Tuesday 16 April 2019

ನನ್ನೊಳಗೂ ಒಂದು ಆತ್ಮವಿದೆ ..3 ಒನಕೆಯಲ್ಲಿ ಬರೆದ ಆಯಸ್ಸು ನನ್ನದೇ ?

ನನ್ನೊಳಗೂ ಒಂದು ಆತ್ಮವಿದೆ ..3
ಒನಕೆಯಲ್ಲಿ ಬರೆದ ಆಯಸ್ಸು ನನ್ನದೇ ?
  ನನ್ನ ಎರಡನೇ ನೆನಪು ಸುಮಾರು ನಾಲ್ಕು ನಾಲ್ಕೂವರೆ ವರ್ಷವಾಗಿದ್ದಾಗಿನದು.
ನನಗೆ  ನಾಲ್ಕು ನಾಲ್ಕೂವರೆ ವರ್ಷ ಆದಾಗ  ನನ್ನ ತಾಯಿ ಸರಸ್ವತಿ ಅಮ್ಮ ನನ್ನ  ಸಣ್ಣ ತಮ್ಮ ಗಣೇಶನ ಹೆರಿಗೆಗಾಗಿ ತವರು ಮನೆ ಹೊಸಮನೆಗೆ ಬಂದಿದ್ದರು.ನನ್ನ ತಾತ ಈಶ್ವರ ಭಟ್ಟರಿಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ.ದೊಡ್ಡವರು ಗೌರಮ್ಮ, ಎರಡನೇ ಯವರು ನನ್ನ ತಾಯಿ ಸರಸ್ವತಿ ಅಮ್ಮ. ನನ್ನ ಅಜ್ಜನ ಮನೆಗೆ ಹತ್ತಿರದಲ್ಲಿ ಮೀಯಪದವಿನ ವಿದ್ಯಾ ವರ್ಧಕ ಶಾಲೆ ಇದೆ.ಹಾಗಾಗಿ ಇಲ್ಲಿ ನನ್ನ ದೊಡ್ಡಮ್ಮ ಗೌರಮ್ಮನ ಮಕ್ಕಳಾದ ಪಾರ್ವತಿ ( ಅಕ್ಕು) ಮತ್ತು ರಾಧಾಕೃಷ್ಣ ( ಮಗ್ವ) ಓದುತ್ತಾ ಇದ್ದರು.ನನ್ನ ದೊಡ್ಡಮ್ಮನ ಮಗಳು ಅಕ್ಕ ಪಾರ್ವತಿಗೆ ( ಅಕ್ಕುಗೆ) ನಾನು ಎಂದರೆ ಬಹಳ ಪ್ರೀತಿ. ರಾತ್ರಿ ಕೂಡ ನಾನು‌ ಅಕ್ಕುವಿನ ಜೊತೆಯಲ್ಲಿ ಮಲಗುತ್ತಾ ಇದ್ದೆ.ಅಕ್ಕು ದಿನಾಲು ಬೆಳಗ್ಗೆ ಬೇಗನೆ ಎದ್ದು ದೇವರಿಗೆ ಹೂ ಕೊಯ್ದು ತರುವ ಕೆಲಸ ಮಾಡುತ್ತಾ ಇದ್ದರು.ಆಗಿನ್ನೂ ಅವರು ಆರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ.
ಒಂದು ದಿನ ಮಳೆಗಾಲದಲ್ಲಿ ಬೆಳಗ್ಗೆ ಬೇಗ ಎದ್ದು ಹೂ ಕೊಯ್ಯಲು ಅಕ್ಕು ಹೊರಟಾಗ ನಾಲ್ಕು ವರ್ಷದ ಮಗುವಾಗಿದ್ದ ನಾನು ಕೂಡ ಎದ್ದು ಹೂವಿನ ಬುಟ್ಟಿ ಹಿಡಿದುಕೊಂಡು ಅಕ್ಕನ ಜೊತೆ ತಾನೂ ಹೂ ಕೊಯ್ಯಲು ಹೋಗಿದ್ದೆ .ಆಗಷ್ಟೇ ಜೋರು ಮಳೆ ಸುರಿದು ನಿಂತಿತ್ತು.ಹೊಸಮನೆ ತೋಟದ ಕಟ್ಟದ  ಬದಿಯಲ್ಲಿ ಒಂದು ತೊರೆ ಹರಿಯುತ್ತದೆ‌.ಅದರ ಪಾಪು(  ಅಡಿಕೆ ಮರದ ಉದ್ದನೆಯ  ಕಾಂಡದಿಂದ ಮಾಡಿದ ಕಾಲು ಸಂಕ)  ದಾಟುವಾಗ ಕೆಳಗೆ ನೋಡಿದ್ದೆ.ಪಾಪಿಗೆ ಮುಟ್ಟುತ್ತಾ ಮುಟ್ಟುತ್ತಾ ಕೆಂಪು ಪ್ರವಾಹ ಹರಿಯುತ್ತಾ ಇತ್ತು. ಸಣ್ಣಾಗಿಂದಿನಿಂದಲೂ ಮಳೆಗಾಲದಲ್ಲಿ ಅದನ್ನು  ನೋಡುತ್ತಾ ಬೆಳೆದಿದ್ದ ನನಗೇನೂ ಭಯ ಆಗಿರಲಿಲ್ಲ‌.

