Monday 15 April 2019

ನನ್ನೊಳಗೂ ಒಂದು ಆತ್ಮವಿದೆ: ಆಕೆಯದೇ ಪರಿಸ್ಥಿತಿ ನನಗೂ ಇತ್ತು

ನನ್ನೊಳಗೂ ಒಂದು ಆತ್ಮವಿದೆ
ಆಕೆಯದೇ ಪರಿಸ್ಥಿತಿ ನನಗೂ ಇತ್ತು..2

ನಿನ್ನೆಯಷ್ಟೇ ಆತ್ಮಕಥೆ ಬರೆಯಲು ಶುರು ಮಾಡಬೇಕೆಂದಿದ್ದೆ.ಆದರೆ ಎಲ್ಲಿಂದ ಹೇಗೆ ನನಗೂ ಗೊತ್ತಿಲ್ಲ .ಮೊದಲಿಗೆ ನನ್ನ ಜೀವನದ ಮೊದಲ ನೆನಪನ್ನು ದಾಖಲಿಸಿದೆ. ನಿನ್ನೆ ನನ್ನ ಎಂಎ ಸಹಪಾಠಿಯಿಮದ ತಿಳಿದ ಒಂದು ವಿಚಾರ ತುಂಬಾ ಚಿಂತನೆಗೆ ಹಚ್ಚಿದ್ದು ಆ ಬಗ್ಗೆ ಬರೆಯಬೇಕೆಂದು ಕೊಂಡಿದ್ದೆ‌.ನಿನ್ನೆ ಮೊದಲ ನೆನಪಿನ ಬಗ್ಗೆ ಬರೆಯುವಷ್ಟರಲ್ಲಿ ಬೇರೇನೋ ಕೆಲಸ ಒದಗಿ ಬಂತು ನಿಲ್ಲಿಸಿ ಕೆಲಸದತ್ತ ಗಮನ ಹರಿಸಿದೆ.ಈವತ್ತು ಕಟೀಲಿನಲ್ಲಿ ನಾನು ಎಂಎ ಓದುತ್ತಿದ್ದಾಗಿನ ಅನುಭವ ಬರೆಯಬೇಕೆಂದುಕೊಂಡಿದ್ದೆ.ಆದರೆ ಈವತ್ತು ಕಾಲೇಜಿಗೆ ಹೋಗಿ ಹಿಂದೆ ಬರುವಾಗ ಕಾರು ಸಿಗದೆ ಬಸ್ ನಲ್ಲಿ ಬಂದೆ. ತುಂಬಾ ಬಿಸಿಲು.ಬೆವರೊರೆಸುತ್ತಾ ಇಬ್ಬರು ಸಣ್ಣ ವಯಸ್ಸಿನ ಎಂದರೆ ಸುಮಾರು ಇಪ್ಪತ್ತೈದು ವಯಸ್ಸಿನ ‌ಮಹಿಳೆಯರು ಪರಸ್ಪರ ಏನೋ ಕಷ್ಟ ಸುಖ‌ಮಾತಾಡುತ್ತಿದ್ದರು.ಇಬ್ಬರೂ ಸ್ನೇಹಿತೆಯರು.ಒಬ್ಬಾಕೆ ಸುಮನ ಹಳ್ಳಿ ಹತ್ತಿರ ಬರುತ್ತಿದ್ದಂತೆ " ನಾನು ಇಳೀತೀನಿ‌ ಕಣೆ..ಇಲ್ಲಿಂದ ಮನೆ ಕಡೆಗೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಎರಡು ಮೂರು ಕಿಮೀ ಈ ಬಿಸಿಲಿನಲ್ಲಿ ನಡೀಬೇಕು..ಅದೂ ನನ್ನ ‌ಮಗನ್ನ ಬೇಬಿ ಸಿಟ್ಟಿಂಗ್ ನಿಂದ ಹೊತ್ತುಕೊಂಡು ನಡೀಬೇಕು.ಅಟೊದವರು ಐವತ್ತು ಅರುವತ್ತು ಕೇಳ್ತಾರೆ ಅಷ್ಟು  ದಿನಾಲೂ ಕೊಡುವಷ್ಟು ದುಡ್ಡಿಲ್ಲ ಕಣೇ ನಮ್ಮತ್ರ .ನಮ್ಮನೆಯವರಿಗೆ ಎರಡು ಮೂರು ತಿಂಗಳಿಂದ ಸಂಬಳಾನು ಬರ್ತಾ ಇಲ್ಲ " ಎಂದು ಹೇಳಿದಳು.ಆಗ ಇನ್ನೊಬ್ಬಾಕೆ ಓ ಈ ಬಿಸಿಲಲ್ಲಿ ಮಗನ್ನ ಎತ್ತಿಕೊಂಡು ಅಷ್ಟು ದೂರ ಹೆಂಗೆ ಹೋಗ್ತೀಯ ? ಇರು ನಾನು ಇಳೀತಿನಿ ಅರ್ಧ ದಾರಿ ತನಕ‌ಮಗುನ ಎತ್ತಿಕೊಂಡು ತಂದು ಕೊಡ್ತೀನಿ ಅಮೇಲೆ ನೀ ಹೋಗು ಎಂದು ಕಕ್ಕುಲಾತಿಯಿಂದ ನುಡಿದಳು..