Sunday 14 April 2019

ನನ್ನೊಳಗೂ ಒಂದು ಆತ್ಮವಿದೆ- ಮಹತ್ವಾಕಾಂಕ್ಷೆ ತಪ್ಪೇ ?

ಮಹತ್ವಾಕಾಂಕ್ಷೆ ತಪ್ಪಾ?
ನನ್ನ ಕನಸನ್ನೂ ಬೇರೆಯವರು ನಿರ್ದೇಶಿಸಬೇಕಾ ?

ಹಾಗೆ ನೋಡಿದರೆ ನಾನು ಅಲ್ಪ ತೃಪ್ತೆ..ನನಗೆಂದೂ ಐಷಾರಾಮಿ ಕಾರುಗಳಲ್ಲಿ ಓಡಾಡಬೇಕೆಂದೆನಿಸಿಲ್ಲ..ಇರಲು ಬಂಗಲೆ ಬೇಕೆನಿಸಿಲ್ಲ..ಒಂದಿನಿತು ಚಿನ್ನದ ಒಡವೆಗಳು ಇರುವುದಾದರೂ ಅದೆಲ್ಲವೂ ತಂದೆ ತಾಯಿ  ಅಣ್ಣ ತಮ್ಮ ,ಗಂಡ ಅವರಾಗಿಯೇ ಕೊಟ್ಟದ್ದು..ನಾನೆಂದೂ ಒಡವೆಗಳನ್ನು ಬಯಸಿರಲಿಲ್ಲ..ನನ್ನದೊಂದು ತಪ್ಪು ಎನ್ನುವುದಾದರೆ ಮಂಗಳೂರು ಯುನಿವರ್ಸಿಟಿ ಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಬಯಸಿದ್ದು..ಸಂಸ್ಕೃತ, ಹಿಂದಿ ಕನ್ನಡ ಎಂಎ ಎಂಫಿಲ್ ಮತ್ತು ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದು ಇಪ್ಪತ್ತು ಪುಸ್ತಕಗಳು ,ಸುಮಾರು ಮುನ್ನೂರು ಲೇಖನಗಳ ಪ್ರಕಟಣೆಯ ನಂತರ ನಾನು ಈ ಹುದ್ದೆಯನ್ನು ಬಯಸಿದ್ದು ನಿಜ.. ಜಾತಿ,ದುಡ್ಡು ರಾಜಕೀಯ ಪ್ರಭಾವ ಇಲ್ಲದ ನನಗೆ ಅದು ಸಿಗಲೂ ಇಲ್ಲ ಬಿಡಿ..ಆದರೆ ಇಷ್ಟು ಅಧ್ಯಯನದ ನಂತರ ಯುನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ಆಶಿಸಿದ್ದು ಮಹತ್ವಾಕಾಂಕ್ಷೆಯೇ..ಇನ್ನೂ ಯಾವುದೇ ಪ್ರಶಸ್ತಿ ಸನ್ಮಾನಗಳಿಗಾಗಿ ನಾನು ಅಧ್ಯಯನ ಮಾಡಿಲ್ಲ‌,ಭೂತಗಳ ಕುರಿತಾದ ಅಧ್ಯಯನ ನನ್ನ ಸ್ವಂತ ಖುಷಿಗಾಗಿ ..ಅದನ್ನು ಗುರುತಿಸಿ ಕೆಲವರು ಪ್ರಶಸ್ತಿ ನೀಡಿದಾಗ ಗೌರವದಿಂದ ಸ್ವೀಕರಿಸಿದ್ದೂ ನಿಜ..ಅಷ್ಟಕ್ಕೇ ಕೀರ್ತಿ ಶನಿ ತಲೆಗೆ ಏರಿದಂತೆ ಕಾಣಿಸುತ್ತಿದ್ದೇನಾ ? ನಾನು ನನಗೆ ಅನ್ಯಾಯವಾದಾಗ ಮಾತ್ರ ಅವರ ವಿರುದ್ಧ ಹೋರಾಡಿದ್ದೇನೆ ಗೆದ್ದಿದ್ದೇನೆ.. ನನಗಾದ ಅನ್ಯಾಯದ ವಿರುದ್ಧ  ಹೋರಾಡುವ ಹಕ್ಕೂ ನನಗಿಲ್ಲವೇ ? ಹಳ್ಳಿಯಲ್ಲಿ  ಬಡ ಪುರೋಹಿತರ ಮಗಳಾಗಿ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಜಾತಿ ದುಡ್ಡು ಇನ್ಫ್ಲೂಯೆನ್ಸ್ ಇಲ್ಲ ಅಷ್ಟಕ್ಕೇ ನನಗೆ ಉನ್ನತ ಸಾಧನೆಯ ಕನಸನ್ನು ಕಾಣುವ ಹಕ್ಕಿಲ್ಲವೇ ?ನನ್ನ ಕನಸನ್ನೂ ಬೇರೆಯವರು ನಿರ್ದೇಶಿಸಬೇಕೇ ? ಇದಕ್ಕೇನು ಕಾರಣ ? ನಾನು ಸ್ತ್ರೀ ಆಗಿರುವುದಾ ? ಅಥವಾ ಯಾರಿಗೂ ಬಕೆಟ್ ಹಿಡಿಯದೆ ನನ್ನಷ್ಟಕೆ ನಾನು ಅಧ್ಯಯನದಲ್ಲಿ ತೊಡಗಿಕೊಂಡದ್ದು ಕಾರಣವಾ ? ನನಗಂತೂ ಅರ್ಥವಾಗುತ್ತಾ ಇಲ್ಲ

No comments:

Post a Comment