Wednesday 16 May 2018

ದೊಡ್ಡವರ ದಾರಿ 56 ಮಾನವೀಯತೆ ಮೆರೆದ ಮಂಗಳೂರಿನ ಪ್ರೇಮನಾಥ್ © ಡಾ‌ ಲಕ್ಷ್ಮೀ ಜಿ ಪ್ರಸಾದ

ದೊಡ್ಡವರ ದಾರಿ 56 ಮಾನವೀಯತೆ ಮೆರೆದ ಮಂಗಳೂರಿನ ಪ್ರೇಮನಾಥ್ © ಡಾ‌ ಲಕ್ಷ್ಮೀ ಜಿ ಪ್ರಸಾದ
ಮೊನ್ನೆ ಕಾಲೇಜಿನಲ್ಲಿ ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ನಾನು ಟು ವೀಲರ್ ಕಲಿತು ಬಿಡುವ ಆರಂಭಿಕ ದಿನಗಳಲ್ಲಿ ಒಂದು ಆಕ್ಸಿಡೆಂಡ್ ಆದ ಬಗ್ಗೆ ತಿಳಿಸಿದೆ.ಆಗ ಪ್ರೇಮನಾಥ್ ಅವರ ಉದಾರತೆ ನೆನಪಾಯಿತು.
ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಘಟನೆ ಇದು‌.ಪ್ರಸಾದ್  ಮಣಿಪಾಲ್ ಫೈನಾನ್ಸ್ನಲ್ಲಿ ಒಳ್ಳೆಯ ಹುದ್ದೆಯಲ್ಲಿ ಇದ್ದರು.ಇದ್ದಕ್ಕಿದ್ದಂತೆ ‌ಮಣಿಪಾಲ್ ಫೈನಾನ್ಸ್ ನಷ್ಟ ಘೋಷಣೆ ಮಾಡಿ ಬಾಗಿಲು ಮುಚ್ಚಿದಾಗ ಪ್ರಸಾದ್ ಕೆಲಸ ಕಳೆದುಕೊಂಡರು.ಸ್ವಲ್ಪ ಕಾಲ ಅವರಿಗೆ ಸರಿಯಾದ ಕೆಲಸ ಸಿಗಲಿಲ್ಲ. ಅದಕ್ಕೆ ಮೊದಲೇ ಮಂಗಳೂರಿನ ಬಿಜೈಯಲ್ಲಿ ಮನೆ ಕೊಂಡುಕೊಂಡಿದ್ದೆವು.ಸ್ವಲ್ಪ ಸಾಲ ಇತ್ತು.ಪ್ರತಿ ತಿಂಗಳು ಮೂರು ಸಾವಿರ ಕಂತು ತುಂಬಬೇಕಿತ್ತು.ಈ ಸಮಯದಲ್ಲಿ  ಮಗ ಅರವಿಂದ ಎರಡು ಮೂರು ವರ್ಷದ ಮಗು.
ನಾನು ಆರಂಭದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದೆನಾದರೂ ಮಗ ಹುಟ್ಟಿದಾಗ ಕೆಲಸ ಬಿಟ್ಟಿದ್ದೆ.
ಪ್ರಸಾದ್ ಗೆ ಕೆಲಸ ಹೋದಾಗ ನಾನು ಕೆಲಸಕ್ಕೆ ಸೇರಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಯತ್ನ ಮಾಡಿದೆ‌.
ಮಂಗಳೂರಿನ ಚಿನ್ಮಯ ಹೈಸ್ಕೂಲ್ ನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ದೊರೆಯಿತು. ಆದರೆ ಸಾಲದ ಹೊರೆ ಇದ್ದ ಕಾರಣ ಸಂತ ಅಲೋಶಿಯಸ್ ಸಂಜೆ ಕಾಲೇಜಿಗೆ ( ಹೈಸ್ಕೂಲ್ ವಿಭಾಗದಲ್ಲಿ ವಿಜ್ಞಾನ ಶಿಕ್ಷಕಿಯಾಗಿ) ಸೇರಿದೆ.
