ದೊಡ್ಡವರ ದಾರಿ
ನನಗೆಂದೂ ಕೆಲಸ ಕಷ್ಟದ್ದು ಎನಿಸಲಿಲ್ಲ ಎಂದ ನಿತ್ಯೋತ್ಸಾಹಿ ಶಕುಂತಲಾ ಶಾಂತ್ರಾಯ
ನನಗೆಂದೂ ಕೆಲಸ ಕಷ್ಟದ್ದು ಎನಿಸಲಿಲ್ಲ ಎಂದರು ಅವರು..ಹೌದು ಅದಕ್ಕೆ ಅವರು ವಿಶೇಷ ವ್ಯಕ್ತಿ.
ಶಿಕ್ಷಕರು ವರ್ಗಾವಣೆಯಾಗಿ ಹೋಗುವಾಗ ಮಕ್ಕಳು ಬಿಗಿದಪ್ಪಿ ಹೋಗಬೇಡಿ ಎಂದು ಅತ್ತದ್ದನ್ನು ನಾವುಗಳು ನೋಡಿರ್ತೇವೆ..ನೆಲಮಂಗಲದಿಂದ ವರ್ಗವಾಗಿ ಬೆಂಗಳೂರಿನ ಬ್ಯಾಟರಾಯನಪುರ ಸರ್ಜಾರಿ ಪಿಯು ಕಾಲೇಜಿಗೆ ಬಂದಾಗ ನಮ್ಮ ವಿದ್ಯಾರ್ಥಿಗಳು ಅತ್ತು ನನ್ನನ್ನು ಕಂಗಾಲು ಮಾಡಿದ್ದರು.ಮಕ್ಕಳು ಹಾಗೆಯೇ .ಶಿಕ್ಷಕರನ್ನು ತುಂಬಾ ಹಚ್ಚಿಕೊಳ್ತಾರೆ.ನಾವು ನಮ್ಮ ಅನುಕೂಲಕ್ಕಾಗಿ ವರ್ಗಾವಣೆ ಪಡೆದು ಬೇರೆಡೆ ಹೋಗುವಾಗ ನಮ್ಮನ್ನು ಬಹಳ ಪ್ರೀತಿಸುವ ಮಕ್ಕಳು ದುಃಖಿಸುತ್ತಾರೆ..ಇದರ ಅನುಭವ ನನ್ನಂತೆ ಅನೇಕ ಶಿಕ್ಷಕರಿಗೆ ಅಗಿರುತ್ತದೆ.
ಆದರೆ ಶಾಲೆಯ ಮುಖ್ಯಸ್ಥರೊಬ್ಬರು ನಿವೃತ್ತರಾದಾಗ ಸಹೋದ್ಯೋಗಿಗಳು ಅತ್ತು ದುಃಖಿಸಿದ ಪ್ರಕರಣ ಬಹಳ ಅಪರೂಪದ್ದು.ಮುಖ್ಯಸ್ಥರಲ್ಲಿ ತನ್ನ ಕೈ ಕೆಳಗಿನವರಿಗೆ ವಿನಾಕಾರಣ ತೊಂದರೆ ಕೊಡುವವರೇ ಹೆಚ್ಚು.ಅದರಲ್ಲೂ ನನ್ನಂತೆ ಇತರ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿದ್ದರೆ ಮತ್ಸರ ಪಟ್ಟು ಕಿರುಕುಳ ನೀಡುತ್ತಾರೆ
ಆದರೆ ಈ ಮುಖ್ಯಸ್ಥರು ಹಾಗಲ್ಲ..ಪ್ರತಿಬೆ ಯಾರಲ್ಲಿದ್ದರೂ ಗುರುತಿಸುವವರೇ ಆಗಿದ್ದರು.ತನ್‌ನ ಸಹೋದ್ಯೋಗಿಗಳನ್ನು ಮನೆಯ ಸದಸ್ಯರಂತೆ ಪ್ರೀತಿಯಿಂದ ಗೌರವದಿಂದ ಕಾಣ್ತಿದ್ದರು.ಅವರೇ ಶಕುಂತಲಾ ಸಾಂತ್ರಾಯ.
ಮಂಗಳೂರಿನ ಚಿನ್ಮಯ ವಿದ್ಯಾಸಂಸ್ಥೆ ಹುಟ್ಟಿ ಅಂದಾಜು ನಲುವತ್ತು ವರ್ಗಳಾಗಿದೆ .
