Saturday 26 May 2018

ಬದುಕೆಂಬ ಬಂಡಿಯಲಿ 11 ಅಂದು ಬಿತ್ತಿದ ಬೆಳೆ ಇಂದು ಫಸಲು ನೀಡಿದೆ ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ..11  ಅಂದು ಬಿತ್ತಿದ ಬೆಳೆ ಈಗ ಫಸಲು ನೀಡಿದೆ.©ಡಾ.ಲಕ್ಷ್ಮೀ ಜಿ ಪ್ರಸಾದ
ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಎಂದರೆ 2004 ರಲ್ಲಿ ಪ್ರಸಾದ್ ಗೆ ಬೆಂಗಳೂರಿನ IIC ltd ಎಂಬ ಕಂಪೆನಿಯಲ್ಲಿ ಒಳ್ಳೆಯ ಕೆಲಸ ದೊರೆಯಿತು. ಆಗ ನಾನಿನ್ನೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ‌.ಶೈಕ್ಷಣಿಕ ವರ್ಷದ ನಡುವೆ ಕೆಲಸ ಬಿಡುವುದು ಸರಿಯಲ್ಲವೆಂದು 2005 ಮಾರ್ಚ್ ತನಕ ಕೆಲಸ ಮಾಡಿ ರಾಜೀನಾಮೆ ನೀಡಿದೆ .ತಾಯಿಮನೆಯಲ್ಲಿ ಒಂದೂವರೆ ತಿಂಗಳು ಇದ್ದು ಬೆಂಗಳೂರಿಗೆ ಬಂದೆ‌.ಆಗಷ್ಟೇ ನನ್ನ  ಕನ್ನಡ ಎಂಎ ಎರಡನೇ ವರ್ಷದ ಫಲಿತಾಂಶ ಬಂದಿತ್ತು.
ಬೆಂಗಳೂರಿಗೆ ತಲುಪಿದ ದಿನವೇ ಪತ್ರಿಕೆ ಓದಿದಾಗ ಎಪಿಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು  walk in interview ಗೆ ಬರಲು ಹೇಳಿದ್ದರು‌.ಪ್ರಸಾದ್ ಆಪೀಸ್ ಗೆ ಹೋಗಿದ್ದರು.ನಾನು ಬಾಗಿಲು ತೆರೆದು ಹೊರಗೆ ಬಂದು ಅತ್ತಿತ್ತ ಕಣ್ಣಾಡಿಸುವಾಗ ಎದುರಿನ ಮನೆಯ ಸುಮಾರು ನನ್ನ ವಯಸಿನ ಮಹಿಳೆ ಹೊರಬಂದರು.ಅವರನ್ನು ನೋಡಿ ನಾನು ಪರಿಚಯ ಮಾಡಿಕೊಳ್ಳುವ ಸಲುವಾಗ ನಸು ನಗು ಬೀರಿದೆ‌.ಅವರು ಕೂಡ ನಕ್ಕು ಹೊಸತಾಗಿ ಬಾಡಿಗೆಗೆ ಬಂದವರಾ ಎಂದು ಹೇಳಿದರು‌. ಹೌದು ಎಂದು ಉತ್ತರಿಸಿ ಎಪಿಎಸ್ ಟ್ರಸ್ಟ್‌ ಇರುವ ಎನ್ ಆರ್ ಕಾಲೋನಿ ಎಷ್ಟು ದೂರ ಆಗುತ್ತದೆ ಎಂದು ವಿಚಾರಿಸಿದೆ‌.ಇಲ್ಲೇ ಹತ್ತಿರ, ನಾಲ್ಕೈದು ಕಿಲೋಮೀಟರ್ ಎಂದು ತಿಳಿಸಿ ಹೋಗುವ ದಾರಿಯನ್ನು ವಿವರಿಸಿದರು.ಸರಿ ಎಂದು ಅರ್ಜಿ ಬರೆದು ಅಂಕ ಪಟ್ಟಿ ಪ್ರಮಾಣ ಪತ್ರಗಳನ್ನು ಜೋಡಿಸಿಕೊಂಡು ಮಗನನ್ನು ಹೊರಡಿಸಿ ಗಾಡಿಯಲ್ಲಿ ಹಿಂದೆ ಕುಳ್ಳಿರಿಸಿಕೊಂಡು ಎನ್ ಅರ್ ಕಾಲೋನಿಯಲ್ಲಿ ಇರುವ ಎಪಿಎಸ್ ಟ್ರಸ್ಟ್ ಗೆ ಹೋದೆ.ಅಲ್ಲಿ ತಲುಪುವಾಗ ಮಧ್ಯಾಹ್ನ ಹನ್ನೆರಡು ಗಂಟೆ ಆಗಿತ್ತು .ಅದೃಷ್ಟವಶಾತ್ ಕೊನೆಯ ಅಭ್ಯರ್ಥಿಯ ಸಂದರ್ಶನ ನಡೆಯುತ್ತಾ ಇತ್ತು.
