Sunday 11 June 2017

ಮದುವೆಗೆ ಬೇಕಾದ ಹೂವಿನ ಹಾರ ನಾನೇ ತಂದಿದ್ದೆ © ಡಾ ಲಕ್ಷ್ಮೀ ಜಿ ಪ್ರಸಾದ




ಚಿತ್ರ ಕೃಪೆ:  ಕನ್ನಡ ಕನ್ನಡತಿ
ಅಂದು ೧೯೯೩ ರ ಪೆಬ್ರವರಿ ಹದಿಮೂರನೇ ತಾರೀಕು,ನಾನು ಮತ್ತು ಗೆಳತಿ ಅನುಪಮಾ ಉಜಿರೆ ( ಖ್ಯಾತ ಕಥಾಗಾರ್ತಿ ಅನುಪಮಾ  ಪ್ರಸಾದ್) ಜೊತೆ ಬೆಳಗ್ಗೆ ಸುಮಾರು ಏಳು ಗಂಟೆ ಹೊತ್ತಿಗೆ ಉಜಿರೆಯಿಂದ ಮಂಗಳೂರಿಗೆ ಹೋಗಲು  ಬಸ್ ಹತ್ತಿದ್ದೆ .ಮರು ದಿನ  ಹದಿನಾಲ್ಕನೇ ತಾರೀಕಿಗೆ  ನನ್ನ ಮದುವೆ.
ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಅಕ್ಕನ ಮದುವೆ ಆಗಿತ್ತು. ಅಣ್ಣ ದೂರದ ಕುಂಭಕೋಣಂ ನಲ್ಲಿ ಓದುತ್ತಾ ಇದ್ದಹಾಗಾಗಿ‌ ಮನೆಯಲ್ಲಿ ಹಿರಿಯಳಾಗಿ ನಾನೇ ಇದ್ದೆ. ತಮ್ಮಂದಿರು ಚಿಕ್ಕವರು .  ಹಾಗಾಗಿಮನೆಗೆ ಬೇಕಾದ ಸಾಮಾನುಗಳನ್ನು ತರುವುದು,ಬಟ್ಟೆ ಬರಹಗಳನ್ನು ತರುವುದು ಮೊದಲಾದ ವ್ಯವಹಾರವನ್ನು ಮಾಡಿ ಅನುಭವವಾಗಿತ್ತು.
 ವಾರದ ಮೊದಲು ಉಜಿರೆಯಲ್ಲಿ ದ್ವಿತೀಯ ವಿಜ್ಞಾನ ಪದವಿ ಓದುತ್ತಿದ್ದ ನಾನು ಊರಿಗೆ ನಾಂದಿಗಾಗಿ  ಬಂದಿದ್ದೆ . ( ಹವ್ಯಕರಲ್ಲಿ ಮದುಮಗ ಮತ್ತು ಮದುಮಗಳಿಗೆ ಮದುವೆ ದಿನ ಅಥವಾ ಅದಕ್ಕಿಂತ ಹಿಂದೆ ಹತ್ತು ದಿನಗಳ ಒಳಗೆ ಒಂದು ನಾಂದಿ ಎಂಬ ಶುಭಕಾರ್ಯವಿದೆ . ನಾಂದಿಯ ನಂತರ ಸೂತಕ ಬಂದರೆ ಮದುವೆ ತನಕ ತಂದೆ ತಾಯಿ ಮತ್ತು ಮದುಮಕ್ಕಳಿಗೆ ಸೂತಕ ತಾಗುವುದಿಲ್ಲ ) ಅದಕ್ಕೂ ಕೆಲ ದಿನಗಳ ಮೊದಲು ಮದುವೆಗೆ ಬೇಕಾದ ಚಿನ್ನವನ್ನು ಮಂಗಳೂರಿನ ಭಂಡಾರ್ಕರ್ ಮಳಿಗೆಗೆ ಹೋಗಿ ಮಾಡಿಸಲು ಹೇಳಿ ದುಡ್ಡು ಕೊಟ್ಟು ಬಂದಿದ್ದೆವು .
ಕಾಲೇಜಿನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದ ಕಾರಣ ರಜೆ ಹಾಕುವಂತಿರಲಿಲ್ಲ .ಹಾಗಾಗಿ ನಾಂದಿ ಮರುದಿನ ಉಜಿರೆಗೆ ಹೋಗಿದ್ದೆ.ಹನ್ನೆರಡನೇ ತಾರೀಖಿನಂದು ಕೊನೆಯ ಪೂರ್ವ ಸಿದ್ಧತಾ ಪರೀಕ್ಷೆ ಬರೆದು‌ ಮರುದಿನ ಎಂದರೆ ಮದುವೆ ಹಿಂದಿನ ದಿನ ಊರಿಗೆ ಬರುತ್ತೇನೆ ಎಂದು ಹೇಳಿದ್ದೆ.ಆಗ ಅಮ್ಮ ಊರಿಗೆ ಬರುವಾಗ ಮಂಗಳೂರಿಗೆ ಬಮದು ಭಂಡಾರ್ಕರ್ ಚಿನ್ನದ ಮಳಿಗೆಗೆ ಹೋಗಿ ಮಾಡಿಸಲು ಹಾಕಿದ ಒಡವೆಗಳನ್ನು ತಂದು ಬಿಡು ಎಂದು ಹೇಳಿದರು.ಜೊತೆಗೆ ಮರುದಿನ ಮದುವೆಗೆ ಬೇಕಾದ ಹೂವಿನ ಹಾರ,ಹೂ ಮೊದಲಾದವುಗಳನ್ನು ತರುತ್ತೇನೆ ಎಂದು ಒಪ್ಪಿ ಕೊಂಡೆ .
ಮಂಗಳೂರಿಗೆ ತಲುಪಿದಾಗ ಸುಮಾರು ಹತ್ತು ಗಂಟೆ ಆಗಿತ್ತು .ಮೊದಲಿಗೆ ಚಿನ್ನದ ಮಳಿಗೆಗೆ ಹೋದೆವು.ಅಲ್ಲಿ ಒಡವೆಗಳು ಇನ್ನೂ ಸಿದ್ಧವಾಗಿರಲಿಲ್ಲ.ಒಂದು ಗಂಟೆ ಬಿಟ್ಟು ಬನ್ನಿ ಎಂದು ಹೇಳಿದರು .ಸರಿ ಎಂದು ಅಲ್ಲಿಯೇ ಸಮೀಪದ ಹೂವಿನ ಮಾರುಕಟ್ಟೆಗೆ ಹೋದೆವು .ಅಲ್ಲಿ ಚರ್ಚೆ ಮಾಡಿ ಎರಡು ಹೂವಿನ ಹಾರ ಹಾಗೂ ಬೇಕಾದ ಇತರ ಬಿಡು ಹೂ,ಕಟ್ಟಿದ ಹೂವು,ಮಲ್ಲಿಗೆ,ಗುಲಾಬಿ ಸೇವಂತಿಗೆ ಗಳನ್ನು ಖರೀದಿಸಿ ಮತ್ತೆ ಚಿನ್ನದ ಮಳಿಗೆಗೆ ಬಂದೆವು .ಇಷ್ಟೆಲ್ಲಾ ಆಗುವಾಗ ಹನ್ನೊಂದೂವರೆ ಆಗಿತ್ತು. ಅಲ್ಲಿಂದ ಒಡವೆಗಳನ್ನು ತೆಗೆದುಕೊಂಡು ಲೇಡಿಗೋಷನ್ ಗೆ ಬಂದು ಬಸ್ ಹಿಡಿದು ತಲಪಾಡಿಗೆ ಬಂದು ಅಲ್ಲಿಂದ ನಮ್ಮ ಊರಿಗೆ ಹೋಗುವ ಬಸ್ ಹತ್ತಿದೆ.