Saturday 25 August 2018

ಬದುಕ ಬಂಡಿಯಲಿ‌23 :ನನ್ನ ‌ಮೊದಲ ಉಪನ್ಯಾಸ ಡಾ.ಲಕ್ಷ್ಮೀ ಜಿ ಪ್ರಸಾದ ‌


ನನ್ನ ‌ಮೊದಲ‌ ಉಪನ್ಯಾಸ ..
ನಾನು ಸುಮಾರು ಇನ್ನೂರೈವತ್ತು   ಇನ್ನೂರೆಂಬತ್ತು ಉಪನ್ಯಾಸಗಳನ್ನು ಬೇರೆ ಬೇರೆ ವಿಷಯಗಳ ಬಗ್ಗೆ  ನೀಡಿದ್ದೇನೆ‌.
ನನ್ನ ಮೊದಲ ಉಪನ್ಯಾಸ ರಕ್ಷಾ ಬಂಧನ ದ ಕುರಿತು  ಕಲ್ಲಡ್ಕ ಶಾಲೆಯಲ್ಲಿ ಆಗಿತ್ತು .ಆಗ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ಬಗ್ಗೆ ,ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿದ್ದೆ‌.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ನಾನು ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಇದ್ದೆ‌.ಆಗಷ್ಟೇ ಎರಡನೇ ವರ್ಷದ ಎಂಎ ಪರೀಕ್ಷೆ ಮುಗಿಸಿ ಕೆಲಸಕ್ಕೆ ಸೇರಿದ್ದೆ‌.ಫಲಿತಾಂಶ ಇನ್ನೂ ಬಂದಿರಲಿಲ್ಲ.
 ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ನಿಮಿತ್ತ ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಉಪನ್ಯಾಸ ನೀಡಲು ಯಾರನ್ನೋ ಆಹ್ವಾನಿಸಿದ್ದು ,ಆ ದಿನ ಬೆಳಗ್ಗೆ ಅವರಿಗೆ ಬರಲಾಗುವುದಿಲ್ಲ ಎಂದು ಯಾರಲ್ಲೋ ಹೇಳಿಕಳುಹಿಸಿದ್ದರು.ಆಗ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದು ಯಾರು ಎಂಬ ಸಮಸ್ಯೆ ಉಂಟಾಯಿತು‌.ಆಗ ಅಲ್ಲಿ ಮುಖ್ಯೋಪಾಧ್ಯಾಯ ರಾಗಿದ್ದ ಗೋಪಾಲ್ ರಾವ್ ಅವರು ನನ್ನಲ್ಲಿ ರಕ್ಷಾ ಬಂಧನದ ಬಗ್ಗೆ ಅರ್ಧ ಗಂಟೆ ಮಾತನಾಡಿ ಎಂದು ಹೇಳಿದರು‌.ಆರಂಭದಲ್ಲಿ ನಾನು ಹಿಂದೇಟು ಹಾಕಿದೆ‌.ಆಗ ಅಲ್ಲಿ ಶಿಕ್ಷಕಿಯಾಗಿದ್ದ ಸಂಧ್ಯಾ ಮಾತಾಜಿ ಹಾಗೂ ಐತಪ್ಪ ಮಾಸ್ಟರ್ ಅವರು ಒತ್ತಾಸೆಯಾಗಿ ನಿಂತು ಧೈರ್ಯ ತುಂಬಿದರು‌."ನೀವು‌ಮುಂದೆ ಕಾಲೇಜು ಉಪನ್ಯಾಸಕರಾಗಲಿರುವವರು. ಮೈಕ್ ಹಿಡಿದು ನಾಲ್ಕು ಮಾತಾಡಲು ಹಿಂದೇಟು ಹಾಕಿದರೆ ಹೇಗೆ? ಬರೆಯುವ ಹವ್ಯಾಸ ನಿಮಗಿದೆ.ಅಂತೆಯೇ ಉಪನ್ಯಾಸ ನೀಡುವುದಕ್ಕೂ ಅಭ್ಯಾಸಮಾಡಿಕೊಳ್ಳಿ.ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ಸಂಧ್ಯಾ ಮಾತಾಜಿ ಹೇಳಿದ್ದು ಈಗಲೂ ಕಿವಿಯಲ್ಲಿ ಅನುರಣಿಸುತ್ತದೆ.ನಂತರ ರಕ್ಷಾ ಬಂಧನಕ್ಕೆ ಸಂಬಂಧಿಸಿದ ಎರಡು ‌ಮೂರು ಕಥೆಗಳನ್ನು ನನಗೆ ಹೇಳಿಕೊಟ್ಟು ಭಾಷಣಕ್ಕೆ ತಯಾರಾಗಲು ನನಗೆ ಸಹಾಯ ಮಾಡಿದರು .
