Friday, 18 May 2018

ದೊಡ್ಡವರ ದಾರಿ 58 ಮಾತೃ ಹೃದಯದ ಕಲ್ಲಡ್ಕ ಡಾ.ಕಮಲ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ

ಕಳೆದ ಎರಡು ವರ್ಷಗಳಲ್ಲಿ ಕಲ್ಲಡ್ಕ ಕಮಲಕ್ಕ ಅವರನ್ನು ಭೇಟಿ ಮಾಡಿ ಅವರೊಂದಿಗೆ ಒಂದು ಫೋಟೋ ತೆಗೆಸಿಕೊಂಡು ಬ್ಲಾಗ್ ನಲ್ಲಿ ಅವರ ಮಾತೃ ಹೃದಯದ ಬಗ್ಗೆ ಒಂದು ಬರಹಬರೆಯಬೇಕೆಂದುಕೊಂಡಿದ್ದೆ‌
ಅದಕ್ಕಾಗಿ ಎರಡು ಮೂರು ಭಾರಿ ಊರ ಕಡೆ ಹೋದಾಗ ಕಲ್ಲಡ್ಕಕ್ಕೆ ಹೋದೆನಾದರೂ ಅವರನ್ನು ಭೇಟಿಯಾಗಲು ಆಗಲಿಲ್ಲ.
ಕಳೆದ ತಿಂಗಳಿನಲ್ಲಿ ಕೈರಂಗಳ ಗೋಶಾಲೆಯಿಂದ ಗೋವುಗಳನ್ನು ತಲವಾರು ತೋರಿಸಿ ಅಪಹರಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಟಿಜಿ ರಾಜಾರಾಮಭಟ್ಟರು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.ಅವರಿಗೆ ಬೆಂಬಲ‌ ಸೂಚಕವಾಗಿ  ನಾನು ಕೂಡ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿದ್ದೆ‌.ಆ ಸಂದರ್ಭದಲ್ಲಿ ಅಲ್ಲಿಗೆ ಪ್ರಭಾಕರಣ್ಣ ಮತ್ತು ಕಮಲಕ್ಕ ( ಕಲ್ಲಡ್ಕ ಡಾ.ಪ್ರಭಾಕರ ಭಟ್ ಮತ್ತು ಡಾ.ಕಮಲ ಭಟ್)ಬಂದಿದ್ದರು.ಆಗ ಕಮಲಕ್ಕ ಜೊತೆಗೆ ಒಂದು ಫೋಟೋ ತೆಗೆಸಿಕೊಂಡೆನಾದರೂ ಆರೋಗ್ಯ ಸಮಸ್ಯೆಯಿಂದಾಗಿ ತಕ್ಷಣವೇ ಲೇಖನ ಬರೆಯಲಾಗಲಿಲ್ಲ.
ಅದು 1996 ಜೂನ್ ತಿಂಗಳು. ಆಗಷ್ಟೇ ನಾನು ಸಂಸ್ಕೃತ ಎಂಎ ದ್ವಿತೀಯ ವರ್ಷದ ಅಂರಿಮ ಪರೀಕ್ಷೆ ಬರೆದು ಉದ್ಯೋಗದ ಹುಡುಕಾಟದಲ್ಲಿ ಇದ್ದೆ.ಆಗ ಸಂಸ್ಕೃತ ಭಾರತಿಯ ಕಾರ್ಯಕರ್ತೆ ಯಶೋದಾ ಭಗಿನಿ ನನ್ನನ್ನು ಕಲ್ಲಡ್ಕಕ್ಕೆ ಕರೆದುಕೊಂಡು ಹೋಗಿ ಪ್ರಭಾಕರಣ್ಣ ಅವರಿಗೆ ಪರಿಚಯಿಸಿದರು‌.ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಒಂದು ಸಂಸ್ಕೃತ ಶಿಕ್ಷಕಿ ಕೆಲಸ ಖಾಲಿ ಇತ್ತು.ಪಾಠ ಮಾಡಿ ಏನೇನೂ ಅನುಭವ ಇರದ ನನ್ನ ಮೇಲೆ ನಂಬಿಕೆ ಇಟ್ಟು ಆ ಕೆಲಸವನ್ನು ನನಗೆ ನೀಡಿದರು.
ನಾನು ಕೂಡ ಅವರ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.ಸಂಸ್ಕೃತ ಪಠ್ಯದ ಜೊತೆಗೆ ಶಾಲೆಯ ಎಲ್ಲ ಮಕ್ಕಳಿಗೆ ಸಂಸ್ಕೃತ ಸಂಭಾಷಣಾ ಶಿಬಿರದ ಮಾದರಿಯಲ್ಲಿ ಪಾಠ ಮಾಡಿ ಎಲ್ಲರಿಗೂ ಸಂಸ್ಕೃತ ಮಾತನಾಡಲು ಕಲಿಸಿದೆ‌.ಮಕ್ಕಳು ಕೂಡ ಆಸಕ್ತಿಯಿಂದ ಕಲಿತರು‌
ನಾನು ಆ ಶಾಲೆಯಲ್ಲಿ ನಾಲ್ಕು ಐದು ತಿಂಗಳು ಮಾತ್ರ ಕೆಲಸ ಮಾಡಿದ್ದೆ‌.ನನಗೆ ದ್ವಿತೀಯ ವಿಜ್ಞಾನ ಪದವಿ ಓದುತ್ತಿರುವಾಗಲೇ ಮದುವೆ ಆಗಿತ್ತು. ಕಲ್ಲಡ್ಕ ಶಾಲೆಯಲ್ಲಿ ಕೆಲಸ ಮಾಡುತ್ತಿರುವಾಗ ಆರೋಗ್ಯ ಹಾಳಾಗಿ ಕಲ್ಲಡ್ಕ ಡಾಕ್ಟರ್ ಪ್ರಭಾಕರ ಭಟ್ ಅವರಲ್ಲಿ ಚಿಕಿತ್ಸೆ ಗಾಗಿ ಹೋದೆ ಆಗ ಅವರು ನಾನು ಗರ್ಭಿಣಿಯಾಗಿರುವ ಬಗ್ಗೆ ತಿಳಿಸಿದರು ನಂತರ ನಾನು  ಮಂಗಳೂರಿನ ಭಟ್ಸ್ ನರ್ಸಿಂಗ್ ಹೋಮಿನ ಖ್ಯಾತ ಗೈನಕಾಲಜಿಸ್ಟ್  ಡಾ‌.ಮಾಲತಿ ಭಟ್ ಅವರಲ್ಲಿ ಹೋಗಿ ಚಿಕಿತ್ಸೆ ಪಡೆದೆ.
ಆ ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ಪ್ರಭಾಕರಣ್ಣ ಅವರನ್ನು ಭೇಟಿ ಮಾಡಲು ಒಂದು ಶನಿವಾರ ಮಧ್ಯಾಹ್ನ ಕ್ಲಾಸು ಮುಗಿಸಿ ಅವರ ಮನೆಗೆ ಹೋದೆ .ಆಗ ಕಮಲಕ್ಕ ನನ್ನನ್ನು ಊಟ ಮಾಡಿಕೊಂಡು ಹೋಗುವಂತೆ ಹೇಳಿದರು.ನಾನು ಗರ್ಭಿಣಿ ಎಂದು ತಿಳಿದಿದ್ದ ಅವರು ನನ್ನ ಆರೋಗ್ಯ ವಿಚಾರಿಸಿ ಪಾಯಸದ ಊಟ ಹಾಕಿ ಕಳುಹಿಸಿದ್ದರು.
ನಂತರ ನನಗೆ ಮಂಗಳೂರಿನಿಂದ ಕಲ್ಲಡ್ಕಕ್ಕೆ ಓಡಾಡುವುದು ಕಷ್ಟ ಆಯಿತು. ಅದೃಷ್ಟವಶಾತ್ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆ ಖಾಲಿಯಾಗಿ ನನಗೆ ಆ ಕೆಲಸ ದೊರೆಯಿತು.
ಮತ್ತೂ ವರ್ಷಗಳು ಉರುಳಿದವು‌. ಪ್ರಸಾದ್ ಅವರಿಗೆ ಬೆಂಗಳೂರರಿನಲ್ಲಿ ಕೆಲಸ ದೊರೆತ ಕಾರಣ ಮಂಗಳೂರುಬಿಟ್ಟು ಬೆಂಗಳೂರಿಗೆ ಬಂದು ಸೇರಿದೆವು.ಅಲ್ಲಿ ಇಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ ನಂತರ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆಯಾಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಹುದ್ದೆ ದೊರೆಯಿತು ‌.( ಈ ನಡುವೆ ನಾನು ಕನ್ನಡ ಎಂಎ ಮತ್ತು ಹಿಂದಿ ಎಂಎ ಪದವಿಗಳನ್ನು ಖಾಸಗಿಯಾಗಿ ಓದಿ ಪಡೆದಿದ್ದ್ದೆ.ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ ಎಂಫಿಲ್ ಪದವಿಯನ್ನೂ ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳದ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ( ಪಿಎಚ್ ಡಿ) ಪದವಿಯನ್ನು ಗಳಿಸಿಕೊಂಡಿದ್ದೆ)
ತುಳು ಸಂಸ್ಕೃತಿ ಬಗ್ಗೆ ವಿಪರೀತ ಎನಿಸುವಷ್ಟು ಮೋಹ ಬೆಳೆದಿತ್ತು. ಹಾಗಾಗಿ ತುಳು ಪಾಡ್ದನಗಳನ್ನು ಸಂಗ್ರಹಿಸಲು ಹಾಗೂ ,ಭೂತಾರಾಧನೆ ಕುರಿತು ಹೆಚ್ಚಿನ ಅಧ್ಯಯನ ಮಾಡುವ ಸಲುವಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಸರ್ಕಾರಿ ಕಾಲೇಜನ್ನು ಆಯ್ಕೆ ಮಾಡಿದೆ‌.ಅಲ್ಲಿ ಎರಡು ಮೂರು ವರ್ಷಗಳ ಕಾಲ ಅಧ್ಯಾಪನದೊಂದಿಗೆ ತುಳು ಸಂಸ್ಕೃತಿ ಕುರಿತಾದ ಅಧ್ಯಯನ ವನ್ನು ಮುಂದುವರಿಸಿದೆ‌.
