನ್ನು ಅವಮಾನಿಸುವುದು ಸಾಮಾನ್ಯ ವಿಚಾರ !ಇಷ್ಟಕ್ಕೂ ಹೀಗೆ ಕೇಳುವವರು ಪುರಾತನ ಭಾರತೀಯ ಸಂಸ್ಕೃತಿಯ ಅನುಸಾರ ಕಚ್ಚೆ ಹಾಕಿ ಜುಟ್ಟು ಬಿಟ್ಟು ಕಿವಿಗೆ ಮತ್ತು ಜುಟ್ಟಿಗೆ ಹೂ ಮುಡಿದ ಗಂಡಸರಲ್ಲ .ಆಧುನಿಕ ಪ್ಯಾಂಟ್ ಶರ್ಟ್ ,ಆಧುನಿಕ ಕೇಶ ಶೈಲಿಯ ವೇಷ ಭೂಷಣ ಹಾಗೂ  ಬದುಕನ್ನು ಅನುಸರಿಸುತ್ತಿರುವ ಇಂದಿನ ಯುವಕರು .

ಇನ್ನು  ಫೇಸ್ ಬುಕ್ ನಂತ ಸಾಮಾಜಿಕ ಜಾಲಗಳಲ್ಲಿ ಹೆಣ್ಣು ಮಕ್ಕಳ  ಅಕೌಂಟ್ ಅನ್ನು ಹ್ಯಾಕ್ ಮಾಡಿ ಅಲ್ಲಿಂದ ಅವರ ಫೋಟೋ ಕದ್ದು ಅದನ್ನು ಕೆಟ್ಟದಕ್ಕೆ ಬಳಸಿ ಆ ಹೆಣ್ಣು ಮಕ್ಕಳ ಬದುಕನ್ನು ಹಾಳು ಗೆಡವುವ ಅನೇಕ ದುಷ್ಟರು ಇದ್ದಾರೆ .ಇಂಥಹಾದ್ದೆ ಕಾರಣಕ್ಕೆ ಜೀವ ಕಳೆದು ಕೊಂಡ ಯುವತಿಯೊಬ್ಬಳ ಫೋಟೋ ಹಾಕಿ “ಹೆಣ್ಣು ಮಕ್ಕಳೇ ಎಚ್ಚರ .ಯಾರು ಹೆಣ್ಣು ಮಕ್ಕಳು ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಲ್ಲಿ  ಮುಖ ತೋರಿಸ ಬೇಡಿ !”ಎಂದು ಬರೆದು ಶೇರ್ ಮಾಡಿರುವುದು ಅಲ್ಲಲ್ಲಿ ಕಂಡು ಬರುತ್ತದೆ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇರುವಂತೆ ತೋರಿಸಿ ಕೊಂಡು ಅದನ್ನು ಸಾವಿರಾರು ಮಂದಿ ಶೇರ್ ಮಾಡುತ್ತಾರೆ .ಆದರೆ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ “ಹೆಣ್ಣು ಮಕ್ಕಳ ಅಕೌಂಟ್  ನಿಂದ ಕದ್ದು ಅವರ ಫೋಟೋ ತೆಗೆದು ದುರುಪಯೋಗ ಮಾಡ ಬೇಡಿ .ಹೆಣ್ಣು ಮಕ್ಕಳು ನಮ್ಮಂತೆ ಮನುಷ್ಯರು ಅವರಿಗೆ ಎಲ್ಲರಂತೆ ಬದುಕುವ ಹಕ್ಕಿದೆ .ಅವರ ಫೋಟೋಗಳನ್ನು ದುರುಪಯೋಗ ಮಾಡಬೇಡಿ ಎಂದು ಸಂದೇಶ ನೀಡಿದ್ದು ನನ್ನ ಗಮನಕ್ಕೆ ಬಂದಿಲ್ಲ .

ಹೆಂಗಸರು ಸಾಮಾಜಿಕ ಅಂತರ್ಜಾಲ ತಾಣಕ್ಕೆ ಬಂದರೆ ಸಾಕು ಹಾಯ್  ಹಲೋ  ಕಾಫಿ ಆಯ್ತಾ ? ತಿಂಡಿ ಆಯ್ತಾ ?ಅಂತ ವ್ಯರ್ಥವಾಗಿ ಮಾತನಾಡಿ ಕಾಡುವರು  ಅನೇಕರು ! ಕೆಟ್ಟ ಮೆಸೇಜ್ /ಚಿತ್ರಗಳನ್ನು ಕಳುಹಿಸಿ ಕಾಡುವ ಪ್ರೇತಗಳೂ ಇವೆ ಈ
ಎಲ್ಲ ಶೆಲ್ಯಾಣತ್ತು ಕೇಳುವಾಗ ನಿಜವಾಗಿಯೂ ಯಾರಿಗಾದರೂ ಹೆಣ್ಣು ಮಗು ಬೇಕು ಎಂದೆನಿಸಲು ಸಾಧ್ಯವೇ ?!
ಖಂಡಿತಾ ಇಲ್ಲ .ಆದರೆ ಇದರ ಪರಿಣಾಮ ಏನಾದೀತು ಎಂದು ಆಲೋಚಿಸಿದರೆ ವಿಷಾದವಾಗುತ್ತದೆ !!
  ಹೌದು! “ಹೆಣ್ಣು ಮಕ್ಕಳಿಗೆ ತಾಯಿಯ ಗರ್ಭ ಕೂಡ ಸುರಕ್ಷಿತವಲ್ಲ “
 ನಮ್ಮ ಉಪರಾಷ್ಟ್ರ ಪತಿಗಳಾಗಿದ್ದ ಕೆ ಆರ್ ನಾರಾಯಣ್ ಹೇಳಿರುವುದು ನಿಜ .ಹೆಣ್ಣು ಮಕ್ಕಳನ್ನು ತಾತ್ಸಾರದಿಂದ ನೋಡಿ ವರದಕ್ಷಿಣೆ ,ಶೋಷಣೆ ಮಾಡಿದ್ದಲ್ಲದೆ ಹೆಣ್ಣು ಮಗುವನ್ನು ತಾಯಿಯ ಗರ್ಭದಲ್ಲಿರುವಾಗಲೇ ಚಿವುಟಿ ಹಾಕಿದ್ದರಿಂದ ಈಗಾಗಲೇ ಗಣನೀಯವಾಗಿ ಕುಸಿದಿದೆ.2011 ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಪ್ರತಿ ಸಾವಿರ ಗಂಡುಗಳಿಗೆ  978  ಹೆಂಗಸರು ಇದ್ದಾರೆ .ಆದರೆ ಮಕ್ಕಳ  ಅಂಕಿ ಅಂಶ ಪರಿಗಣಿಸಿದಾಗ ಪ್ರತಿ ಸಾವಿರ ಗಂಡು ಮಕ್ಕಳಿಗೆ 948  ಹೆಣ್ಣು ಮಕ್ಕಳು ಇದ್ದಾರೆ ,ಈಗಾಗಲೇ ಲಕ್ಷಾಂತರ ಮಂದಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಾರೆ ! ಹೆಣ್ಣಿನ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ .
ಇದರ ಪರಿಣಾಮ ಸಮಾಜದ ಮೇಲೆ ಈಗಾಗಲೇ ಕಾಣಿಸಿಕೊಂಡಿದೆ .ಬ್ರಾಹ್ಮಣರಲ್ಲಿ ಅದರಲ್ಲಿಯೂ ವಿಶೇಷವಾಗಿ ಹವ್ಯಕ ಬ್ರಾಹ್ಮಣರಲ್ಲಿ ಕನ್ಯೆಯರ ಬರ ಕಾಣಿಸಿಕೊಂಡಿದೆ .ಇದರಿಂದಾಗಿ ಹಳ್ಳಿಯಲ್ಲಿರುವ ಕೃಷಿಕ ಹುಡುಗರಿಗೆ ,ಸಣ್ಣ ಪುಟ್ಟ ಅಂಗಡಿ ಇಟ್ಟು ಬದುಕುವವರಿಗೆ ,ಸಣ್ಣ ಪುಟ್ಟ ಕೆಲಸದಲ್ಲಿ ಇರುವವರಿಗೆಮದುವೆಯಾಗಲು  ಹುಡುಗಿಯರು ಸಿಗುತ್ತಿಲ್ಲ .ತಂದೆ ತಾಯಂದಿರು ತಮ್ಮ ಮಗಳಿಗೆ ಒಳ್ಳೆಯ ಕೆಲಸದಲ್ಲಿರುವ ಪೇಟೆಯಲ್ಲಿರುವ ಸ್ಥಿತಿಗತಿ ಇರುವ ಹುಡುಗರು ಸಿಗುವಾಗ ಹಳ್ಳಿಯಲ್ಲಿ ಇರುವ ,ಸರಿಯಾದ ಉದ್ಯೋಗ ಆರ್ಥಿಕ ಭದ್ರತೆ ಇಲ್ಲದಿರುವ ಹುಡುಗರಿಗೆ ಕೊಡುತ್ತಾರೆಯೇ ?ಕೊಡ ಬೇಕು ಎಂದು ಹೇಳುವುದು ಸರಿಯಲ್ಲ ಅದು ಅವರ ಇಷ್ಟ . ಈ ಬಗ್ಗೆ ಹಳ್ಳಿ ಹುಡುಗರನ್ನು ಮದುವೆಯಾಗಲು ಹುಡುಗಿಯರು ಮುಂದಾಗದ ಬಗ್ಗೆ ಯಾವಾಗಲೂ ಸಾಮಜಿಕ ತಾಣಗಳಲ್ಲಿ ದೂಷಣೆಯ ಮಾತುಗಳು ಆಗಾಗ ಕೇಳಿ ಬರುತ್ತವೆ
ಹುಡುಗರಿಗೆ ಹುಡುಗಿ ಸಿಗದೇ ಇರುವುದಕ್ಕೆ ತಂದೆ ತಾಯಿ ಕೊಡದೇ ಇರುವುದು ಕಾರಣ ಅಲ್ಲ ,ಹುಡುಗರಿಗೆ ಹುಡುಗಿ ಸಿಗದ್ದಕ್ಕೆ ಗಂಡು ಹೆಣ್ಣಿನ ಅನುಪಾತ ಕುಸಿದದ್ದೇಮುಖ್ಯವಾದ  ಕಾರಣ. ತೀರಾ ಇತ್ತೀಚೆಗಿನವರೆಗೂ  ಅಂದರೆ ಹದಿನೈದು ವರ್ಷ ಹಿಂದಿನ ತನಕವೂ   ಹವ್ಯಕ ಸಮಾಜದಲ್ಲಿ ವರ ದಕ್ಷಿಣೆ ತೆಗೆದುಕೊಳ್ಳುತ್ತಿದ್ದರು .ಅದರಲ್ಲೂ ತುಸು ಕಪ್ಪು ಇದ್ದು ಹೆಚ್ಚು ಓದಿರದ ಹುಡುಗಿಗೆ ಮದುವೆಯಾಗ ಬೇಕಿದ್ದರೆ ಕೈ ತುಂಬಾ ವರದಕ್ಷಿಣೆ ನೀಡ ಬೇಕಿತ್ತು ಆದ್ರೆ ಈಗ ಹೆಣ್ಣಿನ ಸಂಖ್ಯೆ ಕಡಿಮೆ ಆದ ಕಾರಣ ವರದಕ್ಷಿಣೆ ಹವ್ಯಕ ಸಮಾಜದಲ್ಲಿ ಇಲ್ಲವೇ ಇಲ್ಲ .ಇಲ್ಲಿ ನಿದಾನಕ್ಕೆ ವಧು ದಕ್ಷಿಣೆ ಪದ್ಧತಿ ಆರಂಭವಾದರೂ ಆದೀತು! ಆದರೆ .ಇಷ್ಟಾಗಿದ್ದರೂ ಇನ್ನೂ ಕೂಡ ಜನರು ಎಚ್ಚತ್ತು ಕೊಂಡಿಲ್ಲ .ಹೆಣ್ಣಿನ ಶೋಷಣೆ ನಿಂತಿಲ್ಲ

