Tuesday 29 December 2020

ನನಗೂ ಆತ್ಮವಿದೆ..ಅದಕ್ಕೂ ಒಂದು ಕತೆಯಿದೆ: ತಾಯಿಯನ್ನೂ ಅಪಶಕುನ ಎಂದಿದ್ದರು

 ಸತೀ ಪದ್ದತಿ ಮುಸ್ಲಿಂ ಅಕ್ರಮಣಕಾರರಿಂದಾಗಿ ಬಂತು.ಅವರ ದೌರ್ಜನ್ಯಕ್ಕೆ ಹೆದರಿ ವಿಧವೆಯರು ಗಂಡನ ಚಿತೆಗೆ ಹಾರಿ ಸಾಯುತ್ತಿದ್ದರು ಇತ್ಯಾದಿಯಾಗಿ ನಾನೂ ಓದಿದ್ದೆ.ನಂತರ ಅದು ಸಂಪ್ರದಾಯವಾಯಿತು ಎಂದು


ಇಲ್ಲೊಂದು ಪ್ರಶ್ನೆ ಇದೆ.ಮುಸ್ಲಿಂ ಅಕ್ರಮಣಗಾರರು ವಿಧವೆಯರನ್ನು ಮಾತ್ರ ಹೊತ್ತೊಯ್ಯುತ್ತಿದ್ದರೇ? ಸೋತ ಅರಸನ ಪಾಳಯದ ಗಂಡನಿರುವ ಸ್ತ್ರೀಯರನ್ನು ,ವಿವಾಹ ವಾಗದ ಹುಡುಗಿಯರನ್ನು ಸೆಳೆದೊಯ್ಯುತ್ತಿರಲಿಲ್ಲವೇ? ಅವರುಗಳೇಕೆ ವಿದವಾ ಸ್ತ್ರೀಯರಂತೆ ಚಿತೆಗೆ ಹಾರಿ ಸಾಯಲಿಲ್ಲ? 

ತಮ್ಮ ತಮ್ಮ ಹೆಂಡತಿಯರನ್ನು ಗಂಡ ಕಾಯುತ್ತಿದ್ದನೇ ? ಹಾಗಾದರೇಕೆ ಗಂಡನನ್ನು ಕಳೆದುಕೊಂಡ ತಮ್ಮ ಅಕ್ಕ ತಂಗಿಯರನ್ನು ಕಾಯಲಿಲ್ಲ.ತಮ್ಮ ಹೆಂಡತಿ‌ಮಕ್ಕಳನ್ನು ಕಾಯುವ ಸಾಮರ್ಥ್ಯ ಇರುವವರಿಗೆ ತಮ್ಮ‌ ಅಕ್ಕ ತಂಗಿಯರನ್ನು ಮುಸ್ಲಿಂ ಅಕ್ರಮಣಗಾರರು ಸೆಳೆದೊಯ್ಯದಂತೆ ಕಾಪಾಡುವ ಸಾಮರ್ಥ್ಯ ಇರಲಿಲ್ಲವೇ? ಮನಸ್ಸಿರಲಿಲ್ಲವೇ ? 

ಹೆಣ್ಣನ್ನು ಕದ್ದೊಯ್ಯುವಾಗ ತಡೆದು ಯುದ್ದ ಮಾಡಿ ಮರಣವನ್ನಪ್ಪಿದ ವೀರರ ಬಗ್ಗೆ ಉಲ್ಲೇಖಗಳಿವೆ.ಇವರು ವಿಧವೆಯರ ರಕ್ಷಣೆಗಾಗಿ ಹೋರಾಡಿದವರೇ ? ಈ ಬಗ್ಗೆ ಸ್ಪಷ್ಟತೆ ಇಲ್ಲ.

ಈ  ಪೆಣ್ಣುಬ್ಬಯಲ್,ತರುಗೋಳ್  ಗಳ ಉಲ್ಲೇಖ ಇತಿಹಾಸದಲ್ಲಿದೆ.

ಇದನ್ನು ಗಮನಿಸುವಾಗ ಸತಿ ಪದ್ದತಿಗೆ ಕೇವಲ‌ ಮುಸ್ಲಿಂ ಆಕ್ರಮಣಕಾರರು ಮಾತ್ರ ಕಾರಣವಲ್ಲ ಎಂದೆನಿಸುತ್ತದೆ.

ವಿಧವೆಯರಿಗೆ ಸಮಾಜದಲ್ಲಿ ಭದ್ರತೆ ಇರಲಿಲ್ಲ.ಒಂದೊಮ್ಮೆ ಸತಿಯಾಗದೆ ಉಳಿದರೆ ತಲೆಬೋಳಿಸಿ‌ ವಿರೂಪಗೊಳಿಸಿ  ಕೆಂಪು ಮಡಿ ಬಟ್ಟೆ ಉಡಿಸುತ್ತಿದ್ದರು.

ಇದಕ್ಕೆ ಅವಳ ಮೇಲೆ ಯಾರ ಕಾಮುಕರ ಕಣ್ಣು ಬೀಳದಿರಲಿ ಮಾಡುದು ಎಂಬ ಸಮರ್ಥನೆಯ ಮಾತುಗಳನ್ನೂ ಕೇಳಿದ್ದೇವೆ.

ಕಾಮುಕರ ಕಣ್ಣು ವಿಧವಾ ಸ್ತ್ರೀಯರ ಮೇಲೆ ಮಾತ್ರ ಬೀಳುತ್ತದೆಯಾ ? ಇತರ ಮುತ್ತೈದೆಯರ ಮೇಲೇಕೆ ಬೀಳುವುದಿಲ್ಲ.ಯಾಕೆಂದರೆ ವಿಧವೆಯರನ್ನು ಏನು ಮಾಡಿದರೂ ಕೇಳುವವರಿರಲಿಲ್ಲ ಅಷ್ಟೇ.

ಕಾಮುಕರು ಎಲ್ಲೋ ದೂರದ ದೇಶದಿಂದ ಬಂದವರಲ್ಲ.

ಅದೇ ಊರಿನವರು ಅದೇ ಮನೆಯವರು.

ತಪ್ಪು ಕಾಮದ ಕಾಮಾಲೆ ಹತ್ತಿದ ಗಂಡಸಿದು‌.ಶಿಕ್ಷೆ ಹೆಣ್ಣಿಗೆ

ಇನ್ನು ವಿಧವಾ ಸ್ತ್ರೀ ಕೂಡ ಮನುಷ್ಯಳೇ..ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಹೆಣ್ಣಿಗೂ ದೈಹಿಕ ವಾಂಛೆಗಳಿರುತ್ತವೆ.ಹಾಗಾಗಿ ಕೆಲವು ವಿಧವಾ ಸ್ತ್ರೀಯೂ   ಎಡವಿರಬಹುದು.

ಮರು ಮದುವೆಯ ಮುಕ್ತ ಅವಕಾಶ ಇದ್ದಿದ್ದರೆ ಈ ಯಾವ ಸಮಸ್ಯೆಗಳೂ ಇರುತ್ತಿರಲಿಲ್ಲ.

ಇಂದಿಗೂ ಮರು ಮದುವೆಯಾದ ಹೆಣ್ಣನ್ನು ಕುಹಕದಿಂದ ನೋಡುವವರಿದ್ದಾರೆ ಎಂಬುದು ದುರಂತ.

ರಾಜಾರಮ ಮೋಹನ ರಾಯರ ಸತತ ಯತ್ನದುಂದಾಗಿ ಸತಿ ಪದ್ದತಿ ನಿಷೇಧದ ನಂತರ ವಿಧವೆಯರ ಪರಿಸ್ಥಿತಿ ಕಾಲಾಂತರದಲ್ಲಿ ಸುಧಾರಿಸುತ್ತಾ ಬಂತು.

ಸತಿಯಾಗದೆ ಇದ್ದವರು ತಲೆ ಬೋಳಿಸಿ ಮಡಿ ಅಜ್ಜಿಯಾಗಿ ಯಾರ್ಯಾರ ಸೇವೆ ಮಾಡುತ್ತಾ ಒಪ್ಪೊತ್ತು ಸಪ್ಪೆ ಊಟ ಉಂಡು ಬದುಕಬೇಕಾಗಿತ್ತು.ಇಂತಹ ಎರಡು ಮೂರು ಮಡಿ ಅಜ್ಜಿಯರನ್ನು ನಾನು ಸಣ್ಣಾಗಿರುವಾಗ ನೋಡಿದ್ದೆ‌ ಎಂದರೆ ಮೂವತ್ತು ಮುವತ್ತೈದು ವರ್ಷಗಳ ಹಿಂದೆ ಕೂಡ ಇಂತಹ ಹೀನಾಯ ಸ್ಥಿತಿ ವಿಧವಾ ಸ್ತ್ರೀಗೆ ಇತ್ತು. 

ಕಾಲಕ್ರಮೇಣ ತಲೆ ಬೋಳಿಸಿ ಮಡಿ ಮಾಡುದು ಕಡಿಮೆಯಾಯಿತು.

ಆದರೆ ವಿದವಾ ಸ್ತ್ರೀಯನ್ನು ಅಪಶಕುನ ಎಂದು ಭಾವಿಸುತ್ತಿದ್ದರು.ಈ ಬಗ್ಗೆ ಪ್ರಸಾದ್ ಹೇಳಿದ ಒಂದು ವಿಚಾರ ನೆನಪಾಗುತ್ತದೆ.

ಅದನ್ನು ಕೇಳಿ ಎಷ್ಟೋ ದಿನ ಅ ಪಾಪದ ಅಜ್ಜಿಗಾಗಿ ಮನ ಮರುಗಿತ್ತು.

ಪ್ರಸಾದರ ಹತ್ತಿರದ ಸಂಬಂಧಿಕರ ಮನೆಯಲ್ಲಿ ನಡೆದ ವಿಚಾರ ಇದು.

ಅ ತಾಯಿಗೆ ಗಂಡ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ಗಂಡನ ಆಸ್ತಿ ಇತ್ತು.ಹಾಗಾಗಿ ಹೇಗೋ ನಾಲ್ಕು ಗಂಡು ಮಕ್ಕಳನ್ನು ಮೂರು ಹೆಣ್ಣು ಮಕ್ಕಳನ್ನು ದೊಡ್ಡ ಮಾಡಿದ್ದರು.

ಮಕ್ಕಳು ದೊಡ್ಡವರಾಗಿ ಪಾಲು ಪಂಚಾಯತಿಗೆ ಆಗಿ ಆಸ್ತಿ ಪಾಲಾಯಿತು.ತಾಯಿಗೆಂದು ಒಂದು ತುಂಡು ಭೂಮಿ ಇಡಲಿಲ್ಲ.ನಂತರ ಆ ವೃದ್ಧ ತಾಯಿ ಸಣ್ಣ ಮಗನ ಜೊತೆ ಇದ್ದರು.ಸಣ್ಣ ಮಗನ ಮದುವೆಯಾದ ನಂತರ ಸೊಸೆ ಉಪೇಕ್ಷೆ ಮಾಡಿದಳೋ ಅಥವಾ

ಅ ತಾಯಿಗೆ ದೊಡ್ಡ ಮಗನ ಮನೆಯಲ್ಲಿ ಸಾಯಬೇಕೆಂಬ  

ಹಂಬಲವೋ ಗೊತ್ತಿಲ್ಲ.ಅಲ್ಲೇ ಒಂದುವರೆ ಕಿಮೀ ದೂರದ ದೊಡ್ಡ ಮಗನ ಜೊತೆ ಇದ್ದರು.

ದೊಡ್ಡಮಗನಿಗೆ ಹೆಣ್ಣು ಗಂಡು ಮಕ್ಕಳಾಗಿ ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದರು.

ಹಾಗೆ ಮಗನ ಮಗಳನ್ನು ನೋಡಲು ಗಂಡಿನ ಕಡೆಯವರು ನೋಡಲು ಬರುವವರಿದ್ದರು.

ಮನೆಯಲ್ಲಿ ಸಂಭ್ರಮದ ವಾತಾವರಣ.

ಈ ಬಿಳಿಸೀರೆ ಉಡುವ ವಿಧವೆ ವೃದ್ದತಾಯಿಗೂ ಅದು ಸಂಭ್ರಮದ ವಿಚಾರವೇ.ಆಕೆಯೂ ಸಂಭ್ರಮದಿಂದ ಮನೆಯನ್ನು ಸ್ವಚ್ಛ ಮಾಡಿ ಸಿದ್ಧಪಡಿಸುತ್ತಿದ್ದರು.

ಆಗ ಮಗ ಬಂದವನೇ ತಾಯಿಯನ್ನು ಎಳೆದುಕೊಂಡು ಹೋಗಿ ಒಂದು ಬೇಡದ ಸಾಮಾನುಗಳನ್ನು ತುಂಬುವ ಕತ್ತಲೆಯ  ಕೊಠಡಿಯಲ್ಲಿ ಕೂಡು ಹಾಕಿ ಬಾಗಿಲು ಹಾಕಿ ಹೊರಗಿನಿಂದ ಬೀಗ ಹಾಕಿದ.

ವಿಧವೆ ತಾಯಿ ಹೊರಗೆ ಬಂದು ಕಾಣಿಸಿದರೆ ಅಪಶಕುನವಂತೆ.ಅದಕ್ಕಾಗಿ ಕೂಡಿ ಹಾಕಿದ..

ಯಾರೋ ಅಪಶಕುನ ಎಂದು ಅವಮಾನಿಸುದು ಬೇರೆ.ತಾನು ಹೊತ್ತು ಹೆತ್ತ ಮಗನೇ ಅಪಶಕುನ ಎಂದಾಗ ಆ ತಾಯಿಗೆ ಹೇಗಾದೀತು..ಅಬ್ಬಾ ಕ್ರೌರ್ಯವೇ.

ಆ ಹುಡುಗಿಯನ್ನು ನೋಡಲು ಬಂದವರು ತಾಯಿ ಎಲ್ಲಿ ಎಂದು ವಿಚಾರಿಸಿದಾಗ ಕೂಡಿ ಹಾಕಿದ ಕತ್ತಲೆಯ ಕೋಣೆಯಿಂದ ವೃದ್ಧ ತಾಯಿಯನ್ನು ಹೊರಗೆ ಕರೆದುಕೊಂಡು ಬಂದರು.

ಅ ಮಗಳಿಗೆ ಮದುವೆಯಾಯಿತು‌

ನಂತರದ ಮಗಳಿಗೂ ಮದುವೆಯಾಯಿತು.ಆ ತಾಯಿಯ ನಿಟ್ಟುಸಿರಿನ ಬಿಸಿ ತಾಗಿತೋ,ಆತನ ಪಾಪದ ಕೊಡ ತುಂಬಿತೋ,ಆ ಹೆಣ್ಣು ಮಗಳ ದುರದೃಷ್ಟವೋ ಏನೋ ತಿಳಿಯದು.

ಆಕೆಗೆ ಮದುವೆಯಾಗಿ ವರ್ಷದೊಳಗೆ ಗಂಡ ತೀರಿ ಹೋದ.ಅ ಸಮಯಕ್ಕೆ ಆಕೆ ತುಂಬು ಗರ್ಭಿಣಿ.ಹಾಗಾಗಿ ಅವಳಿಗೆ ವಿಷಯವನ್ನು ತಿಳಿಸಲಿಲ್ಲ.ಒಂದೆರಡು ದಿನಕ್ಕೆ ಹೆಣ್ಣು‌ಮಗು ಹುಟ್ಟಿತು.ತಂದೆಯ ಮುಖವನ್ನೇ ಕಾಣದ ಆ ಮೊಮ್ಮಗುವನ್ನು ,ಸಣ್ಣ ವಯಸ್ಸಿಗೆ ಗಂಡನನ್ನು ಕಳೆದುಕೊಂಡ ಮಗಳನ್ನು ಯಾವ ಕೊರತೆಯೂ ಕಾಡದಂತೆ  ಸಾಕಿದರು.

ತಾಯಿಯನ್ನು ವಿಧವೆ ಅಪಶಕುನ ಎಂದು ಕೀಳಾಗಿ ಕಂಡವನಿಗೆ ದಿನಾಲೂ ಗಂಡನನ್ನು ಕಳೆದುಕೊಂಡು ದುಃಖಿಸುವ ಮಗಳನ್ನು ಕಾಣುವ ದುರಂತ ಬಂದೊದಗಿತ್ತು.

ಅವಳ ಮಗಳೂ ಈಗ ದೊಡ್ಡವಳಾಗಿದ್ದಾಳೆ.ಅಜ್ಜನ ನಂತರ ಸೋದರ ಮಾವಂದಿರು ತಮ್ಮ ಮಕ್ಕಳಿಗಿಂತ ಪ್ರೀತಿಯಿಂದ ಇವಳನ್ನು ಸಾಕಿದ್ದಾರೆ.ಆದರೂ ಅವಳ ಮದುವೆಯಂದು ಅವಳ ತಂದೆ ತಾಯಿಯ ಸ್ಥಾನದಲ್ಲಿ ಕುಳಿತವರು ಆಕೆಯ ವಿದ್ಯಾರ್ಥಿಯ ತಂದೆ ತಾಯಿ.

ಯಾರೋ ಆಕೆಯನ್ನು ಧಾರೆ ಎರೆದುಕೊಡಬೇಕಾಗಿ ಬಂದುದರ ಹಿನ್ನೆಲೆ ನನಗೆ ಗೊತ್ತಿಲ್ಲ.ಅವರೊಳಗೆ ಏನಿತ್ತೋ ಗೊತ್ತಿಲ್ಲ.

ಈಕೆ ಈಗ ವಿದೇಶದಲ್ಲಿ ಗಂಡ ಮತ್ತು ಎರಡು ಮಕ್ಕಳ ಜೊತೆಗಿದ್ದಾಳೆ‌.ಆಕೆಯ ತಾಯಿ ಮತ್ತೆ ತಂದೆಯ ಮನೆಯಲ್ಲೇ ಇದ್ದಾರೆ.ಅಣ್ಣಂದಿರೂ ಈಗ ಅಳಿದಿದ್ದಾರೆ.

ಅಣ್ಣಂದಿರ ಮಕ್ಕಳು ಮತ್ತು ಅವಿವಾಹಿತ ತಂಗಿಯ ಜೊತೆಗಿದ್ದಾರೆ.

ಇರುವುದರಲ್ಲಿ ಒಳ್ಳೆಯ ಗುಣದ ಮಗಳಿರುವುದು ಒಂದು ಸಂತಸದ ವಿಚಾರ.ಒಂದೊಮ್ಮೆ ಮಗಳೂ ಇಲ್ಲದಿರುತ್ತಿದ್ದರೆ ಅವರ ಪರಿಸ್ಥಿತಿ ಹೇಗಿರುತ್ತಿತ್ತು..

ಮಕ್ಕಳೂ ಇಲ್ಲದ ,ಸಣ್ಣ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಅಣ್ಣ ತಮ್ಮಂದಿರ ಆಶ್ರಯದಲ್ಲಿರುವ  ಅನೇಕ ವಿಧವಾ ಸ್ತ್ರೀಯರು ಈಗಲೂ ಇದ್ದಾರೆ.

ಇತ್ತೀಚೆಗೆ ಗಂಡನನ್ನು ಕಳೆದುಕೊಂಡ ಸಣ್ಣ ವಯಸ್ಸಿ‌ ಹುಡುಗಿಯರಿಗೆ ಮತ್ತೆ ಮದುವೆ ಮಾಡುತ್ತಿರುವುದು ನಮಾಜ ಪರಿವರ್ತನೆಯ ಒಂದು ಧನಾತ್ಮಕ ಅಂಶವಾಗಿದೆ.


 



Sunday 27 December 2020

 


ನನಗೂ ಆತ್ಮವಿದೆ..ಅದಕ್ಕೂ ಒಂದು ಕಥೆ ಇದೆ .


ಕೆಲವೊಮ್ಮೆ ಅದೃಷ್ಟ ಕಾಯುತ್ತದೆ


ಪೇಟೆಯಲ್ಲಿ ಮನೆ ಕಟ್ಟುವಾಗ ಅಕ್ಕ ಪಕ್ಕದವರ ಕಿರಿ ಕಿರಿ ತುಂಬಾ ಇರುತ್ತದೆ.ನೀವು ಮನೆ ಕಟ್ಟುವಾಗ ನಿಮಗೆ ಏನೂ ಸಮಸ್ಯೆ ಆಗಿಲ್ಲವೇ? ಎಂದು ಅನೇಕರು ಕುತೂಹಲದಿಂದ ಕೇಳಿದ್ದಾರೆ.

ನಮಗೂ ಸಮಸ್ಯೆಗಳು ಬಂದಿವೆ.

ನಾವು ಮನೆ ಕಟ್ಟಲು ಗುದ್ದಲಿ ಪೂಜೆ ಮಾಡಿ ಮೇಸ್ತ್ರಿ ಕೆಲಸದವರಲ್ಲಿ ಹೇಳಿ ಪಾರಿಜಾತ ಸಂಪಿಗೆ ಮರ ಕಡಿದು ಇತರ ಗಿಡ ಬಳ್ಳಿಗಳನ್ನು ಕಡಿದು ಸಿದ್ದ ಮಾಡುತ್ತಿದ್ದರು


ಆಗ ಒಂದು ಅಚ್ಚರಿಯ ಘಟನೆ ನಡೆಯಿತು.

ಎರಡು ಕಾರು ಬಂದು ನಮ್ಮ ಮನೆ ಕೌಂಪೌಂಡ್ ಬಳಿ ಬಂದು ನಿಂತಿತು

ಅದರಿಂದ ಏಳೆಂಟು 30-35 ವರ್ಷದ ಜವ್ವನಿಗರು ಇಳಿದರು.

