Sunday 27 May 2018

ಬದುಕ ಬಂಡಿಯಲಿ 12 ಆಕೆ ಅದೇ ಡಾಕ್ಟರ್ ನ ಮಗಳಾಗಿದ್ದಳು©..ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ 12
ಆಕೆ ಅದೇ ಡಾಕ್ಟರ್ ನ ಮಗಳಾಗಿದ್ದಳು..©ಡಾ.ಲಕ್ಷ್ಮೀ ಜಿ ಪ್ರಸಾದ
ವಯಸಾಗ್ತಾ ಆಗ್ತಾ ನಮಗೆ ನೆನಪಿನ ಶಕ್ತಿ ಕಡಿಮೆಯಾಗುತ್ತಂತೆ.ಹಾಗಾಗಿ ಬರೆಯ ಬೇಕೆಂದು ಕೊಂಡಿರುವುದನ್ನು  ನೆನಪಿರುವಾಗಲೇ ಬರೆಯಬೇಕೆಂತೆ.ನನ್ನ ಅಮ್ಮ ಯಾವಾಗಲೂ ಇಂತಹ ಘಟನೆಗಳನ್ನು ಬರೆದಿಡು ಎನ್ನುತ್ತಾ ಇರುತ್ತಾರೆ .
 ಹಾಗಾಗಿ ಮರೆಯುವ ಮುನ್ನ ಬರೆದೆ ಯಾವ ವೈದ್ಯರು ಹತ್ತು ಸಾವಿರ ರು ಡೆಪಾಸಿಟ್ ಕಟ್ಟದೆ ಇದ್ದುದಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದರೋ ಆಕೆ ಅದೇ ಡಾಕ್ಟರ್ ನ ಮಗಳಾಗಿದ್ದಳು!
ಈ ಕಾಲದ ಆಟ ಬಹಳ ವಿಚಿತ್ರವಾದುದು.ನಾನು ಸೋಮಾರಿ ಹಾಗಾಗಿ ಯಾವುದನ್ನೂ ಹುಡುಕಿಕೊಂಡು ಹೋಗಿ ಮಾಡುವುದಿಲ್ಲ ಆದರೆ ಅನಿವಾರ್ಯ ಸಂದರ್ಭ ಎದುರಾದಾಗ ಹಿಂದೆ ಮುಂದೆ ನೋಡದೆ ಮುನ್ನುಗ್ಗುವೆ.
ಸುಮಾರು  ಎಂಟು ಹತ್ತು  ವರ್ಷದ ಹಿಂದಿನ ಘಟನೆಯನ್ನು ನೆನಪಿಸಿಕೊಂಡೆ.
ಇಸವಿ ದಿನಾಂಕ ನೆನಪಿಲ್ಲ ‌. 2007- 2008 ರಲ್ಲಿ ಇರಬಹುದು . ನನಗಿನ್ನೂ ಸರಕಾರಿ ಉದ್ಯೋಗ ದೊರೆತಿರಲಿಲ್ಲ .
ನಾನು  ಎರಡನೇ ಡಾಕ್ಟರೇಟ್ ಪದವಿ ಅಧ್ಯಯನಕ್ಕಾಗಿ  ದ್ರಾವಿಡ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೆ.ಅದರಲ್ಲಿ ನನ್ನ ಫೋನ್ ನಂಬರ್ ಅನ್ನು ಕೂಡ ಹಾಕಿದ್ದೆ.ಒಂದು ದಿನ ಅಲ್ಲಿನ ತುಳು ವಿಭಾಗದ ಮುಖ್ಯಸ್ಥರಾದ ಡಾ.ಶಿವಕುಮಾರ್ ಅವರು ದಾಖಲೆಗಳೊಂದಿಗೆ ಬರುವಂತೆ ಬರೆದ ಪತ್ರ ತಲುಪಿತು.ಆಗ ನನಗೆ ಕುಪ್ಪಂ ಎಲ್ಲಿದೆ ಎಂದು ತಿಳಿದಿರಲಿಲ್ಲ ಮತ್ತು ಆಗಿನ್ನೂ ಈಗಿನಂತೆ ಎಲ್ಲ ಕಡೆಗೆ ಒಬ್ಬಳೇ ಓಡಾಡಿ ಅಭ್ಯಾಸ ಇರಲಿಲ್ಲ ‌
ಪ್ರಸಾದ್ ಆಗಷ್ಟೇ ಈಗ ಇರುವ ಕಂಪೆನಿಗೆ ಕೆಲಸಕ್ಕೆ ಸೇರಿದ್ದರು‌.ಹಾಗಾಗಿ ರಜೆ ಹಾಕಿ ನನ್ನನ್ನು ಕುಪ್ಪಂಗೆ ಕರೆದುಕೊಂಡು ಹೋಗಲು ಸಾಧ್ಯವಿರಲಿಲ್ಲ. ಆಗ ನನ್ನ ಸಹಾಯಕ್ಕೆ ಬಂದವರು  ನನ್ನ ಸಣ್ಣ ತಮ್ಮ ಗಣೇಶ್ ಭಟ್‌
ಅದಕ್ಕಾಗಿಯೇ ಮಂಗಳೂರಿನಿಂದ ಬೆಂಗಳೂರಿಗೆ ಬಂದು ನನ್ನ ಜೊತೆಗೆ ಕುಪ್ಪಂ ಗೆ ಬರುತ್ತೇನೆ ಎಂದು ಹೇಳಿದರು‌.ಅಂತೆಯೇ ನಾನು‌ ತಮ್ಮ ಬೆಂಗಳೂರಿನಿಂದ ಬೆಳಗ್ಗಿನ ಚೆನ್ನೈ ಎಕ್ಸ್‌ಪ್ರೆಸ್ ರೈಲು ಹತ್ತಿ ಕುಪ್ಪಂ ಗೆ ಬಂದು ಅಲ್ಲಿಂದ ಅಟೋ ಹಿಡಿದು ದ್ರಾವಿಡ ವಿಶ್ವವಿದ್ಯಾಲಯಕ್ಕೆ ಬಂದು ತುಳು ವಿಭಾಗಕ್ಕೆ ಬಂದೆವು.ಡಾ.ಶಿವಕುಮಾರ್ ಜೊತೆ ವೀಸಿ ಅವರನ್ನು ಭೇಟಿ ಮಾಡಿದೆ.
