Wednesday 24 April 2019

ನನ್ನೊಳಗೂ ಒಂದು ಆತ್ಮವಿದೆ 7: ಒಂದೇ ಒಂದು ಬಾರಿ ಅತ್ತೆಯವರಿಂದ ಮೆಚ್ಚುಗೆ ಪಡೆದಿದ್ದೆ © ಡಾ.ಲಕ್ಷ್ಮೀ ಜಿ ಪ್ರಸಾದ


ನನಗೆ ಎರಡನೇ ವರ್ಷ ಬಿಎಸ್ಸಿ ಓದುತ್ತಿದ್ದಾಗಲೇ ಸುಮಾರಾಗಿ ಅಡಿಗೆ ಮಾಡಲು ಬರ್ತಾ ಇತ್ತು.ತಂದೆ ಮನೆಯಲ್ಲಿ ತುಂಬಾ ಶುದ್ಧದ ಆಚರಣೆ ಇದ್ದ ಕಾರಣ ಅಮ್ಮ ಹೊರಗೆ ಕುಳಿತಾಗ ತಿಂಗಳಲ್ಲಿ ಮೂರು ದಿನ ಅಡುಗೆ ಮಾಡುವುದು ನನಗೆ ಇಷ್ಟ  ಇಲ್ಲದೇ ಇದ್ದರೂ ಅನಿವಾರ್ಯ ಆಗಿತ್ತು.ರುಚಿಯಾಗದಿದ್ದರೆ ಬೇರೆಯವರ ಸಂಗತಿ ಬಿಡಿ,ನನಗೇ ಮೊದಲಿಗೆ ಊಟ ತಿಂಡಿ ಸೇರದೆ ಸೋಲುವವಳು ನಾನೇ..ಹಾಗಾಗಿ ಅಮ್ಮನಲ್ಲಿ ಕೇಳಿ ಕೇಳಿ ಮಾಡಿ ಮಾಡಿ ಸುಮಾರಾಗಿ ಚೆನ್ನಾಗಿಯೇ ಅಡುಗೆ ಮಾಡಲು ಬರ್ತಾ ಇತ್ತು..ಮದುವೆ ಆಗಿ ಬಂದ ಮೇಲೂ ನನಗೆ ಅಡುಗೆ ಮಾಡಲು ಇಷ್ಟ ಇತ್ತು..ಆದರೆ ಮನೆ ಮಂದಿ ಯಾಕೋ ನನ್ನನ್ನು ಗುಡಿಸಿ ಒರಸಲು,ತೋಟದಿಂದ ಸೋಗೆ ಎಳೆದು ತರಲು ,ಹುಲ್ಲು ಕಿತ್ತು ತರಲು ನೇಮಿಸಿದ ಹೆಣ್ಣಾಳಿನ ಹಾಗೆ ಸೊಸೆ ,ಹೆಣ್ಣಾಳಿಗೆ ಸಂಬಳ ಕೊಡಬೇಕು, ಇವಳಿಗೆ ಅದೂ ಅಗತ್ಯ ಇಲ್ಲ ಎಂದು ಭಾವಿಸಿದ್ದರು  ಕಾಣಬೇಕು.ನನ್ನನ್ನು ಅದೇ ರೀತಿಯ ಕೆಲಸಕ್ಕೆ ಹಚ್ಚುತ್ತಾ ಇದ್ದರು..ಜೊತೆಗೆ ಅತ್ತಿಗೆಯ ಹರಿದ ರವಕೆ ,ಹರಿದ ಚೂಡಿದಾರ್ ಪ್ಯಾಂಟ್ ಹೊಲಿಯಲು,ಅವಳ ತಲೆಯ ಹೇನು ಹೆಕ್ಕಿ ತೆಗೆದು  ಕುಟ್ಟುವ ಕೆಲಸವೂ ನನಗೆ ಮೀಸಲಾಗಿತ್ತು..ನಾನು ಚಿಕ್ಕಂದಿನಲ್ಲೇ ಅತ್ಯತ್ಸಾಹದ ಸ್ವಭಾವ.. ಹಾಗಾಗಿ ಚೆನ್ನಾಗಿ ಕೆಲಸ ಮಾಡಿ ಅತ್ತೆ ಮಾವ ಮನೆ ಮಂದಿಯಿಂದ ಮೆಚ್ಚುಗೆ ಪಡೆಯ ಬೇಕೆಂಬ ಹುಚ್ಚು ಬೇರೆ..ಆದರೆ ನನಗೆ ತಂದೆಯ ಮನೆಯಲ್ಲಿ ನಾನಾಗಿ ಸ್ವಂತ ಆಸಕ್ತಿಯಿಂದ ಯಾವಾಗಲಾದರೊಮ್ಮೆ,ಸೋಗೆ ಎಳೆದು ತರುವುದು,ಅಡಿಕೆ ಹೆಕ್ಕುವುದು ಹುಲ್ಲು ತರುವುದು ಬಿಟ್ಟರೆ ಹೆಚ್ಚು ಕಡಿಮೆ ಬೇರೆ ಮನೆ ಕೆಲಸವನ್ನು ಮಕ್ಕಳಲ್ಲಿ ನಮ್ಮ ತಂದೆ ತಾಯಿ ಮಾಡಿಸುತ್ತಾ ಇರಲಿಲ್ಲ.ದನದ ಹಾಲು ಕರೆಯುವ ಕೆಲಸವೂ ಅಷ್ಟೇ, ಯಾವಗಲಾದರೊಮ್ಮೆ ನನ್ನ ಆಸಕ್ತಿಯಿಂದ ನಾನಾಗಿ ಮಾಡುತ್ತಿದ್ದೆನೇ ಹೊರತು ಮನೆಯಲ್ಲಿ ಹೆಚ್ಚೇನೂ ಕೆಲಸವನ್ನು ಅಮ್ಮ ನಮ್ಮಲ್ಲಿ ಮಾಡಿಸುತ್ತಾ ಇರಲಿಲ್ಲ.. ನಮ್ಮ ಮದುವೆಯಾದ ನಾಲ್ಕನೇ ದಿನಕ್ಕೆ ಗಂಡನ ಮನೆಯಲ್ಲಿ ದಿಂಡು ಕಾರ್ಯ ಆಯಿತು ( ಒಂದು ಹೋಮ ಪೂಜೆ ಬಹುಶಃ ಶೋಭನಕ್ಕೆ ಸಂವಾದಿ ಕಾರ್ಯ )
ಅದಕ್ಕೆ ಮೊದಲೇ ನನ್ನಲ್ಲಿ ಅತ್ತೆಯವರು ಹಸು ಕರೆಯಲು ( ಹಾಲು ಹಿಂಡಲು) ಬರುತ್ತಾ ಎಂದು ಕೇಳಿದ್ದರು.. ತಂದೆ ಮನೆಯಲ್ಲಿ ನನಗೆ ಇಷ್ಟ ಬಂದ ದಿನ ಚಂದದ ಕರುವಿನಲ್ಲಿ ಆಟವಾಡುವ ಸಲುವಾಗಿ ಅಥವಾ ಹಸುವಿನ ಮೇಲೆ ಏನೋ ಒಂದು ಪ್ರೀತಿಗೆ ಹಾಲು ಹಿಂಡುತ್ತಿದ್ದೆನಲ್ಲ..ಅತ್ತೆ ಕೇಳಿದ್ದೇ ತಡ ಹ್ಹು ಬರುತ್ತೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದೆ..ಹೇಳಿದ್ದೇ ತಡ ಅಂತ ದಿಂಡಿನ ಮರುದಿನ ನನ್ನ ಅತ್ತೆಯವರು ಬೆಳಗ್ಗೆ ಬೇಗ ಎಬ್ಬಿಸಿ ದೊಡ್ಡ ಚೊಂಬು (ಅಥವಾ ಸಣ್ಣ ಕೊಡಪಾನ ಅನ್ನಬಹುದೋ ಏನೋ) ಹಸುಗಳ ಹಾಲು ಹಿಂಡಲು ಹೇಳಿದರು..ಆ ಚೊಂಬನ್ನು ನೋಡಿಯೇ ನನಗೆ ಗಾಭರಿ ಆಗಿತ್ತು..ನಮ್ಮ ತಂದೆ ಮನೆಯಲ್ಲಿ ಕರುವಾಗಿದ್ದನಿಂದ ನಾನೇ ಎತ್ತಿ ಮುದ್ದಾಡಿದ ಕರುವೇ ಗಡಸಾಗಿ( ಹೆಣ್ಣು ಹಸುವಾಗಿ ) ಕರು ಹಾಕಿದ ಹಸುಗಳ ಹಾಲನ್ನು ಹಿಂಡುತ್ತಿದ್ದೆ.ಊರ ಹಸುಗಳು ಹೆಚ್ಚು ಹಾಲುಕೊಡುವುದಿಲ್ಲ..ಮೂರು ನಾಲ್ಕು ಕುಡ್ತೆ ಹೆಚ್ಚಂದರೆ ಆರು ಕುಡ್ತೆ( ಒಂದು ಲೀಟರ್ ಅ ) ಹಾಲು ಕೊಡುತ್ತಾ ಇದ್ದವು.ಮತ್ತು ನಮ್ಮ ತಂದೆ ಮನೆಯಲ್ಲಿ ಏಕ ಕಾಲಕ್ಕೆ ಹಾಲು ಕೊಡುವ ಎರಡು ಮೂರು ಹಸುಗಳು ಇರುತ್ತಿರಲಿಲ್ಲ.. ಅಕಸ್ಮಾತ್ ಎಲ್ಲ ಗಡಸುಗಳೂ ಒಂದೇ ಸಮಯದಲ್ಲಿ ಅಪರೂಪಕ್ಕೆ ಒಂದಕ್ಕಿಂತ ಹೆಚ್ಚು ಹಾಲು ಕರೆಯುವ( ಹಿಂಡುವ) ಹಸು  ಇದ್ದರೂ ಇದ್ದರೂ ನಾನು ಕರೆಯತ್ತಾ ( ಹಾಲು ಹಿಂಡುತ್ತಾ ) ಇದ್ದಿದ್ದು  ಒಂದನ್ನು ಮಾತ್ರ..ಅದೂ ಅಮ್ಮ ಹಸುವನ್ನು ಹಟ್ಟಿಯಿಂದ ಹೊರಗಡೆ ತಂದು ಜಗಲಿಯಲ್ಲಿ ಕಟ್ಟಿದಾಗ ಮಾತ್ರ..ನನಗೋ ಸೆಗಣಿ ಅಂದರೆ ಆಗ ಮಾತ್ರವಲ್ಲ ಈಗ ಕೂಡ ತುಂಬಾ ಅಸಹ್ಯ..ಅದರ ವಾಸನೆ ಬಣ್ಣ ಎರಡೂ ನನಗಾಗಗದು..ಹಾಗಾಗಿ ಹೊರಗೆ ಜಗಲಿಯಲ್ಲಿ ಕಟ್ಟಿದಾಗ ಹಸುವಿನ ಸೆಗಣಿ ಮೆಟ್ಟಬೇಕಾಗಿ ಬರುವುದಿಲ್ಲ.. ಹಟ್ಟಿಯಲ್ಲಿ ಹಸುಗಳ ಸೆಗಣಿ ಇರುತ್ತದೆ..ಅದರ ಮೇಲೆ ಸ್ವಲ್ಪ ಸೊಪ್ಪು ಹಾಕಿ ಕಾಲಿಗೆ ಬಟ್ಟೆಗೆ ತಾಗದಂತೆ ಮಾಡಿ ಹಾಲು ಹಿಂಡುತ್ತಾರೆ.
