Sunday 14 October 2018

ಬದುಕ ಬಂಡಿಯಲಿ- ಎರಡನೇ ಕೆಟ್ಟ ಅನುಭವ - ಡಾ.ಲಕ್ಷ್ಮೀ ಜಿ ಪ್ರಸಾದ

ನನ್ನ ಎರಡನೇಯ ಕೆಟ್ಟ ಅನುಭವ..
ಕೆಟ್ಟ ಅನುಭವವೆಂದರೆ ಮೈ ಸವರಿ ಚಿವುಟಬೇಕು ಎಂದೇನೂ ಇಲ್ಲ!
ನಾನು ಹತ್ತನೇ ತರಗತಿ ಉತ್ತೀರ್ಣಳಾಗಿ ಪಿಯುಸಿಗೆ ಮಂಗಳೂರಿನ ಸರ್ಕಾರಿ ಕಾಲೇಜಿಗೆ( ಈಗುನ ವಿಶ್ವ ವಿದ್ಯಾಲಯ ಕಾಲೇಜು,ಆಗ ಅಲ್ಲಿ ಪಿಯುಸಿ ಮತ್ತು ಡಿಗ್ರಿ ಎರಡೂ ಒಟ್ಟಿಗೆ ಇತ್ತು) ಸೇರಿದೆ.ಇಲ್ಲಿ ಒಂದು ಸುಸಜ್ಜಿತವಾಗ ಸಭಾಂಗಣ ಇದೆ‌.ಮಂಗಳೂರಿಗೆ ರವೀಂದ್ರನಾಥ ಟಾಗೋರ್ ಬಂದಾಗ ಇಲ್ಲಿ ಉಪನ್ಯಾಸ ನೀಡಿದ್ದರಂತೆ.ಅದರ ನೆನಪಿಗಾಗಿ ಆ ಸಭಾಂಗಣಕ್ಕೆ ರವೀಂದ್ರ ಕಲಾ ಭವನ ಎಂದು ಹೆಸರಿತ್ತು ‌.ಇಲ್ಲಿ ಸದಾ ಸಾಂಸ್ಕೃತಿಕ  ಕಾರ್ಯಕ್ರಮ  ಹಾಗೂ ವಿದ್ವಾಂಸರ ಉಪನ್ಯಾಸ ಕಾರ್ಯಕ್ರಮಗಳು  ಆಗುತ್ತಾ ಇತ್ತು.
ನನಗೆ ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ಜೀವ.ಜೊತೆಗೆ ವಿದ್ವಾಂಸರ ಮಾತುಗಳನ್ನು ಕೇಳಲು ಕೂಡ ತುಂಬಾ ಆಸಕ್ತಿ ಇತ್ತು. ಆದರೆ ಈ ಕಾಲೇಜಿನಲ್ಲಿ ಹುಡುಗಿಯರಿಗೆ ಯಾವುದೇ ಕಾರ್ಯಕ್ರಮವನ್ನು  ನೋಡುವುದು ಅಸಾಧ್ಯದ ವಿಚಾರವಾಗಿತ್ತು.