ನಂತರ ಪ್ರೊಫೆಸರ್ ಶಿವ ಕುಮಾರ್ ಅವರ ಮನೆಗೆ ಹೋಗಿ ಊಟ ಮಾಡಿ ಹಿಂತಿರುಗಿದೆವು.
ಇದಾಗಿ ತಿಂಗಳ ನಂತರ ಪ್ರೊಫೆಸರ್ ಪೋನ್ ಮಾಡಿ ಶುಲ್ಕ ತುಂಬಿ  ಸಾರ ಲೇಖ ಸಲ್ಲಿಸಿ  ಪಿಎಚ್ ಡಿ ಅಧ್ಯಯನಕ್ಕೆ ರಿಜಿಸ್ಟ್ರೇಷನ್ ಮಾಡಲು ತಿಳಿಸಿದರು.
ಈ ಬಾರಿ ನಾನು ಒಬ್ಬಳೇ ಕುಪ್ಪಂ ಗೆ ಹೊರಟೆ.ಮೊದಲು ಹೋದಂತೆ ಚೆನ್ನೈ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ಹೊರಟಿದ್ದೆ.ಬಂಗಾರ್ ಪೇಟೆ ಮಾಲೂರು ದಾಟಿ ಸುಮಾರು ದೂರ ಹೋಗುವಷ್ಟರಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ರೈಲು ನಿಂತಿತು ‌.ಅರ್ಧ ಗಂಟೆ ಕಳೆದರೂ ಹೊರಡಲಿಲ್ಲ.ರೈಲಿಗೆ ಏನೋ ಸಮಸ್ಯೆ ಆಗಿತ್ತು.

 ಹೆಚ್ಚಿನವರೂ ಇಳಿದು ನಡೆಯ ತೊಡಗಿದರು ‌.ಅಲ್ಲಿಂದ ಸ್ವಲ್ಪ ದೂರ ನಡೆದರೆ ರಸ್ತೆ ಸಿಗುತ್ತದೆ ಎಂದೂ ,ಅಲ್ಲಿ ಯಾವುದಾದರೂ ಗಾಡಿ ಹತ್ತಿ ಎರಡು ಕಿಲೋಮೀಟರ್ ದೂರ ಹೋದರೆ ಅಲ್ಲಿ ಬಸ್ ಬರುವ ರಸ್ತೆ ಇದೆ.ಅಲ್ಲಿಂದ ಕೆಜಿಎಫ್ ಹೋಗಿ ಬಸ್ ಹಿಡಿದು ಹೋಗಲು ಆಗುತ್ತದೆ ಎಂದು ಒಬ್ಬ ಪ್ರಯಾಣಿಕರು ನನಗೆ ಮಾಹಿತಿ ನೀಡಿದರು.
ನಾನು ಕೂಡ ಬೇರೆ ದಾರಿಯಲಿಲ್ಲದೆ ಇಳಿದು ನಡೆಯತೊಡಗಿದೆ.ಸ್ವಲ್ಪ ದೂರ ಮಣ್ಣಿನ ದಾರಿಯಲ್ಲಿ ನಡೆದಾಗ  ಅದೃಷ್ಟವಶಾತ್ ಒಂದು ಆಟೋ ಬಂತು.ಕೆಜಿಎಫ್ ಬಿಡಲು ಹೇಳಿದಾಗ ಆತ ನಾನು‌ ಕುಪ್ಪಂ ಕಡೆಗೆ ಹೋಗುತ್ತಿದ್ದೇನೆ.ಅ ಕಡೆ ಬರುವುದಾದರೆ ಬನ್ನಿ ಎಂದು ಅರ್ಧ ಕನ್ನಡ ಅರ್ಧ ತೆಲುಗು ಅರ್ಧ ತಮಿಳು ಮಿಶ್ರ ಮಾಡಿ ಹೇಳಿದ.ನನಗೂ ಕುಪ್ಪಂಗೆ ಹೋಗಬೇಕಿತ್ತು ತಾನೇ ? ಹುಡುಕುವ ಬಳ್ಳಿ ಕಾಲಿಗೆ ತೊಡರಿದಂತಾಗಿ ಖುಷಿಯಿಂದ ಹತ್ತಿ ಕುಳಿತೆ.