ಕೌಂಪೌಂಡ್ ಗೇಟಿಗೆ  ನಾವು ಯಾವಾಗಲೂ ಬೀಗ ಹಾಕಿರ್ತಿದ್ದೆವು.ಆ ದಿನ ಕೂಡಾ ಬೀಗ ಹಾಕಿತ್ತು.

ಗೇಟ್ ಲಾಕ್ ತೆಗೆಯಿರಿ ಎಂದರು !

 ಯಾಕೆ  ಎಂದು ಕೇಳಿದೆ

ಈ ಸೈಟನ್ನು ನಮಗೆ ಮಾರಾಟ ಮಾಡಿದ್ದಾರೆ ,ನಾವು ಅಳೆಯಬೇಕು ಎಂದರು.ಅಳೆಯುವ ಟೇಪ್ ಅವರ ಕೈಯಲ್ಲಿ ಇತ್ತು.

ಇದು ನಮ್ಮಮನೆ ಇದನ್ನು ನಾವು ಯಾರಿಗೂ ಮಾರಾಟ ಮಾಡಿಲ್ಲ.ಕಳೆದ ಹತ್ತು ವರ್ಷಗಳಿಂದ ಇಲ್ಲಿ ನಾವಿದ್ಷೇವೆ ಎಂದೆ.

ಇಲ್ಲ.ಇಲ್ಲ‌ ಇದು ನಾವು ಕೊಂಡುಕೊಂಡ ಸೈಟು ಎಂದು ಕಾಂಪೌಂಡು ಹತ್ತಿ ಒಳಬರಲು ಹೊರಟರು.

ಆಗ ನಾನು "ನೋಡಿ..ಇದು ನಿಮಗೆ ಮಾರಾಟವಾಗಿದ್ದರೆ ದಾಖಲೆ ತೋರಿಸಿ..ಸುಮ್ಮನೇ ಒಳಗೆ ಬಂದರೆ ಪೋಲೀಸ್ ಗೆ ಕರೆ ಮಾಡುತ್ತೇವೆ "ಎಂದೆ.

ನನ್ನ ದ್ವನಿ ಸ್ವಲ್ಪ ದೊಡ್ಡದೇ ..

ಗೋಡೆ ಹತ್ತಿದಾತ ಅ ಕಡೆಗೆ ಇಳಿದ.ಮತ್ತೆ ಸ್ವಲ್ಪ ದೂರ ಹೋಗಿ ಅವರವರೊಳಗೇ ಏನೋ ಗುಸುಗುಸು ಮಾತನಾಡಿಕೊಂಡರು‌.ಕಾರು ಹತ್ತಿ ಹೋದರು.

ಅ ವ್ಯಕ್ತಿಗಳನ್ನು ನಾನು ಆ ಪ್ರದೇಶದಲ್ಲಿ ಮೊದಲೂ ನೋಡಿರಲಿಲ್ಲ‌.ನಂತರ ಇಂದಿನ ತನಕ ನಾನು ನೋಡಿಲ್ಲ

ಅವದ್ಯಾರು..ಯಾಕೆ ಬಂದಿದ್ದರು ? ಇಂದಿಗೂ ಕುತೂಹಲಕರವಾಗಿಯೇ ಉಳಿದಿದೆ ನಮಗೆ.


ಈ ಪ್ರದೇಶದಲ್ಲಿ ಮನೆ ಕಟ್ಟುವಾಗ ಮೊದಲು ಸೈಟು ಮಾರಾಟ ಮಾಡಿದವರ ಮಕ್ಕಳು ಬಂದು ನಮ್ಮ ಅಜ್ಜ/ ತಂದೆಗೆ ಮೋಸ ಮಾಡಿ ನೀವುಗಳು ಕಡಿಮೆ ದುಡ್ಡಿಗೆ ಸೈಟ್ ತಗೊಂಡಿದ್ದೀರಿ.ಅ ದುಡ್ಡು ಹಿಂದೆ ಕೊಡ್ತೇವೆ.ನಮ್ಮಜಾಗ ನಮಗೆ ಕೊಡಿ ಎಂದು ಗಲಾಟೆ ಮಾಡಿ ಸ್ವಲ್ಪ ದುಡ್ಡು ವಸೂಲಿ ಮಾಡುತ್ತಾರೆ ಎಂದು ಹೇಳುದು ಕೇಳಿದ್ದೆ.

ಬಹುಶಃ ನಾವು ಹತ್ತು ವರ್ಷದಿಂದ ಅಲ್ಲಿರುವುದು ಗೊತ್ತಿಲ್ಲದೇ ಅಥವಾ ಸ್ವಲ್ಪ ಹೆಸರಿಸಿ ದುಡ್ಡು ವಸೂಲಿಗೆ ಬಂದವರೋ ಅಥವಾ ಬೇರೆ ಯಾವುದೊ ಸೈಟನ್ನು ಖರೀದಿಸಿ ಇದನ್ನು ಗೊಂದಲ ಮಾಡಿಕೊಂಡರೊ ಗೊತ್ತಿಲ್ಲ.

ಆದರೆ ಸೈಟನ್ನು ನೋಡಿ ಅಳೆಯದೇ ಯಾರಾದರೂ ಖರಿದಿಸುತ್ತಾರಾ? ಏನೋ ನನಗೆ ಗೊತ್ತಾಗುತ್ತಿಲ್ಲ.



ಅದಾಗಿ ಪಕ್ಕದ ಮನೆಯವರ ಕಿರಿಕಿರಿ ಶುರು ಆಯಿತು.

ನಮ್ಮ ಸೈಟಿನ ಎಡ ಬಾಗದ ಸೈಟಿನ ಮನೆ ಮಲ್ಲಮ್ಮ ಎಂಬವರದು.ಇವರು ಸ್ವಲ್ಪ ಕಿರಿಕ್ ಪಾರ್ಟಿ.

ಅಕ್ಕ ಪಕ್ಕ ಸದಾ ಗಲಾಟೆ.ಇವರು ಜಗಳಾಡದ ವ್ಯಕ್ತಿಗಳು ಅಲ್ಲಿರಲಿಲ್ಲ.

ನಮ್ಮ ಹತ್ತಿರ ಅಷ್ಟಾಗಿ ಜಗಳ ಮಾಡಿರಲಿಲ್ಲ.ಅದಕ್ಕೆ ಕಾರಣ ಇತ್ತು.ಅವರಿಗೆ ಸುಮಾರು ಉಚಿತವಾಗಿ ನಾವು ನೀರನ್ನು ಕೊಟ್ಟಿದ್ದೆವು‌

ನಂತರ cmc ನೀರು ಬಂದಾಗ ಕೂಡ ನಮ್ಮ ಜಾಗದಲ್ಲಿ  ನೀರಿನ ಪೈಪ್ ಹಾಕಲು ನಾವು ಬಿಟ್ಟಿದ್ದೆವು


ಇಷ್ಟೆಲ್ಲ ಉಪಕಾರ ಪಡೆದವರು ಕೂಡಾ ನಮ್ಮ ಮನೆ ಕಟ್ಟುವಾಗ ಕಿರಿಕ್ ತೆಗೆದರು.

ಅವರು ಪೂರ್ತಿ ಸೈಟಿನಲ್ಲಿ ಮನೆ ಕಟ್ಟಿದ್ದರು‌.ಒಂದು ಇಂಚು ಜಾಗ ಕೂಡ ಬಿಟ್ಟಿಲ್ಲ.ನಾವು ಮೂರು ಅಡಿ ಬಿಟ್ಟು ಕಟ್ಟಿ ಎಂದು ಗಲಾಟೆ.

ನಾವು ಅಲ್ಲಿ ಬಿಟ್ಟರೆ ಇನ್ನೊಂದು ಕಡೆಯವರು ಕೂಡಾ ಬಿಡಿ ಎಂದು ಹೇಳುವುದಿಲ್ಲವೇ? ಇನ್ನೊಂದು ಕಡೆ ರಾಮ ಮೂರ್ತಿ ಎಂಬವರ ಕಮರ್ಷಿಯಲ್ ಕಾಂಪ್ಲೆಕ್ಸ್  ಇದೆ.ಅವರು ನಮ್ಮ ಕಡೆಗೆ ನಾಲ್ಕಡಿಯಷ್ಟು ಜಾಗ ಬಿಟ್ಟುಕಟ್ಟಿದ್ದರು.ಅವರದು ಡಬಲ್ ಸೈಟಾದ ಕಾರಣ ಮೂರಡಿ ಬಿಟ್ಟರೂ ಸಮಸ್ಯೆ ಆಗುವುದಿಲ್ಲ.

ನಾವು ಎರಡು ಕಡೆ ಮೂರು ಮೂರು ಅಡಿ ಬಿಟ್ಟರೆ ಉಳಿದ 24 ಅಡಿಯಲ್ಲಿ ಒಂದು ಸಣ್ಣ ಶಾಪ್ ಮತ್ತು ಒಂದು ಕಾರು ನಿಲ್ಲಿಸುವಷ್ಟು ದೊಡ್ಡ ಪಾರ್ಕಿಂಗ್ ಮಾಡಲು ಸಾಧ್ಯ ಅಷ್ಟೆ.ಮೇಲೆ ಕೂಡಾ ಎರಡು ಶಾಪ್ ಹಾಕಬಹುದು ಅಷ್ಟೇ

ಹಾಗಾಗಿ ನಾವು ಜಾಗಬಿಡಲು ತಯಾರಿರಲಿಲ್ಲ.ಹಿಂಭಗದ ಮನೆಯ ಭಾಗದಲ್ಲಿ ಮೂರಡಿ ಸುತ್ತಲೂ ಬಿಟ್ಟಿದ್ದೇವೆ.


ಎದುರು ಗಡೆ ಅಂಗಡಿ ಹಾಕಿರುವಲ್ಲಿ ಬಿಡಲಿಲ್ಲ.

ಮೊದಲು ಅವರು ಅವರ ಮನೆಯ ಕಿಟಕಿ ಇರುವಲ್ಲಿಒಂದೂವರೆ ಅಡಿ ಅಗಲ ಬಿಡಬೇಕು ಎಂದರು.

ಸರಿ ಚರ್ಚೆ ಬೇಡ ಎಂದು ಒಪ್ಪಿದೆ

ಅದರೆ ಮೇಲೆ ಮೋಲ್ಡ್ ಹಾಕಿದಾಗ ಅಲ್ಲೂ ಬಿಡಬೇಕೆಂದು ತಕರಾರು ಮಾಡಿದರು.

ನಾವು ಒಪ್ಪದ್ದಕ್ಕೆ ಬಿಬಿಎಂಪಿಗೆ ದೂರು ಕೊಟ್ಟರು.

ಬಿಬಿಎಂಪಿಯವರು ಬಂದಾಗ ಅವರು ಒಂದಿಂಚು ಕೂಡಾ ಬಿಟ್ಟಿಲ್ಲ.ನಾವ್ಯಾಕೆ ಬಿಡಬೇಕು ಎಂದು ಕೇಳಿದೆ.

ಇಬ್ಬರಿಗೂ ನೊಟಿಸ್ ಕೊಡ್ತೇವೆ ಎಂದು ಬಿಬಿಎಂಪಿಯವರು ಹೊರಟು ಹೋದರು‌

ಇತ್ತ ಮೇಸ್ತ್ರಿಗೆ ಅ ಕಡೆ ಅವರ ಗೋಡೆಗೆ ತಾಗದಂತೆ ಸ್ವಲ್ಪ ಜಾಗಬಿಟ್ಟು ಗೋಡೆ ಕಟ್ಟಲು ಹೇಳಿದೆ‌.ಅಗ ಆಕೆ ಕಟ್ಟದಂತೆ  ಅಡ್ಡ ಬಂದರು.ಇದನ್ನು ನಾನು ಅರವಿಂದ್ ರೆಕಾರ್ಡ್ ಮಾಡಿದೆವು.ಅದು ಗೊತ್ತಾಗಿ ಆಕೆ ನನ್ನ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ಬಂದರು‌.ಇದೂ ಕೂಡಾ ಅರವಿಂದ್ ನ‌ ಮೊಬೈಲ್ ನಲ್ಲಿ ರೆಕಾರ್ಡ್ ಆಯಿತು

ದಾಖಲೆ ಸಿಕ್ಕ ತಕ್ಷಣವೇ ಹೋಗಿ ಪೋಲೀಸ್ ಸ್ಟೇಶನ್ ನಲ್ಲಿ ದೂರು ಕೊಟ್ಟೆವು.

ಕ್ರಿಮಿನಲ್ ಕೇಸ್ ಬೀಳುತ್ತದೆ ಎಂದಾಗ ಬಿಸಿ ಆಯಿತು ಆಕೆಗೆ,ಜೊತೆಗೆ ಇದ್ದ ಆಕೆಯ ಅಣ್ಣನ ಮಗನಿಗೆ

ನಂತರ ಕ್ಷಮಾಯಾಚನೆ ಪತ್ರ ಬರೆದುಕೊಟ್ಟರು.

ಮನೆಗೆ ಬಂದು ಅರ್ದ ಅಡಿ ಬಿಟ್ಡು ಗೋಡೆ ಕಟ್ಟಲು ಮೇಸ್ತ್ರಿಗೆ ಹೇಳಿದೆ.ಯಾಕೆಂದರೆ ಅವರ ಗೋಡೆಗೆ ತಾಗಿದಾಗ ಡ್ಯಾಮೇಜ್ ಅಗಿದೆ ಎಂದು ಕೋರ್ಟಿಗೆ ಹೋಗಿ ಸ್ಟೇ ತಂದರೆ ನಮ್ಮ ಕೆಲಸ ಹಾಳಾಗುತ್ತದೆ.

ಮುಂದೆ ಸಮಯ ನೋಡಿ ಅ ಗೋಡೆ ತೆಗೆದು ಹಿಂದೆಹಾಕಿ ಕಟ್ಟುದೆಂದು ನಿರ್ಧರಿಸಿದೆ.

ಅಂತೂ ಅ ಕಡೆಯ ಸಮಸ್ಯೆ ಪರಿಹಾರ ಆಗಿತ್ತು.

ನಮ್ಮ ಅದೃಷ್ಟಕ್ಕೆ ಇನ್ನೊಂದು ಕಡೆಯವರು ನಾವು ಮನೆ ಕಟ್ಟಲು ಸುರು ಮಾಡಿದ ಸಮಯದಲ್ಲಿ ವಿದೇಶಕ್ಕೆ ಮೂರು ತಿಂಗಳ ಪ್ರವಾಸ ಹೋಗಿದ್ದರು.

ಅವರು ಬರುವಷ್ಟರಲ್ಲಿ ಗೋಡೆ ಹಾಕಿ ಆಗಿತ್ತು.ಆದ ನಂತರ ಏನು ಮಾಡುದು ? ಹಾಗಾಗಿ ಅಸಮಧಾನ ಆಗಿದ್ದರೂ ಏನೂ ತೋರಿಸಿಕೊಳ್ಳಲಿಲ್ಲ.


ನಮ್ಮ‌ಕಟ್ಟಡ ಮೇಲೆ ಬಂದಾಗ ಈ  ಕಡೆಯ ಮನೆಯವರಿಗೆ ಗಾಳಿ ಬೆಳಕಿಲ್ಲದೆ ಮನೆ ಕಗ್ಗತ್ತಲಾಯಿತು‌.ಯಾಕೆಂದರೆ ಅವರು ಒಂದಿಂಚೂ ಜಾಗ ಬಿಟ್ಟಿರಲಿಲ್ಲ.ನಾವೂ ಬಿಡದ ಕಾರಣ ಅವರಿಗೆ ಗಾಳಿ ಬೆಳಕಿಲ್ಲದಾಯಿತು‌.ಹಾಗಾಗಿ ಅವರು ಮನೆ ಖಾಲಿ ಮಾಡಿ ಬೇರೆಡೆ ಹೋದರು.

ಅವರು ಮನೆ ಖಾಲಿ ಮಾಡುತ್ತಲೇ ನಾವು ಗೋಡೆಯನ್ನು ತೆಗೆದು ಅರ್ಧ ಅಡಿ ಬಿಟ್ಟ ಜಾಗದಷ್ಟುಹಿಂದೆ ಹಾಕಿ ಕಟ್ಟಲು ನಿರ್ಧರಿಸಿದೆವು‌

ಹಗಲು ಮಾಡಿದರೆ ಯಾರಾದರೂ ನೋಡಿ ಅವರಿಗೆ ಪೋನ್ ಮೂಲಕ ಹೇಳುವ ಸಾಧ್ಯತೆ ಇತ್ತು.ಅಕೆ ಹೈ ಕೋರ್ಟ್ ನಲ್ಲಿ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡ್ತಾರೆ.ಕ್ಷಣದಲ್ಲಿ ಪೋಲಿಸ್ ಕರೆಸಿ ನಿಲ್ಲಿಸುವ ಸಾಮರ್ಥ್ಯ ಇರುವವರು.

ಹಾಗಾಗಿ ರಾತ್ರಿ ಮಾಡಲು ನಿರ್ದರಿಸಿದೆವು.ನಮ್ಮ ಮನೆ ಉಳ್ಳಾಲು ಮುಖ್ಯ ರಸ್ತೆಯಲ್ಲಿ ಇರುವ ಕಾರಣ ಅಕ್ಕ ಪಕ್ಕ ಎದುರುಗಡೆ ಅಂಗಡಿಗಳೇ ಇವೆ‌

ಅಂಗಡಿಗಳನ್ನು ಬಾಗಿಲು ಹಾಕಿ ಹೋಗುವ ತನಕ ಕಾದೆವು.

ರಾತ್ರಿ ಹತ್ತ ಹತ್ತೂವರೆ ಆಗುವಾಗ ಅಂಗಡಿಗಳೆಲ್ಲ ಮುಚ್ಚಿದವು


ಮತ್ತೆ ಗೋಡೆಯನ್ನು ಮೆಷಿನ್ ನಲ್ಲಿ ಕತ್ತರಿಸುವ ಒಡೆಯುವ ಕೆಲಸ ಶುರು ಮಾಡಿದರು.

ಭಯಂಕರ ಶಬ್ದ ಅದರದ್ದು.ನಮ್ಮ ಮನೆ ಹಿಂಬಾಗದ ಸೈಟಿನಲ್ಲಿ ಒಂದು ಮನೆ ಎರಡು ಸೈಟ್ ದೂರದಲ್ಲಿ ಇನ್ನೊಂದು ಮನೆ,ಅದರ ಆ ಕಡೆಗೆ ಒಂದು ಈ ಪಕ್ಕದ ಮನೆಯವರ ಅಕ್ಕನ‌ಮಗಳ ಮನೆ ,ಈ ಕಡೆ ಎದುರು ಗಡೆ ಒಂದು ಮನೆ ಇತ್ತು.

ಇಷ್ಟು ಮನೆಗಳಿಗೆ ಕಿವಿ ಮುಚ್ಚಿದರೂ ಕೇಳಿಸುವ ಕರ್ಕಶ ಶಬ್ದ ಅಗುತ್ತಿತ್ತು.

ಇಲ್ಲಿ ಹಿಂದಿನಮನೆ ಎದುರುಗಡೆಯ ಮನೆಗಳಿಗೆ ಬೆಸಿಗೆಯಲ್ಲಿ ಸಿ ಎಮ್ ಸಿ ನೀರು ಸರಿಯಾಗಿ ಬರದೇ ಇದ್ದಾಗ ಪೈಪ್ ಹಾಕಿ ನೀರು ಕೊಡುತ್ತಿದ್ದೇವೆ ನಾವು ಪ್ರತಿ ಬೇಸಿಗೆ ಬಂದಾಗ

ನಾಲ್ಕೈದು  ವರ್ಷಗಳ ಮೊದಲು ಎದುರುಗಡೆ ಮನೆಯವರ ತೋಟಕ್ಕೆ ಬೆಂಕಿ ಬಿದ್ದಾಗ ಅರವಿಂದ ನೋಡಿದ್ದ‌  ಮನೆಯವರು ಹೊರಗಡೆ ಹೊಗಿದ್ದರು‌.ಅಗ ಅಕ್ಕ ಪಕ್ಕದವರನ್ನು ಸೇರಿಸಿ ನೀರು ಹಾಕಿ ಬೆಂಕಿ ಹರಡದಂತೆ ಅರವಿಂದ ತಡೆದಿದ್ದ.

ಶಬ್ದ ಆದಾಗ ಏನೆಂದು ನೋಡಲು ಬಂದವರು ನಾವಿರುದನ್ನು ನೋಡಿ  ಮುಲಾಜಿಗೆ ಸಿಕ್ಕಿ ಏನು ಹೇಳದೆ ಹಿಂದೆ ಹೋದರು.

ಪಕ್ಕದ ಮನೆಯವರ ಅಕ್ಕನ ಮಗಳ ಮನೆಯವರಿಗೂ ಇವರಿಗೂ ಸರಿ ಇರಲಿಲ್ಲ.ಹಾಗಾಗಿ ಅವರೂ ಮಾತನಾಡಲಿಲ್ಲ

ಅಂತೂ ಇಂತೂ ಬೆಳಗಾಗುವಷ್ಟರಲ್ಲಿ ಗೋಡೆ ಒಡೆದು ತೆಗೆದು ಹೊಸ ಗೋಡೆ ಅರ್ಧದಷ್ಟು ಕಟ್ಟಿ ಆಗಿತ್ತು.