ನಂತರ ನನ್ನನ್ನು ಕೂಡ ಒಳಗೆ ಸಂದರ್ಶನಕ್ಕೆ ಕರೆದರು.ಮೊದಲಿಗೆ ಇಷ್ಟು ತಡವಾಗಿ ಯಾಕೆ ಬಂದಿರಿ ಎಂದು ಪ್ರಶ್ನಿಸಿದರು ‌" ಇಂದು ಬೆಳಗ್ಗೆಯಷ್ಟೇ ಮಂಗಳೂರಿನಿಂದ ಬಂದಿರುವೆ .ಇಲ್ಲಿನ ಪರಿಸರದ ಪರಿಚಯವಿಲ್ಲ ಹಾಗಾಗಿ ಕೇಳಿಕೊಂಡು ಬರುವಾಗ ತಡವಾಯಿತು " ಎಂದು  ಸತ್ಯವಾದ ವಿಷಯ ತಿಳಿಸಿದೆ.ನಂತರ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದರು‌.ಸಮಂಜಸವಾದ ಉತ್ತರ ನೀಡಿದೆ‌.ನನ್ನ ಪೋನ್ ನಂಬರ್ ಪಡೆದುಕೊಂಡು ಮುಂದಿನ ವಾರ ತಿಳಿಸುತ್ತೇವೆ " ಎಂದರು.ಧನ್ಯವಾದ ಹೇಳಿ ಹೊರಬಂದೆ.
ಹಿಂದೆ ಬರುವಾಗ ಅಲ್ಲಿ ಒಂದು ಕಡೆ ಏಕಮುಖ ಮಾರ್ಗ ಇತ್ತು.ಅಲ್ಲಿ ದಾರಿ ತಪ್ಪಿ ಎಲ್ಲೆಲ್ಲೋ ಅಲೆದಾಡಿದೆ.ಕೊನೆಗೆ ಯಾರ ಯಾರಲ್ಲೋ ಕೇಳಿ ಮನೆ ತಲುಪಿದೆ.
ಇದಾಗಿ ಎರಡು ಮೂರು ದಿನಕ್ಕೆ ಜೈನ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆ ಖಾಲಿ ಇರುವುದು ತಿಳಿಯಿತು ‌.ಪ್ರಸಾದ್ ಸ್ನೇಹಿತರಾದ ಜಾನ್ ಪಾಲ್ ಅವರಿಗೆ ಅಲ್ಲಿನ ಆಡಳಿತಾಧಿಕಾರಿಗಳ ಪರಿಚಯ ಇತ್ತು‌.ಹಾಗಾಗಿ ನೇರವಾಗಿ ಅರ್ಜಿ ಬರೆದು ಕೊಂಡು ಹೋದೆ.ಅಲ್ಲಿಯೂ ಸಂದರ್ಶನ ನಡೆಯಿತು.ಆಯ್ಕೆಯಾದ ಬಗ್ಗೆ ತಿಳಿಸಿ ನೇಮಕಾತಿ ಪತ್ರ ಕಳಹಿಸಿಕೊಡುತ್ತೇವೆ‌.ನಂತರ ಬಂದು ವರದಿ ಮಾಡಿಕೊಳ್ಳಿ ಎಂದು ತಿಳಿಸಿದರು.
ಮತ್ತೆ ಒಂದು ವಾರ ಕಳೆಯಿತು. ಜೈನ್ ಕಾಲೇಜಿನ ನೇಮಕಾತಿ ಆದೇಶ  ಅಂಚೆ ಮೂಲಕ ಕೈ ಸೇರಿತು‌.ಸೇರಲು ಒಂದು ವಾರದ ಸಮಯ ನೀಡಿದ್ದರು.
