Thursday 19 March 2015

ಭ್ರಷ್ಟಾಚಾರ ವಿರೋಧ :ಆಕ್ರೋಶದ ಜೊತೆಗಿರಲಿ ಆತ್ಮಾವಲೋಕನ -ಡಾ.ಲಕ್ಷ್ಮೀ ಜಿ ಪ್ರಸಾದ (ಕನ್ನಡ ಪ್ರಭ 20 ಮಾರ್ಚ್ 2015 )



 

ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳ ಬಲಿಯಾಗಬೇಕು ?
ನಮ್ಮ ಪಕ್ಕದ ಚೀನಾ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ .2011 ರಲ್ಲಿ ಚೀನಾದ  ಹತ್ತೊಂಬತ್ತು ಜನ ಭ್ರಷ್ಟ ಅಧಿಕಾರಿಗಳು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ . 2012ರಲ್ಲಿ ಇಪ್ಪತ್ತೊಂದು ಭ್ರಷ್ಟ ಅಧಿಕಾರಿಗಳು ಸಾವನ್ನು ಆಹ್ವಾನಿಸಿಕೊಂಡು ಸತ್ತಿದ್ದಾರೆ . 2013ರಲ್ಲಿ ಭ್ರಷ್ಟ  ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಕಳೆದ ವರ್ಷ ಕೂಡ ಇಲ್ಲಿ ಅನೇಕ ಮಂದಿ ಅಧಿಕಾರಿಗಳು ಸಾವಿಗೆ ಶರಣಾಗಿದ್ದಾರೆ .ಇವರೆಲ್ಲ  ತಾವು ಮಾಡಿದ ಅನ್ಯಾಯವನ್ನು ನೆನೆದು ಪಶ್ಚಾತ್ತಾಪ ಪಟ್ಟು ಆತ್ಮ ಹತ್ಯೆ ಮಾಡಿಕೊಂಡದ್ದಲ್ಲ !!
ಅಲ್ಲಿನ ಸರಕಾರ 2012 ರಿಂದ ಭ್ರಷ್ಟಾಚಾರದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ .ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳನ್ನು ಹಿಡಿದು ಶಿಕ್ಷಿಸುತ್ತಾ ಇದೆ .ಇದರಿಂದ ಭಯಗೊಂಡಿರುವ ಭ್ರಷ್ಟ ಅಧಿಕಾರಿಗಳು ವಿಚಾರಣೆ ಮತ್ತು ಶಿಕ್ಷೆಗಳಿಗೆ ಭಯ ಪಟ್ಟು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ .
 ಚೀನದಲ್ಲಿ ಭ್ರಷ್ಟ ಅಧಿಕಾರಿಗಳು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದರೆ ನಮ್ಮ ದೇಶದಲ್ಲಿ ಪ್ರಾಮಾಣಿಕ ಅಧಿಕಾರಿಗಳು ಆತ್ಮ ಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎನ್ನುವುದು ನಿಜಕ್ಕೂ ಶೋಚನೀಯ ವಿಚಾರ .ಒಂದೊಮ್ಮೆ ಆತ್ಮ ಹತ್ಯೆ ಮಾಡಿಕೊಳ್ಳದಿದ್ರೆ ಪ್ರಾಮಾಣಿಕ ಅಧಿಕಾರಿಗಳ ಹತ್ಯೆಯನ್ನು ಮಾಡುತ್ತಾರೆ !
ನಮ್ಮ ದೇಶದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಹತ್ಯೆಯಾಗುವುದು ಇಂದು ನಿನ್ನೆಯ ವಿಚಾರವೇನಲ್ಲ .ಸುಮಾರು ಇಪ್ಪತ್ತು ಇಪ್ಪತ್ತೆರಡು ವರ್ಷಗಳ ಹಿಂದೆ ಕಾಡುಗಳ್ಳರ ವಿರುದ್ಧ ಹೋರಾಡಿದ ಪ್ರಾಮಾಣಿಕ ಅರಣ್ಯಾಧಿಕಾರಿ ಶ್ರೀನಿವಾಸ್ ಅವರ ಕಗ್ಗೊಲೆಯಾಗಿತ್ತು .
ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭ್ರಷ್ಟಾಚಾರದ ಕುರಿತು ಮಾಹಿತಿ ನೀಡಿದ ಪ್ರಾಮಾಣಿಕ ಎಂಜಿನಿಯರ್ ಸತ್ಯೇಂದ್ರ ದುಭೆಯನ್ನು ಕೊಲೆ ಮಾಡಲಾಗಿತ್ತು .
ಹತ್ತು ವರ್ಷಗಳ ಮೊದಲು  2005 ನವೆಂಬರ್ 19ರಂದು ಐಒಸಿ ತೈಲ ಕಂಪೆನಿಯಲ್ಲಿ ಮ್ಯಾನೇಜರಾಗಿದ್ದ ಕರ್ನಾಟಕದ ಕೋಲಾರ ಮೂಲದ ಮಂಜುನಾಥ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.
ಉತ್ತರ ಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ತೈಲ ಮಾಫಿಯಾವನ್ನು ಮಂಜುನಾಥ ಅವರು ಪತ್ತೆ ಹಚ್ಚಿದ್ದರು. ಇದರಿಂದ ರೊಚ್ಚಿಗೆದ್ದ ಮಾಫಿಯಾ ಮಂದಿ ಅವರನ್ನು ಹತ್ಯೆ ಮಾಡಿದ್ದರು.
ಮುಂಬೈ ಮಹಾ ನಗರ ಪಾಲಿಕೆ ಎಂಜಿನಿಯರ್ ನಂದ ಕಿಶೋರ್ ಎಂಬವರು ಅವರ ಹಿರಿಯ ಮೇಲಧಿಕಾರಿಗಳು,ಎಂಜಿನಿಯರ್  ನಡೆಸುವ ಭ್ರಷ್ಟ ವ್ಯವಹಾರಗಳನ್ನು ಬಯಲು ಮಾಡಿದ್ದರು .ಇದರ ಪರಿಣಾಮವಾಗಿ ಅವರು ಅವರ ಆಫೀಸ್ ನ ಫ್ಯಾನ್ ಗೆ ನೇಣು ಬಿಗಿದು ಸಾಯಬೇಕಾಯಿತು .ಅದು ಕೊಲೆಯೋ ಆತ್ಮ ಹತ್ಯೆಯೋ ಎಂದು ಇನ್ನೂ ಇತ್ಯರ್ಥವಾಗಿಲ್ಲ .
