ಆತ್ಮ ಕಥೆಯ ಬಿಡಿ ಭಾಗಗಳು
ಪೇಟೆಯಲ್ಲಿ ಬಾಡಿಗೆ ಮನೆಯೇ ಸಿಗುವುದಿಲ್ಲ ಎಂದಿದ್ದರು..
ಹೌದು 31 ವರ್ಷಗಳ ಹಿಂದೆ ನಾನಿದನ್ನು ಸತ್ಯವಾಗಿಯೂ ನಂಬಿದ್ದೆ.ಬಾಡಿಗೆಗೆ ಮನೆ ಸಿಗದಿದ್ದರೇನು ಮಾಡುವುದು ಎಂದು ತುಂಬಾ ಆತಂಕಕ್ಕೆ ಒಳಗಾಗಿದ್ದೆ
ಎರಡನೆಯ ವರ್ಷ ಪದವಿ ಓದುತ್ತಿರುವಾಗ ಮದುವೆಯಾಯಿತು ಅಂತಿಮ ವರ್ಷ ಅಂತೂ ಆಡಿಕೂಡಿ ಡೋಲಾಯಮಾನ ಸ್ಥಿತಿಯಲ್ಲಿಯೇ ಕಳೆಯಿತು
ಮುಂದೇನು ? ಎಂಬ ಪ್ರಶ್ನೆ ನನ್ನೆದುರು ಬೃಹದಾಕಾರವಾಗಿ ಬೆಳೆದು ನಿಂತು ಕಾಡುತ್ತಿತ್ತು
ಬಿಎಸ್ ಸಿ ಓದುವಾಗ ಅಂತಹ ಜಾಣೆ ನಾನಾಗಿರಲಿಲ್ಲ.ಆದರೆ ಹತ್ತನೆಯ ತರಗತಿ ತನಕ ಜಾಣ ವಿದ್ಯಾರ್ಥಿನಿಯೆಂದೇ ಗುರುತಿಸಿಕೊಂಡವಳು ನಾನು
ನಂತರ ವಿಜ್ಣಾನ ನನಗೆ ಕಷ್ಟವಾಯಿತೋ ಇಂಗ್ಲಿಷ್ ಬಾರದೆ ಪಾಠ ತಲೆಗೇ ಹೋಗದೆ ಕಲಿಕೆಯಲ್ಲಿ ಹಿಂದುಳಿದೆನೋ ಗೊತ್ತಿಲ್ಲ
ಆದರೂ ಬಿಎಸ್ ಸಿಯಲ್ಲಿ ಒಂದೇ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿರಲಿಲ್ಲ
ಮುಂದೆ ಎಂ ಎಸ್ಸಿ ಆಗದೆಂದು ಅನಿಸಿತ್ತು.ಮತ್ತೆ ಆರ್ಟ್ಸ್ ತಗೊಂಡರೆ ರ‌್ಯಾಂಕ್ ತೆಗೆದು ಯಶಸ್ವಿಯಾದೇನೆಂಬ ಆತ್ಮವಿಶ್ವಾಸ ನನಗಿತ್ತು
ಹಾಗಾಗಿಯೇ ಕಟೀಲಿನಲ್ಲಿ ಸಂಸ್ಕೃತ ಎಂಎ ಗೆ ಸೇರಲು ನಿರ್ಧರಿಸಿದೆ
ಕೋಡ ಪದವು ಸಮೀಪದ ನಮ್ಮ ಮನೆಯಿಂದ ಕಟೀಲಿಗೆ ನಿತ್ಯ ಹೋಗಿ ಬರುವದ್ದು ಆಗದ ಮಾತು ಜೊತೆಗೆ ಉನ್ನತ ಕಲಿಕೆಗೆ ಮನೆ ಮಂದಿ ಬಂಧು ಬಳಗದವರಿಂದ ತೀವ್ರ ವಿರೋಧವಿತ್ತು
