Sunday 14 April 2019

ನನ್ನೊಳಗೂ ಒಂದು ಆತ್ಮವಿದೆ

ಮೊದಲ ನೆನಪು- 1
ಹೊಟ್ಟೆ ಕಿಚ್ಚು ಪ್ರಾಣಿಗಳ ಸಹಜ ಗುಣವೇ ?ಅದನ್ನು ತಿದ್ದಿಕೊಂಡು ನಡೆಯುವುದು ಮನುಜತನ ಇರಬಹುದಾ?
"ಮನುಷ್ಯನಿಗೆ ಮೂರು ವರ್ಷ ವಯಸ್ಸಿನ ನಂತರದ ಘಟನೆಗಳು ಮಾತ್ರ ನೆನಪಿನಲ್ಲಿ ಇರುತ್ತವೆ" ಎಂದು ವೈದ್ಯರುಗಳು ಹೇಳಿದ್ದನ್ನು  ನಾನು ಕೇಳಿದ್ದೇನೆ/ ಓದಿದ್ದೇನೆ.ಆದರೆ ನನಗೆ ಮಾತ್ರ ಒಂದು ವರ್ಷದ ಮಗುವಾಗಿದ್ದಾಗ ನಡೆದ ಒಂದು ಸರಿಯಾಗಿ  ಘಟನೆ ನೆನಪಿದೆ.ಅದು ನಿಜವೆಂದು ನನ್ನ ತಾಯಿ ಮತ್ತು ಅಜ್ಜಿ ಒಪ್ಪಿಕೊಂಡಿದ್ದಾರೆ.
ನಾನು ಹುಟ್ಟಿ ಒಂದು ವರ್ಷವಾಗುವಷ್ಟರಲ್ಲೇ ನನಗೊಬ್ಬ ತಂಗಿ ಹುಟ್ಟಿದ್ದಳು.ಬಹುಶಃ ಅಮ್ಮನ  ಪ್ರಸವ ಆದ ನಂತರ ಮಗುವನ್ನು ಮನೆಯ ಎಡಬಾಗದ ಒಂದು ಕೋಣೆಯಲ್ಲಿ  ಸ್ನಾನ ಮಾಡಿಸಿ ಮಲಗಿಸಿದ್ದರು.ಅದು ತುಂಬಾ ಚಂದದ ಮಗುವಂತೆ.ಹುಟ್ಟುವಾಗಲೇ ಕಣ್ಣಕರೆ ತನಕ ದಟ್ಟ ಕೂದಲು ಇತ್ತಂತೆ.ಆದರೆ ನನಗೇಕೋ ಅದು ಆಕರ್ಷಕವಾಗಿ ಕಾಣಿಸಿರಲಿಲ್ಲ..ಅದು ಕೆಂಪು ಕೆಂಪು ಕಾಣುತ್ತಾ ಇದ್ದಿದ್ದು ನನಗೆ ಈಗಲೂ ಕಣ್ಣಿಗೆ ಕಟ್ಟುತ್ತದೆ.ನನಗ್ಯಾಕೋ ಅದರ ಮೇಲೆ ಅಸಹನೆ ಮೂಡಿತ್ತು..ಬಹುಶಃ ಅಷ್ಟರ ತನಕ ಚಿಕ್ಕವಳಾಗಿ ಎಲ್ಲರ ಗಮನ ಪಡೆಯುತ್ತಿದ್ದ ನನಗೆ ಆ ಮಗುವಿನ ಮೇಲೆ ಮತ್ಸರ ಉಂಟಾಯಿತೆಂದು ಕಾಣುತ್ತದೆ.ನಾನು ಹರಿದು ಕೊಂಡು/ ಹೊಟ್ಟೆ ಎಳೆದುಕೊಂಡು ಹೋಗಿ ಅಲ್ಲೇ ಪಕ್ಕದಲ್ಲಿ ಇದ್ದ ಪಂಚ ಕುರುವೆ( ಒಂದು ರೀತಿಯ ಬುಟ್ಟಿ..ಅದರ ಆಕಾರ ನನಗಿನ್ನೂ‌ ನೆನಪಿದೆ) ಆ ಎಳೆ ಬೊಮ್ಮಟೆಯ ಮೇಲೆ ಎಸೆದಿದ್ದೆ ಅಥವಾ ಅದರ ಮುಖಕ್ಕೆ ಹಾಕಿದ್ದೆ..ಅದು ಜೋರಾಗಿ ಅತ್ತಿದ್ದು ನನಗೆ ನೆನಪಿದೆ‌.ಆಗ ಅಜ್ಜಿಯೋ ಯಾರೋ ನನ್ನನ್ನು ಅಲ್ಲಿಂದ ಎತ್ತಿಕೊಂಡು ಹೋದರು..ಆಗ ನನಗೇನೋ ಸಮಾಧಾನ ಆದ ಹಾಗೆ ನೆಂಪು.