ಮರಳು ಮಾಫಿಯಾವನ್ನು ತಡೆದ ಐಎಎಸ್ ಅಧಿಕಾರಿ ಒಬ್ಬರನ್ನು ಅಮಾನತು ಮಾಡಲಾಗಿತ್ತು .
ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ಪ್ರಾಮಾಣಿಕ ಮೆಸ್ಕಾಂ ಅಧಿಕಾರಿಯೊಬ್ಬರ ಕೊಲೆ ಆಯಿತು .
ಕೆಲ ಸಮಯದ ಹಿಂದೆ ಪ್ರಾಮಾಣಿಕ ಐಎಎಸ್ ಅಧಿಕಾರಿ ರಶ್ಮಿ ಅವರ ಮೇಲೆ ಹಾಡು ಹಗಲೇ ಹಲ್ಲೆ ನಡೆದಿತ್ತು !
ವಿಶ್ವ ವಿದ್ಯಾಲಯವೊಂದರ ಸಮಾಜ ಶಾಸ್ತ್ರದ ಉಪನ್ಯಾಸಕರು ಒಬ್ಬರು ಭ್ರಷ್ಟ ವ್ಯವಸ್ಥೆಗೆ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು .
ಎರಡು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಪ್ರಾಮಾಣಿಕ ದಕ್ಷ ಐಎಎಸ್ ಅಧಿಕಾರಿಯ ಕೊಲೆಯಾದ ಬಗ್ಗೆ ವರದಿಯಾಗಿದೆ .ಇದೀಗ  ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಹತ್ಯೆಯಾಗಿದೆ.ಇವು  ಕೆಲವು ಉದಾಹರಣೆಗಳು ಅಷ್ಟೇ .
ನಮ್ಮಲ್ಲಿ ಆಗಾಗ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಹಲ್ಲೆ ,ಹತ್ಯೆಗಳು ಸಂಭವಿಸುತ್ತಲೇ ಇರುತ್ತದೆ .
ಭ್ರಷ್ಟಾಚಾರ ,ಅನ್ಯಾಯಗಳನ್ನು ಪ್ರಶ್ನಿಸಿದ ಉನ್ನತ ಅಧಿಕಾರಿಗಳ ಪರಿಸ್ಥಿತಿಯೇ ಹೀಗಾಗಿರುವಾಗ ಜನ ಸಾಮಾನ್ಯರ ಬಗ್ಗೆ ಹೇಳಲೇನಿದೆ ?ಮಾನವ ಹಕ್ಕು ಗ್ರಾಹಕ ಹಕ್ಕು ಕಾರ್ಯಕರ್ತರ ಹತ್ಯೆಯ ವಿಚಾರ ಆಗಾಗ ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತದೆ !ಆದರೂ ಯಾರೂ ಬಲವಾಗಿ ಪ್ರತಿಭಟಿಸುತ್ತ ಇಲ್ಲ .
ಭ್ರಷ್ಟಾಚಾರವನ್ನು ಹತ್ತಿಕ್ಕುವ ಯತ್ನ ಮಾಡುವ ಪ್ರಾಮಾಣಿಕ ಅಧಿಕಾರಿಗಳಿಗೇ ರಕ್ಷಣೆ ಇಲ್ಲವಾದರೆ ಭ್ರಷ್ಟಾಚಾರದ ಕಬಂಧ ಬಾಹುಗಳನ್ನು ಕತ್ತರಿಸುವುದು ಹೇಗೆ ?ಇದೊಂದು ಪರಿಹಾರ ಕಾಣದ ಸಮಸ್ಯೆಯಾಗಿದೆ.
ಭ್ರಷ್ಟಾಚಾರದ ಬಗ್ಗೆ ಜಬ ಸೋಸಿ ಹೋಗಿದ್ದಾರೆ ಹಾಗಾಗಿಯೇ ಅಣ್ಣ ಹಜಾರೆಯವರ ಅಂದೋಲನಕ್ಕೆ ನಿರೀಕ್ಷೆಗೂ ಮೀರಿ ಜನ ಕೈ ಜೋಡಿಸಿದ್ದಾರೆ.ಇದರ ಹಿನ್ನೆಲೆಯಲ್ಲೇ ಹುಟ್ಟಿಕೊಂಡ ಆಮ್ ಆದ್ಮಿ ಪಾರ್ಟಿ ಇಂದು ದಿಲ್ಲಿಯ ಗದ್ದುಗೆಯನ್ನು ಹಿಡಿಡಿದೆ .ಆದರೂ ಭ್ರಷ್ಟಾಚಾರ ಕಡಿಮೆಯಾಗುತ್ತಿಲ್ಲ .
ಯಾಕೆ ಹೀಗೆ ?
ಕೆಲ ವರ್ಷಗಳ ಮೊದಲು ನಾನಿದ್ದ ಪ್ರದೇಶದಲ್ಲಿನ ನಂದಿನಿ ಬೂತ್ ಒಂದರಲ್ಲಿ ಒಂದು ಲೀಟರ್ ನಂದಿನಿ ಹಾಲಿಗೆ ಅದರಲ್ಲಿ ನಮೂದಿಸಿದ್ದ ಗರಿಷ್ಠ ಬೆಲೆಗಿಂತ ಎರಡು ರುಪಾಯಿಗಳನ್ನು ಹೆಚ್ಚು ಬೆಲೆ ವಸೂಲಿ ಮಾಡುತ್ತಿದ್ದರು .ಈ ಬಗ್ಗೆ ನಾನು ಪ್ರಶ್ನಿಸಿದಾಗ ಹಾಲು ಬೇಕಿದ್ರೆ ತಗೊಳ್ಳಿ ಎಂಬ ಉಡಾಫೆಯ ಉತ್ತರ ಬಂತು .ಹಾಗಾದರೆ ನಾನು ಗ್ರಾಹಕ ರಕ್ಷಕ ಕೇಂದ್ರಕ್ಕೆ ಫೋನ್ ಮಾಡುವುದಾಗಿ ತಿಳಿಸಿದೆ .ಯಾರಿಗೆ ಬೇಕಾದರೂ ಹೇಳಿ ಎಂದು ಹೇಳಿದರು .ನಾನು ಅದೇ ಹಾಲಿನ ಪ್ಯಾಕೆಟ್ ನಲ್ಲಿದ್ದ ಕಸ್ಟಮರ್ ಕೇರ್ ಸಂಖ್ಯೆಗೆ ಫೋನ್ ಮಾಡಿದೆ.ಅಲ್ಲಿನ ಉತ್ತರ ಕೇಳಿ ನನಗೆ ಆಶ್ಚರ್ಯವಾಯಿತು.ನಾವು ಅಲ್ಲಿ ದಿನಕ್ಕೆ ಒಂದು ಬಾರಿ ಮಾತ್ರ ಸರಬರಾಜು ಮಾಡುವುದು ಎರಡು ಬಾರಿ ಬರಲು ಸಾಧ್ಯವಾಗುವುದಿಲ್ಲ .ಹಾಲು ಉಳಿದರೆ ಹಾಳಾದರೆ ಆಗುವ ನಷ್ಟವನ್ನು ನೀವು ಅವರಿಗೆ ಕೊಡುತ್ತೀರಾ? ಇತ್ಯಾದಿಯಾಗಿ ಅಲ್ಲಿಂದ ಉತ್ತರ ಬಂದಿತ್ತು !ನಾನು ಪಟ್ಟು ಬಿಡದೆ ಅಲ್ಲಿನ ಮೇಲಧಿಕಾರಿಗೆ ಇದನ್ನು ತಿಳಿಸಿದೆ .ಆಗ ಅವರು ಆ ಪ್ರದೇಶಕ್ಕೆ ಬಂದು ಪರಿಶೀಲಿಸಿ ಅಲ್ಲಿ ಅವರ ಫೋನ್ ನಂಬರ್ ಬರೆಸಿ ಗರಿಷ್ಠ ಬೆಲೆಗಿಂತ ಹೆಚ್ಚು ವಸೂಲಿ ಮಾಡಿದರೆ ಅವರ ನಂಬರ್ ಗೆ ಕರೆ ಮಾಡುವಂತೆ ಸೂಚನೆ ಹಾಕಿದರು .ಅನಂತರ ಪತ್ರಿಕೆಗಳಲ್ಲಿ ಅವರ ನಂಬರ್ ಕೊಟ್ಟು ಹಾಲಿಗೆ ಗರಿಷ್ಠ ಬೆಲೆಗಿಂತ ಹೆಚ್ಚು ವಸೂಲಿ ಮಾಡಿದರೆ ಕರೆಮಾದುವಂತೆ ಮಾಹಿತಿ ನೀಡಿದ್ದರು ಕೂಡ .ಆದರೆ ಅವರು ಅತ್ತ ಹೋಗುತ್ತಲೇ ಅವರು ಬರೆಸಿದ ಸೂಚನಾ ಫಲಕವನ್ನು ಕಿತ್ತು ಇವರು ಬಿಸಾಡಿದ್ದರು .
