Thursday 17 June 2021

 ದೊಡ್ಡವರ ದಾರಿ 78 :ಸೌಜನ್ಯದ ಪ್ರತೀಕವಾಗಿರುವ  ಡಾ.ಪದ್ಮನಾಭ ಮರಾಠೆ


 ನಾನು ನಿನ್ನೆ ಸಂಜೆ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಪ್ರಕಟಣೆಯ ಪೂರ್ವದಲ್ಲಿ ಮುಂಗಡ ಬುಕ್ಕಿಂಗ್ ಆರಂಭಿಸಿದ ಬಗ್ಗೆ ತಿಳಿಸಿ ಪುಸ್ತಕ ಬೇಕಾದವರಿಗೆ ನನ್ನ ವಾಟ್ಸಪ್ ನಂಬರ್ ನೀಡಿ  ಸಂಪರ್ಕಿಸಲು ತಿಳಿಸಿದ್ದೆ,


ಅನೇಕರು ಮೆಸೇಜ್ ಮಾಡಿ ನಮಸ್ತೆ ಮೇಡಂ/ ಅಕ್ಕ‌ ಎಂದು ಆರಂಭಿಸಿ ಪುಸ್ತಕ ಬೇಕು ಎಂದಿದ್ದರು


.ಪ್ರತಿ ನಮಸ್ಕರಿಸಿ ಪೇ ಮೆಂಟ್ ಮಾಡುವ ವಿಧಾನವನ್ನು ಕೇಳಿ ಮಾಹಿತಿ ನೀಡಿ ಅವರ ಹೆಸರು ವಿಳಾಸ ತಿಳಿಸಲು ಹೇಳುತ್ತಿದ್ದೆ‌.


ಹಾಗೆ ನಿನ್ನೆ ಒಬ್ಬರು ನಮಸ್ತೆ ಪುಸ್ತಕ ಬೇಕಿತ್ತು ಎಂದರು.ಎಲ್ಲರಿಗೆ ಮಾಡುವಂತೆ ಪ್ರತಿ ನಮಸ್ಕರಿಸಿ  ಗೂಗಲ್ ,ಪೋನ್ ಪೇ ಮೂಲಕ ಪೇ ಮಾಡಲು ತಿಳಿಸಿದೆ‌


ಅದಿಲ್ಲದಿದ್ಧರೆ ನನ್ನ ಬ್ಯಾಂಕ್ ಖಾತೆ ನಂಬರ್ ಕೊಡುತ್ತೇನೆ ಎಂದೆ .ಅವರು ಗೂಗಲ್ ಪೋನ್ ಪೆ ಇಲ್ಲದ ಕಾರಣ ( ಬಹುಶಃ ಅವರ ಊರಲ್ಲಿ ಸರಿಯಾದ ಮೊಬೈಲ್  ನೆಟ್ವರ್ಕ್ ಸಿಗುದಿಲ್ಲ.ನೆಟ್ವರ್ಕ್ ಇಲ್ಲದೇ ಇದ್ದರೆ ಪೋನ್ ಪೆ ಗೂಗಲ್ ಕೆಲಸ ಮಾಡುದಿಲ್ಲ) ಬ್ಯಾಂಕ್ ಖಾತೆ ಡಿಟೇಲ್ಸ್ ಕಳುಹಿಸಲು ಹೇಳಿದರು.ಅಂತೆಯೇ ನಾನು ನೀಡಿದೆ 


ಮತ್ತೆ ಹೆಸರು ಮತ್ತು ವಿಳಾಸ ಕಳುಹಿಸಲು ಸೂಚಿಸಿದೆ‌.


ಬೇರೆ ಕೆಲಸಕ್ಕೆ ಹೋದೆ.ಸ್ವಲ್ಪಹೊತ್ತು ಬಿಟ್ಟು ವಾಟ್ಸಪ್ ತೆರೆದೆ.

ಪದ್ಮನಾಭ ಮರಾಠೆ..ಎಂಬ ಹೆಸರು ,ವಿಳಾಸ ಬರೆದಿದ್ದರು.

