Friday 18 May 2018

ದೊಡ್ಡವರ ದಾರಿ 58 ಮಾತೃ ಹೃದಯದ ಕಲ್ಲಡ್ಕ ಡಾ.ಕಮಲ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ





ಕಳೆದ ಎರಡು ವರ್ಷಗಳಲ್ಲಿ ಕಲ್ಲಡ್ಕ ಕಮಲಕ್ಕ ಅವರನ್ನು ಭೇಟಿ ಮಾಡಿ ಅವರೊಂದಿಗೆ ಒಂದು ಫೋಟೋ ತೆಗೆಸಿಕೊಂಡು ಬ್ಲಾಗ್ ನಲ್ಲಿ ಅವರ ಮಾತೃ ಹೃದಯದ ಬಗ್ಗೆ ಒಂದು ಬರಹಬರೆಯಬೇಕೆಂದುಕೊಂಡಿದ್ದೆ‌
ಅದಕ್ಕಾಗಿ ಎರಡು ಮೂರು ಭಾರಿ ಊರ ಕಡೆ ಹೋದಾಗ ಕಲ್ಲಡ್ಕಕ್ಕೆ ಹೋದೆನಾದರೂ ಅವರನ್ನು ಭೇಟಿಯಾಗಲು ಆಗಲಿಲ್ಲ.
ಕಳೆದ ತಿಂಗಳಿನಲ್ಲಿ ಕೈರಂಗಳ ಗೋಶಾಲೆಯಿಂದ ಗೋವುಗಳನ್ನು ತಲವಾರು ತೋರಿಸಿ ಅಪಹರಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಟಿಜಿ ರಾಜಾರಾಮಭಟ್ಟರು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.ಅವರಿಗೆ ಬೆಂಬಲ‌ ಸೂಚಕವಾಗಿ  ನಾನು ಕೂಡ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿದ್ದೆ‌.ಆ ಸಂದರ್ಭದಲ್ಲಿ ಅಲ್ಲಿಗೆ ಪ್ರಭಾಕರಣ್ಣ ಮತ್ತು ಕಮಲಕ್ಕ ( ಕಲ್ಲಡ್ಕ ಡಾ.ಪ್ರಭಾಕರ ಭಟ್ ಮತ್ತು ಡಾ.ಕಮಲ ಭಟ್)ಬಂದಿದ್ದರು.ಆಗ ಕಮಲಕ್ಕ ಜೊತೆಗೆ ಒಂದು ಫೋಟೋ ತೆಗೆಸಿಕೊಂಡೆನಾದರೂ ಆರೋಗ್ಯ ಸಮಸ್ಯೆಯಿಂದಾಗಿ ತಕ್ಷಣವೇ ಲೇಖನ ಬರೆಯಲಾಗಲಿಲ್ಲ.
ಅದು 1996 ಜೂನ್ ತಿಂಗಳು. ಆಗಷ್ಟೇ ನಾನು ಸಂಸ್ಕೃತ ಎಂಎ ದ್ವಿತೀಯ ವರ್ಷದ ಅಂರಿಮ ಪರೀಕ್ಷೆ ಬರೆದು ಉದ್ಯೋಗದ ಹುಡುಕಾಟದಲ್ಲಿ ಇದ್ದೆ.ಆಗ ಸಂಸ್ಕೃತ ಭಾರತಿಯ ಕಾರ್ಯಕರ್ತೆ ಯಶೋದಾ ಭಗಿನಿ ನನ್ನನ್ನು ಕಲ್ಲಡ್ಕಕ್ಕೆ ಕರೆದುಕೊಂಡು ಹೋಗಿ ಪ್ರಭಾಕರಣ್ಣ ಅವರಿಗೆ ಪರಿಚಯಿಸಿದರು‌.ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಒಂದು ಸಂಸ್ಕೃತ ಶಿಕ್ಷಕಿ ಕೆಲಸ ಖಾಲಿ ಇತ್ತು.ಪಾಠ ಮಾಡಿ ಏನೇನೂ ಅನುಭವ ಇರದ ನನ್ನ ಮೇಲೆ ನಂಬಿಕೆ ಇಟ್ಟು ಆ ಕೆಲಸವನ್ನು ನನಗೆ ನೀಡಿದರು.
