Saturday 30 November 2019

ಸುಬ್ಬಿ ಇಂಗ್ಲೀಷ್ ಕಲ್ತದ್ದು : ರಚನೆ : ಡಾ.ಲಕ್ಷ್ಮೀ ಜಿ ಪ್ರಸಾದ (ಮೂಲ : ಹವ್ಯಕ ಕನ್ನಡ ನಾಟಕ ಸುಬ್ಬಿ ಇಂಗ್ಲೀಷ್ ಕಲ್ತದು)



                                   ಸುಬ್ಬಿ ಇಂಗ್ಲೀಷ್ ಕಲ್ತದ್ದು
ನಾಟಕ ರಚನೆ : ಡಾ.ಲಕ್ಷ್ಮೀ ಜಿ ಪ್ರಸಾದ,ಕನ್ನಡ ಉಪನ್ಯಾಸಕರು,ಸರ್ಕಾರಿ ಪಿಯು ಕಾಲೇಜು, ಬ್ಯಾಟರಾಯನಪುರ ಬೆಂಗಳೂರು
                                       ದೃಶ್ಯ -1
(ಸುಬ್ಬಿ ಅಡಿಗೆ ಮಾಡಿಗೊಂಡು ಇರುವಾಗ ಫೋನ್ ರಿಂಗ್ ಆಗುತ್ತದೆ )
ಸುಬ್ಬಿ ; ಅಯ್ಯೋ ರಾಮ ದೇವರೇ ಇದೊಂದು ಫೋನ್ ಮೂರೂ ಹೊತ್ತು ಬೊಬ್ಬೆ ಹೊಡಕೊಂಡೇ   ಇರುತ್ತದೆ..ಒಂದು ಕೆಲಸ ಮಾಡಲು ಬಿಡುತ್ತಾ ಇಲ್ಲ..ಗಳಿಗೆಗೊಮ್ಮೆ ಫೋನ್ ಬರುತ್ತಾ ಇದ್ದರೆ ನಾನು ಅಡಿಗೆ ಮಾಡುದಾದರೂ ಹೇಗೆ (ಫೋನ್ ಎತ್ತಿ )ಹಲ್ಲೋ ಯಾರು ?..ಯಾರು ..?ಸರಿ ಕೇಳ್ತಿಲ್ಲ..ದೊಡ್ಡಕ್ಕೆ ಮಾತಾಡಿ ..ಅರೆ ನೀವು ಎಂತ ಹೇಳುವುದೆಂದು ಗೊತ್ತಾಗುತ್ತಾ ಇಲ್ಲೆಲ್ಲ ..(ಫೋನ್ ಇಡುತ್ತಾಳೆ )
ಅಯ್ಯೋ ದೇವರೇ ..ನನ್ನ ಕರ್ಮವೇ .?ಯಾರೋ ಇವರ ಫ್ರೆಂಡ್ ಗಳ ಫೋನ್ ಆಗಿರ ಬೇಕು !ಅವರಿಗೆ ಒಬ್ರಿಗೂ ನಮ್ಮ ಭಾಷೆ ಬರುವುಲ್ಲ,ಎಲ್ಲರು ಕೂಡ ಇಂಗ್ಲೀಷ್ ಹಿಂದಿ ಭಾಷೆಗಳಲ್ಲಿ ಮಾತಾಡುತ್ತಾರೆ‌ .ಯಾರೋ ಏನೋ..ಇನ್ನು ಆಗಿನಿಂದಲೇ ಮತ್ತೆ ಮತ್ತೆ ಫೋನ್ ಬರುತ್ತ ಇದೆ‌ ..ಅಯ್ಯೋ ರಾಮ ..ಪಲ್ಯ ಒಲೆಯಲಿ ಇಟ್ಡು ಬಂದಿರುವೆ ‌ತಳ ಹಿಡಿಯಿತೋ ಏನೊ ..ನೋಡುತ್ತೇನೆ..
(ಫೋನ್ ಮತ್ತೆ ರಿಂಗ್ ಆಗುತ್ತದೆ )
ಇನ್ನು ಪುನಃ ಯಾರಿಂದಪ್ಪಾ ಫೋನ್ ? ಇವರ ಫ್ರೆಂಡ್ಸ್ ಗಳಿಗೆ ಮಾಡಲು ಬೇರೆ ಕೆಲಸ ಇಲ್ವಾ ? ಮತ್ತೆ ಮತ್ತೆ ಫೋನ್ ಮಾಡಿ ಇಂಗ್ಲಿಷಿಲಿ ಏನೋ ಹೇಳ್ತಿದಾರೆ.ಅಲ್ಲ ಇವರಾದರೂ ಹೇಳಬಾರದಾ ರಾತ್ರಿ ಮಾತ್ರ ಫೋನ್ ಮಾಡಿ ನನ್ನ ಹೆಂಡತಿಗೆ ಇಂಗ್ಲಿಷ್ ಬರಲ್ಲ ಅಂತ.(ಫೋನ್ ಎತ್ತಿ)ಹಲ್ಲೋ ಯಾರು ?..(ಫೋನ್ ಇಟ್ಟು )ಮತ್ತೆ ಅದೇ ರಾಮಾಯಣ !ಯಾರೋ ಇವರ ಫ್ರೆಂಡ್ಸ್ ಇಂಗ್ಲಿಷಿನಲ್ಲಿ ಎಂತದೋ ಹೇಳ್ತಾ ಇರಬೇಕು ..ಎಂತ ಬೇಕಾದರೂ ಹೇಳಲಿ ..ನನಗೇನು  ? ಈ  ಫೋನಿನ ದೆಸೆಯಿಂದಾಗಿ ನನಗಂತು ನೆಮ್ಮದಿ ಇಲ್ಲ
(ಮತ್ತೆ ಫೋನ್ ರಿಂಗ್ ಆಗುತ್ತದೆ)
ಸುಬ್ಬಿ : ಇದು ಬೊಬ್ಬೆ ಹಾಕಿಕೊಂಡೆ ಇರಲಿ ನಾನಂತೂ ಇವತ್ತು  ಎತ್ತುವುದಿಲ್ಲ.. .ನನಗೆ ತುಂಬಾ ಕೆಲಸ ಇದೆ  (ಒಳ ಹೋಗುತ್ತಾಳೆ)
               (ಫೋನ್ ಮತ್ತೆ ಮತ್ತೆ ರಿಂಗ್ ಆಗುತ್ತದೆ )
ಸುಬ್ಬಿ : ಈವತ್ತು ಏನಾಗಿದೆ ಈ ಫೋನಿಗೆ?ಯಾರಿದು  ದಿನ ಇಡೀ  ಫೋನ್ ಮಾಡುತ್ತಾ ಇರುವುದು ಅಂತ   ಗೊತ್ತಾಗುತ್ತಾ ಇಲ್ಲವಲ್ಲ? ಇರಲಿ ಅವರಿಗೆ ಮಾಡುತ್ತೇನೆ.. (ಫೋನ್ ಎತ್ತಿ ) ಹಲ್ಲೋ ಯಾರದು ಇಡೀ ದಿನ ಫೋನ್ ಮಾಡುದು ?ನಿಮಗೆ ಬೇರೆಂಥ ಕೆಲಸ ಇಲ್ವಾ ?ಇಡಿ  ಫೋನ್ ..(ಬೈದು ಫೋನ್ ಇಟ್ಟು ಒಳಗೆ ಹೋಗುತ್ತಾಳೆ)
ಸುಬ್ಬಿ : (ಸ್ವಗತ) ಅಬ್ಬಾ !ಅಡಿಗೆ ಕೆಲಸ ಎಲ್ಲ ಮಗೀತಪ್ಪ !ಸ್ವಲ್ಪ ಹೊತ್ತು ಆರಾಮಾಗಿ ಕುಳಿತುಕೊಳ್ಳುವೆ ಇನ್ನು ..ಸಾಕಾಗಿ ಹೋಯ್ತು   ...ನನ್ನ ಗೆಳತಿಯರೆಲ್ಲ ಈಗ ಆರಾಮಾಗಿ ಶಾಲೆ ಕಾಲೇಜುಗಳಿಗೆ ಹೋಗಿ ಕೊಂಡು ಇರಬಹುದು  ..ನಾನು ಮಾತ್ರ ಮದುವೆ ಆಗಿ ಸೋತೆ ..ನಾನು ಹಠ ಮಾಡಿ ಮದುವೆ ಬೇಡ ,ನಾನು ಶಾಲೆಗೆ ಹೋಗುತ್ತೇನೆ ಎಂದು ಹೇಳಬೇಕಾಗಿತ್ತು ..ಭಾರೀ ದೊಡ್ಡ ತಪ್ಪು ಮಾಡಿದೆ ಅಂತ  ಎನಗೆ ಈಗ  ಅರ್ಥವಾಗಿದೆ ..ಛೆ !ಏನು ಮಾಡುದು ?
                             (ಟಕ್ ಟಕ್ ಬಾಗಿಲು ಬಡಿದ ಶಬ್ದ ಆಗುತ್ತದೆ )
ಓ ಯಾರೋ ಬಂದಿದಾರೆ ಅಂತ ಕಾಣುತ್ತದೆ  ಕಾಣೆಕ್ಕು ಬಾಗಿಲು ಬಡಿಯುತ್ತಾ ಇದ್ದಾರೆ. ಯಾರು ಅಂತ ನೋಡುತ್ತೇನೆ..
