Monday 25 January 2016

ನೀರಕ್ಕನ ಮನೆ ಕಣಿವೆ (ನಾಟಕ ) :ರಚನೆ (c) ಡಾ.ಲಕ್ಷ್ಮಿ ಜಿ ಪ್ರಸಾದ



        



            
1  ನೀರಕ್ಕನ  ಮನೆ ಕಣಿವೆ
ರಚನೆ :ಡಾ.ಲಕ್ಷ್ಮಿ ಜಿ ಪ್ರಸಾದ ,
ಕಾಲ : 2002
ಮೊದಲ ರಂಗ ಪ್ರಯೋಗ : ಮಂಗಳೂರಿನ ಚಿನ್ಮಯ ವಿದ್ಯಾ ಸಂಸ್ಥೆ ವಾರ್ಷಿಕೋತ್ಸವ ,2003 (11-೦1 -2003)
ಸಾರಾಂಶ :ಮದಲಿಂಗನ ಕಣಿವೆ ಎಂಬುದು ತುಮಕೂರು ಬಳಿಯ ಚಿಕ್ಕನಾಯಕನ ಹಳ್ಳಿಗೆ ಹೋಗುವ ದಾರಿಯಲ್ಲಿ ಸಿಗುವ ಒಂದು ಕಣಿವೆ .ಇಲ್ಲಿನ ಐತಿಹ್ಯವನ್ನು ಆಧರಿಸಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಮದಲಿಂಗನ ಕಣಿವೆ ಎಂಬ ಕಥನ ಕಾವ್ಯವನ್ನು ರಚಿಸಿದ್ದಾರೆ .ಇದರ ಪ್ರೇರಣೆಯಿಂದ  “ನೀರಕ್ಕನ ಮನೆ ಕಣಿವೆ” ನಾಟಕವನ್ನು ರಚಿಸಿಲಾಗಿದೆ
ಇಬ್ಬರು ಅಕ್ಕ ತಂಗಿಯರು ಇರುತ್ತಾರೆ,ಅಕ್ಕನಿಗೆ ಆಗಷ್ಟೇ ಮದುವೆಯಾಗಿದೆ ,ಮಡದಿಯನ್ನು ಕರೆದೊಯ್ಯಲು ಮದುಮಗ ಮದಲಿಂಗ ಬಂದಿದ್ದಾನೆ.ಜೊತೆಗೆ ಅತ್ತೆ ನಾದಿನಿಯರು ಹೊರಡುತ್ತಾರೆ. ದಾರಿ ನಡುವೆ ಕಡಿದಾದ ಬೆಟ್ಟ ಎದುರಾಗುತ್ತದೆ.ಸರಸಕ್ಕಾಗಿ ಆಡಿದ ಪಂಥಾಹ್ವಾನದ  ಮಾತು ,ಜೊತೆಗೆ ನಾದಿನಿಯ ಸೆಳೆತ ಮದಲಿಂಗನನ್ನು ಹಿಂದೂ ಹಿಂದಾಗಿ ಬೆಟ್ಟವೇರುವ ಸಾಹಸಕ್ಕೆ ಮುಂದಾಗಿಸುತ್ತದೆ
.ಮುಂದೆ ನೀರಿಲ್ಲದೆ ಮದಲಿಂಗ ಸಾಯುವಲ್ಲಿಗೆ ಮದಲಿಂಗನ ಕಣಿವೆಯ ಕಥೆ  ಮುಕ್ತಾಯವಾಗುತ್ತದೆ .ಇಲ್ಲಿ ಅದು ಮುಂದುವರೆದು ನೀರಿನ ಸಂರಕ್ಷಣೆಗೆ ಪ್ರೆರಕವಾಗುವಂತೆ ಮಾಡುತ್ತದೆ. ವಿದ್ಯಾರ್ಥಿಗಳಿಗಾಗಿ ರಚಿಸಿದ ನಾಟಕ ಇದು ,ಇದು ಯಶಸ್ವಿಯಾಗಿ  ಪ್ರದರ್ಶನಗೊಂಡಿದೆ .
ಪಾತ್ರ ಪರಿಚಯ :
ಸೂರಪ್ಪಜ್ಜ ಮತ್ತು ರಾಮಣ್ಣ: ಊರ ಹಿರಿಯರು
ಕೃಷ್ಣಪ್ಪ ,ಪದ್ದಕ್ಕ ,ಶಿವಮ್ಮ ಮೊದಲಾದವರು :ಆ ಊರಿಗೆ ಹೊಸದಾಗಿ ಬರುತ್ತಿರುವವರು      
ಮದಲಿಂಗ :ಮದುಮಗ ,ಹಿರಿಮಗಳ ಕೈ ಹಿಡಿದಾತ,
ತಾಯಿ ,ಅಕ್ಕ ಮತ್ತುತಂಗಿ  :ತಾಯಿ , ಹಿರಿ ಮಗಳು ಮತ್ತು ಕಿರಿಮಗಳು
ಗುರೂಜಿ :ಕಣಿವೆ ಬಳಿ ಆಶ್ರಮದಲ್ಲಿರುವ ಸಂತ                                                       
  ನೀರಕ್ಕ :ಬರಡು ಕಲ್ಲಿನ ಬೆಟ್ಟವನ್ನು ಹಸಿರಾಗಿಸಿ, ಒಂದಿನಿತು ನೀರು ಇಲ್ಲದೆಡೆ ನೀರನ್ನು ಉಳಿಸಿ ಹನಿಸಿ ಹಂಚುವ ಕಾರ್ಯ ಮಾಡುತ್ತಿರುವ ಕಿರಿ  ಮಗಳು
    
                                        ನೀರಕ್ಕನ  ಮನೆ ಕಣಿವೆ                           
                                                           ದೃಶ್ಯ -1

