Tuesday 18 January 2022

ಅಕ್ಕನೆಂಬ ಎರಡನೆ ಅಮ್ಮ‌

 ಅಕ್ಕನೆಂಬ ಎರಡನೆಯ ಅಮ್ಮ

ಮನೆಯಲ್ಲಿ ಹಿರಿಯಕ್ಕ ಹಿರಿಯಣ್ಣ ಹಿರಿ ಸೊಸೆ ಆಗುದು ಬಹಳ ಕಷ್ಟದ ವಿಚಾರ.ಆದರೆ ಮೊದಲಿನ ಎರಡು ನಮ್ಮ ಕೈಯಲ್ಲಿಲ್ಲ

ಮನೆಯ ಹಿರಿಯಕ್ಕ ಎರಡನೆಯ ಅಮ್ಮನಿದ್ದಂತೆ.

ಮೊದಲೆಲ್ಲ ಕುಟುಂಬ ನಿಯಂತ್ರಣ ಉಪಾಯಗಳು ಇರಲಿಲ್ಲ.ಇಷ್ಟ ಇದ್ದೋ ಇಲ್ಲದೆಯೋ ಎಂಟು ಹತ್ತು ಮಕ್ಕಳು ಸಾಮಾನ್ಯ ವಿಚಾರ

ಇವರಲ್ಲಿ ಶುರುವಿನದ ಹುಡುಗಿಯಾಗಿದ್ದರೆ ನಂತರದವರನ್ನು ನೋಡಿಕೊಳ್ಳುವ ಜವಾಬ್ದಾರಿ ಇವಳಿಗೆ ಬೀಳುತ್ತದೆ.ಅದವಳಿಗೆಂದೂ ಹೊರೆ ಅನಿಸುವುದಿಲ್ಲ ಯಾಕೆಂದರೆ ಅವಳು ನೋಡಿಕೊಳ್ಳುವುದು ಅವಳ ಪ್ರೀತಿಯ ತಮ್ಮ ತಂಗಿಯರನ್ನು..ತಾಯಿಗಿಂತ ಹೆಚ್ಚಿನ ಪ್ರೀತಿಯಿಂದ ತಿನ್ನಿಸಿ ಉಣ್ಣಿಸಿ ಕುಂಡೆ ಕೂಡ ತೊಳೆದು‌ ಹಾಡು ಹೇಳಿ ನಿದ್ರಿಸುವವಳು ಹಿರಿಯಕ್ಕ.ತಮ್ಮ ತಂಗಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದಾಗಿ ಕಲಿಕೆಯ ಅವಕಾಶವನ್ನೂ ಅನೇಕ ಅಕ್ಕಂದಿರು ಕಳೆದುಕೊಂಡಿರುತ್ತಾರೆ.ಆದರೆ ಒಂದಿನ ಮದುವೆಯಾಗಿ ಅವಳು ಗಂಡನ ಮನೆಗೆ ಹೋಗುತ್ತಾಳೆ.ನಂತರ ಅವಳು ಹುಟ್ಟಿ ಬೆಳೆದ ಮನೆ ತನ್ನದಲ್ಲ‌ ಎಂಬ ಅರಿವು ನಿದಾನಕ್ಕೆ ಆಗುತ್ತದೆ

ತಾನು ಉಣ್ಣಿಸಿ ತಿನ್ಸಿ ತಾಯಿಯಂತೆ ಸಾಕಿದ ತಮ್ಮ ತಂಗಿಯರು ಬೆಳೆದು ದೊಡ್ಡವರಾದಾಗ ಈ ಬಡ ಅಕ್ಕನನ್ನು ಮರೆತು ಬಿಡುತ್ತಾರೆ ಅವಳು ಮನೆಗೆ ಬಂದರೆ ಭಾರವಾದಂತೆ ತೋರ್ಪಡಿಸುವ ತಮ್ಮ ತಂಗಿಯರೂ ಇದ್ದಾರೆ.ಇದು ಜೆನರಲ್ ಆಗಿ ಎಲ್ಲೆಡೆ ಕಾಣುವ ಹಿರಿಯ ಅಕ್ಕಂದಿರ ಕಥೆ

ಹಾಗಾದರೆ ನಮ್ಮ ಮನೆಯ ಹಿರಿಯಕ್ಕ ಹೇಗಿದ್ದಳು..? ಹಿರಿಗೂ ಕಿರಿಗೂ ನನಗಿರುವುದು ಒಂದೇ ಅಕ್ಕ.ಹೆಸರು ಶಾರದೆ ಮನೆಯಲ್ಲಿ ಕರೆಯುವುದು ವಾಣಿ ಎಂದು.ನನಗೂ ಅಕ್ಕನಿಗೂ ಆರು ವರ್ಷದ ಅಂತರ ದೊಡ್ಡ ತಮ್ಮನಿಗೂ ಅಕ್ಕನಿಗೂ ಹತ್ತು ವರ್ಷದ ಅಂತರ,ಸಣ್ಣ ತಮ್ಮನಿಗೂ ಅಕ್ಕನಿಗೂ ಹನ್ನೆರಡು ವರ್ಷದ ಅಂತರ.

ನಾನು ಹೆಚ್ಚಾಗಿ ಅಜ್ಜನ ಮನೆಯಲ್ಲಿ ಬೆಳೆದದ್ದು.ಮೀಯಪದವು ಶಾಲೆಯಲ್ಲಿ ಒಂದನೆ ಕ್ಲಾಸ್ ಪಾಸಾಗಿ ಎರಡನೆಯ ತರಗತಿಗೆ ಕೋಳ್ಯೂರು ಶ್ರೀ ಶಂಕರನಾರಾಯಣ ಶಾಲೆಗೆ ಸೇರಿದ್ದೆ.ಎರಡನೆಯ ತರಗತಿಗೆ ಸೇರುವ ತನಕ ಎಂದರೆ ಏಳನೆಯ ವಯಸ್ಸಿನ ತನಕ ನನಗೆ ಅಣ್ಣ ಅಕ್ಕನ ಬಗ್ಗೆ ಅವರು ಹೇಗಿದ್ದರು ಎಂಬ ಬಗ್ಗೆ ನೆನಪಿಲ್ಲ

ನಂತರವೂ ನನ್ನ ಇಬ್ಬರು ತಮ್ಮಂದಿರನ್ನು ಅತಿಯಾಗಿ ಪ್ರೀತಿಸುವ ಅಕ್ಕ ನನಗೆ ಇಷ್ಟವಾಗಿರಲಿಲ್ಲ.ನಾನು ಸ್ವಲ್ಪ ದೊಡ್ಡವಳಾದ ಕಾರಣ ಅಕ್ಕನ ಜೊಯೆಗೆ ಅಡಿಕೆ ಹೆಕ್ಕಲು ಬೇಸಿಗೆಯಲ್ಲಿ ಗದ್ದೆಯಲ್ಲಿ ಧಾನ್ಯ ಪೊರ್ಪಲು ನನ್ನನ್ನು ಕರೆದೊಯ್ಯುತ್ತಿದ್ದಳು.ನನಗೆಂದೂ ಬೈದು ಬಡಿದು ಮಾಡಿದವಳಲ್ಲ

ಸುಮಾರು ಹೈಸ್ಕೂಲಿಗೆ ಬಂದ ನಂತರ ಅಕ್ಕನ ಪ್ರೀತಿಯ ಅರಿವಾಯಿತು ನನಗೆ.

ಶಾಲೆಗೆ ಹೋಗಿ ಬಂದು ಇಬ್ಬರು ತಮ್ಮಂದಿರಿಗೆ ಬಡಿಸಿ ಉಣ್ಸಿ ತಿನ್ಸಿ ಕೈತೊಳೆಸುವ ಕೆಲಸ ಅವಳದಾಗಿತ್ತು.ಮಣ್ಣಿನ ಮನೆ.ಈ ಮಕ್ಕಳೋ ಉಣ್ಣುವಾಗ ತಿನ್ನುವಾಗ ಚೆಲ್ಲುತ್ತಿದ್ದವು.ಮೈ ಕೈಗೆ ಮಾಡಿಕೊಳ್ತಿದ್ದವು

ಇವರನ್ನು ಸ್ನಾನ ಮಾಡ್ಸಿ ತಂದು ಮಲಗಿಸುವುದು ,ನಾವು ಊಟ ಮಾಡಿದ ಬಟ್ಟಲನ್ನು ತೆಗೆದು ಬಿದ್ದದ್ದನ್ನೆಲ್ಲ ಸ್ವಚ್ಛ ಮಾಡಬೇಕಿತ್ತು

ಕೆಲವೊಮ್ಮೆ ಈ ಕೆಲಸ ಸಾಕಾಗಿ ಊಟ ಮಾಡಿದರೆ ತಮ್ಮ ತಂಗಿಯರಿಗೂ ಬಡಿಸಿ ತಿನ್ನಿಸಿ ಸ್ವಚ್ಛ ಮಾಡುವ ಕೆಲಸ ಮಾಡಬೇಕಾಗುತ್ತದೆ ಎಂದು ಹಸಿವಿಲ್ಲ ಎಂದು ಹೇಳಿ ಮಲಗುತ್ತಿದ್ದಳು.ನಂತರ ಅಮ್ಮನೇ ಎಲ್ಲರಿಗೂ ಬಡಿಸಿ ಅವಳನ್ನೂ ಎಬ್ಬಿಸಿ ಉಣ್ಣಲು ಹೇಳುತ್ತಿದ್ದರು

ತುಂಬಾ ಕೆಲಸವಿದ್ದ ದಿನ ಹೀಗೆ ಮಾಡಿದರೆ ಅಮ್ಮನಿಗೆ ಕೋಪ ಬಂದು ಅಕ್ಕನನ್ನು ಬೈದು ಎರಡು ಕೊಟ್ಟು ಜೋರು ಮಾಡುತ್ತಿದ್ದರು.ನಂತರ ಅಕ್ಕ ಅಳುತ್ತಾ ಎದ್ದು ನಮಗೆಲ್ಲ ಊಟ ಬಡಿಸಿ ತಮ್ಮಂದಿರಿಗೆ ತಿನ್ನಿಸುತ್ತಿದ್ದಳು

ಆಗ ಅಕ್ಕ ಆರನೆಯ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಹುಡುಗಿಯೇ..ಈಗಾದರೆ ಅಮ್ಮಂದಿರು ತಲೆ ಬಾಚಿ ಸಾಕ್ಸ್ ಹಾಕಿ ಬುತ್ತಿಗೆ ಹಾಕಿ ಬ್ಯಾಗ್ ಹೊತ್ತುಕೊಂಡು ಕೈ ಹಿಡಿದು ನಡೆಸಿ ಸ್ಕೂಲ್ ಬಸ್ ಹತ್ತಿಸುವ ವಯಸ್ಸು

ಮನೆಯ ಹಿರಿಯಕ್ಕನಿಗೆ ಬೇಗ ಪ್ರೌಢತೆ ಬರುತ್ತದೆ.ಅಕ್ಕ ಸುಮಾರು ನಾಲ್ಕೈದು ಮೈಲು ದೂರದ ಶಾಲೆಗೆ ನಡೆದುಕೊಂಡು ಹೋಗಿ ಬರಬೇಕಾಗಿತ್ತು

ಬೆಳಗ್ಗೆ ಬೇಗನೇ ಎದ್ದು ಅಡಿಕೆಹೆಕ್ಕಲು ಹೋಗುತ್ತಿದ್ದಳು.ತಡವಾದರೆ ಅಕ್ಕ ಪಕ್ಕದ ತೋಟದವರು ನಮ್ಮ ತೋಟದ ಅಡಿಕೆಯನ್ನು ಹೆಕ್ಕಿಯಾರು ಎಂಬ ಆತಂಕ.

ನನಗೆ ಐದು ವರ್ಷ ಆಗುವಾಗ ಎಂದರೆ ಅಕ್ಕನಿಗೆ ಹನ್ನೊಂದು ವರ್ಷ ಆಗುವಾಗ ಮನೆ ಆಸ್ತಿ ಪಾಲಾಗಿ ಬರಿಗೈಯಲ್ಲಿ ಬಂದು ಸಿಕ್ಕ ಅಂಗೈ ಅಗಲ ಜಾಗದಲ್ಲಿ ಬರೆ ಕಡಿದು ಸಾಲ ಮಾಡಿ ಮನೆ ಕಟ್ಟಿದ್ದರು ತಂದೆ.

ಈ ಸಾಲವನ್ನು ಮುಗಿಸುದಕ್ಕಾಗಿ ಅಪ್ಪ ಅಮ್ಮ ಹಗಲು ರಾತ್ರಿ ದುಡಿಯುತ್ತಿದ್ದರು

ಅಗ ದೊಡ್ಡ ತಮ್ಮ ಎರಡು ವರ್ಷದ ಮಗುವಾದರೆ ಸಣ್ಣವನು ಆಗಷ್ಟೇ ಹುಟ್ಟಿದ ಮಗು.ಅವನಿಗೆ ಎರಡು ತಿಂಗಳಾಗುವಾಗ ಮಣ್ಣಿನ ನೀರು ಒಸರುವ ಹೊಸ ಮನೆಗೆ ಬಂದಿದ್ದೆವು

ಸಾಲ ಬೂಟುವುದಕ್ಕಾಗಿ ಅಮ್ಮ ನಮ್ಮ ಹೊಲದ ಬತ್ತ ಕೊಯ್ತುವ ಬತ್ತ ಬಡಿಯುವ ಕೇರುವ ಬತ್ತ ಬೇಯಿಸುವ ಒಣಗಿಸುವ ಕೆಲಸವನ್ನೂ ಮಾಡುತ್ತಿದ್ದರು.ಅಳುಗಳಿಂದ ಮಾಡಿಸಿದರೆ ಸಂಬಳ ಕೊಡಬೇಕಾಗುತ್ತದೆ.ಬಂದ ಆದಾಯವೆಲ್ಲ ಅದಕ್ಕೆ ಸರಿ ಹೋಗುತ್ತದೆ.ಸಾಲ ಹಿಂದೆ ಕೊಡಲು ದುಡ್ಡು ಉಳಿಯುವುದಿಲ್ಲ.ಅಮ್ಮನ ಜೊತೆಗೆ ಅಕ್ಕ ಕೆಲಸಕ್ಕೆ ಸೇರುತ್ತಿದ್ದಳು

ಬಿದ್ದ ಅಡಿಕೆಯನ್ನು ಅಕ್ಕ ಪಕ್ಕದ ತೋಟದವರು ಹೆಕ್ಕಿಯಾರು ಎಂಬ ಆತಂಕದಿಂದ ಅಕ್ಕ ಬೆಳಗ್ಗೆ ಬೇಗನೇ ಎದ್ದು ಚಳಿಗೆ ನಡುಗುತ್ತಾ ಅಡಿಕೆ ಹೆಕ್ಕುತ್ತಿದ್ದಳು

ಅಕ್ಕ ಹತ್ತನೆಯ ತರಗತಿಗೆ ಬರುವವರೆಗೂ ನಮ್ಮ ಊರಿಗೆ ಕರೆಂಟು ಬಂದಿರಲಿಲ್ಲ.ಕಮಟು ವಾಸನೆಯ ಚಿಮುಣಿ ದೀಪದಲ್ಲಿಯೇ ಅಕ್ಕ ಓದಿದ್ದಳು


ಅಮ್ಮನಿಗೆ ಬೇರೆ ಕೆಲಸ ಇದ್ದ ಕಾರಣ  ತಮ್ಮ ತಂಗಿಯರಿಗೆ ಬಡಿಸುವ ಉಣಿಸುವ ಹೇಳಿ ಕೊಡುವ ಕೆಲಸ ಅಕ್ಕನ ಪಾಲಿಗೆ ಬಿದ್ದಿತ್ತು ಈ ತಮ್ಮಂದಿರೋ ಬಿಕ್ಕಿ ತಾಕಿ ರಣ ರಂಗ ಮಾಡಿಡುತ್ತಿದ್ದರು.ಇವರನ್ನೆಲ್ಲ ಉಣ್ಣಿಸಿ ಕೈ ಕಾಲು ತೊಳೆಸಿ ಸ್ನಾನ ಮಾಡಿಸಿ ಅವರ ಬಟ್ಟೆ ಒಗೆದು ಹಾಕಿ ನೆಲ ಸಾರಿಸುವ ಕೆಲಸ ಅಕ್ಕ ಮಾಡುತ್ತಿದ್ದಳು

ಅಂತೂ ಅಪ್ಪ ಅಮ್ಮನ ಅವಿರತ ಪರಿಶ್ರಮದಿಂದ ಸಾಲ ಹಿಂದೆ ಕೊಡಲು ಸಾಧ್ಯವಾಯಿತು

ಅಕ್ಕ ಹತ್ತನೆಯ ತರಗತಿಯನ್ನು ಒಳ್ಳೆಯ ಅಂಕಗಳೊಂದಿಗೆ ಪಾಸಾಗಿದ್ದಳು.ನಂತರ ಮುಂದೆ ಓದಿಸಲು ಅಮ್ಮನಿಗೆ ಇಷ್ಟ ಇತ್ತು.ಆದರೆ ಅಪ್ಪನ, ಅಜ್ಜ( ಅಮ್ಮನ ಅಪ್ಪ) ಸೋದರತ್ತೆ ಮೊದಲಾದವರ ತೀವ್ರ ವಿರೋಧ ಇತ್ತು.ಅಕ್ಕನಿಗೆ ಕಾಮರ್ಸ್ ಅಥವಾ ಆರ್ಟ್ಸ್ ಓದಲು ಇಷ್ಟವಿರಲಿಲ್ಲ.ಇರುವುದರಲ್ಲಿ ಸಮೀಪದ ಮಂಜೇಶ್ವರ ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ಇರಲಿಲ್ಲ.ದೂರದ ಮಂಗಳೂರಿಗೆ ಹೋಗಿ ಬರಲು ಸರಿಯಾದ ಬಸ್ ಸೌಲಭ್ಯವಿರಲಿಲ್ಲ.ವಿಜ್ಞಾನ ಓದಬೇಕಾದರೆ ಉಜಿರೆ ಕಾಲೇಜಿಗೆ ಸೇರಬೇಕಿತ್ತು.ಆದರೆ ಹಾಸ್ಟೆಲ್ ಗೆ ದುಡ್ಡು ಹೊಂದಿಸುವುದೂ ಸಮಸ್ಯೆ ಆಗಿತ್ತು

ಜೊತೆಗೆ ಅಕ್ಕ ತುಂಬಾ ಚಂದ ಇದ್ದು ಇಪ್ಪತ್ತು ಇಪ್ಪತ್ತೆರಡರ ಯುವತಿಯಂತೆ ಭರ್ತಿ ಇದ್ದಳು

ಒಬ್ಬಳೇ ಕಾಲೇಜಿಗೆ ನಿರ್ಜನ ದಾರಿಯಲ್ಲಿ ಹೋಗಿ ಬರುವುದೂ ಅಪಾಯಕಾರಿ ವಿಷಯವೇ ಆಗಿತ್ತು.

ಆದರೂ ದೊಡ್ಡಮ್ಮನ ಮಗಳಂತೆ ಮಂಜೇಶ್ವರದ ಗೋವಿಂದ ಪೈ ಕಾಲೇಜಿನಲ್ಲಿ ಆರ್ಟ್ಸೋ ಕಾಮರ್ಸೋ ಓದಬಹುದಿತ್ತು.ಅವಳ್ಯಾಕೋ‌ಮನಸ್ಸು ಮಾಡಲಿಲ್ಲ.ಒಟ್ಟಿನಲ್ಲಿ ಅವಳ ಓದು ಹತ್ತನೆಯ ತರಗತಿಗೆ ನಿಂತು ಹೋಯಿತು.

ಆಗ ಸಣ್ಣ ತಮ್ಮ ಗಂಚ ( ಗಣೇಶ ಅಗ ನಾವು ಅವನನ್ನು ಮುದ್ದಿನಿಂದ ಗಂಚ ಎಂದು ಕರೆಯುತ್ತಿದ್ದೆವು)ನನ್ನು  ಒಂದನೆಯ ತರಗತಿಗೆ ಸೇರಿಸಿದ್ದರು

ದಿನಾಲು ಇವನನ್ನು ಎಬ್ಬಿಸಿ ರಮಿಸಿ ಉಣ್ಸಿ ತಿನ್ಸಿ ಎತ್ತಿಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದಳು.ಸಣ್ಣಾಗಿರುವಾಗ ಶಾಲೆಗೆ ಹೋಗಲು ಗಣೇಶ ತುಂಬಾ ಹಿಂದೇಟು ಹಾಕುತ್ತಿದ್ದ.ಬಹುಶಃ ಒಂದನೇ ಎರಡನೆಯ ತರಗತಿಯ ಶಿಕ್ಷಕರು ಮಕ್ಕಳಿಗೆ ವಿಪರೀತ ಹೊಡೆಯುತ್ತಿದ್ದುದೇ ಕಾರಣ..


