Saturday 1 January 2022

ಆ ಹೆಂಗಸಿನ ಮಾತನ್ನು ನಾವು ಲೆಕ್ಕಕ್ಕಿಡುವುದಿಲ್ಲ( ಗಣನೆಗೆ ತೆಗೆದುಕೊಳ್ಳುವುದಿಲ್ಲ)

 ನನಗೂ ಆತ್ಮವಿದೆ..ಅದಕ್ಕೂ ಕಥೆಯಿದೆ 


ಆ ಪೊಂಜೋವಿನ ಪಾತೆರನು ಎಂಕ್ಲು ಲೆಕ್ಕೊಗು ದೀಪುಜ್ಜ..

ಆ ಹೆಂಗಸಿನ ಮಾತನ್ನು ನಾವು ಲೆಕ್ಕಕ್ಕಿಡುವುದಿಲ್ಲ( ಗಣನೆಗೆ ತೆಗೆದುಕೊಳ್ಳುವುದಿಲ್ಲ)..ಇದನ್ನು ಯಾರೋ ಆಶಿಕ್ಷಿತರು ಹೇಳಿದ್ದಲ್ಲ.ಮಂಗಳೂರು ಯುನಿವರ್ಸೊಟಿಯಲ್ಲಿ ಕನ್ನಡ ಎಂಎ ಓದಿದ ತುಳು ಅಧ್ಯಯನಗಾರ ಹೇಳಿದ್ದು...

ಯಾಕೆ ? ಯಾಕೆಂದರೆ ತಾವು ಕಟ್ಟುವ ಬಣ್ಣದ ಸುಳ್ಳುಗಳನ್ನು ಆಕೆ ಸಾಕ್ಷಿ ಸಹಿತವಾಗಿ ಸುಳ್ಳೆಂದು ಸಿದ್ಧ ಪಡಿಸಿ ಸತ್ಯವನ್ನು ಜಗತ್ತಿಗೆ ಕಾಣಿಸುತ್ತಾರೆ..

ಹಾಗಾಗಿ ಆ ಪೊಂಜೋವಿನ ಮಾತನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ..ತಗೊಂಡರೆ ಸತ್ಯವನ್ನು ಒಪ್ಪಬೇಕಾಗುತ್ತದೆ.ಈ ವ್ಯಕ್ತಿ  ತುಳುವಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ..ಆದರೆ ಅನ್ಯರ ಅಧ್ಯಯನವನ್ನು ಕೀಳಾಗಿ ಕಾಣುವ ಮನೋಭಾವ ಈತನ ಎಲ್ಲ ಗುಣಕ್ಕೂ ಕಪ್ಪುಚುಕ್ಕೆ ತಂದಿದೆ..ನಾನು ನನ್ನಷ್ಟಕ್ಕೆ ಬ್ಲಾಗಿನಲ್ಲಿ ನನಗೆ ಸಿಕ್ಕ ದೈವಗಳ ಪಟ್ಟಿಯನ್ನು ಹಾಕಿದ್ದೆ

ಆಗ ಅದನ್ನು ಅಕಾರಾದಿಯಾಗಿ ಜೋಡಿಸುವ ತಂತ್ರಜ್ಞಾನ ನನಗೆ ತಿಳಿದಿರಲಿಲ್ಲ.( ಈಗಲೂ ತಿಳಿದಿಲ್ಲ) ಅಕಾರಾದಿಯಾಗಿ ಇಲ್ಲದೇ ಇದ್ದಾಗ ಕೆಲವು ಹೆಸರುಗಳು ರಿಪೀಟ್ ಆಗಿದ್ದಿರಬಹುದು.ಇದನ್ನಾತ ಮಹಾನ್ ಅಪರಾಧ ಎಂಬಂತೆ ತುಳು ಪತ್ರಿಕೆಯೊಂದರ ಅಂಕಣದಲ್ಲಿ ಬರೆದಿದ್ದರು..ಈ ವ್ಯಕ್ತಿ ನನ್ನ ಅನೇಕ ಬ್ಲಾಗ್ ಬರಹಗಳನ್ನು ತನ್ನ ಹೆಸರಿನಲ್ಲಿ ಹಾಕಿಕೊಂಡಿದ್ದರು.ಆಗ ಅಲ್ಲಿನ ತಪ್ಪುಗಳು ಚಂದ ಕಂಡಿತ್ತು

.ಕದಿಯುವಾಗ ಕಾಣದ ದೋಷಗಳು ಅಂಕಣ ಬರೆಯುವಾಗ ಕಾಣಿಸಿತ್ತು.ನಂತರ ಹೆಸರುಗಳು ಸೃಷ್ಟಿ ಮಾಡಿದ್ದು ಎಂದು ಬರೆದಿದ್ದರು..