.ಡಿಪಿ ನೋಡಿದೆ.ಹೌದು.ಪುಸ್ತಕ ಬೇಕೆಂದಿದ್ದವರು ನನ್ನ ಸಂಸ್ಕೃತ ಎಂಎ ಗುರುಗಳಾದ ಡಾ.ಪದ್ಮನಾಭ ಮರಾಠೆಯವರಾಗಿದ್ದರು.

ಅವರ ನಂಬರ್ ನನ್ನಲ್ಲಿ ಇತ್ತು‌


ಮೊಬೈಲ್ ಕಳೆದು ಹೋಗಿ ಅವರ ನಂಬರ್ ನನ್ನಲ್ಲಿ ಕಳೆದು ಹೋಗಿತ್ತು.ಹಾಗಾಗಿ ಶುರುವಿಗೆ ಮೆಸೇಜ್ ಮಾಡಿದಾಗ ನಾನು ಯಾರೆಂದು ಗಮನಿಸಿರಲಿಲ್ಲ 


ನನ್ನ ಗುರುಗಳೆಂದ ಮಾತ್ರಕ್ಕೆ ಅವರು ವಯಸ್ಸಿನಲ್ಲಿ ನನಗಿಂತ ತೀರಾ ಹಿರಿಯರೇನೂ ಅಲ್ಲ‌ ಅದರೆ ಜ್ಞಾನವೃದ್ದರು

ನಾನು ಕಟೀಲಿನಲ್ಲಿ ಸಂಸ್ಕೃತ ಎಂಎ ಶುರುವಾಗಿ ಮೂರನೆಯ ವರ್ಷ ಎಂದರೆ ಮೂರನೆಯ ಬ್ಯಾಚ್ ಗೆ ಸೇರಿದವಳು.

ನಮಗೆ ಉಪನ್ಯಾಸಕರಾಗಿ  ಬಹು ದೊಡ್ಡ ವಿದ್ವಾಂಸರಾದ ಡಾ.ನಾರಾಯಣ ಭಟ್ ,ಡಾ.ಜಿ ಎನ್ ಭಟ್ ಮತ್ತು ಆಗಷ್ಟೇ ಅಲ್ಕಿಯೇ  ಎಂಎ ಪಾಸಾದ ಪದ್ಮನಾಭ ಮರಾಠೆ ನಾಗರಾಜ್ ಇದ್ದರು.


ನಾನು ಎಂಎಗೆ ಬಹು ದೊಡ್ಡು ವಿದ್ವಾಂಸರಾದ ಹಿರಿಯರಾದ ಬಿಳಿಯ ಗಡ್ಡದ ರೇಷ್ಮೆ ಜುಬ್ಬ ಧರಿಸಿದ  ಬುದ್ದಿವಂತರ ಚೀಲ ಹಾಕಿದ ಸಿನೇಮಾಗಳಲ್ಕಿ ತೋರಿಸುತ್ತಿದ್ದ ರೀತಿಯ ಪ್ರೊಫೆಸರ್ ಗಳನ್ನು  ನಿರೀಕ್ಷೆ ಮಾಡಿದ್ದೆ.


ಪದ್ಮ‌ನಾಭ ಮರಾಠೆ ಮತ್ತು ನಾಗರಾಜ್ ಅಲ್ಲಿಯೇ ಮೊದಲ ಬ್ಯಾಚ್ ನಲ್ಲಿ ಎಂಎ ಓದಿ ಆಗಷ್ಟೇ ಎಂಎ ಎರಡನೇ ವರ್ಷದ ಅಂತಿಮ ಪರೀಕ್ಷೆ ಬರೆದವರು‌.ಫಲಿತಾಂಶ ಬಂದಿತ್ತೋ ಇಲ್ಲವೋ ನೆನಪಿಲ್ಲ ನನಗೆ.

ಪದ್ಮನಾಭ ಮರಾಠೆಯವರಿಗೆ ಮೊದಲ ರ‌್ಯಾಂಕ್ ಬಂದು ಗೋಲ್ಡ್ ಮೆಡಲು ಪಡೆದಿದ್ದರು.