ಅದಾಗಲೇ ನಾನು ಕನ್ನಡ ಎಂಎ ಓದುವಾಗ ಜಾನಪದ ನನಗೆ ತುಂಬಾ ಇಷ್ಟವಾಗಿತ್ತು.ಮುಂದೆ ಎಂಫಿಲ್ ,ಪಿಎಚ್.ಡಿ ಮಾಡುವುದಾದರೆ  ಕನ್ನಡ -ತುಳು ಜಾನಪದದಲ್ಲಿಯೇ ಎಂದು ನಿರ್ಧರಿಸಿದ್ದೆ  . ಹಾಗಾಗಿ ನನಗೆ ಕನ್ನಡ ಉಪನ್ಯಾಸಕಿಯಾಗಲು ಹೆಚ್ಚಿನ ಆಸಕ್ತಿ ಇತ್ತು. ಅಲ್ಲದೇ ಸಂಸ್ಕೃತವನ್ನು ಇಂಗ್ಲಿಷ್ ಭಾಷೆಯ ಮೂಲಕ ಪಾಠ ಮಾಡಬೇಕಿತ್ತು.ಕನ್ನಡ ಮಾಧ್ಯಮದಲ್ಲಿ ಓದಿದ ನನಗ್ಯಾಕೋ ಇಂಗ್ಲಿಷ್ ಭಾಷೆಯ ಮೆಲೆ ಅಷ್ಟೊಂದು ಹಿಡಿತವಿರಲಿಲ್ಲ.ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೂಡ ಸಂಸ್ಕೃತವನ್ನು ಇಂಗ್ಲಿಷ್ ಭಾಷೆಯ ಮೂಲಕ ಪಾಠ ಮಾಡಬೆಕಾಗಿತ್ತು.ಹಾಗಾಗಿ ಸಂಸ್ಕೃತ ವನ್ನು ಇಂಗ್ಲಿಷ್ ಮೂಲಕ ಪಾಠ ಮಾಡಿ ಅನುಭವ ಇತ್ತು.ಆದರೂ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಬರುವ ಮಕ್ಕಳ ಎದುರು ಒಂದಿನಿತು ಕೀಳರಿಮೆ ಕಾಡುತ್ತಿತ್ತು. ಜೊತೆಗೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವರ್ಷದ ಕೊನೆಯಲ್ಲಿ ಒಬ್ಬಿಬ್ಬರು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ನೀಡುವಾಗ ನನ್ನ ಇಂಗ್ಲಿಷ್ ಭಾಷೆ ಚೆನ್ನಾಗಿಲ್ಲ ಎಂದು ಬರೆದಿದ್ದರು. ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದು ,ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸಿದ ಅನುಭವವಿದ್ದ ಕಾರಣ ನನಗೆ ಸಂಸ್ಕೃತ ಭಾಷೆಯ ಮೇಲೆ ಒಳ್ಳೆಯ ಹಿಡಿತವಿತ್ತು‌.ಪಾಠ ಮಾಡುವುದರಲ್ಲಿಯೂ ಕೌಶಲ್ಯ ವಿತ್ತು.ಆದರೆ ಸಂಸ್ಕೃತ ಉಪನ್ಯಾಸಕಿಯಾಗಿ ಇಂಗ್ಲಿಷ್ ಭಾಷೆ ಚೆನ್ನಾಗಿಲ್ಲ ಎಂದು ಆರೋಪ ಕೇಳಬೇಕಾಗಿ ಬಂದ ಬಗ್ಗೆ ನೋವಿತ್ತು‌.ಸಂಸ್ಕೃತ ಉಪನ್ಯಾಸಕಿಯಾಗಿ ನನಗೆ ಸಂಸ್ಕೃತ ಭಾಷೆಯ ಮೇಲೆ ಹಿಡಿತವಿಲ್ಲವಾದರೆ,ಪಾಠ ಮಾಡುವ ಕಲೆ ತಿಳಿದಿಲ್ಲವಾದರೆ ,ಅದಕ್ಕೆ ಆರೋಪ ಬಂದಿದ್ದರೆ ಅದನ್ನು ಮುಕ್ತ ಮನಸಿನಿಂದ ಸ್ವೀಕರಿಸುತ್ತಿದ್ದೆನೋ ಏನೋ.ಆದರೆ ಇಂಗ್ಲಿಷ್ ಚೆನ್ನಾಗಿಲ್ಲ ಎಂಬ ಟೀಕೆಯನ್ನು ಎದುರಿಸಬೇಕಾಗಿ ಬಂದ ಬಗ್ಗೆ ವಿಷಾದವಿತ್ತು‌.