ಆದರೂ ನಾನು ನನ್ನ ಮೈದುನನಿಗೆ ' ನಾನು ಓದಿ ಒಳ್ಳೆಯ ಕೆಲಸ ಹಿಡಿದರೆ ನಮಗೆ ಆಸ್ತಿಯಲ್ಲಿ ಪಾಲು ಬೇಕಾಗಿ ಬರಲಾರದು.ಇಲ್ಲಿಯೇ ಇದ್ದು ಇರುವ ತುಂಡು ಭೂಮಿಯನ್ನು ಹಂಚಿಕೊಂಡು ತಲೆಗೆಳೆದರೆ ಕಾಲಿಗೆ ಬರದಂತಹ ಬದುಕು ಯಾಕೆ ? ಹಾಗಾಗಿ ನನ್ನ ಕಲಿಕೆಗೆ ವಿರೋಧವೇಕೆ ಎಂದಿದ್ದೆ
ಆಗಿನ ಕಾಲಘಟ್ಟ.ಹೇಳಿಕೊಡುವವರು ಅನೇಕರಿದ್ದರು
ಹಾಗಾಗಿ ವಿರೋಧ ಶಮನವಾಗಲಿಲ್ಲ.ಮನೆ ಮಂದಿ ಬಂಧು ಬಳಗವನ್ನು ಎದುರು ಹಾಕಿಕೊಂಡು ಮುಂದೆ ಓದಲು ನಿರ್ಧರಿಸಿದೆ
ಪ್ರಸಾದರನ್ನು ಒಪ್ಪಿಸಿದೆ
ಆಗ ಮೊದಲ ಬಾರಿಗೆ ಬಾಡಿಗೆ ಮನೆಗೆ ಹೋಗಬೇಕಾದ ಪ್ರಸಂಗ ಬಂತು.ಆಗ ನಮ್ಮ ನೆರೆಕರೆಯ ಮಂದಿಯ ಮಕ್ಕಳು ಮಂಗಳೂರಿನಲ್ಲಿದ್ದರು.ಅವರೆಲ್ಲ ಪೇಟೆಯಲ್ಲಿ ಬಾಡಿಗೆಗೆ ಮನೆಯೇ ಸಿಗುವುದಿಲ್ಲ ಎಂದಿದ್ದರು.ಪೇಟೆಯ ಅರಿವಿಲ್ಲದ ನಾನೂ ಇದು ಇರಬಹುದೇನೋ ಎಂದು ಭಯ ಪಟ್ಟಿದ್ದೆ
ಅದೃಷ್ಟವಶಾತ್ ನಮ್ಮ ಆದಾಯಕ್ಕೆ ಸರಿ ಹೊಂದುವ ಮಣ್ಣಿನ ಮೋಟು ಗೋಡೆಯ ಒಂದು ಕೊಠಡಿಯ ಮನೆ ನಮಗೆ ಕಟೀಲು ಸಮೀಪದ ಎಕ್ಕಾರಿನ ನಾಗವೇಣಿ ಅಮ್ಮನವರು ಒದಗಿಸಿದರು.
ನಂತರ ಒಂದು ವರ್ಷದೊಳಗೆ ಪ್ರಸಾದರಿಗೆ ಒಳ್ಳೆಯ ಕೆಲಸ ಸಿಕ್ತು. ನನ್ನ ಸೋದರ ಮಾವಂದಿರ ಪರಿಚಯದಲ್ಲಿ ಮಂಗಳೂರಿನ ವಿಜಯ ಪೆನ್ ಮಾರ್ಟ್ ( ಪೆನ್ನಿನ ಅಂಗಡಿಯ )ಶಾಮಣ್ಣನ ಸಹಾಯದಿಂದ ಮಂಗಳೂರಿನ ವಿಜಯ ನಿವಾಸದ ಬಾಡಿಗೆ ಮನೆ ಸಿಕ್ತು
ಮತ್ತೊಂದು ವರ್ಷದಲ್ಲಿ ಬಿಜೈ ಯಲ್ಲಿ ಶ್ರೇಯಸ್ ಅಪಾರ್ಟ್ ಮೆಂಟಿನಲ್ಲಿ ಒಂದು ಮನೆಯನ್ನು ಖರೀದಿಸಿದೆವು.