ಏ ಬಿಡೇ ಈವತ್ತೇನೋ ನೀನು ಬರ್ತೀಯ ಬರಿ,ದಿನಾಲು ಯಾರು ಬರ್ತಾರೆ .ನನಗೆ ಅಭ್ಯಾಸವಾಗಿದೆ ಬಿಡು..ನನಗೆ ಮಗ ಭಾರ ಅಲ್ಲ ಬಳ್ಳಿಗೆ ಕಾಯಿ ಭಾರನೇನೇ ? ಬಿಸಿಲಿಗೆ ಹೋಗೋದು ಕಷ್ಟ ಅಂದೆ ಅಷ್ಟೇ ಬಿಡು ,ಒಂದು ಹಳೆದಾ ದರೂ   ಒಂದು ಸ್ಕೂಟಿ ತಗೋಬೇಕು ಅಂದ್ಕೋತೀನಿ ಆದರೆ ದುಡ್ಡು ಹೊಂದಾಣಿಕೆ  ಮಾಡೋದು ಕಷ್ಟ   ಆಗ್ತಿದೆ ಓ ನನ್ನ ಸ್ಟಾಪ್ ಬಂತು  ಬಾಯ್  ಕಣೆ " ಎಂದು ಹೇಳಿ ಆಕೆ ಇಳಿದಳು.
ಆಕೆಯ ಮಾತು ಕೇಳುತ್ತಿದ್ದಂತೆ ಮನಸು ತಟ್ಟನೆ ಹದಿನೆಂಟು ವರ್ಷದ ಹಿಂದಿನ ಘಟನೆನ ನೆನಪು ಮಾಡಿತು.
ಆಗ ನನ್ನ ‌ಮಗ ಅರವಿಂದನಿಗೆ ಸುಮಾರು ಎರಡು ಎರಡೂವರೆ ವರ್ಷ. ಅತ್ತ ನಡೆಸಲೂ ಆಗದ ಇತ್ತ ಎತ್ತಿಕೊಳ್ಳಲೂ ಆಗದ ವಯಸ್ಸು. ದಟ್ಟ ಪುಷ್ಟವಾಗಿ ಗುಂಡು ಗುಂಡಾಗಿ ಬೆಳೆದಿದ್ದ ಮಗ ಸಾಕಷ್ಟು ಭಾರ ಇದ್ದ.ಎತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಕೈ ಸೋಲುತ್ತಾ ಇತ್ತು.
‌ಇಂತಹದ್ದೇ ಒಂದು ಬೇಸಗೆಯ ಬಿರು ಬಿಸಿಲಿನಲ್ಲಿ ನಾನು  ಮಂಗಳೂರಿನಿಂದ ನಮ್ಮ ಮನೆ  ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಸರವಿಗೆ ಹೋಗಲು ಬಸ್ ಹತ್ತಿ ಬಂದು ಮಗನ ಜೊತೆ ವೀರ ಕಂಭದಲ್ಲಿ ಇಳಿದಿದ್ದೆ.ಆಗ ಅಲ್ಲೊಂದು ಇಲ್ಲೊಂದು ಅಟೋಗಳು ಇದ್ದವು.ಆಟೋ ಸಿಗಬಹುದು ಎಂಬ ನಂಬಿಕೆ ಮೇಲೆ ಅಲ್ಲಿ ಇಳಿದಿದ್ಧೆ.ದುರದೃಷ್ಟವಶಾತ್ ಅರ್ಧ ಒಂದು ಗಂಟೆ ಕಾದರೂ ಒಂದು ಒಂದು ಅಟೋ ಅಲ್ಲಿ ಬರಲಿಲ್ಲ. ಬೇರೆ ದಾರಿ ಇಲ್ಲದೆ ನಿದ್ರೆ ಮಾಡಿರುವ ಮಗನನ್ನು ಹೆಗಲಿಗೆ ಹಾಕಿಕೊಂಡು ದೊಡ್ಡದಾದ ಎರಡು ಬ್ಯಾಗುಗಳನ್ನು ಹೇಗೋ ಹಿಡಿದುಕೊಂಡು ನಿದಾನವಾಗಿ ವೀರ ಕಂಭದಿಂದ ಕೋಡ ಪದವು ಮಾರ್ಗದಲ್ಲಿ ನಡೆಯ ತೊಡಗಿದೆ.ಅಲ್ಲಿಂದ ನಮ್ಮ ಮನೆಗೆ ಸುಮಾರು ಮೂರು ನಾಲ್ಕು ಕಿಮೀ ದೂರ ಇದೆ.