Wednesday 4 September 2019

ನನ್ನೊಳಗೂ ಒಂದು ಆತ್ಮವಿದೆ.. ನಾನೇಕೆ ಆತ್ಮ ಕಥೆ ಬರೆಯಲು ಆರಂಭಿಸಿದೆ ? ಡಾ.ಲಕ್ಷ್ಮೀ ಜಿ ಪ್ರಸಾದ

ನಾನೇಕೆ ಆತ್ಮಕಥೆಯನ್ನು ಬರೆಯಲು ಆರಂಭಿಸಿದೆ ಗೊತ್ತಾ ?
  ನಾವ್ಯಾರೂ ಶಾಶ್ವತರಲ್ಲ..
ಆದರೂ ನಾಲ್ಕೈದು ವರ್ಷ ಮಾತ್ರ ಬದುಕಬಹುದು ..ಎಂದು ಖ್ಯಾತ ನ್ಯೂರಾಲಜಿಸ್ಟ್ ಒಬ್ಬರು ಹೇಳಿದಾಗ ನನಗಾದ ದಿಗ್ಭ್ರಮೆಯನ್ನು ಶಬ್ದಗಳಲ್ಲಿ ವರ್ಣಿಸಲಾಗದು...ನಾನು ಸಾಕಷ್ಟು ಧೈರ್ಯವಂತೆ..ಆದರೂ ಇನ್ನು ನಾಲ್ಕೈದು ವರ್ಷದ ಬದುಕು ಮಾತ್ರ ನನಗುಳಿದಿದೆ ಎಂದವರು ಹೇಳಿದಾಗ ಜಗತ್ತಿಡೀ ಶೂನ್ಯವಾಗಿ ಕಂಡದ್ದು ನಿಜ..
ಕೆಲ  ವರ್ಷಗಳ ಹಿಂದೆ ತೀವ್ರ ತಲೆ ನೋವು ಜ್ವರ ಬಂದಿತ್ತು‌.ಹತ್ತಿರದ ಡಾ.ರವಿ ಅವರ ಕ್ಲಿನಿಕ್ ಹೋಗಿ ಅವರು ಹೇಳಿದಂತೆ ಔಷಧ ತಗೊಂಡಿದ್ದರೂ ಕಡಿಮೆಯಾಗಿರಲಿಲ್ಲ..ಹಾಗಾಗಿ ತಜ್ಞ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಂಡು ಫೋರ್ಟಿಸ್ ಹಾಸ್ಪಿಟಲ್ ನಲ್ಲಿ ನನ್ನ ಸರದಿಗಾಗಿ ಕಾಯುತ್ತಾ ಇದ್ದೆ.ಇದ್ದಕ್ಕಿದ್ದಂತೆ ಏನೋ ಕೆಟ್ಟ ವಾಸನೆ ಬಂದಂತಾಗಿ ಉಸಿರು ಸಿಕ್ಕಿ ಹಾಕೊಂಡಂತೆ ಆಗಿ ಹಿಂಸೆ ಆಯಿತು. ಅಷ್ಟೇ ನನಗೆ ಗೊತ್ತಾಗಿದ್ದು..
ನಂತರ ಎಚ್ಚರಾಗುವಾಗ ಐಸಿಯು ವಿನಲ್ಲಿದ್ದೆ‌.ಆರಂಭದಲ್ಲಿ ನಾನೆಲ್ಲಿದ್ದೇನೆ ಎಂದು ತಿಳಿಯದೆ ಗೊಂದಲ ಆಯಿತು ಅದು ಆಸ್ಪತ್ರೆ ಐಸಿಯು ಅಂತ ನನಗೆ ಗೊತ್ತಾಗಲು ಸುಮಾರು ಹೊತ್ರು ತಿಳಿಯಿತು. ನಾನು ನಾಲ್ಕೈದು ಗಂಟೆ ಪ್ರಜ್ಞೆ ಇಲ್ಲದೆ ಇದ್ದೆನೆಂದು ಮತ್ತೆ ತಿಳಿಯಿತು.
