Monday 28 March 2016

ಹೆತ್ತವರು ಮತ್ತು ಶಿಕ್ಷಕರೆಲ್ಲರೂ ನೋಡಲೇ ಬೇಕಾದ ಸಿನೆಮ -ಕಾಡ ಹಾದಿಯ ಹೂಗಳು -ಡಾ.ಲಕ್ಷ್ಮೀ ಜಿ ಪ್ರಸಾದ

 




ತಂದೆ ಇಂಜಿನಿಯರ್ ತಾಯಿಯೂ ವಿದ್ಯಾವಂತೆ ಉದ್ಯೋಗಸ್ಥೆ ,ಇಂಗ್ಲಿಷ್ ಶಿಕ್ಷಣ ಮಾತ್ರ ಭವಿಷ್ಯವನ್ನು ತಂದು ಕೊಡುತ್ತದೆ ಎಂಬ ಭ್ರಮೆ ಇಬ್ಬರಿಗೂ .ಇವರಿಗೆ ಒಬ್ಬಳೇ ಒಬ್ಬ ಮಗಳು ಹನಿ ಹನ್ನೆರಡರ ಪೋರಿ ,ಮಾನವೀಯ ಗುಣಗಳುಳ್ಳ ,ನೇರಮಾತಿನ ಮುಗ್ದೆ ,ತುಂಬಾ ಬುದ್ದಿವಂತೆ ಕೂಡ .
ತಂದೆಗೆ ಮಗಳು ಇಂಜಿನಿಯರ್ ಅಗಲಿ ಎಂಬ ಕನಸು ತಾಯಿಗೆ ಮಗಳು ವೈದ್ಯೆ ಅಗಲಿ ಎಂಬ ಕನವರಿಕೆ .ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶದಿಂದಲೇ ಒಂದು ಲಕ್ಷ ರು ಡೊನೇಷನ್ ನೀಡಿ ಪ್ರತಿಷ್ಟಿತ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುತ್ತಾರೆ .ಅಲ್ಲಿ ಓರ್ವ ಶಿಕ್ಷಕಿ ಅವರಿಗೊಂದು ಸಾಮನ್ಯ ಬುದ್ದಿವಂತಿಕೆಯ ಮಗಳು ಸ್ವಾತಿ .ಈಕೆ ಮತ್ತು ಹನಿ ಇಬ್ಬರೂ ಒಟ್ಟಿಗೆ ಏಳನೇ ತರಗತಿಯಲ್ಲಿ ಓದುತ್ತಾರೆ.
ಜಾಣೆ ಹುಡುಗಿ ಹನಿ ಬಗ್ಗೆ ಮತ್ಸರ ತಾಳುವ ಸ್ವಾತಿ ತಾಯಿಯ ಮೂಲಕ ತನ್ನ ದ್ವೇಷ ಸಾಧನೆ ಮಾಡ ತೊಡಗುತ್ತಾಳೆ .ತನ್ನ ಮಗಳಿಗಿಂತ ಬುದ್ದಿವಂತೆ ಹನಿ ಬಗ್ಗೆ ಆ ಶಿಕ್ಷಕಿಗೂ ತೀರದ ಅಸಹನೆ, ಮಾತು ಮಾತಿಗೆ ಅವಮಾನ ಕಾರಣ ಹುಡುಕಿ ಶಿಕ್ಷೆ ಬೈಗಳು !.ಕ್ರಮೇಣ ಹನಿ ಶಾಲೆಗೆ ಹೋಗುವ .ಕಲಿಯುವ ಆಸಕ್ತಿಯನ್ನು ಕಳೆದುಕೊಳ್ಳುತ್ತಾಳೆ .
ಶಾಲೆಯಲ್ಲಿ ಕನ್ನಡ ಮಾತಾಡಿದ್ದಕ್ಕೆ ನೂರು ರು ದಂಡ ಕಟ್ಟಲು ಹೇಳಿದಾಗ ಮನೆಯಲ್ಲಿ ತಿಳಿಸಲು ಅಳುಕಿ ತಾಯಿಯ ಪರ್ಸ್ ನಿಂದ ದುಡ್ಡು ಕದಿಯುತ್ತಾಳೆ .ಜೊತೆಗೆ ತಾನು ದುಡ್ಡು ಕದ್ದಿದ್ದು ಕೆಲಸದಾಕೆಯ ಮೇಲೆ ಆರೋಪ ಬಂದು ಆಕೆ ಹೊಡೆದರೆ ?ಎಂದು ಹೆದರುತ್ತಾಳೆ ಕೂಡ .
ಹೀಗೆ ದಿನ ದಿನವೂ ತಲ್ಲಣಕ್ಕೆ ಈಡಾಗುತ್ತಲೇ ಸಾಗುವ ಅವಳಿಗೆ ದಿನನಿತ್ಯ ಜಗಳವಾಡುವ ಪ್ರಸಂಗಗಳು ಎದುರಾಗುತ್ತವೆ. .ಇದರೊಂದಿಗೆ ಅಲ್ಲಿಯೇ ಸಮೀಪದಲ್ಲಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದುವ ಹುಡುಗನ ಪರಿಚಯವೂ ಆಗಿ ಅವಳ ಮನಸು ಕನ್ನಡ ಶಾಲೆಯ ಕಡೆಗೆ ತುಡಿಯುತ್ತದೆ .
ಒಂದು ದಿನ ನೆನಪಿನ ಶಕ್ತಿ ಸ್ಪರ್ಧೆಯಲ್ಲಿ 24 ರಲ್ಲಿ 24 ವಸ್ತುಗಳ ಹೆಸರುನ್ನೂ ಹನಿ ಬರೆದಿರುತ್ತಾಳೆ. ಸ್ವಾತಿ ಹದಿನೆಂಟು ಬರೆದಿರುತ್ತಾಳೆ .ಬಹುಮಾನಿತರ ಹೆಸರನ್ನು ಹಾಕಿದಾಗ ಸ್ವಾತಿಗೆ ಮೊದಲ ಬಹುಮಾನವಿತ್ತು. ಆಗ ಹನಿ ಈ ಬಗ್ಗೆ ತಕರಾರು ಎತ್ತುತ್ತಾಳೆ ,ತಾನು"24 ಬರೆದಿದ್ದೆ ,ತನಕೆ ಮೊದಲ ಬಹುಮಾನ ಬರಬೇಕಿತ್ತು" "ಎನ್ನುತ್ತಾಳೆ.ಆದರೆ ಅವಳ ಹೆಸರೇ ಸ್ಪರ್ಧಿಗಳ ಪಟ್ಟಿಯಲ್ಲಿ ಇರುವುದಿಲ್ಲ ,ಮತ್ತು ಅವಳು ಉತ್ತರಿಸಿದ ಹಾಳೆ ಕೂಡ ಇರುವುದಿಲ್ಲ .ಕೊನೆಗೆ ಇದು ಮುಖ್ಯೋಪಾಧ್ಯಾಯಿನ ಬಳಿಗೆ ಈ ವಿಚಾರ ಹೋದಾಗ ಅವರು ಹಾಗಾದರೆ ಅವಳು ಮತ್ತೊಮ್ಮೆ ಆ 24 ಹೆಸರುಗಳನ್ನೂ ಬರೆಯಲಿ ಎಂದು ಹೇಳಿ ಬಿಳಿ ಹಾಳೆಯನ್ನು ನೀಡುತ್ತಾರ,ತೀವ್ರ ಅವಮಾನಕ್ಕೆ ಗುರಿಯಾದ ಅವಳಿಗೆ ಉತ್ತರಿಸಲು ಸಾಧ್ಯವಾಗದೆ ಅಳುತ್ತಾಳೆ .ಕೊನೆಗೆ ಬುದ್ಧಿವಂತೆ ಹುಡುಗಿಗೆ ಮಾನಸಿಕ ಸಮಸ್ಯೆ ಇದೆ ಎಂಬಂತೆ ಮಾತಾಡುತ್ತಾರೆ!
ಹೀಗೆ ದಿನ ನಿತ್ಯ ಒಂದಲ್ಲ ಒಂದು ಸಮಸ್ಯೆಗೆ ಸಿಲುಕುವ ಅವಳಿಗೆ ಒಂದಿನ ಹೆತ್ತವರನ್ನು ಕರೆದುಕೊಂಡು ಬರುವಂತೆ ಹೇಳುತ್ತಾರೆ .
ಅಂದು ಅವಳು ಮನೆಗೆ ಹೋಗದೆ ಎಲ್ಲೋ ಹೋಗುತ್ತಾಳೆ. ಅದೃಷ್ಟವಶಾತ್ ವಿಜ್ಞಾನಿ ಯೊಬ್ಬರಿಗೆ ಅವಳು ಸಿಕ್ಕಿ ಅವರು ಅವಳನ್ನು ತಮ್ಮ ಮನೆಗೆ ಕರೆದೊಯ್ದು ಊಟ ತಿಂಡಿ ನೀಡಿ, ಪೋಲಿಸ್ ರಿಗೆ ಮಾಹಿತಿ ನೀಡುತ್ತಾರೆ ಮತ್ತೆ ಅವಳ ತಂದೆ ತಾಯಿ ಅವಳನ್ನು ಕರೆದುಕೊಂಡು ಹೋಗುತ್ತಾರೆ ಮಗಳ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದ ಅವರುಗಳು ಮತ್ತೆ ಅವಳನ್ನು ಅದೇ ಶಾಗೆ ಕಳುಹಿಸುತ್ತಾರೆ  
ಒಂದು ದಿನ ಶಾಲೆಗೆ ಮೇಲಧಿಕಾರಿಗಳು ವೀಕ್ಷಣೆಗೆ ಬರುತ್ತಾರೆ .ಆ ಶಾಲೆಯು  ಕನ್ನಡ ಮಾಧ್ಯಮ ಕ್ಕೆ ಅನುಮತಿ ಪಡೆದಿತ್ತು ಆದರೆ ಅಲ್ಲಿ ಕಾನೂನು ಬಾಹಿರವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿದ್ದರು.
ವೀಕ್ಷಕ ಅಧಿಕಾರಿಗಳು ಬರುವ ಸುಳಿವು ಸಿಕ್ಕ ಶಿಕ್ಷಕರು ಓಡಿ ಬಂದು ಎಲ್ಲ ಮಕ್ಕಳಲ್ಲಿ "ನಿಮ್ಮಲ್ಲಿರುವ ಎಲ್ಲ ಇಂಗ್ಲಿಷ್ ಪುಸ್ತಕಗಳನ್ನು ಕಿಟಕಿಯಿಂದ ಹೊರಗೆ ಎಸೆದು ಕನ್ನಡ ಪುಸ್ತಕ ತೆರೆದಿಡುವಂತೆ ಹೇಳುತ್ತಾರೆ .ಎಲ್ಲ ಮಕ್ಕಳೂ ಹಾಗೆ ಮಾಡುತ್ತಾರೆ ಆದರೆ ಹನಿಯ ಮನಸಿನಲ್ಲಿಯೂ ತನಗಾದ ಅವಮಾನದ ವಿರುದ್ಧ ಪ್ರತೀಕಾರದ ಮನೋಭಾವನೆ ಇತ್ತೋ ಅಥವಾ ಇದ್ದುದನ್ನು ಇದ್ದ ಹಾಗೆ ಹೇಳುವ ನೇರ ದಿಟ್ಟ ಸ್ವಭಾವ ವೋ ಏನೋ ,ಅವಳು ಸಮಾಜ ಶಾಸ್ತ್ರದ ಇಂಗ್ಲಿಷ್ ಪುಸ್ತವನ್ನು ಬಿಡಿಸಿ ಕುಳಿತುಕೊಳ್ಳುತ್ತಾಳೆ .ಅದು ವೀಕ್ಷಕರಿಗೆ ಸಿಗುತ್ತದೆ ಅವರು ನೀನು ಏನು ಓಡುತ್ತಿದ್ದೀಯ ಎಂದು ಕೇಳಿದಾಗ" ತಾನು ಇಂಗ್ಲಿಷ್ ಮೀಡಿಯಂ ನಲ್ಲಿ ಏಳನೇ ತರಗತಿ ಓದುತ್ತಿದ್ದೇನೆ "ಎಂಬ ಸತ್ಯವನ್ನು ತಿಳಿಸುತ್ತಾಳೆ .
ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಮಾಡುತ್ತಿರುವುದಕ್ಕೆ ಸ್ಪಷ್ಟ, ನೇರ ಸಾಕ್ಷಿ ದೊರೆತ ಅವರುಗಳು ಕೂಗಾಡುತ್ತಾರೆ.ನಂತರ ಅವರನ್ನು ಆಫೀಸ್ ರೂಂ ಗೆ ಕರೆದುಕೊಂಡು ಹೋಗಿ ದುಡ್ಡು ಕೊಟ್ಟು ಸರಿಪಡಿಸಲಾಗುತ್ತದೆ !