ಅತ್ತಯವರು ನನಗೆ ದೊಡ್ಡ ಚೊಂಬು ಕೊಟ್ಟಾಗಲೇ ಹಸು ಅಷ್ಟು ಹಾಲು ಕೊಡುತ್ತೆ ಅಂತ ನನಗೆ ಅಂದಾಜು ಆದ್ದು. ಜರ್ಸಿ ಹಸುಗಳು ಮೂರು ನಾಲ್ಕು ಲೀಟರ್ ಹಾಲು ಕೊಡುತ್ತವೆ‌.ಅತ್ತೆ ಮನೆಯಲ್ಲಿ ಇದ್ದದ್ದು ಇಂತಹ ನಾಲ್ಕಾರು ದೊಡ್ಡ ಜಾತಿಯ ಜರ್ಸಿ ಹಸುಗಳು..ಹಾಲು ಹಿಂಡಲು ಬರುತ್ತೆ ಎಂದು ಒಪ್ಪಿಕೊಂಡು ಆಗಿತ್ತಲ್ಲಾ..ಬೇರೆ ವಿಧಿ ಇಲ್ಲದೆ ಸೆಗಣಿಯ ಮೇಲೆ ಹೇಗೋ ಕುಳಿತು ಹಾಲು ಹಿಂಡಲು ಶುರು ಮಾಡಿದೆ..ನಿಯಮಿತವಾಗಿ ಹಾಲು ಹಿಂಡಿ ಅಭ್ಯಾಸವಿಲ್ಲದ ನನಗೆ ದೊಡ್ಡ ಚೊಂಬಿ‌ನ. ಕಾಲಂಶದಷ್ಟು ಹಾಲು ಹಿಂಡುವಷ್ಟರಲ್ಲಿ ಕೈಗಳು ಸೋತು ಹೋದವು..ಪೂರ್ತಿ ಹಿಂಡಲು ಸಾಧ್ಯವಾಗದೆ ಕರುವನ್ನು ಹಾಲು ಕುಡಿಯಲು ಬಿಟ್ಟು ನಾನು ಎದ್ದು ನಾನು ಹಟ್ಟಿಯಿಂದ ಮನೆಗೆ ಬಂದೆ..(ಹಟ್ಟಿಗೂ ಮನೆಗೂ ಐವತ್ತು ಮೀಟರ್ ಗಳಷ್ಟು ಅಂತರ ಇತ್ತು ) ಇಷ್ಟು ಬೇಗ ಆಯ್ತಾ ? ಎಂದು ಅತ್ತೆ ತುಸು ಆಶ್ಚಯ್ರದಿಂದ  ಕೇಳಿ ನನ್ನ ಕೈಲ್ಲಿದ್ದ ಹಾಲಿನ ಚೊಂಬನ್ನು ತೆಗೆದುಕೊಂಡು ನೋಡಿದರು..ಹಾಲು ಇಷ್ಟೇ ಸಿಕ್ಕಿದ್ದಾ ಕೇಳಿದರು..ಕೈ  ನೋವಾಗಿ ಅರ್ಧದಲ್ಲೇ ಬಿಟ್ಟು ಬಂದೆ ಎಂದು ಹೇಳಲು ನನ್ನ ಸ್ವಾಭಿಮಾನಕ್ಕೆ ಪೆಟ್ಟಾಗಿ ( ನನಗೆ ಹಾಲು ಹಿಂಡಲು ಬರುತ್ತೆ ಎಂದು ಹಿಂದಿನ ದಿನವಷ್ಟೇ ಬಹಳ ಆತ್ಮವಿಶ್ವಾಸದಿಂದ ಹೇಳಿ ಕೊಂಡಿದ್ಸೆನಲ್ಲ)  ಹ್ಹೂ ಎಂದು ಹೂಗುಟ್ಟಿದೆ..ಅತ್ತೆ ತಕ್ಷಣವೇ ಕರುವನ್ನು ಹಾಲು ಕುಡಿಯಲು ಬಿಟ್ಟು ಬಂದೆಯಾ ? ಎಂದು ಗಾಭರಿ ಯಿಂದ ಕೇಳಿದರು.ಹೌದು ಎಂದು ಹೇಳಿದೆ. ಗಡಿಬಿಡಿಯಿಂದ ಅದೇ ಹಾಲಿನ ಚೊಂಬು ಹಿಡಿದುಕೊಂಡು ಹಟ್ಟಿಗೆ ಓಡಿದರು.. ಓಡಿ ಎಂತ ಪ್ರಯೋಜನ? ಕರು ಚಂದಕ್ಕೆ ಬಾಲ ಎತ್ತಿ ಯಥೇಚ್ಛವಾಗಿ ಹಾಲು ಕುಡಿದು ಸಂಭ್ರಮಿಸುತ್ತಾ ಇತ್ತು..ಆಗ ನನ್ನ ಅತ್ತೆಯವರ ಮುಖದ ಭಾವ ಈಗ ನೆನೆಸಿದರೆ ನಗು ಬರುತ್ತದೆ.😀 ನನ್ನ ಅತ್ಯುತ್ಸಾಹದ ಮಾತು ಕೇಳಿ ನನ್ನನ್ನು ನಾಲ್ಕು ಐದು ಲೀಟರ್ ಹಾಲು ಕೊಡುವ ಹಸುವಿನ ಹಾಲು ಹಿಂಡಲು ಹೇಳಿದ ತನ್ನ ಮೂರ್ಖತನಕ್ಕೆ ಪೆಚ್ಚಾದರೋ..ಹಾಲು ಸಿಗದ ಬಗ್ಗೆ ಚಿಂತೆ ಆಯಿತೋ( ದಿನ ನಿತ್ಯ ಕೆ ಎಮ್ ಸಿಗೆ ನಿಗಧಿತ ಪ್ರಮಾಣದ ಹಾಲು ಮಾರಾಟ ಮಾಡಬೇಕಾದ ನಿರ್ಬಂಧ ಇತ್ತು ,ಅಥವಾ ಇವರುಗಳು ಹಾಗೆ ನಿರ್ಬಂಧ ಹಾಕಿ ಕೊಂಡಿದ್ದರೋ ಗೊತ್ತಿಲ್ಲ!),ಕರುವಿಗೆ ಅಜೀರ್ಣ ಆದರೆ ಎಂದು ಭಯಪಟ್ಟರೋ..ಹಾಲು ಹಿಂಡಲು ಬರುತ್ತೆ ಎಂದ ನನ್ನ ಮೂರ್ಖತನಕ್ಕೆ ಮರುಕ ಉಂಟಾಯಿತೋ..ಸಂಬಂಧಿಕರೆಲ್ಲ ಸೊಸೆಗೆ ಹಾಲು ಹಿಂಡಲು ಬರುತ್ತಾ ಎಂದು ಕೇಳಿದರೆ ಹೇಗೆ ಉತ್ತರಿಸುವುದು ಎಂದು ಆತಂಕವಾಯಿತಾ..ಮನೆ ಮಂದಿಗೆ ಏನು ಹೇಳುವುದೆಂದು ತೋಚಲಿಲ್ಲವಾ ಗೊತ್ತಿಲ್ಲ.. ಅವರ ಮುಖದಲ್ಲಿ ಏಕ ಕಾಲದಲ್ಲಿ ಹರಡಿದ ಭಾವನೆಗಳನ್ನು ಊಹಿಸಲು ನನಗೆ ಆಗ ಮಾತ್ರವಲ್ಲ ಈಗಲೂ ಸಾಧ್ಯವಾಗುತ್ತಾ ಇಲ್ಲ..