(ಹತ್ತು ಹನ್ನೆರಡು ಜನ ಹಳ್ಳಿ ಮಂದಿ ದೊಡ್ಡ ಬೆಟ್ಟವೊಂದನ್ನು ಬಳಸಿಕೊಂಡು ನಡೆಯುತ್ತಾ  ಸಾಗುತಿದ್ದಾರೆ ).
ಸೂರಪ್ಪಜ್ಜ :ಬನ್ನಿ ಬನ್ನಿ ಬೇಗ ಬನ್ನಿ ಹೊತ್ತು ಏರುತ್ತಾ ಬಿಸಿಲೇರುತ್ತಾ ಹೋಗುತ್ತೆ ,ನಡೆಯೋದು ಕಷ್ಟ ಆಗುತ್ತೆ ,ಬೇಗ ಬೇಗ ಬನ್ನಿ ಮತ್ತೆ
ರಾಮಣ್ಣ ;ಹೌದು ಮತ್ತೇ ..ಅದೇನೋ ಇಲ್ಲಿ ಮಧ್ಯಾಹ್ನ ಹೊತ್ತಿನಾಗೆ ಓಡಾಡಬಾರದು ಅಂತ ಬೇರೆ ಹೇಳ್ತಾರಲ್ಲ !ಬೇಗ ಹೋಗೋಣ
ಕೃಷ್ಣಪ್ಪ ;ಅದ್ಯಾಕ್ ಹಂಗೆ ಯೋಳ್ತಾರೆ ?ಮಧ್ಯಾಹ್ನ ಯಾಕೆ ಇಲ್ಲಿ ಓಡಾಡ  ಬಾರದು ?! ರಾತ್ರಿ ಓಡಾಡ  ಬಾರದು ಅಂದ್ರೆ ಸರೀ ನಪ್ಪ ,ಕಾಡು ಮೇಡುನಾಗೆ ಹಾವು ಕಲ್ಲು ಮುಳ್ಳು ಇರುತ್ತೆ ..ಕಾಣಲ್ಲ ಅಂತ ಹೇಳಬೌದು ! ಮಧ್ಯಾಹ್ನ ಯಾಕೆ ಇಲ್ಲಿ ಓಡಾಡಬಾರದು ಅಂತಾರೆ ?
ಸೂರಪ್ಪಜ್ಜ :ಅಯ್ಯೋ ನೀವು ಈ ಊರಿಗೆ ಹೊಸಬ್ರಲ್ವ ?ಅದೊಂದು 50 -60 ವರ್ಷ ಹಿಂದಿನ  ದೊಡ್ಡ ಕಥೆನಪ್ಪಾ !
ಎಲ್ಲರೂ :ಕಥೇನಾ ?ಹಾಗಾದ್ರೆ ಅದನ್ನ ನಮ್ಗೂ ಒಸಿ ಹೇಳಿಪ್ಪಾ .
ರಾಮಣ್ಣ: ಬೇಡಪ್ಪಾ ಬೇಡ .ಆ ಕಥೆ ಕೇಳಿದ್ರೆ ಕರುಳು ಕರಗೋಗುತ್ತೆ ಕಣಪ್ಪಾ !
ಪದ್ದಕ್ಕ :ಅಂತಾದ್ದು ಏನಾಯ್ತಣ್ಣ ?ಹೇಳಿ ನಮ್ಗೂ ,ಕಥೆ ಕೇಳ್ತಾ ನಡೆಯೋದು ಗೊತ್ತಾಗಲ್ಲ !ಹೇಳಿ ಕತೆ ಹೇಳಿ
ಎಲ್ಲರೂ :ಹೌದು ಹೌದು ನೀವು ಕಥೆ ಹೇಳ್ಲೇ ಬೇಕು , ಹೇಳ್ಲೇ ಬೇಕು
 ಸೂರಪ್ಪಜ್ಜ ;ಎಲ್ರೂ ಅಷ್ಟು ಕೇಳ್ತಿದ್ದಾರೆ ಕಥೆ ಹೇಳಿ ಬಿಡು ರಾಮಣ್ಣ ಅವ್ರು ಕೇಳ್ಲಿ ಬಿಡೂ !
ರಾಮಣ್ಣ :ಹಾಗಾದ್ರೆ ಕೇಳಿ ಮತ್ತೆ ಭಯ ಬಿದ್ದು ಜ್ವರ ಬಂದ್ರೆ ನನಗೊತ್ತಿಲ್ಲ ಹ್ಹೂ ಮತ್ತೆ !
ಎಲ್ಲರೂ :ಸರಿ ಸರಿ ಹೇಳಿ ಬೇಗ
ರಾಮಣ್ಣ :ನಡೀರಿ ಮತ್ತೆ ಹೋಗ್ತಾ ಹೇಳ್ತೀನಿ
ಹನುಮಂತ : (ತನ್ನ ತಾಯಿ ಪದ್ದಕ್ಕನಲ್ಲಿ )ಅವ್ವ ,ಅವ್ವ ನಂಗೆ ಬಾಯಾರಿಕೆ ಆಯ್ತದೆ ಒಸಿ ನೀರು ಕೊಡು
ಪದ್ದಕ್ಕ :ಅಯ್ಯೋ ತಂದ ನೀರು ಆಗೋಯ್ತಲ್ಲ !ಈಗೇನು ಮಾಡೋದು ?(ರಾಮಣ್ಣ ಕಡೆಗೆ ತಿ ರುಗಿ)ಅಣ್ಣಾ ಇಲ್ಲೆಲ್ಲಾದರೂ ನೀರು ಸಿಗುತ್ತಾ ?
ರಾಮಣ್ಣ :ಅದಕ್ಕೇನಂತೆ ಇಲ್ಲಿ ಅಲ್ಲಲ್ಲಿ ನೀರು ಸಿಗೋ ಅಂತೆ ನೀರಕ್ಕ ಮಾಡಿದ್ದಾಳೆ?ಬನ್ನಿ ಇಲ್ಲಿ ಅಮೃತದಂತ ನೀರು ಇದೆ ನೋಡಿ ಇಲ್ಲಿ.    ನೀರು ಕುಡಿದು ಮುಂದೆ ಹೋಗೋಣ
ಶಿವಮ್ಮ :ನೀರಕ್ಕನ ?ಅದ್ಯಾರು ನೀರಕ್ಕ ಅಂದ್ರೆ ?copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಸೂರಪ್ಪಜ್ಜ :ನೀರಕ್ಕ ದೇವತೆ ಕಣಮ್ಮ ನಮ್ಮ ಪಾಲಿಗೆ ,ನೀರಿಲ್ದೆ ಬರಡಾಗಿದ್ದ ನಮ್ಮ ಊರಿಗೆ ನೀರು ಕೊಟ್ಟ ಮಾತಾಯಿ ಅವಳು
ಶಿವಮ್ಮ :ಅಂದ್ರೆ ಅವ್ಳು ಗ್ರಾಮ ದೇವತೆನಾ ?
ಸೂರಪ್ಪಜ್ಜ :ಹ್ಹೂ ಒಂದರ್ಥದಲ್ಲಿ ಅವಳು ಗ್ರಾಮ ದೇವತೇನೆ ಸರಿ ಅವಳ ಕಥೆನೂ ಈಗ  ಹೇಳೋ ಕಥೆನಲ್ಲಿ ಇದೆ ಕೇಳ್ತಾ ನಡೀರಿ ಮುಂದೆ
ಹಾಡು :( ಹಾಡಿನೊಂದಿಗೆ ನೃತ್ಯ)
ಹೇಳುವೆ.. ನಾ. ಹೇಳುವೆ
ಕಥೆಯೊಂದಾ ಹೇಳುವೆ
ಕೇಳಿರಿ ನೀವೆಲ್ಲಾ
ಹೇಳುವೆ.. ನಾ. ಹೇಳುವೆ
ಕಥೆಯೊಂದಾ ಹೇಳುವೆ ..
ಕೇಳಿರಿ ನೀವೆಲ್ಲಾ ..
ನಾ ಹೇಳುವೆ ಕಥೆಯೊಂದಾ
ಮನ ಮರುಗುವ ಕಥೆಯಾ
ಕಲ್ಲು ಕರಗುವ ಕಥೆಯಾ .
ಹೇಳುವೆ.. ನಾ. ಹೇಳುವೆ
ಕಥೆಯೊಂದಾ ಹೇಳುವೆ ..
ಕೇಳಿರಿ ನೀವೆಲ್ಲಾ ..
 ಹೇಳುವೆ ಮದಲಿಂಗನ ಕಥೆಯಾ
ನಾ ಹೇಳುವೆ ..ನಾ ಹೇಳುವೆ ..
ನೀರಕ್ಕನ ಕಥೆಯಾ .
ನೀರಕ್ಕನ ಮನೆ  ಕಣಿವೆಯ ಕಥೆಯಾ ..
ಕಣಿವೆಗೆ ಹೆಸರು ಬಂದ ಕಥೆಯಾ ..
ತಾನುರಿದು ಬೆಳಕ ಕೊಟ್ಟ ಕಥೆಯಾ
ನಾ ಹೇಳುವೆ ..
ನಾ ಹೇಳುವೆ ಕಥೆಯೊಂದಾ
ಮನ ಮರುಗುವ ಕಥೆಯಾ
ಕಲ್ಲು ಕರಗುವ ಕಥೆಯಾ .
 ಹಿಂದೆ ಇದ್ದರು ಅಕ್ಕ ತಂಗಿಯರು
ಮುದ್ದು ಮುಖದ ಚೆಲುವೆಯರು
ಮುಗ್ಧ ಮನಸಿನ ನೀರೆಯರು
ತಾಯಿಯ  ಎರಡು ಕಣ್ಣುಗಳು ..
ನಾ ಹೇಳುವೆ ..
ನಾ ಹೇಳುವೆ ಕಥೆಯೊಂದಾ
ಮನ ಮರುಗುವ ಕಥೆಯಾ
ಕಲ್ಲು ಕರಗುವ ಕಥೆಯಾ .

 ಇರುವನು ಒಬ್ಬ ಮಾವನ ಮಗನು
ಮದಲಿಂಗ ಅವನೇ ಸುತ್ತೂರ ಚೆಲುವ
 ಮನ ಮೆಚ್ಚಿ ಅಕ್ಕನ ಕೈ ಹಿಡಿದಿಹನು
ಕರೆಯುದಕೆ ದಿನ ನೋಡಿ ಹೊರಟಿಹನು
ಜೊತೆಗತ್ತೆ ನಾದಿನಿ ಹೊರಟಿಹರು ..
ಮದಲಿಂಗ ಕಟ್ಟಾಳು ನಗು ಮುಖದ ಚೆಲುವ
ಉಕ್ಕುವ ಯೌವನ ಹರೆಯದ ಚೆಲುವು
ನಕ್ಕರೆ ತುಟಿ ಹಲ್ಲು ಕುಡಿ ಮೀಸೆ ಚಂದ
ಹೊಳೆವ ಕಣ್ಣುಗಳು ಹರವಾದ ಎದೆಯ

ನಮ್ಮ ಮದಲಿಂಗ ನೋಡಲಿಕೆ ಬಲು ಚಂದ
ಒಳಗಿನ ಮನವದು ಸ್ವಚ್ಚಂದ ..
ಒಳಗಿನ ಮನವದು ಸ್ವಚ್ಚಂದ.
ವಿಧಿಯ ಮೀರಲು ಸಾಧ್ಯ ಯಾರಿಂದ ?..
ನಾ ಹೇಳುವೆ ..
ನಾ ಹೇಳುವೆ ಕಥೆಯೊಂದಾ
ಮನ ಮರುಗುವ ಕಥೆಯಾ
ಕಲ್ಲು ಕರಗುವ ಕಥೆಯಾ .

