Sunday 27 May 2018

ಬದುಕ ಬಂಡಿಯಲಿ 12 ಆಕೆ ಅದೇ ಡಾಕ್ಟರ್ ನ ಮಗಳಾಗಿದ್ದಳು©..ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ 12
ಆಕೆ ಅದೇ ಡಾಕ್ಟರ್ ನ ಮಗಳಾಗಿದ್ದಳು..©ಡಾ.ಲಕ್ಷ್ಮೀ ಜಿ ಪ್ರಸಾದ
ವಯಸಾಗ್ತಾ ಆಗ್ತಾ ನಮಗೆ ನೆನಪಿನ ಶಕ್ತಿ ಕಡಿಮೆಯಾಗುತ್ತಂತೆ.ಹಾಗಾಗಿ ಬರೆಯ ಬೇಕೆಂದು ಕೊಂಡಿರುವುದನ್ನು  ನೆನಪಿರುವಾಗಲೇ ಬರೆಯಬೇಕೆಂತೆ.ನನ್ನ ಅಮ್ಮ ಯಾವಾಗಲೂ ಇಂತಹ ಘಟನೆಗಳನ್ನು ಬರೆದಿಡು ಎನ್ನುತ್ತಾ ಇರುತ್ತಾರೆ .
 ಹಾಗಾಗಿ ಮರೆಯುವ ಮುನ್ನ ಬರೆದೆ ಯಾವ ವೈದ್ಯರು ಹತ್ತು ಸಾವಿರ ರು ಡೆಪಾಸಿಟ್ ಕಟ್ಟದೆ ಇದ್ದುದಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದರೋ ಆಕೆ ಅದೇ ಡಾಕ್ಟರ್ ನ ಮಗಳಾಗಿದ್ದಳು!
ಈ ಕಾಲದ ಆಟ ಬಹಳ ವಿಚಿತ್ರವಾದುದು.ನಾನು ಸೋಮಾರಿ ಹಾಗಾಗಿ ಯಾವುದನ್ನೂ ಹುಡುಕಿಕೊಂಡು ಹೋಗಿ ಮಾಡುವುದಿಲ್ಲ ಆದರೆ ಅನಿವಾರ್ಯ ಸಂದರ್ಭ ಎದುರಾದಾಗ ಹಿಂದೆ ಮುಂದೆ ನೋಡದೆ ಮುನ್ನುಗ್ಗುವೆ.
ಸುಮಾರು  ಎಂಟು ಹತ್ತು  ವರ್ಷದ ಹಿಂದಿನ ಘಟನೆಯನ್ನು ನೆನಪಿಸಿಕೊಂಡೆ.
ಇಸವಿ ದಿನಾಂಕ ನೆನಪಿಲ್ಲ ‌. 2007- 2008 ರಲ್ಲಿ ಇರಬಹುದು . ನನಗಿನ್ನೂ ಸರಕಾರಿ ಉದ್ಯೋಗ ದೊರೆತಿರಲಿಲ್ಲ .
ನಾನು  ಎರಡನೇ ಡಾಕ್ಟರೇಟ್ ಪದವಿ ಅಧ್ಯಯನಕ್ಕಾಗಿ  ದ್ರಾವಿಡ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೆ.ಅದರಲ್ಲಿ ನನ್ನ ಫೋನ್ ನಂಬರ್ ಅನ್ನು ಕೂಡ ಹಾಕಿದ್ದೆ.ಒಂದು ದಿನ ಅಲ್ಲಿನ ತುಳು ವಿಭಾಗದ ಮುಖ್ಯಸ್ಥರಾದ ಡಾ.ಶಿವಕುಮಾರ್ ಅವರು ದಾಖಲೆಗಳೊಂದಿಗೆ ಬರುವಂತೆ ಬರೆದ ಪತ್ರ ತಲುಪಿತು.ಆಗ ನನಗೆ ಕುಪ್ಪಂ ಎಲ್ಲಿದೆ ಎಂದು ತಿಳಿದಿರಲಿಲ್ಲ ಮತ್ತು ಆಗಿನ್ನೂ ಈಗಿನಂತೆ ಎಲ್ಲ ಕಡೆಗೆ ಒಬ್ಬಳೇ ಓಡಾಡಿ ಅಭ್ಯಾಸ ಇರಲಿಲ್ಲ ‌
ಪ್ರಸಾದ್ ಆಗಷ್ಟೇ ಈಗ ಇರುವ ಕಂಪೆನಿಗೆ ಕೆಲಸಕ್ಕೆ ಸೇರಿದ್ದರು‌.ಹಾಗಾಗಿ ರಜೆ ಹಾಕಿ ನನ್ನನ್ನು ಕುಪ್ಪಂಗೆ ಕರೆದುಕೊಂಡು ಹೋಗಲು ಸಾಧ್ಯವಿರಲಿಲ್ಲ. ಆಗ ನನ್ನ ಸಹಾಯಕ್ಕೆ ಬಂದವರು  ನನ್ನ ಸಣ್ಣ ತಮ್ಮ ಗಣೇಶ್ ಭಟ್‌
ಅದಕ್ಕಾಗಿಯೇ ಮಂಗಳೂರಿನಿಂದ ಬೆಂಗಳೂರಿಗೆ ಬಂದು ನನ್ನ ಜೊತೆಗೆ ಕುಪ್ಪಂ ಗೆ ಬರುತ್ತೇನೆ ಎಂದು ಹೇಳಿದರು‌.ಅಂತೆಯೇ ನಾನು‌ ತಮ್ಮ ಬೆಂಗಳೂರಿನಿಂದ ಬೆಳಗ್ಗಿನ ಚೆನ್ನೈ ಎಕ್ಸ್‌ಪ್ರೆಸ್ ರೈಲು ಹತ್ತಿ ಕುಪ್ಪಂ ಗೆ ಬಂದು ಅಲ್ಲಿಂದ ಅಟೋ ಹಿಡಿದು ದ್ರಾವಿಡ ವಿಶ್ವವಿದ್ಯಾಲಯಕ್ಕೆ ಬಂದು ತುಳು ವಿಭಾಗಕ್ಕೆ ಬಂದೆವು.ಡಾ.ಶಿವಕುಮಾರ್ ಜೊತೆ ವೀಸಿ ಅವರನ್ನು ಭೇಟಿ ಮಾಡಿದೆ.
ನಂತರ ಪ್ರೊಫೆಸರ್ ಶಿವ ಕುಮಾರ್ ಅವರ ಮನೆಗೆ ಹೋಗಿ ಊಟ ಮಾಡಿ ಹಿಂತಿರುಗಿದೆವು.
ಇದಾಗಿ ತಿಂಗಳ ನಂತರ ಪ್ರೊಫೆಸರ್ ಪೋನ್ ಮಾಡಿ ಶುಲ್ಕ ತುಂಬಿ  ಸಾರ ಲೇಖ ಸಲ್ಲಿಸಿ  ಪಿಎಚ್ ಡಿ ಅಧ್ಯಯನಕ್ಕೆ ರಿಜಿಸ್ಟ್ರೇಷನ್ ಮಾಡಲು ತಿಳಿಸಿದರು.
ಈ ಬಾರಿ ನಾನು ಒಬ್ಬಳೇ ಕುಪ್ಪಂ ಗೆ ಹೊರಟೆ.ಮೊದಲು ಹೋದಂತೆ ಚೆನ್ನೈ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ಹೊರಟಿದ್ದೆ.ಬಂಗಾರ್ ಪೇಟೆ ಮಾಲೂರು ದಾಟಿ ಸುಮಾರು ದೂರ ಹೋಗುವಷ್ಟರಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ರೈಲು ನಿಂತಿತು ‌.ಅರ್ಧ ಗಂಟೆ ಕಳೆದರೂ ಹೊರಡಲಿಲ್ಲ.ರೈಲಿಗೆ ಏನೋ ಸಮಸ್ಯೆ ಆಗಿತ್ತು.

 ಹೆಚ್ಚಿನವರೂ ಇಳಿದು ನಡೆಯ ತೊಡಗಿದರು ‌.ಅಲ್ಲಿಂದ ಸ್ವಲ್ಪ ದೂರ ನಡೆದರೆ ರಸ್ತೆ ಸಿಗುತ್ತದೆ ಎಂದೂ ,ಅಲ್ಲಿ ಯಾವುದಾದರೂ ಗಾಡಿ ಹತ್ತಿ ಎರಡು ಕಿಲೋಮೀಟರ್ ದೂರ ಹೋದರೆ ಅಲ್ಲಿ ಬಸ್ ಬರುವ ರಸ್ತೆ ಇದೆ.ಅಲ್ಲಿಂದ ಕೆಜಿಎಫ್ ಹೋಗಿ ಬಸ್ ಹಿಡಿದು ಹೋಗಲು ಆಗುತ್ತದೆ ಎಂದು ಒಬ್ಬ ಪ್ರಯಾಣಿಕರು ನನಗೆ ಮಾಹಿತಿ ನೀಡಿದರು.
ನಾನು ಕೂಡ ಬೇರೆ ದಾರಿಯಲಿಲ್ಲದೆ ಇಳಿದು ನಡೆಯತೊಡಗಿದೆ.ಸ್ವಲ್ಪ ದೂರ ಮಣ್ಣಿನ ದಾರಿಯಲ್ಲಿ ನಡೆದಾಗ  ಅದೃಷ್ಟವಶಾತ್ ಒಂದು ಆಟೋ ಬಂತು.ಕೆಜಿಎಫ್ ಬಿಡಲು ಹೇಳಿದಾಗ ಆತ ನಾನು‌ ಕುಪ್ಪಂ ಕಡೆಗೆ ಹೋಗುತ್ತಿದ್ದೇನೆ.ಅ ಕಡೆ ಬರುವುದಾದರೆ ಬನ್ನಿ ಎಂದು ಅರ್ಧ ಕನ್ನಡ ಅರ್ಧ ತೆಲುಗು ಅರ್ಧ ತಮಿಳು ಮಿಶ್ರ ಮಾಡಿ ಹೇಳಿದ.ನನಗೂ ಕುಪ್ಪಂಗೆ ಹೋಗಬೇಕಿತ್ತು ತಾನೇ ? ಹುಡುಕುವ ಬಳ್ಳಿ ಕಾಲಿಗೆ ತೊಡರಿದಂತಾಗಿ ಖುಷಿಯಿಂದ ಹತ್ತಿ ಕುಳಿತೆ.
ನಿರ್ಜನವಾದ ಮಣ್ಣಿನ ರಸ್ತೆಯಲ್ಲಿ ಅಟೊ ಹೋಗುತ್ತಾ ಇತ್ತು.ನಿನಗೆ ಸರಿಯಾಗಿ ದಾರಿ ಗೊತ್ತು ತಾನೇ ಎಂದು ಅಟೊಚಾಲಕನಲ್ಲಿ ಕೇಳಿದೆ‌.ತಾನು ಕುಪ್ಪಂ ನವನು ತನ್ನ ಸಂಬಂಧಿಕರ ಮನೆಗೆ ಬಂದಿದ್ದೆ ‌.ಈ ದಾರಿಯಲ್ಲಿ ಹೋದರೆ ಬೇಗೆ ತಲುಪುತ್ತದೆ‌.ಇದು ಶಾರ್ಟ್ ಕಟ್ ದಾರಿ ಎಂದು ತಿಳಿಸಿದ‌.ಅವನು ಹೇಳಿದ್ದನ್ನು ನಂಬುವುದು ಬಿಟ್ಟರೆ ನನಗೆ ಬೇರೆ ದಾರಿ ಇರಲಿಲ್ಲ.
ಸುಮಾರು ದೂರ ಯಾವ್ಯಾವುದೋ ಮಣ್ಣಿನ ಕೊರಕಲು ರಸ್ತೆಯಲ್ಲಿ ಸಾಗಿತು.ಎತ್ತ ನೋಡಿದರೂ ಕಲ್ಲಿನ ಕೊಟಕು ಕಾಣಿಸುತ್ತದೆ.ಸುತ್ತ ಮುತ್ತ ಕರಿ ಬಂಡೆಗಳು.ಅಟೋ ಒಂದು ಕೊರಕಲಿನಲ್ಲಿ ಅಟೋ ತಿರುಗಿದಾಗ ಅಲ್ಲೇ ಒಂದು ಬಂಡೆ ಬದಿಯಲ್ಲಿ ಯಾರೋ ಬಿದ್ದಿರುವ ಹಾಗಿ ಕಾಣಿಸಿತು‌.ಅಲ್ಲೆ ಪಕ್ಕದಲ್ಲಿ ಒಂದು ಸ್ಕೂಟಿ ಕೂಡ ಬಿದ್ದಿರುವುದು ಕಾಣಿಸಿತು‌.ಊರಲ್ಲದ ಊರಿನ ಅಪರಿಚಿತ ಪ್ರದೇಶದಲ್ಲಿ ಇಲ್ಲದ ಉಸಾಬರಿ ನನಗೇಕೆ ಎಂದು ಅನಿಸಿತು‌.ಆದರೂ ಅ ಸ್ಕೂಟಿಯಲ್ಲಿ ಯಾರಾದರೂ ಅಕ್ಸಿಡೆಂಟ್ ಆಗಿ ದುರಕ್ಕೆ ರಟ್ಟಿ ಯಾರೋ ಬಂಡೆ ಕಲ್ಲಿನ ಬದಿಯಲ್ಲಿ ಬಿದ್ದಿರಬೇಕು ಎನಿಸಿತು. ಸ್ವಲ್ಪ ಮುಂದೆ ಹೋದ ಅಟೋವನ್ನು ಪುನಃ ಹಿಂದೆ ತಿರುಗಲು ಹೇಳಿ ಅ ತಿರುವಿನ ಬಂಡೆ ಕಲ್ಲಿನ ಸಮೀಪಕ್ಕೆ ಹೋದೆ‌.ಹೌದು ನನ್ನ ಊಹೆ ಸರಿಯಾಗಿತ್ತು.ಹದಿನೆಂಟು ಇಪ್ಪತ್ತು ವರ್ಷದ ತರುಣಿಯೊಬ್ಬಳು ಬಂಡೆಕಲ್ಲಿನ ಸಮೀಪ ಎಚ್ಚರ ತಪ್ಪಿ ಬಿದ್ದಿದ್ದಳು.ಸ್ವಲ್ಪ ದೂರದಲ್ಲಿ ಅವಳ ಕೆಂಪು ಸ್ಕೂಟಿ ಬಿದ್ದಿತ್ತು. ಅವಳ ತಲೆಗೆ ಏಟಾಗಿ ರಕ್ತ ಸುರಿಯುತ್ತಾ ಇತ್ತು.ಬಹುಶಃ ತಿರುವಿನಲ್ಲಿ ಸ್ಕಿಡ್ ಆಗು ಸಮತೋಲನ ತಪ್ಪಿ ಅವಳು ಬಂಡೆಗಲ್ಲಿಗೆ ಹೋಗಿ ಗುದ್ದಿರಬೇಕು.ನನ್ನ ಚೂಡಿದಾರಿನ ಸಾಲನ್ನು ಅವಳ ತಲೆಗೆ ಬಿಗಿಯಾಗಿ ಕಟ್ಟಿದೆ‌
ಆಟೋ ಚಾಲಕನಲ್ಲಿ ಇಲ್ಲಿಗೆ ಸಮೀಪದಲ್ಲಿ ಯಾವುದಾದರೂ ಅಸ್ಪತ್ರೆಗೆ ಕರೆದುಕೊಂಡು ಹೋಗೋಣವಾ ,ಎಷ್ಟೇ ಖರ್ಚಾದರೂ ನಾನು ಕೊಡುತ್ತೇನೆ ಎಂದು ಹೇಳಿದೆ.ಆರಂಭದಲ್ಲಿ ಇದು ನಮಗೇಕೆ ,ನಾವು ಕರೆದುಕೊಂಡು ಹೋದರೆ ಪೋಲೀಸ್ ಕೇಸ್ ಆಗಿ ನಮ್ಮ ತಲೆಗೆ ಬರಬಹುದು ಎಂದು ಹಿಂದೇಟು ಹಾಕಿದರು. ನನಗೂ ಹಾಗೆಯೇ ಅನಿಸಿತು‌.ಅವಳ ಪಲ್ಸ್ ಹಿಡಿದು ನೋಡುವಾಗ ಆಕೆಗೆ ಜೀವ ಇತ್ತು ‌ಅ ಬಿಸಿಲಿಗೆ ಅವಳನ್ನು ಅಲ್ಲಿ ಬಿಟ್ಟು ಹೋದರೆ ಅವಳು ಸಾಯುವುದು ಖಂಡಿತ. ಅಲ್ಲಿ ಇನ್ಯಾರಾದರೂ ಬರುವ ನಿರೀಕ್ಷೆ ಮಾಡುವುದು ಅಸಾಧ್ಯವಾಗಿತ್ತು.
ಹಾಗಾಗಿ ಆತನಲ್ಲಿ ನಮ್ಮ ತಾಯಿಗೋ ತಂಗಿಗೋ ಹೀಗೆ ಆಗಿದ್ದರೆ ನಾವು ಸಾಯಲಿ ಎಂದು ಬಿಟ್ಡು ಹೋಗುತ್ತಿದ್ದೆವಾ ? ಇವಳನ್ನು ನಮ್ಮ ತಂಗಿ ಎಂದು ಭಾವಿಸಿ ಬದುಕಲು ಪ್ರಯತ್ನ ಮಾಡುವ ಎಂದು ಹೇಳಿದೆ.ಮಾನವೀಯ ಅನುಕಂಪವಿದ್ದ ಅವರೂ ಒಪ್ಪಿದರು‌.
ಅವಳನ್ನು ಹೇಗೋ ಏನೋ ಎತ್ತಿಕೊಂಡು ಬಂದು ಅಟೋದಲ್ಲಿ ಮಲಗಿಸಿದೆವು.ನಾನು ಚಾಲಕನ ಪಕ್ಕ ಅರ್ಧ ಸೀಟಿ ನಲ್ಲಿ ಹೇಗೋ ಹೊಂದಾಣಿಕೆ ಮಾಡಿಕೊಂಡು ಕುಳಿತೆ.ಅಲ್ಲಿಮದ ಯಾವುದೊ ದಾರಿಯಲ್ಲಿ ಸುಮಾರು ಮೂರು ನಾಲ್ಕು ಕಿಲೋಮೀಟರ್ ದೂರ ಹೋದಾಗ ಒಂದು ಹಳ್ಳಿ ಸಿಕ್ಕಿತು‌.ಸ್ವಲ್ಪ ಮುಂದೆ ಹೋದಾಗ ಸಣ್ಣ ನರ್ಸಿಂಗ್ ಹೋಮ್ ಒಂದು ಕಾಣಿಸಿತು.ಆಟೋ ವನ್ನು ಅದರ ಮುಂದೆ ನಿಲ್ಲಿಸಿದರು. ನಾನು ಆಸ್ಪತ್ರೆ ಒಳಗೆ ಹೋಗಿ ಎಮರ್ಜೆನ್ಸಿ ಕೇರ್ ವಿಭಾಗಕ್ಕೆ ಹೋಗಿ ಎಂದು ಎಮರ್ಜೆನ್ಸಿ ಕೇಸ್ ಬಂದಿದೆ ಎಂದು ತಿಳಿಸಿ ಸ್ಟ್ರೆಚರ್ ನಲ್ಲಿ ಆಟೊ ದಿಂದ ಶಿಪ್ಟ್ ಮಾಡಲು ಹೇಳಿದೆ.ಅವರು ಸ್ವಲ್ಪ ಹಿಂದೆ ನೋಡಿದರೂ ನಂತರ ಸ್ಟ್ರೆಚರ್ ತಂದು ಅವಳನ್ನು ಎಮರ್ಜೆನ್ಸಿ ಕೇರ್ !/ ಕ್ಯಾಸುವಾಲ್ಟಿಗೆ ಕರೆದುಕೊಂಡು ಹೋದರು‌.
ನನ್ನನ್ನು ಒಳಗೆ ಕರೆದು ಏನಾಯಿತು ಎಂದು ಅಲ್ಲಿ ಇದ್ದ ನರ್ಸ್  ಕೇಳಿದರು."ಏನಾಗಿದೆ ಎಂದು ನನಗೆ ತಿಳಿಯದು,ಆ ದಾರಿಯಲ್ಲಿ ಬರುವಾಗ ಕಾಣಿಸಿತು ಹಾಗಾಗಿ ಅಟೊದಲ್ಲಿ‌ ಮಲಗಿಸಿ ಚಿಕಿತ್ಸೆಗಾಗಿ ಕರೆ ತಂದೆ. ಆಕೆ ಯಾರೆಂದು ನನಗೆ ತಿಳಿಯದು"  ಬೇಗ  ಡಾಕ್ಟರ್ ಅನ್ನು ಬರಹೇಳಿ ಚಿಕಿತ್ಸೆ ನೀಡಿ ಎಂದು   ‌ನಾನು ಸತ್ಯ ಸಂಗತಿ ಹೇಳಿದೆ.ಅಲ್ಲಿ ಡಾಕ್ಟರ್ ಯಾರೂ ಇರಲಿಲ್ಲ
ಇದು ಪೋಲೀಸ್ ಕೇಸ್ ಅಲ್ಲಿ ದೂರು ಕೊಟ್ಟು ಬನ್ನಿ ,ಇಲ್ಲಿ ಇಂತಹ ಕೇಸ್ ತೆಗೆದುಕೊಳ್ಳುವುದಿಲ್ಲ ಇತ್ಯಾದಿ ಏನೇನೋ ತೆಲುಗು/ ತಮಿಳಿನಲ್ಲಿ ಹೇಳ ತೊಡಗಿದರು.
ಆಗ ನಾನು ಮೊದಲು ಚಿಕಿತ್ಸೆ ಕೊಡಿ ಮತ್ತೆ ಉಳಿದ ವಿಚಾರ ನೋಡುವ ಎಂದು ಹೇಳಿದೆ.
ಆಗ ಅವರು ಬಿಲ್ಲಿಂಗ್ ಸೆಕ್ಷನ್ ಗೆ ಹೋಗಿ ಹತ್ತು ಸಾವಿರ ಮುಂಗಡ ಕಟ್ಟಲು ಹೇಳಿದರು.ನನ್ನಲ್ಲಿ ಪೀಸ್ ಕಟ್ಟಲೆಂದು ತೆಗೆದುಕೊಂಡಿದ್ದ ಎರಡೂವರೆ ಸಾವಿರ ಮತ್ತು ಖರ್ಚಿಗಾಗಿ ಇಟ್ಟುಕೊಂಡಿದ್ದ ಒಂದು ಸಾವಿರ ಇತ್ತು ಅಷ್ಟೇ. ನಾನು ಅವರಲ್ಲಿ ಅಷ್ಟು ದೊಡ್ಡ ನನ್ನಲ್ಲಿ ಇಲ್ಲ ‌.ಈಕೆಯನ್ನು ದಾಖಲಿಸಿ ಚಿಕಿತ್ಸೆ ಕೊಡಿ ನಾನು ಕುಪ್ಪಂಗೆ ಹೋಗಿ ನನ್ನ ಪ್ರೊಫೆಸರ್ ಅಲ್ಲಿ ದುಡ್ಡು ಕೇಳಿ ತಂದು ಕಟ್ಟುತ್ತೇನೆ ಎಂದು ಹೇಳಿದೆ‌.
ಇಲ್ಲ ಇದು ಆಕ್ಸಿಡೆಂಟ್ ಕೇಸ್ ದುಡ್ಡು  ಈಗಲೇ ಕಟ್ಟ ಬೇಕು ಎಂದು ಹೇಳಿದರು. ಆಗ ಆ ಅಸ್ಪತ್ರೆಯ ಓನರ್ ಅಗಿರುವ ಡಾಕ್ಟರ್ ಆಗಮಿಸಿದರು.ವಿಷಯ ತಿಳಿದು ನನ್ನನ್ನು ಬೈದರು‌.ಇಂತಹ ಆಕ್ಸಿಡೆಂಟ್ ಕೇಸುಗಳನ್ನು ಸರ್ಕಾರಿ ಹಾಸ್ಪಿಟಲ್ ಗೆ ತಗೊಂಡು ಹೋಗುವ ಬದಲು ಇಲ್ಯಾಕೆ ಕರೆದುಕೊಂಡು ಬಂದಿರಿ ? ಹತ್ತು ಸಾವಿರ ಕಟ್ಟಲಾಗದಿದ್ದರೆ ಬೇರೆಡೆ ಕರೆದುಕೊಂಡು ಹೋಗಿ ಎಂದರು ‌ಆಗ ನಾನು ನನ್ನ ಕೈಗಳಲ್ಲಿ ಇದ್ದ ಎರಡು ಚಿನ್ನದ ಬಳೆಗಳನ್ನು  ಕೊಟ್ಟು " ಇದು ಬಂಗಾರದ ಬಳೆಗಳು ಬೇಕಿದ್ದರೆ ಹಾಲ್ ಮಾರ್ಕ್ ನೋಡಿ ಕನ್ಫರ್ಮ್ ಮಾಡಿಕೊಳ್ಳಿ " ಎಂದು ಹೇಳಿ ಆ ಹುಡುಗಿಗೆ ಚಿಕಿತ್ಸೆ ನೀಡುವಂತೆ ಕೇಳಿಕೊಂಡೆ.ನನ್ನ ಮೇಲೆ ಸಿಡಿಗುಟ್ಟುತ್ತಾ ಅ ಡಾಕ್ಟರ್ ಕೃಷ್ಣೊಜಿ ರಾವ ಒಳಗೆ ನಡೆದರು.ಒಂದೆರಡು ನಿಮಿಷದಲ್ಲಿ ಗಲಾಟೆ ಎಲ್ಲ ಥಂಡಾ! ಎಲ್ಲರೂ ಗಡಿಬಿಡಿಯಿಂದ ಓಡಾಡಲು ತೊಡಗಿದರು‌.ತಕ್ಷಣವೇ ಒಂದು ಆಂಬುಲೆನ್ಸ್ ಬಂತು‌. ಆ ಹುಡುಗಿಯನ್ನು ಸ್ಟ್ರೆಚರ್ ನಲ್ಲಿ ತಂದು ಆಂಬುಲೆನ್ಸ್ಗೆ ಹಾಕಿದರು.ಏನು ಸಂಗತಿ ಎಂದು ನನಗೆ ತಿಳಿಯಲಿಲ್ಲ. ಏನು ಎನಾಯಿತು ಎಂದು ಕೇಳಿದರೆ ನಮ್ಮ ಡಾಕ್ಟ್ರ ಮಗಳಿಗೆ ಆಕ್ಸಿಡೆಂಟ್ ಆಗಿದೆ ಎಂದು ಗಡಿಬಿಡಿಯಲ್ಲಿ ಅಲ್ಲಿರುವಾಕೆ ಒಬ್ಬಳು ತೆಲುಗಿನಲ್ಲಿ ಹೇಳಿದರು.
ಅಷ್ಟರಲ್ಲಿ ಗಡಿಬಿಡಿಯಿಂದ ಹೊರಬಂದ ಆ ಡಾಕ್ಟರ್ ಮೇಡಂ ನಮ್ಮದು ತಪ್ಪಾಯಿತು.ನೀವು ಇಲ್ಲಿ ಸೇರಿಸಿದ ಹುಡುಗಿ ನನ್ನ ‌ಮಗಳು.ತಲೆಗೆ ತುಂಬಾ ಏಟು ಬಿದ್ದಿದೆ ಹಾಗಾಗಿ ಬೆಂಗಳೂರಿಗೆ  ಶಿಪ್ಟ್ ಮಾಡುತ್ತಿದ್ದೇವೆ,ನಿಮ್ಮ ಉಪಕಾರ ಯಾವತ್ತಿಗೂ ಮರೆಯುವುದಿಲ್ಲ ಎಂದು ಹೇಳಿ ನನ್ನ ‌ಫೋನ್ ನಂಬರ್ ತೆಗೆದುಕೊಂಡು ನನ್ನ ಬಳೆಗಳನ್ನು ಹಿಂತಿರುಗಿಸಿದರು .

ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ಅಟೋಚಾಲಕ ದಿಙ್ಮೂಢನಾಗಿ ನಿಂತಿದ್ದರು.ನಾವು ಇನ್ನು ಹೊರಡುವ ಎಂದು ಹೇಳಿದೆ.ಇಷ್ಟಾಗುವಾಗ ಮಧ್ಯಾಹ್ನ ಹನ್ನೆರಡು ಆಗಿತ್ತು .ಬಟ್ಟೆಗೆಲ್ಲ ರಕ್ತದ ಕಲೆ ಆಗಿತ್ತು. ಆ ಅವತಾರದಲ್ಲಿ ಯುನಿವರ್ಸಿಟಿ ಗೆ ಹೋಗುವುದು ಸರಿ ಕಾಣಲಿಲ್ಲ. ಪ್ರೊಫೆಸರ್ ಶಿವ ಕುಮಾರ್ ಭರಣ್ಯ ಅವರಿಗೆ ಪೋನ್ ಮಾಡಿ ಈವತ್ತು ಬರಲಾಗುವುದಿಲ್ಲ ಎಂದು ಹೇಳಿದೆ
ಅಟೋ ಚಾಲಕನಿಗೆ ನನಗೆ ಬೆಂಗಳೂರಿಗೆ ಹೋಗುವ ಬಸ್ ಎಲ್ಲಿ ಬರುತ್ತೋ ಅಲ್ಲಿ ಬಿಡಿ ಎಂದು ಹೇಳಿದೆ
 ಆಗ ಅಲ್ಲಿಯೇ ಇದ್ದ ಆ ಡಾಕ್ಟರ್ ನೀವು ಯಾವ ಕಡೆ ಹೋಗಬೇಕು,ಬೆಂಗಳೂರಿಗೆ ಅದರೆ ನಾನು ಬಿಡುತ್ತೇನೆ  ಎಂದು ಕೇಳಿದರು . ಸರಿ ಎಂದು ಹೇಳಿ ಆಟೋ ಚಾಲಕ ರಮೆಶ್ ಅವರಲ್ಲಿ ಎಷ್ಟು ದುಡ್ಡು ಕೊಡಬೇಕು ಎಂದು ಕೇಳಿದೆ .ಆತ ನಮಸ್ಕಾರ ಮಾಡಿ ಏನು ಬೇಡ ಮೇಡಂ ಎಂದು ಹೇಳಿದರು‌.ಆಗ ಡಾಕ್ಟರ್ ಕೃಷ್ಣೊಜಿ ರಾವರು ಆತನ ಜೇಬಿಗೆ ಐದು ನೂರರ ಎರಡು ನೋಟನ್ನು ತುರುಕಿ ಕೈ‌ಮುಗಿದು  ಕಾರು  ಬಾಗಿಲು ತೆರೆದು ಹತ್ತಲು ಹೇಳಿದರು ಕಾರು ಹತ್ತಿ ಕುಳಿತುಕೊಂಡೆ  ಆಂಬುಲೆನ್ಸ್  ಹಿಂದಿನಿಂದ ಹೊರಟರು.
ನಾನು ಅವರ ಜೊತೆ ಬೆಂಗಳೂರಿಗೆ ಯಶವಂತಪುರ ಬಂದು ಬಸ್ ಹತ್ತಿ ಮನೆಗೆ ಬಂದೆ .
ನಂತರ ಮರುದಿನ ಕುಪ್ಪಂಗೆ ಹೋಗಿ ಶುಲಕ್ ಕಟ್ಟಿ ಪಿಎಚ್ ಡಿ  ಅಧ್ಯಯನಕ್ಕೆ ಸೇರಿ ಬಂದೆ .
ಇದಾಗಿ ಎರಡು ಮೂರು ದಿನ ಕಳೆಯಿತು.
ಒಂದು ದಿನ ಸಂಜೆ ಆ ಡಾಕ್ಟರ್ ಕರೆ ಬಂತು.ತನ್ನ ಮಗಳಿಗೆ ತಲೆಗೆ ಏಟಾದ ಕಾರಣ ಸಣ್ಣ ಆಪರೇಷನ್ ಮಾಡಬೇಕಾಯಿತು. ಹಾಗಾಗಿ ಗಡಿಬಿಡಿಯಲ್ಲಿ ಇದ್ದೆ ಪೋನ್ ಮಾಡಲಾಗಲಿಲ್ಲ. ನೀವು ನೋಡಿ ತಲೆಗೆ ಬಟ್ಟೆ ಸುತ್ತಿ ಕರೆದುಕೊಂಡು ಬಂದ ಕಾರಣ ಮಗಳು ಬದುಕಿದಳು.ಇಲ್ಲವಾದರೆ ಅವಳು ಖಂಡಿತಾ ಬದುಕುತ್ತಿರಲಿಲ್ಲ .ನಿಮ್ಮ ಉಪಕಾರವನ್ನು ಯಾವತ್ತಿಗೂ ಮರೆಯಲಾರೆ ,ಮುಮದಿನ ಬಾರಿ ಬೆಂಗಳೂರಿಗೆ ಬಂದಾಗ ನಿಮ್ಮ ಮನೆಗೆ ಬರುತ್ತೇನೆ ಎಂದು ಹೆಳಿದರು.
ನಂತರ ಎರಡು ತಿಂಗಳ ನಂತರ ಬೆಂಗಳೂರಿಗೆ ಬಂದವರು ನನಗೆ ಪೋನ್ ಮಾಡಿ ನಮ್ಮ ಮನೆಗೆ ಹು ಹಣ್ಣು ಸಿಹಿ ಹಿಡಿದುಕೊಂಡು ಪತ್ನಿ ರೇಣುಕ ಅವರ ಜೊತೆ ಬಂದರು .ಮತ್ತೆ ಪುನಃ ಥ್ಯಾಂಕ್ಸ್ ಹೇಳಿದರು.ಆಗ ನಾನು ನನಗೆ ಥ್ಯಾಂಕ್ಸ್ ಬೇಡ,ಮನುಷ್ಯಳಾಗಿ ಅದು ನನ್ನ ಕರ್ತವ್ಯ ಆಗಿತ್ತು ‌.ಆದರೆ ವೈದ್ಯರುಗಳು ನೀವು ಮಾನವೀಯತೆಯನ್ನು ಮರೆಯಬಾರದು.ಒಂದೊಮ್ಮೆ ಆ ಹುಡುಗಿ ನಿಮ್ಮ ಮಗಳಲ್ಲದೆ ಬೇರೆಯವರಾಗಿದ್ದರೆ ನೀವು ಚಿಕಿತ್ಸೆ ಕೊಡುವುದರಲ್ಲಿ ಇರಲಿಲ್ಲ. ನನಗೆ ನಿಮ್ಮ ಆಸ್ಪತ್ರೆ ಯ ಸಿಬ್ಬಂದಿ ಮತ್ತು ನೀವು ಹೇಗೆ ಬೈದಿದ್ದೀರಿ ಎಂಬುದನ್ನು ಮರೆಯಬೇಡಿ‌.ಪ್ರಾಣ ರಕ್ಷಣೆ ವೈದ್ಯರ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದೆ.ನಮ್ಮ ತಪ್ಪಿನ ಅರಿವಾಗಿದೆ ನಮಗೆ ಇನ್ನೆಂದಿಗೂ ನಮ್ಮಲ್ಲಿ ಹಾಗೆ ಆಗುವುದಿಲ್ಲ ಎಂದು ಭಾಷೆ ಕೊಡುತ್ತೇನೆ ,ಪ್ರಮಾಣ ಮಾಡುತ್ತೇನೆ ಎಂದು ಹೇಳಿದರು. ನಾನು ಪ್ರಮಾಣ ಎಲ್ಲ ಬೇಡ ಎಂದು ಹೇಳಿದರೂ ಕೇಳದೆ ತಮ್ಮ ಮಗಳ ಹೆಸರಿನಲ್ಲಿ ಪ್ರಮಾಣ ಮಾಡಿ ಸಣ್ಣ ಮಕ್ಕಳಂತೆ ಅತ್ತರು‌
ನಂತರ ಅವರ ಮನೆಗೆ ಒಮ್ಮೆ ಬರಬೇಕು ಎಂದು ಕರೆದರು‌‌‌.ಕುಪ್ಪಂಗೆ ಬರುವುದಿದ್ದರೆ ಪೋನ್ ಮಾಡಿ ,ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.
ಇದಾಗು ವರ್ಷ ಕಳೆಯಿತು. ನಾನು ಆಗಾಗ ಕುಪ್ಪಂಗೆ ಹೋಗಿ ಬರುತ್ತಾ ಇದ್ದೆ.ಒಂದು ಬಾರಿ ಹೋಗುವಾಗ ಅವರು ಟ್ರೈ ನ್ ನಲ್ಲಿ ಸಿಕ್ಕಿ ಒತ್ತಾಯ ಮಾಡಿ ಅವರ ಮನೆಗೆ ಕರೆದುಕೊಂಡು ಹೋಗಿ ಸತ್ಕಾರ ಮಾಡಿ ಕುಪ್ಪಂಗೆ ಯುನಿವರ್ಸಿಟಿ ಗೆ ಕರೆದುಕೊಂಡು ಬಂದು ಬಿಟ್ಟು ಹೋದರು.
ಅದಾದ ನಂತರ ನಾನು ಅವರನ್ನು ಭೇಟಿಯಾಗಿಲ್ಲ  ಪೋನ್ ಕಲೆದು ಹೋಗಿ ಅವರ ನಂಬರ್ ‌ಕುಡ ಕಳೆದು ಹೋಗಿದೆ.ಅವರ ಸಣ್ಣ ನರ್ಸಿಂಗ್ ಹೋಮ್ ಆಂದ್ರಪ್ರದೇಶದ ಯಾವುದೊ ಉರಿನಲ್ಲಿದ್ದು ಆ ಉರಿನ ಹೆಸರನ್ನು ನೆನಪು ಮಾಡಲು ಯತ್ನ ಮಾಡುತ್ತಾ ಇದ್ದೇನೆ.ಅವರ ಮಗಳು ಆಗ ಕುಪ್ಪಂನಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಮೊದಲ ವರ್ಷ ಎಂಬಿಬಿಎಸ್ ಓದುತ್ತಾ ಇದ್ದಳೆಂದು ನೆನಪು.ಹೆಸರು ಸ್ವಾತಿ ಎಂದು ಇರಬೇಕು. ಈಗ ಅವಳ ಓದು ಮುಗಿದು ಅವಳೂ ವೈದ್ಯೆ ಆಗಿರಬಹುದು. ಕುಪ್ಪಂಗೆ ರೈಲಲ್ಲಿ ಹೋಗಿ ಬರುವಾಗಲೆಲ್ಲ ಅವರ ನೆನಪಾಗುತ್ತಾ ಇತ್ತು.ಇಂತಹದ್ದೆನ್ನೆಲ್ಲ ಸಿನಿಮಾಗಳಲ್ಲಿ ನೋಡುತ್ತೇವೆ.ಆದರೆ ಅವೆಲ್ಲವೂ ವಾಸ್ತವ ಬದುಕಿನ ಛಾಯೆಗಳು ಎಂಬುದು ಈ ಘಟನೆಯಿಂದ ಅರ್ಥವಾಗಿದೆ ನನಗೆ ,ಆದರೂ ಈಗಿನ ಕಾಲದಲ್ಲಿ ಕೂಡ ಆಕ್ಸಿಡೆಂಟ್ ನಂತಹ ಪ್ರಕರಣಗಳಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ ಎಂಬ ಕಾನೂನು ಇದ್ದರೂ ಕೂಡ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸಾಯುವ ಅಮಾಯಕ ಜೀವಗಳ ಸಂಖ್ಯೆ ಸಾಕಷ್ಟು ಇದೆ ಅಲ್ವಾ ?
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ .

Saturday 26 May 2018

ಬದುಕೆಂಬ ಬಂಡಿಯಲಿ 11 ಅಂದು ಬಿತ್ತಿದ ಬೆಳೆ ಇಂದು ಫಸಲು ನೀಡಿದೆ ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ..11  ಅಂದು ಬಿತ್ತಿದ ಬೆಳೆ ಈಗ ಫಸಲು ನೀಡಿದೆ.©ಡಾ.ಲಕ್ಷ್ಮೀ ಜಿ ಪ್ರಸಾದ
ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಎಂದರೆ 2004 ರಲ್ಲಿ ಪ್ರಸಾದ್ ಗೆ ಬೆಂಗಳೂರಿನ IIC ltd ಎಂಬ ಕಂಪೆನಿಯಲ್ಲಿ ಒಳ್ಳೆಯ ಕೆಲಸ ದೊರೆಯಿತು. ಆಗ ನಾನಿನ್ನೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ‌.ಶೈಕ್ಷಣಿಕ ವರ್ಷದ ನಡುವೆ ಕೆಲಸ ಬಿಡುವುದು ಸರಿಯಲ್ಲವೆಂದು 2005 ಮಾರ್ಚ್ ತನಕ ಕೆಲಸ ಮಾಡಿ ರಾಜೀನಾಮೆ ನೀಡಿದೆ .ತಾಯಿಮನೆಯಲ್ಲಿ ಒಂದೂವರೆ ತಿಂಗಳು ಇದ್ದು ಬೆಂಗಳೂರಿಗೆ ಬಂದೆ‌.ಆಗಷ್ಟೇ ನನ್ನ  ಕನ್ನಡ ಎಂಎ ಎರಡನೇ ವರ್ಷದ ಫಲಿತಾಂಶ ಬಂದಿತ್ತು.
ಬೆಂಗಳೂರಿಗೆ ತಲುಪಿದ ದಿನವೇ ಪತ್ರಿಕೆ ಓದಿದಾಗ ಎಪಿಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು  walk in interview ಗೆ ಬರಲು ಹೇಳಿದ್ದರು‌.ಪ್ರಸಾದ್ ಆಪೀಸ್ ಗೆ ಹೋಗಿದ್ದರು.ನಾನು ಬಾಗಿಲು ತೆರೆದು ಹೊರಗೆ ಬಂದು ಅತ್ತಿತ್ತ ಕಣ್ಣಾಡಿಸುವಾಗ ಎದುರಿನ ಮನೆಯ ಸುಮಾರು ನನ್ನ ವಯಸಿನ ಮಹಿಳೆ ಹೊರಬಂದರು.ಅವರನ್ನು ನೋಡಿ ನಾನು ಪರಿಚಯ ಮಾಡಿಕೊಳ್ಳುವ ಸಲುವಾಗ ನಸು ನಗು ಬೀರಿದೆ‌.ಅವರು ಕೂಡ ನಕ್ಕು ಹೊಸತಾಗಿ ಬಾಡಿಗೆಗೆ ಬಂದವರಾ ಎಂದು ಹೇಳಿದರು‌. ಹೌದು ಎಂದು ಉತ್ತರಿಸಿ ಎಪಿಎಸ್ ಟ್ರಸ್ಟ್‌ ಇರುವ ಎನ್ ಆರ್ ಕಾಲೋನಿ ಎಷ್ಟು ದೂರ ಆಗುತ್ತದೆ ಎಂದು ವಿಚಾರಿಸಿದೆ‌.ಇಲ್ಲೇ ಹತ್ತಿರ, ನಾಲ್ಕೈದು ಕಿಲೋಮೀಟರ್ ಎಂದು ತಿಳಿಸಿ ಹೋಗುವ ದಾರಿಯನ್ನು ವಿವರಿಸಿದರು.ಸರಿ ಎಂದು ಅರ್ಜಿ ಬರೆದು ಅಂಕ ಪಟ್ಟಿ ಪ್ರಮಾಣ ಪತ್ರಗಳನ್ನು ಜೋಡಿಸಿಕೊಂಡು ಮಗನನ್ನು ಹೊರಡಿಸಿ ಗಾಡಿಯಲ್ಲಿ ಹಿಂದೆ ಕುಳ್ಳಿರಿಸಿಕೊಂಡು ಎನ್ ಅರ್ ಕಾಲೋನಿಯಲ್ಲಿ ಇರುವ ಎಪಿಎಸ್ ಟ್ರಸ್ಟ್ ಗೆ ಹೋದೆ.ಅಲ್ಲಿ ತಲುಪುವಾಗ ಮಧ್ಯಾಹ್ನ ಹನ್ನೆರಡು ಗಂಟೆ ಆಗಿತ್ತು .ಅದೃಷ್ಟವಶಾತ್ ಕೊನೆಯ ಅಭ್ಯರ್ಥಿಯ ಸಂದರ್ಶನ ನಡೆಯುತ್ತಾ ಇತ್ತು.
ನಂತರ ನನ್ನನ್ನು ಕೂಡ ಒಳಗೆ ಸಂದರ್ಶನಕ್ಕೆ ಕರೆದರು.ಮೊದಲಿಗೆ ಇಷ್ಟು ತಡವಾಗಿ ಯಾಕೆ ಬಂದಿರಿ ಎಂದು ಪ್ರಶ್ನಿಸಿದರು ‌" ಇಂದು ಬೆಳಗ್ಗೆಯಷ್ಟೇ ಮಂಗಳೂರಿನಿಂದ ಬಂದಿರುವೆ .ಇಲ್ಲಿನ ಪರಿಸರದ ಪರಿಚಯವಿಲ್ಲ ಹಾಗಾಗಿ ಕೇಳಿಕೊಂಡು ಬರುವಾಗ ತಡವಾಯಿತು " ಎಂದು  ಸತ್ಯವಾದ ವಿಷಯ ತಿಳಿಸಿದೆ.ನಂತರ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದರು‌.ಸಮಂಜಸವಾದ ಉತ್ತರ ನೀಡಿದೆ‌.ನನ್ನ ಪೋನ್ ನಂಬರ್ ಪಡೆದುಕೊಂಡು ಮುಂದಿನ ವಾರ ತಿಳಿಸುತ್ತೇವೆ " ಎಂದರು.ಧನ್ಯವಾದ ಹೇಳಿ ಹೊರಬಂದೆ.
ಹಿಂದೆ ಬರುವಾಗ ಅಲ್ಲಿ ಒಂದು ಕಡೆ ಏಕಮುಖ ಮಾರ್ಗ ಇತ್ತು.ಅಲ್ಲಿ ದಾರಿ ತಪ್ಪಿ ಎಲ್ಲೆಲ್ಲೋ ಅಲೆದಾಡಿದೆ.ಕೊನೆಗೆ ಯಾರ ಯಾರಲ್ಲೋ ಕೇಳಿ ಮನೆ ತಲುಪಿದೆ.
ಇದಾಗಿ ಎರಡು ಮೂರು ದಿನಕ್ಕೆ ಜೈನ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆ ಖಾಲಿ ಇರುವುದು ತಿಳಿಯಿತು ‌.ಪ್ರಸಾದ್ ಸ್ನೇಹಿತರಾದ ಜಾನ್ ಪಾಲ್ ಅವರಿಗೆ ಅಲ್ಲಿನ ಆಡಳಿತಾಧಿಕಾರಿಗಳ ಪರಿಚಯ ಇತ್ತು‌.ಹಾಗಾಗಿ ನೇರವಾಗಿ ಅರ್ಜಿ ಬರೆದು ಕೊಂಡು ಹೋದೆ.ಅಲ್ಲಿಯೂ ಸಂದರ್ಶನ ನಡೆಯಿತು.ಆಯ್ಕೆಯಾದ ಬಗ್ಗೆ ತಿಳಿಸಿ ನೇಮಕಾತಿ ಪತ್ರ ಕಳಹಿಸಿಕೊಡುತ್ತೇವೆ‌.ನಂತರ ಬಂದು ವರದಿ ಮಾಡಿಕೊಳ್ಳಿ ಎಂದು ತಿಳಿಸಿದರು.
ಮತ್ತೆ ಒಂದು ವಾರ ಕಳೆಯಿತು. ಜೈನ್ ಕಾಲೇಜಿನ ನೇಮಕಾತಿ ಆದೇಶ  ಅಂಚೆ ಮೂಲಕ ಕೈ ಸೇರಿತು‌.ಸೇರಲು ಒಂದು ವಾರದ ಸಮಯ ನೀಡಿದ್ದರು.
ಅದಾಗಲೇ ನಾನು ಕನ್ನಡ ಎಂಎ ಓದುವಾಗ ಜಾನಪದ ನನಗೆ ತುಂಬಾ ಇಷ್ಟವಾಗಿತ್ತು.ಮುಂದೆ ಎಂಫಿಲ್ ,ಪಿಎಚ್.ಡಿ ಮಾಡುವುದಾದರೆ  ಕನ್ನಡ -ತುಳು ಜಾನಪದದಲ್ಲಿಯೇ ಎಂದು ನಿರ್ಧರಿಸಿದ್ದೆ  . ಹಾಗಾಗಿ ನನಗೆ ಕನ್ನಡ ಉಪನ್ಯಾಸಕಿಯಾಗಲು ಹೆಚ್ಚಿನ ಆಸಕ್ತಿ ಇತ್ತು. ಅಲ್ಲದೇ ಸಂಸ್ಕೃತವನ್ನು ಇಂಗ್ಲಿಷ್ ಭಾಷೆಯ ಮೂಲಕ ಪಾಠ ಮಾಡಬೇಕಿತ್ತು.ಕನ್ನಡ ಮಾಧ್ಯಮದಲ್ಲಿ ಓದಿದ ನನಗ್ಯಾಕೋ ಇಂಗ್ಲಿಷ್ ಭಾಷೆಯ ಮೆಲೆ ಅಷ್ಟೊಂದು ಹಿಡಿತವಿರಲಿಲ್ಲ.ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೂಡ ಸಂಸ್ಕೃತವನ್ನು ಇಂಗ್ಲಿಷ್ ಭಾಷೆಯ ಮೂಲಕ ಪಾಠ ಮಾಡಬೆಕಾಗಿತ್ತು.ಹಾಗಾಗಿ ಸಂಸ್ಕೃತ ವನ್ನು ಇಂಗ್ಲಿಷ್ ಮೂಲಕ ಪಾಠ ಮಾಡಿ ಅನುಭವ ಇತ್ತು.ಆದರೂ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಬರುವ ಮಕ್ಕಳ ಎದುರು ಒಂದಿನಿತು ಕೀಳರಿಮೆ ಕಾಡುತ್ತಿತ್ತು. ಜೊತೆಗೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವರ್ಷದ ಕೊನೆಯಲ್ಲಿ ಒಬ್ಬಿಬ್ಬರು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ನೀಡುವಾಗ ನನ್ನ ಇಂಗ್ಲಿಷ್ ಭಾಷೆ ಚೆನ್ನಾಗಿಲ್ಲ ಎಂದು ಬರೆದಿದ್ದರು. ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದು ,ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸಿದ ಅನುಭವವಿದ್ದ ಕಾರಣ ನನಗೆ ಸಂಸ್ಕೃತ ಭಾಷೆಯ ಮೇಲೆ ಒಳ್ಳೆಯ ಹಿಡಿತವಿತ್ತು‌.ಪಾಠ ಮಾಡುವುದರಲ್ಲಿಯೂ ಕೌಶಲ್ಯ ವಿತ್ತು.ಆದರೆ ಸಂಸ್ಕೃತ ಉಪನ್ಯಾಸಕಿಯಾಗಿ ಇಂಗ್ಲಿಷ್ ಭಾಷೆ ಚೆನ್ನಾಗಿಲ್ಲ ಎಂದು ಆರೋಪ ಕೇಳಬೇಕಾಗಿ ಬಂದ ಬಗ್ಗೆ ನೋವಿತ್ತು‌.ಸಂಸ್ಕೃತ ಉಪನ್ಯಾಸಕಿಯಾಗಿ ನನಗೆ ಸಂಸ್ಕೃತ ಭಾಷೆಯ ಮೇಲೆ ಹಿಡಿತವಿಲ್ಲವಾದರೆ,ಪಾಠ ಮಾಡುವ ಕಲೆ ತಿಳಿದಿಲ್ಲವಾದರೆ ,ಅದಕ್ಕೆ ಆರೋಪ ಬಂದಿದ್ದರೆ ಅದನ್ನು ಮುಕ್ತ ಮನಸಿನಿಂದ ಸ್ವೀಕರಿಸುತ್ತಿದ್ದೆನೋ ಏನೋ.ಆದರೆ ಇಂಗ್ಲಿಷ್ ಚೆನ್ನಾಗಿಲ್ಲ ಎಂಬ ಟೀಕೆಯನ್ನು ಎದುರಿಸಬೇಕಾಗಿ ಬಂದ ಬಗ್ಗೆ ವಿಷಾದವಿತ್ತು‌.
ಹಾಗಾಗಿ ನಾನು ಕನ್ನಡ ಉಪನ್ಯಾಸಕ ಕೆಲಸವನ್ನು ಹುಡುಕುತ್ತಾ ಇದ್ದೆ‌.ಅಲ್ಲದೆ ಎಪಿಎಸ್ ಟ್ರಸ್ಟ್ ನ ಸಂದರ್ಶನ ಚೆನ್ನಾಗಿ ಮಾಡಿದ್ದೆ.ಹಾಗಾಗಿ ದೂರದ ಆಸೆ ಇತ್ತು ‌.ಅವರ ಉತ್ತರಕ್ಕಾಗಿ ಕಾಯುತ್ತಾ ಇದ್ದೆ.
ಜೈನ್ ಕಾಲೇಜಿನವರು ಕೆಲಸಕ್ಕೆ ಸೇರಲು ನೀಡಿದ ಒಂದು ವಾರದ ಅವಧಿ ಮುಗಿಯತ್ತಾ ಬಂದು, ಮರುದಿನ ಅಲ್ಲಿಯೇ ಸಂಸ್ಕೃತ ಉಪನ್ಯಾಸಕಿಯಾಗಿ ಸೇರುವುದೆಂದು ಆಲೋಚಿಸಿದೆ.ಅಷ್ಟರಲ್ಲಿ ಎಪಿಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ ಗೋಪಿನಾಥ್  ಪೋನ್ ಕರೆ ಮಾಡಿ ಕನ್ನಡ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ ವಿಚಾರ ತಿಳಿಸಿ ಮರುದಿನ ಬಂದು ಕೆಲಸಕ್ಕೆ ಸೇರಲು ತಿಳಿಸಿದರು‌.ಬಹಳ ಖುಷಿಯಿಂದ ಮರುದಿನ ಎಪಿಎಸ್ ಕಾಲೇಜಿಗೆ ಹೋದೆ‌.ಅಲ್ಲಿ ಮಾತಿನ ನಡುವೆ ನನಗೆ ಜೈನ್ ಕಾಲೇಜಿನಿಂದ ಸಂಸ್ಕೃತ ಉಪನ್ಯಾಸಕಿಯಾಗಿ ಸೇರಲು ನೇಮಕಾತಿ ಆದೇಶ ಬಂದ ಬಗ್ಗೆ ತಿಳಿಸಿದೆ.ಆಗ ಡಾ‌ಕೆ ಗೋಪಿನಾಥ್ ಅವರು ಜೈನ್ ಕಾಲೇಜು ಬಹಳ ಪ್ರಸಿದ್ಧ ಕಾಲೇಜು ಅಲ್ಲಿ ಒಳ್ಳೆಯ ವೇತನ ಇದೆ( ನೇಮಕಾತಿ ಆದೇಶದಲ್ಲಿ ತಿಂಗಳಿಗೆ  ಹದಿನೈದು ಸಾವಿರ ಎಂದು ತಿಳಿಸಿದ್ದರು) ನಮ್ಮ ಕಾಲೇಜಿನಲ್ಲಿ ಅಷ್ಟು ವೇತನ ಇಲ್ಲ ಎಂದು ತಿಳಿಸಿದರು‌.ಆದರೂ ನಾನು ಕನ್ನಡ ಉಪನ್ಯಾಸಕಿಯಾಗಿಯೇ ಮುಂದುವರಿಯಲು ನಿರ್ಧರಿಸಿದ್ದರಿಂದ ಕಡಿಮೆ ವೇತನಕ್ಕೆ ಅಲ್ಲಿಯೇ ಸೇರಿದೆ.
ಈ ನಡುವೆ ಎದುರು ಮನೆಯ ಮಹಿಳೆ ರಾಜೇಶ್ವರಿ ‌ಮತ್ತು ನನ್ನ ನಡುವೆ ಸ್ನೇಹ ಬೆಳೆಯಿತು ‌.ಅವರಿಗೆ ನನ್ನ ಮಗನ ವಯಸಿನ ಒಬ್ಬ ಮಗ ಮತ್ತು ಅವನಿಗಿಂತ ಮೂರು ವರ್ಷ ಚಿಕ್ಕವನಾದ ಇ‌ನ್ಬೊಬ್ಬ ಮಗ ಇದ್ದ.
ಮಾತಿನ ನಡುವೆ ಅವರು ಡಿಗ್ರಿ ಓದಿದ್ದಾರೆ ಎಂದು ತಿಳಿಯಿತು ‌.ಆಗ ನಾನು ಖಾಸಗಿಯಾಗಿ ಕಟ್ಟಿ ಎಂಎ ಓದಬಹುದಲ್ಲ ಎಂದು ಸಲಹೆ ನೀಡಿದೆ‌.ಖಾಸಗಿಯಾಗಿ ಕಟ್ಟಿದರೆ ಅರ್ಥವಾಗದೆ ಕಷ್ಟ ಆಗಬಹುದೇನೋ ಎಂಬ ಸಂಶಯ ವ್ಯಕ್ತ ಪಡಿಸಿದರು‌.ಆಗ ನಾನು "ನೀವು ಕನ್ನಡ ಎಂಎ ಗೆ ಕಟ್ಟಿ, ಅರ್ಥವಾಗದ ವಿಷಯಗಳನ್ನು ನಾನು ಹೇಳಿಕೊಡುತ್ತೇನೆ" ಎಂದು ದೈರ್ಯ ಹೇಳಿದೆ .
ಹಾಗೆ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂಎ ಗೆ ಕಟ್ಟಿದರು‌.ಹಳಗನ್ನಡ, ಭಾಷಾ ವಿಜ್ಞಾನ, ಚಂದಸ್ಸುಗಳ ಬಗ್ಗೆ ಕೇಳಲು ನಮ್ಮ ನಮ್ಮ ಮನೆಗೆ ಬರುತ್ತಾ ಇದ್ದರು‌.ಅವರ ಜೊತೆಗೆ ಕನ್ನಡ ಎಂಎ ಕಟ್ಟಿದ ಅವರ  ಕೆಲವು ಸ್ನೇಹಿತರು ಬಂದರು.ಎಲ್ಲರಿಗೂ ನಾನು ಉಚಿತವಾಗಿಯೇ ಪಾಠ ಮಾಡುತ್ತಿದ್ದೆ .ಆಗ ನಾನಿದ್ದ ಬಾಡಿಗೆ ಮನೆಯ ಓನರ್ ನೀವು ತರಗತಿಗಳನ್ನು ಬೇರೆ ಕಡೆ ಮಾಡಿ ಎಂದು ಹೇಳಿದರು.ಆಗ ರಾಜೇಶ್ವರಿ ,ಶಿವರಾಂ( ಪ್ರೊ.ವಿ ಸಿ ರಂಗಣ್ಣ ಅವರ ಮಗ) ಮೊದಲಾದವರು ಅಲ್ಲಿಗೇ ಸಮೀಪದ ಕನಕ ಕಾಲೇಜಿನಲ್ಲಿ ಒಂದು ಕೊಠಡಿಯನ್ನು ಕೇಳಿ ಜಾಗದ ವ್ಯವಸ್ಥೆ ಮಾಡಿದರು.
ಅಲ್ಲಿಂದ ಮತ್ತೆ ಸ್ವಲ್ಪ ವ್ಯವಸ್ಥಿತವಾಗಿ ಪಾಠ ಪ್ರವಚನಗಳನ್ನು ಆರಂಭಿಸಿದೆ.ಎರಡು ಮೂರು ತಿಂಗಳು ಸಂಜೆ ಹೊತ್ತು ಕನಕ ಕಾಲೇಜಿನಲ್ಲಿ ಉಚಿತ ಕನ್ನಡ ಎಂಎ ತರಗತಿಗಳು ನಡೆದವು.ಆಗ ಹಳಗನ್ನಡ ಪಾಠ ಮಾಡಲು ಎಪಿಎಸ್ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಕೆ ಗಣೇಶ್ ಅವರು   ಬಂದರು‌.ಅಂತೂ ಇಂತೂ ಒಂದು ವರ್ಷ ಕಳೆಯಿತು ‌.ತರಗತಿಗೆ ಬಂದವರೆಲ್ಲರೂ ಪರೀಕ್ಷೆ ಬರೆದರು‌. ಎಂಎ ಎರಡನೇ ವರ್ಷದ ತರಗತಿಗಳು ಕೂಡ ಹೀಗೆಯೇ ನಡೆದವು‌.ಆಗ ಜಯಶಂಕರ್ ಮೊದಲಾದ ಬೇರೆ ಉಪನ್ಯಾಸಕರು ಇಲ್ಲಿ ಕೈಜೋಡಿಸಿದರು‌. ಎಲ್ಲರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು.ಕೆಲವರು ಅಧ್ಯಯನ ‌ಮುಂದುವರಿಸಿ ಎಂಫಿಲ್ ಮಾಡಿಕೊಂಡರು‌.ಸಂಧ್ಯಾ ಉನ್ನತ ಅಧ್ಯಯನ ಮಾಡಿ ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ( ಪಿಎಚ್. ಡಿ ) ಪದವಿಯನ್ನು ಕೆಲ ತಿಂಗಳ ಹಿಂದೆ ಪಡೆದಿದ್ದಾರೆ.ಅಂದು ಬಿತ್ತಿದ ಬೆಳೆ ಈಗ ಫಸಲು ನೀಡಿದೆ.