ಮುಂದೆ ಬೆಂಗಳೂರಿಗೆ ಶಿಪ್ಟ್ ಆಗುವಾಗ ಇದನ್ನು ಮಾರಾಟ ಮಾಡಿದೆವು
ಮಂಗಳೂರಿನಲ್ಲಿರುವಾಗಲೇ 2002-03 ರಲ್ಲಿ ಬೆಂಗಳೂರಿನ ಈಗಿನ ಸೈಟಿನಲ್ಲಿ ಸಣ್ಣದೊಂದು ಮನೆ ಕಟ್ಟಿಸಿದ್ದೆವು
2007 ರಿಂದ 2019 ರ ವರೆಗೆ ಅದೇ ಸಣ್ಣ ಮನೆಯಲ್ಲಿ ಇದ್ದೆವು ನಂತರ ಅದನ್ನು ರಿನೊವೇಟ್ ಮಾಡಿ ಈಗಿನ ಮನೆಯ ಸ್ವರೂಪಕ್ಕೆ ತಂದೆವು.
ಇಷ್ಟಾಗಿಯೂ ಊರಲ್ಲಿ ನನಗೆ ಮನೆ ಇಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.ಹಾಗಾಗಿ ನವ ಚೇತನ ಟೌನ್ ಶಿಪ್ ನಲ್ಲಿ ಸಣ್ಣದೊಂದು ಮನೆ ತಗೊಂಡು ಒಕ್ಕಲು ಮಾಡಿದೆವು.
ಸಧ್ಯಕ್ಕೆ ಊರ ಕಡೆ ಶಿಪ್ಟ್ ಆಗುವ ಯೋಚನೆ ಇಲ್ಲ.ಎಂದಾದರೂ ಹೋಗುವುದಾದರೆ ಇರಲಿ ಎಂದೆನಿಸ್ತು.ನವ ಚೇತನ ಟೌನ್ ಶಿಪ್ ನ ಸುವ್ಯವಸ್ಥೆ ನೋಡಿ ಖುಷಿಯಾಗಿ ತಗೊಂಡೆವು
ನಾವು ಮನೆ ಬಿಟ್ಟು ಹೊರ ನಡೆದ ನಂತರ ತಗೊಂಡ/ ಕಟ್ಟಿಸಿದ ನಾಲ್ಕನೆಯ ಮನೆ ಇದು.
ಯಾಕೋ 30 ವರ್ಷಗಳ ಹಿಂದೆ ನಮ್ಮ ನೆರೆಕರೆಯವರೊಬ್ಬರು ಪೇಟೆಯಲ್ಲಿ ಮನೆ ಬಾಡಿಗೆಗೇ ಸಿಗುವುದಿಲ್ಲ ಎಂದು ಹೆದರಿಸಿದ್ದು ನೆನಪಾಯಿತು
ಬಾಡಿಗೆಗೆ ಮಾತ್ರವಲ್ಲ.ಇರಲು ಅಂಗೈ ಅಗಲದಷ್ಟಾದರೂ ಮನೆ ಎಂಬ ಸ್ವಂತ ಸೂರನ್ನು ಒದಗಿಸಿದ ದೈವ ದೇವರುಗಳ ಕೃಪೆ ಅಪಾರ 🙏
ಗಂಡ ಹೆಂಡತಿ ಇಬ್ಬರೂ ದುಡಿದು ಆಡಂಬರವಿಲ್ಲದೆ ಸರಳವಾಗಿ ಬದುಕಿದರೆ ಸಣ್ಣದೊಂದು ಮನೆ ಕಟ್ಟಿಕೊಳ್ಳುದು ತೀರ ಅಸಾಧ್ಯವಾದುದಲ್ಲ
