Wednesday, 25 May 2016

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ (c)ಡಾ.ಲಕ್ಷ್ಮೀ ಜಿ ಪ್ರಸಾದ

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ !ಹಾಗೆಯೇ ಅಂತರ್ಜಲ ಸುಮ್ಮನೆ ತುಂಬುವುದಿಲ್ಲ
8 ವರ್ಷಗಳ ಹಿಂದೆ ನಾವು ನಮ್ಮ ಬೆಂಗಳೂರಿನ ಮನೆಯ ಬೋರ್ ವೆಲ್ ಗೆ ಛಾವಣಿ ನೀರು ಇಂಗಿಸುವ ವ್ಯವಸ್ಥೆ ಮಾಡಿದೆವು ...
2003 ರಲ್ಲಿ ನಾವು ಈ ಬೋರ್ ವೆಲ್ ಕೊರೆದಾಗ ಸುಮಾರು 60 -70 ಅಡಿಗಳಲ್ಲಿಯೇ ನೀರು ಸಿಕ್ಕಿತು ,ಎಂತಕ್ಕೂ ಇರಲಿ ಅಂತ 120 ಅಡಿ ಆಳ ತೋಡಿದೆವು ಅದಕ್ಕಿಂತ ಹೆಚ್ಚ್ಚು ತೋಡಲು ಸಾಧ್ಯವಾಗಲಿಲ್ಲ .ಆಗ ನಾವಿನ್ನೂ ಬೆಂಗಳೂರಿಗೆ ವಲಸೆ ಬಂದಿರಲಿಲ್ಲ ..ನಾನು ಮಂಗಳೂರು ಸಂತ ಅಲೋಶಿಯಸ್ ಕಾಲೇಜ್ ನಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತಿದ್ದೆ ... ನಾನು ಶ್ರೀ ಪಡ್ರೆ ಹಾಗೂ ಇತರರ ಸಂಗ್ರಹಿಸುವ ನೀರು ಇಂಗಿಸುವ ನಾನಾ ವಿಧಾನಗಳ ಬಗೆಗಿನ ಲೇಖನಗಳನ್ನು ಓದುತ್ತ ಇದ್ದೆ ಹಾಗೆ ಬೆಂಗಳೂರು ಸುತ್ತ ಮುತ್ತ ನೀರಿನ ಸಮಸ್ಯೆಯನ್ನು ಓದುತ್ತಾ ಇದ್ದೆ ,ಅಗಲೆ ಅಂದುಕೊಂಡಿದ್ದೆ ನಮ್ಮ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಮಾಡಬೇಕು ಎಂದು ಇಲ್ಲವಾದಲ್ಲಿ ನೀರು ಆರಿ ಹೋಗಬಹುದು ಎಂದು ಎನಿಸಿತ್ತು ನನಗೆ
2008 ರಲ್ಲಿ ನಾವು ನಮ್ಮ ಈ ಪುಟ್ಟ ಮನೆಗೆ ಒಕ್ಕಲಾದೆವು ,ಆಗ ಮೊದಲು ನಾವು ಮಾಡಿದ ಕೆಲಸ ನಮ್ಮ ಕೊಳವೆ ಬಾವಿಗೆ ನೀರು ಇಂಗಿಸುವ ವ್ಯವಸ್ಥೆ ಯನ್ನು ಮಾಡಿದ್ದು
ಹೇಗೆ ಇನ್ಗಿಸುವುದು ಬೆಂಗಳೂರಿನ ಕೊಳಚೆ ನೀರು ಕೂಡ ಇಂಗಿದರೆ ಎಂಬ ಭಯ ಕಾಡಿತ್ತು
