Saturday 2 April 2016

ಶಿಕ್ಷಕಿಯಾಗಿ ಧನ್ಯತೆಯ ಕ್ಷಣಗಳು -4 ಡಾ.ಲಕ್ಷ್ಮೀ ಜಿ ಪ್ರಸಾದ


                                                ಸತ್ಯ ಎಂ ಭಟ್ ಅವರ ತಾಯಿಯೊಂದಿಗೆ
"ಪಾಠ ಮಾಡುವುದು ಎಂದರೆ ಪಾಠ ಪುಸ್ತಕಲ್ಲಿನ ವಿಚಾರವನ್ನುವಿವರಿಸುವುದು ಪ್ರಶ್ನೋತ್ತರ ಬಾಯಿ ಪಾಠ ಮಾಡಿಸುವುದು ಅಂಕ ಗಳಿಸುವಂತೆ ಮಾಡುವುದು ಮಾತ್ರ" ಎಂಬ ಬಗ್ಗೆ ನನಗೆ ಒಲವಿಲ್ಲ .
ಪಾಠ ಪುಸ್ತಕದಲ್ಲಿರುವುದನ್ನು ಮಾತ್ರ ಹೇಳಿ ಕೊಡಲು ಶಿಕ್ಷಕರ ಅಗತ್ಯವೇನಿದೆ ?ಎಲ್ಲ ಪ್ರಶ್ನೆಗಳ ಉತ್ತರ ವ್ಯಾಕರಣ ಎಲ್ಲವೂ ಗೈಡ್ ಗಳಲ್ಲಿವೆ .ಅನೇಕರು ಗೈಡ್ ಅನ್ನು ಆಧರಿಸಿಯೇ ಪಾಠ ಮಾಡುತ್ತಾರೆ ಕೂಡ

ಹಾಗಾಗಿ ನಾನು ಸಮಯ ಸಿಕ್ಕಾಗೆಲ್ಲ ನನ್ನ ವಿದ್ಯಾರ್ಥಿಗಳಿಗೆ ಕಥೆ ಕವನನಾಟಕ ರಚನೆ ಸೇರಿದಂತೆ ಅನೇಕ ಸಾಹಿತ್ಯಿಕ ವಿಚಾರಗಳ ಬಗ್ಗೆ ಮಾಹಿತಿ ಕೊಡುತ್ತಿರುತ್ತೇನೆ ಇದಕ್ಕೆ ಪೂರಕವಾಗಿ ಸ್ಥಳೀಯ ಕವಿ ವಿದ್ವಾಂಸರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಶಿಬಿರಗಳನ್ನು ಏರ್ಪಡಿಸುತ್ತಿರುತೇನೆ

ಬಹುಶ ನಾನು ಬೆಳ್ಳಾರೆ ಗೆ ಉಪನ್ಯಾಸಕಿಯಾಗಿ ಹೋದ ವರ್ಷ ಅಥವಾ ಅದರ ಮರು ವರ್ಷ ಇರಬೇಕು .ಒಂದು ದಿನ ಯಾರೋ ಒಬ್ಬ ಉಪನ್ಯಾಸಕರು ಬಂದಿರಲಿಲ್ಲ ಹಾಗಾಗಿ ನಾನು ದ್ವಿತೀಯ ಪಿಯುಸಿ ಮಕ್ಕಳ ತರಗತಿಯನ್ನು ಹೆಚ್ಚುವರಿಯಾಗಿ ತೆಗದುಕೊಂಡೆ.ಅದು ಅಂದಿನ ಕೊನೆ ಅವಧಿ .
ಬೆಳಗಿನಿಂದ ಪಾಠ ಕೇಳಿ ಕೇಳಿ ವಿದ್ಯಾರ್ಥಿಗಳು ಸುಸ್ತಾಗಿದ್ದರು .ಹಾಗಾಗಿ ಪಾಠ ಬದಲಿಗೆ ಬೇರೆ ಏನಾದರೂ ಸಾಹಿತ್ಯ ಚಟುವಟಿಕೆ ಮಾಡಿಸೋಣ ಎನ್ನಿಸಿತ್ತು
ಹಾಗಾಗಿ ಯಾವಾಗಲೋ ಕಾವ್ಯ ರಚನಾ ಕಮ್ಮಟ ದಲ್ಲಿ ಬಳಕೆ ಮಾಡುವುದಕ್ಕಾಗಿ ತೆಗೆದಿಟ್ಟಿದ್ದ  ನಾನಾ ಭಾವಗಳನ್ನು ಹೊರ ಸೂಸುವ ಬಣ್ಣದ ಚಿತ್ರಗಳನ್ನು ತಂದು ತೋರಿಸಿದೆ .ಇದನ್ನು ನೋಡುವಾಗ ನಿಮಗೆ ಏನನ್ನಿಸುತ್ತದೆ ?ಅದನ್ನು ಅಕ್ಷರ ರೂಪದಲ್ಲಿ ಬರೆಯಿರಿ ಎಂದು ಹೇಳಿದೆ ,ಅದು ಕಥೆ ಆಗ ಬಹುದು ಕವನ ಆಗ ಬಹುದು ಏನೂ ಆಗ ಬಹುದು ಎಂದು ತಿಳಿಸಿದೆ .
ವಿದ್ಯಾರ್ಥಿಗಳು ತಮಗೆ ಅನಿಸಿದಂತೆ ತಮ್ಮ ತಮ್ಮ ಭಾವಕ್ಕೆ ಸಿಕ್ಕಂತೆ ಕಥೆ ಕವನ ಪ್ರಬಂಧಗಳನ್ನು ಬರೆದರು .