ನಾನು ಅಲ್ಲಿ 2000-2004 ತನಕ ನಾಲ್ಕು ವರ್ಷ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡಿದ್ದೆ
ಆಗ ಮಂಗಳೂರಿನಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳಿರಲಿಲ್ಲ.ಅಲೋಷಿಯಸ್,ಕೆನರಾ,ಅಗ್ನೆಸ್ ಬಹು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟರೆ ಇವಕ್ಕೆ ಸಡ್ಡು ಹೊಡೆವಂತೆ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದ ಶಿಕ್ಷಣ ಸಂಸ್ಥೆ ಚಿನ್ಮಯ ಶಾಲೆ.
ಇದನ್ನು ಪ್ರಾರಂಭಿಸಿದವರು ಯಾರೆಂದು ನನಗೆ ಸರಿಯಾಗಿ ಗೊತ್ತಿಲ್ಲ.ಇಲ್ಲಿನ ಅರುಣಾ ಮಿಸ್ ತಿಳಿಸಿದಂತೆ ಯಾವುದೋ ಸೋರುವ ಹಳೆಯ ಕಟ್ಟಡದಲ್ಲಿ ಈ ಶಾಲೆ ಸುರು ಅಗಿತ್ತು.ಮಳೆ ಬರುವಾಗ ಅಲ್ಲಲ್ಲಿ ನೀರು ಸೋರುತ್ತಿತ್ತು.ಆಗ ಶಿಕ್ಷಕರು ಅಲ್ಲೆಲ್ಲ ಬಕೆಟ್ ಪಾತ್ರ ಚೊಂಬು ಇಡುತ್ತಿದ್ದರಂತೆ..ಮಂಗಳೂರಿಗೂ ಮಳೆಗೂ ಬಿಡಲಾಗದ ನಂಟು..ವರ್ಷದ ಆರು ತಿಂಗಳ ಕಾಲ ..
ಸುರಿವ ಮಳೆಯ ನಡುವೆ ಸೋರುವ ಹಳೆಯ ಕಟ್ಟಡದಲ್ಲಿ ಇದ್ದುಕೊಂಡೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದ ಹೆಗ್ಗಳಿಕೆ ಈ ಶಾಲೆಯ ಶಿಕ್ಷಕರದು.
ಈ ಶಾಲೆ ಒಂದು ಟ್ರಸ್ಟ್ ಮೂಲಕ ನಡೆಯುತ್ತಿದೆ.ಟ್ರಸ್ಟ್ ನ ಸಸಸ್ಯರಿಗೇನೂ ಶಾಲೆಯ ಪ್ರಗತಿ ಬಗ್ಗೆ ವೈಯುಕ್ತಿಕ ಕಾಳಜಿ ಇರಲಿಲ್ಲ
ಆದರೂ ಈ ಶಿಕ್ಷಣ ಸಂಸ್ಥೆ ಸ್ವಂತ ಕಟ್ಟಡಕ್ಕೆ ಬರುವಷ್ಟು ಆದಾಯವನ್ನು ಗಳಿಸಿದೆ.ಬಹುಶಃ ಇದಕ್ಕೆ ಜಾಗ ಒದಗಿಸಿದವರು ಗಣೇಶ ಬೀಡಿಯ ಗಣಪತಿ ಪೈ ಗಳಿರಬೇಕು.(ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ)
ಇಲ್ಲಿ ಶಿಕ್ಷಕರಿಗೆ ವೇತನ ಕಡಿಮೆ ಇತ್ತು.ಹೆಚ್ಚು ಕೊಡುವಷ್ಟು ಅದಾಯ ಇರಲಿಲ್ಲ
ಡೊನೇಶನ್ ಹಾವಳಿ ಈ ಸಂಸ್ಥೆಯಲ್ಲಿ ಇರಲಿಲ್ಲ.ಫೀಸ್ ಕೂಡಾ ತುಂಬಾ ಇರಲಿಲ್ಲ.ಬರುತ್ತಿದ್ದವರೆಲ್ಲ ಬಡ ಮಧ್ಯಮ ವರ್ಗದ ಮಕ್ಕಳೇ.
