Tuesday 11 August 2020

ಬರಹದ ಮಾನದಂಡ ಯಾವುದು ?

ಬರಹವನ್ನು ಅಳೆಯುವ ಮಾನದಂಡ ಯಾವುದು ? ಒಂದು ಬರಹ ಎಲ್ಲಿ ಪ್ರಕಟವಾಗುತ್ತದೆ ಎಂಬುದು ಮುಖ್ಯವಲ್ಲ..ಫೇಸ್ ಬುಕ್ ಬ್ಲಾಗ್ ನಲ್ಲಿ ಪ್ರಕಟಿಸಿದ ಕಾರಣಕ್ಕೆ ಕೃತಿ ಕಳಪೆಯಾಗುವುದಿಲ್ಲ ,ನವ ಕರ್ನಾಟಕ ಸಪ್ನಾ,ಅಂಕಿತದಂತಹ ಪ್ರತಿಷ್ಠಿತ ಪ್ರಕಾಶಕರು ಪ್ರಕಟಿಸಿದ ಕಾರಣಕ್ಕೆ ಶ್ರೇಷ್ಠವಾಗುವುದಿಲ್ಲ.. ಅಂತರ್ಜಾಲ ತಾಣಗಳ ಮೂಲಕ ಪ್ರಕಟಿಸುವುದು ಇತ್ತೀಚೆಗಿನ ಹೊಸ ದಾರಿ.. ನನ್ನ ಕೃತಿಗಳು ಪ್ರಕಾಶನದ ಮೂಲಕ ಪ್ರಕಟಗೊಂಡಿವೆ.ಹೆಚ್ಚಂದರೆ ಒಂದು ಸಾವಿರ ಪ್ರತಿ ಪ್ರಿಂಟ್ ಮಾಡುತ್ತಾರೆ.ಅದರಲ್ಲಿ ಹೆಚ್ಚಿನದು ಲೈಬ್ರರಿ ಗಳಿಗೆ ಹೋಗಿ ಮೂಲೆಯಲ್ಲಿ ಧೂಳು ಹಿಡಿದುಕೊಂಡು ಬಿದ್ದಿರುತ್ತದೆ , ಅದೇ ವಿಚಾರಗಳನ್ನು ನಾನು ಬ್ಲಾಗ್ ನಲ್ಲಿ ಹಾಕಿದ್ದು,ದೇಶ ವಿದೇಶಗಳ ಮೂರು ಲಕ್ಷ ಎಪ್ಪತ್ತೈದು ಸಾವಿರಕ್ಕಿಂತ ಹೆಚ್ಚಿನ ಆಸಕ್ತ ಓದುಗರನ್ನು ತಲುಪಿದೆ, ಬಹುಶಃ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಹಾಕಿದ್ದು ಕೂಡಾ ಒಂದೆಡೆಯಿಂದ ಇನ್ನೊಂದೆಡೆಗೆ ಶೇರ್ ಆಗುತ್ತಾ ಲಕ್ಷಕ್ಕಿಂತ ಹೆಚ್ಚು ಜನರಿಗೆ ತಲುಪಿರುವ ಸಾಧ್ಯತೆ ಇದೆ. ಬರೆಯುವ ಉದ್ದೇಶವೇ ಜನರು ಓದಬೇಕೆಂಬುದು. ಅಂತರ್ಜಾಲದಲ್ಲಿ ಹೆಚ್ಚು ಓದುಗರನ್ನು ತಲುಪುತ್ತದೆ. ಉತ್ತಮವಾದ್ದು ಆದರೆ ಎಲ್ಲೆಡೆ ಶೇರ್ ಆಗುತ್ತದೆ‌.ಇನ್ನಷ್ಟು ಹೆಚ್ಚಿನ ಓದುಗರನ್ನು ತಲುಪುತ್ತದೆ . ಆದರೆ ಕಾಲನ ವೇಗಕ್ಕೆ ಹೆಜ್ಜೆ ಹಾಕಲಾಗದವರು ಮಾತ್ರ ಬದಲಾವಣೆಯನ್ನು ಸ್ವಿಕರಿಸದೆ ಫೇಸ್ ಬುಕ್ ಸಾಹಿತ್ಯ ,ಬ್ಲಾಗ್ ಬರಹ ಎಂದು ಹೀಗಳೆಯುತ್ತಾರೆ‌. ಪುಸ್ತಕಗಳ ರೂಪದಲ್ಲಿ ಪ್ರಕಟವಾದ ಮಾತ್ರಕ್ಕೆ ಅದರ ಗುಣ ಮಟ್ಟ ಹೆಚ್ಚಾಗುದಿಲ್ಲ.. ಫೇಸ್ ಬುಕ್ ,ಬ್ಲಾಗ್ ನಲ್ಲಿ ಹಾಕಿದ ಮಾತ್ರಕ್ಕೆ ಗುಣಮಟ್ಟ ಕಡಿಮೆ ಆಗುವುದಿಲ್ಲ.. ಒಂದು ಗಮ್ಮತ್ತಿನ ವಿಚಾರ ಹೇಳ್ತೇನೆ,ನನ್ನ ಬ್ಲಾಗ್ ಬರಹಗಳನ್ನು ಯಥಾವತ್ ಆಗಿ ವಿಕಿಪೀಡಿಯಕ್ಕೆ ಹಾಕಿದ್ದು ,ನಾನು ಈ ಬಗ್ಗೆ ಆಕ್ಷೇಪ ಮಾಡಿದ್ದು ನಿಮಗೆಲ್ಲ ಗೊತ್ತು.ಬ್ಲಾಗ್ ಬರಹ ಆಗುತ್ತದೆ ,ಬ್ಲಾಗ್ ಲಿಂಕ್ ಉಲ್ಲೇಖದಲ್ಲಿ ಹಾಕಲು ಆಗುವುದಿಲ್ಲವಂತೆ.. ಒಂದೊಮ್ಮೆ ನಾನು ಇದನ್ನು ಬ್ಲಾಗ್ ನಿಂದ ತೆಗೆದು ವೆಬ್ ಗೆ ಹಾಕಿದರೆ ಆಗ ವೆಬ್ ನ ಉಲ್ಲೇಖ ಕೊಡಲು ಆಗುತ್ತದೆ ಅಂತೆ...ಇದೆಲ್ಲ ಕಾಲದ ಜೊತೆಯಲ್ಲಿ ಹೆಜ್ಜೆ ಹಾಕಲಾಗದವರ ಮೂರ್ಖತನ ಅಷ್ಟೇ .. ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವಧ್ಯಂ| ಸಂತಃ ಪರೀಕ್ಷ್ಯಾನ್ಯತರತ್ ಭಜಂತೇ ಮೂಢಃ ಪರಪ್ರತ್ಯಯನೇಯ ಬುದ್ದಿಃ|| ಕಾವ್ಯವು ಪ್ರಾಚೀನ ಎಂಬ ಕಾರಣಕ್ಕೆ ಶ್ರೇಷ್ಠವಲ್ಲ,ಹೊಸತು ಎಂಬುದಕ್ಕೆ ಕನಿಷ್ಠವಲ್ಲ ಸಜ್ಜನರು ಪರೀಕ್ಷಿಸಿ ತಿಳಿಯುತ್ತಾರೆ ಮೂಢರು ಇತರರು ಹೇಳಿದ್ದನ್ನು ನಂಬುತ್ತಾರೆ.- ಕಾಳಿದಾಸ ಅಂದು ಕವಿ ಕಾಳಿದಾಸ ಪ್ರಾಚೀನ ಅರ್ವಾಚೀನ ಎಂಬುದು ಕಾವ್ಯದ ಯೋಗ್ಯತೆಯನ್ನು ಅಳೆಯುವ ಮಾನದಂಡ ಅಲ್ಲ ಎಂದಿದ್ದಾನೆ‌.ಇಂದು ಎಲ್ಲಿ ಪ್ರಕಟವಾಗುತ್ತದೆ ಎಂಬುದು ಕಾವ್ಯದ ಸತ್ವವನ್ನು ಅಳೆಯುವ ಮಾನದಂಡವಲ್ಲ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ.- ಡಾ.ಲಕ್ಷ್ಮೀ ಜಿ ಪ್ರಸಾದ ಶ್ರೀನಾಥ ರಾಯಸಂ ಅವರ ಬರಹದಿಂದ ಪ್ರೇರಣೆಗೊಂಡು ನಾನು ಬರೆದಿರುವ ಬರಹವಿದು, ಅವರ ಬರಹವನ್ನು ಇಲ್ಲಿ ಓದಬಹುದು https://m.facebook.com/story.php?story_fbid=4180498492021174&id=100001831931254