ನನಗೂ ಎರಡನೆ ತರಗತಿಯಲ್ಲಿ ಕೊಮ್ಮೆ ಮಾಸ್ಟ್ರು ಸಿಕ್ಕಾಪಟ್ಟೆ ಹೊಡೆಯುತ್ತಿದ್ದ ಬಗ್ಗೆ ಸ್ನೇಹಿತೆ ಯಶೋದಾ ಹೇಳ್ತಿರ್ತಾಳೆ.ನಾನು ಒಂದನೆಯ ತರಗತಿ ಮೀಯಪದವಿನ ವಿದ್ಯಾವರ್ಧಕ ಶಾಲೆಯಲ್ಲಿ ಓದಿದ್ದು.ಎರಡನೆಯ ಮೂರನೆಯ ನಾಲ್ಕನೆಯ ತರಗತಿ ಯನ್ನು ನಾನು ಶ್ರೀ ಶಂಕರನಾರಾಯಣ ಅನುದಾನಿತ ಶಾಲೆಯಲ್ಲಿ ಓದಿದ್ದು

ನಾನು ನಾಲ್ಕನೆಯ ತರಗತಿ ಓದುವಾಗ ದೊಡ್ಡ ತಮ್ಮ ಇದೇ ಶಾಲೆಯ ಒಂದನೆ ತರಗತಿಗೆ ಸೇರಿದ್ದ.ದೊಡ್ಡ ತಮ್ಮ ಕೂಡ ಶಾಲೆಗೆ ಹೋಗಲು ಕೇಳುತ್ತಿರಲಿಲ್ಲ.ನಾನು ಕೋಲು ಹಿಡಿದು ಅವನನ್ನು ಶಾಲೆಗೆ ಕರಕೊಂಡು ಹೋಗುತ್ತಿದ್ದೆ.ದಾರಿಯಲ್ಲಿ ಒಂದು ಪೊದೆ ಸಿಕ್ಕಿದರೆ ಸಾಕು ಅಲ್ಲಿ ಯು ಟರ್ನ್ ಹೊಡೆದು‌ಮನೆಗೆ ಓಡಿ ಬರುತ್ತಿದ್ದ.ಒಂದು ಮತ್ತು ಎರಡನೆಯ ತರಗತಿಗೆ ಹೋಗುವಾಗ ಮಾತ್ರ ಈ ಸಮಸ್ಯೆ ಇದ್ದದ್ದು ಬಹುಶಃ ಈ ಶಿಕ್ಷಕರು ಮಕ್ಕಳಿಗೆ ವಿಪರೀತ ಹೊಡೆಯುತ್ತಿದ್ದುದೇ ಇದಕ್ಕೆ ಕಾರಣ..ಎಲ್ಲ ಹೆತ್ತವರು ಈ ಸಮಸ್ಯೆಯನ್ನು ಅಲ್ಲಿ ಅನುಭವಿಸಿದ್ದರು.

ಮೀಯಪದವು ಶಾಲೆಯ ಒಂದನೆಯ ತರಗತಿ ಶಿಕ್ಷಕಿ ವೇದಾವತಿ ಟೀಚರ್ ಬಹಳ ಕರುಣಾಮಯಿ.ಹೊಡೆಯುದು ಬಿಡಿ ಗಟ್ಟಿಯಾಗಿ ಬೈದವರೂ ಅಲ್ಲ.ಹಾಗಾಗಿ ನನಗೆ ಒಂದನೆಯ ತರಗತಿಗೆ ಹೋಗಲು ಬಹಳ ಇಷ್ಟ ಇತ್ತು.ಕೊಳ್ಯೂರಿನ ಶಾಲೆಗೆ ಬಂದಾಗ ನನಗೂ ಶಾಲೆ ಇಷ್ಟ ಇರಲಿಲ್ಲ.


ಇರಲಿ

ಅಂತೂ ಅಕ್ಕನ ಸತತ ಯತ್ನದಿಂದ ಸಣ್ಣ ತಮ್ಮ ಹೇಗೋ ಒಂದನೆ ತರಗತಿ ಪಾಸಾಗಿ ಎರಡನೆಯ ತರಗತಿಗೆ ಬಂದ.ಅಷ್ಟಾಗುವಾಗ ಅಕ್ಕನಿಗೆ ಮದುವೆ ಅಯಿತು 

ಅಕ್ಕನ ಕಾಲಕ್ಕೆ ನಮ್ಮಲ್ಲಿ ವಧು ದಕ್ಷಿಣೆ / ಬದಿ ಪ್ರಚಲಿತವಿತ್ತು.ಸಾಕಷ್ಟು ದುಡ್ಡು ಚಿನ್ನ ಕೊಡುವುದಾದರೆ ಮಾತ್ರ ಹುಡುಗಿ ನೋಡಲು ಬರುತ್ತಿದ್ದರು

aided ಶಾಲೆಗಳಲ್ಲಿ ಶಿಕ್ಷಕರಾಗಬೇಕಿದ್ದರೆ ಆಗ ಹದಿನಾಲ್ಕು ಹದಿನೈದು ಸಾವಿರ ರುಪಾಯಿ ಡೊನೇಷನ್ ಕೊಡಬೇಕಾಗಿತ್ರು.

ಅಂತಹ ಅನುದಾನಿತ ಶಾಲೆಯ ಮೇಷ್ಟ್ರಿಗೆ ಹೆಣ್ಣು ಕೊಡಬೇಕಿದ್ದರೆ ಹೆತ್ತವರು ಆ ದುಡ್ಡನ್ನು ಕೊಡಬೇಕಾಗಿತ್ತು.ಜೊತೆಗೆ ಹತ್ತು ಹದಿನೈದು ಪವನು ಚಿನ್ನ ಕೊಟ್ಟರೆ ಮಾತ್ರ ಹುಡುಗಿರನ್ನು ಮದುವೆಯಾಗುತ್ತಿದ್ದರು.ಬ್ರಾಹ್ಮಣರಲ್ಲಿ ಈ ಕಾರಕ್ಕಾಗಿ ಮದುವೆಯಾಗದೆ ಬಾಕಿ ಉಳಿದ ಅರುವತ್ತು ವರ್ಷ ದಾಟಿದ ಮಹಿಳೆಯರು ಈಗಲೂ ಇದ್ದಾರೆ

ಈಗ ಕಾಲ ಬದಲಾಗಿದೆ.ನಿರಂತರ ನಡೆದ ಸ್ತ್ರೀ ಭ್ರೂಣ ಹತ್ಯೆಯ ಕಾರಣವೋ ,ಮಿತ ಕುಟುಂಬದ ಕಾರಣವೋ ಎನೋ ಹುಡುಗಿಯರ ಸಂಖ್ಯೆ ಕಡಿಮೆಯಾಗಿದೆ ಹಾಗಾಗಿ ಬದಿ/ ವರದಕ್ಷಿಣೆಯ ಸಮಸ್ಯೆ ಇಲ್ಲ

ನನ್ನ ಅಜ್ಜನಿಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ.ಅಮ್ಮ ಮತ್ತು ದೊಡ್ಡಮ್ಮ.ದೊಡ್ಡಮ್ಮ ದೊಡ್ಡಮ್ಮ‌ತಮ್ಮ ಹಿರಿಯರಿಂದ ಬಂದ ಆಸ್ತಿಯನ್ನು ಮಾರಾಟ ಮಾಡಿ‌ ಅಜ್ಜನ ಮನೆಗೆ ಬಂದು ನೆಲೆಸಿದರು.ಆಗ ಆಸ್ತಿ ಮಾರಾಟದಿಂದ ಸಿಕ್ಕ ದುಡ್ಡಿನಲ್ಲಿ ಅಜ್ಜನ ಆಸ್ತಿಯ ಸ್ವಲ್ಪ ಭಾಗವಾಗಿ ಅಮ್ಮನಿಗೆ ಸುಮಾರು 80,000₹ ,,( ಅಮೌಂಟ್ ಸರಿಯಾಗಿ ನೆನಪಿಲ್ಲ)/

ಕೊಟ್ಟಿದ್ದರು.ಇದು ಸುಮಾರು ನಲುವತ್ತು ವರ್ಷದ ಹಿಂದೆ ಕೊಟ್ಟದ್ದು ಆ ದುಡ್ಡಿನಲ್ಲಿ ಒಂದು ನಯ ಪೈಸೆ ಕೂಡ ಅಮ್ಮ ತನಗಾಗಿ ಬಳಸಲಿಲ್ಲ‌.ಎಲ್ಲವನ್ನು ಅಕ್ಕನ‌ಮದುವೆ,ಉಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿದರು.

ಅದರಿಂದಾಗಿ ನಾನೆಲ್ಲ ಈ ಸ್ಥಿತಿಗೆ ಬಂದೆವು.ಆ ದುಡ್ಡನ್ನು ಅಮ್ಮ ಹಾಗೆಯೇ ಬ್ಯಾಂಕಿನಲ್ಲಿ ಇಡುತ್ತಿದ್ದರೆ ಅದು ಈಗ ಕಡಿಮೆ ಎಂದರೂ ನಾಲ್ಕು ಕೋಟಿ ರುಪಾಯಿ ಆಗಿರುತ್ತಿತ್ತು.

ಈ ದುಡ್ಡಿನಲ್ಲಿ ನನ್ನ ಅಮ್ಮ ತನಗಾಗಿ ಒಂದೇ ಒಂದು ಸೀರೆಯನ್ನಾಗಲೀ ಒಡವೆಯನ್ನಾಗಲೀ ತೆಗೆದುಕೊಂಡಿರಲಿಲ್ಲ

ಈ ದುಡ್ಡು ಇದ್ದ ಕಾರಣ ಆ ವರದಕ್ಷಿಣೆ ಇದ್ದ ಕಾಲದಲ್ಲಿ ಅಕ್ಕನನ್ನು ಸಾಕಷ್ಡು ಕೃಷಿ ಭೂಮಿ ಇರುವುದಲ್ಲದೆ ಅನುದಾನಿತ ಶಾಲೆಯ ಮೇಷ್ಟ್ರಾಗಿದ್ದ ಹುಡುಗನಿಗರ  ಮದುವೆ ಮಾಡಿ ಕೊಡಲು ಸಾಧ್ಯವಾಯಿತು

ಬೇರಿಗೆ ಚಿಗುರಿನ ಚಿಂತೆ ಸದಾ ಇರುತ್ತದೆ.ಬೇರಿನ ಸತ್ವ ಉಂಡು ನಾವು ಬೆಳೆದೆವು ಎಂಬ ಸಂಗತಿ ಮರದ ರೆಂಬೆ ಕೊಂಬೆಗಳಿಗೆ ಗೊತ್ತೇ ಇರುವುದಿಲ್ಲ.



ಅಂದ ಹಾಗೆ 


.ಬಾವ ಬಾಯಾರು ಹೆದ್ದಾರಿ ಮುಳಿಗದ್ದೆ ಅನುದಾನಿತ ಶಾಲೆಯಲ್ಲಿ ಮೇಷ್ಟ್ರಾಗಿದ್ದರು ..ಆಗ ಅಕ್ಕನಿಗೆ ಖಾಸಗಿಯಾಗಿ ಓದಬಹುದಿತ್ತು.ಯಾಕೆ ತಲೆಗೆ ಹೋಗಲಿಲ್ವೋ ಗೊತ್ತಿಲ್ಲ.ಬಾವನ ಸಣ್ಣ ತಂಗಿ ಖಾಸಗಿಯಾಗಿ ಎಂಎ ಓದಿದ್ದರು.ಆಗಲೂ ಅಕ್ಕನಿಗೆ ಓದಬಹುದೆಂದೇಕೆ ತಲೆಗೆ ಹೋಗಲಿಲ್ಲ ಗೊತ್ತಿಲ್ಲ.ಬಹುಶಃ ಮಗ ಮಗಳು ಹುಟ್ಟಿ ಅವರಲಾಲನೆ ಪಾಲನೆಯಲ್ಲಿಯೇ ದಿನಗಳೆದಿರಬೇಕು

ಅಕ್ಕನ ಮದುವೆಯಾದ ನಂತರ ನಾವೆಲ್ಲ ರಜೆಯಲ್ಲಿ ಅಕ್ಕನ ಮನೆಗೆ ಹೋಗ್ತಿದ್ದೆವು

ಅಕ್ಕ ಬಗೆ ಬಗೆಯ ತಿಂಡಿ ಮಾಡಿ ಬಡಿಸುತ್ತಿದ್ದಳು.ಅಕ್ಕನ ಅತ್ತೆ ಮಾವ ಬಹಳ ಒಳ್ಳೆಯವರಾಗಿದ್ದರು.ಮಾವ ಗಮಕ ವಾಚನ ಮಾಡಬಲ್ಲವರಾಗಿದ್ದು ಕುಮಾರ ವ್ಯಾಸನ ಕಾವ್ಯವನ್ನು ಓದಿ ನಮಗೆ ಕಥೆಯನ್ನು ಹೇಳ್ತಾ ಇದ್ದರು.ಬೇರೆ ಬೇರೆ ಕಥೆಗಳನ್ನೂ ಹೇಳ್ತಿದ್ದರು.ಸೊಸೆಯ ತಮ್ಮ ತಂಗಿಯರು ಬಂದರೆ ಭಾರ ಎಂಬ ಭಾವ ಅವರಿಗಿರಲಿಲ್ಲ‌.ನಮ್ಮ ಮೇಲೆ ತುಂಬಾ ಪ್ರೀತಿ ಇತ್ತು ಅವರಿಗೆ

ಇರಲಿ

ಅಕ್ಕ ಬಹುಶಃ ತನ್ನ ಜೀವನದಲ್ಲಿ ಬಣ್ಣದ ಡಿಸೈನಿನ ಬಟ್ಟೆ ತಂದು ಹೊಲಿಸಿದ ಅಂಗಿ ಹಾಕಲೇ ಇಲ್ಲ.ತಂದೆ ಪುರೋಹಿತರಾದ ಕಾರಣ ಬಿಳಿ ಮುಂಡು ಸಿಕ್ತಾ ಇತ್ತು.ಕಾಫಿ ಕಲರ್,ಗುಲಾಬಿ ಬಣ್ಣ,ನೀಲಿ ಬಣ್ಣದ ಬಣ್ಣದ ಪುಡಿಗಳನ್ನು ನೀರಿಗೆ ಹಾಕಿ ಕುದಿಸಿ ಅದರಲ್ಲಿ ಈ ಬಿಳಿ ಬಟ್ಟೆ ಮುಂಡನ್ನು ಮುಳುಗಿಸುತ್ತಾ ಇದ್ದರು‌.ಆಗ ಅದಕ್ಕೆ ಬಣ್ಣ ಹಿಡಿಯುತ್ತಿತ್ತು‌.ನಂತರ ಒಣಗಿಸಿ ಅದೇ ಮೂರು ಬಣ್ಣಗಳಲ್ಲಿ ಲಂಗ ರವಿಕೆ ಹೊಲಿಸುತ್ತಿದ್ದರು



.ನನಗೂ ಅಕ್ಕ ಅಂದು ಧರಿಸುತ್ತಿದ್ದ ರೀತಿಯ  ಉದ್ದ ಲಂಗ ರವಕೆ  ಧರಿಸಿದ ನೆನಪಿದೆ

ಆದರೆ ನಾನು ಅಜ್ಜನ ಮನೆಯಲ್ಲಿ ಬೆಳೆದ ಕಾರಣ ಅಜ್ಜ ನನಗೆ ಮೀಯಪದವಿನ ದಿನೇಶಣ್ಣನ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ವರ್ಷಕ್ಕೆ ಒಂದೆರಡು ಹೊಸ ಬಟ್ಟೆ ತೆಗೆದು ಲಂಗ ರವಿಕೆ ಹೊಲಿಸಿಕೊಡುತ್ತಿದ್ದರು.

ಅಕ್ಕನ ಮದುವೆಗೆ ಮೊದಲ ಬಾರಿಗೆ ನನಗೆ ಪಾಲಿಸ್ಟರ್ ಬಟ್ಟೆ ತೆಗೆದು ಉದ್ದ ಲಂಗ ರವಿಕೆ ಹೊಲಿಸಿದ್ದರು

ನಿದಾನಕ್ಕೆ ಮನೆ ಪರಿಸ್ಥಿತಿ ಸುಧಾರಿಸಿತು.ಅಷ್ಟರಲ್ಲಿ ಅಕ್ಕನಿಗೆ ಮದುವೆ ಆಯಿತು.ಬಾವ ಅನುದಾನಿತ ಶಾಲೆ ಮಾಸ್ಟ್ರಾಗಿದ್ದುದಲ್ಲದೆ ಸಾಕಷ್ಟು ಕೃಷಿ ಇತ್ತು.ಹಾಗಾಗಿ ನಂತರ ಅಕ್ಕನಿಗೆ ಸೀರೆ ಚಿನ್ನ ಬಣ್ಣದ ಕೊರತೆ ಏನೂ ಇರಲಿಲ್ಲ‌.ಅಲ್ಲದೆ ಮದುವೆ ಮಾಡುವಾಗಲೂ ತಂದೆ ತಾಯಿ ಸಾಕಷ್ಟು ಚಿನ್ನ ,ದುಡ್ಡು ಕೊಟ್ಟಿದ್ದರು ಬಾವ ವರದಕ್ಷಿಣೆ ಅಂತ ಕೇಳಿರಲಿಲ್ಲ.ಆದರೆ ಆ ಕಾಲದಲ್ಲಿ ಅನುದಾನಿತ ಶಾಲೆಯ ಮೇಸ್ಟ್ರಿಗೆ ಹುಡುಗಿ ಕೊಡಬೇಕಿದ್ದರೆ ಆತ ತನ್ನ ಕೆಲಸಕ್ಕಾಗಿ ಶಾಲೆಗೆ ನೀಡಿದ ಡೊನೇಷನ್ ಅನ್ನು ಹುಡುಗಿ ಮನೆಯವರು ನೀಡಬೇಕಿತ್ತು

ಜೊತೆಗೆ ಅಣ್ಣ ಅಮೇರಿಕಕ್ಕೆ ಹೋದ ಮೆಲೆ ಅಕ್ಕ ತಮ್ಮ ತಂಗಿಯರಿಗೆ ಧಾರಾಳವಾಗಿ ಬೇಕು ಬೇಕಾದ್ದನ್ನು ತೆಗೆಸಿಕೊಟ್ಟ.ನನಗೆ ಮತ್ತು ಅಕ್ಕನಿಗೆ 32 ಗ್ರಾಮಿನ ಇಪ್ಪತ್ತ ನಾಲ್ಕು ಕ್ಯಾರೆಟಿನ ಚಿನ್ನದ ಬಿಸ್ಕೆಟ್ ಅನ್ನು ಕೊಟ್ಟಿದ್ದಾನೆ.

ಹಾಗಾಗಿ ನಮಗೆ ಯಾವುದೇ ಕೊರತೆ ಆಗಲೇ ಇಲ್ಲ

ನಂತರ ಅಕ್ಕನ ಮಗ ರಾಜೇಶ ರುಪಾಯಿಮೂಲೆಯೂ  ಉನ್ನತ ಶಿಕ್ಷಣಕ್ಕೆ ಅಮೇರಿಕಕ್ಕೆ ಹೋದ,ಅಲ್ಲಿ ಡಾಕ್ಟರೇಟ್ ಮತ್ತು ಪೋಸ್ಟ್ಡಾಕ್ಟೋರಲ್ ಸ್ಟಡಿ ಮಾಡಿ ಒಳ್ಳೆಯ ಕೆಲಸದಲ್ಲಿದ್ದಾನೆ.ಅಲ್ಲಿ ಎರಡೆಕರೆ ಜಾಗ ತೆಗೆದು ಸ್ವಂತ ಮನೆ ಕಟ್ಟಿಕೊಂಡಿದ್ದಾನೆ.ಅವನ ಹೆಂಡತಿ‌ನಿತಾಶಾ ಎಂಬಿಬಿಎಸ್ ಓದಿ ಎಂಡಿ ಮಾಡಿದ್ದು ಅಲ್ಲಿ ಒಳ್ಳೆಯ ಕೆಲಸದಲ್ಲಿದ್ದಾಳೆ.

ಅಕ್ಕನ ಮಗಳು ಅನುಪಮಾಳೂ ಇಂಜನಿಯರಿಂಗ್ ಓದಿ‌ಮದುವೆಯಾಗಿ ಗಂಡನ ಜೊತೆ ಅಮೇರಿಕಾದಲ್ಲಿದ್ದಾಳೆ .ಇಬ್ಬರೂ ಇಂಜನಿಯರ್ಸ್ ಆಗಿದ್ದು ಒಳ್ಳೆಯ ಕೆಲಸದಲ್ಲಿದ್ದಾರೆ.