ಕೆ ಜಿ ತರಗತಿಯಿಂದ ಶುರುವಾಗಿ ಹತ್ತನೇ ತರಗತಿ ತನಕ ತಲುಪಿ ಸತತವಾಗಿ ಉತ್ತಮ ಫಲಿತಾಂಶ ಪಡೆದು ಚಿನ್ಮಯ ಶಾಲೆ ಹೆಸರಾಗಿತ್ತು.ಬಡ ಮದ್ಯಮ ವರ್ಗಕ್ಕೆ ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೈ ಗೆಟುಕುವಂತೆ ಮಾಡಿತ್ತು
ಈ ಶಾಲೆಯನ್ನು ಆರಂಭದಿಂದ ಇಪ್ಪತ್ತೈದು ವರ್ಷಗಳಕಾಲ ಸಮರ್ಥವಾಗಿ ಸಮತೋಲನದಿಂದ ನಡೆಸಿದವರು ಶಕುಂತಲಾ ಸಾಂತ್ರಾಯ ಅವರು.
ಆರಂಭದಲ್ಲಿ ವಿಮಲಾ ಮೇಡಂ ಮುಖ್ಯೋಪಾಧ್ಯಾಯಿನಿ ಆಗಿದ್ದರು.ನಂತರ ಅವರು ಬೇಡ ಎಂದ ಕಾರಣ ಶಕುಂತಲಾ ಸಾಂತ್ರಾಯ ಮುಖ್ಯೋಪಾಧ್ಯಾಯಿನಿ ಆಗಿದ್ದರು.
ಖಾಸಗಿ ಶಾಲಾ ಕಾಲೇಜುಗಳ ಮುಖ್ಯಸ್ಥರಾಗುವುದು ಸುಲಭದ ಕೆಲಸವಲ್ಲ.ಅದು ತಂತಿ ಮೇಲಿನ ನಡಿಗೆ
ಒಂದೆಡೆ ಮ್ಯಾನೇಜ್ ಮೆಂಟಿನವರ ಕಿರಿಕಿರಿ,ಮತ್ತೊಂದೆಡೆ ಹೆತ್ತವರ ಕಿರಿಕಿರಿ..ಮಗದೊಂದೆಡೆ ಶಿಕ್ಷಣ ಇಲಾಕೆಯ ತರಹಾವರಿ ನಿಯಮಾವಳಿಗಳು.ಜೊತೆಗೆ ಶಿಕ್ಷಕರ ಸಮಸ್ಯೆಗಳು.
ಇವೆಲ್ಲವನ್ನೂ ಬಹಳ ಸಮರ್ಥವಾಗಿ ನಿಭಾಯಿಸುತ್ತಾ ದೀರ್ಘ ಕಾಲ ಎಂದರೆ ಇಪ್ಪತ್ತೈದು ವರ್ಷಗಳ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಆ ಸಂಸ್ಥೆಗಾಗಿ ಹಗಲು ರಾತ್ರಿ ದುಡಿದವರು ಶ್ರೀಮತಿ ಶಕುಂತಲಾ ಸಾಂತ್ರಾಯ.ಇವರ ಜೊತೆ ಕೈ ಜೋಡಿಸಿದವರು ಹಿರಿಯ ಶಿಕ್ಷಕರಾದ ಶ್ರೀಮತಿ ಅರುಣಾ,ಶ್ರೀಮತಿ ಶಾಂತಾ,ಶ್ರೀಮತಿ ಮೋಹಿನಿ,ಕು ಶೋಭಾ,ಶ್ರಿಮತಿ ಪೂರ್ಣಿಮಾ ಶ್ರೀಮತಿ ಶುಭಾ ,ಶ್ರೀಮತಿ ಅನುರಾಧಾ ಶ್ರಿಮತಿ ವಿಜಯಲಕ್ಷ್ಮೀ , ಸ್ರೀಮತಿ ಶ್ರೀಮತಿ ಲ್ಯಾನೆಟ್ ,ಶೈಲಜಾ ,ಪ್ರತಿಮ್ ಕುಮಾರ, ,ಸುಜಾತಾ,ಕೃಷ್ಣ ಉಪಾಧ್ಯಾಯ( ಈಗ ಮಧುಸೂದನ್ ಕುಶೆ ಕಾಲೆಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾರೆ) ಮೊದಲಾದ ಶಿಕ್ಷಕರು.ಜೊತೆಗೆ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದವರು ಬೋಧಕೇತರ ಸಿಬ್ಬಂದಿಗಳಾಗಿದ್ದ ಶ್ರೀಮತಿ ವೀಣಾ,ಮತ್ತು ಶ್ರೀಮತಿ ಸಂಧ್ಯಾ.