ನಿರ್ಜನವಾದ ಮಣ್ಣಿನ ರಸ್ತೆಯಲ್ಲಿ ಅಟೊ ಹೋಗುತ್ತಾ ಇತ್ತು.ನಿನಗೆ ಸರಿಯಾಗಿ ದಾರಿ ಗೊತ್ತು ತಾನೇ ಎಂದು ಅಟೊಚಾಲಕನಲ್ಲಿ ಕೇಳಿದೆ‌.ತಾನು ಕುಪ್ಪಂ ನವನು ತನ್ನ ಸಂಬಂಧಿಕರ ಮನೆಗೆ ಬಂದಿದ್ದೆ ‌.ಈ ದಾರಿಯಲ್ಲಿ ಹೋದರೆ ಬೇಗೆ ತಲುಪುತ್ತದೆ‌.ಇದು ಶಾರ್ಟ್ ಕಟ್ ದಾರಿ ಎಂದು ತಿಳಿಸಿದ‌.ಅವನು ಹೇಳಿದ್ದನ್ನು ನಂಬುವುದು ಬಿಟ್ಟರೆ ನನಗೆ ಬೇರೆ ದಾರಿ ಇರಲಿಲ್ಲ.
ಸುಮಾರು ದೂರ ಯಾವ್ಯಾವುದೋ ಮಣ್ಣಿನ ಕೊರಕಲು ರಸ್ತೆಯಲ್ಲಿ ಸಾಗಿತು.ಎತ್ತ ನೋಡಿದರೂ ಕಲ್ಲಿನ ಕೊಟಕು ಕಾಣಿಸುತ್ತದೆ.ಸುತ್ತ ಮುತ್ತ ಕರಿ ಬಂಡೆಗಳು.ಅಟೋ ಒಂದು ಕೊರಕಲಿನಲ್ಲಿ ಅಟೋ ತಿರುಗಿದಾಗ ಅಲ್ಲೇ ಒಂದು ಬಂಡೆ ಬದಿಯಲ್ಲಿ ಯಾರೋ ಬಿದ್ದಿರುವ ಹಾಗಿ ಕಾಣಿಸಿತು‌.ಅಲ್ಲೆ ಪಕ್ಕದಲ್ಲಿ ಒಂದು ಸ್ಕೂಟಿ ಕೂಡ ಬಿದ್ದಿರುವುದು ಕಾಣಿಸಿತು‌.ಊರಲ್ಲದ ಊರಿನ ಅಪರಿಚಿತ ಪ್ರದೇಶದಲ್ಲಿ ಇಲ್ಲದ ಉಸಾಬರಿ ನನಗೇಕೆ ಎಂದು ಅನಿಸಿತು‌.ಆದರೂ ಅ ಸ್ಕೂಟಿಯಲ್ಲಿ ಯಾರಾದರೂ ಅಕ್ಸಿಡೆಂಟ್ ಆಗಿ ದುರಕ್ಕೆ ರಟ್ಟಿ ಯಾರೋ ಬಂಡೆ ಕಲ್ಲಿನ ಬದಿಯಲ್ಲಿ ಬಿದ್ದಿರಬೇಕು ಎನಿಸಿತು. ಸ್ವಲ್ಪ ಮುಂದೆ ಹೋದ ಅಟೋವನ್ನು ಪುನಃ ಹಿಂದೆ ತಿರುಗಲು ಹೇಳಿ ಅ ತಿರುವಿನ ಬಂಡೆ ಕಲ್ಲಿನ ಸಮೀಪಕ್ಕೆ ಹೋದೆ‌.ಹೌದು ನನ್ನ ಊಹೆ ಸರಿಯಾಗಿತ್ತು.ಹದಿನೆಂಟು ಇಪ್ಪತ್ತು ವರ್ಷದ ತರುಣಿಯೊಬ್ಬಳು ಬಂಡೆಕಲ್ಲಿನ ಸಮೀಪ ಎಚ್ಚರ ತಪ್ಪಿ ಬಿದ್ದಿದ್ದಳು.ಸ್ವಲ್ಪ ದೂರದಲ್ಲಿ ಅವಳ ಕೆಂಪು ಸ್ಕೂಟಿ ಬಿದ್ದಿತ್ತು. ಅವಳ ತಲೆಗೆ ಏಟಾಗಿ ರಕ್ತ ಸುರಿಯುತ್ತಾ ಇತ್ತು.ಬಹುಶಃ ತಿರುವಿನಲ್ಲಿ ಸ್ಕಿಡ್ ಆಗು ಸಮತೋಲನ ತಪ್ಪಿ ಅವಳು ಬಂಡೆಗಲ್ಲಿಗೆ ಹೋಗಿ ಗುದ್ದಿರಬೇಕು.ನನ್ನ ಚೂಡಿದಾರಿನ ಸಾಲನ್ನು ಅವಳ ತಲೆಗೆ ಬಿಗಿಯಾಗಿ ಕಟ್ಟಿದೆ‌