 ದಾರಿಯಲಿ ಬರುತಿಹರು
ಹುಡುಗಿಯರ ಬಳುಕುವ ನಡೆ ಚಂದ
ಬಾಯಿ ತುಂಬಾ ಹಾಸ್ಯದ ಮಕರಂದ .
ವಿಧಿ ಕೂಡಾ ಹೊರಟಿಹುದು ಹಿಂದಿಂದ ..
                           ದೃಶ್ಯ -2
(ಮದುಮಗ ಮದಲಿಂಗ ಮಡದಿ ಅತ್ತೆ ನಾದಿನಿ ಒಂದಿಗೆ ಸರವಾಡುತ್ತಾ ಬರುತ್ತಾನೆ )
ತಂಗಿ :ಏನೇ ಅಕ್ಕ ?ನೀನು ನಮ್ಮನ್ನೆಲ್ಲ ಬಿಟ್ಟು ಹೋಗುತ್ತಿರುವೆಯ ?ನೀನಿಲ್ಲದೆ ನಾನು ಹೇಗಿರಲಿ ?ನಮ್ಮನ್ನು ಬಿಟ್ಟು ಭಾವನ ಜೊತೆಗೆ ಹೋಗಲು ಹೇಗೆ ನಿನಗೆ ಮನಸ್ಸು ಬರುತ್ತದೆ ಅಕ್ಕ ?
ಅಕ್ಕ ; ಅಯ್ಯೋ ದೇವರೇ !ನಾನು ಪ್ರೀತಿಯ ತಂಗಿಯನ್ನು ಬಿಟ್ಟು ಹೇಗೆ ಇರಲಿ.ತಂಗಿ ಹುಟ್ಟಿದಲ್ಲಿಂದ ಇಷ್ಟರ ತನಕ ಒಂದು ದಿನ ಕೂಡಾ ನಾನು ಅವಳನ್ನು ಬಿಟ್ಟು ಎಲ್ಲಿಗೂ ಹೋಗಿರಲಿಲ್ಲ .ಈಗ ಇವರನ್ನೆಲ್ಲ ಬಿಟ್ಟು ಹೋಗ ಬೇಕಲ್ಲ (ಅಳು )ಅಯ್ಯೋ ಹೆಣ್ಣಿನ ಜನ್ಮವೇ !
ತಾಯಿ :ಮನಸ್ಸು ಬರುತ್ತದೆ ಮನಸ್ಸು ಬರಬೇಕು ಕಣೆ ,ಹೆಣ್ಣಿಗೆ ಹುಟ್ಟಿದ ಮನೆ ತಾಯಿ ತಂಗಿಯರು ಶಾಶ್ವತ ಅಲ್ಲ ,ಗಂಡ ಬಂದು ಕರೆದಾಗ ಹೋಗ ಬೇಕು ,ನಾಳೆ ನೀನು ಮದುವೆ ಆದ ಮೇಲೆ ಗಂಡ ಬಂದು ಕರೆದಾಗ ಹೋಗದೆ ಇರುವೆಯಾ ?ಇಲ್ಲ ನೀನು ಹೋಗುತ್ತೀಯ .
ತಂಗಿ :ಅಯ್ಯೋ ಹೋಗಮ್ಮ ,ನಾನು ಮದುವೆಯೇ ಆಗೋದಿಲ್ಲ
ಮದಲಿಂಗ :ಹೌದು ಹೌದು ಎಲ್ಲ ಹುಡುಗಿಯುರೂ ಹೀಗೆ ಹೇಳುವುದು ಮೊದಲಿಗೆ ,ನಂತರ ಗಂಡ ಬಂದು ಕರೆವಾಗ ಸೆರಗು ಹಿಡಿದು ತಿರುಗಿ ನೋಡದೆ ಹೋಗುತ್ತಾರೆ
ತಂಗಿ :ಓಹೋಹೋ !ಮದುವೆ ಆಗಿ ವಾರವಷ್ಟೇ ಆಗಿದೆ .ಎಲ್ಲ ಬಲ್ಲವನಂತೆ ಆಡುತ್ತಾನೆ ನಮ್ಮ ಭಾವ ನೋಡಮ್ಮ ,ಅವನಿಗೆ ಸ್ವಲ್ಪ ಹೇಳು ನೀನು !copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಮದಲಿಂಗ : (ನಗುತ್ತಾ )ನೀನು ಅಕ್ಕನ ಜೊತೆ ಬಂದು ಬಿಡು ನನಗೆ ಏನು ತಿಳಿದಿದೆ ಎಂದು ಗೊತ್ತಾಗುತ್ತದೆ
ಅಕ್ಕ :ಹೌದು ಕಣೆ ನೀನು ನಮ್ಮೊಂದಿಗೆ ಬಾ ,ನನಗೂ ನಿನ್ನನ್ನು ಬಿಟ್ಟಿರಲು ಕಷ್ಟ .(ತಾಯಿ ಕಡೆ ತಿರುಗಿ )ಅಮ್ಮ ನೀನು ಇವಳನ್ನು ನನ್ನೊಂದಿಗೆ ಕಳುಹಿಸಿ ಕೊಡು ನನ್ನ ಕೈ ಹಿಡಿದವರು ಇವಳನ್ನು ಕೈ ಹಿಡಿದು ಬಾಳಿಸುವರು ,ನಾವಿಬ್ಬರೂ ಒಂದೇ ಬಳ್ಳಿಯ ಹೂವುಗಳಂತೆ ಇರಬಹುದು ಅಮ್ಮ ,ಏನಮ್ಮಾ ನೀನು ಏನೂ ಮಾತಾಡುತ್ತಿಲ್ಲ ?


ಹಾಡು :
ಅಕ್ಕ ಕೇಳುವಳು ಗೋಗರೆದು ತಾಯಲ್ಲಿ
ಗೋಗರೆದು ಕೇಳಲು ಮದಲಿಂಗನ  ಮನದಿ
ಆಸೆಯು  ಮೊಳೆಯಿತು ನಿಜವಾಗಿ
ಬೆಳೆ ಬೆಳೆದು ನಿಂತಿತು ಮರವಾಗಿ
ಕೆಂಪು ತುಟಿಯ ಹೊಳಪಿನ ಕೆನ್ನೆ
ಸಂಪಿಗೆ ಮೂಗಿನ ಚೆಲುವೆ ಕನ್ಯೆ
ಎಳೆಯ ಕಪ್ಪಾದ ಕಣ್ಣು
ಸೊಂಪಾಗಿ ಬೆಳೆದ ಹೆಣ್ಣು
ಹಣೆಯ ಕುಂಕುಮ ಬಟ್ಟು
ನೋಡು ನೋಡುತ ಕಣ್ಣ ಬಿಟ್ಟು
ಸೊಂಪಾದ ಹೆರಳಿನ ಚೆಲುವೆಗೆ ಸೋತು
ಹೋದನು ಮದಲಿಂಗ ಇನ್ನೂ
ಅತ್ತೆಯ ನೋಡಿ ಸುಮ್ಮನಿಹನು
ಇದೆಲ್ಲವ ನೋಡುತಲಿದ್ದ ತಾಯಿಗೆ
ಗಾಬರಿ ಗಡಿಬಿಡಿ  ಆಗೆ   
ನಾಲ್ಕೆಜ್ಜೆ ನಡೆದು ಇಂತೆಂದಳು,
ತಾಯಿ ಗದರುತ್ತ ಇಂತೆಂದಳು  
ತಾಯಿ :ಏನು ಮಾತು ಅದು ! ಸುಮ್ಮಗೆ ನಡೆಯಿರಿ ,ಮಕ್ಕಳು ಅಂತ ಸಲುಗೆ ಕೊಟ್ರೆ ತಲೆಗೊಂದು ಮಾತಾಡ್ತೀರಿ ,ಸುಮ್ಮನೆ ನಡೀರಿ ಮುಂದೆ ,ಇಬ್ಬರು ಹರೆಯದ ಹುಡುಗಿರನ್ನು ಆಳೋದು ಅಂದ್ರೆ ಸಣ್ಣ ವಿಚಾರ ಅಲ್ಲ ಇದು ತಮಾಷೆ ಮಾತಲ್ಲ
ಮದಲಿಂಗ :ಅತ್ತೆಮ್ಮ ,ಇವಳನ್ನು ನನಗೆ ಕೊಡಿ ಅತ್ತೆಮ್ಮ ಅಕ್ಕ ತಂಗಿರನ್ನು ನಾನು ನನ್ನ ಕಣ್ಣ ರೆಪ್ಪೆ ತರ ನೋಡಿಕೊಳ್ಳುವೆ ಅತ್ತೆಮ್ಮ copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಅಕ್ಕ :ಹೌದಮ್ಮಾ ,ಇವಳನ್ನೂ ಇವರು ಕೈ ಹಿಡಿಯುವರು ಅಮ್ಮಾ ನೀನು ಹ್ಹೂ ಅನ್ನು ಅಮ್ಮಾ !
ತಾಯಿ :ಏನು ಮಾತು ಅಂತ ಆಡ್ತಿದೀರಿ ಸುಮ್ನೆ ! ಇಬ್ಬರು ಹರೆಯದ ಹುಡುಗಿರನ್ನು ಆಳೋದು ಅಂದ್ರೆ ಸಣ್ಣ ವಿಚಾರ ಅಲ್ಲ ಇದು ತಮಾಷೆ ಮಾತಲ್ಲ ,ಸುಮ್ನೆ ನಡೀರಿ ಮುಂದೆ
ಮದಲಿಂಗ : ಹೌದು ಅತ್ತೆಮ್ಮ ,ನಾನು ಇಬ್ಬರು ಹೆಂಡಿರನ್ನು ಆಳಲಾರೆನೆ ?ಎಲ್ಲೂ ಒಬ್ಬರಿಗೆ ಇಬ್ಬರು ಹೆಂಡಿರು ಇಲ್ಲವೇ ?ಅತ್ತೆಮ್ಮ
ಹಾಡು :
ಇಂತು ಮದಲಿಂಗ ತವಕದೊಳಾಡಲು
ಕಣಿವೆಯ ಬಳಿ ಬಂದು ಸೇರಿದರು
ಆ ಬೆಟ್ಟದ ಕಣಿವೆ ಬಳಿ ಸೇರಿದರು
ಬಲು  ಎತ್ತರದ ಬೆಟ್ಟವದು
ಬಳಸಿ ಬರಲು ಹರದಾರಿ ದೂರ
ಕೆಚ್ಚೆದೆಯ ಗಡಸುಕಾರರು ಕೂಡಾ
ಬಳಸಿಯೇ ಬರುವರು ಬೆಟ್ಟವ
ಕಡಿದಾದ ಬೆಟ್ಟವದು ಏರುವುದು ಬಲು ಕಷ್ಟ
ಆ ಬೆಟ್ಟವ ಏರುವುದು ಬಲು ಕಷ್ಟವೂ