ನಾನು ಕೊಟ್ಟ ಚಿತ್ರಗಳಲ್ಲಿ  ಒಂದು ಚಿತ್ರ ಮಗುವನ್ನು ಎತ್ತಿಕೊಂಡ ತಾಯಿ ಕೂಡ ಇತ್ತು .
ಅದನ್ನು ನೋಡಿಯೋ ಅಥವಾ ತನ್ನ ತಾಯಿಯನ್ನು ನೆನಪಿಸಿಕೊಂಡೋ ಏನೋ ತಿಳಿಯದು ಸತ್ಯ ಗಣೇಶ ಎಂಬ  ವಿದ್ಯಾರ್ಥಿ ಅಮ್ಮ ಎನ್ನುವ ಶೀರ್ಷಿಕೆಯಲ್ಲಿ ಒಂದು ಉತ್ತಮ ಕವನ ರಚಿಸಿದ್ದ .
ತುಂಬಾ ಚೆನ್ನಾಗಿ ಭಾವ ಪೂರ್ಣವಾಗಿತ್ತು.
ಇದಾಗಿ ಕೆಲವು ವಾರಗಳ ನಂತರ ಸ್ಥಳೀಯ ಹಿರಿಯ ವಿದ್ವಾಂಸರಾದ ಬಾಳಿಲ ಪರಮೇಶ್ವರ ಭಟ್ ಅವರನ್ನು ಕರೆಸಿ ಜೆಸಿಐ ಸಂಘಟನೆಯ ಸಹಾಯದೊಂದಿಗೆ ಒಂದು ಕಾವ್ಯ ರಚನಾ ಕಮ್ಮಟ ಏರ್ಪಡಿಸಿದ್ದೆ .
ಅವರು ನಮ್ಮ ಮಕ್ಕಳಿಗೆ ಕಾವ್ಯ ರಚನೆಯ ಒಳಗುಟ್ಟುಗಳನ್ನು ಹೇಳಿಕೊಟ್ಟಿದ್ದರು .
ಇದಾದ ನಂತರವೂ ಸಮಯ ಸಿಕ್ಕಾಗ ವಿದ್ಯಾರ್ಥಿಗಳಲ್ಲಿ  ಸಾಹಿತ್ಯ ಓದು ಮತ್ತು ರಚನೆ ಗೆ ಬೆಂಬಲ ಕೊಡುತ್ತಾ ಇದ್ದೆ .
ಇದಾಗಿ ಸುಮಾರು ಸಮಯ ನಂತರ ಕಾಲೇಜ್ ವಾರ್ಷಿಕೋತ್ಸವ ಹತ್ತಿರ ಬಂತು .
ನಮ್ಮ ವಿದ್ಯಾರ್ಥಿಗಳು ಒಳ್ಳೆ ಕಥೆ ಕವನ ರಚಿಸುತ್ತಾರೆ ಎಂಬುದನ್ನು ಅರಿತಿದ್ದ ನಾನು ಪ್ರಾಂಶುಪಾಲರಲ್ಲಿ ಚರ್ಚಿಸಿ ಕವನ ಮತ್ತು ಕಥಾ ರಚನೆ ಸ್ಪರ್ಧೆ ಇರಿಸಿದೆ ,ಈ ಬಗ್ಗೆ ಸಾಕಷ್ಟು ವಾದ ಮಾಡಬೇಕಾಗಿ ಬಂತು ಇಷ್ಟರ ತನಕ ಇಲ್ಲಿ ಕವನ ರಚನೆ ಕಥಾ ರಚನೆ ಸ್ಪರ್ಧೆ ಇರಲಿಲ್ಲ .ಅಲ್ಲದೆ ಮಕ್ಕಳಿಗೇನು ಕಥೆ ಕವನ ಬರೆಯೋಕೆ ಬರುತ್ತೆ ?ಇತ್ಯಾದಿ ಮಾತುಗಳು ಬಂತು .ಕೊನೆಗೆ "ಬಹುಮಾನದ ಖರ್ಚನ್ನು ನಾನು ಕೊಡುತ್ತೇನೆ "ಎಂದ ಮೇಲೆ ಅದಕ್ಕೆ ಅವಕಾಶ ಸಿಕ್ಕಿತು
ಕವನ ಸ್ಪರ್ಧೆಯ ದಿನದಂದು ಬಂದು ನೋಡಿದರೆ ಕವನ ಬರೆಯುತ್ತಿದ್ದ ಹೆಚ್ಚಿನನ ಮಕ್ಕಳು ಅಲ್ಲಿ ಸ್ಪರ್ಧೆಯಲ್ಲಿ ಇರಲಿಲ್ಲ .ಮೂರು ನಾಕು ವಿದ್ಯಾರ್ಥಿಗಳು ಮಾತ್ರ ಇದ್ದರು .
