Sunday 8 November 2015


ಧನ್ಯತೆಯ ಕ್ಷಣಗಳು..1 ಚಿನ್ಮಯಾ ಪ್ರೌಢ ಶಾಲೆಯ ಮೆಲುಕುಗಳು 

ಯಾರಿಗೂ ಯಶಸ್ಸೆನ್ನುವುದು ದಿಡೀರ್ ಎಂದು ಬರುವುದಿಲ್ಲ,ನಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಸಾಗಿದಂತೆ ,ಅನುಭವ ನಮ್ಮನ್ನು ಗಟ್ಟಿ ಮಾಡುತ್ತಾ ಹೋಗುತ್ತದೆ ,ಪರಿಣತಿ ಯಸಸ್ಸನ್ನು ನಿದಾನಕ್ಕೆ ತಂದು ಕೊಡುತ್ತದೆ

ನಾನು ಮೊದಲಿಗೆ ಕಲ್ಲಡ್ಕ ದ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದೆ .ನಂತರ ಸಂತ ಅಲೊಶಯಅಸ್ ಮಹಾ ವಿದ್ಯಾಲಯದಲ್ಲಿ ಅರೆ ಕಾಲಿಕ ಉಪನ್ಯಾಸಕಿಯಾಗಿ ಎರಡು ವರ್ಷ ದುಡಿದೆ
ನಂತರ ನಾಲ್ಕು ವರ್ಷ ಮಂಗಳೂರಿನ ಚಿನ್ಮಯ ಹೈ ಸ್ಕೂಲ್ನಲ್ಲಿ ಸಂಸ್ಕೃತ ಮತ್ತು ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡಿದೆ .
ಬಹುಶ ವೃತ್ತಿ ಜೀವನಕ್ಕೆ ಒಂದು ಬಲವಾದ ಅಡಿಪಾಯವನ್ನು ಪಡೆದದ್ದು ನಾನು ಇಲ್ಲಿಯೇ .ಅಲ್ಲಿನ ಶಿಕ್ಷಕರ ಬದ್ಧತೆಯನ್ನು ಯಾರು ಕೂಡ ಮೆಚ್ಚಬೇಕಾದದ್ದೇ

ಖಾಸಗಿ ಸಂಸ್ಥೆಯಾದ ಕಾರಣ ದೊಡ್ಡ ವೇತನ ಏನೂ ಇರಲಿಲ್ಲ ಆದರೆ ಅಲ್ಲಿನ ಶಿಕ್ಷಕಿಯರ ಶ್ರದ್ಧೆ ಜೀವನೋತ್ಸಾಹ ಸದಾ ಮಾದರಿಯಾದದ್ದು ಸಮಾಜ ಶಾಸ್ತ್ರ ಪಾಠ ಮಾಡುತ್ತಿದ್ದ ಶ್ರೀಮತಿ ಅರುಣ ನೋಡಲು ಮೂರ್ತಿ ಚಿಕ್ಕದು ಆದರೆ ಪ್ರತಿಭೆ ತಾದಾಮ್ತ್ಯತೆ ಮಾತ್ರ ದೊಡ್ಡದು
ಪ್ರತಿ ವರ್ಷ ಅಲ್ಲಿನ ಮಕ್ಕಳಿಗೆ ನಾಟಕ ಭಾಷಣ ಪ್ರಬಂಧ ಹಾಡು ಹಸೆ ಹೇಳಿಕೊಟ್ಟು ಎಲ್ಲ ಕಡೆ ಕರೆದುಕೊಂಡು ಹೋಗಿ ಬಹುಮಾನಗಳ ಸುರಿಮಳೆಯನ್ನೇ ತರಿಸುತ್ತಿದ್ದರು ವಿದ್ಯಾರ್ಥಿಗಳಿಗೆ ಬಹುಮಾನಗಳ ಸುರಿಮಳೆ ಸಂಸ್ಥೆಗೆ ಹೆಸರು ಆದರೆ ಇಂದಿಗೂ ಅವರು ಎಲೆಮರೆಯ ಕಾಯಿ ಹಾಗೆಂದು ಅವರೆಂದೂ ಹೆಸರಿನ ಬಗ್ಗೆ ತಲೆಕೆದಿಸಿಯೇ ಕೊಂಡವರಲ್ಲ

