Saturday 27 April 2019

ನನ್ನೊಳಗೂ ಒಂದು ಆತ್ಮವಿದೆ8. ನನಗೂ ಗರ್ಭಿಣಿಯರಿಗೆ ಸಹಜವಾದ ಬಯಕೆ ಇತ್ತು © ಡಾ.ಲಕ್ಷ್ಮೀ ಜಿ ಪ್ರಸಾದ

ನನ್ನೊಳಗೂ ಒಂದು ಆತ್ಮವಿದೆ..8
ನನಗೂ ಗರ್ಭಿಣಿಯರಿಗೆ ಸಹಜವಾದ  ಬಯಕೆ ಇತ್ತು..
ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಘಟನೆ ಇದು.
ಅದಕ್ಕಿಂತ ನಾಲ್ಕು ಐದು ವರ್ಷಗಳ ಮೊದಲು ನನ್ನ ಕಲಿಕೆಯ ಕಾರಣಕ್ಕೆ ಜಗಳವಾಗಿ ನಾವು ಮನೆ ಬಿಟ್ಟು ಹೊರಗಡೆ ನಡೆದಿದ್ದರೂ ನಂತರ ನಮಗೆ ರಾಜಿಯಾಗಿತ್ತು.ವರ್ಷದಲ್ಲಿ ಒಂದೆರಡು ಸಲ ಮನೆಗೆ ಬಂದು ಹೋಗುತ್ತಿದ್ದೆವು.ಏನಾದರೂ ಪೂಜೆ ಪುನಸ್ಕಾರ, ಅಜ್ಜ ಅಜ್ಜಿಯ ತಿಥಿಗಳಿಗೂ ಬಂದು ಹೋಗುತ್ತಿದ್ದೆವು.
ಹಾಗೆಯೆ ಒಂದು ದಿನ ಪ್ರಸಾದ್  ಅಜ್ಜಂದೋ ಅಜ್ಜಿದೋ ತಿಥಿ ಇತ್ತು. ನಮ್ಮ ಮದುವೆಯಾಗಿ ನಾಲ್ಕೈದು ವರ್ಷ ಗಳಾಗಿದ್ದವು.ನನಗೆ ಎರಡು ಮೂರು ಸಲ ಮೂರು ನಾಲ್ಕು ತಿಂಗಳಾಗಿ ಗರ್ಭ ಹೋಗಿತ್ತು.ಮತ್ತೆ ನಿಪುಣ ವೈದ್ಯರ ಚಿಕಿತ್ಸೆ ಪಡೆಯುತ್ತಾ ಇದ್ದೆ.
ಆ ದಿನ ಅಜ್ಜನ  ತಿಥಿಯ ದಿನಕ್ಕಾಗುವಾಗ ನನಗೆ ಪೀರಿಯಡ್ ನ  ದಿನ ಮುಂದೆ ಹೋಗಿ ಐದು ದಿನಗಳಾಗಿದ್ದವು.ನನಗೆ ಸಣ್ಣಗೆ ವಾಂತಿ ಬರುವ ಹಾಗೆ ಹಿಂಸೆ ಶುರುವಾಗಿತ್ತು.ಹಾಗಾಗಿ ಮತ್ತೆ ನನ್ನ ‌ಮಡಿಲಲ್ಲಿ ಒಂದು ಚಿಗುರು ಕುಡಿ ಹುಟ್ಟುವುದೇನೋ ಎಂಬ ಸಂಶಯ ಉಂಟಾಗಿತ್ತು.ಹಾಗಾಗಿ  ಬಸ್ ಪ್ರಯಾಣ ಮಾಡಿ ಊರಿಗೆ ಹೋಗಿ ಬರುವುದು ಬೇಡ ಎನಿಸಿತ್ತು.
ಅದಕ್ಕೂ ಹದಿನೈದು ದಿನ ಮೊದಲು ಪ್ರಸಾದರಿಗೆ ಫೋನ್ ಮಾಡಿದ ಅತ್ತೆಯವರು "ಸುಮನಿಗೆ ( ಮೈದುನನ ಹೆಂಡತಿ) ದಿನ ತಪ್ಪಿದೆ "  ಎಂದು ಹೇಳಿದ್ದರು.ಹಾಗೆಂದರೇನೆಂದು ಪ್ರಸಾದ್ ನನ್ನಲ್ಲಿ ಕೇಳಿದಾಗ ಅವಳು ಒಂದೂವರೆ ತಿಂಗಳ ಸಣ್ಣ ಗರ್ಭಿಣಿ ಇರಬಹುದು ಎಂದು ನನಗೆ ಅರ್ಥವಾಗಿದ್ದು ಅದನ್ನೇ ಪ್ರಸಾದ್ ಗೆ ಹೇಳಿದ್ದೆ.
ಇದಾಗಿ ತಿಥಿಗೆ ಬಾ ಎಂದು ಅತ್ತೆ ಪ್ರಸಾದರನ್ನು ಫೋನ್ ಮೂಲಕ ಕರೆದಿದ್ದು,ಆಗ ಫೋನ್ ನಲ್ಲಿ ಮಾತನಾಡುವಾಗ ಸುಮ ಸಣ್ಣ ಗರ್ಭಿಣಿ( ಎರಡು ತಿಂಗಳ) ಎಂದು ಹೇಳಿದ್ದರು.
ನಾನು ಪ್ರಯಾಣ ಬೇಡ ಎಂದು ನಿರ್ಧರಿಸಿದ ಕಾರಣ ಪ್ರಸಾದ್ ಒಬ್ಬರೇ ಊರಿಗೆ ಅಜ್ಜ/ ಅಜ್ಜಿ ತಿಥಿಗೆ ಹೋಗಿದ್ದರು. ಅದು ಜುಲೈ ಅಗಸ್ಟ್  ತಿಂಗಳು ಇರಬೇಕು. ಹಲಸಿನ ಹಣ್ಣಿನ ಕಾಲ ಮುಗಿಯತ್ತಾ ಬರುವ ಸಮಯ.ಮನೆಯಲ್ಲಿ ಆ ವರ್ಷದ ಕೊನೆಯ  ಒಂದು ಹಲಸಿನ ಹಣ್ಣು ಇತ್ತಂತೆ.ಸುಮ "ನಾನು ನಂತರ ಆದರೆ ತಿನ್ನುವೆ " ಎಂದು ಹೇಳಿದಳಂತೆ.ಅದಕ್ಕೆ ಆ ಹಣ್ಣನ್ನು ತುಂಡು ಮಾಡಲಿಲ್ಲ .ಅಪರೂಪಕ್ಕೆ ಬಂದ ಮಗ ಪ್ರಸಾದ್ ಗೂ ಸಿಗಲಿಲ್ಲ. ನಾವು ಮಂಗಳೂರಿನಲ್ಲಿ ಇದ್ದ ಕಾರಣ ನಮಗೂ ಹಲಸಿನ ಹಣ್ಣು ಸಿಗುವುದು ಅಪರೂಪ ಆಗಿತ್ತು. ಊರಲ್ಲಿ ರುಚಿಯಾದ ಹಣ್ಣನ್ನು ತಿಂದು ಅಭ್ಯಾಸವಾದ ನಮಗೆ ಪೇಟೆಯಲ್ಲಿ ಕೊರೆದು ಮಾರುವ ಹಲಸಿನ ತೊಳೆಯ ಬಗ್ಗೆ ಒಲವಿರಲಿಲ್ಲ .ಹಾಗಾಗಿ ನಾವು ಹಲಸಿನ ಹಣ್ಣು ಇಷ್ಟವೇ ಆಗಿದ್ದರೂ ಪೇಟೆಯಲ್ಲಿ ಮಾರುವುದನ್ನು ತೆಗೆದುಕೊಳ್ಳುತ್ತಿರಲಿಲ್ಲ.ನಾನು ಎಪ್ರಿಲ್ ಮೇ ರಜೆಯಲ್ಲಿ ಅಮ್ಮನ ಮನೆಗೆ  ಹೋಗಿದ್ದಾಗ ಯಥೇಚ್ಛವಾಗಿ ಹಲಸಿನ ಹಣ್ಣು ತಿನ್ನುತ್ತಿದ್ದೆ‌.ಬರುವಾಗ ನಮಗೆ ಅಮ್ಮ ಹಲಸಿನ ಹಣ್ಣಿನ ಕೊಟ್ಟಿಗೆ ಮಾಡಿ ಕೊಡುತ್ತಿದ್ದರು.ಮಂಗಳೂರಿನ ಮನೆಗೆ ತಂದಾಗ ಪ್ರಸಾದರಿಗೆ ಹಲಸಿನ ಹಣ್ಣು ಮತ್ತು ಕೊಟ್ಟಿಗೆ( ಗಟ್ಟಿ) ಸಿಗುತ್ತಾ ಇತ್ತು ಅಷ್ಟೇ, ಹಾಗಾಗಿ ಹಲಸಿನ ಹಣ್ಣು ಅವರಿಗೆ ಇನ್ನೂ ಅಪರೂಪ.