ಈ ಬಗ್ಗೆ ಶ್ರೀ ಪದ್ರೆಯವರನ್ನು ಸಂಪರ್ಕಿಸಿ ನಮ್ಮ ಬಾವಿಗೆ ನೀರು ಇಂಗಿಸುವ ಬಗ್ಗೆ ಸಲಹೆ ಕೇಳಿದೆ ಅವರು ಗ್ರೀನ್ ಅರ್ಥ್ ಫೌಂಡೇಶನ್ ರವಿ ಅವರ ಸಲಹೆ ಪಡೆಯಲು ತಿಳಿಸಿದರು

ಫೋನ್ ಮೂಲಕ ಅವರನ್ನು ಈ ಬಗ್ಗೆ ಸಲಹೆ ಕೇಳಿದೆ.ಅವರ ಸಲಹೆಯಂತೆ ಬೋರೆವೇಲ್ ಸುತ್ತ ಆರಡಿ ಅಗಲ ಹತ್ತು ಅಡಿ ಆಳ ಗುಂಡಿ ತೋಡಿಸಿದೆವು,ನಂತರ ಆಳದಲ್ಲಿ ಒಂದು ಅಡಿ ಮರಳು ತುಂಬಿದೆವು ನಂತರ ಎರಡು ಅಡಿ ಜಲ್ಲಿ ಕಲ್ಲು ತುಂಬಿದೆವು ನಂತರ ಎರಡು ಅಡಿ ದೊಡ್ಡ ಬೋರ್ಡೊ ಕಲ್ಲುಗಳನ್ನು ತುಂಬಿಸಿದೆವು ನಂತರ ಒಂದು ಅಡಿ ಮರಳು ತುಂಬಿದೆವು ನಂತರ ಮತ್ತೆ ಒಂದಡಿ ಜಲ್ಲಿ ಕಲ್ಲು ಅದರ ಮೇಲೆ ಒಂದಷ್ಟು ಇದ್ದಿಲು ತುಂಬಿ ಮೇಲ್ಭಾಗ ಮತ್ತೆ ಒಂದಷ್ಟು ಮರಳು ತುಂಬಿ ಒಂದಡಿಯಷ್ಟು ಆಳ ನೀರು ತುಂಬಲು ಬಿಟ್ಟು ಬಿಟ್ಟೆವು .ಅಲ್ಲಿಗೆ ತಾರಸಿ ನೀರು ಬರುವ ಹಾಗೆ ಮಾಡಿದೆವು
ಮತ್ತು ಛಾವಣಿ ನೀರು ಜೊತೆಗೆಅಂಗಳದ ನೀರು ಕೂಡ ಇಂಗಲಿ ಎಂಬ ಉದ್ದೇಶದಿಂದ ಅಂಗಳವನ್ನು ಸಮತಟ್ಟು ಮಾಡದೆ ಎಲ್ಲ ಕಡೆಯಿಂದ ಬಾವಿಯೆಡೆಗೆ ನೀರು ಬರುವಂತೆ ಚಾರೆಯಾಗಿ ಮಾಡಿ ಹಾಗೆ ಬಿಟ್ಟು ಬಿಟ್ಟೆವು ,ಜೊತೆಗೆ ಒಂದಷ್ಟು ಪಾರಿಜಾತ ಮೀಸೆ ಹೂ /ರತ್ನ ಗ್ರಂಥಿ ಸೇರಿದಂತೆ ಕೆಲವು ಸಸಿಗಳನ್ನು ಹಾಕಿದೆವು .ಅದರಲ್ಲಿ ಒಂದು ಪೇರಳೆ ಹಣ್ಣಿನ ಗಿಡವೂ ಇದೆ ಈಗ ಇವೆಲ್ಲ ಎತ್ತರಕ್ಕೆ ಬೆಳೆದು ನಿಂತು ಮನೆಗೆ ನೆರಳನ್ನೂ ತಂಪನ್ನೂ ತಂದು ಕೊಟ್ಟಿವೆ ಹಕ್ಕಿಗಳು ಚಿಟ್ಟೆಗಳು ಸ್ವಚ್ಚಂದವಾಗಿ ಬಂದು ಅಲ್ಲಿನ ಮೀಸೆ ಹೂವಿನ ಕಾಯಿಗಳನ್ನು ಒಡೆದು ತಿನ್ನುತ್ತವೆ ಪೇರಳೆ ಹಣ್ಣನ್ನೂ ಬಿಡುವುದಿಲ್ಲ ಅವು ತಿಂದು ಬಿಟ್ಟ ಕೆಲವು ಹಣ್ಣುಗಳು ನಮಗೂ ದಕ್ಕುವುದಿದೆ .