                                    (ಅಪ್ಪ ಅಮ್ಮ ಒಳ ಗೆ ಬರುತ್ತಾರೆ ) 
ಸುಬ್ಬಿ : ಓ !ಅಪ್ಪ ಅಮ್ಮ ..!ಬನ್ನಿ ಬನ್ನಿ ..ಬಾಯಾರಿಕೆಗೆ ಶರಬತ್ತು ತರ್ತೇನೆ ಬನ್ನಿ  ಕುಳಿತುಕೊಳ್ಳಿ
ಅಪ್ಪ :ಬಾಯಾರಿಕೆಗೆ ಎಂಥ ಬೇಡ ಮಗಳೇ
ಸುಬ್ಬಿ : ಈ ಬಿಸಿಲಿಗೆ ಬಂದಿದ್ದೀರಿ‌. ..ತಣ್ಣಗೆ ಪುನರ್ಪುಳಿ ಶರ್ಬತ್ತು  ಮಾಡಿ ತರುತ್ತೇನೆ.. ಆಗಬಹುದಲ್ಲಾ  ?ಸ್ವಲ್ಪ ಕುಡೀರಿ
ಅಮ್ಮ : ಸರಿ .ಒಂದು ಅರ್ಧರ್ಧ ಲೋಟ ಸಾಕು ಸುಬ್ಬಿ ..ಸುಬ್ಬ  ಇಲ್ವಾ ಮನೆಯಲ್ಲಿ ?
ಸುಬ್ಬಿ : ಇಲ್ಲಮ್ಮ ಅವರು ಆಫೀಸಿಗೆ ಹೋಗಿದ್ದಾರೆ, ಈಗ ಬರಬಹುದು,ಒಂದು ನಿಮಿಷ ಕೂತಿರಿ ಶರ್ಬತ್ತು  ಮಾಡಿ ತರುತ್ತೇನೆ..
(ಒಳ ಹೋಗಿ ಮಾಡಿ ತರುತ್ತಾಳೆ)
ಸುಬ್ಬಿ : (ಸರ್ಬತ್ತು ಕೊಡುತ್ತಾ ) ಅಲ್ಲ ..ನೀವು  ಎಂಥ ಹೀಂಗೆ ದಿಡೀರನೆ ಬಂದದ್ದು ?ನೀವು ಫೋನ್ ಮಾಡಿದರೆ ಇವರು ಕರೆದುಕೊಂಡು ಬರಲು ಬರ್ತಿದ್ರಲ್ವಾ ?ಬಸ್ ಸ್ಟಾಂಡ್ ನಿಂದ ಹೇಗೆ ಬಂದಿರಿ ?ದಾರಿ ಸರಿ ಸಿಕ್ಕಿತ್ತಾ ?ಎಂಥಕ್ಕೂ ಫೋನ್  ಮಾಡಿದ್ದರೆ ನಾನು ಇವರನ್ನು ಕಳುಹಿಸುತ್ತಿದ್ದೆ..
ಅಮ್ಮ : ಎಷ್ಟು ಸರ್ತಿ ಮಾರಾಯ್ತಿ ನಿನಗೆ ಫೋನ್ ಮಾಡುದು ?ಫೋನ್ ಮಾಡಿ ಮಾಡಿ ಸಾಕಾಯಿತು ..ನೀನು ಫೋನ್ ಎತ್ತಲೇ ಇಲ್ಲ ..ಕೊನೆಗೆ ಫೋನೆತ್ತಿ ನಾನು ಮಾತನಾಡುವ ಮೊದಲೇ " ನಿಮಗೇನು ಬೇರ ಕೆಲಸ ಇಲ್ವಾ ಫೋನ್ ಇಡಿ ಎಂದು ಹೇಳಿ ಬೈದು ಇಟ್ಟೆ ನೀನು ! ಎಂಥ ಕಥೆ ನಿನ್ನದು ?ಅಷ್ಟು ತಾಳ್ಮೆ ಇಲ್ಲದಿದ್ದರೆ ಹೇಗೆ ?
ಸುಬ್ಬಿ : ಅಯ್ಯೋ ದೇವರೇ ..ಅದು ಅಷ್ಟು ಸಲ ಫೋನ್ ಮಾಡಿದ್ದು ನೀವಾ!?ಬೆಳಗ್ಗಿನಿಂದ ಯಾರೋ ಮತ್ತೆ ಮತ್ತೆ  ಫೋನ್ ಮಾಡಿ ಇಂಗ್ಲಿಷಿನಲ್ಲಿ ಎಂಥದೋ ಹೇಳ್ತಾ ಇದ್ದರು .ಅದಕ್ಕೆ ಫೋನ್ ಎತ್ತಿರಲಿಲ್ಲ..ಮತ್ತೆ  ಮತ್ತೆ ಫೋನ್ ಬಂದಾಗ ಕೋಪ ಬಂದು ಹಾಗೆ ಹೇಳಿದ್ದು ಅಷ್ಟೇ!ಬೇಸರವಾಯಿತಾ ನಿಮಗೆ ?
ಅಮ್ಮ :ಮತ್ತೆ ಯಾರಿಗಾದರೂ ಬೇರವಾಗದ ಇರುತ್ತಾ? ಅಲ್ಲ ..ಸುಬ್ಬಿ ನೀನು ಅಷ್ಟು ತಾಳ್ಮೆ ಕಳೆದುಕೊಂಡರೆ ಹೇಗೆ?ನೋಡು.. ಈಗ ನೀನು ಸಣ್ಣ ಕೂಸು ಅಲ್ಲ ..ಎಲ್ಲರೊಟ್ಟಿಗೆ ನಯ ವಿನಯದಿಂದದ ಇರಬೆಕು ಗೊತ್ತಾಯ್ತಾ?
(ಮಾತಾಡುತ್ತ ಇರುವಾಗ ಸುಬ್ಬ ಒಳಗೆ ಬರುತ್ತಾನೆ )
ಸುಬ್ಬ  :ಹಾಗೆಯೇ ಹೇಳಿ ಅತ್ತೆ ..ನೀವು ಇವಳಿಗೆ ಸ್ವಲ್ಪ ಬುದ್ಧಿ ಹೇಳಿ ..ಇವಳ ಹತ್ರ  ಎಷ್ಟು ಸಲ ಹೇಳ್ತೇನೆ ಅಂತ ಇಲ್ಲ .ಸಿಡುಕಬಾರದು ಎಂದು  ,ಆದರೆ ನನ್ನ ಫ್ರೆಂಡ್ ಗಳ ಫೋನ್ ಬಂದರೆ ಸಾಕು ಇವಳಿಗೆ ಕೋಪ ಬರುತ್ತದೆ..
ಸುಬ್ಬಿ : ಹೌದು ಮತ್ತೆ ..ನಿಮ್ಮ ಫ್ರೆಂಡ್ಸ್  ಎಲ್ಲ ಇಂಗ್ಲಿಷ್‌ನಲ್ಲಿ ಮಾತಾಡುತ್ತಾರೆ..ನನಗೆ ಎಂತದು ತಲೆಬುಡ ಗೊತ್ತಾಗುವುದಿಲ್ಲ,ಮತ್ತೆ ಎಂಥ ಮಾಡುದು ನಾನು ?ನೀವು ನಿಮ್ಮ  ಫ್ರೆಂಡ್ ಗಳ ಹತ್ತಿರ ನನ್ನ ಹೆಂಡತಿಗೆ ಇಂಗ್ಲೀಷು ಬರಲ್ಲ ಅಂತ  ಹೇಳಿ ಅಂದ್ರೆ ನೀವು ಹೇಳುತ್ತಾ ಇಲ್ಲ.. ನಾನೇನು ಮಾಡಲಿ ?


ಸುಬ್ಬ :ಅದಕ್ಕೆ ನಾನು  ಹೇಳುದು  ಸ್ವಲ್ಪ ಇಂಗ್ಲೀಷು ಕಲಿ  ಅಂತ, ಕ್ಲಾಸಿಗೆ ಹೋಗಿ ಕಲಿ ಎಂದು ಆದರೆ ನಿನಗೆ ಕಲಿಯಲು  ಮನಸಿಲ್ಲ ..ನನ್ನ ಫ್ರೆಂಡ್ಸ್ ಗಳು ಯಾರಾದರೂ ಮನೆಗೆ ಬಂದರೆ ನಿನಗೆ ಇಂಗ್ಲೀಷು ಬರಲ್ಲ ಎಂದು ಗೊತ್ತಾದರೆ ನನಗೆ ಎಷ್ಟು ನಾಚಿಕೆ ಗೊತ್ತಾ ?ಅವರ ಹೆಂಡತಿಯರೆಲ್ಲ ಎಲ್ಲ ಡಬ್ಬಲ್ ಡಿಗ್ರಿ ಮಾಡಿದ್ದಾರೆ ಗೊತ್ತಾ ?
ಸುಬ್ಬಿ : ನೋಡಮ್ಮ ..ಇವರು ಹೀಗೆ ದಿನಾಲೂ ನಾನು ಓದಿಲ್ಲ ಎಂದು ನನ್ನ ಹಂಗಿಸುತ್ತಾರೆ!ಇವರಿಗೆ ಅಷ್ಟು ನಾಚಿಕೆ ಆಗುದಾದರೆ ನನ್ನ ಮದುವೆ ಆದ್ದು ಎಂಥಕೆ ? ಕೇಳಿ ..
ಸುಬ್ಬ :ಮದುವೆ ಆದ ಮೇಲೆ ನಿನಗೆ ಇಂಗ್ಲೀಷು ಕಲಿಸಬಹುದು ಎಂದು ಭಾವಿಸಿ ಮದುವೆ ಆದೆ ,ನಿನಗೆ ಕಲಿವ ಮನಸ್ಸೇ ಇಲ್ಲ ..
ಅಪ್ಪ : ಹೌದು ..ಮಗಳೇ ..ಏನೋ ಸೋದರತ್ತೆ ಮಗಳು ಎಂದು ಪ್ರೀತಿಯಿಂದ ಮದುವೆ ಆದ .ನೀನು ಚೂರು ಇಂಗ್ಲೀಷು ಕಲಿ ನಿನಗೆ ಇಂಗ್ಲೀಷು ಬಂದರೆ ಸಮಸ್ಯೆಯೇ ಇಲ್ಲಲ್ಲಾ..