ಕಾರ್ಯಕ್ರಮ ಶುರು ಆಗುತ್ತಲೇ ಪುಂಡು ಹುಡುಗರ ಸಮೂಹ ಹುಡುಗಿಯರನ್ನು ಕಿಚಾಯಿಸಲು ಶುರು ಮಾಡುತ್ತಿದ್ದರು‌.ಏನೆನೋ ಕೆಟ್ಟದಾಗಿ ಬರೆದು ರಾಕೆಟ್ ಮಾಡಿ ಬಿಸಾಡುತ್ತಿದ್ದರು.ಇದು ಹುಡುಗಿಯರ ತಲೆಗೆ ಬಂದು ಬೀಳುವುದನ್ನು ನೋಡಿ ನಗಾಡಿ ಗಲಾಟೆ ಮಾಡುತ್ತಿದ್ದರು. ಒಂದು ಸಲ ಅಮೃತ ಸೋಮೇಶ್ವರರ ಉಪನ್ಯಾಸ ಕಾರ್ಯಕ್ರಮ ಇತ್ತು .ನಾನು ಅವರ ಮಾತುಗಳನ್ನು ಕೇಳುವ ಸಲುವಾಗಿ ಮುಂದೆ ಹೋಗಿ ಕುಳಿತಿದ್ದೆ .ಅವರ ಮಾತುಗಳನ್ನು ತನ್ಮಯತೆಯಿಂದ ಕೇಳುತ್ತಿರುವಾ ರಾಕೆಟ್ ಒಂದು ನನ್ನ ತಲೆ ಮೇಲೆ ಬಂದು ಬಿತ್ತು.ನನಗೇನಾದರೂ ಈಶ್ವರನಂತೆ ಮೂರನೆಯ ಉರಿಗಣ್ಡು ಇದ್ದರೆ ಅದನ್ನು ತೆರೆದು ಆ ಪುಂಡು ಹುಡುಗರನ್ನು ಸುಟ್ಟು ಬಿಡುತ್ತಿದ್ದೆ‌.ಆದರೇನು ಮಾಡಲಿ ಆ ಶಕ್ತಿ ನನಗಿರಲಿಲ್ಲ,ಅಸಹಾಯಕತೆಯಿಂದ ಅವಮಾನದಿಂದ  ಕಣ್ಣಲ್ಲಿ ನೀರು ತುಂಬಿ ಬರಲು ಎದ್ದು ಸಭಾಂಗಣದಿಂದ ಹೊರಬಂದೆ.
ಆಗೆಲ್ಲಾ  ಇವನ್ನು ನಿಯಂತ್ರಿಸದ ಅಲ್ಲಿನ ಉಪನ್ಯಾಸಕರ ಮೇಲೆ ನನಗೆ ತುಂಬಾ ಸಿಟ್ಟು ಬರುತ್ತಿತ್ತು. ಆಗಲೇ ನಿರ್ಧರಿಸಿ ಬಿಟ್ಟಿದ್ದೆ‌.ನಾನು‌ ಮುಂದೆ ಉಪನ್ಯಾಸಕಿಯಾದರೆ ನನ್ನ ವಿದ್ಯಾರ್ಥಿನಿಯರಿಗೆ ಈ ಕಿರುಕುಳ ಆಗದಂತೆ ತಡೆಯಬೇಕೆಂದು.ಇದಕ್ಕೆ ಬಹಳ ಸರಳ ಉಪಾಯವಿದೆ.ಉಪನ್ಯಾಸಕರು ಅಲ್ಲಲ್ಲಿ ವಿದ್ಯಾರ್ಥಿಗಳ ನಡುವೆ ಕುಳಿತರಾಯಿತು.
ನಾನು ಮುಂದೆ ಶ್ರೀ ರಾಮ ಪ್ರಾಥಮಿಕ ಶಾಲೆ, ಚಿನ್ಮಯ ಪ್ರೌಢಶಾಲೆ, ಸಂತ ಅಲೋಶಿಯಸ್ ಕಾಲೇಜುಗಳಲ್ಲಿ ಕೆಲಸ ಮಾಡಿದೆ‌.ಇಲ್ಲೆಲ್ಲ ತುಂಬಾ ಶಿಸ್ತು ಇತ್ತು.ಹಾಗಾಗಿ ಕಾರ್ಯಕ್ರಮ ನೋಡಲು ಹುಡುಗಿಯರಿಗಾಗಲೀ ಬೇರೆಯವರಿಗಾಗಲೀ ಯಾವುದೇ ಸಮಸ್ಯೆ ಇರಲಿಲ್ಲ.