ಜೊತೆಗೆ ಒಂದಷ್ಟು ಕಸ ಕಡ್ಡಿ ಬಿದ್ದು ಉಪದ್ರ ಕೂಡ ಆಗುತ್ತದೆ ,ಹಳ್ಳಿಯಲ್ಲಿ ಬೆಳೆದ ನನಗೆ ತೀರ ಸಿನೆಮಾ ಸೆಟ್ ಮಾದರಿಯ ಮನೆ ಬೇಕೆಂಬ ಭ್ರಮೆ ನನಗಿಲ್ಲ ಹಕ್ಕಿಗಳ ಕಲರವದೊಂದಿಗೆ ಬದುಕುವುದೇ ಅಪ್ಯಾಯಮಾನವಾಗುತ್ತದೆ ,ಆದರೂ ಬಂದ ಹೋದ ಜನರೆಲ್ಲಾ ಇದನ್ನು ಆಕ್ಷೇಪಿಸಿ ಒಂದು ಐನೂರು ರುಪಾಯಿ ಕೊಟ್ಟು ಇದನ್ನೆಲ್ಲಾ ಕಡಿಸಿ ಸ್ವಚ್ಚ ಮಾಡಬಾರದೇ?ಇದರಲ್ಲಿ ಹಾವು ಇರಬಹುದು ಎಂದು ಸಲಹೆ ಕೊಟ್ಟದ್ದೂ ಉಂಟು ..ಆಗೆಲ್ಲ ನಾನು ಹೇಳುತ್ತೇನೆ" ಹಾವು ಇದ್ದರೆ ಇರಲಿ ಬಿಡಿ ಈ ಪೇಟೆಯ ಕಾಂನ್ಕ್ರೀಟ್ ಕಾಡಿನಲ್ಲಿ ಅವಕ್ಕೆ ಬದುಕಲು ಜಾಗವಿಲ್ಲ.ಎಂದು" ಬಾಯಿಯಲ್ಲಿ ಹಾಗೆ ಹೇಳಿದರೂ ಮನದೊಳಗೆ ತುಸು ಆತಂಕವಾಗುವುದುಂಟು ,ನಮ್ಮ ಮನೆ ಸುತ್ತ ಮುತ್ತಲಿನ ಮಂದಿ ನಿಮ್ಮ ತೋಟದಲ್ಲಿ (ತೋಟ ಎನ್ನುವಷ್ಟು ಜಾಗವಿಲ್ಲ ಕೇವಲ 500 ಅಡಿ ಜಾಗವಿದೆ ಅಷ್ಟೇ )ಹಾವುಗಳು ಹರಿದಾಡುತ್ತಿವೆ ನಾವು ಕಣ್ಣಾರೆ ನೋಡಿದ್ದೇವೆ ಆ ಗಿಡಮರಗಳನ್ನು ಕಡಿಸಿ ಬಿಡಿ ಎಂದು ಆಗಾಗ ಹೇಳುತ್ತಿರುತಾರೆ .ಆದರೆ ನಾವು ಮನೆ ಮಂದಿ ಒಮ್ಮೆ ಕೂಡ ಇಲ್ಲಿ ಹಾವು ಹರಿದಾಡಿದ್ದನ್ನು ನೋಡಿಲ್ಲ ಆಗಾಗ ಹುಲ್ಲು ಕೀಳಿಸಿ ಸ್ವಚ್ಛ ಮಾಡುವಾಗ ಎಲ್ಲೂ ಹಾವಿನ ಮೊಟ್ಟೆಗಳು ನಮಗೆ ಕಾಣಸಿಕ್ಕಿಲ್ಲ ಆಗ ನಾನು ನಮ್ಮ ಹಳ್ಳಿಯ ತೋಟವನ್ನು ಕಾಲು ದಾರಿಯನ್ನು ನೆನಪಿಸಿಕೊಳ್ಳುತ್ತೇನೆ "ಅಲ್ಲೆಲ್ಲ ಹಸಿರು ಕಸಕಡ್ಡಿ ಇರುತ್ತದೆ ಅಲ್ಲಿ ಹಾವು ಇರುವುದಿಲ್ಲವೇ ?ಎಂದು"
ಇಂದಿನ ಆಕ್ಸಿಡೆಂಟ್ ಹೃದಯಾಘಾತ ಸಾವುಗಳನ್ನು ಗಮನಿಸಿದರೆ ಹಾವು ಕಡಿದು ಸಾಯುವ ಮಂದಿ ತೀರ ಕಡಿಮೆ ಅಲ್ಲವೇ ಎಂದು!
ಅದು ಏನೇ ಇರಲಿ ನಮ್ಮ ಮನೆಯ ಆಸುಪಾಸಿನಲ್ಲಿ ಉಲ್ಲಾಳು ಉಪನಗರ, ಜ್ಞಾನ ಭಾರತಿ ,ನಾಗರಭಾವಿ ಸೇರಿದಂತೆ ಸುತ್ತ ಮುತ್ತ ಅಂತರ್ಜಲ ಮಟ್ಟ ತೀರಾ ಕುಸಿದಿದೆ ಒಂದು ಸಾವಿರ ಅಡಿ ತೋಡಿದರೂ ನೀರು ಸಿಗುತ್ತಿಲ ಸಿಗುವ ನೀರಿನಲ್ಲಿ ಕೂಡ ಫ್ಲೋರೈಡ್ ಮೊದಲಾದ ರಾಸಾಯನಿಕಗಳ ಅಂಶ ತುಂಬಾ ಜಾಸ್ತಿ ಇದೆ
ಆದರೆ ನಮ್ಮ ಬಾವಿಯಲ್ಲಿ ಇಂದಿಗೂ 120 ಅಡಿ ಆಳದಲ್ಲಿಯೇ ನೀರಿದೆ ,ಇಲ್ಲಿ ಅಕ್ಕ ಪಕ್ಕ ಅನೇಕರು ಬೋರ್ ವೆಲ್ ಕೊರೆದಿದ್ದಾರೆ 800 -1000 ಅಡಿ ತೋಡಿದ್ದಾರೆ ಕೆಲವರಿಗೆ ಅಷ್ಟಾದರೂ ನೀರು ಸಿಕ್ಕಿಲ್ಲ ಆಗೆಲ್ಲ ನನಗೆ ನಮ್ಮ ಬಾವಿಯ ನೀರು ಬೇರೆ ಬಾವಿಗೆ ಹೋಗಬಹುದೇನೋ ಎಂಬ ಆತಂಕ ಕಾಡುತ್ತದೆ ಆದರೆ ಇಂಗಿಸಿದ ನೀರು ಸಾಮಾನ್ಯವಾಗಿ ಬೇರೆ ಬಾವಿಗೆ ಹೋಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .
ನಮ್ಮ ಮನೆ ಮುಖ್ಯ ರಸ್ತೆಯ ಬದಿಯಲ್ಲಿದೆ .ಕೆಲ ವರ್ಷಗಳಲ್ಲಿ ಇಲ್ಲಿ ವಾಣಿಜ್ಯ ಕಟ್ಟಡ ಹಾಕಿ ನಾವು ಬೇರೆಡೆ ಮನೆ ಮಾಡುವುದು ಅನಿವಾರ್ಯವಾಗಬಹುದು ಏಕೆಂದರೆ ಈಗಾಗಲೇ ರಸ್ತೆಯಲ್ಲಿ ಹೋಗುವ ವಾಹನಗಳ ಸದ್ದು ಅಕ್ಕ ಪಕ್ಕದ ಸಾ ಮಿಲ್ ,ಮೆಕ್ಯಾನಿಕ್ ಶಾಪ್ ಗಳಿಂದ ಹೊರಡುವ ಧೂಳು ಸದ್ದು ನಮ್ಮನ್ನು ಕಂಗೆಡಿಸುತ್ತವೆ.ಸುತ್ತ ಮುತ್ತ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿವೆ
ಮುಂದೊಂದು ದಿನ ನಾವು ಇಲ್ಲಿ ವಾಣಿಜ್ಯ ಕಟ್ಟಡ ಹಾಕಬೇಕಾಗಿ ಬಂದರೆ ಬೋರ್ ವೆಲ್ ಗೆ ನೀರು ಇಂಗಿಸಲು ಸಾಧ್ಯವೇ ?ಗೊತ್ತಿಲ್ಲ ಈ ಬಗ್ಗೆ ಆಗ ತಜ್ಞರ ಸಲಹೆ ಕೇಳಿದರಾಯಿತು ಎಂದು ಕೊಂಡಿದ್ದೇನೆ ಅಷ್ಟರ ತನಕ ಹೀಗೆ ಬಾವಿಗೆ ನೀರು ತುಂಬುತ್ತಾ ಇರಲಿ ಎಂದು..