ಈಗ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ 1228 ದೈವಗಳ ಬಗ್ಗೆ ಮಾಹಿತಿ ನೀಡಿರುವೆ..ಇವರಲ್ಲಿ ಸುಮಾರು ಸುಮಾರು 600-700 ದೈವಗಳ ಫೋಟೋ ಕೂಡ ಸಂಗ್ರಹಿಸಿ ನೀಡಿರುವೆ.ಹೆಸರುಗಳನ್ನು ಸೃಷ್ಟಿಸಬಹುದು ಕಥೆಗಳನ್ನು ಸೃಷ್ಟಿಸಬಹುದು.‌ದೈವಗಳ ಕೋಲವನ್ನೂ ಸೃಷ್ಟಿಸಿದೆನಾ? ಫೋಟೋವನ್ನೂ ಸೃಷ್ಟಿಸಿದೆನಾ ? ಅವರೇ ಉತ್ತರಿಸಬೇಕು.

ಇಂತಹ ಮಹಾನ ಪ್ರಭೃತಿಯೇ ಆ ಹೆಂಗಸಿನ ಮಾತನ್ನು ಲೆಕ್ಕಕ್ಕಿಡುವುದಿಲ್ಲ ಎಂದದ್ದು

ಓರ್ವ ಸ್ತ್ರೀ ಅಧ್ಯಯನಗಾರಳಾಗಿ ನಾನು ಪುರುಷಾಹಂಕಾರದ ಇಂತಹ ಅನೇಕ ಮಾತುಗಳನ್ನು ಕೇಳಿದ್ದೇನೆ..ಲಕ್ಷಿಸದೆಯೇ ಮುಂದುವರಿದೆ.

ಬ್ಲಾಗ್ ತೆರೆದೆ ಬರೆದೆ..ಅದರ ಪರಿಣಾಮವಾಗಿಯೇ ತುಳು ಅಧ್ಯಯನಗಾರ ತಾವು ಲೆಕ್ಕಕ್ಕಿಡುವುದಿಲ್ಲ ಎಂಬ ಹೆಂಗಸಾದ  ನನ್ನ ಮಾತನ್ನು ಡಾ.ಕೆ ಎನ್ ಗಣೇಶಯ್ಯ ಲೆಕ್ಕಕ್ಕೆ ತಗೊಂಡರು ..ಪರಿಣಾಮವಾಗಿ ನಾನು ಲಕ್ಷ್ಮೀ ಪೋದ್ದಾರ್ ಆದೆ.

ನಾನು ಕನಸಲ್ಲೂ ಊಹಿಸದೇ ಇರುವ ವಿಚಾರವದು..ಬಹು ಪ್ರಸಿದ್ಧ ಕಾದಂಬರಿಕಾರರಾದ ಗಣೇಶಯ್ತನವರ ಪ್ರಸಿದ್ಧ ಕಾದಂಬರಿಯಲ್ಲಿ ನಾನೊಂದು ಜೀವಂತ ಪ್ರಮುಖ ಪಾತ್ರವಾಗಿ ಬಂದಿರುವೆ ಎಂಬುದು ನಾನೆಂದಿಗೂ ಮರೆಯಲಾಗದ ರೋಮಾಂಚನ ನೀಡಿದ ವಿಚಾರ

ಯಾರಿಗೆ ತಾನೇ ಕಥಾ ನಾಯಕಿಯಾಗುವುದು,ಕಥೆಯ ಕೇಂದ್ರವಾಗುವುದು ಇಷ್ಟವಾಗದ ವಿಚಾರ?..ಎಲ್ಲರೂ ಇಷ್ಟ ಪಡುವ ಬಯಸುವ ವಿಚಾರವಿದು..ನನ್ನ ವಿಚಾರದಲ್ಲಿ ಇದು ಸಂಭವಿಸಿದೆ..