ಅಷ್ಟರೊಳಗೆ ರಕ್ತ ಪರೀಕ್ಷೆ, ಸಿಟಿ ಸ್ಕಾನಿಂಗ್  ಇತ್ಯಾದಿಗಳನ್ನು ಮಾಡಿದ್ದರು.ನಂತರ ಎಮ್ ಅರ್ ಐ ಸ್ಕಾನಿಂಗ್ ಆಯಿತು ‌.ನಂತರ ನ್ಯೂರಾಲಜಿ ವೈದ್ಯರು ಬಂದುಸಿಸ್ಟರ್ ಗಳಿಗೆ  ಏನೇನೋ ನಿರ್ದೇಶನ  ಮಾಡಿ  ಹೋದರು.
ನನಗೋ ಆತಂಕ.ಒಂದು ಸಣ್ಣ ಜ್ವರ  ತಲೆನೋವಿಗೆ ಇಷ್ಟೆಲ್ಲ ಪರೀಕ್ಷೆಗಳು ಯಾಕೆ ? ಒಂದಿನಿತು ಸುಸ್ತಾಗಿ ತಲೆ ಸುತ್ತಿ ಬಿದ್ದಿದ್ದರೆ ಅದಕ್ಕೆ ಐಸಿಯು ಎಂತಕೆ ? ಎಲ್ಲಕ್ಕಿಂತ ಹೆಚ್ಚಾಗಿ ನ್ಯೂರಾಲಜಿಷ್ಟು ಯಾಕೆ ಅಂತ ?
ಅಂತೂ ಇಂತೂ ಜ್ವರ ಬಿಟ್ಟು ಹುಷಾರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದೆ.ಮನೆಗೆ ಕಳಹಿಸುವಾಗ ಒಂದುವಾರ ಬಿಟ್ಟು ಅದೇ ನ್ಯೂರಾಲಜಿಸ್ಟ್ ಅನ್ನು ಕಾಣಬೇಕೆಂದು ಸೂಚಿಸಿದ್ದರು.ಒಂದು ವಾರದಲ್ಲಿ ಹೋಗಲಾಗಲಿಲ್ಲ ನನಗೆ .ಹತ್ತಿಪ್ಪತ್ತು ದಿನ ಕಳೆದು ಎಲ್ಲಾ ರಿಪೋರ್ಟ್ ಗಳನ್ನು ಹಿಡಿದುಕೊಂಡು ಹೋಗಿ ಅವರನ್ನು ಭೇಟಿಯಾದೆ.
ಅವರು ನಿಮಗೆ ಮರೆವು ಇದೆಯಾ ? ಬಸ್ ಇಳಿಯುವ ಸ್ಟಾಪ್ ಗೊತ್ತಾಗುತ್ತಾ ಇತ್ಯಾದಿಯಾಗಿ ಅನೇಕ ಪ್ರಶ್ನೆಗಳನ್ನು ಕೇಳಿದರು‌.ನನಗೆ ತಿಳಿದಂತೆ ಪ್ರಾಮಾಣಿಕ ಉತ್ತರ ನೀಡಿದೆ‌‌.ನಾನೋ ತುಂಬಾ ಬೇಜವಾಬ್ದಾರಿ ಹಾಗಾಗಿ ವಸ್ತುಗಳನ್ನೆಲ್ಲ ಎಲ್ಲೆಲ್ಲೋ ಇಟ್ಟು ಮರೆತು ಊರಿಡೀ ಹುಡುಕಾಡುತ್ತೇನೆ‌‌‌.ಹಾಗಾಗಿ ಮರೆವು ಇದೆ ಎಂದು ಹೇಳಿದೆ‌.ಅವರೇನು ಗ್ರಹಿಸಿದರೋ ಗೊತ್ತಿಲ್ಲ.. ಇಷ್ಟಕ್ಕೂ ನನಗೇನಾಗಿದೆ ? ಈಗ ಜ್ವರ ಇಲ್ಲ ಆರಾಮಾಗಿದ್ದೇನಲ್ಲ ಎಂದು ಕೇಳಿದೆ.ಎಮ್ ಅರ್ ಐ ಸ್ಕಾನಿಂಗ್ ರಿಪೋರ್ಟ್ ಗಳನ್ನು ಮತ್ತೆ ಮತ್ತೆ ನೋಡಿ ಮೆದುಳು ಸವೆದಿದೆ ಎಂದು ಏನೇನೋ ಹೇಳಿದರು.(  ಬೇರೆ ಸಂದರ್ಭದಲ್ಲಾಗಿದ್ದರೆ ಓ ಹಾಗಾದರೆ ನನಗೆ ಮೆದುಳು ಇದೆ ಅಂತ ಗೊತ್ತಾಗಿ ಸಂತಸ ಪಡುತ್ತಿದ್ದೆ  ,,😀 ಆದರೆ ಅಂದು ಆ ಪರಿಸ್ಥಿತಿ ಯಲ್ಲಿ ನಾನಿರಲಿಲ್ಲ )