ಈಗ ಶಿಕ್ಷಕರ ಮ್ಯಾನೇಜ್ಮೆಂಟ್ ನವರ ಸಿಟ್ಟು ಹನಿ ಮೇಲೆ ತಿರುಗುತ್ತದೆ
ಇತ್ತ ಹನಿ ಯನ್ನು ಶಾಲೆಯಿಂದ ತೆಗೆದು ಹಾಕಿ ಟಿಸಿ ಕೊಟ್ಟು ಕಳುಹಿಸುತ್ತಾರೆ .
ನಂತರ ಅವಳು ತಾನು ಕನ್ನಡ ಶಾಲೆಗೆ ಹೋಗುತ್ತೇನೆ ಎಂದಾಗ ಹೆತ್ತವರ ತೀವ್ರ ವಿರೋಧ ಉಂಟಾಗುತ್ತದೆ .ಅವಳನ್ನು ರಕ್ಷಿಸಿದ ವಿಜ್ಞಾನಿ ಅವರು ಹೆತ್ತವರನ್ನು ಮನವೊಲಿಸಿ ಅವಳು ಇಷ್ಟ ಪಟ್ಟ ಸರ್ಕಾರಿ ಶಾಲೆಗೆ ಸೇರಿಸುತ್ತಾರೆ .
ಇಲ್ಲಿಂದ ಮತ್ತೆ ಕಥೆ ಸಂಪೂರ್ಣ ತಿರುವು ಪಡೆಯುತ್ತದೆ.

ಬದುಕಿನ ಪಾಠ, ಪರಿಸರದ ಶಿಕ್ಷಣ ,ಮಾನವೀಯತೆಯ ಅರಿವು ಎಲ್ಲವನ್ನು ಪಡೆಯುತ್ತಾ ಆ ಶಾಲೆಯಲ್ಲಿ ಹನಿ ಯ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ .ಮುಂದೊಂದು ದಿನ ರಾಜ್ಯ ಮಟ್ಟದ ಪ್ರಶಸ್ತಿಯನ್ನ ಪಡೆದಾಗ ಅವಳ ಹಿಂದಿನ ಶಾಲೆಯ ಶಿಕ್ಷಕರು ಮತ್ತು ಮ್ಯಾನೇಜ್ಮೆಂಟ್ ನ ಮಂದಿ ಅವಳನ್ನು ಮತ್ತೆ ತಮ್ಮ ಶಾಲೆಗೆ ಕರೆಯುತ್ತಾರೆ "ಡೊನೇಷನ್  ಫೀಸ್ ಯಾವುದೂ ಇಲ್ಲದೆ ಉಚಿತವಾಗಿ ಶಿಕ್ಷಣ ಕೊಡುತ್ತೇವೆ,ನಮ್ಮ ಶಾಲೆಗೆ ಬಾ ಎಂದು ಕರೆಯುತ್ತಾರೆ ..ಮುಂದೆ ಏನಾಯಿತು ಎಂಬುದು ಸಸ್ಪೆನ್ಸ್ ..

ಸಿನೆಮ ಅತ್ಯದ್ಭುತವಾಗಿ ಮೂಡಿ ಬಂದಿದೆ, ಅನಪೇಕ್ಷಿತ ವೈಭವೀಕರಣವಿಲ್ಲ ,ಅತ್ಯಂತ ಸರಳವಾಗಿ ನೇರವಾಗಿ ಮನಮುಟ್ಟುವಂತೆ ಕಥೆಯನ್ನು ನೆಯ್ಯಲಾಗಿದೆ.ಒಳ್ಳೆಯ ದೃಶ್ಯ ಸಂಯೋಜನೆ ,ಚುರುಕಿನ ಮಾತುಗಳು ಇವೆ, ಎಲ್ಲೂ ಒಂದಿನಿತು ಬೋರ್ ಅನಿಸುದೆ ಇಲ್ಲ .ಸಿನೆಮ ನೋಡಿದಾಗ ಒಂದು ಹನಿ ಕಣ್ಣೀರು ಒಸರದೆ ಇದ್ದರೆ ಅವರು ಮನವಿರುವ ಮನುಜರಲ್ಲ ಖಂಡಿತ!
.ಇದೊಂದು ಮಕ್ಕಳ ಸಿನೆಮ ಆದರೆ ಇದನ್ನು ಮಕ್ಕಳಿಗಿಂತ ಹೆಚ್ಚಾಗಿ ಶಿಕ್ಷಕರು ಮತ್ತು ಹೆತ್ತವರು ನೋಡಲೇ ಬೇಕಾಗಿದೆ.ಇದನ್ನು ಯಾಕೆ ನಾನು ಹೇಳಿದ್ದೇನೆ ಎಂಬುದು ಸಿನೆಮ ನೋಡಿದವರಿಗೆ ಮಾತ್ರ ಅರ್ಥವಗಬಹುದಷ್ಟೇ !ಹಾಗಾಗಿ
ಮಾತೃ ಭಾಷಾ ಶಿಕ್ಷಣದ ಮಹತ್ವವನ್ನು ಸಾರುವ ಕಾಡ ಹಾದಿಯ ಹೂಗಳು ಚಲನಚಿತ್ರದ  ಪ್ರದರ್ಶನವನ್ನು  ಎಲ್ಲ ಶಾಲಾ ಕಾಲೇಜ್ ಗಳಲ್ಲಿ  ಏರ್ಪಡಿಸಿ ಎಲ್ಲ ಶಿಕ್ಷಕರು ಮಕ್ಕಳು ಮತ್ತು ಹೆತ್ತವರಿಗೆ ತೋರಿಸುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ

ನಮ್ಮ ಭ್ರಷ್ಟ ವ್ಯವಸ್ಥೆಯ ದುರಂತ ಏನೆಂದರೆ ಸರ್ಕಾರಿ  ಶಾಲೆಗಳ. ಕನ್ನಡ ಭಾಷೆಯ ಉಳಿವಿಕೆಯ ಅಗತ್ಯ ಮತ್ತು ಅನಿವಾರ್ಯತೆಯನ್ನು ಸಾರುವ  ಉತ್ತಮ ಕಥೆಯ ಹಂದರವಿರುವ ದೃಶ್ಯ ಸಂಯೋಜನೆ,ಬೆಳಕಿನ ನಿರ್ವಹಣೆಯಿಂದ ಹಿಡಿದು ಎಲ್ಲ ವಿಧದಲ್ಲೂ ಉತ್ತಮವಾಗಿರುವ ಈ ಸಿನೆಮಾಕ್ಕೆ ಒಂದೇ ಒಂದು ಪ್ರಶಸ್ತಿ ಯನ್ನು ನೀಡಿಲ್ಲ !ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಇದು !
ಇದಕ್ಕೆ ಪ್ರಶಸ್ತಿ ನೀಡದ ಬಗ್ಗೆ ಒಂದಿನ ಖಂಡಿತ ಚಲನಚಿತ್ರ ಮಂಡಳಿ ಪಶ್ಚಾತ್ತಾಪ ಪಡಬೇಕಾಗಿ ಬರಬಹುದು  ಎಂದು ಈ ಚಲನ ಚಿತ್ರವನ್ನು ನೋಡಿದವರಿಗೆ ಅನಿಸುತದೆ ಖಂಡಿತ !

Sunday 27 March 2016

ದೊಡ್ಡವರ ಹಾದಿ -5 ಡಾ.ರಾಜಪ್ಪ ದಳವಾಯಿ ಅವರೊಂದಿಗೆ ಕೆಲವು ನಿಮಿಷಗಳು



ಇಂದು ಆಕಸ್ಮಿಕವಾಗಿ ಡಾ.ರಾಜಪ್ಪ ದಳವಾಯಿ ಅವರನ್ನು ಕಲಾಗ್ರಾಮದಲ್ಲಿ ಭೇಟಿಯಾದೆ ...ಅವರ ಅಸಾಧ್ಯ ನೆನಪಿನ ಶಕ್ತಿಗೆ ನಮೋ ನಮಃ

ಅನೇಕ ದಿನಗಳಿಂದ ರಾಜಪ್ಪ ದಳವಾಯಿ ಅವರೊಂದಿಗೆ ಮಾತನಾಡ ಬೇಕು ಎಂದು ಕೊಂಡಿದ್ದೆ ಅವರ ವಿದ್ಯಾರ್ಥಿನಿಯ ಮೂಲಕ ಅವರ ಫೋನ್ ನಂಬರ್ ಅನ್ನು ಕೂಡ ಪಡೆದುಕೊಂಡಿದ್ದೆ .ಆದರೂ ಯಾಕೋ ಮಾತನಾಡಿರಲಿಲ್ಲ .
ಇಂದು ಬೆಳಗ್ಗೆ ಭಾರತಿ ಬಿವಿ ಅವರು ರಚಿಸಿದ ಅನಾಹತ ನಾಟಕ ನೋಡಲು ಬೆಳಗ್ಗೆ ಕಲಾಗ್ರಾಮಕ್ಕೆ ಹೋದೆ .ಕಲಾಗ್ರಾಮ ಪ್ರವೇಶಿಸುತ್ತಿದ್ದಂತೆ ಒಂದು ಕುಟೀರದಲ್ಲಿ ಒಬ್ರು ಮೇಷ್ಟ್ರು ತನ್ನ ವಿದ್ಯಾರ್ಥಿಗಳೊಂದಿಗೆ ಏನೋ ಅಭ್ಯಾಸ ನಡೆಸುತ್ತಿದ್ದುದು ಗಮನಕ್ಕೆ ಬಂತು .ಮೇಷ್ಟ್ರನ್ನು ಎಲ್ಲೋ ನೋಡಿದ ಹಾಗೆ ಅನಿಸ್ತು .ಆದರೆ ಅದಾಗಲೇ ನಾಟಕ ಶುರು ಆಗೋ ಹೊತ್ತು ಆಗಿದ್ದ ಕಾರಣ ಅಲ್ಲಿ ನಿಲ್ಲದೆ ನೇರವಾಗಿ ಥಿಯೇಟರ್ ಬಳಿಗೆ ಹೋದೆ ,ನಾಟಕ ಮುಗಿಸಿ ಹಿಂದೆ ಬರುವಾಗಲೂ ಮೇಷ್ಟ್ರು ಮತ್ತು ವಿದ್ಯಾರ್ಥಿಗಳ ಅಭ್ಯಾಸ ಮುಂದುವರಿದೇ ಇದ್ದು .ನಂತರದ ನಾಟಕಕ್ಕೆ ಸುಮಾರು ಎರಡು ಗಂಟೆ ಕಾಲಾವಕಾಶ ಇತ್ತು ಹಾಗಾಗಿಯೇ ಅವರ ಅನುಮತಿ ಪಡೆದು ಅವರುಗಳ ಅಭ್ಯಾಸ ನೋಡುತ್ತಾ ಕುಳಿತೆ .ಇಂದು ಸಂಜೆ ಸಂಸ ರಂಗ ಮಂದಿರದಲ್ಲಿ ಅವರ ನೂತನ ವಿಶಿಷ್ಟ ರಂಗ ಪ್ರಯೋಗಕ್ಕೆ ಅವರು ತಯಾರಾಗುತ್ತಿದ್ದರು ಎಂದು ತಿಳಿಯಿತು .
ಅಷ್ಟರಲ್ಲಿ ಮೇಷ್ಟ್ರು ನನಲ್ಲಿ ನೀವು ಲಕ್ಷ್ಮೀ ಪ್ರಸಾದ ತಾನೇ ಎಂದು ಕೇಳಿ ಮಾತನಾಡಿದರು ನನಗೆ ಆಶ್ಚರ್ಯ !ಇದಾರು ನನ್ನ ಪರಿಚಯ ಇವರಿಗೆ ಹೇಗಪ್ಪ ಎಂದು !ನೀವು ಯಾರೆಂದು ಗೊತ್ತಾಗಲಿಲ್ಲ ಎಂದು ಪ್ರಾಮಾಣಿಕವಾಗಿ ನುಡಿದು  ನನ್ನ ಅಜ್ಞಾನವನ್ನು ಪೂರ್ತಿ ತೆರೆದಿಟ್ಟೆ .ಅವರು ಆಗ ತಾನು ರಾಜಪ್ಪ ದಳವಾಯಿ ಎಂದು ತಿಳಿಸಿದರು !
omg!ಅವರು ನನ್ನನ್ನು ಒಂದೇ ಒಂದು ಬಾರಿ ಬೆಳಗಾವಿಯಲ್ಲಿ ನೋಡಿದ್ದರು .ಎರಡು ಮೂರು ವರ್ಷಗಳ ಮೊದಲು ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಡೆಸಿದ ಸಂದರ್ಶನವೆಂಬ ನಾಟಕಕ್ಕೆ ನಾನು ಹಾಜರಾಗಿದ್ದೆ.ಅಂದು ಪರೀಕ್ಷಕರಾಗಿ ಅಲ್ಲಿನ ಪ್ರಾಧ್ಯಾಪಕರಾಗಿದ್ದ ದ.ರಾಜಪ್ಪ ದಳವಾಯಿ ಅವರೂ ಇದ್ದರು .
ಒಮ್ಮೆ ಮಾತ್ರ ನನ್ನನ್ನು ನೋಡಿದ್ದ ಅವರು ಅವರು ನನ್ನನ್ನು ಗುರುತು ಹಿಡಿದರು !ಅವರ ಅಪಾರ ನೆನಪಿನ ಶಕ್ತಿಗೆ ನಮೋ ನಮಃ ,ಅವರು ಹೇಳದಿದ್ದರೆ ನನಗೆ ಅವರು ರಾಜಪ್ಪ ದಳವಾಯಿ ಎಂದು ಖಂಡಿತಾ ಗೊತ್ತಾಗುತ್ತಿರಲಿಲ್ಲ !
ರಾಜಪ್ಪ ದಳವಾಯಿ ಅವರು ನನ್ನ ಬದುಕಿನ ಒಂದು ವಿಚಾರದಲ್ಲಿ ನನಗೆ ಪ್ರೇರಣೆ ಯಾದವರು .ವಿಶ್ವ ವಿದ್ಯಾಲಯವೊಂದರಲ್ಲಿ ಅವರು ಅರ್ಹರಾಗಿದ್ದರೂ ಅವರನ್ನು ಬಿಟ್ಟು ಬೇರೆ ಯಾರನ್ನೋ ಆಯ್ಕೆ ಮಾಡಿದಾಗ ನ್ಯಾಯಾಲಯದಲ್ಲಿ ದಾವೆ ಹೂಡಿ ದೀರ್ಘ ಕಾಲ ಹೋರಾಡಿ ಅವರು ಗೆಲುವನ್ನು ಪಡೆದಿರುವ ವಿಚಾರ ನನಗೆ ಯಾರ ಮೂಲಕವೋ ತಿಳಿದಿತ್ತು.
ಅವರನ್ನು ನೆನೆಸಿಕೊಂಡೇ ನಾನು ಮಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ಅಕ್ರಮ ನೇಮಕಾತಿ ಬಗ್ಗೆ ಧ್ವನಿಎತ್ತಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇನೆ.ಒಂದಿನ ಗೆದ್ದೇ ಗೆಲ್ಲುತ್ತೇನೆ ಎಂಬ ನಂಬಿಕೆಯಲ್ಲಿ
ಹಾಗಾಗಿ ನನಗೆ ಅವರನ್ನು ಭೇಟಿ ಮಾಡಬೇಕು ಮಾತಾಡಬೇಕು ಎಂದು ಇತ್ತು ಇಂದು ಆಕಸ್ಮಿಕವಾಗಿ ಸಿಕ್ಕಿದ್ದು ತುಂಬಾ ಖುಷಿ ಆಯ್ತು'