ಅಂತೂ ಇಂತೂ ಸಭಾ ಕಾರ್ಯಕ್ರಮದಲ್ಲಿ ಇಪ್ಪತ್ತು ನಿಮಿಷ ಮಾತನಾಡಿದೆ‌.ನಾನು ನೀಡಿದ  ಮೊದಲ ಉಪನ್ಯಾಸವದು.ಚೆನ್ನಾಗಿ ಮಾತನಾಡಿದ್ದೇನೆ ಎಂದು ಮುಖ್ಯೋಪಾಧ್ಯಾಯರು ಮತ್ತು ಉಳಿದ ಅಧ್ಯಾಪಕರು ಮೆಚ್ಚುಗೆಯನ್ನು ತಿಳಿಸಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.
ಅದಕ್ಕೂ ಮೊದಲು ನಾನು ಶಾಲಾ ಕಾಲೇಜುಗಳಲ್ಲಿ ಸ್ಪರ್ಧೆಯಲ್ಲಿ ಭಾಷಣ ಮಾಡಿ ಬಹುಮಾನ ಪಡೆದುಕೊಂಡಿದ್ದೆ‌.ಆದರೆ ಸ್ಪರ್ಧೆಯಲ್ಲಿ ಐದು ಹತ್ತು ನಿಮಿಷ ಮಾತನಾಡುವುದಕ್ಕೂ ತುಂಬಿದ ಸಭೆಯಲ್ಲಿ ಭಾಷಣ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ.
ಈ ನಿಟ್ಟಿನಲ್ಲಿ ನನಗೆ ಉಪನ್ಯಾಸ ನೀಡಲು ಅವಕಾಶ ನೀಡಿ,ನಾನು ಕೂಡ ಉಪನ್ಯಾಸ ನೀಡಬಲ್ಲೆ ಎಂಬ ಧೈರ್ಯವನ್ನು ತುಂಬಿದ ಶ್ರೀರಾಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ  ಗೋಪಾಲ್ ರಾವ್ ಮತ್ತು ಅಧ್ಯಾಪಕರನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುವೆ .
ಇದಕ್ಕೂ ಒಂದು ವರ್ಷದ  ಮೊದಲು ನಮ್ಮ ಊರು ಕೋಡಪದವಿನಲ್ಲಿ ಕೃಷ್ಣಾಷ್ಟಮಿ  ಮತ್ತು ರಕ್ಷಾ ಬಂಧನ ಹಬ್ಬದ ನಿಮಿತ್ತ ಒಂದು ಸಭಾ ಕಾರ್ಯಕ್ರಮ ಆಯೋಜಿಸಿದ್ದರು.ಅದರಲ್ಲಿ ಒಂದು ಉಪನ್ಯಾಸ ನೀಡುವಂತೆ ಮಾತಾಜಿಯವರು ತಿಳಿಸಿದ್ದರು.