ಅದರ ಪರಿಣಾಮವಾಗಿ ಹತ್ತು ಪುಸ್ತಕಗಳನ್ನು ಬರೆದೆ‌( ಈಗ ಇಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ)
ಇವುಗಳಲ್ಲಿ 2012 ರ ಮೇ ತಿಂಗಳಿನಲ್ಲಿ ತುಳು ನಾಡಿನ ಅಪೂರ್ವ ಭೂತಗಳು ಮತ್ತು ಬೆಳಕಿನೆಡೆಗೆ ಎಂಬ ಎರಡು ಪುಸ್ತಕಗಳ ಬಿಡುಗಡೆಗೆ ತುಳು ಅಕಾಡೆಮಿಯ ಸಹಕಾರ ಕೇಳಿದೆ‌.ಆಗ ಅಲ್ಲಿ ತಿಂಗಳಿಗೊಂದು ತುಳು ಚಾವಡಿ ಯ ಕಾರ್ಯಕ್ರಮ ಮಾಡುತ್ತಿದ್ದು ಆ ತಿಂಗಳಿನ ಕಾರ್ಯಕ್ರಮದ ಜೊತೆಗೆ ನನ್ನ ಪುಸ್ತಕಗಳನ್ನು ಬಿಡುಗಡೆ ಮಾಡಲು ಒಪ್ಪಿದರು.ಆಗ ನಾನು ಕಲ್ಲಡ್ಕ ಕಮಲಕ್ಕ ಅವರನ್ನು ಸಂಪರ್ಕಿಸಿ ನನ್ನ ಪುಸ್ತಕಗಳನ್ನು ಬಿಡುಗಡೆ ಮಾಡಬೇಕೆಂದು ವಿನಂತಿಸಿದೆ.
ಪುಸ್ತಕ ಬಿಡುಗಡೆಯ ದಿನ  ಹತ್ತಿರ ಬಂತು.  ತುಳು ಅಕಾಡೆಮಿಗೆ ಫೋನ್ ಮಾಡಿದಾಗ ಪುಸ್ತಕ ಪರಿಚಯಕ್ಕೆ ನೀವೇ ಯಾರಿಗಾದರೂ ಹೇಳಿ ಎಂದು ತಿಳಿಸಿದರು‌ಹಾಗಾಗಿ ನಾನು ಎಸ್ ಡಿಎಂ ಮಂಗಳ ಜ್ಯೋತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ನನ್ನ ತಮ್ಮ ಗಣೇಶ್ ಭಟ್ ಗೆ ತಿಳಿಸಿದೆ.ಪುಸ್ತಕ ಬಿಡುಗಡೆಯ ಹಿಂದಿನ  ದಿನ ಫೋನ್ ಮಾಡಿದ ಕಮಲಕ್ಕ ನನಗೆ ಪುಸ್ತಕಗಳ ಬಗ್ಗೆ ಮಾಹಿತಿ ಇಲ್ಲ ೇನು ಮಾತಾಡಲಿ ಎಂದು ಹೇಳಿದಾಗ ಪುಸ್ತಕ ಪರಿಚಯ ವನ್ನು ನನ್ನ ತಮ್ಮ ಗಣೇಶ್ ಭಟ್ ಮಾಡಿಕೊಡುತ್ತಾರೆ ಎಂದು ತಿಳಿಸಿದೆ. 
ಪುಸ್ತಕ ಬಿಡುಗಡೆಯ ದಿನ ಒಂದು ಗಂಟೆ ಮೊದಲೇ ತುಳು ಅಕಾಡೆಮಿ ಗೆ ಬಂದೆ
 ತುಳು ಅಕಾಡೆಮಿಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪುಸ್ತಕ ಬಿಡುಗಡೆಯ ಬಗ್ಗೆ ಉಲ್ಲೇಖ ಇರಲಿಲ್ಲ ‌.ವಿಚಾರಿಸಿದಾಗ ತುಳು ಚಾವಡಿ ಕಾರ್ಯಕ್ರಮ ಮುಗಿದ ಮೇಲೆ ಕೊನೆಯಲ್ಲಿ ಐದು ನಿಮಿಷ ಸಮಯ ಕೊಡುತ್ತೇವೆ ಎಂದು ತಿಳಿಸಿದರು.ತುಳು ಭಾಷೆ ಸಂಸ್ಕೃತಿಯ ಅಭಿವೃದ್ಧಿ ಗಾಗಿಯೇ ಇರುವ ತುಳು ಅಕಾಡೆಮಿ ನನ್ನ ತುಳು ಸಂಸ್ಕೃತಿ ಕುರಿತಾದ ಎರಡು ಪುಸ್ತಕಗಳ ಬಿಡುಗಡೆ ಬಗ್ಗೆ ಅಷ್ಟು ನಿರ್ಲಕ್ಷ್ಯ ತೋರಬಹುದೆಂಬ ಊಹೆ ಕೂಡ ನನಗಿರಲಿಲ್ಲ .
ಏನೂ ಮಾಡುವ ಹಾಗಿರಲಿಲ್ಲ.ಸುಮ್ಮನಾದೆ.ಕಮಲಕ್ಕ ಬಂದಾಗ ಪುಸ್ತಕ ಬಿಡುಗಡೆ ಕೊನೆಗೆ ಇದೆ ಅದೂ ಐದು ನಿಮಿಷ ಮಾತ್ರ ಸಮಯ ಎಂದು ಹೇಗೆ ಹೇಳಲಿ ? ಆಹ್ವಾನಿಸಿ ಅವಮಾನಿಸಿದಂತೆ ಆಯಿತಲ್ಲ ಎಂದು ತುಂಬಾ ವ್ಯಥೆ ಆಯಿತು ‌
ಸಮಯಕ್ಕೆ ಸರಿಯಾಗಿ ಕಮಲಕ್ಕ ತುಳು ಅಕಾಡೆಮಿಗೆ ಬಂದರು.ಅವರು ಬಂದಾಗ ತುಳು ಅಕಾಡೆಮಿ ಅಧ್ಯಕ್ಷರಿಗೆ ಆಶ್ಚರ್ಯ ವಾಯಿತು.ಅವರನ್ನು ಪುಸ್ತಕ ಬಿಡುಗಡೆ ಮಾಡಲು ನಾನು ಆಹ್ವಾನಿಸಿರುವ ವಿಚಾರ ಅವರಿಗೆ ತಿಳಿಯಿತು.
ಕಮಲಕ್ಕ ಬಂದದ್ದೇ ಬಂದದ್ದು‌.ಪುಸ್ತಕ ಬಿಡುಗಡೆಗೆ ತುಂಬಾ ಮಹತ್ವ ಬಂತು.ಕಾರ್ಯಕ್ರಮದ ಆರಂಭದಲ್ಲೇ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಆಯೋಜನೆ ಆಯಿತು. ಕಮಲಕ್ಕ ಪುಸ್ತಕ ಬಿಡುಗಡೆ ಮಾಡಿ ನನಗೆ ಶುಭ ಹಾರೈಸಿದರು‌.
ನಂತರ ಕಾಫಿ ತಿಂಡಿಗಾಗಿ ತುಳು ಅಕಾಡೆಮಿ ಅಧ್ಯಕ್ಷರು ಅವರನ್ನು ತಮ್ಮ ಕೊಠಡಿಗೆ ಕರೆದರು.ಅಲ್ಲೇ ಇದ್ದ ನನ್ನನ್ನು ಮತ್ತು ಮಗನನ್ನು ಕರೆದಿರಲಿಲ್ಲ‌.ನಮಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ.ಆಗ ಕಮಲಕ್ಕ ಅವರೇ ನನ್ನನ್ನು ಮತ್ತು ಮಗನನ್ನು ಜೊತೆಗೆ ಕರೆದರು. ಅವರ ಆತ್ಮೀಯತೆಗೆ ಸೋತು ಅವರೊಂದಿಗೆ ಅಧ್ಯಕ್ಷರ ಕೊಠಡಿಗೆ ಅವರ ಜೊತೆ ಹೋಗಿ ಅವರೊಂದಿಗೆ ಕಾಫಿ ತಿಂಡಿ ಸೇವಿಸಿದೆವು‌.
ಕಮಲಕ್ಕ ತುಂಬಾ ದೊಡ್ಡ ವ್ಯಕ್ತಿ. ತುಂಬಾ ಬ್ಯುಸಿ ಇರ್ತಾರೆ‌.ಆದರೂ ಕೂಡ ನಾನು ಪುಸ್ತಕ ಬಿಡುಗಡೆಗಾಗಿ ಆಹ್ವಾನಿಸಿದಾಗ ತುಂಬಾ ಪ್ರೀತಿಯಿಂದ ಒಪ್ಪಿದ್ದರು‌.ಆಹ್ವಾನ ಪತ್ರಿಕೆಯಲ್ಲಿ ಪುಸ್ತಕ ಬಿಡುಗಡೆಯ ವಿಚಾರವಾಗಲೀ ,ಅವರ ಹೆಸರಾಗಲೀ ಇರಲಿಲ್ಲ ಮತ್ತು ಬಿಡುಗಡೆ ಮಾಡುವಂತೆ ತುಳು ಅಕಾಡೆಮಿ ಅವರನ್ನು ಆಹ್ವಾನಿಸಿರಲಿಲ್ಲ.ಆದರೂ ಕೂಡ ಯಃಕಶ್ಚಿದ್ ಆಗಿರುವ ನನ್ನ ಮೌಖಿಕ ಆಹ್ವಾನವನ್ನು ಒಪ್ಪಿ ಪುಸ್ತಕ ಬಿಡುಗಡೆ ತುಂಬಾ ಗೌರವದಿಂದ ಆಗುವಂತೆ ಮಾಡಿದ ಅವರ  ಸರಳತೆ,ಆತ್ಮಾಮೀಯತೆ ಹಾಗೂ ಮಾತೃಹೃದಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಕಳೆದ ತಿಂಗಳು ಕೈರಂಗಳದಲ್ಲಿ ಸಿಕ್ಕಾಗ ತುಂಬಾ ಪ್ರೀತಿಯಿಂದ ಮಾತನಾಡಿದರು.ನಾನು ಅವರ ಜೊತೆಯಲ್ಲಿ ಒಂದು ಫೋಟೋ ತೆಗೆದುಕೊಂಡು ಅವರ ಬಗ್ಗೆ ದೊಡ್ಡವರ ದಾರಿ ಎಂದು ಬ್ಲಾಗ್ ಅಂಕಣದಲ್ಲಿ ಲೇಖನ ಬರೆಯುತ್ತೇನೆ ಎಮದಾಗ ನನ್ನ ಬಗ್ಗೆ ಬರೆಯಲು ಏನಿದೆ ? ನಾನು ದೊಡ್ಡವಳಲ್ಲ ,ವಯಸ್ಸು ಮಾತ್ರ ಸ್ವಲ್ಪ ಆಗಿದೆ ಅಷ್ಟೇ ಎಂದು ಹೇಳಿ ಅತ್ಯಂತ ಸಹಜವಾಗಿ ಹೇಳಿದರು.ತುಂಬಾ ಖ್ಯಾತರಾಗಿರುವ  ಅವರ ಮಾತು ನಡೆ ನುಡಿಗಳಲ್ಲಿ ಒಂದಿನಿತು ಕೃತ್ರಿಮತೆ ಇಲ್ಲ .ಅವರ  ಸರಳ ಮಾತಿನಲ್ಲೇ ಅವರ ದೊಡ್ಡತನ ಕಾಣುತ್ತದೆ ಅಲ್ಲವೇ ?
 ಡಾ‌.ಲಕ್ಷ್ಮೀ ಜಿ ಪ್ರಸಾದ

