Monday 10 August 2020

ನಾಚಿಕೆಯಿಂದ ತಲೆ ತಗ್ಗಿಸುವ ಹಾಗೆ ಆಗುತ್ತದೆ

ನನಗೆ ಈ ವಿಚಾರ ನೆನಪಾದಾಗೆಲ್ಲ ನಾಚಿಕೆಯಿಂದ ತಲೆ ತಗ್ಗಿಸುವ ಹಾಗೆ ಆಗುತ್ತದೆ.. 1988 ರಲ್ಲಿ ನಾನು ಕೊಡ್ಲಮೊಗರಿನ ವಾಣಿವಿಜಯ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪಾಸಾದೆ‌.ಅಳಿದೂರಲ್ಲಿ ಉಳಿದವರೇ ರಾಜ ಎಂಬ ಹಾಗೆ 70% ಬಂದದ್ದು ದೊಡ್ಡ ಸಾಧನೆಯೇ.. ನನ್ನ ಅಕ್ಕನಿಗೆ ಒಳ್ಳೆಯ ಮಾರ್ಕ್ಸ್ ಬಂದಿದ್ದರೂ ಕಾಲೇಜಿಗೆ ಕಳುಹಿಸಿರಲಿಲ್ಲ. ನಮ್ಮೂರಲ್ಲಿ ಆಗಷ್ಟೇ ಹುಡುಗಿಯರು ಕಾಲೇಜಿಗೆ ಹೋಗಲು ಶುರು ಮಾಡಿದ್ದರಷ್ಟೇ..ಪಾಸಾಗುದೇ ನೂರರಲ್ಲಿ ಹತ್ತಿಪ್ಪತ್ತು ಮಕ್ಕಳು.ಅದರಲ್ಲಿ ಹುಡುಗಿಯರ ಸಂಖ್ಯೆ ಬೆರಳೆಣಿಕೆಯಷ್ಟು. ಕಾಲೇಜಿಗೆ ಹೋಗುವವರು ಒಬ್ಬರೋ ಇಬ್ಬರೋ ಅಷ್ಟೇ, ಪದವಿಗೆ ಕಾಲಿಡುವಷ್ಟರಲ್ಲಿ‌ ಮದುವೆ ಹಾಗಾಗಿ ಪದವಿ ಪೂರ್ಣಗೊಳಿಸುತ್ತಿದ್ದವರ ಸಂಖ್ಯೆ ಐನೂರರಲ್ಲಿ ಒಬ್ಬರಾದರೆ ಸ್ನಾತಕೋತ್ತರ ಪದವಿ ಗಳಿಸುತ್ತಿದ್ದ ಹುಡುಗಿಯರು ಸಾವಿರದಲ್ಲಿ ಒಬ್ಬರು ಅಷ್ಟೇ, ಅಂತಹ ಅದೃಷ್ಟ ಶಾಲಿಗಳಲ್ಲಿ ನಾನು ಕೂಡ ಒಬ್ಬಳು ಎಂಬ ಸಂತಸ ನನ್ನದು ನನ್ನ ಕಾಲೇಜು ಓದಿಗೆ ಮನೆಯಲ್ಲಿ ಅಪ್ಪ ಅಮ್ಮನ ಪೂರ್ಣ ಒತ್ತಾಸೆ ಇತ್ತು. ನನ್ನ ತಂದೆಯವರಿಗೆ ತಮ್ಮ ಮಕ್ಕಳು ಮೊದಲ ರ‌್ಯಾಂಕ್ ತೆಗೆಯಬೇಕು ಎಂಬ ಮಹದಾಸೆ..ದುರದೃಷ್ಟಕ್ಕೆ ನನಗೆ ಒಂದೆರಡು ಮಾರ್ಕ್ ಗೆ ಮೊದಲ ಸ್ಥಾನ ತಪ್ಪಿ ಹೋಗುತ್ತಿತ್ತು.ಪ್ರತೀಬಾರಿ ಮಾರ್ಕ್ ಕಾರ್ಡ್ ತಂದಾಗಲೂ ತಂದೆಯವರು ರ‌್ಯಾಂಕಾ( ಅದರ ಅರ್ಥ ಮೊದಲ ರ‌‌‌್ಯಾಂಕಾ ಎಂದು) ಎಂದು ಕೇಳುತ್ತಿದ್ದರು.ನಾನು ಅಲ್ಲ ಎರಡನೇ ರ‌್ಯಾಂಕ್ ಎಂದು ಸಪ್ಪೆಯಾಗಿ ಹೇಳುದು ಮಾಮುಲಾಗಿತ್ತು.ತಂದೆ ತಾಯಿ ಅದಕ್ಕಾಗಿ ನಮ್ಮನ್ನು ಎಂದೂ ಬೈದದ್ದು ಇಲ್ಲ.. ಹಾಗೆ ನೋಡಿದರೆ ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಬರಲು ತಂದೆಯವರ ಕನಸೇ ಕಾರಣ.