ನಾನು ಸರ್ರ್ಕಾರಿ ಉದ್ಯೋಗಕ್ಕೆ ಸೇರುವ ಮೊದಲು ಶ್ರೀರಾಮ ಶಾಲೆ ಕಲ್ಲಡ್ಕ,ಕೆನರಾ ಪ್ರೌಢ ಶಾಲೆ,ಅಲೋಷಿಯಸ್ ಕಾಲೇಜು,ಎವಿಎಸ್ ಕಾಲೇಜು, ಕಮಲಾ ಕಾಲೇಜು ಗಳಲ್ಲಿ ಕೆಲಸ ಮಾಡಿರುವೆ.ಜೂನಿಯರ್ ಕಾಲೇಜಿನಲ್ಲಿ ಸ್ವಲ್ಪ ಕಾಲ ಪ್ರಿನ್ಸಿಪಾಲ್ ಆಗಿಯೂ ಕೆಲಸ ಮಾಡಿರುವೆ
ಸರ್ಕಾರಿ ಉದ್ಯೋಗ ದೊರೆತಾಗ ಬೆಳ್ಳಾರೆ ಸರ್ಕಾರಿ ಪಿಯು ಕಾಲೇಜು,ನೆಲಮಂಗಲ ಸರ್ಕಾರಿ ಪಿಯು ಕಾಲೇಜಗಳಲ್ಲಿ ಕೆಲಸ ಮಾಡಿ ಪ್ರಸ್ತುತ ಬ್ಯಾಟರಾಯನ ಪುಟ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೆಲಸ ಮಾಡಿರುವೆ.
ಬೇರೆಡೆ ನನಗೆ ಹೆಚ್ಚಿನ ವೇತನ ಇತ್ತು.ಅದರೆ ಯಾವತ್ತಿಗು ಮರೆಯಲಾಗದಂತೆ ನನ್ನ ಮನಸ್ಸಿನಲ್ಲಿ ನನಗೆ ಅಚ್ಚೊತ್ತಿ ನಿಂತದ್ದು ಚಿನ್ಮಯ ಶಾಲೆಯ ವಾತಾವರಣ.
ಇಲ್ಲಿನ ಶಿಕ್ಷಕರು ಯಾರೂ ಸಿರಿವಂತರಲ್ಲ..ಹೆಚ್ಚು ಕಡಿಮೆ ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಇಲ್ಲಿನ ವೇತನ ಕೂಡಾ ಅಷ್ಟಕ್ಕಷ್ಟೇ ಹೇಳುವಂತೆ ಇರಲಿಲ್ಲ.ಆದರೆ ಇಲ್ಲಿನ ಶಿಕ್ಷಕರ ಅನುವಿನ ಬಾಂಧವ್ಯ ಪರಸ್ಪರ ಹೊಂದಾಣಿಕೆ ಯಾರೂ ಕೂಡ ಮೆಚ್ಚುವದ್ದು.
ಇವರೆಲ್ಲರಿಗೆ ಶಾಲೆಯ ಮೇಲೆ ಇದ್ದ ಪ್ರೀತಿ,ಶಾಲೆಯನ್ನು ಅಭಿವೃದ್ಧಿ ಮಾಡುವ ಉತ್ಸಾಹ ಅಪ್ರತಿಮವಾದುದು.
ಈ ಶಾಲೆಯ ವಾರ್ಷಿಕೋತ್ಸವ ನೋಡಿದರೆ ಇಲ್ಲಿನ ಶಿಕ್ಷಕರ ತಾದಾತ್ಮ್ಯತೆ ಗೊತ್ತಾಗುತ್ತದೆ.ಪ್ರತಿ ತರಗತಿಯ ಶಿಕ್ಷಕರು ತಮ್ಮಮಕ್ಕಳಿಗೆ ಹೇಳಿ ಕೊಟ್ಟು ಡ್ಯಾನ್ಸ್,ನಾಟಕ ಮಾಡಿಸುತ್ತಿದ್ದರು.ಒಂದಕ್ಕೊಂದು ಒಳ್ಳೆಯ ಕಾರ್ಯಕ್ರಮಗಳು ಇರುತ್ತಿದ್ದವು.
