Monday, 5 December 2016

ದೊಡ್ಡವರ ಹಾದಿ 12

ದೊಡ್ಡವರ ಹಾದಿ
ನನಗೆ ಇವತ್ತು ಯಲಹಂಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀ ನಾಗರಾಜ್ ಅವರ ಒಂದು ನಡೆ ತುಂಬಾ ಇಷ್ಟ ವಾಯಿತು
ಸಾಮಾನ್ಯವಾಗಿ ಯಾರೇ ಅದರೂ ಪುಸ್ತಕ ಬರೆದರೂ ಹೊಟ್ಟೆ ಕಿಚ್ಚು ಪಟ್ಟು  ಅದರ ಬಿಡುಗಡೆಗೆ ನಾನಾ ರೀತಿಯ ಅಡ್ಡಿ ಹೇಳುವ ಮಂದಿ ನಮ್ಮ ಸುತ್ತ ಮುತ್ತ ಕಾಣುತ್ತಾರೆ
ಇಂದು ಪೀಣ್ಯ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಸುಭಾಷ್ ಮಾನೆಯವರ ದಿ ಆರ್ಟಿಸ್ಟ್ ಎಂಬ ಪುಸ್ತಕವನ್ನು ಯಲಹಂಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಪದವಿ ಪೂರ್ವ ಕಾಲೆಜು ಕನ್ನಡ ಉಪನ್ಯಾಸಕರ ಕಾರ್ಯಾಗಾರದ ಆರಂಭದಲ್ಲಿ ಸರಳವಾಗಿ ನಡೆಯಿತು ಇದು ಆರಂಭದಲ್ಲಿ ಅಲ್ಲಿನ ಪ್ರಾಂಶುಪಾಲರಿಗೆ ಗೊತ್ತಿರಲಿಲ್ಲ
ಇದಾದ ನಂತರ ಪ್ರಾಂಶುಪಾಲರಾದ ನಾಗರಾಜ್ ಅವರು‌ ತಮ್ಮ ಕೊಠಡಿಗೆ ತೆರಳಿ ಅಲ್ಲಿನ ಉಪನ್ಯಾಸಕರೊಂದಿಗೆ  ಬಂದು ಹಾರ ಹಾಕಿ ಶಾಲು ಹೊದೆಸಿ ಸುಭಾಷ್ ರಾಜಮಾನೆಯವರನ್ನು ಗೌ
ರವಿಸಿದರು
ಎಷ್ಟು ಮಂದಿಗೆ ಇಂತಹ ಉದಾರತೆ ಗುಣಗ್ರಾಹಿತ್ವ ಇದೆ ? ನಾನು ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಅನುದಾನಿತ ಕಾಲೇಜ ಇಂದ ರಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಆಗ ನನ್ನ ‌ಮೊದಲ ಕಥಾ ಸಂಕಲನ ಮನೆಯಂಗಳದಿ ಹೂ ಮತ್ತು‌ ಅರಿವಿನಂಗಳದ ಸುತ್ತ ಎಂಬ ಎರಡು ಪುಸ್ತಕಗಳು ಮುದ್ರಣಗೊಂಡವು ಅದರ ಬಿಡುಗಡೆಯನ್ನು ಕಾಲೆಜು ವಾರ್ಷಿಕೋತ್ಸವ ದಂದು ಮಾಡಲು ಕನ್ನಡ ವಿಭಾಗದ ಮುಖ್ಯಸ್ಥ ರು ನಿರಾಕರಿಸಿ ತಾವೆಷ್ಟು ಸಣ್ಣವರು ಎಂದು ತೋರಿಸಿ ಕೊಟ್ಟಿದ್ದರು
ಇದೇ ರೀತಿ ನನ್ನ ಮೂರನೇ ‌ಪುಸ್ತಕ ದೈವಿಕ ಕಂಬಳ ಕೋಣ ಹಾಗು ಇತರ ಕೆಲವು‌ಹವ್ಯಕರ ಪುಸ್ತಕಗಳುಹವ್ಯಕ‌ಮಹಾ ಸಭೆಯ ಸಂಸ್ಥಾಪರಾದ ರಾಮಕೃಷ್ಣ ಭಟ್ ಅವರ ಸಂಸ್ಕರಣಾ ಕಾರ್ಯ ಕ್ರಮದಲ್ಲಿ ಅಗಿತ್ತು‌ಮನಸಿಲ್ಲದೆ ಮಾಡಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಶಾಲು ಹೊದೆಸಿ ಸನ್ಮಾನಿಸುವುದು ಬಿಡಿ  ಯಾರೊಬ್ಬ ಲೆಖಕರನ್ನು‌ ಕೂಡ ವೇದಿಕೆಗೆ‌ಕರೆದು ಪರಿಚಯಿಸಿರಲಿಲ್ಲ
ಇನ್ನು ನನ್ನ ‌ಪಾಡ್ದನ ಸಂಪುಟ, ತುಳುವ ಸಂಸ್ಕಾರಗಳು, ಕಂಬಳ ಕೋರಿ ನೇಮ ,ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು,ಪಾಡ್ದನಗಳಲ್ಲಿ ಸ್ತ್ರೀ ಎಂಬ ಐದು ಸಂಶೋಧನಾ ‌ಕ್ರತಿಗಳ ಬಿಡುಗಡೆ ಚೊಕ್ಕಾಡಿ ಹವ್ಯಕ ಸಭೆಯಲ್ಲಿ ಅಯಿತು ಅದರದ್ದು ಒಂದು ದೊಡ್ಡ ಕಥೆಯೆ ಇದೆ ಇನ್ನೊಂದು ದಿನ ಅ ಬಗ್ಗೆ ಬರೆಯುತ್ತೇನೆ
ಅದೇ ರೀತಿ ‌ಕೆಲ ವರ್ಷಗಳ ಹಿಂದೆ‌ಪುಸ್ತಕ ಪ್ರೀತಿಯ ಶ್ರೀನಿವಾಸ ರಾಜು ಅವರ ಕುರಿತಾದ ಕಾರ್ಯಕ್ರಮ ಬಿ ಎಂ ಶ್ರೀ ಪ್ರತಿಷ್ಠಾನ ದಲ್ಲಿ ಅಯೋಜನೆ ಅಗಿತ್ತು  ಅ ಸಂದರ್ಭದಲ್ಲಿ ನನ್ನ ಒಂದು ಸಂಶೋಧನ ಕೃತಿ ಮುದ್ರಣವಾಗಿ ಪ್ರಕಟಣೆಗೆ ಸಿದ್ದವಾಗಿತ್ತು ನಾನು ಬಿಎಂ ಶ್ರೀ ಸಂಶೋಧನಾ ‌ಕೇಂದ್ರದ ಅಜೀವ ಸದಸ್ಯೆ ಹಾಗೂ ಅಲ್ಲಿನ ಹಳೆಯ ವಿದ್ಯಾರ್ಥಿ ನಿಯಾಗಿದ್ದು ಆ ಕಾರ್ಯಕ್ರಮ ದಲ್ಲಿ ನನ್ನ ಪುಸ್ತಕ ಬಿಡುಗಡೆ ಮಾಡುವಂತೆ ಪ್ರತಿಷ್ಠಾನ ದ ಅಧ್ಯಕ್ಷರಿಗೆ ಕೇಳಿದ್ದೆ ಸಮಯಾಭಾವದ ನೆಪ‌ಮಾಡಿ ನಿರಾಕರಿಸಿದ್ದರು
 ಆ ಪುಸ್ತಕ ಗಳ ಬಿಡುಗಡೆ ತುಳು ಸಾಹಿತ್ಯ ಅಕಾಡೆಮಿ ಯಲ್ಲಿ ಆಗಿದ್ದು ಲೆಖಕಿಯನ್ನು ಗೌರವಿಸುವ ಉದಾರತೆ ಅವರಲ್ಲು ಇರಲಿಲ್ಲ ಹಾಗಾಗಿಯೆ
ಇಂತಹ ಸಂಕುಚಿತ ಮನೋಭಾವ ದವರೇ ತುಂಬಿದ ಜನರ ನಡುವೆ  ಯಲಹಂಕ ಕಾಲೆಜು ‌ಪ್ರಾಂಶುಪಾಲರಾದ ನಾಗರಾಜ್ ಅವರ ಸಜ್ಜನಿಕೆ ಉದಾರತೆ ಗುಣ ಪಕ್ಷಪಾತ ಗುಣ ವಿಶಿಷ್ಟ ಎನಿಸುತ್ತದೆ
ಇಂತವರು ಹೆಚ್ಚಾಗಲಿ ಇವರ‌ನಡೆ ಎಲ್ಲರಿಗೆ ಮಾದರಿಯಾಗಲಿ ಏನು ಹೇಳುತ್ತೀರಿ ಈ ಬಗ್ಗೆ ? 

Sunday, 3 July 2016

ದೊಡ್ಡವರ ಹಾದಿ 9 ಹೀಗೂ ಉಂಟು !

ಹೀಗೂ ಉಂಟು !
ಈವತ್ತು ಇಬ್ಬರು ಯುವ ಸಂಶೋಧಕಿಯರ ಪರಿಚಯ ಆಯಿತು .ಪಿಎಚ್ ಡಿ ಅಧ್ಯಯನ ಕ್ಕಾಗಿ ಯೂನಿವರ್ಸಿಟಿ ಯೊಂದರಲ್ಲಿ ನೋಂದಣಿ ಮಾಡಿದ್ದರು (ಅವರ ಹೆಸರು ಮತ್ತು ಯೂನಿವರ್ಸಿಟಿ ಹೆಸರನ್ನು ಅವರ ಭವಿಷ್ಯಕ್ಕೆ ತೊಂದರೆಯಾಗಬರದೆಂಬ ಉದ್ದೇಶದಿಂದ ಗೌಪ್ಯವಾಗಿತ್ತಿದ್ದೇನೆ)ಅವರಲ್ಲೊಬ್ಬರು ಅವರ ಅನುಭವವನ್ನು ಹೇಳಿದಾಗ ಹೀಗೂ ಉಂಟೆ ಎಂದೆನಿಸಿತು !ಅವರು ತಮ್ಮ ಅಧ್ಯಯನಕ್ಕಾಗಿ ಬೆಂಗಳೂರಿನ ಓರ್ವ ಉಪನ್ಯಾಸಕಿ ,ಪಿಎಚ್ ಡಿ ಪದವೀದರೆಯನ್ನು ಭೇಟಿ ಮಾಡಿದ್ದರಂತೆ ,ಆ ಉಪನ್ಯಾಸಕಿ ಪ್ರಸಿದ್ಧ ಸಾಹಿತಿಯೂ ಆಗಿದ್ದು ಅವರ ಕೃತಿಗಳ ಪಾತ್ರಗಳ ಬಗ್ಗೆ ಇವರು ಮಾಹಿತಿ ಕೇಳಿ ತಮ್ಮ ಅಧ್ಯಯನದ ವಿಚಾರದಲ್ಲಿ ಸಲಹೆ ಕೇಳಿದರು .ಅಷ್ಟಕ್ಕೇ ಆ ಉಪನ್ಯಾಸಕಿ ನನ್ನ ನಂಬರ್ ಯಾರು ಕೊಟ್ಟದ್ದು ನಿಮಗೆ ನನ್ನ ವಿಳಾಸ ಎಲ್ಲಿಂದ ಪಡೆದಿರಿ ನಿಮ್ಮನ್ನು ಇಲ್ಲಿ ಬರಲು ಯಾರು ಹೇಳಿದರು ?ಎಲ್ಲವನ್ನು ನಾವು ಹೇಳಿ ಕೊಡಲು ಆಗುತ್ತಾ ?ಬೇಕಾದರೆ ಓದಿ ಕಲಿಯಿರಿ ಇತ್ಯಾದಿಯಾಗಿ ಏಕ್ಧಂ ಬೈದು ಮಾತಾಡಿದರಂತೆ !
ಈ ಹಿಂದೆ ನನ್ನ ಸಹೋದ್ಯೋಗಿ ಮಿತ್ರರಾಗಿದ್ದ ಓರ್ವ ಉಪನ್ಯಾಸಕಿ  ಹೀಗೆ ಮಾತಿನ ನಡುವೆ "ಅವರು ಅದಕ್ಕೆ ಹಿಂದೆ ಕೆಲಸ ಮಾಡಿದ ಕಾಲೇಜ್ ಉಪನ್ಯಾಸಕಿ ಒಬ್ಬರ ಬಗ್ಗೆ  ಹೇಳಿದ ವಿಚಾರ ಒಂದು ಇಲ್ಲಿ ನನಗೆ ನೆನಪಾಗುತ್ತಿದೆ .ಅವರು ಕೆಲಸ ಮಾಡುತ್ತಿದ್ದ ಕಾಲೇಜ್ ನಲ್ಲಿ ಓರ್ವ ಉಪನ್ಯಾಸಕಿ ಪಿಎಚ್ ಡಿ ಮಾಡಿದ್ದು ಗೈಡ್ ಕೂಡ ಆಗಿದ್ದರಂತೆ .ಅವರ ಬಾಲಿ ಪಿಎಚ್ ಡಿ ಮಾಡುವ ಆಸಕ್ತಿ ಇರುವ ಅನೇಕ ವಿದ್ಯಾರ್ಥಿಗಳು ಬರುತ್ತಿದ್ದರಂತೆ .ಆಗ ಅವರು ಅವರನ್ನು ಹೀಗೆ ಬೈದು ಮಾತಾಡಿ ಹೀಯಾಳಿಸುತ್ತಿದ್ದರಂತೆ.ಯಾವುದೇ ವಿಚಾರ ತಗೊಂಡು ಬಂದು ಈ ಬಗ್ಗೆ ಪಿಎಚ್ ಡಿ ಮಾಡ ಬಹುದೇ ಎಂದು ಕೇಳಿದರೆ ಅದರ ಬಗ್ಗೆ ಏನು ಮಾಡುದು ನಡೀರಿ ಎಂದು ಬೈಯುತ್ತಿದ್ದರಂತೆ !
ಇವರುಗಳು  ಬೈಯುವ ಬದಲು ಯಾವ ವಿಷಯ ಆಯ್ಕೆ ಮಾಡಿದರೆ ಒಳ್ಳೆಯದು ?ಯಾವುದರ ಅಗತ್ಯ ಇದೇ ?ಯಾವ ರೀತಿ ಅಧ್ಯಯನ ಮಾಡಬೇಕು ?ಏನು ಯಾವ ಪುಸ್ತಕ ಓದಬೇಕು ಎಂದು ಮಾರ್ಗ ದರ್ಶನ ನೀಡಿ ಇವರುಗಳು ಹಿರಿತನ ಮೆರೆಯಬೇಕಿತ್ತು ಆದರೆ ಇವರು ಯುವ ಸಂಶೋಧಕರನ್ನು ಬೈದು ಹೀಗಳೆದು ತಮ್ಮ ದೊ(ದ)ಡ್ಡತನ  ಪ್ರದರ್ಶಿಸುವುದು ಸರಿಯೇ ?
ನನಗೂ ಅನೇಕ ಮಂದಿ ಪಿಎಚ್ ಡಿ ಮಾಡುವ ಬಗ್ಗೆ ,ಸಂಶೋಧನಾ ಪ್ರಬಂಧ ಸಿದ್ಧ ಪಡಿಸುವ ಬಗ್ಗೆ ಬೇರೆ ಬೇರೆ ವಿಷಯಗಳ ಬಗ್ಗೆ ,ಲೇಖನ ಪುಸ್ತಕ ಪ್ರಕಟಣೆಯ ಬಗ್ಗೆ ಮಾಹಿತಿ ಕೇಳುತ್ತಿರುತ್ತಾರೆ ,ನಾನು ಎಲ್ಲರಿಗೂ ನನಗೆ ಗೊತ್ತಿರುವ ವಿಚಾರ ಹೇಳಿದ್ದೇನೆ ಹೊರತು ಯಾರನ್ನೂ ಹೀಗಳೆದು ಮಾತಾಡಿಲ್ಲ .
ಸಂಶೋಧನಾ ಪ್ರಬಂಧ ಸಿದ್ಧ ಪಡಿಸುವಾಗ ಸಾಹಿತಿಗಳ ವಿದ್ವಾಂಸರ ಭೇಟಿ ಚರ್ಚೆ ,ಪ್ರಾಥಮಿಕ ಮಾಹಿತಿ ಸಂಗ್ರಹ ಎಲ್ಲವೂ ಅನಿವಾರ್ಯವಾದ ಅಂಶಗಳು ,ನಾವು ಕೂಡ ಏಕಾ ಏಕಿ ಸಂಶೋಧಕರಾಗುವುದಿಲ್ಲ ಈ ಬಗ್ಗೆ ಹಿರಿಯರ ಮಾರ್ಗ ದರ್ಶನ ಬೇಕಾಗುತ್ತದೆ 
ನನಗಂತೂ ಡಾ.ವೆಂಕಟರಾಜ ಪುಣಿಚಿತ್ತಾಯ,ಡಾ,ಅಮೃತ ಸೋಮೇಶ್ವರ,ಪೂ ಶ್ರೀನಿವಾಸ್ ಭಟ್ ಡಿ ಜಿ ನಡ್ಕ,ಡಾ.ವೆಂಕಟಾಚಲ ಶಾಸ್ತ್ರಿ ಮೊದಲಾದ ವಿದ್ವಾಂಸರು ತಮ್ಮಲ್ಲಿರುವ ಮಾಹಿತಿ ನೀಡಿ ಮಾರ್ಗ ದರ್ಶನ ಮಾಡಿ ಪೂರ್ಣ ಬೆಂಬಲ ನೀಡಿದ್ದಾರೆ .ನಾನು ಮಾಹಿತಿ ಕೇಳಿದ ಯಾರೊಬ್ಬರೂ ಕೂಡ ನನ್ನನ್ನು ಅವಮಾನಿಸಿ ಹೀಗಳೆದು ಮಾತಾಡಿಲ್ಲ !ನನಗೆ ಪಿಎಚ್ ಡಿ ಮಾಡುವಂತೆ ಪ್ರೇರಣೆ ನೀಡಿದವರು ಡಾ.ಕೆ ಗೋಕುಲನಾಥ್  ಅವರು.
 ಅದಕ್ಕೆನನಗೆ ಮೇಲೆ ಹೇಳಿದ ಉಪನ್ಯಾಸಕಿಯರ  ವರ್ತನೆ ಬಗ್ಗೆ ಆಶ್ಚರ್ಯ ಆಗುತ್ತದೆ .