ಅಮ್ಮ : ಸಾಕಿನ್ನು ಆ ವಿಚಾರ ..ಸುಬ್ಬಿ ..ಅಡಿಗೆ ಆಗಿದ ?ಆದರೆ ಊಟ ಮಾಡುವ ಎಲ್ಲರೂ. ಗಂಟೆ ಎರಡಾಯಿತು ..ಹಸಿವಾಗ್ತಿದೆ ..ಊಟ ಮಾಡುವ ..
ಅಪ್ಪ : ಸ್ಸರಿ..ಸ್ಸರಿ ..ಬಡಿಸಿ ..
(ಎಲ್ಲ ಒಳ ಹೋವುತ್ತವು)
(ಫೋನ್ ಮತ್ತೆ ರಿಂಗ್ ಆವುತ್ತು )
ಸುಬ್ಬ ;ಹಲೋ . S.Raja  is here
ಥೋಮಸ್; hello Mr S.Raja How are you ?Iam Thomas here
ಸುಬ್ಬ :Hello friend ,how are you ?when did you come from U S A?
ಥೋಮಸ್ : We arrived India yesterday,Tolin also came with me ,we are coming to your house today evening
ಸುಬ್ಬ :What a surprise visit !You are always welcome
ಥೋಮಸ್ : Thank you very much ,meet you on evening
ಸುಬ್ಬ : ok bye


ಸುಬ್ಬ : (ಸ್ವಗತ ) ಸಂಜೆ ನನ್ನ ಸ್ನೇಹಿತರು  ಬರ್ತಾರೆ !ನಾನು ನನ್ನ ಹೆಂಡತಿ ಡಬ್ಬಲ್ ಗ್ರಾಜುವೇಟ್ ಎಂದು ಹೇಳಿದ್ದೆ  ಅವರಲ್ಲಿ!ಈಗ ಎಂಥ ಮಾಡುದು ?(ಭಾರೀ ಚಿಂತೆಲಿ ತಲೆಗೆ ಕೈ ಕೊಟ್ಟು ಕೂರುತ್ತ )
ಅಪ್ಪ ; ಎಂಥ ಸುಬ್ಬ  ?ಯಾರದು ಫೋನ್ ?ಏನು ಸಮಾಚಾರ ?
ಸುಬ್ಬ : ಎಂಥ  ಹೇಳುದು ಮಾವ ? ಈಗ ಸಂಜೆ ನನ್ನ ಸ್ನೇಹಿತರು ಇಲ್ಲಿಗೆ ಬರ್ತಾರೆ ..ಅದೇ ಯೋಚನೆ ನನಗೆ ..!
ಅಪ್ಪ : ಅದಕ್ಕೆ ಅಷ್ಟು ತಲೆಬಿಸಿ   ಮಾಡಲು ಏನಿದೆ ?ನಿನ್ನ ಅತ್ತೆ ಮತ್ತು  ಸುಬ್ಬಿ ಸೇರಿ ಏನಾದರೂ ತಿಂಡಿ ,ಸಿಹಿ ಮಾಡಿಯಾರು ,ಬೇಕಾದರೆ ಬೆಕರಿಯಿಂದಲೂ ತರಬಹುದಲ್ವಾ?
ಸುಬ್ಬ : ಅಯ್ಯೋ ಅದೆಂತ ತೊಂದರೆ ಇಲ್ಲ ಮಾವ
ಅಪ್ಪ :ಮತ್ತೆ ಅವರು ಬರುವಾಗ ನಾವು ಇದ್ದರೆ ತೊಂದರೆ ಆಗುತ್ತಾ?ನಾವು ಬೇಕಿದ್ರೆ ಈಗಲೇ ಹೊರಡುತ್ತೇವೆ !
ರಾಜ : ಅಯ್ಯಯ್ಯೋ ನೀವು ಇರಿ ಮಾವ ,ನೀವು ಇದ್ದರೆ ಎಂಥ ತೊಂದರೆ ಇಲ್ಲೆ .ನನಗೆ ಸಮಸ್ಯೆ ಅಲ್ಲ ಮಾವ.
ಸುಬ್ಬ : ಮತ್ತೆ ಎಂತ ಯೋಚನೆ ಹೇಳು ?ಸರಿ ಮಾಡುವ ಎಲ್ಲ
ಸುಬ್ಬ ; ಅದೇ ಮಾವ ..ಅದೇ ನಮ್ಮ ಸುಬ್ಬಿಗೆ ಇಂಗ್ಲೀಷು ಬರುವುದಿಲ್ಲ ಅಲ್ವಾ,ಎನ್ನ ಸ್ನೇಹಿತರಿಗೆ ಕನ್ನಡ  ಬರುವುದಿಲ್ಲ.ಅವರು ಅಮೆರಿಕಾಲ್ಲಿ ಇರುವುದು‌..ಅವರು ಇಂಗ್ಲಿಷಿನಲ್ಲಿಯೇ ಮಾತಾಡುತ್ತಾರೆ‌.ಏನು ಮಾಡುದು ಈಗ .. ಗೊಂತ್ತಾಗುತ್ತಾ ಇಲ್ಲ ಎನಗೆ
ಅಮ್ಮ : ಅದಕ್ಕೇನಂತೆ ? ಆರಂಭದಲ್ಲೇ ನೀನು ನಿನ್ನ ಸ್ನೇಹಿತರ ಬಳಿ   ಸುಬ್ಬಿಗೆ ಇಂಗ್ಲೀಷು ಬರುವುದಿಲ್ಲ ಎಂದು ತಿಳಿಸಿ ಬಿಡು.
ಸುಬ್ಬ : ಅದಾಗದು ಅತ್ತೆ ..ನಾನೆ ನನ್ನ ಸ್ನೇಹಿತರ  ಬಳಿ ನನ್ನ ಹೆಂಡತಿ ಡಬ್ಬಲ್ ಡಿಗ್ರಿ ಓದಿದ್ದಾಳೆ ಎಂದು ಹೇಳಿದ್ದೆ ..ಈಗ ಎಂಥ ಎಂತ ಮಾಡುದು ?
ಸುಬ್ಬಿ : ಈಗ ಎಂಥ ಮಾಡುದು ?ಮತ್ತೆ ಸುಳ್ಳು ಹೇಳಿದ್ದು ಯಾಕೆ ?ಎಂಥ ಬೇಕಾದರೂ ಮಾಡಿ ನನಗೆ ಗೊತ್ತಿಲ್ಲ.
ಸುಬ್ಬ : (ಜೋರಾಗಿ ಕೋಪದಿಂದ)ಸುಬ್ಬಿ ಅದೆಲ್ಲ ನನಗೆ ಗೊತ್ತಿಲ್ಲ ..ನೀನು ಅವರ ಬಳಿ ಇಂಗ್ಲಿಷಿನಲ್ಲಿ ಮಾತನಾಡಬೇಕು ಅಷ್ಟೇ !
ಸುಬ್ಬಿ :ಅಲ್ಲಾರಿ  ಹೈ ಸ್ಕೂಲ್  ಮೆಟ್ಟಿಲು ಹತ್ತದ ನಾನು ಇಂಗ್ಲಿಷಿನಲ್ಲಿ ಹೇಗೆ  ಮಾತಾಡುದು ಹೇಳಿ ?
ಸುಬ್ಬ : ನಾನು ಹೇಳಿ ಕೊಡುತ್ತೇನೆ ..ಕಲಿ .
ಸುಬ್ಬಿ: ಅಲ್ಲಾರಿ ನಿಮ್ಮ ಸ್ನೇಹಿತರು ಸಂಜೆ  ಬರ್ತಾರೆ ..ಇನ್ನು ಒಂದೆರಡು ಗಂಟೆ ಒಳಗೆ ಅವರು ಬರುತ್ತಾರೆ..ಅಷ್ಟು ಕಡಿಮೆ ಸಮಯದಲ್ಲಿ ಇಂಗ್ಲಿಷ್ ಕಲಿಯಲು ಸಾಧ್ಯವೇ ?!ಏನು ಹೇಳ್ತಿದೀರಿ ನೀವು ಎಂದು  ಎನಗೆ ಅರ್ಥ ಆಗುತ್ತಾ ಇಲ್ಲ ನನಗೆ. ಎಂಥ ಮರ್ಲು ನಿಮ್ಮದು!
ಅಮ್ಮ : ಹೌದು ಸುಬ್ಬ  ..ಸುಬ್ಬಿ ಹೇಳುವುದರಲ್ಲಿಯೂ ಅರ್ಥ ಇದೆ ,ಒಂದೆರಡು ಗಂಟೆಯಲಿ ಇಂಗ್ಲೀಷು ಕಲಿಯಲು ಸಾಧ್ಯವೇ? ಅದೆಂತ ಮಕ್ಕಳಾಟವ?
ಸುಬ್ಬ : ಅದು ಹಾಗಲ್ಲ ಅತ್ತೆ ..ನನ್ನ  ಸ್ನೇಹಿತರಿಗೆ ಸುಬ್ಬಿ ಹತ್ತಿರ ಮಾತನಾಡುವದ್ದು ಏನಿರುತ್ತೆ   ಹೇಳಿ ?ಸುಮ್ಮನೆ ಶಿಷ್ಟಾಚಾರಕ್ಕಾಗಿ ಹೆಸರು ,ಊರು ಮಕ್ಕ ಳು,ವಯಸ್ಸು  ..ಕೇಳ್ತಾರೆ  ಅಷ್ಟೇ ?ಅವರು ಹೇಗೆ ಮಾತನಾಡುತ್ತಾರೆ ಎಂದು ನನಗೆ ಗೊತ್ತಿದೆ. ಬೇರೆ ಕಡೆ ನಾನು ಗಮನಿಸಿದ್ದೇನೆ.ಅವರು ಮಾತನಾಡುವುದನ್ನು. .ಅದಕ್ಕೆ ಒಂದೊಂದು ಶಬ್ದದಲ್ಲಿ ಉತ್ತರ ಹೇಳಿದರೆ ಆಯಿತು ಅದನ್ನು ನಾನು ಈಗ ಸುಬ್ಬಿಗೆ ಹೇಳಿ ಕೊಡ್ತೇನೆ. ಅದನ್ನು ಕಲಿಯಲು ಅರ್ಧ ಗಂಟೆ ಕೂಡ ಬೇಡ
ಅಪ್ಪ :ಹೌದು ಸುಬ್ಬಿ ,ಸುಬ್ಬ  ಹೇಳುವುದು  ಸರಿ ನೀನು ಅವನು ಹೇಳಿ ಕೊಟ್ಟ ಹಾಗೆ ಕಲಿ, ನಾವು ಆ ಕಡೆ ಇರ್ತೇವೆ
ಸುಬ್ಬಿ : ಹ್ಹೂ ಸರಿ .ಅಪ್ಪ ..
