Thursday 19 March 2015

ಭ್ರಷ್ಟಾಚಾರ ವಿರೋಧ :ಆಕ್ರೋಶದ ಜೊತೆಗಿರಲಿ ಆತ್ಮಾವಲೋಕನ -ಡಾ.ಲಕ್ಷ್ಮೀ ಜಿ ಪ್ರಸಾದ (ಕನ್ನಡ ಪ್ರಭ 20 ಮಾರ್ಚ್ 2015 )



 

ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳ ಬಲಿಯಾಗಬೇಕು ?
ನಮ್ಮ ಪಕ್ಕದ ಚೀನಾ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ .2011 ರಲ್ಲಿ ಚೀನಾದ  ಹತ್ತೊಂಬತ್ತು ಜನ ಭ್ರಷ್ಟ ಅಧಿಕಾರಿಗಳು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ . 2012ರಲ್ಲಿ ಇಪ್ಪತ್ತೊಂದು ಭ್ರಷ್ಟ ಅಧಿಕಾರಿಗಳು ಸಾವನ್ನು ಆಹ್ವಾನಿಸಿಕೊಂಡು ಸತ್ತಿದ್ದಾರೆ . 2013ರಲ್ಲಿ ಭ್ರಷ್ಟ  ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಕಳೆದ ವರ್ಷ ಕೂಡ ಇಲ್ಲಿ ಅನೇಕ ಮಂದಿ ಅಧಿಕಾರಿಗಳು ಸಾವಿಗೆ ಶರಣಾಗಿದ್ದಾರೆ .ಇವರೆಲ್ಲ  ತಾವು ಮಾಡಿದ ಅನ್ಯಾಯವನ್ನು ನೆನೆದು ಪಶ್ಚಾತ್ತಾಪ ಪಟ್ಟು ಆತ್ಮ ಹತ್ಯೆ ಮಾಡಿಕೊಂಡದ್ದಲ್ಲ !!
ಅಲ್ಲಿನ ಸರಕಾರ 2012 ರಿಂದ ಭ್ರಷ್ಟಾಚಾರದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ .ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳನ್ನು ಹಿಡಿದು ಶಿಕ್ಷಿಸುತ್ತಾ ಇದೆ .ಇದರಿಂದ ಭಯಗೊಂಡಿರುವ ಭ್ರಷ್ಟ ಅಧಿಕಾರಿಗಳು ವಿಚಾರಣೆ ಮತ್ತು ಶಿಕ್ಷೆಗಳಿಗೆ ಭಯ ಪಟ್ಟು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ .
 ಚೀನದಲ್ಲಿ ಭ್ರಷ್ಟ ಅಧಿಕಾರಿಗಳು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದರೆ ನಮ್ಮ ದೇಶದಲ್ಲಿ ಪ್ರಾಮಾಣಿಕ ಅಧಿಕಾರಿಗಳು ಆತ್ಮ ಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎನ್ನುವುದು ನಿಜಕ್ಕೂ ಶೋಚನೀಯ ವಿಚಾರ .ಒಂದೊಮ್ಮೆ ಆತ್ಮ ಹತ್ಯೆ ಮಾಡಿಕೊಳ್ಳದಿದ್ರೆ ಪ್ರಾಮಾಣಿಕ ಅಧಿಕಾರಿಗಳ ಹತ್ಯೆಯನ್ನು ಮಾಡುತ್ತಾರೆ !
ನಮ್ಮ ದೇಶದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಹತ್ಯೆಯಾಗುವುದು ಇಂದು ನಿನ್ನೆಯ ವಿಚಾರವೇನಲ್ಲ .ಸುಮಾರು ಇಪ್ಪತ್ತು ಇಪ್ಪತ್ತೆರಡು ವರ್ಷಗಳ ಹಿಂದೆ ಕಾಡುಗಳ್ಳರ ವಿರುದ್ಧ ಹೋರಾಡಿದ ಪ್ರಾಮಾಣಿಕ ಅರಣ್ಯಾಧಿಕಾರಿ ಶ್ರೀನಿವಾಸ್ ಅವರ ಕಗ್ಗೊಲೆಯಾಗಿತ್ತು .
ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭ್ರಷ್ಟಾಚಾರದ ಕುರಿತು ಮಾಹಿತಿ ನೀಡಿದ ಪ್ರಾಮಾಣಿಕ ಎಂಜಿನಿಯರ್ ಸತ್ಯೇಂದ್ರ ದುಭೆಯನ್ನು ಕೊಲೆ ಮಾಡಲಾಗಿತ್ತು .
ಹತ್ತು ವರ್ಷಗಳ ಮೊದಲು  2005 ನವೆಂಬರ್ 19ರಂದು ಐಒಸಿ ತೈಲ ಕಂಪೆನಿಯಲ್ಲಿ ಮ್ಯಾನೇಜರಾಗಿದ್ದ ಕರ್ನಾಟಕದ ಕೋಲಾರ ಮೂಲದ ಮಂಜುನಾಥ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.
ಉತ್ತರ ಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ತೈಲ ಮಾಫಿಯಾವನ್ನು ಮಂಜುನಾಥ ಅವರು ಪತ್ತೆ ಹಚ್ಚಿದ್ದರು. ಇದರಿಂದ ರೊಚ್ಚಿಗೆದ್ದ ಮಾಫಿಯಾ ಮಂದಿ ಅವರನ್ನು ಹತ್ಯೆ ಮಾಡಿದ್ದರು.
ಮುಂಬೈ ಮಹಾ ನಗರ ಪಾಲಿಕೆ ಎಂಜಿನಿಯರ್ ನಂದ ಕಿಶೋರ್ ಎಂಬವರು ಅವರ ಹಿರಿಯ ಮೇಲಧಿಕಾರಿಗಳು,ಎಂಜಿನಿಯರ್  ನಡೆಸುವ ಭ್ರಷ್ಟ ವ್ಯವಹಾರಗಳನ್ನು ಬಯಲು ಮಾಡಿದ್ದರು .ಇದರ ಪರಿಣಾಮವಾಗಿ ಅವರು ಅವರ ಆಫೀಸ್ ನ ಫ್ಯಾನ್ ಗೆ ನೇಣು ಬಿಗಿದು ಸಾಯಬೇಕಾಯಿತು .ಅದು ಕೊಲೆಯೋ ಆತ್ಮ ಹತ್ಯೆಯೋ ಎಂದು ಇನ್ನೂ ಇತ್ಯರ್ಥವಾಗಿಲ್ಲ .
ಮರಳು ಮಾಫಿಯಾವನ್ನು ತಡೆದ ಐಎಎಸ್ ಅಧಿಕಾರಿ ಒಬ್ಬರನ್ನು ಅಮಾನತು ಮಾಡಲಾಗಿತ್ತು .
ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ಪ್ರಾಮಾಣಿಕ ಮೆಸ್ಕಾಂ ಅಧಿಕಾರಿಯೊಬ್ಬರ ಕೊಲೆ ಆಯಿತು .
ಕೆಲ ಸಮಯದ ಹಿಂದೆ ಪ್ರಾಮಾಣಿಕ ಐಎಎಸ್ ಅಧಿಕಾರಿ ರಶ್ಮಿ ಅವರ ಮೇಲೆ ಹಾಡು ಹಗಲೇ ಹಲ್ಲೆ ನಡೆದಿತ್ತು !
ವಿಶ್ವ ವಿದ್ಯಾಲಯವೊಂದರ ಸಮಾಜ ಶಾಸ್ತ್ರದ ಉಪನ್ಯಾಸಕರು ಒಬ್ಬರು ಭ್ರಷ್ಟ ವ್ಯವಸ್ಥೆಗೆ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು .
ಎರಡು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಪ್ರಾಮಾಣಿಕ ದಕ್ಷ ಐಎಎಸ್ ಅಧಿಕಾರಿಯ ಕೊಲೆಯಾದ ಬಗ್ಗೆ ವರದಿಯಾಗಿದೆ .ಇದೀಗ  ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಹತ್ಯೆಯಾಗಿದೆ.ಇವು  ಕೆಲವು ಉದಾಹರಣೆಗಳು ಅಷ್ಟೇ .
ನಮ್ಮಲ್ಲಿ ಆಗಾಗ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಹಲ್ಲೆ ,ಹತ್ಯೆಗಳು ಸಂಭವಿಸುತ್ತಲೇ ಇರುತ್ತದೆ .
ಭ್ರಷ್ಟಾಚಾರ ,ಅನ್ಯಾಯಗಳನ್ನು ಪ್ರಶ್ನಿಸಿದ ಉನ್ನತ ಅಧಿಕಾರಿಗಳ ಪರಿಸ್ಥಿತಿಯೇ ಹೀಗಾಗಿರುವಾಗ ಜನ ಸಾಮಾನ್ಯರ ಬಗ್ಗೆ ಹೇಳಲೇನಿದೆ ?ಮಾನವ ಹಕ್ಕು ಗ್ರಾಹಕ ಹಕ್ಕು ಕಾರ್ಯಕರ್ತರ ಹತ್ಯೆಯ ವಿಚಾರ ಆಗಾಗ ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತದೆ !ಆದರೂ ಯಾರೂ ಬಲವಾಗಿ ಪ್ರತಿಭಟಿಸುತ್ತ ಇಲ್ಲ .
ಭ್ರಷ್ಟಾಚಾರವನ್ನು ಹತ್ತಿಕ್ಕುವ ಯತ್ನ ಮಾಡುವ ಪ್ರಾಮಾಣಿಕ ಅಧಿಕಾರಿಗಳಿಗೇ ರಕ್ಷಣೆ ಇಲ್ಲವಾದರೆ ಭ್ರಷ್ಟಾಚಾರದ ಕಬಂಧ ಬಾಹುಗಳನ್ನು ಕತ್ತರಿಸುವುದು ಹೇಗೆ ?ಇದೊಂದು ಪರಿಹಾರ ಕಾಣದ ಸಮಸ್ಯೆಯಾಗಿದೆ.
ಭ್ರಷ್ಟಾಚಾರದ ಬಗ್ಗೆ ಜಬ ಸೋಸಿ ಹೋಗಿದ್ದಾರೆ ಹಾಗಾಗಿಯೇ ಅಣ್ಣ ಹಜಾರೆಯವರ ಅಂದೋಲನಕ್ಕೆ ನಿರೀಕ್ಷೆಗೂ ಮೀರಿ ಜನ ಕೈ ಜೋಡಿಸಿದ್ದಾರೆ.ಇದರ ಹಿನ್ನೆಲೆಯಲ್ಲೇ ಹುಟ್ಟಿಕೊಂಡ ಆಮ್ ಆದ್ಮಿ ಪಾರ್ಟಿ ಇಂದು ದಿಲ್ಲಿಯ ಗದ್ದುಗೆಯನ್ನು ಹಿಡಿಡಿದೆ .ಆದರೂ ಭ್ರಷ್ಟಾಚಾರ ಕಡಿಮೆಯಾಗುತ್ತಿಲ್ಲ .
ಯಾಕೆ ಹೀಗೆ ?