ತಾಯಿ ;(ನಗುತ್ತಾ ಮಾತು ಬದಲಾಯಿಸುತ್ತಾ ) ನೋಡಪ್ಪಾ,ಈ ಬೆಟ್ಟವ ಏರುವುದು ಯಾರಿಗೂ ಸಾಧ್ಯವಿಲ್ಲ ಅಂತ ಹೇಳುತ್ತಾರೆ.ನೀನು ಇದನ್ನ ಹಿಂದೆ ಹಿಂದಕೆ ಹತ್ತಿ ಇಳಿದು ಬರುವ ಗಟ್ಟಿಗನಾಗಿದ್ದರೆ ನಾನು ಕಿರಿ ಮಗಳನ್ನು  ನಿನಗೆ ಕೊಡುತ್ತಿದ್ದೆ!copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಮದಲಿಂಗ:ಒಪ್ಪಿದೆ ಅತ್ತೆಮ್ಮ ನಿಮ್ಮ ಮಾತನ್ನ !ಆದರೆ ನನಗೆ ಈ ಬೆಟ್ಟವೇನು ಮಹಾ ಅತ್ತೆಮ್ಮ  ,ಇಂಥ ಬೆಟ್ಟಗಳನ್ನು ನಾನು ಏರಿದ್ದೇನೆ ಹಲವು ಬಾರಿ .ನಾನು ಈ ಬೆಟ್ಟವನ್ನು ಹಿಂದೆ ಹಿಂದಕೆ ಏರಿ ಇಳಿದು ಬರುತ್ತೇನೆ.
ತಾಯಿ :ಅಯ್ಯೋ ಬೇಡಪ್ಪಾ ನಾನು ಸುಮ್ಮನೆ ತಮಾಷೆಗೆ ಹೇಳಿದೆ ಅಷ್ಟೆ !ಇದನ್ನ ಈ ಮಧ್ಯಾಹ್ನದ ಹೊತ್ತಿನಲ್ಲಿ ಎಂಥ ಗಟ್ಟಿಗರಿಂದಲೂ ಏರಲು ಸಾಧ್ಯವಿಲ್ಲ
ಮದಲಿಂಗ :ಇಲ್ಲ ಅತ್ತೆಮ್ಮ .ಇದನ್ನು ನಾನು ಹಿಂದು  ಹಿಂದಕೆ ಏರಿ ಇಳಿದು ಬರುತ್ತೇನೆ.ನಂತರ ಇವಳನ್ನು ನೀವು ನನಗೆ ಕೊಡುವಿರಂತೆ  ,ನೀವು ಕಣಿವೆಯ ಬಳಸು ದಾರಿಯಲ್ಲಿ ಹೋಗಿ ಆ ಕಡೆ ನಿಂತಿರಿ .ಇದೋ ನಾನು ಹೊರಟೆ
(ನಾದಿನಿ ,ಮಡದಿ ಕಡೆ ನೋಡಿ ನಸು ನಕ್ಕು ಹಿಂದು ಹಿಂದಾಗಿ  ಬೆಟ್ಟವೇರಲು  ಆರಂಭಿಸುತ್ತಾನೆ.)
ತಾಯಿ : ( ಗಾಬರಿಯಿಂದ )ಅಯ್ಯೋ ತಮಾಷೆಗೆ ಹೇಳಿದ್ದು ಘಾತಿಗೆ ತಿರುಗಿತಲ್ಲ ,ಇದನ್ನು ನೇರವಾಗಿ ಕೂಡಾ ಏರಲು ಜನರು ಹಿಂಜರಿಯುತ್ತಾರೆ.ಹಾಗಿರುವಾಗ ಈ ಬಿರು ಬಿಸಿಲಿನಲ್ಲಿ ಹಿಂದೂ ಹಿಂದಕೆ ಏರಿ ಬದುಕಿ ಬರಲುಂಟೆ ?!ಅಯ್ಯೋ ದೇವರೇ ಈಗ ಏನು ಮಾಡುವುದು ?!
ಅಕ್ಕ  : (ಚಿಂತೆಯಿಂದ) ಹೌದಮ್ಮಾ ,ಅಯ್ಯೋ ಏನು ಮಾಡುವುದಮ್ಮಾ?!ಅವರನ್ನು ಕರೆ ಅಮ್ಮಾ ,ತಂಗಿಯನ್ನು ಕೊಡುವೆ ಎಂದು ಹೇಳಿದರೆ ಅವರು ಬಂದಾರು ಅಮ್ಮ
 ತಂಗಿ :ಹೌದಮ್ಮಾ ಇಲ್ಲದಿದ್ದರೆ ಭಾವ ಬದುಕಿ ಉಳಿಯಲಾರ copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಹಾಡು :
ಏರಿದ್ದು ಸಾಕಪ್ಪಯ್ಯ
ಇಳಿದು ಬಾರೋ ಕಂದ
ಹೇಳಿದ್ದು ನಾ ಸರಸಕ್ಕೆ
ಪಂತಕ್ಕೆ ಅಲ್ಲವೇ ಅಲ್ಲ .
ಏರಿದ್ದು ಸಾಕಪ್ಪಯ್ಯ ..
ಇಳಿದು ಬಾರೋ ಕಂದ
ಕಿರಿ ಮಗಳ ನಾ  ಕೊಡುವೆ
ಇಳಿದು ಬಾರೋ ದೊರೆಯೇ
ಪ್ರಾಣದೊಂದಿಗೆ ಸರಸ ಬೇಡ ಕಂದ
ಇಳಿದು ಬಾರಪ್ಪಯ್ಯ  ಮದುಮಗನೇ
ಮದಲಿಂಗ ಬಾರೋ ಕಂದ
ಮದಲಿಂಗ :ಒಪ್ಪಿಕೊಂಡ ಪಂಥವನ್ನು ಬಿಡಲಾರೆ ,ಹಿಂದೆ ಹಿಂದಕೆ ಏರಿ ಆ ಕಡೆಯಿಂದ ಇಳಿದು ಬರುವೆ ,ನೀರು ಹಿಡಿದುಕೊಂಡು ಕಾದಿರಿ ಅತ್ತೆಮ್ಮಾ  ..
ತಾಯಿ : (ಸ್ವಗತ )ಅಯ್ಯೋ ಎಂಥ ಕೆಲಸ ಆಗಿ ಹೋಯಿತು ದೇವೆರೇ ನೀನೇ ನನ್ನ ಮಗಳ ಸೌಭಾಗ್ಯವನ್ನು ಕಾಯಬೇಕು
ಅಕ್ಕ :ಅಯ್ಯೋ ದೇವೆರೇ ಏನು ಮಾಡಲಿ ?ಅಮ್ಮ ನಾವು ಬೇಗ ಬೇಗ ಹೋಗಿ ಆ ಕಡೆ ಕಾಯೋಣ ಬನ್ನಿ ಹೋಗೋಣ
ತಾಯಿ ;ಸರಿ ನಡೆಯಿರಿ
(ದಾರಿಯಲ್ಲಿ )ಅಬ್ಬಾ !ಏನು ಬಿಸಿಲು ಏನು ಧಗೆ ತಡೆಯಲು ಆಗುತ್ತಿಲ್ಲ,ಬಾಯಾರಿಕೆಯಿಂದ ಗಂಟಲು ಒಣಗಿದೆ ,ನಡೆಯಲಾಗುತ್ತಿಲ್ಲ ,ಕಣ್ಣು ಕತ್ತಲು ಕವಿಯುತ್ತಿದೆ
ಅಕ್ಕ:ಇದರಲ್ಲಿ ಸ್ವಲ್ಪ ನೀರು ಇದೇ ಕುಡಿ ಅಮ್ಮ (ಸಣ್ಣ ತಂಬಿಗೆಯಲ್ಲಿದ್ದ ನೀರು ನೀಡುವಳು)
ತಾಯಿ ಎತ್ತಿ ಕುಡಿಯ ಹೊರಟಾಗ  