ನಾಗರಾಜ್ ಉಜಿರೆಯಲ್ಲಿ ನನಗಿಂತ ಎರಡು ವರ್ಷ ಸೀನಿಯರ್ ಆಗಿದ್ದರು.ಅವರಿಗೆ ನನ್ನ  ಪರಿಚಯ ಇರಲಿಲ್ಲ‌.ಆದರೆ ನನಗೆ ಇತ್ತು.


ಇವರಿಬ್ಬರು ಹೆಚ್ಚು ಕಡಿಮೆ ನಮ್ಮದೇ ವಯಸ್ಸಿನವರಾಗಿದ್ದರು. ನಮಗೂ ಅವರಿಗೂ ಒಂದೆರಡು ವರ್ಷಗಳ ವಯಸ್ಸಿನ ಅಂತರ ಅಷ್ಟೇ ಇವರೆಂತ ಪಾಠ ಮಾಡಿಯಾರು ಎಂದು ನನಗೆ ಶುರುವಿಗೆ ಅನಿಸಿತ್ತು.

ನಾನು ಬಿಎಸ್ಸಿ ಮಾಡಿ ನಂತರ ಎಂ ಎ ಯಲ್ಲಿ ಆರ್ಟ್ಸ್ ಎಂದರೆ ಸಂಸ್ಕೃತವನ್ನು ತಗೊಂಡವಳು.


ಈ ವಿಜ್ಞಾನದ ವಿದ್ಯಾರ್ಥಿಗಳಿಗೆ ತಾವು ಅರ್ಟ್ಸ್ ,ಕಾಮರ್ಸ್  ವಿದ್ಯಾರ್ಥಿಗಳಿಗಿಂತ  ಜಾಣರು ಎಂಬ ಶ್ರೇಷ್ಠತೆಯ ವ್ಯಸನ ಇರುತ್ತದೆ.ನಾನು ಅದಕ್ಕೆ ಹೊರತಾಗಿರಲಿಲ್ಲ


ಹಾಗಾಗಿ ಬಿಎ ಬಿಕಾಂ( ನಾಗರಾಜರು ಬಿಕಾಂ ಮಾಡಿ ಸಂಸ್ಕೃತ ಎಂಎ ಮಾಡಿದವರು )  ಮಾಡಿ ಸಂಸ್ಕೃತ ಎಂಎ ಯನ್ನು ಆಗಷ್ಟೇ ಮುಗಿಸಿದ ಇವರಿಬ್ಬರ ಬಗ್ಗೆ ನನಗೆ ಮನಸಿನ ಒಳಗೆ ನಗು ಇತ್ತು.ಇವರೆಂತ ಎಂಎ ಗೆ ಪಾಠ ಮಾಡುದು ಎಂದು


ನಮಗಿಂತ ಗಿಡ್ಡ ಕಾಣುತ್ತಿದ್ದ ( ಕಾಣಿತ್ತದ್ದದ್ದು ಮಾತ್ರ ನಮಗಿಂತ ಎತ್ತರ ಇದ್ದರು  ಗಾತ್ರದಲ್ಲಿ ಮಾತ್ರವಲ್ಲ ಜ್ಞಾನದಲ್ಲಿಯೂ )ಇನ್ನೂ ಮೀಸೆ ಸರಿಯಾಗಿ ಬಾರದ, ಕ್ರಾಪ್ ಬಾಚಿದ  ಸಣ್ಣ ಹುಡುಗರಂತಿದ್ದ ಇವರಿಬ್ಬರನ್ನು  ನೋಡಿದಾಗ ಇವರೆಂತ ಪ್ರೊಫೆಸರ್ಗಳು ,,ಎಂತ ಪಾಠ ಮಾಡಿಯಾರು ಎನಿಸಿತ್ತು.