ನಂತರ ಪ್ರಸಾದರಿಗೆ ಬೆಂಗಳೂರಿನಲ್ಲಿ ಕೆಲಸವಾದ ಕಾರಣ ನಾವು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದೆವು
ಇಲ್ಲಿ ಎನ್ ಆರ್ ಕಾಲೊನಿಯಲ್ಲಿ ಇರುವ ಅನುದಾನಿತ ಕಾಲೇಜೊಂದರಲ್ಲಿ ಅನುದಾನ ರಹಿತ ಉಪನ್ಯಾಸಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿದೆ‌.ಇಲ್ಲಿ ಮತ್ತೆ  ಆಪಾ ಪೋಲಿ ಹುಡುಗರು ಅಲ್ಲಿನಷ್ಟು ಅಲ್ಲದಿದ್ದರೂ  ಹುಡುಗಿಯರಿಗೆ ಕಾಟ ಕೊಡುತ್ತಿದ್ದರು .ಇದನ್ನು ನಿಲ್ಲಿಸಲು ನಾನು ಶಕ್ತಿ ಮೀರಿ ಯತ್ನ ಮಾಡಿದೆ ಜೊತೆಗೆ ಸಹೋದ್ಯೋಗಿ ರೇವತಿ ಕೂಡ ಕೈಜೋಡಿಸಿದ್ದರು.ಇಲ್ಲಿ ಸುಮಾರಾಗಿ ನಿಯಂತ್ರಣಕ್ಕೆ ತಂದಿದ್ದೆವು.ನಂತರ ಸರ್ಕಾರಿ ಉದ್ಯೋಗ ದೊರೆತು ಬೆಳ್ಲಾರೆಗೆ ಹೋದೆ.ಇಲ್ಲಿ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ ಮತ್ತೆ ನೆಲಮಂಗಲಕ್ಕೆ ಬಂದಾಗ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಇತ್ತು .ಇಲ್ಲಿ ಕೂಡ ವಿದ್ಯಾರ್ಥಿಗಳ ನಡುವೆ ಕುಳಿತು ಹುಡುಗರ ಪುಂಡಾಟಿಕೆಯನ್ನು ನಿಯಂತ್ರಣಕ್ಕೆ ತಂದೆವು

ಬದುಕ ಬಂಡಿಯಲಿ - ಮೊದಲ ಕೆಟ್ಟ ಅನುಭವ - ಡಾ.ಲಕ್ಷ್ಮೀ ಜಿ ಪ್ರಸಾದ

ಮೀ ಟೂ ಅಭಿಯಾನ ತಪ್ಪಲ್ಲ,ಅದರಲ್ಲಿ ರಾಜಕೀಯ ಬೆರೆಸಿ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಬಳಸುವುದು ತಪ್ಪು ,ಕಾನೂನು ಗಟ್ಟಿ ಗೊಳಿಸಬೇಕಿದ್ದಲ್ಲಿ ರಾಜ್ಯ ಮತ್ತು ಕೇಂದ್ರ ಎರಡರ ಮೇಲೂ ಒತ್ತಡ ಹಾಕಬೇಕು‌.

ನನಗಾದ ಮೊದಲ ಕೆಟ್ಟ ಅನುಭವ ಇನ್ನೂ ನನಗೆ ನೆನಪಿದೆ ..
 ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಓಣಂ ರಜೆಯಲ್ಲಿ ಅಜ್ಜನ ಮನೆಗೆ ಹೋಗಿದ್ದೆ
ನನ್ನ ಅಜ್ಜನ ಮನೆ ಹೊಸ ಮನೆಯಿಂದ ನನ್ನ ತಂದೆ ಮನೆಗೆ ಸುಮಾರು ಎರಡು ‌ಮೈಲು ದೂರ.ಅರ್ಧಾಂಶ ಕಾಡು ದಾರಿ ಅರ್ಧಾಂಶ ಬಯಲು ಗುಡ್ಡೆಗಳ ದಾರಿ.