 ತಂಗಿ ;ತಡೆ ಅಮ್ಮಾ ,ನೀರು ಕುಡಿಯಬೇಡ ,ಬಳಸು ದಾರಿಯ ನೆರಳಿನಲ್ಲಿ ಬಂದ ನಮಗೇ ಇಷ್ಟು ದಾಹ ಆಗಬೇಕಾದರೆ ಬೆಟ್ಟವನ್ನು ಹಿಂದು  ಹಿಂದಕೆ ಏರಿ ಇಳಿದು ಬರುವ ಬಾವನಿಗೆ ಎಷ್ಟು ದಾಹ ಆಗಲಿಕ್ಕಿಲ್ಲ ?ಅವನಿಗೆ ನೀರು ಇಟ್ಟಿರೋಣ ಅವನು ಕುಡಿದ ಮೇಲೆ ನೀನು ಕುಡಿಯುವಿಯಂತೆ
ತಾಯಿ :ನನ್ನ ತಲೆಗಿಷ್ಟು ಮಣ್ಣು ಹಾಕ !ಹೌದು ತಾಯಿ ನಿನಗೆ ಹೊಳೆದ ವಿಚಾರ ನನಗೆ ತಿಳಿಯಲಿಲ್ಲ ನೋಡು.ನೀರು ಕುಡಿಯೋದು ಬೇಡ .ಆ ಕಡೆ ಹೋಗಿ ಅವನ ದಾರಿ ಕಾಯೋಣ ಬನ್ನಿ
ಹಾಡು :
ಹೊತ್ತು ಏರಿದಂತೆ ಬಿಸಿಲೇರಿತು
ಕ್ಷಣ  ಕ್ಷಣವೂ ಯುಗವಾಯಿತು
ಭಯ ಆತಂಕ ನೆತ್ತಿಗೇರಿತು
ಕಣ್ಣು ಹಾಯುವಷ್ಟು ದೂರ ಕರಿಯ ಬಂಡೆಗಳು
ಮುಳ್ಳು ಪೊದರುಗಳುcopy rights
 reserved (c)ಡಾ.ಲಕ್ಷ್ಮೀ ಜಿ ಪ್ರಸಾದ 
ಕಾದು ಕಾದು ಕಣ್ಣು ಕತ್ತಲಾಯಿತು
ಮನ ಮೂಕ ವಾಯಿತು
ದಿಗಿಲು ಏರಿ ಕಣ್ಣು ತುಂಬಾ ನೀರು ತುಂಬಿ
ಅಳು ಉಮ್ಮಳಿಸಿ ಬಂತು ..
ಅಯ್ಯೋ ದೇವರೇ ಸರಸ ವಿಕೋಪವಾಯಿತಲ್ಲ ..
ಹೊತ್ತು ಏರಿದಂತೆ ಬಿಸಿಲೇರಿತು
ಕ್ಷಣ  ಕ್ಷಣವೂ ಯುಗವಾಯಿತು
ಭಯ ಆತಂಕ ನೆತ್ತಿಗೇರಿತು ..
ಅಕ್ಕ ;ಅಯ್ಯೋ ತುಂಬಾ ಹೊತ್ತು ಆಯಿತು .ಇವರು ಬರುವುದು ಕಾಣುತ್ತಾ ಇಲ್ಲ ..
ತಾಯಿ :ಹೌದು ನನಗೂ ಅದೇ ಭಯ ಆಗುತ್ತಿದೆ .
ತಂಗಿ ; (ಕಣ್ಣಿಗೆ ಕೈ ಇಟ್ಟು ದೂರಕ್ಕೆ ನೋಡಿ )ಅಮ್ಮಾ ಅಲ್ಲಿ ಯಾರೋ ಇಳಿದು ಬರುವಂತೆ ಕಾಣಿಸುತ್ತಿದೆ .ಅದು ಭಾವನೇ ಇರಬೇಕು
ಅಕ್ಕ: (ಸಂತಸದಿಂದ ) ಓಹ್ !ಹೌದು ಅದು ಇವರೇ ಇಳಿದು ಬರುತ್ತಿರುವುದು !ಅಬ್ಭಾ!ಅಂತು ಇಳಿದು ಬರುತ್ತಿದ್ದಾರಲ್ಲ ಸದ್ಯ !

ಹಾಡು ;
ಮದಲಿಂಗ ಬರುತಿಹನು ಬಳಲಿ ಬೆಂಡಾಗಿ
ಬಾಯಾರಿ ಗಂಟಲು ಒಣಗಿ ,
ಬಿಸಿಲಿನ ಬೇಗೆಗೆ ಹಣ್ಣು ಹಣ್ಣಾಗಿ
ಕಣ್ಣು ಕೆಂಡದಂತೆ ಕೆಂಪಾಗಿ ..
 ಕೈ ಕಾಲುಗಳು ನಡುಗುತ್ತಿವೆ
ಶಕ್ತಿ ಸೋರಿ ಮೈ ಮನ  ಬಳಲಿವೆ
ಉಸಿರದು ಮೇಲೆ ಹೋಗುತ್ತಿದೆ
ಸನ್ನೆಯ ಮಾಡಿ ನೀರನು ಕೇಳಿದ
ನಾದಿನಿಯ ನೋಡಿ ಗೆದ್ದ ನಗು ಬೀರುತ
ನೀರಿಗಾಗಿ ಕೈ ಹಿಡಿದ ಮದಲಿಂಗ
ಗೆದ್ದವಗೆ ಮುತ್ತು ತರುವಂತೆ
ಕಣ್ಣೀರು ತಲೆದೋರೆcopy rights 
reserved (c)ಡಾ.ಲಕ್ಷ್ಮೀ ಜಿ ಪ್ರಸಾದ  ..
ಅಯ್ಯೋ ದೇವರೇ ಏನೆಂದು ಹೇಳಲಿ
ತಂಬಿಗೆ ಕೈ ಜಾರಿ ಬೀಳಲು .
ಅಕ್ಕ ,ತಾಯಿ ಮತ್ತು ತಂಗಿ :ಅಯ್ಯೋ ದೇವರೇ ..ಇನ್ನೇನು ಮಾಡೋದು
ಮದಲಿಂಗ ಅಲ್ಲಿಯೇಕುಸಿದು ಕುಳಿತು ಕೊಳ್ಳುತ್ತಾನೆ .ತಾಯಿ ಮತ್ತು ಅಕ್ಕ ಗಾಳಿ ಹಾಕಿ ಉಪಚರಿಸುತ್ತಾರೆ
ಅಕ್ಕ :ಅಯ್ಯೋ ಮನೆ ಹಾಳಿ ನೀರೇಕೆ ಚೆಲ್ಲಿದೆ ?ನನ್ನ ಸುಖವನ್ನು ಕಂಡು ತಾಳಲಾಗದೆ ಹೀಗೆ ಮಾಡಿದೆಯಾ ಪಿಶಾಚಿ !ಅಯ್ಯೋ ದೇವರೇ ಈಗೇನು ಮಾಡಲಿ copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ತಂಗಿ :ಅಯ್ಯೋ ಅಕ್ಕ ನಾನು ಬೇಕೆಂದು ಮಾಡಲಿಲ್ಲ ನಿನ್ನ ಸುಖಕ್ಕೆ ನಾನು ಕರುಬುವೆನೇ ಅಕ್ಕ ?ಅಯ್ಯೋ ನನ್ನ ವಿಧಿಯೇ ?ಏನು ಮಾಡಲಿ .
(ತಂಬಿಗೆ ಹಿಡಿದುಕೊಂಡು ನೀರಿಗಾಗಿ ಅಲೆಯುವಳು )ಅಯ್ಯೋ ಎಲ್ಲಾದರೂ ನೀರು ಇದೆಯೇ ಇಲ್ಲಿ ಎಲ್ಲಾದರು ಕೆರೆ ಬಾವಿ ಹಳ್ಳ ಇದೆಯೇ ಇಲ್ಲಿ ..ಓ ಅಕ್ಕಾ ,ಓ ಅಕ್ಕಾ ನನಗೆ ಸ್ವಲ್ಪ ನೀರು ಕೊಡಿ ನಿಮ್ಮ ದಮ್ಮಯ್ಯ ..
ಹಾಡು :
ಇನ್ನಾದುದನು ಹೇಳಲೇಕೆ ಅಯ್ಯೋ ಬೆಳೆಯುವ ಪೈರು
ಮೊಳಕೆಯಲೇ ಸುಟ್ಟು ಹೋಯಿತು
ಆ ದಿನವ ನೋಡಿ ಸಂಕಟ ಪಟ್ಟ ಕಲ್ಲುಗಳು
ಮುಳ್ಳು ಪೊದರುಗಳು ಈಗಲೂ ಮರುಗುತಿವೆ
ಇಲ್ಲಿ ಮದಲಿಂಗ ದಾಹದಲಿ ಅಲೆಯುತಿಹನೆಂದು ಜನರು ಹೇಳುವರು
ಮದಲಿಂಗನ ನೆನೆದು ನಿಟ್ಟುಸಿರ ಬಿಡುವರು ಮುಂದೆ ..
 ಅಕ್ಕ :ಅಯ್ಯೋ ಏಳಿ ,ಕಣ್ಣು ತೆರೆಯಿರಿ ಸ್ವಾಮಿ ,ನನ್ನ ಕೈ ಬಿಟ್ಟು ಹೋಗ ಬೇಡಿ ಸ್ವಾಮಿ ಕಣ್ಣು ತೆರೆಯಿರಿ ..(ಅಲುಗಾಡಿಸುವಳು ,ಮದಲಿಂಗನ ಪ್ರಾಣ ಪಕ್ಷಿ ಹಾರಿ ಹೋಗಿ ಅಲ್ಲಿಯೇ ಬೀಳುತ್ತಾನೆ )