ಇದಾದ ನಂತರ ನಾವು 2008 ರ ಆರಂಭದಲ್ಲಿಯೇ ಈಗ ನಾವಿರುವ  ಮಂಗನಹಳ್ಳಿ ಕ್ರಾಸ್ ನಲ್ಲಿರುವ ನಮ್ಮ ಸ್ವಂತ ಮನೆಗೆ ಶಿಪ್ಟ್ ಆದೆವು‌.ಹಾಗಾಗಿ ನಂತರ ನನಗೆ ಅಲ್ಲಿ ಬೇರೆಯವರಿಗೆ ಉಚಿತ ತರಗತಿಗಳನ್ನು ಮಾಡಲು ಸಾಧ್ಯವಾಗಲಿಲ್ಲ ‌.ಆದರೂ ಇಲ್ಲಿ ಸುತ್ತು ಮುತ್ತಲಿನ ಎಂಎ ಪದವೀಧರರಿಗೆ ಅನೇಕರಿಗೆ ಎನ್ ಇ ಟಿ ಗೆ ಉಚಿತವಾಗಿ ಕೋಚಿಂಗ್ ನೀಡಿದ್ದೆ.ಕೆಲವರು  ಯುಜಿಸಿ ನಡೆಸುವ ಎನ್  ಇ ಟಿ ( National eligibility for lecturer ship)ಹಾಗೂ ರಾಜ್ಯ ನಡೆಸಯವ K SET ನಲ್ಲಿ ಉತ್ತೀರ್ಣರಾಗಿದ್ದಾರೆ ಕೂಡ
ನಂತರ ನನಗೆ ಸರ್ಕಾರಿ ಉದ್ಯೋಗ ದೊರೆತು ಬೆಳ್ಳಾರೆ ಸರ್ಕಾರಿ ಪಿಯು ಕಾಲೇಜಿಗೆ ಕನ್ನಡ ಉಪನ್ಯಾಸಕಿಯಾಗಿ ಸೇರಿದೆ‌.ಅಲ್ಲಿ ‌ಮತ್ತೆ ಶ್ಯಾಮಲಾ,ರಾಜೇಶ್, ಕರಣ್ ಸೇರಿದಂತೆ  ಖಾಸಗಿಯಾಗಿ ಕನ್ನಡ ಎಂಎ ಗೆ ಕಟ್ಟಿದ್ದ ಅನೇಕರಿಗೆ ಉಚಿತವಾಗಿ ಪಾಠ ಮಾಡಿದೆ‌ .ಜೊತೆಗೆ ನಾನು ಭೂತಾರಾಧನೆ ಕುರಿತು ಕ್ಷೇತ್ರ ಕಾರ್ಯಕ್ಕೆ ಹೋಗುವಾಗ  ನನ್ನ ವಿದ್ಯಾರ್ಥಿಗಳನ್ನು ಜೊತೆಗೆ ಕರೆದೊಯ್ದು ಅವರಿಗೂ ಅಭ್ಯಾಸ ಮಾಡಿಸಿದೆ‌.
ಎರಡು ದಿನ ಹಿಂದೆ ಕನಕ ಕಾಲೇಜಿನಲ್ಲಿ ನಡೆದ ತರಗತಿಗಳ ಸಮರೋಪದ ದಿನದ ಪೋಟೋ ಅನ್ನು ಅಲ್ಲಿ ಪಾಠ ಕೇಳಲು ಬಂದಿದ್ದ ವೆಂಕಟೇಶ್ ಅವರು ಜ್ಞಾನ ದಾಸೋಹ ಗುಂಪಿನಲ್ಲಿ ಹಾಕಿದ್ದರು.ಅದನ್ನು ನೋಡುತ್ತಲೇ ನೆನಪುಗಳು ಗರಿಬಿಚ್ಚಿದವು.ಹಾಗಾಗಿ ಮಧುರ ಕ್ಷಣಗಳು ಹಾಗೆಯೇ ದಾಖಲಾಗಲಿ ಎಂದು ಬರೆದಿರುವೆ .
 ನಾನು ಕೂಡ ಆಗಷ್ಟೇ ಕನ್ನಡ ಎಂಎ ಮುಗಿಸಿದ್ದು  ಎಂಎ ಗೆ ಪಾಠ ಮಾಡುವ ಅರ್ಹತೆ ನನಗಿದೆ ಎಂದು ಭಾವಿಸಿರಲಿಲ್ಲ ‌.ರಾಜೇಶ್ವರಿ ಎಂಎ ಗೆ ಕಟ್ಟಲು ತುಸು ಹೆದರಿದಾಗ ದೊಡ್ಡದಾಗಿ ನಾನು ಹೇಳಿಕೊಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದೆ ಅಷ್ಟೇ. ಆದರೆ ‌ಮುಂದೆ ನಾನು ಕನ್ನಡ ಎಂಎ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಬೇಕಾಗಬಹುದು ಎಂಬ ಊಹೆ ಕೂಡ ನನಗಿರಲಿಲ್ಲ ‌.ಪ್ರಮೋದ್ ಶಿಗ್ಗಾಂವಿ ಯಂತಹ ಪ್ರಸಿದ್ಧ ನಾಟಕ ನಿರ್ದೇಶಕರು,ಪ್ರೇಂ್ ಕುಮಾರ್,ಶಿವರಾಂ್ ,ಶಂಕರನಾರಾಯಣ ಮೊದಲಾದ ಹಿರಿಯರು ನನಗೆ ಈ ರೀತಿಯಾಗಿ ವಿದ್ಯಾರ್ಥಿಗಾಗಿ ಸಿಗುತ್ತಾರೆ ಎಂದುಕೊಂಡಿರಲಿಲ್ಲ .ಆಕಸ್ಮಿಕವಾಗಿ ಎಲ್ಲವೂ ನಡೆದು ಹೋಯಿತು ‌.ನನಗೇನು ಪಾಠ ಮಾಡಲು ಸೋಮಾರಿತನವಿರಲಿಲ್ಲ‌.ನಾನು ಆಸಕ್ತಿಯಿಂದ ಪಾಠ ಮಾಡಿದ್ದೆ‌.ಅವರಿಗೆ ಅರ್ಥ ಆಗಿದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಅವರೆಲ್ಲರೂ ನಿಯಮಿತವಾಗಿ ತರಗತಿಗೆ ಬಂದದ್ದಲ್ಲದೆ ಪರಿಶ್ರಮ ಪಟ್ಟು ಓದಿ ಪಾಠ ಮಾಡಿದ ಬಗ್ಗೆ ಧನ್ಯತಾ ಭಾವ ಮೂಡುವಂತೆ ಮಾಡಿದರು ‌.ಮತ್ತು ಅವರಿಗೆ ಪಾಠ ಮಾಡುವುದಕ್ಕಾಗಿ ನಾನು ಅನೇಕ ಪುಸ್ತಕಗಳನ್ನು ಓದಿದ್ದು ನನಗೂ ಒಂಚೂರು ಜ್ಞಾನ ಗಳಿಸಿಕೊಳ್ಳು ಸಹಾಯವಾಯಿತು. ಮತ್ತು  ಈ ಅನುಭವ ಎಂದಾದರೂ ನಾನು ಯುನಿವರ್ಸಿಟಿ ಪ್ರೊಫೆಸರ್ ಹುದ್ದೆಗೆ ಆಯ್ಕೆಯಾದರೆ ಸಮರ್ಥವಾಗಿ ಪಾಠ ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ನೀಡಿತು .ಕಾಲದ ಅಟವೇ ವಿಚಿತ್ರ ಅಲ್ಲವೇ ? ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ

Thursday 24 May 2018

ಬದುಕೆಂಬ ಬಂಡಿಯಲಿ - 10 ಸಿಂಚನಾಳ ಐಎಎಸ್ ಕನಸು ಈಡೇರಲಿ © ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕೆಂಬ ಬಂಡಿಯಲಿ - 10 ಸಿಂಚನಾಳ  ಐಎಎಸ್ ಕನಸು ಈಡೇರಲಿ © ಡಾ.ಲಕ್ಷ್ಮೀ ಜಿ ಪ್ರಸಾದ
ಸುಮಾರು ಐದು ತಿಂಗಳ ಹಿಂದಿನ ವಿಚಾರವಿದು.ನನ್ನ ವಿದ್ಯಾರ್ಥಿನಿ  ಸಿಂಚನಾ ( ಹೆಸರು ಬದಲಾಯಿಸಿರುವೆ)ಅವರ ಸಂಬಂಧಿಕರ ಮನೆಯಿಂದ ಕಾಲೇಜಿಗೆ ಬರುತ್ತಿದ್ದಳು.ದೂರದ ಹಳ್ಳಿಯಲ್ಲಿ ಇರುವ ತಂದೆ ತಾಯಿ ಇವಳನ್ನು ಇರಿಸಿಕೊಂಡಿದ್ದಕ್ಕಾಗಿ ಆ ಬಂಧುಗಳಿಗೆ ತಿಂಗಳಿಗೆ ಏಳೆಂಟು ಸಾವಿರ ದುಡ್ಡು ಕೊಡುತ್ತಿದ್ದರು.ಅಥವಾ ಹಳ್ಳಿಯ ಮುಗ್ದರಾದ ಅವರಿಂದ ಈ ಬಂಧುಗಳು ಕಿತ್ತುಕೊಳ್ಳುತ್ತಿದ್ದರು ಎನ್ನುವುದು ಸರಿಯಾಗಬಹುದೇನೋ.ಅವಳ ತಂದೆ ಮಾತಿನ ನಡುವೆ ಕಾಲೇಜಿಗೆ ಕಟ್ಟಲೆಂದು ಮೂವತ್ತು ಸಾವಿರ ಪಡೆದುಕೊಂಡ ಬಗ್ಗೆ ಹೇಳಿದ್ದರು.ಆಗ ನಾನು ನಮ್ಮದು ಸರಕಾರಿ ಕಾಲೇಜು.ಇಲ್ಲಿ ಹುಡುಗಿಯರಿಗೆ ಕೇವಲ ಇನ್ನೂರು ಇನ್ನೂರೈವತ್ತು ಮಾತ್ರ ಪೀಸ್ ಇದೆ‌.ಅದನ್ನು ಆರಂಭದಲ್ಲಿ ದಾಖಲಾತಿ ಮಾಡುವಾಗ ಕಟ್ಟಿಸಿಕೊಳ್ಳುತ್ತಾರೆ ಎಂದು ಹೇಳಿದಾಗ ಅವರಿಗೆ ನಂಬಿಕೆ ಬಂದಿರಲಿಲ್ಲ ‌
ನಮ್ಮಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುತ್ತಾ ಇದ್ದವು.ಈ ವಿದ್ಯಾರ್ಥಿನಿ ಮೊದಲ ಮೂರು ಪರೀಕ್ಷೆಗಳಿಗೆ ಬಂದಿದ್ದಳು.ನಂತರದ ಪರೀಕ್ಷೆ ಗಳಿಗೆ ಗೈರುಹಾಜರಾಗಿದ್ದಳು.ಇದು ನನ್ನ ಗಮನಕ್ಕೆ ಬಂದು ಅವಳ ಸ್ನೇಹಿತೆಯರಲ್ಲಿ ವಿಚಾರಿಸಿದೆ‌.ಆಗ ಮೂರನೆಯ ಪರೀಕ್ಷೆ ಬರೆದವಳು ನಂತರ ಎಲ್ಲಿ ಹೋಗಿದ್ದಾಳೆಂದು ತಿಳಿಯದು ಎಂದು ಹೇಳಿದರು. ಒಬ್ಬಾಕೆ " ಅವಳ ಸಂಬಂಧಿಕರು ಮನೆ ಕೆಲಸ ಮಾಡದ್ದಕ್ಕೆ ಅವಳನ್ನು ರಾತ್ರಿ  ಮನೆಯಿಂದ ಹೊರಗೆ ಹಾಕಿದ್ದಾರಂತೆ‌.ನಂತರ ಎಲ್ಲಿ ಹೋಗಿದ್ದಾಳೆ,ಏನಾಗಿದೆ ಎಂದು ತಿಳಿದಿಲ್ಲ ಎಂದು ತಿಳಿಸಿದರು‌
ಅದೇ ಹೊತ್ತಿಗೆ ಅವಳ ಸಂಬಂಧಿಕರ ಮನೆಯ ಭಾರೀ ಜೋರಿನ ಮಹಿಳೆಯೊಬ್ಬರು( ಅವಳ ದೊಡ್ಡಮ್ಮನ ಮಗಳು ಅಕ್ಕ ಎಂದು ನಂತರ ತಿಳಿಯಿತು )  ಕಾಲೇಜಿಗೆ ಬಂದು ಆ ಹುಡುಗಿ ಪರೀಕ್ಷೆಗೆ ಬಂದಿದ್ದಾಳಾ ಎಂದು ವಿಚಾರಿಸಿದರು.ಅವರಿಗೂ ಅವಳು ಎಲ್ಲಿಗೆ ಹೋಗಿದ್ದಾಳೆ ಎಂದು ತಿಳಿದಿರಲಿಲ್ಲ.
ಆಗ ನಾನು‌ ಮತ್ತಷ್ಟು ಅವಳ ಬಗ್ಗೆ ಅವರ ಸಹಪಾಠಿಗಳಲ್ಲಿ ವಿಚಾರಿಸಿದೆ‌.ಅವಳು ಎಲ್ಲಿದ್ದಾಳೆಂಬ ಮಾಹಿತಿ ಸಿಕ್ಕರೆ ತಿಳಿಸಿ ಎಂದು ಹೇಳಿ ನನ್ನ ಮೊಬೈಲ್ ನಂಬರ್ ಕೊಟ್ಟೆ‌.ಅವಳು ಸಿಕ್ಕರೆ ನನ್ನ ನಂಬರ್ ಅವಳಿಗೆ ಕೊಡಲು ತಿಳಿಸಿದೆ.
ಅದೇ ದಿನ ರಾತ್ರಿ ಆ ವಿದ್ಯಾರ್ಥಿನಿ ನನಗೆ ಕರೆ ಮಾಡಿದಳು.ಅವಳ ಸ್ನೆಹಿತೆ ಹೇಳಿದ್ದು ಸತ್ಯವಾಗಿತ್ತು.ಇವಳು ನೆಂಟರ ಮನೆಯಲ್ಲಿ ಎಲ್ಲಾ ಕೆಲಸ ಮಾಡಿ ಕಾಲೇಜಿಗೆ ಬರಬೇಕಾಗಿತ್ತು.ಪೂರ್ವ ಸಿದ್ಧತಾ ಪರೀಕ್ಷೆ ಇದ್ದ ಕಾರಣ ಇವಳು ಮನೆ ಮಂದಿಯ ಬಟ್ಟೆಗಳನ್ನು ಒಗೆಯಲಿಲ್ಲ.ಅದಕ್ಕೆ ಬೈದು ಹೊಡೆದು ಮನೆಯಿಂದ ಹೊರಗೆ ಹಾಕಿದ್ದರು‌.ರಾತ್ರಿ ಹೊತ್ತಿನಲ್ಲಿ ಏನು ಮಾಡುವುದೆಂದು ತಿಳಿಯದೆ ತಂದೆಗೆ ಪೋನ್ ಮಾಡಿದಾಗ ಊರಿಗೆ ಬರಲು ತಿಳಿಸಿದರು‌.ಊರಿಗೆ ಹೋದರೆ ಮತ್ತೆ ಹಿಂದೆ ಬರಲು ಸಾಧ್ಯವಿಲ್ಲ, ತನ್ನ ವಿದ್ಯಾಭ್ಯಾಸ ನಿಂತು ಹೋಗುತ್ತದೆ ಎಂದು ಹೆದರಿದ ಹುಡುಗಿ ಶಿವಮೊಗ್ಗದಲ್ಲಿ ಇರುವ  ತನ್ನ ಸೋದರತ್ತೆ ಮನೆಗೆ ಹೋಗಿದ್ದಾಳೆ. ಅಲ್ಲಿಂದ ನನಗೆ ಕರೆ ಮಾಡಿದ್ದಳು .ಆಗ ನಾನು ದ್ವಿತೀಯ ಪಿಯುಸಿ ಗೆ ಖಾಸಗಿಯಾಗಿ ಕಟ್ಟು .ಮತ್ತೆ ಪರೀಕ್ಷೆ ಸಮಯದಲ್ಲಿ ಬಂದು ಪರೀಕ್ಷೆ ಬರೆ ಎಂದು ಸಲಹೆ ಕೊಟ್ಟೆ‌.ಒಂದೆರಡು ದಿನಗಳ ಒಳಗೆ ಖಾಸಗಿಯಾಗಿ ಕಟ್ಟುವವರು ದಾಖಲೆಗಳನ್ನು ನೀಡಿ ಶುಲ್ಕ ಕಟ್ಟಬೇಕಿತ್ತು.ಹಾಗಾಗಿ ಕೂಡಲೇ ಕಾಲೇಜಿಗೆ ಬಂದು ಶುಲ್ಕ ಪಾವತಿ ಮಾಡಿ ದಾಖಲೆಗಳನ್ನು ನೀಡಲು ಹೇಳಿದೆ‌.ಅವಳು ಅದಕ್ಕೆ ಒಪ್ಪಿದ್ದಳು.ಆದರೆ ಎರಡು ಮೂರು ದಿನ ಕಳೆದರೂ ಅವಳ ಪತ್ತೆ ಇಲ್ಲ. ಖಾಸಗಿಯಾಗಿ ಕಟ್ಟುವ ಸಮಯ ಕಳೆದು ಹೋಯಿತು.
ಮೂರನೆಯ ದಿನ ರಾತ್ರಿ ಅವಳ ತಂದೆ ಮತ್ತೆ ನನಗೆ ಕರೆ ಮಾಡಿ" ಅವರ ಮಗಳು ಸಿಂಚನಾ ( ಹೆಸರು ಬದಲಿಸಿದೆ)  ನನ್ನ ಮನೆಗೆ ಬಂದಿರುವಳೇ ಎಂದು ವಿಚಾರಿಸಿದರು‌.ಆಗ ನಾನು ನಮ್ಮ ‌ಮನೆಗೆ ಬಂದಿಲ್ಲ. ಆದರೆ ಎರಡು ದಿನ ಮೊದಲು ಅವಳ ಸೋದರತ್ತೆ ಮನೆಯಿಂದ ಫೋನ್ ಮಾಡಿದ್ದನ್ನು ತಿಳಿಸಿದೆ.ಆಗ ಅವರು ಅವಳು ಆ ದಿನ ಬೆಳಗ್ಗೆ ಸಿವಮೊಗ್ಗದ ಅತ್ತೆ ಮನೆಯಿಂದ ಮನೆಯವರಿಗೆ ತಿಳಿಸದೆ ಎಲ್ಲೋ ಹೋಗಿದ್ದಾಳೆ‌.ಎಲ್ಲಿಗೆ ಹೋಗಿದ್ದಾಳೆ ಎಂದು ತಿಳಿದಿಲ್ಲ ಅದಕ್ಕಾಗಿ ನನಗೆ ಪೋನ್ ಮಾಡಿದ್ದೆಂದು ತಿಳಿಸಿದರು‌.ಅವಳು ಎಲ್ಲಿದ್ದಾಳೆಂದು ಗೊತ್ತಾದರೆ ತಿಳಿಸುತ್ತೇನೆ ಎಂದು ಹೇಳಿದೆ.
ಈ ಹುಡುಗಿ ಏನು ಅಪಾಯ ಮಾಡಿಕೊಳ್ಳುವಳೋ,ಏನಾದರೂ ಅಪಾಯಕ್ಕೆ ಸಿಲುಕಿರುವಳೋ ಏನೋ ಎಂದು ಆತಂಕವಾಯಿತು‌.ಅವಳಿಗೆ ಕರೆ ಮಾಡಿದರೆ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂದು ಬರುತ್ತಾ ಇತ್ತು.