ಸುಬ್ಬ : ನೋಡು ಸುಬ್ಬಿ ಅವರು ಸುರುವಿಗೆ ನಿನ್ನ ಹೆಸರೇನು ಎಂದು ಕೇಳ್ತಾರೆ  ..ಏನು  ಹೇಳ್ತಿ ನೀನು ?
ಸುಬ್ಬಿ  :ನನ್ನ ಹೆಸರು ನಿಮಗೆ ಗೊತ್ತಲ್ವ ?
ಸುಬ್ಬ ;ನನಗೆ ಗೊತ್ತು ಆದರೆ ಅವರಿಗೆ ಗೊತ್ತಿಲ್ಲ ಅಲ್ವಾ
ಸುಬ್ಬಿ : ಓ ಹೌದು ..ನನ್ನ ಹೆಸರು ಸುಬ್ಬಲಕ್ಷ್ಮಮ್ಮ ಎಂದು ತಾನೇ   ಅದನ್ನೇ ಹೇಳ್ತೇನೆ..
ಸುಬ್ಬ : ಈ ಸುಬ್ಬಲಕ್ಷ್ಮಮ್ಮ ಶಾಂತಮ್ಮ ನಂಜುಡಮ್ಮ ಎಲ್ಲ ಹಳೆ ಹೆಸರು ಅದು ಆಗದು ..ಈಗ ನಾನು ಎನ್ನ ಹೆಸರು ಸುಬ್ಬ ರಾಜ ಹೇಳಿ ಇರುವುದನ್ನು ಎಸ್ .ರಾಜ ಎಂದು ಚಿಕ್ಕದು ಮಾಡಿ ಚಂದದ ಮಾಡಿಲ್ವಾ ?ಈಗ ಮನೆಯವರಿಗೆ  ಬಿಟ್ರೆ ಬೇರೆ ಯಾರಿಗೂ ನನ್ನ ಹೆಸರಿನ ಎಸ್ ಎಂದರೆ  ಸುಬ್ಬ ಎಂಬ ವಿಚಾರ ಗೊತ್ತಿಲ್ಲ ಅಲ್ವಾ ಗ?ಹಾಗೆ ನಿನ್ನ ಹೆಸರನ್ನು ಬೇರೆ ಮಾಡುವ ..ನೀನೊಂದು ಚೆಂದದ ಹೆಸರು ಹೇಳು .
ಸುಬ್ಬಿ :ಆಗಬಹುದು ..ಹಾಗಾದರೆ  ನಾನು ಯಾವ ಹೆಸರು ಹೇಳಬೇಕು?
ಸುಬ್ಬ :( ಯೋಚನೆ ಮಾಡಿ ) ಹ್ಹ ..ನೀನು ಚಂದನಾ ಎಂದು ಹೇಳು
ಸುಬ್ಬಿ :ಹ್ಹ  ಆಗಬಹುದು ಹೆಸರು ಚಂದ ಇದೆ ಇದು  ಚಂದನಾ ಕನ್ನಡ ವಾಹಿನಿ
ಸುಬ್ಬಿ :ತಲೆ ಹರಟೆ ಮಾಡಬೇಡ ,ಸುಮ್ಮನೆ ಇರು
ಸುಬ್ಬಿ :ಆಯಿತು ಮಾರಾಯರೇ ,ಏನು ಹೇಳಬೇಕು  ನಾನು? ಹೇಳಿ
ಸುಬ್ಬ :ನೀನು ಚಂದಕ್ಕೆ ಚಂದನಾ ಎಂದು ಹೇಳು
ಸುಬ್ಬ : ಚಂದಕ್ಕೆ ಚಂದನಾ
ಸುಬ್ಬಿ :ಅಯ್ಯೋ ರಾಮ !ಚಂದಕ್ಕೆ ಚಂದನಾ ಅಲ್ಲ ಮಾರಾಯ್ತಿ ಖಾಲಿ ಚಂದನಾ
ಸುಬ್ಬಿ : ಖಾಲಿ ಚಂದನಾ
ಸುಬ್ಬ :ಅಯ್ಯೋ ದೇವರೇ ನನ್ನ ಕರ್ಮ !ಒಮ್ಮೆ ಚಂದನಾ ಎಂದು ಹೇಳು ಮಾರಾಯ್ತಿ
ಸುಬ್ಬಿ :ಚಂದನಾ
ರಾಜ : ಪುನಃ ಹೇಳು
ಸುಬ್ಬಿ :ಚಂದನಾ
 ಸುಬ್ಬ : ಗುಡ್  ನಂತರ ನಿನ್ನ ಊರು ಯಾವುದು ಎಂದು ಕೇಳುತ್ತಾರೆ ,ಏನು  ಹೇಳುತ್ತಿ?
ಸುಬ್ಬಿ : ಕೊಡೆಯಾಲ ಎಂದು ಹೇಳುತ್ತೇನೆ ..
ಸುಬ್ಬ : ಹಾಗೆ ಬೇಡ ನೀನು ಸ್ಟೈಲ್ ಆಗಿ ಮ್ಯಾಂಗಲೋರ್  ಎಂದು ಹೇಳು
ಸುಬ್ಬಿ :ಮಾಂಗನೂರು
ಸುಬ್ಬ ಮಂಗನೂರು ಅಲ್ಲ ಮಾರಾಯ್ತಿ  ಮ್ಯಾಂಗಲೋರ್
ಸುಬ್ಬಿ : ಮ್ಯಾಂಗಲೋರ್
ಸುಬ್ಬ ;ಹಾಗೆ ಹೇಳು ಸರಿಯಾಯಿದು ,ನಂತರ ಅವರು ನಿನ್ನ ಹತ್ತಿರ ನಿನಗೆ ಎಷ್ಟು ಜನ ಮಕ್ಕಳು ಎಂದು ಕೇಳಬಹುದು ಆಗ  ಏನು  ಹೇಳುತ್ತಿ?
ಸುಬ್ಬಿ :ನಿಜವಾಗಿಯೂ ಇಲ್ಲಲ್ವ ,ಎಂಥ ಮಕ್ಕಳು ಇದ್ದಾರೆ ಎಂದು ಹೇಳಬೇಕಾ  ?
ಸುಬ್ಬ : ಬೇಡ ಬೇಡ ಇಲ್ಲ ಎಂದೇ ಹೇಳುವ ,ಇಲ್ಲ ಎಂಬುದನ್ನೇ ಇಂಗ್ಲಿಷಿಲಿ ನೋ ಎಂದು ಹೇಳು
ಸುಬ್ಬಿ : ಸ್ನೋ
ಸುಬ್ಬ ಸ್ನೋ ಅಲ್ಲ ಪೌಡರ್
ಸುಬ್ಬಿ : ಸ್ನೋ ಅಲ್ಲ ಪೌಡರ್
ಸುಬ್ಬ :ಅಯ್ಯೋ ರಾಮ !ನೋ ಎಂದು ಹೇಳು ಮಾರಾಯ್ತಿ
ಸುಬ್ಬಿ : ಸ್ನೋ
ಸುಬ್ಬ : ಅಯ್ಯೋ ಕರ್ಮವೇ !ಸ್ನೋ ಅಲ್ಲ ಮಾರಾಯ್ತಿ ನೋ ನೋ ಹೇಳಿ ಹೇಳಲು ಆಗುತ್ತಿಲ್ವಾ  ನಿನಗೆ ?ನಿನ್ನ ನಾಲಗೆಗೆ ಬೆಣಚುಕಲ್ಲು ಹಾಕಿ ಉಜ್ಜಬೇಕು ..(ಕೋಪ )
ಸುಬ್ಬಿ : (ಕೋಪದಿಂದ ) ಇಕೊಳ್ಳಿ  ನೀವು  ಇಂಗ್ಲೀಷು ಕಲಿಸಿ  ಕೊಡ್ತೇನೆ ಎಂದು ಹೇಳಿದ್ದಕ್ಕೆ ನಾನು ಕಲಿಯುತ್ತಾ ಇರುವುದು ನಿಮ್ಮ ಮರ್ಯಾದೆ ಉಳಿಸುವುದಕ್ಕಾಗಿ  !ಹ್ಹ ! ಬೈದರೆ ಜೋರು ಮಾಡಿದರೆ ನಾನು ಕಲಿಯಲಾರೆ,ಮತ್ತೆ ನಿಮಗೆ ನಾಚಿಕೆ ಆದರೆ ನನಗೆ ಗೊತ್ತಿಲ್ಲ !ಏನು ಬೇಕಾದರು ಮಾಡಿಕೊಳ್ಳಿ ನನಗೆ ತುಂಬಾ ಕೆಲಸ ಇದೆ ನಾನು ಒಳಗೆ ಹೋಗುತ್ತೇನೆ..(ಒಳ ಗೆ ಹೋಗಲು ತಯಾರಾಗುತ್ತಾಳೆ )
ಸುಬ್ಬ : ಅಯ್ಯಯ್ಯೋ ನಿಲ್ಲು ನಿಲ್ಲು .. ಹೋಗಬೇಡ  ಸುಬ್ಬಿ..ಬೈಯುದಿಲ್ಲ  ಮಾರಾಯ್ತಿ ಬಾ ,ನೋ ಹೇಳಿ ಹೇಳು
ಸುಬ್ಬಿ : ನೋ
ಸುಬ್ಬ:  ಸರಿ ಹಾಗೆ ಹೇಳು ,ಮುಂದೆ ಅವರು ನಿನ್ನ ವಯಸ್ಸು ಎಷ್ಟು ಎಂದು ಕೇಳಬಹುದು ಏನು ಹೇಳುತ್ತಿ ?