ಅದಾಗಿ ನಾವು  ಒಂದೆರಡು ಅಲ್ಲಿ ಇಲ್ಲಿ ಔತಣಕ್ಕೆ ಹೋಗಿ ಬಂದೆವು.ನಂತರ ನಾನು ಕಾಲೇಜಿಗೆ ಹೊರಟು ನಿಂತೆ.ಇಂಗ್ಲಿಷ್ ಪರೀಕ್ಷೆ ಪ್ರಿಪರೇಟರಿ ಬರೆಯಲು ಬಾಕಿ ಇತ್ತು..ಒಂಚೂರು ಓದಿದ ಹಾಗೆ ಮಾಡಿ ಕಾಲೇಜಿಗೆ ಬಂದೆ.ಆಗ ನಾನು ಮತ್ತು ತಮ್ಮ ಈಶ್ವರ ಭಟ್ ಉಜಿರೆಯಲ್ಲಿ  ಪೆಜತ್ತಾಯರು ಓದುವ ಮಕ್ಕಳಿಗಾಗಿಯೇ ಕಟ್ಟಿಸಿದ ಸಾಲು ಕೊಠಡಿಗಳಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಬಾಡಿಗೆಗೆ ಇದ್ದು ಸ್ವತಃ ಅಡಿಗೆ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದೆವು.. .ಮೊದಲ ವರ್ಷ. ಮೆಸ್ ನಲ್ಲಿ ಇದ್ದೆವು..ಆದರೆ ತಿಂಗಳು ತಿಂಗಳು ಇನ್ನೂರು ಮುನ್ನೂರು ರೂಗಳಷ್ಟು ಮೆಸ್ ಗೆ ಕಟ್ಟಬೇಕಿತ್ತು .ಇಪ್ಪತ್ತೆಂಟು ವರ್ಷಗಳ ಹಿಂದಿನ ಸಂಗತಿ ಇದು.ನಮ್ಮಿಬ್ಬರ ಮೆಸ್ ಬಿಲ್ ಕೊಡಲು ನಮ್ಮ ತಂದೆ ತಾಯಿ ತುಂಬಾ ಕಷ್ಟಪಡಬೇಕಾಗುತ್ತದೆ ಎಂಬ ಅರಿವು ನಮಗಿತ್ತು..ಹಾಗಾಗಿ ಎರಡನೇ ಬಿಎಸ್ಸಿ ಯ ಆರಂಭದಲ್ಲೇ ಪೆಜತ್ತಾಯರ ಬಾಡಿಗೆ ಕೋಣೆಗೆ ನಾನು ಮತ್ತು ತಮ್ಮ ಬಂದಿದ್ದೆವು.ನಾನೇ ಸೀಮೆ ಎಣ್ಣೆ ಸ್ಟವ್ ನಲ್ಲಿ ಸಾರು ಪಲ್ಯ ಏನಾದರೂ ಮಾಡುತ್ತಿದ್ದೆ.ಅಕ್ಕಿಯನ್ನು ತೊಳೆದು ಕುದಿ ಬರಿಸಿ ನಾವೇ ರಟ್ಟಿನ ಪೆಟ್ಟಿಗೆಯಲ್ಲಿ ಬೈಹುಲ್ಲಿನ ಹಾಸಿಗೆ ತುಂಬಿ ತಯಾರು ಮಾಡಿದ  ದೇಶಿ  ಸ್ವಮೇಕ್ ಚೈನಾ ಪಾಟ್ ? 😀 ನಲ್ಲಿ ಇಟ್ಟು ಅನ್ನ ಬೇಯಿಸುತ್ತಾ ಇದ್ದೆವು.ವಾರಕ್ಕೊಮ್ಮೆ ಪೆಜತ್ತಾಯರ ಮನೆಗೆ ಹೋಗಿ   ಅವರ ತುರಿ ಮಣೆಯಲ್ಲಿ  ತೆಂಗಿನ ಕಾಯಿ ತುರಿದು( ನಮ್ಮ ತಂದೆ ಮನೆಯ ಸಣ್ಣ ತೋಟದಲ್ಲಿ ಕೆಲವು ತೆಂಗಿನ ಮರ ಇದ್ದು ನಾವು ರೂಮಿಗೆ ಸುಲಿದ ನಾಲ್ಕಾರು ತೆಂಗಿನ ಕಾಯಿ ತಗೊಂಡು ಹೋಗುತ್ತಾ ಇದ್ದೆವು) ಅವರ ರುಬ್ಬುವ ಕಲ್ಲಿನಲ್ಲಿ ರುಬ್ಬಿ ತಂದು ಸಾಂಬಾರ್ ಮಾಡುತ್ತಾ ಇದ್ದೆ‌.ಎರಡು ಮೂರು ದಿವಸ ಬೆಳಗ್ಗೆ ಸಂಜೆ ಕುದಿಸಿ ಬಳಸುತ್ತಾ ಇದ್ದೆವು..
ಉಜಿರೆಗೆ ಬಂದು ಈ ಕೊಠಡಿಗೆ ಪ್ರಸಾದ್ ಜೊತೆ ಬಂದೆ..ಅಷ್ಟೇ.. ಪ್ರಸಾದ್ ಮುಖ ನೋಡಬೇಕಿತ್ತು..😀 ಪ್ರಸಾದ್ ಮನೆಯವರು ಆಗಿನ ಕಾಲಕ್ಕೆ ಸಾಕಷ್ಟು ಸ್ಥಿತಿ ವಂತರಾಗಿದ್ದರು(  ಸಾಕಷ್ಟು ಸಿರಿವಂತರಾಗಿದ್ದರು) ಅತ್ತೆ ಮದುವೆ ಆಗಿ ಬಂದಾಗ ಹೆಚ್ಚೇನೂ ಇರಲಿಲ್ಲವಂತೆ..ಅತ್ತೆ ಮತ್ತು ಮಾವ ಸ್ವತಃ ಕೊಟ್ಟು ಪಿಕ್ಕಾಸು( ಹಾರೆ ಗುದ್ದಲಿ) ಹಿಡಿದು ಮಣ್ಣು ಸಮತಟ್ಟು ಮಾಡಿ ಅಡಕೆ ಬಾಳೆ ತೆಂಗು ಬೆಳೆಸಿದ್ದರಂತೆ( ಅತ್ತೆಯವರು ಯಾವಾಗಲೋ ಮಾತಿನ ನಡುವೆ ಹೇಳಿದ್ದರು).ಪ್ರಸಾದರಿಗೆ  ಹಾಗಾಗಿ ನಮ್ಮಷ್ಟು ಬಡತನವನ್ನು ಅನುಭವಿಸಿ ಗೊತ್ತಿರಲಿಲ್ಲ.. ಹಳೆಯ ಹೆಂಚಿನ ಸಣ್ಣ ಕೊಠಡಿ, ಒಂದೆಡೆ ನನ್ನ ಮತ್ತು ತಮ್ಮನ ಬಟ್ಟೆಗಳು ಚಾಪೆ,ಮತ್ತೊಂದೆಡೆ ನಮ್ಮ ಸ್ವಮೇಕ್ ದೇಸಿ ಚೈನಾಪಾಟ್..ಇನ್ನೊಂದು ಕಡೆ ಸೀಮೆ ಎಣ್ಣೆಯ ಸ್ಟೌ..
ಈ ಸಾಮಾನುಗಳ ನಡುವೆ ಮಲಗಲು ತೀರಾ ಕಡಿಮೆ ಜಾಗ ಇತ್ತು..ಒಂದು ವಾರ ನಾನು ತಮ್ಮ ಹೇಗೋ ಕೈಕಾಲು ಸುರುಟಿಕೊಂಡು ಮಲಗಿದ್ದೆವು..ನಂತರ ಪಕ್ಕದ ಕೊಠಡಿಯಲ್ಲಿ ನಮ್ಮ ಹಾಗೇ ಬಂದ ಹುಡುಗ ಇದ್ದ.( ಅವನ ಹೆಸರು ಮರೆತು ಹೋಗಿದೆ ಈಗ)ಅವನಿಗೆ ಮತ್ತು ನನ್ನ ತಮ್ಮನಿಗೆ ಸ್ನೇಹವಾಗಿ ಅವರಿಬ್ಬರೂ ಅವನ ಕೊಠಡಿಯಲ್ಲಿ ಮಲಗುತ್ತಿದ್ದರು..ಹಾಗಾಗಿ ನನಗೆ ಸ್ವಲ್ಪ ಆರಾಮವಾಗಿತ್ತು.
ಈ ಕೊಠಡಿ ನೋಡಿ ನಮ್ಮ ಪರಿಸ್ಥಿತಿ ಪ್ರಸಾದರಿಗೆ ಅರ್ಥವಾಗಿದ್ದಿರಬೇಕು.ನನ್ನ ಕೈಗೆ ಸ್ವಲ್ಪ ದುಡ್ಡು ಕೊಟ್ಟು ಅವರು ಹಿಂದೆ ಮನೆಗೆ ಬಂದು ‌ಮರುದಿನವೇ ಉದ್ಯೋಗ ನಿಮಿತ್ತ ಬೆಂಗಳೂರು ನಡೆದರು..