Monday 10 August 2020

ನಾಚಿಕೆಯಿಂದ ತಲೆ ತಗ್ಗಿಸುವ ಹಾಗೆ ಆಗುತ್ತದೆ

ನನಗೆ ಈ ವಿಚಾರ ನೆನಪಾದಾಗೆಲ್ಲ ನಾಚಿಕೆಯಿಂದ ತಲೆ ತಗ್ಗಿಸುವ ಹಾಗೆ ಆಗುತ್ತದೆ.. 1988 ರಲ್ಲಿ ನಾನು ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪಾಸಾದೆ‌.ಅಳಿದೂರಲ್ಲಿ ಉಳಿದವರೇ ರಾಜ ಎಂಬ ಹಾಗೆ 70% ಬಂದದ್ದು ದೊಡ್ಡ ಸಾಧನೆಯೇ.. ನನ್ನ ಅಕ್ಕನಿಗೆ ಒಳ್ಳೆಯ ಮಾರ್ಕ್ಸ್ ಬಂದಿದ್ದರೂ ಕಾಲೇಜಿಗೆ ಕಳುಹಿಸಿರಲಿಲ್ಲ. ನಮ್ಮೂರಲ್ಲಿ ಆಗಷ್ಟೇ ಹುಡುಗಿಯರು ಕಾಲೇಜಿಗೆ ಹೋಗಲು ಶುರು ಮಾಡಿದ್ದರಷ್ಟೇ..ಪಾಸಾಗುದೇ ನೂರರಲ್ಲಿ ಹತ್ತಿಪ್ಪತ್ತು ಮಕ್ಕಳು.ಅದರಲ್ಲಿ ಹುಡುಗಿಯರ ಸಂಖ್ಯೆ ಬೆರಳೆಣಿಕೆಯಷ್ಟು. ಕಾಲೇಜಿಗೆ ಹೋಗುವವರು ಒಬ್ಬರೋ ಇಬ್ಬರೋ ಅಷ್ಟೇ, ಪದವಿಗೆ ಕಾಲಿಡುವಷ್ಟರಲ್ಲಿ‌ ಮದುವೆ ಹಾಗಾಗಿ ಪದವಿ ಪೂರ್ಣಗೊಳಿಸುತ್ತಿದ್ದವರ ಸಂಖ್ಯೆ ಐನೂರರಲ್ಲಿ ಒಬ್ಬರಾದರೆ ಸ್ನಾತಕೋತ್ತರ ಪದವಿ ಗಳಿಸುತ್ತಿದ್ದ ಹುಡುಗಿಯರು ಸಾವಿರದಲ್ಲಿ ಒಬ್ಬರು ಅಷ್ಟೇ, ಅಂತಹ ಅದೃಷ್ಟ ಶಾಲಿಗಳಲ್ಲಿ ನಾನು ಕೂಡ ಒಬ್ಬಳು ಎಂಬ ಸಂತಸ ನನ್ನದು ನನ್ನ ಕಾಲೇಜು ಓದಿಗೆ ಮನೆಯಲ್ಲಿ ಅಪ್ಪ ಅಮ್ಮನ ಪೂರ್ಣ ಒತ್ತಾಸೆ ಇತ್ತು. ನನ್ನ ತಂದೆಯವರಿಗೆ ತಮ್ಮ ಮಕ್ಕಳು ಮೊದಲ ರ‌್ಯಾಂಕ್ ತೆಗೆಯಬೇಕು ಎಂಬ ಮಹದಾಸೆ..ದುರದೃಷ್ಟಕ್ಕೆ ನನಗೆ ಒಂದೆರಡು ಮಾರ್ಕ್ ಗೆ ಮೊದಲ ಸ್ಥಾನ ತಪ್ಪಿ ಹೋಗುತ್ತಿತ್ತು.ಪ್ರತೀಬಾರಿ ಮಾರ್ಕ್ ಕಾರ್ಡ್ ತಂದಾಗಲೂ ತಂದೆಯವರು ರ‌್ಯಾಂಕಾ( ಅದರ ಅರ್ಥ ಮೊದಲ ರ‌‌‌್ಯಾಂಕಾ ಎಂದು) ಎಂದು ಕೇಳುತ್ತಿದ್ದರು.ನಾನು ಅಲ್ಲ ಎರಡನೇ ರ‌್ಯಾಂಕ್ ಎಂದು ಸಪ್ಪೆಯಾಗಿ ಹೇಳುದು ಮಾಮುಲಾಗಿತ್ತು.ತಂದೆ ತಾಯಿ ಅದಕ್ಕಾಗಿ ನಮ್ಮನ್ನು ಎಂದೂ ಬೈದದ್ದು ಇಲ್ಲ.. ಹಾಗೆ ನೋಡಿದರೆ ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಬರಲು ತಂದೆಯವರ ಕನಸೇ ಕಾರಣ.ನನಗೆ ತಂದೆಯವರ ಕನಸನ್ನು ( ಅದು ನನ್ನ ಕನಸು ಕೂಡ ಅಗಿತ್ತು) ಅದು ಕೊನೆಯ ಅವಕಾಶವಾಗಿತ್ತು. ನಾನು ಬಿಎಸ್ಸಿ ಮಾಡಿದ್ದು ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿತವಳು.ನಾನು ಕಟೀಲಿನಲ್ಲಿ ಎಂಎ ಗೆ ಸೇರಿದಾಗ ಅಲ್ಲಿ ನನಗೆ ಪ್ರಬಲ ಪ್ರತಿಸ್ಪರ್ಧಿಗಳಿದ್ದರು. ಸಂಸ್ಕೃತ ವನ್ನು ಐಚ್ಛಿಕವಾಗಿ ಕಲಿತು ಪದವಿಯಲ್ಲಿ ರ‌್ಯಾಂಕ್ ತೆಗೆದ ರಮಿತಾ ,ಶ್ರೀದೇವಿ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು. ಆದರೆ ಮನೆ ಮಂದಿಯನ್ನೆಲ್ಲ‌ ಎದುರು ಹಾಕಿಕೊಂಡು ವಿವಾಹದ ನಂತರ ಕಲಿಯ ಹೊರಟ ನನಗೆ ಮಾಡು ಇಲ್ಲವೇ ಮಡಿ ಎಂಬ ಚಾಲೆಂಜ್ ಆಗಿತ್ತು ಅದು..ಏನೊ ದೇವರ ದಯೆ..ತಂದೆಯವರ ಮೊದಲ ರ‌್ಯಾಮಕಿನ ಕನಸು ಈಡೇರಿತ್ತು. .