Thursday 25 May 2017

ದೊಡ್ಡವರ ದಾರಿ : ಎಲ್ಲರಂತವರಲ್ಲ ನನ್ನಮ್ಮ © ಡಾ ಲಕ್ಷ್ಮೀ ಜಿ ಪ್ರಸಾದ

         

ಎಲ್ಲರವರಂತಲ್ಲ ನನ್ನಮ್ಮ, ಬಾಗಿಲಿಲ್ಲದ ಮನೆಯಲ್ಲಿ ತಲೆ ಯಡಿಯಲ್ಲಿ ಕತ್ತಿ ಇಟ್ಟುಕೊಂಡು ಮಲಗಿದೆ ಧೀರೆ ನನ್ನ ಅಮ್ಮ ಹಾಗಾಗಿ ಸುಮಾರು    ದಿನಗಳಿಂದ ನನ್ನಮ್ಮ ನ ಬಗ್ಗೆ ಬರೆಯಬೇಕೆಂದು‌ಕೊಂಡಿದ್ದೆ .ನನ್ನಮ್ಮ ಶ್ರೀ ಮತಿ ಸರಸ್ವತಿ ಅಮ್ಮ ವಾರಣಾಸಿ ಮೂಲತಃ ಮೀಯಪದವು ಸಮಿಪದ ಹೊಸಮನೆ ಈಶ್ವರ ಭಟ್ ಅವರ ಎರಡನೇ ಮಗಳು . ನಮ್ಮ ಅಜ್ಜನಿಗೆ ಇದ್ದಿದ್ದು ಇಬ್ಬರು ಹೆಣ್ಣು ಮಕ್ಕಳು ಮಾತ್ರ ನನ್ನ ಅಮ್ಮ ಚಿಕ್ಕವರು ನನ್ನ ದೊಡ್ಡಮ್ಮ ಶ್ರೀ ಮತಿ ಗೌರಮ್ಮ ದೊಡ್ಡಮಗಳು
ಅಜ್ಜನಿಗೆ ಗಂಡು ಮಕ್ಕಳಿರಲಿಲ್ಲ ಜೊತೆಗೆ ಸಾಕಷ್ಟು ಶತ್ರುಗಳು ಇದ್ದರು ಆರೋಗ್ಯ ವೂ ಚೆನ್ನಾಗಿರಲಿಲ್ಲ ಹಾಗಾಗಿ ಕಲಿಕೆಯಲ್ಲಿ ನನ್ನ ಅಮ್ಮ ತುಂಬಾ ಜಾಣೆಯಾಗಿದ್ದರೂ ಮುಂದೆ ಓದಿಸದೆ ತನ್ನ ಅಕ್ಕನ ಮಗನಿಗೆ ತೀರಾ ಚಿಕ್ಕ ವಯಸ್ಸಿನಲ್ಲಿ ಎಂದರೆ ಹದಿನಾಲ್ಕು ಹದಿನೈದು ವರ್ಷದಲ್ಲೇ ಮದುವೆ ಮಾಡಿ ಕೊಟ್ಟರು.ತೀರಾ ಸಣ್ಣ ವಯಸ್ಸಿನಲ್ಲಿ ಮದುವೆಯಾದ ನನ್ನ ಅಮ್ಮ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಮ್ಮ ತಂದೆ ಮನೆಯವರೇನು ತೀರ ಬಡವರಲ್ಲ .ನನ್ನ ತಂದೆ ಪುರೋಹಿತ ರಾಗಿದ್ದು ಹೊಟ್ಟೆಗೆ ಬಟ್ಟೆಗೆ ಸಾಕಾಗುವಷ್ಟು ವರಮಾನವಿತ್ತು
ಆದರೂ ಅಣ್ಣ ತಮ್ಮಂದಿರು ಇಲ್ಲದ ನನ್ನ ಅಮ್ಮ ಅಲ್ಲಿ ತೀರಾ ಕಷ್ಟ ವನ್ನು  ತಿರಸ್ಕಾರವನ್ನೂ  ಎದುರಿಸಬೇಕಾಯಿತು.
