ಅವಾಸ್ತವಿಕ ಕನಸಿನ ಬೆನ್ನೇರಿ..
ಕೆಲ ವರ್ಷಗಳ ಮೊದಲು ಓರ್ವ ವಿದ್ಯಾರ್ಥಿನಿ ವಿಜ್ಞಾನ ವಿಭಾಗದಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಳು .ಅವಳಿಗೆ ಹತ್ತನೇ ತರಗತಿಯಲ್ಲಿ 245 / 625 ಅಂಕ ಬಂದಿತ್ತು.ಗಣಿತದಲ್ಲಿ 30 ಅಂಕ ಗಳಿಸಿದ್ದಳು
ಅದನ್ನು ಗಮನಿಸಿ ನಾನು ನಿನಗೆ ವಿಜ್ಞಾನ ಕಷ್ಟ ಆಗಬಹುದು ಕಲಾ ವಿಭಾಗಕ್ಕೆ ಸೇರು ಎಂದೆ.ಇಲ್ಲ ಇಲ್ಲ ನಾನು ಎಂಬಿ ಬಿ ಎಸ್ ಓದಿ ವೈದ್ಯೆ ಆಗಬೇಕು ಎಂದು ಹಠ ಹಿಡಿದಳು.ಆದರೂ ನಾವು ವಿಜ್ಞಾನ ವಿಭಾಗದಲ್ಲಿ ಪ್ರವೇಶ ಕೊಡಲಿಲ್ಲ ಆಗ ಅವಳ ಹೆತ್ತವರು ಸ್ಥಳೀಯ ಎಂ ಎಲ್ ಎ ಯಿಂದ ಸೀಟು ಕೊಡುವಂತೆ ಫೋನ್ ಮಾಡಿಸಿದರು.ಸರಿ ಎಂದು ಅವಳನ್ನು ವಿಜ್ಞಾನ ವಿಭಾಗಕ್ಕೆ ಪ್ರವೇಶ ನೀಡಿದೆವು..
ಕಿರು ಪರೀಕ್ಷೆಯಲ್ಲಿ ಅವಳು ಒಂದಂಕಿ ಗಳಿಸಿದ್ದಳು.ಆಗ ಕರೆದು ಚೆನ್ನಾಗಿ ಓದುವಂತೆ ತಿಳಿ ಹೇಳಿದೆವು.ವಿಜ್ಞಾನ ಅವಳ ಗ್ರಹಿಕೆಯ ಮಟ್ಟಕ್ಕೆ ಮೀರಿದ್ದು ಆಗಿತ್ತು.ಏನೇ ನಾವು ಪ್ರಯತ್ನ ಪಟ್ಟರೂ ಅವಳು ಪ್ರಥಮ ಪಿಯುಸಿಯಲ್ಲಿ ಉತ್ತೀರ್ಣ ಳಾಗುವಷ್ಟು ಅಂಕ ತೆಗೆಸಲು ನಮ್ಮಿಂದ ಸಾಧ್ಯವಾಗಲಿಲ್ಲ
ಪರಿಣಾಮವಾಗಿ ಪ್ರಥಮ ಪಿಯುಸಿ ಯಲ್ಲಿಯೇ ಫೇಲ್ ಆದಳು.
ಆಗ ಪುನಃ ಕಲಾ ವಿಭಾಗದಲ್ಲಿ ಪ್ರವೇಶ ಪಡೆದು ಓದು ಎಂದು ನಾನು ಸಲಹೆ ನೀಡಿದ್ದೆ ಅವಳು ತಾನು ಕಂಪ್ಯೂಟರ್ ಕಲಿಯುತ್ತೇನೆ ಅಲ್ಲಿ ಕೆಲಸ ಸಿಗುತ್ತದೆ ಎಂದಳು..ಸರಿ ಎಂದು ಸುಮ್ಮನಾದೆ.ಅಲ್ಲಿಯೂ ಪಾಸಾಗದೆ ಕೊನೆಗೆ ಮಾಲ್ ಒಂದರಲ್ಲಿ ಸ್ವಚ್ಛತೆ ಮಾಡುವ ಕೆಲಸಕ್ಕೆ ಸೇರಿದಳು
ಅಂತಹದ್ದೇ ಇನ್ನೋರ್ವ ವಿದ್ಯಾರ್ಥಿ ಹತ್ತನೇ ತರಗತಿಯಲ್ಲಿ ಎರಡು ಮೂರು ಬಾರಿ ಕಟ್ಟಿ ಪಾಸಾದಾತ ನಾವು ಬೇಡ ಆರ್ಟ್ಸ್ ತಗೋ ಎಂದರೂ ಹಠ ಮಾಡಿ ಕಾಮರ್ಸ್ ತಗೊಂಡು ಫೈಲ್ ಆಗಿದ್ದ.