ಅಂತೂ ಇಂತೂ ಎರಡನೇ ಬಿಎಸ್ಸಿ ಅಂತಿಮ ಪರೀಕ್ಷೆಗಳನ್ನು ಬರೆದು ನಾನು ಅತ್ತೆ ಮನೆಗೆ ಬಂದೆ..ಮತ್ತೆ ಒಂದೆರಡು ದಿನದ ಒಳಗೆ ಪ್ರಸಾದ್ ಬಂದು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು..ಅವರು ಹನುಮಂತ ನಗರದಲ್ಲಿ ಚಿಕ್ಕದೊಂದು ಮನೆ ಬಾಡಿಗೆಗೆ ಹಿಡಿದಿದ್ದರು.ರಾತ್ರಿ ಬಸ್ಸಿನಲ್ಲಿ ಬರುವಾಗ ಘಾಟಿ ಹತ್ತುವಾಗ ತುಂಬಾ ವಾಂತಿಯಾಗಿ ನನಗೆ ಬೆಳಗಿನ ಜಾವ ಮನೆಗೆ ತಲುಪುವಷ್ಟರಲ್ಲಿ ಸುಸ್ತಾಗಿ ಕಣ್ಣು ಕತ್ತಲಿಟ್ಟಿತ್ತು..ಬಂದು ಮುಖವನ್ನು ತೊಳೆದ ಹಾಗೆ ಮಾಡಿ ಬರುವಷ್ಟರಲ್ಲಿ ಪ್ರಸಾದ್ ಹಾಸಿಗೆ ಬಿಡಿಸಿ ಕೊಟ್ಟರು.. ನಾನು ಮಲಗಿದೆ..ಎಷ್ಟು ಹೊತ್ತಾಯಿತೋ ಗೊತ್ತಿಲ್ಲ.. ರೈಲು ಕೂ ಹಾಕಿದ ಹಾಗೆ ಭಯಾನಕ ಸದ್ದಾಗಿ ಗಾಭರಿಕೊಂಡು ಎಚ್ಚರಗೊಂಡೆ.ನನ್ನ ಗಾಭರಿ ನೋಡಿ ಪ್ರಸಾಸರಿಗೂ ಗಾಭರಿ ಏನಾಯ್ತು ಅಂತ..ಮತ್ತೆ ಪುನಃ ಅದೇ ಸದ್ದು..ಅಮ್ಮಾ ಎಂದು ಕಿರುಚಿದೆ..ಪ್ರಸಾದ್ ಓಡಿಕೊಂಡು ಬಂದು ಎಂತ ಎಂತಾಯಿತು ಎಂದು ಸಮಾಧಾನಿಸಿ ಕೇಳುವಷ್ಟರಲ್ಲಿ ಮತ್ತೆ ಅದೇ ಸದ್ದು.. ಮತ್ತೆ ಗಾಭರಿಯಾಗಿ ಆ ಕಡೆ ಈ ಕಡೆ ನೋಡಿದೆ..ಇರು ಕುಕ್ಕರ್ ಆಫ್ ಮಾಡಿ ಬರುತ್ತೇನೆ ಎಂದು ಪ್ರಸಾದ್ ಅಡಿಗೆ ರೂಮಿನ ಕಡೆ ಹೋದರು! ತಕ್ಷಣವೇ ಎಚ್ ಜಿ ರಾಧಾದೇವಿ,ಸಾಯಿಸುತೆ ಮೊದಲಾದವರ ಕಾದಂಬರಿಗಳಲ್ಲಿ ಕುಕ್ಕರ್ ಕೂ ಹಾಕಿದ ಬಗ್ಗೆ  ಓದಿದ್ದು ನೆನಪಾಯಿತು..ಹ್ಹಾ..ಹಾಗಾದರೆ ಆ ನನ್ನನ್ನು ಗಾಭರಿಗೊಳಿಸಿದ ಸದ್ದು ಅದೆಂದು ಅರ್ಥವಾಯಿತು..ಕುಕ್ಕರ್,ಮಿಕ್ಸಿ,ಗ್ಯಾಸ್ ಸ್ಟವ್,ಟಿವಿ ಡಿಶ್ ಇತ್ಯಾದಿ ಪದಗಳನ್ನು ಇವರುಗಳ ಕಾದಂಬರಿಗಳಲ್ಲಿ ಓದಿದ್ದೆ‌ಇವು ಶ್ರೀಮಂತರ ಮನೆಗಳಲ್ಲಿ ಇರುತ್ತದೆ ಅಂತ ಕೂಡ ಗೊತ್ತಿತ್ತು..ಆದರೆ ಅವು ಹೇಗಿರುತ್ತವೆ,ಕುಕ್ಕರ್ ಕೂ ಹಾಕುವುದೆಂದರೆ ಅಷ್ಟು ಜೋರಾದ ಸದ್ದು ಇರುತ್ತದೆ ಎಂಬ ಊಹೆ ಕೂಡ ನನಗಿರಲಿಲ್ಲ.. ಇನ್ನು ಉಪಯೋಗಿಸುವ ಬಗ್ಗೆ ಹೇಗೆ ಗೊತ್ತಿರುತ್ತದೆ ?ಹಾಗಾಗಿ  ಪ್ರಸಾದ್ ಬೆಳಗ್ಗೆಯೇ ಅಡಿಗೆ ಮಾಡಿಟ್ಟು ಗ್ಯಾಸ್ ಸ್ಟವ್ ಮುಟ್ಟಬೇಡ,ಗೊತ್ತಾಗದೆ ಬೆಂಕಿ ಹಿಡುದರೆ ಕಷ್ಟ, ನಾನು ಸಂಜೆ ಬರುವಾಗ ತಿಂಡಿ ಕಟ್ಟಿಸಿಕೊಂಡು  ಬರುತ್ತೇನೆ,ಈಗ ಮತ್ತು ಮಧ್ಯಾಹ್ನ ಊಟ ಮಾಡು ಎಂದು ಹೇಳಿ ಕುಕ್ಕರ್ ಮುಚ್ಚಳ ತೆರೆದು ಇಟ್ಟು ಹೋಗಿದ್ದರು‌..ಸಂಜೆ ಬೇಗನೇ ಬಂದರು.ಬರುವಾಗ ಎರಡು ಮಸಾಲೆ ದೋಸೆ ಕಟ್ಟಿಸಿಕೊಂಡೇ ಬಂದಿದ್ದರು.ಬಂದು ನನಗೆ ಕಾಫಿ ಮಾಡಿ ಕೊಟ್ಟು,( ನನ್ನ ತಾಯಿ ಮನೆಯಲ್ಲಿ ನಮಗೆಲ್ಲರಿಗೂ ಬೆಲ್ಲದ ಕಾಫಿ ಕುಡಿದು ಅಭ್ಯಾಸ) ಅವರು ಚಹಾ ಮಾಡಿಕೊಂಡು ಕುಡಿದರು. ಅಮೇಲೆ ನಿನಗೆ ತಿನ್ನಲು ಎಂತಾದರೂ ಬೇಕ? ಎಲ್ಲ ಇಲ್ಲಿ ಹತ್ರವೇ ಸಿಗುತ್ತದೆ..ಏನಾದರೂ ಬೇಕಿದ್ದರೆ ಹೇಳು ಎಂದರು..ತಕ್ಷಣವೇ ನಾನು ಮೊದಲ ವರ್ಷ ಬಿಎಸ್ಸಿ ಓದುವಾಗ ನಮ್ಮ ಮೆಸ್ ನಲ್ಲಿ ಇದ್ದ ಸಹಪಾಠಿ ಸಿರಿವಂತರ ಮನೆ ಮಗಳು ಸುಮನ್ ಪಪ್ಸ್ ಬಗ್ಗೆ ಹೇಳಿದ್ದು ನೆನಪಾಯಿತು. ಅವಳೊಂದು ಆದಿತ್ಯವಾರ  ನಾವೆಲ್ಲ ಉಜಿರೆ ಪೇಟೆಗೆ ಹೋಗಿ ಪಪ್ಸ್ ತಿಂದು ಬರುವ ಎಂದು ಹೇಳಿದ್ದಳು.ಅವಳನ್ನು ಹೊರತು ಪಡಿಸಿ ನಾನೂ ಸೇರಿದಂತೆ ಇತರೆ ಮೆಸ್ ನಲ್ಲಿ ಇದ್ದ ಹುಡುಗಿಯರಿಗೆ ಆ ಶಬ್ದವನ್ನೇ ಕೇಳಿ ಗೊತ್ತಿರಲಿಲ್ಲ.. ಅದೇನೆಂದು ಕೇಳಿದೆವು..ಅದು ಒಂತರಾ ಪಲ್ಯವನ್ನು ನಡುವೆ ಹಾಕಿ ಬ್ರೆಡ್ ಅನ್ನು ಹುರಿದ ಹಾಗೆ ಇರುತ್ತದೆ‌.ತುಂಬಾ ರುಚಿ ಇರುತ್ತದೆ ಎಂದು ಹೇಳಿದ್ದಳು. ಹಾಗೆ ನಾವೆಲ್ಲ‌ ಮೆಸ್ಸಿನ
ಕಾವೇರಿ ಆಂಟಿಯ ಅನುಮತಿ ಪಡೆದು ಕೈಯಲ್ಲಿ ಸ್ವಲ್ಪ ದುಡ್ಡು ಹಿಡಿದುಕೊಂಡು ಉಜಿರೆ ಪೇಟೆಯಲ್ಲಿ ಇದ್ದ ಒಂದೇ ಒಂದು ಬೇಕರಿಗೆ ಬಂದೆವು.ಅಲ್ಲಿ ಸುಮನ್ ಪಪ್ಸ್  ಕೊಡಿ ಎಂದು ಅಲ್ಲಿದ್ದವರಲ್ಲಿ ಕೇಳಿದವರು..ಬಹುಶಃ ಅಲ್ಲಿದ್ದವರು ಕೂಡ ಮೊದಲ ಬಾರಿಗೆ ಆ ಪದ ಕೇಳಿದ್ದರೋ ಏನೋ ಗೊತ್ತಿಲ್ಲ.. ಒಂಚೂರು ಪೆಚ್ಚು ಪೆಚ್ಚಾಗಿ ನಮ್ಮಲ್ಲಿ ಅದಿಲ್ಲ ,ಬೇರೆ ಏನು ಬೇಕು ಕೇಳಿದರು..ಹಾಗೆಲ್ಲ ಬೇಕರಿ ತಿಂಡಿ ತಿನ್ನುವಷ್ಟು ದುಡ್ಡು ನನ್ನಲ್ಲಿ ಇರಲಿಲ್ಲ, ನನ್ನ ತಂದೆ ತಾಯಿ ನನ್ನನ್ನು ಬಹಳ ಕಷ್ಟ ಪಟ್ಟು ಓದಿಸುತ್ತಿದ್ದಾರೆ ಎಂಬ ಅರಿವು ನನಗಿತ್ತು..ಹಾಗಾಗಿ ತಕ್ಷಣವೇ ನಾನು ಬೇರೇನು ಬೇಡವೆಂದೆ..ಸುಮನ್ ,ಸಲೀಲ,ಸಂಧ್ಯಾ ಬಿಟ್ಟರೆ ಉಳೊದವರೆಲ್ಲರ ಪರಿಸ್ಥಿತಿ ನನಗಿಂತ ಬೇರೆಯಾಗಿ ಇರಲಿಲ್ಲ.. ಹಾಗಾಗಿ ಅವರುಗಳು ಕೂಡ ಬೇಕರಿ ತಿಂಡಿ ಇಷ್ಟವಿದ್ದರೂ ಕೂಡ ನನ್ನಂತೆ ಬೇಡ ಎಂದರು‌.ನಾವ್ಯಾರೂ ಏನನ್ನೂ ತೆಗೆದುಕೊಳ್ಳದ ಕಾರಣ ಸುಮನ್ ಕೂಡ ಏನನ್ನು ತೆಗೆದುಕೊಳ್ಳದೆ ನಮ್ಮ ಜೊತೆ ಹಿಂತಿರುಗಿದಳು..