Wednesday, 16 May 2018

ದೊಡ್ಡವರ ದಾರಿ 56 ಮಾನವೀಯತೆ ಮೆರೆದ ಮಂಗಳೂರಿನ ಪ್ರೇಮನಾಥ್ © ಡಾ‌ ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ 56 ಮಾನವೀಯತೆ ಮೆರೆದ ಮಂಗಳೂರಿನ ಪ್ರೇಮನಾಥ್ © ಡಾ‌ ಲಕ್ಷ್ಮೀ ಜಿ ಪ್ರಸಾದ
ಮೊನ್ನೆ ಕಾಲೇಜಿನಲ್ಲಿ ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ನಾನು ಟು ವೀಲರ್ ಕಲಿತು ಬಿಡುವ ಆರಂಭಿಕ ದಿನಗಳಲ್ಲಿ ಒಂದು ಆಕ್ಸಿಡೆಂಡ್ ಆದ ಬಗ್ಗೆ ತಿಳಿಸಿದೆ.ಆಗ ಪ್ರೇಮನಾಥ್ ಅವರ ಉದಾರತೆ ನೆನಪಾಯಿತು.
ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಘಟನೆ ಇದು‌.ಪ್ರಸಾದ್  ಮಣಿಪಾಲ್ ಫೈನಾನ್ಸ್ನಲ್ಲಿ ಒಳ್ಳೆಯ ಹುದ್ದೆಯಲ್ಲಿ ಇದ್ದರು.ಇದ್ದಕ್ಕಿದ್ದಂತೆ ‌ಮಣಿಪಾಲ್ ಫೈನಾನ್ಸ್ ನಷ್ಟ ಘೋಷಣೆ ಮಾಡಿ ಬಾಗಿಲು ಮುಚ್ಚಿದಾಗ ಪ್ರಸಾದ್ ಕೆಲಸ ಕಳೆದುಕೊಂಡರು.ಸ್ವಲ್ಪ ಕಾಲ ಅವರಿಗೆ ಸರಿಯಾದ ಕೆಲಸ ಸಿಗಲಿಲ್ಲ. ಅದಕ್ಕೆ ಮೊದಲೇ ಮಂಗಳೂರಿನ ಬಿಜೈಯಲ್ಲಿ ಮನೆ ಕೊಂಡುಕೊಂಡಿದ್ದೆವು.ಸ್ವಲ್ಪ ಸಾಲ ಇತ್ತು.ಪ್ರತಿ ತಿಂಗಳು ಮೂರು ಸಾವಿರ ಕಂತು ತುಂಬಬೇಕಿತ್ತು.ಈ ಸಮಯದಲ್ಲಿ  ಮಗ ಅರವಿಂದ ಎರಡು ಮೂರು ವರ್ಷದ ಮಗು.
ನಾನು ಆರಂಭದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದೆನಾದರೂ ಮಗ ಹುಟ್ಟಿದಾಗ ಕೆಲಸ ಬಿಟ್ಟಿದ್ದೆ.
ಪ್ರಸಾದ್ ಗೆ ಕೆಲಸ ಹೋದಾಗ ನಾನು ಕೆಲಸಕ್ಕೆ ಸೇರಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಯತ್ನ ಮಾಡಿದೆ‌.
ಮಂಗಳೂರಿನ ಚಿನ್ಮಯ ಹೈಸ್ಕೂಲ್ ನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ದೊರೆಯಿತು. ಆದರೆ ಸಾಲದ ಹೊರೆ ಇದ್ದ ಕಾರಣ ಸಂತ ಅಲೋಶಿಯಸ್ ಸಂಜೆ ಕಾಲೇಜಿಗೆ ( ಹೈಸ್ಕೂಲ್ ವಿಭಾಗದಲ್ಲಿ ವಿಜ್ಞಾನ ಶಿಕ್ಷಕಿಯಾಗಿ) ಸೇರಿದೆ.
ಈಗ ಸಮಯದ ಹೊಂದಾಣಿಕೆ ಸಮಸ್ಯೆ ಅಯಿತು.ಬೆಳಗ್ಗೆ ಎಂಟರಿಂದ ಸಂಜೆ ಮೂರರವರೆಗೆ ಚಿನ್ಮಯ ಹೈಸ್ಕೂಲ್ ನಲ್ಲಿ ಕೆಲಸ .ಸಂಜೆ ಆರರಿಂದ ರಾತ್ರಿ ಒಂಬತ್ತರ ವರೆಗೆ ಸಂತ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಕೆಲಸ.ಸಂಜೆ ಮೂರು ಗಂಟೆಗೆ ಚಿನ್ಮಯ ಹೈಸ್ಕೂಲ್ ನಿಂದ ಬಂದು ಮಗನನ್ನು ಬೇಬಿ ಸಿಟ್ಟಿಂಗ್ ನಿಂದ ಕರೆದುಕೊಂಡು ಬಂದು ಊಟ ತಿಂಡಿ ತಿನಿಸಿ ನಿದ್ರೆ ಮಾಡಿಸಿ ಮನೆಯ ಅಡಿಗೆ ಊಟ ತಯಾರು ಮಾಡಿ ಮತ್ತೆ ಮಗನ್ನು ಎಬ್ಬಿಸಿ ಬಟ್ಟೆ ಬದಲಿಸಿ ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟು ಸಂತ ಅಲೋಶಿಯಸ್ ಕಾಲೇಜಿಗೆ ಆರು ಗಂಟೆ ಒಳಗೆ ತಲುಪಬೇಕಿತ್ತು.
ಈ ಸಂದರ್ಭದಲ್ಲಿ ಒಂದು ಟು ವೀಲರ್ ತೆಗೆದುಕೊಳ್ಳುವಂತೆ ನನಗೆ ಪ್ರಸಾದರ ಸೋದರತ್ತೆ ಕಾಂಚನದ ಅತ್ತೆ ಸಲಹೆ ನೀಡಿದರು ‌.ಅವರ ಸೊಸೆ ಬ್ಯಾಂಕ್ ಉದ್ಯೋಗಿಯಾಗಿದ್ದು ಅವರು ಕೈನೆಟಿಕ್ ನಲ್ಲಿ ಓಡಾಡುತ್ತಿದ್ದರು‌.
ಹಾಗಾಗಿ ನನಗೂ ಒಂದು ಗಾಡಿ ತೆಗೆದುಕೊಳ್ಳುವುದು ಸರಿ ಎನಿಸಿತು‌.ಹಾಗಾಗಿ ಬಜಾಜ್ ಸ್ಪಿರಿಟ್ ಎಂಬ ಟು ವೀಲರ್ ಅನ್ನು ತೆಗೆದುಕೊಂಡೆ..
ಚಿಕ್ಕ ವಯಸಿನಲ್ಲಿ ನನ್ನ ಸಣ್ಣಜ್ಜಿಯ ಮಗನ ಮನೆಯಲ್ಲಿ ಸೈಕಲ್‌ ಕಲಿತದ್ದು ಈಗ ಸಹಾಯಕ್ಕೆ ಬಂತು.ಹಾಗಾಗಿ ಗಾಡಿಯನ್ನು ಓಡಿಸಲು ಸುಲಭದಲ್ಲಿ ಕಲಿತೆ‌.ಒಂದು ತಿಂಗಳು ಒಬ್ಬಳೇ ಓಡಾಡಿ ಅಭ್ಯಾಸವಾದ ನಂತರ ‌ಮಗನನ್ನು ಕೂರಿಸಿಕೊಂಡು ಓಡಾಡಲು ಶುರು ಮಾಡಿದೆ‌‌.ನಿದಾನಕ್ಕೆ ಡಬಲ್ ರೈಡ್ ಕೂಡ ಅಭ್ಯಾಸವಾಯಿತು.
ಈ ನಡುವೆ ಮಗನನ್ನು ಸಂಜೆ ಬೇಬಿ ಸಿಟ್ಟಿಂಗ್ ಗೆ ಬಿಡುವ ಬದಲು ಒಬ್ಬ ಹುಡುಗಿಯನ್ನು ಮನೆಗೆ ಬಂದು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೆ.ಅವಳು ಮಗ ಹಗಲಿ‌ನ ಹೊತ್ತು ಇರುತ್ತಿದ್ದ ಬೇಬಿ ಸಿಟ್ಟಿಂಗ್ / ಪ್ರಿಸ್ಕೂಲ್ ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.
ಹಾಗಾಗಿ  ಮೂರು ಗಂಟೆಗೆ ಚಿನ್ಮಯ ಶಾಲೆ ಬಿಟ್ಟ ನಂತರ ಮಗ ಮತ್ತು ಅ ಹುಡುಗಿ ಇಬ್ಬರನ್ನು ಗಾಡಿಯಲ್ಲಿ ಕೂರಿಸಿ ಮನೆಗೆ ಕರೆ ತರುತ್ತಾ ಇದ್ದೆ .
ಒಂದು ದಿನ ಹೀಗೆ  ಒಳಗಿನ  ಸಣ್ಣ ರಸ್ತೆಯಲ್ಲಿ  ಬರುತ್ತಿರುವಾಗ ಎದುರಿನಿಂದ  ಡ್ರೈವಿಂಗ್ ಕಲಿಯುತ್ತಿರುವವರ ಕಾರು ರಾಂಗ್ ಸೈಡಿನಿಂದ ಬಂತು.ಆಗ ಅದನ್ನು ತಪ್ಪಿಸುವ ಸಲುವಾಗಿ ತೀರಾ ಬದಿಗೆ ಹೋಗಿ ಸಮತೋಲನ ತಪ್ಪಿ ಬಿದ್ದೆ.ಮಗನನ್ನು ಮುಂದೆ ಕೂರಿಸಿದ್ದು ಅವನ ಎದುರುಗಡೆ ಅವನ ಊಟದ ಬ್ಯಾಗ್ ಇತ್ತು‌.ಅದು ಅವನ ಕಣ್ಣಿನ ಕೆಳಭಾಗಕ್ಕೆ ತಾಗಿ ದೊಡ್ಡ ಗಾಯವಾಗಿ ರಕ್ತ ಸುರಿಯತೊಡಗಿತು.ಮಗನ ತಲೆ ನನ್ನ ಹೊಟ್ಟೆಗ ತಾಗಿ ನನಗೂ ತುಂಬಾ ನೋವಾಗಿ ತಲೆ ಸುತ್ತುತ್ತಾ ಇತ್ತು.ಹಿಂದೆ ಕುಳಿತಿದ್ದ ಸಹಾಯಕಿ ಹುಡುಗಿಗೆ ಕಾಲಿಗೆ ಏಟು ಬಿದ್ದಿತ್ತು. ಆದರೆ ನನಗಿಂಗ ಒಳ್ಳೆಯ ಸ್ಥಿತಿ ಯಲ್ಲಿ ಇದ್ದಳು.ಅವಳು ಎದ್ದು ಮಗನನ್ನು ಎತ್ತಿಕೊಂಡಳು‌.ಕಾರಿನವರು ಹಿಂದೆ ನೋಡದೆ ಒಂದು ಕ್ಷಣ ಕೂಡ ನಿಲ್ಲಿಸದೆ ಹೊರಟು ಹೋಗಿದ್ದರು‌.ನಾವು ಬಿದ್ದಲ್ಲಿ ಸಮೀಪವೇ ಒಂದು ಸಣ್ಣ ತೊರೆ ಇತ್ತು.ಅದರ ಆ ಕಡೆಗೆ ಒಂದು ಮನೆ ಇತ್ತು.ನನ್ನ ‌ಮಗನ ಅಳು ಕೇಳಿದ ಅವರು ಕಾಲು ಪಾಪು( ಮರದ ಸಂಕ) ದಾಟಿ ಓಡಿ ಬಂದರು.ಅದು ತನಕ ಅವರ ಪರಿಚಯ ನನಗಿರಲಿಲ್ಲ.ಅವರು ಮಗನ ಕಣ್ಣಿನ ಕೆಳಭಾಗದ ಗಾಯ ನೋಡಿ ಕೂಡಲೇ ಹತ್ತಿರದ ವಿನಯ ಕ್ಲಿನಿಕ್ ಹಾಸ್ಪಿಟಲ್ ಗೆ ಹೋಗಲು ತಿಳಿಸಿದರು‌.ಆಗ ನಾನು ತುಸು ಹಿಂದೆ ಮುಂದೆ ನೋಡಿದೆ‌.ಯಾಕೆಂದರೆ ನನ್ನ ಬಳಿ ಹತ್ತು ಹದಿನೈದು ರುಪಾಯಿ ಮಾತ್ರ ಇತ್ತು ಅಷ್ಟೇ. ಅದನ್ನು ಅರ್ಥ ಮಾಡಕೊಂಡ ಪ್ರೇಮನಾಥ್ ( ಹೆಸರು ಸರಿಯಾಗಿ ನೆನಪಿಲ್ಲ, ಪ್ರೇಮನಾಥ್ ಎಂದು ನೆನಪು) ಅವರು ಅವರ ಮನೆಗೆ ಹೋಗಿ ಐದುನೂರು ರುಪಾಯಿ ನನಗೆ ತಂದು ಕೊಟ್ಟು ಒಂದು ಆಟೊ ತಂದು ನಮ್ಮ ಮೂವರನ್ನು ಆಟೊ ಹತ್ತಿಸಿ ಆಸ್ಪತ್ರೆಗೆ ಕಳಹಿಸಿಕೊಟ್ಟರು.
ಮಗನಿಗೆ ಸ್ಟಿಚ್ ಹಾಕಬೇಕಾಯಿತು‌.ನನಗೆ ಮತ್ತು ಸಹಾಯಕ ಹುಡುಗಿಗೆ ಪ್ರಥಮ ಚಿಕಿತ್ಸೆ ನೀಡಿದರುನಂತರ ಆಸ್ಪತ್ರೆ ಯಿಂದ ನಾನು ಹಸ್ಬೆಂಡ್ ಕೆಲಸ ಮಾಡು ಆಫೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದೆ( ಆಗಿನ್ನೂ ಮೊಬೈಲ್ ನಮ್ಮ ಬಳಿ ಇರಲಿಲ್ಲ) ಅವರು ಬಂದರು .ಮತ್ತೆ ಮನೆಗೆ ಬಂದೆವು.ಮರುದಿನವೇ ಪ್ರೇಮನಾಥ್ ಅವರ ಮನೆಗೆ ಹೋಗಿ ಅವರು ಕೊಟ್ಟ ದುಡ್ಡನ್ನು ಹಿಂದಿರುಗಿಸಿ ಧನ್ಯವಾದಗಳನ್ನು ತಿಳಿಸಿದೆ.ಆಗ ಅವರು ದುಡ್ಡನ್ನು ಇಷ್ಟು ಅರ್ಜೆಂಟಲ್ಲಿ ಕೊಡಬೆಕಾಗಿರಲಿಲ್ಲ, ಥ್ಯಾಂಕ್ಸ್ ಯಾಕೆ? ನಾವು ಮನುಷ್ಯರು ಪರಸ್ಪರ ಸಹಾಯಕ್ಕೆ ಬಾರದಿದ್ದರೆ ಮನುಷ್ಯರೆಂದು ಕರೆಯಲು ನಾಲಾಯಕ್ ಆಗಿ ಬಿಡುತ್ತೇವೆ‌‌.ಸಧ್ಯ  ನಿಮಗೆ‌ ಮೂವರಿಗೆ ದೊಡ್ಡ ಏಟೇನೂ ಬಿದ್ದಿಲ್ಲವಲ್ಲ ದೇವರ ದಯೆ.ಮುಂದೆ ಇನ್ನೂ ಜಾಗ್ರತೆಯಿಂದ ಗಾಡಿ ಓಡಿಸಿ ಎಂದು ಹೇಳಿದರು‌.ಅವರ ಮನೆ ಮಂದಿ ಕೂಡ ನಮ್ಮ ಆರೋಗ್ಯ ವಿಚಾರಿಸಿ ಕಾಫಿ ಮಾಡಿ ಕೊಟ್ಟರು‌.ಅವರು ಕೊಟ್ಟ ಕಾಫಿ ಅವರ ಮನಸ್ಸಿನಂತೆಯೇ ತುಂಬಾ ರುಚಿಯಾಗಿತ್ತು.ಅದರ ಕೊನೆಯ ತೊಟ್ಟನ್ನು ಕೂಡ ಕುಡಿದು ಖಾಲಿ ಲೋಟ ಇಟ್ಟು ಮತ್ತೊಮ್ಮೆ ಧನ್ಯವಾದ ಹೇಳಿ ಕೈಮುಗಿದು ಹನಿ ಗಣ್ಣಿನಿಂದ ಹಿಂದಿರುಗಿದೆ.
ಅಂದಿನ ಐದುನೂರು ರುಪಾಯಿ ಇಂದಿನ ಹತ್ತು ಸಾವಿರ ರುಪಾಯಿ ಗಿಂತ ಹೆಚ್ಚಿನ ಮೌಲ್ಯ ಹೊಂದಿತ್ತು.ಅದು ತನಕ ನೋಡದ ತೀರಾ ಅಪರಿಚಿತಳಾದ ನನಗೆ  ಅವರಾಗಿಯೇ ತಂದು ಕೊಟ್ಟು ಆಟೋ ತಂದು ನಮ್ಮನ್ನು ಆಸ್ಪತ್ರೆ ಗೆ ಕಳಹಿಸಿಕೊಟ್ಟ ಅವರ ಮಾನವೀಯತೆಯನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ .ಮುಂದಿನ ಬಾರಿ ಊರಿಗೆ ಹೋದಾಗ ಅವರ ಮನೆಗೆ ಹೋಗಿ ಬರಬೇಕು ಎಂದು ಕೊಂಡಿರುವೆ.ಅವರು ಅಲ್ಲೇ ಇದ್ದಾರಾ ? ಅದು ಅವರ ಸ್ವಂತ ಮನೆಯಾ ? ಬಾಡಿಗೆಗೆ ಇದ್ದರಾ ? ಯಾವುದೊಂದು ಮಾಹಿತಿಯೂ ನನಗೆ ತಿಳಿಯದು.ಆದರೂ ಅವರನ್ನು ಭೇಟಿ ಮಾಡಲು ಯತ್ನ ಮಾಡುವೆ‌.ಅವರು‌ ಮತ್ತು ಅವರ ಕುಟುಂಬದವರು ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಹಾರೈಸುವೆ.
© ಡಾ.ಲಕ್ಷ್ಮೀ ಜಿ ಪ್ರಸಾದ

