Saturday 20 February 2016

ಅಸಾಮಾನ್ಯರ ಕುರಿತಾದ ಅಲೌಕಿಕ ಸಂಕಥನಗಳು (c)ಡಾ.ಲಕ್ಷ್ಮೀ ಜಿ ಪ್ರಸಾದ

 

ಆಗ ಇದ್ದ ರಾಮನಲ್ಲಿ ಮಹಾಕಾವ್ಯದ ನಾಯಕನಾಗುವ ಎಲ್ಲ ಲಕ್ಷಣಗಳು ಇದ್ದ ಕಾರಣವೇ ವಾಲ್ಮೀಕಿ ಮಹರ್ಷಿಗಳು ಆತನ ಕಥಾನಕವನ್ನೇ ಮಹಾ ಕಾವ್ಯವಾಗಿಸುತ್ತಾರೆ. ಹಾಗಾಗಿ ಅಯೋಧ್ಯೆಯ ಅರಸ ರಾಮನಲ್ಲಿ ಉದಾತ್ತ ಗುಣಗಳು ಇದ್ದಿರಲೇ ಬೇಕು. ಹಾಗಾಗಿಯೇ ಆತ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ. ಹಾಗಿರುವಾಗ ರಾಮನ ಬಗ್ಗೆ ಇಂಥಹ ಒಡಕು ಮಾತುಗಳೇಕೆ ?
ರಾಮನಿಗೆ ತನ್ನ ಗಂಡಸ್ತನ ಬಗ್ಗೆ ಅನುಮಾನವಿತ್ತು ಹಾಗಾಗಿಯೇ ಆತ ಎರಡು ಮಕ್ಕಳಾದ ನಂತರವೂ ಸೀತೆಯನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಿದ್ದಾನೆ ಎಂದು ವಿಚಾರವಾದಿಯೊಬ್ಬರು ಹೇಳಿದ ಬಗ್ಗೆ ಪತ್ರಿಕೆಯಲ್ಲಿ ಓದಿದೆ. ಅದೇ ರೀತಿ ರಾಮ ಸೇತುವೆಯ ವಾಸ್ತವಿಕತೆ ಬಗ್ಗೆ ಮಾತಾಡುತ್ತಾ ಯಾವ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ರಾಮ ಓದಿದ್ದ? ಎಂದು ಯಾರೋ ಪ್ರಶ್ನಿಸಿದ ಬಗ್ಗೆ ಈ ಹಿಂದೆ ಓದಿದ್ದಾ. ಸಾವಿರ ವರ್ಷಕ್ಕಿಂತಲೂ ಪ್ರಾಚೀನ ಭವ್ಯ ದೇವಾಲಯಗಳನ್ನು ಹೊಂದಿರುವ ನಮ್ಮ ದೇಶ ವಾಸಿಗಳಿಗೆ ಆಗಿನ ಕಾಲಕ್ಕೆ ಇಂಜಿನಿಯರಿಂಗ್ ಕಾಲೇಜ್ ಗಳು ಇಲ್ಲದಿದ್ದರೂ ಕೌಶಲ್ಯ ಸಿದ್ಧಿ ಇತ್ತು ಎಂಬುದು ಅರಿಯದ ವಿಚಾರವೇನಲ್ಲ .ಹಾಗಿರುವಾಗ ರಾಮ ಸೇತುವೆ ವಾಸ್ತವಾಗಿ ಇದ್ದಿದ್ದರೂ ರಾಮನೇನೂ ಇಂಜಿನಿಯರಿಂಗ್ ಓದಿಯೇ ಸೇತುವೆ ಕಟ್ಟಬೇಕಿರಲಿಲ್ಲ.