ಆದರೆ  ಸ್ಥಳೀಯರಾಗಿ  ಬಲಿಷ್ಠರಾಗಿದ್ದ  ನಮ್ಮ ಹತ್ತಿರದ ಸಂಬಂಧಿಯೊಬ್ಬರು ( ಪ್ರಸಾದರ ದೊಡ್ಡಪ್ಪನ ಮಗ) ಇದು ಗೊತ್ತಾಗಿ ಹೊಟ್ಟಿಕಿಚ್ಚಿನಿಂದ ನನಗೆ ಅಲ್ಲಿ  ನೀಡಿದ ಅವಕಾಶ ವನ್ನು ತಪ್ಪಿಸಿ ,ಆ ದಿನ ಉಪನ್ಯಾಸ ನೀಡಲು ಬೇರೆ ಯಾರನ್ನೋ ಕರೆಸಿದ್ದರು. ಈ ಬಗ್ಗೆ ನನ್ನ ಅತ್ತೆಯವರೇ "ಅಬ್ಬಾ ಇವರುಗಳ ಮತ್ಸರವೇ !ಎಂದು ಉದ್ಗರಿಸಿದ್ದರು. ಸಾಮಾನ್ಯವಾಗಿ ನನ್ನ ಅತ್ತೆಯವರು ಅವರ ಕಡೆಯವರನ್ನು(  ನನ್ನ ಗಂಡನ ಮನೆ ಸಂಬಂಧಿಕರನ್ನು ) ಬಿಟ್ಟುಕೊಡುತ್ತಿರಲಿಲ್ಲ.ಆದರೆ ಈ ವಿಷಯದಲ್ಲಿ ಅವರಿಗೆ ಕೂಡ ನಮ್ಮ ಸಂಬಂಧಿಕರ ಹೊಟ್ಟೆಕಿಚ್ಚಿನ ಅರಿವಾಗಿತ್ತು.
ಇಲ್ಲಿ ತಪ್ಪಿದ ಅವಕಾಶ ಮತ್ತೆ ನನಗೆ ಕಲ್ಲಡ್ಕ ಶಾಲೆಯಲ್ಲಿ ದೊರೆತಿತ್ತು .ಜಗತ್ತು ಬಹಳ ವಿಶಾಲವಾಗಿದೆ‌.ಕೊಲ್ಲುವ ಶಕ್ತಿಗಿಂತ ಕಾಯುವ ದೇವರು ಬಲಿಷ್ಠನಾಗಿರುತ್ತಾನೆ.ಕಾಲೆಳೆಯುವ ಮಂದಿ ಕೆಲವರಿದ್ದರೆ ಬೆಂಬಲಕೊಡುವವರು ನೂರಾರು ಜನರಿರುತ್ತಾರೆ ಎಂಬುದು ಮೊದಲ ಬಾರಿಗೆ ನನಗೆ ಇಲ್ಲಿಯೇ ಅರಿವಾದದ್ದು.ಹಾಗಾಗಿಯೇ ಕೊಲ್ಲುವ ದೇವರಿಗಿಂತ ಕಾಯುವ ದೇವರು ದೊಡ್ಡವನು ಎಂಬ ನಿಲುವನ್ನು ಆಧರಿಸಿ ಉಪನ್ಯಾಸ ನೀಡಿದ್ದೆ .

Saturday 11 August 2018

ದೊಡ್ಡವರ ದಾರಿ 61 ಅತುಲ ಆತ್ಮ ವಿಶ್ವಾಸದ ತರುಣ ಹನುಮಂತ ನಾಯಕ್© ಡಾ.ಲಕ್ಷ್ಮೀ ಜಿ ಪ್ರಸಾದ