ಹಾಗಾಗಿ ಎಲ್ಲರ ಮನೆ ಕಥೆಯಂತೆ ನಮ್ಮನೆಯ ಹಿರಿಯಕ್ಕ ಬಡ ಅಕ್ಕಳಾಗಿಲ್ಲ‌ ಬದಲಿಗೆ ಅಕ್ಷರಶಃ ಹಿಂದಿ ಭಾಷೆಯ ಬಡಾ ಅಕ್ಕ ಆಗಿದ್ದಾಳೆ

ಏನೇನೋ ವಿಶಿಷ್ಟ ಅಡುಗೆ ಮಾಡಿ ಅದನ್ನು ಫೋಟೋ ಹಿಡಿದು ತನ್ನ‌ ಮೈದುನ ( ಸಣ್ಣ ಮಾವನ ಮಗ ,ಬಾವ ಒಬ್ಬನೇ ಮಗನಾಗಿದ್ದು ಅಕ್ಕನಿಗೆ ನೇರ ಮೈದುನಂದಿರು ಇಲ್ಲ ) ಹೆಂಡತಿ ಕಾತ್ಯಾಯನಿಗೆ ಕಳುಹಿಸುತ್ತಾಳೆ.ಅದನ್ನವರು ಅಕ್ಕನ ಹೆಸರಿನಲ್ಲಿಯೇ  ಯು ಟ್ಯೂಬಿಗೆ ಹಾಕ್ತಾರೆ

ಅಕ್ಕ ಚಿಕ್ಕಂದಿನಿಂದಲೂ ಅತ್ಯುತ್ಸಾಹಿ.ಶಾಲೆಯಲ್ಲಿ ಹಾಡಿನಲ್ಲಿ  ಇನ್ನೇನೋ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಿದ್ದಳು.ಮದುವೆಯಾದ ನಂತರ ಕೂಡ ಗಣೇಸೋತ್ಸವ ಇನ್ನಿತರ ಸಂದರ್ಭಗಳಲ್ಲಿ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದಾಳೆ.ಈಗಲೂ ಪಡೆಯುತ್ತಿರಬಹುದು

ಅಮೇರಿಕಕ್ಕೂ ಹೋಗಿ ಬಂದಿದ್ದಾಳೆ.ಬಹುಶಃ ಅಮೇರಿಕಕ್ಕೆ ಹೋದ ಮೇಲೆ ಅಕ್ಕ ಮೊದಲಿಗೆ ಬಣ್ಣದ ಡ್ರೆಸ್ ಚೂಡಿದಾರ್ ಧರಿಸಿರಬೇಕು.ಅದನ್ನು ನೋಡಿ ನನಗೆ ನಿಜಕ್ಕೂ ಖುಷಿಯಾಗಿದೆ.ಹಳ್ಳಿಯಲ್ಲಿ ಇಂದಿಗೂ ನನ್ನ ಅಥವಾ ಅಕ್ಕನ ವಯಸ್ಸಿನ ಸ್ತ್ರೀಯರು ಚೂಡಿದಾರ್ ಧರಿಸುದು  ಬಹಳ ಕಡಿಮೆ.ಮನದೊಳಗೆ ಧರಿಸುವ ಆಸೆ ಇದ್ದರೂ ಧರಿಸುವಂತಿಲ್ಲ.ಅಕ್ಕನಿಗೆ ಚೂಡಿದಾರ್ ಧರಿಸುವ ಆಸೆ ಇತ್ತೋ ಇಲ್ಲವೋ ಗೊತ್ತಿಲ್ಲ.ಆದರೆ ಅವಳು ಧರಿಸಿದ್ದು ನನಗೆ ಮಾತ್ರ ಖುಷಿ ತಂದಿದೆ.ವಿವಿಧ ಅಡುಗೆಗೆಳ ಪರಿಚಯದ ಮೂಲಕ ಯು ಟ್ಯೂಬಿನಲ್ಲೂ ಅಕ್ಕ ಪ್ರಸಿದ್ಧಿ ಪಡೆದ ಬಗ್ಗೆ ನನಗೆ ಬಹಳ ಹೆಮ್ಮೆ ಸಂತಸ ಇದೆ

ತನ್ನ ಮಕ್ಕಳ ಓದಿದಾಗಿ ಸಾಲ ಮಾಡಿ ಅದನ್ನು ಕೊಡಲು ಭಹಳ ಕಷ್ಟ ಪಟ್ಟಿದ್ದಾಳೆ ನನ್ನಕ್ಕ.ಈಗಲೂ ಹಸು ಸಾಕಿ ಹಾಲು ಮಾರಾಟಮಾಡುತ್ತಿದ್ದಾಳೆ.ತೋಟದ ಮನೆಯ ಸಂಪೂರ್ಣ ಜವಾಬ್ದಾರಿ ಅವಳದೇ

ತನ್ನ ಮಾವನವರನ್ನು ಕೊನೆ ತನಕ ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾಳೆ.ಕೊನೆ ಕಾಲದಲ್ಲಿ ಮಾನ ಅನೇಕ ತಿಂಗಳ‌ಕಾಲ‌ ಮಲಗಿದಲ್ಲಿಯೇ ಇದ್ದರು.ಒಂದಿನಿತು ಕೊರತೆಯಾಗದಂತೆ ನೋಡಿಕೊಂಡಿದ್ದಳು

ಎಲ್ಲ‌ ಹೆತ್ತವರು ಮಕ್ಕಳಿಂದ ಒಂದಲ್ಲ‌ಒಂದು ದಿನ ನೇರವಾಗಿ ಅಥವಾ ಪರೋಕ್ಷವಾಗಿ ಕೇಳುವ ನೀನೇನು ಮಾಡಿದ ನನಗೆ? ನಿಮ್ಮಿಂದ ನಮ್ಮ ಸರ್ವ ನಾಶ ಆಯಿತು

ಹುಟ್ಟಿಸಿದ್ದು ಎಂತಕೆ ? ಎಂಬ ಮಾತುಗಳನ್ನು ಕೇಳದೇ ಇದ್ದರೆ ನಿಜಕ್ಕೂ ಅದೃಷ್ಟವಂತೆ 

ಸ್ವಂತ  ಮಕ್ಕಳಂತೆ ಲಾಲನೆ ಪಾಲನೆ ಮಾಡಿದ ತಮ್ಮಂದಿರೂ‌ಮರೆಯದಿದ್ದರೆ ಸರಿನಹಾಗೆಯೇ ತಮ್ಮಂದಿರು ಮಾಡಿದ ಸಹಾಯವನ್ನೂ‌ ಮರೆಯದಿರಬೇಕು

ಅಕ್ಕನ‌ಮಕ್ಕಳನ್ನು ನನ್ನ ತಂದೆ ತಾಯಿ ಅಣ್ಣ ತಮ್ಮಂದಿರು ಎಂದೂ ಬೇರೆಯವರೆಂದು ಕಾಣಲೇ ಇಲ್ಲ.ಅವರ ಏಳಿಗೆಗಾಗಿ ಸತತ ಯತ್ನ ಮಾಡಿದ್ದಾರೆ.ಅಕ್ಕನ ಮಗ ರಾಜೇಶನ ವಿದೇಶದಲ್ಲಿನ ಓದು ಸುಲಭದ್ದಾಗಿರಲಿಲ್ಲ.ಅಕ್ಕನ‌ಮಗಳ‌ಬದುಕಿನ ಸಮಸ್ಯೆಗಳನ್ನೂ ಸರಿ‌ಮಾಡುವಲ್ಲಿ ತಮ್ಮ ಗಣೇಶನ‌ಪಾಲು ಬಹು ದೊಡ್ಡದು

ಮುಂದೆ 

ತಾವು ಅಪ್ಪಾಮ್ಮ‌‌ ಮಕ್ಕಳು ಬೇರೆ ..ಈ ಮಟ್ಟಕ್ಕೆ ಬೆಳೆಯಲು‌ಕಾರಣವಾದ ಅಜ್ಜಿ ಅಜ್ಜಮಾವಂದಿರು ಬೇರೆ ಎಂದು ಕಾಣದಿದ್ದರೆ ಒಳಿತು

ಆದರೆ ಕಾಲ‌ಕಷ್ಟದ್ದು.ಹತ್ತಲು‌ಮಾತ್ರ ಏಣಿ ಬೇಕು.ನಂಯರ ಅದನ್ನು ಕಿತ್ತೊಗೆಯುವವರೇ ಹೆಚ್ಚು

ಕಾಲನ ನಡೆಯೇ ಹಾಗೆ ಬಲು ವಿಚಿತ್ರವಾದದ್ದು.ತಾವು ಪಡೆದ ಸಹಾಯ ಕ್ಷಣದಲ್ಲಿ ಮರೆತು ಹೋಗುತ್ತದೆ.ತಾವು‌ಮಾಡಿದ್ದು ಬೆಟ್ಟದಂತೆ ಭಾಸವಾಗುತ್ತದೆ‌

ಏನೇ ಇದ್ದರೂ ವಯಸ್ಸಾದ ತಂದೆ ತಾಯಿಯರನ್ನು ಹಂಗಿಸಿ ಭಂಗಿಸಿ ಕಣ್ಣೀರು ಹಾಕಿಸುವುದು ತಪ್ಪು

ಅದಕ್ಕೆ ಕ್ಷಮೆ ಇಲ್ಲ.

ಇಂದಿನ‌ ಮಕ್ಕಳತಂದೆ ತಾಯಿಯಿಂದ ಎಲ್ಲವನ್ನೂ‌ ಪಡೆದು ಕೊನೆಗೆ ನಿಮ್ಮಿಂದ ನಾನು ಸರ್ವನಾಶ ಆದೆ ಎನ್ನುವಷ್ಟು ಮುಂದುವರಿದಿದ್ದಾರೆ

ಓದಿ ಸಾಧನೆ ಮಾಡಲಾಗದ್ದಕ್ಕೆ ಕೊನೆಗೆ ಹೆತ್ತವರ ಮೇಲೆ ಗೂಬೆ ಕೂರಿಸುವದ್ದು

ಈಗೇನು..ಸಾಕಷ್ಟು ಉದ್ಯೋಗಾವಕಾಶಗಳಿವೆ

ಅನುಭವಿಗಳಿಗೆ ಅವಕಾಶವಿದೆ.ಜೊತೆಗೆ ಉನ್ನತ ಶಿಕ್ಷಣ ಪದವಿ ಕೂಡ ಬೇಕಿದೆ.ಯಾವ ವಯಸ್ಸಿನಲ್ಲಿಯೂ ಇದನ್ನು ಗಳಿಸಿಕೊಳ್ಳಬಹುದು.ಮನಸು ಬೇಕಷ್ಟೇ

 


Saturday 8 January 2022

ನನಗೂ ಆತ್ಮವಿದೆ ಅದಕ್ಕೂ ಒಂದು ಕಥೆ ಇದೆ ಅಮ್ಮಂದಿರೇ ಕೈ ನಡೆಯುವಾಗಲೇ ದುಡ್ಡು ನಿಮ್ಮ ಹೆಸರಿನಲ್ಲಿರಿಸಿಕೊಳ್ಳಿ

 

ನನಗೂ ಆತ್ಮವಿದೆ  ಅದಕ್ಕೂ ಒಂದು ಕಥೆ ಇದೆ
ಅಮ್ಮಂದಿರೇ ಕೈ ನಡೆಯುವಾಗಲೇ ದುಡ್ಡು ನಿಮ್ಮ ಹೆಸರಿನಲ್ಲಿರಿಸಿಕೊಳ್ಳಿ

ನಮ್ಮ‌ಪರಿಚಯದ  ಎಲ್ಲಮ್ಮ ಆಂಟಿ ಮಾತಿನ ನಡುವೆ  ಅವರ ಸ್ನೇಹಿತರೊಬ್ಬರ ನಡೆದ ಕಥೆಯನ್ನು  ಹೇಳಿದ್ದರು.
ಅವರ ಸ್ನೇಹಿತೆಯ ಗಂಡ ಒಳ್ಳೆಯ ಕೆಲಸದಲ್ಲಿದ್ದರು
ಒಬ್ಬ ಮಗ ಒಂದು ಮಗಳ‌ ಚಂದದ ಸಂಸಾರ
ಮಗ ಮತ್ತು ಮಗಳಿಗೆ ಸೈಟು ತೆಗೆದುಕೊಟ್ಟಿದ್ದರು
ಮಗನ ಹೆಸರಿನ ಸೈಟಿನಲ್ಲಿ ಡುಪ್ಲೆಕ್ಸ್ ಮನೆ ಕಟ್ಟಿ ಅರಾಮಾಗಿ ಬದುಕುತ್ತಿದ್ದರು.ಮಗ ಮಗಳಿಗೆ ಮದುವೆಯಾಗಿ ಸೊಸೆ ಅಳಿಯ ಬಂದರು
ಹೀಗೇ ದಿನ ಉರುಳುತ್ತಿರುವಾಗ ಒಂದು ರಾತ್ರಿ ಹೃದಯಾಘಾತ ಆಗಿ ಅಸ್ಪತ್ರೆಗೆ ತಲುಪುವ ಮೊದಲೇ ಗಂಡ ತೀರಿಕೊಂಡರು
ಮೊದಲಿನಿಂದಲೂ ದುಡ್ಡಿನ ವ್ಯವಹಾರ ಗಂಡನೇ ನೋಡಿಕೊಳ್ತಾ ಇದ್ದಿದ್ದು.ಹೆಂಡತಿಗೆ ಒಂದಿನಿತು ಹೊರಗಿನ ವ್ಯವಹಾರದ ತಿಳುವಳಿಕೆ ಇಲ್ಲ.ತಂದೆ ಸತ್ತಾಗ ಬಂದ ದುಡ್ಡೆಲ್ಲವನ್ನು ಮಗ ಅಮ್ಮನ ಸಹಿ ಹಾಕಿಸಿಕೊಂಡು ಪಡೆದ.ಇದರಿಂದಾಗಿ ಮಗಳಿಗೆ ಕೋಪ ಬಂತು.ತಾಯಿಯಕಡೆ ತಿರುಗಿ ನೋಡಲಿಲ್ಲ.
ತಂದೆ ಸತ್ತ ಕೆಲವೇ ದಿನಕ್ಕೆ ಮಗನಿಗೆ ತಾಯಿ ಭಾರವಾಗತೊಡಗಿದಳು.ಅವಳಲ್ಲಿದ್ದ ಆಭರಣಗಳನ್ನು ಚೂರಿ ತೋರಿಸಿ ಹೆದರಿಸಿ ಕಿತ್ತುಕೊಂಡು ಹೊರ ಹಾಕಿದರು.ಗಂಡ ಹೆಂಡತಿಯ ಹೆಸರಿನಲ್ಲಿ ಏನನ್ನೂ ಮಾಡಿಟ್ಟಿರಲಿಲ್ಲ.ನಂತರ ಆ ತಾಯಿ ಯಾರ್ಯಾರದೋ ಮನೆಯ ಅಡಿಗೆ ಕೆಲಸಕ್ಕೆ ಹೋಗಿ ಎಂಟು ನೂರು ರುಪಾಯಿಯ ಶೀಟಿನ ಮನೆಯಲ್ಲಿ ಬದುಕುವಂತಾಯಿತು.
ಇದೇ ರೀತಿ ಅವರ ಇನ್ನೊಂದು ಸ್ನೇಹಿತರ ಕಥೆಯೂ ಹೇಳಿದ್ದರು
ಬಹುಶಹ ಈ ಸ್ನೇಹಿತೆಗೆ ಒಂದು ಸಣ್ಣ ಸರ್ಕಾರಿ ಕೆಲಸ ಇತ್ತು.ಗಂಡ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ತಂದೆ ತಾಯಿಯನ್ನು ಕಳೆದುಕೊಂಡ ಸಂಬಂಧಿಕರ ಹೆಣ್ಣು ಮಗುವನ್ನು ಮಗಳಂತೆ ಸಾಕಿ ಓದಿಸಿದರು.ತಮಗಾಗಿ ದುಡ್ಡು ಉಳಿಸಿಕೊಳ್ಳಲಿಲ್ಲ  ಅ ಸಾಕು ಮಗಳಿಗೆ ಮದುವೆಯಾಯಿತು.ಈಗ ಈ ಸಾಕುತಾಯಿಗೆ ನೆಲೆಯಿಲ್ಲದಾಯಿತು
ಅವರು ರಿಟೈರ್ಡ್ ಆದರು‌‌.ನಂತರ ಬರುವ ಪೆನ್ಷನ್ ನಲ್ಲಿ ಒಂದು ಸಣ್ಣ ಬಾಡಿಗೆ ಮನೆ ಹಿಡಿದು ಬದುಕುತ್ತಿದ್ದಾರೆ.ಇನ್ನೊಂದು ನನ್ನ ಸಂಬಂಧಿಕರದೇ ಉದಾಹರಣೆ
ಮಗಳು ಹುಟ್ಟಿ ಕಣ್ಣು ತೆರೆಯುವ ಮೊದಲೇ ಗಂಡ ತೀರಿ ಹೋಗಿದ್ದ.ಇವರೇಕೆ ಮುಂದೆ ಓದಿ ಸರಿಯಾದ ಕೆಲಸ ಹಿಡಿಯಲಿಲ್ಲ ಎಂದು ನನಗೆ ಗೊತ್ತಿಲ್ಲ.ಮಗಳು ಬಹಳ ಜಾಣೆ.ಇಂಜನಿಯರಿಂಗ್ ಓದಿ ಮದುವೆಯಾದಳು.ಅದು ಅತ್ತೆ ಮಾವ ಮೈದುನಂದಿರು ಇರುವ ಕೂಡು ಕುಟುಂಬ.ಈ ತಾಯಿಗೆ ಯಾಕೋ ಅಲ್ಲಿ ಸರಿ ಹೋಗಲಿಲ್ಲ.ನಂತರ ಪುನಃತಂದೆ ಮನೆ ಸೇರಿದರು‌ಅದೃಷ್ಟಕ್ಕೆ ಸ್ವಲ್ಪ ಪಿತ್ರಾರ್ಜಿತ ಆಸ್ತಿಯೂ ಇದೆ.ಇರಲು ತಂದೆ ಮನೆ ಇದೆ..ಹೇಗೋ ನಡೆದಿರಬಹುದು ಅವರ ಬದುಕು.
ಹೀಗೆ ಸುತ್ತ ಮುತ್ತ ಅನೇಕ ಘಟನೆಗಳ ಬಗ್ಗೆ ಕೇಳ್ತಾ ಇದ್ದೇವೆ.ತಂದೆ ತಾಯಿಯರ ಮನೆ ಆಸ್ತಿ ಪಾಸ್ತಿ ದುಡ್ಡನ್ನು ತಮ್ಮ ಹೆಸರಿಗೆ ಮಾಡಿಕೊಂಡು ನಂತರ ತಂದೆ ತಾಯಿಯರನ್ನು ನೋಡಿಕೊಳ್ಳದೆ ಇರುವ ಅನೇಕ ಮಕ್ಕಳಿದ್ದಾರೆ.ಇಂತಹ ವಿಷಯಗಳಲ್ಲಿ ಮಗಳು ಮಗನೆಂಬ ಬೇಧ ಇಲ್ಲ
ತಂದೆ ತಾಯಿಯರನ್ನು ಕೆಲಸದಾಳಿನಂತೆ ದುಡಿಸಿಕೊಳ್ಳುವ ಅವರು ಕೆಲಸ ಮಾಡಲಾಗದಷ್ಟು ಅಶಕ್ತರಾದಾಗ ಹೊರಗೆ ಹಾಕುವ ಮಗಳಂದಿರೂ ಇದ್ದಾರೆ
ಹಾಗಾಗಿ ತಂದೆ ತಾಯಂದಿರು ಸ್ವಲ್ಪ ಎಚ್ಚತ್ತುಕೊಳ್ಳಬೇಕಿದೆ.ಸರ್ವಸ್ವವನ್ನೂ ಮಕ್ಕಳಿಗೆ ಕೊಡದೆ ತಮ್ಮ ವೃದ್ಧಾಪ್ಯದ ದಿನಗಳಿಗಾಗಿ ಇರಿಸಿಕೊಳ್ಳಬೇಕು.ಮಕ್ಕಳಿಗೆ ಎಜುಕೇಶನ್ ಕೊಡಿಸಬೇಕು ಅಷ್ಟೇ..ಹಾಗೆಂದು ವಿಪರೀತ ಸಾಲ ಮಾಡಿಕೊಂಡು ಓದಿಸುವುದಲ್ಲ.ಅವರು ತೆಗೆದ ಅಂಕಗಳಿಗೆ ಯಾವುದು ಸಿಗುತ್ತದೋ ಅದನ್ನಷ್ಟೇ ಓದಿಸಬೇಕು.
ಎಷ್ಟೇ ತ್ಯಾಗ ಮಾಡಿ ಕಷ್ಟ ಪಟ್ಟು ಬೆಳೆಸಿದರೂ ಮಕ್ಕಳಿಗೆ ಆ ಬಗ್ಗೆ ಒಂದಿನಿತೂ ಕೃತಜ್ಞತೆ ಇರುವುದಿಲ್ಲ.ತಾವು ತಂದೆ ತಾಯಿಗೆ ಮಾಡಿದ್ದೇ ಹೆಚ್ಚೆಂಬ ಭಾವ ಇರುತ್ತದೆ
ಸಾಮಾನ್ಯವಾಗಿ ತಂದೆ ಇರುವ ತನಕ ಸಮಸ್ಯೆ ಅಗುದಿಲ್ಲ.ಯಾಕೆಂದರೆ ದುಡ್ಡು ಅಸ್ತಿ ಎಲ್ಲ ತಂದೆ ಹೆಸರಲ್ಲಿ ಇರುತ್ತದೆ.ತಂದೆ ತೀರಿ ಹೋದ ನಂತರ ಉಳಿಯುವ ತಾಯಿಯ ಹೆಸರಲ್ಲಿ ಯಾವುದೇ ಆಸ್ತಿಪಾಸ್ತಿ ದುಡ್ಡಿಲ್ಲದೇ ಇರುವಾಗ ಸಮಸ್ಯೆ ಶುರುವಾಗುತ್ತದೆ.ತಾಯಿ‌ ಮುಟ್ಟಿದ್ದು ಮಾತನಾಡಿದ್ದು.ಉಸಿರೆಳೆದದ್ದು ಎಲ್ಲದರಲ್ಲಿಯೂ ತಪ್ಪುಗಳು ಕಾಣಿಸುತ್ತವೆ.
ಎಷ್ಟೇ ಪ್ರೀತಿಯಿಂದ ತಮಗಾಗಿ ಏನು ಇರಿಸಿಕೊಳ್ಳದೆಯೇ ಮಕ್ಕಳನ್ನು ಸಾಕಲಿ
ವಯಸ್ಸಾದಾಗ ನನ್ನನ್ನು ಹೆತ್ತದ್ದು ಯಾಕೆ ಸಾಕಿದ್ದು ಯಾಕೆ ಓದಿಸಿದ್ದು ಯಾಕೆ ,ನಿನ್ನಿಂದಾಗಿ ನನ್ನ ಬದುಕು ಹಾಳಾಯಿತು ಎಂಬ ಮಕ್ಕಳ ಸಂಖ್ಯೆ ಹೆಚ್ಚಿದೆ