ಆಟೋ ಚಾಲಕನಲ್ಲಿ ಇಲ್ಲಿಗೆ ಸಮೀಪದಲ್ಲಿ ಯಾವುದಾದರೂ ಅಸ್ಪತ್ರೆಗೆ ಕರೆದುಕೊಂಡು ಹೋಗೋಣವಾ ,ಎಷ್ಟೇ ಖರ್ಚಾದರೂ ನಾನು ಕೊಡುತ್ತೇನೆ ಎಂದು ಹೇಳಿದೆ.ಆರಂಭದಲ್ಲಿ ಇದು ನಮಗೇಕೆ ,ನಾವು ಕರೆದುಕೊಂಡು ಹೋದರೆ ಪೋಲೀಸ್ ಕೇಸ್ ಆಗಿ ನಮ್ಮ ತಲೆಗೆ ಬರಬಹುದು ಎಂದು ಹಿಂದೇಟು ಹಾಕಿದರು. ನನಗೂ ಹಾಗೆಯೇ ಅನಿಸಿತು‌.ಅವಳ ಪಲ್ಸ್ ಹಿಡಿದು ನೋಡುವಾಗ ಆಕೆಗೆ ಜೀವ ಇತ್ತು ‌ಅ ಬಿಸಿಲಿಗೆ ಅವಳನ್ನು ಅಲ್ಲಿ ಬಿಟ್ಟು ಹೋದರೆ ಅವಳು ಸಾಯುವುದು ಖಂಡಿತ. ಅಲ್ಲಿ ಇನ್ಯಾರಾದರೂ ಬರುವ ನಿರೀಕ್ಷೆ ಮಾಡುವುದು ಅಸಾಧ್ಯವಾಗಿತ್ತು.
ಹಾಗಾಗಿ ಆತನಲ್ಲಿ ನಮ್ಮ ತಾಯಿಗೋ ತಂಗಿಗೋ ಹೀಗೆ ಆಗಿದ್ದರೆ ನಾವು ಸಾಯಲಿ ಎಂದು ಬಿಟ್ಡು ಹೋಗುತ್ತಿದ್ದೆವಾ ? ಇವಳನ್ನು ನಮ್ಮ ತಂಗಿ ಎಂದು ಭಾವಿಸಿ ಬದುಕಲು ಪ್ರಯತ್ನ ಮಾಡುವ ಎಂದು ಹೇಳಿದೆ.ಮಾನವೀಯ ಅನುಕಂಪವಿದ್ದ ಅವರೂ ಒಪ್ಪಿದರು‌.
ಅವಳನ್ನು ಹೇಗೋ ಏನೋ ಎತ್ತಿಕೊಂಡು ಬಂದು ಅಟೋದಲ್ಲಿ ಮಲಗಿಸಿದೆವು.ನಾನು ಚಾಲಕನ ಪಕ್ಕ ಅರ್ಧ ಸೀಟಿ ನಲ್ಲಿ ಹೇಗೋ ಹೊಂದಾಣಿಕೆ ಮಾಡಿಕೊಂಡು ಕುಳಿತೆ.ಅಲ್ಲಿಮದ ಯಾವುದೊ ದಾರಿಯಲ್ಲಿ ಸುಮಾರು ಮೂರು ನಾಲ್ಕು ಕಿಲೋಮೀಟರ್ ದೂರ ಹೋದಾಗ ಒಂದು ಹಳ್ಳಿ ಸಿಕ್ಕಿತು‌.ಸ್ವಲ್ಪ ಮುಂದೆ ಹೋದಾಗ ಸಣ್ಣ ನರ್ಸಿಂಗ್ ಹೋಮ್ ಒಂದು ಕಾಣಿಸಿತು.ಆಟೋ ವನ್ನು ಅದರ ಮುಂದೆ ನಿಲ್ಲಿಸಿದರು. ನಾನು ಆಸ್ಪತ್ರೆ ಒಳಗೆ ಹೋಗಿ ಎಮರ್ಜೆನ್ಸಿ ಕೇರ್ ವಿಭಾಗಕ್ಕೆ ಹೋಗಿ ಎಂದು ಎಮರ್ಜೆನ್ಸಿ ಕೇಸ್ ಬಂದಿದೆ ಎಂದು ತಿಳಿಸಿ ಸ್ಟ್ರೆಚರ್ ನಲ್ಲಿ ಆಟೊ ದಿಂದ ಶಿಪ್ಟ್ ಮಾಡಲು ಹೇಳಿದೆ.ಅವರು ಸ್ವಲ್ಪ ಹಿಂದೆ ನೋಡಿದರೂ ನಂತರ ಸ್ಟ್ರೆಚರ್ ತಂದು ಅವಳನ್ನು ಎಮರ್ಜೆನ್ಸಿ ಕೇರ್ !/ ಕ್ಯಾಸುವಾಲ್ಟಿಗೆ ಕರೆದುಕೊಂಡು ಹೋದರು‌.