ಈ ನಡುವೆ ನನಗೆ ಹಾಗೂ ನನ್ನಂತೆ ಪ್ರಶ್ನಿಸಿದ ಒಬ್ಬಿಬ್ಬರಿಗೆ ಅಲ್ಲಿ ನಂದಿನಿ ಹಾಲು ಗರಿಷ್ಠ ಬೆಲೆಗೆ ಸಿಕ್ಕುತ್ತ ಇತ್ತು .ಆದರೆ ನಮ್ಮ ಜೊತೆಗೆ ಹಾಲು ತೆಗೆದುಕೊಳ್ಳುವ ಇತರರಿಗೆ ಎರಡು ರುಪಾಯಿ ಹೆಚ್ಚು ತೆಗೆದು ಕೊಳ್ಳುತ್ತಾ ಇದ್ದರು ನಮ್ಮ ಎದುರಿನಲ್ಲಿಯೇ !
ಇಲ್ಲಿ ಎಲ್ಲರೂ ಈ ಬಗ್ಗೆ ಕರೆ ಮಾಡಿ ದೂರು ಕೊಟ್ಟಿದ್ದರೆ ಎಲ್ಲರಿಗೂ ಖಂಡಿತವಾಗಿಯೂ ಗರಿಷ್ಠ ಬೆಲೆಗೆ ಸಿಗುತ್ತಿತ್ತು ,ಆದರೆ ಕಣ್ಣು ಮುಚ್ಚಿ ಹೇಳಿದಷ್ಟು ಬೆಲೆ ಕೊಡುವ ಜನರಿರುವಾಗ ಹೆಚ್ಚು ಬೆಲೆ ತೆಗೆದುಕೊಳ್ಳುವುದಕ್ಕೆ ಏನೂ ಅಡ್ಡಿ ಆಗುವುದಿಲ್ಲ !
ಅದೇ ಸಮಯದಲ್ಲಿ ನಮ್ಮ ಕಾಲೇಜ್ ನಲ್ಲಿ ಭ್ರಷ್ಟಾಚಾರ ವಿರುದ್ಧ ತಾಲೂಕು ಮಟ್ಟದ ಕಾರ್ಯಕ್ರಮ ನಡೆದಿದ್ದು  ಲೋಕಾಯುಕ್ತರಾಗಿದ್ದ ಸಂತೋಷ ಹೆಗಡೆಯವರು ಆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಬಂದಿದ್ದರು .  ಹೆಚ್ಚು ಬೆಲೆ ಕೊಟ್ಟು ತೆಗೆದುಕೊಳ್ಳುವ ಮಂದಿಯಲ್ಲಿ ಹೆಚ್ಚಿನವರು ಅಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಕಾರ್ಯಕ್ರಮಕ್ಕೆ ಬಂದಿದ್ದು ಅವರ ಮಾತಿಗೆ ತಲೆದೂಗಿ ಚಪ್ಪಾಳೆ ತಟ್ಟಿದ್ದರು !
ಹೌದು ! ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಮಾವಿನಕಾಯಿ ಉದುರಬೇಕಾದರೆ ಕಲ್ಲು ಎಸೆಯಲೇ ಬೇಕು ,ಹಾಗೆಯೂ ಯಾರೋ ಬಂದು ಭಾಷಣ ಮಾಡಿದರೆ ಭ್ರಷ್ಟಾಚಾರ ದೂರವಾಗುವುದಿಲ್ಲ .ಕೇವಲ ಬ್ಯಾನರ್ ಹಿಡಿದು ಪ್ರತಿಭಟನೆ ಮಾಡಿದರೆ ಸಾಲದು ,ಅದನ್ನು ಕೃತಿ ರೂಪಕ್ಕೆ ತರಬೇಕಾಗುತ್ತದೆ
ಈ ಹಾಲಿನ ವಿಚಾರದಲ್ಲಿ ಅನೇಕರು ನನ್ನಲ್ಲಿ ನೀವು ಉಪನ್ಯಾಸಕರಾಗಿದ್ದೀರಿ ಹಾಲಿಗೆ ಎರಡು ರುಪಾಯಿ ಹೆಚ್ಚು ಕೊಟ್ಟರೆ ಏನಾಗುತ್ತದೆ? ಎಂದು ಪ್ರಶ್ನಿಸಿದ್ದರು ಕೂಡ !
ಹೌದು! ಹೆಚ್ಚು ಕೊಟ್ಟರೆ ಏನಾಗುತ್ತದೆ ?ಕಪ್ಪು ಹಣ ತುಂಬಲು ನಾವೇ ಕಾರಣರಾಗುತ್ತೇವೆ .ಹೇಗೆ ಗೊತ್ತೇ?
ನಂದಿನಿ ಹಾಲಿನ ಬೂತ್ ಸರಕಾರೀ ಪ್ರಾಯೋಜಿತ ಸಂಸ್ಥೆ .ಅದನ್ನು ತೆರೆಯಲು ಯಾವುದೇ ಖರ್ಚು ಅಥವಾ ಬಂಡವಾಳ ಬೇಕಾಗಿಲ್ಲ .ಕೆ ಎಂ ಎಫ್ ನವರೇ ಬೂತ್ ಅನ್ನು ಹಾಕಿ ಫ್ರೀಜರ್ ಅನ್ನೂ ಕೊಡುತ್ತಾರೆ .ಬೆಳಗ್ಗೆ ಹಾಲನ್ನು ವ್ಯಾನ್ ಮೂಲಕ ತಂದು ಕೊಡುತ್ತಾರೆ .ಇವರು ಎತ್ತಿ ಇಟ್ಟರಾಯಿತು .ಅಷ್ಟು ಮಾಡಿದ್ದಕ್ಕೆ ಅವರಿಗೆ ಲೀಟರ್ ಗೆ ಅರುವತ್ತಾರು   ಪೈಸೆಯಿಂದ ಒಂದು ರು ತನಕ ಕಮಿಷನ್ ದೊರೆಯುತ್ತದೆ ಹಾಲು ಅನಿವಾರ್ಯವಾದ ವಸ್ತು ಎಲ್ಲರೂ ಕೊಂಡು ಕೊಳ್ಳುತ್ತಾರೆ .
ಒಂದು ನಂದಿನಿ ಬೂತ್ ನಲ್ಲಿ ದಿನಕ್ಕೆ ಒಂದು ಸಾವಿರ ಲೀಟರ್ ಹಾಲು ಮಾರಾಟವಾಗುತ್ತದೆ ಎಂದಿಟ್ಟುಕೊಳ್ಳೋಣ .ಇದಕ್ಕೆ ಕಮಿಷನ್ ರೂಪದಲ್ಲಿ ಮಾಲಿಕನಿಗೆ ಕನಿಷ್ಠ ಆರು ನೂರ ಅರುವತ್ತು ರುಪಾಯಿಯಿಂದ ಸಾವಿರ ರುಪಾಯಿ ಯಷ್ಟು ದುಡ್ಡು ಬರುತ್ತದೆ .ಅಂದರೆ ತಿಂಗಳಿಗೆ ಇಪ್ಪತ್ತರಿಂದ ಮೂವತ್ತು ಸಾವಿರ ರೂಗಳಷ್ಟು ಆದಾಯ ಬರುತ್ತದೆ .