.ಈಗ ಎಲ್ಲ ಕ್ಷೇತ್ರದಲ್ಲು ಹೆಣ್ಣು  ಮಕ್ಕಳು ಮುಂದುವರಿಯುತ್ತಿದ್ದಾರೆ .ಅವರಿಗೆ ಶಿಕ್ಷಣ ಸಿಗುವಂತೆ ಮಾಡುತ್ತಿದ್ದಾರೆ .ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಿಗೆ ಸಮಾನವಾದ ಸ್ಥಾನ ಮಾನ ಸಿಗುತ್ತಾ ಇದೆ ಆದ್ದರಿಂದ ಇನ್ನು ಹೆಣ್ಣು ಮಕ್ಕಳ ಸಂಖ್ಯೆ ಕುಸಿಯಲಾರದು ಎಂದು ತುಸು ನಿರಾಳತೆ ಇತ್ತು !
ಆದರೆ ಆ ನಿರಾಳತೆ ಹೆಚ್ಚು ಸಮಯ ಇರಲಿಕ್ಕಿಲ್ಲ .ಅಂದು ವರದಕ್ಷಿಣೆ ಶೋಷಣೆ ,ಬಡತನ ದಿಂದಾಗಿ ಹೆಣ್ಣು ಮಗು ಬೇಡ ಎನಿಸಿ ದ್ದರೆ ಇಂದು ಎಲ್ಲೆಡೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ,ಕೊಲೆ ,ಲೈಂಗಿಕ ಕಿರುಕುಳ ,ಲಿಂಗ ತಾರತಮ್ಯ , ಲವ್ /ಮತಾಂತರದ  ಜಾಲ ಮೊದಲಾದ ಕಾರಣಕ್ಕೆ ಹೆಣ್ಣು ಮಗು  ಭಾರ ಎನಿಸುತ್ತಿದೆ .ಆದ್ದರಿಂದ ಎಲ್ಲರೂ ಎಚ್ಚತ್ತು ಕೊಳ್ಳ ಬೇಕಾಗಿದೆ .ಹೆಣ್ಣು ಮಕ್ಕಳ ಸುರಕ್ಷಿತತೆ ಬಗ್ಗೆ ಆಲೋಚಿಸ ಬೇಕು .ಅತ್ಯಾಚಾರ ಮಾಡಿದವರಿಗೆ ,ಕಿರುಕುಳ ನೀಡುವವರಿಗೆ  .ಮತಾಂತರದ ಜಾಲದ ಮೂಲಕ ಹೆಣ್ಣು ಮಕ್ಕಳನ್ನು ಖೆಡ್ಡಾಕ್ಕೆ ಬೀಳಿಸುವವರಿಗೆ, ಶೀಘ್ರವಾಗಿ ಶಿಕ್ಷೆ  ಸಿಗುವಂತೆ ಮಾಡ ಬೇಕು .ಜೊತೆಗೆ ಸಮಾಜದಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸ ಬೇಕು
ಅತ್ಯಾಚಾರಿಗಳಿಗೆ ಬಲವಾದ ಶಿಕ್ಷೆ ಶೀಘ್ರವಾಗಿ ಆಗಬೇಕು ,ಜೊತೆಗೆ ಸಾಮಾಜಿಕವಾಗಿ ಜಾಗೃತಿ ಮೂಡಿಸಬೇಕು ,ಹೆಣ್ಣು ಭೋಗದ ವಸ್ತುವಲ್ಲ ,ಅವಳಿಗೂ ಎಲ್ಲರಂತೆ ಬದುಕುವ ಸ್ವಾತಂತ್ರ್ಯವಿದೆ ಎಂಬುದನ್ನು ಮನಗಾಣಿಸಬೇಕು.
ಶಾಲೆಗೆ ಹೋಗಿ ಬರುವ ಹೆಣ್ಣುಮಕ್ಕಳಿಗೆ  ಈ ಬಗ್ಗೆ ತಿಳುವಳಿಕೆ ನೀಡಬೇಕು .ಒಬ್ಬೊಬ್ಬರೇ ಓಡಾಡದೆ ಗುಂಪಿನಲ್ಲಿ ಹೋಗಿಬರುವಂತೆ ತಿಳುವಳಿಕೆ ನೀಡಬೇಕು
.ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹೆಣ್ಣು ಮಕ್ಕಳ ಅವಹೇಳನ ನಿಲ್ಲಿಸಬೇಕು.
ಹೆಣ್ಣು ಮಕ್ಕಳ ಮೇಲಿನ ಯಾವುದೇ ತರದ ದೌರ್ಜನ್ಯವನ್ನು ,ಜಾತಿ ಮತ,ಪಂಥ ,ಧರ್ಮ , ಪಕ್ಷ ಎಂಬ ಭೇದವಿಲ್ಲದೆ ಒಗ್ಗಟ್ಟಾಗಿ ವಿರೋಧಿಸ ಬೇಕು .ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮ ಮನೆಗೂ ಹರಡ ಬಹುದು ಎಂಬುದನ್ನು ನಾವು ಮರೆಯಬಾರದು .

Sunday, 28 December 2014

ಗಂಡನ ಚಿತೆಯೊಂದಿಗೆ ಬೆಂದು ಹೋದವರೆಷ್ಟೋ ?ಡಾ.ಲಕ್ಷ್ಮೀ ಜಿ ಪ್ರಸಾದ


paper.kannadaprabha.in/PUBLICATIONS\KANNADAPRABHABANGALORE\KAN/2014/12/27/ArticleHtmls/27122014006008.shtml?Mode=1