ನನ್ನನ್ನು ಒಳಗೆ ಕರೆದು ಏನಾಯಿತು ಎಂದು ಅಲ್ಲಿ ಇದ್ದ ನರ್ಸ್  ಕೇಳಿದರು."ಏನಾಗಿದೆ ಎಂದು ನನಗೆ ತಿಳಿಯದು,ಆ ದಾರಿಯಲ್ಲಿ ಬರುವಾಗ ಕಾಣಿಸಿತು ಹಾಗಾಗಿ ಅಟೊದಲ್ಲಿ‌ ಮಲಗಿಸಿ ಚಿಕಿತ್ಸೆಗಾಗಿ ಕರೆ ತಂದೆ. ಆಕೆ ಯಾರೆಂದು ನನಗೆ ತಿಳಿಯದು"  ಬೇಗ  ಡಾಕ್ಟರ್ ಅನ್ನು ಬರಹೇಳಿ ಚಿಕಿತ್ಸೆ ನೀಡಿ ಎಂದು   ‌ನಾನು ಸತ್ಯ ಸಂಗತಿ ಹೇಳಿದೆ.ಅಲ್ಲಿ ಡಾಕ್ಟರ್ ಯಾರೂ ಇರಲಿಲ್ಲ
ಇದು ಪೋಲೀಸ್ ಕೇಸ್ ಅಲ್ಲಿ ದೂರು ಕೊಟ್ಟು ಬನ್ನಿ ,ಇಲ್ಲಿ ಇಂತಹ ಕೇಸ್ ತೆಗೆದುಕೊಳ್ಳುವುದಿಲ್ಲ ಇತ್ಯಾದಿ ಏನೇನೋ ತೆಲುಗು/ ತಮಿಳಿನಲ್ಲಿ ಹೇಳ ತೊಡಗಿದರು.
ಆಗ ನಾನು ಮೊದಲು ಚಿಕಿತ್ಸೆ ಕೊಡಿ ಮತ್ತೆ ಉಳಿದ ವಿಚಾರ ನೋಡುವ ಎಂದು ಹೇಳಿದೆ.
ಆಗ ಅವರು ಬಿಲ್ಲಿಂಗ್ ಸೆಕ್ಷನ್ ಗೆ ಹೋಗಿ ಹತ್ತು ಸಾವಿರ ಮುಂಗಡ ಕಟ್ಟಲು ಹೇಳಿದರು.ನನ್ನಲ್ಲಿ ಪೀಸ್ ಕಟ್ಟಲೆಂದು ತೆಗೆದುಕೊಂಡಿದ್ದ ಎರಡೂವರೆ ಸಾವಿರ ಮತ್ತು ಖರ್ಚಿಗಾಗಿ ಇಟ್ಟುಕೊಂಡಿದ್ದ ಒಂದು ಸಾವಿರ ಇತ್ತು ಅಷ್ಟೇ. ನಾನು ಅವರಲ್ಲಿ ಅಷ್ಟು ದೊಡ್ಡ ನನ್ನಲ್ಲಿ ಇಲ್ಲ ‌.ಈಕೆಯನ್ನು ದಾಖಲಿಸಿ ಚಿಕಿತ್ಸೆ ಕೊಡಿ ನಾನು ಕುಪ್ಪಂಗೆ ಹೋಗಿ ನನ್ನ ಪ್ರೊಫೆಸರ್ ಅಲ್ಲಿ ದುಡ್ಡು ಕೇಳಿ ತಂದು ಕಟ್ಟುತ್ತೇನೆ ಎಂದು ಹೇಳಿದೆ‌.
ಇಲ್ಲ ಇದು ಆಕ್ಸಿಡೆಂಟ್ ಕೇಸ್ ದುಡ್ಡು  ಈಗಲೇ ಕಟ್ಟ ಬೇಕು ಎಂದು ಹೇಳಿದರು. ಆಗ ಆ ಅಸ್ಪತ್ರೆಯ ಓನರ್ ಅಗಿರುವ ಡಾಕ್ಟರ್ ಆಗಮಿಸಿದರು.ವಿಷಯ ತಿಳಿದು ನನ್ನನ್ನು ಬೈದರು‌.ಇಂತಹ ಆಕ್ಸಿಡೆಂಟ್ ಕೇಸುಗಳನ್ನು ಸರ್ಕಾರಿ ಹಾಸ್ಪಿಟಲ್ ಗೆ ತಗೊಂಡು ಹೋಗುವ ಬದಲು ಇಲ್ಯಾಕೆ ಕರೆದುಕೊಂಡು ಬಂದಿರಿ ? ಹತ್ತು ಸಾವಿರ ಕಟ್ಟಲಾಗದಿದ್ದರೆ ಬೇರೆಡೆ ಕರೆದುಕೊಂಡು ಹೋಗಿ ಎಂದರು ‌ಆಗ ನಾನು ನನ್ನ ಕೈಗಳಲ್ಲಿ ಇದ್ದ ಎರಡು ಚಿನ್ನದ ಬಳೆಗಳನ್ನು  ಕೊಟ್ಟು " ಇದು ಬಂಗಾರದ ಬಳೆಗಳು ಬೇಕಿದ್ದರೆ ಹಾಲ್ ಮಾರ್ಕ್ ನೋಡಿ ಕನ್ಫರ್ಮ್ ಮಾಡಿಕೊಳ್ಳಿ " ಎಂದು ಹೇಳಿ ಆ ಹುಡುಗಿಗೆ ಚಿಕಿತ್ಸೆ ನೀಡುವಂತೆ ಕೇಳಿಕೊಂಡೆ.ನನ್ನ ಮೇಲೆ ಸಿಡಿಗುಟ್ಟುತ್ತಾ ಅ ಡಾಕ್ಟರ್ ಕೃಷ್ಣೊಜಿ ರಾವ ಒಳಗೆ ನಡೆದರು.