ಮರುದಿನ ಕಾಲೇಜಿನಲ್ಲಿ ಅವಳ ಸ್ನೇಹಿತೆಯರಲ್ಲಿ ವಿಚಾರಿಸಿದೆ .ಆಗ ಅವಳ ಸ್ನೇಹಿತೆ ಕಾವ್ಯಾ " ನಿನ್ನೆ ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಅವಳು ನೆಲಮಂಗಲ ಬಸ್ ಸ್ಟಾಪ್ ಬಂದು ಯಾರಲ್ಲೋ ಪೋನ್ ಕೇಳಿ ಇವಳಿಗೆ ಫೋನ್ ಮಾಡಿದ್ದಾಳೆ.ನಂತರ ಕಾವ್ಯಾ ಮತ್ತು ಅವಳ ತಾಯಿ ಆಟೋ ಮಾಡಕೊಂಡು ಬಂದು ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ವಿಚಾರವನ್ನು ತಿಳಿಸಿದಳು.
ಇವಳು ಕಾವ್ಯಾಳ ಫೋನ್ ನಿಂದ ತಂದೆಗೆ ಕರೆ ಮಾಡಿ ಮಾತನಾಡಲು ಯತ್ನ ಮಾಡಿದಾಗ ಅವರು ಕರೆಯನ್ನು ಕೋಪದಿಂದ ಅರ್ಥದಲ್ಲಿ ಕಟ್ ಮಾಡಿದ್ದಾರೆ.ನಂತರ ಕಾವ್ಯಾ ಪೋನ್ ಗೆ ಕರೆ ಮಾಡಿ ಅವಳನ್ನು ಯಾಕೆ ಇರಿಸಿಕೊಂಡಿದ್ದೀರಿ ? ಕಿಡ್ನ್ಯಾಪ್ ಕೇಸು ಹಾಕುತ್ತೇವೆಂದು ಜೋರು ಮಾಡಿದ್ದಾರೆ.
ಆಗ ನಾನು ಕಾವ್ಯಾ ಮತ್ತು  ವಿದ್ಯಾರ್ಥಿನಿ ಸಿಂಚನಾ  ಇಬ್ಬರನ್ನೂ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋದೆ‌. ಅದೃಷ್ಟವಶಾತ್ ವೃತ್ತ ನಿರೀಕ್ಷಕರಾದ ಶಿವಣ್ಣ ಅವರು ಇದ್ದರು‌.ಅವರಲ್ಲಿ ವಿಷಯ ತಿಳಿಸಿ ಏನು ಮಾಡುವುದೆಂದು ಕೇಳಿದೆ.ಆಗ ಅವರು ಆ ವಿದ್ಯಾರ್ಥಿನಿ ತಂದೆಯಲ್ಲಿ ಮಾತನಾಡಿ ಸರ್ಕಾರಿ ಹಾಸ್ಟೆಲ್ ಗೆ ಸೇರಿಸಲು ಯತ್ನ ಮಾಡುವ,ಅಷ್ಟರ ತನಕ ಅವಳು ಅವಳ ಸ್ನೇಹಿತೆ ಕಾವ್ಯಾ ಮನೆಯಲ್ಲೇ ಇರಲಿ ಎಂದು ಹೇಳಿದರು.ಅವಳ ತಂದೆಗೆ ಕರೆ ಮಾಡಿ ಮರುದಿನ ಬರಲು ಹೇಳಿದರು.ಅವರು ಒಪ್ಪಲಿಲ್ಲ ‌.ಆ ಹೊತ್ತಿಗಾಗುವಾಗ ಹೊಡೆದು ಬಡಿದು ಹೊರ ಹಾಕಿದ ಸಂಬಂಧಿಕರು " ಅವಳು ಲವ್ ಮಾಡಿ ಯಾರ ಜೊತೆಯಲ್ಲೋ ಓಡಿ ಹೋಗಲು ತಯಾರಾಗಿದ್ದಳು.ಅದನ್ನು ತಡೆದು ನಾವು ಜೋರು ಮಾಡಿದ್ದೇವೆ‌.ಅದಕ್ಕೆ ಅವಳು‌ ಮನೆ ಬಿಟ್ಟು ಹೋಗಿದ್ದಾಳೆ ಎಂದು ಕಟ್ಟು ಕಥೆ ಕಟ್ಟಿ ಅವಳ ತಂದೆ ತಾಯಿ ತಲೆಕೆಡಿಸಿದ್ದರು.ಹಾಗಾಗಿ ನಮ್ಮ ಮಾತು ಕೇಳದ ಅವಳಿಗೂ ನಮಗೂ ಸಂಬಂಧ ಇಲ್ಲವೆಂದು ಹೇಳಿ‌ ಪೋನ್ ಕರೆ ಕಟ್ ಮಾಡಿದ್ದರು.ಆಗ ಅವಳನ್ನು ಹಾಸ್ಟೆಲ್ ಗೆ ಸೇರಿಸುವಂತೆ ಶಿವಣ್ಣ ಅವರು ತಿಳಿಸಿದರು.
ವರ್ಷದ ನಡುವೆ ಸರಕಾರಿ ಹಾಸ್ಟೆಲ್ ಗೆ ಸೇರುವುದು ಸುಲಭದ ವಿಚಾರವಲ್ಲ‌.ಈ ನಿಟ್ಟಿನಲ್ಲಿ ತಹಸಿಲ್ದಾರ್ ರಮೇಶ್ ಅವರ ಸಹಾಯ ಕೇಳಿದೆ‌.ಅವರು ಅವಳನ್ನು ಸೇರಿಸಿಕೊಳ್ಳುವಂತೆ ಹಾಸ್ಟೆಲ್ ನ ಅಧಿಕಾರಿಗಳಿಗೆ ಪೋನ್ ಮಾಡಿ ಹೇಳಿ ಒಂದು ಪತ್ರ ಕೂಡ ಕೊಟ್ಟರು‌.
ಅಲ್ಲಿಗೆ ಹೋಗಿ ಮಾತನಾಡುವಾಗ ಅವಳ ಸಂಬಂಧಿಕರ ಪೋನ್ ನಂಬರ್ ಕೇಳಿದರು. ಹಾಸ್ಟೆಲ್ ಅಧಿಕಾರಿಗಳು ಅವರಿಗೆ ಪೋನ್ ಮಾಡಿದಾಗ ಮತ್ತೆ ಅವರು ಅದೇ ಕಥೆಯನ್ನು ಹೇಳಿದರು.ಲವ್ ಮಾಡಿ ಓಡಿ ಹೋಗಲು ತಯಾರಾಗಿ ಮನೆಯಿಂದ ಹೊರಗೆ ಬಂದಿದ್ದಾಳೆಂದು ಅವರು ಹೇಳಿದ ಕಟ್ಟು ಕಥೆ ನಂಬಿದ ಅವರು ಅವಳಿಗೆ ಹಾಸ್ಟೆಲ್ ನಲ್ಲಿ ಇರಲು ಅವಕಾಶ ನೀಡಲಿಲ್ಲ ‌.ಇಷ್ಟಾಗುವಾಗ ಮತ್ತೆ ಒಂದೆರಡು ದಿನ ಕಳೆದಿತ್ತು.ಆದಷ್ಟು ಬೇಗನೆ ಅವಳಿಗೆ ಒಂದು ಹಾಸ್ಟೆಲ್ ವ್ಯವಸ್ಥೆ ಮಾಡಬೇಕಾಗಿತ್ತು.ಹಾಗಾಗಿ ಮಕ್ಕಳ ಹಕ್ಕು ದೂರವಾಣಿ10978 ಗೆ ಕರೆ ಮಾಡಿ ಸಹಾಯ ಕೇಳುವುದು ಎಂದು ನಿರ್ಧರಿಸಿದೆ.ಅಷ್ಟರಲ್ಲಿ ನಮ್ಮ ಕಾಲೇಜಿನಲ್ಲಿ ‌ಮಕ್ಕಳ‌ಹಕ್ಕಿನ ಬಗ್ಗೆ ನೆಲಮಂಗಲದ ಮಕ್ಕಳ ಸಹಾಯ ವಾಣಿ ಕೇಂದ್ರದ ಎನ್ ಜಿ ಒ ವತಿಯಿಂದ ಒಂದು ಕಾರ್ಯಕ್ರಮ ಮಾಡಿದರು‌.ಆಗ ಅ ಎನ್ ಜಿ ಒ ದ ನಿರ್ದೇಶಕರಲ್ಲಿ ಈ ವಿದ್ಯಾರ್ಥಿನಿ ಸಮಸ್ಯೆ ಬಗ್ಗೆ ತಿಳಿಸಿ ಅವಳಿಗೆ ಉಳಿದುಕೊಳ್ಳಲು ಒಂದು ವ್ಯವಸ್ಥೆ ಮಾಡಿ‌ಕೊಡಿ ಎಂದು ಕೇಳಿದೆ‌.ಆಯಿತು ಎಂದು ನನ್ನ ಪೋನ್ ನಂಬರ್ ತಗೊಂಡು ಹೋದವರದ್ದು ಮತ್ತೆ ಎರಡು ದಿನ ಕಳೆದರೂ ಸುದ್ದಿಯೇ ಇಲ್ಲ. ನಾನು ಕರೆ‌ಮಾಡಿದರೆ  ಮಕ್ಕಳ ಹಕ್ಕು ಕಾರ್ಯಾಗಾರದಲ್ಲಿ ಇದ್ದೇನೆ.ಮತ್ತೆ ಕರೆ ಮಾಡಿ ಎಂಬ ಉತ್ತರ.
ಮತ್ತೆ ಕೊನೆಗೆ 1098 ಗೆ ಕರೆ ಮಾಡಿದೆ‌.ಆಗ ಅವರು ನೆಲಮಂಗಲ ಮಕ್ಕಳ ಸಹಾಯವಾಣಿಗೆ ಸಂಬಂಧಿಸಿದ ಅದೇ ಎನ್ ಜಿ ಒ ನಿರ್ದೇಶಕರನ್ನು ಸಂಪರ್ಕಿಸುವಂತೆ ತಿಳಿಸಿದರು‌.ಆಗ ನಾನು ಅವರಿಗೆ ಎರಡು ಮೂರು ದಿವಸಗಳ ಹಿಂದೆಯೇ ತಿಳಿಸಿದ್ದೇವೆ‌.ಅವರಿಗಿಂತ ಮೇಲಿನ ಅಧಿಕಾರಿಗಳ ನಂಬರ್ ಕೊಡಿ ಎಂದು ಹೇಳಿದೆ.ಆಗ ಅವರು ದಿನೇಶ್ ಎಂಬವರ ನಂಬರ್ ನೀಡಿದರು.ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ‌.ಅವರು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಒಬ್ಬರು ಕೌನ್ಸಿಲರ್ ಅನ್ನು ಕರೆದುಕೊಂಡು ಬಂದು ಇವಳಲ್ಲಿ ಮಾತನಾಡಿ ವಿಷಯ ಅರ್ಥ ಮಾಡಿಕೊಂಡರು‌.ಅವಳ ತಂದೆಯ ಜೊತೆ ಮಾತನಾಡಿ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡಿದೆನಾದರೂ ಏನೂ ಪ್ರಯೋಜನವಾಗಲಿಲ್ಲ. ಅವರ ನೆಂಟರು ಹೇಳಿದ ಕಟ್ಟು ಕಥೆ ನಂಬಿರುವ ಅವರು ಯಾರ ಮಾತನ್ನೂ ಕೇಳುವ ಪರಿಸ್ಥಿತಿ ಯಲ್ಲಿ ಇರಲಿಲ್ಲ. ಕೊನೆಗೆ CWC ಯಿಂದ ಅವಳ ತಂದೆಗೆ ಕರೆ ಮಾಡಿ ಬರುವಂತೆ ತಿಳಿಸಿದರು‌‌.ಎನ್ ಜಿ ಒ ಇಂದ ಯಾರೋ‌ ಒಬ್ಬರು ಬಂದು ನನ್ನ ವಿದ್ಯಾರ್ಥಿನಿಯಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಬಸ್ ನಿಲ್ದಾಣ ಕ್ಕೆ ಬರಲು ತಿಳಿಸಿದರು.
ಮೊದಲೇ ಅವಳ ಸಂಬಂಧಿಕರು ಅವಳಿಗೆ ಹೊಡೆದು ಬಡಿದು ಮಾಡಿದ್ದಾರೆ‌.ಈಗ ತಂದೆ ತಾಯಿಯರು ಅವಳಿಗೆ ವಿರುದ್ಧವಾಗಿದ್ದಾರೆ‌‌.ಇಂತಹ ಇಕ್ಕಟ್ಟಿನ ಸಮಯದಲ್ಲಿ ಅವಳನ್ನು ಎನ್ ಜಿ ಒ ಕಾರ್ಯಕರ್ತರ ಜೊತೆ ಒಬ್ಬಳೇ ಕಳಹಿಸಲು ಮನಸು ಒಪ್ಪಲಿಲ್ಲ ‌.ಈ ಬಗ್ಗೆ ನಮ್ಮ ಕಾಲೇಜು ಪ್ರಾಂಶುಪಾಲರಲ್ಲಿ ತಿಳಿಸಿದಾಗ ಈ ಸಮಸ್ಯೆಯ ಅರಿವಿದ್ದ ಅವರು ನನ್ನನ್ನು ಕೂಡ ಅವಳ ಜೊತೆಗೆ ಹೋಗಲು ತಿಳಿಸಿದರು ‌
ಮರುದಿನ ಎಂಟೂವರೆಗೆ ನಾನು ನೆಲಮಂಗಲ ಬಸ್ ನಿಲ್ದಾಣ ಕ್ಕೆ ಬಂದೆ‌.ಅವಳು ಅವಳ ಸ್ನೇಹಿತೆ ಕಾವ್ಯ ಜೊತೆಯಲ್ಲಿ ಎಂಟೂ ಮುಕ್ಕಾಲಕ್ಕೆ ಬಂದಳು.
ಒಂಬತ್ತು ಗಂಟೆಗೆ ಬರಲು ಹೇಳಿದ ಎನ್ ಜಿ ಒ ಕಾರ್ಯರ್ತರು ಹತ್ತೂವರೆಯಾದರೂ ಬರಲಿಲ್ಲ ‌ಅಂತೂ ಇಂತೂ ಅನೇಕ ಬಾರಿ ಕರೆ ಮಾಡಿದ ನಂತರ ಹನ್ನೊಂದು ಗಂಟೆ ಹೊತ್ತಿಗೆ ಓರ್ವ ಮಹಿಳಾ ಕಾರ್ಯ ಕರ್ತೆ ಮತ್ತೆ ಓರ್ವ ಪುರುಷ ಕಾರ್ಯಕರ್ತರು ಬಂದರು‌.ಸ್ವಲ್ಪ ಹೊತ್ತಾದ ಮೇಲೆ ದಿನೇಶ್ ಅವರು ಬಂದರು.ಇವಳ ತಂದೆಯನ್ನು ನೆಲಮಂಗಲ ಬಸ್ ನಿಲ್ದಾಣ ಕ್ಕೆ ಬರಲು ಹೇಳಿದ್ದರೂ ಅವರು ಕಾಲೇಜಿಗೆ ಹೋಗಿದ್ದರು‌.ಮತ್ತೆ ಅವರಿಗೆ ಪೋನ್ ಮಾಡಿ ಬಸ್ ನಿಲ್ದಾಣ ಕ್ಕೆ ಬರಲು ದಿನೇಶ್ ಅವರು ತಿಳಿಸಿದಾಗ ಅವಳ ತಂದೆ ತಾಯಿ ಅವಳು ಉಳಿದುಕೊಂಡಿದ್ದ  ಮನೆಯ ಅವಳ ದೊಡ್ಡಮ್ಮನ ಮಗಳು ಮತ್ತು ಅವಳ ಗಂಡ ಬಂದರು‌.ಬಸ್ ನಿಲ್ದಾಣ ದಲ್ಲಿ ಇವಳನ್ನು ನೋಡಿದ ತಕ್ಷಣವೇ ಅವಳನ್ನು ಬೈದು ಹೊಡೆದು ಎಳೆದಾಡಿದರು‌.ಅವಳ ನೆಂಟರ ಕ್ರೂರತನ ಬಗ್ಗೆ ನನಗೆ ಗೊತ್ತಿತ್ತು‌ ಆದರೆ ಎನ್ ಜಿ ಒ ಅವರಿಗೆ ಇದು ಹೀಗಾಗಬಹುದು ಎಂಬ ನಿರೀಕ್ಷೆ ಇರಲಿಲ್ಲ ‌ನಾನು ತಕ್ಷಣವೇ ಪೋಲೀಸರಿಗೆ ಕರೆ ಮಾಡಲು ಪೋನ್ ತೆಗೆದೆ‌.ಆಗ ಅವಳ ದೊಡ್ಡಮ್ಮನ ಮಗಳು ( ಸುಮಾರಾಗಿ ತಾಟಕಿಯಂತೆ ಇದ್ದಳು!) ನನ್ನ ಕೈಯಿಂದ ಮೊಬೈಲ್‌ ಕಿತ್ತುಕೊಂಡಳು.ಇನ್ನೂ ಅಲ್ಲಿ ನಿಂತರಾಗದೆಂದು ವಿದ್ಯಾರ್ಥಿನಿ ಯನ್ನು ಎಳೆದುಕೊಂಡು ಅಲ್ಲೇ ಇದ್ದ ಅಟೋ ಹತ್ತಿ ಪೋಲಿಸ್ ಸ್ಟೇಷನ್ ಬಿಡಲು ಹೇಳಿದೆ‌
ಎನ್ ಜಿ ಒ ದ ಕಾರ್ಯಕರ್ತರು ಮತ್ತು ದಿನೇಶ್ ಅವರು ಪೋಲಿಸ್ ಸ್ಟೇಷನ್ ಗೆ ಬಂದರು.
ಇಷ್ಟಾಗುವಾಗ ಎನ್ ಜಿ ಒ ದ ನಿರ್ದೇಶಕ ಕೂಡ ಬಂದರು‌.ಬಂದು  ಅವಳ ತಂದೆ ತಾಯಿ ನೆಂಟರ ಜೊತೆ ಸೇರಿಕೊಂಡು ವಿದ್ಯಾರ್ಥಿನಿ ಯನ್ನು ನಾನು ಅಪಹರಣ ಮಾಡಿದ್ದೇನೆಂದು ದೂರು ಕೊಡುತ್ತೇನೆ ಎಂದು ನನ್ನನ್ನು ಹೆದರಿಸಲು ಬಂದರು.ಆಯಿತು ಕೊಡಿ ಎಂದು ಹೇಳಿದೆ‌.ನಾನು ಮೊದಲೇ ಸರ್ಕಲ್ ಇನ್ಸ್‌ಪೆಕ್ಟರ್ ಶಿವಣ್ಣ ಅವರಲ್ಲಿ ಮಾತನಾಡಿದ್ದು  ಅವರ ಸೂಚನೆಯಂತೆ ಅವಳು ಅವಳ ಸ್ನೇಹಿತೆ ಕಾವ್ಯಾ ಮನೆಯಲ್ಲಿ ಇರುವುದು ಅವರಿಗೆ ತಿಳಿದಿರಲಿಲ್ಲ. ಮಕ್ಕಳ ಪರ ನಿಲ್ಲ ಬೇಕಾಗಿದ್ದ ಎನ್ ಜಿ ಒ ನಿರ್ದೇಶಕ ಅವಳಿಗೆ ವಿರೊಧವಾಗಿದ್ದ! ಇವರು ದೂರು ಕೊಡಲು ಹೋಗಿ ಛೀಮಾರಿ ಹಾಕಿಸಿಕೊಂಡರು‌.ಅಲ್ಲಿಮದ ಬಸ್ ಹತ್ತಿ ಸಿ ಡಬ್ಲ್ಯು ಸಿ ಗೆ ಬಂದೆವು‌
ಅಲ್ಲಿನ ಅಧಿಕಾರಿಗಳಿಗೆ ವಿಷಯ ತಿಳಿಸಿದೆ‌.ಅವರು ವಿದ್ಯಾರ್ಥಿನಿ ಯಲ್ಲಿ ಮಾತನಾಡಿದಾಗ ಅವಳು ಓದನ್ನು ಮುಂದುವರೆಸಲು ಸಹಾಯ ಕೇಳಿದಳು.
ನಂತರ ಅವಳ ತಂದೆ ತಾಯಿಯ ಹತ್ತಿರ ಮಾತನಾಡಿ ಮಗಳನ್ನು ಯಾರ್ಯಾರದೋ ಮನೆಯಲ್ಲಿ ಬಿಟ್ಟಿರುವುದು ತಪ್ಪು ‌‌ ಅವಳಿಗೆ ಬೈದು ಹೊಡೆದು ಮಾಡಿರುವುದು ತಪ್ಪು ಅವಳನ್ನು ಓದಿಸುವ ಜವಾಬ್ದಾರಿ ನಿಮ್ಮದು‌.ನೀವು ಓದಿಸದೆ ಇದ್ದರೆ ನಾವು ಅವಳಿಗೆ ಬೇರೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಹೇಳಿದರು.ನಂತರ ಅವಳ ನೆಂಟರು ಇನ್ನು ಬೈದು ಹೊಡೆದು ಮಾಡುವುದಿಲ್ಲ ಎಂದು ಬರೆದುಕೊಟ್ಟರು‌.ಹಾಗಾಗಿ ಇವಳು ಮತ್ತೆ ಅವರ ಮನೆಯಲ್ಲಿ ಎರಡು ಮೂರು ತಿಂಗಳು ಇದ್ದು ಪಿಯುಸಿ ಓದು ಮುಗಿಸಲು ಒಪ್ಪಿದಳು.
ಅಲ್ಲೇನೋ ಅವಳ ಸಂಬಂಧಿಕರು ಬೈದು ಹೊಡೆದು ಮಾಡುವುದಿಲ್ಲ ಎಂದು ಒಪ್ಪಿದ್ದರೂ ಕೂಡ ನಂತರ ಕೂಡ ಬೈಗಳು,ಸಣ್ಣಪುಟ್ಟ ಹೊಡೆತ ಇವಳಿಗೆ ಬೀಳುತ್ತಿದ್ದ ಬಗ್ಗೆ ನನಗೆ ಅವಳು ತಿಳಿಸಿದಳು‌.ಅಗ ನಾನು ಇನ್ನೇನು ಒಂದು ತಿಂಗಳಿಗೆ ಕಾಲೇಜು ಮುಗಿಯುತ್ತದೆ‌.ಸ್ವಲ್ಪ ತಾಳ್ಮೆಯಿಂದ ಇರು ಎಂದು ತಿಳಿ ಹೇಳಿದೆ‌
ಅಂತೂ ಇಂತೂ ಹೇಗೋ ಪಿಯುಸಿ ಪರೀಕ್ಷೆ ಬರೆದಳು.
ಸಾಕಷ್ಟು ಜಾಣ ವಿದ್ಯಾರ್ಥಿನಿ ಅವಳು‌.ನಾವು ಡಿಸ್ಟಿಂಕ್ಷನ್ ಬರಬಹುದೆಂದು ಊಹಿಸಿದ್ದೆವು.ಆದರೆ ತಂದೆ ತಾಯಿಯರ ನಿರ್ಲಕ್ಷ್ಯ, ಬಂಧುಗಳ ಹೊಡೆತ ಬಡಿತ,ಓಡಿ ಹೋಗಿದ್ದಾಳೆ ಎಂಬ ಆರೋಪಗಳಿಂದ ಹುಡುಗಿ ಚಿಂತಿಸಿ ಹೈರಾಣವಾಗಿ ಬಿಟ್ಟಿದ್ದಳು.ಆದ್ದರಿಂದ ನಾವು ನಿರೀಕ್ಷಿಸಿದಷ್ಟು ಅಂಕಗಳು ಅವಳಿಗೆ ಬಂದಿಲ್ಲ .ಆದರೂ ಈ ಎಲ್ಲಾ ಸಮಸ್ಯೆಗಳ ನಡುವೆಯೂ 600 ರಲ್ಲಿ 358 ಅಂಕಗಳನ್ನು ತೆಗೆದಿದ್ದಾಳೆ.ಸಿ ಡಬ್ಲೂ ಸಿ ಯಲ್ಲಿ ಅವಳ ತಂದೆ ಅವಳನ್ನು ಊರಿನಲ್ಲಿ ಡಿಗ್ರಿ ಕಾಲೇಜಿಗೆ ಸೇರಿಸಿ‌ ಮುಂದೆ ಓದಿಸುತ್ತೇನೆ ಎಂದು ಬರವಣಿಗೆಯ ಮೂಲಜ ಮಾತು ಕೊಟ್ಟಿದ್ದಾರೆ‌.ಇವಳಿಗೂ ಓದಿ ಮುಂದೆ ಐಎಎಸ್ ಮಾಡುವ ಕನಸಿದೆ‌.ಮುಂದೆ ಏನಾಗುತ್ತದೋ ಗೊತ್ತಿಲ್ಲ
ಅವಳ ತಂದೆ ಒಪ್ಪಿಕೊಂಡಂತೆ ಓದಿಸಲಿ,ಅವಳು ಅವಳ ಕನಸಿನಂತೆ ಐಎಎಸ್ ಅಧಿಕಾರಿ ಆಗಲಿ ಎಂದು ಹಾರೈಸುವೆ‌

