Monday, 31 March 2025

ಕಾಂತಾರ ಪ್ರೀಕ್ವೆಲ್ ನಲ್ಲಿ ಕಾಂತಾರ ಪಂಜುರ್ಲಿ ಯ ಉದ್ಭವದ ಕಥೆ ಹೇಳ್ತಾರಂತೆ

 ಕಾಂತಾರ ಪ್ರೀಕ್ವೆಲ್ ನಲ್ಲಿ ಕಾಂತಾರ ಪಂಜುರ್ಲಿ ಯ ಉದ್ಭವದ ಕಥೆ ಹೇಳ್ತಾರಂತೆ ,ಈ ಪಂಜುರ್ಲಿಯ ಕಥೆ ಏನು ಎಂದು ನನ್ನಲ್ಲಿ ಅನೇಕರು ಕೇಳಿದ್ದಾರೆ 

ಕಾಂತಾರ ಪ್ರೀಕ್ವೆಲ್ ಬಿಡುಗಡೆ ಮಾಡಿದ ಟೀಸರ್ ನಲ್ಲಿ ರಿಷಭ್ ಶೆಟ್ಟಿಯವರ ನೋಟ ಅದ್ಭುತವಾಗಿದೆ.ಒಂದೆಡೆ ಶಿವನಂತೆ ತ್ರಿಶೂಲ ಧಾರಣೆ ಮತ್ತೊಂದೆಡೆ ಪರಶುರಾಮನಂತೆ ಕೊಡಲಿ,ಕಿವಿಗೆ ಹಂದಿಯ ದಾಡೆಯನ್ನು ಹೋಲುವ ಓಲೆ  ಧರಿಸಿದ ದೈವ ಸ್ವರೂಪಿ ಯಾಗಿ ಕಾಣ್ತಾ ಇದ್ದಾರೆ.ಇವರು ಯಾವ ಕಥೆ ತೋರಿಸುವರು ಎಂದು ಇದಮಿತ್ಥಂ ಹೇಳಲು ಸಾಧ್ಯವಿಲ್ಲ .ಒಂದಿನಿತು ಊಹಿಸಬಹುದು ಅಷ್ಟೇ .

ಯಾವುದೇ ಕಥೆಯನ್ನಾದರೂ ಅವರು ಅತ್ಯದ್ಭುತವಾಗಿ ರೋಚಕವಾಗಿ ತೆರೆಯಲ್ಲಿ ತೋರಿಸಬಲ್ಲರು.. ಹಾಗಾಗಿ ನಾನೂ ಕೂಡಾ ಕಾಂತಾರ ಪ್ರೀಕ್ವೆಲ್ ಬಿಡುಗಡೆ ಆಗುವುದನ್ನು ಕಾಯ್ತಾ ಇದ್ದೇನೆ 

 

ಯಾಕೆಂದರೆ ದೈವಗಳಿಗೆ ಸಂಬಂಧಿಸಿದಂತೆ ಅನೇಕ ಕಥಾನಕಗಳು ಐತಿಹ್ಯಗಳು ಪ್ರಚಲಿತವಿರುತ್ತದೆ 

ಪಂಜುರ್ಲಿ ದೈವದ ಕುರಿತಾಗಿ ಅನೇಕ ಕಥಾನಕಗಳು ಇವೆ ‌ಆ ಕಥಾನಕಗಳಲ್ಲಿ ಕಾಂತಾರ ಪಂಜುರ್ಲಿ ಎಂಬ ದೈವದ ಕಥೆಯೂ ಇದೆ ಒಂದೊಂದಾಗಿ ಬರೆದು ತಿಳಿಸುವೆ.

 

 1ಕಾಂತಾರ ಪಂಜುರ್ಲಿ 

 

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಕಾಂತಾರೇಶ್ವರ ದೇವಾಲಯ ಇದೆ ಇಲ್ಲಿ ದೇವರ ಬಲ ಭಾಗದಲ್ಲಿ ನೆಲೆಯಾಗಿರುವ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಇದೆ ಹಾಗಾಗಿ ಎರಡು ಮೊಗಗಳು ಇವೆ 

ಕಾಂತಾರ ಪಂಜುರ್ಲಿ ಕುರಿತು ವಿಶಿಷ್ಟ ಕಥಾನಕ ಇದೆ.