Sunday, 6 May 2018

ಬದುಕೆಂಡ ಬಂಡಿಯಲಿ‌..5

ಕಳೆದ  ವರ್ಷ  ನಮ್ಮನೆಲಿ ನಡೆದ ಮಾತುಕಥೆ :-
ಪ್ರಾಣೇಶ್ ಅವರ ಸಂದರ್ಶನ ನೋಡುತ್ತಾ ಇದ್ದೆವು
ನೋಡುತ್ತಾ ಇದ್ದ ಮಗ ನಿನ್ನನ್ನು ಕರೆದರೆ ಹೋಗುತ್ತೀಯಮ್ಮ ಕೇಳಿದ ದೊಡ್ಡಕ್ಕೆ ನಗಾಡಿ "ಕರೆದರೆ ತಾನೆ ? ನನ್ ಯಾಕ್ ಕರೀತಾರೆ ? ನಾನೇನನ್ನ ಮಾತಾಡೊದು ? ಎಲ್ಲ ನನ್ನ ಭೂತಗಳ ಫೋಟೋ ವಿಡಿಯೋ ಹಾಕ್ಬೇಕಷ್ಟೆ ಅಂತ ಹೇಳಿದೆ ಅಲ್ಲದೆ ಅಳೋಕೆ ಕಾರಣಾನೆ ಇಲ್ಲವಲ್ಲ ಏನಕ್ಕೆ ಅಳೋದು? ಕೇಳಿದೆ ಆಗ ಅವನು " ಅಯ್ಯೋ ನನ್ನ ಮಗ ಓದುದಿಲ್ಲ ಓದುದಿಲ್ಲಾ ಅಂತ ಅತ್ತು ಬಿಡು " ಎದೆ ಬಡಿದುಕೊಂಡು ಹೊರಳಾಡಿ ಅಳು " ಎಂದು ಉಪಾಯ ಹೇಳಿಕೊಟ್ಟ ಜೊತೆಗೆ ಸದಾ ಓದು ಎಂದು ಪೀಡಿಸುವ ನಮಗೆ ಬತ್ತಿ ಇಟ್ಟ

ಬದುಕೆಂಬ ಬಂಡಿಯಲಿ..4 ಹುಡುಗಿಯರಿಗೆ ವಾಂತಿ ಕೂಡ ಮದುವೆ ಆದ್ಮೇಲೇ ಬರ್ಬೇಕಾ ?© ಡಾ.ಲಕ್ಷ್ಮೀ ಜಿ ಪ್ರಸಾದ

ಹುಡುಗಿಯರಿಗೆ ವಾಂತಿ ಕೂಡ ಮದುವೆ ಆದ್ಮೇಲೇ   ಬರ್ಬೇಕಾ ?© ಡಾ.ಲಕ್ಷ್ಮೀ ಜಿ ಪ್ರಸಾದ

ನಿನ್ನೆ ನೆಲಮಂಗಲದಿಂದ ಮನೆಗೆ ಬರ್ತಾ ಇರಬೇಕಾದರೆ ಬಸ್ಸಿನಲ್ಲಿ ಹದಿನೆಂಟು ಇಪ್ಪತ್ತರ ಎಳೆಯ ತರುಣಿ ನನ್ನ ಪಕ್ಕದಲ್ಲಿ ನಿಂತಿದ್ದಳು
ಸ್ವಲ್ಪ ದೂರ ಹೋಗುವಷ್ಟರಲ್ಲಿ ಅವಳಿಗೆ ವಾಂತಿ ಬರುವ ಹಾಗೆ ಆಯ್ತು .ನಾನು ಅದನ್ನು ಗಮನಿಸಿ ಅವಳಿಗೆ ಸೀಟು ಬಿಟ್ಟು ಕೊಟ್ಟೆ‌.ನನ್ನ ಬ್ಯಾಗ್ ನಲ್ಲಿ ಒಂದು ಪ್ಲಾಸ್ಟಿಕ್ ಕವರ್ ಇತ್ತು.ಅದನ್ನು ಕೂಡ ಕೊಟ್ಟೆ‌.ಅವಳು ಅದರಲ್ಲಿ ವಾಂತಿ ಮಾಡಿದಳು.ಆಗ ಅವಳ ಜೊತೆಗೆ ಬಂದಿದ್ದ ಸಂಬಂಧಿಕರು ಯಾರೋ ಅವಳ ತಾಯಿಯಲ್ಲಿ ಏನೇ ವನಜ ,ನಿನ್ನ ಮಗಳು ವಾಂತಿ ಮಾಡ್ತಿದಾಳೆ,ಹುಷಾರು ಕಣೇ ಎಂದು ಹೇಳಿದರು.ಆ ತಾಯಿ ಮಗಳಿಗೆ ನಾಚಿಕೆಯಿಂದ ಮುಖ ಕೆಂಪೇರಿ ತಲೆ ತಗ್ಗಿಸಿದರು.ಮಗಳಿಗಂತೂ ಅಳುವೇ ಬಂತು.ಯಾಕಮ್ಮ ಅಳ್ತೀಯ ಅಂತ ಕೇಳಿದೆ.ಅದಕ್ಕೆ ಅವಳು ಬಸ್ಸು ಕಾರಿನಲ್ಲಿ ಪ್ರಯಾಣಿಸಿದರೆ ನನಗೆ ವಾಂತಿಯಾಗುತ್ತದೆ .ಅದಕ್ಕೆ ಇವರೆಲ್ಲ ಏನೇನೋ ಹೇಳ್ತಾರೆ ಅಂತ ಹೇಳಿದಳು  "  ಈ ಸಮಸ್ಯೆಗೆ ಟ್ರಾವೆಲಿಂಗ್ ಸಿಕ್ ನೆಸ್ ಅಂತಾರೆ ,ಬಸ್ ಹತ್ತುವ ಅರ್ಧ ಗಂಟೆ ಮೊದಲೇ ಒಂದು ಎಮಿಸೆಟ್ ಇಲ್ಲವೇ ಡೋಮಸ್ಟಾಲ್  ಟ್ಯಾಬ್ಲೆಟ್ ತಗೋ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗುತ್ತದೆ‌. ಯಾರು ಏನು ಬೇಕಾದರೂ ಹೇಳಲಿ ತಲೆಕೆಡಿಸಿಕೊಳ್ಳಬೇಡ,ಚೆನ್ನಾಗಿ ಓದಿ ದೊಡ್ಡ ಸ್ಥಾನವನ್ನು ಪಡೆ" ಎಂದು ಹೇಳಿದೆ