ಇರಲಿ ನಾನೀಗ ಹೇಳಲು ಹೊರಟ ವಿಚಾರ ಇದಲ್ಲ. ಸಂಬಂಧಿಕರಲ್ಲಿ ಅನೇಕ ಹೆಣ್ಣುಮಕ್ಕಳು ಹೈಸ್ಕೂಲ್ ಮೆಟ್ಟಿಲು ಹತ್ತದವರು ಇದ್ದರು.ಮನೆಯಲ್ಲಿ ಬೆಂಬಲ ಇಲ್ಲದ ಕಾರಣವೋ ಇನ್ನೇನು ಕಾರಣವೋ ತಿಳಿಯದು.ಇವರೆಲ್ಲ ಕಲಿಕೆಯಲ್ಲಿ ಕೂಡ ಹಿಂದಿದ್ದರು. ಇವರೆಲ್ಲ ಕಾಲೇಜಿಗೆ ಹೋಗುವವರ ಬಗ್ಗೆ ಮರ್ಯಾದೆ ಇಲ್ಲದವರು ಎಂಬ ಭಾವನೆಯನ್ನು ಸಮಾಜದಲ್ಲಿ ಬಿತ್ತಿದ್ದರು.ಕಾಲೇಜಿಗೆ ಹೋಗುವ ಹುಡುಗಿಯರು ಹಾದರ ಮಾಡಲು ಹೋಗುವವರು ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇತ್ತು. ಬಹಳ ನಾಚಿಕೆಯ ವಿಚಾರ ಏನೆಂದರೆ ನಾವು ಕೂಡ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಸೀನಿಯರ್ ಹುಡುಗಿಯರು ಒಬ್ಬಿಬ್ಬರು ಕಾಲೇಜಿಗೆ ಹೋಗುತ್ತಿದ್ದು ಅವರುಗಳ ಬಗ್ಗೆ ಜನರು ಕೆಟ್ಟದಾಗಿ ಹೇಳುತ್ತಿದ್ದುದನ್ನು ನಾನು ಕೂಡ ನಂಬಿದ್ದೆ . ಅವಳ ರೇಟ್ ರಿಕ್ಷಾ ಸ್ಟ್ಯಾಂಡ್ ಬಳಿ ನಿಂತ ಎಲ್ಲರಿಗೂ ಗೊತ್ತಂತೆ.ಕಾಲೇಜು ಬಿಡುವುದನ್ನೇ ರಿಕ್ಷಾದವರು ಕಾಯ್ತಾ ಇದ್ದರಂತೆ..ಆ ಹೋಟೆಲಿನಲ್ಲಿ ಯಾರ್ಯಾರೋ ಇವರಿಗೆ ಕಾಯ್ತಾರಂತೆ...ಇತ್ಯಾದಿ ತೀರಾ ಕೊಳಕು ವಿಚಾರಗಳು..ಊರಿಡೀ ಕೆಲಸದವರು ಅವರಿವರು ಎಲ್ಲರೂ ನಮಗಿಂತ ಮೊದಲು ಕಾಲೇಜಿಗೆ ಹೋದ ಹುಡುಗಿಯರ ಬಗ್ಗೆ ವರ್ಣರಂಜಿತವಾಗಿ ತಾವೇ ನೋಡಿದವರಂತೆ ಹೇಳುತ್ತಿದ್ದರು.ನಾನು ಕೂಡ ಅದನ್ನು ನಂಬಿದ್ದೆ.ಅದಕ್ಕೆ ಸರಿಯಾಗಿ ಕೆಲವು ಹುಡುಗಿಯರು ಬಸ್ ಡ್ರೈವರ್ ಕಂಡಕ್ಟರ್ ಗಳಲ್ಲಿ ಚೆಲ್ಲು ಚೆಲ್ಲಾಗಿ ವರ್ತಿಸುತ್ತಿದ್ದರು ಬೇರೆ. ಯಾವಾಗ ನಾನು ಕಾಲೇಜಿಗೆ ಕಾಲಿಟ್ಟನೋ ಇದೆಲ್ಲವೂ ಸುಳ್ಳೆಂದು ಖಚಿತವಾಗಿ ತಿಳಿಯಿತು. ಆದರೆ ನಮ್ಮ ಬಗ್ಗೆಯೂ ಜನ ಹಾಗೇ ಅಡಿಕೊಂಡಿರ್ತಾರೆ.ಇತರರು ಅದನ್ನು ನಂಬಿರಲೂ ಸಾಕು.ಕಾಲೇಜಿಗೆ ಹೋಗುವ ನಮ್ಮನ್ನು ಕುಹಕದ ದೃಷ್ಟಿಯಿಂದ ನೋಡುತ್ತಿದ್ದಿದು ನಮಗೆ ಅರಿವಾಗುತ್ತಿತ್ತು. ಆದರೆ ನಾವು ಅಸಹಾಯಕರು.ಈ ಬಗ್ಗೆ ಏನಾದರೂ ಮನೆಯಲ್ಲಿ ಹೇಳಿದರೆ ಕಾಲೇಜಿಗೆ ಹೋಗುದೇ ಬೇಡ ಎಂದು ನಿಲ್ಲಿಸಿದರೆ ಎಂಬ ಆತಂಕ.. ನಮ್ಮ ಮೊದಲು ಕಾಲೇಜಿಗೆ ಕಾಲಿಟ್ಟ ನಮ್ಮ ಸೀನಿಯರ್ ಹುಡುಗಿಯರ ಬಗ್ಗೆ ಜನ ಕಾ್ಟಿದ ಕಥೆಯನ್ನು ನಾನೂ ನಂಬಿದ ಬಗ್ಗೆ ಅವರುಗಳ ಬಗ್ಗೆ ಕುಹಕದಿಂದ ಮಾತನಾಡಿದ ಬಗ್ಗೆ ನನಗೆ ನಂತರ ತುಂಬಾ ಪಶ್ಚಾತ್ತಾಪ ಆಗಿದೆ.ಆದರೆ ಹನ್ನೆರಡು ಹದಿನಾಲ್ಕರ ವಯಸ್ಸು.. ಸತ್ಯಾಸತ್ಯತೆಯನ್ನು ಅರಿಯುವ ಪ್ರಾಯ ಅಲ್ಲ..ಎಂದು ಸಮಾಧಾನ ಪಟ್ಟುಕೊಳ್ಳಲು ಯತ್ನ ಮಾಡುವೆನಾದರೂ ನನ್ನ ವರ್ತನೆ ಬಗ್ಗೆ ನೆನಪಾದಾಗ ನಾಚಿಕೆ ಆಗಿ ತಲೆ ತಗ್ಗಿಸುವ ಹಾಗೆ ಆಗುತ್ತದೆ.. ಊರವರೆಲ್ಲ ಹೇಳುದನ್ನು ಕೇಳಿ ನಾನು ಸಹಪಾಠಿಗಳಲ್ಲಿ ಅದನೇ ಹೇಳಿದ್ದೆ..ಮತ್ತು ನಾವೆಲ್ಲ ಕಾಲೇಜಿಗೆ ಮುಂದೆ ಹೋದಾಗ ಹಾಗೆ ಮಾಡದೇ ಕಲಿಯಬೇಕು ಎಂದಿದ್ದೆ ..ಛೇ‌. ಸದ್ಯ ಈಗ ಕಾಲ ಬದಲಾಗಿದೆ,ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆ ಪಡುವ ಕಾಲ ಬಂದಿದೆ ಎಂಬುದು ಸಂತಸದ ವಿಚಾರ. ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಾಗ ಈ ವಿಚಾರ ನೆನಪಾಯಿತು.