ನೋಡ್ತಾ ಇರಿ ಮೇಡಂ, ಒಂದಲ್ಲ ಒಂದಿನ ನಾನು ಒಳ್ಳೆಯ ಕೆಲಸ ಪಡೆಯುತ್ತೇನೆ..ಎಂದ ಇಪ್ಪತ್ತೈದರ ತರುಣ ಹನುಮಂತ ನಾಯಕ್ ನ ಆತ್ಮವಿಶ್ವಾಸದ ಮಾತು ನನಗೆ ಬಹಳ ಇಷ್ಟವಾಯಿತು.ದಿನಾಲು ಬೆಂಗಳೂರಿನ ನಮ್ಮ ಮನೆಯಿಂದ ನೆಲಮಂಗಲದ ಕಾಲೇಜಿಗೆ ಓಲಾ ಅಥವಾ ಉಬರಚ ಕ್ಯಾಬ್ ನಲ್ಲಿ ಹೋಗಿ ಬರುತ್ತೇನೆ.ಸಾಮಾನ್ಯವಾಗಿ ಮುಂದಿನ ಸೀಟಿನಲ್ಲೇ ಕುಳಿತುಕೊಳ್ಳುತ್ತೇನೆ‌.ಹೆಚ್ಚಾಗಿ ಕಾರಿನಲ್ಲಿ ಕುಳಿತ ತಕ್ಷಣವೇ ಫೇಸ್ ಬುಕ್, ವಾಟ್ಸಪ್ ,ಬ್ಲಾಗ್ ಗಳಲ್ಲಿ ಮುಳುಗಿ ಹೋಗುತ್ತೇನೆ.ಒಳ್ಳೆಯ ಮೂಡ್ ಇದ್ದ ದಿನ ಕ್ಯಾಬ್ ಡ್ರೈವರ್ ಗಳ ಸ್ಥತಿ ಗತಿ ಬಗ್ಗೆ ಮಾತನಾಡುವುದೂ ಇದೆ.ಹೆಚ್ಚಿನ ಕ್ಯಾಬ್ ಡ್ರೈವರ್ ಗಳು ನಮಗೇನೂ ಅಸಲಾಗುವುದಿಲ್ಲ ಮೇಡಂ. ಇಪ್ಪತ್ತಾರು ಸೆಕಡಾ ಕಮಿಷನ್ ಕೊಟ್ಟ ಮೇಲೆ ನಮಗೇನೂ ಉಳಿಯುವುದಿಲ್ಲ‌. ಕಾರಿನ  ಸಾಲದ ತಿಂಗಳ ಕಂತು ಕಟ್ಟಲಾಗದೆ
ತುಂಬಾ ಜನರ ಕಾರುಗಳು ಸೀಸ್ ಆಗಿವೆ ಇತ್ಯಾದಿಯಾಗಿ ಹೇಳುತ್ತಾ ಇರುತ್ತಾರೆ.
ನಮ್ಮ ಕಾಲೇಜಿನಲ್ಲಿ ಮೊದಲ‌ ಕಿರು ಪರೀಕ್ಷೆ ಮುಗಿಸಿ ಉತ್ತರ ಪತ್ರಿಕೆ ತಿದ್ದಲು ಮನೆಗೆ ತಗೊಂಡು ಬಂದೆ.ಬರುವಾಗ   ನೆಲಮಂಗಲದಿಂದ ಮನೆಗೆ ಉಬರ್ ಕ್ಯಾಬ್ ನಲ್ಲಿ ಬಂದೆ.ನನ್ನ ಕೈಯಲ್ಲಿ ಇದ್ದ ಉತ್ತರ ಪತ್ರಿಕೆಗಳ ದೊಡ್ಡ ಕಟ್ಟನ್ನು ನೋಡಿದ ಕ್ಯಾಬ್ ಡ್ರೈವರ್ ನೀವು ಟೀಚರಾ ಮೇಡಂ ಎಂದು ಕೇಳಿದರು.ಹೌದು,ನಾನು ನೆಲಮಂಗಲ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದೇನೆ ಎಂದು ಹೇಳಿದೆ.