ತಿಥಿ ‌ಮುಗಿಸಿ ಅದೇ ದಿನ ರಾತ್ರಿಯೇ ಮಂಗಳೂರಿನ ನಮ್ಮ ಮನೆಗೆ ಬಂದವರು " ಮನೆಯಲ್ಲಿ ವರ್ಷದ ಕೊನೆ ಹಲಸಿನ ಹಣ್ಣು ಇದ್ದದ್ದು.ಅದನ್ನು ಚೊಚ್ಚಲ ಗರ್ಭಿಣಿ ಸುಮಳಿಗಾಗಿ ಮೀಸಲಿರಿಸದ್ದು ಕೂಡ ಹೇಳಿದರು.
ಮಗನಿಗೆ ಹಲಸಿನ ಹಣ್ಣು ಬಹಳ ಇಷ್ಟ ಎಂದೂ ಗೊತ್ತಿದ್ದು ಅದರಿಂದ ಒಂದು ತುಂಡು ಕತ್ತರಿಸಿ ತೆಗೆದು ಪ್ರಸಾದರಿಗೆ ಕೊಡಬಹುದಿತ್ತು..ಒಬ್ಬರಿಗೇ ಇಡೀ ಹಣ್ಣು ಬೇಕಾಗುತ್ತಾ..ಅಂತ ನನಗೂ ಅನಿಸಿತು. ನಮಗೆ ಮಕ್ಕಳಾಗುವಲ್ಲಿ ನಿದಾನ ಆದದ್ದು ಮತ್ತು ಎರಡು ಮೂರು ಬಾರಿ ಗರ್ಭ ಹೋಗಿದ್ದು ಗೊತ್ತಿರುವ ಕಾರಣ ಮನೆ ಮಂದಿಗೆ ಮೈದುನನ ಮಡದಿ ಗರ್ಬಿಣಿಯಾದದ್ದು ತುಂಬಾ ಸಂಭ್ರಮದ ವಿಷಯವಾಗಿ ಇದ್ದಿರಬಹುದು.ಹಾಗಾಗಿ ಹಲಸಿನ ಹಣ್ಣನ್ನು ಅವಳಿಗಾಗಿ ಮೀಸಲಿರಿಸಿದ್ದು ತಪ್ಪೇನೂ ಅಲ್ಲ..ಆದರೆ ನನಗೆ ಯಾಕೋ ತಕ್ಷಣವೇ ಹಲಸಿನ ಹಣ್ಣು ಬೇಕೆನಿಸಿತು.ತುಂಬಾ ಆಶೆ ಅಯಿತು.ಮನೆಯಲ್ಲಿ ಹಲಸಿನ ಹಣ್ಣನ್ನು ಒಂದೊಮ್ಮೆ ಕೊರೆದಿದ್ದರೆ ಪ್ರಸಾದರಿಗೆ ನಾಲ್ಕು ಸೊಳೆ ಸಿಗುತ್ತಿತ್ತೇ ಹೊರತು ನನಗೆ ಸಿಗುತ್ತಿರಲಿಲ್ಲ.
ಆಗ ಫೋನ್ ನಮ್ಮಲ್ಲಿ ಇರಲಿಲ್ಲ. ಅಮ್ಮನಿಗೆ ಹೇಳಿದ್ದರೆ ಮನೆಯ ಮರದಲ್ಲಿ ಉಳಿದಿದ್ದರೆ ಹಲಸಿನ ಹಣ್ಣನ್ನು ತಮ್ಮನ ಮೂಲಕ ಕಳುಹಿಸಿಕೊಡುತ್ತಾ ಇದ್ದರು ಖಂಡಿತಾ.
ಆದರೆ ಫೋನ್ ಇಲ್ಲದ ನಾನು ಅಮ್ಮನಲ್ಲಿ ಕೇಳುವುದು ಹೇಗೆ? ಮರುದಿನವೇ ತಾಯಿ ‌ಮನೆಗೆ ಹೋಗ ಬೇಕು ಅನಿಸಿತು.
ಮತ್ತೆ  ಪೀರಿಯಡ್ ಮುಂದೆ ಹೋಗಿ ಐದು ದಿನ ಗಳಾಗಿವೆ ,ಪ್ರಯಾಣ ಒಳ್ಳೆಯದಲ್ಲ ಎಂದು ನೆನಪಾಗಿ ಆಸೆಗೆ ತಡೆ ಹಾಕಿಕೊಂಡೆ.
ಹೌದು ನಮ್ಮ ನಿರೀಕ್ಷೆ ನಿಜವಾಗಿತ್ತು.ಮಗ ಅರವಿಂದ ನ್ನ ಮಡಿಲಲ್ಲಿ ಕುಡಿಯೊಡೆದಿದ್ದ.ನಲುವತ್ತು ದಿನವಾದ ಮೇಲೆ ವೈದ್ಯರಲ್ಲಿ ಹೋದೆ. ಲ್ಯಾಬ್ ನಿಂದ ಬಂದ ವರದಿ ನೋಡಿ ಪರೀಕ್ಷಿಸಿದ ವೈದ್ಯೆ ಡಾ.ಮಾಲತಿ ಭಟ್ ಗರ್ಭಿಣಿಯಾಗಿರುವುದನ್ನು ಧೃಢ ಪಡಿಸಿದರು.ಇ ಮೊದಲು ಮೂರು ಬಾರಿ ಗರ್ಭಪಾತವಾದ ಕಾರಣ ಈ ಬಾರಿ  ತುಂಬಾ ಜಾಗ್ರತೆಯಿಂದ ಇರಬೇಕು. ಬೆಡ್ ರೆಸ್ಟ್ ತೆಗೆದುಕೊಳ್ಳಬೇಕೆಂದು ತಿಳಿಸಿದರು.ಅಷ್ಟಾಗುವಾಗ ನನಗೆ ತುಂಬಾ ವಾಂತಿ ಹಿಂಸೆ ಶುರುವಾಗಿತ್ತು.ನಮ್ಮ ಬಾಡಿಗೆ ಮನೆಯ ಓನರ್ ಮನೆಯಲ್ಲಿ ಫೋನ್ ಇತ್ತು.ಯಾವಾಗಲಾದರೊಮ್ಮೆ ಅಮ್ಮ ಅಲ್ಲಿಗೆ ಕರೆ ಮಾಡಿದರೆ ಓನರ್ ಮಡದಿ ಶೈಲಜಾ( ನನಗೆ ಒಳ್ಳೆಯ ಸ್ನೆಹಿತೆಯಾಗಿದ್ದರು) ನಮಗೆ ಫೋನ್ ಬಂದದ್ದನ್ನು ತಿಳಿಸುತ್ತಿದ್ದರು.ಅವರ ಮನೆಗೆ ( ಅವರ ಮನೆ ನಮ್ಮ ‌ಬಾಡಿಗೆ ಮನೆಯ ಪಕ್ಕದಲ್ಲಿ ಇತ್ತು) ಹೋಗಿ ಅಮ್ಮನಲ್ಲಿ ಮಾತನಾಡುತ್ತಾ ಇದ್ದೆ.