ಸುಬ್ಬಿ : ನಿಜವಾಗಿ ಹದಿನಾರು ಎಂಥ ಎಪ್ಪತ್ತಾರು ಎಂದು ಹೇಳಬೇಕ?
ಸುಬ್ಬ :ಬೇಡ ಆದರೆ 16 ಕೂಡ ಬೇಡ ನನ್ನ ಸ್ನೇಹಿತರೆಲ್ಲ   ಸಮ ವಯಸ್ಸಿನವರನ್ನೇ  ಮದುವೆ ಆಗಿದ್ದಾರೆ..ಹಾಗಾಗಿ ನೀನು ನನ್ನಿಂದ 10 ವರ್ಷ ಚಿಕ್ಕವಳು ಎಂದರೆ ನನಗೆ ಒಂಥರಾ ನಾಚಿಕೆ ಆಗುತ್ತದೆ. ಅದಕ್ಕೆ ನೀನು ಇಪ್ಪತ್ತಾರು ಎಂದು  ಹೇಳು .ಅದರ ಇಂಗ್ಲಿಷಿನಲ್ಲಿ  ಟ್ವೆಂಟಿ ಸಿಕ್ಸ್ ಎಂದು ಹೇಳು
ಸುಬ್ಬಿ : ಶುಂಟಿ ಮಿಕ್ಸ್
ಸುಬ್ಬ ;(ಸ್ವಗತ ) ಓ ದೇವರೇ ಇವಳಿಗೆ ಹೇಗಪ್ಪಾ  ಹೇಳಿಕೊಡುವುದು? (ಸುಬ್ಬಿ ಹತ್ತಿರ)ನಿನಗೆ ಸದಾ ಅಡಿಗೆ ಮನೆಯದೇ ಧ್ಯಾನ ಸುಬ್ಬಿ ಅದಕ್ಕೆ ಶುಂಟಿ ಮಿಕ್ಸ್ ಎಂದು ಬರುತ್ತದೆ‌ ಅದರ ಅಡುಗೆಗೆ ಇಟ್ಟುಕೋ  ,ಈಗ ಟ್ವೆಂಟಿ ಸಿಕ್ಸ್ ಎಂದು ಹೇಳು
ಸುಬ್ಬಿ :ಟ್ವೆಂಟಿ..
ಸುಬ್ಬ : ಹ್ಹ ಹ್ಹ ..ಹಾಗೆ ಟ್ವೆಂಟಿ ಸಿಕ್ಸ್
ಸುಬ್ಬಿ : ಟ್ವೆಂಟಿ ವಿಕ್ಸ್
ಸುಬ್ಬ: ವಿಕ್ಸ್ ಅಲ್ಲ ಅಮೃತಾಂಜನ
ಸುಬ್ಬಿ : ವಿಕ್ಸ್ ಅಲ್ಲ ಅಮೃತಾಂಜನ
ಸುಬ್ಬ : ಸುಬ್ಬಿ ಎನಗೆ ಕೋಪ ಬರಿಸಬೇಡ ,ಸರಿಯಾಗಿ ಹೇಳು,ಟ್ವೆಂಟಿ ಸಿಕ್ಸ್
ಸುಬ್ಬಿ  :ಟ್ವೆಂಟಿ ಸಿಕ್ಸ್
ಸುಬ್ಬ :ವೆರಿ ಗುಡ್ ,ಇಷ್ಟು ಹೇಳಿದರೆ ಸಾಕು !
ಸುಬ್ಬಿ : ಅದು ಸರಿ ..ಆದರೆ ನೀವು  ಹೇಳಿ ಕೊಟ್ಟ ರೀತಿಯಲ್ಲಿಯೇ ಪ್ರಶ್ನೆ ಕೇಳುತ್ತಾರೆ  ಎಂದು ಹೇಗೆ ಹೇಳುವುದು ?ಸುರುವಿಗೆ ಹೆಸರು ಕೇಳುವ ಬದಲು ಊರು ಯಾವುದು ಎಂದು ಕೇಳಿದರೆ ನನಗೆ ಹೇಗೆ ಗೊತ್ತಾಗುವುದು ..?
ಸುಬ್ಬ:  (ಯೋಚಿಸಿಗೊಂಡು ) ಹೌದಲ್ಲ  ..?!ಎಂಥ ಮಾಡುದೂ ಇದಕ್ಕೆ ..ಹ್ಹ ಒಂದು ಉಪಾಯ ಗೊತ್ತಾತಿತು  ..ಅವರು ನಿನ್ನ ಹೆಸರು ಕೇಳಿದಾಗನಾನು  ಹೀಗೆ ಕಣ್ಣು ಮುಚ್ಚುತ್ತೇನೆ‌ ಒಂದು ಕ್ಷಣ (ಕಣ್ಣು ಮುಚ್ಚಿ ತೋರುಸಕ್ಕು )ಆಗ ನೀನು ಚಂದನಾ ಎಂದು ಹೇಳು ,ಅವರು ಊರಿನ ಹೆಸರು ಕೇಳುವಾಗ ನಾನು ಕೈಯನ್ನು ಹೀಗೆ ಹಣೆಯ ಮೇಲೆ ಇಡುತ್ತೇನೆ (ಕೈ ಹಣೆಗೆ ಇಟ್ಟು ತೋರಿಸುತ್ತಾನೆ)ಅದನ್ನು ನೋಡಿ ನೀನು ಮ್ಯಾಂಗಲೋರ್ ಎಂದು ಹೇಳು .ಮಕ್ಕಳು ಎಷ್ಟು ಹೇಳಿ ಕೇಳುವಾಗ ನಾನು ಹೀಗೆ ಕೆಳಗೆ ನೋಡುತ್ತೇನೆ.,ನಿನ್ನ ವಯಸ್ಸು  ಕೇಳುವಾಗ ಹೀಗೆ ಕೈ ಎತ್ತುತ್ತೇನೆ ..ಅದನ್ನು ನೋಡಿ ಟ್ವೆಂಟಿ ಸಿಕ್ಸ್ ಎಂದು ಹೇಳು ..ಸರಿಯಾ .
ಸುಬ್ಬಿ :ಸರಿ ಅವರು ಮೊದಲು ಹೆಸರು ಕೆಳುತ್ತಾರೆ  ಆಗ  ನೀವು ಕಣ್ಣು ಮುಚ್ಚುತ್ತೀರಿ ,ನಾನು ಚಂದನಾ ಎಂದು ಹೇಳಬೇಕು,ನಿಂಗ ಹಣೆಲಿ ಕೈ ಮಡುಗಿರೆ ಉರ ಹೆಸರು ಹೇಳಕ್ಕೂ ಅನಂತರ ಕೈ ಎತ್ತುತ್ತೀರಿ.. ..ಅಲ್ಲ ಅಲ್ಲ ಕೆಳಗೆ ನೋಡುತ್ತೀರಿ  ಆಗ  ನೋ ಹೇಳಬೇಕು. ಅನಂತರ ಕೈ ಎತ್ತುತ್ತೀರಿ  ಆಗ ಟ್ವೆಂಟಿ ಮಿಕ್ಸ್ ಅಲ್ಲಲ್ಲ ಟ್ವೆಂಟಿ ಸಿಕ್ಸ್ ಹೇಳಬೇಕು  ಸರಿಯಾ ..
ಸುಬ್ಬ : ಹ್ಹ ಸರಿ ಇದೆ ,ನೋಡು ನೀನು ಮನಸ್ಸು ಮಾಡಿದರೆ ಎಲ್ಲ  ಆಗುತ್ತದೆ .ಆ ಮೇಲೆ ಅವರು ಬಂದ ಕೂಡಲೇ ಹಲೋ ಎಂದು ಹೇಳಬೇಕು ಹೇಗೆ?
ಸುಬ್ಬಿ : ಹಲ್ಲೋ
ಸುಬ್ಬ : ಹಲ್ಲು ನಿನ್ನ ಬಾಯಿಯಲ್ಲಿ ಇದೆ  ಹಲೋ ಎಂದು ಹೇಳಬೇಕು.
ಸುಬ್ಬಿ : ಹಲೋ
ಸುಬ್ಬ :ಮತ್ತೆ ಹೈ ಹೀಲ್ಡ್ ಚಪ್ಪಲಿ ಹಾಕಿ ಕೊಂಡು ಕೈಯಲ್ಲಿ ಕಾಫಿ ಹಿಡ್ಕೊಂಡು ಸ್ಟೈಲ್ ಆಗಿ ತಂದು ಕೊಡಬೇಕು
ಸುಬ್ಬಿ : ಅದೆಂತದು ಹೈ ಹೈ ಹೇಳಿದರೆ ?
ಸುಬ್ಬಿ : ಅದು ಎತ್ತರದ ಚಪ್ಪಲಿ ನಂತರ ಅವರು ಹೋಗುವಾಗ ಥ್ಯಾಂಕ್ಸ್ ಹೇಳಬೇಕು
ಸುಬ್ಬಿ : ಟಾಂಕಿಸ್
ಸುಬ್ಬ : ಟಾಂಕಿ ನೀರು ತುಂಬಿಸಿ‌ಇಡಲು ನಿನ್ನ ಹತ್ತಿರ ಇಟ್ಟುಕೋ ಈಗ ಥ್ಯಾಂಕ್ಸ್ ಎಂದು ಹೇಳು
ಸುಬ್ಬಿ : ಥ್ಯಾಂಕ್ಸ್ 
ಸುಬ್ಬ : ಸರಿ ನಾನು ಪೇಟೆಗೆ ಹೋಗಿ  ಹೈ ಹೀಲ್ಡ್ ತರ್ತೇನೆ ನಿನಗೆ ..ನೀನು ಎಲ್ಲ ನೆನಪು ಮಾಡಿಕ್ಕೊಂಡು ತಯಾರಾಗಿರು .