ಇವರಲ್ಲಿ ಬಹಳ ನೆನಪಾಗುವವರು ಅರುಣಾ ಮತ್ತು ಶಾಂತಾ ಅಚಾರ್..ಅರುಣಾ ಮೇಡಂ ಪ್ರತಿ ವರ್ಷ ನಾಟಕ ಮಾಡಿಸುವ ಜವಾಬ್ದಾರಿ ಹೊರುತ್ತಿದ್ದರು.ಮಕ್ಕಳನ್ನು ಸಿದ್ದ ಪಡಿಸುತ್ತಿದ್ದರು.ವಿವಿಧ ಸ್ಪರ್ಧೆಗಳಿಗೆ ಮಕ್ಕಳನ್ನು ಸಜ್ಜು ಗೊಳಿಸುವ ಕೆಲಸ ಇವರದು.ಇವರಿಗೆ ಹಾಡುಗಳನ್ನು ಹೇಳಿ ಕೊಡುತ್ತಾ ಇದ್ದವರು ಶಾಂತಾ ಆಚಾರ್.ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಪರೀಕ್ಷೆ ಪಾಸಾದ ಸಂಗೀತ ವಿದ್ವಾಂಸರು.
ಇವರಿಬ್ಬರಿಂದಾಗಿ ಚಿನ್ಮಯ ಶಾಲೆಯ ಮಕ್ಕಳು ಎಲ್ಲೆಡೆ ಬಹುಮಾನ ಗಳಿಸುತ್ತಿದ್ದರು.ಇದರಿಂದಾಗಿ ಶಾಲೆಗೆ ಹೆಸರು ಬಂತು.ಜೊತೆಗೆ ಎಲ್ಲ ಶಿಕ್ಷಕರೂ ಅಹರ್ನಿಶ ದುಡಿಯುತ್ತಿದ್ದ ಕಾರಣ ಉತ್ತಮ ಫಲಿತಾಂಶ ಕೂಡಾ ಬರ್ತಿತ್ತು ಹೆಚ್ಚಾಗಿ 100% ರಿಸಲ್ಟ್ ಬರ್ತಿತ್ತು.ಶಕುಂತಲಾ ಸಾಂತ್ರಾಯರಿಗೆ ಕುಡಾ ಬರೆಯುವ ಹವ್ಯಾಸವಿದ್ದು ಒಳ್ಳೊಳ್ಳೆಯ ಕವಿತೆಗಳನ್ನು ಬರೆಯುತ್ತಿದ್ದರು.ಅವರ ಕವಿತೆಗಳಿಗೆ ರಾಗ ಹಾಕಿ ಶಾಂತಾ ಆಚಾರ್ ಮಕ್ಕಳಿಗೆ ಹೇಳಿಕೊಡ್ತಾ ಇದ್ದರು.
ಇದರಿಂದಾಗಿ ಬಹು ಖ್ಯಾತಿ ಪಡೆದ ಅಲೋಷಿಯಸ್,ಕೆನರಾ ಅಗ್ನೆಸ್ ಶಿಕ್ಷಣ ಸಂಸ್ಥೆಗಳಂತೆ ಚಿನ್ಮಯ ಶಾಲೆ ಕೂಡಾ ತನ್ನದೇ ಅಸ್ತಿತ್ವವನ್ನು ಪಡೆಯಿತು.
ಇದಕ್ಕೆ ಶಿಕ್ಷಕರ ಸಾಮೂಹಿಕ ಯತ್ನದ ಜೊತೆಗೆ ಶಕುಂತಲಾ ಸಾಂತ್ರಾಯರ ಸಮರ್ಥ ನಾಯಕತ್ವ ಕೂಡ ಕಾರಣವಾಗಿದೆ.ಈ ಶಾಲೆಯಲ್ಲಿ ದುಡಿಯುತ್ತಿದ್ದ ಹೆಚ್ಚಿನ ಶಿಕ್ಷಕರು ಆರ್ಥಿಕವಾಗಿ ಬಲಿಷ್ಟರಾಗಿರಲಿಲ್ಲ.ನಮಗೆ ದುಡಿಯುವುದು ಅನಿವಾರ್ಯ ಆಗಿತ್ತು.ಆದರೆ ಶಕುಂತಲಾ ಸಾಂತ್ರಾಯರ ಪತಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು ಆರ್ಥಿಕವಾಗಿ ಬಲಿಷ್ಠರಾಗಿದ್ದರು.ಹಾಗಾಗಿ ಶಕುಂತಲಾ ಸಾಂತ್ರಾಯರಿಗೆ ದುಡಿಯುವ ಅಗತ್ಯ ಇರಲಿಲ್ಲ.
