Sunday 24 January 2016

ದೊಡ್ಡವರ ಹಾದಿ -4

ಬಯಸಿದ್ದು ಸಿಕ್ಕ ಬಗದ್ದು ತಪ್ಪ (ಬಯಸಿದ್ದು ಸಿಗಲಾರದು ಬಗದ್ದು (?)ತಪ್ಪದು )
ಯಾಕೋ ಏನೋ ತುಂಬಾ ಹಿಂದಿನ ವಿಷಯ ಒಂದು ನೆನಪಾಯಿತು ನನಗೆ ,ನಾನು ಆಗಷ್ಟೇ ಹತ್ತನೇ ತರಗತಿ ಉತ್ತೀರ್ಣಳಾಗಿದ್ದೆ .ಒಳ್ಳೆಯ ಅಂಕಗಳೂ ಬಂದಿದ್ದವು ಫಲಿತಾಂಶ ಬಂದ ಮೇಲೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್ ಗೆ ಸೇರುವುದು ಎಂದು ನಿರ್ಧರಿಸಿದ್ದೆವು ಆದರೆ ಹಳ್ಳಿಯವರಾದ ನಮಗೆ ಮೊದಲೇ ಅರ್ಜಿ ತೆಗೆದುಕೊಳ್ಳಬೇಕು ಎಂದು ಗೊತ್ತಿರಲಿಲ್ಲ ಫಲಿತಾಂಶ ಬಂದಮೇಲೆ ಹೋಗಿ ಕೇಳಿದಾಗ ಅರ್ಜಿ ಕೊಡುವ ಮತ್ತು ಸಲ್ಲಿಸುವ ಸಮಯ ಆಗಿ ಹೋಗಿದೆ ಎಂದು ಕಾಲೇಜ್ ನ ಸಿಬ್ಬಂದಿ ಹೇಳಿದರು .
ಕೊನೆಗೆ ಮಂಗಳೂರಿನ ಸರ್ಕಾರಿ ಕಾಲೇಜ್ (ಈಗಿನ ಯೂನಿವರ್ಸಿಟಿ ಕಾಲೇಜ್ )ನಲ್ಲಿ ಪಿಯುಸಿ ಗೆ ಸೇರಿದೆ.
ನಂತರ ಪಿಯುಸಿ ನಂತರ ಪದವಿಗೆ ಕೆನರಾ ಕಾಲೇಜ್ ಗೆ ಸೇರುವುದು ಎಂದು ಅರ್ಜಿ ಮೊದಲೇ ತಂದಿದ್ದೆ ಫಲಿತಾಂಶದ ನಂತರ ತಂದೆಯವರನ್ನು ಕರೆದುಕೊಂಡು ಕೆನರಾ ಕಾಲೇಜ್ ಗೆ ಹೋದೆ .
ಸುಮಾರು ಹೊತ್ತು ಕಳೆದ ನಂತರ ಪ್ರಾಂಶುಪಾಲರ ಕೋಣೆಗೆ ಪ್ರವೇಶಕ್ಕೆ ಅನುಮತಿ ಸಿಕ್ತು .ಅಲ್ಲಿನ ಪ್ರಾಂಶುಪಾಲರಿಗೆ ( ಉಪಾಧ್ಯಾಯ ಎಂದು ಏನೋ ಹೆಸರಿತ್ತು ಎಂದು ನೆನಪು!) ಜುಟ್ಟು ಬಿಟ್ಟು ಕಿವಿಗೆ ಒಂಟಿ ಹಾಕಿ ಹಣೆಗೆ ನಾಮ ಹಾಕಿ ತೀರ ಹಳ್ಳಿಯವರ ವೇಷ ಭೂಷಣ ದಲ್ಲಿದ್ದ ನಮ್ಮ ತಂದೆಯರು ಅವರ ಕಣ್ಣಿಗೆ ಈಡಾಗಲಿಲ್ಲ,ನಮ್ಮ ತಂದೆಯವರನ್ನು ಕುಳಿತುಕೊಳ್ಳಿ ಎಂದು ಹೇಳುವ ಸೌಜನ್ಯವೂ ಅವರಲ್ಲಿರಲಿಲ್ಲ
"ಎಷ್ಟು ಆಸ್ತಿ ಇದೆ "ಎಂದು ನಮ್ಮಲ್ಲಿ ದಟ್ಟಿಸಿ ಕೇಳಿದರು ನಮ್ಮ ತಂದೆಯವರು ವಿಧೇಯರಾಗಿ "ಎರಡು ಖಂಡಿ ಅಡಿಕೆ ಆಗುತ್ತದೆ ಅಷ್ಟೇ "ಎಂದು ಹೇಳಿದರು ಆಗ "ಎರಡು ಖಂಡಿಯೋ ಇಪ್ಪತ್ತು ಖಂಡಿಯೋ?" ಎಂದು ಗದರಿ ಕೇಳಿದರು ಆ ಪ್ರಾಂಶುಪಾಲ! .
ಅಂದು ಅವರು ಕೇಳಿದಷ್ಟು ಡೊನೇಷನ್ ಕೊಡಲು ನಮ್ಮಲ್ಲಿ ದುಡ್ಡಿರಲಿಲ್ಲ ಹಾಗಾಗಿ ಅಡ್ಮಿಶನ್ ಪಡೆಯದೇ ಹಿಂದೆ ಬಂದೆವು ನಾವು .