ಹಾಗಾಗಿ ನಾನು ಕನ್ನಡ ಉಪನ್ಯಾಸಕ ಕೆಲಸವನ್ನು ಹುಡುಕುತ್ತಾ ಇದ್ದೆ‌.ಅಲ್ಲದೆ ಎಪಿಎಸ್ ಟ್ರಸ್ಟ್ ನ ಸಂದರ್ಶನ ಚೆನ್ನಾಗಿ ಮಾಡಿದ್ದೆ.ಹಾಗಾಗಿ ದೂರದ ಆಸೆ ಇತ್ತು ‌.ಅವರ ಉತ್ತರಕ್ಕಾಗಿ ಕಾಯುತ್ತಾ ಇದ್ದೆ.
ಜೈನ್ ಕಾಲೇಜಿನವರು ಕೆಲಸಕ್ಕೆ ಸೇರಲು ನೀಡಿದ ಒಂದು ವಾರದ ಅವಧಿ ಮುಗಿಯತ್ತಾ ಬಂದು, ಮರುದಿನ ಅಲ್ಲಿಯೇ ಸಂಸ್ಕೃತ ಉಪನ್ಯಾಸಕಿಯಾಗಿ ಸೇರುವುದೆಂದು ಆಲೋಚಿಸಿದೆ.ಅಷ್ಟರಲ್ಲಿ ಎಪಿಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ ಗೋಪಿನಾಥ್  ಪೋನ್ ಕರೆ ಮಾಡಿ ಕನ್ನಡ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ ವಿಚಾರ ತಿಳಿಸಿ ಮರುದಿನ ಬಂದು ಕೆಲಸಕ್ಕೆ ಸೇರಲು ತಿಳಿಸಿದರು‌.ಬಹಳ ಖುಷಿಯಿಂದ ಮರುದಿನ ಎಪಿಎಸ್ ಕಾಲೇಜಿಗೆ ಹೋದೆ‌.ಅಲ್ಲಿ ಮಾತಿನ ನಡುವೆ ನನಗೆ ಜೈನ್ ಕಾಲೇಜಿನಿಂದ ಸಂಸ್ಕೃತ ಉಪನ್ಯಾಸಕಿಯಾಗಿ ಸೇರಲು ನೇಮಕಾತಿ ಆದೇಶ ಬಂದ ಬಗ್ಗೆ ತಿಳಿಸಿದೆ.ಆಗ ಡಾ‌ಕೆ ಗೋಪಿನಾಥ್ ಅವರು ಜೈನ್ ಕಾಲೇಜು ಬಹಳ ಪ್ರಸಿದ್ಧ ಕಾಲೇಜು ಅಲ್ಲಿ ಒಳ್ಳೆಯ ವೇತನ ಇದೆ( ನೇಮಕಾತಿ ಆದೇಶದಲ್ಲಿ ತಿಂಗಳಿಗೆ  ಹದಿನೈದು ಸಾವಿರ ಎಂದು ತಿಳಿಸಿದ್ದರು) ನಮ್ಮ ಕಾಲೇಜಿನಲ್ಲಿ ಅಷ್ಟು ವೇತನ ಇಲ್ಲ ಎಂದು ತಿಳಿಸಿದರು‌.ಆದರೂ ನಾನು ಕನ್ನಡ ಉಪನ್ಯಾಸಕಿಯಾಗಿಯೇ ಮುಂದುವರಿಯಲು ನಿರ್ಧರಿಸಿದ್ದರಿಂದ ಕಡಿಮೆ ವೇತನಕ್ಕೆ ಅಲ್ಲಿಯೇ ಸೇರಿದೆ.
ಈ ನಡುವೆ ಎದುರು ಮನೆಯ ಮಹಿಳೆ ರಾಜೇಶ್ವರಿ ‌ಮತ್ತು ನನ್ನ ನಡುವೆ ಸ್ನೇಹ ಬೆಳೆಯಿತು ‌.ಅವರಿಗೆ ನನ್ನ ಮಗನ ವಯಸಿನ ಒಬ್ಬ ಮಗ ಮತ್ತು ಅವನಿಗಿಂತ ಮೂರು ವರ್ಷ ಚಿಕ್ಕವನಾದ ಇ‌ನ್ಬೊಬ್ಬ ಮಗ ಇದ್ದ.