ದುಡ್ಡಿದ್ದರೆ ಇಂದು ಪೇ ಮಾಡಿ ಇರುವ ವೃದ್ಧಾಶ್ರಮಗಳಲ್ಲಿ ಆರಾಮಾಗಿ ಇರಬಹುದು.ಮಗಳು ಅಳಿಯ ಮಗ ಸೊಸೆಯಂದಿರ ಗಂಟು ಹಾಕಿದ ಮುಖ ನೋಡಿಕೊಂಡು ಬೈದರೂ ಬಡಿದರೂ ಅನುಭವಿಸಿಕೊಂಡು ಇರುವ ಅಗತ್ಯವಿಲ್ಲ.ತಮ್ಮದೇ ವಯಸ್ಸಿನ ಸ್ನೇಹಿತರ ಜೊತೆಗೆ ಆರಾಮಾಗಿ ಬದುಕಬಹುದು.
ಹಾಗಾಗಿ ಅಮ್ಮಂದಿರು ತಮಗೆ ಅರುವತ್ತು ವರ್ಷದ ನಂತರದ ಜೀವನಕ್ಕೆ ಬೇಕಾದಷ್ಟು ದುಡ್ಡನ್ನು ತಮ್ಮ ಹೆಸರಿನಲ್ಲಿಯೇ ಇರಿಸಿಕೊಳ್ಳಬೇಕು
ಮಕ್ಕಳು ಒಳ್ಳೆಯವರೇ ಆಗಿದ್ದರೂ ಅವರಿಗೆ ಭಾರವೆನಿಸಬೇಕಿಲ್ಲ.ತಮ್ಮ ಕೈಲಾದಷ್ಟು ದಿನ ಸ್ವತಂತ್ರವಾಗಿ ಬದುಕಿ ಕೈಲಾಗದಾಗ ಪೇ ಮಾಡುವ ವೃದ್ಧಾಶ್ರಮಕ್ಕೆ ಹೋಗಬಹುದು.ಅಥವಾ ಮಕ್ಕಳೇ ನೋಡಿಕೊಳ್ಳುದಾದರೆ ಅವರ ಜೊತೆಗೂ ಇರಬಹುದು.ಆದರೆ ದುಡ್ಡಿದ್ದರೆ ಬೈದರೂ ಬಡಿದರೂ ಅವರ ಜೊತೆಗೇ ಬದುಕುವ ಅನಿವಾರ್ಯತೆ ಇರುವುದಿಲ್ಲ.ಹಾಗಾಗಿ ಎಚ್ಚತ್ತುಕೊಳ್ಳಬೇಕಿದೆ.
ಇದಲ್ಲದೆ ಇತ್ತೀಚೆಗಿನ ಇನ್ನೊಂದು ಸಮಸ್ಯೆ ಮಕ್ಕಳೆಲ್ಲ ವಿದೇಶದಲ್ಲಿ ನೆಲೆಸುವದ್ದು.ಊರಿನಲ್ಲಿರುವ ವೃದ್ಧ ತಂದೆ ತಂದೆ ತಾಯಿಗೆ ಬೇಕಾದದ್ದನ್ನು ತಂದುಕೊಡುವವರಿಲ್ಲ.ಆರೋಗ್ಯ ಹಾಳಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವವರಿಲ್ಲದ ದುಸ್ಥಿತಿ.ಅಡುಗೆ ಮಾಡಿ ಕೊಡುವವರಿಲ್ಲ.
ಇದಕ್ಕೂ ಪೇ ಮಾಡುವ ವೃದ್ಧಾಶ್ರಮಗಳೇ ಸದ್ಯಕ್ಕೆ ಕಾಣಿಸುವ ಪರಿಹಾರ.
ನಾನಿವತ್ತು ಅಕ್ಕನ ಜೊತೆ ಮಾತನಾಡುವಾಗ ಮಕ್ಕಳು ಚೆನ್ನಾಗಿ ನೋಡಿಕೊಂಡಿರುವ ತಲೆಮಾರಿನಲ್ಲಿ ನನ್ನ ಅಮ್ಮನದೇ ಕೊನೆ ಇರಬಹುದು ಎಂದು ಹೇಳಿದೆ.
ತಮ್ಮ‌ತಮ್ಮನ ಹೆಂಡತಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಿದ್ದಾರೆ.ಅಮೇರಿಕಾದಲ್ಲಿನ ಅಣ್ಣ ಮತ್ತು ದೊಡ್ಡ ತಮ್ಮ ದುಡ್ಡು ಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ
ಮುಂದೆ ನಮ್ಮ ಮಕ್ಕಳಿಂದ ಇದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಅವರು ಚೆನ್ನಾಗಿ ನೋಡಿಕೊಂಡರೆ ನಮ್ಮ ಪುಣ್ಯ
ಆದರೆ ನಾವ್ಯಾಕೆ ಅವರಿಗೆ ಭಾರವಾಗಬೇಕು.ನಮ್ಮ‌ಕೈಲಾದಷ್ಟು ದಿನ ಸ್ವತಂತ್ರವಾಗಿದ್ದು.ಮಕ್ಕಳಿಗೂ ಸ್ವತಮತ್ರವಾಗಿ ಬದುಕಲು ಅನುವು ಮಾಡಿಕೊಡುದು ಒಳ್ಳೆಯದಲ್ವಾ? ಕೈಲಾಗದೇ ಇರುವ ಪ್ರಸಂಗ ಬಂದರೆ ಮುಂದಿನದು ನೋಡಿಕೊಂಡರಾಯಿತು.ಆದರೆ ನಾವು ರಿಟೈರ್ಮೆಮಟಿನ ನಂತರದ ಬದುಕಿಗೆ ಬೇಕಾದಷ್ಟು  ದುಡ್ಡು ಹೊಂದಿಸಿಟ್ಟಿರಬೇಕು
ಸಾಕಷ್ಟು ಲೈಫ್ ಇನ್ಷುರೆನ್ಸ್ ಮಾಡಿಸಿ ಇಡುವುದು ಒಳ್ಳೆಯದು.ತಿಂಗಳು ತಿಂಗಳು ಕಟ್ ಆಗುವಾಗ ನಮಗೇನೂ ಅದೊಂದು ಹೊರೆ ಎನಿಸುವುದಿಲ್ಲ.ಆದರೆ ಕಡ್ಡಾಯವಾಗಿ ಸೇವಿಂಗ್ ಅಗಿರುತ್ತದೆ‌.ನಮಗೆ ಅರುವತ್ತು ಎಪ್ಪತ್ತು ವರ್ಷಗಲಾಗುವಾಗ ಪಾಲಿಸಿ‌ಮೆಚ್ಯೂರ್ ಅಗಿ ನಮಗೆ ಸಾಕಷ್ಟು ದುಡ್ಡು ಬರುತ್ತದೆ.ಜೊತೆಗೆ ಆರೋಗ್ಯ ವಿಮೆಯನ್ನೂ ಮಾಡಿಸಿರಬೇಕು.ಒಮ್ಮೆ ಆರೋಗ್ಯ ಸಮಸ್ಯೆ ಬಂದ ನಂತರೆ ಜೀವ ವಿಮೆ ಅಥವಾ ಆರೋಗ್ಯ ವಿಮೆ ಮಾಡಿಸಲು ಆಗುವುದಿಲ್ಲ.ಅದಕ್ಕಾಗಿ ಸಣ್ಣ ವಯಸ್ಸಿನಲ್ಲಿ ಆರೋಗ್ಯವಂತ ರಾಗಿ ಇರುವಾಗಲೇ ಮಾಡಿಸಿರಬೇಕು.ಜೊತೆಗೆ ಪೋಸ್ಟಲ್ ಡಿಪಾರ್ಟ್ ಮೆಂಟಿನಲ್ಲಿ ಸೇವಿಂಗ್ ಮಾಡಿಡಬಹುದು.
ಏನೇ ಆದರೂ ಅರುವತ್ತರ ನಂತರದ ಬದುಕಿಗೆ ನಮ್ಮಲ್ಲಿ ಸಾಕಷ್ಟು ದುಡ್ಡಿರಬೇಕು.

ಮಕ್ಕಳಲ್ಲೂ ನಾನು ಹೇಳುವುದಿಷ್ಟೇ..ವಯಸ್ಸಾದ ತಂದೆ ತಾಯಿಯರನ್ನು ಮಾತು ಮಾತಿಗೆ ಹಂಗಿಸಿ ಕಣ್ಣೀರು ಹಾಕುವಂತೆ ಮಾಡಬೇಡಿ.ಎಲ್ಲ ತಂದೆ ತಾಯಂದಿರೂ ತಮಗಾಗಿ ಏನೂ ಇರಿಸದೆ ಮಕ್ಕಳಿಗಾಗಿ ತಮ್ಮ ಆಸೆ ಅಕಾಂಕ್ಷೆಗಳನ್ಮು ತ್ಯಾಗ ಮಾಡಿರ್ತಾರೆ.ಲೋಪ ದೋಷಗಳಿಲ್ಲದ ಮನುಷ್ಯರಿಲ್ಲ.ನಮ್ಮಲ್ಲಿ ಇತರರಿಗಿಂತ ನೂರು ಪಟ್ಟು ಹೆಚ್ಚು ಇರ್ತದೆ.ನಮಗೆ ನಮ್ಮ ಬೆನ್ನುಕಾಣುವುದಿಲ್ಲ ಅಷ್ಟೇ..ನಾವು ನಮ್ಮ ಮೂಗಿನ ನೇರಕ್ಕೆ ಅಲೋಚಿಸುತ್ತೇವೆ ಅಷ್ಟೇ..

ನಿಮಗೆ ಸಾಧ್ಯವಾದರೆ ನೀವೇ ಚೆನ್ನಾಗಿ ನೋಡಿಕೊಳ್ಳಿ.ಅಗದೇ ಇದ್ದರೆ ಸಾಕಷ್ಟು ಸೌಲಭ್ಯಗಳಿರುವ  ಪೇ ಮಾಡುವ ವೃದ್ಧಾಶ್ರಮಗಳಿಗೆ ಸೇರಿಸಿ ಇಲ್ಲವೆ ಅವರಿಗೆ ಸ್ವತಂತ್ರವಾಗಿ ಬದುಕುವಂತೆ ವ್ಯವಸ್ತೆ ಮಾಡಿಕೊಡಿ..ಹುಟ್ಡುವಾಗ ಆರಿಂಚು ಉದ್ದ ಇರುವ ಮಗು ಗಾಳಿಯಲ್ಲಿ ಬೆಳೆದು ಅರಡಿ ಅಗುವುದಿಲ್ಲ.ಅವರನ್ನು ಅಷ್ಟು ದೊಡ್ಡ ಮಾಡಲು ತಂದೆ ತಾಯಿ ಕಷ್ಟ ಪಟ್ಟಿರುತ್ತಾರೆ.ಮಕ್ಕಳಿಗೂ ಕರ್ತವ್ಯ ಇದೆ ಇದನ್ನು ಮರೆಯಬೇಡಿ 

Friday 7 January 2022

ನನಗೂ ಆತ್ಮವಿದೆ..ಫೇಲಿನ ಕಹಿಯೂ ರ‌್ಯಾಂಕಿನ ಸಿಹಿಯೂ

 ಫೇಲಿನ ಕಹಿಯೂ ರ‌್ಯಾಂಕಿನ ಸಿಹಿಯೂ

ಈವತ್ತು ನಮ್ಮ‌ಮಕ್ಕಳಿಗೆ ಪರೀಕ್ಷಯ ಉತ್ತರ ಪತ್ರಿಕೆ ನೀಡಿದ್ದೆ

ಅದರಲ್ಲಿ ಒಬ್ಬರಿಗೆ ಒಂದು ಉತ್ತರಕ್ಕೆ ಅಂಕ ಕೊಡಲು ಬಿಟ್ಟು ಹೋಗಿತ್ತು.ಅವಳದನ್ನು ತೋರಿಸಿದಾಗ ಅಂಕ ಕೊಟ್ಟು ಒಟ್ಟು ಅಂಕಕ್ಕೆ ಸೇರಿಸಿದೆ

ಆಗ ಇನ್ನೊಂದು ವಿದ್ಯಾರ್ಥಿ ಅಂತಿಮ ಪರೀಕ್ಷೆಯಲ್ಲಿಯೂ ಹೀಗೆ ಅಂಕ ಕೊಡಲು ಬಿಟ್ಟು ಹೋಗುವ ಲೆಕ್ಕ ಹಾಕುವಾಗ ತಪ್ಪುವ ಸಾಧ್ಯತೆ ಇಲ್ವಾ ಎಂದು ಕೇಳಿದ

ಇಲ್ಲ..ಅಂತಿಮ ಪರೀಕ್ಷೆಯಲ್ಲಿ ಮೊದಲ ಪುಟ್ಟದಲ್ಲಿ ಯಾವ ಪ್ರಶ್ನೆಗೆ ಎಷ್ಟು ಅಂಕ ಬಂದಿದೆ ಎಂದು ಹಾಕಲು ಇದೆ

ನಂತರ ಅಡ್ಡ ಸಾಲಿನ ಮೊತ್ತ ಕೊನೆಯಲ್ಲಿ ಹಾಕಲಿಕ್ಕಿದೆ.ಜೊತೆಗೆ ಪ್ರತಿ ಪುಟದ ಕೊನೆಯಲ್ಲಿ ಪುಟದ ಮೊತ್ತ ಹಾಕಲಿಕ್ಕಿದೆ 

ನಂತರ ಅಡ್ಡ ಮತ್ತು ನೀಟ ಸಾಲುಗಳ ಮೊತ್ತ ,ಎಲ್ಲ ಪುಟಗಳ ಒಟ್ಟು ಮೊತ್ತ ಸರಿ ಬರಬೇಕು

ಹಾಗಾಗಿ ತಪ್ಪಾಗುವ ಸಾಧ್ಯತೆಗಳು ಕಡಿಮೆ.ಆದರೂ ಕೆಲವೊಮ್ಮೆ ಪುಟ ಬಿಟ್ಟು ಹೋಗಿಯೂಟೋಟಲ್ ಮಾಡುವಾಗ ,ಅದನ್ನು ಎಂಟ್ರಿ ಮಾಡುವಾಗಲೂ ತಪ್ಪಾಗುವ ಸಾಧ್ಯತೆಗಳಿವೆ ಎಲ್ಲೋ ಹತ್ತು ಸಾವಿರಕ್ಕೊಂದು ಪತ್ತಿಕೆ ಹೀಗಾಗಬಹುದು

 ನಿಮಗೆ ನಿರೀಕ್ಷಿತ ಅಂಕ ಬರದೇ ಇದ್ದರೆ ಫೇಲ್ ಆದರೆ ಧೃತಿಗೆಡುವ ಅಗತ್ಯವಿಲ್ಲ.ನೀವು ಸರಿ ಉತ್ತರ ಬರೆದಿರುವುದನ್ನು ಉತ್ತರ ಪತ್ರಿಕೆಯ ಝೆರಾಕ್ಸ್ ಪ್ರತಿ ಪಡೆದು  ಪರೀಕ್ಷಿಸಬಹುದು.ನಂತರ ಮೌಲ್ಯ ಮಾಪನಕ್ಕೆ ,ಮರು ಲೆಕ್ಕ ಹಾಕಲು ಅರ್ಜಿ ಸಲ್ಲಿಸಲು ಅವಕಾಶವಿದೆ

ನಿಮಗೆ ಬರಬೇಕಾದ ಅಂಕಗಳು ಬರುತ್ತವೆ.ಕೆಲವರು ನಿರೀಕ್ಷಿತ ಅಂಕ ಬಾರದೆಯೇ ಇದ್ದರೆ ಅಥವಾ ಫೇಲ್ಆದರೆ  ತೀರಾ ಹತಾಶೆಗೊಳಗಾಗಿ ಆತ್ಮ ಹತ್ಯೆಗೆ ಮುಂದಾಗುತ್ತಾರೆ

ಹಾಗೆ ಮಾಡಬಾರದು..ನಿಮ್ಮ ಹೆತ್ತವರ ಬಗ್ಗೆ ಯೋಚಿಸಿ.ಮಕ್ಕಳನ್ನು ಕಳೆದುಕೊಂಡರೆ ಅವರಿಗಾಗುವ ದುಃಖದಷ್ಡು ದೊಡ್ಡ ದುಃಖವೇ ಫೇಲಾದರೆ ಉಂಟಾಗುವದ್ದು..ದುಡುಕಬಾರದು..ಮರು ಮೌಲ್ಯ ಮಾಪನಕ್ಕೆ ಹಾಕಿ..ಅಲ್ಲೂ ಅಂಕ ಬಾರದೇ ಇದ್ದರೆ ಮತ್ತೆ ಓದಿ‌ ಮರುಪರೀಕ್ಷೆ ಬರೆಯಿರಿ

ಎಷ್ಟೋ ಜನರು ಪಿಯುಸಿಯಲ್ಲಿ ಫೇಲಾದವರು ನಂತರ ಪದವಿಯಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ರ‌್ಯಾಂಕ್ ತೆಗೆದು ಯಶಸ್ವಿಯಾದವರಿದ್ದಾರೆ ಎಂದು ಹೇಳಿದೆ

ಆಗ ಫೇಲಾದವರು ಮತ್ತೆ ಹೇಗೆ ರ‌್ಯಾಂಕ್ ತೆಗೆಯುವಷ್ಟು ಜಾಣರಾಗುದು ಮೇಡಂ? ರ‌್ಯಾಂಕ್ ತೆಗೆಯುವಷ್ಟು ಬುದ್ದಿವಂತರು ಫೇಲಾಗುತ್ತಾರೆಯೇ ಎಂದು ನಮ್ಮ ವಿದ್ಯಾರ್ಥಿಗಳು ಕೇಳಿದರು

ಹೌದು..ಕೆಲವೊಮ್ಮೆ  ಬೇಜವಾಬ್ದಾರಿತನ,ಸೋಮಾರಿತನ,ಕೆಲವೊಮ್ಮ ಆಯ್ಕೆ ಮಾಡಿಕೊಂಡ ವಿಷಯಗಳು ರುಚಿಸದೇ ಇರುವುದು ,ಅಂಕ ಗಳಿಸುವ ಬಗ್ಗೆಕನಿಷ್ಟ ಒತ್ತಡ ಇಲ್ಲದೇ ಇರುವುದು ಉಪನ್ಯಾಸಕರ ಬೇಜವಾಬ್ದಾರಿತನ ಮೊದಲಾದ ಕಾರಣಗಳಿಂದ  ಕೆಲ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುವುದಿದೆ.