Saturday 8 August 2020

ಕಾಡಿದ ಕೊಕ್ಕಳಿಕೆ

ಕಾಡಿದ ಕೊಕ್ಕಳಿಕೆ..ಅವರ ಮಾತಿನಿಂದ ದೂರವಾಗಿತ್ತು‌ ನಾನು ಚಿಕ್ಕಂದಿನಿಂದಲೇ ನೇರವಾದ ಮಾತಿನವಳು..ಅದರ ಮಾತು ಹೇಳಿರೆ ಖಡಕ್ ಪೆಟ್ಟೊಂದು ತುಂಡೆರಡು ಅಂತ ನನ್ನ ಅಜ್ಜ ಬೇರೆಯವರಲ್ಲಿ ನನ್ನ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ತಿದ್ದರು.ಆಗ ಹಾಗೆಂದರೇನು ? ಯಾಕೆ ಹಾಗೆ ಹೇಳ್ತಾರೆ..ನನ್ನ ಯಾವ ಮಾತಿನ ಬಗ್ಗೆ ಹಾಗೆ ಹೇಳುತ್ತಿದ್ದರು ? ನನಗೂ ಗೊತ್ತಿಲ್ಲ‌. ಇದನ್ನು ಹೊರ ಜಗತ್ತು ಕೂಡ ಗುರುತಿಸಿತ್ತು ಎಂದು ಗೊತ್ತಾದದ್ದು ನನಗೆ ಮದುವೆ ನಿಶ್ಚಿತವಾದಾಗ. ನನ್ನ ಅತ್ತೆಯವರ ತಂಗಿ ಮನೆ ಕೊಡಂಗೆ,ನನ್ನ ತಂದೆ ಮನೆ ಹತ್ತಿರ,ತಂದೆಯವ ಶಿಷ್ಯ ವರ್ಗದ ಮನೆ ಅದು,ನಮ್ಮ ಮನೆಗಳ ನಡುವೆ ತುಂಬಾ ಸ್ನೇಹ ಆತ್ಮೀಯತೆ ಇತ್ತು ಅವರು ನನ್ನ ಬಗ್ಗೆ ಹುಡುಗನ( ಪ್ರಸಾದ್) ಮನೆಯವರಲ್ಲಿ ಹುಡುಗಿ ಯಾವ ವಿಷಯದಲ್ಲೂ ತೆಗೆದು ಹಾಕುವಂತಿಲ್ಲ ಬಹಳ ಜಾಣೆ? ( ಈ ಬಗ್ಗೆ ನನಗೆ ತುಂಬಾ ಸಂಶಯ 😀) ಎಂತಹ ಪರಿಸ್ಥಿತಿ ಬಂದರೂ ನಿಬಾಯಿಸಿಕೊಂಡು ಹೋಗುವ ಸಾಮರ್ಥ್ಯ ಇರುವವಳು.ಆದರೆ ಮಾತು ಮಾತ್ರ ಖಡಕ್,ಪೆಟ್ಟೊಂದು ತುಂಡೆರಡು ಅಂತ ಅಂದಿದ್ದರಂತೆ.ಈ ವಿಚಾರ ನನಗೆ ಗೊತ್ತಾದಾಗ ಕೂಡ ಯಾಕೆ ಹೇಗೆ ಹೇಳ್ತಾರೆ ಎಂದು ನನಗೆ ಗೊತ್ತಾಗಿರಲಿಲ್ಲ. ನಾನು ಮಾತು ಬೇಗ ಕಲಿತಿದ್ದೆನಂತೆ. ಮತ್ತು ನನ್ನ ಮಾತು ಚಿಕ್ಕ ಮಗುವಿರುವಾಗಲೇ ಸ್ಪಷ್ಟ, ಕೊಂಞೆ ಇರಲಿಲ್ಲ ಎಂದು ಅಮ್ಮ ಹೇಳಿದ್ದರು ಒಮ್ಮೆ ಶಾಲಾ,ಕಾಲೇಜುಗಳಲ್ಲಿ ಭಾಷಣ ನಾಟಕ ಅದು ಇದು ಎಂದು ಭಾಗವಹಿಸಿ ಅಗೊಂದು ಈಗೊಂದು ಬಹುಮಾನ ಸಿಗುತ್ತಾ ಇತ್ತು ಕೂಡ. ನನಗೆಲ್ಲೂ ಮಾತನಾಡಲು ಕಷ್ಟವಾದದ್ದು ನೆನಪಿಲ್ಲ.ನಾನು ಮಾತಿನ ನಿರರ್ಗಳತೆ ಕಾರಣಕ್ಕಾಗಿ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ನನಗೆ ಸಿಗುತ್ತಾ ಇತ್ತು‌ ನನ್ನ ತಂದೆ ತಾಯಿಯರು ಚೆಂದುಳ್ಳೆ ಚೆಲುವ ಚೆಲುವತಿಯರಾದ ಕಾರಣ ನಾನು ಅವರಷ್ಟು ಚಂದ ಅಲ್ಲದಿದ್ದರೂ ಸುಮಾರಾಗಿ ಇದ್ದೆ.ಅದು ನನ್ನ ತಲೆಯಲ್ಲಿ ಸ್ವಲ್ಪ ಇತ್ತು. ಹಾಗಾಗಿ ಇರುವುದರಲ್ಲಿ ಚಂದದ ಅಂಗಿ ಹಾಕಿಕೊಂಡು ನಿರೂಪಣೆ ಹಾಗೂ ಇನ್ನಿತರ ಸಂದರ್ಭದಲ್ಲಿ ವೇದಿಕೆ ಏರಿ ಸ್ವಲ್ಪ ಹೆಮ್ಮೆಯ ನಗು ಬೀರುತ್ತಿದ್ದುದು ಸತ್ಯ. ಪಿಯುಸಿ ಮತ್ತು ಡಿಗ್ರಿಯಲ್ಲಿ ನಾನು ವಿಜ್ಞಾನ ತಗೊಂಡು ಇಂಗ್ಲೀಷ್ ನಲ್ಲಿ ಬರೆಯಬೆಕಾದ ಕಾರಣ ನಾನು ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದಿದ್ದೆ,ಮರ್ಯಾದೆಗಾಗಿ ಬಾಯಿ ಪಾಠ ಮಾಡಿ ಪಾಸಾಗಿದ್ದೆ. ನಂತರ ಎಂಎ ಓದುವಾಗ ಮತ್ತೆ ಕಲಿಕೆಯಲ್ಲಿ ಮುಂದೆ ಬಂದೆ. ಈ ಎಲ್ಲ ದಿನಗಳಲ್ಲಿ ಎಂದೂ ನನಗೆ ಯಾರಲ್ಲಿ ಮಾತನಾಡುವಾಗ ಕೂಡ ಮಾತಿನಲ್ಲಿ ತೊದಲುವಿಕೆ,ಕೊಕ್ಕಳಿಕೆ ಇರಲಿಲ್ಲ. ಸಂಸ್ಕೃತ ಎಂಎಯಲ್ಲಿ ಮೊದಲ ರ‍್ಯಾಂಕ್ ತೆಗೆದೆ.