ಅದೃಷ್ಟವಶಾತ್ ಆಕೆಗೆ ಸುದ್ದಿ ತಲುಪಲಿಲ್ಲ.ಇತ್ತ ಸಾವಕಾಶ ಗೋಡೆ ಕಟ್ಟಿದೆವು.

ಅದೃಷ್ಟವಶಾತ್ ಪ್ರತಿ ದಿನ ಬೀಟ್ ಗೆ ಬರುವ ಪೋಲೀಸ್ ಆ ದಿನ ಬಂದಿರಲಿಲ್ಲ.ಬಂದರೂ ಏನೂ ಮಾಡಲಾಗುವುದಿಲ್ಲ.ರಾತ್ರಿ ಕೆಲಸ ಮಾಡಬಾರದು ಎಂದಿಲ್ಲ.ಆದರೂ ಸದ್ದು ಬರಯವ ಕಾರಣ ತಕರಾರು ಮಾಡುತ್ತಿದ್ದರೋ ಏನೋ ..ಅದರೆ ಅ ದಿನ ಬರದೇ ಇದ್ದ ಕಾರಣ ಸಮಸ್ಯೆ ಆಗಲಿಲ್ಲ.ಅ ಗೋಡೆ ಪ್ಲಾಸ್ಟರಿಂಗ್ ಮಾಡಿರಲಿಲ್ಲ ಹಾಗಾಗಿ ದೊಡ್ಡ ಖರ್ಚು ಕೂಡ ಆಗಲಿಲ್ಲ

ಎಲ್ಲೆಡೆ ನಮ್ಮನ್ನು ದೇವರು ಕಾಪಾಡಿದ 


ಇದಾಗಿ ತಿಂಗಳ ನಂತರ ಅಕೆಯ ಮಗ ಬಂದವನು ನಾವು ಗೋಡೆಯನ್ನು ಹಿಂದೆ ಹಾಕಿದ್ದು ನೋಡಿ " ಅಂಟಿ.ನಮ್ಮನ್ನ ಕೇಳದೆ ಗೋಡೆ ಕಟ್ಟಿದ್ದು ಯಾಕೆ ? " ಎಂದು ಕೇಳಿದ.

ನಮ್ಮ ಜಾಗದಲ್ಲಿ ಗೋಡೆ ಕಟ್ತೇವೆ ತೆಗೆಯುತ್ತೇವೆ..ನಿನಗ್ಯಾಕೆ ಹೇಳಬೇಕು ? ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದೆ..ಸುಮ್ಮನಾದ 


ಗೋಡೆ ಕಟ್ತಾ ಇರುವಾಗಲೇ ಬಾಡಿಗೆಗೆ ಜನ ಬಂದರು.

ದೇವರ ದಯೆಯಿಂದ ಏನೂ ಸಮಸ್ಯೆಯಾಗಲಿಲ್ಲ.


 ನನಗೂ ಆತ್ಮವಿದೆ..ಅದಕ್ಕೂ ಒಂದು ಕಥೆ ಇದೆ.

ಮನೆ  ಮನೆ ಕಥೆ ..

1994 ಸೆಪ್ಟಂಬರಿನಲ್ಲಿ ನನ್ನ ಓದಿನ ವಿಚಾರದಲ್ಲಿ ಮನೆ ಮಂದಿಯನ್ನು ಎದುರು ಹಾಕಿಕೊಂಡು ಖಾಲಿ ಕೈಯಲ್ಲಿ‌ ಮನೆ ಬಿಟ್ಟು ಕಟೀಲಿಗೆ ಬಂದಿದ್ದೆವು.ಆ ದಿನ ಅಮವಾಸ್ಯೆ ಆಗಿತ್ತು  ಆದರೆ ಅಮವಾಸ್ಯೆ ಕೂಡಾ ನಮಗೆ ಅಮೃತ ಗಳಿಗೆ ಫಲ ನೀಡಿತ್ತು. 


1998 ರಲ್ಲಿ ಮಂಗಳೂರಿನಲ್ಲಿ ನಾವೊಂದು ಪ್ಲಾಟ್ ತಗೊಂಡಿದ್ದೆವು.ನೋಡಲು ತುಂಬಾ ಚೆನ್ನಾಗಿತ್ತು‌


ಆ ಪ್ಲಾಟನ್ನು ಮೊದಲು ಬುಕ್ ಮಾಡಿದವರ ತಾಯಿಗೆ ಕ್ಯಾನ್ಸರ್ ಬಂತು ಹಾಗೆ ದುಡ್ಡು ಹೊಂದಿಸಲಾಗಲಿಲ್ಲ ಎಂದು ನಮಗೆ ಮಾರಿದ್ದರು. ಈ ವಿಚಾರ ನಮಗೆ ಮತ್ತೆ ಗೊತ್ತಾಯಿತು.

ಅದಕ್ಕೆ ಸರಿಯಾಗಿ ನಮಗೆ ಈ ಮನೆ  ತಗೊಂಡ ಮೇಲೆ ತುಂಬಾ ನಷ್ಟ ಬಂತು.ಅದು ದಕ್ಷಿಣ ದಿಕ್ಕಿನ ಬಾಗಿಲಿನ ಮನೆ.ಅದು ದೋಷಕರ ಎಂದು ಯಾರೊ ಹೇಳಿದರು.ಅದು ಗ್ರೌಂಡ್ ಪ್ಲೋರ್ ಅಗಿದ್ದು ಅದಕ್ಕೆ ಇನ್ನೊಂದು ಹಿಂದಿನ ಬಾಗಿಲು ಇತ್ತು 

ನಡುವೆ ಒಂದೆಡೆ ಬಾಗಿಲು ಹಾಕಿ ಮುಚ್ಚಿದರೆ ಹಾಲು ಮತ್ತು ಒಂದು ರೂಮು ,ಒಂದು ಡೈನಿಂಗ್ ಹಾಲ್ ಕಿಚನ್ ಮತ್ತು ರೂಮು,ಬಾತ್ ರೂಮು  ಬೇರೆ ಮಾಡುವ ಹಾಗೆ ಇತ್ತು.ನಾವು ಹಾಗೆ ಮಾಡಿ ಎದುರಿನ ಭಾಗ ಓದುವ ಹುಡುಗರಿಗೆ ಬಾಡಿಗೆಗೆ ಕೊಟ್ಟೆವು.


ಈ ಮನೆ ತಗೊಳ್ಳುವಾಗಲೇ ಇದನ್ನು ಎರಡು ಭಾಗ ಮಾಡಿ ಬಾಡಿಗೆ ಕೊಡಬಹುದು ಎಂದು ಯೋಚಿಸಿಯೇ ತಗೊಂಡಿದ್ದೆವು.

ಈ ಮನೆ ತಗೊಂಡಾಗ ಇಷ್ಟು ದೊಡ್ಡ ಮನೆಯ ಅಗತ್ಯ ಇರಲಿಲ್ಲ ಎಂದು ಕೊಂಕಾಡಿದ ನೆಂಟರೂ ಇದ್ದರು.


ಅವರು ನಮ್ಮ ಈಗಿನ ಮನೆ ನೋಡಿದರೆ ಏನನ್ನುತ್ತಿದ್ದರೊ ಗೊತ್ತಿಲ್ಲ.ಅವರಿನ್ನು ನೋಡಿಲ್ಲ.


ನಮ್ಮನ್ನು ಯಾವುದಕ್ಕು ಆಗದವರೆಂದುಕೊಂಡಿದ್ದರೋ ಏನೋ ಗೊತ್ತಿಲ್ಲ.

ಒಮ್ಮೆ ಮಾತಿನ ನಡುವೆ ನಾದಿನಿ ಕೈಯಲ್ಲಿ ಸಣ್ಣ ಪೋರ್ಟೆಬಲ್ ಟಿವಿಯನ್ನು ತೋರಿಸಿ ಸಣ್ಣ ಟಿವಿ ಕೂಡ ಇದೆ ಕಡಿಮೆಗೆ ಸಿಗುತ್ತದೆ ಎಂದು ಸಲಹೆ ನೀಡಿದ್ದಳು.ನಮಗೆ ದೊಡ್ಡ ಟಿವಿ ಖರೀದಿಸಲು ಸಾದ್ಯವಾಗಲಾರದು ಎಂದು ಕೊಂಡಿದ್ದರೋ ಏನೊ‌


ಇರಲಿ

ವಾಸ್ತು ದೋಷ ಇದೆಯೋ ಇಲ್ಲವೋ ಗೊತ್ತಿಲ್ಲ..ನಮ್ಮ ಅರಿವಿಗೆಟುಕದ ಅನೇಕ ವಿಚಾರಗಳಿರುತ್ತದೆ.ಇವನ್ನೆಲ್ಲ ಇದೆಯೋ ಇಲ್ಲವೊ ಎಂದು ಪರೀಕ್ಷಿಸುವ ಜಿದ್ದು ನಮಗಿಲ್ಲ.ನಮ್ಮ ಬದುಕು ಪ್ರಯೋಗ ಶಾಲೆಯಲ್ಲ.ಹಾಗಾಗಿ ನಾವು ಹಿಂದಿನ ಉತ್ತರ ದಿಕ್ಕಿನ ಬಾಗಿಲಿನಿಂದ ಓಡಾಡಿದೆವು.


ನಂತರ ಕಾಕತಾಳೀಯವೋ ಎಂಬಂತೆ  ನಾವು ಸುಧಾರಿಸಿದೆವು.

ಆದರೆ ಅ ಅಪಾರ್ಟ್ ಮೆಂಟು ಕಟ್ಟಿಸಿ ಮಾರಿದವರು   ಬಹಳ ಕಳಪೆ ಮಾಡಿ ದ್ರೋಹ ಮಾಡಿದ್ದರು.( ಈ ಬಗ್ಗೆ ದೊಡ್ಡ ಕಥೆಯೇ ಇದೆ.ಜನ್ನೊಂದಿನ ತಿಳಿಸುವೆ ) 


ನೆಲಕ್ಕೆ ಬಿಳಿಯ ಬಣ್ಣದ ಮೊಸಾಯಿಕ್ ಹಾಸಿದ್ದರು.ಅದರ ಅಡಿಯಿಂದ ನೀರೆಳೆದು ಅಥವಾ ಇನ್ನೇನೋ ಕಾರಣಕ್ಕೆ ಕಪ್ಪು ಕಲೆ ಹರಡಿ ಕೊಳಕು ಕಾಣುತ್ತಿತ್ತು.


 ಆ ಮನೆಯ ಕರೆಂಟ್ ಸ್ವಿಚ್ ಗಳೆಡೆಯಿಂದ ಒರಳೆ / ಗೆದ್ದಲು ಬರಲು ಶುರು ಆಯಿತು.ಹಾಗಾಗಿ ಅದನ್ನು ನಾವು ತಗೊಂಡ ಬೆಲೆಗೆ ಮಾರಾಟ ಮಾಡಿದ್ದೆವು.( ಆದರೆ ಅಷ್ಟು ಸಮಯ ನಮಗೆ ಬಾಡಿಗೆ ಬಂದದ್ದರಿಮದ ಒಟ್ಟಾರೆರೆಯಾಗಿ ಲೆಕ್ಕ ಹಾಕುವಾಗ ಲಾಭವೇ ಅಗಿತ್ತು )ಇರುವ ವಿಚಾರವನ್ನು ನಾವು ಮುಚ್ಚಿಟ್ಟಿರಲಿಲ್ಲ.ಅವರಿಗೆ ವಾಸ್ತು ಬಗ್ಗೆ ನಂಬಿಕೆ ಇರಲಿಲ್ಲ.

ಮೊಸಾಯಿಕ್ ಮೇಲೆ ಟೈಲ್ಸ್ ಅತವಾ ಗ್ರಾನೈಟ್ ಹಾಸಿ ನೆಲದ ಕಲೆಯ ಸಮಸ್ಯೆಯನ್ನು ಬಗೆಹರಿಸಬಹುದೆಂದು ಕಡಿಮೆ ಬೆಲೆಗೆ ಸಿಕ್ಕ ಮನೆಯನ್ನು  ಅವರು ಖರೀದಿಸಿದ್ದರು.


ಆದರೆ ಅವರು ಕೂಡಾ ಅದನ್ನು ಬೇರೆಯವರಿಗೆ ಮಾರಾಟ ಮಾಡಿದರು.ಅವರ ಕೈಯಿಂದ ತಗೊಂಡವರು ಮತ್ತೆ ಮಾರಾಟ ಮಾಡಿದ್ದರು.ಯಾಕೆಂದು ಗೊತ್ತಿಲ್ಲ.


ಆಗ ತಗೊಂಡವರ ಮಗಳ ಗಂಡ ಅಕ್ಸಿಡೆಂಟ್ ನಲ್ಲಿ ತೀರಿ ಹೋದರು..


ಆ ಮನೆಯ ದಕ್ಷಿಣ ಬಾಗಿಲಿಗೆ ಏನು ದೋಷವೋ ಗೊತ್ತಿಲ್ಲ.

ಆದರೆ ನಮ್ಮ‌ಮನೆಗೆ ಸೇರಿದ ಇನ್ನೊಂದು ಮನೆ ಇದೆ.ಅದು ದಕ್ಷಿಣ ಬಾಗಿಲಿನ ಮನೆಯಲ್ಲ.

ಅಲ್ಲಿ ಕೂಡಾ ದುರಂತಗಳ ಸರಮಾಲೆಯೇ ನಡೆದಿದೆ.

ಅದನ್ನು ಮೊದಲು ತಗೊಂಡವರು ಬೇರೊಬ್ಬರಿಗೆ ಮಾರಾಟ ಮಾಡಿದ್ದರು.ಅಲ್ಲಿ ತಗೊಂಡವರ ವಯಸ್ಸಾದ ತಂದೆ ತಾಯಿ ಇದ್ದರು .ಅವರ ಇಬ್ಬರು ಮಕ್ಕಳು ಒಬ್ಬರಾದ ನಂತರ ಇನ್ನೊಬ್ಬರು ಸಣ್ಣ ವಯಸ್ಸಿನಲ್ಲಿಯೇ ಈ ವೃದ್ದ ತಂದೆ ತಾಯಿಯರ ಕಣ್ಣೆದುರೇ ಸಾವನ್ನಪ್ಪಿದ್ದರು.

.ಇಷ್ಟೆಲ್ಲ ನೋಡಿದ ಮೇಲೂ ವಾಸ್ತುವನ್ನು ತೀರಾ ಅಲ್ಲಗಳೆಯುವುದು ಹೇಗೆ ಅಲ್ವಾ ?

ಅದರೆ ನಮ್ಮ ಮನೆಯ ಅರ್ಧ ಭಾಗದಲ್ಲಿ  ಬಾಡಿಗೆಗೆ ಇದ್ದ ಹುಡುಗರಿಗೆ ಯಾವುದೇ ಸಮಸ್ಯೆ ಬಂದಿರಲಿಲ್ಲ .

ಅವರ ನಂತರ ಒಂದು  ದಂಪತಿಗಳು ಒಂದು ವರ್ಷ ಇದ್ದರು.ಅವರಿಗೂ ಏನೂ ಸಮಸ್ಯೆ ಆಗಲಿಲ್ಲ


ಹಾಗಾಗಿ ವಾಸ್ತುದೋಷ ಎಂಬುದನ್ನು ಹೇಗೆ ನಂಬುದು ? ಏನೇ ಅದರೂ ವಿಷ ಪರೀಕ್ಷೆ ಯಾಕೆ ? ವಾಸ್ತು ಪ್ರಕಾರ ಕಟ್ಟಿಸಿದರೆ ಸಮಸ್ಯೆ ಇಲ್ಲ ಹಾಗಾಗಿ ನಾವು ಈಗಿನ ಮನೆಯನ್ನು ವಾಸ್ತು ಪ್ರಕಾರ ಕಟ್ಟಿಸಿದ್ದೇವೆ .

ನಮಗೆ ವಾಸ್ತುವುನ ಬಗ್ಗೆ ಸಲಹೆ ಕೊಟ್ಟವರು ನೆಲಮಂಗಲ ಕಾಲೇಜಿನ ಹಿರಿಯ ಸಹೊದ್ಯೋಗಿ ಪ್ರಭಾಕರ ಸರ್.

ಇದು ಪಶ್ಚಿಮದಿಂದ ಪೂರ್ವಕ್ಕೆ ತಗ್ಗಾಗಿರುವ ,ಉತ್ತರದಿಮದ ದಕ್ಷಿಣಕ್ಕೆ ನೀರು ಹರಿದು ಹೋಗುವ ಸೈಟ್.ಬಹಳ ಅದೃಷ್ಟ ತರುತ್ತದೆ.ಇದನ್ನು ಎಂದಿಗೂ ಮಾರಾಟಮಾಡಬೇಡಿ ಎಂದೂ ಅವರು ಹಿತನುಡಿದಿದ್ದರು.

ನಾವು ಈ ಜಾಗವನ್ನು ಮಾರಾಟ ಮಾಡಿ ನೆಲಮಂಗಲ ಸಮೀಪ ಜಾಗ ಕೊಂಡು ಮನೆ ಕಟ್ಟಿಸುವ ಬಗ್ಗೆ ಅಲೋಚಿಸುತ್ತಿದ್ದೆವು.ಈ ಸಮಯದಲ್ಲಿ ನಮ್ಮ ಸೈಟಿನ ವಾಸ್ತುವನ್ನು ನೋಡಿ ಮಾರಾಟ ಮಾಡಬೇಡಿ,ಕೆಳಗೆ ಕಮರ್ಷಿಯಲ್ ಮಾಡಿ ಮೇಲ್ಭಾಗ ಮನೆ ಕಟ್ಟಲು ಪ್ರಭಾಕರ ಸರ್ ತಿಳಿಸಿದ್ದರು.

ಹಾಗೆ ಅವರ ಸಲಹೆಯಂತೆ ವಾಸ್ತುವಿಗೂ ಧಕ್ಕೆ ಆಗದಂತೆ ನಾನೇ ಪ್ಲಾನ್ ಹಾಕಿ ಅದಕ್ಕನುಗುಣವಾಗಿ ಕಟ್ಟಿಸಿದೆವು..

ವಾಸ್ತುವೋ,ದೇವರ ದಯವೋ ಗೊತ್ತಿಲ್ಲ ಈ ಸೈಟಿನಲ್ಲಿ 2003 ರಲ್ಲಿ ನಾವು ಮಂಗಳೂರಿನಲ್ಲಿ ಇದ್ದಾಗಲೇ ಮನೆ ಕಟ್ಟದಿದ್ದರೆ ಜಾಗ ಹೋಗುತ್ತದೆ ಎಂದು ಸಣ್ಣದೊಂದು ಎರಡು ಕೊಠಡಿಯ ಮನೆ ಕಟ್ಟಿದ್ದೆವು.ಅದಕ್ಕೆ ಎರಡು  ಬಾಗಿಲು ಗಳಿದ್ದವು.ಒಂದು ಉತ್ತರ ದಿಕ್ಕಿಗೆ ,ಮುಖ್ಯ ಬಾಗಿಲು ಪೂರ್ವ - ದಕ್ಷಿಣ ದಿಕ್ಕಿನಲ್ಲಿತ್ತು‌

ಆ ಮನೆಯನ್ನು ಕೆಡವದೆ ಸುತ್ತ ಪಿಲ್ಲರ್ ಹಾಕಿ ಎತ್ತರಿಸಿ  ಈಗಿನ ಮನೆ ಕಟ್ಟಿದೆವು.ಆ ಮನೆಯ  ಪೂರ್ವ ಬಾಗಿಲನ್ನು ತೆಗೆದು ಗೋಡೆ ಹಾಕಿ ಉತ್ತರದ ಬಾಗಿಲನ್ನು ಪ್ರವೇಶ ದ್ವಾರ ಮಾಡಿದೆವು.

 ಈ ಮನೆಗೆ ಬಂದ  ನಂತರ ನಮಗೆ  ಯಾವುದಕ್ಕೂ  ಕೊರತೆ  ಕಾಡಿಲ್ಲ..

ಕೊನೆ ತನಕ ದೇವರು ಇದೇ ರೀತಿ ನಡೆಸಿದರೆ ಸಾಕು ಎಂಬ ಪ್ರಾರ್ಥನೆ ನಮ್ಮದು‌.

Saturday 26 December 2020

ಇದನ್ನು ಕಾಕತಾಳೀಯವೆಂದು ಹೇಗೆ ಒಪ್ಪುದು ?

 

ಇದನ್ನು ಕಾಕತಾಳೀಯವೆಂದು ಹೇಗೆ ಒಪ್ಪುದು ?

ನನಗೆ ಎಷ್ಟೋ ಸಲ ಆಶ್ಚರ್ಯ ಆಗುತ್ತದೆ ಅಷ್ಟೊಂದು ಸಣ್ಣ ಹರಳು( ಕಲ್ಲಿನ ತುಂಡು?/) ಹೇಗೆ ಪರಿಣಾಮ ಬೀರುತ್ತದೆ ಎಂದು..

2001 ರಲ್ಲಿ ನನಗೆ ಇದರ ಮಿರಾಕಲ್ ನ ಅನುಭವಾಯಿತು
ನನಗೆ 1998 - 2001 ರ ವರೆಗೆ ಅಗಾಗ ಗಂಟಲು ಸೋಂಕಿನ ನ ಸಮಸ್ಯೆತೀವ್ರವಾಗಿ ಕಾಡುತ್ತಿತ್ತು.