ಅಮ್ಮಾ!ಉರಿ ನೋವು ..!ನೀರು ನೀರು ..!ಎಂದು ಬೊಬ್ಬಿರಿಯುತ್ತಾ ಬೆಂಕಿಯ ಕಿಡಿಯನ್ನು ಉಗುಳುತ್ತಿರುವ ಸ್ತ್ರೀ ರೂಪಿ ಬೆಂಕಿಯ ರಾಶಿಯೊಂದು ಓಡಿ  ಬರುತ್ತಿದೆ !ಕೈಕಾಲು ಬೆಂದು ಮಾಂಸದ ಮುದ್ದೆಗಳು ಉದುರುತ್ತಿವೆ !ನೀರು ನೀರು ಎಂದು ಅಂಗಲಾಚುತ್ತಿದ್ದಾಳೆ!ಭಯಾನಕ ದೃಶ್ಯ !ನೋಡಲು ಅಸಾಧ್ಯ ! ಕೂಡಿದ ನೋಡಿದ ಮಂದಿ ಅವಳ ನೋವು ನೋಡಲಾಗದೆ ಕಣ್ಣು ಮುಚ್ಚಿಕೊಂದಿದ್ದಾರೆ !ಚೀತ್ಕಾರ ಕೇಳಲಾಗದೆ ಕಿವಿಗೆ ಕೈ ಹಿಡಿದಿದ್ದಾರೆ !ಆದರೆ ಯಾರೂ ಅವಳಿಗೆ ನೀರುಕೊಡಲು ಮುಂದಾಗುವುದಿಲ್ಲ !ಅವಳ ಹಿಂದಿನಿಂದ ದೊಡ್ಡ ದೊಡ್ಡ ಹಸಿ ಮರದ ಹಾಗೂ ಕಬ್ಬಿಣದ ಬಡಿಗೆಗಳನ್ನು ಹಿಡಿದ ರಾಕ್ಷಸರಂತೆ ಇರುವ ಜನರು ಅವಳನ್ನು ಹಿಡಿಯಲು ಓಡಿ ಬರುತ್ತಿದ್ದಾರೆ..!ನಾನು ನೀರು ಕೊಡಲೆಂದು ನೀರು ತುಂಬಿದ ಕೊಡವನ್ನು ಅವಳ ಮುಂದೆ ಹಿಡಿದಿದ್ದೇನೆ ಅಷ್ಟರಲ್ಲಿ ಅವಳನ್ನು ಕಟ್ಟಿದ ಕಬ್ಬಿಣದ ಸರಪಳಿಯಿಂದ ಕೆಂಡ ತುಂಡೊಂದು ನನ್ನ ಕಣ್ಣಿನ ಒಳಗೆ ಬೀಳುತ್ತದೆ ..!ಅಮ್ಮಾ..!ಉರಿ ..
ಅಬ್ಬ ಇಷ್ಟೆಲ್ಲಾ ಕಂಡದ್ದು ಕನಸಿನಲ್ಲಿ !ನಿಜ ಅಲ್ಲ!ಅಬ್ಬಾ!
ಎಚ್ಚರಾಗುವಾಗ ಕೈಕಾಲು ನಡುಗುತ್ತಿತ್ತು !
ಇದೊಂದು ಕನಸು ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ !ಈ ಕನಸು ಬೀಳಲು ಒಂದು ಬಲವಾದ ಕಾರಣವೂ ಇದೆ !
ಮೊನ್ನೆ ಶನಿವಾರ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ದಹ್ವಾದೇವಿ ಎಂಬ ಮಹಿಳೆ ಗಂಡನ ಚಿತೆಗೆ ಹಾರಿ ಸತಿ ಹೋದ ವಿಚಾರವನ್ನು ನಿನ್ನೆ ಮಾಧ್ಯಮಗಳ ಮೂಲಕ ಓದಿ ತಿಳಿದಿದ್ದೆ .ತಟ್ಟನೆ ಸತಿ ಪದ್ಧತಿಯ ಕ್ರೌರ್ಯ, ಆ ಹೆಣ್ಣು ಮಗಳು ಅನುಭವಿಸಿರಬೇಕಾದ ಉರಿ ನೋವು ನೆನಪಾಗಿತ್ತು.
ಬೆಳ್ಳಾರೆಗೆ ಹೋಗುವ ತನಕ ಸತಿ ಪದ್ದತಿಯ ದಾರುಣತೆಯ ಅರಿವು ನನಗಿರಲಿಲ್ಲ . ಐದು-ಐದೂವರೆ  ವರ್ಷಗಳ ಮೊದಲು ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಲೆಂದು ಬೆಳ್ಳಾರೆಗೆ ಬಂದಾಗ ನಾನು ಮೊದಲು ಗಮನಿಸಿದ್ದೇ ಬೆಳ್ಳಾರೆ ಮೇಗಿನ ಪೇಟೆಯಲ್ಲಿ ಹಾಕಿರುವ ಮಾಸ್ತಿ ಕಟ್ಟೆ ಎಂಬ ನಾಮ ಫಲಕ .
ಹಾಗಾಗಿ ಮೊದಲ ದಿನವೇ ಕಲ್ಯಾಣ ಸ್ವಾಮಿ ವಶಪಡಿಸಿಕೊಂಡ ಕೋಟೆ ಹಾಗೂ ಮಾಸ್ತಿ ಕಟ್ಟೆ ಬಗ್ಗೆ ವಿಚಾರಿಸಿದ್ದೆ !
ಇಂದಿನ ಶಿಕ್ಷಣದಲ್ಲಿ ಆನ್ವಯಿಕತೆಯ ಕೊರತೆಯೋ ,ತಿಳುವಳಿಕೆಯ ಕೊರತೆಯೋ ಏನೋ ಅಲ್ಲಿ ಈ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಅನ್ನುವುದು ವಾಸ್ತವ !ಅನಂತರ ಸಾಕಷ್ಟು ಶೋಧನೆ ಮಾಡಿ ಅಲ್ಲಿನ ಬೀಡಿನಲ್ಲಿ ಆನೆಕಟ್ಟುವ ಕಲ್ಲು, ಎರಡು ಮಾಸ್ತಿ ವಿಗ್ರಹಗಳು ಹಾಗೂ ಇತರ ಅವಶೇಷಗಳು  ಇತ್ಯಾದಿಗಳು  .ಆ ಬಗ್ಗೆ ಒಂದಷ್ಟು ಮಾಹಿತಿಗಳೂ ಲಭ್ಯವಾದವು.
ಬೆಳ್ಳಾರೆ ಮಹಾ ಸತಿ ಕಟ್ಟೆ ಬಗ್ಗೆ ನಾನು ವಿಚಾರಿಸಿದಾಗ ಕೆಲವು ವದಂತಿ /ನಂಬಿಕೆಗಳ ಕುರಿತು ಮಾಹಿತಿ ಸಿಕ್ಕಿತು , ಹಿಂದೆ ಸ್ತ್ರೀಯೊಬ್ಬಳು ಕೊಂಡ ಹಾರಿ /ಗಂಡನ ಚಿತೆಯೊಂದಿಗೆ ಉರಿದು ಸತಿ ಹೋಗಿರುವುದರ ಸ್ಮಾರಕವಾಗಿ ನಿರ್ಮಿಸಿರುವ ಒಂದು ಕಲ್ಲಿನ ಕಟ್ಟೆಗೆ ಮಹಾ ಸತಿ ಕಟ್ಟೆ ಎಂದು ಕರೆಯುತ್ತಾರೆ .
ಸಂಕೋಲೆ ಎಳೆಯುವ ಸದ್ದು
ಬೆಳ್ಳಾರೆಯ ಮಾಸ್ತಿ ಕಟ್ಟೆ ಬಗ್ಗೆ ಈ ರೀತಿಯ  ಮಹಾ ಸತಿ ಹೋದ ಕಥಾನಕ ಯಾರಿಗೂ ಅಲ್ಲಿ ಯಾರಿಗೂ ತಿಳಿದಿರಲಿಲ್ಲ !ಆದರೆ ಅಮವಾಸ್ಯೆಯಂದು  ರಾತ್ರಿ ಬೆಳ್ಳಾರೆ ಮೇಗಿನ ಪೇಟೆಯಲ್ಲಿರುವ ಮಾಸ್ತಿ ಕಟ್ಟೆ ಕಡೆಯಿಂದ ಬೆಳ್ಳಾರೆ ಕೆಳಗಿನ ಪೇಟೆವರೆಗೆ ಕಬ್ಬಿಣದ ಸರಪಳಿ ಎಳೆದುಕೊಂಡು ಬಂದ ಸದ್ದು ಕೇಳಿಸುತ್ತದೆ ಎಂದು ಅನೇಕರು ಹೇಳಿದರು !ನಾನು ಬೆಳ್ಳಾರೆಯಲ್ಲಿದ್ದ ನಾಲ್ಕು ವರ್ಷಗಳಲ್ಲಿ ಒಂದು ದಿನವೂ ಅಂಥ ಸದ್ದು ನನಗೆ ಕೇಳಲಿಲ್ಲ .ಆದರೆ “ಅವರೆಲ್ಲ ಕೇಳುತ್ತದೆ ಎನ್ನುವ ಆ ಸದ್ದು ಏನು ಇರಬಹುದು  ?”ಎಂದು ಮಹಾ ಸತಿ ಕುರಿತಾದ ಅಧ್ಯಯನದಿಂದ ತಿಳಿದು ಬಂತು .
ಮಹಾ ಸತಿಗೂ ಸಂಕೋಲೆ ಎಳೆಯುವ ಸದ್ದಿಗೂ ಏನು ಸಂಬಂಧ ?!ಆರಂಭದಲ್ಲಿ ನನಗೂ ತಿಳಿಯಲಿಲ್ಲ .ಮಹಾ ಸತಿ ಪದ್ದತಿ ಯನ್ನು ಹೇಗೆ ಆಚರಿಸುತ್ತಾರೆ? ಎಂದು ತಿಳಿದಾಗ ಇಲ್ಲಿ ಸಂಕೋಲೆ ಎಳೆಯುವ ಸದ್ದು ಏಕೆ ಕೇಳಿಸುತ್ತಿದೆ?ನನಗೆ  ಎಂದು ಅರಿವಾಯಿತು
 ದಾರುಣ ದೃಶ್ಯದ ನೆನಪು
ಸತಿ ಹೋಗುವದು ಒಂದು ಭಯಾನಕ  ದಾರುಣ ಘಟನೆ.ಅದೊಂದು  ಕ್ರೌರ್ಯದ ಪರಮಾವಧಿ !ಅಂಥ ಒಂದು  ದಾರುಣ ದೃಶ್ಯವನ್ನು ನೋಡಿದವರಿಗೆ ಮತ್ತೆ ಮತ್ತೆ ನೆನಪಾಗಿ ಆ ಸದ್ದು ಕೇಳಿದಂತೆ ಅನಿಸಿ ಬೆಚ್ಚಿ ಬೀಳುತ್ತಿರಬಹುದು !ನಂತರ ಅಂಥಹ ಒಂದು ನಂಬಿಕೆ ಬೆಳೆದಿರ ಬಹುದು !
 ಮಹಾ ಸತಿಯಾಗುವವರು ಎಲ್ಲರೂ ಸ್ವ ಇಚ್ಚೆಯಿಂದ ಚಿತೆಗೆ ಹಾರಿ ಸಾಯುತ್ತಿರಲಿಲ್ಲ !ಅವರನ್ನು ಬಲವಂತವಾಗಿ ಗಂಡನ ಮೃತ ದೇಹಕ್ಕೆ ಸಂಕೋಲೆಯಲ್ಲಿ ಬಂಧಿಸಿ ಚಿತೆಯಲ್ಲಿ ಉರಿಸಲಾಗುತ್ತಿತ್ತು !
ಒಂದೊಮ್ಮೆ ಸ್ವ ಇಚ್ಚೆಯಿಂದ ಸತಿಯಾಗುವ ನಿರ್ಧಾರಕ್ಕೆ ಬಂದಿದ್ದರೂ ಚಿತೆಯ ಬೆಂಕಿ  ದೇಹಕ್ಕೆ ಬಿದ್ದಾಗ, ಉರಿ ತಡೆಯಲಾರದೆ ಚಿತೆಯಿಂದ ಎದ್ದು ಓಡಿ ಬರುತ್ತಿದ್ದರು! ಆಗ ಸುತ್ತ ಮುತ್ತ ದೊಡ್ಡ ಬಡಿಗೆಯನ್ನು  ಹಿಡಿದು ನಿಂತ ಜನ ಅವಳು ಎದ್ದು ಬರದಂತೆ ಅವಳನ್ನು ಬಡಿಗೆಯಿಂದ ಒಳ ತಳ್ಳುತ್ತಿದ್ದರು !
ಬೆಂಕಿ ಹಿಡಿದು ಸಾಯುವುದು  ಎಂದರೆ ಅದು ಅತ್ಯಂತ ದಾರುಣ !ಮೇಲ್ಮೈ ಎಲ್ಲ ಸುಟ್ಟ ನಂತರ ಒಳಭಾಗ ಸುಟ್ಟು ಮರಣ ಸಂಭವಿಸಲು ತುಂಬಾ ಹೊತ್ತು ಬೇಕು !ಅಷ್ಟು ಸಮಯದ ಅವಳ ನೋವು ಉರಿ ಚೀರಾಟ ಹೇಗಿರಬಹುದು !ಅಬ್ಬಾ ! ನೆನೆಸಿದರೆ ದಿಗಿಲಾಗುತ್ತದೆ !
ಇಂಥಹ ಸಂದರ್ಭಗಳಲ್ಲಿ ಉರಿ ನೋವು ತಡೆಯಲಾರದಾಗ ಎಷ್ಟೇ ಒಳ ನೂಕುವವರಿದ್ದರೂ ,ಎಷ್ಟೇ ಗಟ್ಟಿಯಾಗಿ ಸಂಕೋಲೆಯಿಂದ ಬಂಧಿಸಿದ್ದರೂ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡಿ ಬರುವ ಸಾಧ್ಯತೆಗಳು ಇರುತ್ತವೆ !ಬೆಂಕಿಯ ಕೆಂಡ ಉಗುಳುವ ಸಂಕೋಲೆಯನ್ನೊಳಗೊಂಡಿರುವ ಅವಳನ್ನು ಬೆಂಕಿ ತಗಲುವ ಭಯಕ್ಕೆ ಹಿಡಿಯಲು ಅಸಾಧ್ಯವಾಗಿರುವ ಸಾಧ್ಯತೆಗಳಿವೆ !
ಬಹುಶ ಬೆಳ್ಳಾರೆಯಲ್ಲಿ ಮಹಾ ಸತಿಯಾದ  ಆ ಹೆಣ್ಣು  ಮಗಳು ಉರಿ ತಾಳಲಾಗದಾಗ ಚಿತೆಯಿಂದ ಹೇಗೋ ಸಂಕೋಲೆ ಸಮೇತ ತಪ್ಪಿಸಿಕೊಂಡು ಓಡಿ ಬಂದಿರಬೇಕು
ಅಂದು ನಡೆದ ಮಹಾ ಸತಿಯನ್ನು ನೋಡಿದ ಮಂದಿಯ ಹೃದಯದಲ್ಲಿ ಅವಳು ಬೆಂಕಿಯುಗುಳಿಕೊಂಡು,ಸಂಕೋಲೆ ಸಮೇತ ಓಡಿ ಬಂದ ದೃಶ್ಯ ಅಚ್ಚೊತ್ತಾಗಿ ಕುಳಿತಿದ್ದು ಅವರಿಗೆ ಮತ್ತೆ ಮತ್ತೆ ಆ ದೃಶ್ಯ ಕಣ್ಣಿಗೆ ಕಂಡಂತೆ ಆಗಿರ ಬಹುದು!! .
ಅದುವೇ ಮುಂದೆ ಬೆಳ್ಳಾರೆಯಲ್ಲಿ ಅಮವಾಸ್ಯೆಯಂದು ಬೆಳ್ಳಾರೆ ಮೇಗಿನ ಪೇಟೆಯ ಬಳಿಯಿರುವ  ಮಾಸ್ತಿ ಕಟ್ಟೆಯಿಂದ ಕೆಳಗಿನ ಪೇಟೆ ತನಕ ರಾತ್ರಿ ಸಂಕೋಲೆ ಎಳೆದು ಕೊಂಡು ಹೋಗುವ  ಸದ್ದು ಕೇಳುತ್ತದೆ ಎಂಬ ನಂಬಿಕೆ ಹರಡಲು ಕಾರಣವಾಗಿರಬಹುದು.
ಬೆಳ್ಳಾರೆ ಮಾಸ್ತಿ ಕಟ್ಟೆಯ ಸಮೀಪದಲ್ಲಿ ತಡಗಜೆ ಎಂಬ ಪ್ರದೇಶವಿದ್ದು ಅಲ್ಲಿ ಯಾರೋ ಅಡಗಿ ಕುಳಿತುಕೊಂಡಿದ್ದ ಬಗ್ಗೆ ಐತಿಹ್ಯವಿದೆ ,ತಡಗಜೆ ಎಂದರೆ ಅಡಗಿ ಕುಳಿತ ಜಾಗ ಎಂದರ್ಥ.ಬಹುಶ ಈ ದುರ್ದೈವಿ ಹೆಣ್ಣು ಮಗಳೇ ಸತಿ ಹೋಗಲು ಹೆದರಿ ಅಡಗಿ ಕುಳಿತ ಜಾಗ ಇದು ಇರಬಹುದು.
ಈ ಬಗ್ಗೆ ತಿಳಿದ ನನ್ನ ಮನದಲ್ಲಿ  “ಆ ಹೆಣ್ಣು ಮಗಳು ಸಾವಿಗೆ ಮೊದಲು ಅವಳು ಅನುಭವಿಸಿದ  ನೋವು ,ಉರಿ ,ನೀರಿಗಾಗಿ ಅಂಗಲಾಚಿದ್ದು ,ಸಂಕೋಲೆಯಿಂದಹಾರುತ್ತಿರುವ ಬೆಂಕಿಯ ಕಿಡಿ ,ಬೆಂಕಿ ಹತ್ತಿ ಅವಳೇ ಒಂದು ಬೆಂಕಿಯ ರಾಶಿಯಾಗಿದ್ದಿರಬಹುದಾದ ಬಗ್ಗೆ ಒಂದು ಭಯಾನಕ ದಾರುಣ ಸ್ಥಿತಿಯ ಚಿತ್ರಣ ಮೂಡಿತ್ತು !!
ಅದರ ಫಲವೇ ನನಗೆ ಮತ್ತೆ ಮತ್ತೆ ಈ ಕನಸು ಕಾಡುತ್ತಿರುತ್ತದೆ .ಕಂಡ ಕನಸೇ ಇಷ್ಟು ದಾರುಣವಾದರೆ ನಿಜ ಸಂಗತಿ ಇನ್ನೆಷ್ಟು ದಾರುಣವಿದ್ದಿರಲಾರದು!ಅಲ್ಲವೇ ?
ಮಹಾ ಸತಿಗಳ ಬಗ್ಗೆ ಅತಿ ರಂಜಕವಾದ ಮೈನವಿರೇಳಿಸುವ ಕಥಾನಕಗಳು  ಪ್ರಚಲಿತವಿವೆ .,ಆದರೆ ವಾಸ್ತವ ಹಾಗಿಲ್ಲ .ಅದೊಂದು ಅಮಾನುಷ ದಾರುಣ ವಿಚಾರ .ಜೀವಂತ ಹೆಣ್ಣು ಮಗಳೊಬ್ಬಳು ಬೆಂಕಿಯಲ್ಲಿ ಬೆಂದು ಹೋಗುವುದು ಎಂದರೆ ಊಹಿಸಲು ಅಸಾಧ್ಯವಾಗುತ್ತದೆ .ಅಡಿಗೆ ಮಾಡುವಾಗ ಒಗ್ಗರಣೆಯ ಸಾಸಿವೆ ಕಾಳೊಂದುದು ಸಿಡಿದರೆ ಎಷ್ಟು ಉರಿಯಾಗುತ್ತದೆ !ಅದುವೇ ಅಸಹನೀಯ ಎನಿಸುತ್ತದೆ ಹಾಗಿರುವಾಗ ಮೈ ಕೈ ಕಣ್ಣು ಗಳು ಬೆಂದು ಮುದ್ದೆಯಾಗುವ ಪರಿ ಹೇಗಿರಬಹುದು ?ಹೊರಗಿನಿಂದ ಬೆಂದು ಒಳ ಭಾಗಕ್ಕೆ ಬೆಂಕಿ ತಲುಪಿದ ನಂತರ ಸಾವು ಬರುತ್ತದೆ .ಇದಕ್ಕೆ ಏನಿಲ್ಲವೆಂದರೂ ಅರ್ಧ ಘಂಟೆ ಬೇಕು !ಅಷ್ಟರ ತನಕ ಉರಿಯನ್ನು ಆ ಹೆಣ್ಣು ಮಗಳು ಹೇಗೆ ಸಹಿಸಬೇಕು ? ಅತ್ತು ಬೊಬ್ಬೆ ಹೊಡೆದು ಉರಿಯಿಂದ ತಪ್ಪಿಸಿಕೊಳ್ಳಲು ಎಷ್ಟು  ಹೆಣಗಾಡಿರ ಬಹುದು?!ಉಹಿಸಲೂ ಅಸಾಧ್ಯ!