ಹೀಗೆ ಕೆಲವು ದಿನ ಕಳೆದಾಗ ಅಮ್ಮನ ಫೋನ್ ಬಂತು. ಆಗ ನಾನು ಅಮ್ಮನಿಗೆ ವಿಷಯ ತಿಳಿಸಿದೆ.ಮತ್ತು ನಮ್ಮ ‌ಮನೆಯಲ್ಲಿ ( ಅತ್ತೆ ಮನೆಯಲ್ಲಿ) ಸುಮಳಿಗಾಗಿ ಹಲಸಿನ ಹಣ್ಣನ್ನು ತೆಗೆದಿರಿಸಿದ ಬಗ್ಗೆಯೂ ಹೇಳಿದೆ.ಆಗ ಅಮ್ಮ ನಮ್ಮ ಮನೆ ತೋಟದ ಹಲಸಿನ ಮರದಲ್ಲಿ ಕೊನೆಯ ಒಂದು ಹಣ್ಣು ಇದೆ .ನಾಳೆಯೆ ಕೊಟ್ಟಿಗೆ ( ಕಡುಬು/ ಗಟ್ಟಿ) ಮಾಡಿ ನಿನಗೆ ಕಳುಹಿಸುತ್ತೇನೆ,ಸ್ವಲ್ಪ ಹಣ್ಣಿನ ಸೊಳೆಗಳನ್ನು ಕೂಡ ಗಣೇಶನ( ನನ್ನ ಸಣ್ಣ ತಮ್ಮ ,ಮಂಗಳೂರಿನ ರೋಷನಿ ನಿಲಯ ಕಾಲೇಜಿನಲ್ಲಿ ಎಂ ಎಸ್ ಡಬ್ಯೂ ಓದುತ್ತಾ ಇದ್ದರು) ಎಂದು ಹೇಳಿದರು.ಅಮ್ಮ ಹೇಳಿದಂತೆ ಮಾಡಿದರು.ಅಮ್ಮ ಕಳುಹಿಸುವ ಹಲಸಿನ ಹಣ್ಣಿನ ಕೊಟ್ಟಿಗೆ ಮತ್ತು ಹಲಸಿನ ಹಣ್ಣಿಗಾಗಿ ಜಾತಕ ಪಕ್ಷಿಯಂತೆ ಕಾದಿದ್ದೆ.ತಮ್ಮ ತಂದ ತಕ್ಷಣವೇ ತಿನ್ನಲು ಹೊರಟೆ..ಆದರೆ ನನಗೆ ಬಹಳ ಇಷ್ಟವಾಗಿದ್ದ ಹಲಸಿನ ಹಣ್ಣಿನ ಪರಿಮಳಕ್ಕೆ ಹೊಟ್ಟೆ ತೊಳಸಿ ಬಂತು. ವಾಂತಿ ಆಯಿತು. ತಿನ್ನಲಾಗಲಿಲ್ಲ.
. ಹಲಸಿನ ಹಣ್ಣು ತಿನ್ನಬೇಕೆನಿಸಿದರೂ ತಿನ್ನಲಾಗದ ಹಿಂಸೆ.
ಹೆಣ್ಣಿನ ಬದುಕೇ ವಿಚಿತ್ರ. ಮಗು ಬೇಕೆಂದು ಬಯಸಿ ಚಿಕಿತ್ಸೆ ಪಡೆದು ಗರ್ಭ ಧರಿಸಿದ್ದರೂ ಒಡಲಲ್ಲಿ ಕುಡಿ ಹುಟ್ಟಿದಾಗ ದೇಹಕ್ಕೆ ಒಗ್ಗದೆ ಆಗುವ ಹಿಂಸೆಯೇ ವಾಂತಿ.
ಅಂತೂ ಇಂತೂ ನಾಲ್ಕು ತಿಂಗಳಾಗುವಾಗ ವಾಂತಿ ಕಡಿಮೆಯಾಗಿತ್ತು.ನಂತರ ತಿನ್ನುವ ಚಪಲ / ಬಯಕೆ ಶುರು ಆಯ್ತು.
ನನಗೆ ಬೆಡ್ ರೆಸ್ಟ್ ಇತ್ತು.ಹಾಗಾಗಿ ಬೇಕಾದದ್ದನ್ನು ಮಾಡಿ ತಿನ್ನುವಂತೆ ಇರಲಿಲ್ಲ. ಪ್ರಸಾದರಿಗೆ ಮಾಮೂಲಿ‌ ಅನ್ನ ಸಾರು, ಸಾಂಬಾರ್ ಮಾಡಲು ಮಾತ್ರ ಬರುತ್ತಿತ್ತು. ನನಗೆ ಬೇಕು ಬೇಕಾದ ತಿಂಡಿಗೇನು ಮಾಡುದು? ಅಮ್ಮ ಆಗಾಗ ತಮ್ಮನ ಮೂಲಕ ಅದು ಇದು ಮಾಡಿ ಕಳಹಿಸುತ್ತಾ ಇದ್ದರು.ನನ್ನ ಅತ್ತೆ ಮನೆಯಲ್ಲಿ ಯಾವಾಗಲೂ ಸ್ವೀಟ್ ತಿಂಡಿ ಮಾಡುತ್ತಲೇ ಇರುತ್ತಿದ್ದರು.