ನಾನು ಕೂಡ ಅವರ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.ಸಂಸ್ಕೃತ ಪಠ್ಯದ ಜೊತೆಗೆ ಶಾಲೆಯ ಎಲ್ಲ ಮಕ್ಕಳಿಗೆ ಸಂಸ್ಕೃತ ಸಂಭಾಷಣಾ ಶಿಬಿರದ ಮಾದರಿಯಲ್ಲಿ ಪಾಠ ಮಾಡಿ ಎಲ್ಲರಿಗೂ ಸಂಸ್ಕೃತ ಮಾತನಾಡಲು ಕಲಿಸಿದೆ‌.ಮಕ್ಕಳು ಕೂಡ ಆಸಕ್ತಿಯಿಂದ ಕಲಿತರು‌
ನಾನು ಆ ಶಾಲೆಯಲ್ಲಿ ನಾಲ್ಕು ಐದು ತಿಂಗಳು ಮಾತ್ರ ಕೆಲಸ ಮಾಡಿದ್ದೆ‌.ನನಗೆ ದ್ವಿತೀಯ ವಿಜ್ಞಾನ ಪದವಿ ಓದುತ್ತಿರುವಾಗಲೇ ಮದುವೆ ಆಗಿತ್ತು. ಕಲ್ಲಡ್ಕ ಶಾಲೆಯಲ್ಲಿ ಕೆಲಸ ಮಾಡುತ್ತಿರುವಾಗ ಆರೋಗ್ಯ ಹಾಳಾಗಿ ಕಲ್ಲಡ್ಕ ಡಾಕ್ಟರ್ ಪ್ರಭಾಕರ ಭಟ್ ಅವರಲ್ಲಿ ಚಿಕಿತ್ಸೆ ಗಾಗಿ ಹೋದೆ ಆಗ ಅವರು ನಾನು ಗರ್ಭಿಣಿಯಾಗಿರುವ ಬಗ್ಗೆ ತಿಳಿಸಿದರು ನಂತರ ನಾನು  ಮಂಗಳೂರಿನ ಭಟ್ಸ್ ನರ್ಸಿಂಗ್ ಹೋಮಿನ ಖ್ಯಾತ ಗೈನಕಾಲಜಿಸ್ಟ್  ಡಾ‌.ಮಾಲತಿ ಭಟ್ ಅವರಲ್ಲಿ ಹೋಗಿ ಚಿಕಿತ್ಸೆ ಪಡೆದೆ.
ಆ ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ಪ್ರಭಾಕರಣ್ಣ ಅವರನ್ನು ಭೇಟಿ ಮಾಡಲು ಒಂದು ಶನಿವಾರ ಮಧ್ಯಾಹ್ನ ಕ್ಲಾಸು ಮುಗಿಸಿ ಅವರ ಮನೆಗೆ ಹೋದೆ .ಆಗ ಕಮಲಕ್ಕ ನನ್ನನ್ನು ಊಟ ಮಾಡಿಕೊಂಡು ಹೋಗುವಂತೆ ಹೇಳಿದರು.ನಾನು ಗರ್ಭಿಣಿ ಎಂದು ತಿಳಿದಿದ್ದ ಅವರು ನನ್ನ ಆರೋಗ್ಯ ವಿಚಾರಿಸಿ ಪಾಯಸದ ಊಟ ಹಾಕಿ ಕಳುಹಿಸಿದ್ದರು.
ನಂತರ ನನಗೆ ಮಂಗಳೂರಿನಿಂದ ಕಲ್ಲಡ್ಕಕ್ಕೆ ಓಡಾಡುವುದು ಕಷ್ಟ ಆಯಿತು. ಅದೃಷ್ಟವಶಾತ್ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆ ಖಾಲಿಯಾಗಿ ನನಗೆ ಆ ಕೆಲಸ ದೊರೆಯಿತು.