ಕಾಂತಾರೊಡು ಕಾಂತಾವರ ದೇವೆರೆ

ಬಲಭಾಗೊಡು ಕಲ್ಲ ಪಂಜಿಯಾದ್ ಉದ್ಯಬೆಂದೆ
ದೇವೆರೆಗ್ ರಥ ಇಜ್ಜಿಂದ್ ತೆರಿದು
ಪುತ್ತಿಗೆ ಸೋಮನಾಥೇಶ್ವರ ದೇವೆರೆನಾಡೆ ಪೋದೆ
ಸೋಮನಾಥೇಶ್ವರ ದೇವೆರೆ ರಥನು ಕೊಣತ್ತೆ
ಕಾಂತಾವರೊಡು ಕಾಂತೇಶ್ವರ ದೇವೆರೆನ
ರಥೋತ್ಸವದ ಪೊರ್ಲುನು ತೂವೊಂಡೆ


ಕನ್ನಡ ಅನುವಾದ 
ಕಾಂತಾರದಲ್ಲಿ ಕಾಂತಾವರ ದೇವರ
ಬಲ ಭಾಗದಲ್ಲಿ ಕಲ್ಲ ಹಂದಿಯಾಗಿ ಉದಿಸಿದೆ
ದೇವರಿಗೆ ರಥ ಇಲ್ಲವೆಂದು ತಿಳಿದು
ಪುತ್ತಿಗೆ ಸೋಮನಾಥ ದೇವರಲ್ಲಿಗೆ ಹೋದೆ
ಸೋಮನಾಥ ದೇವರ ರಥವನ್ನು ತಂದು
ಕಾಂತಾವರದಲ್ಲಿ ಕಾಂತೇಶ್ವರ ದೇವರ
ರಥೋತ್ಸವದ ಚೆಲುವನ್ನು ನೋಡಿಕೊಂಡೆ ..

ಕಾರ್ಕಳ ತಾಲೂಕಿನ ಕಾಂತಾವರದ ಕಾಂತಾರೇಶ್ವರ ದೇವರ ಬಲಭಾಗದಲ್ಲಿ  ಮಾಯವಾಗಿ    ಕಲ್ಲ ಹಂದಿಯಾಗಿ ನಿಂತ  ಕಾಂತಾರ ಪಂಜುರ್ಲಿ ದೈವದ ಬಗ್ಗೆ ವಿಶಿಷ್ಟವಾದ ಐತಿಹ್ಯವಿದೆ.ಈ ಪಾಡ್ದನದ ಕಥೆಯನ್ನು ಶೇಖರ ಪರವರು ತಿಳಿಸಿದ್ದಾರೆ
ಕಾರ್ಕಳ ತಾಲೂಕಿನ ಕಾಂತಾವರವನ್ನು ಆಡುಮಾತಿನಲ್ಲಿ ಕಾಂತಾರ ಎನ್ನುತ್ತಾರೆ.ಕಾಂತಾರ ಎಂದರೆ ಕಾಡು ಎಂದರ್ಥ ಮೊದಲು ಈ ಪ್ರದೇಶ ಕಾಡು ಆಗಿತ್ತು .ಈಗಲೂ ಇದು ಹಳ್ಳಿಯಾಗಿ ಉಳಿದಿದೆ
ಇಲ್ಲಿಗೆ ಸಮೀಪದಲ್ಲಿ ಕೊಂಚಾಡಿ ಎಂಬಲ್ಲಿ ಪ್ರತಿವರ್ಷ ಪಂಜುರ್ಲಿ ದೈವದ ಕೋಲ ನಡೆಯುತ್ತದೆ .
ಒಂದು ವರ್ಷ ಕೋಲ ನೋಡಲು ಕುರಿ ಗುತ್ತಿನ ಹಿರಿಯರು ಹೋಗುತ್ತಾರೆ.ಕೋಲ ನೋಡಿ ಹಿಂತಿರುಗುವಾಗ ದೈವವು ಓರ್ವ ಬ್ರಾಹ್ಮಣ ಮಾಣಿಯ ರೂಪದಲ್ಲಿ ಹಿಂಬಾಲಿಸುತ್ತದೆ.ಮನೆ ಸಮೀಪಿಸಿದಾಗ ಕಾಣದಾಗುತ್ತದೆ.ನಂತರ ಕುರಿ ಗುತ್ತಿನ ಹಿರಿಯರ  ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ಆರಾಧಿಸಬೇಕೆಂದು ಹೇಳುತ್ತದೆ.
ಎಚ್ಚರಗೊಂಡ ನಂತರ ಅವರು ತನಗೆ ದೈವವನ್ನು ಪಾಲಿಸಲು ಸಾಧ್ಯವಿಲ್ಲ.ಹಾಗಾಗಿ ಕಾಂತಾವರ ದೇವರಲ್ಲಿ ಜಾಗ ಕೇಳು ಎಂದು ಅರಿಕೆ ಮಾಡುತ್ತಾರೆ.ದೈವವು ಕಾಂತಾವರ ದೇವರ ಬಲಿ ಹೋಗದಂತೆ ದಕ್ಷಿಣ ದಿಕ್ಕಿನಲ್ಲಿ ತಡೆಯುತ್ತದೆ