ಫಲಿತಾಂಶ ಬರುವ ಮೊದಲೇ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದೆ. ನಂತರ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಸಿಕ್ತು. ಆದರೆ 1999 ರಲ್ಲಿ ಯುನಿಪಾರ್ಮ್ ವರ್ಕಲೊಡ್ ನಿಯಮ ಜಾರಿಯಾದಾಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್ ಗಳು ಹನ್ನೆರಡು ಅವಧಿಯ ಬದಲು ಹದಿನಾರು ಅವಧಿ ಕೆಲಸ ಮಾಡಬೇಕಾಗಿ ಬಂತು. ಅಗ ನನ್ನಂತಹ ತಾತ್ಕಾಲಿಕ ನೆಲೆಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದ ಅನೇಕರು ವರ್ಕ್ ಲೋಡ್ ಇಲ್ಲದೆ ಕೆಲಸ ಕಳೆದುಕೊಳ್ಳಬೇಕಾಗಿ ಬಂತು. ಅದೇ ಸಮಯದಲ್ಲಿ ಮಂಗಳೂರಿನ ಚಿನ್ಮಯ ಹೈಸ್ಕೂಲ್ ನಲ್ಲಿ ಸಂಸ್ಕೃತ ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಿದರು. ನಾನು ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಆಯ್ಕೆ ಆಗಿ ಸಂಸ್ಕೃತ ಶಿಕ್ಷಕಿಯಾಗಿ ಅಲ್ಲಿ ಕೆಲಸಕ್ಕೆ ಸೇರಿದೆ. ಜೊತೆಗೆ ಸಂತ ಅಲೋಶಿಯಸ್ ಸಂದ್ಯಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಈ ಸಮಯದಲ್ಲಿ ಸಂಸ್ಕೃತೋತ್ಸವ ಬಂತು. ಚಿನ್ಮಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಸ್ಕೃತ ಅಭಿಮಾನಿಯಾಗಿದ್ದು ಸಂಸ್ಕೃತೋತ್ಸವದ ನಿಮಿತ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಮ್ಮ ಚಿನ್ಮಯ ಶಾಲೆಯಲ್ಲಿ ನಡೆಸಲು ಅನುಮತಿ ನೀಡಿದರು. ಸ್ಪರ್ಧೆಗಳು ಒಂದು ಅದಿತ್ಯವಾರ ನಡೆದವು.ನನಗೆ ಮುಖ್ಯೋಪಾಧ್ಯಾಯಿನಿ ಜವಾಬ್ದಾರಿ ನೀಡಿದ್ದರು. ಈ ಸಮಯದಲ್ಲಿ ಆಗ ಸಂಸ್ಕೃತ ಸಂಘದ ಅಧ್ಯಕ್ಷರಾಗಿದ್ದ ವಾಸುದೇವ ರಾವ್ ( ಎಂದು ನೆನಪು) ಡಾ.ಜಿ ಎನ್ ಭಟ್,ಡಾ.ಶಿಕಾರಿ ಪುರ ಕೃಷ್ಣ ಮೂರ್ತಿ ಮೊದಲಾದವರು ನಮ್ಮ ಶಾಲೆಗೆ ಬಂದಿದ್ದರು.ಆಗ ವಾಸುದೇವ ರಾವ್ (?) ನನ್ನಲ್ಲಿ ಯಾವುದೋ ವಿಚಾರ ಕೇಳಿದರು. ನನಗೆ ಗೊತ್ತಿರುವ ವಿಚಾರವೇ..ಆದರೆ ನನಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗಲಿಲ್ಲ..ಮೊದಲ ಬಾರಿಗೆ ತೀರಾ ಪದಗಳು ಸಿಗದೆ ಒದ್ದಾಡಿದೆ..ಕೊನೆಗೂ ನಾನು ಏನು ಹೇಳಲು ಹೊರಟಿದ್ದೆ ಎಂದವರಿಗೆ ಅರ್ಥವಾಗಲಿಲ್ಲ ಕಾಣಬೇಕು.ಆಗ ಅವರು ಯಾರೊ ಒಂದು ವಿಜ್ಞಾನಿ/ ಪ್ರೊಫೆಸರ್ ಉದಾಹರಣೆ ಕೊಟ್ಟು ಅವರು ಹೀಗೆ ಮಾತಾಡುತ್ತಾರೆ ( ಏನೇನೋ ? ) ಎಂದು ಹೇಳಿದರು. ಆ ದಿನ ಮನೆಗೆ ಬಂದು ಅಲೋಚಿಸಿದೆ..ಯಾಕೆ ಹೀಗಾಯ್ತು..ಎಂದೂ ನನಗೆ ಉಗ್ಗಳಿಗೆ/ ಕೊಕ್ಕಳಿಗೆ ,ತೊದಲುವಿಕೆ ಇರಲಿಲ್ಲವಲ್ಲ ಎಂದು.. ಅಷ್ಟೇ ಆ ಬಗ್ಗೆ ಮತ್ತೆ ತಲೆಕೆಡಿಸಿಕೊಳ್ಳಲಿಲ್ಲ. ಆ ವರ್ಷ ಸಂಸ್ಕೃತೋತ್ಸವದ ನಿರೂಪಣೆ ನನಗೆ ನೀಡಿದರು.ನಾನು ಡಾ.ಜಿ ಎನ್ ಭಟ್ ಅವರ ವಿದ್ಯಾರ್ಥಿನಿ ಅಗಿದ್ದು ಅವರಿಗೆ ನಾನು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಬಗ್ಗೆ ಗೊತ್ತಿದ್ದು ನಂಬಿಕೆ ಮೇಲೆ ನನಗೆ ಜವಾಬ್ದಾರಿ ನೀಡಿದ್ದರು ಅ ವರ್ಷ ಸಂಸ್ಕೃತ ಸಂಘದ ರಜತಮಹೋತ್ಸವ ಅಗಿದ್ದು ತುಂಬಾ ಜನ ಕೂಡ ಬಂದಿದ್ದರು. ಓಹ್.. ನಾನು ಸಾಮಾನ್ಯವಾಗಿ ಬರೆದು ನಿರೂಪಣೆ ಮಾಡುವುದಿಲ್ಲ, ನೇರವಾಗಿ ಮಾಡುವ ಕ್ರಮ..