ಆಗ ಅವರು "ನಾನು ಕೂಡ ಡಿಎಡ್ ಮಾಡಿದ್ದೇನೆ ಮೇಡಂ" ಎಂದು ಹೆಮ್ಮೆಯಿಂದ ಹೇಳಿದರು.ಮತ್ಯಾಕೆ ಶಿಕ್ಷಕರಾಗಲಿಲ್ಲ ಎಂದು ಕೇಳಿದೆ.ಆಗ ನಾನು ಖಾಸಗಿಯಾಗಿ ಒಂದೆರಡು ಶಾಲೆಗಳಲ್ಲಿ ಕೆಲಸ ಮಾಡಿದೆ ಮೇಡಂ. ಎಂಟು ಹತ್ತು ಸಾವಿರ ಸಂಬಳ ಕೊಡ್ತಾರೆ.ಅದು ಎಲ್ಲಿಗೂ ಸಾಕಾಗುವುದಿಲ್ಲ.ಅದಕ್ಕೆ ಸರಿಯಾದ ಕೆಲಸ ಸಿಗೋ ತನಕ ಇರಲಿ ಅಂತ ಕಾರು ಓಡಿಸುತ್ತಿದ್ದೇನೆ ಎಂದು ಹೇಳಿದರು. ಆಗ ಇದರಲ್ಲಿ ಅಸಲಾಗುತ್ತಾ ಬರುತ್ತಾ ?   ನಿಮಗೆ ಎಷ್ಟು ಆದಾಯ ಬರುತ್ತದೆ ಎಂದು ಕೇಳಿದೆ.ಆಗ ಅವರು ನಮಗೆ ವಾರಕ್ಕೆ  ಇಪ್ಪತ್ತೈದು ಮೂವತ್ತು  ಸಾವಿರದಷ್ಟು ಬ್ಯುಸಿನೆಸ್‌ ಸಿಗುತ್ತದೆ. ಕಮಿಷನ್, ಡೀಸೆಲ್ ಬೆಲೆ ಬಿಟ್ಟು ವಾರಕ್ಕೆ ಇಪ್ಪತ್ತು ಸಾವಿರದಷ್ಟು ಆದಾಯ ಬರುತ್ತದೆ .ತಿಮಗಳಿಗೆ ಹದಿನೆಂಟು ಸಾವಿರ ಕಾರಿನ ಸಾಲದ ಕಂತು ಇರುತ್ತದೆ.ಉಳಿದ ಐವತ್ತು ಅರುವತ್ತು ಸಾವಿರ ನಮಗೆ ಉಳಿಯುತ್ತದೆ ಎಂದು ಹೇಳಿದರು. ಅರೇ! ಎಲ್ರೂ ವರಗಕ್ ಒಔಟ್ ಆಗಲ್ಲ ಎಂದು ಅಲವತ್ತುಕೊಳ್ತ್ತಾ ಇದ್ದರೆ ಇವರು ಇಷ್ಟು ಅದಾಯ ಗಳಿಸುವ ಬಗ್ಗೆ ಹೇಳುತ್ತಾರಲ್ಲ ಎಂದು ಸಂತಸವಾಯಿತು ಜೊತೆಗೆ ಒಂಚೂರು ಆಶ್ಚರ್ಯ ಕೂಡ ಅಯಿತು.ಮತ್ತೆ ತುಂಬಾ ಜನ ನಮಗೆ ಲಾಸ್ ಆಗುತ್ತಿದೆ, ಎಂದು ಹೇಳುತ್ತಾರಲ್ಲ ? ಎಂದು ಕೇಳಿದೆ.ಸೋಮಾರಿಗಳು ಮೇಡಂ ಅವರು.ಬೆಳಗ್ಗಿನಿಂದ ಸಂಜೆ ತನಕ ಮೈಗಳ್ಳತನ ಬಿಟ್ಟು ದುಡಿದರೆ ಇಲ್ಲೂ ದುಡ್ಡು ಬರುತ್ತೆ ಮೇಡಂ. ಕೆಲವೊಮ್ಮೆ ಮನೆಯಿಂದ ಹೊರಟು ಒಂದೆರಡು ಗಂಟೆ ಕಳೆದರೂ ಡ್ಯೂಟಿ ಬೀಳಲ್ಲ .ಆಗೆಲ್ಲ ತಾಳ್ಮೆಯಿಂದ ಕಾಯಬೇಕಾಗುತ್ತದೆ‌. ಬಿದ್ದ ಡ್ಯೂಟಿನ ಮಾಡಬೇಕು  ಅದು ಬಿಟ್ಟು ಕಂಪೆನಿನ ಬೈಕೊಂಡು ಮನೆಗೆ ಹೋಗಿ ಮಲಕ್ಕೊಂಡರೆ ದುಡ್ಡು ಎಲ್ಲಿಂದ ಬರುತ್ತೆ ಮೇಡಂ ? ಎಂದು ಹೇಳಿದರು.