Thursday 8 November 2018

ಬದುಕ ಬಂಡಿಯಲಿ ೨೭ ಸರಿಯಾದುದನ್ನು ಸರಿ ಎಂದು ಸಾಧಿಸಲೂ ಕಷ್ಟ ಪಡಬೇಕಾಯಿತು ©-ಡಾ.ಲಕ್ಷ್ಮೀ ಜಿ ಪ್ರಸಾದ

 ಬದುಕ ಬಂಡಿಯಲ್ಲಿ
ಮುಖ ಪುಟ ಸ್ನೇಹಿತರಾದ ಶ್ರೀನಿವಾಸ ಹೊಳ್ಳರು ಶುಭಾಶಯ ಎಂಬ ಪದದ ಅಪಪ್ರಯೋಗದ( ತಪ್ಪು ಬಳಕೆಯ) ಕುರಿತು ಒಂಚೂರು ತಮಾಷೆಯಾಗಿ ಒಂದು ಸಾಲಿನ ಹೇಳಿಕೆಯನ್ನು ಹಾಕಿದರು.ಆ ಬಗ್ಗೆ ಒಂದು ಸಣ್ಣ ಚರ್ಚೆ ಅಥವಾ ಅಭಿಪ್ರಾಯ ವಿನಿಮಯ ಕೂಡ ನಡೆಯಿತು. ಆಗ ನನಗೆ ನಾನು ಬಿಎಡ್ ಓದುವಾಗ ನಡೆದ ಒಂದು ಘಟನೆ ನೆನಪಾಯಿತು.
2009 ರಲ್ಲಿ ಲಿಖಿತ ಪರೀಕ್ಷೆಯ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಆಯ್ಕೆಯಾದ ಸುಮಾರು 2400 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡುವಾಗ ನಾಲ್ಕು ವರ್ಷಗಳ ಒಳಗೆ ಬಿಎಡ್ ಪದವಿಯನ್ನು ಪಡೆಯಬೇಕೆಂಬ ನಿಬಂಧನೆಯನ್ನು ಹಾಕಿದ್ದರು.ಕೆಲಸ ಸಿಕ್ಕ ಸಂತಸದಲ್ಲಿ ಆಗ ನಾವ್ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.ಆದರೆ ಕೆಲಸಕ್ಕೆ ಸೇರಿ ಎರಡು ವರ್ಷಗಳಾದಾಗ  ಬಿಎಡ್ ಪಡೆದಿಲ್ಲವೆಂಬ ಕಾರಣಕ್ಕೆ  ನಾನೂ  ಸೇರಿದಂತೆ ಸುಮಾರು 1400 ಉಪನ್ಯಾಸಕರ ಪರೀಕ್ಷಾರ್ಥ ಖಾಯಂ ಪೂರ್ವ ಸೇವಾವಧಿಯನ್ನು ( probationary period)  ತೃಪ್ತಿಕರವೆಂದು ಘೋಷಣೆ ಮಾಡದೆ ಭಡ್ತಿಯನ್ನು ಇಲಾಖೆ ತಡೆ ಹಿಡಿದಾಗ ನಮಗೆಲ್ಲ ಈ  ನಿರ್ಬಂಧ ಉಂಟು ಮಾಡಿ ಸಮಸ್ಯೆಯ ಗಹನತೆ ಅರ್ಥವಾಯಿತು.
ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು,ನಾವುಗಳು ಮುಖ್ಯಮಂತ್ರಿಗಳು, ಶಿಕ್ಷಣ ಮಂತ್ರಿಗಳು,ಶಾಸಕರುಗಳಲ್ಲಿ ನಮ್ಮ ಸಮಸ್ಯೆಯನ್ನು ಬಗೆ ಹರಿಸುವಂತೆ ವಿನಂತಿಸಿದೆವು.ಆಗ ಸದಾನಂದ ಗೌಡರು ಮತ್ತು ಕಾಗೇರಿಯವರು ಮುಖ್ಯ ಮಂತ್ರಿ,ಶಿಕ್ಷಣ ಮಂತ್ರಿಗಳಾಗಿದ್ದರೆಂದು ನೆನಪು. ಈ ಬಗ್ಗೆ ಕೋರ್ಗೆ ಮೊರೆ ಹೋಗುವ ಯತ್ನ ವೂ ನಡೆಯಿತು. ಪ್ರತಿಭಟನೆ ಹೋರಾಟವೂ ಆಯಿತು.ಅಂತೂ ಇಂತೂ ನಾವು ಕೆಲಸಕ್ಕೆ ಸೇರಿ ನಾಲ್ಕು ವರ್ಷ ಅಗುತ್ತಾ ಬಂತು.ಈ ನಡುವೆ ಚುನಾವಣೆ ಬಂದು ಸರಕಾರ ಬದಲಾಗಿ ಸಿದ್ಧ ರಾಮಯ್ಯ ಅವರು ಮುಖ್ಯಮಂತ್ರಿಗಳಾದರು.ಸಜ್ಜನ ರಾಜಕಾರಣಿ ಎಂದೇ ಖ್ಯಾತರಾದ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಸಚಿವರಾದರು.ನಮ್ಮ ಮನವಿ ,ಹೋರಾಟ,ಪ್ರತಿಭಟನೆ ಇತ್ಯಾಗಿ ನಡೆಯುತ್ತಲೇ ಇತ್ತು.ಕೊನೆಗೂ ನಮ್ಮ ಸಂಕಷ್ಟವನ್ನು ಅರ್ಥಮಾಡಿಕೊಂಡ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ನಮಗೆ ಒಂದು ವರ್ಷ  ಓದಿ ಬಿಎಡ್ ಪದವಿ ಪಡೆಯಲು ವೇತನ ಸಹಿತ ರಜೆಯನ್ನು ನೀಡಿದರು.
 ಸಂಸ್ಕೃತ, ಹಿಂದಿ,ಕನ್ನಡ ಮೂರು ಭಾಷೆಗಳ ಎಂಎ ಪದವಿ,ಎಂ ಫಿಲ್,ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ನಂತರ ನನ್ನ ನಲುವತ್ತನೇ ವಯಸ್ಸಿನಲ್ಲಿ ಕೆಲಸವನ್ನು ಉಳಿಸಿಕೊಳ್ಳುವ ಸಲುವಾಗಿ ಬಿಎಡ್ ಪದವಿ ಓದಲು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿದೆ.ಇಲ್ಲಿ ನನ್ನ ಹಾಗೆ  ಹತ್ತು ಜನ ಉಪನ್ಯಾಸಕರು ಬಿಎಡ್ ಗೆ ದಾಖಲಾತಿ ಪಡೆದಿದ್ದರು.ನನ್ನ ಹಾಗೆ ಡಾಕ್ಟರೇಟ್ ಪದವಿಯನ್ನು ಪಡೆದವರೂ,ನನಗಿಂತ ಹಿರಿಯರೂ ಕೂಡ ಆಗಿರುವ ಉಪನ್ಯಾಸಕರೂ ಇದ್ದರು.