ಒಂದೆರಡು ನಿಮಿಷದಲ್ಲಿ ಗಲಾಟೆ ಎಲ್ಲ ಥಂಡಾ! ಎಲ್ಲರೂ ಗಡಿಬಿಡಿಯಿಂದ ಓಡಾಡಲು ತೊಡಗಿದರು‌.ತಕ್ಷಣವೇ ಒಂದು ಆಂಬುಲೆನ್ಸ್ ಬಂತು‌. ಆ ಹುಡುಗಿಯನ್ನು ಸ್ಟ್ರೆಚರ್ ನಲ್ಲಿ ತಂದು ಆಂಬುಲೆನ್ಸ್ಗೆ ಹಾಕಿದರು.ಏನು ಸಂಗತಿ ಎಂದು ನನಗೆ ತಿಳಿಯಲಿಲ್ಲ. ಏನು ಎನಾಯಿತು ಎಂದು ಕೇಳಿದರೆ ನಮ್ಮ ಡಾಕ್ಟ್ರ ಮಗಳಿಗೆ ಆಕ್ಸಿಡೆಂಟ್ ಆಗಿದೆ ಎಂದು ಗಡಿಬಿಡಿಯಲ್ಲಿ ಅಲ್ಲಿರುವಾಕೆ ಒಬ್ಬಳು ತೆಲುಗಿನಲ್ಲಿ ಹೇಳಿದರು.
ಅಷ್ಟರಲ್ಲಿ ಗಡಿಬಿಡಿಯಿಂದ ಹೊರಬಂದ ಆ ಡಾಕ್ಟರ್ ಮೇಡಂ ನಮ್ಮದು ತಪ್ಪಾಯಿತು.ನೀವು ಇಲ್ಲಿ ಸೇರಿಸಿದ ಹುಡುಗಿ ನನ್ನ ‌ಮಗಳು.ತಲೆಗೆ ತುಂಬಾ ಏಟು ಬಿದ್ದಿದೆ ಹಾಗಾಗಿ ಬೆಂಗಳೂರಿಗೆ  ಶಿಪ್ಟ್ ಮಾಡುತ್ತಿದ್ದೇವೆ,ನಿಮ್ಮ ಉಪಕಾರ ಯಾವತ್ತಿಗೂ ಮರೆಯುವುದಿಲ್ಲ ಎಂದು ಹೇಳಿ ನನ್ನ ‌ಫೋನ್ ನಂಬರ್ ತೆಗೆದುಕೊಂಡು ನನ್ನ ಬಳೆಗಳನ್ನು ಹಿಂತಿರುಗಿಸಿದರು .

ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ಅಟೋಚಾಲಕ ದಿಙ್ಮೂಢನಾಗಿ ನಿಂತಿದ್ದರು.ನಾವು ಇನ್ನು ಹೊರಡುವ ಎಂದು ಹೇಳಿದೆ.ಇಷ್ಟಾಗುವಾಗ ಮಧ್ಯಾಹ್ನ ಹನ್ನೆರಡು ಆಗಿತ್ತು .ಬಟ್ಟೆಗೆಲ್ಲ ರಕ್ತದ ಕಲೆ ಆಗಿತ್ತು. ಆ ಅವತಾರದಲ್ಲಿ ಯುನಿವರ್ಸಿಟಿ ಗೆ ಹೋಗುವುದು ಸರಿ ಕಾಣಲಿಲ್ಲ. ಪ್ರೊಫೆಸರ್ ಶಿವ ಕುಮಾರ್ ಭರಣ್ಯ ಅವರಿಗೆ ಪೋನ್ ಮಾಡಿ ಈವತ್ತು ಬರಲಾಗುವುದಿಲ್ಲ ಎಂದು ಹೇಳಿದೆ
ಅಟೋ ಚಾಲಕನಿಗೆ ನನಗೆ ಬೆಂಗಳೂರಿಗೆ ಹೋಗುವ ಬಸ್ ಎಲ್ಲಿ ಬರುತ್ತೋ ಅಲ್ಲಿ ಬಿಡಿ ಎಂದು ಹೇಳಿದೆ
 ಆಗ ಅಲ್ಲಿಯೇ ಇದ್ದ ಆ ಡಾಕ್ಟರ್ ನೀವು ಯಾವ ಕಡೆ ಹೋಗಬೇಕು,ಬೆಂಗಳೂರಿಗೆ ಅದರೆ ನಾನು ಬಿಡುತ್ತೇನೆ  ಎಂದು ಕೇಳಿದರು . ಸರಿ ಎಂದು ಹೇಳಿ ಆಟೋ ಚಾಲಕ ರಮೆಶ್ ಅವರಲ್ಲಿ ಎಷ್ಟು ದುಡ್ಡು ಕೊಡಬೇಕು ಎಂದು ಕೇಳಿದೆ .ಆತ ನಮಸ್ಕಾರ ಮಾಡಿ ಏನು ಬೇಡ ಮೇಡಂ ಎಂದು ಹೇಳಿದರು‌.ಆಗ ಡಾಕ್ಟರ್ ಕೃಷ್ಣೊಜಿ ರಾವರು ಆತನ ಜೇಬಿಗೆ ಐದು ನೂರರ ಎರಡು ನೋಟನ್ನು ತುರುಕಿ ಕೈ‌ಮುಗಿದು  ಕಾರು  ಬಾಗಿಲು ತೆರೆದು ಹತ್ತಲು ಹೇಳಿದರು ಕಾರು ಹತ್ತಿ ಕುಳಿತುಕೊಂಡೆ  ಆಂಬುಲೆನ್ಸ್  ಹಿಂದಿನಿಂದ ಹೊರಟರು.