 ಲೀಟರ್ ಗೆ ಎರಡು ರು ಹೆಚ್ಚು ವಸೂಲಿ ಮಾಡಿದರೆ ಬೂತ್ ಮಾಲಿಕನ ಜೇಬಿನಲ್ಲಿ ದಿನವೊಂದಕ್ಕೆ ಎರಡು ಸಾವಿರ ರೂಪಾಯಿಗಳಷ್ಟು ಲೆಕ್ಕಕ್ಕೆ ಸಿಗದ ಟ್ಯಾಕ್ಸ್ ಇಲ್ಲದ  ಕಪ್ಪು ಹಣ ಸಂಗ್ರಹವಾಗುತ್ತದೆ ,ಅಂದರೆ ತಿಂಗಳಿಗೆ ಅರುವತ್ತು ಸಾವಿರ ,ವರ್ಷಕ್ಕೆ ಏಳು ಲಕ್ಷ ಇಪ್ಪತ್ತು ಸಾವಿರ ,ಹತ್ತು ವರ್ಷಗಳಲ್ಲಿ ಎಪ್ಪತ್ತೆರಡು ಲಕ್ಷ ವಾಗುತ್ತದೆ .ಈ ತನಕ ಸಂಗ್ರಹವಾದ ದುಡ್ಡಿಗೆ ಬಡ್ಡಿ ಲೆಕ್ಕ ಹಾಕಿದರೆ ಹತ್ತು ವರ್ಷ ವಾಗುವಷ್ಟರಲ್ಲಿ ಆ ನಂದಿನಿ ಬೂತ್ ಮಾಲಕನ ಬಳಿ ಒಂದು ಕೋಟಿಗೂ ಮಿಕ್ಕು ಕಪ್ಪು ಹಣ ಸಂಗ್ರಹವಾಗುತ್ತದೆ .
ಒಬ್ಬ ಸಾಮಾನ್ಯ ನಂದಿನಿ ಬೂತ್ ಮಾಲಕನಲ್ಲಿಯೇ ಇಷ್ಟು ಕಪ್ಪು ಹಣ ಸಂಗ್ರಹವಾಗುವುದಾದರೆ ಇತರ ವ್ಯಾಪಾರಿಗಳ ಬಳಿ ಎಷ್ಟಾಗಲಾರದು ?
ಅದಕ್ಕಾಗಿಯೇ ನಾವು ಎಲ್ಲೆಡೆ ತೆಗೆದು ಕೊಂಡ ಸಾಮಾನುಗಳಿಗೆ ರಶೀತಿಯನ್ನು ಕೇಳಬೇಕು ,ಆದರೆ ಪ್ರಸ್ತುತ ರಶೀತಿ ಕೊಡುವ ಅಂಗಡಿಗಳು ತೀರ ಕಡಿಮೆ ಇವೆ .
ರಶೀದಿ ಇಲ್ಲದಿರುವಾಗ ಗರಿಷ್ಠ ಬೆಲೆಯ ಬಗ್ಗೆ ಕೇಳಲೇನಿದೆ?
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಸ್ ಗೆ ಕಾಯುತ್ತಿದ್ದಾಗ ನನ್ನ ಎದುರು ಒಂದು ವಾಹನ ನಿದಾನವಾಗಿ ಹಾಡು ಹೋಯಿತು .ಅದರಲ್ಲಿ ದೊಡ್ಡದಾಗಿ ವಾನ್ಜ್ಯ ವ್ಯವಹಾರ ನಿಗಮ ಎಂದೇನೋ ಬರೆದಿತ್ತು .ಜೊತೆಗೆ ಯಾರಾದರೂ ಖರಿದಿಸಿದ ವಸ್ತುಗಳಿಗೆ ರಶೀದಿ ಕೊಡದೆ ಇದ್ದರೆ ಅಥವ ಗರಿಷ್ಠ ಬೆಲೆಗಿಂತ ಹೆಚ್ಚು  ವಸೂಲಿ ಮಾಡಿದರೆ ಫೋನ್ ಮಾಡಿ ತಿಳಿಸಿ ಎಂದು ಹೇಳಿ ಒಂದು ಫೋನ್ ಸಂಖ್ಯೆಯನ್ನು ಬರೆಯಲಾಗಿತ್ತು .
ನನಗೆ ಅದನ್ನು ಓದಿ ನಗು ಬಂತು !
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ?ಇವರಾರೂ ಬೆಂಗಳೂರಿನ ಕೆಂಪೇಗೌಡ ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣದಲ್ಲಿ ಏನನ್ನೂ ಖರಿದಿಸಿಯೇ ಇಲ್ಲವೇ ?ಇಲ್ಲಿನ   ಮಳಿಗೆಗಳಲ್ಲಿ ಚಾಕಲೇಟ್ ,ಜ್ಯೂಸು ಗಳು ಸೇರಿದಂತೆ ಯಾವುದೇ ಒಂದು ವಸ್ತು ಕೂಡ  ಅದರಲ್ಲಿ ನಮೂದಿಸಿದ ಗರಿಷ್ಠ ಬೆಲೆಗೆ ಸಿಕ್ಕುವುದಿಲ್ಲ .ಎಲ್ಲಕ್ಕೂ ಒಂದೆರಡು ರು ಹೆಚ್ಚು ಕೊಡಬೇಕು .ರಶೀದಿಯ ಪ್ರಶ್ನೆಯೇ ಇಲ್ಲ ಬಿಡಿ ! ಈ ಬಗ್ಗೆ ದೂರು ಕೊಟ್ಟರೂ ಏನೂ ಪ್ರಯೋಜನವಾಗುವುದಿಲ್ಲ !
ಇದು ಒಂದು ಉದಾಹರಣೆ ಅಷ್ಟೇ !ಇಂಥ ಸಾವಿರಾರು ದೃಷ್ಟಾಂತ ಗಳು ನಮ್ಮ ಕಣ್ಣ ಮುಂದೆಯೇ ಇವೆ .
ಇನ್ನು ಅದಕ್ಕಿಂತ ಮುಂದೆ ಹೋಗಿ ಹೋರಾಟ ಯಾರು ಮಾಡುತ್ತಾರೆ ?ಹೋರಾಟವಾದರೂ ಸುಲಭವೇ ?ಉನ್ನತ ಅಧಿಕಾರಿಗಳನ್ನೇ ಕೊಲೆ ಮಾಡುವ ಮಾಫಿಯಾ ಮಂದಿ ಜನ ಸಾಮಾನ್ಯರನ್ನು ಬಿಡುವರೇ ?
ಇದಕ್ಕೆಲ್ಲ ಏನು ಪರಿಹಾರ ?ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳು ,ಕಾರ್ಯ ಕರ್ತರು ಬಲಿಯಾಗಬೇಕು ?ಇವರುಗಳ ದಾರುಣ ಹತ್ಯೆಗೆ ಕೊನೆ ಎಲ್ಲಿ ?
ಇನ್ನಾದರೂ ಭ್ರಷ್ಟರಿಗೆ ಶೀಘ್ರ ವಾಗಿ ಬಲವಾದ ಶಿಕ್ಷೆಯಾಗಲಿ  ,ಜೊತೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ,ಪ್ರಾಮಾಣಿಕ ಅಧಿಕಾರಿಗಳಿಗೆ ಜನರಿಗೆ ಸೂಕ್ತ ರಕ್ಷಣೆ ಕೂಡ ಒದಗಿಸ ಬೇಕು .ಭ್ರಷ್ಟಾಚಾರಕ್ಕೆ ಒಂದು ನಿಲುಗಡೆ ತರಲೇ ಬೇಕು .ಚೀನಾ ದೇಶದಂತೆ ಭ್ರಷ್ಟ ಅಧಿಕಾರಿಗಳು ಭಯದಿಂದ ಸಾವನ್ನು ಬರಮಾಡಿಕೊಳ್ಳುವಂತೆ ಇಲ್ಲೂ  ಆಗಲಿ .ಇಲ್ಲವಾದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಬಲಿ ಆಗುತ್ತಲೇ ಇರುತ್ತದೆ.
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ ,ಸುಳ್ಯ ತಾ ,ದ ಕ ಜಿಲ್ಲೆ