ಇತ್ತೀಚೆಗೆ ಯಾವುದೋ ಒಂದು ವರದಿಯಲ್ಲಿ "ಮನುಷ್ಯನಿಗೆ ಆರು ತಿಂಗಳ ಪ್ರಾಯದಲ್ಲಿ ನಡೆದ ಘಟನೆಗಳು ಕೂಡ ಅಪರೂಪಕ್ಕೆ ನೆನಪಿರುತ್ತವೆ " ಎಂದು ಓದಿದ್ದೆ.ಇದು ನಿಜವಿರಬೇಕು.ಯಾಕೆಂದರೆ ನನಗೆ ತಂಗಿ ಹುಟ್ಟುವಾಗ ಒಂದು ವರ್ಷ ಕೂಡ ಪೂರ್ಣ ತುಂಬಿರಲಿಲ್ಲ" ಎಂದು ಅಮ್ಮ ಹೇಳುತ್ತಾರೆ.
ತಂಗಿ ಹುಟ್ಟುವಾಗ ನಾನು ಮೊಲೆ ಹಾಲು ಕುಡಿಯುತ್ತಿದ್ದ ಒಂದು ವರುಷದ ಒಳಗಿನ ಮಗು.ಇನ್ನೇನು ಪ್ರಸವಕ್ಕೆ ದಿನ ಹತ್ತಿರ ಬಂದಾಗ ನನಗೆ ಮೊಲೆ ಹಾಲು ಬಿಡಿಸಿರಬಹುದು.ದುರದೃಷ್ಟವಶಾತ್ ನನ್ನ ತಂಗಿ ಮೂವತ್ತೊಂಬತ್ತು ದಿನ ಮಾತ್ರ ಬದುಕಿದ್ದಳು.ತನ್ನ ಭೂಮಿಯ ಋಣ ತೀರಿಸಿ ಕೆಪ್ಪೆ ಸೆಮ್ಮ/ ನಾಯಿಕೆಮ್ಮು/ pertuses ಗೆ ಬಲಿಯಾಗಿ ದೇವರೆಡೆಗೆ ನಡೆದಿದ್ದಳು.ಆದರೆ ಈ ನೆನಪು ನನಗಿಲ್ಲ.ಆ ಸಮಯದಲ್ಲಿ ನನಗೂ ಇದೇ ನಾಯಿಕೆಮ್ಮು ಬಂದು ಬದುಕುವುದು ಕಷ್ಟಸಾಧ್ಯವಾಗಿತ್ತಂತೆ.ತಂಗಿಯನ್ನು ಮಣ್ಣಿಗೆ ಇಟ್ಟ ದಿನ ರಾತ್ರೆ ನನ್ನ ಖಾಯಿಲೆ ತುಂಬಾ ಉಲ್ಭಣಿಸಿತಂತೆ.ಉಸಿರಾಡಲು ಕಷ್ಟ ಪಡುತ್ತಿರುವ ಮಗು ಪಜೆ ಪರಡಲು ( ಇದೊಂದು ರೀತಿಯ ಕೋಮಾವಸ್ಥೆ, ಈ ಸ್ಥಿತಿಯಲ್ಲಿ ಉಸಿರಾಡಲು ಕಷ್ಟ ಪಡುವ ವ್ಯಕ್ತಿ ಎದ್ದು ಕುಳಿತು ಗೋಡೆಯನ್ನು ಚಾಪೆಯನ್ನು ತಡಕಾಡುತ್ತಾನೆ ಎಂದು ಓದಿ ತಿಳಿದಿರುವೆ) ಶುರು ಮಾಡಿದೆನಂತೆ.ಆಗ ಅಜ್ಜಿ ಎದ್ದು " ನಾವು ಮಕ್ಕಳು‌ ಮರಿಗಳು ಎಂದು ಆಸೆ ಇಡುವುದೇ ತಪ್ಪು ಅಬ್ಬೋ( ನನ್ನ ತಾಯಿಯನ್ನು ಅಜ್ಜ ಅಜ್ಜಿ ದೊಡ್ಡಮ್ಮ ಅಬ್ಬು ಎಂದು ಕರೆಯುತ್ತಿದ್ದರು) ಎಂದು ಜೋರಾಗಿ ಅತ್ತರಂತೆ.ಇವರಿಬ್ಬರ ಅಳುವನ್ನು ನೋಡಿದ ನನ್ನ ಅಜ್ಜಿ ನನ್ನನ್ನು ತನ್ನ ಶಾಲಿನಲ್ಲಿ ಸುತ್ತಿಕೊಂಡು ನಮ್ಮ ಕುಟುಂಬ ವೈದ್ಯರಾದ ನಮ್ಮೂರಿನ ಧನ್ವಂತರಿ ಎಂಬ ಖ್ಯಾತಿಯ ಪ್ರಸಿದ್ಧ ವೈದ್ಯರಾದ ಬರೆ ಗೋಪಾಲಕೃಷ್ಣ ಭಟ್ ಮನೆಗೆ ಹೋಗಿ ಒಂದು ಮಗುವನ್ನು ಹಗಲು ಮಣ್ಣಿಗೆ ಇಟ್ಟಿದ್ದೇವೆ.