ಅರ್ಧ ಕಿಮೀ ಸಾಗುವಷ್ಟರಲ್ಲಿ ಸೋತು ಹೋಗಿದ್ದೆ.ಅಷ್ಟರಲ್ಲಿ ನನ್ನ ದೊಡ್ಡ ಮಾವನವರ ಜೀಪು ನನ್ನ ಮುಂದೆ ಕೋಡ ಪದವು ಕಡೆಗೆ ಹಿಂದಿನಿಂದ ಬಂದು ಹಾದು ಹೋಯಿತು.ಮೈದುನ ನನ್ನನ್ನು ನೋಡಿದ್ದರೆ ನಿಲ್ಲಿಸಿಯಾನು ಎಂದು ಕೈ ಆಡಿಸಿದೆ ಹೇಗೋ.. ಜೀಪು ಮುಂದೆ ಹೋಯಿತುಅದರ ಹಿಂಭಾಗ ಬರೆದಿದ್ದ ಅವರ ಪಾರ್ಮ್ ನ ಹೆಸರಿನಿಂದಾಗಿ ಅದು ನನ್ನ ದೊಡ್ಡ ಮಾವನವರ ಜೀಪೇ ಎಂದು ಸ್ಪಷ್ಟವಾಗಿ ಗುರುತಿಸಿದೆ  ಆದರೆ ಆತ ನನ್ನೆಡೆಗೆ ನೋಡಲಿಲ್ಲ ..ಹಾಗಾಗಿ ಮುಂದೆ ಹೋದ ಎಂದುಕೊಂಡೆ.ಅಲ್ಲಲ್ಲಿ ನಿಂತು ಸುಧಾರಿಸಿಕೊಳ್ಳು
‌ತ್ತಾ  ಹೇಗೋ ಮನೆ ಸೇರಿದೆ ,ಸೇರುವಷ್ಟರಲ್ಲಿ ಸೋತು ಸುಣ್ಣವಾಗಿ ಹೋಗಿದ್ದೆ.ಮನೆ ಎದುರೇ ಇದ್ದ ಅತ್ತೆಯವರು ನೀನು ಮಗುವಿನೊಂದಿಗೆ ಬರುವುದನ್ನು ದೊಡ್ಡ ಭಾವನವರ ಮಗ ಹೇಳಿದ." ಅತ್ತಿಗೆ ಮಗನನ್ನು ಹೆಗಲಿಗೆ ಹಾಕಿಕೊಂಡು ಬೆಗರಿಳಿಸಿಕೊಂಡು ಬತ್ತಾ ಇತ್ತು " ಎಂದು ಅತ್ತೆಯವರಲ್ಲಿ ತಿಳಿಸಿ ಹೋದನಂತೆ ಆತ! ನನಗೆ ಅಬ್ಬಾ ಎನಿಸಿತು..ಅ ಬಿರು ಬಿಸಿಲಿನಲ್ಲಿ ಈ ಮಗನನ್ನು ಎತ್ತಿಕೊಂಡು ಬರುತ್ತಾ ಇರುವುದನ್ನು ನೋಡಿಯೂ ಆತ ಜೀಪು ನಿಲ್ಲಿಸದೆ ಮುಂದೆ ಹೋದನೇ ? ಅಲ್ಲದೇ ಅದನ್ನು ಅತ್ತೆಗೆ ಬಂದು ಹೇಳಿದನಲ್ಲ!  ನಾನು ಆತ ನನ್ನನ್ನು ನೋಡಿಲ್ಲವೆಂದು ಭಾವಿಸಿದ್ದೆ.ಮೊದಲ ಭಾರಿಗೆ ಸಿರಿವಂತರ ಅಟ್ಟಹಾಸದ ಅನುಭವ ನನಗಾಯಿತು.
‌ ಅತ್ತೆಯವರೇಕೆ ನೀನು ಜೀಪು ನಿಲ್ಲಿಸಿ ಕರೆದುಕೊಂಡು ಬರಲಿಲ್ಲವೆಂದು ಕೇಳಲಿಲ್ಲ? ಅದೂ ನನಗೆ ಗೊತ್ತಿಲ್ಲ.. ಏನೇ ಆದರೂ ನಾವು ಬಡವರು..ಬಡವನ ಕೋಪ ದವಡೆಗೆ ಮೂಲ ಅಲ್ಲವೇ ? ಕಾಲ ಹೀಗೆ ಇರುವುದಿಲ್ಲ.. ನಾನು ಒಂದು ಟು ವೀಲರ್ ತೆಗೆದುಕೊಳ್ಳಬೇಕು ಎಂದು ಕೊಂಡೆ.ಮತ್ತೆ ಅದೇ ಸಮಸ್ಯೆ ದುಡ್ಡು ಹೊಂದಿಸುವದ್ದು.
‌ಸಂಜೆ ನನ್ನ ಗಂಡ ಪ್ರಸಾದ್ ಕೂಡ ಬಂದರು. ಎರಡು ದಿನ ಇದ್ದು ನಾವು ಮಂಗಳೂರಿಗೆ ಹಿಂತಿರುಗಿದೆವು.