ಯಾಕೋ ಗೊತ್ತಿಲ್ಲ..ನನ್ನ ಬದುಕಿನಲ್ಲಿ ಇಂತಹ ಅನೇಕ ಅನೂಹ್ಯ ವಿಚಾರಗಳು ಘಟಿಸಿವೆ..ಅದಕ್ಕಾಗಿಯೇ ಆತ್ಮಕಥೆ ಬರೆಯಲು ನಿರ್ಧರಿಸಿ ಶುರು ಮಾಡಿರುವೆ.

ಅದಿರಲಿ ನಾನು ಲಕ್ಷ್ಮೀ ಪೋದ್ದಾರ್ ಆದದ್ದನ್ನು ಡಾ.ಗಣೇಶಯ್ತ ಹೀಗೆ ವಿವರಿಸಿದ್ದಾರೆ..ಇನ್ನು ಪೂರ್ಣ ಮಾಹಿತಿಗೆ ಅವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿ ಓದಬಹುದು.

"ನಗರದ ಬಸದಿಕೇರಿಯಲ್ಲಿರುವ ಪೂಜಾ ಮಂಟದ ಬಳಿ ನಡೆತುವ ಜಟ್ಟಿಗರ ಪೂಜೆಯನ್ನು ಕಾದಂಬರಿಯ ಪ್ರಮುಖ ವಸ್ತುವಾಗಿರಿಸಿಕೊಂಡು  ಬರೆಯುವ ಉದ್ದೇಶದಿಂದ ವಿಷಯಕ್ಕಾಗಿ ಹುಡುಕಾಡುತ್ತಿದ್ದೆ.ಡಾ.ಲಕ್ಷ್ಮೀ ಜಿ ಪ್ರಸಾದ ಎಂಬವರು ಬ್ಲಾಗೊಂದರಲ್ಲಿ ಬರೆದ ಜಟ್ಟಿಗ ಭೂತಾರಾಧನೆಯ ವಿವರಗಳು ನಾನು ಕಲ್ಪಿಸಿದ್ದ ಕೊಂಡಿ ಕೇವಲ ಊಹೆಯಲ್ಲ ಎನ್ನುವುದಕ್ಕೆ ಪ್ರಮುಖ ಆಧಾರ ದೊರಕಿಸುವುದರ ಜೊತೆಗೆ ಭೂತಾರಾಧನೆಯನ್ನು ಚರಿತ್ರೆ ಹೇಳುವ ಮಾಧ್ಯಮವಾಗಿ ಬಳಸಲು ಅನುವು ಮಾಡಿಕೊಟ್ಟವು ಕೂಡಾ.ತಕ್ಷಣ ಭೂತಾರಾಧನೆಯ ಬಗ್ಗೆಯೇ ಅಧ್ಯಯನ ಮಾಡಿ ಪಿಎಚ್ ಡಿ ಪಡೆದಿರುವ ಹಲವು ಪುಸ್ತಕಗಳನ್ನೂ ಬರಹಗಳನ್ನೂ ಬರೆದಿರುವ ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಲ್ಪಟ್ಟಿರುವ ಲಕ್ಷ್ಮೀ ಪ್ರಸಾದರನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳಿಗಾಗಿ ಚರ್ಚಿಸಲು ಸಮಯ ಕೋರಿದಾಗ ತಾವಾಗಿಯೇ ಮನೆಗೆ ಬಂದು ತಮ್ಮ ಸಂಶೋಧನೆಯ ಹತ್ತಾರು ಅನುಭವಗಳನ್ನು  ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅವರೇ ಕಾದಂಬರಿಯ ಒಂದು ಪ್ರಮುಖ ಪಾತ್ರವಾಗಿ ರೂಪುಗೊಳ್ಳತೊಡಗಿದರು.ಹಾಗೆಂದೇ ಅವರು ಡಾ.ಲಕ್ಷ್ಮೀ ಪೋದ್ದಾರ್ ಆಗಿ ಕಾಣಿಸಿಕೊಂಡರು.ನಂತರ ಅವರು ಹಲವಾರು ಸಲಹೆಗಳನ್ನೂ ಪಾಡ್ದನಗಳ ತುಳು ಕನ್ನಡ ರೂಪಾಂತರವನ್ನೂ ನೇತ್ರಾಣಿ ಜಟ್ಟಿಗರ ಫೋಟೋವನ್ನೂ ಒದಗಿಸಿಕೊಟ್ಟಿದ್ದರಿಂದ ಕಾದಂಬರಿಗೆ ಹೊಸ ಆಯಾಮವೇ ದೊರೆಯಿತು.ಬಳ್ಳಿ ಕಾಳ ಮೆಣಸು ಸಂಪೂರ್ಣವಾಗಿ ಸಂಸ್ಕಾರಗೊಂಡು ಬಿಳಿಯ ಮೆಣಸಾಯಿತು- ಡಾ.ಕೆ ಎನ್ ಗಣೇಶಯ್ಯ ( ತಮ್ಮ ಬಳ್ಳಿ ಕಾಳ ಬಳ್ಳಿ ಕಾದಂಬರಿಯ ಕುರಿತಾಡಿದ ಮಾತುಗಳ ಉದೃತ ಭಾಗ) 