ಇಷ್ಟಕ್ಕೂ ಕಟ್ಟಿಸಿದಾತನಿಗೆ ಕಟ್ಟುವ ಕೌಶಲ್ಯವೇಕೆ ಬೇಕು?ರಾಮ ದಶರಥನ ಮಗನಲ್ಲ ಎಂದು ಹೇಳುತ್ತಾ ದಶರಥ ಪುತ್ರ ಕಾಮೇಷ್ಟಿ ಯಾಗ ಮಾಡಿದಾಗ ಅಗ್ನಿದೇವ ಒಂದು ಪಾಯಸವನ್ನು ಕೊಡುತ್ತಾನೆ ಅದನ್ನು ಕುಡಿದ ಕೌಸಲ್ಯೆ, ಸುಮಿತ್ರೆ, ಕೈಕೇಯಿಯರು ಗರ್ಭ ಧರಿಸಿ ರಾಮ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಜನ ಕೊಡುತ್ತಾರೆ ಆದ್ದರಿಂದ ಅವರು ದಶರಥನ ಮಕ್ಕಳಲ್ಲ ಎಂದು ವಿತಂಡವಾದ ಮಾಡಿ ಬರೆದಿದ್ದ ಲೇಖನವನ್ನೂ ಈಗ್ಗೆ ಕೆಲವು ತಿಂಗಳ ಹಿಂದೆ ಓದಿದ್ದಾ .ನಾವು ದೇವರು ಎಂದು ಭಾವಿಸಿರುವ ವ್ಯಕ್ತಿ /ಶಕ್ತಿಗಳ ಬಗ್ಗೆ ವಿಶಿಷ್ಟ ಪರಿಕಲ್ಪನೆಗಳು ಸಾಮಾನ್ಯ. ಅದಕ್ಕೆ ಪ್ರಕಲ್ಪನೆಗಳನ್ನು ಹುಟ್ಟಿಕೊಳ್ಳುತ್ತವೆ.ವಾಲ್ಮೀಕಿ ಎಂಬ ಒಬ್ಬ ಸಂತ ಈ ಹಿಂದೆ ಇದ್ದಾತ ಎಂದು ಒಪ್ಪುವುದಾದರೆ ರಾಮ ಕೂಡ ಇದ್ದಾತನೇ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ತನ್ನ ರಾಮಾಯಣ ಕಾವ್ಯದಲ್ಲಿನ ಸಾಂಪ್ರತಂ ಲೋಕೇ ಎನ್ನುವುದರ ಮೂಲಕ ರಾಮ ಆ ಕಾಲದಲ್ಲಿ ಇದ್ದ ಎಂದು ಸೂಚಿಸಿದ್ದಾರೆ .
ಆಗ ಇದ್ದ ರಾಮನಲ್ಲಿ ಮಹಾಕಾವ್ಯದ ನಾಯಕನಾಗುವ ಎಲ್ಲ ಲಕ್ಷಣಗಳು ಇದ್ದ ಕಾರಣವೇ ವಾಲ್ಮೀಕಿ ಮಹರ್ಷಿಗಳು ಆತನ ಕಥಾನಕವನ್ನೇ ಮಹಾ ಕಾವ್ಯವಾಗಿಸುತ್ತಾರೆ. ಹಾಗಾಗಿ ಅಯೋಧ್ಯೆಯ ಅರಸ ರಾಮನಲ್ಲಿ ಉದಾತ್ತ ಗುಣಗಳು ಇದ್ದಿರಲೇ ಬೇಕು. ಹಾಗಾಗಿಯೇ ಆತ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ. ಹಾಗಿರುವಾಗ ರಾಮನ ಬಗ್ಗೆ ಇಂಥಹ ಒಡಕು ಮಾತುಗಳೇಕೆ ?