Wednesday, 24 May 2017

ದೊಡ್ಡವರ ದಾರಿ :ಉದಾರ ಹೃದಯದ ಡಾ ಶಿಕಾರಿಪುರ ಕೃಷ್ಣ ಮೂರ್ತಿ

         

ಕೆಲವರು ತಮ್ಮ ಉದಾರ ನಡೆಯಿಂದಲೇ ದೊಡ್ಡವರಾಗಿ ಬಿಡುತ್ತಾರೆ.ಅಂತಹವರಲ್ಲಿ ನಾನು ಕಂಡ ವಿಶಿಷ್ಠವಾದ ವ್ಯಕ್ತಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ   ಡಾ.ಶಿಕಾರಿಪುರ ಕೃಷ್ಣ ಮೂರ್ತಿ.
ಇವರನ್ನು ಮೊದಲು ಭೇಟಿ ಮಾಡಿದ್ದು ನಾನು ಸಂಸ್ಕೃತ ಎಂಎ ಓದುತ್ತಿರುವಾಗ.ನಮ್ಮ ಕಟೀಲಕಾಲೇಜಿನ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಅತಿಥಿ ಉಪನ್ಯಾಸಕರಾಗಿ ಬಂದಿದ್ದರು ಅವರು. ಆ ದಿನ ಅವರು ಯಾವ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದರೆಂಬುದು ನನಗೆ ಈಗ ಮರೆತುಹೋಗಿದೆ ಆದರೆ ಮಾತಿನ ನಡುವೆ ಅವರು ಕೃಷ್ಣ ನನ್ನು ಮ್ಯಾನುಪುಲೇಟರ್ ಎಂದು ಹೇಳಿದರು .ನಮ್ಮ ಸಂಸ್ಕೃತ ಎಂಎ ತರಗತಿಯಲ್ಲಿ ಇಪ್ಪತ್ತು ಜನ ವಿದ್ಯಾರ್ಥಿ ಗಳು ಓದುತ್ತಾ ಇದ್ದೆವುನಾವು ಬಿಟ್ಟರೆ ಎರಡನೇ ವರ್ಷದಲ್ಲಿ ಓದುತ್ತಾ ಇದ್ದವರು ಕೇವಲ ಐದು ಜನ .ಇವರಲ್ಲಿ ನನ್ನನ್ನು ಹೊರತು ಪಡಿಸಿ ಬೇರೆ ಯಾರೂ ವಿವಾಹಿತರಿರಲಿಲ್ಲ .ನನಗೆ ಎರಡನೇ ವರ್ಷ ಪದವಿ ಓದುತ್ತಿರುವಾಗಲೇ ವಿವಾಹವಾಗಿದ್ದು ಸಂಸ್ಕೃತ ಎಂಎ ಗೆ ಸೇರುವಾಗಲೇ ನಾನು ವಿವಾಹಿತಳು.ವಯಸ್ಸು ಅಲ್ಲಿ ಓದುವ ವಿದ್ಯಾರ್ಥಿ ಗಳಷ್ಟೇ ಆಗಿದ್ದರೂ ನನಗೆ ನಾನು ಉಳಿದವರಿಗಿಂತ ಪ್ರೌಢಳು ಎಂಬ ಭಾವ ಇತ್ತು ಹಾಗಾಗಿ ಸ್ವಲ್ಪ ಪ್ರೌಢಳಂತೆ ತೋರಿಸಿ ಇತರರಿಗಿಂತ ಭಿನ್ನವಾಗಿ ಕಾಣಿಸುವ ಸಲುವಾಗಿ ನಾನು ಅದೇಗೆ ಕೃಷ್ಣ ಮ್ಯಾನುಪುಲೇಟರ್ ಆಗುತ್ತಾನೆ ಎಂದು ಚರ್ಚೆಗೆ ನಿಂತೆ ಅದಕ್ಕೆ ಅವರೂ ಏನೇನೋ ಸ್ಪಷ್ಟೀಕರಣ ನೀಡಲು ಯತ್ನ ಮಾಡಿದರೂ ಅದು ಎಲ್ಲರಿಗೂ ಒಪ್ಪಿಗೆಯಾಗಲಿಲ್ಲ
ಆ ಸಮಯದಲ್ಲಿ ನನ್ನ ತಮ್ಮ ಈಶ್ವರ ಭಟ್ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ವಿಜ್ಞಾನ ಪದವಿ ಓದುತ್ತಿದ್ದು ಅವನಿಗೆ ಶಿಕಾರಿಪುರ ಅವರು ಸಂಸ್ಕೃತ ಮೇಷ್ಟ್ರು ಆಗಿದ್ದರು.