2004 ರಲ್ಲಿ ಸುದೀರ್ಘ ಇಪ್ಪತ್ತೈದು ವರ್ಷಗಳ ನಂತರ ನಿವೃತ್ತರಾದರುಆಗ ನಾವೆಲ್ಲರೂ ಅವರನ್ನು ಮತ್ತೆ ಒಂದೆರಡು ವರ್ಷಮುಂದುವರಿಸುವಂತೆ ಶಾಲಾ ಟ್ರಸ್ಟ್ ನಲ್ಲಿ ಕೇಳಿದ್ದೆವು.ಅದಕ್ಕೆ ಅವರುಗಳು ಒಪ್ಪಿರಲಿಲ್ಲ.
2004 ರಲ್ಲಿ ಸಾಂತ್ರಾಯ ಅವರು ನಿವೃತ್ತರಾದಾಗ ಅಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ ನಾನು ಸೇರಿದಂತೆ ಶಿಕ್ಷಕಿಯರು ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದರು .ನಮ್ಮಲ್ಲಿ ಅಷ್ಡು ಅಟ್ಯಾಚ್ ಮೆಂಟ್ ಆದರೆ ಶಕುಂತಲಾ ಸಾಂತ್ರಾಯ ಅವರು ಮಾತ್ರ ತಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸಿದ ಸಂತೃಪ್ತಿಯಿಂದ ಇದ್ದರು.
ಬೇರೆಯವರಲ್ಲಿನ ಗುಣವನ್ನು ಮೆಚ್ಚುವ,ಪ್ರೋತ್ಸಾಹಿಸುವ ಗುಣ ಶಕುಂತಲಾ ಸಾಂತ್ರಾಯರಲ್ಲಿ ಇತ್ತು.
ಆಗ ಮಂಗಳೂರಿನ ಖಾಸಗಿ ಸಿಟಿ ಚಾನೆಲ್ ಬಹಲ ಪ್ರಸಿದ್ದವಾಗಿದ್ದು ಪ್ರತಿ ಅದಿತ್ಯವಾರ ಉದಯವಾಣಿಯ ಮನೋಹರ ಪ್ರಸಾದ್ ಜನಮನ ಎಂಬ ಶೀರ್ಷಿಕೆಯಡಿ
ಬೇರೆ ಬೇರೆ ಕ್ಷೇತ್ರದಲ್ಲಿ ಪರಿಣತರಾದವರನ್ನು ಅತಿಥಿಯಾಗಿ ಕರೆದು ಎರಡು ಗಂಟೆಯ ನೇರ ಪ್ರಸಾರ ಕಾರ್ಯಕ್ರಮ ನಡೆಸುತ್ತಿದ್ದರು.ಇದರಲ್ಲಿ ಪೋನ್ ಮೂಲಕ ಪ್ರೇಕ್ಷಕರು ಭಾಗವಹಿಸುತ್ತಿದ್ದರು.ಆಗಿನ ಕಾಲಕ್ಕೆ ಬಹು ಖ್ಯಾತವಾದ ಕಾರ್ಯಕ್ರಮ ಅದು.
2003 ಮಾರ್ಚ್ ಮೊದಲ ವಾರ ಮಕ್ಕಳನ್ನು ಪರೀಕ್ಷೆಗೆ ಸಿದ್ದ ಪಡಿಸುವುದು ಹೇಗೆ ಎಂಬ ಬಗ್ಗೆ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಚಿನ್ಮಯಾ ಶಾಲೆಯ ಹಿರಿಯ ಶಿಕ್ಷಕರ ಬಗ್ಗೆ ಶಕುಂತಲಾ ಸಾಂತ್ರಾಯ ಅವರಲ್ಲಿ ವಿಚಾರಿಸಿದರು.ಆಗ ನಾನು ಕಿರಿಯಳಾಗಿದ್ದರೂ ಕೂಡಾ ಬರವಣಿಗೆಯ ಹವ್ಯಾಸವಿದ್ದ,ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಅನೇಕ ಲೇಖನಗಳನ್ನು ಬರೆದಿದ್ದ ನನ್ನ ಹೆಸರನ್ಬು ಸೂಚಿಸಿದ್ದರು.
