Sunday 3 June 2018

ಬದುಕ ಬಂಡಿಯಲಿ 14 ಇವೆಲ್ಲವೂ ನನ್ನ ಸ್ವಂತದ್ದು !© ಡಾ.ಲಕ್ಷ್ಮೀ ಜಿ ಪ್ರಸಾದ

ಬದುಕ ಬಂಡಿಯಲಿ 14 ಇವೆಲ್ಲವೂ ನನ್ನ ಸ್ವಂತದ್ದು !© ಡಾ.ಲಕ್ಷ್ಮೀ ಜಿ ಪ್ರಸಾದ

ತುಳು ಸಂಸ್ಕೃತಿ ಭೂತಾರಾಧನೆ ಕುರಿತು ಅಧ್ಯಯನ ಮಾಡುವಾಗ ಇಂತಹದೊಂದು ಪ್ರಶ್ನೆ ನನಗೆ ಎದುರಾಗಬಹುದು ಎಂದು ನಾನು ಊಹೆ ಕೂಡ ಮಾಡಿರಲಿಲ್ಲ.
ಅನೇಕರು ನನ್ನಲ್ಲಿ ಕೇಳುವ ಪ್ರಶ್ನೆಗಳು ಇವು
 ,ಈ ಭೂತಗಳ ಫೋಟೋಗಳು ನಿಮಗೆ ಎಲ್ಲಿಂದ ಸಿಕ್ಕುತ್ತವೆ ? ಸಾವಿರದ ಐನೂರು ಹೆಸರುಗಳನ್ನು ಸಂಗ್ರಹಿಸಿ ಕೊಟ್ಟವರಾರು ? ಈ ಮಾಹಿತಿಗಳು ಎಲ್ಲಿಂದ ಸಿಕ್ಕಿತ್ತು ? ವಿಕಿಪೀಡಿಯದಿಂದ ಪಡೆದಿರಾ ?
ಹೌದು !ಭೂತಗಳ ಫೋಟೋಗಳ ಮೇಲೆ ಹೆಸರು ಇವೆಯಲ್ಲ ?ಯಾರದೆಂದು ಕೂಡ ಹಾಕುತ್ತೆನಲ್ಲ ಎಂದು ಉತ್ತರಿಸಿದರೆ ಅದಲ್ಲ .ಡಾ.ಲಕ್ಷ್ಮೀ ಜಿ ಪ್ರಸಾದ ಎಂದು ನೀವು ಹಾಕುತ್ತೀರಲ್ಲ ಆ ಫೋಟೋಗಳು ನಿಮಗೆ ಎಲ್ಲಿಂದ ಸಿಕ್ತು ?ಯಾರು ಕೊಟ್ಟದ್ದು?ಎಂಬ ಮರು ಪ್ರಶ್ನೆ ಎದುರಾಗುತ್ತದೆ.

ಬೇರೆಯವರು ತೆಗೆದ ಫೋಟೋ ನಮ್ಮ ಹೆಸರನ್ನು ಹಾಕಿಕೊಳ್ಳಲು ಸಾಧ್ಯವೇ ?!ನಾನು ಸ್ವತಹ ಸೆರೆ ಹಿಡಿದ ಚಿತ್ರಗಳು ಎಂದರೆ ಅನೇಕರಿಗೆ ನಂಬಿಕೆ ಇಲ್ಲ !
ಸಾಮಾನ್ಯವಾಗಿ ಭೂತಾರಾಧನೆ ನಡು ರಾತ್ರಿ ನಡೆಯುತ್ತದೆ ,
ಏಕಾಂಗಿಯಾಗಿ ಯಾರ ಸಹಾಯವಿಲ್ಲದೆ ಭೂತಗಳ ಕುರಿತು ರೆಕಾರ್ಡ್ ಮಾಡಿ ಸಮೀಪದಿಂದ ಮಾಹಿತಿ ಕಲೆ ಹಾಕುವುದು ತುಸು ಕಷ್ಟದ ವಿಚಾರ ,ಹಾಗಾಗಿಯೇ ಹೆಚ್ಚಿನವರು ಈಗಾಗಲೇ ಸಂಗ್ರಹವಾಗಿರುವ ಮಾಹಿತಿಯ ವಿಶ್ಲೇಷಣೆಯನ್ನು ಆಧರಿಸಿ ಸಂಶೋಧನೆಗೆ ಮುಂದಾಗುವುದು ಕಾಣಿಸುತ್ತಿದೆ.ಸ್ತ್ರೀಯರಂತು ಈ ವಿಭಾಗದ ಅಧ್ಯಯನಕ್ಕೆ ಕೈ ಹಾಕುವ ಸಾಹಸಕ್ಕೆ ಹೋಗುವುದಿಲ್ಲ ಎನ್ನುವುದೂ ಸತ್ಯವೇ .