ಪ್ರಸಾದ್ ಹೋಟೆಲಿನಿಂದ ಆಗಾಗ ತಂದು ಕೊಡುತ್ತಾ ಇದ್ದರು‌.ನನಗೆ ಬೇಕೆನಿಸಿದ ಸಿಹಿ ತಿಂಡಿಗಳನ್ನು ಬೇಕರಿಯಿಂದ ತಂದು ಕೊಡುತ್ತಾ ಇದ್ದರು.ಆದರೂ ನನಗೆ ವಿಪರೀತ ತಿನ್ನುವ ಚಪಲ ಆಗ. ಅತ್ತೆಯವರದು ದೊಡ್ಡ ಕೈ ..ಊರಿನರಿಗೆಲ್ಲಾ ಕರೆದು ಕರೆದು ಕೊಡುತ್ತಾ ಇದ್ದರು.ಹಾಗೆ ನನಗೂ  ಕಳುಹಿಸಿಯಾರೆಂದು ಒಂದು ದೂರದ ಆಸೆ ಇತ್ತು .ಮಾವ ಮೈದುನ ಆಗಾಗ ಮಂಗಳೂರಿಗೆ ಮಂಗಳೂರಿಗೆ ಏನೋ ಕೆಲಸದಲ್ಲಿ ಬರ್ತಾ ಇದ್ದರು‌.ಆಗೆಲ್ಲ ಮಂಗಳೂರಿನಲ್ಲಿ ಮನೆ ಮಾಡಿ ಇದ್ದ ಅತ್ತೆಯ ತಮ್ಮನ ಮನೆಗೆ( ಪ್ರಸಾದರ ಸೋದರ ಮಾವನ ಮನೆ) ಮನೆಯಲ್ಲಿ ಅತ್ತೆ ಮಾಡಿದ ಸ್ವೀಟ್,ಚಕ್ಕುಲಿ ತಿಂಡಿ ತಿನಿಸುಗಳನ್ನು ಕಳುಹಿಸುತ್ತಾ ಇದ್ದರು. ನಾನು ಗರ್ಭಿಣಿ ಎಂದು ಅತ್ತೆಗೆ ಮನೆ ಮಂದಿಗೆ ತಿಳಿದಿತ್ತು..ಹಾಗಾಗಿ ನನಗೂ ತಿಂಡಿ  ಕಳುಹಿಸಿ ಯಾರೆಂದು ಕಾಯುತ್ತಾ ಇದ್ದೆ.ಕಾದದ್ದೇ ಬಂತು ಅಷ್ಟೇ..
ಪ್ರಸಾದರ ದೊಡ್ಡ ಸೋದರ ಮಾವನ ಮನೆ ಮಂಗಳೂರಿನ ನಮ್ಮ ಮನೆಯ ಹತ್ತಿರವೇ ಇತ್ತು.ಅರ್ಧ ಕಿಲೋಮೀಟರ್ ದೂರ ಕೂಡ ಇರಲಿಲ್ಲ ಮತ್ತು ಸೋದರ ಮಾವ ಮತ್ತು ಅವರ ಮಡದಿ ದಿನ ನಿತ್ತ ನಮ್ಮ ಮನೆ ಎದುರಿಗಿನ ರಸ್ತೆಯಲ್ಲಿಯೇ ಓಡಾಡುತ್ತಿದ್ದರು.ಪ್ರಸಾದರ ಸೋದರ ಮಾವನ ಹೆಂಡತಿಗೆ ನಾನಾಬಗೆಯ ತಿಂಡಿ ತಿನಿಸುಗಳನ್ನು ಮಾಡಲು ಬರುತ್ತಿತ್ತು.. ಯಾವಾಗಲೂ ಮಾಡುತ್ತಿದ್ದರು ಕೂಡ.ಹಾಗೆ ನನಗೆ ಒಂದು ದಿನವಾದರೂ ತಂದು ಕೊಟ್ಟಾರೆಂದು ಕಾಯತ್ತಾ ಇದ್ದೆ..ಅಲ್ಲೂ ಅಷ್ಟೇ ಕಾದದ್ದೇ ಬಂತು .. ಒಂದು ತುಂಡು ತಿಂಡಿ ಕೂಡ ಒಂದು ದಿನವೂ ಬರಲಿಲ್ಲ ‌.ನಮ್ಮ ‌ಮನೆ ಓನರ್‌ ಮಡದಿ ಶೈಲಜಾ ನನಗಾಗಿ ಬೇರೆ ಬೇರೆ ತಿಂಡಿ ಮಾಡಿ ನನಗೆ ತಂದು‌ಕೊಡುತ್ತಾ ಇದ್ದರು.ಸ್ವಂತ ಅಕ್ಕ ತಂಗಿಯಂತೆ ನನ್ನನ್ನು ನೋಡಿಕೊಂಡಿದ್ದರು ಅವರು.ನನಗೆ ಇದ್ದ ಬಯಕೆ ಅವರ ಮೂಲಕ ಈಡೇರುತ್ತಾ ಇತ್ತು.ಜೊತೆಗೆ ಅಮ್ಮನ ಮನೆಯಿಂದ ಆಗಾಗ ತಿಂಡಿ ತಿನಿಸುಗಳು ತಮ್ಮನ ಮೂಲಕ ಬರ್ತಾ ಇತ್ತು.ಪ್ರಸಾದ್ ದಿನಾಲು ಆಫೀಸಿಂದ ಬರುವಾಗ ನನಗಾಗಿ  ಮಸಾಲೆ ದೋಸೆ, ಪಪ್ಸ್,ಗೋಭಿ ಮಂಚೂರಿ ಲಡ್ಡು ಹೋಳಿಗೆ ಮೊದಲಾದವನ್ನು ಕಟ್ಟಿಸಿಕೊಂಡು ಬರುತ್ತಾ ಇದ್ದರು.ಸಂಜೆಯಾದರೆ ಪ್ರಸಾದರ ಬರುವನ್ನೇ ಕಾಯುತ್ತಾ ಇದ್ದೆ.ನಾನು ಎದ್ದು ಓಡಾಡುವಂತೆ ಇದ್ದರೆ ಅದು ಮಾಡಿ ತಿನ್ನಬಹುದಿತ್ತು..ಇದು‌ಮಾಡಿ ತಿನ್ನಬಹುದಿತ್ತು ಎಂದು ಮನದಲ್ಲಿಯೇ ಮಂಡಿಗೆ ಮೆಲ್ಲುತ್ತಾ ಇದ್ದೆ..ಏನು ಮಾಡುದು..ಎಂಟು ತಿಂಗಳು ತುಂಬುವವರೆಗೂ ವೈದ್ಯರು ಬೆಡ್ ಹೇಳಿದ್ದರು.ದಿನ ಬಿಟ್ಟು ದಿನ ಏನೋ ಇಂಜೆಕ್ಷನ್ ತಗೊಳ್ಳಬೇಕಿತ್ತು. ನಮ್ಮ ಮನೆಗೆ ತುಂಬಾ ಹತ್ತಿರದಲ್ಲಿ ನಮ್ಮ ಆತ್ಮೀಯರಾದ  ಬಡೆಕ್ಕಿಲ ಡಾಕ್ಟರ್ ಅವರ ಮನೆ ಇತ್ತು.ಅವರು ಮನೆಗೆ ಬಂದು ನನಗೆ ಇಂಜೆಕ್ಷನ್ ಕೊಟ್ಟು ಹೋಗುತ್ತಿದ್ದರು.ಒಮ್ಮೊಮ್ಮೆ ಅವರ ಮಡದಿ ಲಲಿತಕ್ಕ ಮಾಡಿ ಕೊಟ್ಟ ತಿಂಡಿಯನ್ನು ಜೊತೆಯಲ್ಲಿ ತಂದು ಕೊಡುತ್ತಿದ್ದರು. ಆರು ತಿಂಗಳಾದಾಗ ನನಗೆ ವೈದ್ಯರು ನಿದಾನಕ್ಕೆ ಒಂದರೆಡು ನಿಮಿಷ ನಡೆಯಲು ಅನುಮತಿ ಕೊಟ್ಟಿದ್ದರು.ಹಾಗಾಗಿ ನಂತರ ನಾನೇ ಅವರ ಮನೆಗೆ ಹೋಗಿ ಇಂಜೆಕ್ಷನ್ ಹಾಕಿಸಿಕೊಂಡು ಮನೆಗೆ ಬರುತ್ತಿದ್ದೆ.ಹೀಗೆ ಏಳು ತಿಂಗಳ ಕಾಲ ದಿನ ಬಿಟ್ಟು ದಿನ ಇಂಜೆಕ್ಷನ್ ತಗೊಂಡಿದ್ದೆ‌.ಇಂಜೆಕ್ಷನ್ ‌ಮತ್ತು ಸಿರಿಂಜನ್ನು ಪ್ರಸಾದ್ ಮೆಡಿಕಲ್ ಶಾಪ್ ನಿಂದ ತಂದು‌ಕೊಡುತ್ತಿದ್ದರು..