ಕೆಲ ವರ್ಷಗಳ ಮೊದಲು ನಾನಿದ್ದ ಪ್ರದೇಶದಲ್ಲಿನ ನಂದಿನಿ ಬೂತ್ ಒಂದರಲ್ಲಿ ಒಂದು ಲೀಟರ್ ನಂದಿನಿ ಹಾಲಿಗೆ ಅದರಲ್ಲಿ ನಮೂದಿಸಿದ್ದ ಗರಿಷ್ಠ ಬೆಲೆಗಿಂತ ಎರಡು ರುಪಾಯಿಗಳನ್ನು ಹೆಚ್ಚು ಬೆಲೆ ವಸೂಲಿ ಮಾಡುತ್ತಿದ್ದರು .ಈ ಬಗ್ಗೆ ನಾನು ಪ್ರಶ್ನಿಸಿದಾಗ ಹಾಲು ಬೇಕಿದ್ರೆ ತಗೊಳ್ಳಿ ಎಂಬ ಉಡಾಫೆಯ ಉತ್ತರ ಬಂತು .ಹಾಗಾದರೆ ನಾನು ಗ್ರಾಹಕ ರಕ್ಷಕ ಕೇಂದ್ರಕ್ಕೆ ಫೋನ್ ಮಾಡುವುದಾಗಿ ತಿಳಿಸಿದೆ .ಯಾರಿಗೆ ಬೇಕಾದರೂ ಹೇಳಿ ಎಂದು ಹೇಳಿದರು .ನಾನು ಅದೇ ಹಾಲಿನ ಪ್ಯಾಕೆಟ್ ನಲ್ಲಿದ್ದ ಕಸ್ಟಮರ್ ಕೇರ್ ಸಂಖ್ಯೆಗೆ ಫೋನ್ ಮಾಡಿದೆ.ಅಲ್ಲಿನ ಉತ್ತರ ಕೇಳಿ ನನಗೆ ಆಶ್ಚರ್ಯವಾಯಿತು.ನಾವು ಅಲ್ಲಿ ದಿನಕ್ಕೆ ಒಂದು ಬಾರಿ ಮಾತ್ರ ಸರಬರಾಜು ಮಾಡುವುದು ಎರಡು ಬಾರಿ ಬರಲು ಸಾಧ್ಯವಾಗುವುದಿಲ್ಲ .ಹಾಲು ಉಳಿದರೆ ಹಾಳಾದರೆ ಆಗುವ ನಷ್ಟವನ್ನು ನೀವು ಅವರಿಗೆ ಕೊಡುತ್ತೀರಾ? ಇತ್ಯಾದಿಯಾಗಿ ಅಲ್ಲಿಂದ ಉತ್ತರ ಬಂದಿತ್ತು !ನಾನು ಪಟ್ಟು ಬಿಡದೆ ಅಲ್ಲಿನ ಮೇಲಧಿಕಾರಿಗೆ ಇದನ್ನು ತಿಳಿಸಿದೆ .ಆಗ ಅವರು ಆ ಪ್ರದೇಶಕ್ಕೆ ಬಂದು ಪರಿಶೀಲಿಸಿ ಅಲ್ಲಿ ಅವರ ಫೋನ್ ನಂಬರ್ ಬರೆಸಿ ಗರಿಷ್ಠ ಬೆಲೆಗಿಂತ ಹೆಚ್ಚು ವಸೂಲಿ ಮಾಡಿದರೆ ಅವರ ನಂಬರ್ ಗೆ ಕರೆ ಮಾಡುವಂತೆ ಸೂಚನೆ ಹಾಕಿದರು .ಅನಂತರ ಪತ್ರಿಕೆಗಳಲ್ಲಿ ಅವರ ನಂಬರ್ ಕೊಟ್ಟು ಹಾಲಿಗೆ ಗರಿಷ್ಠ ಬೆಲೆಗಿಂತ ಹೆಚ್ಚು ವಸೂಲಿ ಮಾಡಿದರೆ ಕರೆಮಾದುವಂತೆ ಮಾಹಿತಿ ನೀಡಿದ್ದರು ಕೂಡ .ಆದರೆ ಅವರು ಅತ್ತ ಹೋಗುತ್ತಲೇ ಅವರು ಬರೆಸಿದ ಸೂಚನಾ ಫಲಕವನ್ನು ಕಿತ್ತು ಇವರು ಬಿಸಾಡಿದ್ದರು .