ಹೆಣ್ಣನ್ನು ಮೊದಲಿನಿಂದಲೂ ಭೋಗದ ವಸ್ತುವಿನಂತೆ ಕಾಣುವ ಪ್ರವೃತ್ತಿ ಬೆಳೆದು ಬಂದಿತ್ತು .ಆದ್ದರಿಂದಲೇ ಗೆದ್ದ ಅರಸನ ಕಡೆಯವರು ಧನ ಕನಕಗಳನ್ನು ಹೊತ್ತೊಯ್ಯುವಾಗ.ಯುದ್ಧಗಳಲ್ಲಿ ಮಡಿದ ಅರಸ ಅಥವಾ ಸೈನಿಕರ ಪತ್ನಿಯರನ್ನು ಬಲತ್ಕಾರವಾಗಿ ಎತ್ತಿ ಕೊಂಡು ಹೋಗುತ್ತಿದ್ದರು .ಇದರಿಂದ ಪಾರಾಗುವ ಸಲುವಾಗಿ ಸ್ವ ಇಚ್ಚೆಯಿಂದ ಸತಿ ಪದ್ಧತಿ ಆರಂಭವಾಯಿತು .ನಂತರದ ದಿನಗಳಲ್ಲಿ ಅದು ಪದ್ಧತಿಯಾಗಿ ಸಂಪ್ರದಾಯ ಸಂಸ್ಕೃತಿಯ ಹೆಸರಿನಲ್ಲಿ ಎಲ್ಲೆಡೆಗೆ ವ್ಯಾಪಿಸಿತು .
ಜೌಹರ್
.ಅಲ್ಲಾವುದ್ದೀನ್ ಖಿಲ್ಜಿ ಯ ಕೈಯಿಂದ ಪಾರಾಗುವ ಸಲುವಾಗಿ ರಾಣಿ ಪದ್ಮಿನಿ ಹಾಗೂ ನೂರಾರು ರಾಣಿ ವಾಸದ ಸಾವಿರಾರು ಸ್ತ್ರೀಯರು ದೊಡ್ಡ ಬೆಂಕಿಯ ರಾಶಿ ಮಾಡಿ ಅದಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡ ಬಗ್ಗೆ ಇತಿಹಾಸವು ಹೇಳುತ್ತದೆ.ಅದನ್ನು ಜೌಹರ್ (ಜೀವ ಹರ )ಎಂದು ಕರೆದಿದ್ದಾರೆ.ಇದರ ನಂತರವೂ ಕೆಲವು ಭಾರಿ ಈ ರೀತಿ ಸಾಮೂಹಿಕವಾಗಿ ನೂರಾರು ಸ್ತ್ರೀಯರು ಆತ್ಮಾಹುತಿ ಮಾಡಿಕೊಂಡಿದ್ದಾರೆ .
ಮಹಾಸತಿ ವಿಗ್ರಹಗಳು ಮತ್ತು ಉಲ್ಲೇಖಗಳು
“ಗಂಡನನ್ನು ಕಳೆದುಕೊಂಡ ಸ್ತ್ರೀಯರು ಸತಿ ಹೋಗುವ ಪದ್ಧತಿ ದೇಶದಲ್ಲಿ ಮೊದಲಿಗೆ ರಜ ಪೂತರಲ್ಲಿ ಆರಂಭವಾಗಿದ್ದು ನಂತರ ದೇಶದ ಎಲ್ಲೆಡೆ ಹರಡಿತು “ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ . ನೇಪಾಳದಲ್ಲಿಯೂ ಇದು ಪ್ರಚಲಿತವಿತ್ತು .ಮಹಾಸತಿ ಹೆಸರಿನಲ್ಲಿ ಕರ್ನಾಟಕದಲ್ಲಿಯೂ  ಅನೇಕ ಸ್ತ್ರೀಯರು ಸುಟ್ಟು ಕರಕಲಾದ ಬಗ್ಗೆ ಅಲ್ಲಲ್ಲಿ ಸಿಗುವ ಮಹಾ ಸತಿ ಕಟ್ಟೆಗಳು,ಸತಿ ವಿಗ್ರಹಗಳು ಸಾರಿ ಹೇಳುತ್ತವೆ.ಬೆಂಕಿಯ ಜ್ವಾಲೆಯ ನಡುವಿನ ಮಾಸ್ತಿ  ,ಒಂದು ಕೈ ಎತ್ತಿದ ಮಾಸ್ತಿ  ,ಕೈಯಲ್ಲಿ ನಿಂಬೆ ಹಣ್ಣು ಅಥವಾ ಮಾದಳದ ಹಣ್ಣು ಹಿಡಿದಿರುವ ಮಾಸ್ತಿ . ಒಂದು ಎತ್ತಿದ ಕೈ ಮಾತ್ರ ಇರುವ ಮಾಸ್ತಿ ವಿಗ್ರಹ, ಗುಂಡುಕಲ್ಲಿನ ಆಕಾರದ ಮಾಸ್ತಿ ವಿಗ್ರಹಗಳು ಗಳು ನಾಡಿನಾದ್ಯಂತ ಅಲ್ಲಲ್ಲಿ ಸಿಕ್ಕಿವೆ . ದೇಕಬ್ಬೆಯ ಶಾಸನದಲ್ಲಿ ಸತಿ ಹೋದ ದೇಕಬ್ಬೆಯ ಸಾಹಸ, ಪತಿ ಭಕ್ತಿ ಬಗ್ಗೆ ವಿಸ್ತೃತ ವರ್ಣನೆಯಿದೆ .ಆದರೆ ಎಲ್ಲೂ ಅವಳು ಚಿತೆಯೇರಿದಾಗ ಅನುಭವಿಸಿದ ಉರಿ ಯಾತನೆಯ ವರ್ಣನೆಯಿಲ್ಲ!
ಕ್ರಿ ಶ.510ರಲ್ಲಿ ಗೋಪ ರಾಜನೆಂಬ ಸೇನಾಪತಿಯು ಹೂಣರ ವಿರುದ್ಧ ಹೋರಾಡಿ ಸತ್ತಾಗ ಆತನ ಮಡದಿ ಆತನ ದೇಹದಿಂದಿಗೆ ಚಿತೆಯೇರಿ ಸಹಗಮನ ಮಾಡಿದ ಬಗ್ಗೆ ಒಂದು ವೀರಗಲ್ಲು ಶಾಸನದಲ್ಲಿ ದಾಖಲೆ ಇದೆ .ಕರ್ನಾಟಕದಲ್ಲಿ ಕದಂಬ ರಾಜ ರವಿವರ್ಮನ ಮಡದಿ ಸತಿ ಹೋದ ಬಗ್ಗೆ ಸಂಸ್ಕೃತ ಶಾಸನದಲ್ಲಿ ಉಲ್ಲೇಖವಿದೆ.
ಇದಕ್ಕೂ 4೦೦ ವರ್ಷಗಳ ಹಿಂದೆಯೇ ಮಹಾ ಸತಿ ಪದ್ದತಿ ಬಳಕೆಯಲ್ಲಿದ್ದ ಬಗ್ಗೆ ಆಧಾರಗಳು ಸಿಗುತ್ತವೆ  . ಈ ಒಂದೂವರೆ ಎರಡು ಸಾವಿರ ವರ್ಷಗಳಲ್ಲಿ ಗಂಡನ ಚಿತೆಯೊಂದಿಗೆ ಬೆಂದು ಹೋದ ಮಹಿಳೆಯರೆಷ್ಟೋ ?ಲೆಕ್ಕವಿಟ್ಟವರಾರು ? ನೂರೆಂಬತ್ತೈದು ವರ್ಷಗಳ ಹಿಂದೆ ಸತಿ ಪದ್ದತಿಗೆ ನಿಷೇಧ ಜಾರಿಯಾದ ಕಾಲದಲ್ಲಿ ವರ್ಷಕ್ಕೆ 500-600 ಸತಿ ಪ್ರಕರಣಗಳು ದಾಖಲಾಗುತ್ತಿದ್ದವು .ದಾಖಲಾಗದವುಗಳು ಇದಕ್ಕಿಂತ ನಾಲ್ಕು ಐದು ಪಟ್ಟು ಹೆಚ್ಚು  ಇದ್ದಿರಬಹುದು .
ಸತಿ ಹೋಗುವುದಕ್ಕೆ ಬೇರೆ ಬೇರೆ ವಿಧಗಳು ಇದ್ದವು.ಗಂಗಾ ಕಣಿವೆಯಲ್ಲಿ ಮೊದಲೇ ಉರಿಯುವ ಚಿತೆಗೆ ಹಾರುತ್ತಿದ್ದರು ಅಥವಾ ಅಲ್ಲಿಗೆ ದೂಡಿ ಹಾಕುತ್ತಿದ್ದರು .ದಕ್ಷಿಣ ಭಾರತದ ಕೆಲವೆಡೆ ಹುಲ್ಲಿನ ಗೂಡಲ್ಲಿ ಅವಳನ್ನು  ಕೂರಿಸಿ ಕೈಯಲ್ಲಿ ಒಂದು ಹಣತೆಯನ್ನು ಕೊಡುತ್ತಿದ್ದರು .ಹುಲ್ಲಿಗೆ ಬೆಂಕಿ ಹಿಡಿಸಿಕೊಂಡು ಅವಳು ಸಜೀವ ದಹನವಾಗುತ್ತಿದ್ದಳು .ನೇಪಾಳದಲ್ಲಿ ಶವದ ಜೊತೆ ಅವಳನ್ನು ಕೂಡಿಸಿ ಉರಿಯುವ ವಸ್ತುಗಳನ್ನು ಅವಳ ತಲೆಯ ಬಳಿ ಇಟ್ಟು ಬೆಂಕಿ ಕೊಡುತ್ತಿದ್ದರು.ನಂತರ ಹಸಿ ಮರದ ಕಂಬದಿಂದ ಎರಡೂ ದೇಹಗಳನ್ನು ಸಂಬಂಧಿಕರು ಒಟ್ಟಿ ಹಿಡಿಯುತ್ತಿದ್ದರು .ಎಲ್ಲ ಕಡೆಯೂ ಅವಳು ಬೆಂಕಿಯ ಉರಿ ತಾಳಲಾರದೆ ಓಡಿ ಬರದಂತೆ ಅವಳನ್ನು ಹಸಿ ಮರದ ದಪ್ಪದ ಬಡಿಗೆಗಳಿಂದ ಸುತ್ತ ನಿಂತ ಜನರು ಒಳಗೆ ತಳ್ಳುತ್ತಿದ್ದರು .
ಸತಿ ಪದ್ದತಿ ನಿಷೇಧ 1829
ಅಂತೂ ಅದೃಷ್ಟವಶಾತ್ ರಾಜಾರಾಮ ಮೋಹನ ರಾಯರ ನಿರಂತರ ಹೋರಾಟದಿಂದ ಸತಿ ಸಹಗಮ ಪದ್ಧತಿಗೆ ನಿಷೇಧ ಬಂತು . ಇಂಥ ಕ್ರೌರ್ಯವನ್ನು ಕಾನೂನಿನ ಮೂಲಕ ಕೊನೆ ಗೊಳಿಸಲು ಹೋರಾಡಿದ ರಾಜಾರಾಮ ಮೋಹನ ರಾಯ್ ಅವರು ನಿಜಕ್ಕೂ ಪ್ರಾತಃ ಸ್ಮರಣೀಯರು .ಅವರ ಹೋರಾಟದ ಫಲವಾಗಿ  ನೂರ ಎಂಬತ್ತೈದು ವರ್ಷಗಳ ಹಿಂದೆ 1829 ರ ಡಿಸೆಂಬರ್ 4 ರಂದು ಬಂಗಾಳದಲ್ಲಿ ಮೊದಲಿಗೆ ಸತಿ ಪದ್ಧತಿ ನಿಷೇಧ ಜಾರಿಗೆ ಬಂತು. ವಿಲಿಯಂ ಬೆನ್ಟೆಕ್ ಈ ಸಮಯದಲ್ಲಿ ಬಂಗಾಳದ ದ ಬ್ರಿಟೀಷ್  ಗವರ್ನರ್ ಜನರಲ್ ಆಗಿದ್ದರು . 1830ರಲ್ಲಿ ಮದ್ರಾಸ್‌ ಹಾಗೂ ಬಾಂಬೆ ಪ್ರೆಸಿಡೆನ್ಸಿಗೂ ಈ ನಿಷೇಧ ವಿಸ್ತರಿಸಲಾಯಿತು.
.ಸತಿ ಪದ್ಧತಿ ನಿಷೇಧ ಕಾನೂನು ಜಾರಿಗೆ ಬಂದ ನಂತರವೂ  ಕಾನೂನಿನ ಕಣ್ಣು ತಪ್ಪಿಸಿ ಬಲವಂತವಾಗಿ,  ಪತಿಯನ್ನು ಕಳೆದು ಕೊಂಡ ಅನೇಕ ದುರ್ದೈವಿಗಳನ್ನು ಸತಿ ಹೆಸರಿನಲ್ಲಿ ಬೆಂಕಿಯಲ್ಲಿ ಸುಟ್ಟು ಕೊಂದಿದ್ದಾರೆ .
ರೂಪ್‌ ಕನ್ವರ್‌ ಪ್ರಕರಣ
1987ರ ಸೆಪ್ಟೆಂಬರ್‌ 4ರಂದು ರೂಪಾ ಕನ್ವರ್ ಎಂಬ 18 ವರ್ಷದ ರಜಪೂತ ಯುವತಿಯನ್ನು ರಾಜಸ್ತಾನದ ಸಿಕರ್‌ ಜಿಲ್ಲೆಯ ದೇವ್ರಾಲಾ ಗ್ರಾಮದಲ್ಲಿ ಬಲವಂತವಾಗಿ ಸುಟ್ಟು ಸತಿ ಮಾಡಲಾಯಿತು.
ಸತಿ ತಡೆ ಕಾಯ್ದೆ 1988
1988 ರಲ್ಲಿ ನಮ್ಮ ಸರ್ಕಾರ ಸತಿ ತಡೆ ಕಾಯ್ದೆ(Sati prevention Act 1988)ಯನ್ನು ಜಾರಿಗೆ ತಂದಿತು .ಇದಾದ ನಂತರವೂ ಕಾನೂನಿನ ಕಣ್ಣಿಗೆ ಕಾಣದಂತೆ ಅನೇಕ ಸತಿ ಪ್ರಕರಣಗಳು ನಡೆದಿವೆ.2002 ರಲ್ಲಿ ಪಾಟ್ನಾಕ್ಕೆ ಹೋಗಿದ್ದಾಗ ಅಲ್ಲೊಂದು ಸತಿ ದಹನ ನಡೆದ ಬಗ್ಗೆ ಬಿ.ಎಂ ರೋಹಿಣಿ (ತುಳುನಾಡಿನ ಮಾಸ್ತಿಗಲ್ಲು –ವೀರಗಲ್ಲುಗಳು ಕೃತಿಯ ಲೇಖಕಿ )ಅವರು ತಿಳಿಸಿದ್ದಾರೆ .2008 ರಲ್ಲಿಯೂ ಒಂದು ಪ್ರಕರಣ ಬೆಳಕಿಗೆ ಬಂದಿತ್ತು.ಇದೀಗ ಮೊನ್ನೆ 13 ಡಿಸೆಂಬರ್ 2014 ರ ಶನಿವಾರ ಬಿಹಾರದಲ್ಲಿ ಒಂದು ಪ್ರಕರಣ ವರದಿಯಾಗಿದೆ.
ಇನ್ನೂ ಕೂಡ ಸತಿ ಎಂಬ ಕ್ರೂರ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.ಸತಿಯ ವೈಭವೀಕರಣ ,ವಿಧವಾ ಸ್ತ್ರೀಯರನ್ನು ಅಪಶಕುನವೆಂದು ಕಾಣುವ ಸಮಾಜ ಸ್ವ ಇಚ್ಚೆಯಿಂದ ಸತಿ ಹೋಗಲು ಕಾರಣವಾದರೆ ,ಸಂಸ್ಕೃತಿ –ಸಂಪ್ರದಾಯ,ಮೂಢನಂಬಿಕೆಗಳು ಬಲವಂತದ ಸತಿ ದಹನಕ್ಕೆ ಕಾರಣವಾಗಿದೆ .ಒಂದೆಡೆ ಅತ್ಯಾಚಾರ ,ಲೈಂಗಿಕ ಕಿರುಕುಳ .ಲಿಂಗ ತಾರತಮ್ಯ ,ಇನ್ನೊಂದೆಡೆ ಆಸಿಡ್ ದಾಳಿ ಜೊತೆಗೆ ಸತಿ ಪದ್ಧತಿಯ ಉಳಿಕೆ ,185 ವರ್ಷಗಳ ಹಿಂದೆಯೇ ನಿಷೇಧ ಗೊಂಡ ಸತ್ ಎಂಬ ಅನಿಷ್ಟ ಪದ್ದತಿಯೇ ಇನ್ನೂ ಜೀವಂತವಾಗಿದೆ ಇನ್ನು ಉಳಿದ ವಿಚಾರಗಳ ಬಗ್ಗೆ ಹೇಳಲೇನಿದೆ ?! ಸತಿ ಹೋದ ಸ್ತ್ರೀಗೆ ಮುಕ್ತಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ,ಆದರೆ ಸ್ತ್ರೀಯರಿಗಂತೂ ಈ ಅನಿಷ್ಟಗಳಿಂದ ಇನ್ನೂ ಮುಕ್ತಿ ದೊರೆತಿಲ್ಲ. ಒಟ್ಟಿನಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೇ|ರಮಂತೇ ತತ್ರ ದೇವತಾಃ ||(ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತೋಷದಿಂದ ನೆಲೆಸುತ್ತಾರೆ )ಎಂದು ಸಾರುವ ನಮ್ಮ ಸಮಾಜದಲ್ಲಿ ಸ್ತ್ರೀಯರು  ನೆಮ್ಮದಿಯಿಂದ ಇಂದೂ ಇರಲು ಸಾಧ್ಯವಾಗಿಲ್ಲ.
ಈ ಅನಿಷ್ಟಗಳ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಉಂಟು ಮಾಡ ಬೇಕಾಗಿದೆ .
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿಪೂರ್ವ ಕಾಲೇಜ್
ಬೆಳ್ಳಾರೆ .ಸುಳ್ಯ ,ದ .ಕ ಜಿಲ್ಲೆ

