Sunday 9 December 2018

ದೊಡ್ಡವರ ದಾರಿ 64 ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ ಪೋಲಿಸ್ ಇನ್ಸ್‌ಪೆಕ್ಟರ್ ಕೆಪಿ ಸತ್ಯನಾರಾಯಣ

ದೊಡ್ಡವರ ದಾರಿ 64 ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ ಪೋಲಿಸ್ ಇನ್ಸ್‌ಪೆಕ್ಟರ್  ಕೆಪಿ ಸತ್ಯನಾರಾಯಣ


ನಮ್ಮ ಬ್ಯಾಡರ ಹಳ್ಳಿ ಪೋಲಿಸ್ ಸ್ಟೇಷನ್ ವ್ಯಾಪ್ತಿಯ ಮಾಗಡಿ ರಸ್ತೆ, ಉಳ್ಳಾಲು ಉಪನಗರ ಮೊದಲಾದ ಪ್ರದೇಶಗಳು ಕಳ್ಳತನ ರೌಡಿಸಂ,ದರೋಡೆಯ ಕಾರಣಗಳಿಗೆ ಕುಖ್ಯಾತಿಯನ್ನು ಪಡೆದಿದ್ದು ಈ ಪರಿಸರದಲ್ಲಿ ರಾತ್ರಿ ವೇಳೆಯಲ್ಲಿ ‌ಮಾತ್ರವಲ್ಲ ಹಗಲು ಕೂಡ ಓಡಾಡಲು ಜನ ಹಿಂಜರಿಯುತ್ತಾ ಇದ್ದರು.ಇಲ್ಲಿಗೆ ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ಬಂದ ಕೆಪಿ ಸತ್ಯನಾರಾಯಣ ಅವರ ದಕ್ಷತೆ ಹಾಗೂ ಅವರ ನೇತೃತ್ವದಲ್ಲಿ ಅಳವಡಿಸಿಕೊಂಡ ಆಧುನಿಕ ತಂತ್ರಜ್ಞಾನದ ಸಲಕರಣೆಗಳ ಪರಿಣಾಮವಾಗಿ  ಇಲ್ಲಿ  ಅಪರಾಧಗಳ ಸಂಕ್ಯೆ ಗಣನೀಯವಾಗಿ ಕಡಿಮೆ ಆಗಿದೆ.(ಶೇಕಡಾ 70 ರಷ್ಟು) . ಬ್ಯಾಡರ ಹಳ್ಳಿ ಫೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಎಲ್ಲಾ ಚೌಕಗಳಲ್ಲಿ,ಆಯ ಕಟ್ಟಿನ ಪ್ರದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪೋಲಿಸ್ ಸ್ಟೇಷನ್ ನಿಯಂತ್ರಣ ಕೊಠಡಿಯಲ್ಲಿ  ನೋಡುವ ಮತ್ತು ನಿಯಂತ್ರಿಸುವ ವ್ಯವಸ್ಥೆ ಯನ್ನು ಇವರು ಅಳವಡಿಸಿದ್ದರು.ಕಸ ತುಂಬಿ ನಾರುತ್ತಿದ್ದ ಪೋಲಿಸ್ ಸ್ಟೇಷನ್ ನ ಪರಿಸರವನ್ನು ಸ್ವಚ್ಛ ಗೊಳಿಸಿ ಹುಲ್ಲಿನ ಹಾಸು ಗಿಡ‌ಮರ ಬೆಳೆಸಿ ಪಾರ್ಕ್ ನಂತೆ ಮಾಡಿದ್ದರು.ಮನಸಿದ್ದರೆ ಮಾರ್ಗವಿದೆ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ‌.
ಇಲ್ಲಿ ಅಳವಡಿಸಿದ ತಂತ್ರಜ್ಞಾನವನ್ನು ಎಲ್ಲೆಡೆ ಅನುಸರಿಸಿದರೆ ಎಲ್ಲಾ ಕಡೆಯಲ್ಲಿ ಕೂಡ ಅಪರಾಧಗಳ ಸಂಖ್ಯೆ ಖಂಡಿತಾ ಇಳಿಮುಖವಾದೀತು .(ಈ ಬಗ್ಗೆ ನಾನು ಒಂದು ಲೇಖನ ಬರೆದು ಪ್ರಕಟಿಸಲು ಯತ್ನ ಮಾಡಿದೆನಾದರೂ ಯಾಕೋ ಏನೋ ಪತ್ರಿಕೆಗಳು ಪ್ರಕಟಿಸುವ ಮನಸ್ಸು ಮಾಡಲಿಲ್ಲ.