ಅಕ್ಕ :ಅಯ್ಯೋ ಅಮ್ಮಾ ನೀವು ನನ್ನ ಗಂಡನನ್ನು ಕೊಂದಿರಿ !ನಾನೇನು ಅನ್ಯಾಯ ಮಾಡಿದ್ದೆ ನಿಮಗೆ ?ನನ್ನ ಸುಖ ನಿಮಗೆ ಬೇಡವಾಯಿತೇ !ಅಯ್ಯೋ ದೇವರೇ ನಾನು ಇವರನ್ನು ಬಿಟ್ಟು ಹೇಗೆ ಬದುಕಲಿ ,ನಾನು ಅವರೊಂದಿಗೆ ಹೋಗುತ್ತೇನೆ ..ಅಯ್ಯೋ ಅಮ್ಮಾ ..ನೋವು ..ಎದೆ ನೋವು ..ಅಮ್ಮಾ ತಾಳಲಾರೆ ,ಅಮ್ಮಾ ..ಅಯ್ಯೋ ನಿಲ್ಲಿ ನಾನೂ ಬಂದೆ ನಿಮ್ಮ ಜೊತೆಗೆ ನಿಲ್ಲಿ ಅಯ್ಯೋ ..(ಪ್ರಾಣ ಹೋಗಿ ಕುಸಿದು ಬೀಳುವಳು )copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ತಾಯಿ ;ಅಯ್ಯೋ ವಿಧಿಯೇ ,ಮಗಳು ಮತ್ತು ಅಳಿಯನ ಸಾವಿಗೆ ನಾನೇ ಕಾರಣ ಆದೆನಲ್ಲವೇ !ಆಯೋ ದೇವೆರೇ ನನ್ನನ್ನು ಇನ್ನೂ ಯಾಕೆ ಬದುಕಲು ಬಿಟ್ಟಿರುವೆ ,ನನ್ನನ್ನೂ ಅವರೊಂದಿಗೇ ಕರೆದುಕೊಂಡು ಹೋಗು ದೇವೆರೇ ..ನಾನಿನ್ನು ಬದುಕಲಾರೆ .ಅಯ್ಯೋ
(ಎದೆ ಬಡಿದು ಗೋಳಾಡಿಕೊಂಡು ಜೀವ ಬಿಡುತ್ತಾಳೆ )
                                                       ದೃಶ್ಯ -3
ತಂಗಿ ;(ಓಡಿ ಕೊಂಡು ಬಂದು ಬಳಲಿಕೆ ಗಾಭರಿ ಭಯದಿಂದ )ಅಯ್ಯೋ ಮೈಲು ಗಟ್ಟಲೆ ದೂರ ಓಡಿ ಹುಡುಕಾಡಿದರೂ ಇಲ್ಲಿ  ಎಲ್ಲೂ ನೀರು ಇಲ್ಲ ಮನೆ ಮಠ ಇಲ್ಲ ಅಯ್ಯೋ ಏನು ಮಾಡಲಿ?!..ಓ ಅಲ್ಲೊಂದುಗುಡಿಸಲು ಕಾಣಿಸುತ್ತಿದೆ .ಅಲ್ಲಿ ನೀರು ಕೇಳುತ್ತೇನೆ
ಓ ಅಕ್ಕಾ ಓ ಅಣ್ಣಾ ನನಗೆ  ಸ್ವಲ್ಪ ನೀರು ಕೊಡಿ ನನ್ನ ಭಾವ ಬದುಕಬೇಕು ..ನೀರು ಕೊಡಿ
ಗುರೂಜಿ (ಕಾವಿ ಭಟ್ಟೆ ಹೊದೆದ ಗುರೂಜಿ ಹೊರ ಬಂದು )ಏನಾಯಿತಮ್ಮಾ ಏಕಿಷ್ಟು ಗಾಭಾರಿಯಾಗಿರುವೆ ತಾಯಿ ?ತಗೋ ನೀರು (ಒಂದು ತಂಬಿಗೆ ನೀರು ಕೊಡುವರು ಅದನ್ನು ಹಿಡಿದುಕೊಂಡು ಓಡುತ್ತಾಳೆ ತಂಗಿ )
ಬಾವಾ ಅಕ್ಕಾ ನಾನು ನೀರು ತಂದೇ ಭಾವಾ ನೀರು ಕುಡಿಯಿರಿ .(.ಮೂವರು ಹೆಣವಾಗಿ ಬಿದ್ದಿರುವುದು ಕಾಣಿಸುತ್ತದೆ)
ಭಾವಾ ಅಕ್ಕಾ ಏಳಿ ಏಳಿ ಅಮ್ಮ ಏಳು ಅಮ್ಮ ನೀರು ತಂದಿದ್ದೇನೆ ಏಳಿ ..(ಎಲ್ಲರನ್ನು ಅಲುಗಾಡಿಸಿ ನೀರು ಹಾಕಿ ಎಬ್ಬಿಸಲು ಯತ್ನಿಸುತ್ತಾಳೆ ಎಲ್ಲ ಪ್ರಾಣ ಹೋಗಿರುವುದು ಅವಳಿಗೆ ಮನವರಿಕೆಯಾಗುತ್ತದೆ )
ಅಯ್ಯೋ ದೇವರೇ !ಏನಾಗಿ ಹೋಯಿತು ?ನಗು ನಗುತ್ತಾ ಹೊರಟ ಅಕ್ಕ ಭಾವ ಇನ್ನಿಲ್ಲ ಹೊತ್ತು ಹೆತ್ತು ಸಾಕಿದ ಅಮ್ಮನೂ ಹೋಗಿ ಬಿಟ್ಟಳು .ಇವರೆಲ್ಲರ ಸಾವಿಗೆ ನಾನು ಕಾರಣನಾದೆನೆ ದೇವರೇ !ನಾನೇಕೆ ಇನ್ನು ಬದುಕಲಿ ?ಅಯ್ಯೋ ನನ್ನ ಎದೆ ಏಕೆ ಒದೆಯುತ್ತಿಲ್ಲ ?ನನಗೇಕೆ ಸಾವು ಬರುತ್ತಿಲ್ಲ ದೇವರೇ ?ಏನು ಮಾಡಲಿ ಏನು ಮಾಡಲಿ ..ಓ ಅಲ್ಲಿ ಬೆಟ್ಟದ ಮೇಲೆ  ಎತ್ತರದ ಕಲ್ಲನ್ನು ಏರಿ ಪ್ರಾಣ ಬಿಡುತ್ತೇನೆ ..
ಗುರೂಜಿ : ಯಾರೀ ಹೆಣ್ಣು ಮಗಳು ತುಂಬಾ ಭಯದಿಂದ ನೀರು ತೆಗೆದು ಕೊಂಡು ಓದಿದಳಲ್ಲ ?ಎತ್ತ ಹೋಯಿತು ಈ ಮಗು ?ಹಿಂದಿನಿದ ಎಷ್ಟೇ ವೇಗವಾಗಿ ಬಂದರೂ ಕಣ್ಣಿಗೆ ಕಾಣಿಸದಷ್ಟು ಬೇಗನೆ ಓಡಿ ಹೋದಳಲ್ಲ ಎಲ್ಲಿ ಹೋದಳು ?(ಹುಡುಕುತ್ತಾ ಬರುವಾಗ ಅವಳ ಅಳು ಕೇಳಿಸುತ್ತದೆ ಜೊತೆಗೆ ಮೂವರು ಹೆಣವಾಗಿ ಬಿದ್ದಿರುವುದು ಕಾಣಿಸುತ್ತದೆ ) ಓ ಅರ್ಥವಾಯಿತು ವಿಧಿಯನ್ನು ಮೀರಲು ಯಾರಿಗೂ ಸಾಧ್ಯವಿಲ್ಲ ಎಲ್ಲ  ದೈವೇಚ್ಛೆ   !ಆ ಹೆಣ್ಣು ಮಗಳು ಎಲ್ಲಿದ್ದಾಳೆ ಕಾಣಿಸುತ್ತಾ ಇಲ್ಲಲ್ಲ ..ಓ ಅಲ್ಲಿ ಕಲ್ಲು ಏರಿ ನಿಂತು ಹಾರಲು ತಯಾರಾಗಿದ್ದಾಳೆ ..
ತಂಗಿ :ಇಗೋ ಅಕ್ಕ ಬಾವಾ ಅಮ್ಮಾ ನಾನು ಬಂದೆ ..(ಹಾರಲು ಸಜ್ಜಾಗುತ್ತಾಳೆ copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ )
ಗುರೂಜಿ : (ದೂರದಿಂದಲೇ ) ನಿಲ್ಲು ಮಗಳೇ ಒಂದು ಕ್ಷಣ ನಿಲ್ಲು ದುಡುಕಬೇಡ ..ನಾನು ಬಂದೇ ..ಒಂದು ಕ್ಷಣ ನಿಲ್ಲು ..
ತಂಗಿ:ಯಾರದು ನನ್ನನ್ನು ಮಗಳು ಎಂದು ಕರೆಯುತ್ತಿರುವುದು ?ಹುಟ್ಟಿ ಕಣ್ಣು ಬಿಡುವ ಮೊದಲೇ ತಂದೆಯನ್ನು ಕಳೆದುಕೊಂಡ ನತದೃಷ್ಟೆ ನಾನು !ನನ್ನನ್ನು ಯಾರು ಮಗಳು ಎಂದು ಕರೆದಿರುವುದು ?ಯಾರದರಾಗಲಿ ನನಗೇನು ?ಸಾಯಲು ಹೊರಟ ನನಗೇಕೆ ಬೇರೆ ವಿಚಾರ ..ಇದೋ ನಾನು ಹಾರಿ ಸಾಯುತ್ತೇನೆ ..(ಹಾರುವಷ್ಟರಲ್ಲಿ ಗುರೂಜಿ ತಡೆದು ನಿಲ್ಲಿಸುತ್ತಾರೆ )
ಗುರೂಜಿ:ನಿಲ್ಲಮ್ಮ ನಿಲ್ಲು ದುಡುಕ ಬೇಡ,ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ ..
ತಂಗಿ :ನನ್ನನ್ನು ತಡೆಯ ಬೇಡಿ ಸ್ವಾಮಿ ,ನಾನು ಇವರೆಲ್ಲರ ಸಾವಿಗೆ ಕಾರಣಳಾದೆ ,ನಾನಿನ್ನು ಬದುಕಲಾರೆ ,ನಾನು ಏಕೆ ಬದುಕಲಿ ಯಾರಿಗಾಗಿ ಬದುಕಲಿ ?ಹೇಗೆ ಬದುಕಲಿ ?ನನಗೆ ಯಾರೂ ಇಲ್ಲ ?!ನನ್ನನ್ನು ತಡೆಯ ಬೇಡಿ ,,ನಿಮ್ಮ ದಮ್ಮಯ್ಯ .
ಗುರೂಜಿ :ಹುಟ್ಟು ಸಾವು ಭಗವಂತನ ಇಚ್ಚೆಯಮ್ಮಾ ತಾಯಿ .ನಿನಗೆ ನಾನಿದ್ದೇನೆ ,ಜಗತ್ತಿನ ಎಲ್ಲರನ್ನೂ ಕಾಯುವ ಭಗವಂತ ಇದ್ದಾನೆ ,ತಾಳು ಮಗುವೇ ತಾಳು
ಹಾಡು :
ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ||
ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯ ಕಟ್ಟಿ ನೀರೆರೆದವರು ಯಾರೋ
 ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗತಿಯಾಗಿ ಸಲಹುವನು ಇದಕೆ ಸಂಶಯವಿಲ್ಲ ||