 ಆದರೆ ನನ್ನ ಊಹೆ ತಪ್ಪಾಗಿತ್ತು 

ಆದರೆ ಕಾಲೇಜು ಶುರುವಾಗಿ ಪಾಠ ಪ್ರವಚನಗಳು ಶುರುವಾದಾಗ ಪದ್ಮ ನಾಭ ಮರಾಠೆಯವರ ಪಾಂಡಿತ್ಯದ ಅರಿವಾಯಿತು.ಸಣ್ಣ ವಯಸ್ಸಿನ ಚಿಗುರು ಮೀಸೆಯ ಹುಡುಗರೂ ಪ್ರೊಫೆಸರ್ ಗಳಂತೆ ಪ್ರೌಢವಾಗಿ ಪಾಠ ಮಾಡಬಲ್ಲರು ಎಂದು ನನಗೆ ಮನವರಿಕೆ ಆಯಿತು.

ಆ ಸಮಯದಲ್ಲಿಯೇ ಅವರು ಎನ್ ಇ ಟಿ ಪಾಸಾಗಿದ್ದರು‌‌.ಆಗ ಎನ್ ಇ ಟಿ ಆದವರಿಗೆ ಸರ್ಕಾರಿ ಕಾಲೇಜಿನಲ್ಲಿ ಸುಲಭದಲ್ಲಿ ಕೆಲಸ ಸಿಗುತ್ತಾ ಇತ್ತು.ಇವರಿಗೆ ಊರು ಮನೆ ತೋಟ ತಂದೆ ತಾಯಿಯರನ್ನು ಬಿಟ್ಟು ಬೇರೆಡೆ ಹೋಗಲು ಇಷ್ಟವಿರಲಿಲ್ಲ.ಹಾಗೆ ಎಲ್ಲೂ ಯತ್ನ ಮಾಡಲಿಲ್ಲ.ಇಲ್ಲದಿದ್ದರೆ ಈಗ ಯುನಿವರ್ಸಿಟಿಯ ಪ್ರೊಫೆಸರ್ ಆಗಿ ಡೀನ್ ಆಗಿರುತ್ತಿದ್ದರು  ಆ ಹುದ್ದೆಗೆ ಇರುವ ಅರ್ಹತೆ ಅವರಲ್ಲಿ ಇತ್ತು.

1996 ರಲ್ಲಿ ಶಿಕಾರಿ ಪುರ ಸರ್ಕಾರಿ ಪಿಯು ಕಾಲೇಜಿಗೆ ಅಯ್ಕೆ ಆಗಿದ್ದರೂ ಅದನ್ನು ಬಿಟ್ಟಿದ್ದರು 


ಈಗಲೂ ಅವರು ಕಟೀಲು ಸಂಸ್ಕೃತ ಸ್ನಾತಕೋತ್ತರ ಕೇಂದ್ರದ ಸಂಸ್ಕೃತ ಪ್ರೊಫೆಸರೇ ಆಗಿದ್ದಾರೆ.

ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.


ಎನ್ ಇ ಟಿ ಅಂತ ಒಂದು ಪರೀಕ್ಷೆ ಇದೆ ಇದನ್ನು ಪಾಸ್ ಮಾಡಿದರೆ ಮಾತ್ರ ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಲು  ಸಾಧ್ಯ ಎಂಬುದನ್ನು ನಮಗೆ ತಿಳಿಸಿದವರು ಮರಾಠೆ ಸರ್ ನಮಗೆ‌.ಕೇವಲ ಪಠ್ಯದ ವಿಚಾರವಲ್ಲ.ಇತರ ವಿಚಾರಗಳ ಬಗ್ಗೆ ಕೂಡ ನಮಗೆ ತಿಳಿಸುತ್ತಾ ಇದ್ದರು.ಅನೇಕ ವಿಚಾರಗಳಲ್ಲಿ‌ಅವರಿಗೆ ಪ್ರೌಢಿಮೆ ಇತ್ತು 