.ಆದರೆ ಹೆಚ್ಚಿನ ಜನರು ತುಸು ಆದಾಯ ಬರುವಷ್ಟರಲ್ಲಿ ಆಡಂಬರದ ಬದುಕಿಗೆ ಮಾರು ಹೋಗಿ ಬೆಲೆಬಾಳುವ ಕಾರು ಗೀರು ರಾಯಲ್ ಎನ್ಪೀಲ್ಡ್ ಬೈಕು ಐಫೋನ್ ಮೊದಲಾದವುಗಳ ಅಗತ್ಯವಿಲ್ಲದೇ ಇದ್ದಾಗಲೂ ಅವರಿವರಲ್ಲಿ ಇದೆ ಎಂದು ತಗೊಳ್ತಾರೆ.ಬಾಹ್ಯಾಡಂಬರದ ಶೋಕಿಯ ದೊಡ್ಡ ಬಾಡಿಗೆ ಮನೆಗೆ ಹೋಗ್ತಾರೆ .ವಿಪರೀತ ಸೀರೆ ಡ್ರೆಸ್ ಗಳನ್ನು ತಗೊಳ್ತಾರೆ ಆಗ ಅವರಲ್ಲಿ ದುಡ್ಡು ಉಳಿಯುವುದೇ ಇಲ್ಲ.
ನನ್ನ ಕೆಲವು ವಿದ್ಯಾರ್ಥಿಗಳು 30-35,000₹ ವೇತನದ ಕೆಲಸ ಸಿಗುತ್ತಲೇ ಹೆಚ್ಚು ಬೆಲೆಯ ಕಾರು ಐಫೋನ್ ತೆಗೆದುಕೊಳ್ಳುದನ್ನು ಗಮನಿಸಿದ್ದೇನೆ.ಹೀಗೆ ಬಾಹ್ಯಾಡಂಬರದ ವಸ್ತುಗಳ ಹಿಂದೆ ಹೋದರೆ ಇವರು ಮನೆ ತಗೊಳ್ಳಲು ದುಡ್ಡು ಉಳಿಸುದು ಹೇಗೆ ಎಂದೆನಿಸಿತ್ತು ನನಗೆ
ಬದಲಿಗೆ ಸಣ್ಣ ಮನೆಯಲ್ಲಿದ್ದುಕೊಂಡು ಸರಳವಾಗಿ ಬದುಕಿ ವ್ಯವಸ್ಥಿತವಾಗಿ ಉಳಿತಾಯ ಮಾಡಿಕೊಂಡು ಬಂದರೆ ಒಂದಷ್ಟು ಸಾಲ ಮಾಡಿ ಮನೆ ಕಟ್ಟಿಕೊಳ್ಳಬಹುದು.
ಇರಲು ಮನೆ ಆದರೆ ನಂತರ ನಿದಾನಕ್ಕೆ ಕಾರು ಗೀರಿನಂಥಹ ಆಡಂಬರದ ವಸ್ತುಗಳನ್ನು ತೆಗೆದುಕೊಳ್ಳಬಹುದು
ಇದು ನನ್ನ ಅಭಿಪ್ರಾಯ
ಎಲ್ಲರೂ ಹೀಗೆಯೇ ಯೋಚಿಸಬೇಕಿಲ್ಲ..ಲೋಕೋ ಭಿನ್ನರುಚಿಃ ಅಲ್ಲವೇ
.ಅಂದ ಹಾಗೆ ನಾನು ಅಂದು ಹೇಳಿದ ಕಲಿತು ಒಳ್ಳೆಯ ಕೆಲಸ ಸಿಕ್ಕರೆ ನಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಪಾಲು ಬೇಡ ಹಂಚಿಕೊಂಡು ತುಂಡು ಮಾಡುವುದೇಕೆ ಎಂಬ ಮಾತಿಗೆ ಈಗಲೂ ಬದ್ಧಳಿದ್ದೇನೆ ,ನಾವು ಪಾಲು ತೆಗೆದುಕೊಂಡಿಲ್ಲ.