ನಂತರ ನಾನು ಮತ್ತು ನಮ್ಮ ಶಾಲೆಯ ಗಣಿತ ಮೇಸ್ಟ್ರಾಗಿದ್ದ ಕೃಷ್ಣ ಉಪಾಧ್ಯಾಯರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದೆವು.ನಮಗಾದ ಮಟ್ಟಿಗೆ ಮಾಹಿತಿ ನೀಡಿದೆವು.ಕಾರ್ಯಕ್ರಮ ಚೆನ್ನಾಗಿ ಬಂದಿದೆ ಎಂದುನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದರು.
ಈ ಕಾರ್ಯಕ್ರಮಕ್ಕೆ ನನ್ನನ್ನು ಕರೆದಾಗ ಆರಂಭದಲ್ಲಿ ನಾನು ಹಿಂದೇಟು ಹಾಕಿದ್ದೆ.ಆಗ ಶಕುಂತಲಾಸಾಂತ್ರಾಯ ಅವರೇ ನನಗೆ ನಿಮ್ಮ ಬಗ್ಗೆ ನಂಬಿಕೆ ಇದೆ..ಯಾವ ರೀತಿ ಬರೆಯುತ್ತೀರಿ ಅದೇ ರೀತಿ ಮಾತನಾಡಿದರಾಯಿತು ಹೋಗಿ ಭಾಗವಹಿಸಿ.ಇಂತಹ ಅವಕಾಶಕ್ಕಾಗಿ ತುಂಬಾ ಜನ ಕಾಯ್ತಾರೆ .ಅವಕಾಶ ಬಂದಾಗ ಹಿಂದೇಟು ಹಾಕಬಾರದು.ದೈರ್ಯವಾಗಿ ಹೋಗಿ ಎಂದು ಬೆಂಬಲ ನೀಡಿದ್ದರು.
ಅವರು ನಿವೃತ್ತರಾದ ಮೇಲೆ ಅವರನ್ನು ನಾನು ಭೇಟಿ ಮಾಡಿಲ್ಲ.ತುಂಬಾ ದಿನಗಳಿಂದ ಅವರಲ್ಲಿ ಮಾತನಾಡಬೇಕು ಎಂದು ಅಲೋಚಿಸುತ್ತಿದ್ದೆ.ಅದರೆ ಅವರ ಪೋನ್ ನಂಬರ್ ಸಿಗಲಿಲ್ಲ.
ಈವತ್ತು ಒಂದು ಯೋಚನೆ ತಲೆಗೆ ಹೊಳೆಯಿತು.ಅವರ ಸಣ್ಣಮಗ ಮಹೇಶ್ ಇ ಎನ್ ಟಿ ಡಾಕ್ಟರ್.ಅವರ ಹೆಸರು ಹಾಕಿ ಗೂಗಲ್ ಸರ್ಚ್ ಕೊಟ್ಟೆ.ಅವರ ನಂಬರ್ ಸಿಕ್ತು.ಪೋನ್ ಮಾಡಿದಾಗ
ಅವರ ಪತ್ನಿ ( ಅವರು ಕುಡಾ ಇ ಎನ್ ಟಿ ತಜ್ಞವೈದ್ಯೆ) ಕರೆ ಸ್ವೀಕರಿಸಿದರು.ನನ್ನ ಸಂಕ್ಷಿಪ್ತ ಪರಿಚಯ ಹೇಳಿ ಶಕುಂತಲಾ ಸಾಂತ್ರಾಯರ ನಂಬರ್ ಕೇಳಿದೆ.ಅವರು ಕೊಟ್ಟರು .ತಕ್ಷಣವೇ ಪೋನ್ ಮಾಡಿದೆ.ಶಕುಂತಲಾ ಮೇಡಂ ಅವರಲ್ಲಿ ಸುಮಾರು ಹೊತ್ತು ಮಾತನಾಡಿದೆ