ಒಮ್ಮೆ ಆಂಟಿ ಬಯಾಟಿಕ್ಸ್ ತಗೊಂಡು ಕೋರ್ಸ್ ಮುಗಿಸಿ ನಿಲ್ಲಿಸಿ ಹತ್ತು ಹದಿನೈದು ದಿನಕ್ಕೆ ಮತ್ತೆ ಗಂಟಲು ನೋವು..
ಡಾ.ವಿಷ್ಣು ಕಣಿಯೂರು,ಡಾ.ಕಿಶೋರ್ ಕುಮಾರ್ ಶೆಟ್ಟಿ ಮೊದಲಾದ ಇ ಎನ್ ಟಿ ತಜ್ಞರ ಬಳಿ ಚಿಕಿತ್ಸೆ ಪಡೆದೆ

ಕೊನೆಗೆ ಅದು ದ್ವನಿ ಪೆಟ್ಟಿಗೆಗೆ ಮತ್ತೆ ಮತ್ತೆ ಸೋಂಕು  ಆಗುತ್ತಿರುವುದು..ಅದಕ್ಕಾಗಿ ಏನೊ ಸರ್ಜರಿ / ಲೇಸರ್ ಚಿಕಿತ್ಸೆ  ಏನೊ ಹೇಳಿದರು.ಇಲ್ಲಾಂದರೆ ಮಲ್ಟಿಪಲ್ ರೆಸಿಸ್ಟೆನ್ಸ್ ಡೆವಲಪ್ ಅಗಬಹುದು ಇತ್ಯಾದಿ ಎಂತದೊ ಆಗುತ್ತದೆ ಎಂದರು
ಅವರುಗಳು ಹೇಳಿದ್ದು ಪೂರ್ತಿ ಯಾಗಿ ನನಗೆ ಅರ್ಥವಾಗಲಿಲ್ಲ

ಆದರೆ ಧ್ವನಿ‌ ಹೋಗ ಬಹುದು ಎಂದಿದ್ದು ಮಾತ್ರ ಅರ್ಥವಾಗಿತ್ತು.

ಧ್ವನಿ‌ ಇಲ್ಲದೇ ನಾನು ಬದುಕುದು ಹೇಗೆ ? ನಾನು ಟೀಚರ್..ಅದು ಬಿಟ್ಟರೆ ಯಾವ ಕೆಲಸವೂ ಗೊತ್ತಿಲ್ಲ
ಹಾಗಾಗಿ ಆ ಚಿಕಿತ್ಸೆಗೆ ನಾನು ಒಪ್ಪಿರಲಿಲ್ಲ.

ಆ ಸಮಯದಲ್ಲಿ ನನ್ನ  ಗುರುಗಳು ನಮ್ಮ ಮನೆಗೆ ಬಂದರು
ನನಗೆ ಗಂಟಲು ನೋವಿನಲ್ಲಿ ಮಾತನಾಡಲು ಆಗುತ್ತಿರಲಿಲ್ಲ..ಚಳಿ ಜ್ವರ ಬೇರೆ
ಆಗ ಅವರು ನನ್ನ ಜಾತಕ ಕೇಳಿದರು ,
ಬರೆದು ಕೊಟ್ಟೆ ( ನನ್ನ ಜಾತಕ ನೆನಪಿತ್ತು)
ಅವರು ನೋಡಿ ನೀನೆಂಥ  ಕಲ್ತದ್ದು..ಪುಸ್ತಕದ ಬದನೆ ಕಾಯಿಯಾ ? ಎಂದು ಬೈದು  ಮುತ್ತಿನ‌ ಓಲೆ ಮಾಡಿ  ಧರಿಸಲು ಹೇಳಿದರು

ಅದೂ ಒಂದು ನೋಡುವ ಎಂದು ಬಹಳ ನಂಬಿಗಸ್ಥರಾದ  ಉಮೇಶ್ ಅಚಾರ್ ಅವರಿಗೆ  ಹೇಳಿ‌ ಮುತ್ತಿನೋಲೆ ಮಾಡಿಸಿ ಹಾಕಿದೆ

ಅದಾಗಿ ಎರಡು ದಿನಕ್ಕೆ ಕೇರಳ ಸ್ಟ್ರೈಕಿನ ಕಾರಣಕ್ಕೆ ನನ್ನಸಣ್ಣ ತಮ್ಮ  ಸಣ್ಣ ತಮ್ಮ ಎಂ ಎಸ್ ಡಬ್ಲು ಪರೀಕ್ಷೆ ಇರುವ ಕಾರಣ ನಮ್ಮ ಮನೆಗೆ ಬಂದ
:ನನ್ನ ಗಂಟಲು ನೋವು  ನೋಡಿ ಸಿಡಾಲ್ ಅಂತ ಒಂದು ಮಾತ್ರೆ ಇದೆ ಅದನ್ನು ತಗೊಂಡರೆ ಒಮ್ಮೆಗೆ ಕಡಿಮೆ ಆಗುತ್ತದೆ ಎಂದ
ಯಾರೇನು ಹೇಳಿದರೂ ತಗೊಳ್ಳುವ ಸ್ಥಿತಿಗೆ ನಾನು ತಲುಪಿದ್ದೆ
ಪ್ರಸಾದ್ ಗೆ ಪೋನ್ ಮಾಡಿ ಸಿಡಾಲ್ ಎರಡು ಮಾತ್ರೆ ತರಲು ಹೇಳಿದೆ.ಅವರಿಗೆ ಸಿಡಾಲ್ ಅಂತ ಕೇಳಿಸಿ ಊರಿಡೀ ಹುಡುಕಾಡಿ ಕೊನೆಗೆ ಗಣೇಶ್ ಮೆಡಿಕಲ್ಸ್ ನಿಂದ ತಂದರು
ಅದರಲ್ಲಿ zydone ಎಂದು ಹೆಸರಿತ್ತು
ನನಗೆ ಸಿಟ್ಟು ಬಂತು
ಮೊದಲೇ ಗಂಟಲು ನೊವಿನಲ್ಲಿ ಊಟ ಕೂಡ ಮಾಡಲಾಗುತ್ತಿರಲಿಲ್ಲ.
ಒಂದು ಲೋಟ ಹಾಲು ಕುಡಿದು"ಎಂತ ಬೇಕಾದರೂ ಆಗಲಿ "ಎಂದು ಆ ಮಾತ್ರೆ ತಗೊಂಡು ಮಲಗಿದೆ
ಗಂಟಲು ನೋವಿಗೆ ಯಾವಾಗಲು ನೆರಕುತ್ತಿದ್ದವಳು ಅ ದಿನ ಚಂದ ನಿದ್ರೆ
ಪ್ರಸಾದ್ ಗೆ ಭಯ
ಅದು ಎಂತ ಮಾತ್ರೆಯೋ ಏನೊ..ಕಿಡ್ನಿದೋ ಹಾರ್ಟಿದೋ ಅಗಿದ್ದರೆ ಎಂದು. ಅವರು ಆಗಾಗ ಎದ್ದು ನನ್ನ ಮೂಗಿನಹತ್ರಿರ ಬೆರಳು ಹಿಡಿಯುದು..😀
ಉಸಿರಾಡುವಳೋ ಇಲ್ಲವೊ ಎಂಬ ಆತಂಕ ಅವರಿಗೆ.
"ಎಂತ ಮಲಗಿ ಸಾಯಲು ಬಿಡುದಿಲ್ಲ 'ಎಂದು ಅವರ ಕೈಗೆ ಬಡಿದು ತಿರುಗಿ ಮಲಗಿದ್ದೆ‌
ಮರುದಿನ ಏಳುವಾಗ ಅರ್ಧಾಂಶ ನೋವು ಕಡಿಮೆ ಆಗಿತ್ತು.
ಮರುದಿನ ಇನ್ನೊಂದು ಮಾತ್ರೆ ತಿಂದೆ
ಅದರ ಮರುದಿನಕ್ಕಾಗುವಾಗ ಪೂರ್ತಿಯಾಗಿ ನೋವು ಗುಣ ಆಯ್ತು
ಅದಾಗಿ ಒಂದೆರಡು ತಿಂಗಳಾದರೂ ನೋವು ಬರಲಿಲ್ಲ
ಹಾಗಾದರೆ ಅ ಮಾತ್ರೆ ನಾಲ್ಕು  ತಂದಿಡುವ .ಮುಂದೆ ಗಂಟಲು ನೋವು ಬಂದರೆ ಇರಲಿ ಎಂದು ಪ್ರಸಾದ್ ಗೆ ಹೇಳಿದೆ
ಪ್ರಸಾದ್ ಅದೇ ಮೆಡಿಕಲ್ ಶಾಪಿಗೆ ಹೋಗಿ ಕೇಳಿದರು ಜಿಡಾಲ್  ಕೊಡಿ ಎಂದು
ಅಂತಹ ಮಾತ್ರೆಯೇ ಇಲ್ಲ ಎಂದರು
ಆಗ "ಎರಡು ತಿಂಗಳ ಮೊದಲು ತಗೊಂಡು ಹೋಗಿದ್ದೇನೆ " ಎಂದಾಗ ಕಂಪ್ಯೂಟರ್ ನಲ್ಲಿ ಚೆಕ್ ಮಾಡಿ ಕೂಡ ಅಂತಹದ್ದು ನಮ್ಮಮೆಡಿಕಲ್ ಶಾಪಿಗೆ ಬಂದೇ ಇಲ್ಲ ಎಂದರಂತೆ
ಆಗ  ಇದ್ದ ಕೆಲಸದ ಹುಡುಗ ಬಿಟ್ಟು ಹೋಗಿದ್ದ.ಹಾಗಾಗಿ
ಯಾರಲ್ಲಿ‌ ಕೇಳುದು ? ಸುಮ್ಮನಾದೆವು
ಅಂದು ಗುಣವಾದ ಗಂಟಲು ನೋವು ಇಂದಿಗೂ ಇಲ್ಲ ಮಾತ್ರವಲ್ಲ ನಮಗೆ ಕೆಲಸ ಮನೆ ಬದುಕು ಎಲ್ಲ  ಆಗಿ ನಾವು ಮೇಲೆ ಬಿದ್ದೆವು.
ಇದು ಕೇವಲ ಕಾಕತಾಳೀಯ ಎಂದು ಹೇಗೆ ಒಪ್ಪುದು ? ಅಷ್ಟರ ತನಕ ಇದ್ದ ನೋವು ಮಾಯವಾದದ್ದು ಹೇಗೆ? ತನ್ನಿಂತಾನಾಗಿಯೇ ದೇಹದಲ್ಲಿ ಇದ್ದಕ್ಕಿದ್ದಂತೆ ರೋಗ ನಿರೋಧಕ ಶಕ್ತಿ ಉಂಟಾಯಿತಾ?
ದೇವರೊಬ್ಬನೇ ಬಲ್ಲ.

Thursday 24 December 2020

ಮುಖಬದಲಾಯಿಸುದು ಹೇಗೆ

 ನನ್ನ ಮುಖವನ್ನು ಹೇಗೆ ಬದಲಾಯಿಸಲಿ ?


ಇಂದು ಬೆಳಗ್ಗೆ ನೆಲಮಂಗಲಕ್ಕೆ ಹೋಗುವಾಗ ಓರ್ವ ಸಾಮಾಜಿಕ ಕಾರ್ಯಕರ್ತೆ ಶೋಭಾ ಎನ್ನುವ ಹಿರಿಯ ಮಹಿಳೆಯ  ಪರಿಚಯ ಆಯಿತು .ಮಾತಿನ ನಡುವೆ ಎಲ್ಲಿ ಕೆಲಸ ಮಾಡುತಿದ್ದೀರಿ ಎಂದು ಕೇಳಿದರು .ನೆಲಮಂಗಲ ಪಿಯು ಕಾಲೇಜ್ ನಲ್ಲಿ ಎಂದು ಹೇಳಿದೆ .

ಮತ್ತೆ ಅವರು ಏನು ಓದಿದ್ದೀರಿ ಎಂದು ಕೇಳಿದರು ,ನಾನು ಡಾಕ್ಟರೇಟ್ ಎಂದು ಹೇಳಿದೆ .ಆಗ ಅವರು ಸ್ವಲ್ಪ ಗೊಂದಲಕ್ಕೆ ಒಳಗಾಗಿ ಪುನಃ ಏನು ಓದಿದ್ದೀರಿ ಎಂದು ಕೇಳಿದರು ಆಗ ನಾನು ಮತ್ತೆ ಎಂ ಎ ಪಿ ಎಚ್ ಡಿ ಎಂದು ಹೇಳಿದೆ .ಆಗ ಅವರಿಗೆ ಅದನ್ನು ನಂಬಲು ಸ್ವಲ್ಪ ಕಷ್ಟ ಆದಂತೆ ಅನಿಸಿತು .ಮತ್ತೆ ಪುನಃ ನೀವು ಎಲ್ಲಿ ಏನು ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದರು .ಮತ್ತೆ ಪುನಃ ನಾನು ನೆಲಮಂಗಲ ಪಿ ಯು ಕಾಲೇಜ್  ಕನ್ನಡ ಉಪನ್ಯಾಸಕಿ ಎಂದು ಹೇಳಿದೆ .

ಆಗ ಅವರು ಅಚ್ಚರಿಯಿಂದ ನೀವು ಲೆಕ್ಚರರ್ ಆ ?ಎಂದು ಕೇಳಿ ನಿಮ್ಮನ್ನು ನೋಡುವಾಗ ಹಾಗೆ ಅನಿಸುದಿಲ್ಲ ನೀವು ಅಷ್ಟು ಓದಿದ್ದೀರಿ ಎಂದು ಗೊತ್ತಾಗುದಿಲ್ಲ ಎಂದು ಹೇಳಿದರು ಅನಂತರ ನಾನೇನು ಭಾವಿಸುತ್ತೇನೋ ಎಂದು ಅವರಿಗೆ ಅನ್ನಿಸಿರಬೇಕು ಮತ್ತೆ ಪುನಃ ನೀವು ತುಂಬಾ ಸಿಂಪಲ್ ಆಗಿದ್ಡೀರಲ್ಲ ಅದಕ್ಕೆ ನೀವು ಲೆಕ್ಚರರ್ ಎಂದು ಗೊತ್ತಾಗಲಿಲ್ಲ ತಪ್ಪು ತಿಳಿಯಬೇಡಿ ಎಂದು ಹೇಳಿದರು 


ಇಂಥ ಅನುಭವ ನನಗೆ ಈ ಹಿಂದೆ ಕೂಡ ಬೇರೆ ಬೇರೆ ರೀತಿಯಲ್ಲಿ ಆಗಿದೆ .ಕಳೆದ ವರ್ಷ ಸರ್ಕಾರದ ಆದೇಶದ ಮೇರೆಗೆ ನಾವು ಸುಮಾರು ಸಾವಿರದ ಮುನ್ನೂರು ಪಿ ಯು ಕಾಲೇಜ್ ಉಪನ್ಯಾಸಕರು ಬಿಎಡ್ ಓದಬೇಕಾಗಿ ಬಂತು .ಹಾಗಾಗಿ ನಾನು ಕೆಂಗೇರಿ ಯ ಎಸ್  ಜೆ ಬಿ  ಬಿಎಡ್ ಕಾಲೇಜ್ ಗೆ ಸೇರಿದೆ .

ಅಲ್ಲಿ ಸೇರಿದ ಕೆಲ ದಿನಗಳ ನಂತರ ನನ್ನದೊಂದು ಶಿಕ್ಷಣ ಸಂಬಂಧಿ ಲೇಖನ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಯಿತು .ಅದರಲ್ಲಿ ನನ್ನ ಫೋಟೋ ಮತ್ತು ಹೆಸರು ಡಾ.ಲಕ್ಷ್ಮೀ ಜಿ ಪ್ರಸಾದ ಎಂದು ಇತ್ತು ಕೂಡ .


ಆ ಲೇಖನ ಪ್ರಕಟವಾದ ದಿನ ನಾನು ಕಾಲೇಜ್ ಗೆ ಹೋದಾಗ ಅಲ್ಲಿ ಅನೇಕ ವಿದ್ಯಾರ್ಥಿಗಳು ಕನ್ನಡ ಪ್ರಭ ಪತ್ರಿಕೆ ಓದುತ್ತಾ ಇದ್ದ್ದರು .

ನನ್ನ ಪ್ರಕಟಿತ ಲೇಖನವನ್ನೇ ಓದುತ್ತಾ ಇದ್ದರು ಕೆಲವರು ಅದನ್ನು ನೋಡಿ ಖುಷಿ ಆಗಿ ಓಹ್ ನನ್ನ ಲೇಖನ ಓದುತ್ತಾ ಇದ್ದೀರಾ ?ಹೇಗಿದೆ ಎಂದು ಕೇಳಿದೆ 

ಆಗ ಅಲ್ಲಿನ ವಿದ್ಯಾರ್ಥಿನಿ ಒಬ್ಬಳು ನಿಮ್ಮ ಲೇಖನವಾ ?ಯಾವುದು ?ಎಲ್ಲಿದೆ ಎಂದು ಕೇಳಿದಳು .ಆಗ ನಾನು ನೀವುಗಳು ಓದುತ್ತಾ ಇರುವ ಲೇಖನ ನನ್ನದು ಎಂದು ಹೇಳಿದೆ 

ಆಗ ಅಲ್ಲಿದ್ದ ವಿದ್ಯಾರ್ಥಿಗಳು ಲೇಖನದಲ್ಲಿನ ನನ್ನ ಫೋಟೋ ಮತ್ತು ನನ್ನ ಮುಖ ವನ್ನು ಮಿಕ ಮಿಕ ನೋಡಿದರು 

ಆನಂತರ ಸಂಶಯದಿಂದ ಲೇಖಕಿ ಹೆಸರು  ಲಕ್ಷ್ಮೀ ಜಿ ಪ್ರಸಾದ್ ಎಂದು ಇದೆಯಲ್ಲ ಎಂದು ಕೇಳಿದರು .ಅವರ ಸಂಶಯ ಸರಿಯಾದದ್ದೇ ಯಾಕೆಂದರೆ ದಾಖಲೆಗಳಲ್ಲಿ ನನ್ನ ಹೆಸರು ಲಕ್ಷ್ಮೀ ವಿ ಎಂದೇ ಇರುವುದು ,ಆಗ ನಾನು ಲಕ್ಷ್ಮೀ ಜಿ ಪ್ರಸಾದ್ ಎಂಬುದು ನನ್ನ ಪೆನ್ ನೇಮ್ ಎಂದು ಹೇಳಿದೆ .


ಆಗ ಅಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಅಲ್ಲಿ ಡಾ.ಎಂದು ಇದೆಯಲ್ಲ ಎಂದು ಹೇಳಿದ .ಹೌದು ನಾನು ಪಿಎಚ್ ಡಿ ಪದವಿ ಪಡೆದಿದ್ದೇನೆ ಹಾಗಾಗಿ ಡಾ.ಎಂದು ಹಾಕಿಕೊಳ್ಳುತ್ತೇನೆ ಎಂದು ಹೇಳಿದೆ .


ಅಷ್ಟರಲ್ಲಿ ಅಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಅಲ್ಲಿರುವ ಫೋಟೋ ಬೇರೆ ಉಂಟಲ್ಲ ಹೇಳಿದ !ಹೌದು ನನ್ನ ಫೋಟೋ ಅದೇ ರೀತಿ ಬರುವುದು ಎಂದು ಸ್ಪಷ್ತೀಕರಿಸಿದೆ .

ಯಾಕೋ ಏನೋ ಅಲ್ಲಿದ್ದ 10 -20 ಬಿಎಡ ವಿದ್ಯಾರ್ಥಿಗಳಿಗೆ ನಾನು ಆ ಲೇಖನ ಬರೆದದ್ದು ಎಂದು ನಂಬಿಕೆ ಬರಲಿಲ್ಲ ಎಂದು ನನಗೆ ಅರ್ಥವಾಯಿತು .

ಅಷ್ಟರಲ್ಲಿ ನನ್ನ ಹಾಗೆ ಸರ್ಕಾರಿ ಪಿ ಯು ಕಾಲೇಜ್ ಉಪನ್ಯಾಸಕರಾಗಿದ್ದು ಬಿ ಎಡ್ ಓದಲು ಬಂದಿದ್ದ ನಾಗರಾಜ್  ಅಷ್ಟು ಗೊತ್ತಾಗಲ್ವ ನಿಮಗೆ ಅದು ಲಕ್ಷ್ಮೀ ಮೇಡಂ ದೇ ಲೇಖನ ಎಂದು ಅಲ್ಲಿ ಸ್ಪಷ್ಟಪಡಿಸಿದರು .

ಅನಂತರ ಆ ವಿದ್ಯಾರ್ಥಿಗಳು ಅವರ ಮುಖ ನೋಡಿದ್ರೆ ಅವರು ಬರೀತಾರೆ ಅಂತ ಅನಿಸಲ್ಲ ಅಲ್ವ ?ಎಂದು ಮಾತಾಡಿಕೊಂಡರು ಎಂದು ನನಗೆ ತಿಳಿಯಿತು 


ಇದೇ ಕೊನೆ ನಾನು ಎಂದಿಗೂ ಯಾರು ನನ್ನ ಲೇಖನ ಓದುತ್ತಾ ಇದ್ದರೂ ಕೂಡ ಅದು ನನ್ನ ಲೇಖನ ಎಂದು ಹೇಳುವ ಅಧಿಕ ಪ್ರಸಂಗ ಮಾಡುದೇ ಇಲ್ಲ !

