Monday 19 February 2018

ದೊಡ್ಡವರ ದಾರಿ 50 ಅಪಾರ ಮಾನವೀಯತೆಯ ಮಂಜುನಾಥ್


ದೊಡ್ಡವರ ದಾರಿ 50 ಅಪಾರ ಮಾನವೀಯತೆಯ ಸಹೃದಯಿ ಮಂಜುನಾಥ್
ಹತ್ತು ಹನ್ನೆರಡು ದಿನಗಳ ಮೊದಲು ಇದ್ದಕ್ಕಿದ್ದಂತೆ ಎಚ್ಚರ ತಪ್ಪಿ ಬಿದ್ದು ವಿಕ್ರಮ್ ಆಸ್ಪತ್ರೆಗೆ ದಾಖಲಾಗ ಬೇಕಾಯಿತು..ಅಲ್ಲಿ ಒಂದು ದಿನ ಇದ್ದು ನಾನಾ ಪರೀಕ್ಷೆಗಳನ್ನು ಮಾಡಿಸಿ ಡಿಸ್ಚಾರ್ಜ್ ಆಗಿ ಮನೆಗೆ ಬರುವಾಗ ವಿಪರೀತ ಮೈಕೈ ನೋವು.ಅದರಲ್ಲಂತೂ ಕಾಲು ಒಂದು ಹೆಜ್ಜೆ ಎತ್ತಿಡಲಾಗದಷ್ಟು ನೋವು.( ಈಗ ಗುಣ ಅಗಿದೆ)
ಪ್ರಥಮ ಪಿಯುಸಿ ಪರೀಕ್ಷೆಗಳು ಆರಂಭವಾದ ಕಾರಣ ರಜೆ ಹಾಕಿ ಮನೆಯಲ್ಲಿ ಕೂರುವಂತೆ ಇರಲಿಲ್ಲ. ಹಾಗಾಗಿ ಬಾಡಿಗೆ ಕಾರು ಹಿಡಿದು ಕಾಲೇಜಿಗೆ ಹೋದೆ.ಹೇಗೋ ವಿದ್ಯಾರ್ಥಿಗಳ ಸಹಾಯದಿಂದ ಕಾರು ಇಳಿದೆ.ಹೇಗೋ ಏನೋ ಬಲು ಕಷ್ಟದಿಂದ ರೂಮ್ ಸುಪರ್ವಿಶನ್ ಕೆಲಸ ಮಾಡಿದೆ‌
ಅಷ್ಟಾಗುವಾಗ ಹಿಂದೆ ಬರುವುದು ಹೇಗೆ ಎಂಬ ಸಮಸ್ಯೆ ಕಾಡಿತು‌.ಅಲ್ಲಿ ಜಿಯೋ ನೆಟ್ವರ್ಕ್ ದುರ್ಬಲ ಇರುವ ಕಾರಣ ಓಲಾ ,ಉಬರ್ ಗಳು ಸಂಪರ್ಕಕ್ಕೆ ಸಿಗುವುದಿಲ್ಲ.
ನಮ್ಮ ಕಾಲೇಜಿನಿಂದ ಬಸ್ ಸ್ಟಾಂಡ್ ಗೆ ಸುಮಾರು ಮುಕ್ಕಾಲು ಕಿಲೋ ಮೀಟರ್ ದೂರದ ಹಾದಿ ಇದೆ‌.ಇಲ್ಲಿ ಅಟೋ ಕೂಡ ಸಿಗುವುದಿಲ್ಲ.
ನಮ್ಮ ಕಾಲೇಜಿನ ಸಹೋದ್ಯೋಗಿಗಳಲ್ಲಿ ಅನೇಕರು ಬೈಕ್ ಸ್ಕೂಟರ್ ಮೇಲೆ ಬರುವವರಿದ್ದಾರೆ‌.ಅವರಲ್ಲಿ ಕೇಳಿದರೆ ಬಸ್ ಸ್ಟಾಂಡಿಗೆ ಬಿಡುತ್ತಾರೆ.ಆದರೆ ನನಗೆ ಬೈಕ್ ಏರಲು ಸಾಧ್ಯವಾಗದಷ್ಟು ನೋವು.