ಮಾತಿನ ನಡುವೆ " ನಿಮಗೆ ಕೆಲಸ ಮಾಡುವ ಅನಿವಾರ್ಯತೆ ಇರಲಿಲ್ಲ.ಯಾಕೆ ಕಡಿಮೆ ವೇತನದಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಿರಿ ಎಂದು ಕೇಳಿದೆ.ಅಗ ಅವರು ಬದುಕಿಗೆ ದುಡ್ಡೆ ಮುಖ್ಯವಲ್ಲ.ನಮಗೆ ನಮ್ಮದೇ ಆದ ಅಸ್ತಿತ್ವ ಬೇಕು.ಹಾಗಾಗಿ ನಾನು ಶಿಕ್ಷಕಿಯಾಗಿ ಕೆಲಸ ಮಾಡಿದೆ.ಮುಖ್ಯೋಪಾಧ್ಯಾಯಿನಿ ಜವಾಬ್ದಾರಿ ಬಂದಾಗ ದೈರ್ಯವಾಗಿ ಸ್ವೀಕರಿಸಿದೆ,ಯಶಸ್ಸು ಕೂಡಾ ಸಿಕ್ಕಿತು.ಈ ಯಶಸ್ಸಿನಲ್ಲಿ ಅಹರ್ನಿಶ ದುಡಿದ ಶಿಕ್ಷಕ ಶಿಕ್ಷಕಿಯರ ,ಸಿಬ್ಬಂದಿಗಳ ಪಾಲೂ ಇದೆ.ಎಲ್ಲಕ್ಕಿಂತ ಹೆಚ್ಚಾಗಿ ದೇವರ ದಯೆ " ಎಂದರು.
ಒಂದೆಡೆ ಮ್ಯಾನೆಜ್ ಮೆಂಟ್ ನವರ ಕಿರಿಕಿರಿ,ಇನ್ನೊಂದೆಡೆ ಹೆತ್ತವರ ಕಿರಿಕಿರಿ,ಇಲಾಖೆಯ ನೀತಿ ನಿಯಮಗಳ ಪಾಲನೆ ಇವೆಲ್ಲವನ್ನು ನಿಬಾಯಿಸುದು ಕಷ್ಟ ಎನಿಸಲಿಲ್ವಾ ಎಂದು ಕೇಳಿದೆ.ಅಗ ಅವರು " ಸಮಸ್ಯೆಗಳು ಎದುರಾಗುತ್ತಿದ್ದವು.ಇಲ್ಲವೆಂದಲ್ಲ ಅದರೆ ನನಗೆ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ನಿರ್ವಹಿಸುವುದು ಕಷ್ಟ ಎಂದು ಒಮ್ಮೆ ಕೂಡ ಅನಿಸಿಯೇ ಇಲ್ಲ ' ಎಂದರು
ಹೌದು,ಕೆಲಸವನ್ನು ಇಷ್ಟ ಪಟ್ಟು ಮಾಡಿದರೆ ಎಷ್ಟೇ ಕಷ್ಟದ ಕೆಲಸ ಕೂಡಾ ಕಷ್ಟ ಎನಿಸುದಿಲ್ಲ.ಅದಕ್ಕಾಗಿಯೇ ಶಕುಂತಲಾ ಸಾಂತ್ರಾಯರು ವಿಶಿಷ್ಟರಾಗಿ ಕಾಣ್ತಾರೆ.ಈಗಲೂ ಕೂಡಾ ಅದೇ ಉತ್ಸಾಹ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.
(ಚಿತ್ರ: ಚಿನ್ಮಯ ಶಾಲೆಯಲ್ಲಿ ಬಹುಮಾನ ಪಡೆದ ಸಂದರ್ಭ ,ಇದರಲ್ಲಿರುವವರು ಅತಿಥಿಯಾಗಿ ಬಂದವರು ಮತ್ತು ನಾನು,ಶಕುಂತಲಾ ಸಾಂತ್ರಾಯ ಚಿತ್ರ ನನ್ನಲ್ಲಿ ಇಲ್ಲ,ಮುಂದಿನ ಬಾರಿ ಊರಿಗೆ ಬಮದಾಗ ಅವರ ಮನೆಗೆ ಬರಲು ಕರೆದಿದ್ದಾರೆ.ಅಗ ಹೋಗಿ ಅವರೊಂದಿಗೆ ಪೋಟೋಹಿಡಿದು ಬರ್ತೇನೆ)
No comments:
Post a Comment