ಆ ಬಾರಿ ಮುಂಜಾಗ್ರತಾ ಕ್ರಮವಾಗಿ ಬರೆದು ತಯಾರಾಗಿದ್ದೆ.ದೊಡ್ಡ ಕಾರ್ಯಕ್ರಮ ,ಸಂಸ್ಕೃತ ಭಾಷೆಯಲ್ಲಿ ತಪ್ಪು ಆಗಬಾರದು ಎಂಬ ಕಾರಣಕ್ಕಾಗಿ ಬಹುಶಃ ನನ್ನ ಜೀವನದಲ್ಲಿ ಅತ್ಯಂತ ಕಳಪೆಯಾಗಿ ತೊದಲಿಕೊಂಡು ಏನೇನೋ ಒದರಿ..ತಪ್ಪು ತಪ್ಪಾಗಿ ನಿರೂಪಣೆ ಮಾಡಿದ್ದು ಅದೇ ಮೊದಲು ಮತ್ತೆ ಕೊನೆ( ಇನ್ನಾಗಲಾರದು ಅಂತಹ ತಪ್ಪು ಎಮಬ ನಂಬಿಕೆಯಿಂದ) ಬರೆದು ಇರುವುದನ್ನು ಕೂಡ ನೆಟ್ಟಗೆ ಓದಲಾಗಲಿಲ್ಲ.. ಅಂತೂ ಹೇಗೋ ಮುಗಿಯಿತು. ಆ ದಿನ ಮತ್ತೆ ತಲೆಕೆಡಿಸಿಕೊಂಡೆ ..ಯಾಕೆ ಹೀಗಾಯ್ತು ಎಂದು.. ಈಗ ಶುರುವಾದ ಸಮಸ್ಯೆ ನನಗೆ ಬೇರೆ ಸಮಯದಲ್ಲಿ ಕೂಡ ಕಾಡಲಾರಂಭಿಸಿತು.. ಮಾತನಾಡುವಾಗ ಬೇಕಾದ ಪದಗಳು ಬಾಯಿಗೆ ಬಾರದೆ ಒದ್ದಾಟ ಅಗುದು,ತೊದಲುವಿಕೆ,ಕೊಕ್ಕಳಿಕೆ..ಈ ಮೂರೂ ಕೂಡ ಮಕ್ಕಳಿಗೆ ಪಾಠ ಮಾಡುವಾಗ,ಸಹೋದ್ಯೋಗಿಗಳಲ್ಲಿ ಮಾತನಾಡುವಾಗ ಇರುತ್ತಿರಲಿಲ್ಲ. ಬೇರೆಡೆ ಮಾತನಾಡುವಾಗ ಈ ಸಮಸ್ಯೆ ‌...ಆದರೂ ಯಾಕೆಂದು ಗೊತ್ತಾಗಲಿಲ್ಲ... ಆದರೆ ಈ ಸಮಸ್ಯೆ ಯಿಂದ ಹೊರಗೆ ಬರಬೇಕು ಎಂದು ಸದಾ ಯತ್ನ ಮಾಡುತ್ತಿದ್ದೆ. ಎರಡು ಮೂರು ವರ್ಷ ಈ ಸಮಸ್ಯೆ ಮುಂದುವರಿಯಿತು. ಈ ಸಮಯದಲ್ಲಿ ನಾನು ಬಜಾಜ್ ಅಲಾಯನ್ಸ್ ಇನ್ಷೂರೆನ್ಸ್ ಕಂಪೆನಿಯಲ್ಲಿ ಏಜೆಂಟ್ ಆಗಿ ಸೇರಿಕೊಂಡೆ‌ ಆಗ ಕಂಪೆನಿ ಕಡೆಯಿಂದ ನಮಗೆ ಮಾತಿನ ಕಲೆ ಬಗ್ಗೆ ತರಬೇತಿ ಕಾರ್ಯಾಗಾರ ಇತ್ತು‌ ಅಲ್ಲಿ ನನಗೆ ಮಾತಿನ ಸಮಸ್ಯೆ ಆಗಲಿಲ್ಲ. ನಂತರ ಪ್ರೀ ಸಮಯದಲ್ಲಿ ಅಲ್ಲಿಗೆ ಬಂದ ತರಬೇತು ದಾರರಲ್ಲಿ ನಾನು ನನ್ನ ಮಾತಿನ ಸಮಸ್ಯೆ ಬಗ್ಗೆ ಹೇಳಿದೆಆಗ ನನಗೆ ಮಾತಿನ ಸಮಸ್ಯೆ ಕಾಡಿತು‌.(ಅವರ ಹೆಸರು ಮರೆತು ಹೋಗಿದೆ ಈಗ ) ಅವರು ಬಹಳ ಸಹೃದಯತೆಯಿಂದ ,ತಾಳ್ಮೆಯಿಂದ ನನ್ನ ಮಾತುಗಳನ್ನು ಕೇಳಿಸಿಕೊಂಡರು. ಸಮಸ್ಯೆಯ ಮೂಲದ ಬಗ್ಗೆ ಅರ್ಥ ಮಾಡಿಕೊಂಡರು. "ಲಕ್ಷ್ಮೀ ನಿಮಗೆ ಏನೂ ಸಮಸ್ಯೆ ಇಲ್ಲ..ಜಸ್ಟ್ ನಿಮಗೆ ಕೀಳರಿಮೆ ಬಾಧಿಸುತ್ತಿದೆ ಅಷ್ಟೇ, ನಿಮ್ಮ ಬಗ್ಗೆ ಬೇರೆಯವರ ಜೊತೆಯಲ್ಲಿ ಹೋಲಿಸಿಕೊಂಡು ಕೀಳರಿಮೆಯಿಂದ ಒದ್ದಾಡುತ್ತಿದ್ದೀರಿ.ಅದರಿಂದಾಗಿ ನಿಮಗಿಂತ ದೊಡ್ಡ ಹುದ್ದೆಯಲ್ಲಿ ,ದೊಡ್ಡ ಸ್ಥಾನದಲ್ಲಿ ಇರುವವರಲ್ಲಿ ಮಾತನಾಡುವಾಗ ಈ ಸಮಸ್ಯೆ ಕಾಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನದ್ದೇ ಆದ ಸ್ಥಾನ ಮಾನ ಗೌರವ ಇದೆ..ನೀವು ಯಾವ ಕೆಲಸ ಮಾಡುತ್ತೀರಿ ಎಂಬುದು ಮುಖ್ಯವಲ್ಲ..ಹೇಗೆ ಮಾಡುತ್ತೀರಿ ಎಂಬುದು ಮುಖ್ಯ.. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಕೃತಿ ಬರೆದ ಗಣಪತಿ ರಾವ್ ಐಗಳು ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು.ಇಂದು ಅವರ ಹೆಸರು ಕೃತಿ ಯನ್ನು ಉಲ್ಲೇಖಿಸದೆ ದಕ್ಷಿಣ ಕನ್ನಡದ ಇತಿಹಾಸ ಬಗ್ಗೆ ಮಾತನಾಡಲು ಬರೆಯಲು ಆಗುವುದಿಲ್ಲ. ಯುನಿವರ್ಸಿಟಿ ಗಳ ರೆಫರೆನ್ಸ್ ಪುಸ್ತಕ ಅದು. ಅದೇ ರೀತಿ ಪ್ರಸ್ತುತ ಪೂ ಶ್ರೀನಿವಾಸ ಭಟ್ ವೆಂಕಟರಾಜ ಪುಣಿಚಿತ್ತಾಯರ ಮೊದಲಾದ ಅನೇಕ ದೊಡ್ಡ ವಿದ್ವಾಂಸರು ಶಾಲಾ ಶಿಕ್ಷಕರು. ಯುನಿವರ್ಸಿಟಿ ಗಳಲ್ಲಿ ಇರುವವರು ಮಾತ್ರ ವಿದ್ವಾಂಸರಲ್ಲ.