ಅಂತೂ ಇಂತೂ ಅಮ್ಮ ನಿಗೆ ಇಪ್ಪತ್ತೆಂಟು ವರ್ಷವಾಗುವಾಗ ನಾವು ಐದು ಜನ ಮಕ್ಕಳು ಹುಟ್ಟಿದ್ದೆವು ಆ ಕಾಲಘಟ್ಟದಲ್ಲಿ ನಮ್ಮ ಹಿರಿಯ ಮನೆಯಲ್ಲಿ ಆಸ್ತಿ ಪಾಲು ಆಯಿತು ಅಲ್ಲಿದ್ದದ್ದು ಎಲ್ಲವೂ ನನ್ನ ತಂದೆಯವರ ಸ್ವಾರ್ಜಿತ ಆಸ್ತಿಯೇ ಆಗಿತ್ತು.ಅವರ ತಂದೆ ಎಂದರೆ ನನ್ನ ಅಜ್ಜ ತೀರಿ ಹೋಗುವಾಗ ನನ್ನ ತಂದೆಗೆ ಹದಿನಾರು ವರ್ಷ ಇಬ್ಬರು ಅಕ್ಕಂದಿರು ಒಬ್ಬಳು ತಂಗಿ ಮೂರು ಜನ ತಮ್ಮಂದಿರು ಎಲ್ಲರೂ ಚಿಕ್ಕ ವಯಸಿನವರೇ
ತಂದೆಯ ಚಿಕ್ಕ ತಮ್ಮ ನಿಗೆ  ಆಗಿನ್ನೂ ಮೂರು ವರುಷ .ನನ್ನ ತಂದೆ ಪೌರೋಹಿತ್ಯ ಮಾಡಿ ಎಲ್ಲರನ್ನೂ ಸಾಕಿದರು.ತಂದೆಯ ತಂದೆಯವರಿಗೆ ಸಣ್ಣ ತೋಟವೂ ಇತ್ತು ಆದರೆ ಅದರಿಂದ ಬರುವ ಆದಾಯದಿಂದ ದೊಡ್ಡ ಕುಟುಂಬ ವನ್ನು ಪೊರೆಯಲು ಅಸಾಧ್ಯ ವಾಗಿತ್ತು .
ನಂತರ ತಂದೆ ದುಡಿದ ದುಡ್ಡಿನಲ್ಲಿ ಸ್ವಲ್ಪ ಜಾಗ ಖರೀದಿ ಮಾಡಿದ್ದರೂ ಅದನ್ನು ಅಜ್ಜಿಯ ಹೆಸರಿನಲ್ಲಿ ಮಾಡಿದ್ದರು .
ನನ್ನ ತಂದೆ ತೀರಾ ಸಾಧು ಸ್ವಭಾವದ ಮುಗ್ದರು.
ಹಾಗಾಗಿ ಆಸ್ತಿ ಪಾಲಾಗಿ ಹಿರಿ ಮನೆ ಬಿಟ್ಟು ಹೊಸಮನೆ ಕಟ್ಟಲು ಅವರ ಕೈಯಲ್ಲಿ ಕವಡೆ ಕಾಸಿನ ದುಡ್ಡೂ ಇರಲಿಲ್ಲ. ಸ್ವಲ್ಪ ಸಹಾಯ ಅಮ್ಮನ ತಂದೆ ಅಜ್ಜನಿಂದ ಸಿಕ್ಕಿತು ಮತ್ತೆ ಸಾಲ ಮಾಡಿ ಹೇಗೋ ಒಂದು ಮನೆ ಕಟ್ಟಿ ಒಕ್ಕಲಾದರು.
ಹಾಗಾಗಲಿಲ್ಲ.
ಮೊದಲು ಹಿರಿಯ ಮನೆಯಲ್ಲಿ ಸಾಕಷ್ಟು ಇದ್ದರೂ ಕೃತಕ ಬಡತನವಿತ್ತು ಹೊಸಮನೆಗೆ ಬಂದಾಗ ನಿಜವಾದ ಬಡತನ ಉಂಟಾಯಿತು.ಜೋರಾಗಿ ಸುರಿವ ಮಳೆಗಾಲದಲ್ಲಿ ಮಮೆ ಕಟ್ಟುವಾಗಲೂ ಮುಗ್ದ ಸ್ವಭಾವದ ನನ್ನ ತಂದೆ ಸಾಕಷ್ಟು ಮೋಸ ಹೋಗಿದ್ದರು .ಅಲ್ಲದೆ ಮನೆ ಕಟ್ಟಲು ಮಾಡಿದ ಸಾಲದ ಹೊರೆ ದೊಡ್ಡದಿತ್ತು ಜೊತೆಗೆ ನಾವು ಐದು ಜನ ಮಕ್ಕಳ ವಿದ್ಯಾಭ್ಯಾಸ, ಪಾಲನೆಯ ಖರ್ಚು ಇತ್ತು

ಈ ಮನೆಯ ಹಿಂಭಾಗದಲ್ಲಿ ದೊಡ್ಡ ಬರೆ/ ಗುಡ್ಡ ಇತ್ತು ಇದು ಜರಿದು ಬಿದ್ದು ಇವರಾರು ಉಳಿಯಲಾರೆಂದು ಹೆಚ್ಚಿನ ವರು ಭಾವಿಸಿದ್ದರು .ಜೊತೆಗೆ ಅಪ್ಪನ ಮುಗ್ಧ ಸಾಧು ಗುಣದಿಂದಾಗಿ ಇವರು ಎಲ್ಲವನ್ನೂ ಕಳೆದು ಕೊಂಡ ದೇಶಾಂತರ ಹೋಗಬಹುದು ಎಂದು ಜನರು ಭಾವಿಸಿದ್ದರು

ಆದರೆ ಹಾಗಾಗಲಿಲ್ಲ. ಅನೇಕ ಸಮಸ್ಯೆ ಗಳ ಹಾಗೂ

ಬಡತನದ ನಡುವೆಯೂ ತಲೆಯೆತ್ತಿ ನಿಲ್ಲುವ ಕೆಚ್ಚು ನನ್ನ ಅಮ್ಮನಿಗಿತ್ತು .