ಏಳು ತಿಂಗಳ ಕಾಲ ಎರಡು ದಿನಕ್ಕೊಮ್ಮೆ ನನಗೆ ಇಂಜೆಕ್ಷನ್ ನೀಡಿದ ಬಡೆಕ್ಕಿಲ ಡಾಕ್ಟರ್ ನನ್ನಿಂದ ಒಂದು ನಯಾ ಪೈಸೆ ಪೀಸ್ ಕೂಡ ತೆಗೆದುಕೊಂಡಿಲ್ಲ..ಕಷ್ಟಕಾಲದಲ್ಲಿ ನೆರವಾದ ಅವರನ್ನು ಯಾವತ್ತಿಗೂ ನಾನು‌ ಮರೆಯಲಾರೆ.ಅವರ ಮಗ ನಂದ ಕಿಶೋರ್ ಈಗ ಖ್ಯಾತ ಯೂರೋಲಜಿಷ್ಟ್ ಆಗಿದ್ದಾರೆ‌.
ನಾನು ತಿಂಗಳಿಗೊಮ್ಮೆ  ಗೈನಕಾಲಜಿಷ್ಟ್  ಡಾ.ಮಾಲತಿ ಭಟ್ ಅವರನ್ನು  ಕಾಣಬೇಕಿತ್ತು.ಆಗೆಲ್ಲ ನನಗೆ ಜೊತೆಯಾದವರು  ಓನರ್ ಮಡದಿ ಸ್ನೇಹಿತೆ ಶೈಲಜಾ. ಬಾಡಿಗೆ ಕಾರಿನಲ್ಲಿ ಹೋಗಿ ಬರುತ್ತಿದ್ದೆವು.ಮನೆಯಿಂದ ಮಾಲತಿ ಭಟ್ ಅವರ ಭಟ್ಸ್ ನರ್ಸಿಂಗ್ ಹೋಮಿಗೆ ಎರಡು ಮೂರು ಕಿಮೀ ದೂರ  ಅಷ್ಟೇ, ಆದರೆ ಬೆಡ್ ರೆಸ್ಟ್ ಇದ್ದ ಕಾರಣ ಆಟೋ ದಲ್ಲಿ ಹೋಗುವಂತಿರಲಿಲ್ಲ..ದುಬಾರಿ ದುಡ್ಡು ನೀಡಿ ಕಾರಿನಲ್ಲಿ ಹೋಗಬೇಕಾಗಿತ್ತು‌.ಆದರೆ ಶೈಲಜಾ ಅವರ ಪರಿಚಯದ ಓರ್ವ  ಬಾಡಿಗೆಗೆ ಕಾರು ಓಡಿಸುವ  ಕಾರ್ ಡ್ರೈವರ್ ನಮಗೆ ಸ್ವಲ್ಪ  ಕಡಿಮೆ ಬಾಡಿಗೆ  ತಗೊಳ್ಳುತ್ತಾ ಇದ್ದರು.
ಹಾಗಾಗಿ ಅವರಿಗೆ ಶೈಲಜಾ ತಮ್ಮ ‌ಮನೆಯ ಲ್ಯಾಂಡ್‌ ಲೈನ್ ಪೋನ್ ನಿಂದ ಫೋನ್ ಮಾಡಿ ಬರಹೇಳುತ್ತಿದ್ದರು‌.ನಾವಿಬ್ಬರು ಹೋಗಿ ಬರುತ್ತಾ ಇದ್ದೆವು.
ಎಂಟು ತಿಂಗಳು ತುಂಬಿದ ನಂತರ ನನಗೆ ಕಾರಿನಲ್ಲಿ ಆಯಾಸವಾಗದಂತೆ ಮೂವತ್ತು ನಲುವತ್ತು ಕಿಮೀ ಪ್ರಯಾಣ ಮಾಡಬಹುದು, ಮನೆಯಲ್ಲೂ ಜಾಗರೂಕತೆಯಿಂದ ಓಡಾಡಬುದು ಎಂದು ಡಾಕ್ಟರ್ ತಿಳಿಸದ್ದರು.ನಮ್ಮಲ್ಲಿ ಗರ್ಬಿಣಿಗೆ ಗಂಡನ ಮನೆಯಲ್ಲಿ ಏಳು ತಿಂಗಳಿನಲ್ಲಿ ಕೋಡಿ ಹೋಮ/ ಸೀಮಂತ ಮಾಡುವ ಪದ್ಧತಿ ಇದೆ.ನಾನು ಈ ಬಗ್ಗೆ ಅತ್ತೆಯವರಲ್ಲಿ ಹೇಳಿದಾಗ ಅವರು ಅದಕ್ಕೆ ಒಪ್ಪಲಿಲ್ಲ. ಯಾಕೆಂದರೆ ಅವರ ಸಂಬಂಧಿಕರಲ್ಲಿ ಯಾರಿಗೋ ಒಬ್ಬರಿಗೆ ಸೀಮಂತ ಮಾಢಿದ ನಂತರ ಗರ್ಭಪಾತ ಆಯಿತಂತೆ! ಹಾಗೆ ನನಗೂ ಆದರೆ ಅವರಿಗೆ ಅವಮಾನವಂತೆ!
ನನ್ನ ಮೈದುನನ ಮಡದಿ ಕೂಡ ಚೊಚ್ಚಲ ಗರ್ಭಿಣಿ ಆಗಿದ್ದಳು ಎಂದು ಹೇಳಿದ್ದೆನಲ್ಲ
ಅವಳಿಗೆ ಮನೆಯಲ್ಲಿ ಭಾರೀ ವಿಜೃಂಭಣೆಯಿಂದ ಕೋಡಿ ಹೋಮ/ ಸೀಮಂತ ಮಾಡಿದರು.ಪ್ರಸಾದ್ ಹೋಗಿದ್ದರು.ಅವರ ಕೈಯಲ್ಲಿ ಕೂಡ ಮಾಡಿದ ಒಂದು ತುಂಡು ಸ್ವಿಟ್ ನನಗೆ ಕಳುಹಿಸಿರಲಿಲ್ಲ. ಗರ್ಭ ಪಾತವಾಗಿ ಅವಮಾನ ಪಡುವವರಿಗೆ ಸ್ವಿಟ್ ಕೊಡುವುದು ವೇಸ್ಟ್ ಎಂದು ಭಾವಿಸಿರಬಹುದು.