Friday 18 March 2016

ನಮಗೇಕೆ ನಮ್ಮ ಭಾಷೆ ಬಗ್ಗೆ ಕೀಳರಿಮೆ (C)ಡಾ.ಲಕ್ಷ್ಮೀ ಜಿ ಪ್ರಸಾದ (18 ಮಾರ್ಚ್ 2016 ರಂದು ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿತ ಬರಹ )




ನಮಗೇಕೆ ನಮ್ಮ ಭಾಷೆ ಬಗ್ಗೆ ಕೀಳರಿಮೆ ?

ಕೆಲವರ್ಷಗಳ ಹಿಂದಿನ ಮಾತಿದು . ಆತ ಬೆಂಗಳೂರಿನ ಪ್ರತಿಷ್ಟಿತ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್ ವೇರ್ ಎಂಜಿನಿಯರ್ ,ಆತನನ್ನು ನನ್ನ ಸಹೋದರ ಪರಿಚಯಿಸಿದಾಗ,ಆತನೊಡನೆ ಇಂಗ್ಲಿಷ್ ನಲ್ಲಿ (ನನಗೆ ಗೊತ್ತಿರುವಷ್ಟರ ಮಟ್ಟಿಗಿನ  ಇಂಗ್ಲಿಷ್ ನಲ್ಲಿ !) ಮಾತನಾಡ ತೊಡಗಿದೆ.ಅಷ್ಟರಲ್ಲಿ ನನ್ನ ಸಹೋದರ ನನ್ನ ಕಿವಿಯಲ್ಲಿ “ಆತನಿಗೆ ಇಂಗ್ಲಿಷ್ ಅಷ್ಟು ಸರಿಯಾಗಿ ಬರುವುದಿಲ್ಲ “ಎಂದುಸುರಿದ!

ನನಗೆ ಬಹಳ ಆಶ್ಚರ್ಯವಾಯಿತು.”ಇಂಗ್ಲಿಷ್ ಬರದಿದ್ದರೆ ಮತ್ತೆ ಆತ ನಿಮ್ಮ ಕಂಪನಿಯ ಕೆಲಸಕ್ಕೆ ಹೇಗೆ ಆಯ್ಕೆ ಆದ?” ಎಂದು ಮನೆಗೆ ಬಂದ ಮೇಲೆ ನನ್ನ ಸಹೋದರನಲ್ಲಿ ವಿಚಾರಿಸಿದೆ. ಆತ ಹೊರ ರಾಜ್ಯದ ಅಭ್ಯರ್ಥಿ .ಹೊರ ರಾಜ್ಯಗಳಲ್ಲಿ ನಡೆಸುವ ಸಂದರ್ಶನಗಳಲ್ಲಿ ಇಂಗ್ಲಿಷ್ ಅಷ್ಟೇನೂ ಅನಿವಾರ್ಯವಲ್ಲ.ವಿಷಯ ಜ್ಞಾನ ಇದ್ದರೆ ಸಾಕು.ಅವರು ಆಯ್ಕೆಯಾಗುತ್ತಾರೆ.ಆದ್ದರಿಂದ ಅವರುಗಳಿಗೆ ಇಂಗ್ಲಿಷ್ ಓದಿ ಅರ್ಥಮಾಡಿಕೊಳ್ಳುವಷ್ಟು ತಿಳಿದಿದ್ದರೆ ಸಾಕಗುತ್ತದೆ”ಎಂಬ ಉತ್ತರ ದೊರೆಯಿತು .ಆಗ ಇನ್ನಷ್ಟು ಆಶ್ಚರ್ಯದಿಂದ ಇನ್ನಷ್ಟು ಪ್ರಶ್ನೆಗಳನ್ನು ಕೇಳಿದೆ.ಆಗ ಜನಸಾಮಾನ್ಯರ ಕಲ್ಪನೆಗೆ ಕೂಡ ನಿಲುಕದ ಮಾಹಿತಿಗಳು ಸಿಕ್ಕವು.

ಹೌದು ,ಸಾಫ್ಟ್ ವೇರ್ ಸೇರಿದಂತೆ ಯಾವುದೇ ಇಂಜಿನಿಯರುಗಳಿಗೆ ಕೂಡ ಇಂಗ್ಲಿಷಿನ ಜ್ಞಾನ ಅನಿವಾರ್ಯವೇನಲ್ಲ.ವಿಷಯ ಜ್ಞಾನ ಇದ್ದರೆ ಸಾಕು .ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕನ್ನಡಿಗರು ಮಾತ್ರ ಸಹೋದ್ಯೋಗಿಗಳಲ್ಲಿ ಮತ್ತು ಮೇಲಧಿಕಾರಿರಿಗಳಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ.ಅವರಿಗೆ ಕನ್ನಡ ತಿಳಿದಿದ್ದರೂ ಕೂಡ ! ಇತರ ಭಾಷಿಗರು ಪರಸ್ಪರ ಮಾತೃ ಭಾಷೆಯಲ್ಲಿಯೇ ಸಂಭಾಷಿಸುತ್ತಾರೆ.ಹಿರಿಯ ಅಧಿಕಾರಿಗಳು ಅವರ ಮಾತೃ ಭಾಷೆಯವರಾಗಿದ್ದರೆ ಅವರಲ್ಲೂ ಕೂಡ ಅದೇ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ.ಇತರ ರಾಜ್ಯಗಳಲ್ಲಿ ಸಂದರ್ಶನ ನಡೆಸುವಾಗ ಇಂಗ್ಲಿಷ್ ಜೊತೆಯಲ್ಲಿ ಆಯಾಯ ರಾಜ್ಯ ಭಾಷೆಗಳಲ್ಲಿಯೂ ಉತ್ತರಿಸುವ ಅವಕಾಶ ಇರುತ್ತದೆ.ಅಲ್ಲಿ ವಿಷಯ ಜ್ಞಾನ ಮುಖ್ಯವಾಗುತ್ತದೆಯೇ ಹೊರತು ಇಂಗ್ಲಿಷ್ ಭಾಷೆಯಲ್ಲ.