ನನ್ನ ಅಮ್ಮ ತುಂಬಾ ಸುಂದರಿಯಾಗಿದ್ದರು .ನಾವು ಹಿರಿ ಮನೆಯಿಂದ ಪಾಲಾಗಿ ಬಂದು ಕಟ್ಟಿ ದ ಮನೆಗೆ ಬಾಗಿಲು ಇರಲಿಲ್ಲ ಬಾಗಿಲು ಮಾಡಿಸಲು ದುಡ್ಡು ಕೊರತೆ ಯಾಗಿತ್ತು.
ನಾನು ಆಗ ಅಜ್ಜನ ಮನೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದೆ .ಅಕ್ಕ ಆರನೇ ಅಥವಾ ಏಳನೆಯ ತರಗತಿಯಲ್ಲಿ ಓದುತ್ತಿದ್ದಿರಬೇಕು.ಅಕ್ಕ ಕೂಡ ತುಂಬಾ ಚೆನ್ನಾಗಿ ಇದ್ದಳು ಜೊತೆಗೆ  ವಯಸ್ಸಿಗೆ ಮೀರಿದ ಬೆಳವಣಿಗೆ ಇದ್ದು ಅವಳು ದೊಡ್ಡವಳಂತೆ ಕಾಣಿಸುತ್ತಾ ಇದ್ದಳು.
ತಂದೆ ಪುರೋಹಿತ ರಾಗಿದ್ದು ಒಂದು ಮನೆಯಲ್ಲಿ ಪೂಜೆ ಪುರಸ್ಕಾರ ಮುಗಿಸಿ ಅಲ್ಲಿಂದಲೇ ಇನ್ನೊಂದು ಕಡೆ ಹೋಗುತ್ತಾ ಇದ್ದರು .ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ಮನೆಗೆ ಬರುತ್ತಾ ಇದ್ದರು ಆಗ ಈಗಿನಂತೆ ಬಸ್ ಸಂಚಾರ ಎಲ್ಲೆಡೆಗೆ ಇರಲಿಲ್ಲ ಹಾಗಾಗಿಯೇ ಎಲ್ಲೆಡೆಗೆ ಕಾಲ್ನಡಿಗೆಯಿಂದಲೇ ಹೋಗಬೇಕಾಗಿತ್ತು ಅಲ್ಲದೆ ದುರ್ಗಾ ಪೂಜೆ ತ್ರಿಕಾಲ ಪೂಜೆ ಆಶ್ಲೇಷಾ ಬಲಿ   ಮೊದಲಾದವು ರಾತ್ರಿಯೇ ಆಗುವ ಪೂಜೆಗಳು
ಇಂತಹ ಸಂದರ್ಭದಲ್ಲಿ ತನ್ನ ಐದು ಜನ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಯೂ ಅಮ್ಮನಿಗೇ ಇತ್ತು ಜೊತೆಗೆ ಅಪ್ರತಿಮ ಸುಂದರಿಯಾದ ಅಮ್ಮನಿಗೆ ಕಾಮುಕರ ಕಾಟವೂ ಅಷ್ಟೇ ಇತ್ತು.ಮಣ್ಣಿನ ನೀರೊಸರುವ ಬಾಗಿಲಿಲ್ಲದ ಮನೆಯಲ್ಲಿ ಎದೆಯೆತ್ತರಕ್ಕೆ ಬೆಳೆದು ನಿಂತ ಅಕ್ಕ ಚಿಕ್ಕವರಾದ ನಾನು‌ಮತ್ತು ತಮ್ಮಂದಿರ ಜೊತೆ ಚಾಪೆ ಹಾಸಿ ಹಳೆಯ ಹರಿದ ಸೀರೆಯನ್ನು ಹಾಸಿ ಹೊದ್ದು ಮಲಗುವ ಪರಿಸ್ಥಿತಿ. ಬಾಗಿಲಿಲ್ಲದ ಮನೆಯಲ್ಲಿ ಭದ್ರತೆಯೇ ಒಂದು ಪ್ರಮುಖ ಸಮಸ್ಯೆ ಆದರೆ ನನ್ನಮ್ಮ ಇದಕೆಲ್ಲ ಎದೆಗುಂದಲಿಲ್ಲ ಸದಾ ದೊಡ್ಡ ಕತ್ತಿಯೊಂದನ್ನು ತಲೆ ಅಡಿಯಲ್ಲಿ ಇಟ್ಟುಕೊಂಡು ಅಕ್ಕನನ್ನು ನಮ್ಮನ್ನು ಬಗ್ಗಲಿನಲ್ಲಿ ಮಲಗಿಸಿ ಕೊಂಡ ರಕ್ಷಣೆ ನೀಡಿದ್ದಳು .