ನಂತರ ನನ್ನ ತಂದೆಯವರು ಅತ್ತೆ ಮಾವನ ಮನೆಗೆ ಹೋಗಿ ಮಗಳಿಗೆ ಕೋಡಿ ಹೋಮ ಮಾಡಿ ನಮ್ಮ ಮನೆಗೆ ( ತಮದೆ ಮನೆಗೆ) ಕಳುಹಿಸಿಕೊಡಿ ಎಂದು ಕ್ರಮಪ್ರಕಾರ ಕೇಳಿದಾಗ ಬೇರೆ  ವಿಧಿಯಿಲ್ಲದೆ ಕಾಟಾಚಾರಕ್ಕೆ ಯಾವ ಸಂಬಂಧಿಕರಿಗೂ ತಿಳಿಸದೆ ಸಣ್ಣಕೆ ಮನೆಯಲ್ಲಿ ಕೋಡಿ ಹೋಮ ಮಾಡಿದರು.ಹುಟ್ಟುವ ಮಸರಿಯಾಗಿ ಸ್ವೀಟ್  ಕೂಡ ಮಾಡಲಿಲ್ಲ. ನಂತರ ನಾನು ತಂದೆ ಮನೆಗೆ ಹೋಗಿ ಎರಡು ದಿನ ಇದ್ದು ಕಾರಿನಲ್ಲಿ ಮಂಗಳೂರಿನ ನಮ್ಮ ಮನೆಗೆ ಬಂದೆ.ಪ್ರಸವದ ನಂತರ ತಂದೆ ಮನೆಗೆ ಹೊಗುವುದು ಎಂದು ನಿರ್ಧರಿಸಿದೆ.
1998 ರ ಮೇ ತಿಂಗಳಿನ 14-15 ರ ಒಳಗೆ ಪ್ರಸವ ಆಗಬಹುದು, ಸಿಸೇರಿಯನ್ ಆಗಬೇಕು ಎಂದು ವೈದ್ಯರು ಮೊದಲೇ ಹೇಳಿದ್ದರು.ಮರುದಿವಸದಿಂದ ಅಮ್ಮ ನನ್ನ ಜೊತೆಯಲ್ಲಿ ಬಂದು ಇರುತ್ತೇನೆ ಎಂದು ಹೇಳಿದ್ದರು.
1998 ಎಪ್ರಿಲ್ 28 ರಂದು ಬೆಳಗಿನಿಂದ ನನಗೆ ಏನೋ ಹಿಂಸೆ ,ಪ್ರಸಾದ್ ಆ ದಿನ ಆಫೀಸ್ ಕೆಲಸದಲ್ಲಿ ಮಣಿಪಾಲ್  ಹೋಗಿದ್ದರು. ನಾನು ಶೈಲಜಾ ರಲ್ಲಿ ನನಗೆ ಏನೊ ಹಿಂಸೆ ಅಗುತ್ತಿದೆ ಎಂದು ಹೇಳಿದೆ.ಆಗ ಅವರು ನಾವು ಆಸ್ಪತ್ರೆಗೆ ಹೋಗಿ ಬರುವ ಎಂದು ಹೇಳಿ ಬಾಡಿಗೆ  ಕಾರಿನ ಡ್ರೈವರ್ ಗೆ ಫೋನ್ ಮಾಡಿ ಬರಲು ಹೇಳಿದರು.ಕಾರು ಬರುವಷ್ಟರಲ್ಲಿ  ಶೈಲಜಾ ಮನೆಗೆ ಯಾರೋ ನೆಂಟರು ಬಂದರು.ಆಗ ಶೈಲಜಾ ನೀವು ಕಾರಲ್ಲಿ ಹೋಗಿ ,ಸ್ವಲ್ಪ ಹೊತ್ತು ಬಿಟ್ಟು ( ಬಂದನೆಂಟರಲ್ಲಿ ಮಾತನಾಡಿ ಅವರಿಗೆ ಕಾಫಿ ಮಾಡಿ ಕೊಟ್ಟು ಅವರು ಹೋದ ಕೂಡಲೇ )  ನಾನು ಅಟೋದಲ್ಲಿ  ಆಸ್ಪತ್ರೆಗೆ ಬರುತ್ತೇನೆ ಎಂದು ನನ್ನನ್ನು ಕಾರು ಹತ್ತಿಸಿ ಕಳುಹಿಸಿದರು .
ನಾನು ಕಾರು ಇಳಿಯುತ್ತಿದ್ದಂತೆ ವೈದ್ಯರಾದ ಡಾ.ಮಾಲತಿ ಭಟ್ ಹೊರಗೆ ಹೋಗಲು ಅವರ ಕಾರಿನ ಬಳಿಗೆ ಬರುತ್ತಾ ಇದ್ದರು‌.ಪರಿಣತ ವೈದ್ಯರಾದ ಅವರು ನನ್ನನ್ನು ಒಂದು ಕ್ಷಣ ದಿಟ್ಟಿಸಿ ನೋಡಿದರು‌.ಮತ್ತೆ ಅವರು ಕಾರು ಹತ್ತದೆ ಒಳಗೆ ಬಾ ಎಂದು ನನ್ನನ್ನು ಕರೆದು  ಪರೀಕ್ಷಾ ಕೊಠಡಿಗೆ ಹೋದರು.ನನ್ನನ್ನು ಪರೀಕ್ಷೆ ಮಾಡಿದ  ತಕ್ಷಣವೇ ಅಲ್ಲಿನ ಮುಖ್ಯ ನರ್ಸಿಗೆ ಏನೋ ಹೇಳಿದರು‌, ಮಗುವಿನ ಹಾರ್ಟ್ ಬೀಟ್ ನಿದಾನವಾಗಿದೆ ..ಕೂಡಲೇ ಸಿಸೇರಿಯನ್  ಮಾಡಬೇಕು ಎಂದು ಹೇಳಿದರು.ಅಷ್ಟರಲ್ಲಿ ಶೈಲಜಾ ಬಂದಿದ್ದರು. ಅವರು ಸಹಿ ಮಾಡಿದರು. ಮುಖ್ಯ ನರಸ್ ನನ್ನನ್ನು ಅಪರೇಷನ್ ಕೊಠಡಿಗೆ ಕರೆದುಕೊಂಡು ಹೋದರು‌.ಏನೇನೋ ಇಂಜೆಕ್ಷನ್ ಕೊಟ್ಟರು.ಅಪರೇಷನ್ ಸಮಯದಲ್ಲಿ ಹಾಕುವ ಹಸಿರು ಗೌನ್ ಹಾಕಿದರು‌.ಅಪರೇಷನ್ ಟೇಬಲ್ ನಲ್ಲಿ ಮಲಗಿಸಿದರು‌.ಕಣ್ಣಗೆ ಮಂಪರು ಆವರಿಸಿ ಕಣ್ಣು‌ಮುಚ್ಚಿದೆ.ಪೂರ್ತಿಯಾಗಿ ಎಚ್ಚರ ತಪ್ಪಿರಬೇಕು..ಇದ್ದಕ್ಕಿದ್ದಂತೆ ಉಸಿರಾಟಕ್ಕೆ ತುಂಬಾ ಕಷ್ಟವಾಯಿತು ಎಚ್ಚರವಾಯಿತು.ಕಣ್ಣು ತೆರೆದು ನೋಡಿದಾಗ ಹಸಿರು ಬಟ್ಟೆ ತೊಟ್ಟಿದ್ದ ವೈದ್ಯರು ಮಸುಕು ಮಸುಕಾಗಿ ಕಾಣಿಸಿದರು.‌ಬೆನ್ನಲ್ಲಿಯೇ ತೀವ್ರ ಹೊಟ್ಟೆ ನೋವಾಗಿ ಅಮ್ಮಾ ಎಂದು ದೊಡ್ಡಕೆ ಬೊಬ್ಬೆ ಹಾಕಿದೆ..ಆಗ ವೈದ್ಯರು ನನ್ನ ಬಾಯಿಯನ್ನು ಬಲವಂತವಾಗಿ ತೆರೆದು  ಏನೋ ಟ್ಯೂಬನ್ನು ತುರುಕಿದರು‌ ತೀವ್ರ ನೋವಾಗುತ್ತಾ ಇತ್ತು.ನನ್ನನ್ನು ಒಂದಿನಿತು ಮಿಸುಕಾಡದಂತೆ ಸಿಸ್ಟರ್ ಗಳು ಗಟ್ಟಿಯಾಗಿ ಹಿಡಿದಿದ್ದರು. ಅವಳಿಗೆ ಎಚ್ಚರ ಅಗಿದೆ ಅನಾಸ್ತೇಶಿಯಾ ಜಾಸ್ತಿ ಮಾಡಿ ಅಂತ ಏನೋ ಹೇಳಿದು ಕೇಳಿಸಿತು..ಜೊತೆಗೆ ಉಸಿರಾಟಕ್ಕೆ  ಸ್ವಲ್ಪ ಅರಾಮ ಎನಿಸಿತು.ಇಷ್ಟೆಲ್ಲಾ ಹತ್ತು ಹದಿನೈದು ಸೆಕುಂಡ್ ಗಳ ಕಾಲದಲ್ಲಿ ಅಗಿತ್ತು‌.ಮತ್ತೆ ನನಗಡ ಮಂಪರು ಅವರಿಸಿ ನಿದ್ದೆ ಬಂತು..