 (ಸುಬ್ಬ ಪೇಟೆಗೆ ಹೋಗುತ್ತಾನೆ )
ಸುಬ್ಬಿ : ಅಮ್ಮ ಅಮ್ಮಾ ಇಲ್ಲಿ ಬಾ .
ಅಮ್ಮ : ಎಂಥ ಸುಬ್ಬಿ
ಸುಬ್ಬಿ : (ಭಾರೀ ಸಂತಸದಿಂದ)ನೋಡು ಅಮ್ಮಾ ನನಗೆ ಎಷ್ಟು ಬೇಗ ಇಂಗ್ಲೀಷು ಬಂತು ಗೊತ್ತಾ ?
ಅಮ್ಮ : ಹ್ಹೂ ಗೊತ್ತಾಯಿತು, ನಮಗೆ ಅಲ್ಲಿಗೆ ಕೇಳಿಕೊಂಡು ಇತ್ತು ನಿನ್ನ ಕಲಿಕೆ ಏನಾದರು ಎಡವಟ್ಟು ಆಗದಿದ್ದರೆ ಸಾಕು....
ಸುಬ್ಬಿ : ಏನಾಗಲಿಕ್ಕಿಲ್ಲ  ಬಿಡು ..ನಾವು ಸ್ವಲ್ಪ ಸ್ವೀಟ್  ಮತ್ತೆ  ತಿಂಡಿ ಮಾಡುವ ಬಾ
(ಅಡಿಗೆ ಸಿದ್ಧತೆಯ ಅಭಿನಯ )
    (ಟಕ್ ಟಾಕ್ ಶಬ್ದ ..
ಸುಬ್ಬಿ ; ಓ ಇವರು ಬಂದರು ಎಂದು ಕಾಣುತ್ತೆ
(ಸುಬ್ಬ ಒಳಂಗೆ ಬತ್ತ )
ಸುಬ್ಬ :ಇಕೋ ಹೈ ಹೀಲ್ಡ್ ..ಹಾಕಿಕೋ..
ಸುಬ್ಬಿ : (ಜಾರಿ ಬೀಳುಲೇ ಆಗಿ )ಹ್ಹಾ ..
ಅಮ್ಮ : ಜಾಗ್ರತೆ ..ಜಾಗ್ರತೆ ..ಸರಿ ನೀನೆಲ್ಲ ಅಭ್ಯಾಸ ಮಾಡಿಕೋ ..ನಾನು ಒಳಗೆ  ತಿಂಡಿ ತಯಾರು ಮಾಡುತ್ತೇನೆ..
ಸುಬ್ಬ : ಎಲ್ಲ ನೆನಪಿದೆಯಲ್ಲ ಸುಬ್ಬಿ ..ಹೆಸರು ಹೇಳು ..
ಸುಬ್ಬಿ : ನೀವು ಕಣ್ಣು ಮುಚ್ಚಿಲ್ಲ ..
ಸುಬ್ಬ : ಹ್ಹ ಹ್ಹಾ ..ಕಣ್ಣು ಮುಚ್ಚಿದೆ
ಸುಬ್ಬಿ :ಚಂದನಾ
ಸುಬ್ಬ :ಊರು (ಹಣೆ ಮುಟ್ಟಿ )
ಸುಬ್ಬಿ:ಮ್ಯಾಂಗಲೋರ್
ಸುಬ್ಬ :ವೆರಿ ಗುಡ್ ಸುಬ್ಬಿ ,ಒಪ್ಪಕ್ಕ ನೀನು ..ಮಕ್ಕ ಳು(ತಲೆ ಕೆಳಗೆ ಹಾಕಿ )
ಸುಬ್ಬಿ: ಆ ..ಎಂತದಪ್ಪಾ ..ಹ್ಹ ಹ್ಹಾ ಟ್ವೆಂಟಿ ಸಿಕ್ಸ್ ಸರಿಯ ?
ಸುಬ್ಬ :ಅಲ್ಲ ಅಲ್ಲ ನೋ
ಸುಬ್ಬಿ : ಹೌದೌದು  ನನಗೆ ಮರೆತು ಹೋಯಿತು ..ನೋ
ಸುಬ್ಬ :ವಯಸ್ಸು ?
ಸುಬ್ಬಿ : ಟ್ವೆಂಟಿ ಸಿಕ್ಸ್ ..ಹೋಗುವಾ ಥ್ಯಾಂಕ್ಸ್ ಬರುವಾಗ ಹಲೋ ಸರಿ  ತಾನೇ?
ಸುಬ್ಬ :ಸರಿ ಇದೆ  ನಿನಗೆ ಮನಸ್ಸು ಆದರೆ ಎಲ್ಲ ಬರುತ್ತದೆ..ಆದರೆ ಮನಸ್ಸು ಆಗುವುದು  ಮಾತ್ರ ನಮ್ಮ ಮೋಡೆ ಕೋಣ ಕರು  ಹಾಕಿದಾಗ  .(ನಗು )
ಸುಬ್ಬಿ : ಇಕೊಳ್ಳಿ ಬೇಡ !
(ಬಾಗಿಲು ಟಕ ಟಕ್ ಟಕ್ ಶಬ್ದ )
ಸುಬ್ಬ :ಅವರು ಬಂದರು ಎಂದು ಕಾಣುತ್ತೆ ಸುಬ್ಬಿ ನೀನು ಒಳಗೆ ಇರು ನಾನು ಕರೆದಾಗ  ಬಾ ..
                                 (ಗೆಳೆಯರ ಪ್ರವೇಶ )
ಸುಬ್ಬ :welcome friends welcome ,please be seated
Friends :thanks
Eriend 1 :how are you Mr S .Raja ?
ಸುಬ್ಬ:Iam very fine ,thanks ,how are you dears ?
Friends :we are fine. thanks
Friend 1 :Your house is very beautiful.You must be proud of it
ಸುಬ್ಬ :thanks ,credit goes to my wife
Friend 2: By the by Mr.S.Raja,where is your wife ?
ಸುಬ್ಬ: just wait, I will call her..chandana ..chandana..
 ಸುಬ್ಬಿ : ಏನ್ರೀ  ..?ಹ್ಹ ಹ್ಹ ..!ಹಲ್ಲೂ ಹಲ್ಲೂ ..!!(ಸುಬ್ಬ ಕೋಪದಿಂದ ನೋಡುತ್ತಾನೆ ,ಗಾಭರಿ ಆಗಿ )ಅಲ್ಲ ಅಲ್ಲ ..ಥ್ಯಾಂಕ್ಸ್ ..ಥ್ಯಾಂಕ್ಸ್
(ಸುಬ್ಬ ನಾಚಿಕೆ ಆಗಿ ಹಣೆಗೆ ಕೈ ಹಿಡಿಯುತ್ತಾನೆ ಅದೇ ಹೊತ್ತಿಗೆ)
Friend 1:How are you Mrs Raja?May I know your name please
ಸುಬ್ಬಿ :(ಸುಬ್ಬ ಹಣೆಗೆ ಕೈಇಟ್ಟಿದ್ದನ್ನು  ನೋಡಿ) (ಸ್ವಗತ ) ಓ ಇವರು ಹಣೆಗೆ ಕೈ ಇಟ್ಟಿದ್ದಾರೆ  ಅಂದ್ರೇ  ಅವರು ಮೊದಲಿಗೆ ಊರ ಹೆಸರು ಕೇಳಿರಬೇಕು ..ಹಾಗಾಗಿ ಮ್ಯಾಂಗಲೋರ್ ಎಂದೇ ಹೆಳುತ್ತೇನೆ ..(ಪ್ರಕಾಶ ) ಮ್ಯಾಂಗಲೋರ್
(ಇದರ ಉತ್ತರ ಕೇಳಿ ತಲೆ ಕೆಟ್ಟು ಕಣ್ಣು ಮುಚ್ಚಿದ ಸುಬ್ಬ )
Friend 2 : (ಸಂಶಯದಿಂದ ಮುಖ ಮುಖ ನೋಡಿ )you are from which place ?
ಸುಬ್ಬಿ :( ಸುಬ್ಬ ಕಣ್ಣು ಮುಚ್ಚಿದ್ದರ ನೋಡಿಕ್ಕಿ  )ಚಂದನಾ
Friend 1 :She is very young
Friend 2 :How old are you Mrs Raja ?
 (ನಾಚಿಕೆಂದ ಸುಬ್ಬ ತಲೆತಗ್ಗಿಸಿ ನಿತ್ತಿದ್ದ  )
ಸುಬ್ಬಿ : (ಸುಬ್ಬ ತಲೆ ಕಂತು ಹಾಕಿದ್ದರ ನೋಡಿಕ್ಕಿ ) ನೋ
friend  2 : (ವಿಚಿತ್ರವಾಗಿ ನೋಡಿ ) Do you have any children ?
(ಸುಬ್ಬ ಒಳ ಹೋಗು ಹೇಳಿ ಸನ್ನೆ ಮಾಡಿದ )
ಸುಬ್ಬಿ : (ಸುಬ್ಬನ ಸನ್ನೆಯ ಕೈ ಎತ್ತಿದ್ದು   ಎಂದು ಭಾವಿಸಿ ) ಟ್ವೆಂಟಿ ಸಿಕ್ಸ್
friends :Oh my God!
ಸುಬ್ಬ : ಸುಬ್ಬಿ ಒಳಗೆ ಹೋಗು ಒಳಗೆ ಹೋಗು ಒಮ್ಮೆ..