ಒಂದು ಸಂಗತಿ ಹೇಳ್ತೇನೆ.ದೀಪದಿಂದ ಮಾತ್ರ ಇನ್ನೊಂದು  ದೀಪವನ್ನು ಬೆಳಗಲು ಸಾಧ್ಯ‌

ರ‌್ಯಾಂಕ್ ಎಂಬುದು ಬರಿಯ ಸರ್ಟಿಫೀಕೇಟ್ ಮಾತ್ರ ಪರೀಕ್ಷೆ  ಅಂಕ ಗಳಿಕೆ ಎಂದರೆ ಬರಿಯ ನೆನಪಿನ ಶಕ್ತಿಯ ಪರೀಕ್ಷೆ ಎನ್ನುವುದು ಸಿನಿಕತನ 

ಏಕಾಗ್ರತೆ ಇರುವವರಿಗೆ ಪರಿಶ್ರಮ‌ಪಡುವವರಿಗೆ  ಮಾತ್ರ ಉತ್ತಮ ಅಂಕ ಗಳಿಸಲು ಸಾದ್ಯವಾಗುತ್ತದೆ  ರ‌್ಯಾಂಕ್ ಬರುತ್ತದೆ .ಅಂತಹವರು ವೃತ್ತಿ ಜೀವನದಲ್ಲೂ ಹಾಗೆಯೇ ಇರುತ್ತಾರೆ

ಓರ್ವ ರ‌್ಯಾಂಕ್ ವಿಜೇತನಿಗೆ / ಪ್ರತಿಭಾವಂತನಿಗೆ ಉತ್ತಮ ಅಂಕ ಗಳಿಸುದು ಹೇಗೆ ಎಂಬ ವಿಚಾರ ಗೊತ್ತಿರುತ್ತದೆ .ಅಂತಹವರು ಶಿಕ್ಷಕ ವೃತ್ತಿಗೆ ಬಂದರೆ ತಮ್ಮ ವಿದ್ಯಾರ್ಥಿಗಳಿಗೂ ಅದನ್ನು ಹೇಳಿಕೊಡ್ತಾರೆ.

ನಾನು ಉತ್ತಮ ಅಂಕ ಗಳಿಸುದು ಹೇಗೆ ಎಂಬುದನ್ನು ಪದ್ಮನಾಭ ಮರಾಠೆಯವರಿಂದ ಕಲಿತೆ 

ಸಂಸ್ಕೃತ ಎಂಎ ಯಲ್ಲಿ ಮೊದಲ ರ‌್ಯಾಂಕ್ ಪಡೆದದ್ದು ಮಾತ್ರವಲ್ಲದೆ ಕನ್ನಡ ಎಂಎ ಯಲ್ಲಿ ಕೂಡ ರ‌್ಯಾಂಕ್ ಗಳಿಸಿದೆ..

ಈಗ ನನ್ನ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸುವ ಬಗೆಯನ್ನು ಹೇಳಿಕೊಡ್ತೇನೆ‌.ಆದರೆ ಈ ಕೌಶಲ್ಯವನ್ನು ನಾನು ಗುರುಗಳಾದ ಪದ್ಮನಾಭ ಮರಾಠೆಯವರಿಂದಲೇ ಕಲ್ತದ್ದು ತರಗತಿಗೆ ತುಂಬಾ ತಯಾರಾಗಿ ಬರುತ್ತಾ  ಇದ್ದರು‌.

ಬಹಳ ವಿದ್ವತ್ ಪೂರ್ಣವಾದ ಪಾಠ ಅವರದು. 

ಈಗಲೂ ಅವರು ಹೇಳುತ್ತಿದ್ದ ಸುಭಾಷಿತಗಳನ್ನು ನಾನು ಭಾಷಣ ಮಾಡುವಾಗ ,ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಬಳಸುತ್ತೇನೆ.

ವಿದ್ಯಾರ್ಥಿನಿಯಾಗಿದ್ದಾಗ ನಾನು ಅವರ ಪ್ರಿಯ ಶಿಷ್ಯೆ ಆಗಿರಲಿಲ್ಲ..ನಾನು ಸಣ್ಣಾಗಿಂದಲೂ ಅತ್ಯುತ್ಸಾಹದ ಸ್ವಭಾವದವಳು..ನೇರ ಬೀಡು ಬೀಸು ಸ್ವಭಾವ,ಪೆಟ್ಟೊಂದು ತುಂಡೆರಡು ಎಂಬಂತೆ ಮಾತು.