ಸಾಕಷ್ಟು ವಿದ್ಯಾವಂತರ,ಸರ್ಕಾರಿ ಉದ್ಯೋಗದಲ್ಲಿದ್ದು ಸಿರಿವಂತರ ‌ಮಗಳಾದರೂ ಸುಮನ್ ನಮ್ಮೊಂದಿಗೆ ಹೊಂದಿಕೊಂಡಿದ್ದಳು..ಒಂದು ದಿನ ಕೂಡ ತಾನು ಸಿರಿವಂತೆ ಎಂಬಂತೆ ನಡೆದುಕೊಂಡಿರಲಿಲ್ಲ.. ಕಾಲೇಜಿಗೆ ಸೇರಿ ಒಂದೆರಡು ತಿಂಗಳುಗಳಲ್ಲಿಯೇ  ಚುರುಕಿನ ಹುಡುಗಿಯಾಗಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಳು.ಅವಳು ಪದವಿಯಲ್ಲಿ ಪತ್ರಿಕೋದ್ಯಮ ತೆಗೆದು ಕೊಂಡಿದ್ದು ನಿರಂಜನ ವಾನಳ್ಳಿಯವರು ಶುರು ಮಾಡಿದ,ಅಥವಾ ಮೊದಲೇ ಇದ್ದುದನ್ನು ಮುಂದುವರಿಸುತ್ತಾ ಇದ್ದ ಕೈ ಬರಹದ   ಕಾಲೇಜು ವಾಲ್ ಮ್ಯಾಗಜಿನ್ ( ಕೈ ಬರಹದ ಭಿತ್ತಿ ಪತ್ರಿಕೆ) ನಲ್ಲಿ ಲೇಖನಗಳನ್ನು ಬರೆಯುತ್ತಿದ್ದಳು.ಕವನಗಳನ್ನು ಬರೆಯುತ್ತಿದ್ದಳು.ಶ್ರೀಮಂತಿಕೆಯ ಜೊತೆಗೆ ಪ್ರತಿಭೆ,ಸಜ್ಜನಿಕೆ ಸೇರಿ ನಮ್ಮ ‌ಮೆಸ್ ನಲ್ಲಿ ಒಂದು ತನ್ನದೇ ಆದ ವಿಶಿಷ್ಠವಾದ ಸ್ಥಾನವನ್ನು ಗಳಿಸಿದ್ದಳು.ಬಹುಶಃ ಏಳನೆಯ ತರಗತಿಯಲ್ಲಿ ಇದ್ದಾಗ ನಾನು ನಾಟಕ ಬರೆದದ್ದು ಬಿಟ್ಟರೆ ಒಂಬತ್ತನೇ ತರಗತಿಯಲ್ಲಿ ಇದ್ದಾಗ ಒಂದು ಕಥೆ ಬರೆದು ಅಮ್ಮನಿಗೆ ಓದಿ ಹೇಳಿದ್ದೆ.ಚೆನ್ನಾಗಿದೆ ..ಆಗಾಗ ಬರೆಯುತ್ತಿರು ಎಂದು ಅಮ್ಮ ತುಂಬು ಪ್ರೋತ್ಸಾಹ ನೀಡಿದ್ದರೂ ಕೂಡ ನಂತರ ನಾನೇನನ್ನೂ ಬರೆದಿರಲಿಲ್ಲ..ಮೆಸ್ ನಲ್ಲಿ ಸುಮನ್ ನ ಕವಿತೆಗಳಿಗೆ ಬರಹಗಳಿಗೆ ಸಿಗುತ್ತಾ ಇದ್ದ ಮೆಚ್ಚುಗೆ ನನ್ನನ್ನು ಮತ್ತೆ ಬರೆಯಲು ಪ್ರೇರೇಪಿಸಿದೆವು.ನಾನು ನನ್ನಷ್ಟಕ್ಕೆ ರಫ್ ಪುಸ್ತಕದಲ್ಲಿ ಕಥೆಗಳನ್ನು, ಕವಿತೆಗಳನ್ನು ಬರೆಯತೊಡಗಿದೆ‌. ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಿ ಇಂಗ್ಲಿಷ್ ಗೆ ಆದ್ಯತೆ ಕೊಡುವ ಬಗ್ಗೆ ಒಂದು ಒಂದು ಪುಟ್ಟ ಬರಹ ಬರೆದು ಸುಮನ್ ಗೆ ಕೊಟ್ಟಿದ್ದೆ.ಅದನ್ನು ಓದಿ ಚೆನ್ನಾಗಿದೆ ಎಂದ ಅವಳು ಅದನ್ನು ಕಾಲೇಜಿನ ಭಿತ್ತಿ ಪತ್ರಿಕೆಗೆ ನೀಡಿದ್ದಳು..ಆದೇ ಯಾಕೋ ಅದನ್ನು ನಿರಂಜನ ವಾನಳ್ಳಿ ಅಥವಾ ಇನ್ಯಾರೋ ಆ ಪತ್ರಿಕೆಯ ಜವಾಬ್ದಾರಿ ವಹಿಸಿದವರು ಅದನ್ನು ರಿಜೆಕ್ಟ್ ಮಾಡಿದರು.ಅದನ್ನು ತಿಳಿಸಿದ ಸುಮನ್ " ಇದು ನವೆಂಬರ್ ತಿಂಗಳು ಆಗಿದ್ದರೆ ಖಂಡಿತಾ ವಾಲ್ ಮ್ಯಾಗಜೀನ್ ನಲ್ಲಿ ಹಾಕುತ್ತಿದ್ದರು.ಈಗ ಸಕಾಲ ಅಲ್ಲ ಹಾಗಾಗಿ ಅದನ್ನು ರಿಜೆಕ್ಟ್ ಮಾಡಿರಬಹುದು..ಆದರೂ ಬರಹ ಚೆನ್ನಾಗಿದೆ " ಎಂದು ಹೇಳಿ ಬರೆಯುವ ನನ್ನ ಉತ್ಸಾಹ ಬತ್ತಿ ಹೋಗದಂತೆ ಮೆಚ್ಚುಗೆಯ ಮಾತನ್ನು ಆಡಿದ್ದಳು.ಬಹುಶಃ ಅವಳಿಗೆ ಅವಳ ವಯಸ್ಸನ್ನು ಮೀರಿದ ಪ್ರೌಢತೆ ಇತ್ತೆನಿಸುತ್ತದೆ ನನಗೆ.ಆದರೆ ಮೊದಲ ವರ್ಷ ಬಿಎ ಪರೀಕ್ಷೆ ಆಗುತ್ತಿದ್ದಂತೆ ಅವಳ ಮದುವೆ ಆಯಿತು.. ಅದಾಗಿ ಎಷ್ಟೋ ವರ್ಷಗಳ ನಂತರ ನಾನು 2009 ರಲ್ಲಿ ಬೆಳ್ಳಾರೆ ಯ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿಯಾದ ನಂತರ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನಕ್ಕೆ ಹೋಗಿದ್ದೆ‌.ಆಗ ನನಗೆ ಉಳಿದುಕೊಳ್ಳಲು ಪ್ರಕೃತಿ ಚಿಕಿತ್ಸೆ ಕಾಲೇಜಿನ. ಹಾಸ್ಟೆಲ್  ಮೆಸ್ ಗೆ ಹತ್ತಿರವಾಗಿತ್ತು.ಆಗ ನಾನು ಮೆಸ್ ಗೆ ಹೋಗಿ ಕಾವೇರಿ ಆಂಟಿ ಮತ್ತು ಮಾವ( ಆಗಷ್ಟೇ ಉಜಿರೆ ಹೈಸ್ಕೂಲ್ ನ ಇಂಗ್ಲಿಷ್ ಶಿಕ್ಷಕರಾಗಿ  ಸೇವೆಯಿಂದ ನಿ ವೃತ್ತಿ ಹೊಂದಿದ ವೆಂಕಟರಮಣ ಭಟ್ ಮಾಷ್ಟ್ರು) ಅವರನ್ನು ಭೇಟಿಯಾಗಿದ್ದೆ .ಆಗ ನನಗೆ ಸುಮನ್ ಗೆ ಕ್ಯಾನ್ಸರ್ ಆಗಿ ಗುಣ ಆಗಿ ಮತ್ತೆ ಪುನಃ  ಮರುಕಳಿಸಿದೆ ಎಂದು ಗೊತ್ತಾಯಿತು. ಅವಳ ನಂಬರ್ ತಗೊಂಡು ಫೋನ್ ಮಾಡಿ ಮಾತಾಡಿದೆ.ಎರಡನೇ ಬಾರಿಗೆ ಕ್ಯಾನ್ಸರ್ ಬಂದ ಬಗ್ಗೆ ಬಹಳ ಬೇಸರದಿಂದ ಹೇಳಿದಳು.ಮೊದಲ ಬಾರಿ ಬಂದದ್ದು ಗುಣ ಆಗಿದೆ ತಾನೇ ? ಈ ಬಾರಿಯೂ ಗುಣ ಆಗುತ್ತದೆ, ಸರಿಯಾಗಿ ಚಿಕಿತ್ಸೆ ಪಡೆ ಎಂದು ಧೈರ್ಯ ಹೇಳಿ ನೀನು ಉಜಿರೆಯಲ್ಲಿ ಮೊದಲ ವರ್ಷ ಬಿಎ ಓದುತ್ತಿದ್ದಾಗ ಕತೆ ಕವಿತೆಗಳನ್ನು ಬರೆಯುತ್ತಿದ್ದೆಯಲ್ಲ..ಈಗಲೂ ಬರೆಯುತ್ತಿದ್ದೀಯಾ ಎಂದು ಕೇಳಿದೆ.ಅಪರೂಪಕ್ಕೆ ಮೂಡ್ ಚೆನ್ನಾಗಿದ್ದಾಗ ಬರೆಯುತ್ತೇನೆ ಎಂದು ಹೇಳಿದಳು..