ನಂತರ ಎಚ್ಚತ್ತುಕೊಂಡು ಹಠ ಹಿಡಿದು ಓದಿ ರ‌್ಯಾಂಕ್ ಪಡೆಯುವುದೂ ಇದೆ.ನಾನು ಪಿಯುಸಿಯಲ್ಲಿ ವಿಜ್ಞಾನ ತಗೊಂಡು ಫೇಲಾಗಿದ್ದೇನೆ.ನಂತರ ಮರು ಪರೀಕ್ಷೆ ಕಟ್ಡಿ ಪಾಸಾಗಿ ಬಿಎಸ್ಸಿ ಮಾಡಿ ನಂತರ ಸಂಸ್ಕೃತ ಎಂಎಗೆ ಸೇರಿ ಅಲ್ಲಿ ಮೊದಲಾ ರ‌್ಯಾಂಕ್ ಪಡೆದಿರುವೆ.ನಂತರ ಕನ್ನಡ ಎಂಎ ಯನ್ನು ಖಾಸಗಿಯಾಗಿ ಕಟ್ಟಿ ನಾಲ್ಕನೆಯ ರ‌್ಯಾಂಕನ್ನೂ ಪಡೆದಿರುವೆ ಎಂದೆ

ಆಗ ಓರ್ವ ವಿದ್ಯಾರ್ಥಿ ಮೇಡಂ ನೀವು ರ‌್ಯಾಂಕ್ ಸ್ಟೂಡೆಂಟ್ ಅಂತ ನಮಗೆ ಬೇರೆ ಉಪನ್ಯಾಸಕರು ತಿಳಿಸಿ ನಿಮ್ಮ‌ಉದಾಹರಣೆ ಕೊಟ್ಟಿದ್ದಾರೆ ಆದರೆ ನೀವು ಫೇಲಾಗಿ ಮತ್ತೆ ಕಟ್ಟಿ ಪಾಸಾದ ಬಗ್ಗೆ ಗೊತ್ತಿರಲಿಲ್ಲ.ನೀವು ಫಸ್ಟ್ ಪಿಯುಸಿಯಲ್ಲಿ ಫೇಲಾದದ್ದಾ ? ಸೆಕೆಂಡ್ ಪಿಯುಸಿಯಲ್ಲಾ ಎಂದೊಬ್ಬರು ಕೇಳಿದರು

ಸೆಕೆಂಡ್ ಪಿಯುಸಿಯಲ್ಲಿ ಫೇಲಾದದ್ದು.ಬಹುಶಃ ನನ್ನನ್ನು ಫಸ್ಟ್ ಪಿಯುಸಿಯಲ್ಲಿಯೇ ಫೇಲ್ ಮಾಡಿದ್ದರೆ ಒಳ್ಳೆಯದಿತ್ತು

ಸ್ಟ್ರೆಂತ್ ಗಾಗಿ ಎಲ್ಲರನ್ನೂ ಸೆಕೆಂಡ್ ಪಿಯುಗೆ ತಳ್ತಾರೆ ಅಲ್ಲಿ ಸಾಲಾಗಿ ಫೇಲಾದೆವು ಎಂದೆ

ಹೌದು..ನಾನು ಪಿಯು ಓದಿದ ಮಂಗಳೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ( ಈಗಿನ ವಿಶ್ವ ವಿದ್ಯಾಲಯ ಕಾಲೇಜು) ನಮ್ಮ ತರಗತಿಯಲ್ಲಿನ ಎಲ್ಲರೂ ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರೇ ಆಗಿದ್ದರು.ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿದವರೇ ಆಗಿದ್ದೆವು

ಇಲ್ಲಿನ ಉಪನ್ಯಾಸಕರೋ ಸಾಕ್ಷಾತ್ ಇಂಗ್ಲೆಂಡಿನಿಂದ ಉದುರಿದವರ ಹಾಗೆ ಇದ್ದರು.ಒಂದಕ್ಷರ ಕನ್ನಡದಲ್ಲಿ ವಿವರಿಸುತ್ತಿರಲಿಲ್ಲ.ಕ್ಲಾಸ್ ಟೆಸ್ಟ್ ಬಿಡಿ.ಮಧ್ಯಾವದಿ ಪರೀಕ್ಷೆ ,ಪೂರ್ವ ಸಿದ್ಧತಾ ಪರೀಕ್ಷೆ ಕೂಡ ಮಾಡುತ್ತಿರಲಿಲ್ಲ.ನಾವು ನೇರವಾಗಿ ಅಂತಿಮ ಪರೀಕ್ಷೆಯನ್ನು ಎದುರಿಸಿದ್ದೆವು.ಪ್ರಥಮ ಪಿಯುಸಿಯಲ್ಲಿ ಬಹುಶಃ  ಮಕ್ಕಳ ಸಂಖ್ಯೆ ಕಡಿಮೆಯಾದರೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಕಡಿಮೆ ಎಲ್ಲರನ್ನು ಪಾಸ್ ಮಾಡ್ತಿದ್ದರು.ಸೆಕೆಂಡ್ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ 1% ಫಲಿತಾಂಸ ಕೂಡಾ ಇರುತ್ತಿರಲಿಲ್ಲ.ಇಷ್ಟು ಕಡಿಮೆ ಫಲಿತಾಂಶ ಬಂದರೂ ಈ ಉಪನ್ಯಾಸಕರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ವೆ? ನನಗೀಗಲೂ ಈ ವಿಚಾರ ಅರ್ಥ ಆಗುತ್ತಿಲ್ಲ

ಈಗ  40% ಕಡಿಮೆ ಫಲಿತಾಂಸ ಬಂದವರಿಗೆ ಭಡ್ತಿ ಕೊಡುವುದಿಲ್ಲ.ಅವರನ್ನು ಕರೆದು ವಿಚಾರಿಸುತ್ತಾರೆ.ಕಾರಣ ಕೇಳ್ತಾರೆ ಒಟ್ಟಿನಲ್ಲಿ ಉಪನ್ಯಾಸಕರು ಬೇಜವಾಬ್ದಾರಿ ಮಾಡುವಂತಿಲ್ಲ

ಆಗ ಇವ್ಯಾವುದೂ ಇರಲಿಲ್ವಾ? ಇರಲಿ ಇಲ್ಲದೇ ಇರಲಿ..ಇವರಿಗೆ ಆತ್ಮ ಸಾಕ್ಷಿ ಚುಚ್ಚುತ್ತಿರಲಲ್ವಾ? ಇಷ್ಟು ಸಂಬಳ ಪಡೆದು ಎಲ್ಲ ಮಕ್ಕಳೂ ಫೇಲಾದಾಗ ಇವರಿಗೆ ಏನೂ ಅನಿಸುತ್ತಿರಲಿಲ್ವಾ? 

ಬಹುಶಃ ಇದೇ ಕಾರಣಕ್ಕೆ ನನ್ನ ಪಿಯು ಉಪನ್ಯಾಸಕರಲ್ಲಿ ಸಂಸ್ಕೃತ ಉಪನ್ಯಾಸಕರಾದ ಡಾ.ಲಕ್ಷ್ಮೀ ನಾರಾಯಣ ಭಟ್ಟರ ಹೊರತಾಗಿ ಇತರರ ಬಗ್ಗೆ ನನಗೆ ಒಂದಿನಿತೂ ಭಕ್ತಿ ಗೌರವ ಉಳಿದಿಲ್ಲ

ನಾನೇನೋ ಹೇಗೋ ಗೈಡ್ ಓದಿ ಮತ್ತೆ ಪರೀಕ್ಷೆ ಕಟ್ಟಿ ಪಾಸಾದೆ ನಂತರ ಮುಂದೆ ಓದಿದೆ

ಆದರೆ ಎಲ್ಲರ ಬದುಕಿನಲ್ಲಿಯೂ ಇದು ಸಾಧ್ಯವೇ ? ಹುಡುಗಿಯರು ಫೇಲಾದ ತಕ್ಷಣವೇ ಹೆತ್ತವರು ಮದುವೆ ಮಾಡಿ ಕೈತೊಳ್ಕೊಂಡು ಬಿಡ್ತಾರೆ.ಹುಡುಗರು ಯಾವುದಾದರೂ ಗ್ಯಾರೇಜಿನಲ್ಲೋ ಇನ್ನೆಲ್ಲೋ ಕೆಲಸಕ್ಕೆ ಸೇರ್ತಾರೆ.ನನ್ನ ಪಿಯು ಸಹಪಾಠಿಗಳಲ್ಲಿ ಒಬ್ಬ( ಹೆಸರು ಸರಿಯಾಗಿ ನೆನಪಿಲ್ಲ..ರಮೇಶ್ ಇರಬೇಕು) ಹತ್ತನೆಯ ತರಗತಿಯಲ್ಲಿ 92% ಅಂಕಗಳನ್ನು ಪಡೆದಿದ್ದ.ಪಿಯುನಲ್ಲಿ ಐದು ವಿಷಯಗಳಲ್ಲಿ ಫೇಲಾಗಿದ್ದ.ನಂತರ ಗ್ಯಾರೇಜ್ ಕೆಲಸಕ್ಕೆ ಸೇರಿದನಾದರೂ ಇದೇ ನೋವಿನಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದ

ಆಗ ಫೇಲಾದರೆ ಆ ವಿಷಯ ಬಿಟ್ಟು ಅರ್ಟ್ಸ್ ತಗೊಂಡು ನೇರವಾಗಿ ಪರೀಕ್ಷೆ ಕಟ್ಟಿ ಪಾಸಾಗಬೇಕಿದ್ದರೆ 25 ವರ್ಷ ಆಗಬೇಕೆಂಬ ನಿಯಮವಿತ್ತು

ವಿಜ್ಞಾನ ತಗೊಂಡು ಫೇಲಾಗಿ ಮತ್ತೆ ಕಟ್ಟಿಯೂ ಪಾಸಾಗಲಾಗದಿದ್ದರೆ ಅವರ ಕಲಿಕೆ ಪೂರ್ಣ ನಿಂತು ಹೋದ ಹಾಗೆಯೇ..

ಕರ್ನಾಟಕದ ವಿದ್ಯಾರ್ಥಿಗಳಿಗಾಗಿದ್ದರೆ ಹತ್ತನೆಯ ತರಗತಿಯಲ್ಲಿ ಡಿಪ್ಲೋಮ ಮಾಡಿ ನಂತರ ಇಂಜನಿಯರಿಂಗ್ ಮಾಡಿ ಯಶಸ್ಸು ಪಡೆಯುವ ಅವಕಾಶವಿತ್ತು.ಆದರೆ ಇದನ್ನು ನಮಗೆ ಯಾವ ಉಪನ್ಯಾಸಕರೂ ಮಾಹಿತಿ ನೀಡಿರಲಿಲ್ಲ.

ಇನ್ನು ಕೇರಳದ ಗಡಿನಾಡು ಕಾಸರಗೋಡಿನ ಮಕ್ಕಳಾದ ನಮಗೆ ಡಿಪ್ಲೋಮ ಕೂಡ ಗಗನ ಕುಸುಮವೇ ಸರಿ

ಕೇವಲ ಹತ್ತು ಡಿಪ್ಲೋಮ ಸೀಟುಗಳು ಗಡಿನಾಡ ಕನ್ನಡಿಗರಿಗೆ ಇತ್ತು.ಮಂಗಳೂರಿನ ಕೆಪಿಸಿ ? ಡಿಪ್ಲೋಮಾ ಕಾಲೇಜಿನಲ್ಲಿ ಒಂದು ಸೀಟು ಗಡಿನಾಡ ಕನ್ನಡಿಗರಿಗೆ ಇದ್ದದ್ದು

ಅದು ಯಾರಿಗಾದರೂ ಒಬ್ಬರಿಗೆ ಸಿಕ್ತಿತ್ತು.ಉಳಿದ ಒಂಬತ್ತು  ಹುಬ್ಬಳ್ಳಿ ದಾರವಾಡ ಮೊದಲಾದೆಡೆ ಇತ್ತು

ಅದೂ ಟೈಲರಿಂಗ್ ಮತ್ತು ಫ್ಯಾಶನಿಂಗ್ ಟೆಕ್ನಾಲಜಿ ಇತ್ಯಾದಿಗಳಲ್ಲಿ ಕೊಡುತ್ತಿದ್ದರು

ನಾನೂ ಡಿಪ್ಲೋಮಕ್ಕೆ ಟ್ರೈ ಮಾಡಿದ್ದೆ.ನನಗೂ ಸಿಕ್ಕಿರಲಿಲ್ಲ

ಫೇಲಾದ ಸುದ್ಧಿ ತಗೊಂಡು ಬಂದಾಗ ನನಗೆ ಮನೆಯಲ್ಲಿ ಬೈಗಳ ಸುರಿಮಳೆ.ಅದು ತನಕ ಜಾಣೆ ಎಂಬ ಕಾರಣಕ್ಕೆ ನನಗೆ ಹೊಗಳಿಕೆ ಸಿಗುತ್ತಿತ್ತು.

ಮನೆಯಲ್ಲಿ ಬೈದಾಗ ಹಠ ಬಂತು.ಇದೇ ಮೊದಲು ಮತ್ತು ಕೊನೆ..ಎಂದಿಗೂ ಫೇಲಾಗಲಾರೆ ಎಂದು ನಿರ್ಧರಿಸಿದೆ

ಅದೇ ಕ್ಷಣದಿಂದ ಹಗಲು ರಾತ್ರಿ ಓದಿದೆ.ಅರ್ಥ ಆಗದ್ದನ್ನು ಹಾಗೆಯೇ ಬಾಯಿಪಾಠ ಮಾಡಿದೆ.ಮರು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಪಾಸಾದೆ

ನಂತರ ವಿಜ್ಞಾನ ಬಿಟ್ಟು ಆರ್ಟ್ಸ್ ನಲ್ಲಿ ಪದವಿ ಮಾಡಬೇಕೆಂದುಕೊಂಡೆ

ಅದಕ್ಕಾಗಿ ಕೆನರಾ ಕಾಲೇಜಿಗೆ ತಂದೆ ಜೊತೆಗೆ ಹೋಗಿ ಸೀಟು ಕೇಳಿದೆ.ಆಗ ಎಷ್ಟೋ ಡೊನೇಷನ್ ಕೇಳಿದರು.ಆಗ ನನ್ನ ತಂದೆ ನಮಗೆ ಎರಡು ಖಂಡಿ ಅಡಿಕೆ ಆಗುದು.ಅಷ್ಟು ಡೊನೇಷನ್ ಸಾಧ್ಯವಿಲ್ಲ.ಕಡಿಮೆ ಮಾಡಿ ಎಂದು ಕೇಳಿದರು.ಆಗ ಅಲ್ಲಿನ ಪ್ರಿನ್ಸಿಪಾಲ್ ( ಉಪಾಧ್ಯಾಯ?) ಎರಡು ಖಂಡಿಯೋ ಇಪ್ಪತ್ತು ಖಂಡಿಯಾ ಎಂದು ಗದರಿ ಅವಹೇಳನ ಮಾಡಿ ಮಾತನಾಡಿದರು

ಬಸವನ ಕೋಪ ದವಡೆಗೆ ಮೂಲ ಅಲ್ವೇ.ನಾವೇನೂ ಹೇಳದೆಯೇ ಹಿಂತಿರುಗಿದೆವು.ಕಷ್ಟವಾದರೂ ಅವರು ಕೇಳಿದಷ್ಟು ದುಡ್ಡು ಹೊಂದಿಸಿ ಪದವಿಗೆ ಕೆನರಾ ಕಾಲೇಜಿನಲ್ಲಿ ಸೇರಿಸಲು ನನ್ನ ತಂದೆ ತಾಯಿ ಸಿದ್ದವಿದ್ದರು.ಆದರೆ ನನ್ನ ತಂದೆಯನ್ನು ಅಧಿಕಾರದ ಅಮಲಿನಿಂದ ವಿನಾಕಾರಣ ಗದರಿ ಅವಹೇಳನ ಮಾಡಿದ ಪ್ರಿನ್ಸಿಪಾಲ್ ಇರುವ ಆ ಕಾಲೇಜಿಗೆ ಹೋಗಲು ನನಗೆ ಇಷ್ಟವಿರಲಿಲ್ಲ

ಮುಂದೇನು ? ಎಂಬ ಯೋಚನೆಯಲ್ಲಿದ್ದಾಗ ದೊಡ್ಡ ತಮ್ಮ ಈಶ್ವರ ಭಟ್ ನ ಹತ್ತನೆಯ ತರಗತಿ ಫಲಿತಾಂಸ ಬಂತು.ಅವನಿಗೆ ಪಿಯುಸಿ ಸೀಟಿಗಾಗಿ ಉಜಿರೆಗೆ ಹೋಗಿ ನಮ್ಮ ಸಂಬಂಧಿಕರಾದ ಫಿಸಿಕ್ಸ್ ಉಪನ್ಯಸಾಕರಾಗಿದ್ದ ಗಣಪಯ್ಯರನ್ನು ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿ ಹೋಗಿ ಭೇಟಿಯಾದ

ಬಹಳ ಪ್ರೀತಿಯಿಂದ ಗಣಪಯ್ಯ ತಮ್ಮ ಈಶ್ವರನಿಗೆ ಸೀಟು ಕೊಡಿಸಿದರು

ನಂತರ ಮನೆ ಮಂದಿ ಬಗ್ಗೆ ವಿಚಾರಿಸಿದಾಗ ಅಣ್ಣ ನನ್ನ ಬಗ್ಗೆ ಹೇಳಿದ.ಆಗ ಗಣಪಯ್ಯನವರು ಅವರಾಗಿಯೇ ಅವಳನ್ನೂ ಇಲ್ಲಿಯೇ ಡಿಗ್ರಿಗೆ ಸೇರಿಸುವ ಕರಕೊಂಡು ಬಾ ಎಂದರು

ಹಾಗೆ ಮರು ದಿನ ನಾನು ತಂದೆಯ ಜೊತೆಗೆ ಹೋದೆ.ನಾನು Arts ಕೇಳಿದೆ.ಆಗ ಗಣಪಯ್ಯವನರು ಸಯನ್ಸ್ ಓದಿದರೆ ಕೆಲಸಕ್ಕೆಲ್ಲ ಒಳ್ಳೆಯದು.ಇಲ್ಲಿ ಒಳ್ಳೆಯ ಉಪನ್ಯಾಸಕರಿದ್ದಾರೆ ಸಮಸ್ಯೆ ಆಗಲಾರದು ಎಂದು ಹೇಳಿ ಬಿಎಸ್ಸಿಗೆ ಸೇರಿಸಿದರು.ಆರ್ಟ್ಸೇ ಬೇಕೆಂದು ಹಠ ಹಿಡಿಯುತ್ತಿದ್ದರೆ ಅದನ್ನೇ ಕೊಡಿಸುತ್ತಿದ್ದರೋ ಏನೋ..ನಾನು ಹಟ ಹಿಡಿಯದೆ ಬಿಎಸ್ಸಿಗೇ ಸೇರಿದೆ

ಪಿಯುಸಿಯಲ್ಲಿ ಸರಿಯಾಗಿ ಪಾಠವಿಲ್ಲದೆ ಅರ್ಥ ಆಗದೇ ಇದ್ದ ಕಾರಣ ಬಿಎಸ್ಸಿ ಯ ಕಲಿಕೆ ಕೂಡ ಕಷ್ಟ ಎನಿಸಿತು ನನಗೆ.ಜೊತೆಗೆ ಆರೋಗ್ಯ ಸಮಸ್ಯೆ ಕೂಡ ಬಂತು

ಮೊದಲ ವರ್ಷದ ಫಲಿತಾಂಸ ಬಂದಾಗ ವಿಪರೀತ ಆತಂಕ.ಫಲಿತಾಂಶ ಬೋರ್ಡ್ ನಲ್ಲಿ ಹಾಕಿದ್ದರು

ನಮ್ಮ‌ಮೆಸ್ ನ ಸಮೀಪದ ವಸಂತಿ‌ಅಮ್ಮನ ಮಗಳ ಹೇಮ ನಮಗಿಂತ ಒಂದು ವರ್ಷ ಸೀನಿಯರ್ ಆಗಿದ್ದು( ಇವರಬಗ್ಗೆ ದೊಡ್ಡವರ ದಾರಿಯಲ್ಲಿ ಬರೆಯಲಿಕ್ಕಿದೆ) ಒಂದೊಂದೇ ವಿಷಯ ನೋಡಬೇಕು‌.ಪಾಸಾದವರ ರಿಜಿಸ್ಟರ್ಡ್ ನಂಬರ್ ಇರುತ್ತದೆ ಎಂದಿದ್ದರು