ಇಂಥ ಅನೇಕ ಅನುಭವಗಳು ನನಗೆ ಆಗಿವೆ 

ಯಾಕೆ ಹೀಗೆ ?ನನ್ನ ಮುಖದಲ್ಲಿ ಹಾಳು ಕಳೆ ಸುರಿಯುತ್ತಿದೆಯೇ ?ನನ್ನ ಮುಖವನ್ನು ಬದಲಾಯಿಸುದು ಹೇಗೆ ?ನನಗಂತೂ ಗೊತ್ತಾಗುತ್ತಿಲ್ಲಪ್ಪ ನಿಮಗೇನಾದರೂ ಗೊತ್ತಾದರೆ ತಿಳಿಸಿ pls


pls view my blog http://laxmipras.blogspot.com

ದೊಡ್ಡವರೆಲ್ಲ ಜಾಣರಲ್ಲ

 ನನ್ನ ಆತ್ಮ ಕಥೆ ಬೆಳೆಯುತ್ತಿದೆ..


ದೊಡ್ಡವರೆಲ್ಲ ಜಾಣರಲ್ಲ..ತಮ್ಮ ಸ್ನೇಹಿತರು ಸಹೋದ್ಯೋಗಿಗಳು ಏನು ಮಾಡಿದರೂ ಸರಿ..ಅದನ್ನು ಖಂಡಿಸಲು ತಯಾರಿಲ್ಲ..


ಈ ದೊಡ್ಡವರೆಲ್ಲ ಹೀಗೆಯಾ ? ನಾ.ದಾ ಶೆಟ್ಟಿಯವರ ಬಗ್ಗೆ ನನಗೆ ಅಪಾರ ಗೌರವ ಇದೆ.ಆದರೆ ಇಷ್ಟು ದಿನ ಏನು ಮಾಡುತ್ತಿದ್ದರು ಎಂಬುದು ನನ್ನ ಪ್ರಶ್ನೆ..ಯಾಕೋ ದೊಡ್ಡವರೆಲ್ಲ ಹೀಗೆಯೇ ಏನೋ ಎಂಬ ಕಹಿ ಭಾವ ಉಂಟಾಗಿದೆ ನನಗೆ..


ನಾ.ದಾ ಶೆಟ್ಟಿ ಯವರುಫೇಸ್ ಬುಕ್ನಲ್ಲಿ‌  ನನ್ನ ಮತ್ತು ಪವನಜ ಇಬ್ಬರ ಸ್ನೇಹಿತರು .


ಹಾಗಾಗಿ ನನ್ನ ಮತ್ತು ಪವನಜರ ವಾಲಿನಲ್ಲಿ ಹಾಕುವ ಎಲ್ಲಾ ಪೋಸ್ಟ್ ಗಳೂ ಇವರಿಗೆ ಸಿಗುತ್ತದೆ.ಇವರು ಫೇಸ್ ಬುಕ್  ನೋಡುತ್ತಾರೆ ಎಂಬುದಕ್ಕೆ ಈವತ್ತು ಪೇಸ್ ಬುಕ್ ನಲ್ಲಿ ಹಾಕಿದ ಯು ಟ್ಯೂಬ್ ಲಿಂಕ್ ಅನ್ನು ತೆರೆದು ಕೇಳಿ ಕಮೆಂಟ್ ಮಾಡಿದ್ದಾರೆ ಎಂಬುದು ಸಾಕ್ಷಿ ಆಗಿದೆ.


ಜುಲೈ 22 ರಿಂದ ಇಂದಿನವರೆಗೂ ಅನೇಕ ಬಾರಿ ನನ್ನ ಬರಹವನ್ನು ಯಥಾವತ್ ಕಾಪಿ ಮಾಡಿ ವಿಶ್ವನಾಥರು ವಿಕಿಪೀಡಿಯ ಕ್ಕೆ ಹಾಕಿದ ಬಗ್ಗೆ ಚರ್ಚೆ ನಡೆದಿದೆ .


ನಾನು ಅದು ನನ್ನ ಬರಹದ ಯಥಾವತ್ ಕಾಪಿ ಹಾಗಾಗಿ ಅವರದು ಕೃತಿ ಚೌರ್ಯ ಎಂಬುದಕ್ಕೆ ಸ್ಪಷ್ಟ ದಾಖಲೆಗಳನ್ನು ಕೊಟ್ಟಿದ್ದೇನೆ‌.


ಇಷ್ಟು ದಿನ ಸುಮ್ಮನಿದ್ದವರು ಈಗ ಇವರ ಹಳೆಯ ಸಹೋದ್ಯೋಗಿ ವಿಶ್ವನಾಥ ಬದಿಕಾನ  ಹಾಗೂ ಸ್ನೇಹಿತ ಪವನಜ ಮತ್ತವರ ಬೆಂಬಲಿಗರ ಮೇಲೆ ಬಲವಾದ ಕೇಸ್ ಆಗಿದೆ ಎಂದಾದ ಮೇಲೆ ಎರಡೂ ಕಡೆಯವರನ್ನು ಕೂಡಿಸಿ ಮಾತನಾಡಿಸಿದರೆ ಸತ್ಯ ಹೊರಗೆ ಬರುತ್ತಿತ್ತು ಎಂದು ನನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಕಮೆಂಟ್ ಮಾಡಿದ್ದಾರೆ..


ಇಷ್ಟು ದಿನ ಇವರೆಲ್ಲ ಏನು ಮಾಡುತ್ತಿದ್ದರು ? ನನ್ನ ಬರಹವನ್ನು ಕೃತಿ ಚೌರ್ಯ ಮಾಡಿದ್ದಲ್ಲದೆ, ಅದನ್ನು  ಆಕ್ಷೇಪ ಮಾಡಿದ ನನ್ನನ್ನು ಅವಹೇಳನ ಮಾಡಿದಾಗ ಏನು ಮಾಡುತ್ತಿದ್ದರು..? 


ಇವರುಗಳ ಸತ್ಯ ಪರೀಕ್ಷೆಗೆ ಹಾಜರಾಗಿ  ನನ್ನ ಬರಹ ಎಂದು ಸಾಬೀತು ಮಾಡುವ ಅಗತ್ಯ ನನಗಿಲ್ಲ...

ಮೊನ್ನೆ ನೋಡಿದರೆ ತನ್ನ ನಾಲ್ಕು ಸಾಲಿನ ಕವಿತೆಯನ್ನು ಯಾರೋ  ಕೃತಿ ಚೌರ್ಯ ಮಾಡಿದ್ದಾರೆ ಎಂದು ಆಕ್ಷೇಪ ಮಾಡಿದ ಡುಂಡಿರಾಜರು ತನ್ನ ಸ್ನೇಹಿತ ವಿಶ್ವನಾಥ ಬದಿಕಾನ ಮಾಡಿದ ನನ್ನ ಒಂದು ಸಾವಿರಕ್ಕಿಂತ ಹೆಚ್ಚಿನ ಸಂಶೋಧನಾ ಬರಹವನ್ನು ಯಥಾವತ್ ಕಾಪಿ ಮಾಡಿ ಕೃತಿ ಚೌರ್ಯ ಮಾಡಿದ್ದನ್ನು ,ಅದನ್ನು ಸಮರ್ಥನೆ ಮಾಡಿ ನನ್ನನ್ನು ನಿಂದಿಸಿದ ತನ್ನ ಸ್ನೇಹಿತ ಪವನಜರನ್ನು ಒಂದು ಮಾತಿನಲ್ಲಿ ಖಂಡಿಸಲು ತಯಾರಿಲ್ಲ.


ಈಗ ನೋಡಿದರೆ ನಾನು ತುಂಬಾ ಗೌರವ ಇರಿಸಿದ್ದ ನಾ ದಾ ಶೆಟ್ಟಿಯವರು ಹೀಗೆ ಕಮೆಂಟ್ ಮಾಡಿದ್ದಾರೆ..

ಇವರು ನನ್ನ ಮೂಲ ಬರಹವನ್ನು ಓದಿಲ್ಲವಂತೆ..ವಿಶ್ವನಾಥರು ಕದ್ದು ಹಾಕಿದ ವಿಕಿಪೀಡಿಯ ಬರಹವನ್ನು ಓದಿಲ್ಲ..ಇದ್ಯಾವುದೂ ಮಾಡದೇ ಇವರುಗಳ ಮಾತು ಕೇಳಿ  ತನ್ನ ಸ್ನೇಹಿತರ ಪರ ನಿಂತು ಜಾನಪದಕ್ಕೆ ಕಾಪಿ ರೈಟ್ ಇಲ್ಲ ಎಂಬ ವಿತ್ತಂಡ ಮಾಡಿದ್ದಾರೆ 


ದ್ವಂದ್ವ ನಿಲುವಿನ, ಮುಖ ನೋಡಿ ಮಣೆ ಹಾಕುವ ಈ ದೊಡ್ಡವರ ಸಹವಾಸವೇ ಆಗದಪ್ಪ..

ಇವರಿಬ್ಬರೂ ನನ್ನ ಆತ್ಮ ಕಥೆಯಲ್ಲಿ ಋಣಾತ್ಮಕ ಪಾತ್ರಗಳಾಗಿ ಬಂದ ಬಗ್ಗೆ ನನಗೆ ಖೇದವಿದೆ‌..

Nada Shetty

ನನಗೂ ಈ ಮಾತು ಬರೆಯಲು ಬಹಳ ಬೇಸರವಾಗುತ್ತಿದೆ..ಆದರೆ ನಿಮ್ಮಗಳ ಇಷ್ಟು ದಿನದ ಮೌನ,ಇಷ್ಟಾಗಿಯೂ ನನ್ನ ಬರಹದ ಬಗ್ಗೆ ಅಪನಂಬಿಕೆ ತೋರಿದ್ದು ನನ್ನನ್ನು ಇಷ್ಟು ಖಾರವಾಗಿ ಬರೆಸಿದೆ‌

ಕ್ಷಮಿಸಿ.


 ನನಗೆ ಸತ್ಯ ಪರೀಕ್ಷೆಯ ಅಗತ್ಯವಿಲ್ಲ‌.ಯಾಕೆಂದರೆ ಅದು ನನ್ನ ಬರಹ.ಅಪರೂಪದ ಇಷ್ಟರ ತನಕ ಎಲ್ಲೂ ಹೆಸರು ಕೂಡ ದಾಖಲಾಗದ ಜನಪದ ಕುಣಿತವಿದು.ತುಳು ಜನಪದ ಕುಣಿತಗಳ ಬಗ್ಗೆ ಅಧ್ಯಯನ ಮಾಡಿ ಎಂಫಿಲ್, ಪಿಎಚ್ ಡಿ ಪಡೆದ ವಿದ್ವಾಂಸರ ಪ್ರಬಂಧಗಳಲ್ಲಿ ಕೂಡ ಇದರ ಉಲ್ಲೇಖ ಇಲ್ಲ..ಇನ್ನೂ ಮಾಹಿತಿ ಎಲ್ಲಿಂದ ? 


ನನ್ನದು ಜಾನಪದ ಹಾಡಿನ ಸಂಗ್ರಹವಲ್ಲ..ಈ ಕುಣತದ ಕುರಿತಾದ ಬರಹವದು..ಈ ಹಾಡನ್ನು ಕುಣಿತವನ್ನು..ಅದನ್ನು ಊರೂರು ಅಲೆದು ಎಲ್ಲಿದೆ ಎಂದು ತಿಳಿದು ಅಲ್ಲಿ ಹೋಗಿ  ಹಾಡಿನ ಒಂದೊಂದು ಭಾಗವನ್ನು ಬೇರೆ ಬೇರೆ ಕಲಾವಿದರಿಂದ ಗೌರವ ಧನ ಕೊಟ್ಟು ಹಾಡಿಸಿ ರೆಕಾರ್ಡ್ ಮಾಡಿ ಲಿಪ್ಯಂತರ ಮಾಡಿ ಅನುವಾದಿಸಿ ವಿಶ್ಲೇಷಣೆ ಮಾಡಿ ಸಾಂಸ್ಕೃತಿಕ ಪದ ಕೋಶ ತಯಾರಿಸಿ  ಕುಣಿತದ ಬಗ್ಗೆ ಅಧ್ಯಯನ ಮಾಡಿ ಲೇಖನವಾಗಿ ಬರೆದು ಪ್ರಕಟಿಸಿದವಳು ನಾನು..


ಯಾರಿಗೋ ಕದ್ದು ತನ್ನ ಹೆಸರಿನಲ್ಲಿ ಹಾಕಿ ಮೆರೆಯಲು ಹಾಕಿದ್ದಲ್ಲ‌ ಅದು..ಹಾಗಾಗಿ ನನ್ನ ಬರಹಕ್ಕೆ ಕಾಪಿ ರೈಟ್ ಇಟ್ಟುಕೊಂಡಿದ್ದೇನೆ.


ಜನರ ಸಮುದಾಯದಲ್ಲಿ ಜನಜನಿತವಾಗಿರುವ ಸಾಮಾನ್ಯ ಜನಪದ ಹಾಡುಗಳಿಗೆ ಕಾಪಿ ರೈಟ್ ಇಲ್ಲ ..ಆದರೆ ಜನಪದ ಕುಣಿತಕ್ಕೆ ಸಂಬಂಧಿಸಿದ ಅಧ್ಯಯನಾತ್ಮಕ ಬರಹಕ್ಕೆ ಕಾಪಿ ರೈಟ್ ಇದೆ..


ನೀವು  ಜಾನಪದ ಬರಹಕ್ಕೆ ಕಾಪಿ ರೈಟ್ ಇಲ್ಲ ಎನ್ನುವುದಾದರೆ ನಿಮ್ಮ‌ ಪ್ರಕಾರ ತುಳು ಜನಪದಕ್ಕೆ ಸಂಬಂಧಿಸಿದ ಡಾ.ಚಿನ್ನಪ್ಪ ಗೌಡರ  ಪಿ ಎಚ್ ಡಿ ಪ್ರಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನ, ಡಾ.ವಿವೇಕ ರೈಗಳ ಪಿ ಎಚ್ ಡಿ ಪ್ರಬಂಧ ತುಳು ಜನಪದ ಸಾಹಿತ್ಯ ಎಂಬ ಮಹಾ ಪ್ರಬಂಧಕ್ಕೆ ಕೂಡ ಕಾಪಿ ರೈಟ್ ಇಲ್ಲ ಎಂದಾಗುತ್ತದೆ.. 


ಯಾಕೆಂದರೆ ಅದೆಲ್ಲ‌ ಜಾನಪದ ಹಾಡು ಆರಾಧನೆ ಕುಣಿತಗಳನ್ನು  ಆದರಿಸಿ ಬರೆದದ್ದು .. ಅದಕ್ಕೆ ಕಾಪಿ ರೈಟ್ ಇದೆ ಎಂದಾದರೆ ನನ್ನ ಬರಹಕ್ಕೂ ಕಾಪಿ ರೈಟ್ ಇದೆ..


ಯಾಕೆಂದರೆ ಇದು ಸಂಗ್ರಹವಲ್ಲ..ಬರಹ


..ನಿಮ್ಮ ಪ್ರಕಾರ ಜಾನಪದ ಹಾಡನ್ನು ಕುಣಿತವನ್ನು ಅಧ್ಯಯನ ಮಾಡಿದ ಬರಹಕ್ಜೆ ಕಾಪಿರೈಟ್ ಇಲ್ಲ ಎಂದಾದರೆ ತುಳು ಜನಪದ ಕುಣಿತಗಳ ಬಗ್ಗೆ ಅಧ್ಯಯನ ಮಾಡಿ ಮಹಾ ಪ್ರಬಂಧ ರಚಿಸಿ ಡಾಕ್ಟರೇಟ್ ಪದವಿ ಪಡೆದ ಪಾಲ್ತಾಡಿಯವರ ಮಹಾ ಪ್ರಬಂಧ ಕ್ಕೂ ಕಾಪಿ ರೈಟ್ ಇಲ್ಲ..


ಕಾಪಿ ರೈಟ್ ಇಲ್ಲ ಜಾನಪದ ಕ್ಕೆ ಡಾಕ್ಟರೇಟ್ ಕೊಡುವುದು ತಪ್ಪು ನಿಮ್ಮ‌ಪ್ರಕಾರ..ವಿತ್ತಂಡ ವಾದ ಬಿಟ್ಟು ಅರ್ಥ ಮಾಡಿಕೊಳ್ಳಿ.


.ಅವರದು  ಅನೇಕ ಜನಪದ ಕುಣಿತಗಳನ್ನು ರೆಕಾರ್ಡ್ ಮಾಡಿ ಅಧ್ಯಯನ ಮಾಡಿ ಬರೆದ ಮಹಾ ಪ್ರಬಂಧ.


 ನನ್ನದು  ಒಂದು ಅಪರೂಪದ ಇಷ್ಟರ ತನಕ ಯಾರೂ ಅಧ್ಯಯನ ಮಾಡದ ಒಂದು ಅಪರೂಪದ ಜನಪದ ಕುಣಿತದ ಬಗ್ಗೆ ಅಧ್ಯಯನ ಮಾಡಿ ಬರೆದ ಸಂಶೋಧನಾ ಪ್ರಬಂಧ..ಅಷ್ಟೇ ವ್ಯತ್ಯಾಸ..


ಡಾ.ಬಿ ಎ ವಿವೇಕ ರೈ ,ಡಾ.ಚಿನ್ನಪ್ಪ ಗೌಡ,ಡಾ.ಪಾಲ್ತಾಡಿಯವರ ಪಿಎಚ್ ಡಿ ಮಹಾ ಪ್ರಬಂಧ ಕ್ಕೆ ಕಾಪಿ ರೈಟ್ ಇರುವುದಾದರೆ ನನ್ನ ಸಂಶೋಧನಾ ಬರಹ ಬೈಲ ಮಾರಿ ನಲಿಕೆಗೆ ಕಾಪಿ ರೈಟ್ ಇದೆ..


ನಿಮ್ಮ ಸ್ನೇಹಿತರ ಸಮರ್ಥನೆ ಗಾಗಿ ಪೊಳ್ಳು ವಾದ ಮಾಡಬೇಡಿ..


ಕದ್ದದ್ದನ್ನು ಸಮರ್ಥನೆ ಮಾಡುವ ನಿಮ್ಮ ಮತ್ತು ನಿಮ್ಮಂತಹವರ ಮನಸ್ಥಿತಿಗೆ ನನ್ನ ಧಿಕ್ಕಾರವಿದೆ..


ಪವನಜ ಮತ್ತು ವಿಶ್ವನಾಥರಿಗೆ ಕೆಲವು ಪ್ರಶ್ನೆ ಗಳನ್ನು ಕೇಳಿದ್ದೆ,ಅವರಿಬ್ಬರೂ ಒಂದಕ್ಕೂ ಉತ್ತರಿಸಿಲ್ಲ..ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ತರಿಸಿ ಸರ್‌.ಸತ್ಯ ಹೊರಗೆ ಬರಿಸಲು..ನನಗೆ ಸತ್ಯ ಹೊರಗೆ ಬರಿಸುವ ಅಗತ್ಯ ಇಲ್ಲ..ಯಾಕೆಂದರೆ ನನಗೆ ಗೊತ್ತು ಅದು ನನ್ನ ಬರಹ ಎಂದು.. ಅದರೂ ನೀವು ಸಲಹೆ ಕೊಟ್ಟ ಕಾರಣ ಆ ಪ್ರಶ್ನೆ ಗಳನ್ನು ಯಥಾವತ್ ಇಲ್ಲಿ ಹಾಕುವೆ,ಉತ್ತರ ತರಿಸಿ ನಂತರ ಸತ್ಯವನ್ನು ಹೊರಗೆ ತೆಗೆಯಿರಿ .


(ವಿಶ್ವನಾಥ ಬದಿಕಾನ  vishwanatha badikana  ಅವರೇ..ಪವನಜ ಅವರೇ ‌‌ ನಿಮ್ಮಿಬ್ಬರಿಗೆ ಅಂತಃ ಸಾಕ್ಷಿ ಎಂಬುದು ಇದ್ದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿ (ಪವನಜ  pavanaja ub ಅವರೇ ಇದನ್ನು ಓದಿ ಗಮನವಿಟ್ಟು,ಮತ್ತೆ ನನ್ನ ಬಗ್ಗೆ ಇರುವ ದ್ವೇಷಕಾರಿ ಕೆಟ್ಡದಾಗಿ ಬರೆಯಿರಿ..)


1 ನೀವು ವಿಕಿಪೀಡಿಯಕ್ಕೆ  2016 ರಲ್ಲಿ ಹಾಕಿದ ಬೈಲ ಮಾರಿ ನಲಿಕೆ ಕುರಿತಾದ ಬರಹದ ಮೂಲ ಯಾವುದು? 


2 ಪವನಜರು ನೀವು ಜಾನಪದ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ ಓದಿ ವಿಕಿಪೀಡಿಯ ಕ್ಕೆ ಹಾಕಿದ್ದಾರೆ ಎಂದು ಬರೆದಿದ್ದಾರೆ‌,ನೀವು ಅದನ್ನು ಓದಿ ಬರೆದಿದ್ದರೆ ನನ್ನ ಲೆಖನ ನನ್ನ ಹೆಸರು ಮತ್ತು ಜಾನಪದ ಕರ್ನಾಟಕ ಜರ್ನಲ್ ನ ಉಲ್ಲೇಖ ಯಾಕೆ ಹಾಕಿಲ್ಲ?