ಆದರೆ ನಮ್ಮಲ್ಲಿ ಪ್ರಧಾನ ಅರ್ಹತೆಯೇ ಇಂಗ್ಲಿಷ್ ಭಾಷೆ ,ಆಮೇಲೆ ಉಳಿದವುಗಳೆಲ್ಲ,

ಒಂದೆರಡು ವರ್ಷಗಳ ಹಿಂದೆ ಬೆಂಗಳೂರಿನ ಒಂದು ಪ್ರತಿಷ್ಠಿತ ಕಾಲೇಜ್ ನಲ್ಲಿ ಒಂದು ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದ್ದರು.ನಾನೂ ಒಂದು ಪ್ರಬಂಧ ಮಂಡಿಸಲು ಹೋಗಿದ್ದೆ .ಅಲ್ಲಿಗೆ ಉದ್ಘಾಟಕರಾಗಿ ಕನ್ನಡ ಸಾಹಿತ್ಯದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ, ವಿದ್ವಾಂಸರು ಆಗಮಿಸಿದ್ದರು .ತಮ್ಮ ಭಾಷಣದ ಆರಂಭದಲ್ಲಿಯೇ “ನಾನು ಕನ್ನಡದಲ್ಲಿ ಮಾತನಾಡುವುದು ಇಲ್ಲಿ ಪ್ರಸ್ತುತವಾಗುತ್ತದೋ ಇಲ್ಲವೋ ಎಂದು ಹೇಳುತ್ತಾ ಅಳುಕಿನಿಂದಲೇ ಕನ್ನಡದಲ್ಲಿ ಮಾತನಾಡಿದರು .ಅಂತರಾಷ್ಟ್ರೀಯ ವಿಚಾರ ಸಂಕಿರಣ ಆದ ಮಾತ್ರಕ್ಕೆ ಇಂಗ್ಲಿಷಲ್ಲೇ ಮಾತನಾಡ ಬೇಕು ಎಂದು ಏನಿದೆ ?ಅದು ಏರ್ಪಾಟು ಆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ .ಅಲ್ಲಿಗೆ ಆಗಮಿಸಿದ ಹೆಚ್ಚಿನ ಮಂದಿ ಕನ್ನಡಿಗರೇ .ಹಾಗಿದ್ದೂ ಕನ್ನಡೇತರರು ಬಂದಿದ್ದರೆ ಇವರ ಮಾತುಗಳನ್ನು ಅನುವಾದಿಸುವ ವ್ಯವಸ್ಥೆ ಮಾಡಬೇಕೇ ಹೊರತು ಕನ್ನಡ ನಾಡಿನಲ್ಲಿ ಆಗುವ ವಿಚಾರ ಸಂಕಿರಣದಲ್ಲಿ ಕನ್ನಡದಲ್ಲಿ ಮಾತನಾಡಲು ಅಳುಕುವುದು ಯಾಕೆ ?ಜ್ಞಾನ ಪೀಠ ಪುರಸ್ಕೃತರಾದವರೇ ಕನ್ನಡ ಭಾಷೆಯಲ್ಲಿ ಮಾತನಾಡಲು ಹೆಮ್ಮೆ ಪಡುವ ಬದಲು  ಅದರ ಪ್ರಸ್ತುತತೆ ಬಗ್ಗೆ ಅಳುಕು ವ್ಯಕ್ತ ಪಡಿಸಿದರೆ ಇತರರು ಯಾರಾದರೂ ಕನ್ನಡದಲ್ಲಿ ಮಾತನಾಡುವ ಸಾಹಸವನ್ನು ತೋರಿಯಾರೆ ?ನಮಗೇಕೆ ನಮ್ಮ ಭಾಷೆ ಬಗ್ಗೆ ಕೀಳರಿಮೆ ?

ಜನರೇಕೆ ಇಂಗ್ಲಿಷ್ ಬಯಸುತ್ತಾರೆ ?ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುತ್ತಾರೆ ?ಎಂಬ ಪಶ್ನೆಗೆ ಉತ್ತರ ಬಯಸಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ಅನೇಕ ಮಕ್ಕಳ ಹೆತ್ತವರಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಅನೇಕ ರೀತಿಯ ಉತ್ತರಗಳು ದೊರೆತವು.

“ ಇಂಗ್ಲಿಷ್ ಒಂದು ಅಂತರಾಷ್ಟ್ರೀಯ ಭಾಷೆ ,ಆದ್ದರಿಂದ ನಾನು ನನ್ನ ಮಗನನ್ನು ಇಂಗ್ಲಿಷ್ ಮೀಡಿಯಾ ಶಾಲೆಗೆ ಹಾಕಿದ್ದೇನೆ” ಎನ್ನುತ್ತಾರೆ ಶಿಕ್ಷಕಿಯಾಗಿರುವ ಸುಜಾತಾ.. ವಸ್ತ್ರದ ಮಳಿಗೆ ಇಟ್ಟುಕೊಂಡಿರುವ ಸುದೇಶ್ ಕುಮಾರ್.’ನನ್ನ ಮಗನನ್ನು ಇಂಜಿನಿಯರಿಂಗ್ ಓದಿಸಬೇಕಿಂದಿದ್ದೇನೆ .ಅದಕ್ಕೆ ಇಂಗ್ಲಿಷ್  ಜ್ಞಾನ ಚೆನ್ನಾಗಿರಬೇಕು.ಹಾಗಾಗಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿದ್ದೇನೆ’ಎನ್ನುತ್ತಾರೆ..

“ನನ್ನದು ಪದೇ ಪದೇ ವರ್ಗವಾಗುವ ಕೆಲಸ.ಒಂದೂರಿನಿಂದ ಇನ್ನೊಂದು ಊರಿಗೆ ಹೋಗುವಾಗ ಭಾಷೆಯ ತೊಡಕು ಉಂಟಾಗುತ್ತದೆ.ಅದಕ್ಕೆ ನಾನು ಮಗಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದೇನೆ “ ಎನ್ನುತ್ತಾರೆ ಬ್ಯಾಂಕ್ ಒಂದರಲ್ಲಿ ಆಫೀಸರ್ ಆಗಿರುವ ಸತೀಶ್ ಶೆಟ್ಟಿ ಅವರು.

 ”ನಾನು ರಾಜ್ಯ ಶಾಸ್ತ್ರದಲ್ಲಿ ಎಂ ಎ ಓದಿದ್ದು ಉತ್ತಮ ಅಂಕಗಳನ್ನು ಗಳಿಸಿದ್ದೇನೆ .ಆದರೆ ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದು ನನಗೆ ಇಂಗ್ಲಿಷ್ ನಲ್ಲಿ ನಿರರ್ಗಳತೆ ಇಲ್ಲ.ನನಗೆ ಇಂಗ್ಲಿಷ್ ಓದಲು ಬರೆಯಲು ಸ್ವಲ್ಪ ಮಟ್ಟಿಗೆ ಮಾತನಾಡಲೂ ಬರುತ್ತದೆ ಆದರೆ ತೀರ ನಿರರ್ಗಳತೆಇಲ್ಲ.ಈ ಕಾರಣಕ್ಕೆ ಸಂದರ್ಶನಕ್ಕೆ ಹೋದೆಡೆಯೆಲ್ಲ ನಾನು ಸೋತಿದ್ದೇನೆ.ಅಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ನನ್ನ ಸ್ನೇಹಿತರೆಲ್ಲ ಒಳ್ಳೊಳ್ಳೆಯ ಕೆಲಸ ಪಡೆದು ಆರಾಮಾಗಿದ್ದಾರೆ.ನಾನು ಮಾತ್ರ ಕೆಲಸ ಸಿಕ್ಕದೆ ನಿರುದ್ಯೋಗಿಯಾಗಿ ಉಳಿದೆ.ಆದ್ದರಿಂದ  ನನ್ನ ಮಗನಿಗೆ ಈ ಸಮಸ್ಯೆ ಬರಬಾರದೆಂದು ಅವನನ್ನು ಇಂಗ್ಲಿಷ್ ಶಾಲೆಗೆ ಸೇರಿಸಿದ್ದೇನೆ” ಎನ್ನುತ್ತಾ ತಮ್ಮ ಅಳಲನ್ನು ಬಿಚ್ಚಿಡುತ್ತಾರೆ ಕೃಷಿಕರಾಗಿರುವ ಗಣೇಶ ಭಟ್ಟರು.

“ನನಗೆ ಎಸ್ ಎಸ್ ಎಲ್ ಸಿ ಯಲ್ಲಿ 9೦ % ಅಂಕಗಳು ಬಂದಿದ್ದವು .ನಾನು ಪಿ.ಯು.ಸಿ ಯಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಿದ್ದೆ.ನಾನು ಪಿ.ಯು.ಸಿ ಓದುತ್ತಿದ ಕಾಲೇಜ್ ನಲ್ಲಿ ಎಲ್ಲರೂ ನನ್ನ ಹಾಗೆ ಕನ್ನಡ ಮಾಧ್ಯಮದಲ್ಲಿ ಓದಿ ಬಂದವರೇ ಆಗಿದ್ದರೂ ಅಲ್ಲಿಯ ಶಿಕ್ಷಕರು ಯಾರೂ ಕೂಡ ಕನ್ನಡದಲ್ಲಿ ಸ್ವಲ್ಪ ಕೂಡ ಪಾಠ ಮಾಡುತ್ತಿರಲಿಲ್ಲ ,ಪರಿಣಾಮವಾಗಿ ತರಗತಿಯಲ್ಲಿ  ಒಬ್ಬಿಬ್ಬರು ಆಲ್ಲಿಂದಲ್ಲಿಗೆ  ಪಾಸ್ ಆದ್ದು ಬಿಟ್ಟರೆ ಉಳಿದವರೆಲ್ಲ ನಪಾಸು!ನಾನು ಕೂಡ! .ಓದಿ ಪ್ರೊಫೆಸರ್ ಆಗಬೇಕೆಂದು ಕೊಂಡಿದ್ದ ನನ್ನ ಕನಸೆಲ್ಲ ಹಾಳು ಇಂಗ್ಲಿಷ್ ಅರ್ಥವಾಗದ ಕಾರಣ ನೀರಾಗಿ ಹೋಯ್ತು.ನನ್ನ ಮಕ್ಕಳು ನನ್ನಂತೆ ಕಷ್ಟ ಪಡುವುದು ಬೇಡ ಎಂದು ಅವರನ್ನು ಇಂಗ್ಲಿಷ್ ಶಾಲೆಗೆ ಹಾಕಿದ್ದೇನೆ “ಎಂದು ಕಣ್ಣೊರೆಸಿಕೊಂಡು ಹೇಳುತ್ತಾರೆ  ಗೃಹಿಣಿ ವಿದ್ಯಾ  ಅವರು.