ಇನ್ನು ಕಾವ್ಯ ಎಂಬುದು ನೇರವಾಗಿ ಇದ್ದದ್ದನ್ನು ಇದ್ದ ಹಾಗೆ ಬರೆಯುವ ಆತ್ಮ ಕಥೆ ಅಥವಾ ಜೀವನ ಚರಿತ್ರೆಯಲ್ಲ. ಹಾಗಾಗಿ ಅಲ್ಲಲ್ಲಿ ವೈಭವೀಕರಣ ಸಹಜ. ತಮ್ಮ ಆರಾಧ್ಯ ದೈವಗಳ ಹುಟ್ಟಿನ ಕುರಿತಾಗಿಯೂ ಅತಿಮಾನುಷ ಕಲ್ಪನೆಯನ್ನು ಬಿಂಬಿಸಿರುವುದನ್ನು ನಾವು ಅನೇಕ ಜನಪದ ಕಾವ್ಯಗಳಲ್ಲಿ ನೋಡಿರುತ್ತೇವೆ. ಮಂಟೆ ಸ್ವಾಮಿಯು ಮುತ್ತಿನ ಕೆರೆಯಲ್ಲಿ ಬಿಳಿಯ ತಾವರೆ ಹೂವಾಗಿ ಹುಟ್ಟಿದ ಬಗ್ಗೆ ಧರೆಗೆ ದೊಡ್ಡವರು ಜನಪದ ಮಹಾ ಕಾವ್ಯದ ಕೆಲವು ಪಾಠಗಳಲ್ಲಿ ವಿವರಣೆ ಇದೆ. ಬಸ್ತರ್‌ನ ಬುಡಕಟ್ಟು ಜನಾಂಗಗಳ ಆರಾಧ್ಯ ದೈವತ ಲಿಂಗೋ ಪೇನ್ ಕುರಿತೂ ಒಂದು ಅಲೌಕಿಕ ಹುಟ್ಟಿನ ಕಥೆಯಿದೆ. ಬಸ್ತರ್‌ನ ಅರಸ ಅರಸಿಯರಿಗೆ ಮಕ್ಕಳಿರುವುದಿಲ್ಲ. ಒಂದು ದಿನ ರಾತ್ರಿ ಅವರಿಗೆ ಮಕ್ಕಳು ಅಳುವ ಸದ್ದು ಕೇಳಿಸುತ್ತದೆ ಅದನ್ನು ಹಿಂಬಾಲಿಸಿ ಹೋದಾಗ ಒಂದು ಸರ್ಪ ಏಳು ಮಕ್ಕಳಿಗೆ ಜನ್ಮ ಕೊಟ್ಟದ್ದು ತಿಳಿಯುತ್ತದೆ.
ಆ ಸರ್ಪವನ್ನು ಬೇಡಿ ಏಳು ಮಕ್ಕಳನ್ನು ತಂದು ರಾಜ ರಾಣಿ ಸಾಕುತ್ತಾರೆ ಅದರಲ್ಲಿ ಕೊನೆಯವನೇ ಲಿಂಗೋ. ಅಸಾಧಾರಣ ಅತಿಮಾನುಷ ಶಕ್ತಿಗಳನ್ನು ಹೊಂದಿದ್ದ ಆತ ಏಕ ಕಾಲಕ್ಕೆ ಹತ್ತು ವಾದ್ಯಗಳನ್ನು ನುಡಿಸಬಲ್ಲವಾನಾಗಿದ್ದ. ಬಸ್ತರ್ ಸಂಗೀತದಜನಕ. ಹಾಗಾಗಿಯೇ ಆತ ಅಲ್ಲಿ ದೈವಿಕ ನೆಲೆಯಲ್ಲಿ ಆರಾಧಿಸಲ್ಪಡುತ್ತಾನೆ. ಪೇನ್ ಎಂದರೆ ಹಲ್ಬಿ ಭಾಷೆಯಲ್ಲಿ ದೇವರು ಎಂದರ್ಥ. ಅತ ಅಲ್ಲಿ ಲಿಂಗೋ ಪೇನ್ ಎಂದೇ ಕರೆಯಲ್ಪಡುತ್ತಾನೆ ತುಳುನಾಡಿನ ಸತ್ಯನಾಪುರದ ಸಿರಿ ಪಾಡ್ದನ (ತುಳು ಜನಪದ ಮಹಾ ಕಾವ್ಯ)ದಲ್ಲಿ ಕಥಾ ನಾಯಕಿ ಸಿರಿಯ ಹುಟ್ಟಿನ ಬಗ್ಗೆ ಅಲೌಕಿಕ ಪರಿಕಲ್ಪನೆ ಇದೆ.