ಪುಸ್ತಕವಾಗಿ ಪ್ರಕಟವಾಗಿವೆಯಾ ಎಂದು  ಕುತೂಹಲದಿಂದ ಕೇಳಿದೆ..ಇಲ್ಲ.. ಪತ್ರಿಕೆಗಳಲ್ಲಿ ನಿನ್ನ ಲೇಖನಗಳು ಪ್ರಕಟವಾಗುತ್ತಿವೆಯಾ ?  ಲಕ್ಷ್ಮೀ ಜಿ ಪ್ರಸಾದ ಎನ್ನುವ ಹೆಸರಿನಲ್ಲಿ ಬರೆಯುತ್ತಿರುವುದು ನೀನಾ ಎಂದು ಕೇಳಿದಳು.ಹೌದು..ನಿನಗೆ ಹೇಗೆ ಗೊತ್ತಾಯಿತು ಎಂದು ಕೇಳಿದಾಗ " ನೀನು ಅಂದು‌ಮೆಸ್ ನಲ್ಲಿ ಇದ್ದಾಗ ಕನ್ನಡ ಭಾಷೆಯ ನಿರ್ಲಕ್ಷ್ಯ ದ ಬಗ್ಗೆ ಒಂದು ಸಣ್ಣ ಲೇಖನ ಬರೆದಿದ್ದೆಯಲ್ಲ..ಅದರ ವಿಸ್ತೃತ ರೂಪದ ಲೇಖನವನ್ನು ನಾನು ವಿಜಯ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಎಂಬ ಲೇಖನದಲ್ಲಿ ನೋಡಿದೆ.ಅದರಲ್ಲಿ ಲೇಖಕರ ಹೆಸರು ಲಕ್ಷ್ಮೀ ಜಿ ಪ್ರಸಾದ ಎಂದಿತ್ತು.ಬಹುಶಃ ಅದು ನಿನ್ನ ಲೇಖನವೇ ಇರಬೇಕೆಂದು ಊಹಿಸಿದೆ.ನಿನ್ನ ಬೇರೆ ಲೇಖನಗಳನ್ನು ಓದಿದ್ದೇನೆ,ಚೆನ್ನಾಗಿ ಬರೀತೀಯ..ನನಗೆ ಮದುವೆ ನಂತರ ಹೆಚ್ಚು ಬರೆಯಲಾಗಲಿಲ್ಲ‌‌.ಮಕ್ಕಳಾಗಲಿಲ್ಲ ಅದೇ ಕೊರಗಿನಲ್ಲಿ ಇದ್ದೆ .ನಂತರ ನಾವೊಂದು ಮಗುವನ್ನು ದತ್ತು ಪಡೆದು ಹ್ಯಾಪಿ ಆಗಿದ್ದೆವು‌ ಅಷ್ಟರಲ್ಲಿ ಕ್ಯಾನ್ಸರ್ ಬಂತು..ಅದು ಗುಣ ಆಗಿದೆ ಎಂದು ಉಸಿರುಬಿಡುವಷ್ಟರಲ್ಲಿ ಮತ್ತೆ ಈಗ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಹೇಳಿದಳು..ಆಗ ನೀನು ಚಿಕಿತ್ಸೆ ಪಡೆದು ಗುಣ ಪಡಿಸಿಕೋ ಜೊತೆಗೆ ನಿನ್ನ ಕವಿತೆಗಳನ್ನು ಪ್ರಕಟಿಸು..ನಾವಿದ್ದಾಗಲೂ ಇಲ್ಲದೇ ಇದ್ದಾಗಲೂ ನಾವು ಬರೆದ ಪುಸ್ತಕಗಳು ನಮ್ಮನ್ನು ಚಿರಸ್ಥಾಯಿಯಾಗಿಸುತ್ತವೆ‌.ಬರವಣಿಗೆಗೆ ಅಂತಹ ಶಕ್ತಿ ಇದೆ ಎಂದು ಹೇಳಿದೆ.ಆಗ ಅವಳು ನಿನ್ನ ಪುಸ್ತಕಗಳು ಪ್ರಕಟವಾಗಿದೆಯಾ ಎಂದು ಕೇಳಿದಳು.ಹೌದು ಎಂದು ಹೇಳಿ ಮೂರು ಪುಸ್ತಕಗಳು ಪ್ರಕಟವಾಗಿವೆ, ಈಗ ಐದು ಪುಸ್ತಕಗಳು ಅಚ್ಚಿನಲ್ಲಿ ಇವೆ ಎಂದು ತಿಳಿಸಿದೆ.ಬಹಳ ಸಂತೋಷಗೊಂಡ ಅವಳು " ಲಕ್ಷ್ಮೀ ನಿನಗೆ ಸರ್ಕಾರಿ ಉದ್ಯೋಗ ಸಿಕ್ಕಿದ್ದು ಪುಸ್ತಕಗಳು ಲೇಖನಗಳು ಪ್ರಕಟವಾಗಿದ್ದು ಕೇಳಿ ತುಂಬಾ ಖುಷಿ ಆಯ್ತು..ನಾನು ಕೂಡ ನನ್ನ ಕವಿತೆಗಳನ್ನು ಪ್ತಕಟಿಸುತ್ತೇನೆ ಮತ್ತೆ ಕಳಹಿಸಿಕೊಡುತ್ತೇನೆ ಎಂದು ಉತ್ಸಾಹದಿಂದ ಹೇಳಿದಳು.ನಂತರ ಅವಳ ಕವನ ಸಂಕಲನ ಮತ್ತು ರಂಗೋಲಿ ಅಥವಾ ಚಿತ್ತಾರದ ಒಂದು ಪುಸ್ತಕ ಪ್ರಕಟವಾದ ಬಗ್ಗೆ  ಉಜಿರೆಯ ಇನ್ನೋರ್ವ ಮೆಸ್ ಮೇಟ್ ನಾಪೋಕ್ಲಿನ ವಿದ್ಯಾಳಿಂದ ತಿಳಿಯಿತು (  ಅವರು ಮತ್ತು ಅವರ ಪತಿ ಸುರೇಶ್ ಭಟ್ ( ಉಪನ್ಯಾಸಕರು) ಇಬ್ಬರೂ ಲೇಖಕರಾಗಿದ್ದು ಅವರ ಬರಹ ಗಳು ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗುತ್ತಿರುತ್ತವೆ,ವಿದ್ಯಾ ಮತ್ತೆ ನನಗೆ ಫೇಸ್ ಬುಕ್ ಸ್ನೇಹಿತೆಯಾಗಿದ್ದಾರೆ)
ನಂತರ ಒಂದೆರಡು ವರ್ಷದ ಬಳಿಕೆ  ಹೂ‌ ಮನಸಿನ ಹುಡುಗಿ ದೇವರ ಪಾದವನ್ನು ಸೇರಿದ್ದು ತಿಳಿದು ತುಂಬಾ ಸಂಕಟವಾಯಿತು.
ಅದಿರಲಿ ನನ್ನ ಕಥೆ ಎಲ್ಲಿಂದೆಲ್ಲಿಗೋ ಸಾಗಿದೆ ..ಮತ್ತೆ ಹಿಂದೆ ಬರುತ್ತೇನೆ‌.
ಬೇಸಗೆ ರಜೆ ಮುಗಿಯುತ್ತಿದ್ದಂತೆ ಅಂತಿಮ ವರ್ಷದ ಬಿಎಸ್ಸಿ ಪದವಿ ತರಗತಿಗಳು ಆರಂಭವಾದವು.ನಾನು ಬೆಂಗಳೂರಿನಿಂದ ಮನೆಗೆ ಬಂದು ಪುಸ್ತಕ ಬಟ್ಟೆ ಬರೆ ತೆಗೆದುಕೊಂಡು ಕಾಲೇಜು ಹೊರಟೆ,ಪ್ರಸಾದ್ ನನ್ನನ್ನು ಕಾಲೇಜು ಹಾಸ್ಟೆಲ್ ಗೆ ಸೇರಿಸಿದರು‌.ಹತ್ತನೇ ತರಗತಿ ತನಕ ಜಾಣ ವಿದ್ಯಾರ್ಥಿನಿ ಆಗಿದ್ದ ನಾನು ನಂತರ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದೆ.ಇಂಗ್ಲಿಷ್ ನಲ್ಲಿ ಮಾಡುವ ಪಾಠ ನನಗೆ ಅರ್ಥವಾಗದೇ ಇದ್ದದು ಇದಕ್ಕೆ ಪ್ರಮುಖ ಕಾರಣವಾಗಿತ್ತು.ಅಂತೂ ಇಂತೂ ಬಿಎಸ್ಸಿ ಪದವಿ ಅಂತಿಮ ವರ್ಷದ ಅಂತಿಮ ಪರೀಕ್ಷೆಗಳು ಮುಗಿದು ಮನೆಗೆ ಬಂದೆ.ಆಗಾಗಲೇ ಪ್ರಸಾದ್ ಬೆಂಗಳೂರಿನ ಕೆಲಸ ಬಿಟ್ಟು ಬಿಟ್ಟಿದ್ದರು‌.ಮನೆಯಲ್ಲಿ ಕೃಷಿ ನೋಡಿಕೊಳ್ಳಲು ಜನ ಸಾಕಾಗುತ್ತಿಲ್ಲ..ನೀನು ಕೆಲಸ ಬಿಟ್ಟು ಬಂದು ಬಿಡು ಎಂದು ಮಾವ ಹೇಳಿದ್ದರಂತೆ.ಅದಕ್ಕೆ ನನ್ನಲ್ಲಿ ಒಂದು ಮಾತು ಕೂಡ ತಿಳಿಸದೆ ಬೆಂಗಳೂರಿನಲ್ಲಿ ಇದ್ದ ಒಳ್ಳೆಯ ಕೆಲಸ ಬಿಟ್ಟು ಬಂದಿದ್ದರು.
ಈಗಂತೂ ನಾನು ಸಂಪೂರ್ಣವಾಗಿ ಮನೆ ಕೆಲಸದ ಆಳಾಗಿ ಬಿಟ್ಟೆ‌.ಬೆಳಗಾಗೆದ್ದು ಮನೆ ಗುಡಿಸಿ ಒರಸಿ ತೋಟಕ್ಕೆ ಹೋಗಿ ಹುಲ್ಲು ತಂದು ಸೋಗೆ ಎಳೆದು, ಗುಡ್ಡದಿಂದ ಒಣ ಕಟ್ಟಿಗೆ ತರುವ,ಹಸು ಕರೆಯುವ ಕೆಲಸಕ್ಕೆ ಮೀಸಲಾದೆ‌.ನನಗೆ ಒಂದು ಲೋಟ ಕಾಫಿ ಮಾಡಿಕೊಳ್ಳುವ ಸ್ವಾತಂತ್ರ್ಯ ವೂ ಇರಲಿಲ್ಲ. ಒಮ್ಮೆ ಅಣ್ಣ ಮತ್ತು ಚಿಕ್ಕಪ್ಪ ನಮ್ಮ ಮನೆಗೆ ಬಂದಿದ್ದರು.ಆ ದಿವಸ ನನಗೆ ಇತರೆ ಕೆಲಸದಿಂದ ವಿನಾಯತಿ ನೀಡಿ ಅಣ್ಣ ಚಿಕ್ಕಪ್ಪಂದಿರ ಹತ್ತಿರ ಮಾತನಾಡಲು ಬಿಟ್ಟು ಉದಾರತೆ ಮೆರೆದಿದ್ದರು ಮನೆ ಮಂದಿ.ಮಧ್ಯಾಹ್ನ  ಊಟ ಆದ ಮೇಲೆ ಅತ್ತೆ ಮಾವ ಮಲಗಿದ್ದರು.ಪ್ರಸಾದ್ ಮತ್ತು ಮೈದುನ ತೋಟದ ಕೆಲಸಕ್ಕೆ ಹೋಗಿದ್ದರು.ಆಗ ಚಿಕ್ಕಪ್ಪ "ಎನಗೊಂದು ಅರ್ಧ ಲೋಟೆ ಚಾಯ ಮಾಡಿ‌ಕೊಡು ಮಗಳೋ,ತಲೆ ಬೇನೆ ಅವುತ್ತು( ನನಗೆ ಅರ್ಧ ಲೋಟ ಚಹಾ ಮಾಡಿ ಕೊಡು ಮಗಳೇ,ತಲೆ ನೋವಾಗುತ್ತಿದೆ) ಎಂದು ಹೇಳಿದರು.ಆಗ ಅಣ್ಣನೂ ನನಗೂ ಒಂದು ಲೋಟ ಇರಲಿ ಎಂದ.ನಾನು ಮನೆ ಮಂದಿ ಏನು ಹೇಳುವರೋ ಎಂದು  ಹೆದರುತ್ತಾ ಹೋಗಿ ಗ್ಯಾಸ್ ಸ್ಟೌ ಹಚ್ಚಿ( ಆಗ ನಾನು ಸರಿಯಾಗಿ ಗ್ಯಾಸ್ ಸ್ಟೌ ,ಮಿಕ್ಸ್,ಕುಕ್ಕರ್ ಗಳ ಬಳಕೆಯನ್ನು ಪ್ರಸಾದರಿಂದ ಕಲಿತಿದ್ದೆ) ಅಲ್ಲೇ ಸಮೀಪದಲ್ಲಿ ಇದ್ದ ಹಾಲಿನ ಪಾತ್ರೆಯಿಂದ ಸ್ವಲ್ಪ ಹಾಲು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಸಕ್ಕರೆ ಚಹಾ ಪೌಡರ್ ಹಾಕಿ ಕುದಿಸಿ ಅಣ್ಣ ಮತ್ತು ಚಿಕ್ಕಪ್ಪನಿಗೆ ಚಹಾ ಮಾಡಿ ಕೊಟ್ಟೆ.