ಮತ್ತೂ ವರ್ಷಗಳು ಉರುಳಿದವು‌. ಪ್ರಸಾದ್ ಅವರಿಗೆ ಬೆಂಗಳೂರರಿನಲ್ಲಿ ಕೆಲಸ ದೊರೆತ ಕಾರಣ ಮಂಗಳೂರುಬಿಟ್ಟು ಬೆಂಗಳೂರಿಗೆ ಬಂದು ಸೇರಿದೆವು.ಅಲ್ಲಿ ಇಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ ನಂತರ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆಯಾಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಹುದ್ದೆ ದೊರೆಯಿತು ‌.( ಈ ನಡುವೆ ನಾನು ಕನ್ನಡ ಎಂಎ ಮತ್ತು ಹಿಂದಿ ಎಂಎ ಪದವಿಗಳನ್ನು ಖಾಸಗಿಯಾಗಿ ಓದಿ ಪಡೆದಿದ್ದ್ದೆ.ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ ಎಂಫಿಲ್ ಪದವಿಯನ್ನೂ ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳದ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ( ಪಿಎಚ್ ಡಿ) ಪದವಿಯನ್ನು ಗಳಿಸಿಕೊಂಡಿದ್ದೆ)
ತುಳು ಸಂಸ್ಕೃತಿ ಬಗ್ಗೆ ವಿಪರೀತ ಎನಿಸುವಷ್ಟು ಮೋಹ ಬೆಳೆದಿತ್ತು. ಹಾಗಾಗಿ ತುಳು ಪಾಡ್ದನಗಳನ್ನು ಸಂಗ್ರಹಿಸಲು ಹಾಗೂ ,ಭೂತಾರಾಧನೆ ಕುರಿತು ಹೆಚ್ಚಿನ ಅಧ್ಯಯನ ಮಾಡುವ ಸಲುವಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಸರ್ಕಾರಿ ಕಾಲೇಜನ್ನು ಆಯ್ಕೆ ಮಾಡಿದೆ‌.ಅಲ್ಲಿ ಎರಡು ಮೂರು ವರ್ಷಗಳ ಕಾಲ ಅಧ್ಯಾಪನದೊಂದಿಗೆ ತುಳು ಸಂಸ್ಕೃತಿ ಕುರಿತಾದ ಅಧ್ಯಯನ ವನ್ನು ಮುಂದುವರಿಸಿದೆ‌.
ಅದರ ಪರಿಣಾಮವಾಗಿ ಹತ್ತು ಪುಸ್ತಕಗಳನ್ನು ಬರೆದೆ‌( ಈಗ ಇಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ)
ಇವುಗಳಲ್ಲಿ 2012 ರ ಮೇ ತಿಂಗಳಿನಲ್ಲಿ ತುಳು ನಾಡಿನ ಅಪೂರ್ವ ಭೂತಗಳು ಮತ್ತು ಬೆಳಕಿನೆಡೆಗೆ ಎಂಬ ಎರಡು ಪುಸ್ತಕಗಳ ಬಿಡುಗಡೆಗೆ ತುಳು ಅಕಾಡೆಮಿಯ ಸಹಕಾರ ಕೇಳಿದೆ‌.ಆಗ ಅಲ್ಲಿ ತಿಂಗಳಿಗೊಂದು ತುಳು ಚಾವಡಿ ಯ ಕಾರ್ಯಕ್ರಮ ಮಾಡುತ್ತಿದ್ದು ಆ ತಿಂಗಳಿನ ಕಾರ್ಯಕ್ರಮದ ಜೊತೆಗೆ ನನ್ನ ಪುಸ್ತಕಗಳನ್ನು ಬಿಡುಗಡೆ ಮಾಡಲು ಒಪ್ಪಿದರು.ಆಗ ನಾನು ಕಲ್ಲಡ್ಕ ಕಮಲಕ್ಕ ಅವರನ್ನು ಸಂಪರ್ಕಿಸಿ ನನ್ನ ಪುಸ್ತಕಗಳನ್ನು ಬಿಡುಗಡೆ ಮಾಡಬೇಕೆಂದು ವಿನಂತಿಸಿದೆ.
ಪುಸ್ತಕ ಬಿಡುಗಡೆಯ ದಿನ  ಹತ್ತಿರ ಬಂತು.  ತುಳು ಅಕಾಡೆಮಿಗೆ ಫೋನ್ ಮಾಡಿದಾಗ ಪುಸ್ತಕ ಪರಿಚಯಕ್ಕೆ ನೀವೇ ಯಾರಿಗಾದರೂ ಹೇಳಿ ಎಂದು ತಿಳಿಸಿದರು‌ಹಾಗಾಗಿ ನಾನು ಎಸ್ ಡಿಎಂ ಮಂಗಳ ಜ್ಯೋತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ನನ್ನ ತಮ್ಮ ಗಣೇಶ್ ಭಟ್ ಗೆ ತಿಳಿಸಿದೆ.ಪುಸ್ತಕ ಬಿಡುಗಡೆಯ ಹಿಂದಿನ  ದಿನ ಫೋನ್ ಮಾಡಿದ ಕಮಲಕ್ಕ ನನಗೆ ಪುಸ್ತಕಗಳ ಬಗ್ಗೆ ಮಾಹಿತಿ ಇಲ್ಲ ೇನು ಮಾತಾಡಲಿ ಎಂದು ಹೇಳಿದಾಗ ಪುಸ್ತಕ ಪರಿಚಯ ವನ್ನು ನನ್ನ ತಮ್ಮ ಗಣೇಶ್ ಭಟ್ ಮಾಡಿಕೊಡುತ್ತಾರೆ ಎಂದು ತಿಳಿಸಿದೆ. 