ಹಾಗಾಗಿ ಈ ಬಗ್ಗೆ ಅಧ್ಯಯನ ಮಾಡಿರುವ ಸ್ತ್ರೀಯರ ಸಂಖ್ಯೆ ಬೆರಳೆಣಿಕೆಯಷ್ಟು ಕೂಡ ಇಲ್ಲ ಎನ್ನುವುದು ವಾಸ್ತವ .ಹಾಗೆಂದು ಸ್ತ್ರೀಯರು ಈ ಬಗ್ಗೆ ಅಧ್ಯಯನ ಮಾಡಿಯೇ ಇಲ್ಲ ಎಂದು ಹೇಳುವಂತಿಲ್ಲ .ಮಾರ್ಥಾ ಆಸ್ಟನ್ ಒಂದಿಗೆ ಅಧ್ಯಯನನ್ಕ್ಕಾಗಿ ಸುತ್ತಿದ ಡಾ.ಲೀಲಾ ಕೆ ,ತುಳುನಾಡ ಆಲಡೆಗಳ ಬಗ್ಗೆ ಅಧ್ಯಯನ ಮಾಡಿರುವ ಡಾ.ಇಂದಿರಾ ಹೆಗಡೆಯವರೂ ಆನುಷನ್ಗಿಕವಾಗಿ ಭೂತಾರಾಧನೆಯ ಕುರಿತೂ ಅಧ್ಯಯನ ಮಾಡಿದ್ದಾರೆ.ಇನ್ನು ಒಬ್ಬಿಬ್ಬರು ಇರಬಹುದು.
ಇದು ಸ್ತ್ರೀಯರಿಗೆ ಅಸಾಧ್ಯ ಖಂಡಿತಾ ಅಲ್ಲ ,ಸ್ವಲ್ಪ ಜಾಗರೂಕತೆ ,ಮುನ್ನೆಚ್ಚರಿಕೆ ,ಒಳ್ಳೆಯ ಸಂವಹನ ಕಲೆ ,ಎಲ್ಲಕ್ಕಿಂತ ಹೆಚ್ಚಾಗಿ ತುಳು ಸಂಸ್ಕೃತಿ ಹಾಗೂ ಭೂತಾರಾಧನೆ ಕುರಿತಂತೆ ತೀವ್ರ ಸೆಳೆತ ಇದ್ದರೆ ಯಾರೂ ಕೂಡ ಈ ಕ್ಷೇತ್ರದಲ್ಲಿ ಸಂಶೋಧನೆ ಮಾಡಬಹುದು.
ಹಾಗಾಗಿಯೇ ನನಗೆ ಈ ಕ್ಷೇತ್ರದಲ್ಲಿ ಅಧ್ಯಯನ ಮಾಡಲು ಸಾಧ್ಯವಾಯಿತು .ನಾನೇ ಸ್ವತಹ ಮಾಡಿದ್ದರೂ ಅನೇಕರಿಗೆ ನಂಬಿಕೆ ಇಲ್ಲದಾದಾಗ ಮಾತ್ರ ತುಸು ಖೇದವಾಗುತ್ತದೆ. ಮಿಲಿಟರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡಿರುವ ಸ್ತ್ರೀಯರಿಗೆ ಭೂತಾರಾಧನೆಯ ಕ್ಷೇತ್ರದ ಅಧ್ಯಯನ ಅಸಾಧ್ಯವೇ ?ಹೆಂಗಸರ ಸಾಮರ್ಥ್ಯದ ಬಗ್ಗೆ ಅಥವಾ ನನ್ನ ಬಗ್ಗೆ ಇಷ್ಟು ಅಪನಂಬಿಕೆಯೇಕೆ ಜನರಿಗೆ ಎಂದು ನನಗೆ ಅರ್ಥವಾಗುತ್ತಿಲ್ಲ !ಆದ್ದರಿಂದಲೇ ನಾನು ಪ್ಲೀಸ್ ನಂಬಿ ..ಇವೆಲ್ಲವೂ ನನ್ನ ಸ್ವಂತದ್ದು ! ಎಂದು ಹೇಳಬೇಕಾಯಿತು .