ಈ ನಡುವೆ ನನಗೆ ಹಾಗೂ ನನ್ನಂತೆ ಪ್ರಶ್ನಿಸಿದ ಒಬ್ಬಿಬ್ಬರಿಗೆ ಅಲ್ಲಿ ನಂದಿನಿ ಹಾಲು ಗರಿಷ್ಠ ಬೆಲೆಗೆ ಸಿಕ್ಕುತ್ತ ಇತ್ತು .ಆದರೆ ನಮ್ಮ ಜೊತೆಗೆ ಹಾಲು ತೆಗೆದುಕೊಳ್ಳುವ ಇತರರಿಗೆ ಎರಡು ರುಪಾಯಿ ಹೆಚ್ಚು ತೆಗೆದು ಕೊಳ್ಳುತ್ತಾ ಇದ್ದರು ನಮ್ಮ ಎದುರಿನಲ್ಲಿಯೇ !
ಇಲ್ಲಿ ಎಲ್ಲರೂ ಈ ಬಗ್ಗೆ ಕರೆ ಮಾಡಿ ದೂರು ಕೊಟ್ಟಿದ್ದರೆ ಎಲ್ಲರಿಗೂ ಖಂಡಿತವಾಗಿಯೂ ಗರಿಷ್ಠ ಬೆಲೆಗೆ ಸಿಗುತ್ತಿತ್ತು ,ಆದರೆ ಕಣ್ಣು ಮುಚ್ಚಿ ಹೇಳಿದಷ್ಟು ಬೆಲೆ ಕೊಡುವ ಜನರಿರುವಾಗ ಹೆಚ್ಚು ಬೆಲೆ ತೆಗೆದುಕೊಳ್ಳುವುದಕ್ಕೆ ಏನೂ ಅಡ್ಡಿ ಆಗುವುದಿಲ್ಲ !
ಅದೇ ಸಮಯದಲ್ಲಿ ನಮ್ಮ ಕಾಲೇಜ್ ನಲ್ಲಿ ಭ್ರಷ್ಟಾಚಾರ ವಿರುದ್ಧ ತಾಲೂಕು ಮಟ್ಟದ ಕಾರ್ಯಕ್ರಮ ನಡೆದಿದ್ದು  ಲೋಕಾಯುಕ್ತರಾಗಿದ್ದ ಸಂತೋಷ ಹೆಗಡೆಯವರು ಆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಬಂದಿದ್ದರು .  ಹೆಚ್ಚು ಬೆಲೆ ಕೊಟ್ಟು ತೆಗೆದುಕೊಳ್ಳುವ ಮಂದಿಯಲ್ಲಿ ಹೆಚ್ಚಿನವರು ಅಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಕಾರ್ಯಕ್ರಮಕ್ಕೆ ಬಂದಿದ್ದು ಅವರ ಮಾತಿಗೆ ತಲೆದೂಗಿ ಚಪ್ಪಾಳೆ ತಟ್ಟಿದ್ದರು !
ಹೌದು ! ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಮಾವಿನಕಾಯಿ ಉದುರಬೇಕಾದರೆ ಕಲ್ಲು ಎಸೆಯಲೇ ಬೇಕು ,ಹಾಗೆಯೂ ಯಾರೋ ಬಂದು ಭಾಷಣ ಮಾಡಿದರೆ ಭ್ರಷ್ಟಾಚಾರ ದೂರವಾಗುವುದಿಲ್ಲ .ಕೇವಲ ಬ್ಯಾನರ್ ಹಿಡಿದು ಪ್ರತಿಭಟನೆ ಮಾಡಿದರೆ ಸಾಲದು ,ಅದನ್ನು ಕೃತಿ ರೂಪಕ್ಕೆ ತರಬೇಕಾಗುತ್ತದೆ
ಈ ಹಾಲಿನ ವಿಚಾರದಲ್ಲಿ ಅನೇಕರು ನನ್ನಲ್ಲಿ ನೀವು ಉಪನ್ಯಾಸಕರಾಗಿದ್ದೀರಿ ಹಾಲಿಗೆ ಎರಡು ರುಪಾಯಿ ಹೆಚ್ಚು ಕೊಟ್ಟರೆ ಏನಾಗುತ್ತದೆ? ಎಂದು ಪ್ರಶ್ನಿಸಿದ್ದರು ಕೂಡ !