ಸತ್ಯನಾಪುರದ ವೃದ್ಧ ಅರಸ ಬೆರ್ಮಾಳ್ವನ ಮಡದಿ ಮರಣಿಸಿರುತ್ತಾಳೆ. ಸಂತತಿ ಇಲ್ಲದ ಬೆರ್ಮಾಳ್ವ ಅರಮನೆಗೆ ದಿಕ್ಕಿಲ್ಲದಂತೆ ಆಯಿತು ಎಂದು ದುಃಖಿಸಿ ಕಣ್ಣೀರು ಸುರಿಸಿದಾಗ ಅದು ಬೆರ್ಮೆರ್(ತುಳುನಾಡಿನ ಅದಿದೈವ) ಪಾದಕ್ಕೆ ಸಂಪಿಗೆ ಹೂವಾಗಿ ಬಂದು ಬೀಳುತ್ತದೆ. ಆಗ ಅವನ ಮೇಲೆ ದಯೆ ಬೀರಿದ ಬೆರ್ಮೆರ್ ಬ್ರಾಹ್ಮಣನ ರೂಪದಲ್ಲಿ ಬಂದು ಲಂಕೆ ಲೋಕನಾಡು ಅಲಡೆಯನ್ನು ಜೀರ್ಣೋದ್ಧಾರ ಮಾಡು ಎಂದು ಸಲಹೆ ಕೊಡುತ್ತಾನೆ. ಬೆರ್ಮಾಳ್ವ ಅಲ್ಲಿ ಬೆರ್ಮರಿಗೆ ಗುಂಡ ಕಟ್ಟಿಸಿ ಆರಾಧಿಸುತ್ತಾನೆ. ಅಲ್ಲಿನ ಅರ್ಚಕ ಆತನಿಗೆ ಒಂದು ಗಂಧದಗುಳಿಗೆಯನ್ನು ಹಿಂಗಾರದ ಹಾಳೆಯಲ್ಲಿ ಇತ್ತು ಕೊಡುತ್ತಾನೆ. ಬೆರ್ಮಾಳ್ವ ಅದನ್ನು ಸೆರಗಿನಲ್ಲಿ ಕಟ್ಟಿಕೊಂಡು ದೇವರ ಕೋಣೆಯಲ್ಲಿ ಇಡುತ್ತಾನೆ. ಅದು ಅಲ್ಲಿ ಒಂದು ಮಗುವಾಗಿ ಅಳುತ್ತದೆ.
ಮಗು ಏಳು ಏಳುವರೆ ವರ್ಷ ಪ್ರಾಯದ ಮಗುವಾಗಿ ಶೋಭಿಸುತ್ತದೆ ಇತ್ಯಾದಿ ಕಥಾನಕವಿದೆ. ಜನಪದ ಕವಿಗಳೇ ತಮ್ಮ ಆರಾಧ್ಯ ಶಕ್ತಿಗಳ ಕುರಿತು ನಾನಾ ವಿಧವಾದ ಅಲೌಕಿಕ ಪರಿಕಲ್ಪನೆಗಳನ್ನು ತಮ್ಮ ಕಾವ್ಯಗಳಲ್ಲಿ ಪೋಣಿಸಿದ್ದಾರೆ. ಹಾಗಿರುವಾಗ ಶಿಷ್ಟ ಕವಿಗಳು ಕೂಡ ಅತಿಮಾನುಷ ವಿಚಾರಗಳನ್ನು ನೇಯ್ದಿರುವುದಲ್ಲಿ ವಿಶೇಷ ಏನಿದೆ ?ಹಾಗಾಗಿಯೇ ಸೀತೆಯ ಪಾತಿವ್ರತ್ಯ ಹಾಗೂ ಅತಿಮಾನುಷತೆಯ ಪ್ರತಿಪಾದನೆಗಾಗಿ ಅಗ್ನಿ ಪರೀಕ್ಷೆಯ ಕಥಾ ಭಾಗ ಸೇರಿರಬಹುದು. ರಾಮನ ಹುಟ್ಟಿನ ಅಲೌಕಿಕತೆಯ ಸಲುವಾಗಿ ಪುತ್ರ ಕಾಮೇಷ್ಟಿ ಯಾಗ, ಅಗ್ನಿದೇವ ನೀಡಿದ ಪಾಯಸದ ಕಥಾನಕವಿರಬಹುದು. ಅಥವಾ ವೈದ್ಯರ ಚಿಕಿತ್ಸೆಯ ನಂತರ ಮಕ್ಕಳು ಹುಟ್ಟಿರುವ ವೃತ್ತಾಂತವೇ ಕಾವ್ಯದಲ್ಲಿ ಈ ರೀತಿಯಾಗಿ ಮೂಡಿಬಂದಿರಬಹುದು. ಎಲ್ಲ ಜಾತಿ ಧರ್ಮ ಮತಗಳ ದೇವರುಗಳ ಬಗ್ಗೆಯೂ ಈ ರೀತಿಯ ಅತಿಮಾನುಷ ಕಲ್ಪನೆಗಳು, ದಂತ ಕಥೆಗಳು ಹುಟ್ಟಿಕೊಂಡಿರುತ್ತವೆ.
ಏಸುವಿನ ಜನನಕ್ಕೆ ಸಂಬಂಧಿಸಿದಂತೆ ಇಂಥ ಒಂದು ಅಲೌಕಿಕ ಹುಟ್ಟಿನ ಕಥಾನಕ ಪ್ರಚಲಿತವಿದೆ. ಏಸುವಿನ ತಾಯಿ ಮೇರಿಯ ಗರ್ಭದಲ್ಲಿ ಒಂದು ಪವಿತ್ರಾತ್ಮವನ್ನು ಏಂಜೆಲ್‌ಗಳು ತಂದು ಇಟ್ಟವು, ನಂತರ ಅವಳು ಗರ್ಭ ಧರಿಸಿ ಏಸುವಿಗೆ ಜನ್ಮವಿತ್ತಳು ಎಂಬ ಅತಿಮಾನುಷ ಕಲ್ಪನೆ ಇಲ್ಲಿದೆ. ಅದೇ ರೀತಿ ಶಿಲುಬೆಗೆ ಏರಿದ ಮೂರನೆಯ ದಿನ ಆತ ಮತ್ತೆ ಹುಟ್ಟಿ ಬಂದ ಎಂಬ ಕಥೆಯನ್ನು ಓದಿದ್ದು ನನಗೆ ನೆನಪಿದೆ. ಒಂದು ತುಂಡು ರೊಟ್ಟಿಯಿಂದ ಸಾವಿರಾರು ಜನರ ಹಸಿವೆಯನ್ನು ನೀಗಿಸಿದ ಎಂದು ಹೇಳುತ್ತಾರೆ. ಇಂಥಹ ಕವಿ ಕಲ್ಪನೆಗಳನ್ನು ದಂತ ಕಥೆಗಳನ್ನು ಆಧರಿಸಿ ವಾಸ್ತವಿಕ ಚಿಂತನೆಯನ್ನು ಮಾಡದೆ ಬಾಯಿಗೆ ಬಂದ ಹಾಗೆ ಹೇಳಿಕೆ ಕೊಡುವವರ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ನನಗೆ.ದೇವರ ಮೇಲೆ ನಂಬಿಕೆ ಇಡುವುದು ಬಿಡುವುದು ಅವರವರ ಇಷ್ಟಕ್ಕೆ, ಭಾವಕ್ಕೆ ಸಂಬಂಧಿಸಿದ್ದು. ರಾಮನನ್ನು ಅಸಂಖ್ಯಾತ ಜನರು ದೇವರೆಂದು ನಂಬಿ ಆರಾಧಿಸುತ್ತಿರುವಾಗ ಅವರ ಭಾವನೆಗಳಿಗೆ ಘಾಸಿಮಾಡುವಂಥ ಹೇಳಿಕೆಗಳಿಂದ ಸಾಧಿಸುವುದಾದರೂ ಏನನ್ನು? ಈ ಹಿಂದೆ ಪ್ರಚಲಿತವಿದ್ದ ಈಗಲೂ ಕೆಲವೆಡೆ ಪ್ರಚಲಿತವಿರುವ ಜಾತಿ ತಾರತಮ್ಯ ನೂರಾರು ಮನಸುಗಳನ್ನು ನೋಯಿಸಿವೆ.