ಮಾತಿನ ನಡುವೆ ಅವರು ಡಿಗ್ರಿ ಓದಿದ್ದಾರೆ ಎಂದು ತಿಳಿಯಿತು ‌.ಆಗ ನಾನು ಖಾಸಗಿಯಾಗಿ ಕಟ್ಟಿ ಎಂಎ ಓದಬಹುದಲ್ಲ ಎಂದು ಸಲಹೆ ನೀಡಿದೆ‌.ಖಾಸಗಿಯಾಗಿ ಕಟ್ಟಿದರೆ ಅರ್ಥವಾಗದೆ ಕಷ್ಟ ಆಗಬಹುದೇನೋ ಎಂಬ ಸಂಶಯ ವ್ಯಕ್ತ ಪಡಿಸಿದರು‌.ಆಗ ನಾನು "ನೀವು ಕನ್ನಡ ಎಂಎ ಗೆ ಕಟ್ಟಿ, ಅರ್ಥವಾಗದ ವಿಷಯಗಳನ್ನು ನಾನು ಹೇಳಿಕೊಡುತ್ತೇನೆ" ಎಂದು ದೈರ್ಯ ಹೇಳಿದೆ .
ಹಾಗೆ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂಎ ಗೆ ಕಟ್ಟಿದರು‌.ಹಳಗನ್ನಡ, ಭಾಷಾ ವಿಜ್ಞಾನ, ಚಂದಸ್ಸುಗಳ ಬಗ್ಗೆ ಕೇಳಲು ನಮ್ಮ ನಮ್ಮ ಮನೆಗೆ ಬರುತ್ತಾ ಇದ್ದರು‌.ಅವರ ಜೊತೆಗೆ ಕನ್ನಡ ಎಂಎ ಕಟ್ಟಿದ ಅವರ  ಕೆಲವು ಸ್ನೇಹಿತರು ಬಂದರು.ಎಲ್ಲರಿಗೂ ನಾನು ಉಚಿತವಾಗಿಯೇ ಪಾಠ ಮಾಡುತ್ತಿದ್ದೆ .ಆಗ ನಾನಿದ್ದ ಬಾಡಿಗೆ ಮನೆಯ ಓನರ್ ನೀವು ತರಗತಿಗಳನ್ನು ಬೇರೆ ಕಡೆ ಮಾಡಿ ಎಂದು ಹೇಳಿದರು.ಆಗ ರಾಜೇಶ್ವರಿ ,ಶಿವರಾಂ( ಪ್ರೊ.ವಿ ಸಿ ರಂಗಣ್ಣ ಅವರ ಮಗ) ಮೊದಲಾದವರು ಅಲ್ಲಿಗೇ ಸಮೀಪದ ಕನಕ ಕಾಲೇಜಿನಲ್ಲಿ ಒಂದು ಕೊಠಡಿಯನ್ನು ಕೇಳಿ ಜಾಗದ ವ್ಯವಸ್ಥೆ ಮಾಡಿದರು.
ಅಲ್ಲಿಂದ ಮತ್ತೆ ಸ್ವಲ್ಪ ವ್ಯವಸ್ಥಿತವಾಗಿ ಪಾಠ ಪ್ರವಚನಗಳನ್ನು ಆರಂಭಿಸಿದೆ.ಎರಡು ಮೂರು ತಿಂಗಳು ಸಂಜೆ ಹೊತ್ತು ಕನಕ ಕಾಲೇಜಿನಲ್ಲಿ ಉಚಿತ ಕನ್ನಡ ಎಂಎ ತರಗತಿಗಳು ನಡೆದವು.ಆಗ ಹಳಗನ್ನಡ ಪಾಠ ಮಾಡಲು ಎಪಿಎಸ್ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಕೆ ಗಣೇಶ್ ಅವರು   ಬಂದರು‌.ಅಂತೂ ಇಂತೂ ಒಂದು ವರ್ಷ ಕಳೆಯಿತು ‌.ತರಗತಿಗೆ ಬಂದವರೆಲ್ಲರೂ ಪರೀಕ್ಷೆ ಬರೆದರು‌. ಎಂಎ ಎರಡನೇ ವರ್ಷದ ತರಗತಿಗಳು ಕೂಡ ಹೀಗೆಯೇ ನಡೆದವು‌.ಆಗ ಜಯಶಂಕರ್ ಮೊದಲಾದ ಬೇರೆ ಉಪನ್ಯಾಸಕರು ಇಲ್ಲಿ ಕೈಜೋಡಿಸಿದರು‌. ಎಲ್ಲರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು.ಕೆಲವರು ಅಧ್ಯಯನ ‌ಮುಂದುವರಿಸಿ ಎಂಫಿಲ್ ಮಾಡಿಕೊಂಡರು‌.ಸಂಧ್ಯಾ ಉನ್ನತ ಅಧ್ಯಯನ ಮಾಡಿ ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ( ಪಿಎಚ್. ಡಿ ) ಪದವಿಯನ್ನು ಕೆಲ ತಿಂಗಳ ಹಿಂದೆ ಪಡೆದಿದ್ದಾರೆ.ಅಂದು ಬಿತ್ತಿದ ಬೆಳೆ ಈಗ ಫಸಲು ನೀಡಿದೆ.