ಅಲ್ಲದೆ ನನಗೆ ಎಂಎ ಗೆ ಸೇರುವ ಮೊದಲೇ ಮದುವೆಯಾಗಿದ್ದು ಉಳಿದವರ ಹಾಗೆ ಇರಲು ನನಗೆ ಆಗುತ್ತಿರಲಿಲ್ಲ.

1996 ಮೇಯಲ್ಲಿ ದ್ವಿತೀಯ ಎಂಎ ಪರೀಕ್ಷೆ ಬರೆದ ನಂತರ ದೀರ್ಘ ಸಮಯದ ನಂತರ ಇಪ್ಪತ್ತನಾಲ್ಕು ವರ್ಷಗಳ  ನಂತರ  2015 ರಲ್ಲಿ ನಾನು ಪದ್ಮನಾಭ ಮರಾಠೆಯವರನ್ನು ಕಟೀಲಿನಲ್ಲಿ  ಭೇಟಿಯಾದೆ ,ಕಟೀಲಿನಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದರು 

.ನನ್ನನ್ನು  ಸಭಾ ಕಾರ್ಯಕ್ರಮ ಒಂದರ  ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಹ್ವಾನಿಸಿದ್ದು ನಾನು ಹೋಗಿದ್ದೆ.

ಆಗ ಅಲ್ಲಿ ಪದ್ಮನಾಭ ಮರಾಠೆಯವರನ್ನು ನಾನು ಆಕಸ್ಮಿಕವಾಗಿ ಭೇಟಿ ಮಾಡಿದೆ.ಆಗ

ನನಗೂ ನಲವತ್ತ ಮೂರು ವರ್ಷ ಆಗಿತ್ತು ಮರಾಠೆಯವರಿಗೂ  ನಲುವತ್ತೈದು ನಲುವತ್ತಾರು ಾಗಿದ್ದಿರಬಹುದು

ಇಬ್ಬರನ್ನೂ ಬದುಕಿನ ಅನುಭವ ಮಾಗಿಸಿತ್ತು .

ಬಹಳ ಮುಕ್ತವಾಗಿ ಮಾತನಾಡಿದೆವು.ಆಗ ಅವರು ಒಂದು ಮಾತು ಹೇಳಿದರು.ನಾವೂ ಆಗಷ್ಟೇ ಎಂಎ ಮುಗಿಸಿ ಉಪನ್ಯಾಸಕರಾದವರು.ನಾವು ಹೇಳಿದ ದಾರಿಯಲ್ಲಿಯೇ ವಿದ್ಯಾರ್ಥಿಗಳು ಸಾಗಬೇಕು ಎಂದು ಆಶಿಸಿದ್ದೆವು.ಈಗ ಹಾಗಲ್ಲ‌‌ನಾವು ಹೇಳಿದ ದಾರಿಯಲ್ಲಿ ವಿದ್ಯಾರ್ಥಿಗಳು ಹೋಗದಿದ್ದರೆ ಅವರು ಹೋದ ದಾರಿಯಲ್ಲಿ ನಾವು ಹೋದರಾಯಿತು ,ಹೇಗೋ ಒಂದು ಸರಿ ದಾರಿಯಲ್ಲಿ ನಡೆದರಾಯಿತು ಎಂದಿದ್ದರು.

ನನಗೂ ಅದು ಹೌದೆನಿಸಿತ್ತು.