ಇದರಿಂದಾಗಿ ನಮ್ಮೊಳಗೆ ಬಿರುಕು ಬಿಟ್ಟಿದೆ. ಇಂಥ ಅವಿವೇಕದ ಮಾತುಗಳು ಬಿರುಕನ್ನು ದೊಡ್ಡ ಕಂದಕವಾಗಿಸುತ್ತವೆ ಎಂದು ಇವರಿಗೆ ತಿಳಿದಿಲ್ಲವೇ? ಇಂದು ಉಗ್ರಗಾಮಿಗಳ ದಾಳಿ ದೇಶದ ಎಡೆ ಅಲ್ಲಲ್ಲಿ ಆಗುತ್ತಲಿವೆ. ಭಯೋತ್ಪಾದನೆ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಡತನ, ಆಹಾರ, ನಿರುದ್ಯೋಗ ಸಮಸ್ಯೆಗಳು ಕಾಡುತ್ತಿವೆ. ಅಕ್ಕ ಪಕ್ಕದ ದೇಶಗಳು ದೇಶದ ಒಂದೊಂದೇ ಭಾಗವನ್ನು ಕಬಳಿಸಲು ಹೊಂಚು ಹಾಕುತ್ತಿವೆ. ಇವೆಲ್ಲದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಸಂದರ್ಭದಲ್ಲಿ ಏಕತೆಯ, ರಾಷ್ಟ್ರೀಯ ಭಾವೈಕ್ಯತೆಯ ಭಾವ ಮೂಡಿಸುವ ಯತ್ನದ ಬದಲು ಒಡಕನ್ನು ಹೆಚ್ಚಿಸುವ ಮಾತುಗಳು ಸರಿಯಾದುದಲ್ಲ .ಬೇರೆಯವರ ನಂಬಿಕೆ, ಸಂಪ್ರದಾಯ, ಆಚರಣೆ, ಮತ, ಧರ್ಮ ದೇವರುಗಳ ಬಗ್ಗೆ ಗೌರವ ತೋರುವುದಕ್ಕೆ ಪರ ಮತ ಸಹಿಷ್ಣುತೆ ಎನ್ನುತ್ತಾರೆ. ಅನೇಕರು ದೇವರು ಎಂದು ನಂಬಿದ ಶಕ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಅಸಹಿಷ್ಣುತೆಯೇ ತಾನೇ?ಇದಕ್ಕೇನು ಪರಿಹಾರ? ಸದಾ ಸುದ್ದಿಯಲ್ಲಿರುವುದಕ್ಕಾಗಿಯೇ ಎಂಬಂತೆ, ಅಸಹಿಷ್ಣುತೆಯ ವಿರೋಧಿಗಳು ತಾವು ಎನ್ನುತ್ತಾ ಮತ್ತಷ್ಟು ಬಿರುಕು ಉಂಟು ಮಾಡುವವರ ಅವಿವೇಕದ ಮಾತುಗಳನ್ನು ನಿರ್ಲಕ್ಷ್ಯ ಮಾಡುವುದೇ ಸರಿಯಾದುದು ಎಂದೆನಿಸುತ್ತದೆ.
edit@vishwavani.news

.

No comments:

Post a Comment