‌ಆ ಸಮಯದಲ್ಲಿ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಾರ್ಟ್ ಟೈಮ್ ಉಪನ್ಯಾಸಕಿ ಆಗಿ ಕೆಲಸ ಮಾಡುತ್ತಿದ್ದೆ.ನನಗೆ 1500₹ ಸಂಬಳ ಬರುತ್ತಾ ಇತ್ತು.ಪ್ರಸಾದ್ ಗೂ ಸಣ್ಣ ಸಂಬಳದ ಕೆಲಸ ಇತ್ತು.
‌ಈ ನಡುವೆ ಚಿನ್ಮಯ ಹೈಸ್ಕೂಲ್ ನಲ್ಲಿ ಸಂಸ್ಕೃತ ಶಿಕ್ಷಕಿ ಬೇಕಾಗಿದ್ದಾರೆ ಎಂದು ಪತ್ರಿಕೆಯಲ್ಲಿ ಬಂತು.ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಿ ಆಯ್ಕೆ ಅದೆ.ಪೂರ್ಣಕಾಲಿಕ ಕೆಲಸ ಆದ ಕಾರಣ ಅಲ್ಲಿ ಎರಡೂವರೆ ಸಾವಿರ ರು ಸಂಬಳ ಇತ್ತು.ಹಾಗಾಗಿ ನಾನು ಅಲ್ಲಿ ಸೇರಲು ನಿರ್ಧರಿಸಿದೆ.ಅಷ್ಟರಲ್ಲಿ ಸಂತ ಅಲೋಶಿಯಸ್ ಸಂಧ್ಯಾ ಶಾಲೆಯಲ್ಲಿ ಸಂದರ್ಶನಕ್ಕೆ ಅರ್ಜಿ ಅಹ್ವಾನಿಸಿದ್ದರು ಅಲ್ಲಿಯೂ ಅರ್ಜಿ ಸಲ್ಲಿಸಿ ಸಂದರ್ಶನ ಎದುರಿಸಿ ಆಯ್ಕೆ ಆದೆ .ಅಲ್ಲೂ ತಿಂಗಳಿಗೆ ಎರಡೂವರೆ ಸಾವಿರ ರುಪಾಯಿ ಸಂಬಳ ನಿಗಧಿ ಆಯಿತು.
.ಮಗನನ್ನು ಮನೆಯಿಂದ ಎರಡು ಕಿಮೀ ದೂರದ ಬೇಬಿ ಸಿಟ್ಟಿಂಗ್ ಗೆ ಹಾಕಿದ್ದೆ‌.ಪ್ರಸಾದ್ ಬೆಳಗ್ಗೆ ಆಫೀಸ್ ಗೆ ಹೋಗುವಾಗ ಅವನನ್ನು ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟು ಹೋಗುತ್ತಿದ್ದರು‌. ಬೆಳಗ್ಗೆ ಎಂಟು ಗಂಟೆಗೆ ಶುರುವಾಗಿ ಮಧ್ಯಾಹ್ನ ಮೂರು ಗಂಟೆಗೆ ನಮ್ಮ ಶಾಲೆ ಮುಗಿಯುತ್ತಾ ಇತ್ತು.ನಾನು ಮಗನನ್ನು ಬೇಬಿ ಸಿಟ್ಟಿಂಗ್ ನಿಂದ ಕರೆತಂದು ಅವನಿಗೆ ಉಣ್ಣಿಸಿ ತಿನ್ನಿಸಿ ಮಾಡಿ ನಾನು ಉಂಡು ತಿಂದು ಐದು ಗಂಟೆಗೆ ತಯಾರಾಗಬೇಕಿತ್ತು.ಮತ್ತೆ ಮಗನನ್ನು ಎತ್ತಿಕೊಂಡು ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆರು ಗಂಟೆಗೆ ಹಾಜರಿರಬೇಕಾಗಿತ್ತು.
ಅಗ ನಾವು ಮಂಗಳೂರಿನಲ್ಲಿ ಶ್ರೇಯಸ್ ಅಪಾರ್ಟ್ ಮೆಂಟ್ ನಲ್ಲಿ ಒಂದು ಫ್ಲಾಟ್ ಕೊಂಡಿದ್ದೆವು.( ಪ್ರಸಾದರಿಗೆ ಮಣಿಪಾಲ್ ಫೈನಾನ್ಸ್ ನಲ್ಲಿ ‌ಮ್ಯಾನೆಜರ್ ಆಗಿ ಕೆಲಸದಲ್ಲಿ ಇದ್ದರು ಹಾಗೆ ಸಾಲ ಮಾಡಿ ಫ್ಲಾಟ್ ತಗೊಂಡಿದ್ದೆವು.ಇದ್ದಕ್ಕಿದ್ದಂತೆ ಕಂಪೆನಿ‌ ಮುಚ್ಚಿದಾಗ ಮತ್ತೆ ಒಂದೆರಡು ವರ್ಷ ಸರಿಯಾದ ಕೆಲಸ ಸಿಗಲಿಲ್ಲ. ಎನೋ ಸಣ್ಣ ಪುಟ್ಟ ಸಂಬಳದ ಕೆಲಸ ಮಾಡುತ್ತಿದ್ದರು.ಪ್ಲಾಟ್ ಕೊಂಡ ಸಾಲದ ಕಂತನ್ನು ಕಟ್ಟುವ ಸಲುವಾಗಿ ನಾನು ಎರಡು ಕಡೆ ದುಡಿಯುವುದು ಅನಿವಾರ್ಯ ಆಗಿತ್ತು)
ಈ ಅಪಾರ್ಟ್ಮೆಂಟ್ ನಲ್ಲಿ ಹನ್ನೊಂದು ‌ಮನೆಗಳು‌ ಇ ಇದ್ದವು. ನಮ್ಮ ಹೊರತಾಗಿ ಎಲ್ಲರಲ್ಲೂ ಟುವೀಲರ್ ಇತ್ತು ಮೂರು ನಾಲ್ಕು ಮಂದಿಗೆ ಕಾರು ಕೂಡ ಇತ್ತು.ಅವರಲ್ಲಿ ಅನೇಕರು  ಆಗಾಗ ನಾನು ಮಗನನ್ನು ಕರೆದು ಕೊಂಡು ಬರುವಾಗ ಹೋಗುವಾಗ ಸಿಗುತ್ತಿದ್ದರು .ಬೇಬಿ ಸಿಟ್ಟಿಂಗ್ ಕೊರಂಗಲ್ಪಾಡಿಗೆ ಹೋಗುವ ದಾರಿಯಲ್ಲೇ ಇದ್ದು ಎಲ್ಲರೂ ಅದೇ ದಾರಿಯಲ್ಲಿ ಹೋಗಿ ಬರುತ್ತಾ ಇದ್ದರು.ನಾನು ತುಂಬಾ ಸ್ವಾಭಿಮಾನಿ. ಯಾರಲ್ಲೂ ಡ್ರಾಪ್ ಕೇಳುತ್ತಿರಲಿಲ್ಲ.ಕಷ್ಟವೊ ಸುಖವೋ ಹೇಗೋ ಮಗನನ್ನು ಎತ್ತಿಕೊಂಡು ಹೋಗಿ ಬರುತ್ತಾ ಇದ್ದೆ‌.ಆದರೆ ನಾನು ಅದೇ ದಾರಿಯಲ್ಲಿ ಹೋಗುವುದೆಂದು ತಿಳಿದಿದ್ದ ಅದೇ ದಾರಿಯಲ್ಲಿ ಅವರು ಹೋಗುತ್ತಿದ್ದರೂ ಕೂಡಾ ಅವರು ಯಾರೂ ನನ್ನಲ್ಲಿ ಒಂದು ದಿನ ಕೂಡ ಡ್ರಾಪ್ ಮಾಡಲೆ ಎಂದು ಕೇಳಿಲ್ಲ..ಬಡತನ ಅಂದರೆ ಹಾಗೆ ..ಬಡವರ ಬಗ್ಗೆ ಬಹಳ ತಾತ್ಸಾರ ಇರುತ್ತದೆ ಸಿರಿವಂತರಿಗೆ..ಆದರೆ ನಾನೆಂದೂ ಭರವಸೆಯನ್ನು ಕಳೆದುಕೊಳ್ಳಲಿಲ್ಲ.ಸಂಸ್ಕೃತ ಕ್ಕೆ ಎಲ್ಲೂ ಸರಿಯಾದ ಅವಕಾಶ ಇಲ್ಲ ಎಂದರಿತ ನಾನು ನಮ್ಮ ಅಲೋಶಿಯಸ್ ಕಾಲೇಜು ಹಿಂದಿ ಉಪನ್ಯಾಸಕಿ ಜೂಡಿ ಮೇಡಂ ಅವರ ಸಲಹೆಯಂತೆ ಹಿಂದಿ ಎಂಎ ಮಾಡಿದೆ.ಪಾಸಾದೆ.ಒಳ್ಳೆಯ ಅಂಕಗಳು ಕೂಡ ಬಂದವು ಆದರೆ ಭಾಷೆ ಯಾಕೋ ಒಲಿಯಲಿಲ್ಲ .
ಹಾಗಾಗಿ ನಂತರ ತಮ್ಮ ಗಣೇಶ್ ಭಟ್ ನ ಸಲಹೆಯಂತೆ ಕನ್ನಡ ಎಂಎ ಗೆ ಖಾಸಗಿಯಾಗಿ ಕಟ್ಟಿದೆ.
ಎಂಟರಿಂದ ಸಂಜೆ ಮೂರರವರೆಗೆ ಚಿನ್ಮಯ ಹೈಸ್ಕೂಲ್ ನಲ್ಲಿ ಕೆಲಸ,ನಂತರ ಸಂಜೆ ಆರರಿಂದ ಒಂಬತ್ತು ಗಂಟೆಯವ ವರೆಗೆ ಅಲೋಷಿಯಸ್ ಸಂಧ್ಯಾ ಶಾಲೆಯಲ್ಲಿ ಕೆಲಸ.
ಪ್ರಸಾದ್ ಕೆಲಸ ಮುಗಿಸಿ ಅಲೋಷಿಯಸ್ ಗೇಡ್ ನಲ್ಲಿ ನನಗಾಗಿ ಕಾಯುತ್ತಾ ಇರುತ್ತಿದ್ದರು .ಅಲ್ಲಿಂದ ನಮ್ಮ ‌ಮನೆಗೆ ಸುಮಾರು ಮೂರು ನಾಲ್ಕು ಕಿಮೀ ದೂರ.ಹಿಂದೆ ಬರುವಾಗ ನಿದ್ರೆ ಮಾಡಿರುತ್ತಿದ್ದ ಮಗನನ್ನು ಪ್ರಸಾದ್ ಎತ್ತಿಕೊಂಡು ಬರುತ್ತಿದ್ದರು.ಅಂತೂ ನಾವು ಮನೆ ಸೇರುವಾಗ ರಾತ್ರಿ ಹತ್ತು ಗಂಟೆ.ಈ ನಡುವೆ ಪಾಠ ಮಾಡಲು ತಯಾರಿ ಮಾಡಬೇಕು. ಅಡಿಗೆ ಊಟ ತಿಂಡಿ ಆಗಬೇಕು, ಮಗನ ಲಾಲನೆ ಪಾಲನೆಯ ಜವಾಬ್ದಾರಿ ಕೂಡ ನನ್ನ ‌ಮೇಲಿತ್ತು.
ಹೀಗೆ ಕೆಲಸ ಮಾಡುತ್ತಲೇ ಎರಡು ವರ್ಷದಲ್ಲಿ ಹಿಮದಿ ಎಂಎ ಮಾಡಿ‌ಕೊಂಡಿದ್ದೆ.ನಂತರ ಕನ್ನಡ ಎಂಎ ಗೆ ಕಟ್ಟಿ ಅದರಲ್ಲೂ ಒಳ್ಳೆಯ ಅಂಕಗಳನ್ನು ತೆಗೆದೆ.
ಈ ನಡುವೆ ನನಗೆ ಓದಲು ಎಲ್ಲಿದೆ ಸಮಯ ಎಂಬ ಸಂಶಯ ನಿಮಗೆ ಬಂದಿರಬಹುದಲ್ವಾ ? ಅದನ್ನು ಹೇಳಿ ಬಿಡುತ್ತೇನೆ.
ರಾತ್ರಿ ಹತ್ತು ಗಂಟೆಗೆ ಮನೆ ಸೇರಿ ಮತ್ತೊಂದು ಗಂಟೆಯ ಒಳಗೆ ಎಲ್ಲ ಕೆಲಸ ಮುಗಿಸುತ್ತಿದ್ದೆವು.ಈ ನಿಟ್ಟಿನಲ್ಲಿ ಪ್ರಸಾದರ ಬೆಂಬಲ ಅಸಾಧಾರಣವಾದದ್ದು.ಅವರೆಲ್ಲ ಕೆಲಸದಲ್ಲೂ ಕೈ ಜೋಡಿಸುತ್ತಿದ್ದರು.
ರಾತ್ರಿ ಹನ್ನೊಂದು ಗಂಟೆಗೆ ಎಲ್ಲ ಕೆಲಸ ಮುಗಿಸಿ ಮಗನನ್ನು ಕಾಲಿನಲ್ಲಿ ಮುಗಿಸಿಕೊಂಡು ಗೋಡೆಗೆ ಒರಗಿ ಕುಳಿತು ನಾನು ಓದುತ್ತಾ ಇದ್ದೆ ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ  ಹಕ್ಕಿಗಳ ಕಲರವ ಕೇಳುವಾಗಲೇ ನನಗೆ ಬೆಳಗಾಗುತ್ತಿರುವುದು ಗೊತ್ತಾಗುತ್ತಾ ಇತ್ತು.ನಂತರ ‌ಮಗನನ್ನು ಪ್ರಸಾದರ ಕಾಲಿಗೆ ವರ್ಗಾಯಿಸಿ ನಾನು ಏಳು ಗಂಟೆ ತನಕ ನಿದ್ರೆ ಮಾಡುತ್ತಿದ್ದೆ.ಹೀಗೆ ನಿರಂತರ ನಾಲ್ಕು ವರ್ಷಗಳನ್ನು ಕಳೆದಿದ್ದೆ .ಪರಿಣಾಮವಾಗಿ ಸಂಸ್ಕೃತ ಎಂಎ ಪದವಿ ಜೊತೆಗೆ ನನಗೆ ಹಿಂದಿ ಮತ್ತು ಕನ್ನಡ ಎಂಎ ಪದವಿಗಳು ಕೂಡ ಲಭಿಸಿದವು.ಅಂದು ನಾನು ಕೆಲಸ ಸಿವುವ ಯೋಗವಿದ್ದರೆ ಸಂಸ್ಕೃತ ದಲ್ಲಿಯೇ ಸಿಗುತ್ತದೆ ಹೇಗೂ ಮೊದಲ ರ‍್ಯಾಂಕ್ ಬಂದಿದೆಯಲ್ಲ ಎಂದು ಕೈ ಕಟ್ಟಿ ಕುಳಿತಿರುತ್ತಿದ್ದರೆ ,ಹಿಂದಿ ಎಂಎ ಮಾಡಿದಾಗ ಭಾಷೆ ಒಲಿಯದೆ ಹತಾಶೆಗೊಳಗಾಗಿ ಸುಮ್ಮನಿರುತ್ತಿದ್ದರೆ,ಮೂರನೆಯ ಯತ್ನವಾಗಿ ಕನ್ನಡ ಎಂಎ ಮಾಡದೆ ಇರುತ್ತಿದ್ದರೆ ನಾನಿಂದು ಕನ್ನಡ ಉಪನ್ಯಾಸಕಿ ಆಗಿರುತ್ತಿರಲಿಲ್ಲ.ಕೈ ತುಂಬ ಸಂಬಳ ಬರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಯೋಗವೂ ದೊರೆಯುತ್ತಾ ಇರಲಿಲ್ಲ.