ನಿದಾನ ಕಲಿಕೆಯ ಮಕ್ಕಳು ಸುಲಭ ಗ್ರಾಹ್ಯವಾಗಿರುವ ವಿಷಯಗಳನ್ನು ತಗೊಂಡು ಓದಿದರೆ ಯಶಸ್ಸು ಸಿಗುವ ಸಾಧ್ಯತೆ ಇದೆ.
ಆದರೆ ಇಂದಿನ ಯುಜನತೆ ಅವಾಸ್ತವಿಕ ಕನಸುಗಳನ್ನು ಬೆನ್ನತ್ತಿ ಹೋಗುವುದು ಕಾಣಿಸುತ್ತದೆ.
ಇನ್ನೋರ್ವ ವಿದ್ಯಾರ್ಥಿನಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಿದ್ದಳು.ನಾನು ಸರ್ಕಾರಿ ಪದವಿ ಕಾಲೇಜಿಗೆ ಸೇರಲು ಸಲಹೆ ನೀಡಿದ್ದೆ.ಈಕೆಗೆ ತಂದೆ ಇರಲಿಲ್ಲ ತಾಯಿ ಅಕ್ಕ ಪಕ್ಕದ ಮನೆಯಲ್ಲಿ ಕಸಮುಸುರೆ ಕೆಲಸ ಮಾಡಿ ಇವಳನ್ನು ಮತ್ತು ಇವಳ ತಂಗಿಯನ್ನು ಸಾಕಿದ್ದರು
ಅವಳು ಹಠ ಮಾಡಿ ಖಾಸಗಿ ಕಾಲೇಜಿಗೆ ಸೇರಿದಳು.ಮೊದಲ ವರ್ಷ ದ ಫೀಸನ್ನು ಅವರಿವರಿಂದ ಕೇಳಿ ಪಡೆದು ತುಂಬಿದಳು
ಎರಡನೇ ವರ್ಷ ಫೀಸು ಕಟ್ಟಲಾಗದೆ ಕಾಲೇಜು ಓದನ್ನು ಬಿಟ್ಟು ಬಟ್ಟೆಯ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಸೇರಿದಳು
ಧೀರೂ ಬಾಯಿ ಅಂಬಾನಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಕೆಲಸ ಮಾಡುತ್ತಿದ್ದರಂತೆ.ಹಾಗೆಂದು ಎಲ್ಲ ಪೆಟ್ರೋಲ್ ಹಾಕುವ ಹುಡುಗರು ಅಂಬಾನಿ ಆಗಲು ಸಾಧ್ಯವಿಲ್ಲ.
ಆದರೂ ಅಲ್ಲಿ ಕೆಲಸ ಕಲಿತು ದೊಡ್ಡ ಹುದ್ದೆಗೆ ಹೋಗುವ ಅವಕಾಶ ಹೆಚ್ಚಿನವರಿಗೆ ಇರುತ್ತದೆ
ಆಳಾಗದೆ ಒಡೆಯನಾಗುವುದು ಬಹಳ ಅಪರೂಪ.
ಸಣ್ಣ ಕೆಲಸ ಮಾಡುತ್ತಾ ಸಣ್ಣ ಉದ್ದಿಮೆ ಆರಂಭಿಸಿ ಬೆಳೆಸುತ್ತಾ ದೊಡ್ಡ ಉದ್ಯಮಿಗಳಾದವರು ನೂರಾರು ಜನರಿದ್ದಾರೆ.ಆದರೆ ಇವರೆಲ್ಲ ಶೂನ್ಯದಿಂದ ಸೃಷ್ಟಿ ಮಾಡಿದವರಲ್ಲ.
ಕೈಯಲ್ಲಿ ದುಡ್ಡು ಅನುಭವ ಎರಡೂ ಇಲ್ಲದೇ ಲಕ್ಷಗಟ್ಟಲೆ ಸಾಲ ಮಾಡಿ ಬ್ಯುಸಿನೆಸ್ ಮಾಡಲು ಹೊರಡುವ ಮೊದಲು ಸಾವಿರ ಸಲ ಯೋಚಿಸಬೇಕಿದೆ.. ಒಂದೊಮ್ಮೆ ಅಂದುಕೊಂಡೆಂತೆ ಬ್ಯುಸಿನೆಸ್ ನಡೆಯದೇ ಇದ್ದರೆ ಸಾಲವನ್ನು ಕಟ್ಟುವುದು ಹೇಗೆ ಎಂದು..
