Friday 21 December 2018

ದೊಡ್ಡವರದಾರಿ : ಅನಾಥ ಮಕ್ಕಳ ಪೊರೆವ ತಾಯಿ ಪದ್ಮಾ ಕೆ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ


ನಮ್ಮ ನಮ್ಮ ಕನಸುಗಳ ಈಡೇರಿಕೆಗಾಗಿ ಸಾಧನೆ ಮಾಡುವವರು ನೂರಾರು ಮಂದಿ ಇದ್ದಾರೆ ಆದರೆ ತಮ್ಮ ಸರ್ವಸ್ವವನ್ನೂ ಸಮಾಜ ಸೇವೆಗೆ ಮುಡಿಪಾಗಿಡುವವರ ಸಂಖ್ಯೆ ತೀರಾ ಕಡಿಮೆ..ಹೀಗೆ ಸಮಾಜ ಸೇವೆಗಾಗಿ ಅನಾಥ ಬಡ ಮಕ್ಕಳಿಗಾಗಿ ಸ್ವಂತ ಮನೆ ಸೈಟುಗಳನ್ನು  ಮಾರಾಟ ಮಾಡಿ ತಮ್ಮನ್ನು ಸಮಾಜ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡು ಹಲವರಿಗೆ ದಾರಿ ದೀಪ ವಾದವರು ಪದ್ಮಾ ಕೆ ಭಟ್  ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡುವ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ  ನನ್ನ್ನುಯ ನಾಮಿನೇಟ್ ಮಾಡಿದವರು ಕೂಡ ಇವರು.ನನ್ನ ಸಾಧನೆಯ ಬಗ್ಗೆ ಮನವರಿಕೆ ಮಾಡಿಸಿದವರು ಕೂಡ ಇವರು.ವಿವಾಹಾನಂತರ ಸಮಾಜದ ಕಟ್ಟುಪಾಡುಗಳನ್ನು ಮೀರಿ ಓದಿ ಸಾಧನೆಯ ದಾರಿ ಹಿಡಿದ ನನಗೆ ಅನೇಕ ಶತ್ರು ಗಳು ಕೂಡ ಇದ್ದಾರೆ. ನನಗೆ ಬಂದಂತಹ ಒಂದು ಮಾಹಿತಿ ಪ್ರಕಾರ ಇಂತಹವರಲ್ಲಿ ಯಾರೋ ಕೆಲವರು ನನ್ನ ಪತಿ ಗೋವಿಂದ ಪ್ರಸಾದ ಹವ್ಯಕರೆಂದು ಗೊತ್ತಿದ್ದರೂ ಕೂಡ ಅವರಯ ಹವ್ಯಕರಲ್ಲವೆಂದು ಹೇಳಿ,ಪ್ರಶಸ್ತಿ ಬಾರದಂತೆ ಮಾಡಲು ಯತ್ನ ಮಾಡಿದರಂತೆ..ಆಗ ನನ್ನ ಪತಿ ಗೋವಿಂದ ಪ್ರಸಾದರು ಹವ್ಯಕರೆಂದು ತಿಳಿಸಿ ನನ್ನ ಪರ ನಿಂತವರು ಪದ್ಮಾ ಭಟ್ .
ಇವರು ನಿಜಕ್ಕೂ ನನಗಿಂತ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ ಹೆಚ್ಚು ಅರ್ಹರು ಎಂದು ನನ್ನ ಅಭಿಪ್ರಾಯ ಹಾಗಾಗಿ ನಾನು ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಶಸ್ತಿಗೆ ನಾಮಿನೇಟ್ ಮಾಡಿದ್ದೆ,ಅವರು ಸಮಾಜ ಸೇವೆ ವಿಭಾಗದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿ ಗೆ ಆಯ್ಕೆ ಆಗಿರುವರೋ ಇಲ್ಲವೋ ನನಗೆ ತಿಳಿಯದು . ಸಾಧನೆಯ ಹಾದಿ ಹೂ ಹಾಸಿನದು ಅಲ್ಲ.ಅಲ್ಲಿ ಕಲ್ಲು ಮುಳ್ಳುಗಳೇ ಹೆಚ್ಚಿರುತ್ತವೆ.ನನ್ನಂತೆ ಅವರು ಕೂಡ ಆರೋಪಗಳಿಗೆ ಒಳಗಾಗಿರಬಹುದು .ಆದರೆ ಅಂತಿಮವಾಗಿ ಸತ್ಯಕ್ಕೆ ಜಯ ನಿಶ್ಚಿತ  ಹಾಗಾಗಿ  ಅವರು ನಿಜಕ್ಕೂ ಹವ್ಯಕ ರತ್ನ
ಹಾಗಾಗಿ ಅವರ ಬಗ್ಗೆ ದೊಡ್ಡವರ ದಾರಿ ಅಂಕಣದಲ್ಲಿ ಒಂದು ಬರಹ ಬರೆದಿದ್ದೆ.ಅವರ ಸಂಕ್ಷಿಪ್ತ ಪರಿಚಯವನ್ನು ಇನ್ನೊಮ್ಮೆ ನೀಡಲು ನಾನು ಹೆಮ್ಮೆ ಪಡುತ್ತೇನೆ.

ಶ್ರೀ ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ (ರಿ) ನ ಸಂಸ್ಥಾಪಕಿ ಪದ್ಮಾ ಕೆ ಭಟ್‍ರವರ ಕಿರುಪರಿಚಯ:

ಪದ್ಮಾ ಕೆ.ಭಟ್ ರವರು ಕಳೆದ ಸುಮಾರು ಹದಿನೆಂಟು ವರ್ಷಗಳಿಂದಲೂ ನಿರಂತರವಾಗಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಶ್ರೀ ಸತ್ಯ ಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್(ರಿ) ಇದರ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿ, ಅನಾಥ ಮತ್ತು ಬಡ ಮಕ್ಕಳ ಆಶ್ರಮ,  ವೃದ್ಧಾಶ್ರಮ, ಮಹಿಳಾ ಸೇವಾಶ್ರಮ, ನಿತ್ಯ ಅನ್ನದಾನ ಇತ್ತಯಾದಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು   "ಆಸರೆ " ಅನ್ನುವ  ಹೆಸರಿನಡಿ  ನಡೆಸುತ್ತಿದ್ದಾರೆ..ಇಲ್ಲಿ 1ರಿಂದ 10ನೇ ತರಗತಿಯತನಕ ಬಡ ಮಕ್ಕಳಿಗೆ ಉಚಿತ ಊಟ, ವಸತಿ, ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳ ನ್ನು ನೀಡಿದ್ದಾರೆ.. “ಶ್ರೀ ಸತ್ಯ ಭಾರತಿ ಆಶ್ರಮ ವಿದ್ಯಾಲಯ”ವನ್ನು ಮೈಸೂರು ರಸ್ತೆಯ ಚಳ್ಳಘಟ್ಟ ಎಂಬಲ್ಲಿ ಪ್ರಾರಂಭಿಸಿ,, 1ರಿಂದ 5ನೇ ತರಗತಿಯತನಕದ ಪುಟ್ಟ ಮಕ್ಕಳಿಗೆ ಆಶ್ರಮದ ಆವರಣದಲ್ಲೇ ವಿದ್ಯಾಭ್ಯಾಸದ ವ್ಯವಸ್ಥೆಯನ್ನೂ ಮಾಡಿದ್ದಾರೆ..