Tuesday, 31 May 2016

ದೊಡ್ಡವರ ಹಾದಿ -8 ಅಪಾರ ಒಲುಮೆಯ ಡಾ.ಅಮೃತ ಸೋಮೇಶ್ವರ

ಅಜಾತ ಶತ್ರು ತುಳು ಜಾನಪದ ಬ್ರಹ್ಮ ಅಮೃತ ಸೋಮೇಶ್ವರ ರ ಬಗ್ಗೆ ತಿಳಿಯದ ತುಳು ಸಂಶೋಧಕರಿಲ್ಲ ,ಅವರ ಸಹಾಯವನ್ನು ಪಡೆದೇ,ಅವರ ಮಾರ್ಗ ದರ್ಶನ ಪಡೆಯದೇ ಇರುವವರು ತುಂಬಾ ಅಪರೂಪ .
ಆಲದ ಮರ ವಿಸ್ತ್ರವಾಗಿ ಬೆಳೆದು ನಿಂತು ನೂರಾರು ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ ,ನೆರಳನ್ನೂ ನೀಡುತ್ತದೆ ಆದರೆ ಬೇರೆ ಗಿಡ ಮರಗಳನ್ನು ಮೊಳೆಯಲು ಕೂಡ ಬಿಡುವುದಿಲ್ಲ ,ವಿದ್ವಾಂಸರು ಆಲದ ಮರದಂತೆ ಎಂಬ ಮಾತಿದೆ ಆದರೆ ಡಾ.ಅಮೃತ ಸೋಮೆಶ್ವರರು ಇದಕ್ಕೆ ಭಿನ್ನ್ನವಾದವರು .ತಾವು ದೊಡ್ಡ ವಿದ್ವಾಂಸರಾಗಿದ್ದರೂ ಇತರರಿಗೆ ಸಂಪೂರ್ಣ ಬೆಂಬಲ ಇತ್ತು ಎಳೆಯರನ್ನು ಬೆಳೆಸಿದವರು .ಅವರಿಂದ ಮಾರ್ಗ ದರ್ಶನ ಪಡೆದು ಮುಂದುವರಿದವರಲ್ಲಿ ನಾನು ಕೂಡ ಒಬ್ಬಳು .

ಸುಮಾರು 8 -9 ವರ್ಷಗಳ ಹಿಂದೆ ನನ್ನ ಮೊದಲ ಪಿಎಚ್ ಡಿ ಪ್ರಬಂಧ "ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ "ಎಂಬ ಸಂಶೋಧನಾ ಮಹಾ ಪ್ರಬಂಧದವನ್ನು ಸಿದ್ಧ ಪಡಿಸುವ ಬಗ್ಗೆ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೆ .ಆದಾಗಲೇ ನಾನು ಬರೆದಿದ್ದನ್ನು ಓದಿ ತಮ್ಮ ಅಭಿಪ್ರಾಯ ನೀಡಿದ್ದರು .ಕೆಲವು ಸಲಹೆಗಳನ್ನು ನೀಡಿದ್ದರು .
ಆನಂತರ ಕೂಡ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದೆ
ಆಗ ನಾನು ನನ್ನ ಆಸಕ್ತಿಯ ಈ ತನಕ ಹೆಸರು ಕೂಡ ದಾಖಲಾಗದ ಅಕ್ಕಚ್ಚ್ಚು ,ಅಚ್ಚು ಬಂಗೆತಿ ,ಕುಕ್ಕೆತ್ತಿ ಬಳ್ಳು ,ಕುಂಡ ಮಲ್ಲು ಮೊದಲಾದ ದೈವಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಗ್ಗೆ ಚರ್ಚಿಸಿದ್ದೆ .ಆಗ ಅವರು ಅದನ್ನು ಮೆಚ್ಚ್ಚಿ ಈ ರೀತಿಯ ಸಂಶೋಧನೆಯ ಅಗತ್ಯವಿದೆ ಈ ನಿಟ್ಟಿನಲ್ಲಿ ಬೇರೆ ಯಾರೂ ಯತ್ನಿಸಿಲ್ಲ ನಿಮ್ಮದು ಒಳ್ಳೆಯ ಪ್ರಯತ್ನ ಎಂದಿದ್ದರು .ಹಾಗೆಯೇ ಮಾತನಾಡುತ್ತಾ "ಡಾ..ವೆಂಕಟ ರಾಜ ಪುಣಿಚಿತ್ತಾಯರಿಗೆ ಎಲ್ಲೇ ಹೋದರು ತುಳು ಪ್ರಾಚೀನ ಹಸ್ತಪ್ರತಿಗಳು ಕಣ್ಣಿಗೆ ಬೀಳುತ್ತವೆ ಹಾಗೆ ನಿಮಗೆ ಎಲ್ಲೇ ಹೋದರೂ ಹೊಸ ಹೊಸ ಭೂತಗಳು ಸಿಗುತ್ತವೆ ಎಂದು ಹೇಳಿ ಪ್ರೋತ್ಸಾಹ ನೀಡಿದ್ದರು

2010 ರಲ್ಲಿ ನನ್ನ ಐದು ಪುಸ್ತಕಗಳನ್ನು  ಪ್ರಕಟಿಸುವ ಸಂದರ್ಭದಲ್ಲಿ ನಾನು ನನ್ನ ಒಂದು ಪುಸ್ತಕಕ್ಕೆ ಮುನ್ನುಡಿ ಬರೆದು ಕೊಡುತ್ತೀರಾ ಎಂದು ಫೋನ್ ಮಾಡಿ ಕೇಳಿದೆ ಆಗ ಅವರು ತಕ್ಷಣವೇ ನಿಮ್ಮ ಅಪರೂಪದ ಭೂತಗಳ ಶೋಧನೆ ಉಂಟಲ್ಲ ಅದಕ್ಕೆ ನಾನು ಮುನ್ನುಡಿ ಬರೆಯುತ್ತೇನೆ ಅದರ ಪ್ರತಿಯನ್ನು ಕಳುಹಿಸಿ ಎಂದು ಹೇಳಿದರು ,ಅಂತೆಯೇ ಅದಕ್ಕ್ಕೆ ಒಂದು ಅಪೂರ್ವವಾದ ಮುನ್ನುಡಿ ಬರೆದು ಕೊಟ್ಟು ನನ್ನ ಸಂಶೋಧನೆಯ ಉತ್ಸಾಹವನ್ನು ಹೆಚ್ಚಿಸಿದರು
ಅನಂತರನನ್ನ ಸಂಶೋಧನಾ ಅಧ್ಯಯನದಲ್ಲಿ ಸಂದೇಹ ಉಂಟಾದಾಗೆಲ್ಲ  ಆಗಾಗ ಅವರಿಗೆ ಫೋನ್ ಮಾಡಿ ಅವರಿಂದ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದೆ
ಕಾಲ ಕ್ರಮೇಣ ನಾನು ಸ್ವಂತ ಅಧ್ಯಯನದ ಹಾದಿಯಲ್ಲಿ ನಡೆದೆ.
ನಿನ್ನೆ ಡಾ..ಅಮೃತ ಸೋಮೇಶ್ವರರನ್ನು ಭೇಟಿ ಮಾಡಿ ನನ್ನ  ಪುಸ್ತಕಗಳನ್ನು ನೀಡಿದೆ .ಅವರು ತುಂಬಾ ಖುಷಿ ಪಟ್ಟು ಹೀಗೆ ಅಧ್ಯಯನ ಮುಂದುವರಿಸಿ ಎಂದು ಹೇಳಿದರು ಅವರ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆಈ ಇಳಿ ವಯಸಿನಲ್ಲೂ ಅವರ ಅಪಾರ ನೆನಪಿನ ಶಕ್ತಿ ಕುಂದದ ಗ್ರಹಣ ಶಕ್ತಿ ,ಬತ್ತದ ಉತ್ಸಾಹ,ಅಪಾರ ಒಲುಮೆ  ನಮಗೆ ನಿಜಕ್ಕೂ ಮಾದರಿ

ದೊಡ್ಡವರ ಹಾದಿ -8 ಅಪಾರ ಒಲುಮೆಯ ಡಾ.ಅಮೃತ ಸೋಮೇಶ್ವರ
ನಾಡೋಜ ಡಾ.ಅಮೃತ ಸೋಮೇಶ್ವರರ ರಚನೆಗಳು

ಕಥಾ ಸಂಕಲನ
1 ಎಲೆಗಿಳಿ(1957)
2 ರುದ್ರ ಶಿಲೆ ಸಾಕ್ಷಿ (1970)
3 ಕೆಂಪು ನೆನಪು(1988)
4ಮಾನವತೆ ಗೆದ್ದಾಗ ಮತ್ತು ಇತರ ಕಥೆಗಳು (1995)
ಕವನ ಸಂಕಲನಗಳು
5 ವನಮಾಲೆ (1975)
6 ಭ್ರಮಣ (1974)
7 ಜ್ಯೋತಿ ದರ್ಶನವಾಯಿತು (1989)
8 ಉಪ್ಪು ಗಾಳಿ (1992)ಕರೆ ಗಾಳಿ
ಕಾದಂಬರಿ
9 ತೀರದ ತೆರೆ
ರೇಡಿಯೋ ರೂಪಕಗಳು
10 ವಿಶ್ವ ರೂಪ
11 ಮದನಗ
12 ಪೆರಿಂಜ ಗುತ್ತು ದೇವ ಪೂಂಜೆ
13 ಕೋಟಿ ಚೆನ್ನಯ
ನಾಟಕಗಳು
14 ಕೋಟಿ ಚೆನ್ನಯ
15 ವೀರ ರಾಣಿ ಅಬ್ಬಕ್ಕ ದೇವಿ
16 ಗೊಂದೊಳು
ತುಳು ನಾಟಕಗಳು
17 ತುಳು ನಾಟಕ ಸಂಪುಟ
18 ಪುತ್ತೋರ್ದ ಪುತ್ತೊಲಿ(1984)
19 ತುಳುನಾಡ ಕಲ್ಕುಡೆ
20 ಆಟೋ ಮುಗಿಂಡ್
21 ಪ್ರೇಮ ಸಂವಾದ
22 ಕೊಡಿ ಮರ
24 ರಾಯ ರಾವುತೆ ((1982)
25 ಉಳ್ಳಾಲೊದ ರಾಣಿ ಅಬ್ಬಕ್ಕಾ ದೇವಿ
26 ಜೋಕುಮಾರ ಸ್ವಾಮಿ (ಅನುವಾದ)
27 ಬಡವನ ಮಡದಿ ಸುಂದರಿಯಾದರೆ ..
ತುಳು ಕವನ ಸಂಕಲನಗಳು
28 ತಂಬಿಲ
29 ರಂಗ ಗೀತ
ತುಳು ಭಾವ ಗೀತೆಗಳು
30 ಪನ್ನೀರ್
31 ಹಿಂಗಾರ
32 ಆಟಿ ಕಳೆಂಜ
ತುಳು ಭಕ್ತಿ ಗೀತೆಗಳು
33 ಮಾಯೊದ ಪುರಲ್
34 ಮಲೆತ ತುಡರ್
35ಕ್ಷೇತ್ರ ದರ್ಶನ
36 ಸುಗಿಪು ಮದಿಪು
37 ರಂಗನ್ ತೂಯನದೇ
38 ಪೂ ಪೂಜನ
39 ಪೂ ಪರುಂದ್
ಪಾಡ್ದನ ಸಂಗ್ರಹ - ತುಳು ಜಾನಪದ
40 ಬೀರು ಲೆಮಿಂಕಯ (ಫಿನ್ ಲ್ಯಾಂಡ್ ಜಾನಪದ ಮಹಾ ಕಾವ್ಯ –ಕಲೇವಲದ ತುಳು ಅನುವಾದ )
41 ಬಾಮ ಕುಮಾರ ಸಂಧಿ
42 ತುಳು ಪಾಡ್ದನ ಸಂಪುಟ
43 ತುಳು ಸಂಸ್ಕೃತಿಯ ಮುಂದಿನ ಶೋಧನೆ
44 ತುಳು ಜಾನಪದ ಕೆಲವು ನೋಟಗಳು
45 ತುಳು ಪಾಡ್ದನದ ಕಥೆಗಳು
46 ಅವಿಲು
46 ಬಾಮ ಕುಮಾರ ಸಂಧಿ ಕಥೆ
47 ಕೊರಗರು
48 ತುಳು ಬದುಕು
49 ಪೊಸ ಗಾದೆಲು(ಸ್ವತಂತ್ರ ಗಾದೆಗಳು )
50 ತೆರಿನಾಯನ ಪಾತೆರ (ಸರ್ವಜ್ಞನ ವಚನಗಳು ತುಳು ಅನುವಾದ )
ಯಕ್ಷಗಾನ ವಿಮರ್ಶೆ –ಕೃತಿಗಳು
51 ಯಕ್ಷಗಾನ ಹೆಜ್ಜೆ ಗುರುತುಗಳು
52 ಯಕ್ಷಾಂದೋಳ
54 ಯಕ್ಷತರು
ಜನಾಂಗ ಅಧ್ಯಯನ
55 ಕೊರಗರು
ವ್ಯಕ್ತಿ ಚಿತ್ರ
56 ಬಡೆಕ್ಕಿಲ ವೆಂಕಟರಮಣ ಭಟ್ಟರ ಜೀವನ ಮತ್ತು ಕೃತಿಗಳು
57 ಮಹಾ ಚೇತನಗಳು
ಸಂಪಾದನಾ ಗ್ರಂಥಗಳು
58 ಸುಂದರ ಕಾಂಡ
59 ಅಬ್ಬಕ್ಕ ಸಂಕಥನ
60 ವಜ್ರ ಕುಸುಮ
61 ಯಕ್ಷ ಗಂಗೋತ್ರಿ
ಸಹ ಸಂಪಾದನೆ
62 ನಾಟ್ಯ ಮೋಹನ
63 ಅಮ್ಮೆಂಬಳ ಅರುವತ್ತು
64 ಉಲ್ಲಾಳ ಇತಿ ಆದಿ
ಶಬ್ದ ಕೋಶ
65 ಮೋಯಮಲಯಾಳ ಶಬ್ದ ಕೋಶ
66 ಅಪಾರ್ಥಿನೀ (ಕುಚೋದ್ಯ ಕೋಶ )
ನವ ಸಾಕ್ಷರರಿಗಾಗಿ ರಚಿಸಿದ ಕೃತಿಗಳು
67 ಕಲ್ಲುರ್ಟಿ ಕಲ್ಕುಡ
68 ಉತ್ಸವಗಳು
69 ಯಕ್ಷಗಾನ
ಸಂಸ್ಕೃತಿ ಚಿಂತನ
70 ಭಗವತಿ ಆರಾಧನೆ
71 ಜಿಜ್ಞಾಸೆಯ ತುಣುಕುಗಳು (ವೈಚಾರಿಕ)
72 ದೀಪದ ಕೆಳಗೆ (ಅಂಕಣ ಬರಹ ಸಂಕಲನ )
73 ಹೃದಯದ ವಚನಗಳು (ವಚನ ಸಾಹಿತ್ಯ )
ಯಕ್ಷಗಾನ ಪ್ರಸಂಗಗಳು ಮತ್ತು ಕೃತಿಗಳು
74 ಯಕ್ಷಗಾನ ಕೃತಿ ಸಂಪುಟ
75 ಸಹಸ್ರ ಕವಚ ಮೋಕ್ಷ
76 ಕಾಯ ಕಲ್ಪ
77 ಅಮರ ವಾಹಿನಿ
78 ತ್ರಿಪುರ ಮಥನ
77 ಮಹಾ ಕಲಿ ಮಗಧೇಂದ್ರ
78 ವಂಶ ವಾಹಿನಿ
79 ಮಹಾ ಶೂರ ಭೌಮಾಸುರ
80 ಚಾಲುಕ್ಯ ಚಕ್ರೇಶ್ವರ
81 ಅಂಧಕ ಮೋಕ್ಷ
82 ಪುತ್ತೂರ್ದ ಮುತ್ತು
83 ಚಕ್ರವರ್ತಿ ದಶರಥ
84 ಆದಿ ಕವಿ ವಾಲ್ಮೀಕಿ
85 ಚಂದ್ರ ಮತೀ ಸ್ವಯಂವರ
86 ಭುವನ ಭಾಗ್ಯ
87 ಘೋರ ಮಾರಕ
88 ಅರುಣ ಸಾರಥ್ಯ ಮತ್ತು ಇತರ ಯಕ್ಷಗಾನಗಳು
89 ಛಾಯಾವತರಣ ಮತ್ತು ಪ್ರಸಂಗಗಳು
90 ನಿಸರ್ಗ ವಿಜಯ
91 ಸಹನಾ ಸಂದೇಶ
92 ಸತ್ಯನಾಪುರದ ಸಿರಿ
93 ರುಧಿರ ಮೋಹಿನಿ
94 ಏಕ ಶೃಂಗಿ
95 ಅಂಗುಲಿ ಮಾಲಾ
96 ಮದಿರಾಸುರ ದರ್ಶನ
97 ಮಹಾ ದಾನಿ ಬಲಿಯೇಂದ್ರ
98 ಸಪ್ತ ಮಾತೃಕೆಯರು
99 ಶ್ರೀ ಭಗವತಿ ಚರಿತ
100 ಸಂಗ್ಯಾ ಬಾಳ್ಯಾ
101 ಅಮರ ಶಿಲ್ಪಿ ಕಲ್ಕುಡ
ಯಕ್ಷಗಾನ ಧ್ವನಿ ಸುರುಳಿಗಳು
102 ಪೌಂಡ್ರಕ ವಾಸುದೇವ
103 ಶಬ್ದ ವೇದಿ
104 ಆಚಾರ್ಯ ವಿಶ್ವ ರೂಪ
105 ತ್ರಿಪುರ ಮಥನ
106 ಮಹಾ ಶೂರ ಭೌಮಾಸುರ
107 ದಂಭ ದಮನ
108 ಗುರು ತೇಜ
109 ಅಂಧಕ ಮೋಕ್ಷ
110 ಘೋರ ಮಾರಕ
111 ಆದಿ ಕವಿ ವಾಲ್ಮೀಕಿ
112 ವೀರ ಕಲ್ಕುಡ
113ಕಾಯ ಕಲ್ಪ
114 ಗಂಗಾವತರಣ
115 ಭುವನದ ಭಾಗ್ಯ
116 ವಾತಾಪಿ ಜೀರ್ಣೋಭವ
117 ವಂಶ ವಾಹಿನಿ
118 ಚಂದ್ರಮತೀ ಸ್ವಯಂವರ
119 ಪಾದುಕಾ ಪ್ರದಾನ –ತುಳು ಯಕ್ಷಗಾನ
ಧ್ವನಿ ಸುರುಳಿಗಳು –ಭಕ್ತಿ ಗೀತೆಗಳು
120 ಶ್ರೀ ಭಗವತಿ ಭಕ್ತಿ ಗೀತೆಗಳು
121 ಧರ್ಮ ಜ್ಯೋತಿ
122 ಶರಣು ಶಬರೀಶ
123 ಕದಳೀವನ
124 ಗೀತ ಜ್ಯೋತಿ
125 ಪ್ರಮೋದ ಪ್ರಸಾದ
126 ಶ್ರೀ ನಾರಾಯಣ ಗುರು ಸ್ತಪನಾಂಜಲಿ
127 ಶ್ರೀ ಭಗವತಿ ಭಕ್ತಿ ಕುಸುಮಾಂಜಲಿ
128 ಶ್ರೀ ವೈಷ್ಣೋ ದೇವಿ ದಿವ್ಯಾಂಜಲಿ