ನಮಗೆ ಆಸ್ತಿ ಪಾಲಾದಾಗ ಸ್ವಲ್ಪ ಗದ್ದೆ ತೋಟ ನಮ್ಮ ಪಾಲಿಗೆ ಬಂದಿತ್ತು.ಈ ಗದ್ದೆ ತೋಟಕ್ಕೆ ಸಮೀಪದಲ್ಲಿ ಹರಿಯುವ ತೊರೆಯಿಂದ ಪಾಲಿನ ನೀರಿನ ವ್ಯವಸ್ಥೆ ಇತ್ತು ಇಲ್ಲೂ ಜನರು ನಮ್ಮ ತಂದೆಯ ಸಾಧು ಗುಣವನ್ನು ದುರುಪಯೋಗ ಮಾಡಿಕೊಂಡು ಸರಿಯಾಗಿ ನೀರು ಬಿಡುತ್ತಿರಲಿಲ್ಲ
ಇಂತಹ ಸಂದರ್ಭದಲ್ಲಿ ಅಮ್ಮನಿಗೆ ಬೇರೆಯವರೊಂದಿಗೆ ಜಗಳಾಡುವುದು ಜಗಳಾಡಿ ನೀರು ಬಿಡಿಸಿಕೊಂಡು ಬರುವುದು ಅನಿವಾರ್ಯ ಆಗಿತ್ತು .ಗದ್ದೆಗೆ ನೀರು ಒಡ್ಡಿಸಿ ಬಂದರೆ ರಾತ್ರಿ ಹೊತ್ತಿನಲ್ಲಿ ಯಾರೋ ಹೋಗಿ ಅದನ್ನು ಕಟ್ಟಿ ಗದ್ದೆಗೆ ಬಾರದಂತೆ ಮಾಡುತ್ತಿದ್ದರು
ಹಾಗಾಗಿ ನಡು ರಾತ್ರಿ ಎದ್ದು ಟಾರ್ಚ್ ಹಿಡಿದುಕೊಂಡು ಹೋಗಿ ನೀರು ಗದ್ದೆಗೆ ಬರುತ್ತಿದೆಯಾ ಎಂದು ನೋಡಿ ಬರುತ್ತಿದ್ದರು ನನ್ನ ಅಮ್ಮ ಇಲ್ಲವಾದರೆ ನೀರಿಲ್ಲದೆ ಬೆಳೆ ಕರಡಿ ಹೋಗುತ್ತಾ ಇತ್ತು ಮೋಸ ವಂಚನೆ ಮಾಡ ಹೊರಟ ಅನೇಕ ರಲ್ಲಿ ಜಗಳಾಡಿ ನಮ್ಮನ್ನು ಪಾರು ಮಾಡುವ ಅನಿವಾರ್ಯ ಆಗಿತ್ತು.ಅಮ್ಮನ ಬದುಕಿಗಾಗಿ ಮಕ್ಕಳ ಭವಿಷ್ಯಕ್ಕಾಗಿ ಹೋರಾಡಿದ ಕಥೆ ಬರೆಯ ಹೊರಟರೆ ದೊಡ್ಡ ಕಾದಂಬರಿ ಆಗಿ ಬಿಡಬಹುದು
ಇದರಲ್ಲಿ ಒಂದು ಮುಖ್ಯ ವಾದ್ದು ಅಮ್ಮ ತನ್ನ ತಂದೆಯವರ ಎಂದರೆ ನನ್ನ ಅಜ್ಜನ  ಆಸ್ತಿ ಪಾಲಿಗಾಗಿ ಕೋರ್ಟ್ ಗೆ ಹೋಗಬೇಕಾಯಿತು .ನಾನು ಮೊದಲೇ ಹೇಳಿದಂತೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ .ಅಜ್ಜನ ಜೊತೆಯಲ್ಲಿ ದೊಡ್ಡಮ್ಮ ನ ಕುಟುಂಬ ಇತ್ತು ,ದೊಡ್ಡಮ್ಮನ ಮನೆ ಆಸ್ತಿ ಮಾರಾಟ ಮಾಡಿದಾಗ ಸ್ವಲ್ಪ ದುಡ್ಡು ನನ್ನ ಅಮ್ಮನಿಗೆ ಕೊಟ್ಟಿದ್ದರು ಆದರೆ ಅಜ್ಜನ ಪಾಲು ಪಂಚಾಯತಿ ಪ್ರಕಾರ ಅಮ್ಮನಿಗೆ ಮತ್ತೆ ಯ