ಇದಾದ ನಂತರ ನಾವು 2008 ರ ಆರಂಭದಲ್ಲಿಯೇ ಈಗ ನಾವಿರುವ  ಮಂಗನಹಳ್ಳಿ ಕ್ರಾಸ್ ನಲ್ಲಿರುವ ನಮ್ಮ ಸ್ವಂತ ಮನೆಗೆ ಶಿಪ್ಟ್ ಆದೆವು‌.ಹಾಗಾಗಿ ನಂತರ ನನಗೆ ಅಲ್ಲಿ ಬೇರೆಯವರಿಗೆ ಉಚಿತ ತರಗತಿಗಳನ್ನು ಮಾಡಲು ಸಾಧ್ಯವಾಗಲಿಲ್ಲ ‌.ಆದರೂ ಇಲ್ಲಿ ಸುತ್ತು ಮುತ್ತಲಿನ ಎಂಎ ಪದವೀಧರರಿಗೆ ಅನೇಕರಿಗೆ ಎನ್ ಇ ಟಿ ಗೆ ಉಚಿತವಾಗಿ ಕೋಚಿಂಗ್ ನೀಡಿದ್ದೆ.ಕೆಲವರು  ಯುಜಿಸಿ ನಡೆಸುವ ಎನ್  ಇ ಟಿ ( National eligibility for lecturer ship)ಹಾಗೂ ರಾಜ್ಯ ನಡೆಸಯವ K SET ನಲ್ಲಿ ಉತ್ತೀರ್ಣರಾಗಿದ್ದಾರೆ ಕೂಡ
ನಂತರ ನನಗೆ ಸರ್ಕಾರಿ ಉದ್ಯೋಗ ದೊರೆತು ಬೆಳ್ಳಾರೆ ಸರ್ಕಾರಿ ಪಿಯು ಕಾಲೇಜಿಗೆ ಕನ್ನಡ ಉಪನ್ಯಾಸಕಿಯಾಗಿ ಸೇರಿದೆ‌.ಅಲ್ಲಿ ‌ಮತ್ತೆ ಶ್ಯಾಮಲಾ,ರಾಜೇಶ್, ಕರಣ್ ಸೇರಿದಂತೆ  ಖಾಸಗಿಯಾಗಿ ಕನ್ನಡ ಎಂಎ ಗೆ ಕಟ್ಟಿದ್ದ ಅನೇಕರಿಗೆ ಉಚಿತವಾಗಿ ಪಾಠ ಮಾಡಿದೆ‌ .ಜೊತೆಗೆ ನಾನು ಭೂತಾರಾಧನೆ ಕುರಿತು ಕ್ಷೇತ್ರ ಕಾರ್ಯಕ್ಕೆ ಹೋಗುವಾಗ  ನನ್ನ ವಿದ್ಯಾರ್ಥಿಗಳನ್ನು ಜೊತೆಗೆ ಕರೆದೊಯ್ದು ಅವರಿಗೂ ಅಭ್ಯಾಸ ಮಾಡಿಸಿದೆ‌.