ಸಾಹಿತ್ಯ ವಿಮರ್ಶೆ
129 ಶ್ರೀ ಜೆಪಿ ರಾಜ ರತ್ನಂ ಅವರ ಕವಿತೆಗಳು
130 ನಂದಳಿಕೆಯ ನಂದಾದೀಪ
131 ಅರಿವಿನ ಹರಿಕಾರರು
132 ಸಿಂಗಾರ ಗಾದೆಗಳು (ಸ್ವತಂತ್ರ ಗಾದೆಗಳು )
ನೃತ್ಯ ರೂಪಕಗಳು
133 ಸಪ್ತ ಮಾತೃಕೆಯರು
134 ಬಲಿ ಚಕ್ರವರ್ತಿ
135ನಿಸರ್ಗ ವಿಜಯ
136 ಸಂಭವಾಮಿ ಯುಗೇ ಯುಗೇ
137 ಸಹನಾ ಸಂದೇಶ
138 ನಾಟ್ಯ ವೇದ
139 ಕರ್ಣ ಗಾಥಾ
140 ಚಲದಂಕೆ ಅಂಬೆ
141 ಭರತ ಗಾಥಾ
142 ಸತ್ಯನಾಪುರದ ಸಿರಿ
143 ಏಳುವೆರ್ ದೆಯ್ಯಾರ್
144 ತುಳುವಾಲ ಬಲಿಯೇಂದ್ರ
ಸಾಗರಂ ಸಾಗರೋಪಮಂ ಅಂತೆಯೇ ಅಮೃತಂ ಅಮೃತೋಪಮಂ ,ದೈತ್ಯ ಪ್ರತಿಭೆಗೆ ನಮೋ ನಮಃ

ಇನ್ನೂ ಅನೇಕ ಕೃತಿಗಳಿವೆ ಎಲ್ಲದರ ಹೆಸರನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ –ಡಾ.ಲಕ್ಷ್ಮೀ ಜಿ ಪ್ರಸಾದ
http://shikshanaloka.blogspot.in/2016/05/8.html


Thursday, 26 May 2016

ಹೀಗೊಂದು ಮೋಸ ಪುರಾಣ (c)ಡಾ.ಲಕ್ಷ್ಮೀ ಜಿ ಪ್ರಸಾದ


ವಿಷ್ಣು ಪುರಾಣ ಶಿವ ಪುರಾಣ ಗರುಡ ಪುರಾಣ ಹೆಸರು ಕೇಳಿದ್ದೀರಿ ಇದ್ಯಾವುದು ಮೋಸ ಪುರಾಣ ಅಂತ ತಿಳಿಯಬೇಕೆ ?ಹಾಗಾದರೆ ಸಾವಕಾಶ ಓದಿ ಇದನ್ನು

ಸಾಮಾನ್ಯವಾಗಿ ನಾನು ಯಾವುದೇ ಪ್ರಶಸ್ತಿ ಗಾಗಲಿ, ಪುಸ್ತಕ ಬಹುಮಾನಕ್ಕಾಗಲಿ ಫೆಲೋ ಶಿಪ್ ಗಾಗಲೀ ಅರ್ಜಿ ಸಲ್ಲಿಸುವುದಿಲ್ಲ .ಎರಡು ದಿನ ಮೊದಲು ಕನ್ನಡ ಜಾನಪದ ಅಕಾಡೆಮಿ ಕೆಲವು ವಿಷಯಗಳ ಮೇಲೆ  ಅಧ್ಯಯನ ಮಾಡಲು ಫೆಲೋ ಶಿಪ್ ಗೆ ಅರ್ಜಿ ಆಹ್ವಾನಿಸಿತ್ತು .ಅದರಲ್ಲಿ ನನ್ನ ಆಸಕ್ತಿಯ ಒಂದೆರಡು ವಿಷಯಗಳೂ ಇದ್ದವು .ಆ ದಿನ ಅದನ್ನು ಓದಿದಾಗ ಅರ್ಜಿ ಸಲ್ಲಿಸಬೇಕು ಎಂದು ಕೊಂಡೆ .ಹಾಗೆ ಮಗನಲ್ಲಿ ಈ ಬಾರಿ ನಾನು ಫೆಲೋಶಿಪ್ ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದೆ
ದಿನ ಪಂಡು ಕಳೆದಾಗ .ಮತ್ಯಾಕೋ ಬೇಡ ಅನಿಸಿತ್ತು ಇಷ್ಟರ ತನಕ ನಾನು ಯಾವುದೇ ಸಂಘ ಸಂಸ್ಥೆ  ಅಕಾಡೆಮಿಗಳ  ಅನುದಾನ ಪಡೆಯದೇ ಸ್ವಂತ ಅಧ್ಯಯನ ಮಾಡಿದ್ದೇನೆ ಈಗ ಇನ್ನು ಇವೆಲ್ಲ ಕಿರಿ ಕಿರಿ ಬೇಡ ಎನ್ನಿಸಿತು ..ಹಾಗಾಗಿ ಅರ್ಜಿ ಸಲ್ಲಿಸುವ ವಿಚಾರ ಬಿಟ್ಟು ಬಿಟ್ಟಿದ್ದೆ ..
ನಿನ್ನೆ ಏನೋ ಮಾತಾಡುವಾಗ ಮಗ ಹೇಳಿದ "ಅಮ್ಮ ಈಗಾಗಲೇ ಅಲ್ಲಿ ಕೊಟ್ಟ ವಿಷಯಗಳ ಬಗ್ಗೆ ಸ್ಟಡಿ ಮಾಡಿದ್ದೀಯಲ್ಲ .ಇನ್ನು ಒಂದಷ್ಟು ಮಾಡಿ ಎಲ್ಲ ಒಟ್ಟಿಗೆ ಸೇರಿಸಿ ಬರೆದು ಸಲ್ಲಿಸಿದರೆ ಆಯಿತು ಅಲ್ವ ?ನೀನು ಯಾಕೆ ಫೆಲೋ ಶಿಪ್ ಸಿಗುತ್ತಾ ಅಂತ ಯತ್ನಿಸಬಾರದು ,ಒಂದು ಸಲ ಅರ್ಜಿ ಸಲ್ಲಿಸಿ ನೋಡು ಸಿಗುತ್ತಾ ಅಂತ ಹೇಳಿದ ..
ಹೌದಲ್ಲ ?ಅನಿಸಿತು ನನಗೆ .
ದಿನ ದಿನ ಕಳೆದ ಹಾಗೆ ನಾನು ಚಿಕ್ಕವಳಾಗುದಿಲ್ಲ ,ಮುಂದೆ ವಯಸ್ಸಾದಂತೆ  ಮೊದಲಿನಂತೆ ಅಧ್ಯಯನ ಮಾಡಲು ಸಾಧ್ಯವಾಗುತ್ತೋ ಇಲ್ಲವೋ ? ಈಗ ಒಂದು ಗುರಿ ಇದ್ದರೆ ಹೇಗೋ ಸಂಶೋಧನೆ ಮಾಡಿ ಬಿಡಬಹುದು ಜೊತೆಗೆ ಫೆಲೋ ಶಿಪ್ ಇರುವ ಕಾರಣ ಅಧ್ಯಯನಕ್ಕೆ ಆರ್ಥಿಕ ಹೊರೆ ಅಂತು ಬೀಳುದಿಲ್ಲ ..
ಹಾಗೆ ಆಲೋಚಿಸಿ ಇಂದು ಕನ್ನಡ ಜಾನಪದ ಅಕಾಡಮಿ ಗೆ ಹೋಗಿ ಅರ್ಜಿ ಸಲ್ಲಿಸಿ ಬಂದೆ .ಅಲ್ಲಿಗೆ ಹೋಗುವಾಗ ತುಸು ಅಳುಕಿತ್ತು ಅಲ್ಲಿನ ರಿಜಿಸ್ತ್ರರ್ ಹೇಗೋ ಏನೋ ಎಂದು ,
ಆದರೆ ಅಲ್ಲಿನ ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿ ಮಾತಾಡಿದ ಮೇಲೆ ನನಗೆ ಮನಸು ನಿರಾಳ  ಆಯಿತು ,ಬಹಳ ಸಜ್ಜನಿಕೆಯಿಂದ ಮಾತಾಡಿದರು .ನನ್ನ ಆರ್ಜಿ ಆಯ್ಕೆಯಾಗಿ ಫೆಲೋ ಶಿಪ್ ಸಿಗುತ್ತೋ ಇಲ್ಲವೋ ಅದು ಬೇರೆ ವಿಚಾರ ಆದರೆ ಅವರ ಸರಳತೆ ಸಹೃದಯ ಮಾತು ಇಷ್ಟವಾಯಿತು

ಅಲ್ಲಿ ಅರ್ಜಿ ಸಲ್ಲಿಸಿ ಬರುವಾಗ ನನಗೆ ತುಳು ಅಕಾಡೆಮಿ ಫೆಲೋಶಿಪ್  ಪುರಾಣ ನೆನಪಾಯಿತು 

ಸುಮಾರು 5- 6 ವರ್ಷಗಳ ಹಿಂದೆ ತುಳು ಅಕಾಡೆಮಿ ತುಳು ಅಧ್ಯಯನ ಆಸಕ್ತರಿಂದ ಫೆಲೋ ಶಿಪ್ ಗಾಗಿ ಅರ್ಜಿ ಆಹ್ವಾನಿಸಿತ್ತು ,ಪತ್ರಿಕೆಯಲ್ಲಿ ಈ ಬಗ್ಗೆ ಓದಿ ನಾನು ತುಳು ಅಕಾಡೆಮಿ   ರಿಜಿಸ್ಟ್ರಾರ್ ಗೆ ಫೋನ್ ಮಾಡಿದೆ ,ಈ ಬಗ್ಗೆ ಮಾಹಿತಿ ಕೇಳಿದೆ .ಸರಕಾರಿ ಉದ್ಯೋಗಿಗಳೂ ಅರ್ಜಿ ಸಲ್ಲಿಸಬಹುದೇ? ಎಂದು ಕೇಳಿದೆ .ಆಗ ಅವರು ಅಕಾಡೆಮಿ ಅಧ್ಯಕ್ಷರಾದ .... ಅವರಿಗೆ ಫೋನ್ ಕೊಟ್ಟರು ,ಅವರು ಸರಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ತಿಳಿಸಿದರು .ಇರ ಬಹುದು ಎಂದು ಕೊಂದು ನಾನು ಸುಮ್ಮನಾದೆ .
ಸುಮಾರು ಎರಡು ಮೂರು ತಿಂಗಳ ನಂತರ ತುಳು ಅಕಾಡೆಮಿ ಫೆಲೋ ಶಿಪ್ ಗೆ ಆಯ್ಕೆ ಆದವರ ಹೆಸರುಗಳು ಪತ್ರಿಕೆಗಳಲ್ಲಿ ಬಂತು .ಅದರಲ್ಲಿ  ಬೆಳ್ಳಾರೆಸರ್ಕಾರೀ ಪ್ರಥಮ ದರ್ಜೆ ( ಶಿವರಾಮ ಕಾರಂತ) ಕಾಲೇಜ್ ನ ಹಿರಿಯ ಉಪನ್ಯಾಸಕರಾದ ಡಾ.ನರೇಂದ್ರ ರೈ ದೇರ್ಲ ಅವರ ಹೆಸರೂ ಇತ್ತು .ಅವರು ಫೆಲೋ ಶಿಪ್ ಗೆ ಅರ್ಹರೇ!ಆ ಬಗ್ಗೆ ಎರಡು ಮಾತಿಲ್ಲ ಆದರೆ ಸರ್ಕಾರೀ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲವೆಂದಾದ ಮೇಲೆ ಅವರಿಗೆ ಹೇಗೆ ಸಿಕ್ತು ?
ನಾನು ಎಲ್ಲೋ ಮೋಸ ಹೋದ ಬಗ್ಗೆ ತುಸು ವಾಸನೆ ಬಡಿಯಿತು .
ಮತ್ತೆ ರಿಜಿಸ್ಟ್ರಾರ್ ಚಂದ್ರ ಹಾಸ ರೈಗಳಿಗೆ ಫೋನ್ ಮಾಡಿದೆ .ಮತ್ತೆ ಯಥಾ ಪ್ರಕಾರ ಅವರು ಅಧ್ಯಕ್ಷರಾದ ...ಯವರ ಕೈಗೆ ಫೋನ್ ಹಸ್ತಾಂತರಿಸಿದರು !
ಆಗ ಅವರು ಹೇಳಿದರು ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಿದರಂತೆ !ನಾನು ಫೋನ್ ಮಾಡಿದಾಗ ಅರ್ಜಿ ಸಲ್ಲಿಸಲು ಎರಡು ದಿನ ಮಾತ್ರ ಬಾಕಿ ಇತ್ತು ಅಲ್ಲಿ ತನಕ ನಿಯಮ ಬದಲಾವಣೆ ಆಗಿರಲಿಲ್ಲ (ಮಾಡಿರಲಿಲ್ಲ !!!!!) ನಂತರ ಎರಡು ದಿನದಲ್ಲಿ ಬದಲಾವಣೆ ಆಯಿತು ಹಾಗಾದರೆ !
ಕೊಡಲು ಮನಸು ಇಲ್ಲದೇ ಇದ್ದರೆ ನಾನಾ ನೆಪಗಳು ಸಿದ್ಧವಾಗಿರುತ್ತದೆ ಇದನ್ನು ಪ್ರಶ್ನಿಸಿದರೆ ಅದು ಘೋರ ಅಪರಾದ !ಅದು ಜಗಳ ಕಂಟ ತನ ಎಂಬ ಬಿರುದು ಬೇರೆ ಸಿಗುತ್ತದೆ ಅದಕ್ಕೆ ನಾನು ಎಲ್ಲಿ ಯಾವುದೇ ಫೆಲೋಶಿಪ್ ಗೆ ಅರ್ಜಿ ಸಲ್ಲಿಸುವ ಗೋಜಿಗೆ ಹೋಗುದಿಲ್ಲ
ನನ್ನ ಮಿತಿಯಲ್ಲಿ ನನಗೆಷ್ಟು ಸಾಧ್ಯವೋ ಅಷ್ಟು ಮಾಡುತ್ತೇನೆ ..
ಆದರೆ ಜನ ಹೇಗೆಲ್ಲ ಕಾಲು ಎಳೆಯುತ್ತಾರೆ ನಮಗೆ ಗೊತ್ತಿಲ್ಲದೇ ಎಷ್ಟು ಮೋಸ ಹೋಗುತ್ತ್ತೇವೆ ಅಲ್ಲವೆ ಅಂತ ಆಶ್ಚರ್ಯ ಆಗುತ್ತದೆ .
ಇದೆ ರೀತಿ ಇನ್ನೊಂದು ವಿಷಯದಲ್ಲಿ ಮೋಸ ಹೋದದ್ದು ನನಗೆ ನೆನಪಾಗುತ್ತಿದೆ .
ಕೆಲವು ವರ್ಷಗಳ ಹಿಂದೆ ನಾನಾ ಕೆಲವು ಪುಸ್ತಕಗಳನ್ನು ನಾನೇ ಸ್ವಂತ ಪ್ರಕಟಿಸಿದ್ದೆ ,ನಂತರ 2010 ರಲ್ಲಿ ನನಗೆ ಪಿಎಚ್ ಡಿ ಪದವಿ ದೊರೆಯಿತು .
ನನ್ನ ಪಿಎಚ್ ಡಿ ಸಂಶೋಧನಾ ಪ್ರಬಂಧವನ್ನು ಯಾರಾದರೂ ಪ್ರಕಾಶಕರು ಪ್ರಕಟಿಸಿದರೆ ಒಳ್ಳೆಯದಿತ್ತು ಎಂದು ಆಲೋಚಿಸುತ್ತಿದ್ದೆ
ನನಗೆ ಈ ಕ್ಷೇತ್ರದಲ್ಲಿ ಯಾರೂ ಪರಿಚಯ ಇರಲಿಲ್ಲ ,ನನ್ನ ಪರಿಚಿತ ಸಂಶೋಧಕಿ ಒಬ್ಬರ  ಸಂಶೋಧನಾ ಮಹಾ ಪ್ರಬಂಧವನ್ನು ನವ ಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ್ದು ನನಗೆ ತಿಳಿದಿತ್ತು
ಹಾಗೆ ಯಾವಾಗಲೋ ಅವರು ಸಿಕ್ಕಾಗ ನವಕರ್ನಾಟಕ ಪುಸ್ತಕ ಪ್ರಕಾಶಕರು ಯಾರು? ಅವರ ನಂಬರ್ ಕೊಡಲು ಸಾಧ್ಯವೇ? ಎಂದು ಕೇಳಿದೆ
ಆಗ ಅವರು ತಕ್ಷಣವೇ "ಅವರಿಗೆ ನನ್ನ ಥಿಸಿಸ್ ಪ್ರಕಟಿಸಿಯೇ ತುಂಬಾ ನಷ್ಟ ಆಯಿತಂತೆ ಅವರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದೇ ಇಲ್ಲ ನನ್ನದನ್ನು ಏನೋ ಪ್ರಕಟಿಸಿದರು ಈಗ ನಷ್ಟ ಆಯಿತು ಇನ್ನು ಯಾರ ಸಂಶೋಧನಾ ಪ್ರಬಂಧ ವನ್ನು ಪ್ರಕಟಿಸುವುದೇ ಇಲ್ಲ ಎಂದು ಹೇಳಿದ್ದಾರೆ "ಎಂದು ಹೇಳಿದರು !ನಾನು ಸತ್ಯ ನಂಬಿದೆ ಇರಬಹುದು ಎಂದು !