ಇವಳು ಬದುಕುವಳೋ ಇಲ್ಲವೋ ಹೇಳು.ಇಲ್ಲಾಗದ್ದಿದ್ದರೆ ಮಂಗಳೂರಿಗೆ ತಗೊಂಡು ಹೋಗಿ ಪ್ರಯತ್ನ ಪಡುವ " ಎಂದು ಹೇಳಿದರು.ಆಗ ಅವರು ಕೊನೆಯ ಯತ್ನ ವಾಗಿ ಒಂದು ಇಂಜೆಕ್ಷನ್ ಕೊಟ್ಟು ನೋಡುತ್ತೇನೆ.ಎರಡು ಗಂಟೆಯ ಒಳಗೆ‌ಮಗು ಕಣ್ಣು ಬಿಟ್ಟು ಅತ್ತರೆ ನಾನು ಇಲ್ಲಿಯೇ ಗುಣ ಪಡಿಸುವೆ ಇಲ್ಲವಾದರೆ ಮಂಗಳೂರು ಹೋಗುವ ಎಂದರಂತೆ.ಅವರು ಹೇಳಿದಂತೆ ಒಂದು ಇಂಜೆಕ್ಷನ್ ಕೊಟ್ಟು ನಾಲಿಗೆಗೆ ಏನೋ ಔಷಧಿ ನೆಕ್ಕಿಸಿ ಚಿಕಿತ್ಸೆ ನೀಡಿದರು.ಒಂದೂವರೆ ಗಂಟೆ ಆಗುವಷ್ಟರಲ್ಲಿ ಮಗು( ನಾನು) ಕಣ್ಣು ಬಿಟ್ಟು ಅತ್ತಿತು.ಬರೆ ಡಾಕ್ಟರ್ ಗೋಪಾಲಕೃಷ್ಣ ಭಟ್ ಅವರು ನನ್ನನ್ನು ಉಳಿಸಿಕೊಟ್ಟರು.
ಇದು ಯಾವುದೂ ನನಗೆ ನೆನಪಿಲ್ಲ..ನನ್ನ ತಂಗಿ ಮೂವತ್ತೊಂಬತ್ತು ದಿನದ ಎಳೆ ಮಗು ತೀರಿ ಹೋದ ಕಾರಣ ಅಮ್ಮನಲ್ಲಿ ಎದೆ ಹಾಲು ಇತ್ತು.ನಾನಿನ್ನೂ ಒಂದು ವರ್ಷದ ಮಗು ಅದೂ ಅಲ್ಲದೆ ಅನಾರೋಗ್ಯದಿಂದ ಬಳಲುತ್ತಿರುವ ಮಗು. ಹಾಗಾಗಿ ಅಮ್ಮ ನನಗೆ ಎದೆಹಾಲು ಕುಡಿಸಲು ಯತ್ನ ಮಾಡಿದರು.ನನ್ನ ಮುಖವನ್ನು ಅವರು ಎದೆಗೆ ಒತ್ತಿ ಹಿಡಿದು ಹಾಲನ್ನು ನನ್ನ ಬಾಯಿಗೆ ಹಿಂಡಿದ್ದು ಕೂಡ ನನಗೆ ನೆನಪಿದೆ.ಅದನ್ನು ನಾನು ಉಗುಳಿದ್ದೆ. ತಂಗೆಯ ಎಂಜೆ( ತಂಗಿಯ ಎಂಜಲು) ಎಂದು ತಾಯಿಯ ಎದೆ ಹಾಲನ್ನು ಕುಡಿಯಲು ನಿರಾಕರಿಸಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ.ಅದು ಹೌದೆಂದು ನನ್ನ ತಾಯಿ ಹೇಳುತ್ತಾರೆ‌.ಎಷ್ಟೇ ಯತ್ನ ಮಾಡಿದರೂ ನಾನು ನಂತರ ತಾಯಿಯ ಎದೆ ಹಾಲು ಕುಡಿಯಲಿಲ್ಲವಂತೆ.
ನನಗೀಗ ಅನಿಸುವುದು ಆಗಷ್ಟೇ ಹುಟ್ಟಿದ್ದ ನನ್ನ ತಂಗಿ ಮೇಲೆ ನನಗೆ ಹೊಟ್ಟೆಕಿಚ್ಚು ಇದ್ದಿರಬಹುದೇ ? ಮತ್ಸರ ಪ್ರಾಣಿಗಳ ಸಹಜ ಗುಣ,ಮನುಷ್ಯ ತನ್ನ ವಿವೇಚನೆಯಿಂದ ತಿದ್ದಿಕೊಳ್ಳಬೇಕು ಇಲ್ಲವಾದಲ್ಲಿ ಮನುಷ್ಯರಾಗಿ ಹುಟ್ಟಿ ಪ್ರಯೋಜನವಿಲ್ಲ.

No comments:

Post a Comment