ಅಜ್ಜನ ಮನೆಯಿಂದ ತಾಯಿ ಮನೆಗೆ ಒಬ್ಬಳೇ ಬರುತ್ತಾ ಇದ್ದೆ.ನನ್ನ ತಾಯಿ ಮನೆ ತಲುಪಲು ಇನ್ನೂ  ಸುಮಾರು ಅರ್ಧ ಕಿಮೀ ದೂರ ಇತ್ತು.ಅಜ್ಜಿ ಮನೆಯಲ್ಲಿ ಬೆಳೆದ ದಾರೆಪೀರೆ,ಸೊರೆಕಾಯಿ ಹಾಗಲ ಕಾಯಿಗಳನ್ನು  ಅಡಿಕೆಯ ಉದ್ದ ಹಾಳೆಯಲ್ಲಿ ಕಟ್ಟಿ ತಾಯಿಗೆ ಕೊಡಲು ಕೊಟ್ಟಿದ್ದರು.ಬೇರೆ ಏನೋ ಕೂಡ ಗಂಟು ಇತ್ತು.ನಾನು ಭಾರದ ಕಟ್ಟು ಹೊತ್ತುಕೊಂಡು ನಿದಾನವಾಗಿ ನಡೆದುಕೊಂಡು ನಿರ್ಜನವಾದ ದಾರಿಯಲ್ಲಿ ನಡೆದು ಕೊಂಡು ಬರುತ್ತಾ ಇದ್ದೆ‌.ನನ್ನ ಎದುರಾಗಿ ಒಬ್ಬಾತ ನನ್ನನ್ನು  ವಿಚಿತ್ರವಾಗಿ ನೋಡುತ್ತಾ ದಾಟಿ ಹೋದ .ಕೆಟ್ಟ ದೃಷ್ಟಿಯನ್ನು ಅರ್ಥೈಸಿಕೊಳ್ಳುವಷ್ಟು ಪ್ರೌಢತೆ ನನಗಿನ್ನೂ ಬಂದಿರಲಿಲ್ಲ.
ನಾನು ಸ್ವಲ್ಪ ದೂರ ನಡೆದು ಬಂದು ದಾರಿ ಬದಿಯಲ್ಲಿ ಇದ್ದ ಕಲ್ಲಿನ ಮೇಲೆ ನನ್ನ ತಲೆಯ ಮೇಲೆ ಇದ್ದ ಕಟ್ಟನ್ನು ಇಳಿಸಿ ಇನ್ನೊಂದು ಕಲ್ಲಿನ ಮೇಲೆ ತುಸು ವಿಶ್ರಾಂತಿ ಗಾಗಿ ಕುಳಿತೆ,ಸಂಜೆ ಸಮಯ,ಆಕಾಶ ಶುಭ್ರವಾಗಿ ನೀಲಿ ಬಣ್ಣದಿಂದ ಕಾಣುತ್ತಾ ಇತ್ತು‌,ಸುತ್ರ ಮುತ್ತ ಹಸಿರು. ನೋಡುತ್ತಾ ಹಾಗೆಯೇ ಕುಳಿತಿದ್ದೆ‌.ಆಕಾಶವನ್ನು ನೋಡುತ್ತಾ ಸುಮ್ಮನೇ ಕುಳಿತುಕೊಳ್ಳುವುದೆಂದರೆ ಈಗಲೂ ನನಗೆ ತುಂಬಾ ಇಷ್ಟ ‌ಸುಮ್ಮನೇ ಟೇರೇಸ್ ಏರಿ ಸಂಜೆ ಹೊತ್ತು ಅಥವಾ ರಾತ್ರಿ ಬೆಳದಿಂಗಳಿನಲ್ಲಿ ಆಕಾಶ ನೋಡುತ್ತಾ ಜಗತ್ತನ್ನೇ ಮರೆತು ಬಿಡುತ್ತೇನೆ.