ಹೌದು! ನಮ್ಮಲ್ಲಿ ಮದುವೆಗೆ ಮುಂಚೆ ಹುಡುಗಿಯರಿಗೆ ವಾಂತಿ ಕೂಡ ಬರುವಂತಿಲ್ಲ‌!
ನಾನು ಆಗಷ್ಟೇ ಹತ್ತನೇ ತರಗತಿ ಮುಗಿಸಿ ದೂರದ ಮಂಗಳೂರಿನ ಸರ್ಕಾರಿ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜ್) ಪಿಯುಸಿಗೆ ಸೇರಿದ್ದೆ.ಅದು ತನಕ ಬಸ್ಸಿನಲ್ಲಿ ಓಡಾಡಿ ಅನುಭವ ಇರಲಿಲ್ಲ. ಅದಕ್ಕೂ ಮೊದಲು ಯಾರದಾದರೂ ನೆಂಟರ ಮನೆಗೆ ಬಸ್ಸಿನಲ್ಲಿ ಹೋಗಬೇಕಾಗಿ ಬರುವಾಗ  ನನಗೆ ಬಸ್ಸಿನಲ್ಲಿ ವಾಂತಿ ಆಗುತ್ತಿತ್ತು‌.ಆದರೆ ಆಗ ನಾನು ಚಿಕ್ಕ ಹುಡುಗಿ.ಯಾರೂ ನನ್ನ ಮೇಲೆ ಸಂಶಯದ ನೋಟ ಬೀರಿರಲಿಲ್ಲ.ಪಿಯುಸಿಗೆ ಹೋಗುವಾಗ ಬಸ್ಸಿನ ಪ್ರಯಾಣದಲ್ಲಿ ಕೆಲವೊಮ್ಮೆ ನನಗೆ ವಾಂತಿಯಾಗುತ್ತಿತ್ತು.ಇದನ್ನು ನೋಡಿದ ಕೆಲವು ನೆಂಟರು ನನ್ನ ತಾಯಿಯ ಬಳಿ ಏನೇನೋ ಹೇಳಿದ್ದರಂತೆ.ಆದರೆ ನನ್ನ ಅಮ್ಮನಿಗೆ ನನ್ನ ಬಗ್ಗೆ ಪೂರ್ಣ ವಿಶ್ವಾಸವಿತ್ತು.ಹಾಗಾಗಿ ಅಮ್ಮ  ತಲೆಕೆಡಿಸಿಕೊಳ್ಳಲಿಲ್ಲ.
ನಾನು ಸೆಕೆಂಡ್ ಪಿಯುಸಿಗೆ ಬರುವಷ್ಟರಲ್ಲಿ ದೊಡ್ಡಮ್ಮನ ಮಗಳು ತಂಗಿ ರಾಜು( ರಾಜೇಶ್ವರಿ,ಇವಳು ನನಗೆ ಒಳ್ಳೆಯ ಗೆಳತಿ ಕೂಡ ಆಗಿದ್ದಳು) ಅದೇ ಕಾಲೇಜಿಗೆ ಪ್ರಥಮ ಪಿಯುಸಿಗೆ ಸೇರಿದಳು.ನಾವಿಬ್ಬರೂ ಅಜ್ಜನ ಮನೆಯಿಂದ ಕಾಲೇಜಿಗೆ ಹೋಗಿ ಬರಲಾರಂಭಿಸಿದೆವು. ಈಗ ನಾನು ಬಸ್ಸಿನ ಪಯಣಕ್ಕೆ ಹೊಂದಿಕೊಂಡಿದ್ದೆ .ಆದರೂ ಯಾವಾಗಾದರೊಮ್ಮೆ ಬಸ್ಸಿನಲ್ಲಿ ವಾಂತಿ ಆಗುತ್ತಿತ್ತು.( ಈಗಲೂ ದೂರದ ಬಸ್ ಪಯಣ ನನಗೆ ಹಿಡಿಸುವುದಿಲ್ಲ ,ಅದರಲ್ಲೂ ಬೆಂಗಳೂರಿನಿಂದ ಮಂಗಳೂರು ಬಸ್ಸಿನಲ್ಲಿ ಹೋಗುವುದೆಂದರಡ ಬಹಳ ಹಿಂಸೆಯಾಗುತ್ತದೆ.ಎರಡೆರಡು ಎಮಿಸೆಟ್ ಮಾತ್ರೆಗಳನ್ನು ತೆಗೆದುಕೊಂಡರೂ ಘಟ್ಟ ಹತ್ತಿ ಇಳಿಯುವಾಗ ವಾಂತಿ ಆಗುತ್ತದೆ .ಹಾಗಾಗಿ ನಾನು ಸಾಮಾನ್ಯವಾಗಿ ರೈಲಿನಲ್ಲಿ ಓಡಾಡುತ್ತೇನೆ.ತೀರಾ ಅನಿವಾರ್ಯವಾದರೆ ವಿಮಾನವನ್ನು ಆಶ್ರತಿಸುತ್ತೇನೆಯೇ ಹೊರತು ದೂರದೂರಿಗೆ ಬಸ್ಸಿನಲ್ಲಿ ಪ್ರಯಾಣಿಸುವುದಿಲ್ಲ)
ಒಂದು ದಿನ ಬಸ್ಸಿನಲ್ಲಿ ವಾಂತಿ ಆರಂಭವಾದದ್ದು ಮನೆಗೆ ಬಂದ ಮೇಲೂ ಮುಂದುವರಿಯಿತು ‌.ಅಜ್ಜಿ ಮಾಡಿ ಕೊಟ್ಟ ಓಮದ ಕಷಾಯ ಮತ್ತಿತರ ಮನೆ ಮದ್ದಿಗೂ ನಿಲ್ಲಲಿಲ್ಲ. ಆಗ ಒಬ್ಬ ನೆಂಟರು ವಿದ್ಯಾ ( ನನ್ನ ಮನೆಯಲ್ಲಿ ಕರೆಯುವ ಹೆಸರು ) ಬಸುರಿ ತರ ವಾಂತಿ ಮಾಡುತ್ತಾಳೆ ಎಂದು ನನ್ನ ಎದರೇ ಹೇಳಿದರು‌.ಆಗಲೂ ನನಗೆ ಅವರ ಕುಹಕದ ಮಾತು ಅರ್ಥವಾಗಿರಲಿಲ್ಲ. ಆದರೆ ಅದನ್ನು ಕೇಳಿಸಿಕೊಂಡ   ನನ್ನ ಅಜ್ಜಿ ಡಾಕ್ಟರ್ ಹತ್ತಿರ ತೋರಿಸಲು ಹೇಳಿದರು‌.ನಮ್ಮ ಕುಟುಂಬದ ಡಾಕ್ಟರ್ ಬಳಿಗೆ ದೊಡ್ಡಮ್ಮನ ಮಗ ಅಣ್ಣನ ಜೊತೆಗೆ ಹೋದೆ‌.ಆಗ ಪರೀಕ್ಷಿಸಿದ ಡಾಕ್ಟರ್ ಏನೋ ಒಂದು ಕುಹಕದ ನಗು ( ಅವರು ಸಹಜವಾಗಿಯೇ ನಕ್ಕದ್ದು ನನಗೆ ಹಾಗನಿಸಿತೇನೋ ಗೊತ್ತಿಲ್ಲ) ಬೀರಿ ಒಂದು ಔಷದದ  ( Heparil ಎಂದೇನೋ ಬರೆದಿದ್ದ ನೆನಪು )  ಬಾಟಲ್ ನೀಡಿ ದಿನಕ್ಕೆ ಎರಡು ಹೊತ್ತು ಎರಡೆರಡು ಚಮಚ ನೀರಿಗೆ ಬೆರೆಸಿ ಕುಡಿಯಲು ಹೇಳಿದರು‌.ಆ ಮೇಲೆ ಅಣ್ಣನ ಹತ್ತಿರ ಏನೋ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದರಂತೆ.
ಅಣ್ಣ ಬಂದು ಅದನ್ನು ಮನೆಯಲ್ಲಿ ಹೇಳಿದ. ಅಜ್ಜನ ಮನೆ ಮಂದಿ ಅದನ್ನು ಇನ್ನೇನೋ ಅರ್ಥೈಸಿಕೊಂಡರು.
ನನ್ನ ಅಜ್ಜಿ ಅಮ್ಮನಲ್ಲಿ " ಅವಳು ಕಾಲೇಜಿಗಂತ ಹೋಗಿ  ಏನು ಮಾಡಿಕೊಂಡಿದಾಳೋ ಏನೋ? ಎಂದು ಗಾಭರಿಯಲ್ಲಿ ನುಡಿದರಂತೆ.ಆಗ ಅಮ್ಮ ನಿರ್ಧಾರಾತ್ಮಕವಾಗಿ ಇಲ್ಲ ವಿದ್ಯಾ ಅಂತಹವಳಲ್ಲ.ಅವಳು ಕಳೆದ ವಾರ ಹೊರಗೆ ಕುಳಿತಿದ್ದಾಳೆ( ಪೀರಿಯಡ್ ಆಗುವುದನ್ನು ಹೆರ ಕೂಪದು,/ ಹೊರಗೆ ಕುಳಿತುಕೊಳ್ಳುವುದು ಎಂದು ನಮ್ಮ ಭಾಷೆಯಲ್ಲಿ ಹೇಳುತ್ತಾರೆ) ಎಂದು ಹೇಳಿದರು. ಆಗ ಅಜ್ಜಿ ಅವಳು ಸುಮ್ಮನೇ ಹೊರಗೆ ಕುಳಿತ ನಾಟಕ ಮಾಡಿರಬಹುದಲ್ಲ ಎಂದು ಕೇಳಿದರಂತೆ.
ಇರೋದೊಂದು ಸಣ್ಣ ಮನೆ‌.ಪ್ಯಾಡ್ ಗೀಡ್ ಎಂದರೆ ಏನೆಂದೇ ಗೊತ್ತಿಲ್ಲದ ಕಾಲ.ಎಷ್ಟೇ ತೊಳೆದರೂ ಕಲೆ ಉಳಿಯುವ ಒಂದಿನಿತು ವಾಸನೆ ಬರುವ ಒದ್ದೆ  ಬಟ್ಟೆಯನ್ನು ಒಣಗಿಸಲು ಕೂಡ ಸರಿಯಾದ ಜಾಗವಿಲ್ಲ.ಹಾಗಾಗಿ ಮನೆಯ ಗೋಡೆಯ ಕತ್ತಲಿನ ಮೂಲೆಗೆ ಕಟ್ಟಿದ ಬಳ್ಳಿಗೆ ನೇತು ಹಾಕುವುದೊಂದೇ ದಾರಿ ಉಳಿದಿರುವುದು.ಹಾಗಾಗಿ ಅದನ್ನು ಅಮ್ಮ ನೋಡಿರುವುದು ಸಾಮಾನ್ಯ ವಿಚಾರ‌.ಆ ತಿಂಗಳು ಕೂಡ ಅದನ್ನು ನೋಡಿದ್ದ ಅಮ್ಮ"  ಇಲ್ಲ ಅವಳ ಬಟ್ಟೆಗೆ ಕಲೆ ಆಗಿದ್ದು ಕೂಡ ನಾನು ನೋಡಿದ್ದೇನೆ.ಅವಳ ಆರೋಗ್ಯ ಏನೋ ಹಾಳಾಗಿರಬೇಕು.ಅಜೀರ್ಣ ಆಗಿರಬೇಕು ಎಂದು ದೃಢವಾಗಿ ಹೇಳಿದರು.ನಂತರ ಅಜೀರ್ಣಕ್ಕೆ ಕೊಡುವ ಮನೆ ಮದ್ದು ನೀಡಿದರು.ಅರವಿಂದಾಸವವನ್ನು ಎರಡು ಹೊತ್ತು ಎರಡೆರಡು ಚಮಚ ಒಂದು ವಾರ ಕುಡಿಯಲು ಹೇಳಿದರು‌.ನನ್ನ ವಾಂತಿಯ ಸಮಸ್ಯೆ ದೂರವಾಯಿತು‌.ಕ್ರಮೇಣ ಬಸ್ಸು ಪ್ರಯಾಣ ಅಭ್ಯಾಸವಾಗಿ ಬಸ್ಸಿನಲ್ಲಿ ವಾಂತಿ ಆಗುವುದು ಕೂಡ ನಿಂತಿತು‌.
ಇಷ್ಟೆಲ್ಲಾ ಹಿಂದಿನಿಂದ ಅಮ್ಮನಿಗೆ ಅನೇಕರು ಹೇಳಿದರೂ ಕೂಡ ಅಮ್ಮ ನನ್ನ ಮೇಲಿನ ನಂಬಿಕೆ ಕಳೆದುಕೊಳ್ಳಲಿಲ್ಲ.ನನ್ನನ್ನು ಹಿಂದಿನಿಂದ ಕುಹಕದಿಂದ ಅಡಿಕೊಳ್ಳುತ್ತಿದ್ದಾರೆ ಎಂಬುದನ್ನು ಕೂಡ ನನಗೆ ತಿಳಿಸಲಿಲ್ಲ.ಸದಾ ಓದಿನ ಕಡೆ ಗಮನ ಕೊಡು ,ಒಳ್ಳೆಯ ಮಾರ್ಕ್ಸ್ ತೆಗೆದು ದೊಡ್ಡ ಕೆಲಸಕ್ಕೆ ಹೋಗಬೇಕು ಎಂದು ಹುರಿದುಂಬಿಸುತ್ತಾ ಇದ್ದರು‌.ತುಂಬಾ ಜಾಗರೂಕತೆಯಿಂದ ಇರಬೇಕು ಎಂದು ಹೇಳಿ ಆಗಾಗ ಎಚ್ಚರಿಕೆ ನೀಡುತ್ತಾ ಇದ್ದರು‌.ಅಮ್ಮನ ನಂಬಿಕೆಯನ್ನು ನಾನು ಹಾಳು ಮಾಡಲಿಲ್ಲ ಕೂಡ ‌.
ಇದೆಲ್ಲವನ್ನೂ ನನ್ನ ಮದುವೆಯ ನಂತರ ಯಾವಾಗಲೋ ಮಾತಿನ ನಡುವೆ ಅಮ್ಮ ನನಗೆ ತಿಳಿಸಿದ್ದರು‌.
ಸರಿ,ನಾನು ಪಿಯುಸಿಗೆ ಹೋದದ್ದು 1988-89 ರಲ್ಲಿ. ಇದಾಗಿ ಮೂರು ದಶಕಗಳೇ ಕಳೆದಿವೆ‌.ಆದರೆ ವಾಂತಿ ಮಾಡಿದರೆ ಹುಡುಗಿಯರನ್ನು ಸಂಶಯದಿಂದ ನೋಡುವ ಸಮಾಜದ ರೀತಿ ಇನ್ನೂ ಬದಲಾಗಿಲ್ಲ ಎಂದು ನಿನ್ನೆ ಅರಿವಾಯಿತು ನನಗೆ‌.ಹುಡುಗಿಯರಿಗೆ ವಾಂತಿ ಕೂಡ ಬರುವಂತಿಲ್ಲವೇ ? ಈ ಸಮಾಜ ಯಾವಾಗ ಬದಲಾಗುತ್ತದೆ ? ನನಗಂತೂ ಗೊತ್ತಾಗುತ್ತಿಲ್ಲ.
© ಡಾ.ಲಕ್ಷ್ಮೀ ಜಿ ಪ್ರಸಾದ