ಲಕ್ಷ್ಮೀ ಪೋದ್ದಾರ್ ಆದ ನನ್ನನ್ನು ಗಣೇಶಯ್ಯನವರ ಕಾದಂಬರಿ ಮೂಲಕ ಸಾವಿರಾರು ಜನ ಗುರುತಿಸಿದ್ದಾರೆ.ನನ್ನ ತುಳು ಅಧ್ಯಯನದ ಫಲಿತವನ್ನು ಪಡೆದಿದ್ದಾರೆ ಎಂಬುದು ನನಗೆ ನಿಜಕ್ಕೂ ಹೆಮ್ಮೆ ತರುವ ವಿಚಾರ..ಅದೂ ನಾವು ಲೆಕ್ಕಕ್ಕಿಡುವುದಿಲ್ಲ ಎಂದು ತುಳು ಅಧ್ಯಯನಗಾರನೊಬ್ಬನಿಂದ ನಿಂದಿಸಲ್ಪಟ್ಟ ಮಹಿಳೆಯ ಮಾತೇ ಕಾದಂಬರಿಗೆ ಪ್ರಮುಖ ಆಧಾರ ಆಗುದು..ಹಿರಿಯ ವಿದ್ವಾಂಸರಾದ ಡಾ.ಕೆ ಎನ್ ಗಣೇಶಯ್ಯ ಆ ಮಹಿಳೆಯ ಬರಹವನನ್ನು ಗೌರವದಿಂದ ಕಂಡು ಅದರೊಳಗಿನ ಸತ್ಯವನ್ನು ಪರಿಗಣಿಸಿ ಚಾರಿತ್ರಿಕ  ಕಾದಂಬರಿ ಬರೆಯುದು ಎಲ್ಲವೂ ಕಾಕತಾಳೀಯವೇ..ಕಾಲನ ಅನೂಹ್ಯ ನಡೆಯೇ..ನನಗೂ ಗೊತ್ತಿಲ್ಲ..ತೇ ನ ವಿನಾ ತೃಣಮಪಿ ನ ಚಲತಿ( ದೇವರ ಆಶಯದ ಹೊರತಾಗಿ ಹುಲುಕಡ್ಡಿಯೂ ಅಲುಗಾಡುವುದಿಲ್ಲ) 

ಅವಹೇಳನಕ್ಕೆ ಗುರಿಯಾಗಿಸಿ ಅಳಿಸಿ ಕಾಡುವವನೂ ಅವನೇ..ಪುರಸ್ಕರಿಸಿ ಚಂದ ನೋಡುವವನೂ ಅವನೇ ಅಲ್ಲವೇ..ಮುಂದೇನು ಕಾಡುವನೋ ಇಲ್ಲ ಅನುಗ್ರಹಿಸುವನೋ ಗೊತ್ತಿಲ್ಲ..ತ್ವಮೇವ  ಶರಣಂ ಮಮ‌

ಇಂದಿಗೆ ಸರಿಯಾಗಿ 5 ವರ್ಷಗಳ ಹಿಂದೆ 01-01-2017 ರಂದು ಈ ಪುಸ್ತಕ ಬಿಡುಗಡೆಯಾಯಿತು.

No comments:

Post a Comment