ಅತ್ತೆ ಯವರು ನಿದ್ರೆ ಮಾಡಿ ಎದ್ದು ಹೊರಗೆ  ಬರುವಾಗ ಅಣ್ಣ ಚಿಕ್ಕಪ್ಪ ಚಹಾ ಕುಡಿಯುತ್ತಾ ಇದ್ದರು..ಆಗ ನನ್ನ ಕಡೆ ಅವರು ಬೀರಿದ ದೃಷ್ಟಿ ನೆನೆದರೆ ಈಗಲೂ ನನಗೆ ಎದೆ ಡವ ಡವ ಆಗುತ್ತಿದೆ.ಅಣ್ಣ ಚಿಕ್ಕಪ್ಪ ಹೋಗುವ ತನಕ ಏನೂ ಹೇಳಲಿಲ್ಲ..
ಅವರು ಆ ಕಡೆ ಹೋಗುತ್ತಲೇ ಚಹಾ ಮಾಡುವ ಮೊದಲು ಕೇಳಿಲ್ಲ ಯಾಕೆ ? ಎಷ್ಟು ಹಾಲು ಇದೆ ಅಂತ ನೋಡಿಕೊಂಡು ಬಳಕೆ ಮಾಡಬೇಕು.. ಉಳಿದವರಿಗೆ ಚಹಾ ಮಾಡಲು ಹಾಲೆಲ್ಲಿದೆ..ಇತ್ಯಾದಿಯಾಗಿ ಹಲವಾರು ಆಖ್ಷೇಪಗಳನ್ನು ಮಾಡಿದರು.ಅದರ ನಂತರ ನಾನು ಅಡುಗೆ ಮನೆ ಕಡೆ ಕಾಲಿಡುವುದನ್ನೇ ಬಿಟ್ಟು ಬಿಟ್ಟಿದ್ದೆ.ನೀವೆಲ್ಲ ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ, ಈಗ ಇಷ್ಟು ಜೋರಿರುವ ನಾನು ನನ್ನ ಅತ್ತೆ ಮನೆಯಲ್ಲಿ ಹೆದರಿ ಇಲಿ ಮರಿಯ ಹಾಗೆ 😀
ಇದಾದ ನಂತರ ಒಂದು ದಿನ ಹಸು ಕರೆಯುವಾಗ ( ಆಗ ನನಗೆ ನಾಲ್ಕು ಐದು ಲೀಟರ್ ಹಾಲು ಹಿಂಡುವುದು ಅಭ್ಯಾಸ ಆಗಿತ್ತು) ಒಂದು ದೊಡ್ಡ ಹಸುವಿಗೆ ನನ್ನ ‌ಮೆಲೆ ಏನು ಕೋಪ ಬಂತೋ ಗೊತ್ತಿಲ್ಲ.. ಹಾಲು ಕರೆಯುವಾಗ ಒದೆದು ನನ್ನನ್ನು ಬೀಳಿಸಿತು.ಆಗ ಸಹಜವಾಗಿ ನಾನು ನೋವಿನಿಂದ ಚೀತ್ಕರಿಸಿದೆ.ಪ್ರಸಾದ್ ಅಲ್ಲೇ ಹತ್ತಿರ ಇದ್ದವರು ಓಡಿ ಬಳಿಗೆ ಬಂದರು.ಹಸುವಿಗೆ ಗಾಬರಿ ಆಗಿ ಅದರ ಎರಡೂ ಕೈಗಳನ್ನು ನನ್ನ ಎದೆ ಮೆಲೆ ಮೆಟ್ಟಿ ನಿಂತಿತು.ಪ್ರಸಾದ್ ಅದನ್ನು ಹೋಗೋ ದೂಡಿ ನನ್ನನ್ನು ಎಬ್ಬಿಸಿ ಹೊರಗೆ ಕರೆತಂದರು..ನನಗೆ ತುಂಬಾ ನೋವಾಗಿತ್ತು..ಅದಕ್ಕಿಂತ ಹೆಚ್ಚಾಗಿ ಸೆಗಣಿ ಮೈಗೆ ಹತ್ತಿಕೊಂಡದ್ದು ತುಂಬಾ ಹೇಸಿಗೆ ಆಗಿತ್ತು.ಕೈಯಲ್ಲಿ ಇದ್ದ ಚೊಂಬು ಬಿದ್ದು ಹೋಗಿ ಕರೆದ ಹಾಲು ಹಟ್ಟಿಗೆ ಚೆಲ್ಲಿತ್ತು‌.
ನಾನು ಬಂದು ಸೀದಾ ಬೆಸ್ನೀರು ಕೊಟ್ಟಗಗೆ( ಸ್ನಾನದ ಮನೆ) ಹೊಕ್ಕು ಸ್ನಾನ ಮಾಡಿ ಬೇರೆ ಸೀರೆ ಉಟ್ಟುಕೊಂಡು ಬಂದೆ( ಮದುವೆಯಾದ ಮೇಲೆ ನನಗೆ ಸೀರೆ ಕಡ್ಡಾಯವಾಗಿತ್ತು )
ಹೊರಗೆ ಬರುವಾಗ ನನ್ನ ಬಗ್ಗೆ "  ಏನೂಂತ ಇವಳನ್ನು ಬೆಳೆಸಿದ್ದಾರೋ ಇವಳ ತಂದೆ ತಾಯಿ.. ಒಂದು ನಯವಿನಯ ಇಲ್ಲ.. ನೆಟ್ಟಗೆ ಒಂದು ದನ ಕರೆಯಲು( ಹಾಲು ಹಿಂಡಲು) ಬರುವುದಿಲ್ಲ.. ನಾಲ್ಕು ಲೀಟರ್ ಹಾಲು ಹಾಳಾಯ್ತು. ಹೀಗೆಮನೆಯನ್ನು ‌ಮುಳುಗಿಸಿ ಬಿಡ್ತಾಳೆ.ಬಹಳ ಉಷಾರಿ( ಜಾಣೆ) ಅಂತ ಹೊಗಳುತ್ತಾರೆ.ಆದರೆ ಏನೊಂದೂ ಮಾಡಲು ಸೋಮಾರಿತನ ,ಏನೂ ಬಾರದ ದಡ್ಡಿ ಇದು ,ಶಂಖ ಕೂಡ ಊದಲು ಬರುವುದಿಲ್ಲ" ಇತ್ಯಾದಿಯಾಗಿ ನನ್ನ ಬಗ್ಗೆ ಅತ್ತೆ ಮಾವ ಬೈಯುತ್ತಾ ಇರುವುದು ಕೇಳಿಸಿತು..
ಆ ಕ್ಷಣ ನಾನು ನಿರ್ಧರಿಸಿ ಬಿಟ್ಟೆ..ಮುಂದೆ ನಾನು ಓದಬೇಕು ಎಂದು.. ನನ್ನನ್ನು ಅದು ತನಕ ಯಾರೂ
ದಡ್ಡಿ ಎಂದು ಹೇಳಿರಲಿಲ್ಲ..ಇಷ್ಟಕ್ಕೂ ನನ್ನದೇ ವಯಸ್ಸಿನ ಅತ್ತಿಗೆ ವೀಣಾಳಿಗೆ( ಪ್ರಸಾದ ತಂಗಿಗೆ) ಏನೂ ಬರುತ್ತಾ ಇರಲಿಲ್ಲ..
ತಕ್ಷಣವೇ ನಾನು ಅತ್ತೆ ಮಾವನ ಎದುರು ಹೋಗಿ ಹೇಳಿದೆ.ನಾನು  ಇನ್ನು ಹಸು‌ ಕರೆಯುವುದಿಲ್ಲ..ಹುಲ್ಲು ತರುವುದಿಲ್ಲ..ನಾನು ಮುಂದೆ ಸಂಸ್ಕೃತ ಎಂಎ ಓದುತ್ತೇನೆ " ಎಂದು ಸ್ಥಿರವಾಗಿ ಹೇಳಿದೆ‌.
ಇಲ್ಲಿ ಕೆಲಸ ಮಾಡುದು ಯಾರು ? ಎಂದು ಮಾವ ಕೋಪದಿಂದ ಕೇಳಿದರು.ಯಾರು ಬೇಕಾದರೂ ಮಾಡಿ ನನಗೆ ಗೊತ್ತಿಲ್ಲ.. ನಾನು ಮುಂದೆ ಓದುತ್ತೇನೆ ಎಂದು ಹೇಳಿದೆ.ನಾವು ಓದಿಸಿದರೆ ತಾನೇ ನೀನು ಓದುವುದು ಎಂದು ಅತ್ತೆ ಹೇಳಿದರು.
ನಾನು ಪ್ರಸಾದ್ ಹತ್ತರ ಕಡಾ ಖಂಡಿತವಾಗಿ ನಾನು ಮುಂದೆ ಓದಲೇ ಬೇಕು..ನೀವು ಓದಿಸಿದರೆ ಸರಿ..ಇಲ್ಲವಾದಲ್ಲಿ ತಂದೆ ಮನೆಗೆ ಹೋಗಿ ಓದುತ್ತೇನೆ ಎಂದು ನಿರ್ಧಾರಾತ್ಮಕವಾಗಿ ಹೇಳಿದೆ.ಅದಾಗಲೇ ಪ್ರಸಾದ್ ಕೂಡ ಮತ್ತೆ ಕೆಲಸಕ್ಕೆ ಸೇರುವ ನಿರ್ಧಾರ ಮಾಡಿದ್ದರು‌.ಮಂಗಳೂರಿನಲ್ಲಿ ಒಂದು ವೆಟರ್ನರಿ ಮೆಡಿಕಲ್ ಶಾಪ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದರು. ತೀರಾ ಕಡಿಮೆ (ಎಂಟು ನೂರು ರುಪಾಯಿ ಎಂದು ನೆನಪು) ಸಂಬಳ .ಈ ಸಂಬಳದಲ್ಲಿ ಬೇರೆ ಮನೆ ಬಾಡಿಗೆ ಹಿಡಿದು ಬದುಕಲು ಅಸಾಧ್ಯ ಎಂದು  ಮನೆ ಮಂದಿಗೆ ಮಾತ್ರವಲ್ಲ ನಮಗೂ ಗೊತ್ತಿತ್ತು.."ಇಷ್ಟು ಕಡಿಮೆ ಸಂಬಳದಲ್ಲಿ ಬೇರೆ ಮನೆ ಮಾಡಿ ಹೇಗೆ ಅವಳನ್ನು ಓದಿಸ್ತಾನೆ ಅವನು ? ಒಮ್ಮೆ ಮನೆ ಬಿಟ್ಟು ಹೋದರೆ ಮತ್ತೆ ಮನೆ ಸೇರಿಸುವುದಿಲ್ಲ " ಇತ್ಯಾದಿ ಮಾತುಗಳನ್ನು ನನಗೆ ಕೇಳುವ ಹಾಗೆ ಹೇಳುತ್ತಿದ್ದರು.