ಮತ್ತೆ ಯಾರೋ ಒಬ್ಬರು ನನ್ನನ್ನು ಕುಲುಕಿ,ತಲೆಗೆ ಬಡಿದು ,ಕೈಗೆ ಚಿವುಟಿ ಲಕ್ಷ್ಮೀ ಕಣ್ಣು ತೆರೆಯಿರಿ..ಅಪರೇಷನ್ ಆಯಿತು. ನಿಮಗೆ‌ಮಗ ಹುಟ್ಟಿದ್ದಾನೆ ನೋಡಿ ಎಂದು ಮತ್ತೆ ಮತ್ತೆ ಹೇಳುತ್ತಾ ಇದ್ದರು..ಹೇಗೋ ಕಣ್ಣು ತೆರೆದೆ..ಮತ್ತೆ ಹಸಿರು ಗೌನ್ ತೊಟ್ಟ ವೈದ್ಯರು ಕಾಣಿಸಿದರು.ನಾನು ಹೇಳುದು ಕೇಳಿಸ್ತಿದೆಯಾ ? ನಿಮಗೆ  ಗಂಡು ಮಗು ಹುಟ್ಟಿದೆ ..ಕಣ್ಣು ‌ಮುಚ್ಚಬೇಡಿ..ನಿಮ್ಮ ಹೆಸರು ಹೇಳಿ ಎಂದು ಹೇಳಿದರು..ನಾಲಗೆ ತೊದಲುತ್ತಾ ಇತ್ತು..ಹೇಗೋ ಲಕ್ಷ್ಮೀ ಎಂದು ನನ್ನ ಹೆಸರು ಹೇಳಿದೆ.. ನನಗೆ ಉಸಿರಾಡಲು ತುಂಬಾ ಕಷ್ಟ ಅಗುತ್ತಾ ಇತ್ತು‌.ಅಲ್ಲಿ ಆ ವೈದ್ಯರು ಇನ್ಯಾರಿಗೋ ಅವರಿಗೆ ಎಚ್ಚರಾಗಿದೆ. ಆಕ್ಸಿಜನ್ ಕಂಟಿನ್ಯೂ ಮಾಡಿ‌..ಅವರಿಗೆ ಉಸಿರಾಟದ ತೊಂದರೆ ಇದೆ ಅಂತ ಮೊದಲೇ ಹೇಳ್ಬೇಕಿತ್ತು..ಎಂದೇನೋ ಹೇಳುತ್ತಾ ಇದ್ದರು.ಮತ್ತೆ  ನನ್ನ ಮುಖಕ್ಕೆ ಏನನ್ನೋ ಗಟ್ಟಿಯಾಗಿ ಹಿಡಿದರು( ಶ್ವಾಸಕೋಶಕ್ಕೆ ಆಕ್ಸಿಜನ್ ಟ್ಯೂಬ್  ಹಾಕಿದ್ದನ್ನು ತೆಗೆದು ಆಕ್ಸಿಜನ್  ಮಾಸ್ಕ್ ಹಾಕಿದ್ದು ಎಂದು ನನಗೆ ನಂತರ ಸಿಸ್ಟರ್ ಹೇಳಿ ತಿಳಿಯಿತು) ಮಂಪರು ಅವರಿಸಿ ಮತ್ತೆ ಕಣ್ಣು‌ಮುಚ್ಚಿದೆ.
ಈ ನಡುವೆ ಶೈಲಜಾ ಪ್ರಸಾದ್ ಆಪೀಸ್ ಗೆ ಫೋನ್ ಮಾಡಿ ಅವರನ್ನು ಬರಲು ಹೇಳಿದ್ದರು ನನ್ನ ಅಮ್ಮನ ಮನೆಗೂ ಪೋನ್ ಮಾಡಿ ವಿಷಯ ತಿಳಿಸಿದ್ದರು..ಪ್ರಸಾದ್ ಬಂದ ಮೇಲೆ (ಅವರ ಮನೆಗೆ ಯಾರೋ ಬಂದ ಕಾರಣ) ಮನೆಗೆ ಹೋಗಿದ್ದರು. ಸಿಸೇರಿಯನ್ ಮುಗಿಯುವಷ್ಟರಲ್ಲಿ ಪ್ರಸಾಸ್ ಆಸ್ಪತ್ರೆಗೆ ಬಂದಿದ್ದರು. ನನ್ನ ‌ಮಗ ಮುದ್ದು ಬೊಮ್ಮಟೆಯನ್ನು ಬಿಳ ಬಟ್ಟೆಯಲ್ಲಿ  ಬೆಚ್ವನೆ ಸುತ್ತಿ ಪ್ರಸಾದ್ ಕೈಗೆ ಸಿಸ್ಟರ್ ತಂದು ಕೊಟ್ಟಿದ್ದರು. ನನಗೆ ಉಸಿರಾಟದ ತೊಂದರೆ ಕಾಣಿಸಿದ ಕಾರಣ ಐಸಿಯುವಿಗೆ ಶಿಪ್ಟ್ ಮಾಡಿದ್ದರು.
ಪ್ರಸಾದ್ ಅವರ ಜೀವನದಲ್ಲಿ ಮೊದಲ ಬಾರಿಗೆ ಆಗಷ್ಟೇ ಹುಟ್ಟಿದ ಮಗುವನ್ನು ನೋಡಿದ್ದು ಮತ್ತು ಎತ್ತಿಕೊಂಡದ್ದು.ಅವರಿಗೆ ಮೊದಲು ಇವನು ಅತ್ತರೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲವಂತೆ.
ರಾತ್ರಿ ಅಗುವಷ್ಟರಲ್ಲಿ ಅಮ್ಮ ಮತ್ತು ತಮ್ಮ ಗಣೇಶ ಬಂದರು.
ನನ್ನ ಉಸಿರಾಟ ಸುಮಾರಾಗಿ ತಹಬದಿಗೆ ಬಂದು ಆಕ್ಸಿಜನ್ ಮಾಸ್ಕ್ ನೊಂದಿಗೆ  ನನ್ನನ್ನು ರಾತ್ರಿ ವಾರ್ಡ್ ಗೆ ಶಿಪ್ಟ್ ಮಾಡಿದರು‌.ಆಗಲೂ ಮಂಪರು ನನಗೆ. ಅಮ್ಮ ಮಗನನ್ನು ನನ್ನ ಮಗ್ಗುಲಲ್ಲಿ ಮಲಗಿಸಿದರು..ಮುದ್ದು ಬೊಮ್ಮಟೆ ಕಣ್ಣು ಮುಚ್ಚಿ ನಿದ್ರೆ ಮಾಡುತ್ತಾ ಇತ್ತು..