ಇನ್ನೂ ಕೆಲವರದ್ದು ನಮಗೆ ಗೊತ್ತಿಲ್ಲದೆ ಇರುವ ಮಾಹಿತಿ ಇವರಿಗೇಗೆ ಸಿಗಲು ಸಾಧ್ಯ ? ನಮಗೆ ತಿಳಿಯದ ಭೂತಗಳ ಹೆಸರು ಇರಲು ಹೇಗೆ ಸಾಧ್ಯ ? ಎಂಬ ವಿತ್ತಂಡ ವಾದವೂ ಇದೆ.ಅಧ್ಯಯನ ಮಾಡಿದ ಎಲ್ಲರಿಗೂ ಇಂತಹ ಅಪರೂಪದ ಮಾಹಿತಿಗಳು ದೊರೆತಸವು.ಆದರೆ ಛಲ ಬಿಡದೆ ನಿರಂತರ ಯತ್ನ ಮಾಡುತ್ತಾ ಇರಬೇಕು ಅಷ್ಟೇ
ಇನ್ನೂ ಕೆಲವರದು ಇದಕ್ಕೆ ರೆಫರೆನ್ಸ್ ಇಲ ಎಂಬ ಆರೋಪ ! ಹೌದು ,ಅಪರೂಪದ ಕನ್ನಡ ಬೀರ,ಅಚ್ಚು ಬಂಗೇತಿ,ಅಕ್ಕಚ್ಚು,ಅಜ್ಜಿ ಭೂತ,ಕುಕ್ಕೆತ್ತಿ ಬಳ್ಳು,ನೆಲ್ಲೂರಾಯ,ಬಾಣಿಯೆತ್ತಿ,ಪುರುಷ ಭೂತ ಮೊದಲಾದ ಅನೇಕ ದೈವಗಳ ಬಗ್ಗೆ ನಾನೇ ಮೊದಲಿಗೆ ಬರೆದವಳು. ಇಂತಹ ನೂರೈವತ್ತು ಇನ್ನೂರಕಿಂತ  ಹೆಚ್ಚಿನ ದೈವಗಳ ಬಗ್ಗೆ ಬೇರೆ ವಿದ್ವಾಂಸರ ಕೃತಿಗಳಲ್ಲಿ ಒಂದು ಗೆರೆಯ ಮಾಹಿತಿ ಕೂಡ ಇಲ್ಲ,ಈ ಹೆಸರುಗಳು ಕೂಡ ಇಲ್ಲ .ನಾನು ಕ್ಷೇತ್ರ ಕಾರ್ಯದಲ್ಲಿ ಸಿಕ್ಕ ಮಾಹಿತಿಯನ್ನು ಅಧರಿಸಿ ಬರೆದ ಬರಹಗಳು ಇವು.ಹಾಗಾಗಿ ಇವುಗಳಿಗೆ ರೆಫರೆನ್ಸ್ ಇರುವುದಿಲ್ಲ
ಹಾಗೆಂದು ನಾನು ಸಾವಿರದೊಂದು ಗುರಿಯೆಡೆಗೆ ಬಳಸಿದ ಎಲ್ಲ ಫೋಟೋಗಳು ನನ್ನದಲ್ಲ ,ಅನೇಕ ತುಳು ಸಂಸ್ಕೃತಿ ಆಸಕ್ತರು ತೆಗೆದ ಫೋಟೋಗಳನ್ನು ಅವರ ಅನುಮತಿಯೊಂದಿಗೆ ಅವರವರ ಹೆಸರು ಉಲ್ಲೇಖಿಸಿ ಬಳಸಿದ್ದೇನೆ .ಧರ್ಮ ದೈವ .