Sunday 1 March 2015

ಸುರಕ್ಷತೆಯ ಸವಾಲು ಎದುರಿಸಬಲ್ಲದೇ ರೈಲ್ವೆ ? ಕನ್ನಡ ಪ್ರಭ 02 ಮಾರ್ಚ್ 2015



                 

 ರೈಲ್ವೆ ಬಡ್ಜೆಟ್ ಕುರಿತಾಗಿ ಓದುತ್ತಿದ್ದಂತೆ ನೆನಪಿಗೆ ಬಂತು ಮೊನ್ನೆ ಮೊನ್ನೆಯಷ್ಟೇ ನನ್ನ ಕಣ್ಣೆದುರೇ ನಡೆದ ದಾರುಣ ಘಟನೆ .ಜನವರಿ ತಿಂಗಳ ಒಂಬತ್ತನೇ ತಾರೀಕಿನಂದು ನಾನು ಬೆಳ್ಳಾರೆಯಿಂದ ಬೆಂಗಳೂರಿಗೆ ಮಂಗಳೂರು ಬೆಂಗಳೂರು ಟ್ರೈನ್ ನಲ್ಲಿ ಬರುತ್ತಾ ಬೆಳಗ್ಗೆ ಏಳೂವರೆ ಏಳೂ ಮುಕ್ಕಾಲು ಹೊತ್ತಿಗೆ ಕೆಂಗೇರಿಯಲ್ಲಿ ಇಳಿದಿದ್ದೆ .ಅದೇ ಸಮಯದಲ್ಲಿ ಅಲ್ಲಿ  ಮೈಸೂರ್ ಗೆ ಹೋಗುವ ಒಂದು ರೈಲು  ಜನರನ್ನು ಹತ್ತಿಸಿಕೊಂಡು ಹಾದು ಹೋಯಿತು .ಒಂದೆರಡು ಕ್ಷಣ ಕಳೆಯುವಷ್ಟರಲ್ಲಿ ಜನರೆಲ್ಲ ರೈಲ್ವೆ ಟ್ರ್ಯಾಕ್ ಕಡೆ ಬಗ್ಗಿ ನೋಡ ತೊಡಗಿದರು .ಎಲ್ಲರ ಮುಖದಲ್ಲಿ ಗಾಭರಿ !ನಾನೂ ಬಾಗಿ ನೋಡಿದೆ.ಅಲ್ಲಿ 26-29 ವರ್ಷ ಪ್ರಾಯದ ಯುವಕನೊಬ್ಬ ರೈಲು ಹಳಿಯಲ್ಲಿ ತೀವ್ರವಾಗಿ ಗಾಯಗೊಂಡು ಬಿದ್ದಿದ್ದ .ಟ್ರೈನ್ ಚಲಿಸಲು ಆರಂಭಿಸಿದ ಮೇಲೆ ಆತ ಓಡಿ ಬಂದು ರೈಲು ಹತ್ತಲು ಯತ್ನಿಸಿದ್ದ .ಆಯತಪ್ಪಿ ಜಾರಿ ಹಳಿಗೆ ಬಿದ್ದಿದ್ದ . ರೈಲಿನ ಚಕ್ರ ಹರಿದು ಆತನ ಕಾಲುಗಳು ಚಿಂದಿ ಚಿಂದಿಯಾಗಿ ಹಳಿಗೆ ಅಂಟಿಕೊಂಡಿದ್ದವು .ರಕ್ತದ ಮಡುವಿನಲ್ಲಿದ್ದ ಆತನಿಗೆ ಇನ್ನೂ ಎಚ್ಚರವಿತ್ತು .ಸಾವಿನ ಭಯದಿಂದ ತತ್ತರಿಸಿ ಹೋಗಿದ್ದ ಆತನಿಗೆ ನೋವಿನ ಅನುಭವವಿನ್ನೂ ಉಂಟಾಗಿರಲಿಲ್ಲ .ತಕ್ಷಣ ಆತನಿಗೆ ವೈದ್ಯಕೀಯ ಸಹಾಯದ ಅಗತ್ಯವಿತ್ತು .ಈ ಬಗ್ಗೆ ಯಾರನ್ನು ಹೇಗೆ ಸಂಪರ್ಕಿಸುವುದು?ಎಂದು ಅಲ್ಲಿರುವ ಯಾರಿಗೂ ತಲೆಗೆ ಹೋಗಲಿಲ್ಲ.ಫ್ಲಾಟ್ ಫಾರಂ ನಲ್ಲಿ ಇಂಥ ಆಪತ್ತಿನ ಸಂದರ್ಭದಲ್ಲಿ ಸಂಪರ್ಕಿಸುವುದಕ್ಕಾಗಿ ಯಾವುದಾದರೂ ನಂಬರ್ ಅನ್ನು ಬರೆದಿದೆಯೇ ಎಂದು ಸುತ್ತ ಮುತ್ತ ನೋಡಿದರೆ ಎಲ್ಲೂ ಏನೂ ಕಾಣಿಸಲಿಲ್ಲ.ಒಬ್ಬನೇ ಒಬ್ಬ ರೈಲ್ವೆ ಅಧಿಕಾರಿ ಅಥವಾ ಕೆಲಸಗಾರರೂ ಕಣ್ಣಿಗೆ ಕಾಣಿಸಲಿಲ್ಲ .ಹಾಗಾಗಿ ಕೂಡಲೇ 108 ಕ್ಕೆ  ಡಯಲ್ ಮಾಡಿ ಆಂಬುಲೆನ್ಸ್ ಗೆ ಬರಹೇಳಿದೆ .ನಂತರ 100 ಡಯಲ್ ಮಾಡಿ ಪೋಲಿಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಆತನನನ್ನು ರಕ್ಷಿಸುವಂತೆ ಕೇಳಿಕೊಂಡೆ .  ನಂತರ .ಪ್ರಥಮ ಚಿಕಿತ್ಸೆಗಾದರೂ ಏನಾದರು ವ್ಯವಸ್ಥೆ ಇದೆಯೇ ?”ಎಂದು ಹುಡುಕಾಡಿದೆ.ಅಲ್ಲಿ ಏನೊಂದೂ ಮಾಹಿತಿ ಅಥವಾ ವ್ಯವಸ್ಥೆ ಇದ್ದದ್ದು ಗೊತ್ತಾಗಲಿಲ್ಲ .ಇದು ಕೆಂಗೇರಿ ರೈಲ್ವೆ ಸ್ಟೇಷನ್ ಕಥೆ ಮಾತ್ರವಲ್ಲ ,ಎಲ್ಲೆಡೆ ಇದೇ ಕಥೆ-ವ್ಯಥೆ !

ಈ ಯುವಕನ ವಿಚಾರದಲ್ಲಿ ಅದೃಷ್ಟ ಕೈ ಹಿಡಿಯಿತು ,ಆತನಿಗೆ ಸಕಾಲದಲ್ಲಿ ವೈದ್ಯಕೀಯ ಸಹಾಯ ದೊರೆತು ಬದುಕಿ ಉಳಿದಿದ್ದಾನೆ . ಹಾಗಂತ ಎಲ್ಲರ ವಿಚಾರದಲ್ಲಿಯೂ ಹೀಗೆ ಆಗಲು ಸಾಧ್ಯವೇ ?ಇಂಥ ಸಂದರ್ಭಗಳಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಲಕ್ಷಾಂತರ ಅಮಾಯಕ ಜನರು ಪ್ರಾಣ ಕಳೆದುಕೊಳುತ್ತಿದ್ದಾರೆ .
 ಸುಮಾರು 20 ವರ್ಷ ಮೊದಲು ನಾನು ಪಿಯುಸಿ ಓದುತ್ತಿರುವ ಸಂದರ್ಭದಲ್ಲಿ ನನ್ನದೇ ಕಾಲೇಜ್ ನ ವಿದ್ಯಾರ್ಥಿನಿ ಒಬ್ಬಳು ಹೊಸಂಗಡಿಯ ರೈಲ್ವೆ ಕ್ರಾಸಿಂಗ್ ನಲ್ಲಿ ರಸ್ತೆ ದಾಟುವಾಗ ರೈಲು  ಹಳಿಯ ಎಡೆಯಲ್ಲಿ ಕಾಲು ಸಿಲುಕಿ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ದೃಶ್ಯ ಇನ್ನೂ ನನಗೆ ಅಚ್ಚಳಿಯದೆ ಉಳಿದಿದೆ .ಆಗ ಅವಳಿಗೆ ಕೂಡಲೇ ವೈದ್ಯಕೀಯ ಸಹಾಯ ದೊರೆತಿರಲಿಲ್ಲ .ಬಹುಶ ದೊರೆತಿದ್ದರೆ ಕೆಂಗೇರಿಯ ಯುವಕನಂತೆ ಆಕೆಯೂ ಬದುಕಿ ಉಳಿಯುತ್ತಿದ್ದಳೋ ಏನೋ !