ಎರಡು ವರ್ಷಗಳ ಮೊದಲು ನನ್ನ ಮಗ ಸ್ವಿಗ್ಗಿಯಂತೆ ನಾವು ಕೂಡ ಒಂದು ಸಂಸ್ಥೆ ಶುರು ಮಾಡಿ ಬ್ಯುಸಿನೆಸ್ ಮಾಡುವ . ಬೇರೆಯವರ ಕೈಕೆಳಗೆ ಕೆಲಸ ಮಾಡುವ ಮೊದಲುನಾವೇ ನಾಲ್ಕು ಜನರಿಗೆ ಕೆಲಸ ಕೊಡುವ ಎಂದ.
ಆಗ ನಾನು ಆಗಬಹುದು ಆದರೆ ಮೊದಲು ನೀನು ಎರಡು ಮೂರು ವರ್ಷ ಸ್ವಿಗ್ಗಿಯಲ್ಲಿ ಕೆಲಸ ಮಾಡು ಅದರ ಆಗು ಹೋಗುಗಳ ಬಗ್ಗೆ ಕಲಿ ನಂತರ ನೋಡುವ..ನಿನಗೆ ಸ್ವಂತ ವೇ ಮಾಡಬೇಕೆಂದಿದ್ದರೆ ಲಾ ಆಫೀಸ್ ಸ್ವಂತ ಹಾಕು .. ನೀನು ಏನು ಕಲಿತಿದ್ದೀ ಅದರಲ್ಲಿ ಮುಂದೆ ಸಾಗುದು ಸುಲಭ ಎಂದೆ
ಅವನು ಬ್ಯುಸಿನೆಸ್ ಸುದ್ದಿ ಬಿಟ್ಟು ಲಾ ಆಫೀಸ್ ಸ್ವಂತ ಹಾಕಿದ
ಎಲ್ಲರಿಗೂ ಬ್ಯುಸಿನೆಸ್ ಕೈ ಹಿಡಿಯುವುದಿಲ್ಲ.ಹಾಗಾಗಿ ಸಾಲ ಮಾಡಿ ಬ್ಯುಸಿನೆಸ್ ಹಾಕುವ ಬದಲು ಸಣ್ಣ ದಾಗಿ ಆರಂಭಿಸಿ ದೊಡ್ಡದಾಗಿ ಬೆಳೆಸುವತ್ತ ಯೋಚಿಸಬೇಕು.
ರಸ್ತೆಯ ಬದಿ ಸೈಟ್ ಇರುವವರು ಹೆಚ್ಚು ಸಾಲ ಮಾಡದೇ ಸಣ್ಣ ಅಥವಾ ದೊಡ್ಡ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಿಸಿ ಬಾಡಿಗೆ ಬರುವಂತೆ ಮಾಡಬಹುದು ಆದರೆ ಬಾಡಿಗೆಗೆ ಕೊಡುವುದಕ್ಕಾಗಿಯೇ ಸಾಲ ಮಾಡಿ ಸೈಟ್ ತೆಗೆದು ಮತ್ತೆ ಸಾಲ ಮಾಡಿ ಕಮರ್ಷಿಯಲ್ ಕಾಂಪ್ಲೆಕ್ಸ್ ಹಾಕಿದರೆ ಸಾಲದ ಬಡ್ಡಿಯಷ್ಟು ಬಾಡಿಗೆ ಬರುತ್ತದೆ ಎಂದು ಹೇಳಲಾಗದು
ದುಡ್ಡು ಇರುವವರು ಮಾಡಬಹುದು ಯಾಕೆಂದರೆ ಅವರಿಗೆ ಸಾಲ ಮಾಡಬೇಕಾಗಿ ಬರುವುದಿಲ್ಲ ಅವರಲ್ಲಿನ ದುಡ್ಡಿನಲ್ಲಿ ಸೈಟ್ ತೆಗೆದು ಕಟ್ಟಡ ಕಟ್ಟಿ ಬಾಡಿಗೆಗೆ ಕೊಟ್ಟರೆ ಸಾಕಷ್ಟು ಒಳ್ಳೆಯ ರಿಟರ್ನ್ಸ್ ಬರಬಹುದು ,ಬಾರದೇ ಇದ್ದರೂ ಅವರಿಗೆ ಸಾಲದ ಹೊರೆ ಬೆಳೆಯುವುದಿಲ್ಲ
ಪೂರ್ತಿ ಸಾಲ ಮಾಡಿ ಬ್ಯುಸಿನೆಸ್ ಮಾಡಲು ಹೊರಡುವುದು ಜಾಣತನವಲ್ಲ.. ಅದೃಷ್ಟ ಕೈ ಹಿಡಿದರೆ ತೊಂದರೆ ಇಲ್ಲ.. ಅಕಸ್ಮಾತ್ ಲಾಭ ಗಳಿಸಲು ಆಗದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಿ ಹೋಗಬೇಕಾಗುತ್ತದೆ
ಬ್ಯುಸಿನೆಸ್ ಹೊರಗಿನಿಂದ ನೋಡಿದಷ್ಟು ಸುಲಭದ್ದಲ್ಲ
ಓರ್ವ ಸಹೃದಯಿ ಯುವ ನಿರ್ದೇಶಕ ಸಿನೇಮಾ ಮಾಡಲು ಹೊರಟು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡದ್ದು ನಿಜಕ್ಕೂ ವಿಷಾದದ ಸಂಗತಿ
ಒಳ್ಳೆಯ ಸಿನಿಮಾ ಮಾಡಿ ಅಥವಾ ಬ್ಯುಸಿನೆಸ್ ಮಾಡಿ ಕೈ ತುಂಬಾ ಗಳಿಸುವ ಕನಸು ತಪ್ಪಲ್ಲ ಆದರೆ ಅದಕ್ಕಾಗಿ ಮೊದಲು ಬಂಡವಾಳವನ್ನು ಸಂಗ್ರಹಿಸಿಕೊಳ್ಳಬೇಕು .