“ನನ್ನ ಅಕ್ಕನ ಮಗನಿಗೆ ಹತ್ತನೆಯ ತರಗತಿಯಲ್ಲಿ ಶೇ.85 ಮಾರ್ಕ್ಸ್ ಬಂದಿತ್ತು,ಆದರೆ ಅವನು ಕನ್ನಡ ಮೀಡಿಯಂ ನಲ್ಲಿ ಓದಿದ ಕಾರಣ ಅವನಿಗೆ ಪಿ.ಯು.ಸಿಯಲ್ಲಿ ಇಂಗ್ಲಿಷ್ ನಲ್ಲಿ ಮಾಡುವ ಪಾಠಗಳು ಅರ್ಥವಾಗಲಿಲ್ಲ.ಅವನು ಪಿ.ಯು.ಸಿ.ಯಲ್ಲಿ ಫೈಲ್ ಆಗಿದ್ದಾನೆ.ಅಷ್ಟು ಜಾಣ ಇದ್ದೋನು ಇಂಗ್ಲಿಷ್ ಅರ್ಥ ಆಗದೆ ಫೈಲ್ ಆದ.ಆದ್ರಿಂದ ನನ್ನ ಮಗಳಿಗೆ ಈ ಸಮಸ್ಯೆ ಬರಬಾರದು ಅಂತ ಇಂಗ್ಲಿಷ್ ಶಾಲೆಗೆ ಹಾಕಿದ್ದೇನೆ “ಅಂತಾರೆ ಬಾಲಕೃಷ್ಣ ನಾಯಕ್.

“ನನ್ನ ಮಗನ್ನ ಮುಂದೆ ಫಾರಿನ್ ನಲ್ಲಿ ಓದಿಸಬೇಕು ಅಂತ ಇದ್ದೇನೆ ಅದಕ್ಕಾಗಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಹಾಕಿದ್ದೇನೆ “ಎನ್ನುತ್ತಾರೆ ಶ್ರೀಮಂತ ಉದ್ಯಮಿ ನಾರಾಯಣ ರೈ.

‘ಮುಂದೆ ಫಾರಿನ್ ಗೆ ಹೋಗುವಾಗೆಲ್ಲ ತೊಂದರೆಯಾಗುತ್ತೆ ಅದಕ್ಕೆ ಈಗಲೇ ಇಂಗ್ಲಿಷ್ ಶಾಲೆಗೆ ಹಾಕಿದ್ದೇನೆ’ ಎನ್ನುತ್ತಾರೆ ತಾರಾನಾಥ ಅವರು.’ಈಗ ಫ್ಯೂನ್ ಕೆಲ್ಸಕ್ಕೆ ಕೂಡ ಇಂಗ್ಲಿಷ್ ನಲ್ಲಿ ಸಂದರ್ಶನ ನಡೆಸುತ್ತಾರೆ.ಹಾಗಿರೋವಾಗ ನಮ್ ಮಕ್ಳನ್ನು ಕನ್ನಡ ಶಾಲೆಗೆ ಹಾಕಿದರೆ ಅವರಿಗೆ ಕೆಲಸಾನೆ ಸಿಗೋದಿಲ್ಲ.ಅದಕ್ಕೆ ಇಂಗ್ಲಿಷ್ ಶಾಲೆಗೆ ಹಾಕಿದ್ದೇವೆ’ ಎನ್ನುತ್ತಾರೆ ಅಕೌಂಟೆಂಟ್ ಆಗಿರುವ ಸಿದ್ಧಪ್ಪ ಅವರು.

“ಈಗಂತೂ ಕಂಪ್ಯೂಟರ್ ಕಲಿದಿದ್ರೆ ಬೆಲೆ ಇಲ್ಲ.ಕಂಪ್ಯೂಟರ್ ಕಲಿಕೆಗೆ ಇಂಗ್ಲಿಷ್ ಬೇಕೇ ಬೇಕು.ಅದಕ್ಕೆ ಮಕ್ಳನ್ನು ಇಂಗ್ಲಿಷ್ ಸ್ಕೂಲ್ ಗೆ ಸೇರಿಸಿದ್ದೇನೆ’ ಎನ್ನುತ್ತಾರೆ ಶಾಲಿನಿ ಅವರು.ಇವರೆಲ್ಲರ ಅಭಿಪ್ರಾಯವನ್ನು ನೋಡಿದಾಗ ಎಲ್ಲರೂ ತಮ್ಮ ಮಕ್ಕಳಿಗೆ ಭವಿಷ್ಯಕ್ಕೆ ತೊಂದರೆಯಾಗ ಬಾರದು ಎಂಬ ಕಾರಣಕ್ಕೆ ಇಂಗ್ಲಿಷ್ ಶಾಲೆಗೆ ಹಾಕಿರುವುದು ಕಂಡು ಬರುತ್ತದೆ.ಕನ್ನಡ ಮಾಧ್ಯಮದಲ್ಲಿ ಓದಿ ಉತ್ತಮ ಅಂಕ ಗಿಟ್ಟಿಸಿರುವ ಅನೇಕ ವಿದ್ಯಾರ್ಥಿಗಳು ಪಿ.ಯು.ಸಿಯಲ್ಲಿ ವಿಫಲರಾಗುವುದನ್ನು ಗಮನಿಸುವಾಗ ಹೆತ್ತವರ ಭಯ ಆತಂಕ ಕೇವಲ ಭ್ರಮೆ ಎಂದೆನಿಸುವುದಿಲ್ಲ.

ಇಂದು ಬ್ಯಾಂಕ್ ನಿಂದ ಹಿಡಿದು ಸಾಫ್ಟ್ ವೇರ್ ಕಂಪನಿಗಳ ತನಕ ಕರ್ನಾಟಕದಲ್ಲಿ ಇಂಗ್ಲಿಷ್ ನಲ್ಲಿಯೇ ಸಂದರ್ಶನ ನಡೆಸುತ್ತಿದ್ದಾರೆ.ಭಾಷೆಯ ತೊಡಕಿನಿಂದಾಗಿ ತಮಗೆ ತಿಳಿದಿರುವ ವಿಚಾರಗಳನ್ನು ಅಭಿವ್ಯಕ್ತ ಗೊಳಿಸಲು ಕನ್ನಡ ಮಾಧ್ಯಮ ಓದಿದ ಅನೇಕ ಮಕ್ಕಳಿಗೆ ಕಷ್ಟಕರವಾಗುತ್ತಿದೆ.ಅಟೆಂಡರ್ ಕೆಲಸಕ್ಕೆ ಅರ್ಜಿ ಆಹ್ವಾನಿಸುವಾಗ ಕೂಡ ‘Fluency in English is must’ಅಂತ ಹಾಕಿರುವುದನ್ನು ನಾವು ಎಲ್ಲೆಡೆ ನೋಡುತ್ತೇವೆ.

ಎಂದಿನ ವರೆಗೆ ನಮ್ಮ ರಾಜ್ಯದಲ್ಲಿ ಸರಕಾರೀ ಹಾಗೂ ಸರಕಾರೇತರ ಸಂಸ್ಥೆಗಳು ಕೆಲಸಕ್ಕೆ ಸಂದರ್ಶನವನ್ನು ಇಂಗ್ಲಿಷ್ ನಲ್ಲಿ ಮಾಡುತ್ತವೆಯೋ ಅಲ್ಲಿಯ ತನಕ ಕನ್ನಡ ಮಾಧ್ಯಮದಲ್ಲಿ ಓದಿದವರ ಭವಿಷ್ಯಕ್ಕೆ ಅಭದ್ರತೆ ಕಾಡುತ್ತಾ ಇರುತ್ತದೆ.ಇಂಗ್ಲಿಷ್ ನಲ್ಲಿ ನಿರರ್ಗಳತೆ ಉಂಟಾಗಬೇಕಿದ್ದರೆ ಪ್ರಾಥಮಿಕ ಶಿಕ್ಷಣದಿಂದಲೇ ಇಂಗ್ಲಿಷ್ ಅನ್ನು ಕಲಿಯಲೇ ಬೇಕಾಗುತ್ತದೆ.ಕೇವಲ ಭಾಷೆಯಾಗಿ ಮಾತ್ರವಲ್ಲ,ಮಾಧ್ಯಮವಾಗಿಯೂ ಕಲಿಯುವುದು ಅನಿವಾರ್ಯವಾಗುತ್ತದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸುಲಭ ಸಾಧ್ಯವಾಗುತ್ತದೆ.ಒಳ್ಳೆಯ ಕೆಲಸ ಹೊಂದಲು ಸಾಧ್ಯವಾಗುತ್ತದೆ.ಕನ್ನಡ ಮಾಧ್ಯಮದಲ್ಲಿ ಕಲಿತವರು ಹಿಂದೆ ಬೀಳಬೇಕಾಗುತ್ತದೆ.