ಪುಸ್ತಕ ಬಿಡುಗಡೆಯ ದಿನ ಒಂದು ಗಂಟೆ ಮೊದಲೇ ತುಳು ಅಕಾಡೆಮಿ ಗೆ ಬಂದೆ
 ತುಳು ಅಕಾಡೆಮಿಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪುಸ್ತಕ ಬಿಡುಗಡೆಯ ಬಗ್ಗೆ ಉಲ್ಲೇಖ ಇರಲಿಲ್ಲ ‌.ವಿಚಾರಿಸಿದಾಗ ತುಳು ಚಾವಡಿ ಕಾರ್ಯಕ್ರಮ ಮುಗಿದ ಮೇಲೆ ಕೊನೆಯಲ್ಲಿ ಐದು ನಿಮಿಷ ಸಮಯ ಕೊಡುತ್ತೇವೆ ಎಂದು ತಿಳಿಸಿದರು.ತುಳು ಭಾಷೆ ಸಂಸ್ಕೃತಿಯ ಅಭಿವೃದ್ಧಿ ಗಾಗಿಯೇ ಇರುವ ತುಳು ಅಕಾಡೆಮಿ ನನ್ನ ತುಳು ಸಂಸ್ಕೃತಿ ಕುರಿತಾದ ಎರಡು ಪುಸ್ತಕಗಳ ಬಿಡುಗಡೆ ಬಗ್ಗೆ ಅಷ್ಟು ನಿರ್ಲಕ್ಷ್ಯ ತೋರಬಹುದೆಂಬ ಊಹೆ ಕೂಡ ನನಗಿರಲಿಲ್ಲ .
ಏನೂ ಮಾಡುವ ಹಾಗಿರಲಿಲ್ಲ.ಸುಮ್ಮನಾದೆ.ಕಮಲಕ್ಕ ಬಂದಾಗ ಪುಸ್ತಕ ಬಿಡುಗಡೆ ಕೊನೆಗೆ ಇದೆ ಅದೂ ಐದು ನಿಮಿಷ ಮಾತ್ರ ಸಮಯ ಎಂದು ಹೇಗೆ ಹೇಳಲಿ ? ಆಹ್ವಾನಿಸಿ ಅವಮಾನಿಸಿದಂತೆ ಆಯಿತಲ್ಲ ಎಂದು ತುಂಬಾ ವ್ಯಥೆ ಆಯಿತು ‌
ಸಮಯಕ್ಕೆ ಸರಿಯಾಗಿ ಕಮಲಕ್ಕ ತುಳು ಅಕಾಡೆಮಿಗೆ ಬಂದರು.ಅವರು ಬಂದಾಗ ತುಳು ಅಕಾಡೆಮಿ ಅಧ್ಯಕ್ಷರಿಗೆ ಆಶ್ಚರ್ಯ ವಾಯಿತು.ಅವರನ್ನು ಪುಸ್ತಕ ಬಿಡುಗಡೆ ಮಾಡಲು ನಾನು ಆಹ್ವಾನಿಸಿರುವ ವಿಚಾರ ಅವರಿಗೆ ತಿಳಿಯಿತು.
ಕಮಲಕ್ಕ ಬಂದದ್ದೇ ಬಂದದ್ದು‌.ಪುಸ್ತಕ ಬಿಡುಗಡೆಗೆ ತುಂಬಾ ಮಹತ್ವ ಬಂತು.ಕಾರ್ಯಕ್ರಮದ ಆರಂಭದಲ್ಲೇ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಆಯೋಜನೆ ಆಯಿತು. ಕಮಲಕ್ಕ ಪುಸ್ತಕ ಬಿಡುಗಡೆ ಮಾಡಿ ನನಗೆ ಶುಭ ಹಾರೈಸಿದರು‌.