ಇನ್ನು ನಮ್ಮ ಕಾಲೇಜಿಗೆ ಕಾರಿನಲ್ಲಿ ಬರುವವರು ಇಬ್ಬರು ಉಪನ್ಯಾಸಕರು ಮಾತ್ರ‌.ಒಬ್ಬರು ಅನಿತಾ ಮೇಡಂ ಸಮಾಜ ಶಾಸ್ತ್ರ ಉಪನ್ಯಾಸಕಿ. ಇವರು ದೊಡ್ಡ ಬಳ್ಳಾಪುರದಿಂದ ಬರುತ್ತಾರೆ‌.ಅವರಲ್ಲಿ ನಾನು ಬಸ್ ಸ್ಟಾಂಡಿಗೆ ಬಿಡುತ್ತೀರಾ ಎಂದು ಕೆಳಿದೆ‌.ನಾನು ಬೆಂಗಳೂರು ಕಡೆಗೆ ಬರಬೇಕಾಗಿದ್ದು ಅವರು ಹೋಗುವ ಮಾರ್ಗ  ಮತ್ತು ಬಸ್ ಸ್ಟಾಂಡ್ ವಿರುಧ್ಧ ದಿಕ್ಕಿನಲ್ಲಿ ಇದೆ .ಅಲ್ಲದೆ ಅಲ್ಲಿ ರಸ್ತೆ ರಿಪೇರಿ ನಡೆಯುತ್ತಿದ್ದು ಸುತ್ತಾಕಿ ಬರಬೇಕಾಗಿತ್ತು‌.
ಇನ್ನೊಬ್ಬರು ಕಾರಿನಲ್ಲಿ ಬರುವವರು ಮಮತಾ ಮೇಡಂ,ಅವರನ್ನು ಅವರ ಪತಿ ಮಂಜುನಾಥ್ ಕಾರಿನಲ್ಲಿ ಕರೆ ತಂದು ಬಿಟ್ಟು ಮತ್ತೆ ಕರೆದುಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ನಿಯೋಜನೆ ಮೇರೆಗೆ ನಮ್ಮ ಕಾಲೇಜಿಗೆ ಜೀವ ಶಾಸ್ತ್ರ ಉಪನ್ಯಾಸಕಿಯಾಗಿ ಬಂದವರು‌ ಅವರು. ಹಾಗಾಗಿ ನನಗೆ ಅವರಲ್ಲಿ ಅಷ್ಟಾಗಿ ಸಲುಗೆ ಇರಲಿಲ್ಲ. ಆದರೆ ಅನಿತಾ ಮೇಡಂ ಅವರಲ್ಲಿ ಮಾತನಾಡುವಾಗ ಅವರೂ ಕೂಡ ಅಲ್ಲಿಯೇ ಇದ್ದು,ಅವರು ನನ್ನನ್ನು ಬಸ್ ಸ್ಟಾಂಡಿಗೆ ಬಿಡುತ್ತೇನೆ ಎಂದು ಹೇಳಿದರು.
ಹಾಗೆ ಅವರ ಜೊತೆ ಕಾರು ಹತ್ತಿ ಹೊರಟೆ‌.ಅವರ ಪತಿ ಮಂಜುನಾಥ್ ಕಾರು ಚಾಲನೆ ಮಾಡುತ್ತಿದ್ದರು. ಅವರು ಮಿಲಿಟರಿ ರಿಟೈರ್ಡ್ ಯೋಧರು‌.ಪ್ರಸ್ತುತ ಬಿಎಂಟಿಸಿ ಡಿಪ್ಪೋ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಹೋಗುವ ದಾರಿಯಲ್ಲಿ ಅವರ‌ಮನೆ ತಾವರೆಕೆರೆ ಕಡೆ ಇದೆ ಅಂತ ಗೊತ್ತಾಯಿತು. ಅಲ್ಲಿಂದ ನಮ್ಮ ಮನೆ ಕಡೆಗೆ ಸಾಕಷ್ಟು ಬಸ್ಸುಗಳಿವೆ ಹಾಗಾಗಿ ನಾನು ನನ್ನನ್ನು ತಾವರೆಕೆರೆಯಲ್ಲಿ ಬಿಡಲು ಹೇಳಿದೆ‌.