ನಾನು ಅವರ ಜೊತೆ ಬೆಂಗಳೂರಿಗೆ ಯಶವಂತಪುರ ಬಂದು ಬಸ್ ಹತ್ತಿ ಮನೆಗೆ ಬಂದೆ .
ನಂತರ ಮರುದಿನ ಕುಪ್ಪಂಗೆ ಹೋಗಿ ಶುಲಕ್ ಕಟ್ಟಿ ಪಿಎಚ್ ಡಿ  ಅಧ್ಯಯನಕ್ಕೆ ಸೇರಿ ಬಂದೆ .
ಇದಾಗಿ ಎರಡು ಮೂರು ದಿನ ಕಳೆಯಿತು.
ಒಂದು ದಿನ ಸಂಜೆ ಆ ಡಾಕ್ಟರ್ ಕರೆ ಬಂತು.ತನ್ನ ಮಗಳಿಗೆ ತಲೆಗೆ ಏಟಾದ ಕಾರಣ ಸಣ್ಣ ಆಪರೇಷನ್ ಮಾಡಬೇಕಾಯಿತು. ಹಾಗಾಗಿ ಗಡಿಬಿಡಿಯಲ್ಲಿ ಇದ್ದೆ ಪೋನ್ ಮಾಡಲಾಗಲಿಲ್ಲ. ನೀವು ನೋಡಿ ತಲೆಗೆ ಬಟ್ಟೆ ಸುತ್ತಿ ಕರೆದುಕೊಂಡು ಬಂದ ಕಾರಣ ಮಗಳು ಬದುಕಿದಳು.ಇಲ್ಲವಾದರೆ ಅವಳು ಖಂಡಿತಾ ಬದುಕುತ್ತಿರಲಿಲ್ಲ .ನಿಮ್ಮ ಉಪಕಾರವನ್ನು ಯಾವತ್ತಿಗೂ ಮರೆಯಲಾರೆ ,ಮುಮದಿನ ಬಾರಿ ಬೆಂಗಳೂರಿಗೆ ಬಂದಾಗ ನಿಮ್ಮ ಮನೆಗೆ ಬರುತ್ತೇನೆ ಎಂದು ಹೆಳಿದರು.
ನಂತರ ಎರಡು ತಿಂಗಳ ನಂತರ ಬೆಂಗಳೂರಿಗೆ ಬಂದವರು ನನಗೆ ಪೋನ್ ಮಾಡಿ ನಮ್ಮ ಮನೆಗೆ ಹು ಹಣ್ಣು ಸಿಹಿ ಹಿಡಿದುಕೊಂಡು ಪತ್ನಿ ರೇಣುಕ ಅವರ ಜೊತೆ ಬಂದರು .ಮತ್ತೆ ಪುನಃ ಥ್ಯಾಂಕ್ಸ್ ಹೇಳಿದರು.ಆಗ ನಾನು ನನಗೆ ಥ್ಯಾಂಕ್ಸ್ ಬೇಡ,ಮನುಷ್ಯಳಾಗಿ ಅದು ನನ್ನ ಕರ್ತವ್ಯ ಆಗಿತ್ತು ‌.ಆದರೆ ವೈದ್ಯರುಗಳು ನೀವು ಮಾನವೀಯತೆಯನ್ನು ಮರೆಯಬಾರದು.ಒಂದೊಮ್ಮೆ ಆ ಹುಡುಗಿ ನಿಮ್ಮ ಮಗಳಲ್ಲದೆ ಬೇರೆಯವರಾಗಿದ್ದರೆ ನೀವು ಚಿಕಿತ್ಸೆ ಕೊಡುವುದರಲ್ಲಿ ಇರಲಿಲ್ಲ. ನನಗೆ ನಿಮ್ಮ ಆಸ್ಪತ್ರೆ ಯ ಸಿಬ್ಬಂದಿ ಮತ್ತು ನೀವು ಹೇಗೆ ಬೈದಿದ್ದೀರಿ ಎಂಬುದನ್ನು ಮರೆಯಬೇಡಿ‌.ಪ್ರಾಣ ರಕ್ಷಣೆ ವೈದ್ಯರ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದೆ.ನಮ್ಮ ತಪ್ಪಿನ ಅರಿವಾಗಿದೆ ನಮಗೆ ಇನ್ನೆಂದಿಗೂ ನಮ್ಮಲ್ಲಿ ಹಾಗೆ ಆಗುವುದಿಲ್ಲ ಎಂದು ಭಾಷೆ ಕೊಡುತ್ತೇನೆ ,ಪ್ರಮಾಣ ಮಾಡುತ್ತೇನೆ ಎಂದು ಹೇಳಿದರು. ನಾನು ಪ್ರಮಾಣ ಎಲ್ಲ ಬೇಡ ಎಂದು ಹೇಳಿದರೂ ಕೇಳದೆ ತಮ್ಮ ಮಗಳ ಹೆಸರಿನಲ್ಲಿ ಪ್ರಮಾಣ ಮಾಡಿ ಸಣ್ಣ ಮಕ್ಕಳಂತೆ ಅತ್ತರು‌