ತುಂಬಾ ಆತಂಕಕ್ಕೆ ಒಳಗಾದೆ‌.ಮೆದುಳು ಸವೆದರೆ ಎಂತ ಮಾಡುವುದು ? ಅದಕ್ಕೆ ಔಷಧ ಇಲ್ಲವೇ ಎಂದು ಕೇಳಿದೆ.ಅವರು ಇಲ್ಲವೆಂಬಂತೆ ತಲೆ ಆಡಿಸುತ್ತಾ  ನಾಲ್ಕೈದು ವರ್ಷ ಬದುಕಬಹುದು ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು... ಒಂದಷ್ಟು ಹೊತ್ತು ಏನೂ ತೋಚದೆ ಸುಮ್ಮನಾದೆ..ಸ್ವಲ್ಪ ಹೊತ್ತಿಗೆ" ನಮ್ಮೂರ ಸುರೇಶಣ್ಣನವರಿಗೆ  ಖ್ಯಾತ ವೈದ್ಯರೊಬ್ಬರು ನೀವಿನ್ನು ಹೆಚ್ಚೆಂದರೆ ಆರು ತಿಂಗಳು ಬದುಕಬಹುದಷ್ಟೇ ಎಂದು ಹೇಳಿದ್ದರೂ ನಂತರ ಅವರು ಆಯರ್ವೇದ ವೈದ್ಯರ ಚಿಕಿತ್ಸೆ ಪಡೆದರು. ಆ ವೈದ್ಯರು ಹಾಗೆ ಹೇಳಿ ಹತ್ರು ಹದಿನೈದು ವರ್ಷಗಳ ನಂತರ ಕೂಡ ಸುರೇಶಣ್ಣ ಚೆನ್ನಾಗಿಯೇ ಬದುಕುತ್ತಿದ್ದಾರೆ " ಎಂಬುದು ನೆನಪಿಗೆ ಬಂದು ಸ್ವಲ್ಪ ಮಟ್ಟಿಗೆ ಧೈರ್ಯ ಬಂತು.ಜೊತೆಯಲ್ಲಿ
ಯಾವಾಗಲೋ ಓದಿದ್ದು ನೆನಪಾಯಿತು‌.ವಯಸ್ಸಾಗುತ್ತಾ ಎಲ್ಲರ ಮೆದುಳೂ ಸವೆಯುತ್ತದೆ ಅದರಲ್ಲಿ ವಿಶೇಷ ಏನಿಲ್ಲ ಎಂದು. ಅದನ್ನು ವೈದ್ಯರಲ್ಲಿ ಹಾಗೆಯೇ ಕೇಳಿದೆ‌‌.ನನಗೆ ನಲುವತ್ತೈದು ವರ್ಷ ಆಯಿತು.ಹಾಗಾಗಿ ಸ್ವಲ್ಪ ಮೆದುಳು ಸವೆದಿದ್ದರೆ ಅದು ಸಹಜ ತಾನೇ ಎಂದು. ಆಗ ಅವರು ನಿಮ್ಮ ಮೆದುಳು ಜಾಸ್ತಿ ಸವೆದಿದೆ ಎಂದರು. ಎಷ್ಟು ವರ್ಷ ಆದಷ್ಟು ಸವೆದಿದೆ ಎಂದು ಕೇಳಿದೆ.ಒಂದು ಇಪ್ಪತ್ತು ವರ್ಷದಷ್ಟು ಜಾಸ್ತಿ ಎಂದರೆ ಸುಮಾರು ಅರುವತ್ತೈದು ವರ್ಷ ಆಗುವಾಗ ಎಷ್ಟೋ ಅಷ್ಟು ಅಂದರು.