ನಂತರ ನನ್ನ ಸಂಪ್ರಬಂಧವನ್ನು ಪ್ರಚೇತ ಬುಕ್ ಪಬ್ಲಿಷರ್ಸ್ ಪ್ರಕಟ ಮಾಡಿದರು ,ಅದು ಸಾಕಷ್ಟು ಯಶಸ್ವಿ ಅಯ್ತಿ ಕೂಡ .ನಷ್ಟ ಆಗಲಿಲ್ಲ ಬದಲಿಗೆ ಲಾಭ ತಂದು ಕೊಟ್ಟಿತ್ ತುಕೂಡ

ಈ ಪುಸ್ತಕವನ್ನು ಅವರು ನವಕರ್ನಾಟಕ ಮಳಿಗೆಗಳಲ್ಲೂ ಮಾರಾಟಕ್ಕೆ ಹಾಕಿದ್ದರು ಅಲ್ಲಿ ಕೂಡ ಸಾಕಷ್ಟು ಪುಸ್ತಕಗಳು ಮಾರಾಟವಾಗಿವೆ .


ಒಂದಿನ ನಾನು ಮಂಗಳೂರಿನ ನವಕರ್ನಾಟಕ ಮಳಿಗೆಗೆ ಹೋದೆ ಆಗ ನನ್ನ ಎದುರಿನಲ್ಲಿಯೇ ಇಬ್ಬರು ನನ್ನ ಪುಸ್ತಕವನ್ನು ಕೇಳಿದರು.ಅಲ್ಲಿ ಪುಸ್ತಕಪ್ರತಿ ಮುಗುದಿತ್ತು .ಆಗ ಅಲ್ಲಿನ ಮ್ಯಾನೇಜರ್ ಅವರು ಮೇಡಂ ನೀವು ಈ ಪುಸ್ತಕವನ್ನು ನಮ್ಮ          ನವ ಕರ್ನಾಟಕ ಪಬ್ಲಿಕೇಶನ್ ನಲ್ಲಿ ಪ್ರಕಟ ಮಾಡಬೇಕಿತ್ತು .ಇದಕ್ಕೆ ಇನ್ನೂ ಹೆಚ್ಚು ವ್ಯಾಲ್ಯೂ ಇರುತ್ತಿತ್ತು ನಿಮ್ಮ ಈ ಪುಸ್ತಕಕ್ಕೆತುಂಬಾ ಬೇಡಿಕೆ ಇದೆ ಎಂದು" ಹೇಳಿದರು ಆಗ ನಾನು ನವ ಕರ್ನಾಟಕ ದವರು ಪಿ ಎಚ್ ಡಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದಿಲ್ಲವಂತೆ !ಎಂದು ಹೇಳಿದೆ .ಹಾಗೆ ಹೇಳಿದ್ದು ಯಾರು ?ನಿಮಗೆ ಯಾರೋ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ,ನವಕರ್ನಾಟಕ ಪ್ರಕಾಶಕರು ಸಂಶೋಧನಾ ಕೃತಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಹೇಳಿದರು !

ನಾನು ಮತ್ತೆ ಮೋಸ ಹೋಗಿದ್ದೆ !ಏನು ಮಾಡುದು ಹೀಗೆ ಕಾಲೆಳೆಯುವ ಮಂದಿ ಇರುತ್ತಾರೆ..ಏನುಮಾಡುವುದು !ಆದರೂ ತಕ್ಷಣಕ್ಕೆ ತೀರಾ ಸತ್ಯ ಅನಿಸುವ ಹಾಗೆ ಹೇಳಿದಾರಿ ತಪ್ಪಿಸುವ ಉಪಾಯಗಳು ಇವರಿಗೆ ಹೇಗೆ ನೆನಪಾಗುತ್ತವೆ ಅಂತ ಅಚ್ಹ್ಕಾರಿ ಆಗುತ್ತದೆ ಬಹುಶ ಇಂಥವರು ಸದಾ ಇದೆ ಮಾಡುತ್ತಿರುತ್ತಾರೆ ಹಾಗಾಗಿ ಅವರಿಗೆ ಅನಾಯಾಸವಾಗಿ ಇಂಥ ಟ್ರಿಕ್ ಗಳು ಹೊಳೆಯುತ್ತವೆ ಇರಬೇಕು
ಆಲದ ಮರ ಸೊಂಪಾಗಿ ಬೆಳೆದು ಮೃಗ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ ನೆರಳನ್ನೂ ನೀಡುತ್ತದೆ ಆದರೆ ಬೇರೆ ಗಿಡ ಮರಗಳನ್ನು ಬೆಳೆಯಲು ಬಿಡುವುದಿಲ್ಲ ಅಂತೆಯೇ ಅನೇಕರು ಇರುತ್ತಾರೆ .ಇಂಥವರ ನಡುವೆಯೂ ಡಾ.ಅಮೃತ ಸೋಮೇಶ್ವರ ,ಡಾ,ವಾಮನ ನಂದಾವರ ,ಡಾ.ಸುಬ್ಬಣ್ಣ ರೈ ಮೊದಲಾದ ಕೆಲವು ವಿದ್ವಾಂಸರು ತಾವು ಬೆಳೆಯುವುದರೊಂದಿಗೆ ಬೇರೆಯವರನ್ನೂ ಬೆಳೆಸುತ್ತಾರೆ ಅನ್ನುವುದು ಸಂತೋಷದ ವಿಚಾರ
ನನ್ನ ಪುಸ್ತಕಗಳು
Wednesday, 25 May 2016

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ (c)ಡಾ.ಲಕ್ಷ್ಮೀ ಜಿ ಪ್ರಸಾದ

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ
8 ವರ್ಷಗಳ ಹಿಂದೆ ನಾವು ನಮ್ಮ ಬೆಂಗಳೂರಿನ ಮನೆಯ ಬೋರ್ ವೆಲ್ ಗೆ ಛಾವಣಿ ನೀರು ಇಂಗಿಸುವ ವ್ಯವಸ್ಥೆ ಮಾಡಿದೆವು ...
2003 ರಲ್ಲಿ ನಾವು ಈ ಬೋರ್ ವೆಲ್ ಕೊರೆದಾಗ ಸುಮಾರು 60 -70 ಅಡಿಗಳಲ್ಲಿಯೇ ನೀರು ಸಿಕ್ಕಿತು ,ಎಂತಕ್ಕೂ ಇರಲಿ ಅಂತ 120 ಅಡಿ ಆಳ ತೋಡಿದೆವು ಅದಕ್ಕಿಂತ ಹೆಚ್ಚ್ಚು ತೋಡಲು ಸಾಧ್ಯವಾಗಲಿಲ್ಲ .ಆಗ ನಾವಿನ್ನೂ ಬೆಂಗಳೂರಿಗೆ ವಲಸೆ ಬಂದಿರಲಿಲ್ಲ ..ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜ್ ನಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತಿದ್ದೆ ... ನಾನು ಶ್ರೀ ಪಡ್ರೆ ಹಾಗೂ ಇತರರ ಸಂಗ್ರಹಿಸುವ ನೀರು ಇಂಗಿಸುವ ನಾನಾ ವಿಧಾನಗಳ ಬಗೆಗಿನ ಲೇಖನಗಳನ್ನು ಓದುತ್ತ ಇದ್ದೆ ಹಾಗೆ ಬೆಂಗಳೂರು ಸುತ್ತ ಮುತ್ತ ನೀರಿನ ಸಮಸ್ಯೆಯನ್ನು ಓದುತ್ತಾ ಇದ್ದೆ ,ಅಗಲೆ ಅಂದುಕೊಂಡಿದ್ದೆ ನಮ್ಮ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಮಾಡಬೇಕು ಎಂದು ಇಲ್ಲವಾದಲ್ಲಿ ನೀರು ಆರಿ ಹೋಗಬಹುದು ಎಂದು ಎನಿಸಿತ್ತು ನನಗೆ
2008 ರಲ್ಲಿ ನಾವು ನಮ್ಮ ಈ ಪುಟ್ಟ ಮನೆಗೆ ಒಕ್ಕಲಾದೆವು ,ಆಗ ಮೊದಲು ನಾವು ಮಾಡಿದ ಕೆಲಸ ನಮ್ಮ ಕೊಳವೆ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಯನ್ನು ಮಾಡಿದ್ದು
ಹೇಗೆ ಇನ್ಗಿಸುವುದು ಬೆಂಗಳೂರಿನ ಕೊಳಚೆ ನೀರು ಕೂಡ ಇಂಗಿದರೆ ಎಂಬ ಭಯ ಕಾಡಿತ್ತು
ಈ ಬಗ್ಗೆ ಶ್ರೀ ಪದ್ರೆಯವರನ್ನು ಸಂಪರ್ಕಿಸಿ ನಮ್ಮ ಬಾವಿಗೆ ನೀರು ಇಂಗಿಸುವ ಬಗ್ಗೆ ಸಲಹೆ ಕೇಳಿದೆ ಅವರು ಗ್ರೀನ್ ಅರ್ಥ್ ಫೌಂಡೇಶನ್ ರವಿ ಅವರ ಸಲಹೆ ಪಡೆಯಲು ತಿಳಿಸಿದರು