ಸತ್ಯ,ನ್ಯಾಯ, ಧರ್ಮಕ್ಕಾಗಿ ಹೋರಾಟ...ಮಹಿಳೆಯರ, ಬಡವರ ಮತ್ತು ನೊಂದವರ ಮುಖವಾಣಿಯಾಗಿ..ರಾಜಧಾನಿ ಎಕ್ಸ್‍ಪ್ರಸ್, ಕನ್ನಡ ಮಾಸ ಪತ್ರಿಕೆಯ ಸಂಪಾದಕರಾಗಿ, ಪ್ರಕಾಶಕರಾಗಿ ಮಾಧ್ಯಮ ಬಲಯದಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ...
ಶ್ರೀ ನಾಗಬ್ರಹ್ಮ ದೇವಸ್ಥಾನ, ನಾಗದೇವನಹಳ್ಳಿ, ಬೆಂಗಳೂರು ಇದರ ಸಂಸ್ಥಾಪಕ ಧರ್ಮದರ್ಶಿಗಳಾಗಿ, ಮಹಿಳಾ ಉದ್ಯಮಿಯಾಗಿ ...ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

ಪದ್ಮಾ ಕೆ.ಭಟ್ ರವರು ಶ್ರೀ ಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ (ರಿ) ಸಂಸ್ಥೆ ಮತ್ತು ಶ್ರೀ ಸತ್ಯ ಭಾರತಿ ಆಶ್ರಮ ವಿದ್ಯಾಲಯದ ಮೂಲಕ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ಊಟ, ವಸತಿ, ಆರೋಗ್ಯ ತಪಾಸಣೆಯ ಜೊತೆಗೆ, ನುರಿತ ಶಿಕ್ಷಕರಿಂದ ಪಾಠ, ನೃತ್ಯ, ಸಂಗೀತ, ಸಾಂಸ್ಕøತಿಕ ಕ್ರೀಡೆಗಳು ಹೀಗೆ ಹಲವು ಆಯಾಮಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃಧ್ಧಿಗೆ ಶ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಸಮಾಜದಲ್ಲಿ ಬಡ ಮಹಿಳೆಯರಿಗಾಗಿ ಸ್ವ-ಉದ್ಯೋಗ ತರಬೇತಿ ಶಿಬಿರಗಳು, ಮಹಿಳಾ ಅಬಲಾಶ್ರಮ, ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದಾರೆ.
ಪದ್ಮಾ ಕೆ.ಭಟ್ ರವರು ನಾಗದೇವನಹಳ್ಳಿಯಲ್ಲಿ ಶ್ರೀ ನಾಗಬ್ರಹ್ಮ ದೇವಸ್ಥಾನವನ್ನು ಕಟ್ಟಿಸಿ, ನಿತ್ಯ ಪೂಜೆಯ ಜೊತೆಗೆ, ಪ್ರತೀ ತಿಂಗಳು ಕುಕ್ಕೆ ಸುಬ್ರಹ್ಮಣ್ಯದ ಮಾದರಿಯಲ್ಲಿ ಆಶ್ಲೇಷ ಬಲಿ ಪೂಜೆ,ಹೋಮ..ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನದಾನವನ್ನು ನಡೆಸುತ್ತಿದಾರೆ.                                                                   
ಮೂಲತಃ ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರು ತಾಲೂಕಿನ “ಕಾವು” ಎಂಬ ಹಳ್ಳಿಯವರಾದ  ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ದಿ|| ಕಾವು ಕೃಷ್ಣಾಭಟ್ ಮತ್ತು ದೇವಕಿ ದಂಪತಿಯ ಮೊದಲ ಮಗಳಾದ ಪದ್ಮಾ ಕೆ ಭಟ್, ಪುತ್ತೂರು ತಾಲೂಕಿನ ಪೆರ್ನಾಜೆಯ ಶ್ರೀ ಸೀತಾರಾಘವ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು  ಮುಗಿಸಿ, 2 ವರ್ಷಗಳ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ನಂತರ ಮಂಗಳೂರಿನ ಸರಕಾರಿ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ ಡಿಪ್ಲೊಮೊ ಇನ್ ಟೆಲಿಕಮ್ಯುನಿಕೇಷನ್ ಇಂಜನಿಯರಿಂಗ್ ಮುಗಿಸಿ, 1987 ರಲ್ಲಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಮೆ|| ಬಿಹೆಚ್‍ಇಎಲ್‍ನಲ್ಲಿ ಡಿಪ್ಲೊಮೊ ಅಪ್ರೆಂಟೀಸ್ ಟ್ರೈನಿಯಾಗಿ, ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರ “ಸ್ತ್ರೀ ಶಕ್ತಿ ಪ್ಯಾಕೇಜ್” ಎಂಬ ಮಹಿಳಾ ಉದ್ಯಮಶೀಲತಾ ತರಬೇತಿ ಮುಗಿಸಿ 1991ರಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ “ನಿಯೋ ಶಾರ್ಪ್ ಇಂಜಿನಿಯರಿಂಗ್ ಟೆಕ್ನಾಲಜೀಸ್” ಎಂಬ ಸಣ್ಣ ಕೈಗಾರಿಕೋದ್ದಿಮೆಯನ್ನು ಪ್ರಾರಂಭಿಸಿದರು. ಇಂದು 30ಜನ  ಕಾರ್ಮಿಕರಿಗೆ ಜೀವನೋಪಾಯ ಕಲ್ಪಿಸಿ ಯಶಸ್ವೀ ಮಹಿಳಾ ಉದ್ಯಮಿಯೆನಿಸಿಕೊಂಡಿದ್ದಾರೆ.