Friends : Mr S. Raja Is your wife litle  mad ?! (ತಲೆ ಕೆಟ್ಟಿದ ಹೇಳುವಾಗೆ ಅಭಿನಯಿಸಿ ಕೇಳಿದರು )
ಸುಬ್ಬ :Sorry my friends sorry She doesn’t know English ,I forgotton to tell
Friends :ok its all right,we will come again ,It was nice to see you and your wife
ಸುಬ್ಬ : Thanks ,It is our pleasure
ಸುಬ್ಬಿ : ( ಗಡಿ ಬಿಡಿಲಿ ಒಳಗಿನಿಂದದ ಕಾಫಿ ರುವ ಬದಲು ಬದಲು ಚಪ್ಪಲಿ ಹಿಡ್ಕೊಂಡು ಬಂದು ) ಹಲೋ ಹಲೋ ..
Friends : What is this ?
ಸುಬ್ಬಿ : ಹೈ .. ಹೈ ..ಒಹ್ ಕಾಫಿ ತರುತ್ತೇನೆ.
Friends: ok..ok all right ,May God bless you ,see you again
                                           (ಹೋಗುತ್ತಾರೆ)
ಸುಬ್ಬ : ಅಲ್ಲ ಸುಬ್ಬಿ ನನ್ನ ಮರ್ಯಾದೆ ತೆಗೆದೆ ಅಲ್ವಾ  ..!ಛೆ ..
ಸುಬ್ಬಿ : ನಾನೇನು  ಮಾಡಿದೆ ?ಎಲ್ಲ ನೀವು ಹೇಳಿ ಕೊಟ್ಟ ಹಾಗೆ ನಿಮ್ಮ ಕೈ ಕಣ್ಣು ನೋಡಿಗೊಂಡೆ  ಹೇಳಿದ್ದೆ  ಅಷ್ಟು ಸರಿಯಾಗಿ ಮಾತಾಡಿನಾಡಿದ್ದೆ ಇಂಗ್ಲಿಷಿನಲ್ಲಿ !
ಸುಬ್ಬ : ಹೇಳಿದ್ದೇನೋ ನಾನು ಹೇಳಿ ಕೊಟ್ಟ ಹಾಗೆ,ಆದರೆ ಎಲ್ಲ ಉಲ್ಟಾ ಪಲ್ಟಾ ಹೇಳಿದ್ದೀಯ ,ಹೆಸರು ಕೇಳಿದರೆ ಊರು ,ಊರು ಕೇಳಿದರೆ ಹೆಸರು ,ವಯಸ್ಸು  ಕೇಳಿದರೆ ನೋ ಮಕ್ಕಳು ಎಷ್ಟು ಕೇಳಿದರೆ ೨೬ ಎಂದು ಹೇಳಿದೆ !ನೀನು ಬುದ್ಧಿವಂತೆ ಎಂದು ಭಾವಿಸಿ ಆನು ಮೋಸ ಹೋದೆ ..
ಸುಬ್ಬಿ :ಇಲ್ಲಲ್ಲಾ  ನಾನು ಎಲ್ಲ ಸರಿ ಹೇಳಿದ್ದೆನೆ !ನೀವು  ಶುರುವಿಗೆ ಹಣೆಗೆ ಕೈ ಇಟ್ರಿ ಆಗ ನಾನು ಊರು ಹೇಳಿದೆ ,ನಂತರ ನೀವು ಕಣ್ಣು ಮುಚ್ಚಿದಿರಿ,ಕಣ್ಣು ಮುಚ್ಚಿದರೆ ಹೆಸರು ಹೇಳು ಎಂದು ಹೆಳಿ ಕೊಟ್ಟದ್ದು ನೀವೇ ತಾನೇ ? ಹಾಗೆ ಹೇಳಿದೆ ನಾನು ..ನೀವು ತಲೆ ತಗ್ಗಿಸಿದಾಗ  ಟ್ವೆಂಟಿ ಸಿಕ್ಸ್  ಎಂದು ಹೇಳಿದ್ದೆ ಕೈ ಎತ್ತಿದಾಗ ನೋ ಹೇಳಿದ್ದೆ ಎಲ್ಲ ಸರಿಯಾಗಿಯೇ ಹೇಳಿದ್ದೇನೆ ನಾನು ನನ್ನ ಬೈಬೇಡಿ  ಸುಮ್ಮ ಸುಮ್ಮನೆ ..ಬೈಯಲು ನಾನೇನು  ತಪ್ಪು ಮಾಡಿರುವೆ ಹೇಳಿ  ..ಶುರುವಿಲಿ ರಜ್ಜ ಗಡಿ ಬಿಡಿ ಆಯಿತು ಅದು ಬಿಟ್ರೆ ಉಳಿದದ್ದೆಲ್ಲ ಸರಿ ಹೇಳಿಲ್ವಾ ನಾನು ?
ಸುಬ್ಬ :ಅಯ್ಯೋ ರಾಮ ದೇವರೇ !ನೀನು ಶುರುವಿಗೆ ಥ್ಯಾಂಕ್ಸ್ ಹೇಳಿದ್ದು ನೋಡಿ ತಲೆ ಕೆಟ್ಟು ಹಣೆ ಹಣೆ ಬಡ್ಕೊಂಡ್ರೆ ಅದನ್ನು ಹಣೆ ಮುಟ್ಟಿದ್ದು ಎಂದು ಭಾವಿಸುದ ?ಅಷ್ಟು ಗೊತ್ತಾಗುವುದಿಲ್ವ ನಿಂಗೆ ?ನಿನ್ನ ಹೆಡ್ಡು ಹೆಡ್ಡು ಬುದ್ಧಿಗೆ ನಾಚಿಕೆ ಆಗಿ ಕಣ್ಣು ಮುಚ್ಚಿದರೆ ಅದನ್ನು ಕಣ್ಣು ಮುಚ್ಚಿದ್ದು  ಎಂದು ತಿಳಿಯುದ ..?! ಛೆ ..ಎಲ್ಲ ನನ್ನ ಕರ್ಮ ! ಹಣೆ ಬರ ,,ಅಲ್ಲ ಸುಬ್ಬಿ ಅವರು ನಿನ್ನ mad .ಅ  ಕೇಳಿದರು  ಗೊತ್ತಾ ?
ಸುಬ್ಬಿ :ಅದೆಂತದು ಮೇ ಮೇ ಹೇಳ್ರೆ ?
(ಅಪ್ಪ ಅಮ್ಮ ದೂರಲ್ಲಿ ನಿಂತು ನೋಡುತ್ತಾ ಇದ್ದಾರೆ )
ಸುಬ್ಬ : ಇಲ್ಲಪ್ಪಾ ಇಲ್ಲ ಇನ್ನು ನಿನಗೆ ಇಂಗ್ಲೀಷು ಹೇಳಿ ಕೊಡಲು ನನ್ನಿಂದ  ಸಾಧ್ಯವಿಲ್ಲ !ನಿನಗೆ ಹೇಳಿಕೊಡಲು  ಆ ಬ್ರಹ್ಮನೇ ಬರಬೇಕಷ್ಟೇ  ..ನಿನ್ನಂತವರಿಗೆಇಂಗ್ಲೀಷು ಹೇಳಿ ಕೊಟ್ಟದಕ್ಕೆ ಚಪ್ಪಲಿಯಲ್ಲಿ ಹೊಡ್ಕೋಬೇಕು ನಾನು
ಸುಬ್ಬಿ : (ಕೈಯಲಿ ಇದ್ದ ಚಪ್ಪಲಿ ತೋರ್ಸಿ ) ಹೊಡಿಬೇಕಾ ?
ಅಮ್ಮ : (ಮುಂದೆ ಬಂದು ) ಎಂಥ ಸುಬ್ಬಿ ನಿನ್ನದು ಅವತಾರ ?ಗಂಡನಿಗೆ ಹೊಡೆಯಲು  ಚಪ್ಪಲಿ ತೋರಿಸುತ್ತೀಯ ?ನಾಚಿಕೆ ಆಗಲ್ವಾ ನಿನಗೆ ?ತಪ್ಪಾಯಿತು ಎಂದು ಹೇಳು  ಹೋಗು !