ನಂತರ ಅವರ ಮನೆಗೆ ಒಮ್ಮೆ ಬರಬೇಕು ಎಂದು ಕರೆದರು‌‌‌.ಕುಪ್ಪಂಗೆ ಬರುವುದಿದ್ದರೆ ಪೋನ್ ಮಾಡಿ ,ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.
ಇದಾಗು ವರ್ಷ ಕಳೆಯಿತು. ನಾನು ಆಗಾಗ ಕುಪ್ಪಂಗೆ ಹೋಗಿ ಬರುತ್ತಾ ಇದ್ದೆ.ಒಂದು ಬಾರಿ ಹೋಗುವಾಗ ಅವರು ಟ್ರೈ ನ್ ನಲ್ಲಿ ಸಿಕ್ಕಿ ಒತ್ತಾಯ ಮಾಡಿ ಅವರ ಮನೆಗೆ ಕರೆದುಕೊಂಡು ಹೋಗಿ ಸತ್ಕಾರ ಮಾಡಿ ಕುಪ್ಪಂಗೆ ಯುನಿವರ್ಸಿಟಿ ಗೆ ಕರೆದುಕೊಂಡು ಬಂದು ಬಿಟ್ಟು ಹೋದರು.
ಅದಾದ ನಂತರ ನಾನು ಅವರನ್ನು ಭೇಟಿಯಾಗಿಲ್ಲ  ಪೋನ್ ಕಲೆದು ಹೋಗಿ ಅವರ ನಂಬರ್ ‌ಕುಡ ಕಳೆದು ಹೋಗಿದೆ.ಅವರ ಸಣ್ಣ ನರ್ಸಿಂಗ್ ಹೋಮ್ ಆಂದ್ರಪ್ರದೇಶದ ಯಾವುದೊ ಉರಿನಲ್ಲಿದ್ದು ಆ ಉರಿನ ಹೆಸರನ್ನು ನೆನಪು ಮಾಡಲು ಯತ್ನ ಮಾಡುತ್ತಾ ಇದ್ದೇನೆ.ಅವರ ಮಗಳು ಆಗ ಕುಪ್ಪಂನಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಮೊದಲ ವರ್ಷ ಎಂಬಿಬಿಎಸ್ ಓದುತ್ತಾ ಇದ್ದಳೆಂದು ನೆನಪು.ಹೆಸರು ಸ್ವಾತಿ ಎಂದು ಇರಬೇಕು. ಈಗ ಅವಳ ಓದು ಮುಗಿದು ಅವಳೂ ವೈದ್ಯೆ ಆಗಿರಬಹುದು. ಕುಪ್ಪಂಗೆ ರೈಲಲ್ಲಿ ಹೋಗಿ ಬರುವಾಗಲೆಲ್ಲ ಅವರ ನೆನಪಾಗುತ್ತಾ ಇತ್ತು.ಇಂತಹದ್ದೆನ್ನೆಲ್ಲ ಸಿನಿಮಾಗಳಲ್ಲಿ ನೋಡುತ್ತೇವೆ.ಆದರೆ ಅವೆಲ್ಲವೂ ವಾಸ್ತವ ಬದುಕಿನ ಛಾಯೆಗಳು ಎಂಬುದು ಈ ಘಟನೆಯಿಂದ ಅರ್ಥವಾಗಿದೆ ನನಗೆ ,ಆದರೂ ಈಗಿನ ಕಾಲದಲ್ಲಿ ಕೂಡ ಆಕ್ಸಿಡೆಂಟ್ ನಂತಹ ಪ್ರಕರಣಗಳಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ ಎಂಬ ಕಾನೂನು ಇದ್ದರೂ ಕೂಡ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸಾಯುವ ಅಮಾಯಕ ಜೀವಗಳ ಸಂಖ್ಯೆ ಸಾಕಷ್ಟು ಇದೆ ಅಲ್ವಾ ?
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ .

No comments:

Post a Comment