ಒಬ್ಬ ಮಹಿಳೆಯಾಗಿ, ಮಹಿಳಾ ಉದ್ಯಮಿಯಾಗಿ  ಸಮಾಜ ಸೇವೆಯನ್ನೇ ತಮ್ಮ ಉಸಿರನ್ನಾಗಿಸಿಕೊಂಡು, ಯಾರ ನೆರವೂ ಇಲ್ಲದೇ ಮತ್ತು ಸರ್ಕಾರದಿಂದ ಯಾವ ಸಹಾಯವನ್ನೂ ಪಡೆಯದೇ ಅನೇಕ ಬಡ ಮಕ್ಕಳ, ನಿರ್ಗತಿಕ ಮಹಿಳೆಯರ ಮತ್ತು ನೊಂದವರ ಏಳಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ, ನಿಸ್ವಾರ್ಥವಾಗಿ  ಶ್ರಮಿಸುತ್ತಿದ್ದಾರೆ.
ಇವರ ಸಮಾಜಸೇವೆ ಮತ್ತು ಧಾರ್ಮಿಕ ಸೇವೆಯನ್ನು ಗುರುತಿಸಿ ಇವರಿಗೆ 2005 ರಲ್ಲಿ ಅತ್ಯುತ್ತಮ ಸಮಾಜ ಸೇವೆಗಾಗಿ ರೋಟರಿ ಕ್ಲಬ್, ಮೈಸೂರು ಉತ್ತರ ಇವರಿಂದ ಸನ್ಮಾನ, ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಕೆಂಗೇರಿ ಉಪನಗರ ಇವರಿಂದ 2009ರಲ್ಲಿ ಶ್ರೇಷ್ಠ ಸಮಾಜ ಸೇವಕಿ ಪ್ರಶಸ್ತಿ,2011ರಲ್ಲಿ ಅಭಿಮಾನಿಗಳ ಸಂಗಮ(ರಿ) ಇವರಿಂದ ಶಿರ್ಡಿ ಶ್ರೀ ಸಾಯಿಬಾಬ ನ್ಯಾಷನಲ್ ಅವಾರ್ಡ್, ಜನ್ಮಭೂಮಿ ಸಾಂಸ್ಕøತಿಕ ಮತ್ತು ನಾಗರಿಕರ ವೇದಿಕೆ(ರಿ) ಇವರಿಂದ ಆದರ್ಶ ರತ್ನ ಪ್ರಶಸ್ತಿ, ಸ್ಪಂದನಾ ಸೇವಾ ಸಂಸ್ಥೆ(ರಿ) ಇವರಿಂದ ಸಾಮಾಜಿಕ ಸೇವಾ ಸ್ಪಂದನ ಪ್ರಶಸ್ತಿ, 2012ರಲ್ಲಿ ಕರ್ನಾಟಕ ಪೊಲೀಸ್ ಪತ್ರಿಕೆಯ ವತಿಯಿಂದ ಅತ್ಯುತ್ತಮ ನಾಗರಿಕ ಪ್ರಶಸ್ತಿ, ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆ(ರಿ) ಇವರಿಂದ 2012 ನೇ ಸಾಲಿನ ಕಡಲ ತೀರದ ಭಾರ್ಗವ ಡಾ|| ಕೆ.ಶಿವರಾಮ ಕಾರಂತರ ಸದ್ಭಾವನಾ ರಾಜ್ಯ ಪ್ರಶಸ್ತಿ, 2013 ರಲ್ಲಿ ಸುರಕ್ಷಾ ಸೇವಾಶ್ರಮ(ರಿ) ಇವರಿಂದ ಸುರಕ್ಷಾ ರಾಜ್ಯ ಪ್ರಶಸ್ತಿ, ಶಾರದಾ ಕಲಾನಿಕೇತನ(ರಿ) ಇವರಿಂದ ಸಮಾಜಸೇವಾ ಶ್ರೇಷ್ಠ ರತ್ನ ಪ್ರಶಸ್ತಿ ಇತ್ಯಾದಿ ಹಲವಾರು ಸಂಘ-ಸಂಸ್ಥೆಗಳು ಅಭಿನಂದನಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇವರ ಸಂದರ್ಶನ ಕಾರ್ಯಕ್ರಮಗಳು ಚಂದನ(ಡಿ.ಡಿ.9), ಈ-ಟಿವಿ,(ಇಂದಿನ ಕಲರ್ಸ್) ಸುವರ್ಣವಾಹಿನಿ ಇತ್ಯಾದಿ ಹಲವಾರು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಈ ರೀತಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪದ್ಮಾ ಕೆ ಭಟ್ ರವರು ತಮ್ಮ ಬದುಕನ್ನು “ಇತರರಿಗಾಗಿ ಮೀಸಲಿಟ್ಟಿದ್ದಾರೆ” ಎಂದರೆ ಅತಿಶಯೋಕ್ತಿಯಲ್ಲ. “ಮಾನವತೆಯ ಸೇವೆಯೇ ಜೀವನದ ಅತ್ಯುತ್ತಮ ಸೇವೆ” ಎಂಬ ಜೇಸಿ ಸಂಸ್ಥೆಯ 10ನೇ ಧ್ಯೇಯ ವಾಣಿಯಂತೆ ನಂಬಿ ನಡೆಯುತ್ತಿರುವ ಎಲೆ ಮರೆಯ ಕಾಯಿ ಇವರು. ಇವರ ಈ ಎಲ್ಲಾ ಸೇವೆಯನ್ನು ಸರ್ಕಾರ,ದಾನಿಗಳು ಗುರುತಿಸಿ ಇವರ ಸಮಾಜಮುಖಿ ಕಾರ್ಯಕ್ರಮಗಳಿಗೆ ನೆರವಿನ ಹಸ್ತದೊಂದಿಗೆ ಬೆಂಬಲಿಸಿದರೆ ಇವರಿಂದ ಇನ್ನೂ ಹೆಚ್ಚಿನ ಸಾರ್ವಜನಿಕ ಸೇವೆಯನ್ನು ನಿರೀಕ್ಷಿಸಬಹುದು.
 ,ಎಲ್ಲರೂ ಈ ಸಂಸ್ಥೆಗೆ ಉದಾರವಾಗಿ ಸಹಾಯ ಮಾಡಿ ಹೇಳಿ ಪದ್ಮಕ್ಕನ ಪರವಾಗಿ ನಾನು ಕೇಳಿಗೊಳ್ಳುತ್ತೇನೆ
ಈ ಸಂಸ್ಥೆ ಗೆ ಕೊಟ್ಟ ದುಡ್ಡಿ ಗೆ ಟ್ಯಾಕ್ಸ್ ವಿನಾಯತಿ ಇದ್ದು ಇವರ ಅಕೌಂಟ್ ನಂಬರ್ ಪೋನ್ ನಂಬರ್ ಗಳನ್ನು ಇಲ್ಲಿ ಕೊಡುತ್ತೇನೆ Please send your contributions to
Sri Satya Sai Mahila charitable trust (R)