ಆಗಷ್ಟೇ ಬಿಎ ಪದವಿ ಪಡೆದು ಬಂದಿರುವ ಇಪ್ಪತ್ತು ಇಪ್ಪತ್ತೊಂದು ವರ್ಷ ವಯಸ್ಸಿನ ( ನಮ್ಮ ಅರ್ಧದಷ್ಟು ವಯಸ್ಸಿನ ) ಎಳೆಯರೊಂದಿಗೆ ಕುಳಿತು,ಅವರ ಮಟ್ಟಕ್ಕೆ ಅನುಗುಣವಾಗಿ ರಚಿತವಾದ ಪಠ್ಯಕ್ರಮವನ್ನು ಓದುವುದು ನಮಗೆ ಒಂದಿನಿತು ಇಕ್ಕಟ್ಟನ್ನು ತಂದಿಟ್ಟಿತು.ಆರಂಭದಲ್ಲಿ ಅಲ್ಲಿನ ಉಪನ್ಯಾಸಕರು ನಮ್ಮನ್ನು ಇತರ ಸಾಮಾನ್ಯ ವಿದ್ಯಾರ್ಥಿಗಳಂತೇ ಪರಿಗಣಿಸಿ ಪಾಠ ಮಾಡ ಹೊರಟಾಗ ಸಾಕಷ್ಟು ಚರ್ಚೆಗಳು ನಡೆದವು. ( ನಂತರದ ದಿನಗಳಲ್ಲಿ ನಮ್ಮ ಅಭಿಪ್ರಾಯ, ಅನುಭವ,ವಿದ್ವತ್ ಗಳಿಗೆ ಅವರೂ ಮನ್ನಣೆ ನೀಡಿದರು)
ಈ ಸಂದರ್ಭದಲ್ಲಿ ಯಾವುದೋ ಒಂದು ಕಾರ್ಯಕ್ರಮ ( ಕನ್ನಡ ರಾಜ್ಯೋತ್ಸವ ಎಂದು ನೆನಪು) ಅಯೋಜನೆ ಆಯಿತು. ನಾವುಗಳು ಕಾಲೇಜನ್ನೆಲ್ಲಾ ಸಿಂಗರಿಸಿದೆವು.ಕೆಲವು ವಿದ್ಯಾರ್ಥಿಗಳು ವೇದಿಕೆಯ ಹಿಂದಿನ  ಕಪ್ಪು ಹಲಗೆಯಲ್ಲಿ ಕಾರ್ಯಕ್ರಮದ ಬಗ್ಗೆ ಬರೆದು ಶುಭಾಷಯಗಳು ಎಂದು ಬರೆದಿದ್ದರು.ಅದನ್ನು ಗಮನಿಸಿದ ನಾನು ಅಲ್ಲಿದ್ದ ವಿದ್ಯಾರ್ಥಿಗಳಿಗೆ( ಅವರು ನಮ್ಮ ಸಹಪಾಠಗಳು ಕೂಡ ಆಗಿದ್ದರು) ಶುಭಾಷಯ ತಪ್ಪು ಬಳಕೆ,ಶುಭಾಶಯ ಎಂಬುದು ಸರಿಯಾದ ರೂಪ ಎಂದು ತಿಳಿಸಿ ಅದನ್ನು ಅಲ್ಲಿ ಶುಭಾಶಯಗಳು ಎಂದು ಸರಿ ಪಡಿಸಿಸಿದೆ.
ನಂತರ ಬೇರೆ ಕೆಲಸಕ್ಕೆ ಹೋದೆ.ಇನ್ನೇನು ಕಾರ್ಯಕ್ರಮ ನಾಲ್ಕೈದು ನಿಮಿಷಗಳಲ್ಲಿ ಶುರು ಆಗುತ್ತದೆ ಎಂದಾದಾಗ ಮತ್ತೆ ವೇದಿಕೆ ಕಡೆಗೆ ಬಂದೆ.ನೋಡಿದರೆ ಮತ್ತೆ ಶುಭಾಷಯ ಎಂಬ ತಪ್ಪು ಬಳಕೆ ಇತ್ತು.ಅರೇ,ಈಗ ಅರ್ಧ ಗಂಟೆ ಮೊದಲು ಇದನ್ನು ನ ಶುಭಾಶಯ ಎಂದು  ಸರಿ ಪಡಿಸಿ ಹೋಗಿದ್ದೆ,ಯಾರು ಬದಲಾಯಿಸಿದ್ದು ? ಎಂದು ಕೇಳಿದೆ.ಅಲ್ಲಿನ ಉಪನ್ಯಾಸಕರು ಒಬ್ಬರು ಬಂದು ನಾನು ಸರಿಪಡಿಸಿದ್ದನ್ನು ನೋಡಿ ಅದು ತಪ್ಪೆಂದು ಹೇಳಿ ಮತ್ತೆ ಶುಭಾಷಯ ಎಂದು ತಪ್ಪಾಗಿ ಬರೆಸಿದ್ದರು.