ಅಂತೂ ಇಂತೂ ಬಿಎಸ್ಸಿ ರಿಸಲ್ಟ್ ಬಂತು ,ಪಾಸಾಗಿದ್ದೆ ಆದರೆ ಎಂ ಎಸ್ಸಿಗೆ ಸೇರುವಷ್ಟು ಮಾರ್ಕ್ಸ್ ಇರಲಿಲ್ಲ.ಹಾಗಾಗಿ ಸಂಸ್ಕೃತ ಎಂಎ ಗೆ ಸೇರುವುದೆಂದು ಒಂದು ದಿನ  ನಿರ್ಧರಿಸಿ ಕಟೀಲಿಗೆ ಬಂದು ವಿಚಾರಿಸಿ ಹೋಗಿದ್ದೆ‌.ನನಗೆ ಸಂಸ್ಕೃತ ದಲ್ಲಿ ಒಳ್ಳೆಯ ಅಂಕಗಳು ಇದ್ದ ಕಾರಣ ಸೀಟು ಕೊಡುತ್ತೇನೆ,ಮಾರ್ಕ್ಸ್ ಕಾರ್ಡ್ ತಗೊಂಡು ಬಾ,ಎಂದು ಹೇಳಿ ಕೊನೆಯ ದಿನಾಂಕವನ್ನು ಅಲ್ಲಿ ಪ್ರಾಂಶುಪಾಲರಾಗಿದ್ದ ಡಾ.ಜಿ ಎನ್ ಭಟ್ ಅವರು ಹೇಳಿದರು.
ಇತ್ತ ಮನೆಯಲ್ಲಿ ಅಘೋಷಿತ ಕರ್ಫ್ಯೂ..ನನ್ನನ್ನು ನೋಡಿದರೆ ಉಗ್ರಗಾಮಿಯನ್ನು ನೋಡಿದ ಹಾಗೆ ಮಾಡುತ್ತಿದ್ದರು.ಮನೆಗೆ ಬಂದ ನೆಂಟರುಗಳು ಕೂಡ ಗಾಯಕ್ಕೆ ಉಪ್ಪು ಹಚ್ಚಿ ಉರಿ ಹೆಚ್ಚಾಗುವಂತೆ ಮಾಡಿತ್ತಿದ್ದರು..ಇನ್ನೇನು ಮರುದಿನ ಎಂಎಗೆ ಸೇರಲು‌ ಕೊನೆಯ ದಿನ ಎಂದಾಗ ಹಿಂದಿನ ದಿನ ಪ್ರಸಾದ್ ಹತ್ತಿರ ಹಠ ಹಿಡಿದು ಎಂಎ ಗೆ ಸೇರುವ ಸಲುವಾಗಿ ಉಜಿರೆಗೆ ಹೋಗಿ ಮಾರ್ಕ್ಸ್ ಕಾರ್ಡ್ ತಂದೆ‌..ಮುಂದಿನದನ್ನು ಈ ಹಿಂದೆಯೇ ಬರೆದಿರುವೆ.
ಇದಾಗಿ ವರ್ಷ ಗಳು ಉರುಳಿದವು.ಒಮ್ಮೆ ಮನೆ ಬಿಟ್ಟು ಹೊರ ನಡೆದರೂ ಮತ್ತೆ ರಾಜಿಯಾಯಿತು.ನಾವು ಯಾವಾಗಲಾದರೂ ಬಂದು ಹೋಗುತ್ತಿದ್ದೆವು.ನಾನು ಹಠ ಹಿಡಿದು ಓದಿ ರ‍್ಯಾಂಕ್ ತೆಗದು ಕೆಲಸಕ್ಕೆ ಸೇರಿದಾಗ ಅತ್ತೆಯವರಿಗೆ ನನ್ನ ಬಗ್ಗೆ ಮೆಚ್ಚುಗೆ ಮೂಡಿತ್ತು.
ಹೀಗೆ ಒಂದು ಬಾರಿ ಮನೆ ಹೋಗಿದ್ದಾಗ ಮಾವನವರು ಕೈತೋಟದಲ್ಲಿ ಬೆಳೆಸಿದ ಗುಂಡಗಿನ ನಾಲ್ಕೈದು ಬದನೆಕಾಯಿಗಳನ್ನು ಕೊಯ್ದು ತಂದಿಟ್ಟಿದ್ದರು.ಆಗ ಅತ್ತಿಗೆ ವೀಣಾ( ಪ್ರಸಾದ್ ತಂಗಿ) "ಅಬ್ಬೆ ಇದರ ಸುಟ್ಟು ಹಾಕಿ ಗೊಜ್ಜಿ ಮಾಡುತ್ತೀರಾ" ( ಅಮ್ಮ ಇದನ್ನು ಸುಟ್ಟು ಬದನೆ ಗೊಜ್ಜು ಮಾಡುತ್ತೀರಾ?) ( ಪ್ರಸಾದ್ ಮನೆಯಲ್ಲಿ ಮಕ್ಕಳು ತಾಯಿಗೆ ಅಬ್ಬೆ ಎಂದು ಕರೆದು ಬಹುವಚನದಲ್ಲಿ‌ಮಾತನಾಡುತ್ತಿದ್ದರು) ಎಂದು ಕೇಳಿದಳು.ಆಗ ಅತ್ತೆಯವರು ನನಗೆ ಬದನೆ ಗೊಜ್ಜು ಮಾಡಲು ಸರಿಯಾಗಿ ಗೊತ್ತಿಲ್ಲ ಎಂದು ಹೇಳಿದರು.ಆಗ ಅಲ್ಲೇ ಇದ್ದ ನಾನು "ಗೊಜ್ಜು ಮಾಡಲು ನನಗೆ ಬರುತ್ತದೆ, ನಾನು ಮಾಡಲಾ ? ಎಂದು ಕೇಳಿದೆ.ಆಗ ಅತ್ತೆ ಒಪ್ಪಿದರು.ಉಳಿದವರೆಲ್ಲ ನನ್ನತ್ತ ಒಂದು ತಿರಸ್ಕಾರದ ನೋಟ ಬೀರಿ ಎದ್ದು ಹೋದರು‌.ಬೆಸ್ನೀರು ಕೊಟ್ಟಗೆಯ( ಸ್ನಾನದ ಮನೆ) ಹಿಂಭಾಗ ನೀರು ಬಿಸಿ ಮಾಡಲು ದೊಡ್ಡದಾದ ಒಲೆ ಇತ್ತು.ಅಲ್ಲಿ ನಿಗಿ ನಿಗಿ ಕೆಂಡ ಇತ್ತು.ಎರಡು ಬದನೆಕಾಯಿಗಳನ್ನು ತೊಳೆದು ಒರಸಿ ಕೆಂಡದಲ್ಲಿ ಸುಟ್ಟು ಸಿಪ್ಪೆ ತೆಗೆದು  ಹಿಸುಕಿ,ಉಪ್ಪು,ಹುಳಿ,ಸ್ವಲ್ಪ ಬೆಲ್ಲ ಸ್ವಲ್ಪ ನೀರು ಹಾಕಿ ಕುದಿಸಿದೆ‌.ಹದ ಬಂತು ಅನಿಸಿದಾಗ ಬೆಳ್ಳುಳ್ಳಿ ಒಗ್ಗರಣೆ ಹಾಕಿದೆ ಎರಡು ಮೆಣಸು ಹುರಿದು ಹಿಸುಕಿ ಹಾಕಿ ಕದಡಿದೆ,ಘಮ್ ಅಂತ ಪರಿಮಳ ಬಂದಾಗ ಗೊಜ್ಜು ಸರಿಯಾಗಿ ಎಂದೆನಿಸಿ ಮುಚ್ಚಿ ಇಟ್ಟೆ.
ಮಧ್ಯಾಹ್ನ ಎಲ್ಲರೂ ಊಟಕ್ಕೆ ಕುಳಿತರು.ಗೊಜ್ಜು ನನಗೆ ನನಗೆ ಬೇಡ ಎಂದು ಮನೆ ಮಂದಿ ಹೇಳಿದರೂ ರುಚಿ ನೋಡಿ ಎಂದು ಅತ್ತೆ ಬಲವಂತದಿಂದ ಎಲ್ಲರ ಬಟ್ಟಲಿಗೂ ಒಂದೊಂದು ಚಮಚದಷ್ಟು ಬಳಸಿದರು.ಒಬ್ಬೊಬ್ಬರೇ ಸ್ವಲ್ಪ ನೆಕ್ಕಿ ನೋಡಿ‌ ಮತ್ತೆ ಹಾಕಿ ಕೊಂಡರು‌.ಬದನೆ ಗೊಜ್ಜು ನನಗೆ ಬಹಳ ಇಷ್ಟ ನಾನು ಹಾಕಿಕೊಂಡು ಉಂಡೆ,ಅತ್ತೆ ರುಚಿ ನೋಡಿ " ತುಂಬಾ ಲಾಯ್ಕ ಅಯಿದು( ತುಂಬಾ ಚೆನ್ನಾಗಿದೆ) ಎಂದು ನನ್ನ ಕೆಲಸದ ಬಗ್ಗೆ ಮೊದಲ ಮತ್ತು ಕನೆ ಬಾರಿಗೆ ಮೆಚ್ಚುಗೆಯ ಮಾತನಾಡಿದ್ದರು...ಈವತ್ತು ತೇಜಸ್ವಿನಿ ಪೇಸ್ ಬುಕ್ ನಲ್ಲಿ ಬದನೆ ಗೊಜ್ಜು ಮಾಡಿದ ರೀತಿಯನ್ನು ವಿವರಿಸಿ ಪೇಸ್ ಬುಕ್ ನಲ್ಲಿ ಹಾಕಿದ್ದನ್ನು ಓದುತ್ತಲೇ ನನಗೆ ಜೀವನದಲ್ಲಿ ಒಂದೇ ಒಂದು ಬಾರಿ ಅತ್ತಯವರ ಕೈಯಿಂಂದ ಪಡೆದದ್ದು ನೆನಪಾಗಿ ಇಷ್ಟೆಲ್ಲ ಬರೆದೆ 

No comments:

Post a Comment