ಸಾಮಾನ್ಯವಾಗಿ ಶೈಕ್ಷಣಿಕ ,ವೈಚಾರಿಕ ಅಥವಾ ತುಳು ಜಾನಪದ ಸಂಸ್ಕೃತಿಗಳ ಬಗ್ಗೆ ಮಾತ್ರ ಬರೆದು ಅಭ್ಯಾಸವಿರುವ ನಾನು ಇಲ್ಲಿ   ಅಳವಡಿಸಿದ ಆಧುನಿಕ ತಂತ್ರಜ್ಞಾನದ ಬಗ್ಗೆ ಮತ್ತು ಅದರ ಪರಿಣಾಮವಾಗಿ ಅಪರಾಧಗಳ ಕುಸಿತಗಳ ಬಗ್ಗೆ ಬರೆದದ್ದು ಅರ್ಥವಾಗುವ ಹಾಗೆ ಇರಲಿಲ್ಲವೋ, ಲೇಖನ ಆಶಯ ಸ್ಪಷ್ಟವಾಗಲಿಲ್ಲವೋ ,ಪತ್ರಿಕೆಗಳಿಗೆ ಬರೆಯುವುದು ಬಿಟ್ಟು ಎರಡು ಮೂರು ವರ್ಷಗಳಾಗಿದ್ದು ನಾನು ಅಪರಿಚಿತಳಾದೆನೋ ಅಥವಾ ಇದು ಸ್ಥಳೀಯ ಸುದ್ದಿ  ಮಾತ್ರ ಎನಿಸಿತೋ ಏನೋ ಗೊತ್ತಿಲ್ಲ.ಅಂತೂ‌ ಇಂತೂ ಪ್ರಕಟವಾಗಲಿಲ್ಲ.   ಒಳ್ಳೆಯ ವಿಚಾರವನ್ನು  ಜನರಿಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆ ನನಗೆ  ಬೇಸರವಿದೆ)
ಇರಲಿ ..
ಪ್ರಸ್ತುತ ನಮ್ಮ ಸುತ್ತಲಿನ ಪ್ರದೇಶಗಳನ್ನು ಸುರಕ್ಷಿತವಾಗಿ ಮಾಡಿದ್ದ ಕೆಪಿ ಸತ್ಯನಾರಾಯಣ ಅವರಿಗೆ ವರ್ಗಾವಣೆ ಆಗಿದೆಯಂತೆ.ಸರ್ಕಾರಿ ಉದ್ಯೋಗಿಗಳಿಗೆ ಕೆಲಸ ಮಾಡುವ ಸ್ಥಳ  ಶಾಶ್ವತವಲ್ಲ,ವರ್ಗಾವಣೆ ಇದ್ದದ್ದೇ ..ಆದರೂ ಇನ್ನೊಂದು ಎರಡು ವರ್ಷವಾದರೂ ಅವರು ಇಲ್ಲೇ ಇರಬೇಕಿತ್ತು.ಇದ್ದಿದ್ದರೆ ನಮ್ಮ ಪರಿಸರ ಸಂಪೂರ್ಣವಾಗಿ ಸುರಕ್ಷಿತವಾಗುತ್ತಿತ್ತು.ಅವರು ವರ್ಗಾವಣೆಗೊಂಡರೂ ಅವರು ಇಲ್ಲಿ ಮಾಡಿದ ಮಹತ್ಕಾರ್ಯ ವ್ಯರ್ಥವಾಗಲಾರದು.ಅದಕ್ಕಾಗಿ  ಅವರಿಗೆ ನಾವೆಲ್ಲರೂ ಆಭಾರಿಯಾಗಿದ್ದೇವೆ .ಅವರಿಂದ ಆರಂಭವಾಗಿರುವ ವ್ಯವಸ್ಥೆ ಮುಂದುವರಿದೀತು.ಜೊತೆಯಲ್ಲಿ ಅವರು ವರ್ಗಾವಣೆಗೊಂಡು ಹೋಗುವ ಪರಿಸರದಲ್ಲಿ ಕೂಡ ಅಪರಾಧಗಳ ಸಂಖ್ಯೆ ಇಳಿಮುಖವಾಗಿ ಜನರು ನೆಮ್ಮದಿಯ ಉಸಿರು ಬಿಟ್ಟಾರು.
ಒಳ್ಳೆಯ ಫೋಟೋ ಗ್ರಾಫರ್ ಕೂಡ ಆಗಿರುವ ಸತ್ಯನಾರಾಯಣ ಅವರು  ದಕ್ಷ ಪೋಲಿಸ್ ಅಧಿಕಾರಿ ಆಗಿದ್ದರೂ  ಜನಸ್ನೇಹಿ ಕೂಡ ಆಗಿದ್ದರು. ದಕ್ಷತೆ ಅವರಲ್ಲಿ ಇದೆ ಆದರೆ  ಒಂದಿನಿತೂ ದರ್ಪವಿಲ್ಲ,ಕವಿ ಹೃದಯದ ಅವರು ಕೆಟ್ಟವರಿಗೆ ದುಸ್ವಪ್ನ ಕೂಡ ಆಗಿದ್ದರು.ಸಜ್ಜನರಿಗೆ ಪ್ರಿಯರಾದವರೂ ಆಗಿದ್ದರು.
ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭಾಶಯಗಳನ್ನು ಹೇಳುತ್ತಾ ಮುಂದೆ ಭಡ್ತಿ ಹೊಂದಿ ಇನ್ನೂ ಉನ್ನತ ಹುದ್ದೆಯನ್ನು ಪಡೆದು   ನಮ್ಮ ಪರಿಸರಕ್ಕೆ  ಮತ್ತೆ ಬರಲಿ ಎಂದು ಹಾರೈಸುವೆ
ಡಾ.ಲಕ್ಷ್ಮೀ ಜಿ ಪ್ರಸಾದ
Aravinda Bhat Govinda Prasad Manikanth Armanikanth

No comments:

Post a Comment