ಅಷ್ಟೆ ತಾನೇ ಡಾಕ್ಟರ್ ,ನೂರು ವರ್ಷ ಬದುಕುತ್ತಾರಲ್ಲಾ ? ಇನ್ನೂ ಮೂವತ್ತೈದು ವರ್ಷಗಳಷ್ಟು( 100-65 -35) ಕಾಲ ನನ್ನ ಮೆದುಳು ಕೆಲಸ ಮಾಡುತ್ತಲ್ಲಾ ? ನನಗೀಗ ನಲುವತ್ತೈದು ,ಇನ್ನೂ ಮೂವತ್ತೈದು ವರ್ಷ ಅಂದರೆ ಎಂಬತ್ತು ವರ್ಷ ತನಕ ನನಗೆ ಆಯುಸ್ಸು ಇದೆಯಲ್ಲ? ಎಂದು ತಕ್ಷಣವೇ ನಗುತ್ತಾ ಕೇಳಿದೆ.ನಾನು ಒಂಚೂರು ಹಾಗೆಯೇ ..ಎಂತಹ ಸಂದರ್ಭದಲ್ಲಿ ಕೂಡ ತೀರಾ ಗಾಂಭೀರ್ಯ ದಿಂದ ಇರಲು ಬರುವುದಿಲ್ಲ..
ಅವರು ಕೂಡ ಹ್ಹ ಹ್ಹಹ್ಹ ಎಂದು ಬಾಯಿ ತುಂಬಾ ನಕ್ಕರು.
ಇಂತಹ ಧನಾತ್ಮಕ ಮನೋಭಾವ ನಿಮ್ಮಲ್ಲಿದ್ದರೆ ಎಂಬತ್ತೇನು ನೂರು ವರ್ಷ ಬದುಕುತ್ತೀರಿ ,ಆದರೂ ಆರೋಗ್ಯದ ಬಗ್ಗೆ ಸ್ವಲ್ಪ ನಿಗಾ ವಹಿಸಿ ಎಂದು ಹೇಳಿ ಒಂದಷ್ಟು ಮೆಡಿಸಿನ್ ಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವಂತೆ ಬರೆದುಕೊಟ್ಟರು‌.
ಅಲ್ಲಿ ತಮಾಷೆ ಮಾಡಿ ನಗಾಡಿ ಎದ್ದು ಬಂದಿದ್ದರೂ ಅವರು ಇನ್ನೂ ನಾಲ್ಕೈದು ವರ್ಷ ಬದುಕಬಹುದಷ್ಟೇ ಎಂದು ಹೇಳಿದ್ದು ತಲೆ ಕೊರೆಯುತ್ತಾ ಇತ್ತು.
ಹಾಗಾಗಿ ಮತ್ತೆ ಇಬ್ಬರು ನರ ರೋಗ ತಜ್ಞರನ್ನು ಭೇಟಿ ಮಾಡಿದೆ‌‌
ಮತ್ತೊಮ್ಮೆ ಮೆದುಳಿನ  ಸಿಟಿ ಸ್ಕಾನಿಂಗ್ ,ಎಂ ಆರ್ ಐ ಸ್ಕ್ಯಾನಿಂಗ್ ಮಾಡಿಸಿದರು‌.
ಮತ್ತೆ ರಿಪೋರ್ಟ್ ಗಳನ್ನು ನೋಡಿ,ನನ್ನನ್ನು ಪರೀಕ್ಷಿಸಿ ಒಂಚೂರು ಸಮಸ್ಯೆ ಇರುವುದಾದರೂ ಅಂತಹ ಕ್ರಿಟಿಕಲ್ ಏನೂ ಇಲ್ಲ..ಎಂದರು.
ಮತ್ತೆ ನಾನು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ.ನನಗೆ ಆ ಹಿಂದಿನ  ವೈದ್ಯರು ಹೇಳಿದಂತಹ ಗಹನವಾದ ಸಮಸ್ಯೆ ಇಲ್ಲದಿದ್ದರೂ ಒಂಚೂರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದೆ.ಅಲ್ಲಾ ನಲುವತ್ತೊಂಬತ್ತು ವರ್ಷ ಆದ ಮೇಲೆ ಹದಿನಾರು ವರ್ಷದ ಹುಡುಗಿ ಹಾಗೆ ಇರಬೇಕೆಂದರೆ ಇರಲಾಗುತ್ತದಾ ಅಲ್ವಾ ?