Friday 18 May 2018

ದೊಡ್ಡವರ ದಾರಿ 58 ಮಾತೃ ಹೃದಯದ ಕಲ್ಲಡ್ಕ ಡಾ.ಕಮಲ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ





ಕಳೆದ ಎರಡು ವರ್ಷಗಳಲ್ಲಿ ಕಲ್ಲಡ್ಕ ಕಮಲಕ್ಕ ಅವರನ್ನು ಭೇಟಿ ಮಾಡಿ ಅವರೊಂದಿಗೆ ಒಂದು ಫೋಟೋ ತೆಗೆಸಿಕೊಂಡು ಬ್ಲಾಗ್ ನಲ್ಲಿ ಅವರ ಮಾತೃ ಹೃದಯದ ಬಗ್ಗೆ ಒಂದು ಬರಹಬರೆಯಬೇಕೆಂದುಕೊಂಡಿದ್ದೆ‌
ಅದಕ್ಕಾಗಿ ಎರಡು ಮೂರು ಭಾರಿ ಊರ ಕಡೆ ಹೋದಾಗ ಕಲ್ಲಡ್ಕಕ್ಕೆ ಹೋದೆನಾದರೂ ಅವರನ್ನು ಭೇಟಿಯಾಗಲು ಆಗಲಿಲ್ಲ.
ಕಳೆದ ತಿಂಗಳಿನಲ್ಲಿ ಕೈರಂಗಳ ಗೋಶಾಲೆಯಿಂದ ಗೋವುಗಳನ್ನು ತಲವಾರು ತೋರಿಸಿ ಅಪಹರಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಟಿಜಿ ರಾಜಾರಾಮಭಟ್ಟರು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.ಅವರಿಗೆ ಬೆಂಬಲ‌ ಸೂಚಕವಾಗಿ  ನಾನು ಕೂಡ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿದ್ದೆ‌.ಆ ಸಂದರ್ಭದಲ್ಲಿ ಅಲ್ಲಿಗೆ ಪ್ರಭಾಕರಣ್ಣ ಮತ್ತು ಕಮಲಕ್ಕ ( ಕಲ್ಲಡ್ಕ ಡಾ.ಪ್ರಭಾಕರ ಭಟ್ ಮತ್ತು ಡಾ.ಕಮಲ ಭಟ್)ಬಂದಿದ್ದರು.ಆಗ ಕಮಲಕ್ಕ ಜೊತೆಗೆ ಒಂದು ಫೋಟೋ ತೆಗೆಸಿಕೊಂಡೆನಾದರೂ ಆರೋಗ್ಯ ಸಮಸ್ಯೆಯಿಂದಾಗಿ ತಕ್ಷಣವೇ ಲೇಖನ ಬರೆಯಲಾಗಲಿಲ್ಲ.
ಅದು 1996 ಜೂನ್ ತಿಂಗಳು. ಆಗಷ್ಟೇ ನಾನು ಸಂಸ್ಕೃತ ಎಂಎ ದ್ವಿತೀಯ ವರ್ಷದ ಅಂರಿಮ ಪರೀಕ್ಷೆ ಬರೆದು ಉದ್ಯೋಗದ ಹುಡುಕಾಟದಲ್ಲಿ ಇದ್ದೆ.ಆಗ ಸಂಸ್ಕೃತ ಭಾರತಿಯ ಕಾರ್ಯಕರ್ತೆ ಯಶೋದಾ ಭಗಿನಿ ನನ್ನನ್ನು ಕಲ್ಲಡ್ಕಕ್ಕೆ ಕರೆದುಕೊಂಡು ಹೋಗಿ ಪ್ರಭಾಕರಣ್ಣ ಅವರಿಗೆ ಪರಿಚಯಿಸಿದರು‌.ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಒಂದು ಸಂಸ್ಕೃತ ಶಿಕ್ಷಕಿ ಕೆಲಸ ಖಾಲಿ ಇತ್ತು.ಪಾಠ ಮಾಡಿ ಏನೇನೂ ಅನುಭವ ಇರದ ನನ್ನ ಮೇಲೆ ನಂಬಿಕೆ ಇಟ್ಟು ಆ ಕೆಲಸವನ್ನು ನನಗೆ ನೀಡಿದರು.
ನಾನು ಕೂಡ ಅವರ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.ಸಂಸ್ಕೃತ ಪಠ್ಯದ ಜೊತೆಗೆ ಶಾಲೆಯ ಎಲ್ಲ ಮಕ್ಕಳಿಗೆ ಸಂಸ್ಕೃತ ಸಂಭಾಷಣಾ ಶಿಬಿರದ ಮಾದರಿಯಲ್ಲಿ ಪಾಠ ಮಾಡಿ ಎಲ್ಲರಿಗೂ ಸಂಸ್ಕೃತ ಮಾತನಾಡಲು ಕಲಿಸಿದೆ‌.ಮಕ್ಕಳು ಕೂಡ ಆಸಕ್ತಿಯಿಂದ ಕಲಿತರು‌
ನಾನು ಆ ಶಾಲೆಯಲ್ಲಿ ನಾಲ್ಕು ಐದು ತಿಂಗಳು ಮಾತ್ರ ಕೆಲಸ ಮಾಡಿದ್ದೆ‌.ನನಗೆ ದ್ವಿತೀಯ ವಿಜ್ಞಾನ ಪದವಿ ಓದುತ್ತಿರುವಾಗಲೇ ಮದುವೆ ಆಗಿತ್ತು. ಕಲ್ಲಡ್ಕ ಶಾಲೆಯಲ್ಲಿ ಕೆಲಸ ಮಾಡುತ್ತಿರುವಾಗ ಆರೋಗ್ಯ ಹಾಳಾಗಿ ಕಲ್ಲಡ್ಕ ಡಾಕ್ಟರ್ ಪ್ರಭಾಕರ ಭಟ್ ಅವರಲ್ಲಿ ಚಿಕಿತ್ಸೆ ಗಾಗಿ ಹೋದೆ ಆಗ ಅವರು ನಾನು ಗರ್ಭಿಣಿಯಾಗಿರುವ ಬಗ್ಗೆ ತಿಳಿಸಿದರು ನಂತರ ನಾನು  ಮಂಗಳೂರಿನ ಭಟ್ಸ್ ನರ್ಸಿಂಗ್ ಹೋಮಿನ ಖ್ಯಾತ ಗೈನಕಾಲಜಿಸ್ಟ್  ಡಾ‌.ಮಾಲತಿ ಭಟ್ ಅವರಲ್ಲಿ ಹೋಗಿ ಚಿಕಿತ್ಸೆ ಪಡೆದೆ.
ಆ ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ಪ್ರಭಾಕರಣ್ಣ ಅವರನ್ನು ಭೇಟಿ ಮಾಡಲು ಒಂದು ಶನಿವಾರ ಮಧ್ಯಾಹ್ನ ಕ್ಲಾಸು ಮುಗಿಸಿ ಅವರ ಮನೆಗೆ ಹೋದೆ .ಆಗ ಕಮಲಕ್ಕ ನನ್ನನ್ನು ಊಟ ಮಾಡಿಕೊಂಡು ಹೋಗುವಂತೆ ಹೇಳಿದರು.ನಾನು ಗರ್ಭಿಣಿ ಎಂದು ತಿಳಿದಿದ್ದ ಅವರು ನನ್ನ ಆರೋಗ್ಯ ವಿಚಾರಿಸಿ ಪಾಯಸದ ಊಟ ಹಾಕಿ ಕಳುಹಿಸಿದ್ದರು.
ನಂತರ ನನಗೆ ಮಂಗಳೂರಿನಿಂದ ಕಲ್ಲಡ್ಕಕ್ಕೆ ಓಡಾಡುವುದು ಕಷ್ಟ ಆಯಿತು. ಅದೃಷ್ಟವಶಾತ್ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆ ಖಾಲಿಯಾಗಿ ನನಗೆ ಆ ಕೆಲಸ ದೊರೆಯಿತು.
ಮತ್ತೂ ವರ್ಷಗಳು ಉರುಳಿದವು‌. ಪ್ರಸಾದ್ ಅವರಿಗೆ ಬೆಂಗಳೂರರಿನಲ್ಲಿ ಕೆಲಸ ದೊರೆತ ಕಾರಣ ಮಂಗಳೂರುಬಿಟ್ಟು ಬೆಂಗಳೂರಿಗೆ ಬಂದು ಸೇರಿದೆವು.ಅಲ್ಲಿ ಇಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ ನಂತರ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆಯಾಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಹುದ್ದೆ ದೊರೆಯಿತು ‌.( ಈ ನಡುವೆ ನಾನು ಕನ್ನಡ ಎಂಎ ಮತ್ತು ಹಿಂದಿ ಎಂಎ ಪದವಿಗಳನ್ನು ಖಾಸಗಿಯಾಗಿ ಓದಿ ಪಡೆದಿದ್ದ್ದೆ.ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ ಎಂಫಿಲ್ ಪದವಿಯನ್ನೂ ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳದ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ( ಪಿಎಚ್ ಡಿ) ಪದವಿಯನ್ನು ಗಳಿಸಿಕೊಂಡಿದ್ದೆ)
ತುಳು ಸಂಸ್ಕೃತಿ ಬಗ್ಗೆ ವಿಪರೀತ ಎನಿಸುವಷ್ಟು ಮೋಹ ಬೆಳೆದಿತ್ತು. ಹಾಗಾಗಿ ತುಳು ಪಾಡ್ದನಗಳನ್ನು ಸಂಗ್ರಹಿಸಲು ಹಾಗೂ ,ಭೂತಾರಾಧನೆ ಕುರಿತು ಹೆಚ್ಚಿನ ಅಧ್ಯಯನ ಮಾಡುವ ಸಲುವಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಸರ್ಕಾರಿ ಕಾಲೇಜನ್ನು ಆಯ್ಕೆ ಮಾಡಿದೆ‌.ಅಲ್ಲಿ ಎರಡು ಮೂರು ವರ್ಷಗಳ ಕಾಲ ಅಧ್ಯಾಪನದೊಂದಿಗೆ ತುಳು ಸಂಸ್ಕೃತಿ ಕುರಿತಾದ ಅಧ್ಯಯನ ವನ್ನು ಮುಂದುವರಿಸಿದೆ‌.
ಅದರ ಪರಿಣಾಮವಾಗಿ ಹತ್ತು ಪುಸ್ತಕಗಳನ್ನು ಬರೆದೆ‌( ಈಗ ಇಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ)
ಇವುಗಳಲ್ಲಿ 2012 ರ ಮೇ ತಿಂಗಳಿನಲ್ಲಿ ತುಳು ನಾಡಿನ ಅಪೂರ್ವ ಭೂತಗಳು ಮತ್ತು ಬೆಳಕಿನೆಡೆಗೆ ಎಂಬ ಎರಡು ಪುಸ್ತಕಗಳ ಬಿಡುಗಡೆಗೆ ತುಳು ಅಕಾಡೆಮಿಯ ಸಹಕಾರ ಕೇಳಿದೆ‌.ಆಗ ಅಲ್ಲಿ ತಿಂಗಳಿಗೊಂದು ತುಳು ಚಾವಡಿ ಯ ಕಾರ್ಯಕ್ರಮ ಮಾಡುತ್ತಿದ್ದು ಆ ತಿಂಗಳಿನ ಕಾರ್ಯಕ್ರಮದ ಜೊತೆಗೆ ನನ್ನ ಪುಸ್ತಕಗಳನ್ನು ಬಿಡುಗಡೆ ಮಾಡಲು ಒಪ್ಪಿದರು.ಆಗ ನಾನು ಕಲ್ಲಡ್ಕ ಕಮಲಕ್ಕ ಅವರನ್ನು ಸಂಪರ್ಕಿಸಿ ನನ್ನ ಪುಸ್ತಕಗಳನ್ನು ಬಿಡುಗಡೆ ಮಾಡಬೇಕೆಂದು ವಿನಂತಿಸಿದೆ.
ಪುಸ್ತಕ ಬಿಡುಗಡೆಯ ದಿನ  ಹತ್ತಿರ ಬಂತು.  ತುಳು ಅಕಾಡೆಮಿಗೆ ಫೋನ್ ಮಾಡಿದಾಗ ಪುಸ್ತಕ ಪರಿಚಯಕ್ಕೆ ನೀವೇ ಯಾರಿಗಾದರೂ ಹೇಳಿ ಎಂದು ತಿಳಿಸಿದರು‌ಹಾಗಾಗಿ ನಾನು ಎಸ್ ಡಿಎಂ ಮಂಗಳ ಜ್ಯೋತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ನನ್ನ ತಮ್ಮ ಗಣೇಶ್ ಭಟ್ ಗೆ ತಿಳಿಸಿದೆ.ಪುಸ್ತಕ ಬಿಡುಗಡೆಯ ಹಿಂದಿನ  ದಿನ ಫೋನ್ ಮಾಡಿದ ಕಮಲಕ್ಕ ನನಗೆ ಪುಸ್ತಕಗಳ ಬಗ್ಗೆ ಮಾಹಿತಿ ಇಲ್ಲ ೇನು ಮಾತಾಡಲಿ ಎಂದು ಹೇಳಿದಾಗ ಪುಸ್ತಕ ಪರಿಚಯ ವನ್ನು ನನ್ನ ತಮ್ಮ ಗಣೇಶ್ ಭಟ್ ಮಾಡಿಕೊಡುತ್ತಾರೆ ಎಂದು ತಿಳಿಸಿದೆ. 
ಪುಸ್ತಕ ಬಿಡುಗಡೆಯ ದಿನ ಒಂದು ಗಂಟೆ ಮೊದಲೇ ತುಳು ಅಕಾಡೆಮಿ ಗೆ ಬಂದೆ
 ತುಳು ಅಕಾಡೆಮಿಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪುಸ್ತಕ ಬಿಡುಗಡೆಯ ಬಗ್ಗೆ ಉಲ್ಲೇಖ ಇರಲಿಲ್ಲ ‌.ವಿಚಾರಿಸಿದಾಗ ತುಳು ಚಾವಡಿ ಕಾರ್ಯಕ್ರಮ ಮುಗಿದ ಮೇಲೆ ಕೊನೆಯಲ್ಲಿ ಐದು ನಿಮಿಷ ಸಮಯ ಕೊಡುತ್ತೇವೆ ಎಂದು ತಿಳಿಸಿದರು.ತುಳು ಭಾಷೆ ಸಂಸ್ಕೃತಿಯ ಅಭಿವೃದ್ಧಿ ಗಾಗಿಯೇ ಇರುವ ತುಳು ಅಕಾಡೆಮಿ ನನ್ನ ತುಳು ಸಂಸ್ಕೃತಿ ಕುರಿತಾದ ಎರಡು ಪುಸ್ತಕಗಳ ಬಿಡುಗಡೆ ಬಗ್ಗೆ ಅಷ್ಟು ನಿರ್ಲಕ್ಷ್ಯ ತೋರಬಹುದೆಂಬ ಊಹೆ ಕೂಡ ನನಗಿರಲಿಲ್ಲ .
ಏನೂ ಮಾಡುವ ಹಾಗಿರಲಿಲ್ಲ.ಸುಮ್ಮನಾದೆ.ಕಮಲಕ್ಕ ಬಂದಾಗ ಪುಸ್ತಕ ಬಿಡುಗಡೆ ಕೊನೆಗೆ ಇದೆ ಅದೂ ಐದು ನಿಮಿಷ ಮಾತ್ರ ಸಮಯ ಎಂದು ಹೇಗೆ ಹೇಳಲಿ ? ಆಹ್ವಾನಿಸಿ ಅವಮಾನಿಸಿದಂತೆ ಆಯಿತಲ್ಲ ಎಂದು ತುಂಬಾ ವ್ಯಥೆ ಆಯಿತು ‌
ಸಮಯಕ್ಕೆ ಸರಿಯಾಗಿ ಕಮಲಕ್ಕ ತುಳು ಅಕಾಡೆಮಿಗೆ ಬಂದರು.ಅವರು ಬಂದಾಗ ತುಳು ಅಕಾಡೆಮಿ ಅಧ್ಯಕ್ಷರಿಗೆ ಆಶ್ಚರ್ಯ ವಾಯಿತು.ಅವರನ್ನು ಪುಸ್ತಕ ಬಿಡುಗಡೆ ಮಾಡಲು ನಾನು ಆಹ್ವಾನಿಸಿರುವ ವಿಚಾರ ಅವರಿಗೆ ತಿಳಿಯಿತು.
ಕಮಲಕ್ಕ ಬಂದದ್ದೇ ಬಂದದ್ದು‌.ಪುಸ್ತಕ ಬಿಡುಗಡೆಗೆ ತುಂಬಾ ಮಹತ್ವ ಬಂತು.ಕಾರ್ಯಕ್ರಮದ ಆರಂಭದಲ್ಲೇ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಆಯೋಜನೆ ಆಯಿತು. ಕಮಲಕ್ಕ ಪುಸ್ತಕ ಬಿಡುಗಡೆ ಮಾಡಿ ನನಗೆ ಶುಭ ಹಾರೈಸಿದರು‌.
ನಂತರ ಕಾಫಿ ತಿಂಡಿಗಾಗಿ ತುಳು ಅಕಾಡೆಮಿ ಅಧ್ಯಕ್ಷರು ಅವರನ್ನು ತಮ್ಮ ಕೊಠಡಿಗೆ ಕರೆದರು.ಅಲ್ಲೇ ಇದ್ದ ನನ್ನನ್ನು ಮತ್ತು ಮಗನನ್ನು ಕರೆದಿರಲಿಲ್ಲ‌.ನಮಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ.ಆಗ ಕಮಲಕ್ಕ ಅವರೇ ನನ್ನನ್ನು ಮತ್ತು ಮಗನನ್ನು ಜೊತೆಗೆ ಕರೆದರು. ಅವರ ಆತ್ಮೀಯತೆಗೆ ಸೋತು ಅವರೊಂದಿಗೆ ಅಧ್ಯಕ್ಷರ ಕೊಠಡಿಗೆ ಅವರ ಜೊತೆ ಹೋಗಿ ಅವರೊಂದಿಗೆ ಕಾಫಿ ತಿಂಡಿ ಸೇವಿಸಿದೆವು‌.
ಕಮಲಕ್ಕ ತುಂಬಾ ದೊಡ್ಡ ವ್ಯಕ್ತಿ. ತುಂಬಾ ಬ್ಯುಸಿ ಇರ್ತಾರೆ‌.ಆದರೂ ಕೂಡ ನಾನು ಪುಸ್ತಕ ಬಿಡುಗಡೆಗಾಗಿ ಆಹ್ವಾನಿಸಿದಾಗ ತುಂಬಾ ಪ್ರೀತಿಯಿಂದ ಒಪ್ಪಿದ್ದರು‌.ಆಹ್ವಾನ ಪತ್ರಿಕೆಯಲ್ಲಿ ಪುಸ್ತಕ ಬಿಡುಗಡೆಯ ವಿಚಾರವಾಗಲೀ ,ಅವರ ಹೆಸರಾಗಲೀ ಇರಲಿಲ್ಲ ಮತ್ತು ಬಿಡುಗಡೆ ಮಾಡುವಂತೆ ತುಳು ಅಕಾಡೆಮಿ ಅವರನ್ನು ಆಹ್ವಾನಿಸಿರಲಿಲ್ಲ.ಆದರೂ ಕೂಡ ಯಃಕಶ್ಚಿದ್ ಆಗಿರುವ ನನ್ನ ಮೌಖಿಕ ಆಹ್ವಾನವನ್ನು ಒಪ್ಪಿ ಪುಸ್ತಕ ಬಿಡುಗಡೆ ತುಂಬಾ ಗೌರವದಿಂದ ಆಗುವಂತೆ ಮಾಡಿದ ಅವರ  ಸರಳತೆ,ಆತ್ಮಾಮೀಯತೆ ಹಾಗೂ ಮಾತೃಹೃದಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಕಳೆದ ತಿಂಗಳು ಕೈರಂಗಳದಲ್ಲಿ ಸಿಕ್ಕಾಗ ತುಂಬಾ ಪ್ರೀತಿಯಿಂದ ಮಾತನಾಡಿದರು.ನಾನು ಅವರ ಜೊತೆಯಲ್ಲಿ ಒಂದು ಫೋಟೋ ತೆಗೆದುಕೊಂಡು ಅವರ ಬಗ್ಗೆ ದೊಡ್ಡವರ ದಾರಿ ಎಂದು ಬ್ಲಾಗ್ ಅಂಕಣದಲ್ಲಿ ಲೇಖನ ಬರೆಯುತ್ತೇನೆ ಎಮದಾಗ ನನ್ನ ಬಗ್ಗೆ ಬರೆಯಲು ಏನಿದೆ ? ನಾನು ದೊಡ್ಡವಳಲ್ಲ ,ವಯಸ್ಸು ಮಾತ್ರ ಸ್ವಲ್ಪ ಆಗಿದೆ ಅಷ್ಟೇ ಎಂದು ಹೇಳಿ ಅತ್ಯಂತ ಸಹಜವಾಗಿ ಹೇಳಿದರು.ತುಂಬಾ ಖ್ಯಾತರಾಗಿರುವ  ಅವರ ಮಾತು ನಡೆ ನುಡಿಗಳಲ್ಲಿ ಒಂದಿನಿತು ಕೃತ್ರಿಮತೆ ಇಲ್ಲ .ಅವರ  ಸರಳ ಮಾತಿನಲ್ಲೇ ಅವರ ದೊಡ್ಡತನ ಕಾಣುತ್ತದೆ ಅಲ್ಲವೇ ?
 ಡಾ‌.ಲಕ್ಷ್ಮೀ ಜಿ ಪ್ರಸಾದ