50% ಆದರೂ ಬಂಡವಾಳ ಕೈಯಲ್ಲಿ ಇರಬೇಕು . ಮತ್ತು ಆರಂಭದಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಬೇಕು.
ಧಾರಾಳ ಲಾಭ ಬರುವ ತನಕ ಖರ್ಚಿನ ಮೇಲೆ ಹಿಡಿತ ಇರಬೇಕು
ಬ್ಯುಸಿನೆಸ್ ಎನ್ನುವುದು ಎರಡು ಅಲಗಿನ ಕತ್ತಿ ಯ ಮೇಲಿನ ನಡೆಯ ಹಾಗೆ.ಇಲ್ಲಿ ಮೋಸ ದ್ರೋಹ ವಂಚನೆಗಳೂ ಇರುತ್ತವೆ.ಒಂದಿನಿತು ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಬೀಳುವ ಬೇಕಾಗುತ್ತದೆ
ದೊಡ್ಡ ದೊಡ್ಡ ಬ್ಯುಸಿನೆಸ್ ಮ್ಯಾನ್ ಗಳು ಸಂಪೂರ್ಣ ಸೋತು ಹೋಗಿರುವ ಉದಾಹರಣೆಗಳು ತುಂಬಾ ಇವೆ ಹಾಗಾಗಿ ಅವಾಸ್ತವಿಕ ಕನಸುಗಳನ್ನು ಬೆನ್ನತ್ತಿ ಹೋಗುವ ಮೊದಲು ವಾಸ್ತವಿಕ ನೆಲೆಯಲ್ಲಿ ಯೋಚನೆ ಮಾಡಬೇಕಿದೆ
ಅನೇಕರು ಬ್ಯುಸಿನೆಸ್ ಗೆ ಕೈ ಹಾಕಿ ನಷ್ಟ ಮಾಡಿಕೊಂಡಿದ್ದಾರೆ ಎಂಬುದನ್ನು ಮರೆಯಬಾರದು
ಎಲ್ಲರೂ ಅಂಬಾನಿ ಅದಾನಿ ಟಾಟಾ ಬಿರ್ಲಾ ಆಗಲಾರರು ಆದರೂ ಎಲ್ಲರೂ ಊಟ ಮಾಡುವುದು ಗದ್ದೆಯಲ್ಲಿ ಬೆಳೆದ ಬತ್ತದ ಅಕ್ಕಿಯಿಂದಲೇ.. ಇರುವುದು ಆರೇ ರುಚಿಗಳು..ಬದುಕಿನ ಅವಧಿ ಕೂಡ ಹೇಚ್ಚೆಂದರೆ ನೂರು ವರ್ಷ ಅಷ್ಟೇ..
ಇಷ್ಟಕ್ಕಾಗಿ ಎಲ್ಲರೂ ಅಂಬಾನಿ ಅದಾನಿ ಆಗಬೇಕಿಲ್ಲ.. ಎರಡು ಹೊತ್ತು ಊಟ,ಮಲಗಲೊಂದು ಸೂರು ಇದ್ದರೂ ನೆಮ್ಮದಿಯಿಂದ ಬದುಕಲು ಆಗುತ್ತದೆ .
ಇರುವುದರಲ್ಲಿ ಚೆನ್ನಾಗಿ ಬದುಕಲು ಆಗುತ್ತದೆ ಖಂಡಿತ
No comments:
Post a Comment