ಈಗ ಸಮಯದ ಹೊಂದಾಣಿಕೆ ಸಮಸ್ಯೆ ಅಯಿತು.ಬೆಳಗ್ಗೆ ಎಂಟರಿಂದ ಸಂಜೆ ಮೂರರವರೆಗೆ ಚಿನ್ಮಯ ಹೈಸ್ಕೂಲ್ ನಲ್ಲಿ ಕೆಲಸ .ಸಂಜೆ ಆರರಿಂದ ರಾತ್ರಿ ಒಂಬತ್ತರ ವರೆಗೆ ಸಂತ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಕೆಲಸ.ಸಂಜೆ ಮೂರು ಗಂಟೆಗೆ ಚಿನ್ಮಯ ಹೈಸ್ಕೂಲ್ ನಿಂದ ಬಂದು ಮಗನನ್ನು ಬೇಬಿ ಸಿಟ್ಟಿಂಗ್ ನಿಂದ ಕರೆದುಕೊಂಡು ಬಂದು ಊಟ ತಿಂಡಿ ತಿನಿಸಿ ನಿದ್ರೆ ಮಾಡಿಸಿ ಮನೆಯ ಅಡಿಗೆ ಊಟ ತಯಾರು ಮಾಡಿ ಮತ್ತೆ ಮಗನ್ನು ಎಬ್ಬಿಸಿ ಬಟ್ಟೆ ಬದಲಿಸಿ ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟು ಸಂತ ಅಲೋಶಿಯಸ್ ಕಾಲೇಜಿಗೆ ಆರು ಗಂಟೆ ಒಳಗೆ ತಲುಪಬೇಕಿತ್ತು.
ಈ ಸಂದರ್ಭದಲ್ಲಿ ಒಂದು ಟು ವೀಲರ್ ತೆಗೆದುಕೊಳ್ಳುವಂತೆ ನನಗೆ ಪ್ರಸಾದರ ಸೋದರತ್ತೆ ಕಾಂಚನದ ಅತ್ತೆ ಸಲಹೆ ನೀಡಿದರು ‌.ಅವರ ಸೊಸೆ ಬ್ಯಾಂಕ್ ಉದ್ಯೋಗಿಯಾಗಿದ್ದು ಅವರು ಕೈನೆಟಿಕ್ ನಲ್ಲಿ ಓಡಾಡುತ್ತಿದ್ದರು‌.
ಹಾಗಾಗಿ ನನಗೂ ಒಂದು ಗಾಡಿ ತೆಗೆದುಕೊಳ್ಳುವುದು ಸರಿ ಎನಿಸಿತು‌.ಹಾಗಾಗಿ ಬಜಾಜ್ ಸ್ಪಿರಿಟ್ ಎಂಬ ಟು ವೀಲರ್ ಅನ್ನು ತೆಗೆದುಕೊಂಡೆ..
ಚಿಕ್ಕ ವಯಸಿನಲ್ಲಿ ನನ್ನ ಸಣ್ಣಜ್ಜಿಯ ಮಗನ ಮನೆಯಲ್ಲಿ ಸೈಕಲ್‌ ಕಲಿತದ್ದು ಈಗ ಸಹಾಯಕ್ಕೆ ಬಂತು.ಹಾಗಾಗಿ ಗಾಡಿಯನ್ನು ಓಡಿಸಲು ಸುಲಭದಲ್ಲಿ ಕಲಿತೆ‌.ಒಂದು ತಿಂಗಳು ಒಬ್ಬಳೇ ಓಡಾಡಿ ಅಭ್ಯಾಸವಾದ ನಂತರ ‌ಮಗನನ್ನು ಕೂರಿಸಿಕೊಂಡು ಓಡಾಡಲು ಶುರು ಮಾಡಿದೆ‌‌.ನಿದಾನಕ್ಕೆ ಡಬಲ್ ರೈಡ್ ಕೂಡ ಅಭ್ಯಾಸವಾಯಿತು.
ಈ ನಡುವೆ ಮಗನನ್ನು ಸಂಜೆ ಬೇಬಿ ಸಿಟ್ಟಿಂಗ್ ಗೆ ಬಿಡುವ ಬದಲು ಒಬ್ಬ ಹುಡುಗಿಯನ್ನು ಮನೆಗೆ ಬಂದು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೆ.ಅವಳು ಮಗ ಹಗಲಿ‌ನ ಹೊತ್ತು ಇರುತ್ತಿದ್ದ ಬೇಬಿ ಸಿಟ್ಟಿಂಗ್ / ಪ್ರಿಸ್ಕೂಲ್ ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.
ಹಾಗಾಗಿ  ಮೂರು ಗಂಟೆಗೆ ಚಿನ್ಮಯ ಶಾಲೆ ಬಿಟ್ಟ ನಂತರ ಮಗ ಮತ್ತು ಅ ಹುಡುಗಿ ಇಬ್ಬರನ್ನು ಗಾಡಿಯಲ್ಲಿ ಕೂರಿಸಿ ಮನೆಗೆ ಕರೆ ತರುತ್ತಾ ಇದ್ದೆ .