ಹೌದು! ಹೆಚ್ಚು ಕೊಟ್ಟರೆ ಏನಾಗುತ್ತದೆ ?ಕಪ್ಪು ಹಣ ತುಂಬಲು ನಾವೇ ಕಾರಣರಾಗುತ್ತೇವೆ .ಹೇಗೆ ಗೊತ್ತೇ?
ನಂದಿನಿ ಹಾಲಿನ ಬೂತ್ ಸರಕಾರೀ ಪ್ರಾಯೋಜಿತ ಸಂಸ್ಥೆ .ಅದನ್ನು ತೆರೆಯಲು ಯಾವುದೇ ಖರ್ಚು ಅಥವಾ ಬಂಡವಾಳ ಬೇಕಾಗಿಲ್ಲ .ಕೆ ಎಂ ಎಫ್ ನವರೇ ಬೂತ್ ಅನ್ನು ಹಾಕಿ ಫ್ರೀಜರ್ ಅನ್ನೂ ಕೊಡುತ್ತಾರೆ .ಬೆಳಗ್ಗೆ ಹಾಲನ್ನು ವ್ಯಾನ್ ಮೂಲಕ ತಂದು ಕೊಡುತ್ತಾರೆ .ಇವರು ಎತ್ತಿ ಇಟ್ಟರಾಯಿತು .ಅಷ್ಟು ಮಾಡಿದ್ದಕ್ಕೆ ಅವರಿಗೆ ಲೀಟರ್ ಗೆ ಅರುವತ್ತಾರು   ಪೈಸೆಯಿಂದ ಒಂದು ರು ತನಕ ಕಮಿಷನ್ ದೊರೆಯುತ್ತದೆ ಹಾಲು ಅನಿವಾರ್ಯವಾದ ವಸ್ತು ಎಲ್ಲರೂ ಕೊಂಡು ಕೊಳ್ಳುತ್ತಾರೆ .
ಒಂದು ನಂದಿನಿ ಬೂತ್ ನಲ್ಲಿ ದಿನಕ್ಕೆ ಒಂದು ಸಾವಿರ ಲೀಟರ್ ಹಾಲು ಮಾರಾಟವಾಗುತ್ತದೆ ಎಂದಿಟ್ಟುಕೊಳ್ಳೋಣ .ಇದಕ್ಕೆ ಕಮಿಷನ್ ರೂಪದಲ್ಲಿ ಮಾಲಿಕನಿಗೆ ಕನಿಷ್ಠ ಆರು ನೂರ ಅರುವತ್ತು ರುಪಾಯಿಯಿಂದ ಸಾವಿರ ರುಪಾಯಿ ಯಷ್ಟು ದುಡ್ಡು ಬರುತ್ತದೆ .ಅಂದರೆ ತಿಂಗಳಿಗೆ ಇಪ್ಪತ್ತರಿಂದ ಮೂವತ್ತು ಸಾವಿರ ರೂಗಳಷ್ಟು ಆದಾಯ ಬರುತ್ತದೆ .