ಒಂದು ಮಾತು ಮಾತ್ರ ಸತ್ಯವಾದುದು
ಮಂತ್ರಕ್ಕೆ ಮಾವಿನಕಾಯಿ ಉದಿರುವುದಿಲ್ಲ ಎಂಬುದು .ಮಾವಿನ ಕಾಯಿ ಬೀಳಬೇಕಾದರೆ ಕಲ್ಲು ಎಸೆಯಬೇಕು, ಒಂದು ಎಸೆತಕ್ಕೆ ಬೀಳುತ್ತದೆ ಎಂದೇನಿಲ್ಲ ಬೀಳುವ ತನಕ ಎಸೆಯುತ್ತಾ ಇರಬೇಕು ,ಅಂತರ್ಜಲ ಕುಸಿತ ನೀರಿನ ಬರದ ಬಗ್ಗೆ ಆತಂಕದ ಕಾಳಜಿಯ ಮಾತುಗಳನ್ನು ಆಡಿದರೆ ಸಾಲದು ಅದನ್ನು ಕಾರ್ಯ ರೂಪಕ್ಕೆ ತರಬೇಕು .ಸಾವಿರ ಮಾತಿಗಿಂತ ಒಂದು ಕೃತಿ ಮೇಲೆ ಎಂಬುದು ನನ್ನ ಸ್ಪಷ್ಟ ನಿಲುವು ಇದಕ್ಕೆ ನೀವೇನಂತೀರಿ ?
ಅಂದ ಹಾಗೆ ನಮ್ಮಬಾವಿಗೆ ಚಾವಣಿ ನೀರು ಇಂಗಿಸಲು ನಮಗೆ ಆದ ಖರ್ಚು ನಾಲ್ಕು ಐದು ಸಾವಿರ ರೂಪಾಯಿಗಳು ಅಷ್ಟೇ ,ಇದನ್ನು ನಮಗೆ ನಾವು ಹೇಳಿದಂತೆ ಮಣ್ಣು ಅಗೆದು ಮರಳು ಕಲ್ಲು ತುಂಬಿ ನೀರು ಇಂಗಿಸುವ ಕೆಲಸವನ್ನುಒಂದು ಆದಿತ್ಯವಾರ ಬಂದು ,ಕೇವಲ ಕೂಲಿಗಾಗಿ ಮಾಡದೆ ,ಅತ್ಯಂತ ಶ್ರದ್ಧೆಯಿಂದ , ಅತ್ಯುತ್ಸಾಹದಿಂದ ಮಾಡಿಕೊಟ್ಟು ನಾವು ಮೊದಲ ಬಾರಿಗೆ ನೀರು ಉಳಿಸುವ ಕೆಲಸವನ್ನು ಮಾಡಿದ್ದೇವೆ ಅಕ್ಕ ಎಂದು ಸಂಭ್ರಮಿಸಿದ ರವಿ ಮತ್ತು ಸುಜಾತ (ಹೆಸರು ಸರಿಯಾಗಿ ನೆನಪಿಲ್ಲ )ದಂಪತಿಗಳಿಗೆ ನಾವು ಆಭಾರಿಯಾಗಿದ್ದೇವೆ .

No comments:

Post a Comment