ಅಡವಿಯೊಳಗಾಡುವ ಮೃಗ ಪಕ್ಷಿಗಗಳಿಗೆಲ್ಲ
ಆಹಾರವಿತ್ತವರು ಯಾರೋ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗಾರನಾಗಿ
 ಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ||

ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪಗಳಿಗೆಲ್ಲ
ಅಲ್ಲಲ್ಲಿಗಾಹಾರ ತಂದೀವರಾರೂ
ಬಲ್ಲಿದನು ಕಾಗಿನೆಲೆಯಾದಿ ಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ||



 (ಹಾಡು ಮುಗಿಯುತ್ತಲೇ ಶಾಂತಳಾದ ತಂಗಿ ಮತ್ತು ಗುರೂಜಿ ಕೈ ಮುಗಿದು ಭಗವಂತನನ್ನು ನೆನೆದು ಭಕ್ತಿಯಿಂದ ಕೈ ಮುಗಿಯುತ್ತಾರೆ.)
ಗುರೂಜಿ: ಕೇಳಿದೆಯ ತಾಯಿ.ಇಲ್ಲಿ ನಾವು ನಿಮಿತ್ತ ಮಾತ್ರ ಎಲ್ಲವನ್ನು ಮಾಡುವವನು ಆ ಭಗವಂತ .ಯಾರಿಗೆ ಏನು ಬೇಕು ಅಂತ ಅವನಿಗೆ ಚೆನ್ನಾಗಿ ತಿಳಿದಿದೆ.ಕಲ್ಲು ಬಂಡೆ ಒಳಗಿನ ಕಪ್ಪೆಗೂ ಆತ ಆಹಾರ ಕೊಡುತ್ತಾನೆ .ಬೆಟ್ಟದ ಮೇಲಿನ ಗಿಡಕ್ಕೂ ನೀರು ಕೊಡುತ್ತಾನೆ .ನಿನ್ನಿಂದ ಒಂದು ಮಹತ್ ಕಾರ್ಯ ಆಗಬೇಕಿದೆ.ಹಾಗಾಗಿಯೇ ನಿನ್ನನ್ನು ಇಲ್ಲಿ ತಂದು ನಿಲ್ಲಿಸಿದ್ದಾನೆ ತಾಯಿ
ತಂಗಿ : (ಶಾಂತಳಾಗಿ )ಮಹತ್ ಕಾರ್ಯ ..ನನ್ನಿಂದಲೇ ಗುರುದೇವ ?ಏನದು ?ಅಮ್ಮ ಅಕ್ಕ ಭಾವನನ್ನು ಕಳೆದುಕೊಂಡ ದುರ್ದೈವಿ  ನಾನು ಅಬಲೆ ಹೆಣ್ಣು  ನಾನು ?ನನ್ನಿಂದ ಏನು ತಾನೇ ಮಾಡಲು ಸಾಧ್ಯ ?
ಗುರೂಜಿ : ದೇವನೊಲಿದರೆ ಕೊರಡು ಕೊನರುವುದು,ಅವನೊಲಿದರೆ ಕುಂಟನು ಪರ್ವತವನ್ನು ಹಾರುವನು ,ಮೂಕನೂ ಮಾತಾಡುವನು ಎಂದು ತಿಳಿದಿರುವೆಯಲ್ಲ ನೀನು.ಈ ಕಣಿವೆ ಯಲ್ಲಿ ಅದೆಷ್ಟೋ ಜೀವಗಳು ನೀರಿಲ್ಲದೆ ಹಾರಿ ಹೋಗಿವೆ ತಾಯೆ ?ಅದೆಷ್ಟೋ ಕಂದಮ್ಮಗಳ ತಾಯಂದಿರು ,ಹೆಣ್ಣು ಮಕ್ಕಳು ,ಅವರ ಗಂಡ ,ಮಕ್ಕಳು ನೀರಿಲ್ಲದೆ ಸಾಯುತ್ತಿದ್ದಾರೆ ತಾಯಿ
ಈ ಬರಡು ಬೆಟ್ಟವನ್ನು ಹಸಿರಾಗಿಸ ಬೇಕು ,ಇಲ್ಲಿ ಎಲ್ಲೆಡೆ ನೀರು ಸಿಗುವಂತೆ ಮಾಡ ಬೇಕು ತಾಯಿ ,ಇನ್ನು ಮುಂದೆ ನಿನ್ನ ಭಾವನಂತೆ ನೀರಿಲ್ಲದೆ ಸಾಯ ಬಾರದು ತಾಯಿ .ಈ ಕಣಿವೆಯ ಅಲ್ಲಲ್ಲಿ ನೀರು ಸಿಗುವಂತೆ ಮಾಡಬೇಕು ತಾಯಿ ,ಆ ಮಹತ್ ಕಾರ್ಯ ನಿನ್ನಿಂದ ಆಗ ಬೇಕು ಎಂಬುದು ಭಗವತ್ ಸಂಕಲ್ಪ ಮಗಳೇ
ತಂಗಿ :ಅದು ನನ್ನಿಂದ ಸಾಧ್ಯವೇ ಗುರೂಜಿ ?
ಗುರೂಜಿ :ಖಂಡಿತಾ ಸಾಧ್ಯವಮ್ಮ ತಾಯಿ.ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಬರುತ್ತದೆ .ಅದಕ್ಕೆ ಮೊದಲೇ ಇಲ್ಲಿ ಎಲ್ಲೆಡೆ ಇಂಗು ಗುಂಡಿಗಳನ್ನು ನಿರ್ಮಿಸೋಣ,ಗಿಡ ಮರಗಳ ಬೀಜ ಬಿತ್ತನೆಗೆ ಸಿದ್ಧತೆ ಮಾಡೋಣ,ಇಲ್ಲಿ ಅಲ್ಲಲ್ಲಿ ನೀರು ಸಂಗ್ರಾಹಕ ಹಳ್ಳಗಳನ್ನು ನಿರ್ಮಿಸೋಣ ,ಮಳೆ ಬರುತ್ತಲೇ ಓಡುವ ನೀರನ್ನು ಇಲ್ಲಿ ತುಂಬಿಸೋಣ ,ಹರಿಯುವ ನೀರನ್ನು ಸಂಗ್ರಹಿಸೋಣ ,ನಿಂತ ನೀರನ್ನು ಇಂಗಿಸೋಣ ,ಗಿಡ ಮರ ಬೆಳೆಸೋಣ ಹಸಿರು ಉಳಿಸೋಣ
ತಂಗಿ :ಇದೆಲ್ಲ ನಮ್ಮಿಂದ ಸಾಧ್ಯವೇ ಗುರೂಜಿ ?
ಗುರೂಜಿ :ಖಂಡಿತಾ ಆಗುತ್ತಮ್ಮ,ನೀನು ದೃಢ ನಿರ್ಧಾರದಿಂದ ಆರಂಬಿಸು,ಜನ ಸುರುವಿಗೆ ಕುಹಕದಿಂದ ನೋಡುತ್ತಾರೆ,ನಂತರ ಕುತೂಹಲದಿಂದ ನೋಡುತ್ತಾರೆ.ಕ್ರಮೇಣ ಒಳ್ಳೆ ಕಾರ್ಯಕ್ಕೆ ಕೈ ಜೋಡಿಸುತ್ತಾರೆ ತಾಯಿ
ಆಮಂತ್ರಮಕ್ಷರಮ್ ನಾಸ್ತಿ ನಾಸ್ತಿ ಮೂಲಮನೌಷಧಮ್ |
ಅಯೋಗ್ಯೋ ಪುರುಷಃ ನಾಸ್ತಿ ಯೋಜಕಸ್ತತ್ರ ದುರ್ಲಭಃ ||
ಎಂಬ ಮಾತು ನೀನು ಕೇಳಿಲ್ಲವೇ ತಾಯಿ