ನಿಮಗೆ ಬರೆಯುವ ಸಾಮರ್ಥ್ಯ ಇದೆ.ಹೂವಿಗೆ ಪರಿಮಳ ಇದ್ದರೆ ಅದರ ಅಸ್ತಿತ್ವ ಹೊರ ಜಗತ್ತಿಗೆ ಅರಿವಾಗಿಯೇ ಆಗುತ್ತದೆ ಅದು ಎಲ್ಲೇ ಇದ್ದರೂ..ಎಷ್ಟೋ ಜ‌ನ ರ‌್ಯಾಂಕ್ ವಿಜೇತರಿಗೆ ಕೆಲಸ ಸಿಗದೆ ಕೂಲಿ ಕೆಲಸ ಮಾಡುತ್ತಿದ್ದಾರೆ.ನಿಮಗೆ ಬಹಳ ಪ್ರತಿಷ್ಠಿತ ಚಿನ್ಮಯ ಪ್ರೌಢ ಶಾಲೆಯಲ್ಲಿ ಕೆಲಸ ಇದೆ..ಕೀಳರಿಮೆ ಯಾಕೆ..ತಲೆಯಿಂದ ಅದನ್ನು ಮೊದಲು ಹೊರಗೆ ಹಾಕಿ ಎಂದು ಅರ್ಧ ಗಂಟೆ ತಿಳುವಳಿಕೆ ಹೇಳಿದರು‌ ಹೌದು ಅಂದೇ ಕೊನೆ..ಮತ್ತೆಂದೂ ನನಗೆ ಮಾತಿನ ಸಮಸ್ಯೆ ಕಾಡಲಿಲ್ಲ..ಮುಂದೆ ಕಾಡುವುದೂ ಇಲ್ಲ.. ನಾನು ಕೀಳರಿಮೆಯಿಂದ ಹೊರಗೆ ಬಂದಿದ್ದೆ. ದೇವರು ದೊಡ್ಡವನು..ನಂತರ ನನಗೆ ಯಾವುದೇ ಕೊರತೆ ಮಾಡಲಿಲ್ಲ.. ಒಳ್ಳೆಯ ಉದ್ಯೋಗ ಮನೆ ಬದುಕು ,ಘನತೆಯ ಜೀವನ ಎಲ್ಲವನ್ನೂ ಕರುಣಿಸಿದ . ಈಗಲೂ ದೊಡ್ಡ ದೊಡ್ಡ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅತಿಥಿಯಾಗಿ,ಉಪನ್ಯಾಸ ನೀಡಲು ಹೋದಾಗ ನನ್ನ ಜೊತೆಗೆ ಆಹ್ವಾನಿತರಾದವರಲ್ಲಿ ದೊಡ್ಡ ದೊಡ್ಡ ಇಂಜಿಯರ್ಸ್ ಡಾಕ್ಟರ್ಸ್ ಪ್ರೊಫೆಸರ್ ಗಳು ಇರ್ತಾರೆ.ಅವರು ಒಳಗೆ ಬರುವಾಗಲೇ ಓಡಿ ಹೋಗಿ ಸ್ವಾಗತಿಸುವ ಹೂ ಬುಕ್ಕೆ ಕೊಡುವ ಜನರಿರ್ತಾರೆ.ಅವರ ಸುತ್ತ ಜನರು ಇರುತ್ತಾರೆ‌ ನಾನು ಒಂದು ಮೂಲೆಯಲ್ಲಿ ಅಬ್ಬೇಪಾರಿಯಂತೆ ಕುಳಿತಿರುತ್ತೇನೆ‌ ಆದರೆ ನನಗೆ ಕೀಳರಿಮೆ ಕಾಡುವುದಿಲ್ಲ..ಇದು ವೇದಿಜೆ ಏರಿ ಸರದಿಯಲ್ಲಿ ನನ್ನ ಕೈಗೆ ಮೈಕ್ ಬರುವ ತನಕ ಮಾತ್ರ ಈ ಸ್ಥಿತಿ ಎಂದು ನನಗೆ ಆತ್ಮವಿಶ್ವಾಸ ಇರುತ್ತದೆ.ನಂತರ.ವೇದಿಕೆ ಇಳಿದು ಬರುವಷ್ಟರಲ್ಲಿ ನಾನು ನಾನೇ ಆಗಿರುತ್ತೇನೆ.ಅನೇಕೆಡೆಗಳಲ್ಲಿ ಸಮಯ ಮಿತಿಯ ಕಾರಣಕ್ಕಾಗಿ ನಾನು ಮಾತನ್ನು ಮೊಟಕು ಗೊಳಿಸಿದರೆ ಸಭಿಕರಿಂದ ಪೂರ್ಣ ಮಾಹಿತಿ ನೀಡುವಂತೆ ಒತ್ತಡ ಬಂದಿದ್ದು ಮಾತನ್ನು ಮುಂದುವರಿಸಿದ ಅನೇಕ ಸಂದರ್ಭಗಳಿವೆ‌ ಅಗೆಲ್ಲ ಉತ್ತಮ ವಾಙ್ಮಯತೆಯನ್ನು ನೀಡಿದ ವಾಗ್ದೇವಿಯನ್ನು ಸ್ಮರಿಸುತ್ತೇನೆ. ಬರವಣಿಗೆ ,ವಾಙ್ಮಯತೆ God gift ಎಲ್ಲರಿಗೂ ಒಲಿಯುವುದಿಲ್ಲ.ಪ್ರತಿಯೊಂದು ವ್ಯಕ್ತಿಯಲ್ಲಿ ಒಂದಲ್ಲ ಒಂದು ಸಾಮರ್ಥ್ಯ ಇರುತ್ತದೆ.ಇದು ದೇವರ ಕೊಡುಗೆ ಆದರೆ ವಿಷಯ ಜ್ಞಾನವನ್ನು ಪಡೆದುಕೊಂಡು ಪರಿಶ್ರಮದಿಂದ ಮುಂದುವರಿಸುದು,ಅದರಲ್ಲಿ ಪರಿಣತಿಯನ್ನು ಪಡೆಯುವುದು ನಮ್ಮ ಕೈಯಲ್ಲಿದೆ‌. ಪ್ರತಿಭೆ,ಪ್ರಾಮಾಣಿಕತೆ,ಪರಿಶ್ರಮ ಮೂರು ಇದ್ದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಹೆಸರಿಗಾಗಿ ಕೆಲಸ ಮಾಡಲು ಆಗುವುದಿಲ್ಲ ಒಳ್ಳೆಯ ಕೆಲಸ ಮಾಡಿದರೆ ಹೆಸರು ತನ್ನಿಂತಾನಾಗಿಯೇ ಬರುತ್ತದೆ. ಇಂದು ಭುವನೇಶ್ವರಿ ಮೇಡಂ ಸಂಸ್ಕೃತೋತ್ಸವದಲ್ಲಿ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಬಗ್ಗೆ ತಿಳಿಸಿದಾಗ ಇವೆಲ್ಲ ನೆನಪಾಯಿತು ನನಗೆ. .