Sunday, 21 December 2014

ನಾನು ಅನಿಕೇತನೆ ?!ನಾನಾರು ?
ಹೌದು ಇದೊಂದು ಪ್ರಶ್ನೆ ನನ್ನಲ್ಲಿ ಯಾವಾಗಲೂ ಕಾಡುತ್ತದೆ ಅನೇಕರು ಕೇಳುತ್ತಾರೆ ಕೂಡ !
ಹುಟ್ಟಿದ್ದು ಬೆಳೆದದ್ದು ಕಾಸರಗೋಡಿನಪುಟ್ಟ ಗ್ರಾಮ ಕೋಳ್ಯೂರಿನಲ್ಲಿ .ಮದುವೆಯಾಗುವ ತನಕ ನನಗೆ ನಾನೆಲ್ಲಿಯವಳು ಎಂಬ ಸಮಸ್ಯೆ ಇರಲಿಲ್ಲ .ನಾನು ಗಡಿನಾಡ ಕನ್ನಡತಿ ಯಾಗಿದ್ದೆ .
ಎರಡನೇ ವರ್ಷ ಪದವಿ ಓದುತ್ತಿದ್ದಂತೆ ಪ್ರಸಾದ್ ಜೊತೆ ಮದುವೆಯಾಯಿತು .ಪ್ರಸಾದ್ ಕೆಲಸ ಮಾಡುತ್ತಿದ್ದದು ಬೆಂಗಳೂರಿನಲ್ಲಿ .ಅವರ ತಂದೆ ತಾಯಿ ಇದ್ದದ್ದು ವಿಟ್ಲ ಸಮೀಪದ ಕೋಡಪದವಿನಲ್ಲಿ .ವಿವಾಹನಂತರ ನಾನು ಓದಿದ್ದೆ ದೊಡ್ಡ ಅಕ್ಷಮ್ಯ ಅಪರಾಧವಾಯಿತು ಮನೆ ಮಂದಿ ಹಾಗೂ ಊರವರಿಗೆ.
ಬಂಧು ಬಳಗದ ಹಾಗೂ ಊರಿನ ಹಲವು ಮಂದಿ ಓದಿ ಸರ್ಕಾರಿ ಉದ್ಯೋಗದಲ್ಲಿದ್ದವರಿರು ಒಬ್ಬಾತ ವಿಟ್ಲದಲ್ಲಿ ಡಾಕ್ಟರ ಕೂಡ .ಒಬ್ಬರು ಓದಲು ಪ್ರೋತ್ಸಾಹಿಸಬೇಕಾಗಿದ್ದ  ಶಿಕ್ಷಕರೂ ಇದ್ದರು !.ಓದಿನ ಮಹತ್ವ ಅರಿಯದವರೇನೂ ಆಗಿರಲಿಲ್ಲ ,ಆದರೆ ನಾನು ಓದಿ ಮೇಲೆ ಬರುವುದು ಇವರುಗಳಿಗೆ ಬೇಕಾಗಿರಲಿಲ್ಲ ,ಹೊಟ್ಟೆ ಕಿಚ್ಚಿನಿಂದ ಮನೆ ಮಂದಿಯವರನ್ನು ಉದ್ದಾರ ಮಾದುವವರಂತೆ ಅಭಿನಯಿಸಿ ಕಿಚ್ಚು ಹತ್ತಿಸಿ ಗಾಳಿ ಹಾಕಿದರು .ಹಾಗಾಗಿ ನನ್ನನ್ನು ಎಂದೂ ಈ ಊರಿನವರು ತಮ್ಮವರೆಂದು ಭಾವಿಸಿಲ್ಲ

ನಾನು ಮಾತ್ರ ನನ್ನ ತಂದೆ ತಾಯಿ ಸಹೋದರರ ಮತ್ತು ಪ್ರಸಾದ್ ಬೆಂಬಲದಿಂದ ಓದಿದೆ .

ನಂತರದ ಕೆಲಕಾಲ ಎಕ್ಕಾರಿನಲ್ಲಿ ,ಕೆಲವು ವರ್ಷ ಮಂಗಳೂರಿನಲ್ಲಿದ್ದೆವು.ಮತ್ತೆ ಉದ್ಯೋಗದ ಕಾರಣಕ್ಕೆ ಬೆಂಗಳೂರಿಗೆ ಬಂದೆವು .ದೇವರ ದಯೆ ಅಪಾರ .ಹಾಗಾಗಿ ಅಲ್ಲಿಯೂ ದೇವರು ನಮಗೆ ಅಂಗೈ ಅಗಲದಷ್ಟು ಜಾಗವನ್ನು ನಮಗಾಗಿ ತೆಗೆದು ಇಟ್ಟಿದ್ದ ,ಹಾಗಾಗಿ ಇಲ್ಲಿ ಚಿಕ್ಕದೊಂದು ಸ್ವಂತ ಮನೆ ಮಾಡಿ ತಲೆ ಮೇಲೆ ಸೂರನ್ನು ಕಟ್ಟಿಕೊಂಡೆವು.

ಇದರೆಡೆಯಲ್ಲಿ ನನಗೆ ಬೆಳ್ಳಾರೆ ಸರ್ಕಾರೀ ಪದವಿ ಪೂರ್ವ ಕಾಲೇಜ್ ನಲ್ಲಿ ನನ್ನ ಇಷ್ಟದ ಕನ್ನಡ ಉಪನ್ಯಾಸಕಿ  ಕೆಲಸ ಸಿಕ್ಕಿತು.
ಆ ಕಾಲೇಜ್ ನನ್ನದೆಂದೇ ಭಾವಿಸಿ ದುಡಿಯುತ್ತಿದ್ದೇನೆ ಬೆಳ್ಳಾರೆ ಬೀಡು ,ಇತಿಹಾಸದ ವಿಚಾರಗಳ ಬಗ್ಗೆ ಸುತ್ತು ಮುತಲಿನ ದೈವಗಳ ಬಗ್ಗೆ ವಿಶೇಷ ಜಾನಪದ ಕುಣಿತಗಳ ಬಗ್ಗೆ ಅಧ್ಯಯನ ಮಾಡಿ ಅಲ್ಲಿನ ಮಕ್ಕಳಿಗೆ ತಿಳಿಸಿದೆ .ಕ್ಷೇತ್ರ ಕಾರ್ಯಕ್ಕೆ ನನ್ನ ವಿದ್ಯಾರ್ಥಿಗಳನ್ನೂ ಕರೆದೊಯ್ದು ಸಂಶೋಧನೆಯ ದಾರಿಯನ್ನು ಹೇಳಿ ಕೊಟ್ಟೆ .ಗ್ರಾಹಕ ಹಕ್ಕು ಮಾಹಿತಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದೆ ,ಪ್ರತಿ ಶನಿವಾರ ಮಧ್ಯಾಹ್ನ ಮೇಲೆ ನಿಂತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಯತ್ನವನ್ನೂ ಪ್ರಾಮಾಣಿಕವಾಗಿ ಮಾಡಿದೆ