ಇರಲಿ ,ಕನ್ನಡ ಎಂಎ ಓದಿದ ತಕ್ಷಣವೇ ನನಗೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ದೊರೆತಿರಲಿಲ್ಲ.
ಈ ನಡುವೆ ಸ್ವಲ್ಪ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಒಂದು ಟು ವೀಲರಗ ತೆಗೆಯಲು ಆಶಿಸಿದೆ.ಆದರೆ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಭಯ.ಚಿಕ್ಕಂದಿನಲ್ಲಿ ಪಪೆಲತ್ತಡ್ಕ ಚಿಕ್ಕಪ್ಪನ ಸತತ ಯತ್ನ ದಿಂದ ನಾನು ಸೈಕಲ್ ಓಡಿಸಲು ಕಲಿತಿದ್ದೆ ಆದರೆ ಸೈಕಲ್ ‌ಮುಟ್ಟದೇ ಹದಿನೈದು ವರ್ಷ ಗಳಾಗಿದ್ದವು.ಇನ್ನೂ ಟು ವೀಲರ್ ಬಿಡುವುದು ಬಿಡಿ ನನಗೆ ಟು ವೀಲರ್ ನಲ್ಲಿ ಕುಳಿತು ಕೂಡ ಅಭ್ಯಾಸ ಇರಲಿಲ್ಲ..
ಈ ನಡುವೆ ಶನಿವಾರ ಆದಿತ್ಯವಾರ ನನ್ನ ಬಿಡುವಿನ ವೇಳೆಯಲ್ಲಿ ಗಣಿತದ ಬಗ್ಗೆ ಸಂಶಯ ಪರಿಹರಿಸಿಕೊಂಡು ಹೋಗಲು ಅರ್ಚನಾ ಎಂಬ ವಿದ್ಯಾರ್ಥಿನಿ ಮನೆಗೆ ಬರುತ್ತಾ ಇದ್ದಳು.ಅವಳಲ್ಲಿ ಕೈನೆಟಿಕ್ ಇತ್ತು .ಒಂದೆರಡು ಸಲ ಕಾಲಿನಲ್ಲಿ ದೂಡಿಕೊಂಡು ಸ್ವಲ್ಪ ದೂರು ಹೋಗಿದ್ದೆ.
ಆಗಿದ್ದಾಗಲಿ ಎಂದು ಧೈರ್ಯ ಮಾಡಿ ಬಜಾಜ್ ಸ್ಪಿರಿಟ್ ಎಂಬ ಟು ವೀಲರ್ ಅನ್ನು ಖರೀದಿಸಿ ಮನೆಗೆ ತಂದೆವು.ನಮಗಿಬ್ಬರಿಗೂ ಬಿಡಲು ಬಾಎಮರದ ಕಾರಣ ಸುಪ್ರೀಂ ಮೋಟರ್ಸ ನ ಸಿಬ್ಬಂದಿಯೇ ಮನೆಗೆ ತಲುಪಿಸಿ ಸ್ಟಾರ್ಟ್ ಮಾಡುವುದು ಹೇಗೆ,ಬ್ರೇಕ್ ಹೇಗೆ ಹಿಡಿಯಬೇಕೆಂದು ಹೇಳಿಕೊಟ್ಟು ಹೋಗಿದ್ದರು
ಮರುದಿನ ಆದಿತ್ಯವಾರ ಆಗಿತ್ತು. ನಾನು ಪ್ರಸಾದ್ ಸೇರಿ ತಳ್ಳಿಕೊಂಡು ಮನೆ ಎದುರಿನ ರಸ್ತೆಗೆ ತಂದು ನಿಲ್ಲಿಸಿದೆವು..ಮನೆ ಎದುರು ಅಷ್ಟೇನೂ ಸಂಚಾರ ಇಲ್ಲದ ನೇರ ರಸ್ತೆ ಇತ್ತು.ಎರಡೂ ಕಡೆಯಲ್ಲಿ ಮನೆಗಳ ಕಾಂಪೌಂಡ್ ವಾಲ್ ಗಳಿದ್ದವು.ಹಾಗಾಗಿ ಎಲ್ಲೆಲ್ಲೋ ಹೋಗಿ ಗುದ್ದಿ ಬೀಳುವ ಅಪಾಯ ಇರಲಿಲ್ಲ. ನಾವು ಗಾಡಿ ಸ್ಟಾರ್ಟ್ ಮಾಡುದು ಅದು ಆಫ್ ಆಗುದು,ನಮಗೆ ಬಿಡಲಾಗದೆ ಒದ್ದಾಡುವುದು ಎಲ್ಲವನ್ನೂ ಅಪಾರ್ಟ್ಮೆಂಟ್ ನ ಹತ್ತು ಮನೆಗಳ ಮಂದಿ ನೋಡುತ್ತಾ ಇದ್ದರು.