 ಲೀಟರ್ ಗೆ ಎರಡು ರು ಹೆಚ್ಚು ವಸೂಲಿ ಮಾಡಿದರೆ ಬೂತ್ ಮಾಲಿಕನ ಜೇಬಿನಲ್ಲಿ ದಿನವೊಂದಕ್ಕೆ ಎರಡು ಸಾವಿರ ರೂಪಾಯಿಗಳಷ್ಟು ಲೆಕ್ಕಕ್ಕೆ ಸಿಗದ ಟ್ಯಾಕ್ಸ್ ಇಲ್ಲದ  ಕಪ್ಪು ಹಣ ಸಂಗ್ರಹವಾಗುತ್ತದೆ ,ಅಂದರೆ ತಿಂಗಳಿಗೆ ಅರುವತ್ತು ಸಾವಿರ ,ವರ್ಷಕ್ಕೆ ಏಳು ಲಕ್ಷ ಇಪ್ಪತ್ತು ಸಾವಿರ ,ಹತ್ತು ವರ್ಷಗಳಲ್ಲಿ ಎಪ್ಪತ್ತೆರಡು ಲಕ್ಷ ವಾಗುತ್ತದೆ .ಈ ತನಕ ಸಂಗ್ರಹವಾದ ದುಡ್ಡಿಗೆ ಬಡ್ಡಿ ಲೆಕ್ಕ ಹಾಕಿದರೆ ಹತ್ತು ವರ್ಷ ವಾಗುವಷ್ಟರಲ್ಲಿ ಆ ನಂದಿನಿ ಬೂತ್ ಮಾಲಕನ ಬಳಿ ಒಂದು ಕೋಟಿಗೂ ಮಿಕ್ಕು ಕಪ್ಪು ಹಣ ಸಂಗ್ರಹವಾಗುತ್ತದೆ .
ಒಬ್ಬ ಸಾಮಾನ್ಯ ನಂದಿನಿ ಬೂತ್ ಮಾಲಕನಲ್ಲಿಯೇ ಇಷ್ಟು ಕಪ್ಪು ಹಣ ಸಂಗ್ರಹವಾಗುವುದಾದರೆ ಇತರ ವ್ಯಾಪಾರಿಗಳ ಬಳಿ ಎಷ್ಟಾಗಲಾರದು ?
ಅದಕ್ಕಾಗಿಯೇ ನಾವು ಎಲ್ಲೆಡೆ ತೆಗೆದು ಕೊಂಡ ಸಾಮಾನುಗಳಿಗೆ ರಶೀತಿಯನ್ನು ಕೇಳಬೇಕು ,ಆದರೆ ಪ್ರಸ್ತುತ ರಶೀತಿ ಕೊಡುವ ಅಂಗಡಿಗಳು ತೀರ ಕಡಿಮೆ ಇವೆ .
ರಶೀದಿ ಇಲ್ಲದಿರುವಾಗ ಗರಿಷ್ಠ ಬೆಲೆಯ ಬಗ್ಗೆ ಕೇಳಲೇನಿದೆ?
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಸ್ ಗೆ ಕಾಯುತ್ತಿದ್ದಾಗ ನನ್ನ ಎದುರು ಒಂದು ವಾಹನ ನಿದಾನವಾಗಿ ಹಾಡು ಹೋಯಿತು .ಅದರಲ್ಲಿ ದೊಡ್ಡದಾಗಿ ವಾನ್ಜ್ಯ ವ್ಯವಹಾರ ನಿಗಮ ಎಂದೇನೋ ಬರೆದಿತ್ತು .ಜೊತೆಗೆ ಯಾರಾದರೂ ಖರಿದಿಸಿದ ವಸ್ತುಗಳಿಗೆ ರಶೀದಿ ಕೊಡದೆ ಇದ್ದರೆ ಅಥವ ಗರಿಷ್ಠ ಬೆಲೆಗಿಂತ ಹೆಚ್ಚು  ವಸೂಲಿ ಮಾಡಿದರೆ ಫೋನ್ ಮಾಡಿ ತಿಳಿಸಿ ಎಂದು ಹೇಳಿ ಒಂದು ಫೋನ್ ಸಂಖ್ಯೆಯನ್ನು ಬರೆಯಲಾಗಿತ್ತು .
ನನಗೆ ಅದನ್ನು ಓದಿ ನಗು ಬಂತು !