SB a/c no 559010100076216
Ifs code : UTIB0000559
Axis Bank,
Rajajinagar Branch, Bangalore-10

Regards
Padmaa Bhat
Mob: 8884572149/9844540380

Sunday 9 December 2018

ದೊಡ್ಡವರ ದಾರಿ 64 ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ ಪೋಲಿಸ್ ಇನ್ಸ್‌ಪೆಕ್ಟರ್ ಕೆಪಿ ಸತ್ಯನಾರಾಯಣ

ದೊಡ್ಡವರ ದಾರಿ 64 ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ ಪೋಲಿಸ್ ಇನ್ಸ್‌ಪೆಕ್ಟರ್  ಕೆಪಿ ಸತ್ಯನಾರಾಯಣ


ನಮ್ಮ ಬ್ಯಾಡರ ಹಳ್ಳಿ ಪೋಲಿಸ್ ಸ್ಟೇಷನ್ ವ್ಯಾಪ್ತಿಯ ಮಾಗಡಿ ರಸ್ತೆ, ಉಳ್ಳಾಲು ಉಪನಗರ ಮೊದಲಾದ ಪ್ರದೇಶಗಳು ಕಳ್ಳತನ ರೌಡಿಸಂ,ದರೋಡೆಯ ಕಾರಣಗಳಿಗೆ ಕುಖ್ಯಾತಿಯನ್ನು ಪಡೆದಿದ್ದು ಈ ಪರಿಸರದಲ್ಲಿ ರಾತ್ರಿ ವೇಳೆಯಲ್ಲಿ ‌ಮಾತ್ರವಲ್ಲ ಹಗಲು ಕೂಡ ಓಡಾಡಲು ಜನ ಹಿಂಜರಿಯುತ್ತಾ ಇದ್ದರು.ಇಲ್ಲಿಗೆ ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ಬಂದ ಕೆಪಿ ಸತ್ಯನಾರಾಯಣ ಅವರ ದಕ್ಷತೆ ಹಾಗೂ ಅವರ ನೇತೃತ್ವದಲ್ಲಿ ಅಳವಡಿಸಿಕೊಂಡ ಆಧುನಿಕ ತಂತ್ರಜ್ಞಾನದ ಸಲಕರಣೆಗಳ ಪರಿಣಾಮವಾಗಿ  ಇಲ್ಲಿ  ಅಪರಾಧಗಳ ಸಂಕ್ಯೆ ಗಣನೀಯವಾಗಿ ಕಡಿಮೆ ಆಗಿದೆ.(ಶೇಕಡಾ 70 ರಷ್ಟು) . ಬ್ಯಾಡರ ಹಳ್ಳಿ ಫೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಎಲ್ಲಾ ಚೌಕಗಳಲ್ಲಿ,ಆಯ ಕಟ್ಟಿನ ಪ್ರದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪೋಲಿಸ್ ಸ್ಟೇಷನ್ ನಿಯಂತ್ರಣ ಕೊಠಡಿಯಲ್ಲಿ  ನೋಡುವ ಮತ್ತು ನಿಯಂತ್ರಿಸುವ ವ್ಯವಸ್ಥೆ ಯನ್ನು ಇವರು ಅಳವಡಿಸಿದ್ದರು.ಕಸ ತುಂಬಿ ನಾರುತ್ತಿದ್ದ ಪೋಲಿಸ್ ಸ್ಟೇಷನ್ ನ ಪರಿಸರವನ್ನು ಸ್ವಚ್ಛ ಗೊಳಿಸಿ ಹುಲ್ಲಿನ ಹಾಸು ಗಿಡ‌ಮರ ಬೆಳೆಸಿ ಪಾರ್ಕ್ ನಂತೆ ಮಾಡಿದ್ದರು.ಮನಸಿದ್ದರೆ ಮಾರ್ಗವಿದೆ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ‌.
ಇಲ್ಲಿ ಅಳವಡಿಸಿದ ತಂತ್ರಜ್ಞಾನವನ್ನು ಎಲ್ಲೆಡೆ ಅನುಸರಿಸಿದರೆ ಎಲ್ಲಾ ಕಡೆಯಲ್ಲಿ ಕೂಡ ಅಪರಾಧಗಳ ಸಂಖ್ಯೆ ಖಂಡಿತಾ ಇಳಿಮುಖವಾದೀತು .(ಈ ಬಗ್ಗೆ ನಾನು ಒಂದು ಲೇಖನ ಬರೆದು ಪ್ರಕಟಿಸಲು ಯತ್ನ ಮಾಡಿದೆನಾದರೂ ಯಾಕೋ ಏನೋ ಪತ್ರಿಕೆಗಳು ಪ್ರಕಟಿಸುವ ಮನಸ್ಸು ಮಾಡಲಿಲ್ಲ.
ಸಾಮಾನ್ಯವಾಗಿ ಶೈಕ್ಷಣಿಕ ,ವೈಚಾರಿಕ ಅಥವಾ ತುಳು ಜಾನಪದ ಸಂಸ್ಕೃತಿಗಳ ಬಗ್ಗೆ ಮಾತ್ರ ಬರೆದು ಅಭ್ಯಾಸವಿರುವ ನಾನು ಇಲ್ಲಿ   ಅಳವಡಿಸಿದ ಆಧುನಿಕ ತಂತ್ರಜ್ಞಾನದ ಬಗ್ಗೆ ಮತ್ತು ಅದರ ಪರಿಣಾಮವಾಗಿ ಅಪರಾಧಗಳ ಕುಸಿತಗಳ ಬಗ್ಗೆ ಬರೆದದ್ದು ಅರ್ಥವಾಗುವ ಹಾಗೆ ಇರಲಿಲ್ಲವೋ, ಲೇಖನ ಆಶಯ ಸ್ಪಷ್ಟವಾಗಲಿಲ್ಲವೋ ,ಪತ್ರಿಕೆಗಳಿಗೆ ಬರೆಯುವುದು ಬಿಟ್ಟು ಎರಡು ಮೂರು ವರ್ಷಗಳಾಗಿದ್ದು ನಾನು ಅಪರಿಚಿತಳಾದೆನೋ ಅಥವಾ ಇದು ಸ್ಥಳೀಯ ಸುದ್ದಿ  ಮಾತ್ರ ಎನಿಸಿತೋ ಏನೋ ಗೊತ್ತಿಲ್ಲ.ಅಂತೂ‌ ಇಂತೂ ಪ್ರಕಟವಾಗಲಿಲ್ಲ.   ಒಳ್ಳೆಯ ವಿಚಾರವನ್ನು  ಜನರಿಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆ ನನಗೆ  ಬೇಸರವಿದೆ)
ಇರಲಿ ..
ಪ್ರಸ್ತುತ ನಮ್ಮ ಸುತ್ತಲಿನ ಪ್ರದೇಶಗಳನ್ನು ಸುರಕ್ಷಿತವಾಗಿ ಮಾಡಿದ್ದ ಕೆಪಿ ಸತ್ಯನಾರಾಯಣ ಅವರಿಗೆ ವರ್ಗಾವಣೆ ಆಗಿದೆಯಂತೆ.ಸರ್ಕಾರಿ ಉದ್ಯೋಗಿಗಳಿಗೆ ಕೆಲಸ ಮಾಡುವ ಸ್ಥಳ  ಶಾಶ್ವತವಲ್ಲ,ವರ್ಗಾವಣೆ ಇದ್ದದ್ದೇ ..ಆದರೂ ಇನ್ನೊಂದು ಎರಡು ವರ್ಷವಾದರೂ ಅವರು ಇಲ್ಲೇ ಇರಬೇಕಿತ್ತು.ಇದ್ದಿದ್ದರೆ ನಮ್ಮ ಪರಿಸರ ಸಂಪೂರ್ಣವಾಗಿ ಸುರಕ್ಷಿತವಾಗುತ್ತಿತ್ತು.ಅವರು ವರ್ಗಾವಣೆಗೊಂಡರೂ ಅವರು ಇಲ್ಲಿ ಮಾಡಿದ ಮಹತ್ಕಾರ್ಯ ವ್ಯರ್ಥವಾಗಲಾರದು.ಅದಕ್ಕಾಗಿ  ಅವರಿಗೆ ನಾವೆಲ್ಲರೂ ಆಭಾರಿಯಾಗಿದ್ದೇವೆ .ಅವರಿಂದ ಆರಂಭವಾಗಿರುವ ವ್ಯವಸ್ಥೆ ಮುಂದುವರಿದೀತು.ಜೊತೆಯಲ್ಲಿ ಅವರು ವರ್ಗಾವಣೆಗೊಂಡು ಹೋಗುವ ಪರಿಸರದಲ್ಲಿ ಕೂಡ ಅಪರಾಧಗಳ ಸಂಖ್ಯೆ ಇಳಿಮುಖವಾಗಿ ಜನರು ನೆಮ್ಮದಿಯ ಉಸಿರು ಬಿಟ್ಟಾರು.
ಒಳ್ಳೆಯ ಫೋಟೋ ಗ್ರಾಫರ್ ಕೂಡ ಆಗಿರುವ ಸತ್ಯನಾರಾಯಣ ಅವರು  ದಕ್ಷ ಪೋಲಿಸ್ ಅಧಿಕಾರಿ ಆಗಿದ್ದರೂ  ಜನಸ್ನೇಹಿ ಕೂಡ ಆಗಿದ್ದರು. ದಕ್ಷತೆ ಅವರಲ್ಲಿ ಇದೆ ಆದರೆ  ಒಂದಿನಿತೂ ದರ್ಪವಿಲ್ಲ,ಕವಿ ಹೃದಯದ ಅವರು ಕೆಟ್ಟವರಿಗೆ ದುಸ್ವಪ್ನ ಕೂಡ ಆಗಿದ್ದರು.ಸಜ್ಜನರಿಗೆ ಪ್ರಿಯರಾದವರೂ ಆಗಿದ್ದರು.
ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭಾಶಯಗಳನ್ನು ಹೇಳುತ್ತಾ ಮುಂದೆ ಭಡ್ತಿ ಹೊಂದಿ ಇನ್ನೂ ಉನ್ನತ ಹುದ್ದೆಯನ್ನು ಪಡೆದು   ನಮ್ಮ ಪರಿಸರಕ್ಕೆ  ಮತ್ತೆ ಬರಲಿ ಎಂದು ಹಾರೈಸುವೆ
ಡಾ.ಲಕ್ಷ್ಮೀ ಜಿ ಪ್ರಸಾದ
Aravinda Bhat Govinda Prasad Manikanth Armanikanth