.ನಂತರ ದೇವಾಲಯದ ಒಳಬಾಗದಲ್ಲಿ ಒಂದು ಹಂದಿ ಮರಿಯಾಗಿ ಕಾಣಿಸಿಕೊಳ್ಳುತ್ತದೆ.ಈ ಹಂದಿಮರಿಯನ್ನು ಸಾಕಲು ಒಂದು ಮೊಯಿಲಿಗಳ ಕುಟುಂಬಕ್ಕೆ ನೀಡುತ್ತಾರೆ.ಅ ಹಂದಿಮರಿ ದಟ್ಟ ಪುಷ್ಟವಾಗಿ ಬೆಳೆಯುತ್ತದೆ.ಅಕ್ಕ ಪಕ್ಕದವರ ಗದ್ದೆಗೆ ಹೋಗಿ ಕದ್ದು ಬೆಳೆಯನ್ನು ತಿಂದು ಹಾಳು ಮಾಡುತ್ತದೆ.ಆಗ ಕೋಪಗೊಂಡ ಮೊಯಿಲಿಯವರ ಕುಟುಂಬದವರು ಆ ಹಂದಿಮರಿಯನ್ನು ಕೊಂದು ತಿನ್ನುತ್ತಾರೆ.ಆಗ ಕೋಪಗೊಂಡ ದೈವವು ಎಂಟು ಜನ ಮೊಯಿಲಿ ಕಟುಂಬದ ಸಹೋದರರನ್ನು ಕೊಲ್ಲುತ್ತದೆ
ನಂತರ ಊರವರೆಲ್ಲ ಸೇರಿ ಕಾಂತಾವರ ದೇವರ ಬಲಭಾಗದಲ್ಲಿ ಸ್ಥಾನ ಕಟ್ಟಿಸಿ ದೈವಕ್ಕೆ ಕೋಲ ಕೊಟ್ಟು ಆರಾಧಿಸಿ ಕೋಪವನ್ನು ತಣಿಸುತ್ತಾರೆ.
ಹಾಗೆ ಇಲ್ಲಿ ಹಂದಿಮರಿಯ ರೂಪದಲ್ಲಿ ಕಾಣಿಸಿಕೊಂಡ ದೈವ ಕಾಂತಾರ ಪಂಜುರ್ಲಿ ಎಂದು ಕರೆಸಿಕೊಳ್ಳುತ್ತದೆ.ತಾನು ಕಲ್ಲ ಪಂಜಿ/ ಹಂದಿಯಾಗಿ ಕಾಂತಾವರ ಬಲ ಭಾಗದಲ್ಲಿ ನಿಂತೆ ಎಂದು ದೈವ ನುಡಿಯುತ್ತದೆ.