ಕಟೀಲಿನಲ್ಲಿ ನಡೆದ ಚರ್ಚೆ ಬಗ್ಗೆ ತರಗತಿಯಲ್ಲಿ ಅವರು ಹೇಳಿ " ಏನೋ ಎಂಎ ಸ್ಟೂಡೆಂಟ್ಸ್ ಇಂಟರ್ನಲ್  ಅಸೆಸ್ಮೆಂಟ್ ಮಾರ್ಕ್ಸ್ ಎಲ್ಲಾ ಉಪನ್ಯಾಸಕರ ಹಿಡಿತದಲ್ಲಿ ಇರೋದ್ರಿಂದ ಏನು ಹೇಳಿದರೂ ಕೇಳಿಸ್ಕೋತಾರೆ ಅಂತ ಅಂದುಕೊಂಡು ಸಾಕಷ್ಟು ತಯಾರಿ ಇಲ್ಲದೆ ಉಪನ್ಯಾಸ ಕೊಡಲು ಹೋಗಿ ಸಿಕ್ಕಿ ಹಾಕಿಕೊಂಡೆ .ಅಲ್ಲಿ ಒಬ್ಬಾಕೆ ವಿವಾಹಿತ ವಿದ್ಯಾರ್ಥಿನಿ  ಇದ್ದರು ನನ್ನ ಲ್ಲಿ ಸಾಕಷ್ಟು ಚರ್ಚೆಮಾಡಿ ನನ್ನ ಕಂಗಾಲು ಮಾಡಿದರು ಅಂತೂ ಹೇಗೋ ಒಂದು ಸಮಜಾಯಿಸಿ ಕೊಟ್ಟು ಬಂದೆ "ಎಂದು ಹೇಳಿದರಂತೆ .ಆಗ ಆ ವಿವಾಹಿತ ವಿದ್ಯಾರ್ಥಿನಿ ನನ್ನ ಅಕ್ಕ ಎಂದು ಈಶ್ವರ ಭಟ್ ತಿಳಿಸಿದರಂತೆ
ಮತ್ತೆ ಕೂಡಾ ಅವರು ಅನೇಕ ಉನ್ನತ ಮಟ್ಟದ ಉಪನ್ಯಾಸ ನೀಡಿದ್ದರು ಆಗ ನನಗೆ ಅವರ ಪರಿಚಯವಾಯಿತು .ನಮ್ಮ  ಬಾಡಿಗೆ ಮನೆ ಅವರ ಮನೆಗೆ ಹೋಗುವ ರಸ್ತೆಯಲ್ಲಿ ಇತ್ತು ಒಂದು ದಿನ ನನ್ನ ತಮ್ಮ ಹಾಗೂ ನನ್ನ ಆಹ್ವಾನದ ಮೇರೆಗೆ   ನಮ್ಮ ಮನೆಗೂ ಬಂದಿದ್ದರು .ಅಷ್ಟು ಬಿಟ್ಟರೆ ಬೇರೇನೂ ಪರಿಚಯ ಇರಲಿಲ್ಲ.
ಅದು 1996 ನೇ ಇಸವಿಯ ಆಗಷ್ಟ್ ತಿಂಗಳು ಎರಡನೇ ವಾರ ಇರಬೇಕು.ಆ ದಿನ ಕೈಯಲ್ಲಿ ಸಿಹಿ ತಿಂಡಿ ಹಿಡಿದುಕೊಂಡು ಶಿಕಾರಿಪುರ ಕೃಷ್ಣ ಮೂರ್ತಿ ಮತ್ತು ಅವರ ಮಡದಿ ರತ್ನಕ್ಕ ನಮ್ಮ ಮನೆಗೆ ಬಂದು ಸಿಹಿ ನೀಡಿ "ಒಂದು ಸಂತೋಷ ದ ವಿಚಾರ ನಿಮ್ಮ ಎಂಎ ಫಲಿತಾಂಶ ಬಂದಿದೆ .ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದೀರಿ ಮತ್ತು ನಿಮಗೆ ಒಬ್ಬರಿಗೆ ಮಾತ್  ಡಿಸ್ಟಿಂಕ್ಷನ್ ಬಂದಿದೆ ಹಾಗಾಗಿ ಮೊದಲ ರಾಂಕ್ ಕೂಡ ನಿಮಗೇ ಬಂದಿದೆ" ಎಂದು ತಿಳಿಸಿದರು.ನನಗೆ ಸಂತಸದಲ್ಲಿ ಏನು ಹೇಳಬೇಕೋ ತಿಳಿಯಲಿಲ್ಲ .ಕೊನೆಗೂ ನನ್ನ ತಂದೆಯವರ ಕನಸು ನನಸಾಗಿತ್ತು .ನನ್ನ ತಂದೆಯವರಿಗೆತಮ್ಮ ಮಕ್ಕಳು ರಾಂಕ್ ತೆಗೆಯಬೇಕೆಂಬ ಕನಸಿತ್ತು ಅದು ನನ್ನ ಕನಸು ಕೂಡಾ ಆಗಿತ್ತು ಅಂದು ಅದು ನನಸಾಗಿತ್ತು.ಏನು ಹೇಳಬೇಕೆಂದು ತೋಚದೆ ಅತ್ತು ಬಿಟ್ಟೆ ಆ ದಿನ