ಹಾಗೆ ಮೊದಲಿಗೆ ನನಗೆ ಬಹಳ ಕಷ್ಟ ಎನಿಸಿದ್ದ ಫಿಸಿಕ್ಸ್ ನೋಡಿದೆ..ಅಯ್ಯೋ..ಅದರಲ್ಲಿ ನನ್ನ ರಿಜಿಸ್ಟ ರ್ ನಂಬರಿಲ್ಲ

ಕೆಮೆಷ್ಟ್ರಿ ನೋಡಿದೆ ಅದರಲ್ಲೂ ಇಲ್ಲ.ಗಣಿತ ನೋಡಿದೆ ಅದರಲ್ಲೂ ಇಲ್ಲ.ಅಳು ಉಕ್ಕಿ ಬಂದು ಕಣ್ಣನೀರು ತುಂಬಿ ಕಣ್ಷು ಮಸುಕಾಗಿತ್ತು.ಒರಸಿಕೊಂಡು‌ ಇಂಗ್ಲಿಷ್ ನೋಡಿದೆ ಅದರಲ್ಲೂ ಇಲ್ಲ.ಕೊನೆಗೆ ಸಂಸ್ಕೃತ ನೋಡಿದೆ..ಹಾ..ಅದರಲ್ಲೂ ನನ್ನ ನಂಬರಿಲ್ಲ

ದೇವರೇ..ಬಿಎಸ್ಸಿ ಮೊದಲ ವರ್ಷದ ಎಲ್ಲ ಐದೂ ವಿಷಯಗಳಲ್ಲಿ ಫೇಲ್ ಆದೆ..ಮುಂದೆ ಇವನ್ನು ಪಾಸಾಗುದು ಹೇಗೆ..ಇನ್ನೂ ಎರಡು ವರ್ಷ ಇದೆಯಲ್ಲ..ಬಹುಶಃ ಆಗಿನ ನನ್ನ ಸ್ಥಿತಿ ದೇವರಿಗೇ ಪ್ರೀತಿ

ಇಡೀ ಜಗತ್ತು ಗರಗರನೆ ತಿರುಗಿದ ಅನುಭವ

ಹೇಳಲಿಕ್ಕಾದ ಸಂಕಟ..ಭಯ ಆತಂಕ..ಎಲ್ಲ ವಿಷಯಗಳಲ್ಲಿ ಫೇಲಾದದ್ದನ್ನು ತಂದೆ ತಾಯಿಗೆ ಹೇಳುದಾದರೂ ಹೇಗೆ ? ನನ್ನ‌ಮೇಲೆ ನಂಬಿಕೆ ಇರಿಸಿ ಸೀಟು ಕೊಡಿಸಿದ ಗಣಪಯ್ಯರ ಮುಖವನ್ನು ನೋಡುದಾದರೂ ಹೇಗೆ?

ಆ ಕ್ಷಣಕ್ಕೆ ಆ ಕಟ್ಟಡ ಕುಸಿದು ನಾನದರ ಅಡಿಗೆ ಬಿದ್ದು ಸತ್ತಿದ್ದರೆ ಎಷ್ಟು ಒಳ್ಳೆಯದೆನಿಸಿತ್ತು

ಭೂಕಂಪ ಆಗಿ ನಾನಿದ್ದ ಭೂಮಿ ಬಿರಿದು ಅದರಡಿಯಲ್ಲಿ ನಾನು ಹೂತು ಹೋಗಬೇಕೆನಿಸಿತು

ನಾವಂದುಕೊಂಡ ಹಾಗೆಲ್ಲ ಆಗಬೇಕಲ್ಲ..ಅಳಿಸಿ ನಗಿಸಿ ಚಂದ ನೋಡುವವ ಮೇಲೆ ಇದ್ದಾನಲ್ಲ..ಏನು‌ಮಾಡುದು.

ಬಹಳ ಸೋತ ಹೆಜ್ಜೆ ಇಟ್ಟು ಕೊಂಡು ತರಗತಿಗೆ ಹೋಗದೆ ನಾವಾಗ ಇದ್ದ ಬಾಡಿಗೆ ಮನೆಗೆ ಹೊರಟೆ

ಮರುದಿನವೇ ಖಾಲಿ ಮಾಡಿ ಮನೆಗೆ ಹೋಗುವುದೆಂದು ನಿರ್ಧರಿಸಿದೆ‌‌.ನನಗೆ ಬಿಎಸ್ಸಿ ಪಾಸ್ ಮಾಡಲು ಅಸಾಧ್ಯ ಎನಿಸಿತ್ತು‌.ನಾನು ಶಕ್ತಿ ಮೀರಿ ಓದಿ ಬರೆದಿದ್ದೆ.ಆದರೂ ಪಾಸಾಗಿಲ್ಲ.ಹಾಗಾಗಿ ಅಪ್ಪ ಅಮ್ಮ‌ಕಷ್ಟ ಪಟ್ಟು ದುಡಿದ ದುಡ್ಡನ್ನು ಕಾಲೇಜು ಫೀಸಿಗೆ ಕಟ್ಟಿ ವ್ಯರ್ಥ ಮಾಡುದೇಕೆ ಎನಿಸಿತ್ತು.ಆ ಕ್ಷಣದಲ್ಲೂ ನಾನು arts ತಗೊಂಡಿದರೆ ಪಾಸಾಗಿರುತ್ತಿದ್ದೆನೋ ಏನೋ ಎಂದೆನಿಸಿತ್ತು

ಹೀಗೆ ಏನೋನೋ ಯೋಚಿಸುತ್ತಾ ತಲೆ ಕೆಟ್ಟು ಕಾಲೇಜು ಮೆಟ್ಟಲಿಳಯುತ್ತಿರುವಾಗ ಯಾರೋ ಎದುರು ಬಂದು ಢಿಕ್ಕಿಯಾದೆ..ಯಾರೆಂದೂ ಮುಖ ಎತ್ತಿ ನೋಡದೆ sorry ಹೇಳಿ ಮುಂದಡಿಯಿಟ್ಟೆ.

ಆಗ ಲಕ್ಷ್ಮೀ ಎಂತ..ಕ್ಲಾಸಿಂಗೆ ಹೋವುತ್ತಿಲ್ಲೆಯ? ಎಂಬ ಗಣಪಯ್ಯರ ಮಾತು ಕೇಳಿತು.ನೋಡಿದರೆ ನಾನು ಢಿಕ್ಕಿ ಹೊಡೆದದ್ದು ಅವರಿಗೇ

ಅಳುದು ಯಾಕೆ ? ಎಂತ ಆಯಿತು ಎಂದು ನನ್ನ‌ಮುಖ ನೋಡಿ ಕೇಳಿದರು.ನಾನು ಅಳುತ್ತಾ ಕಷ್ಟ ಪಟ್ಟು ಎಲ್ಲ ವಿಷಯಗಳಲ್ಲಿ ಫೇಲಾದ ವಿಚಾರ ಹೇಳಿದೆ..ಯಾರೇಳಿದ್ದು.ನೀನು ಎಲ್ಲ ವಿಷಯಗಳಲ್ಲೂ  ಪಾಸ್..ನಾನು ಬೆಳಗ್ಗೆಯೇ  ರಿಸಲ್ಟ್ ನೋಡಿದ್ದೇನೆ ಎಂದರು.ಆಗ ಇಲ್ಲ..ಫಿಸಿಕ್ಸ್ ,ಕೆಮೆಸ್ಟ್ರಿ ಮ್ಯಾತ್ಸ್ ಇಂಗ್ಲೀಷ್ ಸಂಸ್ಕೃತ ಗಳಫಲಿತಾಂಶ ಪಟ್ಟಿಯಲ್ಲಿ ನನ್ನ ರಿಜಿಸ್ಟರ್ ನಂಬರಿಲ್ಲ ಎಂದೆ

ಎಲ್ಲದರಲ್ಲಿ ಪಾಸಾದವರ ಪಟ್ಟಿ ಬೇರೆ ಇದೆ.ಎಲ್ಲದರಲ್ಲಿ ಪಾಸಾಗದೆ ಇರುವವರ ಫಲಿತಾಂಶ ಉಳಿದವುಗಳಲ್ಲಿ ಇರುತ್ತದೆ ಎಂದರು

ಓ.ನನಗದು ಗೊತ್ತಿರಲಿಲ್ಲ.ಅವರಲ್ಲಿ ಏನೂ ಹೇಳದೆ ಮತ್ತೆ ಫಲಿತಾಂಶ ಹಾಕಿದ ಬೋರ್ಡ್ ಬಳಿ ಹೋದೆ

ಹೌದು ಅಲ್ಲಿ ಎಲ್ಲ ಸಬ್ಜೆಕ್ಟ್ ಪಾಸಾದವರ ರಿಜಿಸ್ಟರ್ ಸಂಖ್ಯೆಗಳನ್ನು ಹಾಕಿದ್ದರು

ಸಧ್ಯ..ನಾನು ಪಾಸ್ ಎಂಬುದೇ ನನಗೆ ಬೆಟ್ಟದಷ್ಟು ದೈರ್ಯ ಬಂತು.ನಂತರದ ಎರಡು ವರ್ಷ ಕೂಡ ಒಂದೇ ಒಂದು ವಿಷಯದಲ್ಲಿ ಫೇಲಾಗದೆ ಪಾಸ್ ಆದೆ

ಆದರೆ ಒಳ್ಳೆಯ ಅಂಕ ಗಳಿಸಲಾಗಲಿಲ್ಲ.ಮುಂದೆ ಸಂಸ್ಕೃತ ಎಂಎಗೆ ಸೇರಿದೆ .ಇಲ್ಲೂ ನನ್ನ‌ಕಲಿಕೆಯ ಹಾದಿ ಸುಲಭದ್ದಾಗಿರಲಿಲ್ಲ.ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಸಂಸ್ಕೃತವನ್ನು ಕಲಿತು ರ‌್ಯಾಂಕ್ ಪಡೆದ ರಮಿತಾ ಶ್ತೀದೇವಿ ,ನನ್ನಂತೆಯೇ ಬಿಎಸ್ಸಿ ಓದಿದ್ದಲ್ಲೆ ಉತ್ತಮ ಅಂಕ ಗಳಿಸಿದ್ದ ನೀತಾ ನಾಯಕ್ ,ಈಶ್ವರ ಪ್ರಸಾದ್ ಜಾಣರಾದ ಅವಿನಾಶ್ ,ಗಜಾನನ ಮರಾಠೆ ಕಮಲಾಯಿನಿ ಮೊದಲಾದವರನ್ನು ಅಂಕ ಗಳಿಕೆಯಲ್ಲಿ ಹಿಂದಿಕ್ಕಿ ಮುಂದೆ ಹೋಗುದು ಸುಲಭದ ಮಾತಾಗಿರಲಿಲ್ಲ

ಹಾಗಾಗಿ ದಿನಕ್ಕೆ ಸುಮಾರು ಎಂಟು ಗಂಟೆ ಓದಿದೆ.ಎರಡು ವರ್ಷ ತಪಸ್ಸಿನಂತೆ ಕಲಿತೆ.ಪರಿಣಾಮವಾಗಿ ಮೊದಲ ರ‌್ಯಾಂಕ್ ಬಂತು

ಇಂತಹದ್ದೊಂದು ಯಶಸ್ಸಿಗಾಗಿ ಏಳು ವರ್ಷಗಳಿಂದ ಕಾದಿದ್ದೆ

ಹತ್ತನೆಯ ತರಗತಿಯ ನಂತರ ಮತ್ತೆ ಉತ್ತಮ ಅಂಕ ಗಳಿಸಿದ್ದು ನಾನು ಎಂಎ ಯಲ್ಲಿಯೇ..ಎಂಎ ಫಲಿತಾಂಶವನ್ನು ನನಗೆ ತಿಳಿಸಿದವರು ಸೈಂಟ್ ಅಲೋಷಿಯಸ್ ಕಾಲೇಜಿನ ಸಂಸ್ಕೃತ ಪ್ರೊಫೆಸರಾಗಿದ್ದ ಡಾ.ಶಿಕಾರಿಪುರ ಕೃಷ್ಣಮೂರ್ತಿಯವರು

ಅವರ ಮನೆ ಮಂಗಳೂರಿನ ನಮ್ಮ ಬಾಡಿಗೆ ಮನೆಯ ಸಮೀಪ ಇತ್ತು‌.ನಾವು ಸಂಸ್ಕೃತ ಎಂಎ ಓದುವಾಗ ನಮಗೆ ಗೆಸ್ಟ್ ಲೆಕ್ಚರರಾಗಿ ಬಂದು ಪಾಠ ಮಾಡಿದ್ದರು

ಹಾಗಾಗಿ ಪರಿಚಯ ಇತ್ತು

ಸಾಮಾನ್ಯವಾಗಿ ಫಲಿತಾಂಶ ಬಂದಾಗ ವಿದ್ಯಾರ್ಥಿಗಳು ಸಿಹಿತಿಂಡಿ ತಗೊಂಡು ಹೋಗಿ ತಮ್ಮ ಗುರುಗಳಿಗೆ ಕೊಡುವುದು ಕ್ರಮ

ಉದಾರ ಚರಿತರ ವಿಷಯದಲ್ಲಿ ಈ ಕ್ರಮ ವಿಪರ್ಯಯ ಆಗುತ್ತದೆ

ಇಲ್ಲಿ ತಮ್ಮ ವಿದ್ಯಾರ್ಥಿನಿಯ ಫಲಿತಾಂಶವನ್ನು ತಿಳಿದು ಸಿಹಿ ತಿಂಡಿ ತಗೊಂಡು ಶಿಕಾರಿಪುರ ಕೃಷ್ಣ ಮೂರ್ತಿ ಮತ್ತು ಅವರ ಮಡದಿ ರತ್ನಕ್ಕ ಬಂದಿದ್ದರು

ಆಗಲೂ ಸಂತಸ ತಡೆಯಲಾಗದೆ ಅತ್ತಿದ್ದೆ

ಅರೆ ಇದು ಸಂತಸದಿಂದ ನಗಬೆಕಾದ ಸಮಯ..ನಿನ್ನೆಲ್ಲ ಕಷ್ಟಗಳು ದೂರವಾಗುತ್ತವೆ.ಕಾಲ ಚಕ್ರದ ಮುಳ್ಳು ಕೆಳಗಿನಿಂದ ಮೇಲೆ  ಬಂದೇ ಬರುತ್ತದೆ ಎಂದು ಸಂತೈಸಿದ್ದರು ರತ್ನಕ್ಕ

ನಾನು ಎರಡು ಬಾರಿ ಕನ್ನಡ ಎಂಎ ಮಾಡಿದ್ದು ಎರಡನೆಯ ಕನ್ನಡ ಎಂಎಯಲ್ಲಿ 77% ಅಂಕ ಗಳಿಸಿದ್ದೆ ಮತ್ತು ನಾಲ್ಕನೆಯ ರ‌್ಯಾಂಕ್ ಕೂಡ ಬಂದಿತ್ತು

ಆದರೆ ಸಂಸ್ಕೃತ ಎಂಎಯಲ್ಲಿ ಸವೆಸಿದ ಹಾದಿ ಎದುರಿಸಿದ ಸವಾಲುಗಳು ಬಹಳ ಕಷ್ಟದ್ದಿತ್ತು

ಹಾಗಾಗಿಯೋ ಏನೋ ಆಗ ರ‌್ಯಾಂಕ್ ಬಂದಾಗಿನ ಸಂಭ್ರಮ ಮುಂದೆ ಕನ್ನಡದಲ್ಲಿ ರ‌್ಯಾಂಕ್ ಪಡೆದಾಗ ಆಗಲೀ ,ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದಾಗ ಆಗಲೀ ಉಂಟಾಗಲಿಲ್ಲ

ಅಂದ ಹಾಗೆ ಈ ಎಲ್ಲ ಯಶಸ್ಸಿನ ಹಿಂದೆ ನನಗಿಂತ  ಕೇವಲ ಎರಡು ವರ್ಷ ದೊಡ್ಡವರಾಗಿದ್ದ ,ನನ್ನ ಮೀಯಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಸ್ಪರ್ಧಿಯಾಗಿದ್ದ ಕಾನದ ಮಾಸ್ಟ್ರ ಮಗ ಶಿವಶಂಕರನ ಅಕ್ಕ ಶೋಭಾಗಾಯತ್ರಿಯ ಪ್ರೇರಣಾತ್ಮಕ ಮಾತುಗಳಿವೆ

ನಾನು ಪಿಯು ಫೇಲಾಗಿದ್ದ ಸಮಯ.ನನಗೆ ಎಲ್ಲಿಗೆ ಯಾವ ಕಾರ್ಯಕ್ರಮಕ್ಕೆ ಹೋಗಲೂ ನಾಚಿಕೆ.ಭಟ್ರ ಮಗಳು ಜಾಣೆ ಎಂದು ಹೆಸರಾಗಿದ್ದು ಈಗ ಫೇಲಾಗಿರುವ ವಿಚಾರ ನಮ್ಮ ಹಳ್ಳಿಯಲ್ಲಿ ಕ್ಷಣದಲ್ಲಿ ಹರಡಿರುತ್ತದೆ.ಹಾಗಾಗಿ ಮನೆ ಬಿಟ್ಡು ಹೊರಗೆ ಹೋಗುತ್ತಿರಲಿಲ್ಲ

ಅದೇ ಸಮಯದಲ್ಲಿಮಂಗಳೂರು ಕಾಲೇಜಿನಲ್ಲಿ ಪದವಿ ಓದುತ್ತಿದ್ದ ನನಗಿಂತ ಎರಡು ವರ್ಷ ದೊಡ್ಡವರಾದ  ನನ್ನ ಸ್ನೇಹಿತೆ ಅದಿತಿಗೆ ನಮ್ಮ ಆತ್ಮೀಯರಾದ ನನ್ನ ತಂದೆಯವ ಶಿಷ್ಯ ವರ್ಗದ ಗೋಪಾಲ ಮಾಸ್ಟ್ರ ಜೊತೆ ಮದುವೆ ನಿಶ್ಚಯ ಆಯಿತು

ಒಂದೆಡೆ ಗೋಪಾಲ‌ಮಾಸ್ಟ್ರು ಬಹಳ ಆತ್ಮೀಯರು ಇನ್ನೊಂದೆಡೆ ಅದಿತಿ ಬಹಳ ಸ್ನೇಹಿತೆ ಹಾಗಾಗಿ ಅವರ ಮದುವೆಗೆ ಹೋದೆ.ಬಹುಶಃ ಅಲ್ಲಿಗೆ ಶೋಭಾ ಗಾಯತ್ರಿ ಬಂದಿದ್ದರು

ಅಥವಾ ಪೊಳ್ಳಕಜೆಗೆ ಹೋದಾಗ ನಾವು ಭೇಟಿಯಾದದ್ದಾ ಎಂದು ನೆನಪಾಗುತ್ತಿಲ್ಲ

ಒಟ್ಟಿನಲ್ಲಿ ನಾವು ಊಟಕ್ಕೆ ಅಕ್ಕ ಪಕ್ಕಕುಳಿತಿದ್ದೆವು.ನಾನು ಫೇಲಾಗಿರುವುದನ್ನು ತಿಳಿದ ಶೋಭಾ ಗಾಯತ್ರಿ ಫೇಲ್ ಅಂತ ತಲೆಕೆಡಿಸಿಕೊಳ್ಳಬೇಕಿಲ್ಲ.ಪಿಯುಸಿಯಲ್ಲಿ ಫೇಲ್ ಆದವರು ಮರುಪರೀಕ್ಷೆ ಕಟ್ಟಿ ಪಾಸಾಗ ಪದವಿಗೆ ಸೇರಿ ಅಲ್ಲಿ ರ‌್ಯಾಂಕ್ ಪಡೆಯಬಹುದು.ನನ್ನ ಸ್ನೇಹಿತೆ ಒಬ್ಬಳು ಪಿಯನಲ್ಲಿ ಜ್ಸ್ಟ್ ಪಾಸ್ ಆದರೆ ಪದವಿಯಲ್ಲಿ ಮೊದಲ ರ‌್ಯಾಂಕ್ ಪಡೆದಿದ್ದಾಳೆ.ಹಾಗಾಗಿ ನೀನು ತಲೆಕೆಡಿಸದೆ ಓದು ಎಂದು ಶೋಭಾ ಗಾಯತ್ರಿ ಹೇಳಿದ್ದರು

ಶೋಭಾ ಗಾಯತ್ರಿ ಕೂಡ ಆಗ ಪದವಿ ಓದುತ್ತಿದ್ದ ಹುಡುಗಿಯೇ..ಆದರೆ ಅವರ ಮಾತು ತುಂಬಿದ ಆತ್ಮವಿಶ್ವಾಸ  ಭರವಸೆಯನ್ನು ಅಳೆಯಲು ವಿಶ್ವದ ಯಾವುದೇ ಮಾಪಕಗಳಿಂದ ಸಾಧ್ಯವಿಲ್ಲ

ಅದಾದ ನಂತರ ನಾನು ಶೋಭಾ ಗಾಯತ್ರಿಯನ್ನು ಕಂಡಿಲ್ಲ.ಅಲ್ಲಿಯೇ ನಮ್ಮಜ್ಜನ ಮನೆ ಸಮೀಪದ ಕೆರೆಕೋಡಿ ಮಾಸ್ಟ್ರ ತಮ್ಮ ಬೆಂಗಳೂರು? ಮುಂಬಯಿಯಲ್ಲಿ ಒಳ್ಲೆ ಉದ್ಯೋಗದಲ್ಲಿದ್ದು ಅವರ ಜೊತೆ ಮದುವೆ ಆಯಿತು ಎಂದು ಕೇಳಿದ ನೆನಪು

ಒಂದಿನ ಅವರನ್ನು ಮಾತನಾಡಬೇಕು ಎಂದೆನಿಸುತ್ತಿದೆ ಈಗ 


Tuesday 4 January 2022

ನನಗೂ ಆತ್ಮವಿದೆ ಅದಕ್ಕೂ ಒಂದು ಕಥೆ ಇದೆ. ಕಟೀಲಿನ ಉಚಿತ ಊಟವೂ ಮತ್ರು ಸಂಸ್ಕೃತ ಪಾಠವೂ

 ನನಗೂ ಆತ್ಮವಿದೆ ಅದಕ್ಕೂ ಒಂದು ಕಥೆ ಇದೆ.