Thursday, 5 April 2018

ದೊಡ್ಡವರ ದಾರಿ :55 -ದಿಟ್ಟ ನಿಲುವಿನ ಟಿ ಜಿ ರಾಜಾರಾಮ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿ :55 -ದಿಟ್ಟ ನಿಲುವಿನ  ಟಿ ಜಿ ರಾಜಾರಾಮ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ
ಸಾಮಾನ್ಯವಾಗಿ ನಾವು ಅನ್ಯಾಯ ನಡೆದಾಗ ಕೂಡ ಸಹಿಸಿಕೊಂಡು ಮೌನವಾಗಿ ಬಿಡುತ್ತೇವೆ.ಯಾಕೆಂದರೆ ನ್ಯಾಯವನ್ನು ಪಡೆಯುವುದು ಸುಲಭದ ದಾರಿಯಲ್ಲ.ನ್ಯಾಯಕ್ಕಾಗಿ ಅಲೆದಾಡುವುದು ಅನ್ಯಾಯವಾದದ್ದಕ್ಕಿಂತ ಹೆಚ್ಚಿನ ಕಷ್ಟ ಆಗುತ್ತದೆ ಎಂಬುದು ನ್ಯಾಯಕ್ಕಾಗಿ ಹೋರಾಡುವ ನನ್ನ ಸ್ವಂತ ಅನುಭವ.
ಆದರೂ ವೈಯುಕ್ತಿಕವಾಗಿ ತೀರಾ ಅನ್ಯಾಯವಾದಾಗ ನಾವು ಹೋರಾಡುತ್ತೇವೆ.ಹೆಚ್ಚಿನವರೂ ಅಲೆದಾಟ ಸಾಕಾಗಿ  ಅರ್ಧದಲ್ಲಿಯೇ ಕೈಬಿಡುತ್ತಾರೆ.ಯಾಕೆಂದರೆ ಇಂದು ನ್ಯಾಯ ಪಡೆಯಲು ಕೂಡ ಅಷ್ಟೇ ಪರಿಶ್ರಮ ಪಡಬೇಕಾಗುತ್ತದೆ.
ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರ ಸಂಖ್ಯೆ ತೀರಾ ಕಡಿಮೆ‌.ಅನ್ಯಾಯ ನಡೆದಾಗ ಜನರ ಮುಂದೆ ಎರಡು ದಾರಿಗಳು ಇರುತ್ತವೆ‌.ಒಂದು ಅನ್ಯಾಯ ಮಾಡಿದವರ ವಿರುದ್ಧ ತಾನೇ ಹೋರಾಡುವುದು‌.ಇಲ್ಲಿ ಅಂತಹವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ.ಎರಡನೆಯದು ನ್ಯಾಯಾಂಗ ಆಧರಿತ ಹೋರಾಟ‌.ಪೋಲಿಸರಿಗೆ ದೂರು ಕೊಡುವುದು,ನಂತರ ನ್ಯಾಯಾಲಯದಲ್ಲಿ ಹೋರಾಡುವುದು‌.
ಇಲ್ಲಿ ರಾಜಾರಾಮ ಭಟ್ ಈ ಎರಡನೆಯ ದಾರಿಯನ್ನು ಆಯ್ಕೆ ಮಾಡಿಕೊಂಡವರು‌.
ನಡೆದ ವಿಚಾರವನ್ನು ಸಂಕ್ಷಿಪ್ತವಾಗಿ ಹೇಳಿ ಬಿಡುತ್ತೇನೆ.
ಬಂಟ್ವಾಳ ತಾಲೂಕಿನ ಕೈರಂಗಳದಲ್ಲಿ ಒಂದು ಗೋಶಾಲೆಯಲ್ಲಿ ಕಟ್ಟಿ ಮಲೆನಾಡು ಗಿಡ್ಡ ಮೊದಲಾದ ಅಪರೂಪದ ತಳಿಯ ಗೋವುಗಳ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ‌.ಇದರ ವ್ಯವಸ್ಥಾಪಕರು ರಾಜಾರಾಮ ಭಟ್ ಅವರು‌.
ಇಲ್ಲಿನ ಗೋಶಾಲೆಯಿಂದ ಇದಕ್ಕೆ ಮೊದಲೇ ಎರಡು ಭಾರಿ ಹಸುಗಳನ್ನು ಕದ್ದೊಯ್ದಿದ್ದಾರೆ.ಈ ಬಾರಿ ಇಲ್ಲಿ ನಡೆದದ್ದು ಕೇವಲ ಗೋವುಗಳ ಕಳ್ಳತನವಲ್ಲ .
ಈ ಭಾರಿ ತಲವಾರು ತೋರಿಸಿ ಬಲವಂತವಾಗಿ ಗೋವನ್ನು ಎತ್ತಿಕೊಂಡು ಹೋದದ್ದಲ್ಲದೆ ಇನ್ನೂ ಬರುತ್ತೇವೆ ಸಾಧ್ಯವಾದರೆ ತಡೆಯಿರಿ ಎಂದು ಪಂಥಾಹ್ವಾನ ಹಾಕಿದ್ದಾರೆ‌.
ಕಳ್ಳತನ ಹೇಡಿಗಳ ಕಾರ್ಯ .ಅದರೆ ಇದು ಬಹಳ ದೌರ್ಷ್ಟ್ಯದ ಕೆಲಸ.ಇಂದು ತಲವಾರು ತೋರಿಸಿ ಸಾಧ್ಯವಾದರೆ ತಡೆಯಿರಿ ಎಂದು ಪಂಥಾಹ್ವಾನ ಮಾಡಿ  ಸಂರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಯಿಂದ ಬಲವಂತವಾಗಿ ಎತ್ತಿಕೊಂಡು ಹೋದವರು ಮುಂದೆ ಮನೆಯ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗಲಾರರೇ ? ಇದು ನನ್ನ ಆತಂಕ ಕೂಡ.
ಇಲ್ಲಿ ನಡೆದ ಗೋ ಕಳ್ಳತನದ ವಿರುದ್ಧ ಪೋಲಿಸರಿಗೆ ಅಮೃತ ಧಾರಾ ಗೋಶಾಲೆಯ ವ್ಯವಸ್ಥಾಪಕರಾದ ರಾಜಾರಾಮ ಭಟ್ ಅವರು ದೂರು ನೀಡಿದ್ದಾರೆ‌.ಅದರೆ ಆರೋಪಗಳನ್ನು ಬಂಧಿಸದ ಕಾರಣ ಈಗ ಹೋರಾಟದ ಮೂರನೆಯ ಆಯಾಮವಾದ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ‌
ಕಳೆದ ಆರು ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಇವರು ಮಾಡುತ್ತಿದ್ದಾರೆ‌.ಅವರೇ ಹೇಳಿದಂತೆ ಇದು ಗಾಂಧೀಜಿಯವರು ಹಾಕಿ ಕೊಟ್ಟ ದಾರಿ ಇದು.ಅಹಿಂಸಾ ಮಾರ್ಗದ ಶಕ್ತಿಯುತ ಹೋರಾಟವಿದು‌.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕೂಡ ಪ್ರೇರಕವಾದ ಹೋರಾಟದ ಮಾರ್ಗವಿದು.
ಆದರೆ ಇದನ್ನು ಕೈಗೊಳ್ಳಲು ಬಹಳ ದಿಟ್ಟತನ ಬೇಕು ಮನೋ ನಿಗ್ರಹ ಬೇಕು.
ಒಂದು ಹೊತ್ತಿನ ಊಟ ತಿಂಡಿ ತಪ್ಪಿದರೇ ಒದ್ದಾಡುವ ನಮಗೆ ಕಳೆದ ಆರ ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ರಾಜಾರಾಮ ಭಟ್ ಅವರ ಮನೋಸ್ಥೈರ್ಯವನ್ನು ಊಹೆ ಮಾಡುವುದು ಕಷ್ಟದ ವಿಚಾರ‌.ಯಾಕೆಂದರೆ ಇಲ್ಲಿ ಜೀವಾಪಾಯ ಕೂಡ ಇದೆ‌.ನಮ್ಮಂತೆ ಅವರಿಗೆ ಕೂಡ ಹೆಂಡತಿ ‌ಮಗಳ ಸಂಸಾರವಿದೆ.ಅವರ ಜವಾಬ್ದಾರಿ ಕೂಡ ಇದೆ.( ಇವರ ಮಡದಿ ಜ್ಯೋತಿ ಮತ್ತು ನಾನು ಬಾಲ್ಯ ಸ್ನೇಹಿತೆಯರು‌ಒಂದೇ ಶಾಲೆಯಲ್ಲಿ ಓದಿದವರು.ಅವರು ನನಗಿಂತ ಒಂದು ವರ್ಷ ಸೀನಿಯರ್ )
ಅವೆಲ್ಲವನ್ನೂ ಮೀರಿ ನಿಂತು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿರುವ ರಾಜಾರಾಮ ಭಟ್ ಅವರ ದಿಟ್ಟ ನಿಲುವನ್ನು ಯಾರು ಕೂಡ ಮೆಚ್ಚಬೇಕಾದದ್ದೇ ಆಗಿದೆ.ಇವರೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಾ ಇರುವ ವಿಶ್ವನಾಥ್,ದೇವರಾಜ್,ಪ್ರಭಾವತಿ ತಲೆಂಗಳ,ರಾಜೇಶ್
ರತೀಶ್ ಶೆಟ್ಟಿ,ಪ್ರಶಾಂತ್ಕೊಣಾಜೆ  ಶಂಕರ ಭಟ್ ಬಾಲಸುಬ್ರಹ್ಮಣ್ಯ,ಮೋಹನ ಇವರುಗಳು ಕೂಡ ಸ್ತುತ್ಯರ್ಹರೇ ಆಗಿದ್ದಾರೆ, ಏನಂತೀರಿ ? ನಿಮ್ಮ ಅಭಿಪ್ರಾಯ ತಿಳಿಸಿ