 ದುಡ್ಡು ಬರಬೆಕಿತ್ತು .ಅಜ್ಹನ ಮರಣಾನಂತರ ಇದು ವಿವಾದಕ್ಕೆ ಎಡೆಯಾಗಿ ಆಸ್ತಿ ಪಾಲಿಗಾಗಿ ಅಮ್ಮ ಕೋರ್ಟ್ ಗೆ ಹೋದರು ಅಲ್ಲಿ ಗೆದ್ದರೂ ಕೂಡ ಆದರೂ ಕೋರ್ಟ್ ನಲ್ಲಿ ಗೆಲುವು ಬರುವ ಕಾಲಕ್ಕೆ ಅಮ್ಮನಿಗೆ  ನಾವು ಮಕ್ಕಳು ಎಲ್ಲರೂ ಒಂದು ಹಂತಕ್ಕೆ ತಲುಪಿದ್ದೆವು  ಅಣ್ಣ ಮತ್ತು ಒಬ್ಬ ತಮ್ಮ ಅಮೇರಿಕಾದಲ್ಲಿ ಕೆಲಸ ಮಾಡುತ್ತಾ ಇದ್ದರು ಊರಿನಲ್ಲಿ ಬೇರೆ ಆಸ್ತಿ ಖರೀದಿಸಿದ್ದರು ಈಗ ಅಜ್ಜನ ಆಸ್ತಿ ಯ ಅಗತ್ಯ ನಮಗಾರಿಗೂ ಇರಲಿಲ್ಲ ಹಾಗಾಗಿ ಕೋರ್ಟ್ ನಲ್ಲಿ ಗೆದ್ದರೂ ಕೂಡ ನನ್ನ ಅಮ್ಮ ಗೆದ್ದ ಭೂಮಿಯನ್ನು ಪೂರ್ತಿಯಾಗಿ ತನ್ನ ಅಕ್ಕನಿಗೆ ಎಂದರೆ ನನ್ನ ದೊಡ್ಡಮ್ಮನಿಗೆ ಬಿಟ್ಟು ಕೊಟ್ಟು ಉದಾರತೆ ಮೆರೆದರು.ಇಂತಹದ್ದು ಅನೇಕ ಇವೆ. ಅದಿರಲಿ

ಅಮ್ಮ ಗದ್ದೆ ತೋಟಕ್ಕೆ ಹೋಗುವಾಗ ಮಾತ್ರವಲ್ಲ ಮನೆ ಅಂಗಳಕೆ ಇಳಿಯುವಾಗ ಕೂಡ ಕೈಯಲ್ಲಿ ಒಂದು ಕತ್ತಿಯನ್ನು ಹಿಡಿದುಕೊಂಡು ಇರುತ್ತಿದ್ದರು .ನನ್ನ ಅಕ್ಕ ಹಾಗೂ ನನಗೆ  ಗದ್ದೆ ತೋಟಕ್ಕೆ ಹೋಗುವಾಗಲೂ ಒಂದು ಕತ್ತಿ ಹಿಡಿದುಕೊಂಡು ಹೋಗಿ ಎಂದು ಸದಾ ಹೇಳುತ್ತಿದ್ದರು.ಆಗ ಅದು ಯಾಕೆಂದು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಲ್ಲ ಆದರೆ ಈಗ ಅದು ನಮ್ಮ ಭದ್ರತೆ ಗಾಗಿಯೇ ಅಮ್ಮ ಹಾಗೆ ಹೇಳುತ್ತಿದ್ದರು ಎಂದು ಅರ್ಥವಾಗಿದೆ.
ಗದ್ದೆಯಲ್ಲಿ ಭತ್ತ ಬೆಳೆಯುತ್ತಾ ಇದ್ದೆವು ಸಾಧ್ಯವಾದಷ್ಟು ಕೆಲಸವನ್ನು ಅಮ್ಮನೇ ಮಾಡುತ್ತಿದ್ದರು.ಯಾಕೆಂದರೆ ಕೆಲಸದವರಿಗೆ ಕೊಡಲು ದುಡ್ಡಿಲ್ಲ ಜೊತೆಗೆ ಮನೆ ಕಟ್ಟಲು ಮಾಡಿದ ಸಾಲ ಕಟ್ಟಬೇಕಾಗಿತ್ತು.ತಂದೆಯ ಪೌರೋಹಿತ್ಯ ಹಾಗೂ ಗದ್ದೆ ತೋಟದಿಂದ ಸಿಕ್ಕ ತುಸು ಆದಾಯದಲ್ಲಿ ಒಂದೊಂದು ಪೈಸೆಯನ್ನೂ ಜೋಡಿಸಿ ಹೇಗೋ ಮನೆ ಕಟ್ಟಲು ಮಾಡಿದ ಸಾಲವನ್ನು ತೀರಿಸಿ ಬಿಟ್ಟರು.