ತೊರೆಯ ಬದಿಯಲ್ಲಿ ಒಂದು ಮಂಜೊಟ್ಟಿ ಹೂವಿನ ಗಿಡ ತುಂಬಾ ಹೂ ಬಿಟ್ಟಿತ್ತು.ಅಕ್ಕ ತಂಗಿ ಇಬ್ಬರೂ ಮಂಜೊಟ್ಟಿ ಹೂ ಕೊಯ್ಯಲು ಹೊರಟಿದ್ದೆವು.ನಾನು  ಹೂ ಬುಟ್ಟಿಯನ್ನು ಹಿಡಿದಿದ್ದೆ.  ಅಕ್ಕ "ನೀನು ಹೂ ಕೊಯ್ಯ ಬೇಡ ,ಕುರುವೆ( ಬುಟ್ಟಿ) ಹಿಡಿದುಕೋ " ಎಂದು ಹೇಳಿ ಗೆಲ್ಲು ಬಗ್ಗಿಸಿ  ಹೂ ಕೊಯ್ಯತ್ತಾ ಇದ್ದಳು.ಅವಳು ಹಾಗೆ ಹೇಳಿದ್ದರೂ ಸುಮ್ಮನಿರದೆ ಬಾಲ ಸಹಜ ಚೇಷ್ಟೆಯಿಂದ ತೊರೆಯ ಕಡೆ  ನಾನು ಕೂಡ ಹೂ ಕೊಯ್ಯಲು ಬಾಗಿದೆ.

ಆಯ ತಪ್ಪಿ ಹರಿವ ತೊರೆಗೆ ನಾಲ್ಕು ವರ್ಷದ ಮಗು ನಾನು ಬಿದ್ದು ಬಿಟ್ಟೆ .ಗಾಭರಿಯಾದ ಅಕ್ಕು ಅಲ್ಲಿಂದಲೇ " ಚಿಕ್ಕಮ್ಮಾ ವಿದ್ಯಾ( ನನ್ನನ್ನು ಮನೆಯಲ್ಲಿ ಕರೆಯುವ ಹೆಸರು ವಿದ್ಯಾ) ತೋಡಿಂಗೆ ಬಿದ್ದತ್ತು ಎಂದು ಬೊಬ್ಬೆ ಹಾಕಿದಳು. ಆಗ ಮನೆಯ ಹಟ್ಟಿಯ ಬಳಿ ಇದ್ದ  ನನ್ನ ತಾಯಿ ಸರಸ್ವತಿ ಅಮ್ಮ ತಕ್ಷಣವೇ ತೋಟದ ಕಟ್ಟದಲ್ಲಿ ಓಡಿ ಹೋಗಿ ತೋಡಿಗೆ ಹಾರಿ ಹಿಡಿ ಎಂದು ಕೂಗಿ ಹೇಳಿದರು.ಹಳ್ಳಿಯ ‌ಮಕ್ಕಳಿಗೆ ತೊರೆ ಪ್ರವಾಹ ಎಲ್ಲ ದೊಡ್ಡ ಭಯದ ವಿಚಾರವೇನೂ ಅಲ್ಲ.ಅಕ್ಕು ತೋಟದ ಕಟ್ಟಪುಣಿಯಲ್ಲಿಯೇ ಒಂದು ಪರ್ಲಾಂಗು ದೂರ ಓಡಿಕೊಂಡು ಬಂದು ನೀರು ಹರಡಿ ಹರಿವ ಆಯಕಟ್ಟಿನ ಜಾಗದಲ್ಲಿ ತೋಡಿಗೆ( ತೊರೆಗೆ) ಹಾರಿ ನನ್ನನ್ನು ಹಿಡಿದುಕೊಂಡರು.ನನ್ನನ್ನು ಹಿಡಿದುಕೊಂಡು ಈಜಿ ದಡ ಸೇರಲು ಯತ್ನ ಮಾಡಿದರಾದರೂ ಅದು ಸುಲಭದ ವಿಚಾರವಾಗಿರಲಿಲ್ಲ.ಇಬ್ಬರೂ ನೀರಿನ ಪ್ರವಾಹಕ್ಕೆ ಸಿಲುಕಿ ಸ್ವಲ್ಪ ಮುಂದೆ ಹೋದೆವು.ಅಷ್ಟರಲ್ಲಿ ಅಜ್ಜ ಈಶ್ವರ ಭಟ್  ಕಟ್ಟಪುಣಿಯಲ್ಲಿ ಓಡಿ ಬಂದು  ತೋಡಿಗೆ ಹಾರಿ ನಮ್ಮಿಬ್ಬರನ್ನು  ಹಿಡಿದುಕೊಂಡು ದಡ ಸೇರಿದರು‌.ಅಷ್ಟರಲ್ಲಿ ಮನೆ ಮಂದಿ ಎಲ್ಲ ಅಲ್ಲಿ ಬಂದು ಸೇರಿದ್ದರು.ಓಡಿ ಬರುವ ಗಡಿಬಿಡಿಯಲ್ಲಿ ಅಜ್ಜ ಈಶ್ವರ ಭಟ್ಟರು ತೊಟ್ಟಿದ್ದ  ಕೋಮಣ(ಲಂಗೋಟಿ) ಎಲ್ಲೋ ಬಿದ್ದು ಹೋಗಿತ್ತು.ನಂತರ ಅವರು ತಮ್ಮ ತಲೆಗೆ ಸುತ್ತಿದ್ದ ರುಮಾಲನ್ನು ಪಂಚೆ ತರಹ ಉಟ್ಟು ಕೊಂಡು ನನ್ನನ್ನು ಭುಜದಲ್ಲಿ ಹಾಕಿಕೊಂಡು ಅಕ್ಕುವಿನ ಕೈ ಹಿಡಿದು ಕೊಂಡು ಮನೆಗೆ ಬಂದರು.ಅದೃಷ್ಟವಶಾತ್ ಇಬ್ಬರಿಗೂ ಏನೂ ತೊಂದರೆ ಆಗಿರಲಿಲ್ಲ. ನಾನು  ಒಂದು ಗುಟುಕು ನೀರು ಕೂಡ ಕುಡಿದಿರಲಿಲ್ಲ.ಕೈಯಲ್ಲಿ ಹಿಡಿದ ಹೂವಿನ ಬುಟ್ಟಿ ಕೂಡ  ಕೈಯಲ್ಲೇ ಇತ್ತು. ನಂತರ ಅಜ್ಜಿ ಕಾಲಿನಲ್ಲಿ ನನ್ನನ್ನು ಮಲಗಿಸಿ ಹತ್ತಿಯ ನೆಣೆ ಹಾಕಿ ಕಿವಿಗೆ ಹೊಕ್ಕಿರಬಹುದಾದ ನೀರನ್ನು ತೆಗೆದರು.