ಹೊರಗಡೆ ಬಂದು ಚೆನ್ನಾಗಿ ಕವನ ರಚಿಸುತ್ತಿದ್ದ ಅನೇಕ ಮಕ್ಕಳನ್ನು ಬಲವಂತದಿಂದ ಎಳೆದು ತಂದು ಕಾಗದ ಕೊಟ್ಟು ಬರೆಯಲು ಕೂರಿಸಿದೆ .
ಹೀಗೆ ಎಳೆದು ತಂದು ಕೂರಿಸಿದ ವಿದ್ಯಾರ್ಥಿಗಳಲ್ಲಿ ಒಬ್ಬಾತ ಪ್ರಥಮ ಬಹುಮಾನ ಪಡೆದ.ಅವನೇ ಸತ್ಯ ಗಣೇಶ /ಸತ್ಯ ಎಂ ಭಟ್ ,ಪ್ರಸ್ತುತ ಖಾಸಗಿ ಸಂಸ್ಥೆಯೊಂದರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ .
ಈಗ ನನ್ನ ಫೇಸ್ ಬುಕ್ ಸ್ನೇಹಿತ ಈತ .ಇಂದು ತಾಯಿ ಜೊತೆ ಭಾವಚಿತ್ರವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರು ಆಗ ನಾನು ಕೇಳಿದೆ "ಅಂದಿನ ಅಮ್ಮ ಕವನ ನೆನಪಿದೆಯೇ ಅಂತ ?
ಅವರು ಚಾಟ್  ಮಾಡುತ್ತಾ ಹೇಳಿದರು ,ಐವತ್ತು ಅರುವತ್ತು ಕವನಗಳು ಇದ್ದ ಪುಸ್ತಕ ಮನೆ ಬದಲಾಯಿಸುವಾಗ ಕಳೆದು ಹೋಗಿದೆ ಅದರಲ್ಲಿ ಆ ಕವನ ಕೂಡ ಇತ್ತು ಎಂದು.
ಪುನಃ ಒಮ್ಮೆ ಸಾವಕಾಶ ಹುಡುಕಲು ಹೇಳಿದೆ ಮತ್ತು ಕವನ ರಚನೆ ಮುಂದುವರಿಸಲು ಹೇಳಿದೆ.
ಆಗ ಗೊತ್ತಾಯಿತು ಅವರು ಒಂದು ಕವನ ಸಂಕಲನವನ್ನು ಹೊರ ತರುವ ಯೋಚನೆಯಲ್ಲಿದ್ದಾರೆ ಎಂದು !
ಭಯಂಕರ ಖುಷಿ ಆಯ್ತು ನನಗೆ ,ನನ್ನ ವಿದ್ಯಾರ್ಥಿಯೊಬ್ಬ ಕವನ ಸಂಕಲನ ತರುವುದು ಅತ್ಯಂತೆ ಹೆಮ್ಮೆಯ ವಿಚಾರ ನನಗೆ !
ವಿದ್ಯಾರ್ಥಿಗಳ ಯಶಸ್ಸಿನಲ್ಲಿಯೇ ತಾನೇ ಶಿಕ್ಷಕರ ಸಾರ್ಥಕ್ಯತೆ ಇರುವುದು !
ನನ್ನ ಅನೇಕ ವಿದ್ಯಾರ್ಥಿಗಳ ಕಥೆ ಕವನ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುದು ನೋಡಿದಾಗ ತುಂಬಾ ಸಂತಸವಾಗುತ್ತದೆ .ಸತ್ಯ ಎಂ ಭಟ್ ಅವರಂತೆ ಪ್ರದೀಪ್,ಯಶಸ್ವಿನಿ  ಕಾವ್ಯ, ಪ್ರಸಾದ್  ಸೇರಿದಂತೆ ಅನೇಕರು ಕಥೆ ಕವನ ನಾಟಕ ಲೇಖನಗಳನ್ನು ಬರೆಯುತ್ತಿದ್ದಾರೆ ಸಾಹಿತ್ಯ ಕೃಷಿ ಮುಂದುವರಿಸುತ್ತಿದ್ದಾರೆ ಎಂಬುದು ನನಗೆ ಹೆಮ್ಮೆಯ ಸಂತಸದ ವಿಷಯವಾಗಿದೆ

No comments:

Post a Comment