 

ಇಲ್ಲಿ ಆರಾಧಿಸಲ್ಪಡುವ ದೈವ ಅಣ್ಣಪ್ಪ ಪಂಜುರ್ಲಿ ಎಂದು ಇಲ್ಲಿನ ತಂತ್ರಿಗಳಾದ ಕೃಷ್ಣ ಮೂರ್ತಿ ಭಟ್ ತಿಳಿಸಿದ್ದಾರೆ.ಇಲ್ಲಿನ ಚಿತ್ರವನ್ನವರು ಕಳುಹಿಸಿದ್ದು ಅದರಲ್ಲಿ ಎರಡು ಹಂದಿಯ ಮೊಗಗಳಿವೆ.
ಹಾಗಾಗಿ ಇಲ್ಲಿ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಆಗುತ್ತಿದ್ದು ಕಾಲಾಂತರದಲ್ಲಿ ಒಂದರಲ್ಲಿಯೇ ಎರಡೂ ಶಕ್ತಿಗಳು ಸಮನ್ವಯಗೊಂಡಿರುವುದು ತಿಳಿದು ಬರುತ್ತದೆ 


ಒಂದು ಅಣ್ಣಪ್ಪ ದೈವವಾದರೆ  ಇನ್ನೊಂದು ಯಾವುದೆಂಬ ಸಂದೇಹ ಉಂಟಾಗುತ್ತದೆ.ಇಲ್ಲಿ ನುಡಿಗಟ್ಟಿನಲ್ಲಿ ದೈವವು ತಾನು ಕಲ್ಲ ಪಂಜಿಯಾಗಿ ನಿಂತೆ ಎಂದಿದೆ.ಆದರೆ ಇಲ್ಲಿ ಕಲ್ಲಿನ ಮೂರ್ತಿ ಇಲ್ಲ.
ಬಹುಶಃ ಅಕ್ಕ ಪಕ್ಕದ ಗದ್ದೆಗೆ ಹೊಕ್ಕು ಹಾನಿ ಮಾಡುವ ಕಳ್ಳ ಹಂದಿಯ ರೂಪದಲ್ಲಿ ಕಾಣಿಸಿಕೊಂಡ ದೈವ 

.ಕಳುವೆ ಪಂಜಿ > ಕಳ್ಳ ಪಂಜಿ ಎಂಬುದೇ ಮೂಲ ಅರ್ಥ ಕಳೆದು ಹೋದಾಗ ಆಡು ಮಾತಿನಲ್ಲಿ    ಕಲ್ಲ ಪಂಜಿ ಎಂದಾಗಿದೆ 

  ಡಾ.ಲಕ್ಷ್ಮೀ ಜಿ ಪ್ರಸಾದ್,

ಆಧಾರ  ಕರಾವಳಿಯ ಸಾವಿರದೊಂದು ದೈವಗಳು ,

 

ಪಂಜುರ್ಲಿ ದೈವದ ಮೂಲಕ್ಕೆ ಸಂಬಂಧಿಸಿದ ಎಲ್ಲ ಕಥಾನಕಗಳಲ್ಲಿಮೂ ಬೇಟೆ ಮತ್ತು ಹಂದಿ ಮರಿ ಸಾಯುವ ಕಥೆ ಇದೆ ಸತ್ತ ನಂತರ ಉಪದ್ರ ಕಾಣಿಸುತ್ತದೆ ಹಾಗಾಗಿ ಅದು ದೈವಿಕ ಶಕ್ತಿ ಎಂದು ತಿಳಿದು ಆರಾಧನೆ ಮಾಡುತ್ತಾರೆ 

ಹಾಗಾಗಿ ಇದು ಮೂಲ ಃ ಟೊಟಾಮಿಕ್ ವರ್ಶಿಪ್ ಎಂದರೆ ಪ್ರಾಣಿ ಮೂಲ ಆರಾಧನೆ ಆಗಿದೆ 

ನಂತರ ಈ ದೈವದ ಸೆರಿಗೆಗೆ ಸಂದವರೂ ಪಂಜುರ್ಲಿ ಹೆಸರಿನೊಂದಿಗೆ ಆರಾಧನೆ ಪಡೆಯುಯ್ತಾರೆ.ಅಣ್ಣಪ್ಪ ಪಂಜುರ್ಲಿ,ದೇವರ ಪೂಜಾರಿ ಪಂಜುರ್ಲಿ ಉಂರ್ದರ ಪಂಜುರ್ಲಿ ಮೊದಲಾದ ದೈವಗಳು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುವ ಶಕ್ತಿ ಗಳಾಗಿದ್ದಾರೆ 

 

No comments:

Post a Comment