ಹೌದು.ಅವರು ಟೊಯೋಟಾ ಇಟಿಯೋಸ್ ಕಾರನ್ನು ಖರೀದಿಸಿ ಉಬರ್ ಗೆ ಕನೆಕ್ಟ್ ಮಾಡಿಕೊಂಡಿದ್ದಾರೆ.ಹನುಮಂತ ನಾಯಕ್  ಮತ್ತು ಅವರ ತಮ್ಮ ಒಗ್ಗಟ್ಟಿನಂದ ಕೆಲಸ ಮಾಡುತ್ತಾರೆ. ಇವರು ಹಗಲು ಹೊತ್ತಿನಲ್ಲಿ ಕಾರು ಓಡಿಸುತ್ತಾರೆ.ಇವರ ಸಹೋದರ ರಾತ್ರಿ ಹೊತ್ತು ಇದೇ ಕಾರನ್ನು ಓಡಿಸುತ್ತಾರೆ.ದಿವಸಕ್ಕೆ ಮೂರು ನಾಲ್ಕುಸಾವಿರ ದುಡಿಯಲೇ ಬೇಕೆಂಬ ಗುರಿ ಇಟ್ಟುಕೊಂಡು ರಸ್ತೆಗೆ ಇಳಿಯುತ್ತಾರೆ‌ಟಾರ್ಗೆಟ್ ತಲುಪಿದ ನಂತರವೇ ಮನೆಗೆ ಹಿಂದಿರುಗುತ್ತಾರೆ‌.ಅವರು ಗುರಿ ತಲುಪುವಲ್ಲಿಯವರೆಗೆ ಡ್ಯೂಟಿಗಾಗಿ ತಾಳ್ಮೆಯಿಂದ ಕಾಯುತ್ತಾರೆ‌.ಹಾಗಾಗಿ ಸಾಕಷ್ಟು ಸಂಪಾದನೆ ಕೂಡ ಮಾಡುತ್ತಾರೆ.ಮಾತಿನ ನಡುವೆ ಅವರು ಡಿಎಡ್ ಮಾಡಿದ ನಂತರ ಬಿಎ ಓದಿ ನಂತರ ಎಂ್ ಎಸ್ ಡಬ್ಯು ಕೂಡ ಓದಿರುವುದು ತಿಳಿಯಿತು. ಕಾರು ಓಡಿಸುವ ಕಾಯಕ ಮಾಡುತ್ತಲೇ ಒಳ್ಳೆಯ ಕೆಲಸಕ್ಕಾಗಿ ಕೂಡ ಪ್ರಯತ್ನ ಮಾಡುತ್ತಿದ್ದಾರೆ‌.ಅಗ ಮಾತಿನ ನಡುವೆ ನೋಡುತ್ತಿರಿ ಮೇಡಂ, ಒಂದಲ್ಲ ಒಂದು ದಿನ ನಾನು ಒಳ್ಳೆಯ ಕೆಲಸ ಪಡೆದೇ ಪಡೆಯುತ್ತೇನೆ ಎಂದು ಬಹಳ ಆತ್ಮವಿಶ್ವಾಸದಿಂದ ಹೇಳಿದರು‌.ನನಗೂ ಕೂಡ ಅವರು ಅದನ್ನು ಸಾಧಿಸಿಯಾರು ಎನಿಸಿತು.ಅಥವಾ ಸ್ವ ಉದ್ಯೋಗ ಮಾಡುತ್ತಲೇ ಈ ಇಬ್ಬರು ಯುವಕರು ಉನ್ನತ ಮಟ್ಟದ ಸಾಧನೆಯನ್ನು ಮಾಡಬಹುದು ಎನಿಸಿತು‌.ಧನಾತ್ಮಕ ಚಿಂತನೆ,ಪ್ರಾಮಾಣಿಕತೆ ಮತ್ತು ಪರಿಶ್ರಮ ಇದ್ದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ.ಈ ಯುವಕರಲ್ಲಿ ಈ ಮೂರೂ ಗುಣಗಳಿವೆ. ಇವುಗಳ ಮೂಲಕ ಉನ್ನತ ಸಾಧನೆಯನ್ನು ಮಾಡಲಿ ಎಂದು ಹಾರೈಸುವೆ
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ,ಬೆಂಗಳೂರು ಗ್ರಾಮಾಂತರ ಜಿಲ್ಲೆ