ದೊಡ್ಡವರ ದಾರಿ : 62 ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಟಿಎನ್ ಸೀತಾರಾಮ್ © ಡಾ.ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ 63 : ಒಳಿತನ್ನು ಎಲ್ಲೆಡೆಯಿಂದ ಸ್ವೀಕರಿಸುವ ಟಿಎನ್ ಸೀತಾರಾಮ್
ದೊಡ್ಡವರು ದೊಡ್ಡವರೆಂದು ಗುರುತಿಸಲ್ಪಡಲು ಕಾರಣ ಅವರಲ್ಲಿ ಇರುವ ದೊಡ್ಡ ಗುಣವೇ ಆಗಿರುತ್ತದೆ. ನನ್ನ ಸುತ್ತಮುತ್ತಲಿನ ಪರಿಚಯದ ಮಂದಿಯಲ್ಲಿ ಇಂತಹ ಒಂದು ವಿಶಿಷ್ಟ ಗುಣ ನನ್ನ ಗಮನಕ್ಕೆ ಬಂದರೆ ಅವರ ಬಗ್ಗೆ ಬರೆಯುವುದು ನನ್ನ ಹವ್ಯಾಸ.
ಸುಮಾರು ಒಂದು ತಿಂಗಳಿನಿಂದ  ಟಿಎನ್ ಸೀತಾರಾಮ್ ಬಗ್ಗೆ ಬರೆಯಬೇಕೆಂದು ಕೊಂಡಿರುವೆ.ಬರೆಯುವ ಮೊದಲು ಅವರಲ್ಲಿ ಒಮ್ಮೆ ಮಾತನಾಡಬೇಕೆಂದು ಕೊಂಡಿದ್ದೆ.
ತಿಂಗಳ ಮೊದಲು ಮಗಳು ಜಾನಕಿ ಫೇಸ್ ಬುಕ್ ಗ್ರೂಪಿನಲ್ಲಿ ಧಾರಾವಾಹಿಯ ಒಂದು ಪಾತ್ರದ ಬಗ್ಗೆ ಜನರು ತಪ್ಪಾಗಿ ಭಾವಿಸಿ ನಿಂದನೆ ರೂಪದ ಹೇಳಿಕೆಗಳನ್ನು ನೀಡುತ್ತಾ ಇದ್ದರು.ಆಗ ನಾನು ಅದು ಸರಿಯಲ್ಲ ಎಂದು ಹೇಳಿ ಆ ಪಾತ್ರದ ಬಗೆಗಿನ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ನನ್ನ ಯತ್ನ ವಾಗಿ ಒಂದು ಹೇಳಿಕೆ ಹಾಕಿದ್ದೆ.ಆಗ ಸೀತಾರಾಮ್ ಅವರು ಮೆಸೆಂಜರ್ ನಲ್ಲಿ "ನಿಮ್ಮ ಗ್ರಹಿಕೆ ಸರಿ ಇದೆ,ಪ್ರೌಢವಾಗಿ ವಿಶ್ಲೇಷಣೆ ಮಾಡಿ ಬರೆದಿರುವಿರಿ" ಎಂದು ಮೆಸೇಜ್ ಮಾಡಿದರು. ಅರೇ..ಇವರು ನನ್ನ   ಬರಹಗಳನ್ನು ಓದುತ್ತಾರಾ ? ಎಂದು  ಆಶ್ಚರ್ಯ ಆಗಿತ್ತು.
ನಂತರ ಒಂದು ದಿನ  ದಾರಾವಾಹಿಯಲ್ಲಿ "ಜಾನಕಿಗೆ ನಿರಂಜನ ಸತ್ಯವನ್ನು ಮರುದಿನ  ಊಟದ ಸಮಯದಲ್ಲಿ ಹೇಳುತ್ತೇನೆ" ಎಂದಾಗ ಗ್ರೂಪಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಾ ಇತ್ತು. ನಾನು ಆಗ ಈಗಾಗಲೇ ಜಾನಕಿಗೆ ಆನಂದ,ತಾಯಿ,ನಿರಂಜನ ಮೋಸ ಮಾಡಿದ್ದಾರೆಂದು ತಿಳಿದು ಆಘಾತ ಆಗಿದೆ.ಆನಂದ ‌ಮೋಸ ಮಾಡಿದನೆಂದು ತಿಳಿದಾಗ ಜಾನಕಿ ಒಣ ವೇದಾಂತವನ್ನು ಹೇಳುತ್ತಾ ಇಷ್ಟವಾಗದ್ದನ್ನು ಮತ್ತೆ ಮತ್ತೆ ಹಾಕಿಸಿಕೊಂಡು ತಿನ್ನುತ್ತಾ ಹೇಗೇಗೋ ವರ್ತಿಸಿದ್ದಾಳೆ.ನಂತರ ನಿರಂಜನ ಮೋಸ ಮಾಡಿದನೆಂದು ತಿಳಿದಾಗ ತೀರಾ ಆಘಾತ ಆಯಿತು. ನಂತರ ತಾಯಿ ಸತ್ಯವನ್ನು ಮುಚ್ಚಿಟ್ಟ ವಿಚಾರ ತಿಳಿದಾಗ ತಾಯಿಯಲ್ಲಿ ಮಾತು ಬಿಡುತ್ತಾಳೆ.ಈಗ ತಂದೆಯೂ ದ್ರೋಹ ಮಾಡಿದ್ದಾನೆಂದು ತಿಳಿದರೆ ಅದನ್ನು ಸ್ವೀಕರಿಸಲು ಸಹಜವಾಗಿ  ಸಾಧ್ಯವಾಗಲಾರದು.ಜಾನಕಿಯ ಪರಿಸ್ಥಿತಿಯಲ್ಲಿ ಯಾರೇ ಇದ್ದರೂ ಮಾನಸಿಕ ಸಮತೋಲನ ಕಳೆದುಹೋಗಬಹುದು ಹಾಗಾಗಿ ಈಗಲೇ ಸತ್ಯ ತಿಳಿಯುವುದು ಸರಿಯಲ್ಲ ಎಂದು ಬರೆದಿದ್ದೆ.