ಅಲ್ಲಿನ ಇನ್ನೋರ್ವ ಶಿಕ್ಷಕಿ ಶ್ರೀಮತಿ ಶಾಂತಾ ಆಚಾರ್ ಇವರು ದೊಡ್ಡ ಸಂಗೀತಜ್ಞೆ ,ಶಾಸ್ತ್ರೀಯಸಂಗೀತದಲ್ಲಿ ಸೀನಿಯರ್ ಆಗಿತ್ತು ವಿದ್ವತ್ ಗೆ ಅಧ್ಯಯನ ಮಾಡುತ್ತಾ ಇದ್ದರು .
ಗಂಡ ಬ್ಯಾಂಕ್ ನಲ್ಲಿ ಮ್ಯಾನೇಜರ್ ,ಒಬ್ಬ ಮಗ ಕೆ ಎಂ ಸಿ ಯಲ್ಲಿ ಪ್ರೊಫೆಸರ್ ,ಇನ್ನೊಬ್ಬಮಗ ಸಾಫ್ಟವೇರ್ ಇಂಜಿನೀಯರ್
ಆರ್ಥಿಕವಾಗಿ ಸದೃಢರಾಗಿದ್ದ ಅವರಿಗೆ ಶಾಲೆಯಲ್ಲಿ ಸಿಗುತ್ತಿದ್ದ ವೇತನ ನಿಜಕ್ಕೂ ನಗಣ್ಯವಾಡುದು ,
ಆದರೆ ಅವರೆಂದೂ ತಮ್ಮ ಕಾಯಕದಲ್ಲಿ ಒಂದಿನಿತು ಅಸಡ್ಡೆ ತೋರಿದವರಲ್ಲ .ಬಿಎಬಿಎಡ್  ಎಂ ಎ ಓದಿದ್ದರೂ ತಮಗೆ ಕೊಟ್ಟ ಮೂರನೆ ತರಗತಿ ಮಕ್ಕಳಿಗೆ ಶ್ರದ್ಧೆಯಿಂದ ಪಾಠ ಮಾಡುತ್ತಿದ್ದರು
 ವಾರದಲ್ಲಿ ಒಂದೆರಡು ಅವಧಿ ಮಕ್ಕಳಿಗೆ ಉಚಿತವಾಗಿ ಸಂಗೀತ ಹೇಳಿಕೊಡುತ್ತ ಇದ್ದರು .
ಮಕ್ಕಳಿಗೆ ಭಾವಗೀತೆ ಭಕ್ತಿ ಗೀತೆ ಹೇಳಿಕೊಟ್ಟು ಎಲ್ಲೆಡೆ ಸ್ಪರ್ಧೆಗಳಿಗೆ ಕರೆದುಕೊಂಡು ಹೋಗಿ ಬಹುಮಾನಗಳ ಪ್ರವಾಹ ಹರಿದು ಬರುವ ಹಾಗೆ ಮಾಡುತ್ತಿದ್ದರು .ಇವರಡು ಕೂಡ ನಿಸ್ವಾರ್ಥ ಸೇವೆ ,ತಮ ಕಾರ್ಯಕ್ಕೆ ಎಂದೂ ಮನ್ನಣೆಗಳನ್ನು ಬಯಸಿದವರೇ ಅಲ್ಲ 

ಶ್ರೀಮತಿ ಶುಭ ಏಳನೇ ತರಗತಿ ಶಿಕ್ಷಕಿ ಆಗಿದ್ದು ಜೊತೆಗೆ ಅಲ್ಲಿ ಗೈಡ್ (ಸ್ಕೌಟ್ ಅಂಡ್ ಗೈಡ್ ) ಆಗಿ ಸೇವೆ ಸಲ್ಲಿಸುತ್ತಾ ಇದ್ದರು .ಗೈಡ್ ಆಗಿ ಮಕ್ಕಳನ್ನು ಕ್ಯಾಂಪ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದರು ತರಬೇತಿ ನೀಡುತ್ತಿದ್ದರು 
ಅದೇ ರೀತಿ ಶ್ರೀಮತಿ ಮೋಹಿನಿ ಎರಡೆನೇ ತರಗತಿ ಶಿಕ್ಷಕಿ ಆಗಿದ್ದರು ಅಷ್ಟು ಸಣ್ಣ ಮಕ್ಕಳಿಗೆ ತರಬೇತಿನೀಡಿ ಅದ್ಭುತವಾದನೃತ್ಯ ಹಾಡುಗಳ ಪ್ರದರ್ಶನವನ್ನು ಶಾಲಾ ವಾರ್ಷಿಕೋತ್ಸವದಲ್ಲಿ ಮಾಡಿಸುತ ಇದ್ದರು ತಮ್ಮ ಮಕ್ಕಳಿಂದ 

