Thursday 21 March 2019

ಬದುಕ ಬಂಡಿಯಲಿ : ನನ್ನ ಕೃತಿಯ ಅನುವಾದಿತ ಭಾಗವನ್ನು ಪಡೆಯಲು ನಾನು ಯಾರದ್ದೋ ಅನುಮತಿ ಪಡೆಯಬೇಕಂತೆ

ನನ್ನ ಕೃತಿಯ ಅನುವಾದಿತ ಭಾಗವನ್ನು ಪಡೆಯಲು ನಾನು ಯಾರದ್ದೋ ಅನುಮತಿ ಪಡೆಯಬೇಕಂತೆ

ಬದುಕಿನ ಬಂಡಿಯಲ್ಲಿ ಹೀಗೂ ಆಗುತ್ತದೆ..
ಇದಕ್ಕೆ ಏನನ್ನಬೇಕು ?

ವಸುಧೇಂದ್ರ ಚಂದ್ರ ಅವರ ಕೆಂಪು ಗಿಣಿ ಕಥೆಯನ್ನು ಇವರ ಅನುಮತಿ ಪಡೆಯದೆ ತಮಿಳಿಗೆ ಯಾರೊ ಅನುವಾದಿಸಿ ಇವರ ಹೆಸರನ್ನು ಹಾಕಿ ಮಾರಾಟ ಮಾಡುತ್ತಿದ್ದಾರಂತೆ..
ಇದನ್ನು ಓದುತ್ತಲೇ ನನಗೊಂದು ವಿಚಾರ ನೆನಪಿಗೆ ಬಂತು..
ಎರಡು ಮೂರು ವರ್ಷಗಳ ಮೊದಲು ನನ್ನ ಆತ್ಮೀಯರೊಬ್ಬರನ್ನು ಸಾಹಿತ್ಯ ಸಮ್ಮೇಳನದಲ್ಲಿ ಭೇಟಿಯಾದೆ‌..ಆಗ ಅವರು ನನ್ನ ಪ್ರಕಟಿತ ಪಿಎಚ್ ಡಿ ಪ್ರಬಂಧ ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ- ಒಂದು ವಿಶ್ಕೇಷಣಾತ್ಮಕ ಅಧ್ಯಯನ ಕೃತಿಯನ್ನು ಅವರ ಪರಿಚಿತ ವಿದೇಶೀ ವಿದ್ವಾಂಸರು ತಗೊಂಡಿದ್ದು,ಅದರಲ್ಲಿನ ಎರಡು ಅಧ್ಯಾಯವನ್ನು ಇವರ ಮಗಳು ಅನುವಾದಿಸಿ ಆ ವಿದೇಶೀ ವಿದ್ವಾಂಸರಿಗೆ ನೀಡಿ ಸಹಾಯ ಮಾಡಿದ್ದನ್ನು ತಿಳಿಸಿದರು..ನನ್ನ ಅಧ್ಯಯನ  ವಿಚಾರ ವಿದೇಶೀ ವಿದ್ವಾಂಸರಿಗೆ ತಲುಪಿದ್ದು ತಿಳಿದು ಖುಷಿ ಆಯಿತು ನನಗೆ‌.ನನ್ನನ್ನು ಈ ಮೇಲ್ ಮೂಲಕ ಪೋನ್ ಮೂಲಕ ಅನೇಕ ವಿದೇಶೀ ವಿದ್ವಾಂಸರು ಆಗಾಗ ಸಂಪರ್ಕಿಸಿ ನನ್ನ ಬರಹಗಳನ್ನು ಕೃತಿಗಳನ್ನು ಇಂಗ್ಲಿಷ್ ‌ನಲ್ಲಿ ಪಬ್ಲಿಷ್ ಮಾಡಿ ..ನಮಗೆ ಸಹಾಯವಾಗುತ್ತದೆ ಎಂದು ಕೇಳುತ್ತಾ ಇರ್ತಾರೆ...ಆದರೆ ಇಂಗ್ಲಿಷ್ ಗೆ ಅನುವಾದಿಸುವಷ್ಡು ಇಂಗ್ಲಿಷ್ ಜ್ಞಾನ ನನ್ನಲ್ಲಿ ಇಲ್ಲ..ಮಗ ಒಂದಷ್ಟು ಲೇಖನಗಳನ್ನು ಅನುವಾದಿಸಿದ್ದನಾದರೂ ಅವನಿನ್ನೂ ವಿದ್ಯಾರ್ಥಿ, ಅವನ ಓದಿನ ನಡುವೆ ಅನುವಾದ ಕಷ್ಟ ಆಗುತ್ತದೆ..