ತಂಗಿ :ಹಾಗೆಂದರೆ ಏನು ಗುರು ದೇವ ?
ಮಂತ್ರವಲ್ಲದ ಅಕ್ಷರ ಇಲ್ಲ ಎಂದರೆ ಔಷಧವಲ್ಲದ ಗಿಡ ಇಲ್ಲ ಅಂದರೆ ಎಲ್ಲ ಗಿಡಗಳಲ್ಲೂ ಒಂದೊಂದು ಗುಣ ಇದೆ,ಅಯೋಗ್ಯರಾದ ಮನುಷ್ಯರು ಇಲ್ಲ ಅರ್ಥಾತ್ ಎಲ್ಲರೂ ಯೋಗ್ಯರೇ ,ಆದರೆ ಇವೆಲ್ಲವನ್ನೂ ಸರಿಯಾಗಿ ಹೊಂದಾಣಿಕೆ ಮಾಡುವ ನಿಯೋಜಕರು ದುರ್ಲಭರು ಎಂದು ಇಲ್ಲಿ ಹೇಳಿದೆ .ನೀನು ಅಂಥಹ ಯೋಜಕಿ ಆದರೆ ಸಾಕು ಮುಂದೆ ಎಲ್ಲವೂ ತನ್ನಿಂತಾನಾಗಿಯೇ ಆಗುತ್ತದೆ ,ದೇವರ ಮೇಲೆ ವಿಶ್ವಾಸವನ್ನಿಟ್ಟು ಮುನ್ನಡೆ ತಾಯಿ ನಾನು ಸದಾ ನಿನ್ನ ಮಹತ್ ಕಾರ್ಯಕ್ಕೆ ಕೈ ಜೋಡಿಸುತ್ತೇನೆ ,copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ತಂಗಿ : ಆಗಲಿ ಗುರುದೇವ ,ನೀವು ಹೇಳಿದಂತೆ ಮಾಡುತ್ತೇನೆ ,ಇನ್ನು ಮುಂದೆ ಒಂದೇ ಒಂದು ಪಶು ಪಕ್ಷಿ ಮನುಷ್ಯ ಯಾರೂ ಕೂಡಾ ನೀರಿಲ್ಲದೆ ಸಾಯುವಂತೆ ಆಗುವುದು ಬೇಡ ,ನನ್ನನ್ನು ಅಶೀರ್ವದಿಸಿ ನನ್ನನ್ನು
ಗುರೂಜಿ : ಎಲ್ಲ ಭಗವಂತನ ಇಚ್ಚೆಯಂತೆ ಆಗಲಿ ತಾಯಿ
ಹಾಡು ;
ಮುಂದಾದುದನು ತಿಳಿಯ ಬೇಕೇ ಗೆಳೆಯರೇ
ನಿಮಗೆ ಅರಿಯಬೇಕೆ ?ಹೇಳುತ್ತೇನೆ ಕೇಳಿರಿ
ಇಲ್ಲಿ ಬರಡು ಭೂಮಿ ಹಸನಾಯಿತು
ಎಲ್ಲೆಲ್ಲು ಹಸಿರೇ ಉಸಿರಾಯಿತು
ಕೋಗಿಲೆ ನವಿಲುಗಳು ಹಾಡಿ ಕುಣಿದವು
ಹಸು ಜಿಂಕೆಗಳು ಹುಲ್ಲು ಮೇದು ಕುಣಿದವು
ಆನೆ ಕೋತಿ ಮೊಲ ಕುರಿಗಳೆಲ್ಲ
ನೀರಾಟವಾಡಿ ನಲಿದವು
ಎಲ್ಲಿ ನೋಡಿದರಲ್ಲಿ ಹಸಿರು ಹಣ್ಣು
ನೀರು ನಮಗೆ ಇಲ್ಲಿ ಹೊನ್ನು .
 ಇದುವೆ ಹೊಸ ನಂದನವನ
ಕಣಿವಗೊಂದು ಹೆಸರು ಬಂತು
ನೀರಕ್ಕನ ಕಣಿವೆಗೆ ನೀರು ಬಂತು
ನೋಡ ಬನ್ನಿ ನಮ್ಮ ನೀರಕ್ಕನ
ನೀರಕ್ಕನ ಮನೆ ಕಣಿವೆಯ ನೋಡಿ ತಣಿ ಯಿರಿ
ನೀರಕ್ಕ ನಿಮಗೆ ನೀರು ಕೊಡುವಳು 
ನೀರು ಕುಡಿದು ಸಂತಸವ ಪಡೆಯಿರಿ ..
ಮುಂದಾದುದನು ತಿಳಿಯ ಬೇಕೇ ಗೆಳೆಯರೇ
ನಿಮಗೆ ಅರಿಯಬೇಕೆ ?ಹೇಳುತ್ತೇನೆ ಕೇಳಿರಿ
                 ದೃಶ್ಯ -4
( ರಾಮಣ್ಣ ,ಸೂರಪ್ಪಜ್ಜ  ಮೊದಲಾದವರ ಪ್ರವೇಶ )
ಸೂರಪ್ಪಜ್ಜ :ನೋಡಿ ಇಲ್ಲೆ ನೀರಿನ ಹಳ್ಳ ಇದೆ ,ನೀರು ಕುಡಿಯಿರಿ ..ಓ ಅಲ್ಲಿ ನೋಡಿ ಅದೇ ನೀರಕ್ಕನ ಮನೆ ..ನಮ್ಮ ದೇವರ ಗುಡಿ ಅದು..ಓ ಅಲ್ಲಿ ಕೋಲು  ಊರಿಕೊಂಡು ಏನೋ ಕೆಲಸ ಮಾಡುತ್ತಿದ್ದಾಳಲ್ಲ ಅವಳೇ ನಮ್ಮ ಗ್ರಾಮದ ದೇವರು ನೀರಕ್ಕ ನೋಡಿ ಅಲ್ಲಿ ..
(ದೂರದಲ್ಲಿ ಬಿಳಿಯ ಶುಭ್ರ  ಬಟ್ಟೆ ಉಟ್ಟ ವೃದ್ಧೆ ನೀರಕ್ಕ ನೀರು ಹಂಚುವ ಕಾರ್ಯ ಮಾಡುತ್ತಿರುವುದನ್ನು ನೋಡಿ ಎಲ್ಲರೂ ಕೈ ಮುಗಿಯುತ್ತಾರೆ )
                                     .....ಶುಭಂ .....
 ಪ್ರೇರಣೆ :ಮದಲಿಂಗನ ಕಣಿವೆ ಕಥನ ಕಾವ್ಯ -ಮಾಸ್ತಿ ವೆಂಕಟೇಶ ಅಯ್ಯಂಗಾರ್



 copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ 
ಕನ್ನಡ ಉಪನ್ಯಾಸಕರು 
ಸರ್ಕಾರಿ ಪದವಿ ಪೂರ್ವ ಕಾಲೇಜ್ ನೆಲಮಂಗಲ 
ಬೆಂಗಳೂರು ಗ್ರಾಮಾಂತರ ಜಿಲ್ಲೆ









3 comments:

  1. Super ಅರ್ಥಗರ್ಭಿತವಾಗಿದೆ..

    ReplyDelete
  2. ಓದಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

    ReplyDelete
  3. ಅದ್ಭುತ ಕಥಾನಕ..ಅರ್ಥಪೂರ್ಣ ನಾಟಕ...ಶಾಲೆಗಳಲ್ಲಿ ಮಕ್ಕಳಿಂದ ಅತ್ಯಂತ ಮನೋಜ್ಞವಾಗಿ ಆಡಿಸಬಹುದು

    ReplyDelete