ಎರಡು ದಿನ ಹಿಂದೆ ಕನಕ ಕಾಲೇಜಿನಲ್ಲಿ ನಡೆದ ತರಗತಿಗಳ ಸಮರೋಪದ ದಿನದ ಪೋಟೋ ಅನ್ನು ಅಲ್ಲಿ ಪಾಠ ಕೇಳಲು ಬಂದಿದ್ದ ವೆಂಕಟೇಶ್ ಅವರು ಜ್ಞಾನ ದಾಸೋಹ ಗುಂಪಿನಲ್ಲಿ ಹಾಕಿದ್ದರು.ಅದನ್ನು ನೋಡುತ್ತಲೇ ನೆನಪುಗಳು ಗರಿಬಿಚ್ಚಿದವು.ಹಾಗಾಗಿ ಮಧುರ ಕ್ಷಣಗಳು ಹಾಗೆಯೇ ದಾಖಲಾಗಲಿ ಎಂದು ಬರೆದಿರುವೆ .
 ನಾನು ಕೂಡ ಆಗಷ್ಟೇ ಕನ್ನಡ ಎಂಎ ಮುಗಿಸಿದ್ದು  ಎಂಎ ಗೆ ಪಾಠ ಮಾಡುವ ಅರ್ಹತೆ ನನಗಿದೆ ಎಂದು ಭಾವಿಸಿರಲಿಲ್ಲ ‌.ರಾಜೇಶ್ವರಿ ಎಂಎ ಗೆ ಕಟ್ಟಲು ತುಸು ಹೆದರಿದಾಗ ದೊಡ್ಡದಾಗಿ ನಾನು ಹೇಳಿಕೊಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದೆ ಅಷ್ಟೇ. ಆದರೆ ‌ಮುಂದೆ ನಾನು ಕನ್ನಡ ಎಂಎ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಬೇಕಾಗಬಹುದು ಎಂಬ ಊಹೆ ಕೂಡ ನನಗಿರಲಿಲ್ಲ ‌.ಪ್ರಮೋದ್ ಶಿಗ್ಗಾಂವಿ ಯಂತಹ ಪ್ರಸಿದ್ಧ ನಾಟಕ ನಿರ್ದೇಶಕರು,ಪ್ರೇಂ್ ಕುಮಾರ್,ಶಿವರಾಂ್ ,ಶಂಕರನಾರಾಯಣ ಮೊದಲಾದ ಹಿರಿಯರು ನನಗೆ ಈ ರೀತಿಯಾಗಿ ವಿದ್ಯಾರ್ಥಿಗಾಗಿ ಸಿಗುತ್ತಾರೆ ಎಂದುಕೊಂಡಿರಲಿಲ್ಲ .ಆಕಸ್ಮಿಕವಾಗಿ ಎಲ್ಲವೂ ನಡೆದು ಹೋಯಿತು ‌.ನನಗೇನು ಪಾಠ ಮಾಡಲು ಸೋಮಾರಿತನವಿರಲಿಲ್ಲ‌.ನಾನು ಆಸಕ್ತಿಯಿಂದ ಪಾಠ ಮಾಡಿದ್ದೆ‌.ಅವರಿಗೆ ಅರ್ಥ ಆಗಿದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಅವರೆಲ್ಲರೂ ನಿಯಮಿತವಾಗಿ ತರಗತಿಗೆ ಬಂದದ್ದಲ್ಲದೆ ಪರಿಶ್ರಮ ಪಟ್ಟು ಓದಿ ಪಾಠ ಮಾಡಿದ ಬಗ್ಗೆ ಧನ್ಯತಾ ಭಾವ ಮೂಡುವಂತೆ ಮಾಡಿದರು ‌.ಮತ್ತು ಅವರಿಗೆ ಪಾಠ ಮಾಡುವುದಕ್ಕಾಗಿ ನಾನು ಅನೇಕ ಪುಸ್ತಕಗಳನ್ನು ಓದಿದ್ದು ನನಗೂ ಒಂಚೂರು ಜ್ಞಾನ ಗಳಿಸಿಕೊಳ್ಳು ಸಹಾಯವಾಯಿತು. ಮತ್ತು  ಈ ಅನುಭವ ಎಂದಾದರೂ ನಾನು ಯುನಿವರ್ಸಿಟಿ ಪ್ರೊಫೆಸರ್ ಹುದ್ದೆಗೆ ಆಯ್ಕೆಯಾದರೆ ಸಮರ್ಥವಾಗಿ ಪಾಠ ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ನೀಡಿತು .ಕಾಲದ ಅಟವೇ ವಿಚಿತ್ರ ಅಲ್ಲವೇ ? ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ

No comments:

Post a Comment