ಶ್ರೀಮತಿ ಲೆನೆಟ್ ಯು ಕೆಜಿ ಶಿಕ್ಷಕಿ,ಎಂತ ಮಕ್ಕಳಿಗೂ ಹೇಳಿಕೊಡುವ ಅಸಮಾನ್ಯ ಸಾಮರ್ಥ್ಯ ಇವರಲ್ಲಿದೆ ,ಕಲಿಕೆಯಲ್ಲಿ ಹಿಂದುಳಿದಿದ್ದ ನನ್ನ ಮಗ ಅರವಿಂದ ನಿಗೆ ಹೇಳಿಕೊಟ್ಟು ಜಾಣ ವಿದ್ಯಾರ್ಥಿ ಮಾಡಿ ಕೊಟ್ಟದ್ದು ಅವರೇ 
ಇಲ್ಲಿನ ಗಣಿತ ಶಿಕ್ಷಕ ಕೃಷ್ಣ ಉಪಾಧ್ಯ ಬಹಳ ಪರಿಣಿತ ಶಿಕ್ಷಕರಾಗಿದ್ದು  ಕಬ್ಬಿಣದ ಕಡಲೆ ಕಾಯಿ ಗಣಿತವನ್ನು ಅಂಗೈ ಯ ನೆಲ್ಲಿಕಾಯಿ ಯಂತೆ ಪರಿವರ್ತಿಸಿ ಸುಲಲಿತವಾಗಿ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡುತ್ತಿದ್ದರು ಒಳ್ಳೆಯ ಉದ್ಘೋಷಕರೂ ಆಗಿದ್ದರು.
ಮಂಗಳೂರಿನ ಖಾಸಗಿ ಚಾನೆಲ್ cc india ದಲ್ಲಿ ಮನೋಹರ ಪ್ರಸಾದ್ ನಡೆಸಿಕೊಡುವ ಅತ್ಯಂತ ಜನಪ್ರಿಯ ನೇರ ಪ್ರಸಾರದ  ಜನಮನ ಎಂಬ ಕಾರ್ಯಕ್ರಮದಲ್ಲಿ ಪರೀಕ್ಷೆಗೆ ಸಿದ್ಧರಾಗುವುದು ಹೇಗೆ ಎಂಬ ಬಗ್ಗೆ  ನಾವಿಬ್ಬರೂ ಆಹ್ವಾನಿತರಾಗಿ ದ್ದು ಜೊತೆಯಲ್ಲಿಯೇ ಭಾಗವಹಿಸಿ ಎರಡು ಗಂಟೆಗಳ ಕಾಲ ಪ್ರಶ್ನೆಗಳಿಗೆ ಉತ್ತರಿಸುತ್ತಾ ನೋಡುಗ  ಶ್ರೋತೃಗಳಿಗೆ ಮಾಹಿತಿ ನೀಡಿದ್ದು ಒಂದು ಅವಿಸ್ಮರಣೀಯ ವಿಚಾರ.ಈಗ ಕೃಷ್ಣ ಉಪಾಧ್ಯರು ಮಂಗಳೂರಿನ ಮಧುಸೂದನ ಕುಶೆ ಕಾಲೇಜ್ ನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರೆಲ್ಲರ ಜೀವನೋತ್ಸಾಹ ,ಕಾಯಕದ ಶ್ರದ್ಧೆ ತಾದಾತ್ಮ್ಯತೆ ನನ್ನಲ್ಲಿ ಅಗಾಧ ಪರಿಣಾಮ ಬೀರಿದೆ .ಬಹುಶ ವಿದ್ಯಾರ್ಥಿಗಳಿಗೆ ನಾಟಕ ಭಾಷಣ ಪ್ರಬಂಧ ಏಕ ಪಾತ್ರಾಭಿನಯ ಸೇರಿದಂತೆ ಅನೇಕ ವಿಷಯಗಳಲ್ಲಿ ತರಬೇತಿ ನೀಡಲು ನನಗೆ ಇವರುಗಳೇ ಪ್ರೇರಣೆ ಎಂದೆನಿಸುತ್ತದೆ .ವಿದ್ಯಾರ್ಥಿಗಳ ಗೆಲುವಿನಲ್ಲಿ ಧನ್ಯತೆಯನ್ನು ಕಾಣಲು ಇವರುಗಳೇ ಕಾರಣವಿರಬೇಕು
ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿಯೇ ಮೀಯಪದವಿನ ವಿದ್ಯಾ ವರ್ಧಕ ಶಾಲೆಯ ಶಿಕ್ಷಕರು ನನಗೆ ನಾಟಕ ನೃತ್ಯಗಳ ಬಗ್ಗೆ ಹೇಳಿಕೊಟ್ಟು ಬಹುಮಾನ ಬರುವ ಹಾಗೆ ಮಾಡಿದ್ದರು.ಹಾಗಾಗಿ ನನಗೆ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಚಾತುರ್ಯ ನನ್ನಲ್ಲಿತ್ತು .ಅದನ್ನು ಕಾರ್ಯ ರೂಪಕ್ಕೆ ತರಲು ಮಾದರಿಯಾದವರು ಈ ಶಾಲೆಯ ಶಿಕ್ಷಕಿಯರು .ಶಾಂತಾ ಆಚಾರ್ ಅವರು ನನ್ನ ನಾಟಕಗಳ ಹಾಡುಗಳಿಗೆ ರಾಗ ಸಂ ಯೋಜನೆಯನ್ನು ಮಾಡಿಕೊಡುತ್ತಾ ಪೂರ್ಣ ಬೆಂಬಲ ಕೊಟ್ಟಿದ್ದರು
ಇಲ್ಲಿನ ಮುಖ್ಯೋಪಾಧ್ಯಾಯಿನಿ ಶಕುಂತಲಾ ಸಾಂತ್ರಾಯ ಸ್ವತಹ ಕವಯಿತ್ರಿ ಆಗಿದ್ದು ಪ್ರತಿ ವರ್ಷ ವಾರ್ಷಿಕೋತ್ಸವಕ್ಕೆ ಒಂದು ಹಾಡು ಬರೆದು ಕೊಡುತ್ತಿದ್ದರು ಅದಕ್ಕೆ ರಾಗ ಸಂ ಯೋಜನೆ ಮಾಡಿ ಮಕ್ಕಳಲ್ಲಿ ಹಾಡಿಸುತ್ತ ಇದ್ದರು ಶಾಂತಾ ಆಚಾರ್ ,ಹಾಗಾಗಿ ನಮಗೆ ಮುಖ್ಯೋಪಾಧ್ಯಾಯಿನಿ ಅವರಿಂದ ನಮ್ಮ ಕಾರ್ಯಗಳಿಗೆ ಪೂರ್ಣ ಬೆಂಬಲವಿತ್ತು 