ನಾನು ಅದನ್ನು ತಪ್ಪೆಂದಾಗ ವಿದ್ಯಾರ್ಥಿಗಳೆಲ್ಲ ( ಇವರುಗಳು ನನ್ನ ಸಹಪಾಠಗಳು ಕೂಡ ) ಒಂದಾಗಿ "ನಿಮಗೇನು ಗೊತ್ತು ? ನಮ್ಮ .. ಸರ್ ನಾವು ಮೊದಲು ಬರೆದಿದ್ದೇ ( ಶುಭಾಷಯ ಎಂಬುದನ್ನು) ಸರಿ ಎಂದಿದ್ದಾರೆ.ನಿಮ್ಮ ಮಾತು ಕೇಳಿ ನಾವು ಶುಭಾಶಯ ಎಂದು ಬದಲಾಯಿಸಿ ಸರ್ ಕೈಂದ ಬೈಗಳು ತಿನ್ನ ಬೇಕಾಯಿತು" ಎಂದು ನನ್ನನ್ನೇ ತರಾಟೆಗೆ ತೆಗೆದುಕೊಂಡರು. ಆಗ ನಾನು ಗ್ರಂಥಾಲಯಕ್ಕೆ ಹೋಗಿ ಕನ್ನಡ ಶಬ್ದ ಕೋಶ ತಂದು ತೋರಿಸಿ ,ಅವರ ತಪ್ಪನ್ನು ತಿಳಿಯಪಡಿಸಿ ಅದನ್ನು ತಿದ್ದಬೇಕೆಂದು ಕಾಲೇಜು ಗ್ರಂಥಾಲಯಕ್ಕೆ ಹೋದರೆ " ಈಗ ಕಾರ್ಯಕ್ರಮ ಇದೆ,ಪುಸ್ತಕ ಕೊಡಲಾಗುವುದಿಲ್ಲ " ಎಂಬ ನಿರ್ದಾಕ್ಷಿಣ್ಯವಾದ ಉತ್ತರ ಸಿಕ್ಕಿತು.
ಏನು ಮಾಡುವುದು ಗೊತ್ತಾಗಲಿಲ್ಲ.ಅಷ್ಟರಲ್ಲಿ ಸರ್ಕಾರಿ ಬಿಎಡ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿ ಅಲ್ಲಿ ಗೌರವ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಸರ್   (ನಂಜುಂಡಪ್ಪ) ಬಂದರು.ಅವರಿಗೆ ವಿದ್ಯಾರ್ಥಿಗಳು ಶುಭಾಷಯ ಎಂದು ತಪ್ಪಾಗಿ ಬರೆದುದನ್ನು ತೋರಿಸಿ,ಅವರು ಅದನ್ನೇ ಸರಿ ಎಂದು ವಾದಿಸುತ್ತಿರುವ ಬಗ್ಗೆ ತಿಳಿಸಿದೆ‌.ಹಿರಿಯ ವಿದ್ವಾಂಸರಾಗಿದ್ದ ಅವರಿಗೆ ಶುಭಾಷಯ ಎಂಬುದು ತಪ್ಪು ಬಳಕೆ ಎಂದು ಗೊತ್ತಿತ್ತು.ಹಾಗಾಗಿ ಅಲ್ಲಿನ ವಿದ್ಯಾರ್ಥಿಗಳನ್ನು ಸ್ವಲ್ಪ ಜೋರು ಮಾಡಿ ಶುಭಾಶಯಗಳು ಎಂದು ಬರೆಸಿದರು.
ಬರೆದು ಮುಗಿಸುವಷ್ಟರಲ್ಲಿ ವೇದಿಕೆಗೆ ಅತಿಥಿಗಳು ಆಗಮಿಸಿದ್ದರು. ಅದಾಗಲೇ ತಪ್ಪನ್ನು ಸರಿ ಪಡಿಸಿ ಶುಭಾಶಯಗಳು ಎಂದು  ಸರಿಯಾದ ರೂಪವನ್ನು ಬರೆಸಿದ್ದ ಕಾರಣ ಕಾಲೇಜಿನ  ಮರ್ಯಾದೆ ಉಳಿಯಿತು ಜೊತೆಗೆ ನಮ್ಮದು ಕೂಡ.- ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ನೆಲಮಂಗಲ