Saturday, 31 March 2018

ದೊಡ್ಡವರ ದಾರಿ 53 ತುಳುನಾಡು ಪ್ರಿಯ ಸುನಿಲ್ ಎಂ ಎಸ್ © ಡಾ‌.ಲಕ್ಷ್ಮೀ ಜಿ ಪ್ರಸಾದದೊಡ್ಡವರ ದಾರಿ 53 ತುಳುನಾಡು ಪ್ರಿಯ ಸುನಿಲ್ ಎಂ ಎಸ್
ಮೊನ್ನೆ ಮಾರ್ಚ್ ಒಂಬತ್ತನೇ ತಾರೀಕಿನಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕರ್ನಾಟಕ ಯುವರಾಜ್ಯ ವೇದಿಕೆಯ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ನನಗೆ ಸಾಧನಾ ಕಣ್ಮಣಿ ಪ್ರಶಸ್ತಿ ನೀಡಿದ್ದರು‌.
ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವವರು ಸುನಿಲ್ .ನನಗೆ ಇವರನ್ನು ಫೇಸ್ ಬುಕ್ ಮೂಲಕ ಮೂರು ನಾಲ್ಕು ವರ್ಷಗಳಿಂದ ಪರಿಚಯ.ಬಹಳ ಮುಗ್ಧ ಪ್ರಾಮಾಣಿಕ ಸಹೃದಯ ತರುಣನಾಗಿ ಅಕ್ಕಾ ಎಂದು ಬಾಯಿ ತುಂಬಾ ನನ್ನನ್ನು ಕರೆಯುವ ಸುನಿಲ್ ನನಗೆ ಆಪ್ತರಾಗಿದ್ದರು‌.ಕನ್ನಡ ಕಟ್ಟುವ ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ಕಾರ್ಯವೆಸಗುತ್ತಿರುವ ಇವರು ಒಂದು ದಿನ ನನ್ನ ಬಯೋ ಡೇಟಾ ಕೇಳಿದರು.ಯಾಕೆ ಏನೆಂದು ವಿಚಾರಿಸುವಷ್ಟು ನನಗೆ ಸಮಯ ಇರಲಿಲ್ಲ ಯಾಕೆಂದರೆ ನಮಗೆ ಕಾಲೇಜಿನಲ್ಲಿ ಮೌಲ್ಯ ಮಾಪನನದ ಒತ್ತಡದ ಕಾರ್ಯ‌.ಫಲಿತಾಂಶ ಪ್ರಥಮ ಪಿಯುಸಿ ಫಲಿತಾಂಶ ಸಮೀಪದಲ್ಲಿಯೇ ಇದ್ದ ಕಾರಣ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿ ಕೊಡಬೇಕಾಗಿತ್ತು.
ನಂತರ ಒಂದು ದಿನ ನನಗೆ ನಿಮ್ಮನ್ನು ಕರ್ನಾಟಕ ಯುವ ರಕ್ಷಣಾ ವೇದಿಕೆ ಸಾಧನಾ ಕಣ್ಮಣಿ ಪ್ರಶಸ್ತಿ ಗೆ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು‌.ನನಗೆ ದೊಡ್ಡ ಅಚ್ಚರಿ ಏನೂ ಆಗಲಿಲ್ಲ. ನಾನು ಹೆಚ್ಚಾಗಿ  ತುಳುನಾಡು ಸಂಸ್ಕೃತಿ ಕುರಿತಾಗಿ ಅಧ್ಯಯನ ಮಾಡಿದ ಕಾರಣ ದಕ್ಷಣಕನ್ನಡ ಸಂಘಟನೆಗಳಾದ   ತುಳುವೆರೆಂಕುಲು  ಬೆಂಗಳೂರು ಇವರು ಬಲಿಯೇಂದ್ರ ಪುರಸ್ಕಾರ- 2016.ದಕ್ಷಿಣ ಕನ್ನಡಿಗರ ಸಂಘದಿಂದ ಕರಾವಳಿ ರತ್ನ, ಶಾಮರಾವ್ ಫೌಂಡೇಶನ್ ನಿಂದ OUTSTANDING TEACHER AWARD- 2013 ಅನ್ನು ನೀಡಿದ್ದರು
 ನಾನು ಹೆಚ್ಚಾಗಿ ತುಳು ಸಂಸ್ಕೃತಿಗೆ ಸಂಬಂಧಿಸಿ ಅಧ್ಯಯನ ಮಾಡಿದ್ದಾಗಿದ್ದರೂ ಅನೇಕ ಕನ್ನಡ ಸಂಘಟನೆಗಳು ನನ್ನನ್ನು ತುಳುನಾಡಿನವಳು ಎಂದು ಪರಿಗಣಿಸದೆ ಕನ್ನಡತಿಯಾಗಿ ಭಾವಿಸಿ ನನ್ನ ಅಧ್ಯಯನ ,ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಬೆಂಬಲ ನೀಡಿವೆ‌.ಬೆಳದಿಂಗಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಾ ಕನ್ನಡ ಕೈಂಕರ್ಯವನ್ನು ನಿರಂತರ ಮಾಡುತ್ತಿರುವ ಶೇಖರ್ ಅಜೆಕಾರ್ 2014 ರಲ್ಲಿಯೇ ಕರ್ನಾಟಕ ಜಾನಪದ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದರು.
2015 ರಲ್ಲಿ ಕನ್ನಡ ಕಾವಲು ಪಡೆಯ ಮೂಲಕ ಕನ್ನಡಮ್ಮನ ಸೇವೆ ಮಾಡುವ ಸತೀಶ ಜವರೇ ಗೌಡ ಅವರು ನನ್ನ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿದ್ದರು‌.ಅದೇ ವರ್ಷ ಕನ್ನಡಕ್ಕಾಗಿ ಹಿರಿಯರ ಕಾಲದಿಂದಲೂ ಶ್ರಮಿಸುತ್ತಿರುವ ಗುರುನಾರಾಯಣರಾವ್ ಅವರು ನನ್ನನ್ನು ತುಳುನಾಡಿನವಳು ಎಂದು ಭಾವಿಸದೆ ಕನ್ನಡತಿ ಎಂಬ ನೆಲೆಯಲ್ಲಿ ನನ್ನ ಅಧ್ಯಯನ ವನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ನಿಮಿತ್ತ ಪರಮೇಶ್ವರ ಪುಲಕೇಶಿ  ಪ್ರಶಸ್ತಿ ಯನ್ನು ನೀಡಿ ಸತ್ಕರಿಸಿದ್ದರು.2017 ರ. ಆರಂಭದಲ್ಲಿಯೇ   ಡಾ.ಬಾಲಾಜಿಯವರ  ಕಟ್ಟಿ ಬೆಳೆಸಿರುವ ಕನ್ನಡ ಜಾನಪದ ಪರಿಷತ್ ನಿಂದ ಜಾನಪದ ಪ್ರಪಂಚ- 2017 ಪ್ರಶಸ್ತಿ ನೀಡಿ ನನ್ನ ತುಳು ಜಾನಪದ ಅಧ್ಯಯನ ವನ್ನು ಗುರುತಿಸಿದ್ದರು.
ಹಾಗಾಗಿ ಕರ್ನಾಟಕ ಯು ರಕ್ಷಣಾ ವೇದಿಕೆ ನನ್ನನ್ನು ಸಾಧನಾ ಕಣ್ಮಣಿ ಪ್ರಶಸ್ತಿಗೆ ಆಯ್ಕೆ ಮಾಡಿದಾಗ ನನಗೇನು ದೊಡ್ಡ ಆಶ್ಚರ್ಯ ಆಗಲಿಲ್ಲ.
ಆದರೆ ಆಚ್ಚರಿ ಆದದ್ದು ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತಳಹದಿ ಬಗ್ಗೆ.
ನನಗೆ ನೀಡಿದ ಸಾಧನಾ ಕಣ್ಮಣಿ ಪ್ರಶಸ್ತಿ ಯ ಫಲಕದಲ್ಲಿ ಸ್ಪಷ್ಟವಾಗಿ ತುಳುನಾಡಿಗೆ ನೀಡಿದ ಕೊಡುಗೆಗಾಗಿ ಮತ್ತು ತುಳು ಸಂಸ್ಕೃತಿಯ ಅಧ್ಯಯನಕ್ಕಾಗಿ ಸಾಧನಾ ಕಣ್ಮಣಿ ಪ್ರಶಸ್ತಿ ನೀಡಿದೆ ಎಂದು ಬರೆದಿದೆ‌
ಕಳೆದ ಎಂಟುವರ್ಷಗಳಿಂದ ಕನ್ನಡ ಕಟ್ಟುವ ಸಲುವಾಗಿ ಕರ್ನಾಟಕ ಯುವ ರಕ್ಷಣಾ ವೇದಿಕೆ ರಚಿಸಿ ಎಲ್ಲ ಜಿಲ್ಲೆ ತಾಲೂಕುಗಳಲ್ಲಿ ಶಾಖೆಗಳನ್ನು ತೆರೆದು ಕನ್ನಡ ಕೈಂಕರ್ಯ ಮಾಡುತ್ತಿರುವ ಸುನಿಲ್ ತುಳುನಾಡನ್ನು ಕೂಡ ಕರ್ನಾಟಕದ ಭಾಗವಾಗಿಯೇ ಪ್ರೀತಿಸಿದ್ದಾರೆ ಹಾಗಾಗಿಯೇ ತುಳುನಾಡಿಗೆ ನೀಡಿದ ಕೊಡುಗೆ ಹಾಗೂ ಅಧ್ಯಯನಕ್ಕಾಗಿ ನನ್ನನ್ನು ಸಾಧನಾ ಕಣ್ಮಣಿ ಪ್ರಶಸ್ತಿ ನೀಡಿದ್ದಾರೆ‌
ಅಲ್ಲಲ್ಲಿಕನ್ನಡ ಮತ್ತು ತುಳು ಸಂಘರ್ಷ ಏಳುತ್ತಿರುವೆಡೆ ಇವರದು ಸಮನ್ವಯದ ಹಾದಿ .ಇವರು ತುಳುನಾಡಿನವರು ಅಲ್ಲದಿದ್ದರೂ ತುಳುನಾಡಿನ ಮೇಲೆ ಇವರಿಗಿರುವ ಪ್ರೀತಿ ಅಭಿಮಾನವನ್ನು ಯಾರು ಕೂಡ ಮೆಚ್ಚುವದ್ದೇ ಆಗಿದೆ.ಇವರ ಸಂಘಟನಾ ಸಾಮರ್ಥ್ಯ ಕೂಡ ಮೆಚ್ಚುವದ್ದೇ ಆಗಿದೆ‌
ಅದೂ ಅಲ್ಲದೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಿ ಪ್ರಶಸ್ತಿ ನೀಡಿದ್ದು ಅನುಸರಣಯೋಗ್ಯವಾಗಿದೆ
© ಡಾ.ಲಕ್ಷ್ಮೀ ಜಿ ಪ್ರಸಾದ