ಇಲಾಖೆಯ ದಿವ್ಯ ನಿರ್ಲಕ್ಷ್ಯ
ಚಲಿಸುವ ರೈಲು ಗಾಡಿಗಳನ್ನು ಹತ್ತುವ ಇಳಿಯುವ ಸಮಯದಲ್ಲಿ ಅನೇಕ ಅವಘಡಗಳು ಆಗಾಗ ಆಗುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತದೆ .ಅದೇ ರೀತಿ ಹಳಿಗಳನ್ನು ದಾಟುವ ವೇಳೆ ಪದೇ ಪದೇ ದುರಂತಗಳು ನಡೆಯುತ್ತಾ ಇರುತ್ತವೆ .ರೈಲ್ವೆ ಕ್ರಾಸಿಂಗ್ ಗಳಲ್ಲಿ ಕೂಡ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ .ಇನ್ನು ಟ್ರೈನ್ ಹಳಿ ತಪ್ಪುವುದು ,ಢಿಕ್ಕಿಯಾಗುವುದು ,ಬೆಂಕಿ ಹಿಡಿಯುವುದು ಯಾವಾಗಲೂ ಕೇಳಿ ಬರುವ ದುರಂತ ವಿಚಾರಗಳೇ ಆಗಿವೆ .ದಿನಾ ಸಾಯೋರಿಗೆ ಅಳುವವರು ಯಾರು ಎಂಬಂತೆ ಇಂಥ ವಿಚಾರಗಳ ಬಗ್ಗೆ ರೈಲ್ವೆ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರುತ್ತದೆ .ಅಪಘಾತ ಸಂಭವಿಸಿದಾಗ ಸುರಕ್ಷತೆ ಬಗ್ಗೆ ಮಾತಾಡುವ ಮಂತ್ರಿಗಳು ಅಧಿಕಾರಿಗಳು ಒಂದಷ್ಟು ಪರಿಹಾರ ಧನ ಘೋಷಿಸಿ ಕೈ ತೊಳೆದುಕೊಂಡು ಬಿಡುತ್ತಾರೆ .
ಅಧ್ಯಯನ ಸಮಿತಿಯ ವರದಿ
ಎರಡು ಮೂರು ವರ್ಷಗಳ ಮೊದಲು ರೈಲ್ವೆ ದುರಂತಗಳನ್ನು ತಪ್ಪಿಸಲು ಕೇಂದ್ರ ಸರ್ಕಾರ ಒಂದು ಅಧ್ಯಯನ ಸಮಿತಿಯನ್ನು ನೇಮಿಸಿ ವರದಿಯನ್ನು ನೀಡುವಂತೆ ಆದೇಶಿಸಿತ್ತು . 2012 ರಲ್ಲಿ ಈ ಸಮಿತಿಯು ತನ್ನ ವರದಿಯನ್ನು ರೈಲ್ವೆ ಇಲಾಖೆಗೆ ನೀಡಿತ್ತು .ಈ ವರದಿಯಲ್ಲಿ ಮುಖ್ಯವಾಗಿ ರೈಲ್ವೆ ಅಧಿಕಾರಿಗಳ ನಿರ್ಲ್ಯಕ್ಷದ ಕುರಿತಾಗಿ ಹೇಳಲಾಗಿದೆ .ರೈಲ್ವೆ ಅಧಿಕಾರಿಗಳ ನಿರ್ಲ್ಯಕ್ಷ್ಯ ದಿಂದಾಗಿ ಸಾವಿರಾರು ಪ್ರತಿವರ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ರೈಲ್ವೆ ಹಳಿ ದಾಟುವಾಗ ,ಹಾಗೂ ರೈಲ್ವೆ ಕ್ರಾಸಿಂಗ್ ನಲ್ಲಿ ಅಪಘಾತಗಳಾಗಿ ಪ್ರತಿ ವರ್ಷ ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ . ಹಳಿ ದಾಟುವಾಗ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ .ರಸ್ತೆಗಳಲ್ಲಿ ರೈಲು ಹಳಿ ದಾಟಿ ಹೋಗುವುದು ,ಜನರಿಗೆ ರೈಲು ಬರುವ ಬಗ್ಗೆ ಸೂಕ್ತ ಮಾಹಿತಿ ದೊರೆಯದೆ ಇರುವುದು ,ಹಳಿಗಳ ಗುಣಮಟ್ಟ ಕೆಟ್ಟದಾಗಿದ್ದು ,ಹಳಿಗಳ ನಡುವೆ ಕಾಲುಗಳು ಸಿಲುಕಿಕೊಂಡು ಅಪಘಾತವಾಗುವುದು ,ಸಿಗ್ನಲ್ ಗಳ ಅವ್ಯವಸ್ಥೆ ,ಸಿಬ್ಬಂದಿಗಳ ನಿರ್ಲ್ಯಕ್ಷ್ಯ ಇತ್ಯಾದಿ ಲೋಪ ದೋಷಗಳನ್ನು ಸರಿ ಪಡಿಸುವ ಯತ್ನವೇ ಮಾಡದೆ ಇರುವುದರಿಂದ ರೈಲ್ವೆ ಅಪಘಾತಗಳು ಆಗಾಗ ಸಂಭವಿಸುತ್ತವೆಎಂದು ಈ ಸಮಿತಿಯ ವರದಿಯಲ್ಲಿದೆ .

 ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ರೈಲ್ವೆ ಅಪಘಾತಗಳಿಂದ ನೂರಾರು ಪ್ರಯಾಣಿಕರ ಜೀವಗಳನ್ನು ಬಲಿ ತೆಗೆದು ಕೊಳ್ಳುವುದನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ ಎಂದು ಎಸ್‌ಯುಸಿಐ ಆತಂಕ ವ್ಯಕ್ತಡಿಸಿದೆ. ರೈಲ್ವೆ ದುರಂತಗಳು ಪದೇ ಪದೇ ನಡೆಯುತ್ತಿದ್ದರೂ ರೈಲ್ವೆ ಪ್ರಾಧಿಕಾರವು ಪ್ರಯಾಣಿಕರ ಸುರಕ್ಷತೆ ಬಗ್ಗೆ ಪ್ರಾಮು ಖ್ಯತೆ ನೀಡುತ್ತಿಲ್ಲ. ಅಪಘಾತ ತಡೆಯುವ ಉಪಕರಣಗಳನ್ನು ಅಳವಡಿಸಲು ಹಾಗೂ ಸಿಗ್ನಲ್ ವ್ಯವಸ್ಥೆ ಸುಧಾರಿಸಿ ಅಪಘಾತಗಳ ನಿಯಂತ್ರಿಬೇಕುಎಂದು ಎಸ್‌ಯುಸಿಐಯು ಆಗ್ರಹಿಸಿದೆ.
ಯಾಕೆ ಹೀಗೆ ?
 ಇದಕ್ಕೆಲ್ಲ ಕೇವಲ ರೈಲ್ವೆ ಸಿಬ್ಬಂದಿಗಳನ್ನು ಮಾತ್ರ ದೂರಿ ಪ್ರಯೋಜನವಿಲ್ಲ .ಈ ಬಗ್ಗೆ ರೈಲ್ವೆ ಇಲಾಖೆ ಹಾಗೂ ಸಚಿವರು ಕಾಳಜಿ ವಹಿಸಬೇಕಾಗಿದೆ.ರೈಲ್ವೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ.
ರೈಲ್ವೆಯಲ್ಲಿ ಸುಮಾರು ಎರಡು ಲಕ್ಷ ಹುದ್ದೆಗಳು ಖಾಲಿಯಿವೆ.ಅವುಗಳ ಪೈಕಿ ಒಂದು ಲಕ್ಷ ಭದ್ರತಾ ಸಂಬಂಧಿ ಹುದ್ದೆ ಗಳು.ಮೆಂಬರ್ ಟ್ರಾಫಿಕ್ ಮತ್ತು ಮೆಂಬರ್ ಇಲೆಕ್ಟ್ರಿಕಲ್ ಮುಂತಾದ ಹಲವು ಪ್ರಮುಖ ಹುದ್ದೆಗಳು ಖಾಲಿಯಿವೆ. ವಿವಿಧ ವಲಯಗಳ ಜನರಲ್ ಮ್ಯಾನೇಜರ್ ಮಟ್ಟದ ಹುದ್ದೆಗಳನ್ನೂ ಸರಿಯಾಗಿ ಭರ್ತಿ ಮಾಡಿಲ್ಲ. ಸುರಕ್ಷಾ ವಿಭಾಗದ ಸಿಬ್ಬಂದಿ ನೇಮಕದಲ್ಲೂ ಇಲಾಖೆ ವಿಫಲವಾಗಿದೆ.ಇಲಾಖೆಯಲ್ಲಿ ಎಲ್ಲೆಡೆ ಇಚ್ಚಾ ಶಕ್ತಿಯ ಕೊರತೆ ಕಾಡುತ್ತಿದೆ ಎಂಬ ವಿಚಾರ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ .ಭಾರತೀಯ ರೈಲ್ವೆಯು ಕಾರ್ಪೊರೇಟ್ ಸುರಕ್ಷಾ ಯೋಜನೆ ಮತ್ತು ಜಾರಿಯ ಒಂದನೆಯ ಹಂತದ ಗುರಿಯನ್ನು ಕೂಡಾ ತಲುಪಿಲ್ಲ ಎಂದು ಸಿಎಜಿಯು ತನ್ನ 2010-11ರ ವರದಿಯಲ್ಲಿ ಹೇಳಿದೆ.ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ರೈಲ್ವೆಯ ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾಂಡರ್ಡ್ ಆರ್ಗನೈಸೇಶನ್ ಹಿಂದುಳಿದಿದೆ ಹಾಗೂ ಇದು ರೈಲ್ವೆ ಬಳಕೆದಾರರ ಜೀವಕ್ಕೆ ಅಪಾಯವೊಡ್ಡಿದೆ ಎಂದು ಅದು ಹೇಳಿದೆ.ಚಾಲಕ ಸಿಬ್ಬಂದಿಗೆ ಸುಧಾರಿತ ಸೌಲಭ್ಯಗಳನ್ನು ನೀಡುವಲ್ಲಿ ಹಾಗೂ ತರಬೇತಿ ಸೌಕರ್ಯಗಳನ್ನು ಆಧುನೀಕರಣಗೊಳಿಸುವಲ್ಲಿ ಹಾಗೂ ಅಭಿವೃದ್ಧಿಪಡಿಸುವಲ್ಲಿ ರೈಲ್ವೆ ವಿಫಲವಾಗಿದೆಎಂದು ಸಿಎಜಿ ಆಕ್ಷೇಪ ಮಾಡಿದೆ ಸುರಕ್ಷತೆಗೆ ಸಿಕ್ಕದ ಆದ್ಯತೆ
 ಭಾರತದಲ್ಲಿ ಮೊದಲಬಾರಿಗೆ ರೈಲ್ವೇ ಸಾರಿಗೆ ವ್ಯವಸ್ಥೆಯು 1853 ಜಾರಿಗೆ ಬಂತು. ಭಾರತದಲ್ಲಿ ರೈಲ್ವೇ ಮಾರ್ಗಕ್ಕಾಗಿ 1832 ರಲ್ಲಿ ಮೊಟ್ಟಮೊದಲ ಬಾರಿ ಯೋಜನೆ ಹಾಕಿದರೂ, ಮುಂದಿನ ಹತ್ತು ವರ್ಷ ಅದು ನೆನೆಗುದಿಯಲ್ಲಿಯೇ ಉಳಿಯಿತು. 1844ರಲ್ಲಿ ಅಂದಿನ ಗವರ್ನರ್ ಜನರಲ್ ಲಾರ್ಡ್ ಹಾರ್ಡಿಂಜ್ ಖಾಸಗೀ ಉದ್ಯಮಿಗಳು ರೈಲ್ವೇ ವ್ಯವಸ್ಥೆಯನ್ನು ಪ್ರಾರಂಭಿಸಲು ಅನುಮತಿ ನೀಡಿದನು. 1951ರಲ್ಲಿ ರೈಲುಗಳನ್ನು ರಾಷ್ಟ್ರೀಕರಿಸಿ ಒಂದುಗೂಡಿಸಲಾಯಿತು ಪ್ರಸ್ತುತ ಭಾರತೀಯ ರೈಲ್ವೆಯು ಭಾರತದಾದ್ಯಂತ ಆರೂವರೆ ಸಾವಿರ ಕಿಲೋ ಮೀಟರ್ ಗಳಷ್ಟು ಉದ್ದಕ್ಕೆ ಚಾಚಿಕೊಂಡಿದೆ. ಪ್ರತಿ ದಿನ ಸುಮಾರು ಒಂಬತ್ತು ಸಾವಿರ ಪ್ರಯಾಣಿಕ ರೈಲುಗಳನ್ನು ಸೇರಿದಂತೆ, ಒಟ್ಟು ಸುಮಾರು ಹದಿನೈದು ಸಾವಿರ ರೈಲುಗಳು ಓಡುತ್ತವೆ.ಸುಮಾರು ಒಂದು ಕೋಟಿ ಎಂಬತ್ತು ಲಕ್ಷ  ಜನರು ಪ್ರತಿನಿತ್ಯ ರೈಲುಗಳಲ್ಲಿ ಓಡಾಡುತ್ತಾರೆ . ಹೀಗೆ ಭಾರತೀಯ ರೈಲ್ವೆಯು ಜಗತ್ತಿನಲ್ಲಿಯೇ ಅತಿದೊಡ್ದ ರೈಲ್ವೇಜಾಲಗಳಲ್ಲಿ ಒಂದಾಗಿದೆ ಆದರೆ ಒಂದೂವರೆ ಶತಮಾನದ ಹಿಂದೆಯೇ ಅಂದರೆ 14 ಏಪ್ರಿಲ್1853 ರಲ್ಲಿಯೇ ಪ್ಯಾಸೆಂಜರ್ ರೈಲು ಓಡಾಟ ನಮ್ಮ ದೇಶದಲ್ಲಿ ಆರಂಭವಾಗಿದ್ದರೂ ಸುರಕ್ಷತೆಯ ವಿಚಾರದಲ್ಲಿ ಇನ್ನೂ ಒಂದು ಶತಮಾನದಷ್ಟು ಕಾಲ ಹಿಂದೆ ಬಿದ್ದಿದೆ , ಸುರಕ್ಷತೆಗೆ ಇನ್ನೂ ಸಾಕಷ್ಟು ಆದ್ಯತೆ ಸಿಕ್ಕಿಲ್ಲ ಎನ್ನುವುದು ವಿಷಾದಕರ ವಿಚಾರವಾಗಿದೆ .

ಪ್ರಸ್ತುತ ನಿನ್ನೆ ಮಂಡನೆಯಾದ ರೈಲ್ವೆ ಬಜೆಟ್ ನಲ್ಲಿ ಭದ್ರತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದೆ.ಆದರೆ ಇದರ ಪಾಲು ಎಷ್ಟು ?ಹೇಗೆ ಎಂಬುದು ಸ್ಪಷ್ಟವಾಗಿಲ್ಲ . ರೈಲ್ವೆ ಅಪಘಾತಗಳು ನಡೆದಾಗ ಸಂಪರ್ಕಿಸುವುದಕ್ಕಾಗಿ 24/7 ಸಹಾಯವಾಣಿ ಸ್ಥಾಪಿಸುವುದಾಗಿ ಹೇಳಲಾಗಿದೆ . ಸಬ್ ಅರ್ಬನ್ ಕೋಚ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಿ.ಸಿ ಕ್ಯಾಮೆರಾ ಅಳವಡಿಕೆ ಮಾಡುವ ಬಗ್ಗೆ ತಿಳಿಸಿದೆ. ಆದರೆ ಕೋಟಿಗಟ್ಟಲೆ ಜನ ಓಡಾಡುವ ರೈಲುಗಳ ಸುರಕ್ಷತೆಗೆ ಇಷ್ಟು ಸಾಕಾಗಲಾರದು.
ಏನೇನು ಅಗತ್ಯವಿದೆ ?
ಬೆಂಕಿ ದುರಂತ ಸಂಭವಿಸಿದಾಗ ಬೆಂಕಿ ನಂದಿಸಲು ರೈಲಿನ ಬೋಗಿಗಳಲ್ಲಿ ಯಾವುದೊಂದೂ ವ್ಯವಸ್ಥೆ ಕಾಣಿಸುವುದಿಲ್ಲ ,ಇದಕ್ಕಾಗಿ ಪ್ರತಿ ಬೋಗಿಯಲ್ಲಿ ಬೆಂಕಿ ನಂದಿಸುವ ಉಪಕರಣದ ಅಳವಡಿಕೆ ಮಾಡಬೇಕು.