ಅಷ್ಟರಲ್ಲಿ ಅಕ್ಕ ಬೆಳೆದು ನಿಂತಿದ್ದಳು .ಆಗ ನಮ್ಮಲ್ಲಿ ಇನ್ನೂ ವರದಕ್ಷಿಣೆಯ ಅನಿಷ್ಟ ಪದ್ದತಿ ಇತ್ತು .ಅಕ್ಕ ತುಂಬಾ ಚಂದ ಇದ್ದರೂ ಅವಳ ಮದುವೆ ಬಗ್ಗೆ ಆತಂಕ .ಯಾರ್ಯಾರೋ ಅವಲಕ್ಕಿ ಜಗಿಯಲು ಹಲ್ಲಿಲ್ಲದ ವರನನ್ನು ಕರೆತರುವುದು .ಅಕ್ಕನಿಗೆ ಸೀರೆ ಉಡಿಸಿ ಕ್ಷೀರ ಮಾಡಿ ಬಡಿಸುವುದು ಇದು ಅನೇಕ ಬಾರಿ ನಡೆಯಿತು. ಅಕ್ಕ ಮನೆಕೆಲಸ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ತುಂಬಾ ಜಾಣೆಯಾಗಿದ್ದರೂ ಹೊಟ್ಟೆ ಕಿಚ್ಚಿನ ಕೆಲವರು ಅವಳಿಗೆ ಯಾವ ಕೆಲಸವೂ ತಿಳಿದಿಲ್ಲ ಎಂದು ಅಪಪ್ರಚಾರ ಬೇರೆ ಮಾಡಿದ್ದರು.ಕೊನೆಗೂ ಒಳ್ಳೆಯ ಹುಡುಗ ಸಿಕ್ಕಿ ಅಕ್ಕನ ಮದುವೆಯಾಯಿತು. ತನಗೆ ತನ್ನ ತಂದೆ ಎಂದರೆ ಅಜ್ಜ ಕೊಟ್ಟ ಚಿನ್ನದ ಆಭರಣಗಳನ್ನು ಅಮ್ಮ ಅಕ್ಕನಿಗೆ ಕೊಟ್ಟು ಯಾವುದೇ ಕೊರತೆಯಾಗದಂತೆ ನೋಡಿಕೊಂಡರು.
ಮುಂದೆ ನಮ್ಮೆಲ್ಲರ ವಿದ್ಯಾಭ್ಯಾಸ ದ ಖರ್ಚು ನನ್ನ ಮದುವೆ ಖರ್ಚು ಎಲ್ಲವನ್ನೂ ಹೇಗೋ ಚಾಣಾಕ್ಷತನದಿಂದ ನಿಭಾಯಿಸಿದರು.ನನ್ನ ಮದುವೆ ಕಾಲಕ್ಕಾಗುವಾಗ ನಮ್ಮ ಹವ್ಯಕರಲ್ಲಿ ವರ ದಕ್ಷಿಣೆ ಪದ್ದತಿ ಹೆಚ್ಚು
ಕಡಿಮೆ ಇಲ್ಲವಾಗಿತ್ತು ಈಗ ಅಮ್ಮನ ಮಕ್ಕಳು ನಾವೆಲ್ಲರೂ ತಲೆಯೆತ್ತಿ  ಸ್ವಾಭಿಮಾನ ದಿಂದ ನಡೆಯುವಂತೆ ಮಾಡಿದವರು ನನ್ನಮ್ಮ .ಈಗ ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿ  ಮತ್ತು ಒಬ್ಬ ತಮ್ಮ ಈಶ್ವರ ಭಟ್ ವಾರಣಾಸಿ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಅಮೇರಿಕಾದಲ್ಲಿ ಇದ್ದಾರೆ .ಅಕ್ಕನ ಮಗ ವಿಜ್ಞಾನಿಯಾಗಿ ಹಾರ್ವರ್ಡ್ ಯುನಿವರ್ಸಿಟಿ ಯಲ್ಲಿ ಸಂಶೋಧನೆ ಮಾಡುತ್ತಾ ಇದ್ದಾನೆ . ಅಕ್ಕನ ಸೊಸೆ ವೈದ್ಯೆಯಾಗಿದ್ದು ಅಲ್ಲಿ ಕೆಲಸ ಮಾಡುತ್ತಿದ್ದಾರೆ ಮಗಳು ಅಳಿಯನೂಅಮೇರಿಕಾದಲ್ಲಿ ಇದ್ದಾರೆ