ಎರಡು ಮೂರು ವರ್ಷ ಮೊದಲು ಬೆಳ್ಳಾರೆಯ ನಮ್ಮ ಕಾಲೇಜ್ ಸಭಾಂಗಣದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ವತಿಯಿಂದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ "ತುಳು ಮಿನದನ"ನಡೆಯಿತು ,ಆಗ ನಮ್ಮ ಕಾಲೇಜ್ ನ ಪ್ರಾಂಶುಪಾಲರು ನಮ್ಮಲ್ಲಿ ಡಾ.ಲಕ್ಷ್ಮೀ ಜಿ prasad ಎಂಬ ಕನ್ನಡ ಉಪನ್ಯಾಸಕಿ ತುಳು ಸಂಸ್ಕೃತಿ ಬಗ್ಗೆ ಪಿಎಚ್ ಡಿ ಮಾಡಿದ್ದು ಆ ಬಗ್ಗೆ ತುಂಬಾ ಕೆಲಸ ಮಾಡಿದ್ದಾರೆ .ಅವರಿಗೆ ಒಂದು ಪ್ರಬಂಧ ಮಂಡನೆಗೆ ಅವಕಶ ಕೊಡಿ ಎಂದು ತುಳು ಅಕಾಡೆಮಿಯಲ್ಲಿ ಕೇಳಿದರು .ನನಗೂ ನನ್ನ ಅಧ್ಯಯನದ ಫಲಿತವನ್ನು ಸುಳ್ಯದ ತುಳು ಆಸಕ್ತ ಮಂದಿಯ ಎದುರು ಬಿತ್ತರಿಸುವ ಆಸಕ್ತಿ ಇತ್ತು ಇದರಿಂದ ಅಧ್ಯಯನಕ್ಕೆ ಹೆಚ್ಚ್ಚಿನ ಬೆಂಬಲ ದೊರಕೀತು ಎಂಬ ಭಾವನೆಯಿಂದ .
ಆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಅಮೃತ ಸೋಮೇಶ್ವರ ಅವರು ವಹಿಸಿದ್ದು ನನ್ನ ಆಸಕ್ತಿಯನ್ನು ಅವರಿಗೆ ತಿಳಿಸಿದೆ ,ಆಗ ಅವರು ಆಗಿನ ತುಳು ಅಕಾಡೆಮಿ ಅಧ್ಯಕ್ಷರಾಗಿದ್ದ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ತಿಳಿಸಿ ನನಗೊಂದು ಅವಕಶ ನೀಡಲು ವಿನಂತಿಸಿದರು .
ಮರು ದಿನ ನನಗೆ ಪಾಲ್ತಾಡಿಯವರಿಂದ ಫೋನ್ ಬಂತು !ನಿಮ್ಮನ್ನು ಕವಿ ಗೋಷ್ಠಿಗೆ ಹಾಕಿದ್ದೇವೆ ಎಂದು !
.ಅಯ್ಯೋ ರಾಮ ದೇವರೇಒಮ್ಮೆಗೆ ಗಾಭರಿಯಾಯಿತು !ಇವರು ಸಮ್ಮೇಳನ ಮಾಡಿದ್ದಾರೆ ನನಗೆ ವೇದಿಕೆಗೆ ಏರುವ ಅವಕ್ಷಕ್ಕಾಗಿ ನಾನು ಕವಿಯಾಗಲು ಸಾಧ್ಯವೇ ?! !ನನಗೆ ಕವಿತೆ ಬರೆಯಲು ಬರುವುದಿಲ್ಲ ,ನನಗೆ ವಿಚಾರ ಮಂಡನೆಗೆ ಅವಕಾಶ ಬೇಕಾಗಿರುವುದು ಎಂದು ತಿಳಿಸಿದೆ !
ಸ್ಥಳೀಯರಿಗೆ ಅವಕಾಶವಿಲ್ಲ ,ಹೆಂಗಸರಿಗೆ ರೇಷ್ಮೆ ಸೀರೆ ಒಟ್ಟು ಮೆರೆಯಲು ವೇದಿಕೆ ಬೇಕಾದ್ದು ಬೇಕಾದರೆ ಕವಿ ಗೋಷ್ಠಿಗೆ ಬನ್ನಿ ಎಂದರು !ಎಂದು ಅವರು ಆಗ ಹೇಳಿದರು!

ಅಬ್ಬ !,ಅವಕಾಶ ನಿರಾಕರಿಸಲು ಬೇರೆ ಯಾವ ಕಾರಣವೂ ಸಿಕ್ಕದೆ ಅವರು ನನ್ನನ್ನು ಸ್ಥಳೀಯ ಳು ಎಂಬ ಕಾರಣ ನೀಡಿ ಅವಕಾಶ ನಿರಾಕರಿಸಿದ್ದರು!ಪ್ರಪಂಚದಲ್ಲಿ ಎಲ್ಲೆಡೆ ಸ್ಥಳೀಯ ರಿಗೆ ಮೊದಲ ಆದ್ಯತೆ ಇರುತ್ತದೆ .ತುಳು ಅಕಾಡೆಮಿ ಯಲ್ಲಿ ಮಾತ್ರ ಇದು ವಿರುದ್ಧ !ಯಾರೂ ಹೇಳುವವರು ಕೇಳುವವರು ಇಲ್ಲವಾದಾಗ ಏನು ಬೇಕಾದರೂ ಮಾಡಬಹುದು !

ಕಳೆದ ವರ್ಷ ನಮ್ಮಶಿಕ್ಷಣ ಇಲಾಖೆ 2009 ರಲ್ಲಿ ಆಯ್ಕೆಯಾದ ಎಲ್ಲ ಉಪನ್ಯಾಸಕರಿಗೂ  ನಿಯೋಜನೆ ಮೇರೆಗೆ ಬಿಎಡ್ ಓದು ವಂತೆ ಆದೇಶ ನೀಡಿತು ,ಅದರಂತೆನನಗೆ ಬೆಂಗಳೂರಿನಕೆಂಗೇರಿಯಎಸ್,ಜೆಬಿಕಾಲೇಜ್ನ ಲ್ಲಿ ಓದಲು ಅವಕಾಶ ನೀಡಿದರು ,ನಾನು ಅಲ್ಲಿ ಓದುತ್ತಾ ಇದ್ದೇನೆ.ನನಗೆ ವೇತನ ಬೆಳ್ಳಾರೆ ಕಾಲೇಜ್ ನಲ್ಲಿಯೇ ಆಗುತ್ತಿದೆ ,ಮುಂದಿನ ತಿಂಗಳು ನನ್ನ ಓದು ಮುಗಿದು ಬೆಳ್ಳಾರೆಗೆ ಹೋಗುವವಳಿದ್ದೇನೆ.

ಕಳೆದ ವರ್ಷಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು ,ಸಾಹಿತ್ಯ ಸಮ್ಮೇಳನ ನಡೆಯುವಾಗ ಬೇರೆ ಬೇರೆ ಕ್ಷೆತ್ರಗಲಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಸತ್ ಸಂಪ್ರದಾಯ ಅಲ್ಲಿದೆ ಹಾಗಾಗಿ ಆಗ  ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಲಕ್ಷ್ಮಿಯವರು ಸಂಶೋಧನಾ ಕ್ಷೇತ್ರದಲ್ಲಿ ತುಂಬಾ ಕೆಲಸ ಮಾಡಿದ್ದಾರೆ 20 ಪುಸ್ತಕ ಬರೆದಿದ್ದಾರೆ ಬೆಳ್ಳಾರೆ ಇತಿಹಾಸಕ್ಕೆ ಕೊಡುಗೆ ನೀಡಿದ್ದಾರೆ ಎರಡು ಡಾಕ್ಟರೇಟ್ ಪಡೆದಿದ್ದಾರೆ (ಆಗ ನನ್ನ ಎರಡನೆಯ ಡಾಕ್ಟರೇಟ್ ಪ್ರಬಂಧ ಸಲ್ಲಿಕೆಯಾಗಿತ್ತು ಇತ್ತೀಚೆಗೆ ಸಿಕ್ಕಿತು ಕೂಡ ) ಹಾಗಾಗಿ ಅವರನ್ನು ಗುರ್ತಿಸುವ ಎಂದು ಹೇಳಿದರು ಆಗ ಚೊಕ್ಕಾಡಿಯ ಕನ್ನಡ ಸಾಹಿತ್ಯ ಸಮ್ಮೇಳನದ ಜವಾಬ್ದಾರಿ ವಹಿಸಿದ ಧುರೀಣರು ಅವರು ಇಲ್ಲಿಯವರಲ್ಲ ಅವರಿಗೇಕೆ ಇಲ್ಲಿ ಪುರಸ್ಕಾರ ಎಂದು ವಿರೋಧಿಸಿದರು!! (ಇದನ್ನು ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರೆ ನನಗೆ ತಿಳಿಸಿದ್ದಾರೆ )
ನಿನ್ನೆ ಬಾಳಿಲದಲ್ಲಿ ಸುಳ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು .ಇಲ್ಲಿ ಕೂಡ ನಾನು ಹೊರಗಿನವಳು ಎಂಬ ಕಾರಣ ನೀಡಿರಬಹುದು !

ಅದಕ್ಕೆ ಈಗ ನನಗೆ ಒಂದು ಸಂಶಯ ಆಗಿದೆ !ನಾನೆಲ್ಲಿಯವಳು ಎಂದು
ಎರಡು ಮೂರೂವರ್ಷ ಮೊದಲು ತುಳು ಸಾಹಿತ್ಯ ಅಕಾಡೆಮಿ ನನ್ನನ್ನು ಸ್ಥಳೀಯಳು ಎಂದು ಹೇಳಿ ನನಗೆ ಅವಕಾಶ ನಿರಾಕರಿಸಿತ್ತು ಈಗ ನಾನು ಹೊರಗಿನವಳು ಎಂದು ಕನ್ನಡ ಸಾಹಿತ್ಯ ಪರಿಷತ್ ಹೇಳುತ್ತಿದೆ !ಯಾವುದು ನಿಜ ?ಯಾವುದು ಸರಿ ?
ಒಂದೇ ವ್ಯಕ್ತಿ ಒಂದೇ ಸ್ಥಳದಲ್ಲಿ ಸ್ಥಳೀಯಳಾಗಿಯೂ ,ಹೊರಗಿನವಳಾಗಿಯೂ ಕಾಣಿಸಿಕೊಳ್ಳಲು ಸಾಧ್ಯವೇ ?ತುಳು ಅಕಾಡೆಮಿಗೆ ನಾನು ಸ್ಥಳೀಯಳು,ಕನ್ನಡ ಸಾಹಿತ್ಯ ಪರಿಷತ್ ಗೆ ಹೊರಗಿನವಳು !ಇದೆಂಥ ವೈಚಿತ್ರ್ಯ!ಇಷ್ಟಕ್ಕೂ ನಾನಿದ್ದುದು ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಹೆಮ್ಮೆಯ ತುಳುನಾಡಿನ ಭಾಗವಾದ ಬೆಳ್ಳಾರೆಯಲ್ಲಿ!ಬಹುಶ ನೋಡಿದವರು  ಹಾಕಿಕೊಂಡ ಕನ್ನಡಕ ಬೇರೆ ಬೇರೆ ಬಣ್ಣದಿಂದ ಕೂಡಿದ ಕಾರಣ ನಾನು ಸ್ಥಳೀಯ ಳಾಗಿಯೂ ಹೊರಗಿನವಳಾಗಿಯೂ ಕಾಣಿಸಿರಬೇಕು !