ಒಂದೆರಡು ಬಾರಿ ಸ್ಟಾರ್ಟ್ ಮಾಡಿ ರಸ್ತೆಯ ಈ ತುದಿಯಿಂದ ಆ ತುದಿಗೆ ಅಲ್ಲಿಂದ ಇಲ್ಲಗೆ ಕಾಲಿನಲ್ಲಿ  ದೂಡಿಕೊಂಡು ಹೋದೆ‌.ಅಷ್ಟರಲ್ಲಿ ಎಕ್ಸಲೇಟರ್ ಹಾಗೂ ಬ್ರೇಕ್ ನ‌ಮೇಲಿನ ಹಿಡಿತ ಸಿಕ್ಕಿತ್ತು.ಆ‌ಮೇಲೆ ಆದ್ದಾಗಲಿ ಎಂದು ದೈರ್ಯ ಮಾಡಿ ಸ್ಟಾರ್ಟ್ ಮಾಡಿ( ಅದು ಅಟೋ ಸ್ಟಾರ್ಟ್ ಗಾಡಿ ಆದ ಕಾರಣ ಸ್ಟಾರ್ಟ್ ಮಾಡಲು ಏನೂ ಕಷ್ಟ ಇರಲಿಲ್ಲ)  ಎಕ್ಸಿಲೇಟರ್ ಕೊಟ್ಟು ಎರಡೂ ಕಾಲು ಮೇಲೆತ್ತಿ ಕುಳಿತೆ‌.ಸ್ವಲ್ಪ ಆ ಕಡೆ ಈ ಕಡೆ ವಾಲಿದರೂ ಗಾಡಿ ಬೀಳದೆ ಮುಂದೆ ಹೋಯಿತು.ಹಾಗೆ ಎರಡು ಮೂರು ಬಾರಿ ಓಡಿಸುವಷ್ಟರಲ್ಲಿ ಗಾಡಿ ಮೇಲೆ ಹಿಡಿತ ಸಿಕ್ಕಿತ್ತು. ಮರುದಿನವೇ ಶಾಲೆಗೆ ಅದರಲ್ಲೇ ಹೋಗಿದ್ದೆ‌.ಮತ್ತೊಂದು ವಾರದಲ್ಲ ಕರಂಗಲ್ಪಾಡಿ ರಸ್ತೆಯಲ್ಲಿ ಸಾಗಿ ಅಲೋಶಿಯಸ್ ಕಾಲೇಜಿಗೆ ತಗೊಂಡು ಹೋಗಲು ಕಲಿತೆ.ಒಂದೆರಡು ಸಲ ಬಿದ್ದು ಸಣ್ಣ ಪುಟ್ಟ ಗಾಯ ಆಗಿದ್ದು ಬಿಟ್ಟರೆ ಬೇರೇನೂ ಅಪಾಯ ಆಗಿರಲಿಲ್ಲ.
ನಾನು ಗಾಡಿ ಓಡಿಸಲು ಕಲಿತದ್ದೇ ಕಲಿತದ್ದು...ನಾನು ವಾಕಿಂಗ್ ಹೋಗುತ್ತಾ ಇರುವಾಗ ಕೂಡ ನಮ್ಮ ಅಪಾರ್ಟ್ಮೆಂಟ್ ನ ಮಂದಿ ಡ್ರಾಪ್ ಮಾಡಲೇ ಎಂದು ಕೇಳುತ್ತಿದ್ದರು. 😀 ಇದು ಜಗತ್ತಿನ ಪರಿ ! ಇಂದು ಬಸ್ಸಿನಲ್ಲಿ ನಾನು ನೋಡಿದ ಮಹಿಳೆಗೆ ಕೂಡ ಇಂತಹ ಕಾಲ ಬರಲಿ ಎಂದು ಆಶಿಸುವೆ .

No comments:

Post a Comment