ಆಗ ಸೀತಾರಾಮ್ ಅವರು ನೀವು ಹೇಳಿದ್ದು ಸರಿ ಇದೆ ಈಗಾಗಲೇ ರೆಕಾರ್ಡಿಂಗ್ ಆಗಿ ಚಾನಲ್ ಗೆ ಕಳುಹಿಸಿ ಆಗಿದೆ . ಸ್ವಲ್ಪ ಮೊದಲೇ ಗೊತ್ತಾಗಿದ್ದರೆ ಕಥೆಯನ್ನು ಸ್ವಲ್ಪ ಬದಲಾಯಿಸುತ್ತಾ ಇದ್ದೆ" ಎಂದು ತಿಳಿಸಿ "ನಿರಂಜನ ಸತ್ಯವನ್ನು ಹೇಳುವ ಕಥಾಭಾಗ ಯಾವ ದಿನಾಂಕ ದಂದು ಪ್ರಸಾರವಾಗುತ್ತದೆ" ಎಂದು ತಿಳಿಸಿದ್ದರು.ನನ್ನಂತಹ ಸಾಮಾನ್ಯರ ಅಭಿಪ್ರಾಯವನ್ನು ಕೂಡ ಸಕಾರಾತ್ಮಕವಾಗಿ ಸ್ವೀಕರಿಸುವ ಅವರ  ಹಿರಿತನದ ಅರಿವು ನನಗಾಗ ಆಯಿತು.
ಆಗ ಅವರಲ್ಲಿ ಮಾತನಾಡುತ್ತಾ( ಮೆಸೆಂಜರ್ ನ ಮೂಲಕ ) ಇರುವಾಗ ತಪ್ಪಿ ಕೈತಾಗಿ ಮೆಸೆಂಜರ್ ಕಾಲರ್ ಮೂಲಕ ಅವರಿಗೆ ವೀಡಿಯೋ ಕರೆ ಹೋಯಿತು. ಅದು ತನಕ ಮೆಸೆಂಜರ್ ವೀಡಿಯೋ ಕಾಲರ್ ಅನ್ನು ಒಮ್ಮೆಯೂ ಬಳಕೆ ಮಾಡದ ನನಗೆ ಕರೆ ಹೋಗುತ್ತಾ ಇರುವುದು ಗೊತ್ತಾದರೂ ಡಿಸ್ ಕನೆಕ್ಟ್ ಮಾಡುವುದು ಹೇಗೆಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಗಾಭರಿಯಾಗಿ ಹತ್ತಿರದಲ್ಲೇ ಇದ್ದ ಮಗನನ್ನು ಕರೆದು" ಮಾರಾಯ ಇಲ್ಲಿ ಸೀತಾರಾಮ್ ಗೆ ಕಾಲ್ ಹೋಗ್ತಾ ಉಂಟು ಬೇಗ ಕಟ್ ಮಾಡು " ಎಂದು ಹೇಳಿ ಡಿಸ್ ಕನೆಕ್ಟ್ ಮಾಡುವಷ್ಟರಲ್ಲಿ ಏಳೆಂಟು ಭಾರಿ ರಿಂಗಾಗಿತ್ತು."ಸೀತಾರಾಮ್ ಶಾರ್ಟ್ ಟೆಂಪರ್ಡ್ ಅಂತ ಯಾರೋ ಹೇಳುದು ಕೇಳಿದ್ದೆ.ಈಗ ನನಗೆ ಎರಡು ಬೈದರೆ ಎಂತ ಮಾಡುದು " ಎಂದು ಆತಂಕ ಆಯಿತು ಕೂಡ! ತಕ್ಷಣವೇ ತಪ್ಪಿ ಕರೆ ಹೋಗಿದೆ ಎಂದು ತಿಳಿಸಿ ಕ್ಷಮೆ ಕೋರಿದೆ.
ಅಷ್ಟರಲ್ಲಿ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಮೆಸೇಜ್ ಮಾಡಿದರು."ನಾನೇನೋ‌ ಮಾತಾಡಲು ಇಚ್ಛಿಸಿರುವೆ" ಎಂದು ಭಾವಿಸಿ ಅವರು ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದರು.  ಅವರ ಸಜ್ಜನಿಕೆಗೆ ತಲೆಬಾಗಿತು.
ನನಗೊಮ್ಮೆ ಅವರಲ್ಲಿ ಮಾತನಾಡಬೇಕಿಂದಿದ್ದರೂ ಆ ದಿನ ಮಾತನಾಡಲು ವಿಷಯವಿರಲಿಲ್ಲ ಹಾಗಾಗಿ ಕರೆ ಮಾಡಿರಲಿಲ್ಲ.
ಇದಾಗಿ ಕೆಲ ದಿನಗಳಲ್ಲಿ ಧಾರಾವಾಹಿಯ ಮುಖ್ಯ ಪಾತ್ರವೊಂದರ ಮೂಲಕ  ಮತ್ತಷ್ಟು ಋಣಾತ್ಮಕ ಪರಿಣಾಮ ಬೀರುವ ಕಥಾನಕ ಬಂತು.ಆಗ ನಾನು ನಾನು ಸೀತಾರಾಮ್ ಅವರಲ್ಲಿ ಆ ಪಾತ್ರ ಅದೇ ರೀತಿ ಸಾಗಿದರೆ ಉಂಟಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿ ,"ಆ ಪಾತ್ರದ ಚಿತ್ರಣದಲ್ಲಿ ಬದಲಾವಣೆ ಮಾಡಲು ಸಾಧ್ಯವೇ ?"ಎಂದು ಮನವಿ ಮಾಡಿದೆ.ಮತ್ತೆ ಒಳಗಿಂದೊಳಗೆ ಭಯ ಇತ್ತು.ನಿಮಗೆ ಯಾಕೆ ಅಧಿಕ ಪ್ರಸಂಗ ಅಂತ ಬೈದರೆ ಎಂದು,😀