ಸುಬ್ಬ : ಅದಳ ತಪ್ಪಾಯಿತು ಬೇಡ ಏನೂ ಬೇಡ ..ನಾನಿನ್ನು ಒಂದು ಕ್ಷಣವು ಇವಳೊಟ್ಟಿಗೆ ಇರುವುದಿಲ್ಲ,ನಾನು ಈಗಲೇ ಮನೆ ಬಿಟ್ಟು ಹೋಗುತ್ತೇನೆ .. (ಕೋಪದಲ್ಲಿ ಹೊರಗೆ ಹೋಗಲು ಹೊರಟ  )
                                (ಸುಬ್ಬಿ ಅಳುತ್ತಾಳೆ)
ಅಪ್ಪ : ನಿಲ್ಲು ಸುಬ್ಬ ನಿಲ್ಲು ..(ಹೆಗಲಿಂಗೆ  ಕೈ ಹಾಕಿ ) ಎಂಥ ಸುಬ್ಬ ಇದು ಮಕ್ಕಳಾಟಿಕೆ ! ಇಷ್ಟು ಸಣ್ಣ ಕಾರಣಕ್ಕೆಲ್ಲ  ಕೋಪ ಮಾಡಿಗೊಂಡು ಮನೆ ಬಿಟ್ಟು ಹೋಗ್ತಾರಾ ?ಸುಬ್ಬಿ ಸ್ವಲ್ಪ ಹಠ ಮಾರಿ ಎಂಬುದು ಬಿಟ್ರೆ ಒಳ್ಳೆಯ ಗುಣದ ಹುಡುಗಿ ಅಲ್ವ ?ಇಷ್ಟಕ್ಕೂ ಇಂಗ್ಲೀಷ್ ಕಲಿಸಲು ಹೊರಟದ್ದು  ನೀನೇ ತಾನೇ ?ಇಂಗ್ಲೀಷು ಗೊತ್ತಿಲ್ಲದ  ಅವಳು  ನಿನ್ನ ನೋಡಿ ಉತ್ತರ ಕೊಟ್ಟಿದ್ದಾಳೆ ..ಏನೋ ಸ್ವಲ್ಪ ತಪ್ಪಾಗಿದೆ ಅದರಲ್ಲಿ ತಲೆ ಹೋಗುವಂತಹಾದ್ದು ಏನಿದೆ ?ಎಷ್ಟಾದರೂ ಸುಬ್ಬಿ ನಿನಗಾಗಿಯೇ ಹುಟ್ಟಿದ ಕೂಸು ಅಲ್ವಾ?ಅದಕ್ಕೆ ಈಗ ಇನ್ನೂ 16-17  ವರ್ಷ ಅಷ್ಟೇ ,ಅಜ್ಜಿಯ ಆಸೆ ತೀರಿಸಲೆಂದು   ತುಂಬಾ ಚಿಕ್ಕ ವಯಸ್ಸಿನ  ಅವಳಿಗೂ ನಿನಗೂ ಮದುವೆ ಮಾಡಿದ್ದು ತಾನೇ.. ನಿನಗೂ 25 -26 ವರ್ಷ ,,ಚಿಕ್ಕ ವಯಸ್ಸೇ ..ಆದರೆ ಅವಳು ಇನ್ನೂ ಸಣ್ಣವಳು ಅಲ್ವಾ ? ಅವಳಿಗೆ ಶಾಲೆಗೆ ಹೋಗುವ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿದ್ದು ನಮ್ಮ  ತಪ್ಪು ..ಆದರೆ ಮದುವೆ ಅಗಿ ಬಿಟ್ಟಿದೆ ಅಲ್ವ  ? ಕ್ಷಮಿಸಿ ಬಿಡು ,ಎಷ್ಟಾದರೂ ಅವಳು ನಿನ್ನ ಪ್ರೀತಿಯ ಹೆಂಡತಿ ಅಲ್ವಾ? ಅಲ್ಲಿ ನೋಡು .ಹೇಗೆ ಅಳುತ್ತಾ ಇದ್ದಾಳೆ ನೋಡು...ಹೋಗು ಅವಳನ್ನು ಸಮಾಧಾನ ಮಾಡು
ಸುಬ್ಬ : ನನ್ನದೇ ತಪ್ಪು ಸುಬ್ಬಿ  ಅಳಬೇಡ .ಇನ್ನು ನಿನ್ನ ಯಾವತ್ತಿಗೂ ಇಂಗ್ಲೀಷು ಬರಲ್ಲ ಎಂದು ಹಂಗಿಸುವುದಿಲ್ಲ ,ಬೈಯುವುದಿಲ್ಲ ,,ಖಂಡಿತಾ ..ಇಂಗ್ಲೀಷ್ ಭಾಷೆಯ ಭ್ರಮೆ ಬಿಟ್ಟು ಹೋಯಿತು ಎನಗೆ ,ನನ್ನ ಕ್ಷಮಿಸು ಚಿನ್ನ ..ಇನ್ನು ಅಳಬೇಡ‌.ನನ್ನದೇ ತಪ್ಪು.
ಸುಬ್ಬಿ : ಇಲ್ಲ ನನ್ನದು ಕೂಡ ತಪ್ಪು ಇದೆ. ನೀವು  ಅನೇಕ ಬಾರಿ   ಹೇಳಿದ್ದರೂ ಇಂಗ್ಲೀಷ್ ಮಾತನಾಡಲು ಕಲಿಸುವ ಕ್ಲಾಸ್ ಗೆ ಹೋಗಿ ಕಲಿಯದ್ದು ನನ್ನ ತಪ್ಪು .ನಾಳೆಯಿಂದಲೇ ನಾನು ಕ್ಲಾಸೆಗೆ ಹೋಗಿ ಕಲಿತ್ತೆ...
ಸುಬ್ಬ : ಬೇಡ ಸುಬ್ಬಿ ನನಗೆ ಈಗ ಇಂಗ್ಲೀಷಿನ ಭ್ರಮೆ ಪೂರ್ತಿ  ಬಿಟ್ಟು ಹೋಗಿದೆ,ಇಂಗ್ಲೀಷು ಬಾರದಿದ್ದರೆ ಏನೂ ತೊಂದರೆ ಇಲ್ಲ ,  ಅದು ನಾಚಿಕೆ ಹೇಳುವ ಭ್ರಮೆ ಬೇಡ .ಚಂದದ ನಮ್ಮ ಭಾಷೆ ಕನ್ನಡ ಕಸ್ತೂರಿ ಇರುವಾಗ  ಇಂಗ್ಲೀಷಿನ ಹಂಗು ನಮಗೆಂತಕೆ?ನಮ್ಮ ಜಗಳ ನೋಡಿ ಅತ್ತೆ ಮಾವ ಏನು ಭಾವಿಸಿದರೋ  ಏನೊ ?
ಸುಬ್ಬಿ : ಎಲ್ಲ ನೀವೇ ಮಾಡಿದ್ದು ..
ಸುಬ್ಬ : ಪುನಃ ಜಗಳ ಸುರು ಮಾಡಿದೆಯ ?ಜಗಳ ಸಾಕು ಇಲ್ಲಿ ಬಾ .
ಅಪ್ಪ : (ಅಮ್ಮನ ಹತ್ತಿರ ) ; ಅಬ್ಬ ..ಅವರು ರಾಜಿ ಆದರು ..ತಪ್ಪು ಅವರದ್ದಲ್ಲ ನಮ್ಮದೇ .ಈಗ ಕಾನೂನೇ ಇದೆ 18 ವರ್ಷಕ್ಕೆ ಮೊದಲು ಮದುವೆ ಮಾಡಬಾರದು ಎಂದು  .
ನಾವು  ಆಡುವ ಶಾಲೆಗೆ ಹೋಗುವ ಹದಿನಾಲ್ಕು ವರ್ಷಕ್ಕೆ ಸುಬ್ಬಿಯ ಮದುವೆ ಮಾಡಿದ್ದು ನಮ್ಮದು ಅಕ್ಷಮ್ಯ ಅಪರಾಧ  ಗೊತ್ತಾದರೆ  ನಮಗೆ ಜೈಲು ಆಗುತ್ತದೆ. .ಹಿರಿಯರ ಆಸೆ  ಈಡೇರಿಸಲು  ಎಂದು ನಾವು  ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಡಿ ಕುಣಿವ  ಕಾಲದಲ್ಲಿ ಮದುವೆ ಮಾಡ್ರೆಯ ಹೀಂಗೆಯ ಆಗುತ್ತದೆ .ಒಂದು ಕೆಲಸ ಮಾಡುವ ,ಸುಬ್ಬ ಹೇಗೂ ಬರುವ ತಿಂಗಳು ಅಮೆರಿಕಕ್ಕೆ ಹೋಗುತ್ತಾನೆ ಅಲ್ವಾ?ಅವನಿಗೆ  ಈಗ ಇವಳನ್ನು ಒಟ್ಟಿಗೆ ಕರಕೊಂಡು ಹೋಗಲು  ಆಗುವುದಿಲ್ಲ ಅಲ್ವಾ? ಅವನು ಮತ್ತೆ ಹಿಂದೆ  ಬರುವಾಗ ಎರಡು ಮೂರು ವರ್ಷಾಗುತ್ತದೆ ,ಅಷ್ಟು ಸಮಯ ಇನ್ನು ಸುಬ್ಬಿ ಶಾಲೆಗೆ ಹೋಗಿ ಕಲಿಯಲಿ ,ಮುಂದೆ ಕೂಡ ಅವಳು  ಓದಲಿ,ನಾವು ಮಾಡಿದ ತಪ್ಪನ್ನು  ಸ್ವಲ್ಪ  ಆದರೂ ಸರಿ ಮಾಡುವ
ಅಮ್ಮ :ಸರಿ  ಹಾಗೆ ಮಾಡುವ   
ಅಪ್ಪ : (ಸಭಿಕರ ಹತ್ತರೆ )..ನಮ್ಮನ್ನು   ನೋಡಿ ಆದರೂ ಇನ್ನು ಬೇರೆ ಯಾರೂ ಹುಡುಗಿಯರಿಗೆ  18 ವರ್ಷಕ್ಕೆ ಮೊದಲು ಮದುವೆ ಮಾಡಬಾರದು  ಎಂದು ಅರ್ಥ ಮಾಡಿಕೊಳ್ಳಲಿ ,ಇನ್ನು ನೀವು  ಆರೂ ಕೂಡಾ ನಾವು ಮಾಡಿದ  ಮಾಡಿದ ತಪ್ಪನ್ನು ಮಾಡಬೇಡಿ  ಆಯ್ತಾ  ?ಹೆಣ್ಣೊಂದು ಕಲಿತರೆ ಇಡೀ ಸಮಾಜವೇ ಕಲಿತಂತೆ..ಹೆಣ್ಣುಮಕ್ಕಳನ್ನು ಓದಿಸಿ. ಸ್ವಾಭಿಮಾನದಿಂದ .ಕಾಲ ಮೇಲೆ ನಿಲ್ಲುವ ಹಾಗೆ ಬೆಳೆಸಿ..ಹದಿನೆಂಟು ತುಂಬುವ ಮೊದಲೇ ಮದುವೆ ಮಾಡಬೇಡಿ..ಅವಳಿಗೆ ಬೆಳೆಯಲು ಅವಕಾಶ ಕೊಡಿ.ಹೆಣ್ಣು ಮಗು ಭಾರವಲ್ಲ..ಅವಳು ಮನೆಯ ಭಾಗ್ಯ ದೇವತೆ.. ಜಗತ್ತಿಗೆ ಬೆಳಕ ಕೊಡುವವಳು ಅವಳು..ಅವಳಿಗೆ  ಶಿಕ್ಷಣ ಕೊಟ್ಟು ಸ್ವಾಭಿಮಾನದಿಂದ ಬದುಕಲು ಅವಕಾಶ ಕೊಡೋಣ ..
                                     ಶುಭಂ