ಅಂದು ಕೂಡ ಹಾಗೆಯೇ ಆಯಿತು. ಸ್ವಲ್ಪ ಹೊತ್ತು ನನ್ನನ್ನು ದಾಟಿ ಮುಂದೆ ಹೋದ ವ್ಯಕ್ತಿ ಅತ್ತ ಇತ್ತ ಯಾರೂ ಇಲ್ಲವೆಂಬುದನ್ನು ಖಚಿತ ಪಡಿಸಿಕೊಂಡೇ ಇರಬಹುದು, ನನ್ನ ಸಮೀಪ ಬಂದು ಮುಖ ಸವರಲು ಬಂದ‌.ನಾನೋ ತಕ್ಷಣವೇ ಅಲ್ಲೇ ಕಲ್ಲಿನ ಮೇಲೆ ಇರಿಸಿದ್ದ ಅಜ್ಜಿ ಉದ್ದನೆಯ ಹಾಳೆಯನ್ನು ಸುತ್ತಿ ಮಾಡಿ ಕೊಟ್ಟ ಗಂಟನ್ನು ಎತ್ತಿ ಅವನಿಗೆ ತಾರಾಮಾರ ಹೊಡೆದೆ .ಆತ ಅಲ್ಲೇ ಕುಸಿದು ಬಿದ್ದ .ಅಲ್ಲಿಂದ ಗಂಟನ್ನು ಹಿಡಿದುಕೊಂಡು ಹಿಂದೆ ತಿರುಗಿ ನೋಡದೆ ಒಂದೇ ಸಮನೆ ಓಡಿ ಮನೆ ಸೇರಿದೆ.ಅಮ್ಮನಿಗೆ ಮಾತ್ರ ವಿಷಯ ತಿಳಿಸಿದೆ‌.ಅವನೇನಾದರೂ ಸತ್ತು ಹೋಗಿದ್ದನೇ ಎಂದು ಕೂಡ ನಮಗೆ ಆತಂಕವಾಯಿತು.ಬಹುಶಃ ಅವನಿಗೆ ಸಾಯುವಂತಹ ಏಟೇನೂ ಬಿದ್ದಿರಲಿಲ್ಲವೆಂದು ಕಾಣುತ್ತದೆ. ಯಾರೂ ಸತ್ತ ಸುದ್ದಿ ನಮ್ಮೂರಿನಲ್ಲಿ ಹರಡಿರಲಿಲ್ಲ.ಬಹುಶಃ ಆತ ಮತ್ತೆ ಸಾವರಿಸಿಕೊಂಡು ಎದ್ದು ತನ್ನ ಹಾದಿ ಹಿಡಿದು ಹೋಗಿರಬಹುದು.ಮುಂದೆಂದೂ ಹೆಂಗಸರ ಸುದ್ಧಿಗೆ ಹೋಗಿರಲಾರ‌.
ಇದರ ನಂತರವೂ ಕೆಟ್ಟ ಅನುಭವ ಆಗಿದೆ .ಪೋಲೀಸರಿಗೆ ದೂರನ್ನು ಕೊಟ್ಟು ಕೇಸ್ ಹಾಕಿದ್ದೇನೆ ಕೂಡ .ಆದರೆ ಸಮಾಜ ಗಂಡಿನ ಪರವೇ ಇರುತ್ತದೆ ಎಂಬ  ಕಟು ಅನುಭವ ಆಗಿದೆ ಎಂಬುದು ಕೂಡ ಅಷ್ಟೇ ಸತ್ಯ !