ಆದರೆ ಹೀಗಾದಾಗ  ಕನ್ನಡವನ್ನು ಉಳಿಸಿಕೊಳ್ಳುವುದು ಕನಸಿನ ಗಂಟಾಗಿ ಪರಿಣಮಿಸುತ್ತದೆ.

ಅಲ್ಲದೆ ’ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕಲಿತರೆ ಮಾತ್ರ ಸೃಜನ ಶೀಲತೆ’ ಉಂಟಾಗುತ್ತದೆ ಎಂದು ಅನೇಕ ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಾರೆ.ಮಾತೃ ಭಾಷೆಯಲ್ಲದ ಪರಕೀಯ ಭಾಷೆಯಲ್ಲಿ ಕಲಿಯುವ ಮಗುವಿಗೆ ಕಲಿಕೆ ಒಂದು ದೊಡ್ಡ ಹೊರೆಯಾಗುತ್ತದೆ. ಸ್ಪೆಲ್ಲಿಂಗ್, ಶಬ್ದ,ವಾಕ್ಯ ಎಲ್ಲವನ್ನೂ ಬಾಯಿ ಪಾಠ ಮಾಡಬೇಕಾಗುತ್ತದೆ.ಇದರಿಂದ ಮಗುವಿನ ಶಕ್ತಿ ಸೃಜನ ಶೀಲತೆ ಕಳೆದು ಹೋಗುತ್ತದೆ .

ಪ್ರಾಥಮಿಕ ಶಿಕ್ಷಣಕ್ಕೆ ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದು ಇದಕ್ಕೆ ಇರುವ ಏಕೈಕ ಪರಿಹಾರ.ಜೊತೆಗೆ ಇಂಜಿನಿಯರಿಂಗ್ ಮೆಡಿಕಲ್ ನಂಥಹ ಉನ್ನತ ಶಿಕ್ಷಣ ಕೂಡ ಕನ್ನಡದಲ್ಲಿ ಲಭ್ಯವಾಗಬೇಕು.ಕೊನೆಯ ಪಕ್ಷ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಪಿ.ಯು ಕಾಲೇಜ್ ಗಳಲ್ಲಿಯಾದರೂ ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಬೋಧಿಸಬೇಕು,ಬರೆಯಲೂ ಅವಕಾಶ ಮಾಡಿಕೊಡಬೇಕು.ಉನ್ನತ ಶಿಕ್ಷಣಗಳಲ್ಲಿ ಇಂಗ್ಲಿಷ್ ಭಾಷೆಯ ಕಾರಣಕ್ಕೆ ಅಂಕಗಳನ್ನು ಕಡಿಮೆ ಕೊಡಬಾರದು .ವಿಷಯ ಜ್ಞಾನಕ್ಕೆ ಮಾತ್ರ ಪ್ರಾಧಾನ್ಯತೆ ಇರಬೇಕು.

ಪ್ರಾಥಮಿಕ ಶಿಕ್ಷಣ ಕನ್ನಡ ಮಧ್ಯಮ ಕಡ್ಡಾಯ ಮಾಡುವಾಗ ಕೇವಲ ರಾಜ್ಯ ಸಿಲಬಸ್ ಮಾತ್ರವಲ್ಲ ಸೆಂಟ್ರಲ್ ಮತ್ತು ಐಸಿಎಸ್ ಸಿ ಶಾಲೆಗಳಿಗೂ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು.ಇಲ್ಲವಾದಲ್ಲಿ ಮತ್ತೆ ಉಳ್ಳವರ ಮಕ್ಕಳು ಎಲ್ಲರೂ ದುಬಾರಿ ಶುಲ್ಕ ತೆತ್ತು  ಎಲ್ಲರೂ ಇದೇ ಶಾಲೆಗಳಿಗೆ ಹೋಗುತ್ತಾರೆ .ಅವರು ಇಂಗ್ಲಿಷ್ ನಲ್ಲಿ ಕಲಿಯುತ್ತಾರೆ.ಕನ್ನಡದಲ್ಲಿ ಕಲಿತ ಬಡ ಮಕ್ಕಳು ಮತ್ತೆ ಹಿಂದೆ ಬೀಳುತ್ತಾರೆ.

ಆದರೆ ಇಲ್ಲೊಂದು ಸಮಸ್ಯೆ ಉದ್ಭವಿಸುತ್ತದೆ.ಬ್ಯಾಂಕ್ ಹಾಗೂ ಕೆಲವು ವರ್ಗವಾಗುವ ಕೆಲಸವಿರುವವರ ಮಕ್ಕಳ ವಿದ್ಯಾಭ್ಯಾಸದ ಗತಿ ಏನು ?ಇದಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗ ರಾಜ್ಯದ ಒಳಗೆ ವರ್ಗಾವಣೆ ಪಡೆಯಬಹುದು.ಅದಕ್ಕೂ ಕಷ್ಟವಾದರೆ ಹಾಸ್ಟೆಲ್ ಗಳಲ್ಲಿ ಹಾಕಿ ಓದಿಸಬಹುದು .ದೀರ್ಘ ಕಾಲ ಇಲ್ಲಿಯೇ ಇರುವುದಾದರೆ ಕನ್ನಡ ಕಲಿಸಿದರೆ ಆಯಿತು .ಮನೆಯಲ್ಲಿಯೇ ಕನ್ನಡ ಮಾತನಾಡಲು ಓದಲು ಬರೆಯಲು ಕಲಿಸಿದರೆ ಈ ಸಮಸ್ಯೆಯೇ ಇರುವುದಿಲ್ಲ.ಎಳೆಯ ಮಕ್ಕಳು ಬೇಗ ಭಾಷೆಯನ್ನು ಕಲಿಯುತ್ತಾರೆ.ಒಂದೆರಡು ತಿಂಗಳುಗಳಲ್ಲಿ ಹೊಂದಿಕೊಳ್ಳುತ್ತಾರೆ.ಆದರೆ ಹೆತ್ತವರಿಗೆ ಕನ್ನಡ ಕಲಿಸುವ ಮನಸು ಇರಬೇಕು ಅಷ್ಟೇ .


ಕೆಲವೇ ಕೆಲವು ಮಂದಿ ವರ್ಗವಾಗುವ ಕೆಲಸ ಉಳ್ಳವರ ಮಕ್ಕಳಿಗಾಗಿ ಸೆಂಟ್ರಲ್ ಹಾಗೂ ಐ.ಸಿ.ಎಸ್.ಸಿ ಶಾಲೆಗಳಿಗೆ ಕನ್ನಡ ಮಾಧ್ಯಮದಿಂದ ವಿನಾಯತಿ ನೀಡಿದರೆ ಪುನಃ ಕನ್ನಡದ ಮಕ್ಕಳಿಗೆ ಅನ್ಯಾಯವಾಗುತ್ತದೆ.ಉಳ್ಳವರು ಇಂಥಹ ಶಾಲೆಗೆ ಸೇರಿಸುತ್ತಾರೆ.ಪುನಃ ಕನ್ನಡಕ್ಕೆ ಸಂಚಕಾರ ಬರುತ್ತದೆ.ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ಪಡೆದ ಶಾಲೆಗಳಲ್ಲಿ ಕೂಡ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು.ರಾಜ್ಯದಾದ್ಯಂತ ಏಕ ರೀತಿಯ ಪ್ರಾಥಮಿಕ ಶಿಕ್ಷಣ ಜಾರಿಗೆ ತರಬೇಕು.ಇದಕ್ಕೆ ಭಾಷಾ ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೂ ವಿನಾಯತಿ ಇರಬಾರದು.ಆಗ ಮಾತ್ರ ಕನ್ನಡ ಸದಾ  ಕಾಲ ಉಳಿಯಲು ಸಾಧ್ಯ.ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮ ಕಡ್ಡಾಯ ಯದೊಂದಿಗೆ ಮೆಡಿಕಲ್,ಇಂಜಿನಿಯರಿಂಗ್ ಸೇರಿದಂತೆ ಎಲ್ಲ ಉನ್ನತ ಶಿಕ್ಷಣಕ್ಕೂ ಕನ್ನಡ ಮಾಧ್ಯಮದಲ್ಲಿ ಕಲಿಯಲು ಅವಕಾಶ ನೀಡಬೇಕು ಅದಕ್ಕೆ ಬೇಕಾದ ಪಾಠ ಪುಸ್ತಕಗಳನ್ನು ಕನ್ನಡದಲ್ಲಿ ಮುದ್ರಿಸಬೇಕು.