ಕಟೀಲಿನ  ಉಚಿತ ಊಟವೂ ಸಂಸ್ಕೃತ  ಪಾಠವೂ

ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವಗಳಿವು

1994 ರ ಅಗಸ್ಟ್ ನಲ್ಲಿ ಕಟೀಲಿನಲ್ಲಿ ಸಂಸ್ಕೃತ ಎಂಎಗೆ ಸೇರಿದ್ದೆ.ಅದಾಗಲೇ ನನಗೆ ಪ್ರಸಾದರೊಂದಿಗೆ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು

ನನ್ನ ಕಲಿಕೆಗೆ ಮನೆ ಮಂದಿಯಿಂದ ತೀವ್ರ ವಿರೋಧ ಬಂದಕಾರಣ ಎಲ್ಲರನ್ನೂ ಎದುರು ಹಾಕಿಕೊಂಡು ಕಟೀಲಿನಲ್ಲಿ ಸಂಸ್ಕೃತ ಎಂಎ ಗೆ ಸೇರಿದ್ದೆ

ಕಟೀಲು ಕಾಲೇಜು ಪ್ರಿನ್ಸಿಪಾಲರಾಗಿದ್ದ ಡಾ.ಜಿ ಎನ್ ಭಟ್ ಅವರಿಂದಾಗಿ ಎಕ್ಕಾರಿನ ನಾಗವೇಣಿ‌ ಅಮ್ಮ ನಮಗೊಂದು ಬಾಡಿಗೆ ಮನೆ ಒದಗಿಸಿದ್ದರು.ಅದು ಮೋಟು ಗೋಡೆಯ ಮಣ್ಣಿನ‌ಮನೆ

ಪೂರ್ತಿ ಒರಳೆ ಹತ್ತಿದ ಮನೆ.ನಮಗೋ ನಮ್ಮ ಆದಾಯಕ್ಕೆ ಒಂದು ಮನೆಯಂತಹದ್ದು ಸಿಕ್ಕಿದರೆ ಸಾಕಿತ್ತು

ಬೆಂಗಳೂರಿನಲ್ಲಿದ್ದ ಕೆಲಸವನ್ನು ಬಿಟ್ಟು ಪ್ರಸಾದ್ ಊರಿಗೆಬಂದಿದ್ದರು.ನಂತರ ನನ್ನ ಕಲಿಕೆಯ ಕಾರಣಕ್ಕೆ ಮನೆಯಲ್ಲಿ ವಿವಾದ ಉಂಟಾದಾಗ ಮತ್ತೆ ಮಂಗಳೂರಿನ ವೆಟರ್ನರಿ ಶಾಪೊಂದರಲ್ಲಿ ತಿಂಗಳಿಗೆ 800₹ ವೇತನಕ್ಕೆ ಅರೆಕಾಲಿಕ ಕೆಲಸಕ್ಕೆ ಸೇರಿದ್ದರು

ಕಟೀಲಿನಿಂದ ಮಂಗಳೂರಿಗೆ ಹೋಗಿಬರಲು ತಿಂಗಳಿಗೆ 300₹ ಖರ್ಚಾಗುತ್ತಿತ್ತು.ಉಳಿದ ಐದು ನೂರು ರುಪಾಯಿಗಳಲ್ಲಿ ಮನೆ ಬಾಡಿಗೆ ಕಟ್ಟಿಉಳಿದ ಊಟ ತಿಂಡಿಯಖರ್ಚನ್ನು ನಿಭಾಯಿಸಬೇಕಿತ್ತು

ನಮ್ಮ‌ ಅದೃಷ್ಟಕ್ಕೆ ಎಕ್ಕಾರಿನ ಮನೆಯನ್ನು ನಾಗವೇಣಿ‌ ಅಮ್ಮ 150₹ ಬಾಡಿಗೆಗೆ ಕೊಟ್ಟರು.

800₹ ನಲ್ಲಿ 30+-150=450  ಕಳೆದು ಉಳಿದ 350 ರಲ್ಲಿ ಇಡೀ ತಿಂಗಳು ಕಳೆಯಬೇಕಿತ್ತು.ಅದರಲ್ಲಿ ದಿನಕ್ಕೆ ಒಂದೂವರೆ ರುಪಾಯಿಯಂತೆ ತಿಂಗಳಿಗೆ  37.50₹ ನನಗೆ ಎಕ್ಕಾರಿನಿಂದ ಕಟೀಲಿಗೆ ಹೋಗಿ ಬರಲು ಬಸ್ಸಿಗೆ ಖರ್ಚಾಗುತ್ತಿತ್ತು.

ಈ ಕಷ್ಟಕಾಲದಲ್ಲಿ ನನಗೆ ಸಹಾಯಕ್ಕೆ ಬಂದದ್ದು ಕಟೀಲಿನ ಮಧ್ಯಾಹ್ನದ ಊಟ

ಕಟೀಲು ವಿದ್ಯಾ ಸಂಸ್ಥೆಯಲ್ಲಿ ಓದುವ ಎಲ್ಲ ಮಕ್ಕಳಿಗೂ ಉಚಿತ ಊಟದ ವ್ಯವಸ್ಥೆ ಇತ್ತು

ಇದಲ್ಲದೆ ಕಟೀಲು ದೇವಾಲಯದಲ್ಲಿಯೂ ನಮಗೆ ಊಟ ಮಾಡಲು ಅವಕಾಶವಿತ್ತು.ಸಂಸ್ಕೃತ ಓದುತ್ತಿದ್ದವರಲ್ಲಿ ಒಬ್ಬಿಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಬ್ರಾಹ್ಮಣರಾಗಿದ್ದು ದೇವಾಲಯದಲ್ಲಿನ ಬ್ರಾಹ್ಮಣರ ಪಂಕ್ತಿಗೆ ಹೋಗಬಹುದಿತ್ತು.ನಿತ್ಯವೂ ಪಾಯಸದ ಊಟ.ಆಗಾಗ ಯಾರಾದರೂ ಚಂಡಿಕಾ ಹೋಮವನ್ನೋ ಇನ್ನೇನೋ ವಿಶೇಷ ಪೂಜೆಗಳಿದ್ದರೆ ಪಾಯಸ ಮಾತ್ರವಲ್ಲದೆ ಹೋಳಿಗೆ ಲಾಡು ಮೊದಲಾದ ಸಿಹಿ ಭಕ್ಷ್ಯಗಳೂ ಇರುತ್ತಿದ್ದವು.ಜೊತೆಗೆ ನಮಗೆ ಎರಡು ರುಪಾಯಿ ಐದು ರುಪಾಯಿ ಊಟ ದಕ್ಷಿಣೆ ಸಿಗುತ್ತಿತ್ತು.ವಾರಕ್ಕೊಂದಾದರೂ ಇಂತಹ ಊಟ ದಕ್ಷಿಣೆ ಸಿಗುತ್ತಿತ್ತು.ನಮಗೆ ಬಹಳ ಖುಷಿ ಆಗುತ್ತಿತ್ತು.ಆಗಿನ ಐದು ರುಪಾಯಿಗೆ ತುಂಬಾ ಬೆಲೆ ಇತ್ತು.ಸಂಸ್ಕೃತ ಓದಲು ಬಂದ ನಾವ್ಯಾರೂ ಸಿರಿವಂತರಾಗಿರಲಿಲ್ಲ.ಒಂದೇ ದೋಣಿಯ ಪಯಣಿಗರಾಗಿದ್ದೆವು.ಹಾಗಾಗಿ ಚಂಡಿಕಾ ಹೋಮ‌ಇದ್ದ ದಿನ ನಮಗಾಗುತ್ತಿದ್ದ ಸಂತೋಷ ವರ್ಣನಾತೀತ

ಅದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ.ಈ ಮಧ್ಯಾಹ್ನದ ಊಟದ ವ್ಯವಸ್ಥೆ ನಮಗೆ ಬಹಳಷ್ಟು ಉಪಕಾರ ಮಾಡಿತ್ತು.ಒಂದು ಹೊತ್ತು ಹೊಟ್ಟೆ ತುಂಬಾ ಉಣ್ಣುದಕ್ಕೆ ಅಡ್ಡಿ ಇರಲಿಲ್ಲ.ಅಲ್ಲಿ ಅಸ್ರಣ್ಣರು ಮತ್ತಿತರರು ನಮಗೆ ಒತ್ತಾಯ ಮಾಡಿ ಪಾಯಸ ಇನ್ನಿತರ ಊಟದ ವಸ್ತುಗಳನ್ನು ಬಡಿಸುತ್ತಿದ್ದರು.ಅವರ ಪ್ರೀತಿಯನ್ನು ಮರೆಯಲಾಗದು

ಕಟೀಲಿನ ಸಾರಿನ ಪರಿಮಳ ನೆನಪಾದರೆ ನನಗೆ ಮನೆಯಲ್ಕಿ ಮಾಡಿದ ಸಾರು ಸಾಂಬಾರಿನ ರುಚಿ ಪೇಲವೆನಿಸುತ್ತದೆ.ಅಲ್ಲಿ ಒಂದು ಉಪ್ಪಿನಕಾಯಿ ರೀತಿಯ ವ್ಯಂಜನ ಬಡಿಸುತ್ತಿದ್ದರು.ಅದ್ಭುತ ರುಚಿ ಅದು.ಅಷ್ಡು ರುಚಿಯಾದ ವಸ್ತುವನ್ನು ನಾನು ಬೇರೆಲ್ಲೂ ತಿಂದಿಲ್ಲ.ಇನ್ನು ಪ್ರತಿ ಶುಕ್ರವಾರ ಗಂಜಿ ಪ್ರಸಾದ ಇರುತ್ತಿತ್ತು.ಇದನ್ನು ಗೋದಿಯಿಂದ ಹಾಲು ಹಾಕಿ ಬೇಯಿಸಿ ತಯಾರಿಸುತ್ತಿದ್ದರೆಂದು ನೆನಪು.ಬಹಳ ರುಚಿಯಾದ ಗಂಜಿ ಇದು.ಇದಕ್ಕಾಗಿ ಶುಕ್ರವಾರ ಆಗುವುದನ್ನೇ ನಾನು ಕಾಯುತ್ತಿದ್ದೆ

ದೇವಾಲಯದ ಉಟದ ಸಮಯ ಒಂದೇ ಇರುತ್ತಿರಲಿಲ್ಲ.ಶುಕ್ರವಾರ ತಡ ಆಗುತ್ತಿತ್ತು.ನಮ್ಮ ಉಪನ್ಯಾಸಕರಾದ ಪದ್ಮನಾಭ ಮರಾಠೆ ಮತ್ತು ನಾಗರಾಜರೂ ದೇವಾಲಯಕ್ಕೆ ಊಟಕ್ಕೆಬರುತ್ತಿದ್ದರು.ಹಾಗಾಗಿ ಉಟದ ಸಮಯಕ್ಕೆ ಸರಿಯಾಗಿ ಪಾಠದ ಸಮಯ ಹೊಂದಾಣಿಕೆ ಆಗುತ್ತಿತ್ತು.ಕೆಲವೊಮ್ಮೆ ಹೊಟ್ಟೆ ಬಿರಿವಷ್ಟು ಉಂಡ ದಿನ ನಮಗೆ ತರಗತಿಗೆ ಹೋಗಲು ಇಷ್ಟವಿರುತ್ತಿರಲಿಲ್ಲ.ಅಂತಹ ಸಂದರ್ಭದಲ್ಲಿ ನಮ್ಮನ್ನು ಬಿಟ್ಡು ಬಿಡುತ್ತಿದ್ದರು‌.ನಾನುಮನೆಗೆ ಬಂದು ಗಡದ್ದಾಗಿ ನಿದ್ರೆ ಹೊಡೆಯುತ್ತಿದ್ದೆ

ನಾನು ಬಿಎಸ್ಸಿ ಮಾಡಿ ನಂತರ ಸಂಸ್ಕೃತ ಎಂಎ ಗೆ ಸೇರಿದ್ದು.ವಿಜ್ಣಾನದ ಕಷ್ಟದ ಪಾಠಗಳು ಶಿಸ್ತನ್ನು ಬಯಸುವ ಪ್ರಯೋಗ ತರಗತಿಗಳಿಂದ ನಾನು ಸೋತು ಸುಣ್ಣವಾಗಿದ್ದೆ.ನಂತರ ಎಂಎ ಗೆ ಸೇರಿದಾಗ ಕಲಿಕೆ ಎಷ್ಟು ಸುಲಭದ್ದು ಎನಿಸಿತ್ತು.ಡಾ.ಕೆ ನಾರಾಯಣ ಭಟ್ಟರು ಅದ್ವಿತೀಯ ವಿದ್ವಾಂಸರು‌.ಪ್ರಗಲ್ಭ ಪಂಡಿತರು.ಅವರ ಪಾಠ ಕೇಳುದೊಂದು ಭಾಗ್ಯವೇ ಸರಿ..ಜೊತೆಗೆ ಪದ್ಮನಾಭ ಮರಾಠೆಯವರು ಆಗಷ್ಟೇ ಎಂ ಎ ಮುಗಿಸಿದ ಎಳೆಯರಾಗಿದ್ದರೂ ಪಾಂಡಿತ್ಯಕ್ಕೆ ಕೊರತೆ ಇರಲಿಲ್ಲ.ಡಾ.ಜಿ ಎನ್ ಭಟ್ಟರೂ ಅದ್ವಿತೀಯ ವಿದ್ವಾಂಸರು.ಆದರೆ ಅಲಂಕಾರ ಶಾಸ್ತ್ರ( ಕಾವ್ಯ ಮೀಮಾಂಸೆ) ಪಾಠ ಮಾಡುತ್ತಿದ್ದರು.ವೇದಾಂತವನ್ನು ಐಚ್ಛಿಕ ವಿಷಯವಾಗಿ ತಗೊಮಡಿದ್ದ ಕಾರಣ ನನಗೆ ಕಾವ್ಯ ಮೀಮಾಂಸೆ ಒರಲಿಲ್ಲ.ಹಾಗಾಗಿ ಡಾ.ಜಿ ಎನ್ ಭಟ್ಟರ ಪಾಠ ಕೇಳುವ ಅವಕಾಶ ನನಗಿರಲಿಲ್ಲ

ಬಹುಶಃ ಇಲ್ಲಿನ ಉತ್ತಮ ಉಪನ್ಯಾಸಕರಿಂದಾಗಿ ಸಂಸ್ಕೃತವನ್ನು ನಾನು ಬಹಳಷ್ಟು ಇಷ್ಟ ಪಟ್ಟು ಕಲಿತೆ.ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಸಂಸ್ಕೃತ ಕಲಿತು Rank ಪಡೆದಿದ್ದ ರಮಿತಾ ಶ್ರೀದೇವಿ‌ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು.ಪದವಿಯಲ್ಲಿ ಎರಡು ವರ್ಷ ದ್ವಿತೀಯ ಭಾಷೆಯಾಗಿ ಸಂಸ್ಕೃತ ಕಲಿತ ನನಗೆ ಎಂಎ ಯಲ್ಲಿ ಈ Rank ವಿಜೇತರ ಜೊತೆಗಿನ ಸ್ಪರ್ಧೆ ಸುಲಭದ್ದಾಗಿರಲಿಲ್ಲ.ಆದರೆ ನಾನು ಓದಿ Rank ತೆಗೆದು ಒಳ್ಳೆಯ ಕೆಲಸವನ್ನು ಗಳಿಸಲೇ ಬೇಕೆಂದು ನಿರ್ಧರಿಸಿ ಎಂಎ ಗೆ ಸೇರಿದವಳು.ಹಾಗಾಗಿ ದಿನಕ್ಕೆ ಕಡಿಮೆ ಎಂದರೂ ಎಂಟು ಗಂಟೆ ಓದುತ್ತಿದ್ದೆ.ಆದ್ದರಿಂದ ನನಗೆ ಮೊದಲ Rank ಪಡೆಯಲು ಸಾಧ್ಯವಾಯಿತು

ಇಂದಿಗೂ ನಾನೇನಾದರೂ ನನ್ನ ಭಾಷಣ ಚಂದ ಆದರೆ ಅದಕ್ಕೆ ಕಾರಣ ಇಲ್ಲಿನ ಸಂಸ್ಕೃತ ಕಲಿಕೆ ಮತ್ತು ಉಪನ್ಯಾಸಕರು‌.ನಮ್ಮಲ್ಲಿ ಸೆಮಿನಾರ್ ಮಾಡಿಸಿ ಹೊರ ಜಗತ್ತನ್ನು ಸಮರ್ಥವಾಗಿ ಎದುರಿಸಿ ಗೆಲ್ಲವಂತೆ ನಮ್ಮನ್ನು ತಯಾರು .ಮಾಡಿದ್ದರು.

ಪ್ರಸಾದರ ವೇತನದಲ್ಲಿ ನಮಗೆ ಒಂದು ಹೊತ್ತು ಮಾತ್ರ ಊಟ ಮಾಡಲು ಸಾಧ್ಯವಿತ್ತು

ಆದರೆ ಕಟೀಲಿನ ಮದ್ಯಾಹ್ನದ ಊಟ ಎರಡು ಹೊತ್ತೂ ಊಟ ಸಿಗುವಂತೆ ಮಾಡಿತ್ತು.ಮತ್ತು ಅದು ಬಹಳ ರುಚಿಕರವಾದ ಊಟ ಕೂಡ.ಹಾಗಾಗಿ ನಾನು ಕಟೀಲಿನಲ್ಲಿ ಎರಡು ವರ್ಷ ಹೊಟ್ಟೆ ತುಂಬಾ ಉಂಡದ್ದನ್ನೂ ಪಾಠ ಕೇಳಿದ್ದನ್ನೂ ಜೀವನವಿಡೀ ಮರೆಯಲಾಗದು.