ಫೋನ್ ಮೂಲಕ ಅವರನ್ನು ಈ ಬಗ್ಗೆ ಸಲಹೆ ಕೇಳಿದೆ.ಅವರ ಸಲಹೆಯಂತೆ ಬೋರೆವೇಲ್ ಸುತ್ತ ಆರಡಿ ಅಗಲ ಹತ್ತು ಅಡಿ ಆಳ ಗುಂಡಿ ತೋಡಿಸಿದೆವು,ನಂತರ ಆಳದಲ್ಲಿ ಒಂದು ಅಡಿ ಮರಳು ತುಂಬಿದೆವು ನಂತರ ಎರಡು ಅಡಿ ಜಲ್ಲಿ ಕಲ್ಲು ತುಂಬಿದೆವು ನಂತರ ಎರಡು ಅಡಿ ದೊಡ್ಡ ಬೋರ್ಡೊ ಕಲ್ಲುಗಳನ್ನು ತುಂಬಿಸಿದೆವು ನಂತರ ಒಂದು ಅಡಿ ಮರಳು ತುಂಬಿದೆವು ನಂತರ ಮತ್ತೆ ಒಂದಡಿ ಜಲ್ಲಿ ಕಲ್ಲು ಅದರ ಮೇಲೆ ಒಂದಷ್ಟು ಇದ್ದಿಲು ತುಂಬಿ ಮೇಲ್ಭಾಗ ಮತ್ತೆ ಒಂದಷ್ಟು ಮರಳು ತುಂಬಿ ಒಂದಡಿಯಷ್ಟು ಆಳ ನೀರು ತುಂಬಲು ಬಿಟ್ಟು ಬಿಟ್ಟೆವು .ಅಲ್ಲಿಗೆ ತಾರಸಿ ನೀರು ಬರುವ ಹಾಗೆ ಮಾಡಿದೆವು
ಮತ್ತು ಛಾವಣಿ ನೀರು ಜೊತೆಗೆಅಂಗಳದ ನೀರು ಕೂಡ ಇಂಗಲಿ ಎಂಬ ಉದ್ದೇಶದಿಂದ ಅಂಗಳವನ್ನು ಸಮತಟ್ಟು ಮಾಡದೆ ಎಲ್ಲ ಕಡೆಯಿಂದ ಬಾವಿಯೆಡೆಗೆ ನೀರು ಬರುವಂತೆ ಚಾರೆಯಾಗಿ ಮಾಡಿ ಹಾಗೆ ಬಿಟ್ಟು ಬಿಟ್ಟೆವು ,ಜೊತೆಗೆ ಒಂದಷ್ಟು ಪಾರಿಜಾತ ಮೀಸೆ ಹೂ /ರತ್ನ ಗ್ರಂಥಿ ಸೇರಿದಂತೆ ಕೆಲವು ಸಸಿಗಳನ್ನು ಹಾಕಿದೆವು .ಅದರಲ್ಲಿ ಒಂದು ಪೇರಳೆ ಹಣ್ಣಿನ ಗಿಡವೂ ಇದೆ ಈಗ ಇವೆಲ್ಲ ಎತ್ತರಕ್ಕೆ ಬೆಳೆದು ನಿಂತು ಮನೆಗೆ ನೆರಳನ್ನೂ ತಂಪನ್ನೂ ತಂದು ಕೊಟ್ಟಿವೆ ಹಕ್ಕಿಗಳು ಚಿಟ್ಟೆಗಳು ಸ್ವಚ್ಚಂದವಾಗಿ ಬಂದು ಅಲ್ಲಿನ ಮೀಸೆ ಹೂವಿನ ಕಾಯಿಗಳನ್ನು ಒಡೆದು ತಿನ್ನುತ್ತವೆ ಪೇರಳೆ ಹಣ್ಣನ್ನೂ ಬಿಡುವುದಿಲ್ಲ ಅವು ತಿಂದು ಬಿಟ್ಟ ಕೆಲವು ಹಣ್ಣುಗಳು ನಮಗೂ ದಕ್ಕುವುದಿದೆ .ಜೊತೆಗೆ ಒಂದಷ್ಟು ಕಸ ಕಡ್ಡಿ ಬಿದ್ದು ಉಪದ್ರ ಕೂಡ ಆಗುತ್ತದೆ ,ಹಳ್ಳಿಯಲ್ಲಿ ಬೆಳೆದ ನನಗೆ ತೀರ ಸಿನೆಮಾ ಸೆಟ್ ಮಾದರಿಯ ಮನೆ ಬೇಕೆಂಬ ಭ್ರಮೆ ನನಗಿಲ್ಲ ಹಕ್ಕಿಗಳ ಕಲರವದೊಂದಿಗೆ ಬದುಕುವುದೇ ಅಪ್ಯಾಯಮಾನವಾಗುತ್ತದೆ ,ಆದರೂ ಬಂದ ಹೋದ ಜನರೆಲ್ಲಾ ಇದನ್ನು ಆಕ್ಷೇಪಿಸಿ ಒಂದು ಐನೂರು ರುಪಾಯಿ ಕೊಟ್ಟು ಇದನ್ನೆಲ್ಲಾ ಕಡಿಸಿ ಸ್ವಚ್ಚ ಮಾಡಬಾರದೇ?ಇದರಲ್ಲಿ ಹಾವು ಇರಬಹುದು ಎಂದು ಸಲಹೆ ಕೊಟ್ಟದ್ದೂ ಉಂಟು ..ಆಗೆಲ್ಲ ನಾನು ಹೇಳುತ್ತೇನೆ" ಹಾವು ಇದ್ದರೆ ಇರಲಿ ಬಿಡಿ ಈ ಪೇಟೆಯ ಕಾಂನ್ಕ್ರೀಟ್ ಕಾಡಿನಲ್ಲಿ ಅವಕ್ಕೆ ಬದುಕಲು ಜಾಗವಿಲ್ಲ.ಎಂದು" ಬಾಯಿಯಲ್ಲಿ ಹಾಗೆ ಹೇಳಿದರೂ ಮನದೊಳಗೆ ತುಸು ಆತಂಕವಾಗುವುದುಂಟು ,ನಮ್ಮ ಮನೆ ಸುತ್ತ ಮುತ್ತಲಿನ ಮಂದಿ ನಿಮ್ಮ ತೋಟದಲ್ಲಿ (ತೋಟ ಎನ್ನುವಷ್ಟು ಜಾಗವಿಲ್ಲ ಕೇವಲ 500 ಅಡಿ ಜಾಗವಿದೆ ಅಷ್ಟೇ )ಹಾವುಗಳು ಹರಿದಾಡುತ್ತಿವೆ ನಾವು ಕಣ್ಣಾರೆ ನೋಡಿದ್ದೇವೆ ಆ ಗಿಡಮರಗಳನ್ನು ಕಡಿಸಿ ಬಿಡಿ ಎಂದು ಆಗಾಗ ಹೇಳುತ್ತಿರುತಾರೆ .ಆದರೆ ನಾವು ಮನೆ ಮಂದಿ ಒಮ್ಮೆ ಕೂಡ ಇಲ್ಲಿ ಹಾವು ಹರಿದಾಡಿದ್ದನ್ನು ನೋಡಿಲ್ಲ ಆಗಾಗ ಹುಲ್ಲು ಕೀಳಿಸಿ ಸ್ವಚ್ಛ ಮಾಡುವಾಗ ಎಲ್ಲೂ ಹಾವಿನ ಮೊಟ್ಟೆಗಳು ನಮಗೆ ಕಾಣಸಿಕ್ಕಿಲ್ಲ ಆಗ ನಾನು ನಮ್ಮ ಹಳ್ಳಿಯ ತೋಟವನ್ನು ಕಾಲು ದಾರಿಯನ್ನು ನೆನಪಿಸಿಕೊಳ್ಳುತ್ತೇನೆ "ಅಲ್ಲೆಲ್ಲ ಹಸಿರು ಕಸಕಡ್ಡಿ ಇರುತ್ತದೆ ಅಲ್ಲಿ ಹಾವು ಇರುವುದಿಲ್ಲವೇ ?ಎಂದು"
ಇಂದಿನ ಆಕ್ಸಿಡೆಂಟ್ ಹೃದಯಾಘಾತ ಸಾವುಗಳನ್ನು ಗಮನಿಸಿದರೆ ಹಾವು ಕಡಿದು ಸಾಯುವ ಮಂದಿ ತೀರ ಕಡಿಮೆ ಅಲ್ಲವೇ ಎಂದು!
ಅದು ಏನೇ ಇರಲಿ ನಮ್ಮ ಮನೆಯ ಆಸುಪಾಸಿನಲ್ಲಿ ಉಲ್ಲಾಳು ಉಪನಗರ, ಜ್ಞಾನ ಭಾರತಿ ,ನಾಗರಭಾವಿ ಸೇರಿದಂತೆ ಸುತ್ತ ಮುತ್ತ ಅಂತರ್ಜಲ ಮಟ್ಟ ತೀರಾ ಕುಸಿದಿದೆ ಒಂದು ಸಾವಿರ ಅಡಿ ತೋಡಿದರೂ ನೀರು ಸಿಗುತ್ತಿಲ ಸಿಗುವ ನೀರಿನಲ್ಲಿ ಕೂಡ ಫ್ಲೋರೈಡ್ ಮೊದಲಾದ ರಾಸಾಯನಿಕಗಳ ಅಂಶ ತುಂಬಾ ಜಾಸ್ತಿ ಇದೆ
ಆದರೆ ನಮ್ಮ ಬಾವಿಯಲ್ಲಿ ಇಂದಿಗೂ 120 ಅಡಿ ಆಳದಲ್ಲಿಯೇ ನೀರಿದೆ ,ಇಲ್ಲಿ ಅಕ್ಕ ಪಕ್ಕ ಅನೇಕರು ಬೋರ್ ವೆಲ್ ಕೊರೆದಿದ್ದಾರೆ 800 -1000 ಅಡಿ ತೋಡಿದ್ದಾರೆ ಕೆಲವರಿಗೆ ಅಷ್ಟಾದರೂ ನೀರು ಸಿಕ್ಕಿಲ್ಲ ಆಗೆಲ್ಲ ನನಗೆ ನಮ್ಮ ಬಾವಿಯ ನೀರು ಬೇರೆ ಬಾವಿಗೆ ಹೋಗಬಹುದೇನೋ ಎಂಬ ಆತಂಕ ಕಾಡುತ್ತದೆ ಆದರೆ ಇಂಗಿಸಿದ ನೀರು ಸಾಮಾನ್ಯವಾಗಿ ಬೇರೆ ಬಾವಿಗೆ ಹೋಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .
ನಮ್ಮ ಮನೆ ಮುಖ್ಯ ರಸ್ತೆಯ ಬದಿಯಲ್ಲಿದೆ .ಕೆಲ ವರ್ಷಗಳಲ್ಲಿ ಇಲ್ಲಿ ವಾಣಿಜ್ಯ ಕಟ್ಟಡ ಹಾಕಿ ನಾವು ಬೇರೆಡೆ ಮನೆ ಮಾಡುವುದು ಅನಿವಾರ್ಯವಾಗಬಹುದು ಏಕೆಂದರೆ ಈಗಾಗಲೇ ರಸ್ತೆಯಲ್ಲಿ ಹೋಗುವ ವಾಹನಗಳ ಸದ್ದು ಅಕ್ಕ ಪಕ್ಕದ ಸಾ ಮಿಲ್ ,ಮೆಕ್ಯಾನಿಕ್ ಶಾಪ್ ಗಳಿಂದ ಹೊರಡುವ ಧೂಳು ಸದ್ದು ನಮ್ಮನ್ನು ಕಂಗೆಡಿಸುತ್ತವೆ.ಸುತ್ತ ಮುತ್ತ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿವೆ
ಮುಂದೊಂದು ದಿನ ನಾವು ಇಲ್ಲಿ ವಾಣಿಜ್ಯ ಕಟ್ಟಡ ಹಾಕಬೇಕಾಗಿ ಬಂದರೆ ಬೋರ್ ವೆಲ್ ಗೆ ನೀರು ಇಂಗಿಸಲು ಸಾಧ್ಯವೇ ?ಗೊತ್ತಿಲ್ಲ ಈ ಬಗ್ಗೆ ಆಗ ತಜ್ಞರ ಸಲಹೆ ಕೇಳಿದರಾಯಿತು ಎಂದು ಕೊಂಡಿದ್ದೇನೆ ಅಷ್ಟರ ತನಕ ಹೀಗೆ ಬಾವಿಗೆ ನೀರು ತುಂಬುತ್ತಾ ಇರಲಿ ಎಂದು..
ಒಂದು ಮಾತು ಮಾತ್ರ ಸತ್ಯವಾದುದು
ಮಂತ್ರಕ್ಕೆ ಮಾವಿನಕಾಯಿ ಉದಿರುವುದಿಲ್ಲ ಎಂಬುದು .ಮಾವಿನ ಕಾಯಿ ಬೀಳಬೇಕಾದರೆ ಕಲ್ಲು ಎಸೆಯಬೇಕು, ಒಂದು ಎಸೆತಕ್ಕೆ ಬೀಳುತ್ತದೆ ಎಂದೇನಿಲ್ಲ ಬೀಳುವ ತನಕ ಎಸೆಯುತ್ತಾ ಇರಬೇಕು ,ಅಂತರ್ಜಲ ಕುಸಿತ ನೀರಿನ ಬರದ ಬಗ್ಗೆ ಆತಂಕದ ಕಾಳಜಿಯ ಮಾತುಗಳನ್ನು ಆಡಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು .ಸಾವಿರ ಮಾತಿಗಿಂತ ಒಂದು ಕೃತಿ ಮೇಲೆ ಎಂಬುದು ನನ್ನ ಸ್ಪಷ್ಟ ನಿಲುವು ಇದಕ್ಕೆ ನೀವೇನಂತೀರಿ ?
ಅಂದ ಹಾಗೆ ನಮ್ಮಬಾವಿಗೆ ಚಾವಣಿ ನೀರು ಇಂಗಿಸಲು ನಮಗೆ ಆದ ಖರ್ಚು ನಾಲ್ಕು ಐದು ಸಾವಿರ ರೂಪಾಯಿಗಳು ಅಷ್ಟೇ ,ಇದನ್ನು ನಮಗೆ ನಾವು ಹೇಳಿದಂತೆ ಮಣ್ಣು ಅಗೆದು ಮರಳು ಕಲ್ಲು ತುಂಬಿ ನೀರು ಇಂಗಿಸುವ ಕೆಲಸವನ್ನುಒಂದು ಆದಿತ್ಯವಾರ ಬಂದು ,ಕೇವಲ ಕೂಲಿಗಾಗಿ ಮಾಡದೆ ,ಅತ್ಯಂತ ಶ್ರದ್ಧೆಯಿಂದ , ಅತ್ಯುತ್ಸಾಹದಿಂದ ಮಾಡಿಕೊಟ್ಟು ನಾವು ಮೊದಲ ಬಾರಿಗೆ ನೀರು ಉಳಿಸುವ ಕೆಲಸವನ್ನು ಮಾಡಿದ್ದೇವೆ ಅಕ್ಕ ಎಂದು ಸಂಭ್ರಮಿಸಿದ ರವಿ ಮತ್ತು ಸುಜಾತ (ಹೆಸರು ಸರಿಯಾಗಿ ನೆನಪಿಲ್ಲ )ದಂಪತಿಗಳಿಗೆ ನಾವು ಆಭಾರಿಯಾಗಿದ್ದೇವೆ .

Tuesday, 10 May 2016

ಕೈಬರಹ ಕೆಟ್ಟದಾಗಿ ಇದ್ದರೂ ಲಾಭವಾಗುತ್ತದೆ !-ಡಾ.ಲಕ್ಷ್ಮೀ ಜಿ ಪ್ರಸಾದಕೈಬರಹ ಸುಂದರವಾಗಿದ್ದರೆ ನಮಗೆ ವಿದ್ಯಾರ್ಥಿಗಳಾಗಿದ್ದಾಗ ಒಳ್ಳೆ ಅಂಕಗಳು ಲಭಿಸುತ್ತವೆ ,ಪತ್ರ ಗಿತ್ರ ಬರೆಯಬೇಕಾದರೆ ಅವರ ಸಹಾಯವನ್ನು ಜನರು  ಕೇಳುತ್ತಾರೆ ಹಾಗಾಗಿ ಸುಂದರ ಕೈ ಬರಹ ಇರುವವರಿಗೆ ಸದಾ ಬೇಡಿಕೆ ಇರುತ್ತದೆ !ಒಳ್ಳೆಯ ಸ್ಥಾನಮಾನ ಸಿಗುತ್ತದೆ ,ಆದರೆ ಅಕ್ಷರ ಕೆಟ್ಟದಾಗಿರೋದರಿಂದ ಕೂಡ ಕೆಲವೊಮ್ಮೆ ಬೆನಿಫಿಟ್ ಗಳು ಸಿಗುವುದು ಉಂಟು !ಅದು ಹೇಗೆ ಗೊತ್ತಾ ?ತಿಳಿಯಲು ಕುತೂಹಲ  ಇದ್ದರೆ ಇದನ್ನು ಓದಿ 

ನಿನ್ನೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ.ಗೋ ಪ್ರಪಂಚ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು .ಪ,ಗೋ ಅವರ ಮಗ ಪದ್ಯಾಣ ರಾಮಚಂದ್ರ ,ಹಾಗೂ ಏಕಮ್ ಪ್ರಕಾಶನದ ರಂಗ ಸ್ವಾಮಿ ಮೂಕನಹಳ್ಳಿ ಯವರು ನನಗೆ ತುಂಬಾ ಆತ್ಮೀಯರೂ ಆಗಿದ್ದು ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ .ಕಾರ್ಯಕ್ರಮಕ್ಕೆ ಅರ್ಧ ಗಂಟೆ ಮೊದಲೇ ಹೋಗಿದ್ದೆ .ಅಲ್ಲಿ ಹೋದಾಗ ಕೇ ಪಿ ರಾಜಗೋಪಾಲ ಕನ್ಯಾನ ಅಲ್ಲಿಗೆ ಬರುವವರಿದ್ದು ಅವರಿಗೆ ಒಂದು ಅಭಿನಂದನೆ ಕೂಡ ಏರ್ಪಡಿಸಿರುವುದು ತಿಳಿಯಿತು .

ರಾಜಗೋಪಾಲ ಕನ್ಯಾನ ಅವರು ಕಲೆ ಸಾಹಿತ್ಯ ಅಭಿಮಾನಿಯಾಗಿದ್ದು ,1995ರಲ್ಲಿ ಪ.ಗೋ ಅವರುಹೊಸದಿಗಂತ ಪತ್ರಿಕೆಗೆ ಬರೆದ ಆತ್ಮ ಕಥನಾತ್ಮಕ ಅಂಕಣ ಬರಹಗಳನ್ನು ಸಂಗ್ರಹಿಸಿ,ಪಗೋ ಕುರಿತು ವಿಶಿಷ್ಟ ಸೃಷ್ಟಿಗಳ ಲೋಕದಲ್ಲಿ ಎಂಬ ಕೃತಿಯನ್ನು 2005ರಲ್ಲಿ ಬೆಳಕಿಗೆ ತಂದಿದ್ದರು .ಅದಕ್ಕಾಗಿ ಪಗೋ ಮಗ ಪದ್ಯಾಣ ರಾಮಚಂದ್ರ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದರು .ಆದರೆ ಪದ್ಯಾಣ ರಾಮಚಂದ್ರ ಹಾಗೂ ಏಕಮ್ ಪ್ರಕಾಶನದ ರಂಗಸ್ವಾಮಿ ಮೂಕನಹಳ್ಳಿ ಅವರಿಗೆ ರಾಜಗೋಪಾಲ ಕೆಪಿ ಅವರ ಪರಿಚಯವಿರಲಿಲ್ಲ ,ನನಗೆ ರಾಜಗೋಪಾಲ ಕನ್ಯಾನ ತುಂಬಾ ಅತ್ಮೀಯರಾಗಿರುವುದು ಪದ್ಯಾಣ ರಾಮಚಂದ್ರ ಅವರಿಗೆ ಗೊತ್ತಿತ್ತು ಹಾಗಾಗಿ ಅವರ ಪರಿಚಯವನ್ನು ಬರೆದುಕೊಡಲು ತಿಳಿಸಿದರು .ಹಾಗೆ ರಾಜಗೋಪಾಲ ಕನ್ಯಾನ ಅವರ ಸಂಕ್ಷಿಪ್ತ ಪರಿಚಯ ಬರೆದುಕೊಟ್ಟೆ .ಅದನ್ನು ಅವರು ರಂಗ ಸ್ವಾಮಿ ಮೂಕನ ಹಳ್ಳಿ ಅವರಿಗೆ ಕೊಟ್ಟರು 
ಅವರಿಗೆ ಅದನ್ನು ನೋಡುತ್ತಲೇ ತಲೆಬಿಸಿ ಆಯಿತು ಅದನ್ನು ಓದುವುದು ಹೇಗೆ ಅಂತ !ಅಷ್ಟು ಸುಂದರವಾಗಿದೆ ನನ್ನ ಕೈಬರಹ !ಮೊದಲೇ ನನ್ನ ಕೈಬರಹ ಕೆಟ್ಟದಾಗಿದೆ ಅದಕೆ ಸರಿಯಾಗಿ ನಿನ್ನೆ ಕನ್ನಡಕ ತೆಗೆದುಕೊಂಡು ಹೋಗಲು ಮರೆತಿದ್ದೆ.ಬೇರೆ !ಹಾಗಾಗಿ ನನ್ನ ಅಕ್ಷರ ತೀರ ಅಧ್ವಾನವಾಗಿತ್ತು.ಅದನ್ನು ರಂಗಸ್ವಾಮಿ ಯವರಿಗೆ ಬಿಡಿ ನನಗೆ ಕೂಡ ಓದಲು ಕಷ್ಟಕರವೇ ಆಗಿತ್ತು !ಹಾಗಿರುವಾಗ ಅವರ ಅವಸ್ಥೆಯನ್ನು ಎಂತ ಹೇಳುದು !
ಆಗ ಅವರು ಅದನ್ನು ನನಗೆ ಕೊಟ್ಟು "ಕೆಪಿ ರಾಜಗೋಪಾಲ ಕನ್ಯಾನ ಅವರನ್ನು ನೀವೇ ಪರಿಚಯಿಸಿ "ಎಂದು ನನಗೆ ಹೇಳಿನನ್ನ ಕೈಬರಹ ಓದುವ ಗಂಡಾಂತರದಿಂದ ಪಾರಾದರು ! .
ನನಗೆ ತುಂಬಾ ಖುಷಿ ಆಯ್ತು !ಯಾಕೆಂದರೆ ಕೇ ಪಿ ರಾಜಗೋಪಾಲ ಕನ್ಯಾನ ಅವರು ನನಗೆ ತುಂಬಾ ಆತ್ಮೀಯರು ,ನನ್ನ ಸಂಶೋಧನಾ ಕೃತಿಗಳ ಪ್ರಕಟಣೆಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟವರು ಅವರು .ನಾನು ಹವ್ಯಕ ಭಾಷೆಯಲ್ಲಿ ನಾಟಕ ಬರೆದ ಮೊದಲ ಮಹಿಳೆ ಎಂಬುದನ್ನು ನನಗೆ ತಿಳಿಸಿದವರೂ ಕೂಡ ಅವರೇ .ಎಲ್ಲೋ ಮೂಲೆಯಲ್ಲಿ ಇದ್ದ ನನ್ನ ಸುಬ್ಬಿಇಂಗ್ಲಿಷ್ ಕಲ್ತದು ಎಂಬ ನಾನು ಏಳನೇ ತರಗತಿಯಲ್ಲಿ ಬರೆದಿದ್ದ ನಾಟಕ  ಮಹಿಳೆ ಬರೆದ ಮೊದಲ ನಾಟಕ ,ಆ ಮಹಿಳೆ ನಾನೇ ಎಂಬುದನ್ನು ತಿಳಿಸಿ ಆ ನಾಟಕ ಬೆಳಕಿಗೆ ಬರಲು ಕಾರಣರಾದವರು ಅವರು .ನನ್ನಂತೆ ಅನೇಕರಿಗೆ ಅಪಾರ ಬೆಂಬಲ ನೀಡಿ ಪ್ರೋತ್ಸಾಹಿಸಿದವರು .ನೂರಕ್ಕೂ ಹೆಚ್ಚು ಎಲೆಮರೆಯ ಕಾಯಿಗಳಂತೆ ಇದ್ದ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸಿದವರು ಅವರು .
ಹಾಗಾಗಿ ಅವರ ಪರಿಚಯವನ್ನು ಸಭೆಗೆ ಮಾಡಿಕೊಡುವುದು ನನಗೆ ಇಷ್ಟದ ವಿಚಾರವೇ ಆಗಿತ್ತು .ನನ್ನ ಕೆಟ್ಟ ಕೈ ಬರಹ ನನಗೆ ಆ ಅವಕಾಶವನ್ನು ತಂದು ಕೊಟ್ಟಿತು !ಈಗ ಗೊತ್ತಾಗಿರಬಹುದು ನಿಮಗೆ  ಅಕ್ಷರ ಚೆನ್ನಗಿಲ್ಲದೆ ಇದ್ರೂ ಲಾಭ ಇದೆ ಅಂತ!