( ಈಗ ಇರುವದ್ದು ಮೊನ್ನೆ ಭರತೇಶ್ ಅಲಸಂಡೆ ನ

ಮಜಲು ಸೇರಿಸಿದ ಉಲ್ಲೇಖ ಇದರಲ್ಲೂ ಪ್ರಕಟವಾಗಿದೆ ಎಂದು ಅವರಿಗೆ ಕೂಡ ತಿಳಿಸಿದವಳು ನಾನೇ) 


2 ನೀವು ಅಲ್ಲಿ ಮೂಲವಾಗಿ ಬ್ಯೂಟಿ ಅಫ್ ತುಳು ನಾಡು ಪೇಸ್ ಬುಕ್ ಲಿಂಕ್ ಹಾಕಿದ್ದಿರಿ..ನನ್ನ  ಬರಹವನ್ನು ಬ್ಯೂಟಿ ಆಫ್ ತುಳುನಾಡು ತಮ್ಮ ಪುಟದಲ್ಲಿ ಹಾಕಿದ್ದು ಅದರಲ್ಲಿ courtesy ಎಂದು ಬರೆದು ನನ್ನ  ಹೆಸರು ಮತ್ತು ಬ್ಲಾಗ್ ಲಿಂಕ್ ಹಾಕಿದ್ದು ಅವರ ಬರಹ ಅಲ್ಲ ಎಂಬುದನ್ನು ಸೂಚಿಸಿದ್ದರು ಆದರೂ ನೀವು ಬ್ಯೂಟಿ ಆಫ್ ತುಳುನಾಡು ಪೇಸ್ ಬುಕ್ ನ ಲಿಂಕ್ ಹಾಕಿದಿರಿ ಯಾಕೆ ? ನಿನ್ನೆ ತನಕ ಅದೇ ಲಿಂಕ್ ಇತ್ತಲ್ಲ..


3 ನೀವು ಕಾಪಿ ಮಾಡದೆ ನನ್ನ ಸಿಂಗಲ್ ಸೋರ್ಸ್ ಬರಹವನ್ನು ಜಾನಪದ ಕಾರ್ನಾಟಕದಲ್ಲಿ ಓದಿ ಅರ್ಥ ಮಾಡಿಕೊಂಡು ಬರೆದದ್ದಾದರೆ ನನ್ನ ಬರಹದ ಯಥಾವತ್ ಕಾಪಿ ಯಾಕೆ ಇದೆ ತಪ್ಪುಗಳ ಸಹಿತ? ಫ್ರಶ್ನಾರ್ಥಕ ಚಿಹ್ನೆ ,ಸಂಖ್ಯೆಗಳ ಸಹಿತ ? ಏನವು ಪ್ರಶ್ನಾರ್ಥಕ ಚಿಹ್ನೆ ? ಸಂಖ್ಯೆ,? ನಾನು ಜಾನಪದ ಕರ್ನಾಟಕಕ್ಕೆ ಬರೆದ ಬರಹಗಳಲ್ಲಿ ಈ ಚಿಹ್ನೆ ಮತ್ತು ಸಂಖ್ಯೆಗಳು ಏನೆಂಬ ವಿವರಣೆ ಇದೆ..ಬ್ಲಾಗ್ ನಲ್ಲಿ ಬರೆದಿಲ್ಲ, ಟೈಪಿಂಗ್ ತಪ್ಪುಗಳು ಜಾನಪದ ಕರ್ನಾಟಕದಲ್ಲಿ ಇಲ್ಲ ಯಾಕೆಂದರೆ ಅದು ನಾನು ಟೈಪ್ ಮಾಡಿದ್ದಲ್ಲ ,ನಾನು ಕೈ ಬರಹದಲ್ಲಿ ಕಳುಹಿಸಿದ ಬರಹ ಅದು.ಬ್ಲಾಗ್ ನಲ್ಲಿ  ನಾನು ಟೈಪಿಸುವಾಗ ಟೈಪಿಂಗ್ ಎರರ್ ಗಳು ಅಗಿವೆ,ಅದೇ  ಮೂವತ್ತಕ್ಕಿಂತ ಹೆಚ್ಚಿನ ಅದೇ ತಪ್ಪುಗಳು,ಅದೇ ಸಂಖ್ಯೆಗಳು ,ಅದೇ ಫ್ರಶ್ನಾರ್ಥಕ ಚಿಹ್ನೆ ಅದೇ ಜಾಗದಲ್ಲಿ ನೀವು ಟೈಪ್ ಮಾಡುವಾಗಲೂ ಹಾಕಿದಿರಾ ? ಯಾಕೆ ? ವಿವರಣೆ ಯಾಕಿಲ್ಲ‌? ಯಾಕೆಂದರೆ ನನ್ನ ಬ್ಲಾಗ್ ನಲ್ಲಿ ಇರಲಿಲ್ಲ ಹಾಗಾಗಿ ಕಾಪಿ ಮಾಡುವಾಗ ಅದೇ ತಪ್ಪುಗಳು ಅದೇ ಸಂಖ್ಯೆಗಳು ಅದೇ ಚಿಹ್ನೆಗಳು ಅಲ್ಲಿ ಬಂತು..ಅದಕ್ಕೆ ವಿವರಣೆ ಬರಲಿಲ್ಲ..😀 ಅದು ಮಕ್ಕಿ ಕಾ ಮಕ್ಕಿ ಕಾಪಿ,ನೊಣ ಪ್ರತಿ..😀😁


4 ನೀವು ಹಾಕಿದ ಹಾಡಿನಲ್ಲಿ ಅಲ್ಲಲ್ಲಿ ಕೆಲವು ಸಂಖ್ಯೆಗಳಿವೆ ಏನವು ? ಯಾಕೆ ಆ ಸಂಖ್ಯೆಗಳನ್ನು ಹಾಕಿದಿರಿ? 


5 ಈ ಲೇಖನ ಜಾನಪದ ಕರ್ನಾಟಕದಲ್ಲಿ ಒಂದಕ್ಷರ ತಪ್ಪಿಲ್ಲದೆ ಬಂದಿದೆ,ಮತ್ತು ಬೇರೆ ತರನಾಗಿ ಇದೆ,ನೀವು ಹಾಕಿದ ಬರಹ ನನ್ನ ಬ್ಲಾಗ್ ಬರಹದ ಯಥಾವತ್ ಕಾಪಿ ಇದೆಯಲ್ಲ..? ನಡು ನಡುವೆ ಆದ ಟೈಪಿಂಗ್ ತಪ್ಪುಗಳು ಕೂಡ ನನ್ನ ಬ್ಲಾಗ್ ನಲ್ಲಿ ಇರುವಂತೆಯೇ ಇದೆಯಲ್ಲ ಯಾಕೆ ? 


6 ಕದ್ದು ಬಳಸಿದಾಗ ಕೊನೆಯ ಪಕ್ಷ ಎಲ್ಲಿಂದ ಕಾಪಿ ಮಾಡಿದ್ದೀರಿ ಅವರ ( ನನ್ನ) ಹೆಸರು ಬ್ಲಾಗ್ ಲಿಂಕ್  ಹಾಕಬಹುದಿತ್ತಲ್ಲ..ಬೇರೆಯವರ ಫೇಸ್ ಬುಕ್ ಲಿಂಕ್ ಹಾಕಿದ್ದಿರಲ್ಲ..ನಿನ್ನೆ ತನಕ ಅದೊಂದೇ ಉಲ್ಲೇಖ ಇತ್ತಲ್ವಾ? 


7 ಕಾಂತು ಅಜಿಲರು ಸಂಗ್ರಹಿಸಿ ದ ನಲಿಕೆ ಪದ ಎಂದು ಇನ್ನೊಂದು ಉಲ್ಲೇಖ ಹಾಕಿದ್ದೀರಿ,ಯಾವ ಕಾಂತು ಅಜಿಲರು,ಯಾವ ಊರಿನವರು ,ಅವರ ವಿಳಾಸ ತಿಳಿಸುತ್ತೀರಾ? ಯಾಕೆಂದರೆ ಅವರ ಮೂಲಕ ಗೌರವ ಧನ ನೀಡಿ  ರೆಕಾರ್ಡ್ ಮಾಡಿ ಲಿಪ್ಯಂತರ ಮಾಡಿ ಅಸ್ಪಷ್ಟತೆ ಇರುವಲ್ಲಿ ಊಹಾ ಪಾಠ ಹಾಕಿ ಅನುವಾದಿಸಿ, ಬೈಲ ಮಾರಿ ನಲಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿ ಲೇಖನ ಬರೆದವಳು ನಾನು ಹಾಗಾಗಿ ನನಗೆ ಅವರು ಯಾರೆಂದು ಗೊತ್ತು ? ನಿಮಗೆ ಅವರು ಯಾವಾಗ ಹೇಗೆ ಕೊಟ್ಟರು ತಿಳಿಸುವಿರಾ? 


ಅಲ್ಲಿ ಕಾಂತು ಅಜಿಲರು ಸಂಗ್ರಹಿಸಿ ಕೊಟ್ಟ ಹಾಡು ಎಂದು ಉಲ್ಲೇಖದಲ್ಲಿ ಹಾಕಿದ್ದೀರಲ್ಲ .. ಕಾಂತು ಅಜಿಲರು ಯಾರು ? ಅಜಿಲರಸರ ಸಂತತಿಯವರಾ? 

ನಾನು ಯಾರಿಂದ ಗೌರವ ಧನ ಕೊಟ್ಟು ರೆಕಾರ್ಡ್ ಮಾಡಿ ಸಂಗ್ರಹಿಸಿದ್ದೆ ಎಂದು ಬರೆಯುವಾಗ ತಪ್ಪಿ ಕಾಂತು ಅಜಿಲ ಎಂದು ಬರೆದಿದ್ದೆ ಅದನ್ನು ಕೂಡ ಹಾಗೆಯೇ ಕಾಪಿ ಮಾಡಿದ್ದೀರಿ ಅಲ್ವಾ? ಅವರ ನಿಜವಾದ ಹೆಸರು ಏನು ತಿಳಿಸಿ ? ನಿಮಗೆ ಯಾವಾಗ ಹೇಗೆ ಕೊಟ್ಟರು ತಿಳಿಸ್ತೀರಾ ? 


8 ಅಲ್ಲಿ ಅನುವಾದದಲ್ಲಿ ನಡು ನಡುವೆ ನಾನು ಫ್ರಶ್ನಾರ್ಥಕ ಚಿಹ್ನೆ ಹಾಕಿದ್ದೆ,ನೀವು ಹಾಕಿದ್ದರಲ್ಲೂ ನಾನು ಹಾಕಿದ ಸ್ಥಳಗಳಲ್ಲಿಯೇ  ಅದು ಇದೆ ,ಯಾಕೆ ಹಾಕಿದಿರಿ? ಸಂಖ್ಯೆ ಗಳನ್ನು ಯಾಕೆ ನಾನು ಹಾಕಿದ ಕಡೆಗಳಲ್ಲಿಯೇ ಇದೆ ಯಾಕೆ ? ಅದೇಕೆ ಎಂದು ನಾನು ಜಾನಪದ ಕರ್ನಾಟಕದ ನನ್ನ ಬರಹದಲ್ಲಿ ಟಿಪ್ಪಣಿ ಯಲ್ಲಿ ಬರೆದಿದ್ದೆ,ಬ್ಲಾಗ್ ನಲ್ಲಿ ಹಾಕುವಾಗ ಬಿಟ್ಟು ಹೋಗಿತ್ತು.ನಾನು ಸಂಖ್ಯೆಗಳನ್ನು ಹಾಕಿದ್ದಕ್ಕೆ  ಕಾರಣ ತಿಳಿಸಿದೆ,ನೀವು ಕೂಡ ನಾನು ಹಾಕಿದೆಡೆಗಳಲ್ಲಿಯೇ ಅದೇ ಸಂಖ್ಯೆಗಳನ್ನು ಹಾಕಿದ್ದೀರಲ್ಲ ಯಾಕೆ ? ಕಾಪಿ ಮಾಡುವಾಗ ಅದೇ ತಪ್ಪುಗಳು ಸಂಖ್ಯೆಗಳು ಕೂಡ ಬಂತು ಅಷ್ಟೇ ..ಉತ್ತರ ತಾನೇ ಬೇರೆ ಉತ್ತರ ಇದೆಯಾ? ಬೇರೆ ಇದ್ದರೆ ತಿಳಿಸಿ..ಅದು ಬಿಟ್ಟು ನನ್ನ ನಿಂದನೆ ಮಾಡುದಲ್ಲ..


9 ಟ಼ೈಪಿಂಗ್್್ ್್ ಮಾಡುವಾಗ ಈತರಹದ ತಪ್ಪುಗಳು ನನ್ನ ಬರಹದಲ್ಲಿ ಅನೇಕೆಡೆಗಳಲ್ಲಿ ಆಗಿದೆ..ಅದೇ ತಪ್ಪುಗಳು   ನನ್ನಲ್ಲಿ ಇರುವಂತೆಯೇ ನೀವು  ಬರೆದದ್ದರಲ್ಲೂ ಆಗಿವೆ ಯಾಕೆ ? 

ಎಲ್ಲಕ್ಕಿಂತ ದೊಡ್ಡ ತಪ್ಪಿದೆ..ಅದೇನೆಂದು ಈಗ ಹೇಳುವುದಿಲ್ಲ..ನೀವು ಬರೆದ ಹಾಡನ್ನು ಕಾಂತು ಅಜಲರಿಗೆ ಒಮ್ಮೆ ತೋರಿಸಿ,ಏನು ತಪ್ಪು ಎಂದು ಅವರು ಹೇಳುತ್ತಾರೆ.


10 ಕದ್ದ ಮೇಲೆ ತಪ್ಪನ್ನು ಒಪ್ಕಿಕೊಳ್ಳುವ ಬದಲು ನನ್ನ ಮೇಲೆಯೇ ಅರೋಪ ಮಾಡ್ತಿರಲ್ಲ‌.ನೀವಿಬ್ಬರು ನಾ ಇಕೆ ಆಗಲ್ವಾ ? ಇಷ್ಟು ದೊಡ್ಡ ಹುದ್ದೆಯಲ್ಲಿ ಇದ್ದುಕೊಂಡು..


11 ಪವನಜ ರಿಗೆ ನಾಲ್ಕು ವರ್ಷಗಳ ಹಿಂದೆ ನನ್ನ ಬರಹವನ್ನು ಯಥಾವತ್ ಕಾಪಿ ಮಾಡಿ ವಿಕಿಪೀಡಿಯ ಕ್ಕೆ ನೀವು ಹಾಕಿದ್ದು ತಪ್ಪೆನಿಸಲಿಲ್ಲ..ವಿಕಿಪೀಡಿಯ ನಿಯಮಕ್ಕೆ ವಿರೋಧ ಎನಿಸಲಿಲ್ಲ..ನನ್ನ ಬರಹಕ್ಕೆ ಯಾರದೋ ಫೇಸ್ ಬುಕ್ ಲಿಂಕ್ ಕೊಟ್ಟದ್ದು ಕಳೆದ ನಾಲ್ಕು ವರ್ಷಗಳಲ್ಲಿ ತಪ್ಪೆನಿಸಲಿಲ್ಲ..ಯಾವುದರಿಂದ ಕಾಪಿ ಮಾಡಿ ಬರೆದಿದ್ದೀರೋ ಅವರ ಬ್ಲಾಗ್ ಲಿಂಕ್ ಹಾಕುದು ತಪ್ಪೆನಿಸಿದೆ..

ಅಲ್ಲದೇ ನನ್ನದೇ ತಪ್ಪೆಂಬಂತೆ ಬಿಂಬಿಸಲಲು ಹೊರಟಿದ್ದೀರಿ,ನಾಚಿಗೆ ಆಗಲ್ವಾ ‌ನಿಮ್ಮಿಬ್ಬರಿಗೆ ? ಅಂತಃ ಸಾಕ್ಷಿ ಚುಚ್ಚುದಿಲ್ವಾ ? ಕದ್ದಿದ್ದಲ್ಲದೇ  ಮೂಲವನ್ನು ಮುಚ್ಚಿಟ್ಟು ಬೇರೆಯವರ ಲಿಂಕ್ ಕೊಟ್ಟು ಅದನ್ನು ಸಮರ್ಥನೆ ಮಾಡುವಾಗ‌...ಕೋರ್ಟ್‌ ನಲ್ಲೂ ಇದೇ ಸುಳ್ಳನ್ನು ಸಮರ್ಥನೆ ಮಾಡುತ್ತೀರಾ ? ನಿಮ್ಮ ಜೊತೆಗೆ ಪವನಜ ಕೂಡ ಕೋರ್ಟಿಗೆ ಬಂದು ಯಾರದೋ ಬರಹ ಯಥಾವತ್  ಕಾಪಿ ಮಾಡಿ ವಿಕಿಪೀಡಿಯದಲ್ಲಿ ಹಾಕಬ ಹುದು ಎಂದು ಸಾಕ್ಷಿ ನುಡಿಯುತ್ತಾರಾ ಕೇಳಿ ನೋಡಿ..

ಆಸಕ್ತರು ನಾನು ಹೇಳಿದ ವಿಚಾರಗಳನ್ನು ವೆರಿಫೈ ಮಾಡಬಹುದು ಅದಕ್ಕಾಗಿ ನನ್ನ ಬ್ಲಾಗ್ ಬರಹವ ಲಿಂಕ್ ಕೊಟ್ಟಿದ್ದೇನೆ ,ಇಲ್ಲಿ ವಿವರಣೆಗಳನ್ನು ಯಥಾವತ್ ಒಂದು ಶಬ್ದ ಬದಲಾಯಿಸದೆ ತುಳುವಿನಲ್ಲಿ ಹಾಕಿದ್ದಾರೆ.ಉಳಿದಂತೆ ಮೂಲ ತುಳು ಹಾಡು ಮತ್ತು ಅನುವಾದ ಅದರಲ್ಲನ ಟೈಪಿಂಗ್ ಎರರ್ ಸಂಖ್ಯೆ ಫ್ರಶ್ನಾರ್ಥಕ ಚಿಹ್ನೆಗಳೊಂದಿಗೆ ಇರುವ ಹಾಗೆಯೇ ಹಾಕಿದ್ದಾರೆ ,ಅವರ upload ಮಾಡಿ ನಿನ್ನೆ ತನಕ ಬದಲಾಗದೇ ಇದ್ದ ಬರಹದ ಸ್ಕ್ರೀನ್ ಶಾಟ್ ಅನ್ನು ವಿಕಿಪೀಡಿಯ ಎಡಿಟ್ ಹಿಸ್ಟರಿ ಮೂಲಕ ತೆಗೆದು ಇಲ್ಲಿ ಹಾಕಿದ್ದೇನೆ ನೋಡಿ 

ಡಾ.ಲಕ್ಷ್ಮೀ ಜಿ ಪ್ರಸಾದ.

ಕನ್ನಡ ಉಪನ್ಯಾಸಕರು. 

ಸರ್ಕಾರಿ ಪಿಯು ಕಾಲೇಜು

ಬೆಂಗಳೂರು 


https://laxmipras.blogspot.com/2013/02/baila-maari-nalke-rare-folk-dance-of.html?m=1


https://laxmipras.blogspot.com/2013/02/baila-maari-nalke-rare-folk-dance-of.html?m=1


https://m.facebook.com/story.php?story_fbid=2186258434832779&id=100003459322515

Wednesday 23 December 2020

ನನಗೂ ಆತ್ಮವಿದೆ

 ಹೆಚ್ಚಿನ ಬಡ್ಡಿಯ ಆಸೆಗೆ ಹೋದರೆ ಬಡ್ಡಿ ಮಾತ್ರವಲ್ಲ‌ ಅಸಲನ್ನು ಕೂಡಾ ಕಳೆದುಕೊಳ್ಳಬೇಕಾಗುತ್ತದೆ


ಎರಡು ವರ್ಷದ ಮೊದಲು‌ ಐ ಎಂ ಎ ವಂಚನೆ ಬೆಳಕಿಗೆ ಬಂದ ಸಂದರ್ಭದಲ್ಲಿ  ನೆಲಮಂಗಲ ಕಾಲೇಜಿನ ಸಹೋದ್ಯೋಗಿಗಳಾದ ಸಯೀದಾ ಮೇಡಂ ಮತ್ತು ಜಗದೀಶ್ ಮುಂದಿನದು ಕಣ್ವ ಎಂದು ಭವಿಷ್ಯ ನುಡಿದಿದ್ದರು..

ಈಗ ಹಾಗೆಯೇ ಆಗಿದೆ..

ಪದೇ ಪದೇ ವಂಚನೆಯ ಪ್ರಕರಣಗಳು ಕಾಣುತ್ತಿದ್ದರೂ ಮತ್ತೆ ಮತ್ತೆ ಅತಿಯಾಸೆಗೆ ಬಲಿಯಾಗಿ ಇದ್ದುದನ್ನು ಜನ ಕಳೆದುಕೊಳ್ಳುತ್ತಾರೆ

ಈ ವಿಚಾರ ಬಂದಾಗ ಇನ್ನೊಂದು ವಿಷಯ ನೆನಪಾಯ್ತು

ಬಹುಶಃ 2001-2002 ನೇ ಇಸವಿ ಎಂದು ನೆನಪು

ಪ್ರಸಾದ್ ಮಣಿಪಾಲ ಪೈನಾನ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.


ಕಂಪೆನಿಯ ಆಗು ಹೋಗುಗಳನ್ನು ಗಮನಿಸುತ್ತಿದ್ದ ಅವರಿಗೆ ಅಪಾಯದ ಸೂಚನೆ ಸಿಕ್ಕಿತ್ತು.

ಹಾಗಾಗಿ ಅವರ ಮೇಲಿನ ನಂಬಿಕೆಯಲ್ಲಿ ಮಣಿಪಾಲ್ ಪೈನಾನ್ಸ್ ನಲ್ಲಿ ದುಡ್ಡು ಕಟ್ಟಿದವರಿಗೆ ತೆಗೆಸಿಕೊಟ್ಟರು.