ನಾನು ಎರಡನೇ ವರ್ಷ ಎಂಎಗೆ ಬರುವಷ್ಟರಲ್ಲಿ ಪ್ರಸಾದರಿಗೆ ಮಂಗಳೂರಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತ್ತು.ಹಾಗಾಗಿ ಮುಂದೆ ಅಂತಹ ಸಮಸ್ಯೆ ಏನೂ ಆಗಲಿಲ್ಲ

ಉಚಿತ ಊಟ ತಿಂಡಿಗಳು ಮಕ್ಕಳನ್ನು ಹಾಳು ಮಾಡುವುದಿಲ್ಲ

ಬದಲಿಗೆ ಮಕ್ಕಳೆಡೆಗಿನ ಉದಾರತೆ ತರಗತಿಗೆ ಹಾಜರಾಗದೇ ಇದ್ದರೂ ಪೃಇಕ್ಷೆ ಬರೆಯಲು ಬಿಡುವುದು,ಫಲಿತಾಂಶಕ್ಕಾಗಿ ತೀರಾ ಉದಾರವಾಗಿ‌ಮೌಲ್ಯ ಮಾಪನ ಮಾಡುದು.ಪಾಸ್ ಮಾಡುದು ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗಿ

ಉಚಿತ ಉಟ ಕೊಟ್ಟರೆ ಹಾಲಾಗುವುದಾದರೆ ನಾವೆಲ್ಲ ಹಾಳಾಗಿ ಎಕ್ಕುಟ್ಟಿ ಹೋಗಿರುತ್ತಿದ್ದೆವು

ಆದರೆ ನಾವ್ಯಾರೂ ಉಚಿತ ಊಟ ಸಿಕ್ಕ ಕಾರಣಕ್ಕೆ ಹಾಳಾಗಿಲ್ಲ.ನನ್ನ ಸಹಪಾಠಿಗಳೆಲ್ಲರೂ ಅವರವರ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ.ಅವಿನಾಶ ಪುತ್ತೂರಿನಲ್ಲಿ ಸರಸ್ವತಿ ವಿದ್ಯಾಮಂದಿರ ಎಂಬ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.ಗಜಾನನ ಮರಾಠೆ ,ರಮೇಶ ಆಚಾರ್ಯ ಡಾ.ಈಶ್ವರ ಪ್ರಸಾದ್  ಕಮಲಾಯಿನಿಯರು ಉತ್ತಮ ಶಿಕ್ಷಕ/ ಉಪನ್ಯಾಸಕರಾಗಿ ಹೆಸರು ಗಳಿಸಿದ್ದಾರೆ

ರಮಿತಾ ಭಾಷೆಯೇ ತಿಳಿಯದ ಊರು ವಯನಾಡಿನ ಮಲೆಯಾಳ ಕಲಿತು ತನ್ನದೇ ಅದ ಸಣ್ಣ ಉದ್ಯಮ‌ನಡೆಸುತ್ತಿದ್ದಾರೆ.

ನನ್ನ ಸಹಪಾಠಿ ನೀತಾ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ.ಆದರೆ ಮುಂದೆ ತುಂಬಾ ಓದಿ ಉತ್ತಮ ಕೆಲಸದಲ್ಲಿದ್ದಾರೆ ಎಂದು ಕೇಳಿರುವೆ.

ಉಚಿತ ಊಟ ಬಡ ಮಕ್ಕಳಿಗೆ ಅಗತ್ಯವಾಗಿ ನೀಡಬೇಕಾದದ್ದೇ..ಆದರೆ ಪಾಠಕ್ಕಿಂತ ಊಟ ಉಪಾಹಾರ ಹಾಲು ಮೊಟ್ಟೆ ಸಕಾಲದಲ್ಲಿ ಬೇಯಿಸಿ ಕೊಡುವ ಕೆಲಸದಲ್ಲಿ ಮುಳುಗಿ ಹೋಗುವ ಶಿಕ್ಷಕರಿಗೆ ಪಾಠ ಮಾಡಲು ಸಮಯವಿಲ್ಲದಂತಾಗಬಾರದು ಅಷ್ಟೇ..

ದಿನೇ ದಿನೇ ಶಿಕ್ಷಣ ಮಟ್ಟ ಕುಸಿಯುತ್ತಿದೆ.ಮೊದಲು ಕಾಗುಣಿತ ಗೊತ್ತಿಲ್ಲದ ಹತ್ತನೆಯ ತರಗತಿಯಮಕ್ಕಳು ಪಾಸಾಗಿ ಪಿಯು ಗೆ ಬರುತ್ತಿದ್ದರೆ ಈಗ ಅಕ್ಷರ ಮಾಲೆಯ ಬರವಣಿಗೆಯನ್ನೇ ಅರಿಯದವರು ಬರುತ್ತಿದ್ದಾರೆ.ಸರಳವಾಕ್ಯಗಳನ್ನು ಮಾಡಲು ಬರೆಯಲು ತಿಳಿಯದವೇ ಹೆಚ್ಚಾಗಿದ್ದಾರೆ

ಊಟ ತಿಂಡಿ ಹಾಲು ಹಣ್ಣು ನೀಡುವಷ್ಟೇ ಕಾಳಜಿಯಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ನನಗನಿಸುತ್ತದೆ

- ಡಾ.ಲಕ್ಷ್ಮೀ ಜಿ ಪ್ರಸಾದ್ .


Saturday 1 January 2022

ಆ ಹೆಂಗಸಿನ ಮಾತನ್ನು ನಾವು ಲೆಕ್ಕಕ್ಕಿಡುವುದಿಲ್ಲ( ಗಣನೆಗೆ ತೆಗೆದುಕೊಳ್ಳುವುದಿಲ್ಲ)

 ನನಗೂ ಆತ್ಮವಿದೆ..ಅದಕ್ಕೂ ಕಥೆಯಿದೆ 


ಆ ಪೊಂಜೋವಿನ ಪಾತೆರನು ಎಂಕ್ಲು ಲೆಕ್ಕೊಗು ದೀಪುಜ್ಜ..

ಆ ಹೆಂಗಸಿನ ಮಾತನ್ನು ನಾವು ಲೆಕ್ಕಕ್ಕಿಡುವುದಿಲ್ಲ( ಗಣನೆಗೆ ತೆಗೆದುಕೊಳ್ಳುವುದಿಲ್ಲ)..ಇದನ್ನು ಯಾರೋ ಆಶಿಕ್ಷಿತರು ಹೇಳಿದ್ದಲ್ಲ.ಮಂಗಳೂರು ಯುನಿವರ್ಸೊಟಿಯಲ್ಲಿ ಕನ್ನಡ ಎಂಎ ಓದಿದ ತುಳು ಅಧ್ಯಯನಗಾರ ಹೇಳಿದ್ದು...

ಯಾಕೆ ? ಯಾಕೆಂದರೆ ತಾವು ಕಟ್ಟುವ ಬಣ್ಣದ ಸುಳ್ಳುಗಳನ್ನು ಆಕೆ ಸಾಕ್ಷಿ ಸಹಿತವಾಗಿ ಸುಳ್ಳೆಂದು ಸಿದ್ಧ ಪಡಿಸಿ ಸತ್ಯವನ್ನು ಜಗತ್ತಿಗೆ ಕಾಣಿಸುತ್ತಾರೆ..

ಹಾಗಾಗಿ ಆ ಪೊಂಜೋವಿನ ಮಾತನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ..ತಗೊಂಡರೆ ಸತ್ಯವನ್ನು ಒಪ್ಪಬೇಕಾಗುತ್ತದೆ.ಈ ವ್ಯಕ್ತಿ  ತುಳುವಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ..ಆದರೆ ಅನ್ಯರ ಅಧ್ಯಯನವನ್ನು ಕೀಳಾಗಿ ಕಾಣುವ ಮನೋಭಾವ ಈತನ ಎಲ್ಲ ಗುಣಕ್ಕೂ ಕಪ್ಪುಚುಕ್ಕೆ ತಂದಿದೆ..ನಾನು ನನ್ನಷ್ಟಕ್ಕೆ ಬ್ಲಾಗಿನಲ್ಲಿ ನನಗೆ ಸಿಕ್ಕ ದೈವಗಳ ಪಟ್ಟಿಯನ್ನು ಹಾಕಿದ್ದೆ

ಆಗ ಅದನ್ನು ಅಕಾರಾದಿಯಾಗಿ ಜೋಡಿಸುವ ತಂತ್ರಜ್ಞಾನ ನನಗೆ ತಿಳಿದಿರಲಿಲ್ಲ.( ಈಗಲೂ ತಿಳಿದಿಲ್ಲ) ಅಕಾರಾದಿಯಾಗಿ ಇಲ್ಲದೇ ಇದ್ದಾಗ ಕೆಲವು ಹೆಸರುಗಳು ರಿಪೀಟ್ ಆಗಿದ್ದಿರಬಹುದು.ಇದನ್ನಾತ ಮಹಾನ್ ಅಪರಾಧ ಎಂಬಂತೆ ತುಳು ಪತ್ರಿಕೆಯೊಂದರ ಅಂಕಣದಲ್ಲಿ ಬರೆದಿದ್ದರು..ಈ ವ್ಯಕ್ತಿ ನನ್ನ ಅನೇಕ ಬ್ಲಾಗ್ ಬರಹಗಳನ್ನು ತನ್ನ ಹೆಸರಿನಲ್ಲಿ ಹಾಕಿಕೊಂಡಿದ್ದರು.ಆಗ ಅಲ್ಲಿನ ತಪ್ಪುಗಳು ಚಂದ ಕಂಡಿತ್ತು

.ಕದಿಯುವಾಗ ಕಾಣದ ದೋಷಗಳು ಅಂಕಣ ಬರೆಯುವಾಗ ಕಾಣಿಸಿತ್ತು.ನಂತರ ಹೆಸರುಗಳು ಸೃಷ್ಟಿ ಮಾಡಿದ್ದು ಎಂದು ಬರೆದಿದ್ದರು..

ಈಗ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ 1228 ದೈವಗಳ ಬಗ್ಗೆ ಮಾಹಿತಿ ನೀಡಿರುವೆ..ಇವರಲ್ಲಿ ಸುಮಾರು ಸುಮಾರು 600-700 ದೈವಗಳ ಫೋಟೋ ಕೂಡ ಸಂಗ್ರಹಿಸಿ ನೀಡಿರುವೆ.ಹೆಸರುಗಳನ್ನು ಸೃಷ್ಟಿಸಬಹುದು ಕಥೆಗಳನ್ನು ಸೃಷ್ಟಿಸಬಹುದು.‌ದೈವಗಳ ಕೋಲವನ್ನೂ ಸೃಷ್ಟಿಸಿದೆನಾ? ಫೋಟೋವನ್ನೂ ಸೃಷ್ಟಿಸಿದೆನಾ ? ಅವರೇ ಉತ್ತರಿಸಬೇಕು.

ಇಂತಹ ಮಹಾನ ಪ್ರಭೃತಿಯೇ ಆ ಹೆಂಗಸಿನ ಮಾತನ್ನು ಲೆಕ್ಕಕ್ಕಿಡುವುದಿಲ್ಲ ಎಂದದ್ದು

ಓರ್ವ ಸ್ತ್ರೀ ಅಧ್ಯಯನಗಾರಳಾಗಿ ನಾನು ಪುರುಷಾಹಂಕಾರದ ಇಂತಹ ಅನೇಕ ಮಾತುಗಳನ್ನು ಕೇಳಿದ್ದೇನೆ..ಲಕ್ಷಿಸದೆಯೇ ಮುಂದುವರಿದೆ.

ಬ್ಲಾಗ್ ತೆರೆದೆ ಬರೆದೆ..ಅದರ ಪರಿಣಾಮವಾಗಿಯೇ ತುಳು ಅಧ್ಯಯನಗಾರ ತಾವು ಲೆಕ್ಕಕ್ಕಿಡುವುದಿಲ್ಲ ಎಂಬ ಹೆಂಗಸಾದ  ನನ್ನ ಮಾತನ್ನು ಡಾ.ಕೆ ಎನ್ ಗಣೇಶಯ್ಯ ಲೆಕ್ಕಕ್ಕೆ ತಗೊಂಡರು ..ಪರಿಣಾಮವಾಗಿ ನಾನು ಲಕ್ಷ್ಮೀ ಪೋದ್ದಾರ್ ಆದೆ.

ನಾನು ಕನಸಲ್ಲೂ ಊಹಿಸದೇ ಇರುವ ವಿಚಾರವದು..ಬಹು ಪ್ರಸಿದ್ಧ ಕಾದಂಬರಿಕಾರರಾದ ಗಣೇಶಯ್ತನವರ ಪ್ರಸಿದ್ಧ ಕಾದಂಬರಿಯಲ್ಲಿ ನಾನೊಂದು ಜೀವಂತ ಪ್ರಮುಖ ಪಾತ್ರವಾಗಿ ಬಂದಿರುವೆ ಎಂಬುದು ನಾನೆಂದಿಗೂ ಮರೆಯಲಾಗದ ರೋಮಾಂಚನ ನೀಡಿದ ವಿಚಾರ

ಯಾರಿಗೆ ತಾನೇ ಕಥಾ ನಾಯಕಿಯಾಗುವುದು,ಕಥೆಯ ಕೇಂದ್ರವಾಗುವುದು ಇಷ್ಟವಾಗದ ವಿಚಾರ?..ಎಲ್ಲರೂ ಇಷ್ಟ ಪಡುವ ಬಯಸುವ ವಿಚಾರವಿದು..ನನ್ನ ವಿಚಾರದಲ್ಲಿ ಇದು ಸಂಭವಿಸಿದೆ..

ಯಾಕೋ ಗೊತ್ತಿಲ್ಲ..ನನ್ನ ಬದುಕಿನಲ್ಲಿ ಇಂತಹ ಅನೇಕ ಅನೂಹ್ಯ ವಿಚಾರಗಳು ಘಟಿಸಿವೆ..ಅದಕ್ಕಾಗಿಯೇ ಆತ್ಮಕಥೆ ಬರೆಯಲು ನಿರ್ಧರಿಸಿ ಶುರು ಮಾಡಿರುವೆ.

ಅದಿರಲಿ ನಾನು ಲಕ್ಷ್ಮೀ ಪೋದ್ದಾರ್ ಆದದ್ದನ್ನು ಡಾ.ಗಣೇಶಯ್ತ ಹೀಗೆ ವಿವರಿಸಿದ್ದಾರೆ..ಇನ್ನು ಪೂರ್ಣ ಮಾಹಿತಿಗೆ ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿ ಓದಬಹುದು.

"ನಗರದ ಬಸದಿಕೇರಿಯಲ್ಲಿರುವ ಪೂಜಾ ಮಂಟದ ಬಳಿ ನಡೆತುವ ಜಟ್ಟಿಗರ ಪೂಜೆಯನ್ನು ಕಾದಂಬರಿಯ ಪ್ರಮುಖ ವಸ್ತುವಾಗಿರಿಸಿಕೊಂಡು  ಬರೆಯುವ ಉದ್ದೇಶದಿಂದ ವಿಷಯಕ್ಕಾಗಿ ಹುಡುಕಾಡುತ್ತಿದ್ದೆ.ಡಾ.ಲಕ್ಷ್ಮೀ ಜಿ ಪ್ರಸಾದ ಎಂಬವರು ಬ್ಲಾಗೊಂದರಲ್ಲಿ ಬರೆದ ಜಟ್ಟಿಗ ಭೂತಾರಾಧನೆಯ ವಿವರಗಳು ನಾನು ಕಲ್ಪಿಸಿದ್ದ ಕೊಂಡಿ ಕೇವಲ ಊಹೆಯಲ್ಲ ಎನ್ನುವುದಕ್ಕೆ ಪ್ರಮುಖ ಆಧಾರ ದೊರಕಿಸುವುದರ ಜೊತೆಗೆ ಭೂತಾರಾಧನೆಯನ್ನು ಚರಿತ್ರೆ ಹೇಳುವ ಮಾಧ್ಯಮವಾಗಿ ಬಳಸಲು ಅನುವು ಮಾಡಿಕೊಟ್ಟವು ಕೂಡಾ.ತಕ್ಷಣ ಭೂತಾರಾಧನೆಯ ಬಗ್ಗೆಯೇ ಅಧ್ಯಯನ ಮಾಡಿ ಪಿಎಚ್ ಡಿ ಪಡೆದಿರುವ ಹಲವು ಪುಸ್ತಕಗಳನ್ನೂ ಬರಹಗಳನ್ನೂ ಬರೆದಿರುವ ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಲ್ಪಟ್ಟಿರುವ ಲಕ್ಷ್ಮೀ ಪ್ರಸಾದರನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳಿಗಾಗಿ ಚರ್ಚಿಸಲು ಸಮಯ ಕೋರಿದಾಗ ತಾವಾಗಿಯೇ ಮನೆಗೆ ಬಂದು ತಮ್ಮ ಸಂಶೋಧನೆಯ ಹತ್ತಾರು ಅನುಭವಗಳನ್ನು  ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅವರೇ ಕಾದಂಬರಿಯ ಒಂದು ಪ್ರಮುಖ ಪಾತ್ರವಾಗಿ ರೂಪುಗೊಳ್ಳತೊಡಗಿದರು.ಹಾಗೆಂದೇ ಅವರು ಡಾ.ಲಕ್ಷ್ಮೀ ಪೋದ್ದಾರ್ ಆಗಿ ಕಾಣಿಸಿಕೊಂಡರು.ನಂತರ ಅವರು ಹಲವಾರು ಸಲಹೆಗಳನ್ನೂ ಪಾಡ್ದನಗಳ ತುಳು ಕನ್ನಡ ರೂಪಾಂತರವನ್ನೂ ನೇತ್ರಾಣಿ ಜಟ್ಟಿಗರ ಫೋಟೋವನ್ನೂ ಒದಗಿಸಿಕೊಟ್ಟಿದ್ದರಿಂದ ಕಾದಂಬರಿಗೆ ಹೊಸ ಆಯಾಮವೇ ದೊರೆಯಿತು.ಬಳ್ಳಿ ಕಾಳ ಮೆಣಸು ಸಂಪೂರ್ಣವಾಗಿ ಸಂಸ್ಕಾರಗೊಂಡು ಬಿಳಿಯ ಮೆಣಸಾಯಿತು- ಡಾ.ಕೆ ಎನ್ ಗಣೇಶಯ್ಯ ( ತಮ್ಮ ಬಳ್ಳಿ ಕಾಳ ಬಳ್ಳಿ ಕಾದಂಬರಿಯ ಕುರಿತಾಡಿದ ಮಾತುಗಳ ಉದೃತ ಭಾಗ) 

ಲಕ್ಷ್ಮೀ ಪೋದ್ದಾರ್ ಆದ ನನ್ನನ್ನು ಗಣೇಶಯ್ಯನವರ ಕಾದಂಬರಿ ಮೂಲಕ ಸಾವಿರಾರು ಜನ ಗುರುತಿಸಿದ್ದಾರೆ.ನನ್ನ ತುಳು ಅಧ್ಯಯನದ ಫಲಿತವನ್ನು ಪಡೆದಿದ್ದಾರೆ ಎಂಬುದು ನನಗೆ ನಿಜಕ್ಕೂ ಹೆಮ್ಮೆ ತರುವ ವಿಚಾರ..ಅದೂ ನಾವು ಲೆಕ್ಕಕ್ಕಿಡುವುದಿಲ್ಲ ಎಂದು ತುಳು ಅಧ್ಯಯನಗಾರನೊಬ್ಬನಿಂದ ನಿಂದಿಸಲ್ಪಟ್ಟ ಮಹಿಳೆಯ ಮಾತೇ ಕಾದಂಬರಿಗೆ ಪ್ರಮುಖ ಆಧಾರ ಆಗುದು..ಹಿರಿಯ ವಿದ್ವಾಂಸರಾದ ಡಾ.ಕೆ ಎನ್ ಗಣೇಶಯ್ಯ ಆ ಮಹಿಳೆಯ ಬರಹವನನ್ನು ಗೌರವದಿಂದ ಕಂಡು ಅದರೊಳಗಿನ ಸತ್ಯವನ್ನು ಪರಿಗಣಿಸಿ ಚಾರಿತ್ರಿಕ  ಕಾದಂಬರಿ ಬರೆಯುದು ಎಲ್ಲವೂ ಕಾಕತಾಳೀಯವೇ..ಕಾಲನ ಅನೂಹ್ಯ ನಡೆಯೇ..ನನಗೂ ಗೊತ್ತಿಲ್ಲ..ತೇ ನ ವಿನಾ ತೃಣಮಪಿ ನ ಚಲತಿ( ದೇವರ ಆಶಯದ ಹೊರತಾಗಿ ಹುಲುಕಡ್ಡಿಯೂ ಅಲುಗಾಡುವುದಿಲ್ಲ) 

ಅವಹೇಳನಕ್ಕೆ ಗುರಿಯಾಗಿಸಿ ಅಳಿಸಿ ಕಾಡುವವನೂ ಅವನೇ..ಪುರಸ್ಕರಿಸಿ ಚಂದ ನೋಡುವವನೂ ಅವನೇ ಅಲ್ಲವೇ..ಮುಂದೇನು ಕಾಡುವನೋ ಇಲ್ಲ ಅನುಗ್ರಹಿಸುವನೋ ಗೊತ್ತಿಲ್ಲ..ತ್ವಮೇವ  ಶರಣಂ ಮಮ‌

ಇಂದಿಗೆ ಸರಿಯಾಗಿ 5 ವರ್ಷಗಳ ಹಿಂದೆ 01-01-2017 ರಂದು ಈ ಪುಸ್ತಕ ಬಿಡುಗಡೆಯಾಯಿತು.