ಆ ಪ್ರಿನ್ಸಿಪಾಲ್ ದರ್ಪ ನೋಡಿ ನನಗ್ಯಾಕೋ ಆ ಕಾಲೇಜ್ ಬೇಡ ಎನ್ನಿಸಿತು ಆ ಸಮಯದಲ್ಲಿ ನನ್ನ ತಮ್ಮ ಈಶ್ವರ ಭಟ್ ಅವರದ್ದು sslc ಆಗಿ ಉಜಿರೆ sdm ಕಾಲೇಜ್ ನಲ್ಲಿ ಸೀಟ್ ಸಿಕ್ಕಿತ್ತು ಅವನನ್ನು ಅಲ್ಲಿಗೆ ಸೇರಿಸಲು ಹೋದ ನನ್ನ ಅಣ್ಣನಲ್ಲಿ ನಮ್ಮ ಸಂಬಂಧಿಕರು ಆಗಿದ್ದ ಭೌತಶಾಸ್ತ್ರ ಉಪನ್ಯಾಸಕರಾದ ಗಣಪಯ್ಯ ಅವರು ತಂಗಿ ಏನು ಮಾಡುತ್ತಾಳೆ ಎಂದು ನನ್ನ ಬಗ್ಗೆ ವಿಚಾರಿಸಿ ಅವಳನ್ನೂ ಇಲ್ಲಿ ಡಿಗ್ರಿಗೆ ಸೇರಿಸು ಎಂದು ಹೇಳಿದರು ಅಣ್ಣ ಕೃಷ್ಣ ಭಟ್ ಅಲ್ಲಿಂದ ಒಂದು ಅಪ್ಲಿಕೇಶನ್ ಹಿಡಿದುಕೊಂಡು ಬಂದರು
ಮತ್ತೆ ಒಂದು ದಿನ ನಾನು ತಂದೆಯವರೊಂದಿಗೆ ಕಾಲೇಜ್ ಸೇರಲು ಉಜಿರೆಗೆ ಹೋದೆ ಅದಕ್ಕೆ ಮೊದಲು ಕೆನರಾ ಕಾಲೇಜ್ ನಲ್ಲಿ ಆದ ಅನುಭವ ನನ್ನನ್ನು ಮತ್ತು ತಂದೆಯವರನ್ನು ತುಸು ಅಧೀರರನ್ನಾಗಿಸಿತ್ತು ಅಳುಕುತ್ತಲೇ ಎಸ ಡಿ ಎಂ ಕಾಲೇಜ್ ಪ್ರಾಂಶುಪಾಲರ ಕೊಠಡಿ ಪ್ರವೇಶಿಸಿದೆ
.ಆದರೆಆಗ ಅಲ್ಲಿ ಪ್ರಾಂಶುಪಾಲರಾಗಿದ್ದ ಪ್ರಭಾಕರ ಅವರು ಅತ್ಯಂತ ಸೌಜನ್ಯಯುತ ವ್ಯಕ್ತಿತ್ವ ಹೊಂದಿದ್ದರುಮೊದಲು ನಮ್ಮ ತಂದೆಯವರಲ್ಲಿ ಕುಳಿತುಕೊಳ್ಳಲು ಹೇಳಿ ಮತ್ತೆ ಬಂದ ಕಾರಣ ಕೇಳಿ ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಸೀಟ್ ಕೊಟ್ಟರು ಹೀಗೆ ನನಗೆ ಉಜಿರೆಯ sdm ಕಾಲೇಜ್ ನಲ್ಲಿ ಸೀಟ್ ಸಿಕ್ತು .
ನಂತರ ಬಿಎಸ್ಸಿ ಅಲ್ಲಿ ಮುಗಿಸಿ ಎಸ ಡಿ ಪಿ ಟಿ ಕಾಲೇಜ್ ಕಟೀಲ್ ನಲ್ಲಿ ಸಂಸ್ಕೃತ( ಎಂ ಎ )ಓದಿದೆ .ಮೊದಲ ರಾಂಕ್ ನೊಂದಿಗೆ ಉತ್ತೀರ್ಣಳಾದೆ.(ಇಲ್ಲಿ ಆಗ ಪ್ರಾಂಶುಪಾಲರಾಗಿದ್ದ ಕೆನರಾ ಕಾಲೇಜ್ ನಿಂದ ನಿಯೋಜಿತ ಸಂಸ್ಕೃತ ಉಪನ್ಯಾಸಕರಾದ ಡಾ.ಜಿ. ಎನ್ ಭಟ್ ಕೂಡ ಸಹೃದಯಿಗಳಾಗಿದ್ದರು)
ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಕೆಲಸ ಸಿಕ್ತು ಅದಾಗಿ ಮೂರು ತಿಂಗಳ ಒಳಗೆ ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಸಂಸ್ಕೃತ ಉಪನ್ಯಾಸಕಿ ಹುದ್ದೆ ದೊರೆಯಿತು
ಪ್ರತಿಷ್ಟಿತ ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಓದಲು ಅವಕಾಶ ಸಿಕ್ಕಿರಲಿಲ್ಲ ಆದರೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು ಅದಕ್ಕೆ ಹಿರಿಯರು ಹೇಳುವುದು ಕಾಲ ಒಂದೇ ತರ ಇರುವುದಿಲ್ಲ ಬಯಸಿದ್ದು ಸಿಕ್ಕ ಬಗದ್ದು ತಪ್ಪ (ಹವ್ಯಕ ನುಡಿಗಟ್ಟು )
ಬಯಸಿದ್ದು ಸಿಗದು ಆದರೆ ನಮ್ಮ ಪಾಲಿಗೆ ಬರಬೇಕಾದದ್ದು ತಪ್ಪುವುದಿಲ್ಲ ಎಂದು ಅಲ್ಲವೇ ?

No comments:

Post a Comment