ನಾಳೆ ಮತ್ತೆ ಇಪ್ಪತ್ತು ವರ್ಷಗಳ ನಂತರದ ಎಪ್ರಿಲ್ 28 ಬರುತ್ತಿದೆ ..ಮಗನ ಬರ್ತ್ ಡೇ ನಾಳೆ....ಸಹೃದಯಿ ಮಗನನ್ನು ನನಗೆ ದಯಪಾಲಿಸಿ ಅಮ್ಮನ ಪದವಿಯನ್ನು ಕೊಟ್ಟ ದೇವರಿಗೆ ನಾನು ಆಭಾರಿಯಾಗಿದ್ದೇನೆ ಜೊತೆಗೆ ನೋಟ ಮಾತ್ರದಲ್ಲಿಯೇ ನನಗೆ ಏನೋ ಸಮಸ್ಯೆ ಆಗಿದೆ ಎಂಬುದನ್ನು ಗಮನಿಸಿ ಹೊರಗೆ ಹೋಗಲು ಕಾರಿನ ಬಳಿ ಬಂದು ,ಹಿಂದೆ ಹೋಗಿ ನನ್ನನ್ನು ಕರೆದು ಪರೀಕ್ಷಿಸಿ ತಕ್ಷಣವೇ ಸಿಸೇರಿಯನ್ ಮಾಡಿ ನನ್ನನ್ನು ನನ್ನ ಮಗನನ್ನು ಬದುಕಿಸಿ ಕೊಟ್ಟ ಡಾ.ಮಾಲತಿ ಭಟ್ ಅವರನ್ನು ಕೂಡ ಸದಾ ನೆನೆಯುತ್ತೇನೆ.
ಆದರೆ ನನಗೆ ಇಂದಿಗೂ ಒಂದು ಅರ್ಥವಾಗದ ವಿಚಾರ ಒಂದಿದೆ. ಮೈದುನನ ಮಡದಿಗಾಗಿ ಅಪರೂಪಕ್ಕೆ ಬಂದ ಮಗನಿಗೂ ಹಲಸಿನ ಹಣ್ಣನ್ನು ಕೊಡದೆ ಮೀಸಲಿರಿಸಿದ ಅತ್ತೆ ನನಗೂ ಬಯಕೆ ಇದೆ ಎಂಬುದನ್ನೇಕೆ ಮರೆತರು? ನನ್ನ ಅತ್ತೆಯವರು ನಮ್ಮ ಸಂಬಂಧಿಕರಲ್ಲಿ ಯಾರೇ ಬಸುರಿಯಾದರೂ ಅವರನ್ನು ಮನೆಗೆ  ಕರೆದು ಔತಣದ ಊಟ ತಯಾರು ಮಾಡಿ ಬಡಿಸುತ್ತಿದ್ದರು‌‌.ತಮ್ಮ ತಂಗಿಯರಿಗೆ ನೀಡದ ತಿಂಡಿ ತಿನಿಸುಗಳೇ ಇಲ್ಲ ..ಆದರೂ ಆ ಸಂಬಂಧಿಕರಿಗೆ  ಅತ್ತೆಯ ಸೊಸೆಗೆ( ನನಗೆ) ಏನಾದರೂ ತಿಂಡಿ ಮಾಡಿ  ಕೊಡಬೇಕೆಂದು ಅನಿಸಲಿಲ್ಲ..ಅತ್ತೆಯ ತಮ್ಮ ತಮ್ಮನ ಮಡದಿಯ ಮನೆ ನಮ್ಮ ಮನೆ ಹತ್ತಿರದಲ್ಲಿ ಇದ್ದು ದಿನಾಲೂ ಮನೆ ಮುಂದಿನ ರಸ್ತೆಯಲ್ಲಿ ಓಡಾಡುತ್ತಿದ್ದರೂ ಒಂದು ದಿನವಾದರೂ ತಮ್ಮ ಮನೆಗೆ ಒಂದು ಹೊತ್ತಿನ ಊಟಕ್ಕೆ ಕರೆಯಬೇಕೆನಿಸಲಿಲ್ಲ..? ತಿಂಡಿ ತಂದು ಕೊಡಬೇಕೆನಿಸಲಿಲ್ಲ ಯಾಕೆ ? ಅದಕ್ಕಿಂತ ಮೊದಲು ನನಗೆ ಎರಡು ಮೂರು ತಿಂಗಳಾಗಿ ಗರ್ಭ ಹೋಗಿತ್ತು.. ಹಾಗಾಗಿಯೂ ಈ ಬಾರಿಯೂ ಉಳಿಯಲಾರದೆಂಬ ತಾತ್ಸಾರ ಇತ್ತೇ ? ಒಂದೊಮ್ಮೆ ಗರ್ಭಪಾತವೇ ಅಗುವುದಾದರೂ ಕೂಡ ಸಹಜವಾದ ಬಯಕೆ ಆಗ ಕೂಡ ಇರುತ್ತದಲ್ಲ...ಅದಿವರಿಗೆ ಅರ್ಥವಾಗಿಲ್ಲವೇಕೆ? ಹೇಗೂ ಗರ್ಭ ಹೋಗುತ್ತದೆ,ಹಾಗಾಗಿ ಇವಳಿಗೆ ತಿಂಡಿ ತಿನಿಸುಗಳು ಕೊಟ್ಟರೆ ವೇಸ್ಟ್  ಎಂದು ಕೊಂಡರೇ ? ನನಗೆ ಇಂದಿಗೂ ಅರ್ಥವಾಗಿಲ್ಲ..ನನ್ನ  ಅಮ್ಮ ಅಕ್ಕನ ಹೊರತಾಗಿ ಯಾರೂ ನನಗ ಬಸುರಿ ಸಮ್ಮಾನ( ಔತಣ) ಬದಲಿಗೆ ತಿಂಡಿ ತಿನಿಸುಗಳನ್ನು ತಂದು ಕೊಟ್ಟದ್ದಿಲ್ಲ.
ಇರಲಿ ,ಕೊಡದಿದ್ದುದೇ ಒಳ್ಳೆಯದಾಯಿತು.
ಕೊಟ್ಟವರ ಕೈ ಯಾವಾಗಲೂ ಮೇಲೆ,ತಗೊಂಡವರ ಕೈ ಯಾವಾಗಲೂ ಕೆಳಗೆ ಇರುತ್ತದೆ.ಇವರುಗಳು ಕೊಡದ ಕಾರಣ ನನ್ನ ಕೈ ಕೆಳಗಾಗಲಿಲ್ಲ .ಹಾಗಾದಂತೆ ದೇವರು ಕಾದಿರಬೇಕು.ಈವತ್ತು ಹವ್ಯಕಾಂಗಣ ವಾಟ್ಸಪ್ ಗ್ರೂಪಿನಲ್ಲಿ  ಹಲಸಿನ ಹಣ್ಣಿನ ಚಿತ್ರ ಹಾಕಿದ್ಷರು.ನೋಡುತ್ತಲೇ ಇವೆಲ್ಲ ನೆನಪಾಗಿ ಬರೆದೆ..ಕಾಕತಾಳೀಯ ಎಂಬಂತೆ ಮಗನ ಹುಟ್ಟು ಹಬ್ಬ ನಾಳೆಯೇ ಇದೆ.
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ ,ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ




No comments:

Post a Comment