Monday, 25 April 2016

ಶಿಕ್ಷಕರನ್ನು ಪಾಠ ಮಾಡಿಕೊಂಡಿರಲು ಬಿಟ್ಟು ಬಿಡಿ(26 ಏಪ್ರಿಲ್ 2016 ವಿಶ್ವವಾಣಿ) -ಡಾ.ಲಕ್ಷ್ಮೀ ಜಿ ಪ್ರಸಾದ

 
ಹತ್ತನೇ ತರಗತಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ. ಅನೇಕ ವಿದ್ಯಾರ್ಥಿಗಳು ಅಸಂಬಂದ್ಧ ಉತ್ತರಗಳನ್ನು ಬರೆದಿರುವ ಬಗ್ಗೆ ಓದಿದೆ. ಸಂಗ್ರಹ ಮೂಲ ವಿನಿಮಯ ಮೂಲಗಳ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ ಎಂಬ ಒಂದು ಪ್ರಶ್ನೆಗೆ ‘ಅನಿಸುತಿದೆ ಏಕೋ ಇಂದು ನೀನೇನೆ ನನ್ನವನೆಂದು ಆಹಾ ಎಂಥ ಮಧುರ ಯಾತನೆ, ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ’ ಎಂದು ಒಬ್ಬ ಬರೆದಿದ್ದಾನೆ.ಇನ್ನೊಬ್ಬ ‘ಕಿಂಗ್’ ಎಂಬುದರ ಕನ್ನಡ ಭಾವಾರ್ಥ ಬರೆಯಿರಿ ಎಂಬ ಪ್ರಶ್ನೆಗೆ ಸಿಗರೇಟ್ ಎಂದು ಉತ್ತರಿಸಿದ್ದ. ಮತ್ತೊಬ್ಬ ವಿದ್ಯಾರ್ಥಿ ‘ನಾನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾ. ಆದರೆ ಅಲ್ಲಿ ಗಣಿತ ಶಿಕ್ಷಕರು ಇಲ್ಲದ ಕಾರಣ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿದೆ. ಅಲ್ಲಿ ಇಂಗ್ಲಿಷ್‌ನಲ್ಲಿ ಪಾಠ ಮಾಡಿದ್ದು ನನಗೆ ಅರ್ಥವಾಗಿಲ್ಲ. ಆದ್ದರಿಂದ ನನಗೆ ದಯವಿಟ್ಟು ಅರುವತ್ತು ಅಂಕಗಳನ್ನು ಕೊಡಿ’ ಎಂದು ವಿನಂತಿಸಿದ್ದಾನೆ.ನೆಹರೂ ಮೊದಲ  ಕಾನೂನು ಸಚಿವರನ್ನಾಗಿ ಅಂಬೇಡ್ಕರರನ್ನು ಏಕೆ ನೇಮಿಸಿದರು ಎಂಬ ಪ್ರಶ್ನೆಗೆ ‘ಐ ಅಮ್ ಸಾರೀ, ಮತ್ತೆ ಬನ್ನಿ ಪ್ರೀತಿಸೋಣ, ಐಮಿಸ್ ಯು ಎಂದು ಉತ್ತರ ಬರೆದಿದ್ದಾನೆ.
ಮತ್ತೊಬ್ಬ ‘ನನಗೆ ಗಣಿತ ಅರ್ಥವಾಗುವುದಿಲ್ಲ. ನಾನು ನನ್ನ ಮನೆ ಮಂದಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನನಗೆ ಅರುವತ್ತು ಅಂಕ ಕೊಡಿ ನಿಮಗೆ ಪುಣ್ಯ ಬರುತ್ತದೆ’ ಎಂದು ಬರೆದಿದ್ದಾನೆ.. ಕಳೆದ ವರ್ಷ ಗಣಿತ ಉತ್ತರ ಪತ್ರಿಕೆಯಲ್ಲಿ ಕೋಳಿ ಸಾರು ಮಾಡುವ ವಿವರಣೆ ಇದ್ದ ಬಗ್ಗೆ ವರದಿಯಾಗಿತ್ತು.ಕಿಂಗ್ ಎಂದರೆ ಕಿಂಗ್ ಸಿಗರೇಟ್ ನೆನಪಿಗೆ ಬರುತ್ತದೆ ಆದರೆ ಅರಸನ ನೆನಪು ಯಾಕಿಲ್ಲ? ಪಾಠದ ನಡುವೆ ಕಿಂಗ್ /ಅರಸನ ಕಥೆಯನ್ನೂ ಹೇಳಿದ್ದರೆ ಈ ಮಕ್ಕಳು ‘ಕಿಂಗ್’ ಎಂದರೆ ಅರಸ ಎಂದು ನೆನಪಿಟ್ಟುಕೊಳ್ಳುತ್ತಿದ್ದರು. ಆದರೆ ಇಂದಿನ ಶಿಕ್ಷಕರ ಜವಾಬ್ದಾರಿ, ಅವರ ಕರ್ತವ್ಯಗಳ ಬಗ್ಗೆ ನೋಡಿದರೆ ಅವರು ಪೂರಕ ಕಥೆ ಹೇಳುವುದು ಬಿಡಿ ಪಾಠದಲ್ಲಿರುವುದನ್ನು ಹೇಳಲೂ ಅವರಿಗೆ ಸಮಯ ಸಿಗುವುದಿಲ್ಲ. ಇಂದಿನ ಪಾಠ ಕ್ರಮದಲ್ಲಿ ಅವುಗಳಿಗೆಲ್ಲ ಅವಕಾಶವೂ ಇಲ್ಲ !ಇತ್ತೀಚಿಗೆ ಒಬ್ಬರು ಮೇಷ್ಟ್ರು ಸಿಕ್ಕರು. ಸುಮ್ಮನೆ ಮಾತನಾಡಿಸಿದೆ. ಅದಕ್ಕೆ ಅವರು ‘ಅಯ್ಯೋ ನಮ್ಮ ಅವಸ್ಥೆ ಏನು ಹೇಳುವುದು ಮೇಡಂ.
ಪಾಠ ಮಾಡಲು ನಮಗೆ ಸಮಯವೇ ಇಲ್ಲ ಉಳಿದ ಕೆಲಸವೇ ಆಯ್ತು. ಹಾಗಾಗಿ ಪಾಠ ಮುಗಿದಿಲ್ಲ. ಅದಕ್ಕೆ ಮಕ್ಕಳಿಗೆ ಆದಿತ್ಯವಾರವೂ ತರಗತಿ ತಗೊಳ್ಳುತ್ತೇನೆ. ನಮ್ಮಲ್ಲಿ ಶಾಲೆಗೆ ಬಾರದ ಮಕ್ಕಳನ್ನು ಹುಡುಕಿ ತರುವುದು, ಅವರ ಹೆತ್ತವರನ್ನು ಕಂಡು ಮನ ಒಲಿಸುವುದು ಇದೇ ಆಯ್ತು. ಇವೆಲ್ಲದರ ನಡುವೆ ನಮಗೆ ಪಾಠ ಮಾಡಲು ಸಮಯವೆಲ್ಲಿದೆ? ಶಾಲೆಗೆ ಬಾರದ ಮಕ್ಕಳ ಬಗ್ಗೆ ಓಡಾಡಿ ಮಾಹಿತಿ ಸಂಗ್ರಹಿಸಿ ಅವರನ್ನು ಶಾಲೆಗೆ ಸೇರಿಸುವ, ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಭರದಲ್ಲಿ ಶಾಲೆಗೆ ಬಂದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ನಿಟ್ಟುಸಿರುಬಿಟ್ಟರು!
ಇತ್ತೀಚಿಗೆ ವಾಟ್ಸಪ್ ನಲ್ಲಿ ಒಂದು ಮೆಸೇಜ್ ಬಂದಿತ್ತು
"ಅಕ್ಷರ ದಾಸೋಹ, ಕ್ಷೀರಭಾಗ್ಯ, ಸೈಕಲ್ ವಿತರಣೆ, ಪಠ್ಯಪುಸ್ತಕ, ಬ್ಯಾಗ್ ವಿತರಣೆ, ಚಿಣ್ಣರ ಅಂಗಳ, ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಬಾ ಮರಳಿ ಶಾಲೆಗೆ, ಶಾಲೆ ಬಿಟ್ಟ ಮಕ್ಕಳ ಮನೆಭೇಟಿ, ಎಸ್‌ಡಿಎಂಸಿ ರಚನೆ, ಶೌಚಾಲಯ ನಿರ್ವಹಣೆ, ಕಟ್ಟಡ ಕಾಮಗಾರಿ, ಸಮುದಾಯದತ್ತ ಶಾಲೆ, ವಾರ್ಷಿಕೋತ್ಸವ, ಪ್ರಗತಿಪತ್ರ ತುಂಬವುದು, ಮಕ್ಕಳಿಗೆ ಬ್ಯಾಂಕ್ ಖಾತೆ ತರೆಯುವುದು, ವಿದ್ಯಾರ್ಥಿವೇತನ ಸಮನ್ವಯ, ಶಿಕ್ಷಣ ಜನಗಣತಿ, ಮಕ್ಕಳ ಗಣತಿ, ಜಾತಿಗಣತಿ, ಚುನಾವಣಾಕಾರ್ಯ, ಪಲ್ಸ ಪೋಲಿಯೋ, ಎಸ್‌ಡಿಎಂಸಿ ಸಭೆ, ಪಾಲಕರ ಸಭೆ, ಪುನಶ್ಚೇತನ ತರಬೇತಿ, ಸೇತುಬಂಧ, ನಲಿ ಕಲಿ ಕಲಿ ನಲಿ, ಪ್ರತಿಭಾ ಕಾರಂಜಿ, ರಾಷ್ಟ್ರೀಯ ಹಬ್ಬಗಳು, ದಿನಾಚರಣೆಗಳು, ಒಂದಷ್ಟು ಜಯಂತಿಗಳು... ಇಷ್ಟೆಲ್ಲ ಕೆಲಸ ಕಾರ್ಯಗಳನ್ನು ಶಿಕ್ಷಕರು ಮಾಡಿ ಮುಗಿಸಿದಾಗ ಅವರಿಗೆ ಗಾಂಧಿ ಹುಟ್ಟಿದ ಇಸವಿ ಬಿಡಿ ತಾವು ಹುಟ್ಟಿದ ದಿನವೇ ನೆನಪಿರಲ್ಲ! @ಎಸ್ಕೆ
ಇದನ್ನು ಓದಿದಾಗ ಆರಂಭದಲ್ಲಿ ತುಸು ನಗು ಬಂದಿತ್ತು ಆದರೆ ಇದು ಇದು ವಾಸ್ತವ. ಇದನ್ನು ಓದಿದಾಗ ಇಷ್ಟೆ ಕೆಲಸಗಳನ್ನು ಮಾಡಿಕೊಂಡು ಶಿಕ್ಷಕರು ಮಕ್ಕಳಿಗೆ ಯಾವಾಗ ಪಾಠ ಮಾಡುತ್ತಾರೆ ಎಂದು ನನಗೆ ಸಂಶಯ ಬಂದಿತ್ತು.
ಸರ್ಕಾರಿ ಶಾಲೆಗಳಲ್ಲಿ ಪಾಠ ಪ್ರವಚನಗಳಿಗಿಂತ ಉಳಿದದ್ದೇ ಹೆಚ್ಚು ನಡೆಯುತ್ತವೆ. ಇಷ್ಟೆ ಕೆಲಸಗಳ ನಡುವೆ ಪಾಠ ಮಾಡಲು ಎಷ್ಟು ಸಮಯ ಸಿಗುತ್ತದೆ? ಏನೋ ಅವಸರವಸರದಿಂದ ಹರಿ ಬರಿಯಾಗಿ ಪಾಠ ಮಾಡಿದ್ದರೆ ಅದು ಮಕ್ಕಳ ತಲೆಗೆ ಒಂದಿನಿತೂ ಹೋಗುವುದಿಲ್ಲ.