 ನನ್ನ ಅಣ್ಣ ತಮ್ಮಂದಿರು ಅಮ್ಮನಿಗೆ ಬೇಕು ಬೇಕಾದುದನ್ನು ಎಲ್ಲವನ್ನೂ ಮಾಡಿ‌ಕೊಟ್ಟಿದ್ದಾರೆ.ಎಲ್ಲ ಸೌಲಭ್ಯಗಳನ್ನು ಮಾಡಿ ಕೊಟ್ಟಿದ್ದಾರೆ .ಹಿಂದೆ ಅಮ್ಮನನ್ನು ಜೋರು ಎಂದು ದೂಷಿಸಿದವರೇ ಮೆಚ್ಚುಗೆ ಮಾತಾಡುತ್ತಿದ್ದಾರೆ.ಕಾಲೆಳೆದವರ ಅವಮಾನ ಮಾಡಿದವರ ಎದುರು ಇಂದು ಹೆಮ್ಮೆಯಿಂದ ನಾವೆಲ್ಲರೂ   ಎದೆಯುಬ್ಬಿಸಿ ನಡೆತಯುವಂತೆ ಮಾಡಿದ್ದಾರೆ
ನನ್ನ ಅಮ್ಮ .ನನ್ನ ಅಮ್ಮ ಸದಾ ಆಶಾವಾದಿ ಯಾವುದೇ ಸಮಸ್ಯೆ ಬಂದರೂ ಕಂಗಾಲು ಆಗುತ್ತಾ ಇರಲಿಲ್ಲ ಬದಲಿಗೆ ಅದಕ್ಕೆ ಪರಿಹಾರೋಪಾಯಗಳನ್ನು ಕಂಡು ಹಿಡಿಯುತ್ತಾ ಇದ್ದರು
ಈಗ ನಮ್ಮ ತಂದೆಯವರು ತೀರಿ ಹೋಗಿದ್ದಾರೆ ಎಂಬ ನೋವು ಬಿಟ್ಟರೆ ಅಮ್ಮನಿಗೆ ಬೇರೆ ಯಾವುದೇ ರೀತಿಯ ಕೊರಗಿಲ್ಲ .ತಂದೆಯವರು ತೀರಿ ಹೋದ ನೋವಿದ್ದರೂ ಅಮ್ಮ  ಹಣೆಗೆ ಕೆಂಪು ಬೊಟ್ಟು ಇಟ್ಟು, ಮುಡಿಗೆ ಹೂ ಮುಡಿದು ಎಲ್ಲರಂತೆ ಇದ್ದಾರೆ.ಯಾವುದೇ ಗೊಡ್ಡು ಸಂಪ್ರದಾಯ ವನ್ನು ಅನುಸರಿಸದೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ನನ್ನ ಅಮ್ಮ ಉದಾರಿ ಕೂಡ .ಅನೇಕರಿಗೆ ಕಲಿಯಲು, ಚಿಕಿತ್ಸೆ ಗೆ ಸಹಾಯ ಮಾಡಿದ್ದಾರೆ.ಕೇರಳದಲ್ಲಿ ಎಲ್ಲ ಕೃಷಿಕರಿಗೆ ಅರುವತ್ತು ವರ್ಷ ದ ನಂತರ ಪಿಂಚಣಿ ಕೊಡುತ್ತಾರೆ .ಹೀಗೆ ಬಂದ ದುಡ್ಡನ್ನೂ ಅಮ್ಮ ಅಗತ್ಯ ಇರುವವರಿಗೆ ನೀಡಿದ್ದಾರೆ .ಮನೆ ಕೆಲಸಕ್ಕೆ ಬರುವವರಿಗೂ ಅವರ ಮಕ್ಕಳ ಮದುವೆ ,ಮನೆ ಕಟ್ಟುವ ಸಮಯದಲ್ಲಿ, ಅವರ ಮಕ್ಕಳ ವಿದ್ಯಾಭ್ಯಾಸ ಕ್ಕೆ ಹೀಗೆ ನಾನಾ ಸಂದರ್ಭದಲ್ಲಿ ಧನ ಸಹಾಯ ಮಾಡಿದ್ದಾರೆ
ನನ್ನ ಗಿಳಿ ಬಾಗಿಲು ಬ್ಲಾಗ್ ನಲ್ಲಿ ನೀಡಿರುವ ಹವ್ಯಕ ನುಡಿಗಟ್ಟು ಗಳ ಮಾಹಿತಿಯನ್ನು ನನಗೆ ನೀಡಿದವರು ನನ್ನ ಅಮ್ಮ