ಆದರೆ ದೊಡ್ಡವರು ಒಳ್ಳೆಯ ವಿಚಾರಗಳನ್ನು ಎಲ್ಲೆಡೆಯಿಂದ ಸ್ವೀಕರಿಸುತ್ತಾರೆ ಎಂಬುದಕ್ಕೆ ಸೀತಾರಾಮ್ ಅವರು ಪ್ರತ್ಯಕ್ಷ ನಿದರ್ಶವಾದರು. ನನ್ನ ಅಭಿಪ್ರಾಯವನ್ನು ಒಪ್ಪಿ "ಹೇಗೆ ಬದಲಾವಣೆ ಮಾಡಬಹುದು?" ಎಂದು ಕೇಳಿದರು.ಆಗ ನಾನು ಅವರಿಗೆ ಕರೆ ಮಾಡಿ ಮುಕ್ತವಾಗಿ ಮಾತನಾಡಿದೆ.ಯಾವ ರೀತಿಯಲ್ಲಿ ಬದಲಾವಣೆ ಮಾಡಬಹುದು ಎಂದು ನನ್ನ ಅಭಿಪ್ರಾಯವನ್ನು ತಿಳಿಸಿದೆ.ತುಂಬಾ ತಾಳ್ಮೆಯಿಂದ ನನ್ನಂತಹ ಸಾಮಾನ್ಯಳ ಅಭಿಪ್ರಾಯ ವನ್ನು ಆಲಿಸಿದರು.ತುಂಬಾ ಚೆನ್ನಾಗಿ ಮಾತನಾಡಿದರು.ನಂತರ ಈ ಬಗ್ಗೆ ನಮ್ಮ ತಂಡದ ಜೊತೆಯಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದರು ‌.
ನಂತರ ಎರಡು ಮೂರು ದಿನ ಕಳೆದಾಗ "ನೀವು ಹೇಳಿದ ಕಥೆ ..ದಿನದಂದು ಬರುತ್ತದೆ" ಎಂದು ತಿಳಿಸಿದರು.
ಹೌದು,ಅವರು ಆ ಪಾತ್ರದಲ್ಲಿ  ನಾನು ಅಭಿಪ್ರಾಯಿಸಿದ ರೀತಿಯಲ್ಲಿ ಬದಲಾವಣೆ ಮಾಡಿದ್ದು ಪ್ರಸಾರವಾಯಿತು. ಅದನ್ನು ತುಂಬಾ ಸಹಜವಾಗಿ ತಂದಿದ್ದರು.  ಆಗ ಆ ಪಾತ್ರದ ಬಗ್ಗೆ ಅನೇಕರು ಒಳ್ಳೆಯ ರೀತಿಯಲ್ಲಿ ಹೇಳಿಕೆ,ಕಮೆಂಟ್ ಹಾಕಿದರು ಕೂಡ.
"ತಾನು ಮಾಡಿದ್ದೇ ಸರಿ,ಅದನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬ ಮನೋಭಾವ ಹೆಚ್ಚಿನವರಲ್ಲಿ ಇರುತ್ತದೆ.ಇಂತಹವರ  ನಡುವೆ ಟಿಎನ್ ಸೀತಾರಾಮ್ ತುಂಬಾ ಭಿನ್ನವಾಗಿ ನಿಲ್ಲುತ್ತಾರೆ.ಅವರೇಕೆ ದೊಡ್ಡವರು ಎಂಬುದು  'ಒಳ್ಳೆಯದನ್ನು ಎಲ್ಲೆಡೆಯಿಂದ ಸ್ವೀಕರಿಸುವ' ಅವರ  ದೊಡ್ಡ ಗುಣದಿಂದ ತಿಳಿಯುತ್ತದೆ. ಒಂದೆರಡು ವರ್ಷಗಳ ಹಿಂದೆ ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಅವರ ಪಕ್ಕವೇ ಕುಳಿತಿದ್ದೆ.ಮಾಯಾಮೃಗ ಧಾರಾವಾಹಿ ನೋಡುತ್ತಿದ್ದ ಸ್ನೇಹಿತರು ಸೀತಾರಾಮ್ ಬಗ್ಗೆ ಹೇಳುತ್ತಾ ಇದ್ದರು.ನಾನು ಕಾಲೇಜು ಮುಗಿಸಿ ಬರುವಷ್ಟರಲ್ಲಿ ಅದು ಮುಗಿಯುತ್ತಿದ್ದ ಕಾರಣ ನಾನು ನೋಡಿರಲಿಲ್ಲ.ನಂತರದ ಮನ್ವಂತರ,ಮುಕ್ತ, ಮುಕ್ತ ಧಾರಾವಾಹಿಗಳನ್ನು ನೋಡಿ ನಾನು ಸೀತಾರಾಮ್ ಅವರ ಫ್ಯಾನ್ ಆಗಿದ್ದೆ.ಅವರನ್ನು ಒಮ್ಮೆ ಭೇಟಿಯಾಗಿ ಮಾತನಾಡಬೇಕೆಂದು ಕೂಡ ಅಂದುಕೊಂಡಿದ್ದೆ .ಆದರೂ ಅವರ ಪಕ್ಕದಲ್ಲೇ ಕುಳಿತಿದ್ದರೂ  ಹಿಂಜರಿಕೆಯಿಂದ ಮಾತನಾಡಿರಲಿಲ್ಲ!  ( ನಾನು ಒಂಚೂರು ಹಾಗೆಯೇ ..ಮಂಗಳೂರಿನಲ್ಲಿ ಇದ್ದಾಗಲೇ  ಡಾ.ನಾ ಸೋಮೇಶ್ವರ, ಡಾ.ಚಂದ್ರಶೇಖರ ಕಂಬಾರ,ಹಂಪನಾ ಮೊದಲಾದವರನ್ನು ಭೆಟಿಯಾಗಿ ಮಾತನಾಡಬೇಕೆಂದು ಮನಸಿನಲ್ಲೇ ಆಶಿಸುತ್ತಾ ಇದ್ದೆ.ಆದರೆ ಬೆಂಗಳೂರಿನಲ್ಲಿ ಚಂದ್ರ ಶೇಖರ ಕಂಬಾರರ ಮನೆ ಹತ್ತಿರವೇ ಇದ್ದಾಗ ಕೂಡ ಹೋಗಿ ಮಾತನಾಡಲಿಲ್ಲ.ಒಂದೆರಡು ಭಾರಿ ಮಾತನಾಡಲೆಂದೇ ಅವರ ಮನೆ ಗೇಟ್ ತನಕ ಹೋಗಿ ಹಿಂಜರಿಕೆ ಕಾಡಿ ಹಿಂದೆ ಬಂದಿದ್ದೆ.ಡಾ.ನಾ ಸೋಮೇಶ್ವರ ಅವರನ್ನು ಅನೇಕ ಬಾರಿ ಕಂಡಿದ್ದರೂ ಮಾತನಾಡಲಯ ಹಿಂದೇಟು ಹಾಕಿರುವೆ.) ಆದರೆ ಸೀತಾರಾಮ್ ಅವರನ್ನು ಮಾತ್ರ ಖಂಡಿತಾ ಮುಖತಃ ಭೇಟಿಯಾಗಿ ಒಂದು ಸೆಲ್ಪಿ ಹಿಡಿದುಕೊಂಡು ಬರಬೇಕೆಂದು ಕೊಂಡಿರುವೆ .