ನಂತರ ಕಾಫಿ ತಿಂಡಿಗಾಗಿ ತುಳು ಅಕಾಡೆಮಿ ಅಧ್ಯಕ್ಷರು ಅವರನ್ನು ತಮ್ಮ ಕೊಠಡಿಗೆ ಕರೆದರು.ಅಲ್ಲೇ ಇದ್ದ ನನ್ನನ್ನು ಮತ್ತು ಮಗನನ್ನು ಕರೆದಿರಲಿಲ್ಲ‌.ನಮಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ.ಆಗ ಕಮಲಕ್ಕ ಅವರೇ ನನ್ನನ್ನು ಮತ್ತು ಮಗನನ್ನು ಜೊತೆಗೆ ಕರೆದರು. ಅವರ ಆತ್ಮೀಯತೆಗೆ ಸೋತು ಅವರೊಂದಿಗೆ ಅಧ್ಯಕ್ಷರ ಕೊಠಡಿಗೆ ಅವರ ಜೊತೆ ಹೋಗಿ ಅವರೊಂದಿಗೆ ಕಾಫಿ ತಿಂಡಿ ಸೇವಿಸಿದೆವು‌.
ಕಮಲಕ್ಕ ತುಂಬಾ ದೊಡ್ಡ ವ್ಯಕ್ತಿ. ತುಂಬಾ ಬ್ಯುಸಿ ಇರ್ತಾರೆ‌.ಆದರೂ ಕೂಡ ನಾನು ಪುಸ್ತಕ ಬಿಡುಗಡೆಗಾಗಿ ಆಹ್ವಾನಿಸಿದಾಗ ತುಂಬಾ ಪ್ರೀತಿಯಿಂದ ಒಪ್ಪಿದ್ದರು‌.ಆಹ್ವಾನ ಪತ್ರಿಕೆಯಲ್ಲಿ ಪುಸ್ತಕ ಬಿಡುಗಡೆಯ ವಿಚಾರವಾಗಲೀ ,ಅವರ ಹೆಸರಾಗಲೀ ಇರಲಿಲ್ಲ ಮತ್ತು ಬಿಡುಗಡೆ ಮಾಡುವಂತೆ ತುಳು ಅಕಾಡೆಮಿ ಅವರನ್ನು ಆಹ್ವಾನಿಸಿರಲಿಲ್ಲ.ಆದರೂ ಕೂಡ ಯಃಕಶ್ಚಿದ್ ಆಗಿರುವ ನನ್ನ ಮೌಖಿಕ ಆಹ್ವಾನವನ್ನು ಒಪ್ಪಿ ಪುಸ್ತಕ ಬಿಡುಗಡೆ ತುಂಬಾ ಗೌರವದಿಂದ ಆಗುವಂತೆ ಮಾಡಿದ ಅವರ  ಸರಳತೆ,ಆತ್ಮಾಮೀಯತೆ ಹಾಗೂ ಮಾತೃಹೃದಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಕಳೆದ ತಿಂಗಳು ಕೈರಂಗಳದಲ್ಲಿ ಸಿಕ್ಕಾಗ ತುಂಬಾ ಪ್ರೀತಿಯಿಂದ ಮಾತನಾಡಿದರು.ನಾನು ಅವರ ಜೊತೆಯಲ್ಲಿ ಒಂದು ಫೋಟೋ ತೆಗೆದುಕೊಂಡು ಅವರ ಬಗ್ಗೆ ದೊಡ್ಡವರ ದಾರಿ ಎಂದು ಬ್ಲಾಗ್ ಅಂಕಣದಲ್ಲಿ ಲೇಖನ ಬರೆಯುತ್ತೇನೆ ಎಮದಾಗ ನನ್ನ ಬಗ್ಗೆ ಬರೆಯಲು ಏನಿದೆ ? ನಾನು ದೊಡ್ಡವಳಲ್ಲ ,ವಯಸ್ಸು ಮಾತ್ರ ಸ್ವಲ್ಪ ಆಗಿದೆ ಅಷ್ಟೇ ಎಂದು ಹೇಳಿ ಅತ್ಯಂತ ಸಹಜವಾಗಿ ಹೇಳಿದರು.ತುಂಬಾ ಖ್ಯಾತರಾಗಿರುವ  ಅವರ ಮಾತು ನಡೆ ನುಡಿಗಳಲ್ಲಿ ಒಂದಿನಿತು ಕೃತ್ರಿಮತೆ ಇಲ್ಲ .ಅವರ  ಸರಳ ಮಾತಿನಲ್ಲೇ ಅವರ ದೊಡ್ಡತನ ಕಾಣುತ್ತದೆ ಅಲ್ಲವೇ ?
 ಡಾ‌.ಲಕ್ಷ್ಮೀ ಜಿ ಪ್ರಸಾದ

No comments:

Post a Comment