ಚಿಕ್ಕಂದಿನಿಂದಲೇ ನೇರ ಮಾತು ಎಂದು ಹೇಗೆ ಗುರುತಿಸಿರಬಹುದು? ನನ್ನ ಯಾವ ಮಾತುಗಳಿಂದ ನನ್ನನ್ನು ನೇರ ಮಾತು ಎಂದು ಗುರುತಿಸಿದರೋ ನನಗೆ ಗೊತ್ತಿಲ್ಲ. ನನ್ನ ಪ್ರಾಥಮಿಕ ಶಾಲೆಯ ಮೇಷ್ಟ್ರು ಕೊಮ್ಮ ತಿಮ್ಮಣ್ಣ ಮಾಸ್ಟ್ರು ನನ್ನ ತಂದೆಯವರಲ್ಲಿ ' ಅವಳನ್ನು ಮುಂದೆ ಲಾ ಓದಿಸಿ ಎಂದಿದ್ದರಂತೆ. ಯಾಕೆ ? ನಾನು ಹೇಗೆ ಮಾತಾಡುತ್ತಿದ್ದೆ ಎಂದು ನನಗೆ ಚೂರೂ ಗೊತ್ತಿಲ್ಲ.. ಈ ಬಗ್ಗೆ ಅಮ್ಮನಲ್ಲಿ ಒಂದು ದಿನ ಕೇಳಿದ್ದೆ.ಅದಕ್ಕೆ ಅಮ್ಮ ಒಂದು ಉದಾಹರಣೆ ತಿಳಿಸಿದರು. ನಾನಾಗ ಇನ್ನೂ ಚಿಕ್ಕ ಹುಡುಗಿ,ಆಗಷ್ಟೇ ಮಾತಾಡಲು ಕಲಿತಿದ್ದೆ,ಎಲ್ಲ ಅಕ್ಷರಗಳ ಉಚ್ಚಾರಣೆ ಬರುತ್ತಿರಲಿಲ್ಲವಂತೆ. ನನ್ನ ಚಿಕ್ಕಪ್ಪನ ಮಗಳ ಸಂಧ್ಯಾ ನನಗಿಂತ ಐದಾರು ತಿಂಗಳ ದೊಡ್ಡವಳು.ನಮಗೆ ಮಕ್ಕಳಿಗೆ ಕಾಫಿ ಕೊಡ್ತಿರಲಿಲ್ಲ .ಹಾಗಾಗಿ ಕಾಫಿ ಬೇಕು ಎಂದು ನಮ್ಮಿಬ್ಬರ ಹಠ ಚಿಕ್ಕಪ್ಪನ ಮಗಳ ಸಂಧ್ಯಾ ಅವಳ ಅಮ್ಮನಲ್ಲಿ ಎಂದರೆ ಚಿಕ್ಕಮ್ಮನಲ್ಲಿ ಕಾಫಿ ಬೇಕು ಎಂದು ಕೇಳಿದ್ದಕ್ಕೆ ಕೊಡಲಿಲ್ಲ. ಆಗ ಅವಳು ನನ್ನ ಅಮ್ಮನಲ್ಲಿ ಕಾಫಿ ಕೇಳಿದಳಂತೆ.ನನ್ನ ಅಮ್ಮನೂ ಖಾಲಿ ಆಗಿದೆ,ನಾಳೆ ಕೊಡ್ತೇನೆ ಎಂದು ಹಾಲು ಕೊಟ್ಟು ಪುಸಲಾಯಿಸಿದ್ದಾರೆ.ಅದಕ್ಕೆ ಅವಳು ದೊಡ್ಡಮ್ಮ ಕೊಳಕ್ಕಿ ಎಂದು ತನ್ನ ಬಾಲ ಭಾಷೆಯಲ್ಲಿ ನನ್ನ ಅಮ್ಮನಿಗೆ ಹೇಳಿದ್ದಾಳೆ.ಆಗ ಅಲ್ಲೇ ಇದ್ದ ನಾನು " ದೊಡ್ಡಮ್ಮ ಕೊಕ್ಕಿ ಅಲ್ಲ..ಇಕ್ಕಮ್ಮ ಕೊಕ್ಕಿ ' ಎಂದು ನಾನು ತಕ್ಷಣವೇ ಹೇಳಿದೆನಂತೆ.ಅಲ್ಲಿ ಇದ್ದ ನನ್ನ ತಂದೆ ,ತಾಯಿ, ಅಜ್ಜಿ ಚಿಕ್ಕಪ್ಪ ,ಚಿಕ್ಕಪ್ಪ "ಅಬ್ಬಾ ಇದು ಸಾಮನ್ಯದ ಕೊಕ್ಕೆಚ್ಚಿ ಅಲ್ಲ "ಎಂದು ನಗಾಡಿದರಂತೆ.ಸಾಮಾನ್ಯವಾಗಿ ಬೇರೆ‌ ಮಕ್ಕಳಾದರೆ ನೀನು ಕೊಳಕ್ಕಿ ಎನ್ನುತ್ತಿದ್ದರು ಎಂದು ಅಮ್ಮ ಹೇಳಿದ್ದರು. ಅಷ್ಟತಾನೇ ಎಂದು ಕೊಂಡೆ‌ ಈಗ್ಗೆ ಆರೇಳು ವರ್ಷಗಳ ಮೊದಲು ತಾಯಿ ಮನೆಗೆ ಹೋಗಿದ್ದಾಗ ಒಂದು ವಿಷಯ ಗಮನಿಸಿದೆ. ತಮ್ಮನ ಸಣ್ಣ ಮಗಳು ಅಭೀಷ್ಟಾ ಬಹಳ ಕರುಣಾಮಯಿ,ಮನುಷ್ಯ ಪ್ರೀತಿ ಇರುವ ಜಾಣೆ. ಆದರೆ ಗಟ್ಟಿ ನಿಲುವು ಸಣ್ಣಾಗಿರುವಾಗಲೇ‌.‌ ಅವಳೇನಾದರೂ ಕಂಬ ದಳಿ ಹತ್ತಿ ಉಪದ್ರ ಮಾಡುತ್ತಿದ್ದರೆ ಅವಳನ್ನು ಅವಳನ್ನು ಅದರಿಂದ ಹೊರಗೆ ತರುದು ಸಣ್ಣ ವಿಚಾರ ಅಲ್ಲ..ಬೈದು ಜೋರು ಮಾಡುವ ವಯಸ್ಸಲ್ಲ..ಇನ್ನೂ ಎರಡು ಮೂರು ವರ್ಷದ ಮಗು. ಬಾ..ನೀನು ಒಪ್ಪಕ್ಕ ಅಲ್ಲದಾ..ನಿನಗೆ ಗೊಂಬೆ ಕೊಡ್ತೆ..ಎಂದು ಮಂಗಾಡಿಸಲು ಹೋದರೆ ಆನು ಒಪ್ಪಕ್ಕ ಅಲ್ಲ ಕೊಕ್ಕಿ..ಎಂದು ಒಪ್ಪಿಕೊಂಡು ತಂಟೆ ಮುಮದುವರಿಸುತ್ತಾ ಇದ್ದಳು.ನಾನು ಒಪ್ಪಕ್ಕ ಅಲ್ಲ ಕೊಳಕ್ಕಿ ಎಂದು ಬಿಟ್ಟರೆ ಮತ್ತೆ ಪುಸಲಾಯಿಸುವ ಮಾತೇ ಇಲ್ಲವಲ್ಲ..ಅವಳನ್ನು ಹೊಗಳಿ ಪುಸಲಾಯಿಸಲು ಸಾಧ್ಯವೇ ಇಲ್ಲ..ಇದನ್ನು ನೋಡುತ್ತಿದ್ದ ಅಮ್ಮ " ನೋಡು ಹೀಗೆಯೇ ಇದ್ದೆ,ಹೊಗಳಿಯೂ ಸರಿ ಮಾಡಲು ಸಾಧ್ಯವಿಲ್ಲ, ಬೈದೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಿನ್ನ ಬಗ್ಗೆ ಅಜ್ಜ ಪೆಟ್ಟೊಂದು ತುಂಡೆರಡು ಎಂದು ಅಜ್ಜ ಹೇಳ್ತಾ ಇದ್ದದ್ದು ಎಂದು ಹೇಳಿ ನಗಾಡಿದರು.. ಓ ಹಾಗಾದರೆ ನಾನು ಸಣ್ಣಾಗಿರುವಾಗ ಸುಮಾರಾಗಿ ಹೇಗೆ ಇದ್ದೆ ಎಂದು ನನಗೆ ಸ್ವಲ್ಪ ಅರ್ಥ ಆಯಿತು.