Sunday 2 December 2018

ದೊಡ್ಡವರ ದಾರಿ 62 ಪ್ರೀತಿಯ ಮೇಷ್ಟ್ರು ಡಾ.ಭೈರಮಂಗಲ ರಾಮೆಗೌಡ © ಡಾ.ಲಕ್ಷ್ಮೀ ಜಿ ಪ್ರಸಾದ

ವಿದ್ಯಾರ್ಥಿಗಳ ಪ್ರೀತಿಯ ಮೇಷ್ಟ್ರು - ಡಾ.ಭೈರಮಂಗಲ‌ ರಾಮೇಗೌಡ© ಡಾ.ಲಕ್ಷ್ಮೀ ಜಿ ಪ್ರಸಾದ
ತುಂಬಾ ಸಮಯದಿಂದ ಭೈರಮಂಗಲ ರಾಮೇಗೌಡರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ಸೋಮಾರಿತನ ಒಂಚೂರು ಕೆಲಸದ ಒತ್ತಡ,ಬರೆಯುವ ಮೂಡ್ ನ ಕೊರತೆಯ ಕಾರಣದಿಂದಾಗಿ ಬರೆಯಲಾಗಲಿಲ್ಲ.
ರಾಮೇಗೌಡು ಬಹಳ ಜನಪ್ರಿಯ ಕನ್ನಡ ಪ್ರಾಧ್ಯಾಕರು.ಅವರ ವಿದ್ಯಾರ್ಥಿಗಳು ಅವರನ್ನು ತುಂಬಾ ನೆಚ್ಚಕೊಂಡಿದ್ದಾರೆ.
ತುಂಬಾ ಜನ ಉಪನ್ಯಾಸಕರಿದ್ದಾರೆ.ಆದರೆ ಇವರ ವಿದ್ಯಾರ್ಥಿಗಳು ಮಾತ್ರ ಇವರನ್ನು ತುಂಬಾ ಅಭಿಮಾನದಿಂದ ಕಾಣುತ್ತಾರೆ. ಯಾರು ಕೂಡ ರಾಮೇಗೌಡರ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದಿಲ್ಲ .ಯಾಕೆ ? ಹೆಚ್ಚು ಕಡಿಮೆ ವರ್ಷದ ‌ಮುನ್ನೂರ ಅರುವತ್ತೈದು ದಿನಗಳಲ್ಲಿ ಕೂಡ ಅವರು ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪನ್ಯಾಸಕಾರರಾಗಿ ಆಹ್ವಾನಿಸಲ್ಪಡುತ್ತಾರೆ .ಇಷ್ಟು ಜನರ ಪ್ರೀತಿಯನ್ನು ಹೇಗೆ ಗಳಿಸಿದರು? ಯಾರಿಗಾದರೂ ಮನದಲ್ಲಿ  ಮೂಡಬಹುದಾದ ಪ್ರಶ್ನೆ ಇದು.ಆದರೆ ನನಗೆ ಇದಕ್ಕೆ ಉತ್ತರ ಗೊತ್ತು. ಮೊದಲಿಗೆ ಅವರ ಪ್ರಗಲ್ಭ ಪಾಂಡಿತ್ಯ ಇದಕ್ಕೆ ಕಾರಣ.
ಜೊತೆಗೆ ಅವರ ಸಜ್ಜನಿಕೆ,ಉದಾತ್ತತೆ,ವಿದ್ಯಾರ್ಥಿ ಪ್ರಿಯತೆ ಕಾರಣವಾಗಿದೆ.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಪದವಿ ಕಾಲೇಜು ಕನ್ನಡ ಉತ್ತರ ಪತ್ರಿಕೆ ‌ಮೌಲ್ಯ ಮಾಪನದಲ್ಲಿ ನನಗೆ ಅವರು ಡಿಸಿ ಆಗಿದ್ದರು. ಮೌಲ್ಯ ಮಾಪನ ಆರಂಭದಲ್ಲಿ ಅರ್ಧ ಕಾಲು ಅಂಕಗಳನ್ನು ಕೊಡಬೇಡಿ‌.ಉದಾಹರಣೆಗೆ "ಎರಡುವರೆ ಅಂಕ ಕೊಡುವ ಬದಲು ಎರಡು ಅಥವಾ ‌ಮೂರು ಕೊಡಿ. ನಾನು ಅರ್ಧ ಅಂಕವನ್ನು ಬಿಡುವ ಬದಲು ವಿದ್ಯಾರ್ಥಿಗಳಿಗೆ  ಅದನ್ನು ಕೊಡುತ್ತೇನೆ. ನಾನು‌ಮಾಡುವ ಹಾಗೆಯೇ ನೀವು‌ ಮಾಡಬೇಕೆಂದಿಲ್ಲ.ಆಯ್ಕೆ ನಿಮ್ಮದು " ಎಂದು ತಮ್ಮ ವಿದ್ಯಾರ್ಥಿ ಸ್ನೇಹಿ ನಿಲುವನ್ನು ತಿಳಿಸಿದ್ದರು.ಒಂದಿನಿತು ಕೂಡ ಅವರಲ್ಲಿ ಅಧಿಕಾರದ ಮಾತಿರಲಿಲ್ಲ.ನಾನಾಗ ಒಂದು ಕಥಾ ಸಂಕಲನ ಮತ್ತು ಒಂದು ಲೇಖನ ಹೀಗೆ ಎರಡು ಪುಸ್ತಕಗಳನ್ನು ಪ್ರಕಟಿಸಬೇಕೆಂದು ಆಲೋಚಿಸುತ್ತಾ ಇದ್ದೆ.ಈ ಬಗ್ಗೆ ಅವರಲ್ಲಿ ಸಲಹೆ ಕೇಳಿದಾಗ ‌ಲಕ್ಷ್ಮೀ‌ಪ್ರಿಂಟರ್ಸ್ ನ ವಿಳಾಸ ನೀಡಿ ಪ್ರಕಟಿಸಿ ,ಮುನ್ನೂರು ಪುಸ್ತಕಗಳನ್ನು ಪುಸ್ತಕ ಪ್ರಾಧಿಕಾರ ಗ್ರಂಥಾಯಗಳಿಗೆ ನೀಡಲು ಖರೀದಿಸುತ್ತದೆ.ಹಾಗಾಗಿ ಮಾರಾಟ ಆಗದಿದ್ದರೆ ಎಂಬ ಚಿಂತೆ ಬೇಡ,ಧೈರ್ಯವಾಗಿ ಪ್ರಕಟಿಸಿ" ಎಂದು ಬೆಂಬಲದ ಮಾತುಗಳನ್ನು ಆಡಿದ್ದರು. ಆಗಾಗಲೇ ಅವರು ತುಂಬಾ ಪ್ರಸಿದ್ಧರಾಗಿದ್ದರು.ನನ್ನಂತ ಬಾಲಂಗೋಚಿಯ ಪುಸ್ತಕ ಪ್ರಕಟನೆಯ ಕನಸನ್ನು ತಿರಸ್ಕಾರದಿಂದ ಕಾಣದೆ ಬೆಂಬಲಿಸಿದ್ದರು.ಆಗಲೇ ನನಗೆ ಅವರೇಕೆ ದೊಡ್ಡವರು ಎಂದರಿವಾಗಿತ್ತು.
ನಂತರ ಸುಮಾರು ಹನ್ನೆರಡು ವರ್ಷಗಳ ನಂತರ ನನಗೆ ಫೇಸ್ ಬುಕ್ ನಲ್ಲಿ ನನಗೆ ಕಾಣಲು ಸಿಕ್ಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆ.ಅದನ್ನು ಸ್ವೀಕರಿಸಿಯಾರೆಂಬ ನಂಬಿಕೆ ನನಗಿರಲಿಲ್ಲ .ಆದರೆ ನನ್ನ ಊಹೆ ಹುಸಿಯಾಗಿ ಅವರು ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸಿದರು.
ಫೇಸ್ ಬುಕ್ ನಲ್ಲಿ ನಾನು ಭಾಗವಹಿಸಿದ ಅತಿಥಿಯಾಗಿ ಕಾರ್ಯಕ್ರಮಗಳನ್ನು ,ಪಡೆದ ಪ್ರಶಸ್ತಿ ಪುರಸ್ಕಾರಗಳನ್ನು ಹಂಚಿಕೊಂಡಾಗ ಅವರು ಪ್ರತಿಕ್ರಿಯೆ ನೀಡಿ ಬೆಂಬಲ ನೀಡಿದರು‌.
ಪೇಸ್ ಬುಕ್ ನಲ್ಲಿ ಅನೇಕ ದೊಡ್ಡ ದೊಡ್ಡ ವಿದ್ವಾಂಸರು ಇರುತ್ತಾರೆ.ತಾವು ಪಡೆದ ಪ್ರಶಸ್ತಿ ಸನ್ಮಾನಗಳ ಬಗ್ಗೆ ಹಾಕಿಕೊಳ್ಳುತ್ತಾರೆ.ಎಲ್ಲರ ಅಭಿನಂದನೆಗಳನ್ನು ಸ್ವೀಕರಿಸುತ್ತಾರೆ‌.ಆದರೆ ಬೇರೆಯವರ ಸಾಧನೆಗಳನ್ನು ಗುರುತಿಸುವ ಅವರಿಗೆ ಒಂದು ಬೆಂಬಲದ ಮಾತನ್ನು ಹೇಳಬೇಕು ಎಂಬುದನ್ನು ಮರೆತುಬಿಡುತ್ತಾರೆ. ಹಾಗೆ ಮಾಡಿದರೆ ತಮ್ಮ ಘನತೆಗೆ ಕುಂದೆಂದು ಭಾವಿಸುತ್ತಾರೋ ಏನೋ ನನಗೆ ತಿಳಿಯದು.ಅಥವಾ ಬೇರೆಯವರ ಏಳಿಗೆ ಇವರಿಗೆ ಸಹ್ಯವಾಗುವುದಿಲ್ಲವೋ ಏನೋ ನನಗೆ ಅರ್ಥವಾಗುವುದಿಲ್ಲ.
ಇಂತಹವರ ನಡುವೆ ಭೈರಮಂಗಲ ರಾಮೇಗೌಡ ಸರ್ ತುಂಬಾ ಭಿನ್ನವಾಗಿ ಕಾಣಿಸುತ್ತಾರೆ.ತಮ್ಮ ಎಡೆಬಿಡದ ಕಾರ್ಯಗಳ ನಡುವೆಯೂ ಚಿಕ್ಕವರಿಗೆ ಪ್ರೋತ್ಸಾಹ ನೀಡುತ್ತಾರೆ‌.ಹಾಗಾಗಿಯೇ ಅವರು ದೊಡ್ಡವರು‌. ಸಮಾಜದಲ್ಲಿ ದೊಡ್ಡವರೆಂದು ಗುರುತಿಸಲ್ಪಡುವುದು ಸಣ್ಣ ವಿಚಾರವಲ್ಲ.ದೊಡ್ಡ ಗುಣ ಇದ್ದರೆ ಮಾತ್ರ ವಿದ್ವಾಂಸರು ಹಿರಿಯರು ದೊಡ್ಡವರೆಂದು ಗುರುತಿಸಲ್ಪಡುತ್ತಾರೆ .ಅದಕ್ಕೆ ಡಾ.ಭೈರಮಂಗಲ ರಾಮೆಗೌಡರು ನಿದರ್ಶನವಾಗಿದ್ದಾರೆ.
©ಡಾ.ಲಕ್ಷ್ಮೀ ಜಿ ಪ್ರಸಾದ