ಜೀವಿತ್ ಶೆಟ್ಟಿ ,ಸಂಕೇತ ಪೂಜಾರಿ ,ಪವನ್ ಕೆ ಎಸ ,ಭರತ್ ಬಿ ಭಂಡಾರಿ ,ರಾಜಗೋಪಾಲ ಹೆಬ್ಬಾರ್ ನೆರಿಯ ,ಯಶ್ವಿನ್ ,ನಮ್ಮ ಮರ್ನೆ ಗರೋಡಿ ಮೊದಲಾದವರ ಅದ್ಭುತ ಫೋಟೋಗಳನ್ನು ಅಗತ್ಯವಿದ್ದಾಗ ಬಳಸಿಕೊಂಡಿದ್ದೇನೆ . ಹಾಗೆ ನೋಡಿದರೆ ಒಳ್ಳೆಯ ಫೋಟೋಗಳುಸಿಕ್ಕಾಗ ನನ್ನ ಬರವಣಿಗೆಯ ವೇಗ ಹೆಚ್ಚಾಗುತ್ತದೆ.ಕೆಲವೊಂದು ಮಾಹಿತಿಯನ್ನು ಕೂಡ ಬೇರೆಯವರು ನೀಡಿದ್ದು ಅಲ್ಲಿ ಕೂಡ ಮಾಹಿತಿ ಕೃಪೆ ಎಂದು ಹಾಕಿ ನೀಡಿದವರ ಹೆಸರನ್ನು ಸ್ಮರಿಸಿ ಅದರ ಕ್ರೆಡಿಟ್ ಅನ್ನು ಅವರಿಗೆ ಸಲ್ಲಿಸಿದ್ದೇನೆ.

ಇರಲಿ ನನ್ನ ಅಧ್ಯಯನದ ಕುರಿತು ನಂಬಿಕೆ ಇರುವ ತುಳು ಸಂಸ್ಕೃತಿ ಬಗ್ಗೆ ಆಸಕ್ತರು/ ಸಹೃದಯಿಗಳು ನನ್ನ ಪೇಜ್ ಮತ್ತು ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಬೇಕಾಗಿ ವಿನಂತಿ.ನನ್ನ ಕೆಲವು ಫೋಟೋಸ್ ಇಲ್ಲಿ ಕೊಟ್ಟಿದ್ದೇನೆ

 ಹಾಸನ ,ಸಕಲೇಶಪುರ,ಕೊಡುಗು ,ಮಡಿಕೇರಿ ,ಶಿವಮೊಗ್ಗ ,ತೀರ್ಥ ಹಳ್ಳಿ ,ಕಳಸ, ಕೊಲ್ಲೂರು ಗಳಲ್ಲಿ ಕೆಲವೆಡೆ ತುಳು ಭೂತ /ದೈವಗಳ ಆರಾಧನೆ ಇದೆ .ಆದರೆ ಅದು ಇಲ್ಲಿಂದ ಹೋಗಿ ಅಲ್ಲಿ ನೆಲೆಯಾದವರು ನಡೆಸಿಕೊಂಡು ಬರುತ್ತಾ ಇರುವುದು ಆಗಿರಬೇಕು ,ಭೂತಗಳ ಬಗ್ಗೆ ಭಯ ಬೇಡ ,ತುಳು ಭೂತ ಪದಕ್ಕೆ ಕನ್ನಡ/ಸಂಸ್ಕೃತದ ದ ಭೂತ ಪದದ ಅರ್ಥವಿಲ್ಲ ,ಇಲ್ಲಿ ಭೂತ ದೈವ ಮತ್ತು ದೇವರು ಸಮಾನಾರ್ಥಕ ಪದಗಳು ,ತಮ್ಮನ್ನು ಮಣ್ಣಿನ ಸತ್ಯಗಳು ಎಂದು ಕರೆದುಕೊಂಡಿರುವ ದೈವಗಳು ಶಿಷ್ಟ ರಕ್ಷಕ ,ದುಷ್ಟ ಶಿಕ್ಷಕ ಶಕ್ತಿಗಳು ,ತುಳು ಸಂಶೋಧನೆಯ ಆರಂಭ ಕ್ರಿಶ್ಚಿಯನ್ ಮೆಶಿನರಿಗಳಿಂದ ಆಗಿದ್ದು ,ಆಗ ಆ ಕಾಲಕ್ಕೆ ಅವರಿಗೆ ಮಾಹಿತಿ ಕೊಟ್ಟವರು ಆಗ ತುಳು ಬೂತೋ ಪದವನ್ನು ಕನ್ನಡ/ಸಂಸ್ಕೃತದ ಭೂತ ಪದವೆಂದು ಭಾವಿಸಿ ಭೂತ ಪ್ರೇತ ಪಿಶಾಚಿ ಎಂಬ ಅರ್ಥವನ್ನು ನೀಡಿದ್ದಾರೆ ,ಆದ್ದರಿಂದ ತುಳುವರ ಭೂತಾರಾಧನೆಯನ್ನು ಹೊರ ಜಗತ್ತು ಭಯಾನಕ ,devil worship ಎಂದು ಭಾವಿಸುವಂತೆ ಆಯಿತು ,ಆದರೆ ವಾಸ್ತವದಲ್ಲಿ ಭೂತ ಕೋಲವೊಂದು ಧಾರ್ಮಿಕ ಆರಾಧನಾ ರಂಗ ಭೂಮಿಯಾಗಿದ್ದು ನೊಂದವರಿಗೆ ಸಾಂತ್ವನ ಹೇಳುವ ,ಮೂರು ಕಾಲಕ್ಕೆ ಸತ್ವನ್ನು ಗೆಲ್ಲಿಸಿಕೊಡುತ್ತೇನೆ ಎಂದು ನುಡಿಯುವ ದೈವ ಮಾತನಾಡದೆ ಇರುವ ದೇವರಿಗಿಂತ ಆಪ್ತವಾಗುತ್ತದೆ ಎಂಬುದು ನನ್ನ ಕ್ಷೇತ್ರ ಕಾರ್ಯದ ಅನುಭವ ,ದೈವ್ದದಲ್ಲಿ ತಮ್ಮ ಕಷ್ಟವನ್ನು ,ತಮಗಾದ ಅನ್ಯಾಯವನ್ನು ,ಜಗಳವನ್ನು ನಿವೇದಿಸುವ ತುಳುವರು ದೈವದ ನುಡಿಯನ್ನು ನಂಬಿ ನೆಮ್ಮದಿಯನ್ನು ಕಾಣುತ್ತಾರೆ .ಅನೇಕ ಜನರ ಜಗಳವನ್ನು ವಿವಾದಗಳನ್ನು ದೈವ ಗಳು ಪರಿಹರಿಸಿಕೊಟ್ಟಿವೆ ,ಅಲೌಕಿಕ ನೆಲೆಯನ್ನು ಬಿಟ್ಟು ಲೌಕಿಕ ನೆಲೆಯಲ್ಲಿ ನೋಡುವಾಗಲೂ ದೈವಗಳ ಅಭಿವ್ಯಕ್ತಿ ಬಹಳ ಸುಂದರ ಮತ್ತು ಮನೋಜ್ಞವಾದುದು ,ಜೀವಮಾನದಲ್ಲಿ ಒಮ್ಮೆಯಾದರೂ ಭೂತ ಕೋಲ ನೋಡದಿದ್ದರೆ ನಾವು ಏನೋ ಕಳಕೊಂಡಂತೆ !ಒಮ್ಮೆ ನಮ್ಮ ತುಳುನಾಡಿಗೆ  ಬನ್ನಿ
http://laxmipras.blogspot.com/2014/10/blog-post_23.html?m=1
http://laxmipras.blogspot.com

No comments:

Post a Comment