ನಂತರ ನಾನು ಸಂತ ಅಲೋಶಿಯಸ್ ಕಾಲೇಜು ನಲ್ಲಿ ಉಪನ್ಯಾಸಕಿ ಯಾಗಿ ಶಿಕಾರಿಪುರ ಕೃಷ್ಣ ಮೂರ್ತಿ ಅವರ ಜೂನಿಯರ್ ಆಗಿ ಕೆಲಸ ಮಾಡಿದೆ .ಬಹು ಪ್ರತಿಷ್ಠಿತ ಕಾಲೇಜು ಸಂತ ಅಲೋಶಿಯಸ್. ಅಲ್ಲಿ ಉಪನ್ಯಾಸಕರಾಗಿ ಆಯ್ಕೆ ಆಗುವುದು ,ಸಮರ್ಪಕವಾಗಿ ಕೆಲಸ ಮಾಡುವುದು  ಸುಲಭ ಮಾತಲ್ಲ.ಮೊದಲ ದಿನವೇ ಒಂದು ಕಿವಿ ಮಾತು ಹೇಳಿದರು " ಈಗ ನಿಮ್ಮ ಮುಂದೆ ಕುಳಿತಿರುವವರು ವಿದ್ಯಾರ್ಥಿ ಗಳು ಆದರೆ ಇವರು ಮುಂದಿನ ದೊಡ್ಡ ದೊಡ್ಡ ಡಾಕ್ಟರ್, ಇಂಜಿನಿಯರ್, ಬ್ಯುಸಿನೆಸ್‌ ಮ್ಯಾನ್ ಗಳು.ಇದನ್ನು ನೀವು ಅರ್ಥ ಮಾಡಿಕೊಂಡರೆ ಸಾಕು,ಇಲ್ಲಿನ ಮಕ್ಕಳಿಗೆ ಪಾಠವನ್ನು ಮಾಡುವ ಸಾಮರ್ಥ್ಯ ನಿಮಗಿದೆ ಹಾಗಾಗಿ ಆತಂಕ ಬೇಡ "ಎಂದು ಧೈರ್ಯ ತುಂಬಿದ್ದರು.ಅವರ ಜೂನಿಯರ್ ಆಗಿ ನಾನು ತುಂಬಾ ಕಲಿತೆ ಇಂದು ನನಗೆ ಶಿಕ್ಷಕಿಯಾಗಿ ಯಶಸ್ಸು ಪಡೆಯಲು ಅವರ ಮಾರ್ಗ ದರ್ಶನ ಕೂಡ ಒಂದು ಕಾರಣವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ
ನಂತರ ನಾನು ಗರ್ಭಿಣಿ ಯಾದಾಗ   ಪ್ರಿನ್ಸಿಪಾಲ್ ಹತ್ತಿರ ಮಾತಾಡಿ  ಸುಪರ್ವಿಶನ್,ಮೌಲ್ಯಮಾಪನ ಮೊದಲಾದ ಕಾರ್ಯಗಳಿಂದ ನನಗೆ ವಿನಾಯಿತಿ ಕೊಡಿಸಿದ್ದರು.ಅವರು ಒಂದು ದಿನ ಕೂಡಾವಿಭಾಗದ ಮುಖ್ಯಸ್ಥರಾಗಿ    ಒಂದು ದಿನ ಕೂಡಾ ನನ್ನ ಮೇಲೆ ದಬ್ಬಾಳಿಕೆ ಮಾಡಿಲ್ಲ ಬದಲಿಗೆ ಅವರಿಗೆ ಸಮಾನರಾಗಿ ಕಂಡು ಗೌರವ ನೀಡಿದ್ದರು ಇಂತಹ ಹವರನ್ನು ನಾನು ಹೇಗೆ ತಾನೆ ಮರೆಯಲು ಸಾಧ್ಯ? ಸಾಮಾನ್ಯವಾಗಿ ವಿದ್ಯಾರ್ಥಿ ಗಳು ಸಿಹಿ ತಿಂಡಿಯನ್ನು ತಮ್ಮ ಗುರುಗಳಿಗೆ ಕೊಡುವ ಕ್ರಮ ಇದೆ ಆದರೆ ಇಲ್ಲಿ ಶಿಕಾರಿಪುರ ಅವರು ತಮ್ಮ ವಿದ್ಯಾರ್ಥಿನಿಗೆ ಸ್ವೀಟ್   ನೀಡಿ ಫಲಿತಾಂಶ ವನ್ನು ತಿಳಿಸಿ ತಮ್ಮ ಉದಾರತೆ ಮೆರೆದಿದ್ದರು.ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸರ್
ಇವರು 2011 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕೂರ್ಮಾವತಾರ ಚಲನಚಿತ್ರದ ಒಂದು ಮುಖ್ಯ ಪಾತ್ರವಾದ ಗಾಂಧೀಜಿಯವರ ಪಾತ್ರವನ್ನು ಮಾಡಿದ್ದು ಇವರ ಅಭಿನಯ ಎಲ್ಲರ ಪ್ರಶಂಶೆಗೆ ಪಾತ್ರವಾಗಿದೆ ಈ ಚಲನ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಬಂದಿದೆ ಇದು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ
  © ಡಾ ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ  

No comments:

Post a Comment