Wednesday 16 May 2018

ದೊಡ್ಡವರ ದಾರಿ 56 ಮಾನವೀಯತೆ ಮೆರೆದ ಮಂಗಳೂರಿನ ಪ್ರೇಮನಾಥ್ © ಡಾ‌ ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ 56 ಮಾನವೀಯತೆ ಮೆರೆದ ಮಂಗಳೂರಿನ ಪ್ರೇಮನಾಥ್ © ಡಾ‌ ಲಕ್ಷ್ಮೀ ಜಿ ಪ್ರಸಾದ
ಮೊನ್ನೆ ಕಾಲೇಜಿನಲ್ಲಿ ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ನಾನು ಟು ವೀಲರ್ ಕಲಿತು ಬಿಡುವ ಆರಂಭಿಕ ದಿನಗಳಲ್ಲಿ ಒಂದು ಆಕ್ಸಿಡೆಂಡ್ ಆದ ಬಗ್ಗೆ ತಿಳಿಸಿದೆ.ಆಗ ಪ್ರೇಮನಾಥ್ ಅವರ ಉದಾರತೆ ನೆನಪಾಯಿತು.
ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಘಟನೆ ಇದು‌.ಪ್ರಸಾದ್  ಮಣಿಪಾಲ್ ಫೈನಾನ್ಸ್ನಲ್ಲಿ ಒಳ್ಳೆಯ ಹುದ್ದೆಯಲ್ಲಿ ಇದ್ದರು.ಇದ್ದಕ್ಕಿದ್ದಂತೆ ‌ಮಣಿಪಾಲ್ ಫೈನಾನ್ಸ್ ನಷ್ಟ ಘೋಷಣೆ ಮಾಡಿ ಬಾಗಿಲು ಮುಚ್ಚಿದಾಗ ಪ್ರಸಾದ್ ಕೆಲಸ ಕಳೆದುಕೊಂಡರು.ಸ್ವಲ್ಪ ಕಾಲ ಅವರಿಗೆ ಸರಿಯಾದ ಕೆಲಸ ಸಿಗಲಿಲ್ಲ. ಅದಕ್ಕೆ ಮೊದಲೇ ಮಂಗಳೂರಿನ ಬಿಜೈಯಲ್ಲಿ ಮನೆ ಕೊಂಡುಕೊಂಡಿದ್ದೆವು.ಸ್ವಲ್ಪ ಸಾಲ ಇತ್ತು.ಪ್ರತಿ ತಿಂಗಳು ಮೂರು ಸಾವಿರ ಕಂತು ತುಂಬಬೇಕಿತ್ತು.ಈ ಸಮಯದಲ್ಲಿ  ಮಗ ಅರವಿಂದ ಎರಡು ಮೂರು ವರ್ಷದ ಮಗು.
ನಾನು ಆರಂಭದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದೆನಾದರೂ ಮಗ ಹುಟ್ಟಿದಾಗ ಕೆಲಸ ಬಿಟ್ಟಿದ್ದೆ.
ಪ್ರಸಾದ್ ಗೆ ಕೆಲಸ ಹೋದಾಗ ನಾನು ಕೆಲಸಕ್ಕೆ ಸೇರಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಯತ್ನ ಮಾಡಿದೆ‌.
ಮಂಗಳೂರಿನ ಚಿನ್ಮಯ ಹೈಸ್ಕೂಲ್ ನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ದೊರೆಯಿತು. ಆದರೆ ಸಾಲದ ಹೊರೆ ಇದ್ದ ಕಾರಣ ಸಂತ ಅಲೋಶಿಯಸ್ ಸಂಜೆ ಕಾಲೇಜಿಗೆ ( ಹೈಸ್ಕೂಲ್ ವಿಭಾಗದಲ್ಲಿ ವಿಜ್ಞಾನ ಶಿಕ್ಷಕಿಯಾಗಿ) ಸೇರಿದೆ.
ಈಗ ಸಮಯದ ಹೊಂದಾಣಿಕೆ ಸಮಸ್ಯೆ ಅಯಿತು.ಬೆಳಗ್ಗೆ ಎಂಟರಿಂದ ಸಂಜೆ ಮೂರರವರೆಗೆ ಚಿನ್ಮಯ ಹೈಸ್ಕೂಲ್ ನಲ್ಲಿ ಕೆಲಸ .ಸಂಜೆ ಆರರಿಂದ ರಾತ್ರಿ ಒಂಬತ್ತರ ವರೆಗೆ ಸಂತ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಕೆಲಸ.ಸಂಜೆ ಮೂರು ಗಂಟೆಗೆ ಚಿನ್ಮಯ ಹೈಸ್ಕೂಲ್ ನಿಂದ ಬಂದು ಮಗನನ್ನು ಬೇಬಿ ಸಿಟ್ಟಿಂಗ್ ನಿಂದ ಕರೆದುಕೊಂಡು ಬಂದು ಊಟ ತಿಂಡಿ ತಿನಿಸಿ ನಿದ್ರೆ ಮಾಡಿಸಿ ಮನೆಯ ಅಡಿಗೆ ಊಟ ತಯಾರು ಮಾಡಿ ಮತ್ತೆ ಮಗನ್ನು ಎಬ್ಬಿಸಿ ಬಟ್ಟೆ ಬದಲಿಸಿ ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟು ಸಂತ ಅಲೋಶಿಯಸ್ ಕಾಲೇಜಿಗೆ ಆರು ಗಂಟೆ ಒಳಗೆ ತಲುಪಬೇಕಿತ್ತು.
ಈ ಸಂದರ್ಭದಲ್ಲಿ ಒಂದು ಟು ವೀಲರ್ ತೆಗೆದುಕೊಳ್ಳುವಂತೆ ನನಗೆ ಪ್ರಸಾದರ ಸೋದರತ್ತೆ ಕಾಂಚನದ ಅತ್ತೆ ಸಲಹೆ ನೀಡಿದರು ‌.ಅವರ ಸೊಸೆ ಬ್ಯಾಂಕ್ ಉದ್ಯೋಗಿಯಾಗಿದ್ದು ಅವರು ಕೈನೆಟಿಕ್ ನಲ್ಲಿ ಓಡಾಡುತ್ತಿದ್ದರು‌.
ಹಾಗಾಗಿ ನನಗೂ ಒಂದು ಗಾಡಿ ತೆಗೆದುಕೊಳ್ಳುವುದು ಸರಿ ಎನಿಸಿತು‌.ಹಾಗಾಗಿ ಬಜಾಜ್ ಸ್ಪಿರಿಟ್ ಎಂಬ ಟು ವೀಲರ್ ಅನ್ನು ತೆಗೆದುಕೊಂಡೆ..
ಚಿಕ್ಕ ವಯಸಿನಲ್ಲಿ ನನ್ನ ಸಣ್ಣಜ್ಜಿಯ ಮಗನ ಮನೆಯಲ್ಲಿ ಸೈಕಲ್‌ ಕಲಿತದ್ದು ಈಗ ಸಹಾಯಕ್ಕೆ ಬಂತು.ಹಾಗಾಗಿ ಗಾಡಿಯನ್ನು ಓಡಿಸಲು ಸುಲಭದಲ್ಲಿ ಕಲಿತೆ‌.ಒಂದು ತಿಂಗಳು ಒಬ್ಬಳೇ ಓಡಾಡಿ ಅಭ್ಯಾಸವಾದ ನಂತರ ‌ಮಗನನ್ನು ಕೂರಿಸಿಕೊಂಡು ಓಡಾಡಲು ಶುರು ಮಾಡಿದೆ‌‌.ನಿದಾನಕ್ಕೆ ಡಬಲ್ ರೈಡ್ ಕೂಡ ಅಭ್ಯಾಸವಾಯಿತು.
ಈ ನಡುವೆ ಮಗನನ್ನು ಸಂಜೆ ಬೇಬಿ ಸಿಟ್ಟಿಂಗ್ ಗೆ ಬಿಡುವ ಬದಲು ಒಬ್ಬ ಹುಡುಗಿಯನ್ನು ಮನೆಗೆ ಬಂದು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೆ.ಅವಳು ಮಗ ಹಗಲಿ‌ನ ಹೊತ್ತು ಇರುತ್ತಿದ್ದ ಬೇಬಿ ಸಿಟ್ಟಿಂಗ್ / ಪ್ರಿಸ್ಕೂಲ್ ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.
ಹಾಗಾಗಿ  ಮೂರು ಗಂಟೆಗೆ ಚಿನ್ಮಯ ಶಾಲೆ ಬಿಟ್ಟ ನಂತರ ಮಗ ಮತ್ತು ಅ ಹುಡುಗಿ ಇಬ್ಬರನ್ನು ಗಾಡಿಯಲ್ಲಿ ಕೂರಿಸಿ ಮನೆಗೆ ಕರೆ ತರುತ್ತಾ ಇದ್ದೆ .
ಒಂದು ದಿನ ಹೀಗೆ  ಒಳಗಿನ  ಸಣ್ಣ ರಸ್ತೆಯಲ್ಲಿ  ಬರುತ್ತಿರುವಾಗ ಎದುರಿನಿಂದ  ಡ್ರೈವಿಂಗ್ ಕಲಿಯುತ್ತಿರುವವರ ಕಾರು ರಾಂಗ್ ಸೈಡಿನಿಂದ ಬಂತು.ಆಗ ಅದನ್ನು ತಪ್ಪಿಸುವ ಸಲುವಾಗಿ ತೀರಾ ಬದಿಗೆ ಹೋಗಿ ಸಮತೋಲನ ತಪ್ಪಿ ಬಿದ್ದೆ.ಮಗನನ್ನು ಮುಂದೆ ಕೂರಿಸಿದ್ದು ಅವನ ಎದುರುಗಡೆ ಅವನ ಊಟದ ಬ್ಯಾಗ್ ಇತ್ತು‌.ಅದು ಅವನ ಕಣ್ಣಿನ ಕೆಳಭಾಗಕ್ಕೆ ತಾಗಿ ದೊಡ್ಡ ಗಾಯವಾಗಿ ರಕ್ತ ಸುರಿಯತೊಡಗಿತು.ಮಗನ ತಲೆ ನನ್ನ ಹೊಟ್ಟೆಗ ತಾಗಿ ನನಗೂ ತುಂಬಾ ನೋವಾಗಿ ತಲೆ ಸುತ್ತುತ್ತಾ ಇತ್ತು.ಹಿಂದೆ ಕುಳಿತಿದ್ದ ಸಹಾಯಕಿ ಹುಡುಗಿಗೆ ಕಾಲಿಗೆ ಏಟು ಬಿದ್ದಿತ್ತು. ಆದರೆ ನನಗಿಂಗ ಒಳ್ಳೆಯ ಸ್ಥಿತಿ ಯಲ್ಲಿ ಇದ್ದಳು.ಅವಳು ಎದ್ದು ಮಗನನ್ನು ಎತ್ತಿಕೊಂಡಳು‌.ಕಾರಿನವರು ಹಿಂದೆ ನೋಡದೆ ಒಂದು ಕ್ಷಣ ಕೂಡ ನಿಲ್ಲಿಸದೆ ಹೊರಟು ಹೋಗಿದ್ದರು‌.ನಾವು ಬಿದ್ದಲ್ಲಿ ಸಮೀಪವೇ ಒಂದು ಸಣ್ಣ ತೊರೆ ಇತ್ತು.ಅದರ ಆ ಕಡೆಗೆ ಒಂದು ಮನೆ ಇತ್ತು.ನನ್ನ ‌ಮಗನ ಅಳು ಕೇಳಿದ ಅವರು ಕಾಲು ಪಾಪು( ಮರದ ಸಂಕ) ದಾಟಿ ಓಡಿ ಬಂದರು.ಅದು ತನಕ ಅವರ ಪರಿಚಯ ನನಗಿರಲಿಲ್ಲ.ಅವರು ಮಗನ ಕಣ್ಣಿನ ಕೆಳಭಾಗದ ಗಾಯ ನೋಡಿ ಕೂಡಲೇ ಹತ್ತಿರದ ವಿನಯ ಕ್ಲಿನಿಕ್ ಹಾಸ್ಪಿಟಲ್ ಗೆ ಹೋಗಲು ತಿಳಿಸಿದರು‌.ಆಗ ನಾನು ತುಸು ಹಿಂದೆ ಮುಂದೆ ನೋಡಿದೆ‌.ಯಾಕೆಂದರೆ ನನ್ನ ಬಳಿ ಹತ್ತು ಹದಿನೈದು ರುಪಾಯಿ ಮಾತ್ರ ಇತ್ತು ಅಷ್ಟೇ. ಅದನ್ನು ಅರ್ಥ ಮಾಡಕೊಂಡ ಪ್ರೇಮನಾಥ್ ( ಹೆಸರು ಸರಿಯಾಗಿ ನೆನಪಿಲ್ಲ, ಪ್ರೇಮನಾಥ್ ಎಂದು ನೆನಪು) ಅವರು ಅವರ ಮನೆಗೆ ಹೋಗಿ ಐದುನೂರು ರುಪಾಯಿ ನನಗೆ ತಂದು ಕೊಟ್ಟು ಒಂದು ಆಟೊ ತಂದು ನಮ್ಮ ಮೂವರನ್ನು ಆಟೊ ಹತ್ತಿಸಿ ಆಸ್ಪತ್ರೆಗೆ ಕಳಹಿಸಿಕೊಟ್ಟರು.
ಮಗನಿಗೆ ಸ್ಟಿಚ್ ಹಾಕಬೇಕಾಯಿತು‌.ನನಗೆ ಮತ್ತು ಸಹಾಯಕ ಹುಡುಗಿಗೆ ಪ್ರಥಮ ಚಿಕಿತ್ಸೆ ನೀಡಿದರುನಂತರ ಆಸ್ಪತ್ರೆ ಯಿಂದ ನಾನು ಹಸ್ಬೆಂಡ್ ಕೆಲಸ ಮಾಡು ಆಫೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದೆ( ಆಗಿನ್ನೂ ಮೊಬೈಲ್ ನಮ್ಮ ಬಳಿ ಇರಲಿಲ್ಲ) ಅವರು ಬಂದರು .ಮತ್ತೆ ಮನೆಗೆ ಬಂದೆವು.ಮರುದಿನವೇ ಪ್ರೇಮನಾಥ್ ಅವರ ಮನೆಗೆ ಹೋಗಿ ಅವರು ಕೊಟ್ಟ ದುಡ್ಡನ್ನು ಹಿಂದಿರುಗಿಸಿ ಧನ್ಯವಾದಗಳನ್ನು ತಿಳಿಸಿದೆ.ಆಗ ಅವರು ದುಡ್ಡನ್ನು ಇಷ್ಟು ಅರ್ಜೆಂಟಲ್ಲಿ ಕೊಡಬೆಕಾಗಿರಲಿಲ್ಲ, ಥ್ಯಾಂಕ್ಸ್ ಯಾಕೆ? ನಾವು ಮನುಷ್ಯರು ಪರಸ್ಪರ ಸಹಾಯಕ್ಕೆ ಬಾರದಿದ್ದರೆ ಮನುಷ್ಯರೆಂದು ಕರೆಯಲು ನಾಲಾಯಕ್ ಆಗಿ ಬಿಡುತ್ತೇವೆ‌‌.ಸಧ್ಯ  ನಿಮಗೆ‌ ಮೂವರಿಗೆ ದೊಡ್ಡ ಏಟೇನೂ ಬಿದ್ದಿಲ್ಲವಲ್ಲ ದೇವರ ದಯೆ.ಮುಂದೆ ಇನ್ನೂ ಜಾಗ್ರತೆಯಿಂದ ಗಾಡಿ ಓಡಿಸಿ ಎಂದು ಹೇಳಿದರು‌.ಅವರ ಮನೆ ಮಂದಿ ಕೂಡ ನಮ್ಮ ಆರೋಗ್ಯ ವಿಚಾರಿಸಿ ಕಾಫಿ ಮಾಡಿ ಕೊಟ್ಟರು‌.ಅವರು ಕೊಟ್ಟ ಕಾಫಿ ಅವರ ಮನಸ್ಸಿನಂತೆಯೇ ತುಂಬಾ ರುಚಿಯಾಗಿತ್ತು.ಅದರ ಕೊನೆಯ ತೊಟ್ಟನ್ನು ಕೂಡ ಕುಡಿದು ಖಾಲಿ ಲೋಟ ಇಟ್ಟು ಮತ್ತೊಮ್ಮೆ ಧನ್ಯವಾದ ಹೇಳಿ ಕೈಮುಗಿದು ಹನಿ ಗಣ್ಣಿನಿಂದ ಹಿಂದಿರುಗಿದೆ.
ಅಂದಿನ ಐದುನೂರು ರುಪಾಯಿ ಇಂದಿನ ಹತ್ತು ಸಾವಿರ ರುಪಾಯಿ ಗಿಂತ ಹೆಚ್ಚಿನ ಮೌಲ್ಯ ಹೊಂದಿತ್ತು.ಅದು ತನಕ ನೋಡದ ತೀರಾ ಅಪರಿಚಿತಳಾದ ನನಗೆ  ಅವರಾಗಿಯೇ ತಂದು ಕೊಟ್ಟು ಆಟೋ ತಂದು ನಮ್ಮನ್ನು ಆಸ್ಪತ್ರೆ ಗೆ ಕಳಹಿಸಿಕೊಟ್ಟ ಅವರ ಮಾನವೀಯತೆಯನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ .ಮುಂದಿನ ಬಾರಿ ಊರಿಗೆ ಹೋದಾಗ ಅವರ ಮನೆಗೆ ಹೋಗಿ ಬರಬೇಕು ಎಂದು ಕೊಂಡಿರುವೆ.ಅವರು ಅಲ್ಲೇ ಇದ್ದಾರಾ ? ಅದು ಅವರ ಸ್ವಂತ ಮನೆಯಾ ? ಬಾಡಿಗೆಗೆ ಇದ್ದರಾ ? ಯಾವುದೊಂದು ಮಾಹಿತಿಯೂ ನನಗೆ ತಿಳಿಯದು.ಆದರೂ ಅವರನ್ನು ಭೇಟಿ ಮಾಡಲು ಯತ್ನ ಮಾಡುವೆ‌.ಅವರು‌ ಮತ್ತು ಅವರ ಕುಟುಂಬದವರು ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಹಾರೈಸುವೆ.
© ಡಾ.ಲಕ್ಷ್ಮೀ ಜಿ ಪ್ರಸಾದ