ಅದೇನೇ ಇರಲಿ, ಆ ವೈದ್ಯರು ನಾಲ್ಕೈದು ವರ್ಷ ಎಂದು ಹೇಳಿದ್ದು ಮಾತ್ರ ನನ್ನಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ‌.ಅಷ್ಟರ ತನಕ ನಾನು ನನಗಾಗಿ ಬದುಕಲೇ ಇಲ್ಲ..ನನಗೆ ಸೀರೆ ಚಿನ್ನ ಬಂಗಲೆ ಕಾರು  ಯಾವುದರ ವ್ಯಾಮೋಹ ಕೂಡ ಇಲ್ಲ..
ಆದರೂ ಯಾವುದೂ ಬೇಡವೆಂಬ ನಿರ್ಲಿಪ್ತತೆಯನ್ನು ತೊರೆದು ನಾನು ಬದುಕನ್ನು ಎಂಜಾಯ್ ಮಾಡಲು ಶುರು ಮಾಡಿರುವೆ‌‌.
ನನ್ನ ಕಲ್ಪನೆಗೆ ಅನುಗುಣವಾಗಿ ಚಂದದ ಮನೆಯನ್ನು ಕಟ್ಟಿಸಿದೆವು‌.ಮೊದಲಿಗೆ ಹೋಲಿಸಿದರೆ ಈ ಎರಡು ವರ್ಷಗಳಲ್ಲಿ ನಾನು ಹೆಚ್ಚು ಸೀರೆ,ಡ್ರೆಸ್ ಗಳನ್ನು ತೆಗೆದುಕೊಂಡಿರುವೆ. ಸದ್ಯದಲ್ಲೇಒಂದು  ಚಂದದ ಕಾರು ತಗೊಳ್ಳಬೇಕೆಂದಿರುವೆ‌.
ಮನೆ ಅಂಗಳದಲ್ಲಿ ನನಗಿಷ್ಟವಾದಂತೆ ಹೂಗಿಡಗಳನ್ನು ತರಕಾರಿ ಗಿಡಗಳನ್ನು ಹಾಕಿ ಆನಂದಿಸುತ್ತಿರುವೆ.
ನಾನು ನನಗಾಗಿ ಕೂಡ ಒಂದು ಸ್ವಲ್ಪ ಸಮಯವನ್ನು ಮೀಸಲಿಟ್ಟಿರುವೆ‌‌.
ಹಾಗೆಂದು ತೀರಾ ಸ್ವಾರ್ಥಿ ಆಗಿಲ್ಲ.ಎಲ್ಲ ಸುಖಗಳೂ ನನಗೇ ಸಿಗಬೇಕೆಂಬ ಹುಚ್ಚು ನನಗಿಲ್ಲ.
ಮೊದಲಿನಿಂದಲೂ ನಾನು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿದ್ದೆ‌.ಈಗಲೂ ಮುಂದುವರೆಸಿರುವೆ‌.
ನನ್ನ ಬದುಕಿನ ವಿಚಾರಗಳನ್ನು ಆಗೊಮ್ಮೆ ಈಗೊಮ್ಮೆ ಬ್ಲಾಗ್ ನಲ್ಲಿ ಬರೆಯುತ್ತಾ ಇದ್ದೆ‌.ಆತ್ಮಕಥೆ ಬರೆಯ ಬೇಕೆಂದು ಕೂಡ ಇದ್ದೆ‌.ಆದರೆ ಅದಕ್ಕೆ ಕನಿಷ್ಠ ಅರುವತ್ತು ವರ್ಷ ಆದರೂ ಆಗಬೇಕು.ಅನುಭವ ಆಗಬೇಕು.ಹಾಗಾಗಿ ನಂತರ ಬರೆಯುವುದು ಎಂದು ಕೊಂಡಿದ್ದೆ‌.ಆದರೆ ಯಾವಾಗ ವೈದ್ಯರ ಬಾಯಿಂದ ನಾಲ್ಕೈದು ವರ್ಷ ಎಂಬ ಮಾತು ಕೇಳಿದೆನೋ ನಾನು
ಬೇಗನೆ ನನ್ನ ಆತ್ಮಕಥೆ ಬರೆಯಬೇಕೆಂದು ಕೊಂಡೆ‌.
