Sunday 14 October 2018

ಬದುಕ ಬಂಡಿಯಲಿ- ಎರಡನೇ ಕೆಟ್ಟ ಅನುಭವ - ಡಾ.ಲಕ್ಷ್ಮೀ ಜಿ ಪ್ರಸಾದ

ನನ್ನ ಎರಡನೇಯ ಕೆಟ್ಟ ಅನುಭವ..
ಕೆಟ್ಟ ಅನುಭವವೆಂದರೆ ಮೈ ಸವರಿ ಚಿವುಟಬೇಕು ಎಂದೇನೂ ಇಲ್ಲ!
ನಾನು ಹತ್ತನೇ ತರಗತಿ ಉತ್ತೀರ್ಣಳಾಗಿ ಪಿಯುಸಿಗೆ ಮಂಗಳೂರಿನ ಸರ್ಕಾರಿ ಕಾಲೇಜಿಗೆ( ಈಗುನ ವಿಶ್ವ ವಿದ್ಯಾಲಯ ಕಾಲೇಜು,ಆಗ ಅಲ್ಲಿ ಪಿಯುಸಿ ಮತ್ತು ಡಿಗ್ರಿ ಎರಡೂ ಒಟ್ಟಿಗೆ ಇತ್ತು) ಸೇರಿದೆ.ಇಲ್ಲಿ ಒಂದು ಸುಸಜ್ಜಿತವಾಗ ಸಭಾಂಗಣ ಇದೆ‌.ಮಂಗಳೂರಿಗೆ ರವೀಂದ್ರನಾಥ ಟಾಗೋರ್ ಬಂದಾಗ ಇಲ್ಲಿ ಉಪನ್ಯಾಸ ನೀಡಿದ್ದರಂತೆ.ಅದರ ನೆನಪಿಗಾಗಿ ಆ ಸಭಾಂಗಣಕ್ಕೆ ರವೀಂದ್ರ ಕಲಾ ಭವನ ಎಂದು ಹೆಸರಿತ್ತು ‌.ಇಲ್ಲಿ ಸದಾ ಸಾಂಸ್ಕೃತಿಕ  ಕಾರ್ಯಕ್ರಮ  ಹಾಗೂ ವಿದ್ವಾಂಸರ ಉಪನ್ಯಾಸ ಕಾರ್ಯಕ್ರಮಗಳು  ಆಗುತ್ತಾ ಇತ್ತು.
ನನಗೆ ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ಜೀವ.ಜೊತೆಗೆ ವಿದ್ವಾಂಸರ ಮಾತುಗಳನ್ನು ಕೇಳಲು ಕೂಡ ತುಂಬಾ ಆಸಕ್ತಿ ಇತ್ತು. ಆದರೆ ಈ ಕಾಲೇಜಿನಲ್ಲಿ ಹುಡುಗಿಯರಿಗೆ ಯಾವುದೇ ಕಾರ್ಯಕ್ರಮವನ್ನು  ನೋಡುವುದು ಅಸಾಧ್ಯದ ವಿಚಾರವಾಗಿತ್ತು.
ಕಾರ್ಯಕ್ರಮ ಶುರು ಆಗುತ್ತಲೇ ಪುಂಡು ಹುಡುಗರ ಸಮೂಹ ಹುಡುಗಿಯರನ್ನು ಕಿಚಾಯಿಸಲು ಶುರು ಮಾಡುತ್ತಿದ್ದರು‌.ಏನೆನೋ ಕೆಟ್ಟದಾಗಿ ಬರೆದು ರಾಕೆಟ್ ಮಾಡಿ ಬಿಸಾಡುತ್ತಿದ್ದರು.ಇದು ಹುಡುಗಿಯರ ತಲೆಗೆ ಬಂದು ಬೀಳುವುದನ್ನು ನೋಡಿ ನಗಾಡಿ ಗಲಾಟೆ ಮಾಡುತ್ತಿದ್ದರು. ಒಂದು ಸಲ ಅಮೃತ ಸೋಮೇಶ್ವರರ ಉಪನ್ಯಾಸ ಕಾರ್ಯಕ್ರಮ ಇತ್ತು .ನಾನು ಅವರ ಮಾತುಗಳನ್ನು ಕೇಳುವ ಸಲುವಾಗಿ ಮುಂದೆ ಹೋಗಿ ಕುಳಿತಿದ್ದೆ .ಅವರ ಮಾತುಗಳನ್ನು ತನ್ಮಯತೆಯಿಂದ ಕೇಳುತ್ತಿರುವಾ ರಾಕೆಟ್ ಒಂದು ನನ್ನ ತಲೆ ಮೇಲೆ ಬಂದು ಬಿತ್ತು.ನನಗೇನಾದರೂ ಈಶ್ವರನಂತೆ ಮೂರನೆಯ ಉರಿಗಣ್ಡು ಇದ್ದರೆ ಅದನ್ನು ತೆರೆದು ಆ ಪುಂಡು ಹುಡುಗರನ್ನು ಸುಟ್ಟು ಬಿಡುತ್ತಿದ್ದೆ‌.ಆದರೇನು ಮಾಡಲಿ ಆ ಶಕ್ತಿ ನನಗಿರಲಿಲ್ಲ,ಅಸಹಾಯಕತೆಯಿಂದ ಅವಮಾನದಿಂದ  ಕಣ್ಣಲ್ಲಿ ನೀರು ತುಂಬಿ ಬರಲು ಎದ್ದು ಸಭಾಂಗಣದಿಂದ ಹೊರಬಂದೆ.