Sunday 7 October 2018

ಬದುಕ ಬಂಡಿಯಲಿ - ನನಗೆ ಕಿವಿ ಕೇಳಿಸುವುದಿಲ್ಲ ಮಗಾ ಎಂದ ಎಕ್ಕಾರಿನ ಅಕ್ಕಮ್ಮಜ್ಜಿ

ನನಗೆ ಕಿವಿ ಕೇಳಿಸುವುದಿಲ್ಲ ಮಗಾ ಎಂದ  ಎಕ್ಕಾರಿನ ಅಕ್ಕಮ್ಮಜ್ಜಿ

ಸುಮಾರು ಇಪ್ಪತ್ತಮೂರು ವರ್ಷಗಳ ಹಿಂದಿನ ಮಾತಿದು.ನನ್ನ ಓದಿನ ಕಾರಣಕ್ಕೆ ಮನೆ ಮಂದಿಯನ್ನೆಲ್ಲಾ ಎದುರು ಹಾಕಿಕೊಂಡು ಎಕ್ಕಾರಿನ ಒಂದು ರೂಮಿನ ಮೋಟು ಗೋಡೆಯ  ಗೆದ್ದಲು ಹಿಡಿದ ಮಣ್ಣಿನ ಮನೆಯನ್ನು ನೂರ ಐವತ್ತು ರುಪಾಯಿ ಬಾಡಿಗೆಗೆ ಹಿಡಿದಿದ್ದೆವು.ಅದಕ್ಕಿಂತ ಒಳ್ಳೆಯ ಮನೆ ನಮ್ಮ ಬಜೆಟ್ ಗೆ ಸಿಕ್ಕಲು ಸಾಧ್ಯವಿರಲಿಲ್ಲ. ಈ ಮನೆಯಲ್ಲಿ ಇದ್ದದ್ದು  ಒಂದು ಕೊಠಡಿ ಸುಮಾರು ಎಂಟಡಿ ಅಗಲ ಹತ್ತು ಹನ್ನೆರಡಡಿ ಉದ್ದ ಇದ್ದಿರಬಹುದು. ಅದರ ಒಂದು ತುದಿಯಲ್ಲಿ ಮೂರಡಿ ಎತ್ತರಕ್ಕೆ ಒಂದು ಸಣ್ಣ ಗೋಡೆ.ಅದರ ಆಕಡೆ ಅಡಿಗೆ ಮನೆ,ಅದಕ್ಕೆ ತಾಗಿಕೊಂಡು ಸ್ನಾನದ ಮನೆ.ಇದು ಮೂರುಅಡಿ ಉದ್ದ ಮೂರಡಿ ಅಗಲ ಇದ್ದಿರಬಹುದು.
ನಮ್ಮ ಈ ಮನೆಯ ಎತ್ತರ ಸುಮಾರು ಎಂಟು ಹತ್ತಡಿ ಇದ್ದಿರಬಹುದು. ಆದರೆ ಗೋಡೆ ಮಾತ್ರ ಆರಡಿ ಎತ್ತರ ಇತ್ತು.ಒಂದು ಕುರ್ಚಿ ತಗೊಂಡು ಹತ್ತಿ ಆಕಡೆಗೆ ಇಣುಕಿದರೆ ಆ ಕಡೆಯ ಇಳಿಸಿ ಕಟ್ಟಿದ ಜೋಪಡಿ ಕಾಣುವಂತೆ ಇತ್ತು.ಆದರೆ ಹತ್ತಿ ನೊಡಲು ನಮ್ಮಲ್ಲಿ ಖುರ್ಚಿಯಾಗಲಿ ಮಂಚವಾಗಲೀ ಇರಲಿಲ್ಲ. ಹಾಗಾಗಿ ಅಲ್ಲಿ ಏನಿದೆ ಎಂದು ಸುಮಾರು ಸಮಯ ಗೊತ್ತಿರಲಿಲ್ಲ. ಅಲ್ಲಿ ಒಂದು ಅಜ್ಜಿ ಮತ್ತು ಅವರ ಬುದ್ಧಿ ಮಾಂದ್ಯ ಮಗ ವಾಸಮಾಡುತ್ತಿದ್ದರು.ಆ ಮಗನಿಗೆ ಅಮವಾಸ್ಯೆ ಹತ್ತಿರ ಬಂದಂತೆಲ್ಲ ಕೋಪ ಆಕ್ರೋಶ ಹೆಚ್ಚಾಗುತ್ತಾ ಇತ್ತು ಏನೇನೋ ಕೂಗಾಡುತ್ತಾ ಇದ್ದ.