ಒಂದೆಡೆ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ. ಇನ್ನೊಂದೆಡೆ ಪ್ರತಿಭಾವಂತರನ್ನು ಶಿಕ್ಷಣ ಕ್ಷೇತ್ರ ಆಕರ್ಷಿಸುತ್ತಿಲ್ಲ. ಪ್ರತಿಭಾವಂತರು ಇಂಜಿನಿಯರ್, ಮೆಡಿಕಲ್ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಬಿಕಾಂ, ಎಂಕಾಂ ಮಾಡಿದವರೂ ಒಳ್ಳೆ ವೇತನ ಸಿಗುವ ಖಾಸಗಿ ಕಂಪನಿಗಳ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲವರು ಮಾತ್ರ ಬೇರೆ ದಾರಿ ಇಲ್ಲದೆ ಶಿಕ್ಷಕರಾಗುತ್ತಿದ್ದಾರೆ. ಈ ಸಮಸ್ಯೆ ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಲಕ್ಷ ಗಟ್ಟಲೆ ಡೊನೇಶನ್ ಹಾಗೂ ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳು ಕೂಡ ಶಿಕ್ಷಕರಿಗೆ ಒಳ್ಳೆಯ ವೇತನ ಕೊಡುವುದಿಲ್ಲ.ಕಲಿಕೆಗೆ ಕನಿಷ್ಠ ಒತ್ತಡ ಅತ್ಯಗತ್ಯ. ಆದರೆ ಇಂದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಜೋರು ಮಾಡುವಂತಿಲ್ಲ.
 ನನ್ನ ಜೊತೆ ಕೆಲಸ ಮಾಡುತ್ತಿದ್ದ ಶಿಕ್ಷಕಿ ಒಬ್ರು ಅವರ ಅನುಭವವನ್ನು ಹೀಗೆ ಹೇಳಿದ್ದರು... ಅವರು ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ಒಬ್ಬ ಹುಡುಗ ಕಡಲೇಕಾಯಿ ತಿನ್ನುತ್ತಾ ಇದ್ದ. ಆಗ ಇವರು ‘ಪಾಠ ಮಾಡುವಾಗ ತಿನ್ನುವುದು ಸಭ್ಯತೆಯಲ್ಲ’ ಎಂದು ಬುದ್ಧಿ ಹೇಳಿದರು. ಆಗ ಹುಡುಗ ನಾನು ತಿಂತೇನೆ ಏನು ಮಾಡುತ್ತೀರಾ? ಹೊಡೀತೀರ? ಹೊಡೆದರೆ ನಾನು ನಾಳೆಯಿಂದ ಶಾಲೆಗೆ ಬರುವುದಿಲ್ಲ. ಆಗ ನಾನು ಶಾಲೆ ಬಿಟ್ಟದ್ದಕ್ಕೆ ನಿಮ್ಮನ್ನೇ ಬೈತಾರೆ ಗೊತ್ತಾ? ಎಂದು ಹೇಳಿ ಕಡಲೆ ಕಾಯಿ ತಿನ್ನುವುದು ಮುಂದುವರಿಸಿದ. ಜೋರು ಮಾಡಿದರೆ ತಕ್ಷಣವೇ ಬಿಇಒಗೆ ದೂರು ಹೋಗುತ್ತದೆ. ಮಾಧ್ಯಮಗಳು ಬರುತ್ತವೆ. ನನ್ನನ್ನು ಖಳನಾಯಕಿ ಸ್ಥಾನದಲ್ಲಿ ನಿಲ್ಲಿಸಿ ಬಾಯಿಗೆ ಬಂದ ಹಾಗೆ ಆಡಿಕೊಳ್ಳುತ್ತಾರೆ. ಹಾಗಾಗಿ ನಾನು ಆತನನ್ನು ಸುಮ್ಮಗೆ ಬಿಟ್ಟೆ ಎಂದರು.ಖಾಸಗಿ ಶಾಲೆಗಳಲ್ಲಿನ ಪರಿಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಮಕ್ಕಳಿಗೆ ಗದರುವಂತಿಲ್ಲ. ಪಾಠಕ್ಕೆ ಪೂರಕ ವಿಚಾರಗಳ ಬಗ್ಗೆ, ನೈತಿಕ ಮೌಲ್ಯಗಳ ಬಗ್ಗೆ, ದೈನಂದಿನ ವಿಶೇಷ ವಿಚಾರಗಳ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಕೇವಲ ಪಾಠದಲ್ಲಿರುವುದನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸಬೇಕು. ಉಸಿರು ಕಟ್ಟುವ ವಾತಾವರಣದಲ್ಲಿ ಸ್ವತಂತ್ರವಾಗಿ ಪಾಠ ಮಾಡಲು ಸಾಧ್ಯವಿಲ್ಲ. ದೇಶ ಭಕ್ತರ, ತ್ಯಾಗಿಗಳ ರೋಮಾಂಚಕ ಕಥೆಗಳು, ಬದುಕಿನಲ್ಲಿ ಭರವಸೆ ಮೂಡಿಸುವ ಸಾಧಕರ ವಿಚಾರಗಳು, ಮೌಲಿಕ ವಿಚಾರಗಳು ಪಾಠದಲ್ಲಿ ಇಲ್ಲ. ಬದುಕಿಗೆ ಒಂದಿನಿತು ಸಹಕಾರಿಯಾಗಿರದ, ಮಕ್ಕಳ ಸಾಮರ್ಥ್ಯಕ್ಕೆ ಮೀರಿದ ಶುಷ್ಕ ವಿಚಾರಗಳೇ ತುಂಬಿವೆ.
ಗುಣಮಟ್ಟ ಹೆಚ್ಚಿಸುವುದೆಂದರೆ ಅತಿ ಹೆಚ್ಚು ವಿಚಾರಗಳನ್ನು ಮಕ್ಕಳ ತಲೆಗೆ ತುಂಬಿಸುವುದು ಎಂಬ ಭ್ರಮೆಯಲ್ಲಿ ತಯಾರಾದ ಪಾಠಗಳು ಮಕ್ಕಳಿಗೆ ಓದಲು ಪ್ರೇರೇಪಿಸುತ್ತಿಲ್ಲ.ಮೊದಲು ಶಾಲೆಗಳಲ್ಲಿ ಪ್ರತಿ ದಿನ ಒಂದು ಅವಧಿ ಆಟಕ್ಕೆ ಮೀಸಲು. ಗ್ರಂಥಾ ಲಯ ಅವಧಿಯೂ ಇತ್ತು. ಅದರಲ್ಲಿ ನಾವು ಕಥೆ, ಕಾದಂಬರಿಗಳನ್ನು ಓದುತ್ತಿ ದ್ದಾವು. ಆಟದಿಂದ ಮನಸಿಗೆ ವಿಶ್ರಾಂತಿ ದೊರೆಯುತ್ತದೆ. ಉತ್ಸಾಹ ಮೂಡುತ್ತದೆ. ಶಿಕ್ಷಕರು ಪಾಠದ ನಡುವೆ ಕಥೆ, ಬೇರೆ ವಿಚಾರಗಳನ್ನು ಹೇಳುತ್ತಿದ್ದರು. ಒಗಟುಗಳನ್ನುಬಿಡಿಸುತ್ತಿದ್ದರು. ಇದೆಲ್ಲದರಿಂದ ಶಾಲೆ ಮುಗಿಸಿ ಬರುವಾಗಲೂ ನಾವು ಉತ್ಸಾಹದಿಂದ ಇರುತ್ತಿದ್ದಾವು. ಲೇಖಕಿ ಸಾರಾ ಅಬೂಬಕ್ಕರ್ ಆಟ ಆಡುವುದಕ್ಕಾಗಿಯೇ ಶಾಲೆಗೆ ಹೋಗುತ್ತಿದ್ದರಂತೆ!


ಈಗ ಮಕ್ಕಳಿಗೆ ಆಟ ಆಡಲು ಮೈದಾನ ಬಿಡಿ ಹತ್ತು ಅಡಿ ಜಾಗ ಕೂಡ ಇಲ್ಲ. ಶಾಲೆಗಳಲ್ಲಿ ಇಡೀ ದಿನ ನೀರಸ ಪಾಠ ಕೇಳಿ ಉತ್ಸಾಹ ಕಳೆದುಕೊಂಡು, ಸುಸ್ತಾಗಿ ಜೋಲು ಮುಖ ಹಾಕಿಕೊಂಡು, ಮಣಗಟ್ಟಲೆ ಭಾರದ ಚೀಲ ಹಿಡಿದುಕೊಂಡು ಶಾಲೆ ಬಿಟ್ಟು ಮನೆಗೆ ಬರುವ ಮಕ್ಕಳನ್ನು ನೋಡಿದರೆ ನಿಜಕ್ಕೂ ಅಯ್ಯೋ ಎನಿಸುತ್ತದೆ. ಗುಣಮಟ್ಟದ ಶಿಕ್ಷಣ ನೀಡುವುದೊಂದೇ ಇದಕ್ಕೆಲ್ಲ ಇರುವ ಪರಿಹಾರ. ಇದಕ್ಕಾಗಿ ಅರ್ಹ ಶಿಕ್ಷರನ್ನು ಆಯ್ಕೆ ಮಾಡಬೇಕು. ,ಒಳ್ಳೆಯ ವೇತನ ನೀಡಬೇಕು. ಮುಖ್ಯವಾಗಿ ಶಿಕ್ಷಕರನ್ನು ಬೇರೆ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಪಾಠಕ್ಕೆ ಗಮನ ನೀಡಲು ಬಿಡಬೇಕು.

Tuesday, 12 April 2016

ವಿದ್ಯೆ ಕಲಿಸುವ ಗುರುವಿಗೆ ಮೋಸ ಮಾಡಬಹುದೇ ?(ವಿಶ್ವವಾಣಿ,13 ಏಪ್ರಿಲ್2016 ಪುಟ 7 )-ಡಾ.ಲಕ್ಷ್ಮೀ ಜಿ ಪ್ರಸಾದ