ಒಟ್ಟಿನಲ್ಲಿ ಕುವೆಂಪು ಅವರ ಓ ನನ್ನ ಚೇತನಾ ಕವಿತೆಯ  ಆಶಯದಂತೆ ನಾನು ಅನಿಕೇತನೆ ಯಾಗಿದ್ದೇನೆ !
ನೀವು ಏನಂತೀರಿ ಈ ಬಗ್ಗೆ ?
ನಾನು ಮುಂದೆ ಆತ್ಮ ಕಥೆ ಬರೆಯಬೇಕಿಂದಿದ್ದೇನೆ,ಹಾಗಿ ನೆನಪಾದ ವಿಷಯಗಳನ್ನು ಆಗಾಗ ಬರೆಯುವ ಯತ್ನ ಮಾಡುತ್ತಿದ್ದೇನೆ ,ಅದರಲ್ಲಿ ಇದೂ ಒಂದು ಭಾಗ !
ಪ್ರಸ್ತುತ ಶಿಕ್ಷಣ ಇಲಾಖೆ ಹಾಗೂ ಇತರ ದಾಖಲೆಗಳಲ್ಲಿ ನಾನು ಬೆಳ್ಳಾರೆಯ ಉಪನ್ಯಾಸಕಿಯಾಗಿಯೇ ಇದ್ದೇನೆ
 ನಾನು ಕೂಡ ಬೆಳ್ಳಾರೆ ನನ್ನ ಊರು ಎಂದೇ ಭಾವಿಸಿ ಯಾರು ಏನೇ ಅವಗಣನೆ ಮಾಡಿದರೂ ಯಾವುದೇ ತರತಮ ಬೇಧವಿಲ್ಲದೆ ಅಹರ್ನಿಶ ದುಡಿಯುತ್ತಿದ್ದೇನೆ.
ಊರು ಉಪಕಾರವರಿಯದು ಹೆಣ ಸಿಂಗಾರ ವರಿಯದು ಎಂಬ ಮಾತು ಇಲ್ಲಂತೂ ಸತ್ಯವಾಗಿದೆ
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ ,ಸುಳ್ಯ ತಾಲೂಕು ,ದ.ಕ ಜಿಲ್ಲೆ
 ನಾನು ಸಂಶೋಧಿಸಿದ ಬೆಳ್ಳಾರೆಯ ಮಾಸ್ತಿ ಕಲ್ಲು ಆನೆಕಟ್ಟುವ ಕಲ್ಲು ಬೀಡಿನ ಕಾವಲುಗಾರನ ಮನೆ,ಇತರ ಪ್ರಾಚ್ಯಾವಷೆಶಗಳು  ಹಾಗೂ ಸುಳ್ಯ ತಾಲೂಕಿನ ವಿಶಿಷ್ಟ ಈತನಕ ಹೆಸರು ಕೂಡ ದಾಖಲಾಗಿಲ್ಲದ ದೈವಗಳು..Wednesday, 10 December 2014

ಲೆಕ್ಕಕ್ಕಿಲ್ಲದ ಯುಜಿಸಿ ನಿಯಮ, ಇಲ್ಲೇಕಿಲ್ಲ ಕ್ರಮ? - ಡಾ.ಲಕ್ಷ್ಮೀ ಜಿ ಪ್ರಸಾದ ಕನ್ನಡ ಪ್ರಭ ,ಮಂಗಳವಾರ 24 ಜೂನ್ 2014

                        

ಲೆಕ್ಕಕ್ಕಿಲ್ಲದ ಯುಜಿಸಿ ನಿಯಮ, ಇಲ್ಲೇಕಿಲ್ಲ ಕ್ರಮ? - ಡಾ.ಲಕ್ಷ್ಮೀ ಜಿ ಪ್ರಸಾದ

ಪ್ರಕಟ:ಕನ್ನಡ ಪ್ರಭ ,ಮಂಗಳವಾರ 24 ಜೂನ್ 2014

http://www.kannadaprabha.com/columns/ಲೆಕ್ಕಕ್ಕಿಲ್ಲದ-ಯುಜಿಸಿ-ನಿಯಮ-ಇಲ್ಲೇಕಿಲ್ಲ-ಕ್ರಮ/223688.html
ಕಳೆದ ಒಂದೆರಡು ವರ್ಷಗಳಿಂದ ವಿಶ್ವವಿದ್ಯಾಲಯಗಳ ಅವ್ಯಹಾರದ ಅಕ್ರಮ ನೇಮಕಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಎಲ್ಲೆಡೆ ನೇಮಕಾತಿ ಪೂರ್ವ ನಿರ್ಧರಿತವಾಗಿದ್ದು ನಾಮ್‌ಕೆವಾಸ್ಥೆ ಸಂದರ್ಶನ ನಾಟಕ ನಡೆಸಿ ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ಕೂಗು ಕೇಳಿ ಬರುತ್ತಾ ಇದೆ.ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕರ ಅರ್ಹತೆಯನ್ನು ಗುರುತಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಒಂದು ಮಾನದಂಡವನ್ನು, ಮಾರ್ಗದರ್ಶಿ ಸೂತ್ರಗಳನ್ನು 2010 ರಲ್ಲಿ ಜಾರಿಗೆ ತಂದಿದೆ.
 
 ವಿಶ್ವ ವಿದ್ಯಾಲಯಗಳಲ್ಲಿ ವಿವಿಧ ಹುದ್ದೆಗಳನ್ನು ತುಂಬುವಾಗ ಅಭ್ಯರ್ಥಿಯ ಆಯ್ಕೆಗೆ ಇದು ಮಾನದಂಡವಾಗಿರುತ್ತದೆ. ಇದನ್ನು ಶೈಕ್ಷಣಿಕ ನಿರ್ವಹಣಾ ಸೂಚ್ಯಂಕ (ಆ್ಛಛಜಜಟ್ಝ್ಛ ಠಜ್ಠಜ್ಟ್ಠಿಟಜಟ್ಛಿಜ ಐಟಿಜ್ಝ್ಛಛಡ್ಟ್ಠಿ) ಆಕಿಐ ಎಂದು ಕರೆದಿದ್ದಾರೆ. ಶೈಕ್ಷಣಿಕ ನಿರ್ವಹಣಾ ಸೂಚ್ಯಂಕಗಳ ಶೇ. 80 ಮತ್ತು ಸಂದರ್ಶನದ ಶೇ. 20 ಅಂಕಗಳನ್ನು ಸೇರಿಸಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಯುಜಿಸಿ ಹೇಳುತ್ತದೆ.
 ಪ್ರಕಟಿತ ಸಂಶೋಧನಾ ಕೃತಿಗಳಿಗೆ ಸಂಶೋಧನಾ ಲೇಖನಗಳಿಗೆ, ಸಂಶೋಧನಾ ಪ್ರಬಂಧ ಮಂಡನೆಗೆ, ಸಂಶೋಧನಾ ಪ್ರಾಜೆಕ್ಟ್‌ಗಳಿಗೆ, ಸಂಶೋಧನಾ ಮಾರ್ಗದರ್ಶನಗಳಿಗೆ, ಆಹ್ವಾನಿತ ಉಪನ್ಯಾಸಗಳಿಗೆ, ಪರೀಕ್ಷಾ ಕಾರ್ಯಗಳಿಗೆ, ಪಾಠ ಪ್ರವಚನಗಳಿಗೆ ಬೇರೆ ಬೇರೆ ಸೂಚ್ಯಂಕಗಳು ಇವೆ. ಕೆಲವಕ್ಕೆ ಅಂಕಗಳ ಮಿತಿ ಎಂದರೆ ಗರಿಷ್ಠ ಅಂಕಗಳು ಇವೆ. ಸಂಶೋಧನಾ ಕೃತಿಗಳು, ಲೇಖನಗಳು, ಸಂಪ್ರಬಂಧ ಮಂಡನೆಗಳು, ಸಂಶೋಧನಾ ಪ್ರಾಜೆಕ್ಟ್‌ಗಳು ಮತ್ತು ಮಾರ್ಗದರ್ಶನಗಳಿಗೆ ಗರಿಷ್ಠ ಮಿತಿ ಇರುವುದಿಲ್ಲ.
 ಆದರೆ ವಿಶ್ವವಿದ್ಯಾಲಯಗಳ ಆಯ್ಕೆ ಸಮಿತಿಗಳಿಗೆ ಈ ಮಾನದಂಡವನ್ನು ದಂಡ(ವ್ಯರ್ಥ) ಮಾಡುವ ಕಲೆ ಕರಗತವಾಗಿರುತ್ತದೆ.ಆದ್ದರಿಂದಲೇ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ.ಯುಜಿಸಿಯ ನಿಯಮಾವಳಿಗಳು, ಮಾರ್ಗದರ್ಶಕ ಸೂತ್ರಗಳಂತೆ ಮೂರು ಮುಖ್ಯವಾದ ವರ್ಗಗಳು ಇವೆ. ಇವುಗಳಿಗನುಗುಣವಾಗಿ ಯುಜಿಸಿಯು ಅಂಕಗಳನ್ನು ನಿಗದಿ ಪಡಿಸಿದೆ. ಪಾಠ ಮತ್ತು ಮೌಲ್ಯ ಮಾಪನಕ್ಕೆ ಸಂಬಂಧಿಸಿದ ದಕ್ಷತೆ- ಈ ವಿಭಾಗಕ್ಕೆ ಗರಿಷ್ಟ ಅಂಕಮಿತಿ 125. 
 ಈ ಅಂಕಗಳನ್ನು ನಾಲ್ಕು  ಉಪ ವಿಭಾಗಗಳಲ್ಲಿ ಹಂಚಿದೆ. ಉಪನ್ಯಾಸ, ಪ್ರಯೋಗ, ಟುಟೋರಿಯಲ್, ಕಾಂಟ್ಯಾಕ್ಟ್ ಕ್ಲಾಸ್‌ಗಳಿಗೆ ಒಟ್ಟಾರೆಯಾಗಿ ಗರಿಷ್ಠ ಅಂಕಗಳು 50. ಯುಜಿಸಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಕ್ಲಾಸ್‌ಗಳನ್ನು ತೆಗೆದುಕೊಂಡಿದ್ದಲ್ಲಿ ಗಂಟೆಗೆ 2 ಅಂಕಗಳಂತೆ ಗರಿಷ್ಠ 10 ಅಂಕಗಳು. ಜ್ಞಾನ ಪ್ರಸಾರ/ ಹಂಚುವಿಕೆ ಮತ್ತು ವಿಧಾನಗಳು (ಂಜಝ್ಟಿಜ್ಟಟ್ಟ್ಜಣ)ಗೆ ಗರಿಷ್ಟ ಅಂಕಗಳು 20. ಪಾಠ ಮಾಡುವ  ವಿಧಾನಗಳು, ಹೊಸ ಮಾದರಿಗಳ ಆವಿಷ್ಕಾರ ಮತ್ತು ಬಳಕೆ, ಮೊದಲಾದವುಗಳಿಗೆ ಒಂದು ಕೋರ್ಸ್‌ಗೆ 5 ಅಂಕಗಳಂತೆ ಗರಿಷ್ಠ 20 ಅಂಕಗಳು.ಪರೀಕ್ಷಾ ಕಾರ್ಯಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ, ಸ್ಕ್ವಾಡ್, ಮೌಲ್ಯ ಮಾಪನ ಇತ್ಯಾದಿಗಳಿಗೆ ಗರಿಷ್ಠ 25 ಅಂಕಗಳು.ನಂತರದಲ್ಲಿ ಸಹಪಠ್ಯ- ಪೂರಕ ಪಠ್ಯ ಚಟುವಟಿಕೆಗಳಿಗೆ ಈ ಮೇಲಿನಂತೆಯೇ ಮೂರು ಉಪ ವಿಭಾಗಗಳಲ್ಲಿ ಅಂಕ ನೀಡಲಾಗುತ್ತದೆ. ಕ್ಷೇತ್ರಕಾರ್ಯ, ಸಾಂಸ್ಕೃತಿಕ ಕಾರ್ಯ, ಕಾಲೇಜು ಪತ್ರಿಕೆ ಹಾಗೂ ಸಭೆಗಳ ನಿರ್ವಹಣೆ, ರೇಡಿಯೋ ಟಾಕ್‌ಗಳು ಹೀಗೆ ಬಹಳಷ್ಟು ಸಂಗತಿಗಳನ್ನು ಉಪವಿಭಾಗವು ಒಳಗೊಂಡಿದೆ. ಇವೆಲ್ಲ ಒಟ್ಟುಗೂಡಿಸಿ ಈ ವಿಭಾಗದಲ್ಲಿ ಗರಿಷ್ಠ 50 ಅಂಕಗಳ ಮಿತಿ ಇದೆ
 .ಈ ಎರಡು ಮುಖ್ಯ ವಿಭಾಗಗಳಲ್ಲಿ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸುವ ಹೆಚ್ಚಿನವರು ಗರಿಷ್ಠ ಅಂಕಗಳನ್ನು ಗಳಿಸಿರುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಸರಕಾರೀ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇರಿ ಸಾಕಷ್ಟು ಅನುಭವ ಗಳಿಸಿದ ಮೇಲಷ್ಟೇ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ ಹೆಚ್ಚಿನವರು. ಉಪನ್ಯಾಸಕರಾದ ಮೇಲೆ ಪರೀಕ್ಷಾ ಕಾರ್ಯಗಳು, ಪಾಠ ಪ್ರವಚನಗಳು, ಸಹಪಠ್ಯ ಕಾರ್ಯಗಳು, ಃಖಖ ಹೀಗೆಲ್ಲ ತೊಡಗಿಕೊಳ್ಳುವುದು ಅನಿವಾರ್ಯ ಕೂಡಾ. ಹಾಗಾಗಿ ಈ ಅಂಕಗಳು ಹೆಚ್ಚು ಕಡಿಮೆ ಎಲ್ಲರಿಗೂ ಒಂದೇ ತೆರನಾಗಿ ಇರುತ್ತವೆ.ಮೂರನೆಯದಾಗಿ ಸಂಶೋಧನೆ ಹಾಗೂ ಪ್ರಕಟಣೆಗಳು ಮತ್ತು ಶೈಕ್ಷಣಿಕ ಕೊಡುಗೆಗಳನ್ನು ಲೆಕ್ಕ ಹಾಕಲಾಗುತ್ತದೆ. ಐದು ಉಪವಿಭಾಗಗಳಲ್ಲಿ ಲೆಕ್ಕ ಹಾಕುವ ಇಲ್ಲಿನ ಅಂಕಗಳಿಗೆ ಮಿತಿ ಇರುವುದಿಲ್ಲ. ಹೆಚ್ಚು ಸಂಶೋಧನೆ ಮತ್ತು ಪ್ರಕಟಣೆ ಮಾಡಿದವರಿಗೆ ಹೆಚ್ಚು ಅಂಕಗಳು ದೊರೆಯುತ್ತವೆ. 
ಈ ಮೂರನೇ ವರ್ಗದಡಿಯಲ್ಲಿ ಬರುವ ಐದೂ ಉಪವಿಭಾಗಗಳ ಸಂಶೋಧನಾತ್ಮಕ ಚಟುವಟಿಕೆಗಳಿಗೆ ಯಾವುದೇ ಗರಿಷ್ಠ ಮಿತಿಯನ್ನು ಯುಜಿಸಿ ನಿಗದಿ ಪಡಿಸಿಲ್ಲ. ಪ್ರಾಧ್ಯಾಪಕ ಸಹಪ್ರಾಧ್ಯಾಪಕ ಹುದ್ದೆಗಳ ಆಯ್ಕೆಗೆ ಈ ಮೂರೂ ವರ್ಗಗಳಲ್ಲಿ ಕನಿಷ್ಠ ಅಂಕಗಳು ಇರಲೇ ಬೇಕು ಎಂದು ಯುಜಿಸಿ ತಾಕೀತು ಮಾಡಿದೆ. ಮೊದಲ ಎರಡು ವರ್ಗಗಳ ಗರಿಷ್ಠ ಅಂಕ 175.ಸಹಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 400 ಶೈಕ್ಷಣಿಕ ನಿರ್ವಹಣಾ ಸೂಚ್ಯಂಕಗಳನ್ನು ಪಡೆಯಬೇಕಾಗಿದ್ದು, ಅದನ್ನು 30 ಅಂಕಗಳು ಎಂದು ಪರಿಗಣಿಸಿ ಅನಂತರದ ಹೆಚ್ಚಿನ ಪ್ರತಿ ಹದಿನೈದು ಸೂಚ್ಯಂಕಗಳಿಗೆ ಒಂದು ಅಂಕದಂತೆ ಕನಿಷ್ಠ ಮೂವತ್ತು ಅಂಕಗಳಿಗೆ ಸೇರುತ್ತಾ ಹೋಗುತ್ತದೆ. 
ಈ ಅಂಕಗಳು ಅಲ್ಲದೆ ಶೈಕ್ಷಣಿಕ ಸಾಧನೆಗಳಿಗೆ ಬೇರೆಯೇ ಅಂಕಗಳಿವೆ. ಹಾಗಾದರೆ ಈಗ ಯೂನಿವರ್ಸಿಟಿಗಳಲ್ಲಿ ನಡೆಯುವುದೇನು? 2010ಕ್ಕೂ ಮೊದಲು ನೇಮಕದ ವಿಷಯದಲ್ಲಿ ಯುಜಿಸಿಯಿಂದ ಸ್ಪಷ್ಟ ನಿರ್ದೇಶನಗಳು ಇರಲಿಲ್ಲ. ಆದರೂ 2010ರ ನಂತರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ತುಮುಕೂರು ವಿಶ್ವವಿದ್ಯಾಲಯ, ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ನಡೆದ ನೇಮಕಾತಿಯಲ್ಲಿ ಯುಜಿಸಿ ನಿಗದಿ ಪಡಿಸಿದ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಿಸಿ ಅಕ್ರಮ ನೇಮಕಾತಿ ಮಾಡಿದ್ದಾರೆ.
 