ಇದರಿಂದಾಗಿಯೇ ನಾನು ಅಲ್ಲಿದ್ದಾಗ ಅಲ್ಲಿನ ಮಕ್ಕಳಿಗಾಗಿಯೇ ರಚಿಸಿದ ನಾಟಕ ಹಸಿರು ಕರಗಿದಾಗ ಮತ್ತು ನೀರಕ್ಕನ ಮನೆ ಕಣಿವೆ ಗೆ ಹಲವಾರು ಬಹುಮನಗಳು ಬಂದವು .ಯಶಸ್ವಿ ಪ್ರದರ್ಶನಗಳನ್ನು ಕೂಡ ಕಂಡವು .
ನಾನು ತರಬೇತಿ ನೀಡಿದ ನನ್ನ ವಿದ್ಯಾರ್ಥಿಗಳು ಅನೇಕರು ಪ್ರತಿಭಾ ಕಾರಂಜಿ ಹಾಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ .ಅದರಲ್ಲೂ ಅಶ್ವಿನಿ ಸತತ ಮೂರೂ ವರ್ಷ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಪಡೆದಳು ಅಂತೆಯೇ ಅನುಷಾ ಮತ್ತು ದೀಪ್ತಿ ಕೂಡ ಪ್ರಬಂಧ ಮತ್ತು ಭಾಷಣಗಳಲ್ಲಿ ರಾಜ್ಯ ಮಟ್ಟ ದಲ್ಲಿ ಬಹುಮಾನ ಪಡೆದರು.ಅಂತೆಯೇ ಅನೇಕ ಮಕ್ಕಳು ಕ್ಲಸ್ಟರ್,ತಾಲೂಕು ಜಿಲ್ಲಾ ಮಟ್ಟದಲ್ಲಿ ಬಹುಮಾನಗಳನ್ನು ಪಡೆದರು 

ಇಲ್ಲಿನ ಶಿಕ್ಷಕಿಯರಲ್ಲಿ ಒಂದು ಅನೋನ್ಯತೆ ಹೊಂದಾಣಿಕೆ ಇತ್ತು ,ಒಬ್ಬರಿಗೊಬ್ಬರು ಬೆಂಬಲ ನೀಡುತ್ತ ಇದ್ದರು 
ನಾನು ಅಲ್ಲಿಗೆ ಸೇರುವ ಮೊದಲು ಮತ್ತು ನಂತರ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ ಹಾಗೂ ಈಗ ಸರ್ಕಾರಿ ಕಾಲೇಜ್ ನಲ್ಲಿ ಕೆಲಸ ಮಾಡುತ್ತಿದ್ದೇನೆ ಆದ ಚಿನ್ಮಯ ಶಾಲೆಯಲ್ಲಿನ ಸೌಹಾರ್ದತೆ,ಹೊಂದಾಣಿಕೆ,ಪರಸ್ಪರ ಪ್ರೀತಿ ವಿಶ್ವಾಸ ,ಅತ್ಮೀಯತೆಗಳನ್ನು  ನಾನು ಇತರೆಡೆಗಳಲ್ಲಿ ಕಾಣಲಿಲ್ಲ ಎಂದು ಖಂಡಿತವಾಗಿ ಹೇಳಬಲ್ಲೆ .



http://shikshanaloka.blogspot.in/2015/10/blog-post.html