ಪ್ರಸ್ತುತ  ಪಿ.ಯು.ಸಿ.ಯಲ್ಲಿ ಕೂಡ ವಿಜ್ಞಾನ ಶಿಕ್ಷಣದ ಬೋಧನೆ ಕನ್ನಡದಲ್ಲಿ ಲಭ್ಯವಿಲ್ಲದಾಗಿದೆ.ಇಂಜಿನಿಯರಿಂಗ್ ಮೆಡಿಕಲ್ ಪಾಲಿಟೆಕ್ನಿಕ್ ಮೊದಲಾದೆಡೆ ಉತ್ತರಿಸಿದ  ಇಂಗ್ಲಿಷ್ ಭಾಷೆ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆಕಡಿಮೆ  ಅಂಕಗಳನ್ನು ನೀಡುವುದು ಎಲ್ಲೆಡೆ ಕಂಡು ಬರುತ್ತದೆ.ಇದು ಬದಲಾಗಬೇಕು.ವಿಷಯ ಜ್ಞಾನಕ್ಕೆ ಅಂಕ ನೀಡಬೇಕೇ ಹೊರತು ಭಾಷಾ ಜ್ಞಾನಕ್ಕಲ್ಲ.

.ಹಾಗೆಯೇ ಇಂಗ್ಲಿಷ್ ಭಾಷೆ ಕೂಡ ಇಂದಿನ ಕಾಲಕ್ಕೆ ಅಗತ್ಯವಾಗಿದೆ. ಅದಕ್ಕೂ ಗಮನಕೊಡಬೇಕಾಗಿದೆ.ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆ ಇದೆ. ಆದರೆ  ಕೇವಲ ಒಂದು ಭಾಷೆಯಾಗಿ ಇಂಗ್ಲಿಷ್ ಅನ್ನು ಒಂದನೇ ತರಗತಿಯಿಂದ ಕಲಿತ ಮಾತ್ರಕ್ಕೆ ಭಾಷೆಯಲ್ಲಿ ನಿರರ್ಗಳತೆ ಸಾಧಿಸಲು ಸಾಧ್ಯವಿಲ್ಲ.ಈ ಹಂಡೆ ಕೂಡ ಐದನೇ ತರಗತಿಯಿಂದ ಇಂಗ್ಲಿಷ್ ಇತ್ತು ಆದರೆ ಇಲ್ಲಿ ಕೇವಲ ಅಕ್ಷರ ಕಲಿಕೆ ಹಾಗೂ ಪಾಠದಲ್ಲಿರುವುದನ್ನು ಬಾಯಿ ಪಾಠ ಮಾಡಿ ಬರೆಯುವ ವ್ಯವಸ್ಥೆ ಇದೆಯೇ ಹೊರತು ಇಂಗ್ಲಿಷ್ ಮಾತನಾಡಲು ಹೇಳಿ ಕೊಡುವ ಪಾಠ ಪದ್ಧತಿ ಇಲ್ಲ .ಇದಕ್ಕೆ “ಅಕ್ಷರ0 ಸಂಸ್ಕ್ರತ ಪ್ರತಿಷ್ಠಾನವು ಕೇವಲ ಹತ್ತು ದಿನಗಳಲ್ಲಿ ಸಂಸ್ಕೃತ ದಲ್ಲಿ  ಮಾತನಾಡಲು ಕಲಿಸಲು ಒಂದು ವಿಶಿಷ್ಟ ವಿಧಾನವನ್ನು ಕಂಡುಕೊಂಡಂತೆ” ಇಂಗ್ಲಿಷ್ ನಲ್ಲಿ ಮಾತನಾಡಲು ಕಲಿಸಲು ಒಂದು ಹೊಸತಾದ ಸುಲಭದ ಕಲಿಕಾ ವಿಧಾನವನ್ನು ಕಂಡು ಹಿಡಿಯಬೇಕಾಗಿದೆ.

.
‘’ಕನ್ನಡ ಮಾಧ್ಯಮದಲ್ಲಿ ಓದಿದರೂ ಕೂಡ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಸಮನಾಗಿ ಇಂಗ್ಲಿಷ್ ಮಾತನಾಡಬಲ್ಲರು.ಕನ್ನಡ ಮಾಧ್ಯಮದಲ್ಲಿ ಓದಿದರೂ ಕೂಡ ಉನ್ನತ ಶಿಕ್ಷಣಕ್ಕೆ ಯಾವುದೇ ತೊಡಕು ಉಂಟಾಗುವುದಿಲ್ಲ ,ಅದು ಕಷ್ಟಕರವೂ ಆಗುವುದಿಲ್ಲ “ಎಂಬ ಭರವಸೆ ದೊರೆತರೆ ದುಬಾರಿ ಶುಲ್ಕ ಕೊಟ್ಟು ಯಾರೂ ಕೂಡ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸುವುದಿಲ್ಲ.ಯಾರೂ ಕೂಡ ಇಂಗ್ಲಿಷ್ ವ್ಯಾಮೋಹಕ್ಕೆ ಸಿಲುಕಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹಾಕುವುದಿಲ್ಲ.
ಉನ್ನತ ಶಿಕ್ಷಣಕ್ಕೆ ತೊಡಕಾಗಬಾರದೆಂದು ಪ್ರೌಢ ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮ ಆಯ್ಕೆ ಮಾಡುತ್ತಾರೆ.ಪ್ರೌಢ ಶಾಲೆಯಲ್ಲಿ ಹಿಂದೆ ಬಿದ್ದರೆ ಎಂದು ಪ್ರಾಥಮಿಕ ಶಿಕ್ಷಣವನ್ನೂ ಇಂಗ್ಲಿಷ್ ಮಾಧ್ಯಮದಲ್ಲಿಯೇ ಕೊಡಿಸುತ್ತಾರೆ.ಎಲ್ ಕೆ ಜಿ,ಯು.ಕೆ.ಜಿ ಓದದಿದ್ದರೆ ಫಸ್ಟ್ ಸ್ಟ್ಯಾಂಡರ್ಡ್ ಗೆ ಸೀಟು ದೊರೆಯುವುದಿಲ್ಲ ಎಂದು ನರ್ಸರಿಗೆ ಸೇರಿಸುತ್ತಾರೆ.ನರ್ಸರಿ ಯಲ್ಲಿ ಕಷ್ಟವಾಗಬಾರದೆಂದು ಪ್ರಿ ನರ್ಸರಿ ಗೆ ಹಾಕುತ್ತಾರೆ.
ಶಾಲೆಯಲ್ಲಿ ಇಂಗ್ಲಿಷ್ ಅರ್ಥ ಆಗದೆ ತಮ್ಮ  ಮಗು ಹಿಂದೆ ಬೀಳುವುದು ಬೇಡ ಎಂದು ಮನೆಯಲ್ಲಿ ಇಂಗ್ಲಿಷ್ ಮಾತನಾಡುತ್ತಾರೆ.ಇದಕ್ಕೋಸ್ಕರ ಇಂಗ್ಲಿಷ್ ಬಾರದ ಹೆತ್ತವರು ಅನೇಕರು ಸ್ಪೋಕನ್ ಇಂಗ್ಲಿಷ್ ತರಗತಿಗಳಿಗೆ ಹೋಗಿ ಇಂಗ್ಲಿಷ್ ಕಲಿಯುತ್ತಿದ್ದಾರೆ.
ಇವೆಲ್ಲದರ ಮೂಲದಲ್ಲಿ ತಮ್ಮ ಮಕ್ಕಳ ಭವಿಷ್ಯದ ಕುರಿತಾದ ಅಭದ್ರತೆಯ ಆತಂಕ ಇದೆ .ಈ ಅಭದ್ರತೆಯ ಭಾವನೆಯನ್ನು ಹೋಗಲಾಡಿಸಿದರೆ ಎಲ್ಲರೂ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ತಮ್ಮ ಮಕ್ಕಳನ್ನು ಓದಿಸುತ್ತಾರೆ.ಆಗ ಕನ್ನಡ ಉಳಿಯುತ್ತದೆ
ಅದಕ್ಕಾಗಿ ರಾಜ್ಯದಾದ್ಯಂತ ಏಕ ರೂಪದ ಪ್ರಾಥಮಿಕ ಶಿಕ್ಷಣ ಅದರಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು . ಆಗ ಮಾತ್ರ ಕನ್ನಡ ಸದಾ ಕಾಲ ರಾರಾಜಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಕನ್ನಡ ಮನಸುಗಳು ಒಂದಾಗಿ ಸಂಘಟಿತರಾಗಿ ಹೋರಾಡುವ ಅನಿವಾರ್ಯತೆ ಇದೆ.

 



ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು ಮತ್ತು ಸಂಶೋಧಕರು
ಸರ್ಕಾರಿ ಪದವಿ ಪೂರ್ವ ಕಾಲೇಜ್ .ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