ಜಗತ್ತಿನಲ್ಲಿ ಪದೋನ್ನತಿಯೇ ಇಲ್ಲದೆ ಇರುವ ಹುದ್ದೆ  ಪಿಯು ಉಪನ್ಯಾಸಕರದ್ದು ಮಾತ್ರ ಇರಬೇಕು! ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿ ಉಪನ್ಯಾಸಕನಾಗಿಯೇ ನಿವೃತ್ತನಾಗಬೇಕು. ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಮಾಡಿದರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಇತರರಿಗೆ ಹೆಚ್ಚಿನ ವೇತನ ಕೊಟ್ಟರೆ ಹೊರೆ ಆಗುವುದಿಲ್ಲವೇ? https://www.vishwavani.news/epaper.html
ಧಿಕ್ಕಾರ ಧಿಕ್ಕಾರ! ಇಂಥವರನ್ನು ಇನ್ನೂ ಸಹಿಸಿಕೊಂಡಿರುವ ಈ ಸರಕಾರಕ್ಕೂ ದಿಕ್ಕಾರ, ಅವರು ತಮ್ಮ ಸ್ವಂತದ ಮೌಲ್ಯಮಾಪನ ಮಾಡ್ತಾ ಇದ್ದಾರೆ ಮಕ್ಕಳಿಗೆ ಗೊತ್ತಿರೋದುಕ್ಕಿಂತ ಕಡಿಮೆ ತಿಳಿವಳಿಕೆ ಇರೊ ಮೌಲ್ಯಮಾಪನ ಮಾಡೊ ಅಧ್ಯಾಪಕರಿಗೆ ನನ್ನ ಧಿಕ್ಕಾರ. ಮೌಲ್ಯಮಾಪನಕ್ಕೆ ಹಾಜರಾಗದೆ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಲು ನಿಂತಿರುವ ಉಪನ್ಯಾಸಕರಿಗೆ ಧಿಕ್ಕಾರವಿರಲಿ. ಪಿಯು ಉಪನ್ಯಾಸಕರ ಕುರಿತಾಗಿ ಇಂತಹ ಮಾತುಗಳನ್ನು ಕೆಲವು ದಿನಗಳಿಂದ ಫೇಸ್‌ಬುಕ್ ಟ್ವಿಟ್ಟರ್‌ಗಳಂಥ ಸಾಮಾಜಿಕ ತಾಣಗಳಲ್ಲಿ ಕೇಳುತ್ತಿದ್ದೇವೆ.
ಪಿಯು ಉಪನ್ಯಾಸಕರ ಸಮಸ್ಯೆಗಳ ಅರಿವು  ಪ್ರಜ್ಞಾವಂತ  ಬರಹಗಾರರಿಗೂ ಗೊತ್ತಿಲ್ಲವೆಂದಾದರೆ ಇನ್ನು ಜನಸಾಮಾನ್ಯರಿಗೆ ಹೇಗೆ ಅರ್ಥವಾಗಲು ಸಾಧ್ಯ?ಒಂದು ವಿಷಯವನ್ನು ನಾನು ಮೊದಲಿಗೆ ಹೇಳುತ್ತೇನೆ. ಈಗ ನಡೆಯುತ್ತಿರುವ ಮೌಲ್ಯ ಮಾಪನ ಬಹಿಷ್ಕಾರ ಮತ್ತು ಪ್ರತಿಭಟನೆ ಏಕಾ ಏಕಿ ದಿನ ಬೆಳಗಾಗುವಷ್ಟರಲ್ಲಿ ನಿರ್ಣಯವಾಗಿ ಆರಂಭವಾದದ್ದಲ್ಲ. ಈ ಬಗ್ಗೆ ಮೂರು ನಾಲ್ಕು ತಿಂಗಳ ಮೊದಲೇ ನಿರ್ಧಾರವಾಗಿತ್ತು, ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಉಪನ್ಯಾಸಕರ ಸಂಘ ಅನೇಕ ಬಾರಿ ಮನವಿ ಮಾಡಿತ್ತು. ಈ ಬಗ್ಗೆ ಆಗಾಗ ಪತ್ರಿಕೆಗಳಲ್ಲಿ ವರದಿ ಬರುತ್ತಲೇ ಇತ್ತು. ಇಷ್ಟಕ್ಕೂ ಉಪನ್ಯಾಸಕರ ಹಲವು ವರ್ಷಗಳ ಬೇಡಿಕೆ ಅನ್ಯಯವಾದದ್ದಲ್ಲ. ಅದು ನ್ಯಾಯಯುತವಾದ ಬೇಡಿಕೆಯೇ ಆಗಿದೆ. ವೇತನ ಹೆಚ್ಚಿಸುವಂತೆ ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ವೇತನ ತಾರತಮ್ಯ ನಿವಾರಿಸುವಂತೆ ಕೇಳುತ್ತಿದ್ದಾರೆ. ಈ ಹಿಂದೆಯೇ ಅನೇಕ ಬಾರಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದಾರೆ ಕೂಡ. ಆದರೆ, ಯಾವುದೇ ಬೇಡಿಕೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದಕ್ಕೆ ಮೌಲ್ಯ ಮಾಪನ ಬಹಿಷ್ಕಾರದ ದಾರಿಯನ್ನು ಹಿಡಿದಿದ್ದಾರೆ. ಮೌಲ್ಯ ಮಾಪನ ಬಹಿಷ್ಕಾರ ಸರಿಯಲ್ಲ,
ಬೇರೆ ಸಮಯದಲ್ಲಿ ಪ್ರತಿಭಟನೆ ಮಾಡಿ ಎಂದು ಅನೇಕರ ಅಭಿಪ್ರಾಯ. ಬೇರೆ ಸಮಯದಲ್ಲಿ ಪಾಠ ಪ್ರವಚನ ಮಾಡದೆ ಇದ್ದರೆ ಕೇವಲ ಕಾಲೇಜ್‌ನಲ್ಲಿ ಮಾಡುವ ಪಾಠವನ್ನು ಮಾತ್ರ ಅವಲಂಭಿಸಿರುವ ವಿದ್ಯಾರ್ಥಿಗಳಿಗೆ ಅಪಾರ ನಷ್ಟವಾಗುತ್ತದೆ. ಪ್ರತಿ ತಿಂಗಳು ಇಷ್ಟಿಟ್ಟು ಪಾಠವನ್ನು ಮುಗಿಸಲೇ ಬೇಕಾಗುತ್ತದೆ. ಕೆಲವೊಮ್ಮೆ ಸಮಯ ಸಾಕಾಗದೆ ಹೆಚ್ಚಿನ ಉಪನ್ಯಾಸಕರು ಹೆಚ್ಚುವರಿಯಾಗಿ ಶನಿವಾರ ಮಧ್ಯಾಹ್ನ ಮೇಲೆ ಹಾಗೂ ಆದಿತ್ಯವಾರ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಿರುವಾಗ ಪಾಠ ಮಾಡುವ ಅವಧಿಯಲ್ಲಿ ಪಾಠ ಮಾಡದೆ ಪ್ರತಿಭಟಿಸಿದರೆ ನಷ್ಟ ಯಾರಿಗೆ ಅಂತ ಈಗ ಅರ್ಥವಾಗಬಹುದು ಅಲ್ಲವೇ?ಮತ್ತೊಂದು ಆಕ್ಷೇಪ ಏನೆಂದರೆ ಈಗ ಮೌಲ್ಯಮಾಪನ ಮಾಡದೆ ಅನಂತರ ಹರಿ ಬರಿಯಾಗಿ ಮನಸ್ಸಿಲ್ಲದ ಮನಸಿನಿಂದ ಮೌಲ್ಯ ಮಾಪನ ಮಾಡಿದರೆ ಮಕ್ಕಳಿಗೆ ಅಂಕ ಕೊಡುವಾಗ ಒಂದೆರಡು ಅಂಕ ವ್ಯತ್ಯಾಸ ಬಂದರೆ ಏನು ಮಾಡುವುದು? ಮನಸ್ಸಿಲ್ಲದೆ ಮೌಲ್ಯ ಮಾಪನ ಮಾಡುವಾಗ ಅಂಕ ವ್ಯತ್ಯಾಸ ಬರುವುದಾದರೆ ಮನಸ್ಸಿಲ್ಲದೆ ಪಾಠ ಮಾಡಿದರೆ ಹೇಗಾಗಬಹುದು?ಇಷ್ಟಕ್ಕೂ ಪ್ರತಿಭಟನೆ ಯಾಕಾಗಿ? ಎಷ್ಟು ವರ್ಷಗಳ ಬೇಡಿಕೆ ಎಂಬುದು ತಿಳಿದಿದೆಯೇ ?ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ನಮ್ಮಲ್ಲಿನ ಸಾಮಾನ್ಯ ನಿಯಮ. ತಹಸೀಲ್ದಾರ್, ಪಶು ವೈದ್ಯರು, ಕಿರಿಯ ಎಂಜಿನಿಯರ್‌ಗಳು, ಸಬ್ ಇನ್ಸ್‌ಪೆಕ್ಟರ್, ವೈದ್ಯಾಧಿಕಾರಿಗಳು ಹಾಗೂ ಉಪನ್ಯಾಸಕರು ಒಂದೇ ಗ್ರೇಡ್‌ನ ಸರ್ಕಾರಿ ಉದ್ಯೋಗಿಗಳು.
ಹಾಗಾಗಿ ಇವರೆಲ್ಲರಿಗೂ ಒಂದೇ ರೀತಿಯ ವೇತನ ಶ್ರೇಣಿ ಇರುತ್ತದೆ. 1996ನೆಯ ಇಸವಿ ತನಕ ಇವರೆಲ್ಲರಿಗೂ ಒಂದೇ ರೀತಿಯ ವೇತನ ಇತ್ತು. ನಂತರ ಮಾತ್ರ ಉಪನ್ಯಾಸಕರನ್ನು ಹೊರತು ಪಡಿಸಿ ಉಳಿದವರಿಗೆ ಕಾಲ ಕಾಲಕ್ಕೆ ವೇತನವನ್ನು ಹೆಚ್ಚಿಸಲಾಯಿತು. ಉಪನ್ಯಾಸಕರಿಗೆ ಮಾತ್ರ ಹೆಚ್ಚಿಸಲಿಲ್ಲ. ಹೀಗಾಗಿ ಉಪನ್ಯಾಸಕರ ಹಾಗೂ ಸಮಾನ ಶ್ರೇಣಿಯ ಇತರ ಸರಕಾರಿ ಉದ್ಯೋಗಿಗಳ ಆರಂಭಿಕ ಮೂಲ ವೇತನದಲ್ಲಿ ಸುಮಾರು ಎಂಟು ಸಾವಿರ ರುಪಾಯಿಗಳಷ್ಟು ವ್ಯತ್ಯಾಸವಿದೆ. ಇಷ್ಟು ಅಂತರವನ್ನು ಸರಿ ಪಡಿಸಿ ಉಪನ್ಯಾಸಕರಿಗೆ ಇತರರಂತೆ ವೇತನ ನೀಡಿದರೆ ಸರಕಾರದ ಬೊಕ್ಕಸಕ್ಕೆ ತುಂಬಾ ನಷ್ಟವಾಗುತ್ತದೆ ಎಂದು ಸರಕಾರ ಕೆಲ ವರ್ಷಗಳ ಮೊದಲು ಕುಮಾರ ನಾಯಕ್ ಅವರ ನೇತೃತ್ವದಲ್ಲಿ ಒಂದು ಸಮಿತಿ ಮಾಡಿತು. ಸಮಿತಿಯು ಸಾಕಷ್ಟು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ನೀಡಿತು. ಸಮಿತಿಯು ಮಾಡಿದ ಸಲಹೆಯನ್ನು ಜಾರಿಗೆ ತಂದರೆ ತಾರತಮ್ಯ ಪೂರ್ಣ ನಿವಾರಣೆ ಆಗದಿದ್ದರೂ ಒಂದಿನಿತು ಅಂದರೆ ಸುಮಾರು ಮೂರು ಸಾವಿರ ರೂಪಾಯಿಗಳಷ್ಟು ವೇತನ ಹೆಚ್ಚಳವಾಗುತ್ತದೆ. ನಾಲ್ಕು ವರ್ಷ ಕಳೆದರೂ ಸಮಿತಿಯ ವರದಿಯನ್ನು ಜಾರಿಗೆ ತಂದಿಲ್ಲ .
ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ಆಗಿದೆ. ಆದರೆ ಮೌಲ್ಯ ಮಾಪನಈ ಲೇಖನಕ್ಕೆ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.ಸಮಯದಲ್ಲಿ ಬಿಟ್ಟು ಬೇರೆ ಸಮಯದಲ್ಲಿ ಮಾಡುವ ಪ್ರತಿಭಟನೆಗೆ ಯಾವುದೇ ಬೆಲೆ ಬರುವುದಿಲ್ಲ. ಅದು ಹೆತ್ತವರ ಗಮನಕ್ಕೂ ಬರುವುದಿಲ್ಲ! ಹೇಗೂ ಉಪನ್ಯಾಸಕರು ವಿಶೇಷ ತರಗತಿ ಮಾಡಿ ಪಾಠ ಮುಗಿಸುತ್ತಾರೆ. ಹಾಗಿರುವಾಗ ಉಪನ್ಯಾಸಕರ ಸಮಸ್ಯೆ ಬಗ್ಗೆ ಯಾರೇಕೆ ತಲೆಕೆಡಿಸಿಕೊಳ್ಳುತ್ತಾರೆ? ಮೊನ್ನೆ ಮಾತಿಗೆ ಸಿಕ್ಕ ಎಂಜಿನಿಯರ್ ಒಬ್ಬರು ಉಪನ್ಯಾಸಕರಿಗೆ ಈಗಾಗಲೇ ತುಂಬಾ ವೇತನ ಇದೆ. ದಿನಕ್ಕೆ ನೂರು ರುಪಾಯಿ ವೇತನಕ್ಕೆ ದುಡಿಯುವವರು ಇಲ್ಲವೇ? ಎಂದು ಕೇಳಿದ್ದರು. ಉಪನ್ಯಾಸಕರ ಬಗ್ಗೆ ಜನರಿಗಿರುವ ಭಾವನೆ ಇದರಿಂದ ಗೊತ್ತಾಯಿತು ನನಗೆ. ನಾನು ತಕ್ಷಣ ಕೇಳಿದೆ ನಿಮ್ಮಲ್ಲಿ ಜವಾನರಿಗೆ ಎಷ್ಟು ವೇತನ? ಅಬ್ಬಬ್ಬ ಅಂದ್ರೆ ಏಳು ಎಂಟು ಸಾವಿರ ತಾನೇ? ನೀವು ಯಾಕೆ ಒಂದು ಲಕ್ಷ ರುಪಾಯಿ ವೇತನ ಪಡೆಯುತ್ತೀರಿ? ನಿಮಗೇಕೆ ಅಷ್ಟು ವೇತನ? ಎಂದು. ಅದು ನಮ್ಮ ಕಲಿಕೆಗೆ ಅರ್ಹತೆಗೆ ಅನುಭವಕ್ಕೆ ಸಿಗುವ ವೇತನ ಎಂದರು. ಆಗ ನಾನು ಕೇಳಿದೆ. ನೀವು ಹೆಚ್ಚಿನ ಕಲಿಕೆ ಅರ್ಹತೆ ಹೊಂದಿದ್ದರೆ ಹೆಚ್ಚಿನ ವೇತನ ಪಡೆಯಬಹುದು,
ಉಪನ್ಯಾಸಕರು ಹೆಚ್ಚಿನ ಕಲಿಕೆಯನ್ನು ಅರ್ಹತೆಯನ್ನು ಅನುಭವವನ್ನು ಹೊಂದಿದ್ದಾರೆ. ಅವರು ಹೆಚ್ಚಿನ ವೇತನ ಪಡೆಯಬಾರದೇ? ತಾರತಮ್ಯ ಮಾಡಿದರೆ ಪ್ರತಿಭಟಿಸಬಾರದೆ? ಎಂದು. ಮರುಮಾತಾಡದೆ ಸುಮ್ಮನಾದರು. ಕೆಲ ವರ್ಷಗಳ ಹಿಂದಿನ ತನಕ ಪದವಿ ಪೂರ್ವ ಶಿಕ್ಷಣ ಉನ್ನತ ಶಿಕ್ಷಣ ಇಲಾಖೆಯ ಜತೆಗಿತ್ತು. ಇದರಿಂದ ಪದವಿ ಕಾಲೇಜ್ ಮತ್ತು ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಿಗೆ ಒಂದೇ ರೀತಿಯ ವೇತನ ಇತ್ತು. ಕೆಲ ವರ್ಷಗಳ ಹಿಂದೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉನ್ನತ ಶಿಕ್ಷಣ ಇಲಾಖೆಯಿಂದ ಬೇರೆಯಾಗಿ ಸ್ವತಂತ್ರವಾಯಿತು.
ಈಗ ಪದವಿ ಕಾಲೇಜ್ ಉಪನ್ಯಾಸಕರಿಗೆ ಯುಜಿಸಿ ವೇತನವಿದ್ದು, ಪಿಯು ಉಪನ್ಯಾಸಕರ ದುಪ್ಪಟ್ಟು ವೇತನ ಪಡೆಯುತ್ತಾರೆ. ಪದವಿ ಪೂರ್ವ ಉಪನ್ಯಾಸಕರು ಪದವಿ ಕಾಲೇಜ್ ಉಪನ್ಯಾಸಕರಷ್ಟೇ ಅರ್ಹತೆ ಹೊಂದಿದ್ದರೂ ಕೂಡ ಅವರ ಅರ್ಧದಷ್ಟು ವೇತನಕ್ಕೆ ತೃಪ್ತಿ ಹೊಂದಬೇಕು. ಒಟ್ಟಿನಲ್ಲಿ ಇವರು ಹೆಸರಿಗೆ ಉಪನ್ಯಾಸಕರು ಅಷ್ಟೇ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಅತಂತ್ರರಾಗಿದ್ದಾರೆ. ಪದವಿ ಕಾಲೇಜ್ ಉಪನ್ಯಾಸಕರಿಗೆ ಸಂಶೋಧನಾ ಕಮ್ಮಟಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಓಓಡಿ ಸೌಲಭ್ಯವಿರುತ್ತದೆ. ಯುಜಿಸಿ ಪ್ರಾಯೋಜಿತ ವಿಚಾರ ಸಂಕಿರಣಗಳು ಆಗಾಗ ಅಲ್ಲಲ್ಲಿ ಕಾಲೇಜ್‌ಗಳಲ್ಲಿ ಯೂನಿವರ್ಸಿಟಿಗಳಲ್ಲಿ ಆಯೋಜನೆ ಆಗುತ್ತಲೇ ಇರುತ್ತದೆ. ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಇಂಥಹ ಯಾವುದೇ ಸೌಲಭ್ಯವಿಲ್ಲ, ನಾನು ಅನೇಕ ಯೂನಿವರ್ಸಿಟಿಗಳಿಗೆ ಸಂಶೋಧನಾ ಪ್ರಬಂಧ ಮಂಡಿಸಲು ನನ್ನ ಖಾತೆಯಲ್ಲಿರುವ ಸಿಎಲ್, ಇಎಲ್‌ಗಳನ್ನೂ ಹಾಕಿ ಹೋಗಿದ್ದೇನೆ.
ಅಲ್ಲಿಗೆ ಅನೇಕ ಪದವಿ ಕಾಲೇಜ್ ಹಾಗೂ ಯೂನಿವರ್ಸಿಟಿಗಳ ಉಪನ್ಯಾಸಕರು ಓಓಡಿ ಸೌಲಭ್ಯ ಪಡೆದುಕೊಂಡು ಹಾಜರಾಗಲು ಬಂದಿರುವುದನ್ನು ನೋಡಿ ಛೆ! ನನಗೆ ಪ್ರಬಂಧ ಮಂಡಿಸಲು ಕೂಡ ಈ ಸೌಲಭ್ಯವಿಲ್ಲವಲ್ಲ ಎಂದು ಅನೇಕ ಬಾರಿ ನೊಂದುಕೊಂಡಿದ್ದೇನೆ ಕೂಡ!ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಲ್ಲಿ ಅನೇಕರು ಉಪನ್ಯಾಸಕರ ಅರ್ಹತಾ ಪರೀಕ್ಷೆಗಳಾದ NET, SLET ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅನೇಕರು ಸಂಶೋಧನಾ ಅಧ್ಯಯನ ಮಾಡಿ ಪಿಚ್‌ಡಿಯಂಥ ಉನ್ನತ ಪದವಿಗಳನ್ನು ಪಡೆದಿದ್ದಾರೆ. ಆದರೆ ಇವರಾರಿಗೂ ಒಂದಿನಿತು ಮನ್ನಣೆ ಇಲ್ಲ. ಪಿಎಚ್‌ಡಿ ಪಡೆದವರಿಗೆ ನಾಲ್ಕು- ಐದು ಇನ್ಕ್ರಿಮೆಂಟ್ ಕೊಡಿ ಎಂಬ ಬೇಡಿಕೆ ಹಲವು ದಿನಗಳಿಂದ ಇಟ್ಟಿದ್ದರೂ ಅದಕ್ಕೆ ಯಾವುದೇ ಮನ್ನಣೆ ದೊರೆತಿಲ್ಲ. ಅರ್ಹತೆ ಗಳಿಸಿದ ಪಿಯು ಉಪನ್ಯಾಸಕರನ್ನು ಪದವಿ ಕಾಲೇಜ್‌ಗೆ ಭಡ್ತಿ/ ಪದೋನ್ನತಿ ಕೊಡಿ ಎಂದು ಕೇಳಿದರೆ ಅದಕ್ಕೆ ಸಾವಿರ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಲಾಗುತ್ತದೆ.ಬಹುಶ ಜಗತ್ತಿನಲ್ಲಿ ಒಂದು ಹುದ್ದಾಗೆ ಸೇರಿದ ಮೇಲೆ ಪದೋನ್ನತಿಯೇ ಇಲ್ಲದೆ ಇರುವ ಹುದ್ದಾ ಪಿಯು ಉಪನ್ಯಾಸಕರದ್ದು ಮಾತ್ರ ಇರಬೇಕು! ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿ ಉಪನ್ಯಾಸಕನಾಗಿಯೇ ನಿವೃತ್ತನಾಗಬೇಕು.
ಎ ಒಂದಷ್ಟು ಬೆರಳೆಣಿಕೆಯಷ್ಟು ಮಂದಿಗೆ ಪ್ರಿನ್ಸಿಪಾಲ್ ಆಗಿ ಭಡ್ತಿ ಹೊಂದುವ ಅವಕಾಶ ಸಿಗುತ್ತದೆ ಅಷ್ಟೇ! ಹೆಚ್ಚಿನವರು ಸೇರಿದ ಹುದ್ದಾಯ ನಿವೃತ್ತರಾಗಬೇಕು. ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇರಿಕೊಂಡವರು ಪದವಿ ಶಿಕ್ಷಣ ಪಡೆದು ಬಿಎಡ್ ಪದವಿ ಗಳಿಸಿದರೆ ಪ್ರೌಢ ಶಾಲೆ ಶಿಕ್ಷಕರಾಗಿ ಪದೋನ್ನತಿ ಹೊಂದಲು ಅವಕಾಶವಿದೆ. ಪ್ರೌಢ ಶಾಲೆ ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದು ಪಿಯು ಉಪನ್ಯಾಸಕರಾಗಿ ಭಡ್ತಿ ಪಡೆಯುತ್ತಾರೆ.
ಆದರೆ ಪಿಯು ಉಪನ್ಯಾಸಕರು ಎನ್‌ಇಟಿ, ಪಿಎಚ್‌ಡಿ ಪದವಿಗಳನ್ನು ಪಡೆದರೂ ಯಾವುದೇ ಪ್ರಯೋಜನವಿಲ್ಲದ ಕಾರಣ ಹೆಚ್ಚಿನ ಅಧ್ಯಯನಕ್ಕೆ, ಪದವಿ ಗಳಿಕೆಗೆ ಮುಂದಾಗುವುದೇ ಇಲ್ಲ. ಅದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿಂತ ನೀರಾಗುತ್ತಿದೆ!ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜ್‌ಗಳಲ್ಲಿ ಸಾಕಷ್ಟು ಅನುಭವ ಇರುವ ಅರ್ಹ ಪ್ರತಿಭಾವಂತ ಉಪನ್ಯಾಸಕರೇ ಇದ್ದಾರೆ. ಆದರೆ ಇವರ ಸಮಸ್ಯೆಗಳು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅರ್ಹರಾರೂ ಉಪನ್ಯಾಸಕರಾಗಲು ಮುಂದೆ ಬರಲಾರರು ಖಂಡಿತ. ಈಗಂತೂ ಪಿಯು ಉಪನ್ಯಾಸಕರಾಗಲು ಸ್ನಾತಕೋತ್ತರ ಪದವಿ ಜತೆಗೆ ಬಿಎಡ್ ಕಡ್ಡಾಯವಾಗಿದೆ.
2013ನೇ ವರ್ಷದಲ್ಲಿ ಆಯ್ಕೆಯಾದವರಲ್ಲಿ ಬಿಎಡ್ ಪದವಿ ಇಲ್ಲದ ಸುಮಾರು 800 ಮಂದಿ ಉಪನ್ಯಾಸಕರ ಭವಿಷ್ಯ ಅತಂತ್ರವಾಗಿದೆ. ತಮ್ಮ ಭವಿಷ್ಯದ ಅಭದ್ರತೆ ಕಾಡುತ್ತಿರುವಾಗಲೂ ತನ್ಮಯತೆಯಿಂದ ಪಾಠ ಮಾಡಿ ಉತ್ತಮ ಫಲಿತಾಂಶ ತರುತ್ತಿರುವ ಇವರುಗಳು ನಿಜಕ್ಕೂ ಶ್ಲಾಘ್ಯರು. ಒಂದು ಕಡೆ ಕಡಿಮೆ ವೇತನ, ಇನ್ನೊಂದು ಕಡೆ ವೇತನ ತಾರತಮ್ಯ, ಮತ್ತೊಂದೆಡೆ ಉನ್ನತ ಕಲಿಕೆಗೊಂದಿಷ್ಟೂ ಮನ್ನಣೆ ಇಲ್ಲದ, ಪದೋನ್ನತಿಯ ನಿರೀಕ್ಷೆಯೇ ಇಲ್ಲದ, ಭರವಸೆಯೇ ಇಲ್ಲದ ಯಾಂತ್ರಿಕತೆ, ಯಾವ ಬೇಡಿಕೆಗಳಿಗೂ ಇಲ್ಲದ ಸ್ಪಂದನೆ. ಇನ್ನು ಪ್ರತಿಭಟಿಸದೇ ಏನು ಮಾಡಬೇಕು ಹೇಳಿ? ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಗಮನ ಕೊಟ್ಟರೆ ಅವರುಗಳ ಪ್ರತಿಭಟನೆ, ಮೌಲ್ಯ ಮಾಪನ ಬಹಿಷ್ಕಾರಗಳು ಇರುವುದೇ ಇಲ್ಲ ಅಲ್ಲವೇ? ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಮಾಡಿದರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಇತರರಿಗೆ ಹೆಚ್ಚಿನ ವೇತನ ಕೊಟ್ಟರೆ ಹೊರೆ ಆಗುವುದಿಲ್ಲವೇ? ಇದಕ್ಕೆ ಉತ್ತರಿಸುವವರು ಯಾರು?
(ಲೇಖಕರು ಕನ್ನಡ ಉಪನ್ಯಾಸಕರು ಮತ್ತು ಸಂಶೋಧಕರು)