ಬಸ್ ನಲ್ಲಿ ಬಾಲ್ಯ ಸ್ನೇಹಿತೆ ಶೋಭಿತಾಳನ್ನು ನೋಡಿ ನಾಳೆ ನನ್ನ ಮದುವೆ ಬಾ ಎಂದು ಆಹ್ವಾನ ಪತ್ರಿಕೆ ನೀಡಿದೆ .ಮಂಗಳೂರಿನಲ್ಲಿ ಸುತ್ತಿ ಸುಸ್ತಾಗಿದ್ದ  ನನ್ನನ್ನು ಅಪನಂಬಿಕೆಯಿಂದ ನೋಡಿ ಏ ಸುಳ್ಳುಹೇಳಿ ತಮಾಷೆಮಾಡುತ್ತಿದ್ದೀಯ ? ಎಂದು ಕೇಳಿದಳು.ಸುಳ್ಳು ಹೇಳುತ್ತಾ ಇಲ್ಲ ಅದು ಸತ್ಯ ಎಂದು ಒಪ್ಪಿಸಲು ನಾನು ಹೆಣಗಾಡಬೇಕಾಯಿತು.  ಅವಳು ಸಾಮನ್ಯ ವೇಷ ಭೂಷಣ ದಲ್ಲಿದ್ದ ನನ್ನನ್ನು ಮದುಮಗಳು ಎಂದು ಅವಳು ಎಂದು ಭಾವಿಸಲು ಅವಳಿಗೆ ಕಷ್ಟಕರ ವಾಗಿತ್ತು .ಅಂತೂ ಇಂತು  ತಲುಪಿದಾಗ ಸಂಜೆ ಮೂರಾಗಿತ್ತು. ಗಂಟೆ ಮೂರಾದರೂ ಮದುಮಗಳು ಬಾರದ ಕಾರಣ ಮನೆಯಲ್ಲಿ ಗಡಿಬಿಡಿ ಆರಂಭವಾಗಿತ್ತು .ಅಣ್ಣನನ್ನು ಕಾರು ಮಾಡಿಕೊಂಡು ಉಜಿರೆಗೆ ಕಳಹಿಸಲು ಏರ್ಪಾಡು ಮಾಡುತ್ತಾ ಇದ್ದರು.ಅಷ್ಟರಲ್ಲಿ ನಾವು ತಲುಪಿದೆವು .ಎಲ್ಲರೂ ನಿರಾಳರಾದರು .ನಾವು ಊಟ ಮಾಡಿದೆವು.ಹತ್ತಿರದ ಬಂಧುಗಳು ಹಿಂದಿನ ದಿವಸವೇ ಬಂದಿದ್ದು ಪಟ್ಟಾಂಗ ಹೊಡೆದೆವು .ಹವ್ಯಕರಲ್ಲಿ ನಾಂದಿ ಬಿಟ್ಟರೆ ಮದುವೆಗೆ ಮೊದಲು ಯಾವುದೇ ಸಂಪ್ರದಾಯ ದ ಕಾರ್ಯಕ್ರಮ ಇರುವುದಿಲ್ಲ ಹಾಗಾಗಿ ನಾನು ಪೂರ್ವ ಸಿದ್ಧತಾ ಪರೀಕ್ಷೆ ಗಳನ್ನು ಬರೆದು ಮದುವೆ ಹಿಂದಿನ ದಿನ ಬಂದಿದ್ದೆ .ಇಂದು ಪೇಸ್ ಬುಕ್ ‌ನಲ್ಲಿ ಸ್ನೇಹಿತರೊಬ್ಬರು ಹೂವಿನ ಹಾರಕ್ಕಾಗಿ ಅಲೆದಾಡಿದ ಬಗ್ಗೆ ಬರೆದಿರುವುದನ್ನು ಓದಿದಾಗ ತಕ್ಷಣವೇ ನಾನೂ ಹೂವಿನ ಹಾರಕ್ಕಾಗಿ ಅಲೆದಾಡಿದ ವಿಚಾರ ನೆನಪಿಗೆ ಬಂತು 

No comments:

Post a Comment