Sunday, 25 March 2018

ದೊಡ್ಡವರ ದಾರಿ 52 ರಾಮಾಯಣ ಕಥೆ ಹೇಳಿದ ಕೊಮ್ಮೆ ತಿಮ್ಮಣ್ಣ ಮಾಷ್ಟ್ರು© ಡಾ.ಲಕ್ಷ್ಮೀ ಜಿ ಪ್ರಸಾದ


ದೊಡ್ಡವರ ದಾರಿ :53 ರಾಮನ ಕಥೆ ಹೇಳಿದ ಕೊಮ್ಮೆ ಮಾಷ್ಟ್ರು
ನನ್ನ ಮಗನನ್ನು ಐದನೇ ತರಗತಿಗೆ ಪ್ರಶಾಂತಿ ವಿದ್ಯಾ ಕೇಂದ್ರಕ್ಕೆ ಸೇರಿಸಿದ್ದೆವು.ಅಲ್ಲಿ ಅವನಿಗೆ ಒಂದು ಪ್ರವೇಶ ಪರೀಕ್ಷೆ ಮಾಡಿದ್ದರು.ಅದರಲ್ಲಿ ರಾಮಾಯಣ ಬರೆದವರು ಯಾರು ಎಂದು ಕೇಳಿದ್ದರು‌.ನನ್ನ ಮಗನಿಗೆ ಗೊತ್ತಿರಲಿಲ್ಲ. ನಂತರ ನನ್ನಲ್ಲಿ ಕೇಳಿದ.ಹೌದು ಅದರಲ್ಲಿ ಅವನ ತಪ್ಪಿರಲಿಲ್ಲ ಯಾಕೆಂದರೆ ರಾಮಾಯಣ ಕಥೆಯನ್ನು ಅವನು ಆ ತನಕ ಕೇಳಿರಲಿಲ್ಲ .ನಂತರ ನಾನು ಸಣ್ಣ ಮಕ್ಕಳು ಓದುವ ರಾಮಾಯಣ ಪುಸ್ತಕ ತಂದು ಕೊಟ್ಟೆ.ಅದು ಬೇರೆ ವಿಚಾರ.
ಆಗ ತಕ್ಷಣ ನನಗೆ ನೆನಪಿಗೆ ಬಂದದ್ದು ನಮಗೆ ರಾಮಾಯಣ ಕಥೆಯನ್ನು ಅಭಿನಯ ಸಹಿತವಾಗಿ ಹೇಳಿದ ಕೊಮ್ಮೆ ತಿಮ್ಮಣ್ಣ ಮಾಷ್ಟ್ರು.
ನನಗೆ ಐದು ವರ್ಷ ಆಗುವಾಗ ನನ್ನ ಸಣ್ಣ ತಮ್ಮ ಗಣೇಶ ಹುಟ್ಟಿದ್ದ.ಹಾಗಾಗಿ ಅಮ್ಮ ಬಾಣಂತನಕ್ಕೆ ನನ್ನ ಅಜ್ಜನ ಮನೆಗೆ ಹೋಗಿದ್ದರು‌.ಆದ್ದರಿಂದ ನಾನು ಒಂದನೇ ತರಗತಿಗೆ ಮೀಯಪದವು ವಿದ್ಯಾವರ್ಧಕ ಶಾಲೆಗೆ ಸೇರಿದೆ.ಅಲ್ಲಿ ನನಗೆ ಕಲಿಕೆ ಏನೂ ತೊಡಕಾಗಲಿಲ್ಲ.ವೇದವಲ್ಲಿ ಟೀಚರ್ ನಮಗೆ ತುಂಬಾ ಪ್ರೀತಿಯಿಂದ ಅ ಆ ಇ ಈ ಅಕ್ಷರ ಮಾಲೆ ,ಒಂದು ಎರಡು ನೂರರ ತನಕ ಸಂಖ್ಯೆಗಳನ್ನು ಹೇಳಿಕೊಟ್ಟಿದ್ದರು.ಬಹುಶಃ  ಕಲಿಕೆಯಲ್ಲಿ ನಾನು ಮುಂದಿದ್ದೆ ಅಂತ ಕಾಣುತ್ತದೆ.ಯಾಕೆಂದರೆ ಇಡೀ ತರಗತಿಗೆ ಒಂದು ಎರಡು ನೂರರ ತನಕ ಹೇಳಿಸುವ ಜವಾಬ್ದಾರಿ ನನಗೆ ಕೊಟ್ಟಿದ್ದರು.ದಿನಾಲು ನಾನು ಒಂದು ಎರಡು ಎಮದು ತರಗತಿಯ ಸಹಪಾಠಿಗಳಲ್ಲಿ ದೊಡ್ಡದಾಗಿ ಹೇಳಿಸುತ್ತಾ ಇದ್ದೆ‌
ಎರಡನೇ ತರಗತಿಗಾಗುವಾಗ ನಾನು ಅಮ್ಮ ನಮ್ಮ ಕೋಳ್ಯೂರಿನಲ್ಲಿ ಕಟ್ಟಿದ ಹೊಸ( ಮಣ್ಣಿನ )ಮನೆಗೆ ಬಂದಿದ್ದರು‌.ನಾನು ಕೂಡ ಹಠಮಾಡಿ ಅಜ್ಜನ ಮನೆಯಲ್ಲಿ ನಿಲ್ಲದೆ ಅಮ್ಮನ ಜೊತೆ ಬಂದಿದ್ದೆ‌ಹಾಗಾಗಿ ಎರಡನೇ ತರಗತಿಗೆ ನಾನು ಕೋಳ್ಯೂರು ಶಂಕರನಾರಾಯಣ ಪ್ರಾಥಮಿಕ ಶಾಲೆಗೆ ಸೇರಿದೆ.ಇಲ್ಲಿ ಎರಡನೇ ತರಗತಿಗೆ ಮೇಷ್ಟ್ರಾಗಿದ್ದವರು ಕೊಮ್ಮೆ ತಮ್ಮಣ್ಣ ಭಟ್
ಇಲ್ಲಿ ಕೂಡ ಕಲಿಕೆಯಲ್ಲಿ ನಾನು ಹಿಂದೆ ಇರಲಿಲ್ಲ .ಆದರೆ ಯಾಕೋ ಏನೋ ನನಗೆ ನೆನಪಿಲ್ಲ .ನನಗೆ ದಿನಾಲು ಪೆಟ್ಟು ಬೀಳುತ್ತಿತ್ತಂತೆ.ನನ್ನ ಸಹಪಾಠಿಗಳಾದ ಯಶೋದೆ ಮತ್ತು ಅವಳ ತಂಗಿ‌ಮಲ್ಲಿಕಾ ನನಗೆ ಈ ವಿಚಾರವನ್ನು ನಾನು ಹೈಸ್ಕೂಲ್ ಓದುವ ಸಮಯದಲ್ಲಿ ಹೇಳಿದ್ದರು‌
ಅದೃಷ್ಟವಶಾತ್ ನನಗೆ ಇದು ನೆನಪಿಲ್ಲ‌ ಮರೆವು ಕೂಡ ವರವೇ.ನನಗೆ ಯಾಕೆ ಪೆಟ್ಟು ಬೀಳುತ್ತಿತ್ತೆಂದರೆ ನಾನು ದಿನಾಲು ತಡವಾಗಿ ಶಾಲೆಗೆ ಬರುತ್ತಿದ್ದೆನಂತೆ.ದಿನಾಲು ಪೆನ್ಸಿಲ್ ಕಡ್ಡಿಗಳನ್ನು ಕಳೆದು ಹಾಕುತ್ತಿದ್ದೆನಂತೆ .ದಿನಾಲು ಪೆನ್ಸಿಲ್ ಕಳೆದು ಹೋಗುತ್ತಿದ್ದುದು ನನಗೆ ನೆನಪಿದೆ.ಆದರೆ ಎಲ್ಲಿ ಹೋಗುತ್ತಿತ್ತು? ಯಾರು ತೆಗೆಯುತ್ತಿದ್ದರು ಗೊತ್ತಿಲ್ಲ,ಶಿಸ್ತಿನ ಶಿಪಾತಯಿಯಾಗಿರುವ ಕೊಮ್ಮೆ ಮಾಷ್ಟ್ರು ಅದನ್ನು ನೀಟಾಗಿ ನನಗೆ ಇಟ್ಟುಕೊಳ್ಳುವ ಬಗ್ಗೆ ಹೇಳಿಕೊಡುತ್ತಿರಲಿಲ್ಲವಂತೆ ,ಬದಲಿಗೆ ಚೆನ್ನಾಗಿ ಹೊಡೆತುತ್ತಿದ್ದರಂತೆ.ಯಶೋದೆಯ ತಾಯಿ ಬಹಳ ಸಹೃದಯಿ. ಅವರು ನನಗೆ ದಿನಾಲು ಪೆಟ್ಟು ಬೀಳುವ ಬಗ್ಗೆ ನೊಂದುಕೊಳ್ಳುತ್ತಿದ್ದರಂತೆ.ನಾನು ದಿನಾಲು ತಡವಾಗಿ ಬರುತ್ತಿದ್ದರೆ ನಮ್ಮ ತಂದೆ ಅಥವಾ ತಾಯಿಗೆ ತಿಳಿಸದೆ ನನಗೇಕೆ ಹೊಡೆಯುತ್ತಿದ್ದರು ಕೊಮ್ಮೆ ಮಾಷ್ಟ್ರು ? ನನಗೆ ಇಂದಿಗೂ ಅರ್ಥವಾಗುತ್ತಾ ಇಲ್ಲ‌.ಅಥವಾ ನಾನೇಕೆ ಇದನ್ನು ನಮ್ಮ ಮನೆಯಲ್ಲಿ ತಿಳಿಸಿಲ್ಲ‌? ನಮ್ಮ ತಂದೆ ತಾತಿಗೆ ಮಕ್ಕಳ ಬಗ್ಗೆ ತುಂಬಾ ಕಾಳಜಿ ಇತ್ತು. ಒಂದೊಮ್ಮೆ ಶಾಲೆಯಲ್ಲಿ ವಿನಾ ಕಾರಣ ಹೊಡೆತ ಬೀಳುತ್ತದೆ ಎಂದು ಗೊತ್ತಾಗಿದ್ದರೆ ಖಂಡಿತಾ ಬಂದು ಮಾತನಾಡುತ್ತಿದ್ದರು. ನನ್ನನ್ನು ಅ ಶಾಲೆ ಬಿಡಿಸಿ ಹಿಂದಿನ ವಿದ್ಯಾವರ್ಧಕ ಶಾಲೆಗೆ ಸೇರಿಸುತ್ತಿದ್ದರು
ಆದರೆ ನನಗೆ ಅವರು ಅಷ್ಟೆಲ್ಲಾ ಹೊಡೆದಿದ್ದಾರೆಂಬುದು ನಾನು ದೊಡ್ಡವಳಾದ ಮೇಲೆ ಯಶೋದೆ ಮತ್ತು ಮಲ್ಲಿಕಾ ಹೇಳಿ ಗೊತ್ತೇ ಹೊರತು ನನಗೆ ನಿಜಕ್ಕೂ ನೆನಪಿಲ್ಲ.ಆಗ ಅವರು ಕೂಡ ಚಿಕ್ಕವರು.ಒಂದೆರಡು ಸಲ ನನ್ನ ಉಡಾಫೆಗೆ ಹೊಡೆದಿದ್ದನ್ನೇ ತುಂಬಾ ಹೊಡೆದಿದ್ದರು,(ನಾನು ಈಗಿನಂತೆ ಆಗಲೂ ಉಡಾಫೆಯೇ ಆಗಿದ್ದಿರಬಹುದು.ಅದಕ್ಕಾಗಿ ಒಂದೆರಡೇಟು ಬಿದ್ದಿರಬಹುದು) ಎಂದು ಭಾವಿಸಿ ನನಗೆ ಹೇಳಿರಲಿಕ್ಕೂ ಸಾಕು
ಅದೇನೇ ಇರಲಿ  ಬಗ್ಗೆ ತುಂಬಾ ಪ್ರೀತಿಯೇ ಇದೆ .ಯಾಕೆಂದರೆ ಅವರು ತುಂಬಾ ಚಂದದ ಕಥೆಗಳನ್ನು ಹೇಳುತ್ತಿದ್ದರು.ಆ ಕಥೆಗಳನ್ನು ಕೇಳುವುದಕ್ಕಾಗಿಯೇ ನಾನು‌ ಪೆಟ್ಟು ಬೀಳುತ್ತಿದ್ದರೂ ಶಾಲೆಗೆ ಹೋಗುತ್ತಿದ್ದಿರಬೇಕು .ನನಗೋ ಕಥೆಗಳೆಂದರೆ ಜೀವ .(ನಾನು ನಾಲ್ಕನೆಯ ತರಗತಿಗೆ ಬರುವಷ್ಟರಲ್ಲಿ ಸಾತಿಸುತೆ,ಉಷಾ ನವರತ್ನರಾಂ, ಮೊದಲಾದವರ ಕಾದಂಬರಿಗಳನ್ನು ಓದುತ್ತಾ ಇದ್ದೆ .ನಾನು ಓದಿನ ಮೊದಲ ಕಾದಂಬರಿ ಸಾಕು ಮಗ,ಯಾರು ಬರೆದದ್ದು ಎಂದು ನೆನಪಿಲ್ಲ)
ನನಗೆ ತಿಮ್ಮಣ್ಣ ಮಾಷ್ಟ್ರು ತುಂಬಾ ಇಷ್ಟವಾಗಲು ಕಾರಣ ಅವರು ಅಭಿನಯ ಸಹಿತವಾಗಿ ಹೇಳುತ್ತಿದ್ದ ಕಥೆಗಳು ಅದರಲ್ಲೂ ರಾಮಾಯಣ ಕಥೆಗಳು.
ದಶರಥ ಕಾಡಿಗೆ ಹೋದಲ್ಲಿ ಕೈಕೇಯಿಯ ಭೇಟಿ ಆಗುವುದು,ಅವರಲ್ಲಿ ಪ್ರೇಮಾಂಕುರವಾಗುವುದು,ನಂತರ ವಿವಾಹ,ಪುತ್ರ ಕಾಮೇಷ್ಠಿ ಯಾಗ ,ರಾಮಲಕ್ಷ್ಮಣ,ಭರತ ಶತ್ರುಘ್ನರ ಜನನ ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕಾಡಿಗೆ ಒಯ್ಯುವುದು, ತಾಟಕಿಯನ್ನು ಕೊಲ್ಲುವುದು,ಶಬರಿಯ ಪ್ರಸಂಗ ಸೀತಾ ಸ್ವಯಂವರ,ರಾಮನಿಗೆ ಪಟ್ಟಾಭಿಷೇಕಕ್ಕೆ ನಿರ್ಧರಿಸುವುದು,ಮಂಥರೆ ಬಂದು ಕೈಕೇಯಿಗೆ ದುರ್ಬೋಧನೆ ಮಾಡುವುದು,ಕೈಕೇಯಿ ಎರಡು ವರಗಳನ್ನು ಕೇಳುವುದು ,ರಾಮಲಕ್ಷ್ಮಣ ಸೀತೆಯರು ಕಾಡಿಗೆ ಹೋಗುವುದು,ಭರತನ ಭ್ರಾತೃಪ್ರೇಮ ಪಾದುಕೆಗಳನ್ನು ಸಿಂಹಾಸನದಲ್ಲಿಟ್ಟು ಆಡಳಿತ ಮಾಡುವುದು ಸೀತಾಪಹರಣ,ಹನುಮಂತ ಸಖ್ಯ,ಲಂಕಾದಹನ,ರಾಮ ರಾವಣರ ಯುದ್ಧ,ಅಯೋಧ್ಯೆಗೆ ಪುಷ್ಪಕ ವಿಮಾನದಲ್ಲಿ ಬರುವುದು ಸೇರಿದಂತೆ ರಾಮಾಯಣದ ಪೂರ್ತಿ ಕಥಾನಕವನ್ನು ನಮಗೆ ಹೇಳಿದ್ದರು. ದಿನಾಲು ಸಂಜೆ ಆಟಕ್ಕೆ ಮಾಡಿ ದಲಿನ ಅವಧಿ ಕಥೆ ಹೇಳುವುದಕ್ಕಾಗಿ ಮೀಸಲಾಗಿತ್ತು.ನಾವೆಲ್ಲಾ ಈ ಅವಧಿಯನ್ನು ತುದಿಗಾಲಿನಲ್ಲಿ‌ ನಿಂತು ಕಾಯುತ್ತಿದ್ದೆವು.ಬಹುಶಃ ನಾವೆಲ್ಲರೂ ಎರಡನೇ ತರಗತಿಯಲ್ಲಿ ರೆಗುಲರ್ ಆಗಿ ಶಾಲೆಗೆ ಬರಲು ಕೂಡ ಇದೇ ಆಕರ್ಷಣೆ ಆಗಿತ್ತು.
ತಿಮ್ಮಣ್ಣ ಮಾಷ್ಟ್ರಿಗೆ ಯಕ್ಷಗಾನದ ಮೇಲೆ ಅಭಿರುಚಿ ಇದೆ‌.ಅದರಿಂದಾಗಿ ರಾಮಾಯಣದ ಎಲ್ಲ ಪ್ರಸಂಗಗಳನ್ನು ನಮ್ಮ ಎಳೆಯ ಮನಸಿಗೆ ನಾಟುವಂತೆ ಅರ್ಥವಾಗುವಂತೆ ಹೇಳಲು ಅವರು ಸಮರ್ಥರಾಗಿದ್ದರು.ಈಗಲೂ ಅವರು ರಾಮಾಯಣದ ಕಥೆ ಹೇಳುತ್ತಿದ್ದ ಪರಿ ನನಗೆ ಕಣ್ಣಿಗೆ ಕಟ್ಟುತ್ತಿದೆ.ಸೀತಾ ಸ್ವಯಂವರಕ್ಕೆ ಬಂದ ರಾವನ ಶಿವ ಧನುಸ್ಸನ್ನು ಎತ್ತಲು ಹೋಗಿ ಅದರಡಿಯಲ್ಲಿ ಅವನ ಕೈಗಳು ಸಿಕ್ಕು ಹಾಕಿಕೊಳ್ಳುವುದು,ಅಂಗದ ಸಂಧಾನಕ್ಕೆ ಹೋದಾಗ ರಾವಣನ ಸಿಂಹಾಸನದಷ್ಟು ಎತ್ತರಕ್ಕೆ ತನ್ನ ಬಾಲವನ್ನು ಸುತ್ತಿ ಕುಳಿತುಕೊಳ್ಳುವುದು ಆಹಾ..ಇದೆಲ್ಲವನ್ನೂ ಕೊಮ್ಮೆ ಮಾಷ್ಟ್ರು ವರ್ಣಿಸುತ್ತಿದ್ದ ಪರಿಯನ್ನು ಶಬ್ದದಲ್ಲಿ ಕಟ್ಟಿಕೊಡಲಾಗದು ,ಕೇಳಿ ನೋಡಿಯೇ ಆನಂದಿಸಬೇಕು.ಅದಕ್ಕಾಗಿ  ಕೋಳ್ಯೂರಿನ ಮಕ್ಕಳಾದ ನಾವುಗಳು ಅವರಿಗೆ ಆಭಾರಿಯಾಗಿರಬೇಕು.ಬಹುಶಃ ,ಮಾತಿನ ,ಅಭಿನಯ ಕೌಶಲ ನನಗೆ ಬೆಳೆಯಲು ಕೂಡ ಇದೇ ಕಾರಣವಾಗಿರಬಹುದು- ಡಾ.ಲಕ್ಷ್ಮೀ ಜಿ ಪ್ರಸಾದ