ಅದಿರಲಿ.ನಮ್ಮದು ಅರ್ಧ ಗೋಡೆಯ ಮನೆ ಆದ ಕಾರಣ ಸಣ್ಣ ಸದ್ದಾದರೂ ಆ ಕಡೆಗೆ ಕೇಳುವಂತೆ ಇತ್ತು..ನಾವು ಅಲ್ಲಿಗೆ ಬಂದು ಒಕ್ಕಲಾದ ಒಂದೆರಡು ದಿನಗಳಲ್ಲೇ ಅಕ್ಕಮ್ಮಜ್ಜಿ ತನ್ನ ಸರಳ ಸಜ್ಜನಿಕೆಯ ನಡೆ ನುಡಿಯಿಂದ ಬಹಳ ಇಷ್ಟವಾದರು.ಅವರು ಮಾತನಾಡುತ್ತಾ ನನಗೆ ಕಿವಿ ಕೇಳಿಸುವುದಿಲ್ಲ ಮಗಾ.ಇನ್ನು ನನ್ನ ‌ಮಗ ಮಲಗಿದ ತಕ್ಷಣ ನಿದ್ದೆ ಮಾಡುತ್ತಾನೆ.ಅವನಿಗೇನೂ ಗೊತ್ತಿಲ್ಲ ಸಣ್ಣ ಮಗುವಿನ ಬುದ್ಧಿ  ಅವನದು( ಇದು ಸತ್ಯದ ವಿಚಾರವೇ ಆಗಿತ್ತು) ಆದರೆ ಕಿವಿ ಕೇಳಿಸುವುದಿಲ್ಲ ಎಂದು ಹೇಳಿದ್ದು ಶುದ್ಧ ಸುಳ್ಳು.ಆದರೆ ಹೊಸತಾಗಿ ಮದುವೆಯಾಗಿ ಬಂದು ಸಂಸಾರ ಹೂಡಿದ  ನಮಗೆ ಸಂಕೋಚವಾಗಬಾರದೆಂಬ ಸದುದ್ದೇಶದಿಂದ ಅವರು ಹಾಗೆ ಹೇಳಿದ್ದರು.
ಅಕ್ಕಮ್ಮಜ್ಜಿ ಬಹಳ ಸಹೃದಯಿ. ಆಗಾಗ ನಮ್ಮ ಮನೆ ಅಂಗಳ ಗುಡಿಸಿ ಮನೆಗೆ ಹತ್ತಿದ ಗೆದ್ದಲು ತೆಗೆಯಲು ಸಹಾಯ ಮಾಡುತ್ತಿದ್ದರು ‌.ನಮ್ಮ ‌ಮನೆಯ ಓನರ್ ನಾಗವೇಣಿ ಅಮ್ಮನವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಅವರ ಮೊದಲ ‌ಮಗ ಬುದ್ಧಿ ಮಾಂದ್ಯ.ಆದರೆ ಎರಡನೇ ಮಗ ಮುಂಬಯಿಯಲ್ಲಿ  ಒಳ್ಳೆಯ ಕೆಲಸದಲ್ಲಿ ಇದ್ದ ,ಒಳ್ಳೆಯ ಆದಾಯವೂ ಇತ್ತು.ಆತ ತನ್ನ ತಾಯಿಯನ್ನು ಎಂದರೆ ಅಕ್ಕಮ್ಮಜ್ಜಿ ಯನ್ನು ಮುಂಬಯಿಗೆ ಕರೆದುಕೊಂಡು ಹೋಗಲು ತಯಾರಿದ್ದ ಆದರೆ ಬುದ್ಧಿ ಮಾಂದ್ಯನಾದ ಅಣ್ಣನನ್ನು ಕರೆದುಕೊಂಡು ಹೋಗಲು ತಯಾರಿರಲಿಲ್ಲ.ಆತನನ್ನು ನೋಡಿಕೊಳ್ಳುವ ಸಲುವಾಗಿ ಅಕ್ಕಮ್ಮಜ್ಜಿ ಎಕ್ಕಾರಿನಲ್ಲಿ ಕೂಲಿ ಮಾಡುತ್ತ ಇಳಿಸಿ ಕಟ್ಟಿದ ಅಡಿಕೆ ಮರದ ಸೋಗೆಯ ಜೋಡಿಯಲ್ಲಿ ದೊಡ್ಡ ‌ಮಗನೊಂದಿಗೆ ಬದುಕುತ್ತಾ ಇದ್ದರು.