ಅಮ್ಮ ಗಾಭರಿಯಾಗಿದ್ದ ನನ್ನನ್ನು ಸಂತೈಸಿ ಒಂದು ಲೋಟೆ ಬಿಸಿ ಹಾಲು ಕುಡಿಸಿದರು.ಮನೆ ಮಂದಿ ನನ್ನ ಸುತ್ತ ಗಾಭರಿಯಿಂದ ನಿಂತದ್ದು ಈಗಲೂ ನನ್ನ ಕಣ್ಣಿಗೆ ಕಟ್ಟುತ್ತದೆ.ನನ್ನ ಅಜ್ಜ ನಂತರ ಯಾವಾಗಲೂ " ಎಲ್ಲರ ಆಯಸ್ಸನ್ನು ದೇವರು ಪೆನ್ನಿನಲ್ಲಿ ಬರೆಯುತ್ತಾನೆ. ನನ್ನ ಮೊಮ್ಮಗಳಿಗೆ  ಮಾತ್ರ ಉಜ್ಜೆರು( ಒನಕೆ)ಯಲ್ಲಿ ಆಯಸ್ಸು ಬರೆದಿದ್ದಾನೆ.ಇವಳು ತುಂಬಾ ಕಾರ್ಬಾರಸ್ತೆ.ಮುಂದೆ ಏನೋ ಸಾಧನೆ ಮಾಡುತ್ತಾಳೆ" ಎಂದು ತನ್ನ ಸ್ನೇಹಿತರಲ್ಲಿ ಬಂಧುಬಳಗದವರಲ್ಲಿ ಹೇಳಿ ಹೆಮ್ಮೆ ಪಟ್ಟುಕೊಂಡು ಇದ್ದರು.ಅದಕ್ಕೆ ಸರಿಯಾಗಿ ಚಿಕ್ಕಂದಿನಲ್ಲೇ ಕಲಿಕೆಯಲ್ಲಿ ನಾನು ಜಾಣೆಯಾಗಿದ್ದೆ.ತರಗತಿಯಲ್ಲಿ ಒಂದು ಎರಡನೇ ರ‍್ಯಾಂಕನ್ನು ಪಡೆಯುತ್ತಾ ಇದ್ದೆ.ಜೊತೆಗೆ ಭಾಷಣ ಏಕಪಾತ್ರಾಭಿನಯ ,ಡ್ಯಾನ್ಸ್ ,ನಾಟಕ ಮೊದಲಾದವುಗಳಲ್ಲಿ ಮುಂದಿದ್ದು ಶಾಲಾ ವಾರ್ಷಿಕೋತ್ಸವದಲ್ಲಿ ಅನೇಕ ಬಹುಮಾನಗಳನ್ನು ಪಡೆಯುತ್ತಾ ಇದ್ದೆ.ಹಾಗಾಗಿ ಅಜ್ಜನಿಗೆ ನನ್ನ ಬಗ್ಗೆ ತುಂಬಾ ಹೆಮ್ಮೆ ಇತ್ತು.ಆದರೆ ನನ್ನ ಯಶಸ್ವಿ ಬದುಕನ್ನು ನೋಡುವ ತನಕ ನನ್ನ ಅಜ್ಜ ಈಶ್ವರ ಭಟ್ ಹೊಸಮನೆ ಬದುಕಲಿಲ್ಲ.ನಾನು ಮೊದಲ ವರ್ಷ ಪಿಯುಸಿ ಓದುತ್ತಿರುವಾಗಲೇ ಅಜ್ಜ ಬಿಪಿ ಶುಗರ್,ಹೃದಯದ ಖಾಯಿಲೆ ಉಲ್ಭಣಿಸಿ ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ನಿಧನರಾದರು. ಅವರು ಬದುಕಿರುತ್ತಿದ್ದರೆ ಅವರಿಗೆ   ಈಗ ನೂರು ವರ್ಷಗಳು ಆಗಿರುತ್ತಿದ್ದವು.ಅವರು ಬದುಕಿರಬೇಕಿತ್ತು ಎಂದು ನನಗೆ ಸದಾ ಅನಿಸುತ್ತದೆ


ಚಿಕ್ಕಂದಿನಲ್ಲಿ ಅಜ್ಜ ಹೇಳುತ್ತಿದ್ದ ಮಾತುಗಳೇ ನನಗೆ ಹೇಗೋ ಹೇಗೋ ಬದುಕುವುದಲ್ಲ. ಬರಿಯ ಹೌಸ್ ವೈಫ್ ಆಗಿ ಅಡುಗೆ ಮನೆಯಲ್ಲಿಯೇ ಜೀವನ ಕಳೆಯದೆ  ಗೃಹಿಣಿಯಾಗಿ ಅಡುಗೆ ಮನೆ ಮಕ್ಕಳು ಮರಿಗಳ ಜವಾಬ್ದಾರಿ ನಿರ್ವಹಿಸುತ್ತಲೇ ಏನಾದರೊಂದು  ಸಾಧನೆಯನ್ನು ಮಾಡಬೇಕು ಎಂಬ ಪ್ರೇರಣೆ ನೀಡಿರಬಹುದೇ ?  

No comments:

Post a Comment