ಅವರೇನು ಹೇಳಿದರೋ ನಾನೇನು ಅರ್ಥ ಮಾಡಿಕೊಂಡೆನೋ ‌ಗೊತ್ತಿಲ್ಲ.ಅವರು ಹೈ ಪೈ ಇಂಗ್ಲಿಷ್ ನಲ್ಲಿ ಮಾತಾಡ್ತಿದ್ದರು.ನನಗೋ ಅಷ್ಟೇನೂ ಇಂಗ್ಲಿಷ್ ಜ್ಞಾನವಿಲ್ಲ.ನಾನು ಮತ್ತೊಮ್ಮೆ ಎರಡು ಮುರು ವರ್ಷಗಳ ನಂತರ ಕಂಡಾಗ ತಾವು ಹಾಗೆ ಹೇಳಿಯೇ ಇಲ್ಲ ಎಂದಿದ್ದರು.
ಇರಲಿ.
ನಂತರ ಬೆರೆ ಇಬ್ಬರು  ಮೂವರು ತಜ್ಞ ವೈದ್ಯರ ಅಭಿಪ್ರಾಯವನ್ನು ಪಡೆದು ಆ ವೈದ್ಯರದು ನನ್ನ ಸಮಸ್ಯೆಯ ಕುರಿತು  ತಪ್ಪು ಗ್ರಹಿಕೆ ಆಗಿತ್ತು ಎಂದು ತಿಳಿದುಕೊಂಡೆ.

ಇದಾಗಿ ಏಳು ವರ್ಷಗಳೇ ಕಳೆದು ಹೋಗಿವೆ ಈಗ .

ಆದರೂ ಸಾಯುವುದಕ್ಕೆ ಇಷ್ಟೇ ವಯಸ್ಸು ಎಂಬ ನಿಗದಿತ ಅವಧಿ ಇಲ್ಲ..ಯಾರು ಯಾವ ಕ್ಷಣಕ್ಕೂ ಸಾಯಬಹುದು.ಅದಕ್ಕೆ,ಮೆದುಳು ಸವೆತ, ಕ್ಯಾನ್ಸರ್, ಕಿಡ್ನಿ ಪೈಲೂರು,ಹಾರ್ಟ್ ಅಟ್ಯಾಕ್ ಮೊದಲಾದ ಗಹನ ಅರೋಗ್ಯ  ಸಮಸ್ಯೆಗಳೇ  ಆಗಬೇಕಿಲ್ಲ..ಆರೋಗ್ಯವಂತ ವ್ಯಕ್ತಿ ಕೂಡ ಮಾತನಾಡುತ್ತಲೇ ಕುಸಿದು ಜೀವ ಬಿಟ್ಟಿರುವ ಅನೇಕ ವೃತ್ತಾಂತ ಗಳನ್ನು ಕೇಳಿದ್ದೇವೆ,ವಿಡಿಯೋ ಗಳಲ್ಲಿ ನೋಡಿದ್ದೇವೆ.
ಇಷ್ಟಕ್ಕೂ ನಾವ್ಯಾರೂ ಈ ಭೂಮಿಯಲ್ಲಿ ಶಾಶ್ವತವಾಗಿ ಇರುವುದಿಲ್ಲ.. ಒಬ್ಬರ ಹಿಂದೆ ಒಬ್ಬರು ಸಾಗುತ್ತಲೇ ಇರುತ್ತೇವೆ.
ಅದಕ್ಕೂ ಮೊದಲು ಇಲ್ಲಿ ಹುಟ್ಟಿದ್ದರ ಗುರುತನ್ನು ನಾವು ಬಿಟ್ಟು ಹೋಗುವುದಕ್ಕಾಗಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕಿದೆ.
ಎಲ್ಲಕ್ಕಿಂತ ಹೆಚ್ಚು ನನ್ನ ಅಧ್ಯಯನದ ಸಾವಿರದ ಎಂಟು  ದೈವಗಳ ಮಾಹಿತಿ ಇರುವ ಬೃಹತ್ ಹೊತ್ತಗೆಯನ್ನು ಪ್ರಕಟಿಸಬೇಕಿದೆ 
ಇಷ್ಟನ್ನು ಅನಿಗ್ರಹಿಸಿದ ದೇವರು ಮುಂದೆಯೂ ಕೈ ಹಿಡಿದು ನಡೆಸುವನೆಂಬ ನಂಬಿಕೆಯಿಂದಿರುವೆ.
 

No comments:

Post a Comment