ನನಗೆ ತಂದೆಯವರ ಕನಸನ್ನು ( ಅದು ನನ್ನ ಕನಸು ಕೂಡ ಅಗಿತ್ತು) ಅದು ಕೊನೆಯ ಅವಕಾಶವಾಗಿತ್ತು. ನಾನು ಬಿಎಸ್ಸಿ ಮಾಡಿದ್ದು ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿತವಳು.ನಾನು ಕಟೀಲಿನಲ್ಲಿ ಎಂಎ ಗೆ ಸೇರಿದಾಗ ಅಲ್ಲಿ ನನಗೆ ಪ್ರಬಲ ಪ್ರತಿಸ್ಪರ್ಧಿಗಳಿದ್ದರು. ಸಂಸ್ಕೃತ ವನ್ನು ಐಚ್ಛಿಕವಾಗಿ ಕಲಿತು ಪದವಿಯಲ್ಲಿ ರ‌್ಯಾಂಕ್ ತೆಗೆದ ರಮಿತಾ ,ಶ್ರೀದೇವಿ ಮೊದಲಾದವರು ನನ್ನ ಸಹಪಾಠಿಗಳಾಗಿದ್ದರು. ಆದರೆ ಮನೆ ಮಂದಿಯನ್ನೆಲ್ಲ‌ ಎದುರು ಹಾಕಿಕೊಂಡು ವಿವಾಹದ ನಂತರ ಕಲಿಯ ಹೊರಟ ನನಗೆ ಮಾಡು ಇಲ್ಲವೇ ಮಡಿ ಎಂಬ ಚಾಲೆಂಜ್ ಆಗಿತ್ತು ಅದು..ಏನೊ ದೇವರ ದಯೆ..ತಂದೆಯವರ ಮೊದಲ ರ‌್ಯಾಮಕಿನ ಕನಸು ಈಡೇರಿತ್ತು. .ಇರಲಿ ನಾನೀಗ ಹೇಳಲು ಹೊರಟ ವಿಚಾರ ಇದಲ್ಲ. ಸಂಬಂಧಿಕರಲ್ಲಿ ಅನೇಕ ಹೆಣ್ಣುಮಕ್ಕಳು ಹೈಸ್ಕೂಲ್ ಮೆಟ್ಟಿಲು ಹತ್ತದವರು ಇದ್ದರು.ಮನೆಯಲ್ಲಿ ಬೆಂಬಲ ಇಲ್ಲದ ಕಾರಣವೋ ಇನ್ನೇನು ಕಾರಣವೋ ತಿಳಿಯದು.ಇವರೆಲ್ಲ ಕಲಿಕೆಯಲ್ಲಿ ಕೂಡ ಹಿಂದಿದ್ದರು. ಇವರೆಲ್ಲ ಕಾಲೇಜಿಗೆ ಹೋಗುವವರ ಬಗ್ಗೆ ಮರ್ಯಾದೆ ಇಲ್ಲದವರು ಎಂಬ ಭಾವನೆಯನ್ನು ಸಮಾಜದಲ್ಲಿ ಬಿತ್ತಿದ್ದರು.ಕಾಲೇಜಿಗೆ ಹೋಗುವ ಹುಡುಗಿಯರು ಹಾದರ ಮಾಡಲು ಹೋಗುವವರು ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇತ್ತು. ಬಹಳ ನಾಚಿಕೆಯ ವಿಚಾರ ಏನೆಂದರೆ ನಾವು ಕೂಡ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಸೀನಿಯರ್ ಹುಡುಗಿಯರು ಒಬ್ಬಿಬ್ಬರು ಕಾಲೇಜಿಗೆ ಹೋಗುತ್ತಿದ್ದು ಅವರುಗಳ ಬಗ್ಗೆ ಜನರು ಕೆಟ್ಟದಾಗಿ ಹೇಳುತ್ತಿದ್ದುದನ್ನು ನಾನು ಕೂಡ ನಂಬಿದ್ದೆ . ಅವಳ ರೇಟ್ ರಿಕ್ಷಾ ಸ್ಟ್ಯಾಂಡ್ ಬಳಿ ನಿಂತ ಎಲ್ಲರಿಗೂ ಗೊತ್ತಂತೆ.ಕಾಲೇಜು ಬಿಡುವುದನ್ನೇ ರಿಕ್ಷಾದವರು ಕಾಯ್ತಾ ಇದ್ದರಂತೆ..ಆ ಹೋಟೆಲಿನಲ್ಲಿ ಯಾರ್ಯಾರೋ ಇವರಿಗೆ ಕಾಯ್ತಾರಂತೆ...ಇತ್ಯಾದಿ ತೀರಾ ಕೊಳಕು ವಿಚಾರಗಳು..