ಉದಾಹರಣೆಗೆ ಮಂಗಳೂರು ವಿವಿಯಲ್ಲಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಸಂದರ್ಶನದಲ್ಲಿ ಪ್ರಕಟಿತ ಸಂಶೋಧನಾ ಕೃತಿಗಳಿಗೆ ಗರಿಷ್ಠ 20 ಅಂಕಗಳನ್ನು ನಿಗದಿಪಡಿಸಿದ್ದರು. ಒಂದು ಸಂಶೋಧನಾ ಕೃತಿಗೆ ಐದು ಅಂಕಗಳಂತೆ ಗರಿಷ್ಠ 20 ಅಂಕಗಳು ದೊರೆಯುತ್ತವೆ. ಕೇವಲ ನಾಲ್ಕು ಕೃತಿ ಬರೆದವರೂ 20 ಅಂಕ ಗಳಿಸುತ್ತಾರೆ. ಇಪ್ಪತ್ತು ಸಂಶೋಧನಾ ಕೃತಿಗಳನ್ನು ಪ್ರಕಟಿಸಿದವರಿಗೂ 20 ಅಂಕಗಳು. ಇದು ಇಲ್ಲಿಗೆ ನಿಲ್ಲುವುದಿಲ್ಲ. ಈ ಅಂಕಗಳು ಕೇವಲ ಸಂಶೋಧನಾ ಕೃತಿಗಳಿಗೆ ಮಾತ್ರ ಸಿಗುತ್ತವೆ. 
ಆದರೆ ಮಂಗಳೂರು ವಿವಿಯಲ್ಲಿ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿರುವ ಸಾಮಾನ್ಯ ಅಭ್ಯರ್ಥಿಯ ಎರಡು ಸಂಶೋಧನಾ ಕೃತಿಗಳು ಮಾತ್ರ ಪ್ರಕಟವಾಗಿದ್ದು ಅದರಲ್ಲೊಂದು ಪಿಎಚ್‌ಡಿ ಪ್ರಬಂಧವಾಗಿದೆ ಇದಕ್ಕೆ ಶೈಕ್ಷಣಿಕ ವಿಭಾಗದಲ್ಲಿ ಪಿಎಚ್‌ಡಿಗೆ 10 ಅಂಕಗಳು ಕೊಟ್ಟಿದ್ದು ಮತ್ತೊಮ್ಮೆ ಇಲ್ಲಿ ಅದಕ್ಕೆ ಅಂಕಗಳು ಸಿಗುವುದಿಲ್ಲ. ನಿಯಮಾವಳಿ ಪ್ರಕಾರ ಆ ಅಭ್ಯರ್ಥಿಗೆ ಸಂಶೋಧನಾ ವಿಭಾಗದ 20 ಅಂಕಗಳಲ್ಲಿ ಐದು ಅಂಕಗಳು ಮಾತ್ರ ಕೊಡಬೇಕಿತ್ತು. ಆದರೆ ಅವರಿಗೆ ಸುಮ್ಮನೆ ಅಂಕಗಳನ್ನು ನೀಡಿ ಗರಿಷ್ಠ 20 ಅಂಕಗಳನ್ನು ನೀಡಿದ್ದಾರೆ. 
ಇದೇ ವಿಭಾಗದಲ್ಲಿ 1 ಸಿ ವರ್ಗದ ಮೀಸಲಿನ ಅಡಿಯಲ್ಲಿ ಆಯ್ಕೆ ಆದ ಅಭ್ಯರ್ಥಿಯ ಒಂದೇ ಒಂದು ಕೃತಿ ಕೂಡಾ ಪ್ರಕಟವಾಗಿಲ್ಲ. ಆ ಅಭ್ಯರ್ಥಿಗೆ ಸಂಶೋಧನಾ ವಿಭಾಗದ 20 ಅಂಕಗಳಲ್ಲಿ ಸೊನ್ನೆ ಅಂಕ ಬಂದಿರುತ್ತದೆ. ಆದರೂ ಆ ಅಭ್ಯರ್ಥಿಗೆ ಸಂದರ್ಶನದಲ್ಲಿ ಗರಿಷ್ಠ ಅಂಕಗಳನ್ನು ನೀಡಿದ್ದಾರೆ. ಸಂದರ್ಶನದಲ್ಲಿ ಗರಿಷ್ಠ ಅಂಕ ನೀಡಿದ್ದರೂ ಸಂಶೋಧನೆಯಲ್ಲಿ ಸೊನ್ನೆ ಅಂಕ ಇರುವ ಕಾರಣ ಇವರಿಗಿಂತ ಹೆಚ್ಚು ಒಟ್ಟು ಅಂಕಗಳು ಬೇರೆ ಅಭ್ಯರ್ಥಿಗಳಿಗೆ ಬಂದಿದೆ. ಆದರೂ ಕಡಿಮೆ ಅಂಕ ಇದ್ದಾಗಲೂ ಅದೇ ಅಭ್ಯರ್ಥಿಯ ಆಯ್ಕೆ ಆಗಿದೆ. ಬೇರೆ ವಿಭಾಗಳಲ್ಲಿಯೂ ಸಂಶೋಧನಾ ವಿಭಾಗದಲ್ಲಿ ಸಂಶೋಧನಾ ಪ್ರಬಂಧ ಮಂಡನೆ, ಪ್ರಕಟಣೆಗಳು ಇಲ್ಲದೆ ಇದ್ದಾಗಲೂ ಅವರಿಗೆ ಗರಿಷ್ಠ ಅಂಕಗಳನ್ನು ನೀಡಲಾಗಿದೆ. ಸಂದರ್ಶನದಲ್ಲಿಯೂ ಹೆಚ್ಚಿನ ಅಂಕಗಳನ್ನು ನೀಡಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. 
ಆ ಬಗ್ಗೆ ಕೇಳಿದರೆ ಅಂಕಗಳನ್ನು ನಿರ್ಧರಿಸುವಲ್ಲಿ ಆಯ್ಕೆ ಕಮಿಟಿಯ ತೀರ್ಮಾನವೇ ಅಂತಿಮ ಎನ್ನುವ ಸಿದ್ಧ ಉತ್ತರ ಸಿಗುತ್ತದೆ. ಆಯ್ಕೆ ಕಮಿಟಿಯ ಬೇಕಾಬಿಟ್ಟಿ ಅಂಕಗಳನ್ನು ಕೊಡುವ ಹಾಗಿದ್ದರೆ ಯುಜಿಸಿ ಮಾರ್ಗ ದರ್ಶಕ ಸೂತ್ರಗಳ ಅಗತ್ಯವೇನಿದೆ? 
ಇದೀಗ 2006-07ರಲ್ಲಿ ಮೈಸೂರು ವಿವಿ ಮಾಡಿದ 135 ಬೋಧಕ ಹುದ್ದೆಗಳ ನೇಮಕಾತಿಯನ್ನು ಸರ್ಕಾರ ರದ್ದು ಪಡಿಸಿದ ಆದೇಶ ನೀಡಿ  ತಡವಾಗಿಯಾದರೂ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. 
ಅದೇ ರೀತಿ ಮಂಗಳೂರು, ಬೆಳಗಾವಿ ಸೇರಿದಂತೆ 2010 ರಲ್ಲಿ ಯುಜಿಸಿ ಸ್ಪಷ್ಟ ನಿಯಮಾವಳಿಯನ್ನು ತಂದ ನಂತರವೂ ಆದ ಅಕ್ರಮ ನೇಮಕವನ್ನು ರದ್ದುಪಡಿಸಿಬೇಕಲ್ಲದೇ ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಎಸಗಿದ ಆಯ್ಕೆ ಸಮಿತಿಯ ಸದಸ್ಯರು, ಉಪಕುಲಪತಿ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತವಾದ ಕ್ರಮ ತೆಗೆದು ಕೊಳ್ಳಬೇಕು. ಹಾಗಾದಾಗ ಮಾತ್ರ ಮುಂದಿನ ನೇಮಕಗಳು ಪಾರದರ್ಶಕವಾಗಲು ಸಾಧ್ಯ. 
 
ಆದರೆ ಈಗ ಇಷ್ಟೆಲ್ಲಾ ಅಕ್ರಮ ನೇಮಕಾತಿಗಳು ನಡೆದಿದ್ದರೂ ಮಂಗಳೂರು ಯೂನಿವರ್ಸಿಟಿ ಕನ್ನಡ ವಿಭಾಗದ ಹುದ್ದೆಗಳ ಆಯ್ಕೆ ಸಮಿತಿ ಯ ಮುಖ್ಯಸ್ಥರಾಗಿದ್ದ ಡಾ.ಚಿನ್ನಪ್ಪ ಗೌಡರನ್ನು ಈಗ ಕರ್ಣಾಟಕ ಜಾನಪದ ವಿಶ್ವ ವಿದ್ಯಾಲಯಕ್ಕೆ ಉಪಕುಲಪತಿಗಳಾಗಿ ನೇಮಕಾತಿ ಮಾಡಿದ್ದಾರೆ ಇದು ಸರಿಯೇ ?
  ಯು ಜಿ ಸಿ ಮಾರ್ಗ ದರ್ಶಕ ಸೂತ್ರಗಳ ಬಗ್ಗೆ ಹೆಚ್ಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು http://www.mangaloreuniversity.ac.in/sites/default/files/Conduct%20of%20Interview%20Teachers.pdf
-ಡಾ.ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ

2 comments:


Replies


  1. ಹೌದು ,ಅನ್ಯಾಯದ ವಿರುದ್ಧ ಪ್ರತಿಭಟನೆ ಹೋರಾಟ ಒಂದೇ ದಾರಿ

    ಓದಿ ಅಭಿಪ್ರಾಯಿಸಿದ್ದಕ್ಕೆ ಧನ್ಯವಾದಗಳು ದಾಕ್ಟರ್, Savinaya Kumar