ಒಂದು ದಿನ ಹೀಗೆ  ಒಳಗಿನ  ಸಣ್ಣ ರಸ್ತೆಯಲ್ಲಿ  ಬರುತ್ತಿರುವಾಗ ಎದುರಿನಿಂದ  ಡ್ರೈವಿಂಗ್ ಕಲಿಯುತ್ತಿರುವವರ ಕಾರು ರಾಂಗ್ ಸೈಡಿನಿಂದ ಬಂತು.ಆಗ ಅದನ್ನು ತಪ್ಪಿಸುವ ಸಲುವಾಗಿ ತೀರಾ ಬದಿಗೆ ಹೋಗಿ ಸಮತೋಲನ ತಪ್ಪಿ ಬಿದ್ದೆ.ಮಗನನ್ನು ಮುಂದೆ ಕೂರಿಸಿದ್ದು ಅವನ ಎದುರುಗಡೆ ಅವನ ಊಟದ ಬ್ಯಾಗ್ ಇತ್ತು‌.ಅದು ಅವನ ಕಣ್ಣಿನ ಕೆಳಭಾಗಕ್ಕೆ ತಾಗಿ ದೊಡ್ಡ ಗಾಯವಾಗಿ ರಕ್ತ ಸುರಿಯತೊಡಗಿತು.ಮಗನ ತಲೆ ನನ್ನ ಹೊಟ್ಟೆಗ ತಾಗಿ ನನಗೂ ತುಂಬಾ ನೋವಾಗಿ ತಲೆ ಸುತ್ತುತ್ತಾ ಇತ್ತು.ಹಿಂದೆ ಕುಳಿತಿದ್ದ ಸಹಾಯಕಿ ಹುಡುಗಿಗೆ ಕಾಲಿಗೆ ಏಟು ಬಿದ್ದಿತ್ತು. ಆದರೆ ನನಗಿಂಗ ಒಳ್ಳೆಯ ಸ್ಥಿತಿ ಯಲ್ಲಿ ಇದ್ದಳು.ಅವಳು ಎದ್ದು ಮಗನನ್ನು ಎತ್ತಿಕೊಂಡಳು‌.ಕಾರಿನವರು ಹಿಂದೆ ನೋಡದೆ ಒಂದು ಕ್ಷಣ ಕೂಡ ನಿಲ್ಲಿಸದೆ ಹೊರಟು ಹೋಗಿದ್ದರು‌.ನಾವು ಬಿದ್ದಲ್ಲಿ ಸಮೀಪವೇ ಒಂದು ಸಣ್ಣ ತೊರೆ ಇತ್ತು.ಅದರ ಆ ಕಡೆಗೆ ಒಂದು ಮನೆ ಇತ್ತು.ನನ್ನ ‌ಮಗನ ಅಳು ಕೇಳಿದ ಅವರು ಕಾಲು ಪಾಪು( ಮರದ ಸಂಕ) ದಾಟಿ ಓಡಿ ಬಂದರು.ಅದು ತನಕ ಅವರ ಪರಿಚಯ ನನಗಿರಲಿಲ್ಲ.ಅವರು ಮಗನ ಕಣ್ಣಿನ ಕೆಳಭಾಗದ ಗಾಯ ನೋಡಿ ಕೂಡಲೇ ಹತ್ತಿರದ ವಿನಯ ಕ್ಲಿನಿಕ್ ಹಾಸ್ಪಿಟಲ್ ಗೆ ಹೋಗಲು ತಿಳಿಸಿದರು‌.ಆಗ ನಾನು ತುಸು ಹಿಂದೆ ಮುಂದೆ ನೋಡಿದೆ‌.ಯಾಕೆಂದರೆ ನನ್ನ ಬಳಿ ಹತ್ತು ಹದಿನೈದು ರುಪಾಯಿ ಮಾತ್ರ ಇತ್ತು ಅಷ್ಟೇ. ಅದನ್ನು ಅರ್ಥ ಮಾಡಕೊಂಡ ಪ್ರೇಮನಾಥ್ ( ಹೆಸರು ಸರಿಯಾಗಿ ನೆನಪಿಲ್ಲ, ಪ್ರೇಮನಾಥ್ ಎಂದು ನೆನಪು) ಅವರು ಅವರ ಮನೆಗೆ ಹೋಗಿ ಐದುನೂರು ರುಪಾಯಿ ನನಗೆ ತಂದು ಕೊಟ್ಟು ಒಂದು ಆಟೊ ತಂದು ನಮ್ಮ ಮೂವರನ್ನು ಆಟೊ ಹತ್ತಿಸಿ ಆಸ್ಪತ್ರೆಗೆ ಕಳಹಿಸಿಕೊಟ್ಟರು.