ಇನ್ನು ಅನೇಕ ಪರಿಚಿತರು ಅವರಾಗಿಯೇ ಬಂದು ಕಟ್ಟಿದವರಿದ್ದರು.ಅವರುಗಳಿಗೂ ಸೂಕ್ಷ್ಮವಾಗಿ ಠೇವಣಿ ಹಿಂತೆಗೆಯುವಂತೆ ಸಲಹೆ ನೀಡಿದರು.


ನನ್ನ ಮಾವ ಮೈದುನರೂ ಕೂಡ ಮಣಿಪಾಲ್ ಪೈನಾನ್ಸ್ ಹಾಗೂ ಮಣಿಪಾಲ್ ಅಪೆಕ್ಸ್ ? ನಲ್ಲಿ ದುಡ್ಡಿಟ್ಟದ್ದು ನಮಗೆ ಗೊತ್ತಿತ್ತು.ಹಾಗಾಗಿ ಅವರಿಗೂ ಹಿಂತೆಗೆಯುವಂತೆ  ಪ್ರಸಾದ್ ಹೇಳಿದ್ದರು.ಇನ್ನು ಅನೇಕ ಬಂಧುಗಳಿಗೂ ಹೇಳಿದ್ದರು.

ಅವರೆಲ್ಲ ಅವರು ದುಡ್ಡು ಇಟ್ಟಿದ್ದ ಮಣಿಪಾಲ್ ಪೈನಾನ್ಸ್,ಅಪೆಕ್ಸ್ ನ ಬ್ರಾಂಚ್ ಮ್ಯಾನೇಜರ್ ಅಲ್ಲಿ,ಇದು ಮುಳುಗುತ್ತದೆಯಂತೆ ಹೌದೇ ಎಂದು ಹೋಗಿ ಕೇಳಿದರು.

ಹೌದೆಂದು ಹೇಳಿದರೆ ಅವರುಗಳ ಕೆಲಸ ಉಳಿಯುತ್ತದಾ? ಯಾರಾದರೂ ಹಾಗೆ ಹೇಳುವರೇ? ಛೆ..ಛೆ ಇಲ್ಲ ಎಂದು ಹೇಳಿದರು.


ಇತ್ತ ಪ್ರಸಾದ್ ಕೆಲಸಕ್ಕೆ ರಾಜಿನಾಮೆ ನೀಡಿದರು.

ಅಗ ಮನೆ ಮಂದಿ ಬಂಧು ಬಳಗದವರೆಲ್ಲ‌ ಅವನನ್ನು ಕೆಲಸದಿಂದ ತೆಗೆದಿರಬೇಕು.ಅದಕ್ಕೆ ಅ ಕಂಪೆನಿ ಮುಳುಗುತ್ತದೆ ಎಂದಿದ್ದಾನೆ..ಪೈಗಳು ಹಾಗೆಲ್ಲಜನರಿಗೆ ಮೋಸ ಮಾಡುವವರಲ್ಲ ಎಂದು ನಮ್ಮ ಕಿವಿಗೆ ಬೀಳುವಂತೆ ಆಡಿಕೊಂಡರು.

ರಾಜಿನಾಮೆ ನೀಡಿದ ತಿಂಗಳೊಳಗೆ ಪ್ರಸಾದ್ ಗೆ ಬರಬೇಕಾದ ಪಿ ಎಪ್ ಇನ್ನಿತರ ದುಡ್ಡು ಕೈ ಸೆರಿತು.

ಅದೇ ಸಮಯದಲ್ಲಿ ಮಣಿಪಾಲ್ ಪೈನಾನ್ಸ್ ನಲ್ಲಿ ರೀಜನಲ್ ಮ್ಯಾನೇಜರರಾಗಿದ್ದ ನನ್ನ ತಂದೆಯ ಶಿಷ್ಯ ವರ್ಗದವರೊಬ್ಬರು ನಮ್ಮ ತಂದೆ ಮನೆಗೆ ಬಂದಿದ್ದರು.


ಆಗ ನನ್ನ ಅಮ್ಮಮಣಿಪಾಲ್ ಪೈನಾನ್ಸ್ ಮುಳುಗುವ ಲಕ್ಷಣ ಉಂಟಂತೆ ಅಲ್ವಾ? ನನ್ನ ಅಳಿಯ ಹಾಗಾಗಿ ರಾಜಿನಾಮೆ ಕೊಟ್ಟಿದ್ದಾನೆ ಎಂದರು.

ಆಗ ಅವರು ಇಲ್ಲವೇ ಇಲ್ಲ ಎಂದು ಪ್ರಸಾದರಿಗೆ ಕೆಲಸ ಹೋದದ್ದು ಎಂಬಂತೆ ನಗಾಡಿದರಂತೆ

ಇದಾಗಿ ಎರಡು ತಿಂಗಳೊಳಗೆ ಒಂದಿನ ಇದ್ದಕ್ಕಿದ್ದಂತೆ ಯಾವ ಸೂಚನೆಯೂ ಇಲ್ಲ ಮಣಿಪಾಲ್ ಪೈನಾನ್ಸ್ ಬಾಗಿಲು ಹಾಕಿತ್ತು.

ಠೇವಣಿ ಇಟ್ಟವರಿಗೆ ಪಂಗ ನಾಮ.

ಜೊತೆಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೆಲಸ ಹೋಯಿತು ಜೊತೆಗೆ  ಪಿಎಪ್ ಇನ್ನಿತರ  ದುಡ್ಡೂ ಬರಲಿಲ್ಲ. ಆ ರೀಜನಲ್ ಮ್ಯಾನೇಜರ್ ಗೂ ಕೂಡಾ.


ನಮ್ಮ ಮಾವ ಮೈದುನರಿಗೂ ಹೋಯಿತು.ನಮ್ಮ ಬಂಧುಗಳಲ್ಲಿ ಅನೇಕರು ದುಡ್ಡು ಕಳಕೊಂಡಿದ್ದರು.

ಇಷ್ಟೆಲ್ಲ ಆಗುವಾಗ ಇದರ ಸೂಚನೆ ಆರು ತಿಂಗಳ ಮೊದಲೇ ಪ್ರಸಾದ್ ಗೆ ಹೇಗೆ ಗೊತ್ತಾಯಿತು ಎಂದು ನನಗೆ ಕುತೂಹಲ ಉಂಟಾಯಿತು‌.

ಕೇಳಿದೆ.

" ವೆರಿ ಸಿಂಪಲ್..ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಯಾವುದೇ ಸರಿಯಾದ ದಾಖಲೆ ಇಲ್ಲದೇ ಕೋಟಿ ಗಟ್ಟಲೆ ಸಾಲ ಕೊಡುತ್ತಿದ್ದರು.ಅದರಲ್ಲಿ ಅರ್ಧಾಂಶ ಮ್ಯಾನೇಜ್ ಮೆಂಟಿನವರ ಮನೆಗೆ ಹೋಗುತ್ತಾ ಇತ್ತು.ಅದು ಹಿಂದೆ ವಸೂಲಿ ಮಾಡಲಿರುವ ಸಾಲವಲ್ಲ.ಕೊಡುದು ಜನರ ದುಡ್ಡು. ಮ್ಯಾನೆಜ್ ಮೆಂಟಿನರ ಮನೆಗೆ ಬರುವ ಅರ್ಧಾಂಶ ದುಡ್ಡು ಅವರ ಸ್ವಂತಕ್ಕೆ.ಇನ್ನರ್ಧ ಸಾಲ ತಗೊಂಡವರಿಗೆ..ಜನರಿಗೆ ಚೆಂಬು " ಎಂಬುದು ಗೊತ್ತಾಗಿ ಬಾಗಿಲು ಹಾಕುವ ಮೊದಲೇ ಕೆಲಸಕ್ಕೆ ರಾಜಿನಾಮೆ ನೀಡಿ ನನಗೆ ಬರಬೇಕಾದ ಎಲ್ಲವನ್ನು ಪಡೆದುಕೊಂಡೆ ಅಷ್ಟೇ ಎಂದರು

ಮತ್ತೇನೋ ಜನರು ದೂರು ಕೊಟ್ಟು ಕೋರ್ಟಿಗೆ ಹೋಗಿದ್ದರು.ದುಡ್ಡು ಸಿಕ್ಕಿತೋ ಏನೋ ಗೊತ್ತಿಲ್ಲ

ಹೆಚ್ಚಿನ ಬಡ್ಡಿಯ ಆಸೆಗೆ ಹೋದರೆ ಬಡ್ಡಿ ಮಾತ್ರವಲ್ಲ‌ ಅಸಲನ್ನು ಕೂಡಾ ಕಳೆದುಕೊಳ್ಳಬೇಕಾಗುತ್ತದೆ ಎಂದು ಜನರಿಗೇಕೆ ಅರ್ತವಾಗುದಿಲ್ಲವೋ ಗೊತ್ತಾಗುತ್ತಿಲ್ಲ.

ವಿದ್ಯಾವಂತರಾದ ಸರ್ಕಾರಿ ಕಾಲೇಜಿನ ಉಪನ್ಯಾಸಕರೇ ಚೀಟಿಗೆ ದುಡ್ಡು ಕಟ್ಟುದನ್ನು ನೋಡಿದ್ದೇನೆ.

ಇನ್ನು ಇತರರನ್ನು ಹೇಳುದೆಂತ? 



Saturday 12 December 2020

ದೊಡ್ಡವರ ದಾರಿ- ನಿತ್ಯೋತ್ಸಾಹಿ ಶಕುಂತಲಾ ಸಾಂತ್ರಾಯ

 ದೊಡ್ಡವರ ದಾರಿ 


ನನಗೆಂದೂ ಕೆಲಸ ಕಷ್ಟದ್ದು ಎನಿಸಲಿಲ್ಲ ಎಂದ ನಿತ್ಯೋತ್ಸಾಹಿ ಶಕುಂತಲಾ ಶಾಂತ್ರಾಯ


ನನಗೆಂದೂ ಕೆಲಸ ಕಷ್ಟದ್ದು  ಎನಿಸಲಿಲ್ಲ  ಎಂದರು ಅವರು..ಹೌದು ಅದಕ್ಕೆ ಅವರು ವಿಶೇಷ ವ್ಯಕ್ತಿ.

ಶಿಕ್ಷಕರು ವರ್ಗಾವಣೆಯಾಗಿ ಹೋಗುವಾಗ ಮಕ್ಕಳು ಬಿಗಿದಪ್ಪಿ ಹೋಗಬೇಡಿ ಎಂದು ಅತ್ತದ್ದನ್ನು ನಾವುಗಳು ನೋಡಿರ್ತೇವೆ..ನೆಲಮಂಗಲದಿಂದ ವರ್ಗವಾಗಿ ಬೆಂಗಳೂರಿನ ಬ್ಯಾಟರಾಯನಪುರ ಸರ್ಜಾರಿ ಪಿಯು ಕಾಲೇಜಿಗೆ ಬಂದಾಗ ನಮ್ಮ ವಿದ್ಯಾರ್ಥಿಗಳು ಅತ್ತು ನನ್ನನ್ನು ಕಂಗಾಲು ಮಾಡಿದ್ದರು.ಮಕ್ಕಳು ಹಾಗೆಯೇ .ಶಿಕ್ಷಕರನ್ನು ತುಂಬಾ ಹಚ್ಚಿಕೊಳ್ತಾರೆ.ನಾವು ನಮ್ಮ ಅನುಕೂಲಕ್ಕಾಗಿ ವರ್ಗಾವಣೆ ಪಡೆದು  ಬೇರೆಡೆ ಹೋಗುವಾಗ ನಮ್ಮನ್ನು ಬಹಳ ಪ್ರೀತಿಸುವ ಮಕ್ಕಳು ದುಃಖಿಸುತ್ತಾರೆ..ಇದರ ಅನುಭವ ನನ್ನಂತೆ ಅನೇಕ ಶಿಕ್ಷಕರಿಗೆ ಅಗಿರುತ್ತದೆ.


ಆದರೆ ಶಾಲೆಯ ಮುಖ್ಯಸ್ಥರೊಬ್ಬರು ನಿವೃತ್ತರಾದಾಗ ಸಹೋದ್ಯೋಗಿಗಳು ಅತ್ತು ದುಃಖಿಸಿದ  ಪ್ರಕರಣ ಬಹಳ ಅಪರೂಪದ್ದು.ಮುಖ್ಯಸ್ಥರಲ್ಲಿ  ತನ್ನ ಕೈ ಕೆಳಗಿನವರಿಗೆ ವಿನಾಕಾರಣ ತೊಂದರೆ ಕೊಡುವವರೇ ಹೆಚ್ಚು.ಅದರಲ್ಲೂ ನನ್ನಂತೆ ಇತರ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿದ್ದರೆ ಮತ್ಸರ ಪಟ್ಟು ಕಿರುಕುಳ ನೀಡುತ್ತಾರೆ‌

ಆದರೆ ಈ ಮುಖ್ಯಸ್ಥರು ಹಾಗಲ್ಲ..ಪ್ರತಿಬೆ ಯಾರಲ್ಲಿದ್ದರೂ ಗುರುತಿಸುವವರೇ ಆಗಿದ್ದರು‌.ತನ್‌ನ ಸಹೋದ್ಯೋಗಿಗಳನ್ನು ಮನೆಯ ಸದಸ್ಯರಂತೆ ಪ್ರೀತಿಯಿಂದ ಗೌರವದಿಂದ ಕಾಣ್ತಿದ್ದರು.ಅವರೇ ಶಕುಂತಲಾ ಸಾಂತ್ರಾಯ.

ಮಂಗಳೂರಿನ ಚಿನ್ಮಯ ವಿದ್ಯಾಸಂಸ್ಥೆ ಹುಟ್ಟಿ ಅಂದಾಜು ನಲುವತ್ತು ವರ್ಗಳಾಗಿದೆ .

ನಾನು ಅಲ್ಲಿ 2000-2004 ತನಕ ನಾಲ್ಕು ವರ್ಷ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡಿದ್ದೆ‌

ಆಗ ಮಂಗಳೂರಿನಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳಿರಲಿಲ್ಲ.ಅಲೋಷಿಯಸ್,ಕೆನರಾ,ಅಗ್ನೆಸ್ ಬಹು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟರೆ ಇವಕ್ಕೆ ಸಡ್ಡು ಹೊಡೆವಂತೆ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದ ಶಿಕ್ಷಣ ಸಂಸ್ಥೆ ಚಿನ್ಮಯ ಶಾಲೆ.

ಇದನ್ನು ಪ್ರಾರಂಭಿಸಿದವರು ಯಾರೆಂದು ನನಗೆ ಸರಿಯಾಗಿ ಗೊತ್ತಿಲ್ಲ.ಇಲ್ಲಿನ ಅರುಣಾ ಮಿಸ್ ತಿಳಿಸಿದಂತೆ ಯಾವುದೋ ಸೋರುವ ಹಳೆಯ ಕಟ್ಟಡದಲ್ಲಿ ಈ ಶಾಲೆ ಸುರು ಅಗಿತ್ತು.ಮಳೆ ಬರುವಾಗ ಅಲ್ಲಲ್ಲಿ ನೀರು ಸೋರುತ್ತಿತ್ತು.ಆಗ ಶಿಕ್ಷಕರು ಅಲ್ಲೆಲ್ಲ ಬಕೆಟ್ ಪಾತ್ರ ಚೊಂಬು ಇಡುತ್ತಿದ್ದರಂತೆ..ಮಂಗಳೂರಿಗೂ ಮಳೆಗೂ ಬಿಡಲಾಗದ ನಂಟು..ವರ್ಷದ ಆರು ತಿಂಗಳ ಕಾಲ ..

ಸುರಿವ ಮಳೆಯ ನಡುವೆ ಸೋರುವ ಹಳೆಯ ಕಟ್ಟಡದಲ್ಲಿ ಇದ್ದುಕೊಂಡೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದ ಹೆಗ್ಗಳಿಕೆ ಈ ಶಾಲೆಯ ಶಿಕ್ಷಕರದು.

ಈ ಶಾಲೆ ಒಂದು ಟ್ರಸ್ಟ್ ಮೂಲಕ ನಡೆಯುತ್ತಿದೆ.ಟ್ರಸ್ಟ್ ನ ಸಸಸ್ಯರಿಗೇನೂ ಶಾಲೆಯ ಪ್ರಗತಿ ಬಗ್ಗೆ ವೈಯುಕ್ತಿಕ ಕಾಳಜಿ ಇರಲಿಲ್ಲ


ಆದರೂ ಈ ಶಿಕ್ಷಣ ಸಂಸ್ಥೆ ಸ್ವಂತ ಕಟ್ಟಡಕ್ಕೆ ಬರುವಷ್ಟು ಆದಾಯವನ್ನು ಗಳಿಸಿದೆ.ಬಹುಶಃ ಇದಕ್ಕೆ ಜಾಗ ಒದಗಿಸಿದವರು ಗಣೇಶ ಬೀಡಿಯ ಗಣಪತಿ ಪೈ ಗಳಿರಬೇಕು.(ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ‌)

ಇಲ್ಲಿ ಶಿಕ್ಷಕರಿಗೆ ವೇತನ ಕಡಿಮೆ ಇತ್ತು.ಹೆಚ್ಚು ಕೊಡುವಷ್ಟು ಅದಾಯ ಇರಲಿಲ್ಲ 

ಡೊನೇಶನ್ ಹಾವಳಿ ಈ ಸಂಸ್ಥೆಯಲ್ಲಿ ಇರಲಿಲ್ಲ.ಫೀಸ್ ಕೂಡಾ ತುಂಬಾ ಇರಲಿಲ್ಲ.ಬರುತ್ತಿದ್ದವರೆಲ್ಲ ಬಡ ಮಧ್ಯಮ ವರ್ಗದ ಮಕ್ಕಳೇ.

ಕೆ ಜಿ ತರಗತಿಯಿಂದ ಶುರುವಾಗಿ ಹತ್ತನೇ ತರಗತಿ ತನಕ ತಲುಪಿ ಸತತವಾಗಿ ಉತ್ತಮ ಫಲಿತಾಂಶ ಪಡೆದು ಚಿನ್ಮಯ ಶಾಲೆ ಹೆಸರಾಗಿತ್ತು.ಬಡ ಮದ್ಯಮ ವರ್ಗಕ್ಕೆ ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೈ ಗೆಟುಕುವಂತೆ ಮಾಡಿತ್ತು


ಈ ಶಾಲೆಯನ್ನು ಆರಂಭದಿಂದ ಇಪ್ಪತ್ತೈದು ವರ್ಷಗಳಕಾಲ ಸಮರ್ಥವಾಗಿ ಸಮತೋಲನದಿಂದ ನಡೆಸಿದವರು ಶಕುಂತಲಾ ಸಾಂತ್ರಾಯ ಅವರು.

ಆರಂಭದಲ್ಲಿ ವಿಮಲಾ ಮೇಡಂ ಮುಖ್ಯೋಪಾಧ್ಯಾಯಿನಿ ಆಗಿದ್ದರು.ನಂತರ ಅವರು ಬೇಡ ಎಂದ ಕಾರಣ ಶಕುಂತಲಾ ಸಾಂತ್ರಾಯ ಮುಖ್ಯೋಪಾಧ್ಯಾಯಿನಿ ಆಗಿದ್ದರು.

ಖಾಸಗಿ ಶಾಲಾ ಕಾಲೇಜುಗಳ ಮುಖ್ಯಸ್ಥರಾಗುವುದು ಸುಲಭದ ಕೆಲಸವಲ್ಲ.ಅದು ತಂತಿ ಮೇಲಿ‌ನ ನಡಿಗೆ‌

ಒಂದೆಡೆ ಮ್ಯಾನೇಜ್ ಮೆಂಟಿನವರ ಕಿರಿಕಿರಿ,ಮತ್ತೊಂದೆಡೆ ಹೆತ್ತವರ ಕಿರಿಕಿರಿ..ಮಗದೊಂದೆಡೆ ಶಿಕ್ಷಣ ಇಲಾಕೆಯ ತರಹಾವರಿ ನಿಯಮಾವಳಿಗಳು.ಜೊತೆಗೆ ಶಿಕ್ಷಕರ ಸಮಸ್ಯೆಗಳು.

ಇವೆಲ್ಲವನ್ನೂ ಬಹಳ ಸಮರ್ಥವಾಗಿ ನಿಭಾಯಿಸುತ್ತಾ ದೀರ್ಘ ಕಾಲ ಎಂದರೆ ಇಪ್ಪತ್ತೈದು ವರ್ಷಗಳ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಆ ಸಂಸ್ಥೆಗಾಗಿ ಹಗಲು ರಾತ್ರಿ ದುಡಿದವರು ಶ್ರೀಮತಿ ಶಕುಂತಲಾ ಸಾಂತ್ರಾಯ.ಇವರ ಜೊತೆ ಕೈ ಜೋಡಿಸಿದವರು ಹಿರಿಯ ಶಿಕ್ಷಕರಾದ ಶ್ರೀಮತಿ  ಅರುಣಾ,ಶ್ರೀಮತಿ ಶಾಂತಾ,ಶ್ರೀಮತಿ ಮೋಹಿನಿ,ಕು ಶೋಭಾ,ಶ್ರಿಮತಿ ಪೂರ್ಣಿಮಾ ಶ್ರೀಮತಿ ಶುಭಾ ,ಶ್ರೀಮತಿ  ಅನುರಾಧಾ ಶ್ರಿಮತಿ ವಿಜಯಲಕ್ಷ್ಮೀ  , ಸ್ರೀಮತಿ ಶ್ರೀಮತಿ ಲ್ಯಾನೆಟ್ ,ಶೈಲಜಾ ,ಪ್ರತಿಮ್ ಕುಮಾರ, ,ಸುಜಾತಾ,ಕೃಷ್ಣ ಉಪಾಧ್ಯಾಯ( ಈಗ ಮಧುಸೂದನ್ ಕುಶೆ ಕಾಲೆಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾರೆ) ಮೊದಲಾದ ಶಿಕ್ಷಕರು.ಜೊತೆಗೆ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದವರು  ಬೋಧಕೇತರ ಸಿಬ್ಬಂದಿಗಳಾಗಿದ್ದ ಶ್ರೀಮತಿ ವೀಣಾ,ಮತ್ತು ಶ್ರೀಮತಿ ಸಂಧ್ಯಾ. 