ನಾನಿರುವ ತನಕ ಮಗನನ್ನು ಬೀದಿ ಪಾಲಾಗಲು ಬಿಡುವುದಿಲ್ಲ ,ಮುಂದೆ ದೇವರು ಇಟ್ಟಂತೆ ಆಗುತ್ತದೆ ಎಂದು ಹೇಳುತ್ತಾ ಇದ್ದರು.ಆದರೆ ಒಂದು ರಾತ್ರಿ ಇದ್ದಕ್ಕಿದ್ದಂತೆ ದೊಡ್ಡದಾಗಿ ನೋವಿನಿಂದ ನರಳಿದ ದೊಡ್ಡ ‌ಮಗ ಅಲ್ಲಿಯೇ ಪ್ರಾಣ ಬಿಟ್ಟಿದ್ದ.ಅದೇ ಜೋಪಡಿಯ ಈ ಕಡೆ ಇದ್ದ ನಾವು ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ಎದೆ ಬಡಿತ ,ಮತ್ತು ನಾಡಿ ಬಡಿತ ನಿಂತಿತ್ತು. ಆರಂಭದಲ್ಲಿ ಎದೆ ಬಡಿದು ಅತ್ತ ಅಕ್ಕಮ್ಮಜ್ಜಿ ನಂತರ ನಾನು ಇರುವಾಗಲೇ ಮಗ ಸತ್ತಿದ್ದು ಒಳ್ಳೆದಾಯಿತು‌.ಇಲ್ಲವಾದರೆ ನನ್ನ ನಂತರ  ಊಟ ತಿಂಡಿ,ಸ್ನಾನ ಆಸರೆ ಇಲ್ಲದೆ ಹುಣ್ಣಾಗಿ ಸಾಯಬೇಕಿತ್ತು.ನನ್ನನ್ನು ಸಣ್ಣ ಮಗ ನೋಡಿಕೊಂಡಾನು ಎಂದು ಸಮಾಧಾನ ಮಾಡಿಕೊಂಡಿದ್ದರು.ನಂತರ ದೊಡ್ಡ ಮಗನ ಅಂತ್ಯ ಸಂಸ್ಕಾರಕ್ಕೆ ಬಂದ ಸಣ್ಣ ‌ಮಗ ಎಕ್ಕಾರು ನಾಗವೇಣಿ ಅಮ್ಮನವರಿಗೆ " ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ " ಎಂದು ಮಾತು ಕೊಟ್ಟು ಮುಂಬಯಿಗೆ ಕರೆದುಕೊಂಡು ಹೋಗಿದ್ದ.ಮುಂದೇನಾತು ತಿಳಿಯದು.ಬಹುಶಃ ಮಗ ಚೆನ್ನಾಗಿ ನೋಡಿಕೊಂಡಿರಬಹುದು.ಇಂದು ಹೊಸತಾಗಿ ಸಂಸಾರ ಹೂಡಿದ ಆತ್ಮೀಯರಾದ ಪರಶುರಾಮ ಯತ್ನಾಳ್( ಹೈ ಕೋರ್ಟ್ ನ್ಯಾಯವಾದಿ) ಮನೆಗೆ ಹೋಗಬೇಕೆಂದು ಕೊಂಡಾಗ ಅಕ್ಕಮ್ಮಜ್ಜಿ ಮತ್ತು ತೀರಾ ಕಡಿಮೆ ಬಾಡಿಗೆಗೆ ಮನೆ ಕೊಟ್ಟ  ನಾಗವೇಣಿ ಅಮ್ಮನವರ ಸಹೃದಯತೆ ನೆನಪಾಗಿ ಬರೆದೆ - ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ, ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