ನನ್ನ ಆತ್ಮೀಯರ ಮಗಳು ನನ್ನ ಪಿಎಚ್ ಡಿ ಪ್ರಬಂಧದ ಎರಡು ಅಧ್ಯಾಯಗಳನ್ನು  ಇಂಗ್ಲಿಷ್ ಗೆ ಅವರ ವಿದೇಶೀ ಸ್ನೆಹಿತರಿಗೆ ಅನುವಾದಿಸಿ ಕೊಟ್ಟಿದ್ದು ತಿಳಿದು ಇತರರಿಗೂ ನನ್ನ ಅಧ್ಯಯನ ದ ವಿಚಾರ ತಿಳಿಯಲೆಂದಯ ಬ್ಲಾಗ್ ‌ನಲ್ಲಿ ಅನುವಾದಕರ ಹೆಸರಿನೊಂದಿಗೆ( ಅವರ ಮಗಳ) ಹಾಕುತ್ತೇನೆ,ನಮಗೆ ಅನುವಾದಿಸಿದ ನನ್ನ ಪಿಎಚ್ ಡಿ ಭಾಗವನ್ನು ಕೊಡಿ ಎಂದು ಕೇಳಿದೆ..ತಕ್ಷಣ ಅವರ ಅನುವಾದಕಿ ಮಗಳು ನೋ ನೋ ಅದನ್ನು ಕೊಡಬೇಕಾದರೆ ಆ ವಿದೇಶೀ ವಿದ್ವಾಂಸರ ಬಳಿ ಅನುಮತಿ ಕೇಳಬೇಕು ಅವರು ಒಪ್ಪಬೇಕು ಎಂದು ಹೇಳಿದರು..ನನಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ.. ವಾಸ್ತವದಲ್ಲಿ ನನ್ನ ಕೃತಿಯ ಭಾಗ ಅನುವಾದಿಸಿ ಇತರರಿಗೆ ಕೊಡಲು ನನ್ನ ಅನುಮತಿಯನ್ನು ಅವರು ಕೇಳಬೇಕಾಗಿತ್ತು..ಏನು ಮಾಡುದು.
ಈಗಿನ ಯುವ ಜನಾಂಗಕ್ಕೆ ಬೌದ್ಧಿಕ ಸೊತ್ತಿನ  ಹಕ್ಕುಗಳ ಅರಿವಿರುವುದಿಲ್ಲ ಎಂದು ಸುಮ್ಮನಾದೆ ಯಾಕೆಂದರೆ ಅವರ ತಾಯಿ  ಒಳ್ಳೆಯ ಲೇಖಕರೂ ,ಪ್ರೊಫೆಸರರೂ ಅಗಿದ್ದು ನನ್ನ ಹಿತೈಷಿಗಳು  ಕೂಡಾ ಆಗಿದ್ದಾರೆ..ಬಹುಶಃ ಮಗಳು ಹೇಳಿದ್ದನ್ನು ಅವರು ಕೇಳಿಸಿಕೊಂಡಿಲ್ಲವೋ ಅಥವಾ ನಂತರ ಬುದ್ದಿ ಹೇಳಿದರೋ ಗೊತ್ತಿಲ್ಲ..ಅದೇನೇ ಇದ್ದರೂ ಅವರು ಅನುವಾದಿಸಿದ ಭಾಗ ನನ್ನ ‌ಮನವಿಗಾದರೂ ಅವರು ಕೊಟ್ಟಿಲ್ಲ..ಕೊಟ್ಟಿದ್ದರೆ ನನಗೆ ಮತ್ತು ನಮ್ಮ ಸಂಸ್ಕೃತಿಯ ಕುರಿತು ಅಧ್ಯಯನಾಸಕ್ತರಾದ ಕನ್ನಡೇತರರಿಗೆ ಸಹಾಯವಾಗುತ್ತಿತ್ತು ಖಂಡಿತಾ
ಇನ್ನೂ ನಮಗೆ ತಿಳಿಯದಂತೆ ನಮ್ಮ ಬರಹಗಳನ್ನು ನಕಲಿಸುವವರು,ಅಲ್ಪ ಸ್ವಲ್ಪ ಬದಲಾವಣೆ ಮಾಡಿ ತಮ್ಮ ಬರಹ ಎಂಬಂತೆ ಪ್ರಕಟಿಸಿ ಹಾಕಿಕೊಳ್ಳುವವರು,ಅನುವಾದಿಸುವವರೂ ಇದ್ದಾರೆ..ಏನು ಮಾಡೋಕಾಗುತ್ತದೆ ಹೇಳಿ