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ?ಇವರಾರೂ ಬೆಂಗಳೂರಿನ ಕೆಂಪೇಗೌಡ ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣದಲ್ಲಿ ಏನನ್ನೂ ಖರಿದಿಸಿಯೇ ಇಲ್ಲವೇ ?ಇಲ್ಲಿನ   ಮಳಿಗೆಗಳಲ್ಲಿ ಚಾಕಲೇಟ್ ,ಜ್ಯೂಸು ಗಳು ಸೇರಿದಂತೆ ಯಾವುದೇ ಒಂದು ವಸ್ತು ಕೂಡ  ಅದರಲ್ಲಿ ನಮೂದಿಸಿದ ಗರಿಷ್ಠ ಬೆಲೆಗೆ ಸಿಕ್ಕುವುದಿಲ್ಲ .ಎಲ್ಲಕ್ಕೂ ಒಂದೆರಡು ರು ಹೆಚ್ಚು ಕೊಡಬೇಕು .ರಶೀದಿಯ ಪ್ರಶ್ನೆಯೇ ಇಲ್ಲ ಬಿಡಿ ! ಈ ಬಗ್ಗೆ ದೂರು ಕೊಟ್ಟರೂ ಏನೂ ಪ್ರಯೋಜನವಾಗುವುದಿಲ್ಲ !
ಇದು ಒಂದು ಉದಾಹರಣೆ ಅಷ್ಟೇ !ಇಂಥ ಸಾವಿರಾರು ದೃಷ್ಟಾಂತ ಗಳು ನಮ್ಮ ಕಣ್ಣ ಮುಂದೆಯೇ ಇವೆ .
ಇನ್ನು ಅದಕ್ಕಿಂತ ಮುಂದೆ ಹೋಗಿ ಹೋರಾಟ ಯಾರು ಮಾಡುತ್ತಾರೆ ?ಹೋರಾಟವಾದರೂ ಸುಲಭವೇ ?ಉನ್ನತ ಅಧಿಕಾರಿಗಳನ್ನೇ ಕೊಲೆ ಮಾಡುವ ಮಾಫಿಯಾ ಮಂದಿ ಜನ ಸಾಮಾನ್ಯರನ್ನು ಬಿಡುವರೇ ?
ಇದಕ್ಕೆಲ್ಲ ಏನು ಪರಿಹಾರ ?ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳು ,ಕಾರ್ಯ ಕರ್ತರು ಬಲಿಯಾಗಬೇಕು ?ಇವರುಗಳ ದಾರುಣ ಹತ್ಯೆಗೆ ಕೊನೆ ಎಲ್ಲಿ ?
ಇನ್ನಾದರೂ ಭ್ರಷ್ಟರಿಗೆ ಶೀಘ್ರ ವಾಗಿ ಬಲವಾದ ಶಿಕ್ಷೆಯಾಗಲಿ  ,ಜೊತೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ,ಪ್ರಾಮಾಣಿಕ ಅಧಿಕಾರಿಗಳಿಗೆ ಜನರಿಗೆ ಸೂಕ್ತ ರಕ್ಷಣೆ ಕೂಡ ಒದಗಿಸ ಬೇಕು .ಭ್ರಷ್ಟಾಚಾರಕ್ಕೆ ಒಂದು ನಿಲುಗಡೆ ತರಲೇ ಬೇಕು .ಚೀನಾ ದೇಶದಂತೆ ಭ್ರಷ್ಟ ಅಧಿಕಾರಿಗಳು ಭಯದಿಂದ ಸಾವನ್ನು ಬರಮಾಡಿಕೊಳ್ಳುವಂತೆ ಇಲ್ಲೂ  ಆಗಲಿ .ಇಲ್ಲವಾದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಬಲಿ ಆಗುತ್ತಲೇ ಇರುತ್ತದೆ.
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ ,ಸುಳ್ಯ ತಾ ,ದ ಕ ಜಿಲ್ಲೆ


No comments:

Post a Comment