ಊರಿಡೀ ಕೆಲಸದವರು ಅವರಿವರು ಎಲ್ಲರೂ ನಮಗಿಂತ ಮೊದಲು ಕಾಲೇಜಿಗೆ ಹೋದ ಹುಡುಗಿಯರ ಬಗ್ಗೆ ವರ್ಣರಂಜಿತವಾಗಿ ತಾವೇ ನೋಡಿದವರಂತೆ ಹೇಳುತ್ತಿದ್ದರು.ನಾನು ಕೂಡ ಅದನ್ನು ನಂಬಿದ್ದೆ.ಅದಕ್ಕೆ ಸರಿಯಾಗಿ ಕೆಲವು ಹುಡುಗಿಯರು ಬಸ್ ಡ್ರೈವರ್ ಕಂಡಕ್ಟರ್ ಗಳಲ್ಲಿ ಚೆಲ್ಲು ಚೆಲ್ಲಾಗಿ ವರ್ತಿಸುತ್ತಿದ್ದರು ಬೇರೆ. ಯಾವಾಗ ನಾನು ಕಾಲೇಜಿಗೆ ಕಾಲಿಟ್ಟನೋ ಇದೆಲ್ಲವೂ ಸುಳ್ಳೆಂದು ಖಚಿತವಾಗಿ ತಿಳಿಯಿತು. ಆದರೆ ನಮ್ಮ ಬಗ್ಗೆಯೂ ಜನ ಹಾಗೇ ಅಡಿಕೊಂಡಿರ್ತಾರೆ.ಇತರರು ಅದನ್ನು ನಂಬಿರಲೂ ಸಾಕು.ಕಾಲೇಜಿಗೆ ಹೋಗುವ ನಮ್ಮನ್ನು ಕುಹಕದ ದೃಷ್ಟಿಯಿಂದ ನೋಡುತ್ತಿದ್ದಿದು ನಮಗೆ ಅರಿವಾಗುತ್ತಿತ್ತು. ಆದರೆ ನಾವು ಅಸಹಾಯಕರು.ಈ ಬಗ್ಗೆ ಏನಾದರೂ ಮನೆಯಲ್ಲಿ ಹೇಳಿದರೆ ಕಾಲೇಜಿಗೆ ಹೋಗುದೇ ಬೇಡ ಎಂದು ನಿಲ್ಲಿಸಿದರೆ ಎಂಬ ಆತಂಕ.. ನಮ್ಮ ಮೊದಲು ಕಾಲೇಜಿಗೆ ಕಾಲಿಟ್ಟ ನಮ್ಮ ಸೀನಿಯರ್ ಹುಡುಗಿಯರ ಬಗ್ಗೆ ಜನ ಕಾ್ಟಿದ ಕಥೆಯನ್ನು ನಾನೂ ನಂಬಿದ ಬಗ್ಗೆ ಅವರುಗಳ ಬಗ್ಗೆ ಕುಹಕದಿಂದ ಮಾತನಾಡಿದ ಬಗ್ಗೆ ನನಗೆ ನಂತರ ತುಂಬಾ ಪಶ್ಚಾತ್ತಾಪ ಆಗಿದೆ.ಆದರೆ ಹನ್ನೆರಡು ಹದಿನಾಲ್ಕರ ವಯಸ್ಸು.. ಸತ್ಯಾಸತ್ಯತೆಯನ್ನು ಅರಿಯುವ ಪ್ರಾಯ ಅಲ್ಲ..ಎಂದು ಸಮಾಧಾನ ಪಟ್ಟುಕೊಳ್ಳಲು ಯತ್ನ ಮಾಡುವೆನಾದರೂ ನನ್ನ ವರ್ತನೆ ಬಗ್ಗೆ ನೆನಪಾದಾಗ ನಾಚಿಕೆ ಆಗಿ ತಲೆ ತಗ್ಗಿಸುವ ಹಾಗೆ ಆಗುತ್ತದೆ.. ಊರವರೆಲ್ಲ ಹೇಳುದನ್ನು ಕೇಳಿ ನಾನು ಸಹಪಾಠಿಗಳಲ್ಲಿ ಅದನೇ ಹೇಳಿದ್ದೆ..ಮತ್ತು ನಾವೆಲ್ಲ ಕಾಲೇಜಿಗೆ ಮುಂದೆ ಹೋದಾಗ ಹಾಗೆ ಮಾಡದೇ ಕಲಿಯಬೇಕು ಎಂದಿದ್ದೆ ..ಛೇ‌. ಸದ್ಯ ಈಗ ಕಾಲ ಬದಲಾಗಿದೆ,ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆ ಪಡುವ ಕಾಲ ಬಂದಿದೆ ಎಂಬುದು ಸಂತಸದ ವಿಚಾರ. ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಾಗ ಈ ವಿಚಾರ ನೆನಪಾಯಿತು.

No comments:

Post a Comment