ಆಗೆಲ್ಲಾ  ಇವನ್ನು ನಿಯಂತ್ರಿಸದ ಅಲ್ಲಿನ ಉಪನ್ಯಾಸಕರ ಮೇಲೆ ನನಗೆ ತುಂಬಾ ಸಿಟ್ಟು ಬರುತ್ತಿತ್ತು. ಆಗಲೇ ನಿರ್ಧರಿಸಿ ಬಿಟ್ಟಿದ್ದೆ‌.ನಾನು‌ ಮುಂದೆ ಉಪನ್ಯಾಸಕಿಯಾದರೆ ನನ್ನ ವಿದ್ಯಾರ್ಥಿನಿಯರಿಗೆ ಈ ಕಿರುಕುಳ ಆಗದಂತೆ ತಡೆಯಬೇಕೆಂದು.ಇದಕ್ಕೆ ಬಹಳ ಸರಳ ಉಪಾಯವಿದೆ.ಉಪನ್ಯಾಸಕರು ಅಲ್ಲಲ್ಲಿ ವಿದ್ಯಾರ್ಥಿಗಳ ನಡುವೆ ಕುಳಿತರಾಯಿತು.
ನಾನು ಮುಂದೆ ಶ್ರೀ ರಾಮ ಪ್ರಾಥಮಿಕ ಶಾಲೆ, ಚಿನ್ಮಯ ಪ್ರೌಢಶಾಲೆ, ಸಂತ ಅಲೋಶಿಯಸ್ ಕಾಲೇಜುಗಳಲ್ಲಿ ಕೆಲಸ ಮಾಡಿದೆ‌.ಇಲ್ಲೆಲ್ಲ ತುಂಬಾ ಶಿಸ್ತು ಇತ್ತು.ಹಾಗಾಗಿ ಕಾರ್ಯಕ್ರಮ ನೋಡಲು ಹುಡುಗಿಯರಿಗಾಗಲೀ ಬೇರೆಯವರಿಗಾಗಲೀ ಯಾವುದೇ ಸಮಸ್ಯೆ ಇರಲಿಲ್ಲ.
ನಂತರ ಪ್ರಸಾದರಿಗೆ ಬೆಂಗಳೂರಿನಲ್ಲಿ ಕೆಲಸವಾದ ಕಾರಣ ನಾವು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದೆವು
ಇಲ್ಲಿ ಎನ್ ಆರ್ ಕಾಲೊನಿಯಲ್ಲಿ ಇರುವ ಅನುದಾನಿತ ಕಾಲೇಜೊಂದರಲ್ಲಿ ಅನುದಾನ ರಹಿತ ಉಪನ್ಯಾಸಕಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿದೆ‌.ಇಲ್ಲಿ ಮತ್ತೆ  ಆಪಾ ಪೋಲಿ ಹುಡುಗರು ಅಲ್ಲಿನಷ್ಟು ಅಲ್ಲದಿದ್ದರೂ  ಹುಡುಗಿಯರಿಗೆ ಕಾಟ ಕೊಡುತ್ತಿದ್ದರು .ಇದನ್ನು ನಿಲ್ಲಿಸಲು ನಾನು ಶಕ್ತಿ ಮೀರಿ ಯತ್ನ ಮಾಡಿದೆ ಜೊತೆಗೆ ಸಹೋದ್ಯೋಗಿ ರೇವತಿ ಕೂಡ ಕೈಜೋಡಿಸಿದ್ದರು.ಇಲ್ಲಿ ಸುಮಾರಾಗಿ ನಿಯಂತ್ರಣಕ್ಕೆ ತಂದಿದ್ದೆವು.ನಂತರ ಸರ್ಕಾರಿ ಉದ್ಯೋಗ ದೊರೆತು ಬೆಳ್ಲಾರೆಗೆ ಹೋದೆ.ಇಲ್ಲಿ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ ಮತ್ತೆ ನೆಲಮಂಗಲಕ್ಕೆ ಬಂದಾಗ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಇತ್ತು .ಇಲ್ಲಿ ಕೂಡ ವಿದ್ಯಾರ್ಥಿಗಳ ನಡುವೆ ಕುಳಿತು ಹುಡುಗರ ಪುಂಡಾಟಿಕೆಯನ್ನು ನಿಯಂತ್ರಣಕ್ಕೆ ತಂದೆವು

No comments:

Post a Comment