ಕಳೆದ ಜುಲೈನಲ್ಲಿ ನಾನು ಆತ್ಮ ಹತ್ಯೆಗೆ ಯತ್ನ ಮಾಡಿದ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗಿ ಹೋದಾಗ ಧೈರ್ಯ ತುಂಬಿದವರೂ ನನ್ನ ಅಮ್ಮ ಆ ಸಮಯದಲ್ಲಿ ತುಳು ಸಮ್ಮೇಳನ ಆಯೋಜನೆಯಾಗಿದ್ದು ನನ್ನನ್ನು ಸನ್ಮಾನ ಮಾಡುತ್ತೇವೆ ಬನ್ನಿ ಎಂದು ಕರೆದಿದ್ದರು .ಆದರೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ ನನಗೆ ಅದನ್ನು ಸ್ವೀಕರಿಸುವ ಮನಸ್ಸು ಇರಲಿಲ್ಲ .ಎಲ್ಲಕಿಂತ ಹೆಚ್ಚು ಜನರನ್ನು ಹೇಗೆ ಎದುರಿಸಲಿ ಎಂಬುದೇ ನನ್ನ ಸಮಸ್ಯೆ ಆಗಿತ್ತು. ಭ್ರಷ್ಟಾಚಾರ ,ಕೊಲೆ ಮಾಡಿದವರೇ ತಲೆಯೆತ್ತಿ ಓಡಾಡುತ್ತಾರೆ ಹಾಗಿರುವಗ ನೀನು ಯಾಕೆ ಅಳುಕಬೇಕು ಇಷ್ಟಕ್ಕೂ ನೀನು ನಿನಗೆ ಹಾನಿ ಮಾಡಿಕೊಳ್ಳಲು ಹೊರಟದ್ದೇ  ಹೊರತು ಬೇರೆಯವರನ್ನು ಕೊಲ್ಲಲು ಹೊರಟಿಲ್ಲ .ತುಳು ಸಮ್ಮೇಳನಕ್ಕೆ ಹೋಗಿ ಅಲ್ಲಿ ಅವರಿಂದ ಅಭಿನಂದನೆ ಸ್ವೀಕರಿಸು.ನಾನೂ ಬರುತ್ತೇನೆ ಯಾರು ಏನು ಬೇಕಾದರೂ ಹೇಳಲಿ ತಲೆಕೆಡಿಸಿಕೊಳ್ಳಬೇಡ ಎಂದು ಧೈರ್ಯ ತುಂಬಿ ನನ್ನೊಂದಿಗೆ ಮೂಲ್ಕಿಯಲ್ಲಿ ನಡೆದ ತುಳು ಸಮ್ಮೇಳನ ಕ್ಕೆ ನನ್ನ ಜೊತೆ ಬಂದಿದ್ದಾರೆ
ಎಲ್ಲಾ ಅಮ್ಮಂದಿರೂ ತಮ್ಮ ಮಕ್ಕಳಿಗಾಗಿ ತುಂಬಾ ತ್ಯಾಗ ಮಾಡುತ್ತಾರೆ ನನ್ನ ಅಮ್ಮನೂ ಅದಕೆ ಹೊರತಲ್ಲ ಜೊತೆಗೆ ಸ್ವಾಭಿಮಾನ ದಿಂದ ಬದುಕುವುದನ್ನೂ ಆಶಾವಾದವನ್ನೂ ,ಧನಾತ್ಮಕ ಚಿಂತನೆಗಳನ್ನೂನನ್ನ ಅಮ್ಮ ನಮಗೆ   ಹೇಳಿಕೊಟ್ಟಿದ್ದಾರೆ
ಇನ್ನೂ ಸಾವಿರ ಜನ್ಮ ಇದ್ದರೂ ನಾನು ಈ ಅಮ್ಮನ ಮಗಳಾಗಿಯೇ ಹುಟ್ಟಲು ಬಯಸಿದ್ದೇನೆ
ತಕ್ಕ ಮಟ್ಟಿಗೆ ಆರೋಗ್ಯ ವಾಗಿಯೇ ಇದ್ದ ನನ್ನ ಅಮ್ಮನಿಗೆ
ವಾರದ ಹಿಂದೆ ಎದೆನೋವು ಕಾಣಿಸಿಕೊಂಡಿದ್ದು ಲಘು ಹೃದಯಾಘಾತಕ್ಕೆ ಒಳಗಾಗಿದ್ದು ಆಂಜಿಯೋಪ್ಲ್ಯಾಸ್ಟಿ ಮೂಲಕ ಮೂರು ಬ್ಲಾಕ್ ಗಳನ್ನು ಸರಿ ಪಡಿಸಿ ಮೂರು ಸ್ಟಂಟ್ಗಳನ್ನು ಅಳವಡಿಸಿದ್ದಾರೆ .ಇಲ್ಲೂ ಯಮನನ್ನು ಹಿಮ್ಮೆಟ್ಟಿಸಿ ನಮಗಾಗಿ ಬದುಕಿ ಉಳಿದಿದ್ದಾಳೆ ನನ್ನಮ್ಮ

No comments:

Post a Comment