ನಾನು  ಸರ್ರ್ಕಾರಿ ಉದ್ಯೋಗಕ್ಕೆ ಸೇರುವ ಮೊದಲು ಶ್ರೀರಾಮ ಶಾಲೆ ಕಲ್ಲಡ್ಕ,ಕೆನರಾ ಪ್ರೌಢ ಶಾಲೆ,ಅಲೋಷಿಯಸ್ ಕಾಲೇಜು,ಎವಿಎಸ್ ಕಾಲೇಜು, ಕಮಲಾ ಕಾಲೇಜು ಗಳಲ್ಲಿ ಕೆಲಸ ಮಾಡಿರುವೆ‌.ಜೂನಿಯರ್ ಕಾಲೇಜಿನಲ್ಲಿ ಸ್ವಲ್ಪ ಕಾಲ ಪ್ರಿನ್ಸಿಪಾಲ್ ಆಗಿಯೂ ಕೆಲಸ ಮಾಡಿರುವೆ‌

ಸರ್ಕಾರಿ ಉದ್ಯೋಗ ದೊರೆತಾಗ ಬೆಳ್ಳಾರೆ ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ಸರ್ಕಾರಿ ಪಿಯು ಕಾಲೇಜಗಳಲ್ಲಿ ಕೆಲಸ ಮಾಡಿ ಪ್ರಸ್ತುತ ಬ್ಯಾಟರಾಯನ ಪುಟ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೆಲಸ ಮಾಡಿರುವೆ.


ಬೇರೆಡೆ ನನಗೆ ಹೆಚ್ಚಿನ ವೇತನ ಇತ್ತು.ಅದರೆ ಯಾವತ್ತಿಗು ಮರೆಯಲಾಗದಂತೆ ನನ್ನ ಮನಸ್ಸಿನಲ್ಲಿ ನನಗೆ ಅಚ್ಚೊತ್ತಿ ನಿಂತದ್ದು ಚಿನ್ಮಯ ಶಾಲೆಯ ವಾತಾವರಣ.

ಇಲ್ಲಿನ ಶಿಕ್ಷಕರು ಯಾರೂ ಸಿರಿವಂತರಲ್ಲ..ಹೆಚ್ಚು ಕಡಿಮೆ ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಇಲ್ಲಿನ ವೇತನ ಕೂಡಾ ಅಷ್ಟಕ್ಕಷ್ಟೇ ಹೇಳುವಂತೆ ಇರಲಿಲ್ಲ.ಆದರೆ ಇಲ್ಲಿನ ಶಿಕ್ಷಕರ ಅನುವಿನ ಬಾಂಧವ್ಯ ಪರಸ್ಪರ ಹೊಂದಾಣಿಕೆ ಯಾರೂ ಕೂಡ ಮೆಚ್ಚುವದ್ದು.

ಇವರೆಲ್ಲರಿಗೆ ಶಾಲೆಯ ಮೇಲೆ ಇದ್ದ ಪ್ರೀತಿ,ಶಾಲೆಯನ್ನು ಅಭಿವೃದ್ಧಿ ಮಾಡುವ ಉತ್ಸಾಹ  ಅಪ್ರತಿಮವಾದುದು.

ಈ ಶಾಲೆಯ ವಾರ್ಷಿಕೋತ್ಸವ ನೋಡಿದರೆ ಇಲ್ಲಿನ ಶಿಕ್ಷಕರ ತಾದಾತ್ಮ್ಯತೆ ಗೊತ್ತಾಗುತ್ತದೆ.ಪ್ರತಿ ತರಗತಿಯ ಶಿಕ್ಷಕರು ತಮ್ಮ‌ಮಕ್ಕಳಿಗೆ ಹೇಳಿ ಕೊಟ್ಟು ಡ್ಯಾನ್ಸ್,ನಾಟಕ ಮಾಡಿಸುತ್ತಿದ್ದರು.ಒಂದಕ್ಕೊಂದು ಒಳ್ಳೆಯ ಕಾರ್ಯಕ್ರಮಗಳು ಇರುತ್ತಿದ್ದವು.

ಇವರಲ್ಲಿ ಬಹಳ ನೆನಪಾಗುವವರು ಅರುಣಾ ಮತ್ತು ಶಾಂತಾ ಅಚಾರ್..ಅರುಣಾ ಮೇಡಂ ಪ್ರತಿ ವರ್ಷ ನಾಟಕ ಮಾಡಿಸುವ ಜವಾಬ್ದಾರಿ ಹೊರುತ್ತಿದ್ದರು.ಮಕ್ಕಳನ್ನು ಸಿದ್ದ ಪಡಿಸುತ್ತಿದ್ದರು.ವಿವಿಧ ಸ್ಪರ್ಧೆಗಳಿಗೆ ಮಕ್ಕಳನ್ನು ಸಜ್ಜು ಗೊಳಿಸುವ ಕೆಲಸ ಇವರದು.ಇವರಿಗೆ ಹಾಡುಗಳನ್ನು ಹೇಳಿ ಕೊಡುತ್ತಾ ಇದ್ದವರು ಶಾಂತಾ ಆಚಾರ್.ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಪರೀಕ್ಷೆ ಪಾಸಾದ ಸಂಗೀತ ವಿದ್ವಾಂಸರು.

ಇವರಿಬ್ಬರಿಂದಾಗಿ ಚಿನ್ಮಯ ಶಾಲೆಯ ಮಕ್ಕಳು ಎಲ್ಲೆಡೆ ಬಹುಮಾನ ಗಳಿಸುತ್ತಿದ್ದರು.ಇದರಿಂದಾಗಿ ಶಾಲೆಗೆ ಹೆಸರು ಬಂತು.ಜೊತೆಗೆ ಎಲ್ಲ ಶಿಕ್ಷಕರೂ ಅಹರ್ನಿಶ ದುಡಿಯುತ್ತಿದ್ದ ಕಾರಣ ಉತ್ತಮ ಫಲಿತಾಂಶ ಕೂಡಾ ಬರ್ತಿತ್ತು ಹೆಚ್ಚಾಗಿ 100% ರಿಸಲ್ಟ್ ಬರ್ತಿತ್ತು.ಶಕುಂತಲಾ ಸಾಂತ್ರಾಯರಿಗೆ ಕುಡಾ ಬರೆಯುವ ಹವ್ಯಾಸವಿದ್ದು ಒಳ್ಳೊಳ್ಳೆಯ ಕವಿತೆಗಳನ್ನು ಬರೆಯುತ್ತಿದ್ದರು‌.ಅವರ ಕವಿತೆಗಳಿಗೆ ರಾಗ ಹಾಕಿ ಶಾಂತಾ ಆಚಾರ್ ಮಕ್ಕಳಿಗೆ ಹೇಳಿಕೊಡ್ತಾ ಇದ್ದರು.


ಇದರಿಂದಾಗಿ ಬಹು ಖ್ಯಾತಿ ಪಡೆದ ಅಲೋಷಿಯಸ್,ಕೆನರಾ ಅಗ್ನೆಸ್ ಶಿಕ್ಷಣ ಸಂಸ್ಥೆಗಳಂತೆ ಚಿನ್ಮಯ ಶಾಲೆ ಕೂಡಾ ತನ್ನದೇ ಅಸ್ತಿತ್ವವನ್ನು ಪಡೆಯಿತು.

 ಇದಕ್ಕೆ ಶಿಕ್ಷಕರ ಸಾಮೂಹಿಕ ಯತ್ನದ ಜೊತೆಗೆ ಶಕುಂತಲಾ ಸಾಂತ್ರಾಯರ ಸಮರ್ಥ ನಾಯಕತ್ವ ಕೂಡ ಕಾರಣವಾಗಿದೆ.ಈ ಶಾಲೆಯಲ್ಲಿ ದುಡಿಯುತ್ತಿದ್ದ ಹೆಚ್ಚಿನ ಶಿಕ್ಷಕರು ಆರ್ಥಿಕವಾಗಿ ಬಲಿಷ್ಟರಾಗಿರಲಿಲ್ಲ.ನಮಗೆ ದುಡಿಯುವುದು ಅನಿವಾರ್ಯ ಆಗಿತ್ತು.ಆದರೆ ಶಕುಂತಲಾ ಸಾಂತ್ರಾಯರ ಪತಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು ಆರ್ಥಿಕವಾಗಿ ಬಲಿಷ್ಠರಾಗಿದ್ದರು.ಹಾಗಾಗಿ ಶಕುಂತಲಾ ಸಾಂತ್ರಾಯರಿಗೆ ದುಡಿಯುವ ಅಗತ್ಯ ಇರಲಿಲ್ಲ.

2004 ರಲ್ಲಿ ಸುದೀರ್ಘ ಇಪ್ಪತ್ತೈದು ವರ್ಷಗಳ ನಂತರ ನಿವೃತ್ತರಾದರು‌ಆಗ ನಾವೆಲ್ಲರೂ ಅವರನ್ನು ಮತ್ತೆ ಒಂದೆರಡು ವರ್ಷಮುಂದುವರಿಸುವಂತೆ ಶಾಲಾ ಟ್ರಸ್ಟ್ ನಲ್ಲಿ ಕೇಳಿದ್ದೆವು.ಅದಕ್ಕೆ ಅವರುಗಳು ಒಪ್ಪಿರಲಿಲ್ಲ.

2004 ರಲ್ಲಿ ಸಾಂತ್ರಾಯ ಅವರು ನಿವೃತ್ತರಾದಾಗ ಅಲ್ಲಿ‌ ವಿದ್ಯಾರ್ಥಿಗಳು ಮಾತ್ರವಲ್ಲ ನಾನು ಸೇರಿದಂತೆ ಶಿಕ್ಷಕಿಯರು ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದರು .ನಮ್ಮಲ್ಲಿ  ಅಷ್ಡು ಅಟ್ಯಾಚ್ ಮೆಂಟ್ ಆದರೆ ಶಕುಂತಲಾ ಸಾಂತ್ರಾಯ ಅವರು ಮಾತ್ರ ತಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸಿದ ಸಂತೃಪ್ತಿಯಿಂದ  ಇದ್ದರು.

ಬೇರೆಯವರಲ್ಲಿನ ಗುಣವನ್ನು ಮೆಚ್ಚುವ,ಪ್ರೋತ್ಸಾಹಿಸುವ ಗುಣ ಶಕುಂತಲಾ ಸಾಂತ್ರಾಯರಲ್ಲಿ ಇತ್ತು.

ಆಗ ಮಂಗಳೂರಿನ ಖಾಸಗಿ ಸಿಟಿ ಚಾನೆಲ್ ಬಹಲ ಪ್ರಸಿದ್ದವಾಗಿದ್ದು ಪ್ರತಿ ಅದಿತ್ಯವಾರ ಉದಯವಾಣಿಯ ಮನೋಹರ ಪ್ರಸಾದ್ ಜನಮನ ಎಂಬ ಶೀರ್ಷಿಕೆಯಡಿ 

ಬೇರೆ ಬೇರೆ ಕ್ಷೇತ್ರದಲ್ಲಿ ಪರಿಣತರಾದವರನ್ನು ಅತಿಥಿಯಾಗಿ ಕರೆದು ಎರಡು ಗಂಟೆಯ ನೇರ ಪ್ರಸಾರ ಕಾರ್ಯಕ್ರಮ ನಡೆಸುತ್ತಿದ್ದರು.ಇದರಲ್ಲಿ ಪೋನ್ ಮೂಲಕ ಪ್ರೇಕ್ಷಕರು ಭಾಗವಹಿಸುತ್ತಿದ್ದರು.ಆಗಿನ ಕಾಲಕ್ಕೆ ಬಹು ಖ್ಯಾತವಾದ ಕಾರ್ಯಕ್ರಮ ಅದು‌.

2003 ಮಾರ್ಚ್ ಮೊದಲ ವಾರ  ಮಕ್ಕಳನ್ನು ಪರೀಕ್ಷೆಗೆ ಸಿದ್ದ  ಪಡಿಸುವುದು ಹೇಗೆ ಎಂಬ ಬಗ್ಗೆ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಚಿನ್ಮಯಾ ಶಾಲೆಯ ಹಿರಿಯ ಶಿಕ್ಷಕರ ಬಗ್ಗೆ ಶಕುಂತಲಾ ಸಾಂತ್ರಾಯ ಅವರಲ್ಲಿ ವಿಚಾರಿಸಿದರು.ಆಗ ನಾನು ಕಿರಿಯಳಾಗಿದ್ದರೂ ಕೂಡಾ ಬರವಣಿಗೆಯ ಹವ್ಯಾಸವಿದ್ದ,ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಅನೇಕ ಲೇಖನಗಳನ್ನು ಬರೆದಿದ್ದ ನನ್ನ  ಹೆಸರನ್ಬು ಸೂಚಿಸಿದ್ದರು.

ನಂತರ ನಾನು ಮತ್ತು ನಮ್ಮ ಶಾಲೆಯ ಗಣಿತ ಮೇಸ್ಟ್ರಾಗಿದ್ದ ಕೃಷ್ಣ ಉಪಾಧ್ಯಾಯರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದೆವು.ನಮಗಾದ ಮಟ್ಟಿಗೆ ಮಾಹಿತಿ ನೀಡಿದೆವು.ಕಾರ್ಯಕ್ರಮ ಚೆನ್ನಾಗಿ ಬಂದಿದೆ ಎಂದುನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದರು.

ಈ ಕಾರ್ಯಕ್ರಮಕ್ಕೆ ನನ್ನನ್ನು ಕರೆದಾಗ ಆರಂಭದಲ್ಲಿ ನಾನು ಹಿಂದೇಟು ಹಾಕಿದ್ದೆ.ಆಗ ಶಕುಂತಲಾಸಾಂತ್ರಾಯ ಅವರೇ ನನಗೆ ನಿಮ್ಮ ಬಗ್ಗೆ ನಂಬಿಕೆ ಇದೆ..ಯಾವ ರೀತಿ ಬರೆಯುತ್ತೀರಿ ಅದೇ ರೀತಿ ಮಾತನಾಡಿದರಾಯಿತು ಹೋಗಿ ಭಾಗವಹಿಸಿ.ಇಂತಹ  ಅವಕಾಶಕ್ಕಾಗಿ ತುಂಬಾ ಜನ ಕಾಯ್ತಾರೆ .ಅವಕಾಶ ಬಂದಾಗ ಹಿಂದೇಟು ಹಾಕಬಾರದು.ದೈರ್ಯವಾಗಿ ಹೋಗಿ ಎಂದು ಬೆಂಬಲ ನೀಡಿದ್ದರು.

ಅವರು ನಿವೃತ್ತರಾದ ಮೇಲೆ ಅವರನ್ನು ನಾನು ಭೇಟಿ ಮಾಡಿಲ್ಲ.ತುಂಬಾ ದಿನಗಳಿಂದ ಅವರಲ್ಲಿ ಮಾತನಾಡಬೇಕು ಎಂದು ಅಲೋಚಿಸುತ್ತಿದ್ದೆ.ಅದರೆ ಅವರ ಪೋನ್ ನಂಬರ್ ಸಿಗಲಿಲ್ಲ.


ಈವತ್ತು ಒಂದು ಯೋಚನೆ ತಲೆಗೆ ಹೊಳೆಯಿತು.ಅವರ ಸಣ್ಣಮಗ ಮಹೇಶ್ ಇ ಎನ್ ಟಿ ಡಾಕ್ಟರ್.ಅವರ ಹೆಸರು ಹಾಕಿ ಗೂಗಲ್ ಸರ್ಚ್ ಕೊಟ್ಟೆ.ಅವರ ನಂಬರ್ ಸಿಕ್ತು.ಪೋನ್ ಮಾಡಿದಾಗ 

ಅವರ ಪತ್ನಿ ( ಅವರು ಕುಡಾ ಇ ಎನ್ ಟಿ ತಜ್ಞವೈದ್ಯೆ) ಕರೆ ಸ್ವೀಕರಿಸಿದರು.ನನ್ನ ಸಂಕ್ಷಿಪ್ತ ಪರಿಚಯ ಹೇಳಿ ಶಕುಂತಲಾ ಸಾಂತ್ರಾಯರ ನಂಬರ್ ಕೇಳಿದೆ.ಅವರು ಕೊಟ್ಟರು .ತಕ್ಷಣವೇ ಪೋನ್ ಮಾಡಿದೆ.ಶಕುಂತಲಾ ಮೇಡಂ ಅವರಲ್ಲಿ ಸುಮಾರು ಹೊತ್ತು ಮಾತನಾಡಿದೆ

ಮಾತಿನ ನಡುವೆ " ನಿಮಗೆ ಕೆಲಸ ಮಾಡುವ ಅನಿವಾರ್ಯತೆ ಇರಲಿಲ್ಲ‌.ಯಾಕೆ ಕಡಿಮೆ ವೇತನದಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಿರಿ ಎಂದು ಕೇಳಿದೆ.ಅಗ ಅವರು ಬದುಕಿಗೆ ದುಡ್ಡೆ ಮುಖ್ಯವಲ್ಲ.ನಮಗೆ ನಮ್ಮದೇ ಆದ ಅಸ್ತಿತ್ವ ಬೇಕು.ಹಾಗಾಗಿ ನಾನು ಶಿಕ್ಷಕಿಯಾಗಿ ಕೆಲಸ ಮಾಡಿದೆ.ಮುಖ್ಯೋಪಾಧ್ಯಾಯಿನಿ ಜವಾಬ್ದಾರಿ ಬಂದಾಗ ದೈರ್ಯವಾಗಿ ಸ್ವೀಕರಿಸಿದೆ,ಯಶಸ್ಸು ಕೂಡಾ ಸಿಕ್ಕಿತು.ಈ ಯಶಸ್ಸಿನಲ್ಲಿ ಅಹರ್ನಿಶ ದುಡಿದ ಶಿಕ್ಷಕ ಶಿಕ್ಷಕಿಯರ  ,ಸಿಬ್ಬಂದಿಗಳ ಪಾಲೂ ಇದೆ.ಎಲ್ಲಕ್ಕಿಂತ ಹೆಚ್ಚಾಗಿ ದೇವರ ದಯೆ " ಎಂದರು.

ಒಂದೆಡೆ ಮ್ಯಾನೆಜ್ ಮೆಂಟ್ ನವರ ಕಿರಿಕಿರಿ,ಇನ್ನೊಂದೆಡೆ ಹೆತ್ತವರ ಕಿರಿಕಿರಿ,ಇಲಾಖೆಯ ನೀತಿ ನಿಯಮಗಳ ಪಾಲನೆ ಇವೆಲ್ಲವನ್ನು ನಿಬಾಯಿಸುದು ಕಷ್ಟ ಎನಿಸಲಿಲ್ವಾ ಎಂದು ಕೇಳಿದೆ.ಅಗ ಅವರು " ಸಮಸ್ಯೆಗಳು ಎದುರಾಗುತ್ತಿದ್ದವು.ಇಲ್ಲವೆಂದಲ್ಲ ಅದರೆ ನನಗೆ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ನಿರ್ವಹಿಸುವುದು ಕಷ್ಟ ಎಂದು ಒಮ್ಮೆ ಕೂಡ ಅನಿಸಿಯೇ ಇಲ್ಲ ' ಎಂದರು

ಹೌದು,ಕೆಲಸವನ್ನು ಇಷ್ಟ ಪಟ್ಟು ಮಾಡಿದರೆ ಎಷ್ಟೇ ಕಷ್ಟದ ಕೆಲಸ ಕೂಡಾ ಕಷ್ಟ ಎನಿಸುದಿಲ್ಲ.ಅದಕ್ಕಾಗಿಯೇ ಶಕುಂತಲಾ ಸಾಂತ್ರಾಯರು ವಿಶಿಷ್ಟರಾಗಿ ಕಾಣ್ತಾರೆ.ಈಗಲೂ ಕೂಡಾ ಅದೇ ಉತ್ಸಾಹ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.


(ಚಿತ್ರ: ಚಿನ್ಮಯ ಶಾಲೆಯಲ್ಲಿ ಬಹುಮಾನ ಪಡೆದ ಸಂದರ್ಭ ,ಇದರಲ್ಲಿರುವವರು ಅತಿಥಿಯಾಗಿ ಬಂದವರು ಮತ್ತು ನಾನು,ಶಕುಂತಲಾ ಸಾಂತ್ರಾಯ ಚಿತ್ರ ನನ್ನಲ್ಲಿ ಇಲ್ಲ‌,ಮುಂದಿನ ಬಾರಿ ಊರಿಗೆ ಬಮದಾಗ ಅವರ ಮನೆಗೆ ಬರಲು ಕರೆದಿದ್ದಾರೆ.ಅಗ ಹೋಗಿ ಅವರೊಂದಿಗೆ ಪೋಟೋಹಿಡಿದು ಬರ್ತೇನೆ)