ಇದಾದ ನಂತರ ನಾನುಯಾವುದೋ ಮಾಹಿತಿಗಾಗಿ  ಒಮ್ಮೆಕರೆ ಮಾಡಿ ಮಾತಾಡಿದ್ದೆ..ನನ್ನ ಫೇಸ್ ಬುಕ್ ಸ್ನೆಹಿತರಾಗಿದ್ದರೂ ಅವರು ಪೇಸ್ ಬುಕ್ ನಲ್ಲಿ‌ ಅಷ್ಟೊಂದು ಆಕ್ಟೀವ್ ಆಗಿ ಇರಲಿಲ್ಲ‌.ಹಾಗಾಗಿ ಅವರು ನನ್ನ ಪೋಸ್ಟ್ ಗಳನ್ನು ನನ್ನ ಅಧ್ಯಯನವನ್ನು ಗಮನಿಸುತ್ತಾರೆ ಎಂಬ ಊಹೆಯೂ ಇರಲಿಲ್ಲ

ಹಾಗಾಗಿ ನಮಸ್ತೆ ಪುಸ್ತಕ ಬೇಕು ಎಂದು ಮೆಸೇಜ್ ಮಾಡಿದಾಗಲೂ ನಾನವರನ್ನು ಗಮನಿಸಿರಲಿಲ್ಲ

ಅವರು ಹೆಸರು ಮತ್ತು ವಿಳಾಸ ಕಳುಹಿಸಿದಾಗಲೇ ನನಗೆ ತಲೆಗೆ ಹೋದದ್ದು ಅವರು ನನ್ನ ಸಂಸ್ಕೃತದ ಗುರುಗಳೆಂದು.

ಅವರೀಗ ದೊಡ್ಡ ಸಂಸ್ಕೃತ ವಿದ್ವಾಂಸರು .ಆದರೂ ನಾನವರ ವಿದ್ಯಾರ್ಥಿನಿ ಎಂಬ ಅಭಿಮಾನ ಜೊತೆಗೆ ತುಳು ಸಂಸ್ಕೃತಿ ಕುರಿತಾದ ಒಲವಿನಿಂದ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕೆ ಪಾವತಿ ಮಾಡಿದ್ದಾರೆ.

ಅಧ್ಯಯನ ಶೀಲರು ಜೀವನವಿಡೀ ಹಾಗೆಯೆ ಇರ್ತಾರೆ ಎಂಬುದಕ್ಕೆ ಒಂದು ನಿದರ್ಶನವಾಗಿದ್ದಾರೆ.

ಇನ್ನೊಂದು ವಿಚಾರ ನಾನು ಗಮನಿಸಿದ್ದು..ನಾನು ಅವರ ವಿದ್ಯಾರ್ಥಿನಿ ವಯಸ್ಸಿನಲ್ಲೂ ,ಅನುಭವದಲ್ಲೂ ಜ್ಞಾನದಲ್ಲಿಯೂ ಕಿರಿಯಳು.ಹಾಗಾಗಿ ಅವರು ನಮಸ್ತೆ ಎನ್ನಬೇಕಿರಲಿಲ್ಲ.

ಲಕ್ಷ್ಮೀ ನನಗೊಂದು ಪುಸ್ತಕ ಬೇಕು ಎನ್ನ ಬಹುದಿತ್ತು.ಅದರೆ  ಎಲ್ಲರಿಗೂ ,ಅವರ ವಿದ್ಯಾರ್ಥಿನಿಗೂ ಕೂಡ ಗೌರವ ನೀಡುವ  ಅವರ ಸೌಜನ್ಯದ ವ್ಯಕ್ತಿತ್ವ  ಇಲ್ಲಿ ಎದ್ದು ಕಾಣುತ್ತದೆ‌.ಇದು ನಾವು ಅವರಿಂದ ಕಲಿಯಬೇಕಾದ ಅಂಶ ಎಂದು ನನಗನಿಸಿತು


शुभाशिषः सन्तु भवत्याः संशोधनाध्ययने ಎಂದು ಹಾರೈಸಿದ ಗುರುಗಳಾದ ಪದ್ಮ ನಾಭ ಮರಾಠೆಯವರಿಗೆ ವಂದಿಸಿದ್ದೇನೆ 

ಅವರು ವಿದ್ಯಾರ್ಥಿಗಳಿಗೆ ತೋರುವ ಗೌರವಾದರಗಳನ್ನು ನಾನೂ ಮುಂದಕ್ಕೆ ಅಳವಡಿಸಿಕೊಳ್ಳುವೆ

No comments:

Post a Comment