ದುರಂತಗಳು ಸಂಭವಿಸಿದಾಗ ಯಾರನ್ನು ಹೇಗೆ ಸಂಪರ್ಕಿಸಬೇಕು? ಎಂಬ ಮಾಹಿತಿಯನ್ನು ಪ್ರತಿ ಬೋಗಿಯಲ್ಲಿ ಹಾಕಬೇಕು .ಪ್ರತಿ ಬೋಗಿಯಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು .ಆಪತ್ಕಾಲದ ಕಿಟಕಿಗಳನ್ನು ಸುಲಭದಲ್ಲಿ ತೆರೆಯುವಂತೆ ಇರಬೇಕು (ಪ್ರಸ್ತುತ ಹೆಚ್ಚಿನ ರೈಲುಗಳಲ್ಲಿ ಸರಳುಗಳು ಬಾಗಿ ಅಪತ್ಕಾಲದಲ್ಲಿ ಬಿಡಿ ಸಾವಧಾನವಾಗಿ ಯತ್ನಿಸಿದರೂ ಇದನ್ನು ತೆರೆಯಲುಲು ಸಾಧ್ಯವಾಗುತ್ತಿಲ್ಲ !)
ರೈಲ್ವೆ ದುರಂತಗಳು ಸಂಭವಿಸಿದಾಗ ಕ್ಷಣಾರ್ಧದಲ್ಲಿ ಪ್ರಯಾಣಿಕರ ರಕ್ಷಣೆಗೆ ಧಾವಿಸಿ ಬರುವ ವಿಶಿಷ್ಟ ಸೇವೆಯನ್ನು ಒದಗಿಸುವ ರೈಲುಗಳು ಪ್ರತಿ ನಿಲ್ದಾಣದಲ್ಲಿರಬೇಕು.ಇದರಲ್ಲಿ ತರಬೇತಿ ಪಡೆದ ಅರೋಗ್ಯ ಸಿಬ್ಬಂದಿಗಳು ಮತ್ತು ವೈದ್ಯರ ತಂಡ ತಂಡವಿರಬೇಕು.ಆಕ್ಸಿಜನ್ ಸೇರಿದಂತೆ ಜೇವರಕ್ಷಣೆಗೆ ಬೇಕಾದ ಎಲ್ಲ ಪರಿಕರಗಳು ಇದರಲ್ಲಿರಬೇಕು.
ರೈಲು ಬರುವುದಕ್ಕೆ ಕನಿಷ್ಠ ಹತ್ತು ನಿಮಿಷಗಳ ಮೊದಲೇ ಟಿಕೆಟ್ ಕೊಡುವುದನ್ನು ನಿಲ್ಲಿಸಬೇಕು (ಪ್ರಸ್ತುತ ರೈಲು ಹೋದ ನಂತರ ಕೂಡ ಟಿಕೆಟ್ ನೀಡಿ ಆಗಾಗ ಗಲಾಟೆ ಆಗುತ್ತಿರುತ್ತದೆ ! )ಆಗ ರೈಲು ಚಲಿಸಲಾರಂಭಿಸಿದ ನಂತರ ಓಡಿ ಬಂದು ಹತ್ತುವಾಗ ಉಂಟಾಗುವ ಅನಾಹುತಗಳನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಾಧ್ಯ.

 ರೈಲು ಚಲಿಸಲಾರಂಭಿಸುವ ಮೊದಲೇ ತನ್ನಿಂತಾನಾಗಿಯೇ ಮುಚ್ಚಿಕೊಳ್ಳುವ ಬಾಗಿಲುಗಳ ವ್ಯವಸ್ಥೆಯಿಂದ ಕೂಡಾ ಚಲಿಸುವ ಗಾಡಿಗಳನ್ನು ಹತ್ತುವಾಗ ಅಥವಾ ಇಳಿಯುವಾಗ ಆಗುವ ದುರಂತಗಳನ್ನು ತಪ್ಪಿಸಲು ಸಾಧ್ಯ.

ರೈಲುಗಾಡಿಗಳ ಇಂಪ್ಯಾಕ್ಟ್ ವೆಲೋಸಿಟಿ ತುಂಬಾ ಹೆಚ್ಚಿರುತ್ತದೆ .ಉದಾಹರಣೆಗೆ ಹೇಳುವುದಾದರೆ 6 ಟನ್ ದ್ರವ್ಯರಾಶಿಯುಳ್ಳ ಲಾರಿ ಯೊಂದು ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಬಂದರೂ ಅದರ ಇಂಪ್ಯಾಕ್ಟ್ ವೆಲೋಸಿಟಿ 6 x 40 =240 km/h ಮಾತ್ರ ಆಗಿರುತ್ತದೆ.ಅದೇ 10 -15 ಬೋಗಿಗಳ ಒಂದು ಟ್ರೈನ್ ನ ದ್ರವ್ಯರಾಶಿ ಸುಮಾರು 600 ಟನ್ ಎಂದಿಟ್ಟುಕೊಂಡರೆ ಅದು ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಬಂದರೂ ಅದರ ಇಂಪ್ಯಾಕ್ಟ್ ವೆಲೋಸಿಟಿ 600x 40 =24000km/h ಆಗಿರುತ್ತದೆ .ಇದು ಸುಮಾರು ಒಂದು ಒಂದೂವರೆ ಮೀಟರ್ ದೂರದಲ್ಲಿ ನಿಂತಿರುವವರನ್ನು ಸೆಳೆಯುವಷ್ಟು ಬಲವಾಗಿರುತ್ತದೆ.ಇದರಿಂದಾಗಿಯೇ ಆಯತಪ್ಪಿ ಬೀಳುವ ಜನರು ನೇರವಾಗಿ ಟ್ರ್ಯಾಕ್ ನೊಳಗೆ ಜಾರಿ ಬೀಳುತ್ತಾರೆ. ಇಂಪ್ಯಾಕ್ಟ್ ವೆಲೋಸಿಟಿ ಹೆಚ್ಚಿರುವ ಕಾರಣ ರೈಲು ಗಾಡಿಗಳನ್ನು ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಲು ಆಗುವುದಿಲ್ಲ.ಇಂಪ್ಯಾಕ್ಟ್ ವೆಲೋಸಿಟಿ ಹೆಚ್ಚಿರುವ ಕಾರಣದಿಂದ ರೈಲು ಅಪಘಾತವಾದರೆ ಲಾರಿ ಅಪಘಾತಕ್ಕಿಂತ ನೂರು ಪಟ್ಟು ಹೆಚ್ಚು ಬಲಯುತವಾಗಿರುತ್ತದೆ.ಪರಿಣಾಮ ಕೂಡ ಭೀಕರವಾದ್ದೇ ಆಗುತ್ತದೆ.

 ಆದ್ದರಿಂದ  ಈ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಕೊಡುವ ವ್ಯವಸ್ಥೆ ಮಾಡಬೇಕಿದೆ .ರೈಲ್ವೆ ನಿಲ್ದಾಣಗಳಲ್ಲಿ ಹಳದಿ ಗೆರೆಯನ್ನು ಯಾರೂ ದಾಟದಂತೆ ಎಚ್ಚರಿಕೆ ನೀಡಬೇಕು ಒಂದೊಮ್ಮೆ ಪ್ಲಾಟ್ ಫಾರಂ ನಿಂದ ಜಾರಿ ಬಿದ್ದರೂ ಟ್ರ್ಯಾಕ್ ಗೆ ಬೀಳದಂತೆ ಸಾಕಷ್ಟು ಅಂತರವನ್ನು ಮಾಡಿದರೆ ಒಳ್ಳೆಯದು ಅಥವಾ ಅಂತರವೇ ಇಲ್ಲದಂತೆ ಮಾಡಿದರೂ ಜನರು ಜಾರಿ ಟ್ರ್ಯಾಕ್ ಮೇಲೆ ಬೀಳುವ ಸಾಧ್ಯತೆಗಳು ಇರುವುದಿಲ್ಲ .
ಎಲ್ಲ ರೈಲ್ವೆ ಕ್ರಾಸಿಂಗ್ ಗಳಲ್ಲಿ ಕೂಡ ಮೇಲ್ಸೇತುವೆ ನಿರ್ಮಿಸಬೇಕು.
ರೈಲು ನಿಲ್ದಾಣಗಳಲ್ಲಿ ಹಳಿಗಳ ಮೇಲೆ ದಾಟದಂತೆ ಎಚ್ಚರಿಕೆ ನೀಡಬೇಕು .ಜೊತೆಗೆ ಫ್ಲಾಟ್ ಫಾರಂ ನ ಎತ್ತರವನ್ನು ಎರಡಡಿಗಳಷ್ಟು ಎತ್ತರಿಸಿದರೆ ಜನರಿಗೆ ಸುಲಭದಲ್ಲಿ ಹತ್ತಿ ಇಳಿಯಲು ಸಾಧ್ಯವಾಗಲಾರದು .ಸುರಕ್ಷತೆ ಬಗ್ಗೆ ಸಾಕಷ್ಟು ಮಾಹಿತಿ ನೀಡಬೇಕು .ಒಟ್ಟಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಸಿಗಬೇಕಾಗಿದೆ.

 ಡಾ.ಲಕ್ಷ್ಮೀ ಜಿ ಪ್ರಸಾದ
 ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿಪೂರ್ವ ಕಾಲೇಜ್
ಬೆಳ್ಳಾರೆ ಸುಳ್ಯ ತಾಲೂಕು ,ದ.ಕ ಜಿಲ್ಲೆ
samgramahithi@gmail.com