ಮಗನಿಗೆ ಸ್ಟಿಚ್ ಹಾಕಬೇಕಾಯಿತು‌.ನನಗೆ ಮತ್ತು ಸಹಾಯಕ ಹುಡುಗಿಗೆ ಪ್ರಥಮ ಚಿಕಿತ್ಸೆ ನೀಡಿದರುನಂತರ ಆಸ್ಪತ್ರೆ ಯಿಂದ ನಾನು ಹಸ್ಬೆಂಡ್ ಕೆಲಸ ಮಾಡು ಆಫೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದೆ( ಆಗಿನ್ನೂ ಮೊಬೈಲ್ ನಮ್ಮ ಬಳಿ ಇರಲಿಲ್ಲ) ಅವರು ಬಂದರು .ಮತ್ತೆ ಮನೆಗೆ ಬಂದೆವು.ಮರುದಿನವೇ ಪ್ರೇಮನಾಥ್ ಅವರ ಮನೆಗೆ ಹೋಗಿ ಅವರು ಕೊಟ್ಟ ದುಡ್ಡನ್ನು ಹಿಂದಿರುಗಿಸಿ ಧನ್ಯವಾದಗಳನ್ನು ತಿಳಿಸಿದೆ.ಆಗ ಅವರು ದುಡ್ಡನ್ನು ಇಷ್ಟು ಅರ್ಜೆಂಟಲ್ಲಿ ಕೊಡಬೆಕಾಗಿರಲಿಲ್ಲ, ಥ್ಯಾಂಕ್ಸ್ ಯಾಕೆ? ನಾವು ಮನುಷ್ಯರು ಪರಸ್ಪರ ಸಹಾಯಕ್ಕೆ ಬಾರದಿದ್ದರೆ ಮನುಷ್ಯರೆಂದು ಕರೆಯಲು ನಾಲಾಯಕ್ ಆಗಿ ಬಿಡುತ್ತೇವೆ‌‌.ಸಧ್ಯ  ನಿಮಗೆ‌ ಮೂವರಿಗೆ ದೊಡ್ಡ ಏಟೇನೂ ಬಿದ್ದಿಲ್ಲವಲ್ಲ ದೇವರ ದಯೆ.ಮುಂದೆ ಇನ್ನೂ ಜಾಗ್ರತೆಯಿಂದ ಗಾಡಿ ಓಡಿಸಿ ಎಂದು ಹೇಳಿದರು‌.ಅವರ ಮನೆ ಮಂದಿ ಕೂಡ ನಮ್ಮ ಆರೋಗ್ಯ ವಿಚಾರಿಸಿ ಕಾಫಿ ಮಾಡಿ ಕೊಟ್ಟರು‌.ಅವರು ಕೊಟ್ಟ ಕಾಫಿ ಅವರ ಮನಸ್ಸಿನಂತೆಯೇ ತುಂಬಾ ರುಚಿಯಾಗಿತ್ತು.ಅದರ ಕೊನೆಯ ತೊಟ್ಟನ್ನು ಕೂಡ ಕುಡಿದು ಖಾಲಿ ಲೋಟ ಇಟ್ಟು ಮತ್ತೊಮ್ಮೆ ಧನ್ಯವಾದ ಹೇಳಿ ಕೈಮುಗಿದು ಹನಿ ಗಣ್ಣಿನಿಂದ ಹಿಂದಿರುಗಿದೆ.
ಅಂದಿನ ಐದುನೂರು ರುಪಾಯಿ ಇಂದಿನ ಹತ್ತು ಸಾವಿರ ರುಪಾಯಿ ಗಿಂತ ಹೆಚ್ಚಿನ ಮೌಲ್ಯ ಹೊಂದಿತ್ತು.ಅದು ತನಕ ನೋಡದ ತೀರಾ ಅಪರಿಚಿತಳಾದ ನನಗೆ  ಅವರಾಗಿಯೇ ತಂದು ಕೊಟ್ಟು ಆಟೋ ತಂದು ನಮ್ಮನ್ನು ಆಸ್ಪತ್ರೆ ಗೆ ಕಳಹಿಸಿಕೊಟ್ಟ ಅವರ ಮಾನವೀಯತೆಯನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ .ಮುಂದಿನ ಬಾರಿ ಊರಿಗೆ ಹೋದಾಗ ಅವರ ಮನೆಗೆ ಹೋಗಿ ಬರಬೇಕು ಎಂದು ಕೊಂಡಿರುವೆ.ಅವರು ಅಲ್ಲೇ ಇದ್ದಾರಾ ? ಅದು ಅವರ ಸ್ವಂತ ಮನೆಯಾ ? ಬಾಡಿಗೆಗೆ ಇದ್ದರಾ ? ಯಾವುದೊಂದು ಮಾಹಿತಿಯೂ ನನಗೆ ತಿಳಿಯದು.ಆದರೂ ಅವರನ್ನು ಭೇಟಿ ಮಾಡಲು ಯತ್ನ ಮಾಡುವೆ‌.ಅವರು‌ ಮತ್ತು ಅವರ ಕುಟುಂಬದವರು ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಹಾರೈಸುವೆ.
© ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment