Sunday 14 October 2018

ಬದುಕ ಬಂಡಿಯಲಿ - ಮೊದಲ ಕೆಟ್ಟ ಅನುಭವ - ಡಾ.ಲಕ್ಷ್ಮೀ ಜಿ ಪ್ರಸಾದ

ಮೀ ಟೂ ಅಭಿಯಾನ ತಪ್ಪಲ್ಲ,ಅದರಲ್ಲಿ ರಾಜಕೀಯ ಬೆರೆಸಿ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಬಳಸುವುದು ತಪ್ಪು ,ಕಾನೂನು ಗಟ್ಟಿ ಗೊಳಿಸಬೇಕಿದ್ದಲ್ಲಿ ರಾಜ್ಯ ಮತ್ತು ಕೇಂದ್ರ ಎರಡರ ಮೇಲೂ ಒತ್ತಡ ಹಾಕಬೇಕು‌.

ನನಗಾದ ಮೊದಲ ಕೆಟ್ಟ ಅನುಭವ ಇನ್ನೂ ನನಗೆ ನೆನಪಿದೆ ..
 ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಓಣಂ ರಜೆಯಲ್ಲಿ ಅಜ್ಜನ ಮನೆಗೆ ಹೋಗಿದ್ದೆ
ನನ್ನ ಅಜ್ಜನ ಮನೆ ಹೊಸ ಮನೆಯಿಂದ ನನ್ನ ತಂದೆ ಮನೆಗೆ ಸುಮಾರು ಎರಡು ‌ಮೈಲು ದೂರ.ಅರ್ಧಾಂಶ ಕಾಡು ದಾರಿ ಅರ್ಧಾಂಶ ಬಯಲು ಗುಡ್ಡೆಗಳ ದಾರಿ.
ಅಜ್ಜನ ಮನೆಯಿಂದ ತಾಯಿ ಮನೆಗೆ ಒಬ್ಬಳೇ ಬರುತ್ತಾ ಇದ್ದೆ.ನನ್ನ ತಾಯಿ ಮನೆ ತಲುಪಲು ಇನ್ನೂ  ಸುಮಾರು ಅರ್ಧ ಕಿಮೀ ದೂರ ಇತ್ತು.ಅಜ್ಜಿ ಮನೆಯಲ್ಲಿ ಬೆಳೆದ ದಾರೆಪೀರೆ,ಸೊರೆಕಾಯಿ ಹಾಗಲ ಕಾಯಿಗಳನ್ನು  ಅಡಿಕೆಯ ಉದ್ದ ಹಾಳೆಯಲ್ಲಿ ಕಟ್ಟಿ ತಾಯಿಗೆ ಕೊಡಲು ಕೊಟ್ಟಿದ್ದರು.ಬೇರೆ ಏನೋ ಕೂಡ ಗಂಟು ಇತ್ತು.ನಾನು ಭಾರದ ಕಟ್ಟು ಹೊತ್ತುಕೊಂಡು ನಿದಾನವಾಗಿ ನಡೆದುಕೊಂಡು ನಿರ್ಜನವಾದ ದಾರಿಯಲ್ಲಿ ನಡೆದು ಕೊಂಡು ಬರುತ್ತಾ ಇದ್ದೆ‌.ನನ್ನ ಎದುರಾಗಿ ಒಬ್ಬಾತ ನನ್ನನ್ನು  ವಿಚಿತ್ರವಾಗಿ ನೋಡುತ್ತಾ ದಾಟಿ ಹೋದ .ಕೆಟ್ಟ ದೃಷ್ಟಿಯನ್ನು ಅರ್ಥೈಸಿಕೊಳ್ಳುವಷ್ಟು ಪ್ರೌಢತೆ ನನಗಿನ್ನೂ ಬಂದಿರಲಿಲ್ಲ.
ನಾನು ಸ್ವಲ್ಪ ದೂರ ನಡೆದು ಬಂದು ದಾರಿ ಬದಿಯಲ್ಲಿ ಇದ್ದ ಕಲ್ಲಿನ ಮೇಲೆ ನನ್ನ ತಲೆಯ ಮೇಲೆ ಇದ್ದ ಕಟ್ಟನ್ನು ಇಳಿಸಿ ಇನ್ನೊಂದು ಕಲ್ಲಿನ ಮೇಲೆ ತುಸು ವಿಶ್ರಾಂತಿ ಗಾಗಿ ಕುಳಿತೆ,ಸಂಜೆ ಸಮಯ,ಆಕಾಶ ಶುಭ್ರವಾಗಿ ನೀಲಿ ಬಣ್ಣದಿಂದ ಕಾಣುತ್ತಾ ಇತ್ತು‌,ಸುತ್ರ ಮುತ್ತ ಹಸಿರು. ನೋಡುತ್ತಾ ಹಾಗೆಯೇ ಕುಳಿತಿದ್ದೆ‌.ಆಕಾಶವನ್ನು ನೋಡುತ್ತಾ ಸುಮ್ಮನೇ ಕುಳಿತುಕೊಳ್ಳುವುದೆಂದರೆ ಈಗಲೂ ನನಗೆ ತುಂಬಾ ಇಷ್ಟ ‌ಸುಮ್ಮನೇ ಟೇರೇಸ್ ಏರಿ ಸಂಜೆ ಹೊತ್ತು ಅಥವಾ ರಾತ್ರಿ ಬೆಳದಿಂಗಳಿನಲ್ಲಿ ಆಕಾಶ ನೋಡುತ್ತಾ ಜಗತ್ತನ್ನೇ ಮರೆತು ಬಿಡುತ್ತೇನೆ.
ಅಂದು ಕೂಡ ಹಾಗೆಯೇ ಆಯಿತು. ಸ್ವಲ್ಪ ಹೊತ್ತು ನನ್ನನ್ನು ದಾಟಿ ಮುಂದೆ ಹೋದ ವ್ಯಕ್ತಿ ಅತ್ತ ಇತ್ತ ಯಾರೂ ಇಲ್ಲವೆಂಬುದನ್ನು ಖಚಿತ ಪಡಿಸಿಕೊಂಡೇ ಇರಬಹುದು, ನನ್ನ ಸಮೀಪ ಬಂದು ಮುಖ ಸವರಲು ಬಂದ‌.ನಾನೋ ತಕ್ಷಣವೇ ಅಲ್ಲೇ ಕಲ್ಲಿನ ಮೇಲೆ ಇರಿಸಿದ್ದ ಅಜ್ಜಿ ಉದ್ದನೆಯ ಹಾಳೆಯನ್ನು ಸುತ್ತಿ ಮಾಡಿ ಕೊಟ್ಟ ಗಂಟನ್ನು ಎತ್ತಿ ಅವನಿಗೆ ತಾರಾಮಾರ ಹೊಡೆದೆ .ಆತ ಅಲ್ಲೇ ಕುಸಿದು ಬಿದ್ದ .ಅಲ್ಲಿಂದ ಗಂಟನ್ನು ಹಿಡಿದುಕೊಂಡು ಹಿಂದೆ ತಿರುಗಿ ನೋಡದೆ ಒಂದೇ ಸಮನೆ ಓಡಿ ಮನೆ ಸೇರಿದೆ.ಅಮ್ಮನಿಗೆ ಮಾತ್ರ ವಿಷಯ ತಿಳಿಸಿದೆ‌.ಅವನೇನಾದರೂ ಸತ್ತು ಹೋಗಿದ್ದನೇ ಎಂದು ಕೂಡ ನಮಗೆ ಆತಂಕವಾಯಿತು.ಬಹುಶಃ ಅವನಿಗೆ ಸಾಯುವಂತಹ ಏಟೇನೂ ಬಿದ್ದಿರಲಿಲ್ಲವೆಂದು ಕಾಣುತ್ತದೆ. ಯಾರೂ ಸತ್ತ ಸುದ್ದಿ ನಮ್ಮೂರಿನಲ್ಲಿ ಹರಡಿರಲಿಲ್ಲ.ಬಹುಶಃ ಆತ ಮತ್ತೆ ಸಾವರಿಸಿಕೊಂಡು ಎದ್ದು ತನ್ನ ಹಾದಿ ಹಿಡಿದು ಹೋಗಿರಬಹುದು.ಮುಂದೆಂದೂ ಹೆಂಗಸರ ಸುದ್ಧಿಗೆ ಹೋಗಿರಲಾರ‌.
ಇದರ ನಂತರವೂ ಕೆಟ್ಟ ಅನುಭವ ಆಗಿದೆ .ಪೋಲೀಸರಿಗೆ ದೂರನ್ನು ಕೊಟ್ಟು ಕೇಸ್ ಹಾಕಿದ್ದೇನೆ ಕೂಡ .ಆದರೆ ಸಮಾಜ ಗಂಡಿನ ಪರವೇ ಇರುತ್ತದೆ ಎಂಬ  ಕಟು ಅನುಭವ ಆಗಿದೆ ಎಂಬುದು ಕೂಡ ಅಷ್ಟೇ ಸತ್ಯ !

No comments:

Post a Comment