Sunday 6 May 2018

ಬದುಕೆಂಡ ಬಂಡಿಯಲಿ‌..5

ಕಳೆದ  ವರ್ಷ  ನಮ್ಮನೆಲಿ ನಡೆದ ಮಾತುಕಥೆ :-
ಪ್ರಾಣೇಶ್ ಅವರ ಸಂದರ್ಶನ ನೋಡುತ್ತಾ ಇದ್ದೆವು
ನೋಡುತ್ತಾ ಇದ್ದ ಮಗ ನಿನ್ನನ್ನು ಕರೆದರೆ ಹೋಗುತ್ತೀಯಮ್ಮ ಕೇಳಿದ ದೊಡ್ಡಕ್ಕೆ ನಗಾಡಿ "ಕರೆದರೆ ತಾನೆ ? ನನ್ ಯಾಕ್ ಕರೀತಾರೆ ? ನಾನೇನನ್ನ ಮಾತಾಡೊದು ? ಎಲ್ಲ ನನ್ನ ಭೂತಗಳ ಫೋಟೋ ವಿಡಿಯೋ ಹಾಕ್ಬೇಕಷ್ಟೆ ಅಂತ ಹೇಳಿದೆ ಅಲ್ಲದೆ ಅಳೋಕೆ ಕಾರಣಾನೆ ಇಲ್ಲವಲ್ಲ ಏನಕ್ಕೆ ಅಳೋದು? ಕೇಳಿದೆ ಆಗ ಅವನು " ಅಯ್ಯೋ ನನ್ನ ಮಗ ಓದುದಿಲ್ಲ ಓದುದಿಲ್ಲಾ ಅಂತ ಅತ್ತು ಬಿಡು " ಎದೆ ಬಡಿದುಕೊಂಡು ಹೊರಳಾಡಿ ಅಳು " ಎಂದು ಉಪಾಯ ಹೇಳಿಕೊಟ್ಟ ಜೊತೆಗೆ ಸದಾ ಓದು ಎಂದು ಪೀಡಿಸುವ ನಮಗೆ ಬತ್ತಿ ಇಟ್ಟ

ಬದುಕೆಂಬ ಬಂಡಿಯಲಿ..4 ಹುಡುಗಿಯರಿಗೆ ವಾಂತಿ ಕೂಡ ಮದುವೆ ಆದ್ಮೇಲೇ ಬರ್ಬೇಕಾ ?© ಡಾ.ಲಕ್ಷ್ಮೀ ಜಿ ಪ್ರಸಾದ

ಹುಡುಗಿಯರಿಗೆ ವಾಂತಿ ಕೂಡ ಮದುವೆ ಆದ್ಮೇಲೇ   ಬರ್ಬೇಕಾ ?© ಡಾ.ಲಕ್ಷ್ಮೀ ಜಿ ಪ್ರಸಾದ

ನಿನ್ನೆ ನೆಲಮಂಗಲದಿಂದ ಮನೆಗೆ ಬರ್ತಾ ಇರಬೇಕಾದರೆ ಬಸ್ಸಿನಲ್ಲಿ ಹದಿನೆಂಟು ಇಪ್ಪತ್ತರ ಎಳೆಯ ತರುಣಿ ನನ್ನ ಪಕ್ಕದಲ್ಲಿ ನಿಂತಿದ್ದಳು
ಸ್ವಲ್ಪ ದೂರ ಹೋಗುವಷ್ಟರಲ್ಲಿ ಅವಳಿಗೆ ವಾಂತಿ ಬರುವ ಹಾಗೆ ಆಯ್ತು .ನಾನು ಅದನ್ನು ಗಮನಿಸಿ ಅವಳಿಗೆ ಸೀಟು ಬಿಟ್ಟು ಕೊಟ್ಟೆ‌.ನನ್ನ ಬ್ಯಾಗ್ ನಲ್ಲಿ ಒಂದು ಪ್ಲಾಸ್ಟಿಕ್ ಕವರ್ ಇತ್ತು.ಅದನ್ನು ಕೂಡ ಕೊಟ್ಟೆ‌.ಅವಳು ಅದರಲ್ಲಿ ವಾಂತಿ ಮಾಡಿದಳು.ಆಗ ಅವಳ ಜೊತೆಗೆ ಬಂದಿದ್ದ ಸಂಬಂಧಿಕರು ಯಾರೋ ಅವಳ ತಾಯಿಯಲ್ಲಿ ಏನೇ ವನಜ ,ನಿನ್ನ ಮಗಳು ವಾಂತಿ ಮಾಡ್ತಿದಾಳೆ,ಹುಷಾರು ಕಣೇ ಎಂದು ಹೇಳಿದರು.ಆ ತಾಯಿ ಮಗಳಿಗೆ ನಾಚಿಕೆಯಿಂದ ಮುಖ ಕೆಂಪೇರಿ ತಲೆ ತಗ್ಗಿಸಿದರು.ಮಗಳಿಗಂತೂ ಅಳುವೇ ಬಂತು.ಯಾಕಮ್ಮ ಅಳ್ತೀಯ ಅಂತ ಕೇಳಿದೆ.ಅದಕ್ಕೆ ಅವಳು ಬಸ್ಸು ಕಾರಿನಲ್ಲಿ ಪ್ರಯಾಣಿಸಿದರೆ ನನಗೆ ವಾಂತಿಯಾಗುತ್ತದೆ .ಅದಕ್ಕೆ ಇವರೆಲ್ಲ ಏನೇನೋ ಹೇಳ್ತಾರೆ ಅಂತ ಹೇಳಿದಳು  "  ಈ ಸಮಸ್ಯೆಗೆ ಟ್ರಾವೆಲಿಂಗ್ ಸಿಕ್ ನೆಸ್ ಅಂತಾರೆ ,ಬಸ್ ಹತ್ತುವ ಅರ್ಧ ಗಂಟೆ ಮೊದಲೇ ಒಂದು ಎಮಿಸೆಟ್ ಇಲ್ಲವೇ ಡೋಮಸ್ಟಾಲ್  ಟ್ಯಾಬ್ಲೆಟ್ ತಗೋ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗುತ್ತದೆ‌. ಯಾರು ಏನು ಬೇಕಾದರೂ ಹೇಳಲಿ ತಲೆಕೆಡಿಸಿಕೊಳ್ಳಬೇಡ,ಚೆನ್ನಾಗಿ ಓದಿ ದೊಡ್ಡ ಸ್ಥಾನವನ್ನು ಪಡೆ" ಎಂದು ಹೇಳಿದೆ

ಹೌದು! ನಮ್ಮಲ್ಲಿ ಮದುವೆಗೆ ಮುಂಚೆ ಹುಡುಗಿಯರಿಗೆ ವಾಂತಿ ಕೂಡ ಬರುವಂತಿಲ್ಲ‌!
ನಾನು ಆಗಷ್ಟೇ ಹತ್ತನೇ ತರಗತಿ ಮುಗಿಸಿ ದೂರದ ಮಂಗಳೂರಿನ ಸರ್ಕಾರಿ ಕಾಲೇಜಿಗೆ( ಈಗಿನ ಯುನಿವರ್ಸಿಟಿ ಕಾಲೇಜ್) ಪಿಯುಸಿಗೆ ಸೇರಿದ್ದೆ.ಅದು ತನಕ ಬಸ್ಸಿನಲ್ಲಿ ಓಡಾಡಿ ಅನುಭವ ಇರಲಿಲ್ಲ. ಅದಕ್ಕೂ ಮೊದಲು ಯಾರದಾದರೂ ನೆಂಟರ ಮನೆಗೆ ಬಸ್ಸಿನಲ್ಲಿ ಹೋಗಬೇಕಾಗಿ ಬರುವಾಗ  ನನಗೆ ಬಸ್ಸಿನಲ್ಲಿ ವಾಂತಿ ಆಗುತ್ತಿತ್ತು‌.ಆದರೆ ಆಗ ನಾನು ಚಿಕ್ಕ ಹುಡುಗಿ.ಯಾರೂ ನನ್ನ ಮೇಲೆ ಸಂಶಯದ ನೋಟ ಬೀರಿರಲಿಲ್ಲ.ಪಿಯುಸಿಗೆ ಹೋಗುವಾಗ ಬಸ್ಸಿನ ಪ್ರಯಾಣದಲ್ಲಿ ಕೆಲವೊಮ್ಮೆ ನನಗೆ ವಾಂತಿಯಾಗುತ್ತಿತ್ತು.ಇದನ್ನು ನೋಡಿದ ಕೆಲವು ನೆಂಟರು ನನ್ನ ತಾಯಿಯ ಬಳಿ ಏನೇನೋ ಹೇಳಿದ್ದರಂತೆ.ಆದರೆ ನನ್ನ ಅಮ್ಮನಿಗೆ ನನ್ನ ಬಗ್ಗೆ ಪೂರ್ಣ ವಿಶ್ವಾಸವಿತ್ತು.ಹಾಗಾಗಿ ಅಮ್ಮ  ತಲೆಕೆಡಿಸಿಕೊಳ್ಳಲಿಲ್ಲ.
ನಾನು ಸೆಕೆಂಡ್ ಪಿಯುಸಿಗೆ ಬರುವಷ್ಟರಲ್ಲಿ ದೊಡ್ಡಮ್ಮನ ಮಗಳು ತಂಗಿ ರಾಜು( ರಾಜೇಶ್ವರಿ,ಇವಳು ನನಗೆ ಒಳ್ಳೆಯ ಗೆಳತಿ ಕೂಡ ಆಗಿದ್ದಳು) ಅದೇ ಕಾಲೇಜಿಗೆ ಪ್ರಥಮ ಪಿಯುಸಿಗೆ ಸೇರಿದಳು.ನಾವಿಬ್ಬರೂ ಅಜ್ಜನ ಮನೆಯಿಂದ ಕಾಲೇಜಿಗೆ ಹೋಗಿ ಬರಲಾರಂಭಿಸಿದೆವು. ಈಗ ನಾನು ಬಸ್ಸಿನ ಪಯಣಕ್ಕೆ ಹೊಂದಿಕೊಂಡಿದ್ದೆ .ಆದರೂ ಯಾವಾಗಾದರೊಮ್ಮೆ ಬಸ್ಸಿನಲ್ಲಿ ವಾಂತಿ ಆಗುತ್ತಿತ್ತು.( ಈಗಲೂ ದೂರದ ಬಸ್ ಪಯಣ ನನಗೆ ಹಿಡಿಸುವುದಿಲ್ಲ ,ಅದರಲ್ಲೂ ಬೆಂಗಳೂರಿನಿಂದ ಮಂಗಳೂರು ಬಸ್ಸಿನಲ್ಲಿ ಹೋಗುವುದೆಂದರಡ ಬಹಳ ಹಿಂಸೆಯಾಗುತ್ತದೆ.ಎರಡೆರಡು ಎಮಿಸೆಟ್ ಮಾತ್ರೆಗಳನ್ನು ತೆಗೆದುಕೊಂಡರೂ ಘಟ್ಟ ಹತ್ತಿ ಇಳಿಯುವಾಗ ವಾಂತಿ ಆಗುತ್ತದೆ .ಹಾಗಾಗಿ ನಾನು ಸಾಮಾನ್ಯವಾಗಿ ರೈಲಿನಲ್ಲಿ ಓಡಾಡುತ್ತೇನೆ.ತೀರಾ ಅನಿವಾರ್ಯವಾದರೆ ವಿಮಾನವನ್ನು ಆಶ್ರತಿಸುತ್ತೇನೆಯೇ ಹೊರತು ದೂರದೂರಿಗೆ ಬಸ್ಸಿನಲ್ಲಿ ಪ್ರಯಾಣಿಸುವುದಿಲ್ಲ)
ಒಂದು ದಿನ ಬಸ್ಸಿನಲ್ಲಿ ವಾಂತಿ ಆರಂಭವಾದದ್ದು ಮನೆಗೆ ಬಂದ ಮೇಲೂ ಮುಂದುವರಿಯಿತು ‌.ಅಜ್ಜಿ ಮಾಡಿ ಕೊಟ್ಟ ಓಮದ ಕಷಾಯ ಮತ್ತಿತರ ಮನೆ ಮದ್ದಿಗೂ ನಿಲ್ಲಲಿಲ್ಲ. ಆಗ ಒಬ್ಬ ನೆಂಟರು ವಿದ್ಯಾ ( ನನ್ನ ಮನೆಯಲ್ಲಿ ಕರೆಯುವ ಹೆಸರು ) ಬಸುರಿ ತರ ವಾಂತಿ ಮಾಡುತ್ತಾಳೆ ಎಂದು ನನ್ನ ಎದರೇ ಹೇಳಿದರು‌.ಆಗಲೂ ನನಗೆ ಅವರ ಕುಹಕದ ಮಾತು ಅರ್ಥವಾಗಿರಲಿಲ್ಲ. ಆದರೆ ಅದನ್ನು ಕೇಳಿಸಿಕೊಂಡ   ನನ್ನ ಅಜ್ಜಿ ಡಾಕ್ಟರ್ ಹತ್ತಿರ ತೋರಿಸಲು ಹೇಳಿದರು‌.ನಮ್ಮ ಕುಟುಂಬದ ಡಾಕ್ಟರ್ ಬಳಿಗೆ ದೊಡ್ಡಮ್ಮನ ಮಗ ಅಣ್ಣನ ಜೊತೆಗೆ ಹೋದೆ‌.ಆಗ ಪರೀಕ್ಷಿಸಿದ ಡಾಕ್ಟರ್ ಏನೋ ಒಂದು ಕುಹಕದ ನಗು ( ಅವರು ಸಹಜವಾಗಿಯೇ ನಕ್ಕದ್ದು ನನಗೆ ಹಾಗನಿಸಿತೇನೋ ಗೊತ್ತಿಲ್ಲ) ಬೀರಿ ಒಂದು ಔಷದದ  ( Heparil ಎಂದೇನೋ ಬರೆದಿದ್ದ ನೆನಪು )  ಬಾಟಲ್ ನೀಡಿ ದಿನಕ್ಕೆ ಎರಡು ಹೊತ್ತು ಎರಡೆರಡು ಚಮಚ ನೀರಿಗೆ ಬೆರೆಸಿ ಕುಡಿಯಲು ಹೇಳಿದರು‌.ಆ ಮೇಲೆ ಅಣ್ಣನ ಹತ್ತಿರ ಏನೋ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದರಂತೆ.
ಅಣ್ಣ ಬಂದು ಅದನ್ನು ಮನೆಯಲ್ಲಿ ಹೇಳಿದ. ಅಜ್ಜನ ಮನೆ ಮಂದಿ ಅದನ್ನು ಇನ್ನೇನೋ ಅರ್ಥೈಸಿಕೊಂಡರು.
ನನ್ನ ಅಜ್ಜಿ ಅಮ್ಮನಲ್ಲಿ " ಅವಳು ಕಾಲೇಜಿಗಂತ ಹೋಗಿ  ಏನು ಮಾಡಿಕೊಂಡಿದಾಳೋ ಏನೋ? ಎಂದು ಗಾಭರಿಯಲ್ಲಿ ನುಡಿದರಂತೆ.ಆಗ ಅಮ್ಮ ನಿರ್ಧಾರಾತ್ಮಕವಾಗಿ ಇಲ್ಲ ವಿದ್ಯಾ ಅಂತಹವಳಲ್ಲ.ಅವಳು ಕಳೆದ ವಾರ ಹೊರಗೆ ಕುಳಿತಿದ್ದಾಳೆ( ಪೀರಿಯಡ್ ಆಗುವುದನ್ನು ಹೆರ ಕೂಪದು,/ ಹೊರಗೆ ಕುಳಿತುಕೊಳ್ಳುವುದು ಎಂದು ನಮ್ಮ ಭಾಷೆಯಲ್ಲಿ ಹೇಳುತ್ತಾರೆ) ಎಂದು ಹೇಳಿದರು. ಆಗ ಅಜ್ಜಿ ಅವಳು ಸುಮ್ಮನೇ ಹೊರಗೆ ಕುಳಿತ ನಾಟಕ ಮಾಡಿರಬಹುದಲ್ಲ ಎಂದು ಕೇಳಿದರಂತೆ.
ಇರೋದೊಂದು ಸಣ್ಣ ಮನೆ‌.ಪ್ಯಾಡ್ ಗೀಡ್ ಎಂದರೆ ಏನೆಂದೇ ಗೊತ್ತಿಲ್ಲದ ಕಾಲ.ಎಷ್ಟೇ ತೊಳೆದರೂ ಕಲೆ ಉಳಿಯುವ ಒಂದಿನಿತು ವಾಸನೆ ಬರುವ ಒದ್ದೆ  ಬಟ್ಟೆಯನ್ನು ಒಣಗಿಸಲು ಕೂಡ ಸರಿಯಾದ ಜಾಗವಿಲ್ಲ.ಹಾಗಾಗಿ ಮನೆಯ ಗೋಡೆಯ ಕತ್ತಲಿನ ಮೂಲೆಗೆ ಕಟ್ಟಿದ ಬಳ್ಳಿಗೆ ನೇತು ಹಾಕುವುದೊಂದೇ ದಾರಿ ಉಳಿದಿರುವುದು.ಹಾಗಾಗಿ ಅದನ್ನು ಅಮ್ಮ ನೋಡಿರುವುದು ಸಾಮಾನ್ಯ ವಿಚಾರ‌.ಆ ತಿಂಗಳು ಕೂಡ ಅದನ್ನು ನೋಡಿದ್ದ ಅಮ್ಮ"  ಇಲ್ಲ ಅವಳ ಬಟ್ಟೆಗೆ ಕಲೆ ಆಗಿದ್ದು ಕೂಡ ನಾನು ನೋಡಿದ್ದೇನೆ.ಅವಳ ಆರೋಗ್ಯ ಏನೋ ಹಾಳಾಗಿರಬೇಕು.ಅಜೀರ್ಣ ಆಗಿರಬೇಕು ಎಂದು ದೃಢವಾಗಿ ಹೇಳಿದರು.ನಂತರ ಅಜೀರ್ಣಕ್ಕೆ ಕೊಡುವ ಮನೆ ಮದ್ದು ನೀಡಿದರು.ಅರವಿಂದಾಸವವನ್ನು ಎರಡು ಹೊತ್ತು ಎರಡೆರಡು ಚಮಚ ಒಂದು ವಾರ ಕುಡಿಯಲು ಹೇಳಿದರು‌.ನನ್ನ ವಾಂತಿಯ ಸಮಸ್ಯೆ ದೂರವಾಯಿತು‌.ಕ್ರಮೇಣ ಬಸ್ಸು ಪ್ರಯಾಣ ಅಭ್ಯಾಸವಾಗಿ ಬಸ್ಸಿನಲ್ಲಿ ವಾಂತಿ ಆಗುವುದು ಕೂಡ ನಿಂತಿತು‌.
ಇಷ್ಟೆಲ್ಲಾ ಹಿಂದಿನಿಂದ ಅಮ್ಮನಿಗೆ ಅನೇಕರು ಹೇಳಿದರೂ ಕೂಡ ಅಮ್ಮ ನನ್ನ ಮೇಲಿನ ನಂಬಿಕೆ ಕಳೆದುಕೊಳ್ಳಲಿಲ್ಲ.ನನ್ನನ್ನು ಹಿಂದಿನಿಂದ ಕುಹಕದಿಂದ ಅಡಿಕೊಳ್ಳುತ್ತಿದ್ದಾರೆ ಎಂಬುದನ್ನು ಕೂಡ ನನಗೆ ತಿಳಿಸಲಿಲ್ಲ.ಸದಾ ಓದಿನ ಕಡೆ ಗಮನ ಕೊಡು ,ಒಳ್ಳೆಯ ಮಾರ್ಕ್ಸ್ ತೆಗೆದು ದೊಡ್ಡ ಕೆಲಸಕ್ಕೆ ಹೋಗಬೇಕು ಎಂದು ಹುರಿದುಂಬಿಸುತ್ತಾ ಇದ್ದರು‌.ತುಂಬಾ ಜಾಗರೂಕತೆಯಿಂದ ಇರಬೇಕು ಎಂದು ಹೇಳಿ ಆಗಾಗ ಎಚ್ಚರಿಕೆ ನೀಡುತ್ತಾ ಇದ್ದರು‌.ಅಮ್ಮನ ನಂಬಿಕೆಯನ್ನು ನಾನು ಹಾಳು ಮಾಡಲಿಲ್ಲ ಕೂಡ ‌.
ಇದೆಲ್ಲವನ್ನೂ ನನ್ನ ಮದುವೆಯ ನಂತರ ಯಾವಾಗಲೋ ಮಾತಿನ ನಡುವೆ ಅಮ್ಮ ನನಗೆ ತಿಳಿಸಿದ್ದರು‌.
ಸರಿ,ನಾನು ಪಿಯುಸಿಗೆ ಹೋದದ್ದು 1988-89 ರಲ್ಲಿ. ಇದಾಗಿ ಮೂರು ದಶಕಗಳೇ ಕಳೆದಿವೆ‌.ಆದರೆ ವಾಂತಿ ಮಾಡಿದರೆ ಹುಡುಗಿಯರನ್ನು ಸಂಶಯದಿಂದ ನೋಡುವ ಸಮಾಜದ ರೀತಿ ಇನ್ನೂ ಬದಲಾಗಿಲ್ಲ ಎಂದು ನಿನ್ನೆ ಅರಿವಾಯಿತು ನನಗೆ‌.ಹುಡುಗಿಯರಿಗೆ ವಾಂತಿ ಕೂಡ ಬರುವಂತಿಲ್ಲವೇ ? ಈ ಸಮಾಜ ಯಾವಾಗ ಬದಲಾಗುತ್ತದೆ ? ನನಗಂತೂ ಗೊತ್ತಾಗುತ್ತಿಲ್ಲ.
© ಡಾ.ಲಕ್ಷ್ಮೀ ಜಿ ಪ್ರಸಾದ