ತಾವರೆಕೆರೆ ಬಂದಾಗ ನನಗೆ ಕಾಲು ನೋವಿನಲ್ಲಿ ಇಳಿಯಲು ಸಾಧ್ಯವಾಗದೆ ಒದ್ದಾಡಿದೆ‌.ಆಗ ಅವರು ಕಾರು ನಿಲ್ಲಿಸಿ ಇಳಿದು ಬಂದು ನನಗೆ ಕಾರಿನಿಂದ ಇಳಿಯಲು ಸಹಾಯ ಮಾಡಿದರು.ಅದರಲ್ಲಿ ಅವರ ಪರಿಚಯದ ಚಾಲಕರಿದ್ದರು
ನಂತರ  ಬಿಎಂಟಿಸಿ ಬಸ್ ಗೆ ಕೈ ಹಿಡಿದು ನಿಲ್ಲಿಸಿದರು.ನಾನು ಬಸ್ ಹತ್ತುವ ತನಕ ಇದ್ದು ಬಸ್ ಹೊರಟ ಮೇಲೆ ಕಾರು ಹತ್ತಿ ಮನೆ ಕಡೆ ತಿರುಗಿಸಿದರು.
ಸ್ವಂತ ಅಣ್ಣ ತಮ್ಮಂದಿರು  ಕೂಡ ತನ್ನ ಅಕ್ಕ ತಂಗಿಯರನ್ನು ಈ ರೀತಿಯಲ್ಲಿ ಜಾಗ್ರತೆಯಿಂದ ಕರೆದೊಯ್ಯುವುದು ಇಂದಿನ ಕಾಲದಲ್ಲಿ ಅಪರೂಪ.( ನನ್ನ ಅಣ್ಣ ತಮ್ಮಂದಿರಿಗೆ ನನ್ನ ಬಗ್ಗೆ ಇಂತಹ ಕಾಳಜಿ ಇದೆ ) ಹಾಗಿರುವಾಗ ಅಷ್ಟೇನೂ ಪರಿಚಿತಳಲ್ಲದ ನನ್ನ ಬಗ್ಗೆ ಅವರು ತೋರಿದ ಮಾನವೀಯತೆ ನಿಜಕ್ಕೂ ಅನುಸರಣೀಯವಾದುದು.ಒಂದೇ  ಕಡೆಗೆ  ಹೋಗುವಾಗ ಕೂಡ ತಮ್ಮ ಸಂಬಂಧಿಕರನ್ನು,ಸಹೋದ್ಯೋಗಿಗಳನ್ನು ಜೊತೆಗೆ ಬನ್ನಿ ಎಂದು ಕರೆಯುವ ಸೌಜನ್ಯತೆ ಇಲ್ಲದೆ ಇರುವ ಅನೇಕರನ್ನು ನಾವು ಕಾಣುತ್ತೇವೆ.ಅಂತಹವರ ನಡುವೆ ಮಂಜುನಾಥ್ ವಿಶಿಷ್ಟರಾಗಿ ನಿಲ್ಲುತ್ತಾರೆ.ನಮ್ಮ ಕಾಲೇಜು ಉಪನ್ಯಾಸಕಿ‌ಮಮತಾ ಕೂಡ ಅವರಿಗೆ ಅನುರೂಪವಾದ ಮಡದಿ.ಅಂತಹದ್ದೇ ಮಾನವೀಯ ಅಂತಃಕರುಣೆಯ ವ್ಯಕ್ತಿತ್ವ ದವರು © ಡಾ‌.ಲಕ್ಷ್ಮೀ ಜಿ ಪ್ರಸಾದ

No comments:

Post a Comment